Connect with us

ನೆಲದನಿ

ಅನಾಥರ ಬಂಧು ಕೊಡೇಕಲ್ ಪರಮ ಪೂಜ್ಯ ಶ್ರೀ ದಾವಲ್ ಮಲಿಕ್ ಅಜ್ಜ

Published

on

  • ಸಂಗಮೇಶ ಎನ್ ಜವಾದಿ

 

ಲ್ಯಾಣ ಕರ್ನಾಟಕ ಸರ್ವ ಜನಾಂಗದ ಶಾಂತಿ ತೋಟ, ಸರ್ವ ಧರ್ಮಗಳ ಭಾವೈಕ್ಯತೆಯ ಬಿಡು. ದಾಸರು ಸೂಫಿ – ಸಂತರು ಶರಣರು ಜನಿಸಿದ ಪುಣ್ಯ ಭೂಮಿ, ಜಾಗತಿಕ ಪ್ರಪಂಚಕ್ಕೆ ಸಮಾನತೆಯನ್ನು ಬೋಧಿಸಿ, ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ಕರುನಾಡಿನ ಹೆಮ್ಮೆಯ ನಾಡು ಕಲ್ಯಾಣ ನಾಡು.

ಇಂತಹ ನಾಡಿನಲ್ಲಿ ಅದೆಷ್ಟೋ ಮಹನೀಯರು ಜನ್ಮವಿತ್ತು ತಮ್ಮದೇ ಆದಂತಹ ಸಾಮಾಜಿಕ ಕೊಡುಗೆಗಳು ನೀಡಿ ಲಿಂಗೈಕ್ಯರಾಗಿದ್ದಾರೆ. ಇವರ ಆದರ್ಶ ವಿಚಾರಗಳ ಸ್ಮರಣೆಯನ್ನು ನಾವು ಸದಾ ಮಾಡಿಕೊಂಡು ಬರುತ್ತಿದ್ದೇವೆ.
ಸಾವಿರಾರು ವರ್ಷಗಳ ಪೂರ್ವದಿಂದ ಇಲ್ಲಿಯವರೆಗೂ ಇಲ್ಲಿ ಜನಿಸಿದ ಪ್ರತಿಯೊಬ್ಬ ದಾರ್ಶನಿಕರು ತಮ್ಮ ಇಡೀ ಬದುಕನ್ನು ಈ ನಾಡಿನ ಉನ್ನತಿಗಾಗಿ ಮೀಸಲಿಟ್ಟು ಹೋರಾಟ ಮಾಡಿದಾರೆ.

ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗದೆ ನಿಸ್ವಾರ್ಥ ಸೇವಾ ಮನೋಭಾವದಿಂದ ಕಾಯಕ ಮಾಡಿ ಅಭಿವೃದ್ಧಿಪಥದಲ್ಲಿ ಮುನ್ನಡೆಸಿಕೊಂಡು ಹೋಗಿದಾರೆ. ಸಾಹಿತ್ಯ, ಸಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಈ ಪ್ರದೇಶವನ್ನು ಬೆಳೆಸುವ ಕಾರ್ಯ ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಪ್ರತಿಫಲವಾಗಿ ಈ ನಾಡು ಸರ್ವ ರೀತಿಯಿಂದಲೂ ಮಹತ್ವ ಪಡೆದಿದೆಕೊಂಡು ಮುನ್ನಡೆ ಸಾಗುತ್ತಿದೆ.

ಇಂತಹ ಸಾಧಕರ ಪಟ್ಟಿಯಲ್ಲಿ ಈದಿಗ ಹೊಸ ಹೆಸರು ಸೇರ್ಪಡೆ ಎಂದರೆ ಅದು ಅನಾಥ ಮಕ್ಕಳ ಪಾಲಕ – ಪೋಷಕರು, ವಯೋವೃದ್ಧರ ನಿಸ್ವಾರ್ಥ ಸೇವಕರು, ಸದಾ ಅಭಿವೃದ್ಧಿಗಾಗಿ ಹಂಬಲಿಸುವ ಮನಸ್ಸಿನವರು, ಜಾತಿ ಮತ ಭೇದ ಎನ್ನದೆ ಎಲ್ಲರೂ ನನ್ನವರು ಎನ್ನುವ ಆಶಾವಾದದ ಮೌಲ್ಯಯುತ ಸಿದ್ಧಾಂತಕರಾದ ಕೊಡೇಕಲ್ ದಾವಲ್ ಮಲಿಕ್ ಅಜ್ಜನವರು.

ಇವರ ಸೇವಾ ಚಟುವಟಿಕೆಗಳು ಜನಮೆಚ್ಚುಗೆ ಪಾತ್ರವಾಗಿ ಜನಮನಗಳಲ್ಲಿ ಬೆಳಗುತ್ತಿವೆ. ಈ ನಿಟ್ಟಿನಲ್ಲಿ ಅಜ್ಜನವರ ಸಾಧನಾ ಸೇವೆಯನ್ನು ತಮ್ಮೆಲ್ಲರ ಮುಂದೆ ಪ್ರಚುರಪಡಿಸುವ ಒಂದು ಸುವರ್ಣ ಅವಕಾಶ ನನಗೆ ದೊರೆತಿದೆ. ಇದನ್ನು ಸದ್ಬಳಕೆಯನ್ನು ಮಾಡಿಕೊಳ್ಳುವ ಸಣ್ಣ ಪ್ರಯತ್ನ ಮಾಡಿದ್ದು,ತಮ್ಮ ಎದುರಿಗೆ ನನ್ನ ಲೇಖನದ ಮೂಲಕ ಇವರ ಸೇವೆಗಳನ್ನು ಹಂಚಿಕೊಳ್ಳುತ್ತಿರುವೆ.

ಕೊಡೇಕಲ್ ಪರಮ ಪೂಜ್ಯ ಶ್ರೀ ದಾವಲ್ ಮಲಿಕ್ ಅಜ್ಜನವರು ಎಂದರೆ ಮುಪ್ಪಾದ ವಯೋವೃದ್ಧರಲ್ಲ, ಸೌಮ್ಯ ಸ್ವಭಾವದ, ನಿಷ್ಕಲ್ಮಶ – ನಿಷ್ಕಳಂಕ ಹೃದಯ ವೈಶಾಲ್ಯ, ನಗುಮೊಗದ ಕಾಯಕಯೋಗಿ, ಸಾಮಾಜಿಕ ಜವಾಬ್ದಾರಿ ಹೊತ್ತು ಜೋಳಿಗೆ ಹಿಡಿದ 26 ವರ್ಷದ ಹರಿಹರೆಯದ ಯುವಕರು. ಆಧ್ಯಾತ್ಮಿಕ ಸೆಳೆತನ, ನಿರ್ಗತಿಕರ ಸೇವೆ ಮಾಡಬೇಕೆಂಬ ಹಂಬಲ, ಅನ್ಯಾಯಕ್ಕೊಳಗಾದ ಅನೇಕ ಜನರಿಗೆ ಬದುಕಿನ ಭರವಸೆ ನೀಡುವ ನಿಟ್ಟಿನಲ್ಲಿ ಎಲ್ಲಾ ಸುಖ ಭೋಗವನ್ನು ತ್ಯಾಗ ಮಾಡಿ, ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನಸೇವೆಯೇ ಜನಾರ್ದನ ಸೇವೆ ಎಂಬ ವಾಣಿಯಂತೆ ಮುನ್ನಡೆಯುತ್ತಿದ್ದಾರೆ.

ಬಿಜಾಪುರ ಜಿಲ್ಲೆಯ ಮುದ್ದೇಬಿಹಾರ ತಾಲೂಕಿನ ಕಾರಕೂರ ಗ್ರಾಮದ ರಾಜೇಸಾಬ್ ಮತ್ತು ಲಾಲಬಿ ದಂಪತಿಗಳ ಮಗನಾಗಿ ಜನಿಸಿದ ಇವರು. ಇವರ ಮೂಲ ಹೆಸರು ಲಾಲಸ ಹಿರೇಮನಿ ಯಾಗಿತ್ತು. ಆದರೆ ಹೆಚ್ಚು ಕಾಲ ಮನೆಯವರ ಜೊತೆ ಇರದೇ, ಆಧ್ಯಾತ್ಮಿಕ ಹಂಬಲ ಇದ್ದ ಕಾರಣದಿಂದ ಎಂಟನೆಯ ವರ್ಷದವರಿದಾಗಲೇ ಮನೆ ಬಿಟ್ಟರು, ಊರೂರು, ಕೇರಿ ಕೇರಿ, ಗಲ್ಲಿ ಗಲ್ಲಿ ಅಲೆದಾಡಿದರು. ಅನಂತರ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬರದೇವನಾಳ ಗ್ರಾಮದ ಶರಣ ದಂಪತಿಗಳಾದ ನಂದನಗೌಡ ಮತ್ತು ಸೀತಾದೇವಿ ತಾಯಿಯವರ ಸಂಪರ್ಕಕ್ಕೆ ಬಂದರು.

ತರುವಾಯ ಈ ದಂಪತಿಗಳು ಇವರನ್ನು ಅತ್ಯಂತ ಪ್ರೀತಿಯಿಂದ ಸಾಕಿ ಸಲಹಿ, ದೊಡ್ಡವರಾಗಿ ಮಾಡಿದರು.ಆದರೂ ಸಹ ಆಧ್ಯಾತ್ಮಿಕ ಜ್ಞಾನದ ಹಸಿವು ಇವರನ್ನು ಸುಮ್ಮನೆ ಬಿಡಬೇಕಲ್ಲ. ಬಿಡಲಿಲ್ಲ ಎಂದಾಗಲೇ ಪುನಃ ಹೊರಟು ನಿಂತವರಿಗೆ ಕೊಡೇಕಲ್ ಕೈ ಮಾಡಿ ಕರಿದು ಬಾ ಎಂದಿತ್ತು. ಎಂದಿದೇ ತಡ, ತಡಮಾಡದೆ ಹೋರಟೆ ಬಿಟ್ಟರು ಕೊಡೇಕಲ್ ಗ್ರಾಮಕ್ಕೆ.

ಹೀಗೆ ಕೊಡೇಕಲ್ ಗ್ರಾಮಕ್ಕೆ ಆಗಮಿಸಿದ ಮಲಿಕ್ ರವರ ಜೀವನ ಕವಲುದಾರಿಂದ ಕೊಡಿತ್ತು. ಎಂಟನೇ ತರಗತಿಯವೆರೆಗೆ ಮಾತ್ರ ವಿಧ್ಯಾಭ್ಯಾಸ ಮುಗಿಸಿದ ಇವರು. ಇವರ ಆಧ್ಯಾತ್ಮಿಕ ಚಿಂತನ ಜ್ಞಾನಕ್ಕೆ ಕೊರತೆ ಇರಲಿಲ್ಲ. ಇಂತಹ ಕಷ್ಟದ ಸಮಯದಲ್ಲಿ 41 ದಿನಗಳ ಕಾಲ ಮೌನವ್ರತದ ಅನುಷ್ಠಾನವನ್ನು ಗೈದು, ತಾಳ್ಮೆ, ಕರುಣೆ, ಪ್ರೀತಿ,ತ್ಯಾಗ, ಹೃದಯವಂತಿಕೆಯನ್ನು ಸಂಪಾದಿಸಿಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ದರ್ಗಾ ಸಹ ಆರಂಭಿಸಿ
ಧಾರ್ಮಿಕ ಪ್ರವಚನದ ಜೊತೆ
ಅನಾಥ ಮಕ್ಕಳಿಗೆ ಆಶ್ರಯದಾತರಾಗಿ ಜೀವನದ ಕೊನೆಯವರೆಗೂ ದುಡಿಯಬೇಕೆಂದು ನಿಶ್ಚಯಿಸುತ್ತಾರೆ.

ತರುವಾಯ ಸೇವಾ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಇವರು, ಇವರ ನಿಸ್ವಾರ್ಥ ಸೇವೆ ಕಂಡು ಅದೇ ಗ್ರಾಮದ ರಂಗನಾಥ ಕಣಕಪ್ಪಾ ದೊರೆಯವರು ಅವರ ಸ್ವಂತ ಹದಿನಾಲ್ಕು ಗುಂಟೆ ಜಮೀನನ್ನು ದಾನ ಮಾಡಿದ ಫಲವಾಗಿ ಇವತ್ತು ನೂರಾರು ಮಕ್ಕಳಿಗೆ ಹಾಗೂ ವಯೋವೃದ್ಧರಿಗೆ ಆಶ್ರಯ ತಾಣವಾಗಿದೆ. ಹೀಗಾಗಿಯೇ ಮಲಿಕ್ ರವರು 26ನೇ ವಯಸ್ಸಿಗೆ ಜೋಳಿಗೆ ಹಾಕಿಕೊಂಡು ಹಸಿದ ಅದೆಷ್ಟೋ ಹೊಟ್ಟೆಗಳಿಗೆ ಅನ್ನವಷ್ಟೇ ಅಲ್ಲದೆ ಶಿಕ್ಷಣ ಕೊಡಿಸಿ,ಬದುಕು ಕಟ್ಟಿಕೊಡುವ ಭರವಸೆ ಕೊಡಿಸುತ್ತಾ,ತಬ್ಬಲಿ ಮಕ್ಕಳ ಲಾಲನೆ – ಪೋಷಣೆ ಮಾಡುವ ದೊಡ್ಡ ಜವಾಬ್ದಾರಿ ಹೊತ್ತುಕೊಂಡು ಹಸಿದ ಹೊಟ್ಟೆಗಳಿಗೆ ಹಸಿವು ಇಂಗಿಸುವ ಮಹತ್ವದ ಕಾರ್ಯದಲ್ಲಿ ತಲ್ಲಿನರಾಗಿದ್ದಾರೆ.

ಸಂದಿಗ್ಧ ಪರಿಸ್ಥಿತಿಯ ಇಂದಿನ ದಿನಮಾನಗಳ ದ್ವೇಷ ಮತ್ಸರ,ಅಸೂಯೆ – ಅಪನಂಬಿಕೆಯ ಜೊತೆ ಜಾತಿ-ಧರ್ಮ ಸಂಕೋಲೆಗಳ ಹೊಡೆದಾಟದಲ್ಲಿ ತೊಡಗಿಸಿಕೊಂಡ ಜನರ ಮಧ್ಯೆ, ಬಿನ್ನರಾಗಿ ನಿಲ್ಲುವ ಇವರು ಇದೆಲ್ಲವನ್ನು ಬಿಟ್ಟು ನಾವೆಲ್ಲರೂ ಒಂದು, ಒಂದೇ ಕುಟುಂಬದವರು,
ಸರ್ವರೂ ಸಮಾನರು ಎನ್ನುವ ಭಾವನೆಯ ಅಡಿಯಲ್ಲಿ ಚಿಂತನ ಮಂಥನ ಮಾಡುತ್ತಾ ದಾಸೋಹ ಭಾವದ ಕರುಣಾಮೂರ್ತಿಯಾಗಿ ಮಿನುಗುತ್ತಿದ್ದಾರೆ.

ಜೋಳಿಗೆ ಹಿಡಿದು ತರುವ ಆಹಾರವನ್ನು ಎಲ್ಲರಿಗೂ ಸಮಾನವಾಗಿ ಹಂಚಿ ಸರ್ವರ ನಗುಮೊಗದಲ್ಲಿ ಸಂತೋಷವನ್ನು ಕಾಣುವುದು ಇವರ ಮುಖ್ಯ ಗುರಿಯಾಗಿದೆ. ಆಶ್ರಮಕ್ಕೆ ಆಗಮಿಸಿದ ಯಾವೊಬ್ಬ ವ್ಯಕ್ತಿಯೊ ಅನ್ನ, ನೀರು, ಆಶ್ರಯ ಸಿಗದೆ ನೋವುಂಟು ಪಡಬಾರದು ಎಂಬುವುದೇ ಇವರ ಪ್ರಮುಖ ಧ್ಯೇಯ ಮಂತ್ರವಾಗಿದೆ. ಹಾಗಾಗಿಯೇ
ಕೊರೋನಾ ಸಮಯದಲ್ಲಿಯೊ ಸಹ ಯಾವುದೇ ರೀತಿಯ ಮಕ್ಕಳು, ವಯೋವೃದ್ಧವರಿಗೂ ನೋವುಂಟು ಆಗದಂತೆ ಅವರೆಲ್ಲರ ಆರೋಗ್ಯ ಕಾಪಾಡಿಕೊಂಡು ಬಂದಿದ್ದಾರೆ.

ಸದ್ಯ ಇದೀಗ 120 ಮಕ್ಕಳು ಸೇರಿದಂತೆ 60 ಕ್ಕೂ ಹೆಚ್ಚು ವಯೋವೃದ್ಧರು ಇಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ದಿನನಿತ್ಯಕ್ಕೆ ಬೇಕಾದ ಅವಶ್ಯವಿರುವ ಎಲ್ಲಾ ವಸ್ತುಗಳು ಪೂರೈಸುವುದು ಸೇರಿದಂತೆ ಬಟ್ಟೆ, ಶಿಕ್ಷಣದ ಖರ್ಚು, ಸರಿಯಾದ ಸಮಯಕ್ಕೆ ಊಟದ ವ್ಯವಸ್ಥೆ, ವೈದ್ಯಕೀಯ ಸೇವೆ, ವೈಚಾರಿಕ ವಿಚಾರಗಳು ಸರ್ವರಿಗೂ ಉಣಬಡಿಸುವ ಕಾಯಕದಲ್ಲಿ ಅಜ್ಜನವರು ತೊಡಗಿಸಿಕೊಂಡಿದ್ದಾರೆ. ಕಾರಣ ಹೆತ್ತವರ ಹೊರೆಯಾಗಿ ನರಕಮಯ ಸ್ಥಿತಿಯಲ್ಲಿ ಇದ್ದು ಜೀವನದ ಕೊನೆಯ ದಿನಗಳು ಎಣಿಸುವ ಅದೆಷ್ಟು ಅನಾಥರ ನೆರವಿಗೆ ಧಾವಿಸಿ ಅವರನ್ನು ಆಶ್ರಮಕ್ಕೆ ಕರೆತಂದು ಅವರ ಆರೈಕೆ ಮಾಡಿ ಅವರನ್ನು ನಾಡಿನ ಉತ್ತಮ ಪ್ರಜೆಗಳನ್ನಾಗಿ ಮಾಡುವ ಮಹೋನ್ನತ ಕಾರ್ಯಕ್ಕೆ ಕೈಹಾಕಿ ಶ್ರಮಿಸುತ್ತಿರುವುದು ನೋಡುತ್ತಿದ್ದೇವೆ.

ಆಶ್ರಮದಲ್ಲಿ ಇರುವವರಿಗೂ ಹಾಗೂ ವಿವಿಧ ಜಿಲ್ಲೆಯ ಬಡವರ ಮಕ್ಕಳಿಗೆ ಉಚಿತ ವಿವಾಹ ಮಂಗಲ ಕಾರ್ಯ, ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ ಉಚಿತ ಉನ್ನತ ಶಿಕ್ಷಣ ವ್ಯವಸ್ಥೆ ಜೊತೆಗೆ ಉದ್ಯೋಗ ಕೊಡಿಸುವ ಪ್ರಾಮಾಣಿಕ ಯತ್ನ. ಅದೇ ರೀತಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಷ್ಟದಲ್ಲಿರುವ ಜನರಿಗೆ ಜೋಳಿಗೆ ಕಾಯಕದ ಮೂಲಕ ಸಹಾಯ ಹಸ್ತ ನೀಡಿ ಅವರ ಸಂಕಷ್ಟವನ್ನು ದೂರು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

ಹೀಗೆ ಸಮಾಜಿಕ ಕಳಕಳಿ ಹೊಂದುವ ಮೂಲಕ
ಸರಕಾರ ಸಂಘ ಸಂಸ್ಥೆಗಳು ಮಾಡದೇ ಇರುವಂತಹ ಅನೇಕ ಜನಪರ ಕಾರ್ಯಗಳು ಮಾಡಿ, ಸೈ ಎನಿಸಿಕೊಂಡಿದ್ದಾರೆ. ಈ ತನ್ಮೂಲಕ ಸರ್ವಜನಾಂಗದ ಪ್ರೀತಿಯ ಅಜ್ಜರಾಗಿ ಈ ಭಾಗದಲ್ಲಿ ಬೆಳಗುತ್ತಿದ್ದಾರೆ. ಇನ್ನು ವಿಶೇಷವಾಗಿ ಹೇಳಬೇಕೆಂದರೆ ದೊಡ್ಡದೊಂದು ಅನಾಥಾಲಯ, ವಯೋವೃದ್ಧರಿಗೆ ಉತ್ತಮ ಕಟ್ಟಡ ಸೇರಿದಂತೆ ಸಾವಿರ ಮಕ್ಕಳಿಗೆ ಉತ್ತಮ ಶಿಕ್ಷಣದ ವ್ಯವಸ್ಥೆ ಮಾಡಬೇಕೆಂಬ ಹಂಬಲ ಇವರ ಮನಸ್ಸಿನಲ್ಲಿನ್ನೂ ಸದಾ ಕೊರಗುತ್ತಿದೆ. ಈ ದಿಸಯಲ್ಲಿ
ಅಜ್ಜನವರು ದಾನಿಗಳಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

ವಿಶಾಲ ಮನಸ್ಸುಳ್ಳ ಮಹನೀಯರು ಆಶ್ರಮಕ್ಕೆ ದಾನ ಮಾಡಲು ಮುಂದಾಗಬೇಕು. ಈ ಮೂಲಕ ಅನಾಥರಿಗೆ ಬೆಳಕಾಗಬೇಕು, ಉಳ್ಳವರು ನೆರಳು ಅನಾಥರ ಮೇಲೆ ಬೀಳಲಿ ಎನ್ನುವುದು ಇವರ ಜೀವನದ ದೊಡ್ಡ ಮಹದಾಸೆ. ಅದಕ್ಕಾಗಿ ನೊಂದ ಜೀವಗಳಿಗೆ ಬೆಳಕಾಗಿ ದಾಸೋಹ, ಶಿಕ್ಷಣ ಮತ್ತು ಆಶ್ರಯದ ಜೊತೆಗೆ ಸಮಾಜಿಕ ಕಳಕಳಿಯ ನೀತಿ ಪಾಠಗಳು ಈ ಆಶ್ರಯದಲ್ಲಿ ದಿನನಿತ್ಯ ನಡೆಯುತ್ತಿವೆ. ಇದು ಅಜ್ಜನವರ ಅನಾಥಾಶ್ರಮವಲ್ಲ ಬದಲಿಗೆ ಬದುಕಿನ ಭಾವೈಕ್ಯದ ಬಂಡಿ. ದಾರಿಹೋಕರಿಂದ ಹಿಡಿದು ಅನಾಥರಿಗೆಲ್ಲ ಅನ್ನ,ಆಶ್ರಯ, ಶಿಕ್ಷಣ ನೀಡುತ್ತಿರುವ ಇಂತಹ ಮಾನವೀಯ ಮೌಲ್ಯಾಧಾರಿತ ಅಂತಃಕರಣದ ಹೃದಯವಂತಿಕೆಯ ಸೇವೆ ನಿಜಕ್ಕೂ ಇಂದಿನ ಸಮಾಜಕ್ಕೆ ಮಾದರಿ ಮತ್ತು ಪ್ರೇರಣೆ.

ಕೊನೆಯ ಮಾತು

ಪರಮ ಪೂಜ್ಯ ಶ್ರೀ ಅಜ್ಜನವರು ಅನುಭವಿಸಿದ ಬಡತನ ಬೇರೆ ಇನ್ನೊಬ್ಬರು ಅನುಭವಿಸಬಾರದು. ಶಿಕ್ಷಣ ವಂಚಿತರಾಗಬಾರದು. ಅನಾಥರು ತುತ್ತು ಅನ್ನಕ್ಕೂ ಪರದಾಡಬಾರದು ಎನ್ನುವದೇ ಇವರ ಕಳಕಳಿ, ಹೀಗಾಗಿ ಕೈಲಾದಷ್ಟು ಜೋಳಿಗೆ ಹಿಡಿದು ಅನಾಥ ಮಕ್ಕಳ ಪಾಲನೆ ಪೋಷಣೆ ಮಾಡಲೇಬೇಕು ಎನ್ನುವ ನಿಟ್ಟಿನಲ್ಲಿ ಪ್ರಾರಂಭವಾದ ಕೊಡೇಕಲ್ ಗ್ರಾಮದ ಅನಾಥಾಶ್ರಮದಲ್ಲಿ ಅನಾಥ ಮಕ್ಕಳು ಉತ್ತಮ ಸಂಸ್ಕಾರದಿಂದ ಬದುಕುತ್ತಿದ್ದಾರೆ. ಇದಕ್ಕೆ ಸ್ಪೂರ್ತಿ ಎಂದರೆ ಅದು ದಾವಲ್ ಮಲಿಕ್ ಅಜ್ಜನವರು ಎನ್ನುವ ಮಾತಂತು ನಿಜ.

ಅದಕ್ಕಾಗಿಯೇ ಬಸವಾದಿ ಶರಣರ ಸದಾಶಯದಂತೆ ಇವನಾರವ ಇವನಾರವ ಎನ್ನದೇ ಇವನಮ್ಮವ ಇವನಮ್ಮವ ಎನ್ನುವಂತೆ ಎಲ್ಲರಿಗೂ ಅಪ್ಪಿಕೊಂಡು ದಯೇ ಧರ್ಮದ ಮೂಲ ಎನ್ನುವ ಹಾಗೆ ಅಜ್ಜನವರ ಜೀವನ ಸಾಗುತ್ತಿದೆ.ಇದಕ್ಕೆ ಈ ನಾಡಿನ ಪ್ರಜ್ಞಾವಂತ ಜನರು ಅಜ್ಜನವರ ಸೇವೆಯೊಂದಿಗೆ ಕೈ ಜೋಡಿಸಬೇಕು. ಅಂದಾಗ ಮಾತ್ರ ನಾವು ಈ ಸಮಾಜದಲ್ಲಿ ಹುಟ್ಟಿದಕ್ಕೂ ಸ್ವಾರ್ಥಕವಾಗುತ್ತದೆ ಜೊತೆಗೆ ಋಣ ತೀರಿಸಲು ಸಾಧ್ಯ. ಇಲ್ಲವಾದಲ್ಲಿ ನಮಗೂ ಮತ್ತು ಮೃಗಗಳಿಗೂ ಯಾವುದೇ ರೀತಿಯ ವ್ಯತ್ಯಾಸ ಇರುವುದಿಲ್ಲ. ಆದಕಾರಣ ಅನಾಥರ ಸಂರಕ್ಷಣೆಗೆ ಸರ್ವರೂ ಮುಂದಾಗುವುದು ಸರ್ವ ಶ್ರೇಷ್ಠ.

(ಲೇಖಕರು – ಸಂಗಮೇಶ ಎನ್ ಜವಾದಿ, ಬೀದರ ಜಿಲ್ಲೆ.
ಸಾಹಿತಿ, ಪ್ರಗತಿಪರ ಚಿಂತಕರು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು

Published

on

~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ

ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.

ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.

 

ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.

ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

Continue Reading

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending