ನೆಲದನಿ
ಲಕ್ಷ್ಮಣ್ ಜೀ ; ನಮ್ಮ ನಡುವಿನ ಬುದ್ಧ..!
- ಪರಶುರಾಮ್. ಎ
ಕವಿ ಲಕ್ಷ್ಮಣ್ ಜೀ ನಮಗೆಲ್ಲ ಅಣ್ಣನಂತೆ, ಗುರುವಿನಂತೆ ಇದ್ದರು. ಅವರು ಎಂದಿಗೂ ನಾನೊಬ್ಬ ಪ್ರತಿಷ್ಟಿತ ಕವಿ, ಹೋರಾಟಗಾರ, ಜಾತಿ ವಿನಾಶ ವೇದಿಕೆಯ ಅಧ್ಯಕ್ಷನೆಂಬ ಅಹಂ ಅವರಿಗೆ ಕಿಂಚಿತ್ತು ಇರಲಿಲ್ಲ. ಕೇವಲ ಸಾಮಾನ್ಯನೊಳಗೊಬ್ಬ ಸಾಮಾನ್ಯನಂತೆ ಬದುಕಿದವರು.
ನಮಗೆಲ್ಲ ಆದರ್ಶವಾಗಿ ಉಳಿದರು. ಯಾವುದಾದರೂ ಸಾಮಾಜಿಕ ಹೋರಾಟ ಶಿಬಿರಗಳಿದ್ದಲ್ಲಿ ಮುಂಚೂಣಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ನಮಗೂ ಅಂತಹ ಕಾರ್ಯಕ್ರಮಗಳಿಗೆ ಬರಲು ತಿಳಿಸಿ, ಅಲ್ಲಿನ ವೇದಿಕೆಗಳಲ್ಲಿ ಮಾತನಾಡುವಂತೆ ಮೈಕ್ ನೀಡಿ ಅವಕಾಶ ಒದಗಿಸುತ್ತಿದ್ದರು.
ಇದಕ್ಕೆ ಉದಾಹರಣೆ ಆದಿಜಾಂಬವ ಸಂಘದಿಂದ ಬೆಂಗಳೂರಿನ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಪತ್ರಕರ್ತೆ ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಹೋರಾಟ ಮಾಡುವಾಗ ಹಿಂದಿನ ಸಾಲಿನಲ್ಲಿದ್ದ ನಾನು ಮತ್ತು ಬಸವಣ್ಣ (ಬಸವರಾಜು)ನಿಗೆ ಕರೆದು ಮಾತನಾಡುವಂತೆ ಹೇಳಿದರು, ನಾವಿಬ್ಬರೂ ಅಂದು ಧೈರ್ಯವಾಗಿ ನಿಸ್ಸಂಕೋಚದಿಂದ ರಾಜ್ಯ ಸರ್ಕಾರದ ಈ ಕೇಸಿನ ನಿರ್ಲಕ್ಷ ಮತ್ತು ಪೋಲಿಸರು ನ್ಯಾಯಯುತವಾಗಿ ವಿಚಾರಣೆ ಮಾಡುವಂತೆ ಒತ್ತಾಯಿಸಿ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಮಾತನಾಡಿದೆವು.
ಮೈಕ್ ಹಿಂದಿರುಗಿಸುತ್ತಿದ್ದಂತೆ ಲಕ್ಷ್ಮಣ್ ಜೀ ನನ್ನ ಬಳಿ ಬಂದು ‘ಲೋ ಅಣ್ಣಾ ಚೆನ್ನಾಗೆ ಮಾತ್ನಾಡ್ತ್ಯಲ್ಲೋ, ವಿದ್ಯಾರ್ಥಿಗಳು ಮಾತನಾಡಬೇಕು ವೇದಿಕೆ ಸಿಕ್ಕಾಗ ಮಾತಾಡೋ’ ಅಂದ್ರು. ಆಯ್ತ್ ಸಾರ್ ಅಂದೆ, ‘ಇನ್ನು ಮುಂದೆ ನನ್ನ ಜೊತೆಯಲ್ಲಿ ಹೋರಾಟಕ್ಕೆ ಎಲ್ಲಿಯೇ ಬಂದರು ನಾನು ಮಾತನಾಡಿದ ಮೇಲೆ ನೀನು ಮಾತನಾಡಬೇಕು ತಿಳೀತಾ? ತಪ್ಪಿಸ್ಕಂಡ್ರೆ ನಿನ್ನ ನಾನು ಉಗಿತಿನಿ ನೋಡ್ಕಾ!!’ ಎಂದು ಷಹಬ್ಬಾಷ್ ಹೇಳಿ ಬೆನ್ನು ತಟ್ಟಿದ್ದರು. ಇದು ನನ್ನ ಹೋರಾಟದ ಮೊದಲ ಮಾತಿಗೆ ಲಕ್ಷ್ಮಣ್ ಜೀ ಅಭಿಮಾನದ ಮತ್ತು ಪ್ರೀತಿಯನ್ನು ಸೂಚಿಸಿದ ಪರಿ.
ಬಸವಣ್ಣನ ಮನೆಯ ಮೇಲೆ ಆಗಾಗ ಭಾನುವಾರವೋ ಅಥವಾ ಎಂದಾದರೂ ಒಂದು ದಿನ ಸ್ನೇಹಿತರೆಲ್ಲ ಸೇರಿ ಮಾಂಸದಡುಗೆಯ ಮಾಡಿ ಸ್ನೇಹಕೂಟ ಏರ್ಪಡಿಸುವುದು ನಮ್ಮ ಬಳಗದಲ್ಲಿ ಆಗಾಗ ಸಾಮಾನ್ಯ. ಒಮ್ಮೆ ಇಂತಹ ಮಾಂಸದಡುಗೆಯ ಸ್ನೇಹಕೂಟಕ್ಕೆ ಲಕ್ಷ್ಮಣ್ ಜೀ ವಿಶೇಷ ಆಹ್ವಾನಿತರು. ಅಂದಿನ ಸ್ಪೆಷಲ್ ಫೋರ್ಕ್ ಮತ್ತು ಭೀಫ್ ಮಾಂಸದಡುಗೆ. ಬೀಫ್‍ನ ಮನೆಯ ಮಾಂಸದಡುಗೆ ಎಂದರೆ ಲಕ್ಷ್ಮಣ್‍ರಿಗೆ ಅಷ್ಟೇ ಇಷ್ಟ ಕೂಡಾ.
ಆ ಸ್ನೇಹಕೂಟಕ್ಕೆ ಅಡುಗೆ ತಯಾರಾಗುವ ವೇಳೆಗೆ ಬಂದ ಇವರು ಸ್ನೇಹಿತರ ಬಳಗವನ್ನು ಕಂಡು ತುಂಬ ಸಂತಸಗೊಂಡು ಇಂತಹ ಕ್ಷಣಗಳನ್ನು ನೀವು ನನಗೆ ಮೊದಲಿನಿಂದಲೂ ನೀಡಬೇಕಿತ್ತು ಕಣೊ ಲೋ ಅಣ್ಣ ಎಂದರು. ಭೀಫ್ ಅಡುಗೆ, ಸ್ನೇಹಿತರ ಬಳಗ, ನಗುಕೇಕೆ, ವಿಚಾರ ವಿನಿಮಯಕ್ಕೆ ಪ್ರಾಶ್ಯಸ್ತ ಸ್ಥಳ, ನೆಮ್ಮದಿ ನೀಡುವ ತಾಣವಾಗಿ ಕಂಡ ಸಮಯವನ್ನು ಲಕ್ಷ್ಮಣ್ ಸಾರ್ ಅರೆಕಾಲ ಗದ್ಗದಿತರಾಗಿದ್ದರು.
ಅಡುಗೆ ಇನ್ನೇನು ಮುಗಿಯುತ್ತಿದ್ದಂತೆ ಜೇಬಿನಿಂದ ಪುಟ್ಟ ಬಾಟಲ್ ತೆಗೆದು ಅಣ್ಣಾ ಒಂದು ಗ್ಲಾಸ್ ಒಂದು ತಟ್ಟೆಗೆ ಸಾರು ಮಾಂಸದ ಪೀಸ್ ಒಂಚೂರು ಹಾಕ್ಕೊಂಡು ನೀರು ತಗೊಂಡ್ ಬಾರಣ್ಣಾ ಅಂದರು. ಅಷ್ಟನ್ನೂ ತಂದು ಕೊಟ್ಟೆ ಹೆಬ್ಬೆರಳಿನ ಗಾತ್ರದ ಆ ಪುಟ್ಟ ಬಾಟಲಿನಿಂದ ಅರ್ಧ ಗ್ಲಾಸಿಗೆ ಉಯ್ದು, ಇನ್ನರ್ಧ ಗ್ಲಾಸಿಗೆ ಕೊಂಚ ನೀರು ಬೆರೆಸಿ ಬಾಟಲಿನಲ್ಲಿ ಉಳಿದ ಅರ್ಧ ಯಾರಿಗಾದರು ಕೊಟ್ಟು ಬಿಡಿ ಎಂದು ಹೇಳುತ್ತಾ, ಮಾಂಸದ ತುಂಡು ಕೈಯಲ್ಲಿ ಹಿಡಿದು ಒಂದೊಂದೆ ಗುಟುಕು ಡ್ರಿಂಕ್ಸ್ ಹೀರುತ್ತಾ ಮಾಂಸ ನಾಲಿಗೆಗೆ ಸೋಕಿಸಿ ಚಪ್ಪರಿಸಿ ತಿನ್ನುತ್ತಾ, ಅಡುಗೆಗೆ ಒಳ್ಳೆ ರುಚಿಯಿದೆ, ಬಹಳ ಚೆನ್ನಾಗಿದೆ ಲೋ ಅಣ್ಣಂದಿರ ಅಡುಗೆಯೆಂದು ಅದನ್ನು ಖಾಲಿಮಾಡಿದರು.
ಅವರಿಗೆ ಒಂದೆರೆಡು ಬಾರಿ ಮಾಂಸ ಕೊಡಲು ನಾನು ಬರಿಗಾಲಲ್ಲಿ ಓಡಾಡುತ್ತಿದ್ದನ್ನು ಗಮನಿಸಿ ಬಾ ಇಲ್ಲಿ, ಬರಿಗಾಲಲ್ಲಿ ಓಡಾಡೋದು ಆರೋಗ್ಯಕ್ಕೆ ತುಂಬ ಒಳ್ಳೆದು ದಿನಕ್ಕೆ ಸ್ವಲ್ಪ ಸಮಯವಾದರೂ ಬರಿಗಾಲ್ಲಿ ಓಡಾಡು, ನಾನು ದ,ಕೊರಿಯಾ ಪ್ರವಾಸಕ್ಕೆ ಹೋಗಿದ್ದಾಗ ಅಲ್ಲಿಯ ಜನ ಇಂತಹ ಅಭ್ಯಾಸ ಇಟ್ಟುಕೊಂಡಿದ್ದಾರೆ ಎಂದರು. ನಾನು ಅದಕ್ಕೆ ಉತ್ತರವೆಂಬಂತೆ ಅಣ್ಣಾ ನಮಗೆ ಅಭ್ಯಾಸ ಯಾಕೆ ಬೇಕು, ನಮಗೆಲ್ಲಾ ಚಿಕ್ಕ ವಯಸ್ಸಿನಲ್ಲಿ ಚಪ್ಪಲಿಯೇ ಇಲ್ಲದಂತೆ ಹಾಗೆ ಓಡಾಡಿಕೊಂಡಿದ್ದೇವಲ್ಲಾ ಇದಕ್ಕೆ ಅಭ್ಯಾಸವೇತಕೆ ಅಂದೆ.
ಅದಕ್ಕವರು ನಿಜ!! ನಿಜ!! ಅಣ್ಣಾ ಈ ಮಾತು! ನನ್ನ ಜೀವನಕ್ಕು ಈ ಮಾತು ಹೊಂದುವಂತದ್ದೇ ಎಂದು ಮನದೊಳಗೆ ಮಂದಸ್ಮಿತ ನಕ್ಕು ಬೀರಿ ಬಾಲ್ಯದಲ್ಲಿ ಚಪ್ಪಲಿಯಿಲ್ಲದೆ ಬದುಕಿದ ಸವಿಯಾದ ಗಾಯವೋ ದಿನಗಳೋ ಏನೋ ನೆನಸಿಕೊಂಡರು. ಕೊಂಚ ಸಮಯ ಕಳೆದು ನಾನು ಹೊರಡ್ತಿನಿ, ಹೋಗಿ ರೆಸ್ಟ್ ಮಾಡ್ತಿನಿ ಅಂದರು. ನಾನೇ ಅವರನ್ನು ಮನೆಯವರೆಗೂ ಬೈಕಿನಲ್ಲಿ ಡ್ರಾಪ್ ಮಾಡಿ ಬೀಳ್ಕೊಟ್ಟೆ. ಹಿಂದಿರುಗಿ ಬಂದು ಲೋ ಅಣ್ಣ ಇನ್ನೊಮ್ಮೆ ಅಂತಹ ಮಾಂಸದಡುಗೆ ಊಟಕ್ಕೆ ನನಗೆ ಮೊದಲೇ ತಿಳಿಸ್ರೋ ನಾನು ಬಂದೆ ಬರ್ತೀನಿ ಎಂದಿದ್ದರು.
ಅವರಿಗೆ ಆ ಒಂದು ಸ್ನೇಹಕೂಟದಲ್ಲಿ ಕಳೆದ ಸಂದರ್ಭ ಸಮಯವೆಲ್ಲಾ ಎಷ್ಟು ಆಪ್ತತೆಯನ್ನು ಬಯಸಿತ್ತು ಎಂದು ಅವರ ಈ ಮಾತುಗಳಲ್ಲಿ ವ್ಯಕ್ತವಾಗಿತ್ತು. ಅವರ ಮನಸ್ಸು ಸದಾ ಜಾಗೃತವಾಗಿ ನಮ್ಮ ಸ್ನೇಹಕೂಟವನ್ನು ಬಯಸಿದ್ದದ್ದನ್ನು ಕೇಳುತ್ತಿತ್ತು. ಇಂದು ನಮ್ಮ ಅವರ ಒಡನಾಟವೆಲ್ಲಾ ಸ್ಮøತಿಪಟಲದಲ್ಲಿ ಅಚ್ಚಾಗಿ ಆಗಾಗ ಅವರ ನೆನಪುಗಳು ಕಣ್ಣ ಮುಂದೆ ಬಂದು ತೇವಗೊಳಿಸುತ್ತದೆ.
ಅದ್ಯಾವುದೊ ಆತ್ಮೀಯತೆ ಲಕ್ಷ್ಮಣ್ ಜೀಗೆ ನನಗೆ ಹೆಚ್ಚಿತ್ತು, ಬಹುಶಃ ವಿಧ್ಯಾರ್ಥಿಯಂತಲೋ ಸಾಹಿತ್ಯದ ಓದುಗನಂತಲೋ ಎಂಬುದು ಸಹ ತಿಳಿಯದು. ಲೋ ಅಣ್ಣ ಸ್ಟೂಡೆಂಟ್‍ಗಳು ಅಂಬೇಡ್ಕರರ ಬಗ್ಗೆ ಓದಿ ತಿಳಿದು ಬರಿಬೇಕು. ನಿನಗೆ ಏನ್ ಅನ್ಸುತ್ತೊ ಅದ ಬರಿ ಅದ್ನಾ ನಾನೇ ತಿದ್ದಿ ನಂಗೊತ್ತಿರೊ ಯಾವ್ದಾದ್ರೂ ಪತ್ರಿಕೆಗೆ ನಂಗೊತ್ತಿರೋ ಹುಡ್ಗ ಬರ್ದಿರೋದು ಅಂತ ಹೇಳಿ ಹಾಕಿಸ್ತೀನಿ, ನೀನ್ ಬರಿಯೋ ಅಣ್ಣ ಅನ್ತಿದ್ರು.
ಅವರು ಲೋ ಅಣ್ಣ ಎಂದು ಸಂಬೋದಿಸುತ್ತಿದ್ದೆ ಹೆಚ್ಚು ಪ್ರಶ್ನೆಯಂತಿತ್ತು!. ಲೋ ಬಳಸೋದು ಯಾರಿಗೆ? ಚಿಕ್ಕವರಿಗೆ. ಅಣ್ಣ ಅನ್ನೋದು ಯಾರಿಗೆ ಬಳಸೋದು? ದೊಡ್ಡವರಿಗೆ. ಆದರೆ ಲಕ್ಷ್ಮಣ್ ಜೀ ಕಣ್ಣಲ್ಲಿ ಎಲ್ಲರೂ ಸಮಾನರಾಗಿ ಕಂಡದ್ದರಿಂದಲೇ ‘ಲೋ ಅಣ್ಣ’ ಎನ್ನುತ್ತಿದ್ದರೇನೋ? ಲಕ್ಷ್ಮಣ್ ಜೀ ಮಾತಿನಂತೆ ಒಂದು ಲೇಖನ ಬರೆದೆ, ಅದು ಸ್ಪರ್ಧಾ ಪರೀಕ್ಷೆಯಲ್ಲಿ ಓದಿಗೆ ತೊಡಗಿ ವಿಧ್ಯಾರ್ಥೀಗಳ ಮನಸ್ಥಿತಿ ತೊಳಲಾಟದ ಕುರಿತು.
ಅದು ಚಳುವಳಿ ಚಿಂತನೆ ಎಂಬ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದನ್ನು ಲಕ್ಷ್ಮಣ್ ಜೀಗೆ ತೋರಿಸುವ ಮುನ್ನವೇ ಅವರು ನಮ್ಮನ್ನು ಬಿಟ್ಟು ಅಗಲಿದರು. ನನಗೆ ಅವರಿಂದ ಲೇಖನದ ಅಭಿಪ್ರಾಯವನ್ನು ಕೇಳುವ ಭಾಗ್ಯವೇ ಇಲ್ಲವಾಗಿತ್ತು. ತಾಯಿ ಚೊಚ್ಚಲ ಮಗುವಿಗೆ ಜನ್ಮವಿತ್ತು, ಮಗುವಿನ ಮುಖ ನೋಡದೆ, ಮುದ್ದಿಸಿ ಆನಂದಿಸದೆ ಮಗುವನ್ನು ಬಿಟ್ಟು ಅವಳು ಹೋದಂತೆ ನನ್ನ ಪಾಲಿಗೆ ಆಗಿದ್ದು. ಮಗುವಿನ ಮುಖ ನೋಡದೆ ಅನಾಥವಾದಂತೆ ಮಾಡಿ ಹೋದ ಮಗುವಿನಂತೆ ಸದಾ ನನ್ನೆದೆಯಲ್ಲಿ ಅನಾಥ ಪ್ರಜ್ಞೆ ಕಾಡುವಂತೆ ಅವರ ಸಾವು ನನ್ನನ್ನು ದಿಗ್ಬ್ರಮೆಗೊಳಿಸಿತು ಈ ನೋವು ಶಾಶ್ವತವಾಗಿ ಉಳಿಯಿತು.
ಲಕ್ಷ್ಮಣ್ ಜೀ ಬಗ್ಗೆ ಅವರ ಒಡನಾಟದಲ್ಲಿದ್ದ ಅಷ್ಟು ದಿನಗಳ ನೆನಪುಗಳಲ್ಲಿ ಹಲವು ಅಲೆ ಅಲೆಯಾಗಿ ಮೇಲೆದ್ದು ಬರುತ್ತದೆ. ನೋಟು ಅಮಾನ್ಯೀಕರಣವಾದ ಕಾಲ ಜ್ಞಾನಮೂರ್ತಿ ಲಾಯರ್ ಬಾಲನ್ ಸಾರ್ ಇತರೆ ಒಡನಾಡಿಗಳೆಲ್ಲಾ ಸೇರಿ ಪ್ರಗತಿಪರ ವೇದಿಕೆಯಿಂದ ಆರ್‍ಬಿಐ ಮುತ್ತಿಗೆ ಹಾಕಬೇಕು ನೋಟು ಅಮಾನ್ಯೀಕರಣವನ್ನು ಪ್ರತಿಭಟಿಸಿ ಹೋರಾಟ ಮಾಡಬೇಕೆಂದು ನಿರ್ಧರಿಸಿದ್ದರು, ಇದರಲ್ಲಿ ಕವಿ ಲಕ್ಷ್ಮಣ್ ಜೀಯು ಕೂಡಾ ಇದ್ದರು.
ಹೋರಾಟದ ದಿನ ಮುತ್ತಿಗೆ ಹಾಕಬೇಕಾದಂತಹ ಸಂಧರ್ಭದಲ್ಲಿ ಎಲ್ಲರೂ ಆರ್ಭಟಿಸಿ ಧಿಕ್ಕಾರ ಕೂಗಿ ಪ್ರಗತಿಪರ ವೇದಿಕೆಯಿಂದ ಆರ್‍ಬಿಐ ಮುತ್ತಿಗೆಗೆ ಮುನ್ನುಗ್ಗಿದ್ದೆವು. ಪೋಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪೋಲಿಸ್ ವಾಹನಕ್ಕೆ ಬಲವಂತವಾಗಿ ತುಂಬುತ್ತಿದ್ದರು. ಈ ನಡುವೆ ಲಕ್ಷ್ಮಣ್ ಜೀ ಹಾಗೂ ಇನ್ನಿತರೆ ಹಿರಿಯ ಜೀವಗಳಿಗೆ ಎಂತಾದರೂ ಹಾನಿಯಾದರೆ ಎಂಬ ಭಯದಲ್ಲಿಯೆ ನಾನು ಜ್ಞಾನಮೂರ್ತಿ ‘ಲಕ್ಷ್ಮಣ್ ಜೀ ಲಕ್ಷ್ಮಣ್ ಜೀ’ ಎಂದು ಕೂಗುತ್ತಿದ್ದೆವು.
ಪೋಲಿಸರು ತಮ್ಮ ಹಿಡಿತವನ್ನು ಭಿಗಿಗೊಳಿಸಿ ವಾಹನಕ್ಕೆ ತುಂಬಿಸಿಯೇ ಬಿಟ್ಟರು. ನಮ್ಮನ್ನು ಒಟ್ಟು 2 ತಂಡಗಳಾಗಿ ವಿಂಗಡಿಸಿ 2 ವಾಹನಗಳಿಗೆ ಪ್ರತಿಭಟನಾಕಾರರನ್ನು ಅರೆಸ್ಟ್ ಮಾಡಿದರು. ನಾವಿದ್ದ ವಾಹನದ ಪ್ರತಿಭಟನಾಕಾರರಲ್ಲಿ ಲಕ್ಷ್ಮಣ್ ಜೀ ಇರಲಿಲ್ಲ. ಇನ್ನೊಂದು ವಾಹನವನ್ನು ಕಿಟಕಿಯಿಂದಲೇ ಸಂಪರ್ಕಿಸಿ ಅಲ್ಲಿನ ಗೆಳೆಯರೊಂದಿಗೆ ವಿಚಾರಿಸಿದರೆ ಆ ವಾಹನದಲ್ಲೂ ಅವರು ಬಂಧಿಯಾಗಿರಲಿಲ್ಲ. ನಮಗೆ ಗಾಬರಿ ಹೆಚ್ಚಾಯಿತು, ಆ ಹಿರಿಯ ಜೀವಕ್ಕೆ ಹೋರಾಟದ ಗಲಾಟೆ ಪೋಲೀಸರ ತಳ್ಳಾಟದ ನೂಕು ನುಗ್ಗಲಿನಲಿ ಏನಾದರೂ ಆಪತ್ತಾಯಿತೆ ಎಂದು ಗಲಿಬಿಲಿ ಗಾಬರಿ ಭಯದಿಂದ ಲಕ್ಷ್ಮಣ್ ಜೀಯನ್ನು ಸಂತೆಯಲ್ಲಿ ಕಳೆದು ಹೋದ ಅಮ್ಮನಂತೆ ಕಿಟಕಿಯಿಂದ ಪೋಲೀಸರ ಗುಂಪಿನತ್ತ ಕಣ್ಣು ಹಾಯಿಸಿದರೆ ಅಲ್ಲಿ ಮೂಲೆಯಲ್ಲಿ ನಿಂತು ಸಾವಧಾನವಾಗಿ ನಗು ಮುಖದಿಂದ ನಮಗೆ ಬೈ ಬೈ ಹೇಳಿ ನಮ್ಮತ್ತ ಕೈ ಬೀಸುತ್ತಿದ್ದರು.
ನಂತರ ಅವರ ಮೊಬೈಲ್ಗೆ ಕರೆ ಮಾಡಿದರೆ ನಾನು ಅರೆಸ್ಟ್ ಆಗಲಿಲ್ಲ, ಪೋಲಿಸರು ನನ್ನತ್ತ ಬರಲಿಲ್ಲವೆಂದು ನಗುತ್ತಾ ಹೇಳಿದರು. ಸರಿ ಪ್ರತಿಭಟನಾಕಾರರನ್ನು ಎಲ್ಲಿಗೆ ಸಾಗಿಸುತ್ತಾರೆಂದು ತಿಳಿದು ಸ್ಥಳವನ್ನು ಹೇಳಿ ನಾನು ಅಲ್ಲಿಗೆ ಬಂದು ಭೇಟಿಯಾಗುವೆ ಅಂದರು . ಬೇಡ ಬೇಡ ಸಾರ್ ನೀವು ಹುಷಾರಾಗಿರಿ ಇಲ್ಲಿನ ವಿಚಾರ ಸಂಜೆ ವೇಳೆಗೆ ನಾವೆ ಬಂದು ಭೇಟಿ ಮಾಡಿ ತಿಳಿಸುವೆವು, ನೀವು ಮನೆಯತ್ತ ಹೊರಡಿ ಎಂದಾಗ ಆ ಕರೆಯಲ್ಲಿ ನನ್ನ ಮೊದಲ ಹೋರಾಟದ ಮಾರ್ಗದರ್ಶಕನಾಗಿ ಲಕ್ಷ್ಮಣ್ ಜೀಯಾಗಿದ್ದರು. ಆಗ ಒಂದು ಎಚ್ಚರಿಕೆ ಮಾತು ಕೊಟ್ಟರು.
ಅರೆಸ್ಟ್ ಆದ ಬಳಿಕ ನಿನ್ನ ವಿವರ ಪೋಲಿಸರು ಕೇಳುವರು ಆಗ ಯಾವುದನ್ನು ಸತ್ಯ ಹೇಳಬೇಡ ಸುಳ್ಳು ಹೆಸರು ವಿಳಾಸ ಬರೆಸು, ನೀನಿನ್ನು ವಿದ್ಯಾರ್ಥಿಯಿದ್ದಿಯಾ ಯಾವುದೇ ಕೇಸು ಬೀಳದಂತೆ ಎಚ್ಚರವಾಗಿರು ಭವಿಷ್ಯಕ್ಕೆ ತೊಂದರೆ ಆಗದಂತೆ ಹೆಸರು ವಿಳಾಸ ಕೊಡು. ಎಂದರು ಹಾಗೆ ಮಾತು ಮುಂದುವರೆಸಿ ಊಟ ತರಿಸಿ ಎಂದು ಪೋಲಿಸರಿಗೆ ಗತ್ತಾಗಿಯೇ ಕೇಳು ನಿನಗೇನು ಊಟ ಬೇಕೊ ಕೇಳು ಅನ್ನುವಾಗ ಮಾತಿನ ಮದ್ಯೆ ನಾನು ಊಟ ಕೇಳಿದರೆ ಏಟು ಕೊಟ್ಟರೆ? ಅನ್ನುತ್ತಿದ್ದಾಗಲೇ ಹೋರಾಟಗಾರರಿಗೆ,ಪ್ರತಿಭಟನಾಕಾರರಿಗೆ ಪೋಲಿಸರು ಹೆದರುತ್ತಾರೆ,ಅದರಲ್ಲೂ ನೀನು ವಿದ್ಯಾರ್ಥಿ ವಿಚಾರವಂತನಿದ್ದೀಯಾ ಕೇಳು ಪರ್ವಾಗಿಲ್ಲ.
ಇದಕ್ಕಾಗಿಯೇ ಅವರಿಗೆ ಸರ್ಕಾರದಿಂದ ಹಣ ಬರುತ್ತದೆ ಭಯಬೇಡ ಎಂದರು ನಾನು ಸರಿ ಸಾರ್ ಎಂದು ಮಾತು ಮುಗಿಸಿದೆ. ನಾನು ಕೂಡಾ ಅದರಂತೆ ಆ ದಿನವನ್ನು ಕಳೆದು ಹೇಗೊ ಹೊರಬಂದೆ, ಎರಡು ದಿನ ಕಳೆದು ಲಕ್ಷ್ಮಣ್ ಸಾರ್‍ನ ನಂದಿನಿ ಬಡಾವಣೆಯ ಗ್ರಂಥಾಲಯದಲ್ಲಿ ಭೇಟಿಯಾದೆ, ಅವರು ನಗುತ್ತ ಇದೇ ಮೊದಲ ಹೋರಾಟದ ಫಲ ಮುಂದೆ ಮುಂದಿನ ಹೋರಾಟಗಳಲ್ಲಿ ಎಚ್ಚರ. ನಾನು ಅರೆಸ್ಟ್ ಆಗಲಿಲ್ಲವೆಂದು ಮೌನದಿಂದಲೇ ನಗುತ್ತಿದ್ದರು. ಆ ನಗು ನನ್ನ ಹೋರಾಟದ ದಾರಿದೀಪವಾಗಿದೆ. ಮಾರ್ಗದರ್ಶನಕ್ಕೆ ಅವರಿರುವರು ಎಂಬ ಧೈರ್ಯ ನನ್ನಲಿದೆ. ಒಟ್ಟಾರೆ “ ಲಕ್ಷ್ಮಣ್ ಜೀ ಎಂದರೆ ನಮ್ಮ ನಡುವಿನ ಬುದ್ಧನೇ ಸರಿ.”
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


