ಅಂತರಂಗ
‘ಪ್ರಸಿದ್ಧ ಪರ್ವ’ ಕೂಡ್ಲಿಗಿ ತಾಲೂಕಿನ ಕರ್ಣ ಅಂಗಡಿ ಸಿದ್ದಣ್ಣನವರ ದಂತಕಥೆ
- ಕೆ.ಶ್ರೀಧರ್ (ಕೆ.ಸಿರಿ)
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದಾನವೇ ಒಂದು ಧರ್ಮವಾಗಿ ಅಗ್ರಪಂಕ್ತಿಯಲ್ಲಿರುವುದು ಇಡೀ ವಿಶ್ವದ ಭೂಪಟದಲ್ಲಿ ಬಹುಶಃ ಭಾರತವನ್ನು ಬಿಟ್ಟರೆ ಮೊದಲ ಸ್ಥಾನದಲ್ಲಿ ಬೇರಿನ್ಯಾವ ದೇಶವನ್ನು ನೋಡಲು ಸಾಧ್ಯವಿಲ್ಲ.
ಇದಕ್ಕೆ ಕಾರಣವೂ ಇದೆ ಅದಕ್ಕೆ ಕಾರಣ ಈ ನೆಲದ ಮಣ್ಣಿನಲ್ಲಿ ಹುದುಗಿರುವ ಶಕ್ತಿ ಈ ನಾಡು ಶರಣರು,ಸಂತರು,ಪವಾಡ ಪುರುಷರು, ಸಿದ್ದಿಗಳು ಮಹಾತ್ಮಾರು ನಡೆದಾಡಿದ ಬೀಡು, “ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು” ಎಂಬ ನಾಣ್ಣುಡಿಯಂತೆ ಈ ದೇಶದಲ್ಲಿ ಜನಿಸಿದ ಪ್ರತಿಯೋರ್ವನಿಗೂ ದೇಶಾಭಿಮಾನ ತಂತಾನೆ ಮೈದಾಳುತ್ತದೆ.
ಭಾರತದ ಪವಿತ್ರ ಗ್ರಂಥಗಳಾದ ರಾಮಾಯಣ, ಮಹಾಭಾರತ, ವೇದಗಳು, ಪುರಾಣಗಳಲ್ಲಿ ಅನೇಕ ಮಹನೀಯರು ದಾನ ಧರ್ಮದ ಮೂಲಕ ಸರಳ ಕರ್ಮದ ಮೂಲಕ ಅನವರತವಾಗಿರುವುದನ್ನು ಇಂದಿಗೂ ಈ ಜಗತ್ತಿಗೆ ಸಾರುತ್ತಿವೆ.
ದಾನ ಎಂದಾಕ್ಷಣ ನಮಗೆ ನೆನಪಿಗೆ ಬರುವ ಮೊದಲ ವ್ಯಕ್ತಿಯೇ ಕರ್ಣ ಅಂತೆಯೇ ನಮ್ಮ ಕೂಡ್ಲಿಗಿ ತಾಲೂಕು ಬರದ ಸೀಮೆಯಾಗಿದ್ದು ಇಲ್ಲಿ ದೀರ್ಘಕಾಲಿಕ ಬೆಳೆಗಳಾದ ತೆಂಗು,ಅಡಿಕೆ ಮುಂತಾದ ಬೆಳೆಗಳನ್ನು ಬೆಳೆಯುವುದು ಬೆರಳೆಕೆ ಮಾತ್ರ ಅಂತೂ ಮೀರಿ ಊರಿಗೆ ಒಂದು ಅಥವಾ ಎರಡು ತೆಂಗಿನ ತೋಟಗಳಿದ್ದರೆ ಅವನು ಆ ಊರಿನ ಪ್ರಮುಖ ವಿಶೇಷ ಆಕರ್ಷಣೀಯ ವ್ಯಕ್ತಿಯಾಗಿ ಬಿಡುತ್ತಾನೆ.
ಮಹಾಭಾರತದಲ್ಲಿ ಬರುವ ಕರ್ಣನಂತೆಯೇ ನಮ್ಮ ಕೂಡ್ಲಿಗಿ ತಾಲೂಕಿನ ಪ್ರಸಿದ್ಧ ಪರ್ವ ಪುಸ್ತಕದಲ್ಲಿಯೂ ಕೂಡ ಒಂದು ಕೊಡುಗೈ ದಾನದ ಕುಟುಂಬವಿದೆ ಎಂದು ನನಗೆ ತಿಳಿದದ್ದು ಶ್ರೀಯುತ ವೀರೇಶ್ ಅಂಗಡಿ ಸರ್ ರವರು ನಮ್ಮ ಮನೆಯ ಗೃಹಪ್ರವೇಶದ ಸಮಾರಂಭಕ್ಕೆ ಬಂದು ಶುಭಕೋರಿ ‘ಪ್ರಸಿದ್ಧ ಪರ್ವ’ (ತಿರು ಸಿದ್ಧ ಪರ್ವಗಳ ವಿಹಂಗಮ ನೋಟ ) ಪುಸ್ತಕ ನೀಡಿದಾಗಲೆ ನನಗೆ ತಿಳಿದದ್ದು.
ಪುಸ್ತಕದ ಶೀರ್ಷಿಕೆಯೇ ಹೇಳುವಂತೆ ಒಬ್ಬ ವ್ಯಕ್ತಿಯನ್ನು ಅದರಲ್ಲೂ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಪರ್ವತಕ್ಕೆ ಹೋಲಿಸಿ ಮಾತನಾಡುವುದು ಎಂದರೆ ಸುಲಭದ ಮಾತಲ್ಲ.
ಶ್ರೀಯುತ ಕೆ.ಯಂ ವೀರೇಶ್ ಲೇಖಕರು ಈ ಪುಸ್ತಕಕ್ಕೆ ಪ್ರಸಿದ್ಧ ಪರ್ವ ಎಂಬ ತಲೆಬರಹನ್ನು ಏಕೆ ನೀಡಿದರು ಎಂಬುದು ನನಗೆ ತಿಳಿದಿರಲಿಲ್ಲ ಮುಖಪುಟದ ಮೇಲಿರುವ ಸಿದ್ದಣ್ಣ ರವರ ಅಂಗಡಿರವರ ಭಾವಚಿತ್ರವನ್ನು ನೋಡಿದಾಗಲೇ ಒಂದು ರೀತಿಯ ಸೆಳೆತಕ್ಕೊಳಗಾದೆ ಆ ಮುಖದಲ್ಲಿರುವ ತೇಜಸ್ಸು ಅಂತದ್ದು ಬುದ್ದನ ನಗೆಗೆ ಸನಿಹವಿರುವ ನಗುವದು ಆ ಕಣ್ಣುಬ್ಬುಗಳು, ಆ ಚೆಂದದಣೆ, ಕುಡಿಮೀಸೆ,ಬಟ್ಟಲುಗಣ್ಣು, ಹರವಾದ ಹಣೆ, ಅನಂತತೆಯತ್ತ ಸಾಗುತ್ತಿರುವ ಆ ಮುಗುಳ್ನಗು ಓದುಗರನ್ನು ಒಂದರಗಳಿಗೆ ಧ್ಯಾನಿಸದೆ ಬಿಡುವುದಿಲ್ಲ ಅಂತಹ ತೇಜಸ್ಸು ಎಲ್ಲರಲ್ಲಿಯೂ ಬರುವುದಿಲ್ಲ ಸಿರಿವಂತಿಕೆಯನ್ನು ಮೀರಿ ಹೃದಯವಂತಿಕೆ ಮೈದಾಳಿದ ವ್ಯಕ್ತಿಯಲ್ಲಿ ಮಾತ್ರ ಆ ದಿಗಂತದ ತೇಜಸ್ಸು ಒಡಮೂಡಲು ಸಾಧ್ಯ.
“ಮಾವಿನ ಮರದಲ್ಲಿ ಮಾವಿನ ಹಣ್ಣೆ ಬಿಡುವುದು ” ಎಂಬಂತೆ ತಂದೆ ತಿರುಕಪ್ಪನವರ ಗುಣಗಳ ಪಡಿಯಚ್ಚಿನಂತೆಯೇ ಸಿದ್ದಣ್ಣ ಅಂಗಡಿಯವರ ವ್ಯಕ್ತಿತ್ವ ಸಾಗಿ ಬಂದಂತೆ ಕಾಣುತ್ತದೆ ತಿರುಕಪ್ಪನವರ ತೋಟದ ಗರಿಗಳು, ತೆಂಗಿನಕಾಯಿಗಳು ಊರ ತೆಂಗಿನಕಾಯಿಗಳು ಕೂಡ್ಲಿಗಿ ತಾಲೂಕಿನ ಸುತ್ತಹತ್ತಳ್ಳಿಗೆ ಹೇರಳವಾಗಿ ನೀಡುತ್ತಿದ್ದರು ಎಂದು ಆರಂಭಗೊಳ್ಳುವ ಕಥೆ ನಿಜಕ್ಕೂ ನಮ್ಮೂರಿನ ನೀರಾವರಿ ಚಿತ್ರಣದ ಮೇಲೆ ಕನ್ನಡಿ ಹಿಡಿದಂತಿದೆ ಏಕೆಂದರೆ ಊರಿಗೊಂದಿರುವುದೇ ಹೆಚ್ಚು ಇದ್ದರೂ ಶುಭಕಾರ್ಯಗಳಿಗೆ ಗರಿ ತೆಂಗಿನಕಾಯಿಗಳನ್ನು ಉದಾರತೆಯಿಂದ ನೀಡುವ ಮನಸ್ಸು ಸಿಗುವುದು ವಿರಳ.
ಲೇಖಕರು ಬರೆದಿರುವಂತೆ “ಒಂದು ಮಂಗಳ ಕಾರ್ಯಕ್ಕೆ ನಮ್ಮ ತೋಟದ ಗರಿಗಳು ಒಂದು ಸಾರ್ಥಕ ಕೆಲಸಕ್ಕೆ ಉಪಯೋಗವಾದರೆ ಅದು ನಮ್ಮ ಸೌಭಾಗ್ಯವಲ್ಲವೇ ಈ ಕಾರ್ಯದಿಂದ ನಮ್ಮ ಮನೆತನಕ್ಕೆ ಒಳ್ಳೆಯ ಹೆಸರು ಬರುತ್ತದೆ ಇದ್ದುದರಲ್ಲಿ ಕೊಡುವುದರಲ್ಲಿ ನನ್ನ ಗಂಟೇನು ಕರಗುವುದು, ಕೊಡುವ ದಾನ ಮಾಡಿದ ಸಹಾಯ ನಮಗೆ ನೆನಪಿರದಿದ್ದರೆ ಸಾಕು” ಎಂದು ಹೇಳುವ ತಿರುಕಪ್ಪನ ಮಾತಿನಲ್ಲಿ ಎಷ್ಟೋಂದು ನಿಸ್ವಾರ್ಥ ಮನಸ್ಸಿದೆ ಎಂಬುದು ಓದುಗರಿಗೆ ತಿಳಿಯುತ್ತದೆ.
ದೈವಾನುಗ್ರಹದಂತೆ 7 ಮಕ್ಕಳ ತೀರುವಿಕೆಯಿಂದ 8 ನೇ ಮಗನಾಗಿ ಜನಿಸಿದ ಶ್ರೀಯುತ ಸಿದ್ದಣ್ಣ ಅಂಗಡಿಯವರು ಶ್ರೀಕೃಷ್ಣನಂತೆ ಜನಿಸಿದರು ನಿಂಗಮ್ಮ ಪಾಲನೆ ಪೋಷಣೆ ನಡೆಸಿದರು ಸಮಾರ್ಧ ಆಸ್ತಿಯನ್ನು ತಿರುಕಪ್ಪ ಸೋದರಳಿಯನಿಗೆ ನೀಡಿದರು ಎಂಬ ಸಂಗತಿಗಳಲ್ಲಿ ಸಿದ್ದಣ್ಣ ಅಂಗಡಿಯವರ ಮೇಲಿದ್ದ ತಿರುಕಪ್ಪನವರ ಪುತ್ರ ಪ್ರೇಮ ಅರ್ಥವಾಗುತ್ತದೆ.
ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯಾನಂತರದ ದಿನಗಳ ಕೂಡ್ಲಿಗಿ ತಾಲೂಕಿನ ಚಿತ್ರಣವನ್ನು ಓದುಗರಿಗೆ ತಿಳಿಸಿಕೊಡುವಲ್ಲಿ ಲೇಖಕರು ಸಫಲತೆಯನ್ನು ಸಾಧಿಸಿದ್ದಾರೆ. ಆ ಕಾಲದಲ್ಲಿಯೇ ಸಿದ್ದಣ್ಣರವರು ವಿದೇಶಿ ರಷ್ಯಾ ಕ್ಯಾಮೆರಾ ಬಳಸುತ್ತಿದ್ದರು ಹಾಗೂ ಅತ್ಯುತ್ತಮ ಫೋಟೋಗ್ರಾಫರ್ ಆಗಿದ್ದರು ಎಂಬುದು ಕಥೆಯ ಮತ್ತೊಂದು ವಿಶೇಷ.
ತಂದೆಗೆ ತಕ್ಕ ಮಗನಂತೆಯೆ ಸಿದ್ದಣ್ಣ ಅಂಗಡಿಯವರು ಕೂಡ ಮೇರು ವ್ಯಕ್ತಿತ್ವದವರು ಯಾವುದನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳದೆ ಆರೋಗ್ಯ ಸರಿ ಇದ್ದರೆ ಸಾಕು ಎಂಬ ಮನೋಭಾವದಿಂದ ಪಿತರಂತೆ ದಾನ ಧರ್ಮ ಮುಂದುವರೆಸಲು ಗುರುಗಳಾದ ಶ್ರೀ ಬಿಂದು ಮಾಧವ ರಾವ್ ರ ದೈಹಿಕ ತರಬೇತಿ ಸಧೃಡ ದೇಹ ನಿರ್ಮಾಣ ಇವೆಲ್ಲವೂ ಬಾಲ್ಯದಿಂದಲೇ ಒಂದು ಸಮಾಜಮುಖಿ ವ್ಯಕ್ತಿತ್ವ ನಿರ್ಮಾಣವಾಗುವಲ್ಲಿ ತಿರುಕಪ್ಪನವರ ಅತಿಯಾದ ಮುದ್ದಿಲ್ಲದ ಅತೀ ಸೂಕ್ಷ್ಮವೂ ಅಲ್ಲದ ವಾತಾವರಣ ನಿರ್ಮಿಸಿಕೊಟ್ಟ ತಂದೆಯ ಜವಾಬ್ದಾರಿ ಗುರುತರವಾದದ್ದು ಮನೆಯಲ್ಲಿ ಸಾಕಷ್ಟು ಆಳು ಕಾಳು ಮೃಷ್ಟಾನ್ನ ಭೋಜನವಿದ್ದರೂ ಒಂದಿಷ್ಟು ಅಹಂಕಾರದ ವ್ಯಕ್ತಿತ್ವ ಮೈದಾನದ ತಂದೆಯ ಕಾಲಾಂತರದಲ್ಲಿಯೂ ಕೂಡಾ ಮನೆತನದ ದಾನ ಧರ್ಮಗಳನ್ನು ಮುಂದುವರೆಸಿಕೊಂಡು ಹೋಗುವ ಸಿದ್ದಣ್ಣ ಅಂಗಡಿಯವರವರ ಮನೋವೈಶ್ಯಾಲ್ಯತೆಯನ್ನು ಓದುಗರು ಅರಿಯಬೇಕು.
ತಿರುಕಪ್ಪನವರ ಏಕಮಾತ್ರ ಪುತ್ರ ಸಿದ್ದಣ್ಣ ಅಂಗಡಿಯವರು ಒಬ್ಬನೇ ಪುತ್ರನಾಗಿದ್ದು ಸಾಕಷ್ಟು ಆಸ್ತಿ ಅಡುವು ಇದ್ದ ಕಾರಣ ಸರ್ಕಾರಿ ನೌಕರಿ ಚಾಕರಿ ಗೊಡವೆ ಏಕೆಂದು ಪುತ್ರ ಪ್ರೇಮ ಮೆರೆದರು ಸರ್ಕಾರಿ ಶಿಕ್ಷಕ ವೃತ್ತಿ ತನ್ನೂರಿನಲ್ಲಿಯೇ ದೊರೆತಾಗ ಸ್ವತಃ ತಿರುಕಪ್ಪನವರೆ ಮಗನನ್ನು ಸೇವೆಗೆ ಸೇರಿಸುವ ಜಾಣ್ಮೆ ಮೆಚ್ಚುವಂತದ್ದು.
ಅಲ್ಲದೆಯೂ ಪುಸ್ತಕ ರಚನೆಗೆ ಕೂಡ್ಲಿಗಿ ತಾಲೂಕಿನ ರಾಜಕಾರಣಿಗಳ, ಕಲಾವಿದರ, ಸಿದ್ದಣ್ಣ ಅಂಗಡಿಯವರ ಸಹಪಾಠಿಗಳ,ಸ್ನೇಹಿತರ, ಶಿಷ್ಯರ ಹಾಗೂ ಕಲಾವಿದರ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಪುಸ್ತಕದಲ್ಲಿ ದಾಖಲಿಸಿರುವುದು ಸಿದ್ದಣ್ಣ ಅಂಗಡಿಯವರ ಸಾಮಾಜಿಕ,ರಾಜಕೀಯ ಹಾಗೂ ಸಮಾಜಮುಖಿ ಸಂಘಟನೆಯ ಸಾಮರ್ಥ್ಯ ಮೇಲೆ ನೈಜತೆಯ ಕನ್ನಡಿ ಹಿಡಿದಂತಿದೆ ಅಷ್ಟೇಲ್ಲಾ ಸಂಘಟನೆ ಇದ್ದರೂ ಸಿದ್ಧಣ್ಣರವರಾಗಲಿ ಅವರ ಕುಟುಂಬದವರನ್ನಾಗಲಿ ರಾಜಕೀಯ ಗಾಳಿ ಸೋಕದಿರುವುದು ಈ ಕುಟುಂಬದ ಶಕ್ತಿ ಹಾಗೂ ಈ ದೃಷ್ಟಿಯಿಂದ ನೋಡಿದರೆ ಸಿದ್ದಣ್ಣ ಅಂಗಡಿಯವರು ಬರೀ ವ್ಯಕ್ತಿಯಲ್ಲ ಶಕ್ತಿಯಾಗಿ ಹೊರಹೊಮ್ಮಿದ್ದಾರೆ.
ತನ್ನ ಗೆಳೆಯರ ಬಳಗದವರೊಂದಿಗೆ ರಾಜಕೀಯ ಮುತ್ಸದ್ದಿಗಳೊಂದಿಗೆ ಒಂದು ಪದವಿ ಪೂರ್ವ ಕಾಲೇಜು ನಮ್ಮ ತಾಲ್ಲೂಕಿನಲ್ಲಿ ಸ್ಥಾಪಿಸಿ ಮಹಿಳೆಯರು ಹಾಗೂ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಶಾಸಕರೊಂದಿಗೆ ಮಾತನಾಡಿ ಮುಖ್ಯಮಂತ್ರಿಗಳ ಸಮ್ಮತಿ ಸಿಕ್ಕಾಗ ಕಟ್ಟಡ ನಿರ್ಮಾಣಕ್ಕೆ ಭೂಮಿಯ ಸಮಸ್ಯೆಯಾದಾಗ ಕೋಟ್ಯಾಂತರ ರೂಪಾಯಿ ಮೌಲ್ಯದ 7 ಎಕರೆ ಜಾಗವನ್ನು ಸರ್ಕಾರಕ್ಕೆ ಭೂದಾನ ಮಾಡಿದ ಕೂಡ್ಲಿಗಿ ತಾಲೂಕಿನ ಕರ್ಣ ಸಿದ್ದಪ್ಪ ಅಂಗಡಿಯವರ ಹಾಗೂ ಅವರ ಮನೆತನದ ಈ ಎದೆಗಾರಿಕೆಯ ನಿಲುವನ್ನು ಸ್ಮರಿಸದೆ ಹೋದರೆ ದೇವರು ಮೆಚ್ಚಲಾರ ಇಷ್ಟಲ್ಲದೆಯೂ ವಿದ್ಯಾರ್ಥಿ ನಿಲಯಗಳಿಗೆ ಆ ಕಾಲದಲ್ಲಿ ಪ್ರಸಾದ ವ್ಯವಸ್ಥೆ ಮಾಡಿದಂತಹ ಪುಣ್ಯಾತ್ಮ ಸಿದ್ದಣ್ಣ ಅಂಗಡಿಯವರು ತಮ್ಮ ಕೈಲಾದ ಆರ್ಥಿಕ ಸಹಾಯವನ್ನು ಕೂಡ ಬಡ ಮಕ್ಕಳಿಗೆ ಮಾಡಿದ್ದರು ಎಂಬುದನ್ನು ಕೂಡ್ಲಿಗಿ ತಾಲೂಕಿನ ಬಲ್ಲವರು ಹೃದಯ ತುಂಬಿ ಹೇಳುತ್ತಾರೆ.
ಎರಡು ಗುಂಪುಗಳ ನಡುವೆ ಘರ್ಷಣೆಯಾಗಿ 144 ಸೆಕ್ಷನ್ ಜಾರಿಯಾಗಿ ಸುಮಾರು 800 ಕ್ಕೂ ಅಧಿಕ ಮಂದಿ ಜೈಲಾದಾಗ ನ್ಯಾಯಾಲಯದಲ್ಲಿ ಜಾಮೀನು ನೀಡಿ ನ್ಯಾಯಾಧೀಶರ ಹುಬ್ಬೇರಿಸುವಂತೆ ಮಾಡಿ ಔದಾರ್ಯ ಮೆರೆದು ಇಂದಿಗೂ ಆ ಎರಡು ಗುಂಪಿನ ನಡುವೆ ಘರ್ಷಣೆಯಾಗದಂತೆ ಸಿದ್ದಣ್ಣ ಅಂಗಡಿಯವರ ಆ ಘಟನೆಯೇ ಕಾರಣ ಎಂಬುದನ್ನು ಆ ಪ್ರಕರಣದಿಂದ ಮುಕ್ತರಾದವರು ಹೇಳಿರುವುದು ಪುಸ್ತಕದಲ್ಲಿ ದಾಖಲಾಗಿದ್ದು ನಿಜಕ್ಕೂ ಈ ನಿಲುವಿನ ಹಿಂದೆ ಅವರಲ್ಲಿದ್ದ ತನ್ನೂರಿನ ಅಭಿಮಾನ ಹಾಗೂ ನಾಯಕತ್ವದ ಗುಣದ ಅರಿವು ನಮಗಾಗುತ್ತದೆ ಅಲ್ಲಲ್ಲಿ ರಾಮಕೃಷ್ಣ ಹೆಗಡೆಯವರ ರಾಜಕೀಯ ವಿಚಾರಗಳು ಬರುತ್ತಲೇ ಕೂಡ್ಲಿಗಿ ತಾಲೂಕಿನ ಆ ಕಾಲದ ರಾಜಕೀಯ ಚೀತ್ರಣದ ಅರಿವು ನಮನ್ನು ಕಾಡದೆ ಬಿಡುವುದಿಲ್ಲ.
ಕೂಡ್ಲಿಗಿ ತಾಲೂಕಿನ ಚಿತಾಭಸ್ಮದ ಹಿನ್ನೆಲೆ ನನಗಲ್ಲದೆ ಬಹುಶಃ ಕೂಡ್ಲಿಗಿ ತಾಲೂಕಿನ ಬಹುತೇಕ ಯಾರಿಗೂ ತಿಳಿದಿರುವುದಿಲ್ಲ ಎಂಬುದು ನನ್ನ ಭಾವನೆ ಸ್ವಾತಂತ್ರ್ಯ ಬಂದ ನಂತರ ಭಾರತ ದೇಶದಲ್ಲಿ ಮೊಳಗುತ್ತಿದ್ದ ರಾಷ್ಟ್ರಗೀತೆ ಹಾಡುಗಳು ಗೀತೆಗಳು ಆಗ ತಾನೆ ಸ್ವಾತಂತ್ರ್ಯ ಬಂದಿದ್ದರಿಂದ ಅದೊಂದು ತರಹದ ನಿತ್ಯ ಸ್ವಾತಂತ್ರ್ಯ ದಿನಾಚರಣೆ ರೀತಿ ಇತ್ತು ಎನ್ನುವ ಹಾಗೆ ರಾಷ್ಟ್ರೀಯ ಹಬ್ಬಗಳು ಬಂದರೆ ಸಾಕು ಸಿದ್ದಣ್ಣ ಅಂಗಡಿಯವರು ತಯಾರಾಗಿ ದೇಶಭಕ್ತಿ ಗೀತೆಗಳನ್ನು ಹಾಡುತ್ತಿದ್ದ ರೀತಿ ರಿವಾಜುಗಳು ಹಾಗೂ ಬಿಂದು ಮಾಧವ್ ರಾಯ್ ರ ಗಾಂಧೀಜಿ ಅಭಿಮಾನಿಗಳ ಸಂಘದ ಮೂಲಕ ಸಿದ್ದಣ್ಣ ಅಂಗಡಿಯವರು ಗೋಡ್ಸೆ ಗಾಂಧೀಜಿಯವರನ್ನು ಕೊಂದಾಗ ಕಷ್ಟಪಟ್ಟು ಭಸ್ಮವನ್ನು ತಂದು ಹುತಾತ್ಮ ಮಹಾತ್ಮ ಗಾಂಧಿಯವರ ಚಿತಾಭಸ್ಮವನ್ನು ಸ್ಥಾಪಿಸಿದ ಕೀರ್ತಿ ಸ್ವಾತಂತ್ರ್ಯ ಹೋರಾಟದ ಕುರುವಾಗಿ ಕೂಡ್ಲಿಗಿ ಮತ್ತು ಭಾರತದ ಸ್ವಾತಂತ್ರ್ಯದ ಹೋರಾಟದ ದಿನದ ಸಂಬಂಧಗಳ ಮೇಲೆ ಬೆಳಕು ಚೆಲ್ಲುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.
ಇಷ್ಟಲ್ಲದೆಯೂ ರಕ್ತರಾತ್ರಿ ನಾಟಕದ ಮೂಲಕ ತಾವೇ ಶಕುನಿ ಪಾತ್ರ ಮಾಡಿ ಬಂದ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಂದಾಯ ಮಾಡುವ ಅವರ ಕಾಯಕದಲ್ಲಿ ಅದೆಷ್ಟು ನಾಡ ಪ್ರೇಮವಿದೆಯೆಂಬುದನ್ನು ನಾವೆಲ್ಲರೂ ಅಲ್ಲಗಳೆಯುವಂತಿಲ್ಲ.
ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬುವಂತೆ ಶ್ರೀಯುತ ದಿವಂಗತ ಸಿದ್ದಣ್ಣ ಅಂಗಡಿಯವರ ಹೆಂಡತಿಯ ಪ್ರೇರಣೆ ಆ ತಾಯಿ ಕಾಸಿನಗಲ ಹಣೆಯ ಮೇಲೆ ಇಡುತ್ತಿದ್ದ ಹಣೆಯ ಕುಂಕುಮ ಹಾಗೂ ಹುಣಸೆ ಹಣ್ಣಿನ ಬೀಜವನ್ನು ಬೇರ್ಪಡಿಸಲು ಬರುತ್ತಿದ್ದ ಆಳುಗಳೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ ಕೆಲಸದವರ ಮಕ್ಕಳುಗಳಿಗೆ ಹಾಲು ಬಿಸ್ಕೇಟ್ ನೀಡಿ ಸತ್ಕರಿಸಿ ವಿಶ್ವಾಸದಿಂದ ಕೆಲಸ ತೆಗೆದುಕೊಳ್ಳುತ್ತಿದ್ಧ ರೀತಿ ನಿಜಕ್ಕೂ ಅನುಕರಣೀಯ.
ಸಿದ್ದಣ್ಣ ಅಂಗಡಿಯವರ ವ್ಯಕ್ತಿತ್ವಕ್ಕೆ ಪ್ರೇರಣೆ ನೀಡುವಂತಹ ಮಡದಿ ಇದೇ ಅಲ್ಲವೇ ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುವುದು ಶಿವಂಗೆ. ಹಾಗೂ ಯಾರೆ ಅತಿಥಿಗಳು ಮನೆಗೆ ಬಂದರೂ ಅತಿಥಿ ಸತ್ಕಾರ ಮಾಡುವುದು ಒಂದು ದಿನವೂ ಬೆಣ್ಣೆ ತುಪ್ಪವಿಲ್ಲದೆ ಊಟ ಮಾಡುತ್ತಿದ್ದ ಸಿದ್ದಣ್ಣ ಅಂಗಡಿಯವರ ವ್ಯಕ್ತಿತ್ವದಲ್ಲಿ ಮಾತ್ರ ಸಾತ್ವಿಕ ಗುಣವೆ ಬಂದದ್ದು ದೈವಾನುಗ್ರಹವಲ್ಲವೇ? ತೋಟದಲ್ಲಿ ಬೆಳೆದ ಮಾವಿನ ಹಣ್ಣಿಗಳನ್ನು ಓಣಿಯ ಮಂದಿಗೆ ಸ್ನೇಹಿತರಿಗೆ ಹಂಚಿ ತಿನ್ನುವ ಗುಣ ನಿಜಕ್ಕೂ ಶ್ಲಾಘನೀಯ.
ಹೀಗೆಯೇ ತಮ್ಮ ತಂದೆ ಕಟ್ಟಿದ್ದ ಮನೆಯಲ್ಲಿ ತಮ್ಮ ತಂದೆಯಂತೆಯೇ ನೀವು ದಾನ ಧರ್ಮಗಳನ್ನು ಮಾಡಿ ಈ ಬದುಕು ನಶ್ವರ ಕೊಟ್ಟು ಕೊರಗಬೇಡಿ ನಿಮ್ಮಿಷ್ಟದಂತೆ ಬದುಕಿ ಎಂದು ಹೋದ ವರುಷ ದೈವಾದೀನರಾದರು ಎಂದು ಶ್ರೀಯುತ ವೀರೇಶ್ ಅಂಗಡಿ ಸರ್ ಸಿದ್ದಣ್ಣ ಅಂಗಡಿಯವರ ತೃತೀಯ ಪುತ್ರ ಗದ್ಗದಿತರಾಗಿ ಹೇಳುವಲ್ಲಿ ಸಿದ್ದಣ್ಣ ಅಂಗಡಿಯವರ ವ್ಯಕ್ತಿತ್ವ ನಮ್ಮ ಕಣ್ಮುಂದೆ ಕಟ್ಟಿ ನಿಲ್ಲುತ್ತದೆ ಶ್ರೀಯುತರು ಶತಾಯುಷಿಗಳಾಗಬೇಕಿತ್ತು ಆದರೆ ದೈವಾನುಗ್ರಹವೇನಿದೆಯೋ ಯಾರು ಬಲ್ಲರು.
ಹೂಂ… ಇರಲಿ ಶ್ರೀಯುತ ಸಿದ್ದಣ್ಣ ಅಂಗಡಿಯವರ ವ್ಯಕ್ತಿತ್ವ ನಮ್ಮ ಕೂಡ್ಲಿಗಿ ತಾಲೂಕಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ಧು ಈ ಪುಸ್ತಕವನ್ನು ನಮ್ಮ ನಾಡಿನ ಮೂಲೆ ಮೂಲೆಗು ತಲುಪಿಸಬೇಕೆಂಬ ನನ್ನ ವೈಯಕ್ತಿಕ ಮನವಿಯನ್ನು ವೀರೇಶ್ ಅಂಗಡಿ ಸರ್ ರವರಲ್ಲಿಡುತ್ತಾ ಸಿದ್ದಣ್ಣ ಅಂಗಡಿಯವರ ವ್ಯಕ್ತಿತ್ವವನ್ನು ನಾನು ಕೊಂಚ ಮಟ್ಟಿಗೆ ವೀರೇಶ್ ಅಂಗಡಿ ಸರ್ ರವರಲ್ಲಿ ಕಂಡೆ ಈ ಸಿದ್ದಣ್ಣ ಅಂಗಡಿಯವರ ಕುಟುಂಬಕ್ಕೆ ಇನ್ನಷ್ಟು ದಾನ ಧರ್ಮ ಮಾಡುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂಬುದು ನನ್ನ ಮನದಾಸೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243



