ನೆಲದನಿ
ಕಾಯಕ ಜೀವಿಗಳ ಚಳುವಳಿಯಲ್ಲಿ ಬುದ್ಧಪ್ರಜ್ಞೆ

- ಪ್ರೊ.ಹೆಚ್.ಲಿಂಗಪ್ಪ
ಕ್ರಿ.ಪೂ.ಐದನೆಯ ಶತಮಾನದ ಪೂರ್ವದಲ್ಲಿ ಏಷ್ಯಾದ ಮಹಾಬೆಳಕಾದ ಬುದ್ಧ ಮತ್ತು ಮಹಾವೀರರು ಶ್ರವಣ ಪರಂಪರೆಯ ಸಾಧಕರಿವರು. ಬ್ರಾಹ್ಮಣ್ಯದ ಬೌದ್ಧ ಧರ್ಮ ಭಾರತದಿಂದ ಏಷ್ಯಾಪೂರ್ವ ದೇಶಗಳಿಗೆ ವಲಸೆ ಹೋತ್ತು. ಜೈನ ಧರ್ಮ ದೇಶದಲ್ಲಿ ಜೀರ್ಣವಾಯಿತು. ವೈದಿಕ ಕದಂಬಬಾಹುಗಳಿಗೆ ಸಿಲುಕಿ ನರಳಿತು.
ಬಹು ಕಾಲದಿಂದಲೂ ವಲಸೆ ಪ್ರವೃತ್ತಿಯು ನಿರಂತರವಾಗಿ ನಡೆಯುತ್ತಾ ಬಂದಿದೆ. ಮಧ್ಯ ಏಷಿಯಾದಿಂದ ಹಲವು ಜನಾಂಗವು ವಲಸೆ ಬಂದಿದೆ. ಅವರ ಬಣ್ಣ, ಆಕಾರ, ಎತ್ತರ ಮತ್ತು ಮೈಕಟ್ಟು ಭಿನ್ನವಾಗಿದೆ. ಉತ್ತರದಲ್ಲಿ ಈ ಜನಾಂಗವು. ದಕ್ಷಿಣದಲ್ಲಿ ದ್ರಾವಿಡ ಮೂಲದವರು ನೆಲೆಸಿಕೊಂಡ ಅಖಂಡ ಭಾರತವಾಗಿದೆ. ಈ ರೀತಿಯಲ್ಲಿ ಬಣ್ಣದ ಆಧಾರದ ಮೇಲೆ ಮೂರು ಜನಾಂಗವಿರುವ ಭಾರತ ದೇಶ ನಮ್ಮದು!
ಆದ್ದರಿಂದ ಯಾರು ಆರ್ಯರು? ಯಾರು ಶೂದ್ರರು? ಎಂಬುದಾಗಿ ಸುದೀರ್ಘವಾದ ಸಂಶೋಧನೆಗಳು ನಡೆದುಕೊಂಡು ಬಂದಿವೆ. ಸಂಶೋಧನೆ ಮೂಲ ಸಾರ ಅರಿತರೆ ಭಾರತೀಯರಾದ ನಮಗೆ ನಮ್ಮೊಳಗೆಯಿರುವ ಕಿಚ್ಚಿಗೆ ಮುಲಾಮು ದೊರೆತಂತಾಗುತ್ತದೆ. ಜನಪರವಾದ ವಿಚಾರಗಳ ದಾಸೋಹದ ಮಾರ್ಗಗಳಾದ ಬುದ್ಧಮಾರ್ಗ-ಬಸವಮಾರ್ಗ ಮತ್ತು ಅಂಬೇಡ್ಕರ್ ಮಾರ್ಗಗಳು ನೆಲೆಕಂಡಿವೆ. ಇವು ಎಂದೂ ಮಾಸದ-ಇಂಗದ ಬತ್ತದ ವಿಚಾರ ಪರತೆಗಳು, ಸಮಾನತೆಯ ಬೀಜ ಬಿತ್ತಿ, ಸಮಾನತೆಯ ಬೆಳೆಯ ಬೆಳೆದು ಸಾಮರಸ್ಯದ ತೋರಣ ಕಟ್ಟಿದ್ದಾರೆ.
ಅವರಲ್ಲಿ ಪ್ರಮುಖರಾದ12ನೇ ಶತಮಾನದ ಬಸವಣ್ಣ ಸಾಮಾಜಿಕ ಕ್ರಾಂತಿಗೆ ಮುನ್ನೆಲೆಯಾಗುತ್ತಾರೆ. ಕನ್ನಡದ ನೆಲ, ಜಲ, ಭಾಷೆಯ ಬಗ್ಗೆ ಸರಳವಾಗಿ ಚಿಂತಿಸಿದ್ದು ಬಸವಣ್ಣ ಆಂದೋಲನವೊಂದರ ನಾಯಕರಾಗುತ್ತಾರೆ. ಕನ್ನಡ ಭಾಷೆಯಲ್ಲಿ, ದೇಶ-ಭಾಷೆಗಳ ಈ ಪರಿಮಿತಿ ಕಾರಣವಾಗಿ ನ್ಯಾಯವಾಗಿ ಸಿಗಬೇಕಾದ ಜಾಗತಿಕ ಪ್ರಸಿದ್ಧಿ ಸಿಕ್ಕಿಲ್ಲವಾದರೂ, ಇವರನ್ನು ಕುರಿತು ಹುಟ್ಟಿದಷ್ಟು ಸಾಹಿತ್ಯ ಕನ್ನಡದಲ್ಲಿ ಯಾರನ್ನು ಕುರಿತು ಹುಟ್ಟಿದಷ್ಟು ಬೇರೆಯವರಿಗೆ ಸಲ್ಲಿಕೆಯಾಗಿಲ್ಲ. ಇವನಷ್ಟು ಪ್ರಭಾವವನ್ನು ನಾಡಿನ ಯಾವ ಅನುಭಾವಿಕ ಪುರುಷನಿಲ್ಲಾ!
ಬಸವನ ವಚನಗಳ-ಚಿಂತನೆ ಒಂದು ಅಪೂರ್ವ ವಿಚಾರವಾಗಿತ್ತು. ವಚನವೆಂದರೆ ಪ್ರಜ್ಞೆ, ಆತ್ಮಸಾಕ್ಷಿಯ ಮಾತು ಎಂದು ಅರ್ಥ. ನಡೆ-ನುಡಿ ಮಾತ್ರ ಕಲಾತ್ಮಕವಾಗಿದ್ದುದು ರಚನೆಯಾಗಿ, ನಡೆದಂತೆ ನುಡಿದ ಆತ್ಮ ಸಾಕ್ಷಿ ವಾಣಿ ‘ವಚನ’ವೆನಿಸುತ್ತದೆ. ವಚನಗಳು ಪಂಡಿತ ಪಾಮರ ಸಾಹಿತ್ಯವಲ್ಲ. ಅನುಭಾವಿಗಳ ಸಾಹಿತ್ಯ, ಅವರು ಜೀವಿಸುರುವಾಗಲೇ ತಮ್ಮ ವಿಚಾರಗಳನ್ನು ಬರೆದು ಹೃದಯದಿಂದ ಹೃದಯಕ್ಕೆ ಮನಮುಟ್ಟವಂತೆ ಬಿಡಿ ಮಾತುಗಳ ಮೂಲಕ ಅನುಭವವೇದ್ಯವಾದ ವಿಚಾರಗಳ ಬುದ್ಧಪ್ರಜ್ಞೆಯ ಕಣಜವಾಗಿವೆ.
ನಾಡಿನ ಚರಿತ್ರೆಯಲ್ಲಿ ಇದೊಂದು ಜನಪರ ಆಂದೋಲನ, ನಮ್ಮ ನಾಡಿನ ಚರಿತ್ರೆಯಲ್ಲಿ ಒಂದು ವಿಶಿಷ್ಟ ಘಟನೆಯಾಗಿದೆ. ಆಂದೋಲನದ ನೇರ ಧ್ವನಿ, ವಚನ ಸಾಹಿತ್ಯ ಅದರಲ್ಲೂ ವರ್ಣಭೇದ, ವರ್ಗಭೇದ, ಲಿಂಗಭೇದ, ನಿರಾಕರಣೆಗಳಂಥ ವಿಚಾರಗಳು ಸ್ಫೋಟಗೊಂಡುದು ಲಕ್ಷಿತ ಸಂಗತಿಯಾಗಿವೆ. ಇಲ್ಲಿ ಪುರುಷರಷ್ಟೇ ಪ್ರಧಾನವಾಗಿ ಮಹಿಳೆಯರೂ, ಕುಲಜರಷ್ಟೇ ಪ್ರಧಾನವಾಗಿ ಅಂತ್ಯಜರೂ, ಪ್ರಭುಗಳಷ್ಟೇ ಪ್ರಧಾನವಾಗಿ ಪ್ರಜೆಗಳು ಬಾಳಿದರು. ಹಾಗೂ ಬರೆದದ್ದು ಕೂಡಾ ಚಾರಿತ್ರಿಕ ಸತ್ಯ. ವಚನ ವಾಙ್ಮಯ ನಮ್ಮ ಪರಂಪರೆಯ ಅಪೂರ್ವ ಸಾಹಿತ್ಯಿಕ ಸೃಷ್ಟಿಯಾಗಿದೆ. ಅತ್ಮಕಲ್ಯಾಣದೊಂದಿಗೆ ಸಮಾಜ ಕಲ್ಯಾಣವನ್ನು ಕಾರ್ಯಗತಗೊಳಿಸಲು ಹೋರಾಡಿ ಮಡಿದ ಹುತಾತ್ಮರ ಸಾಹಿತ್ಯವಿದು. ಅಂದು ಬಸವಣ್ಣ ಸುಮಾರು ಒಂದು ಸಾವಿರಾರು ನಾಲ್ಕು ನೂರು ಆರು (1406) ವಚನಗಳನ್ನು ಜನಮುಖಿಯಾಗಿ ರಚಿಸಿದ್ದಾರೆ.
ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಯುದ್ಧಗಳು ಜರುಗಿವೆ. ಇವುಗಳ ನಡುವೆ ಅನಂತವಾದ ವಿಭಜನೆಗಳು ಮನುಷ್ಯ ಸಮಾಜವನ್ನು ಸೀಳಿ-ಸೀಳಿ ಅಣಕಿಸುವ ರೀತಿಯಲ್ಲಿ ಅಸಮಾನತೆಯ ವಿಷಬೀಜ ಬಿತ್ತುತ್ತಿವೆ. ಭಾರತೀಯವಾದ ಸಂದರ್ಭದಲ್ಲಿ ಹಿಂದೂ ಹಾಗೂ ಅದರ ವರ್ಣವ್ಯವಸ್ಥೆಯ ಕಾರಣದಿಂದ ಸಮಾಜಶಾಸ್ತçಜ್ಞರ ಅಧ್ಯಯನದಿಂದ ಶ್ರೇಣೀಕರಣಗೊಂಡ ಜಾತಿಗಳು ಸುಮಾರು ಇಂದು ಆರು ಸಾವಿರಕ್ಕೂ ಅಧಿಕ ಜಾತಿ ಮತ್ತು ಉಪ-ಜಾತಿಗಳು ಸೃಷ್ಟಿಯಾಗಿ ಇಡೀ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿಯ ಅಸಮಾನತೆಯ ತಲ್ಲಣ ತಲೆದೋರಿದೆ.
ಜಾತಿ ವ್ಯವಸ್ಥೆಗೆ ಪ್ರಬಲವಾದ ಆಕರ ಮೂಲ ವೈದಿಕ ಪರಂಪರೆಯಾಗಿದೆ! ವೈದಿಕ ಪರಂಪರೆಯ ಜೊತೆಗೆ ಪರಂಪರೆಯ ಮಾರ್ಗವು, ಚಾರ್ವಾಕ ಪರಂಪರೆಯು, ಬಸವಾದಿ ಶರಣರ ಜಂಗಮ ಗುಣಗಳು, ಸಂತರಾಮದೇವ, ತುಕಾರಾಮ, ಕಬೀರ, ತುಳಸೀದಾಸ, ಮೀರಾಬಾಯಿ, ರೈದಾಸ, ಸಂತಶಿಶುನಾಳ ಷರೀಫ್ ಮುಂತಾದ ಅಪರೂಫದ ಭಕ್ತಿ ಪರಂಪರೆ ಕಂಡುಬರುತ್ತದೆ.
ಅದರಂತೆ ಹನ್ನೆರಡನೆಯ ಶತಮಾನದ ಬಸವಾದಿ ಶರಣರ ವಚನಗಳು ಬದುಕಿನ ಜೀವದುಸಿರಾಗಿ ಸಮಾಜವನ್ನು ಹೇಗೆ ಅಂತರ್‌ಗತವಾಗಿ ಬೆಸೆಯುತ್ತಿದ್ದವು ಎಂಬುದು ಕೂಡಾ ಮುಖ್ಯ ಸಂಗತಿಯಾಗಿದೆ. ವ್ಯಕ್ತಿತ್ವದ ವಿಕಾಸದಿಂದ ತಮ್ಮ ಹುಟ್ಟಿನ ಕಲ್ಮಶವನ್ನು ಕಳೆದುಕೊಂಡು ಮನದ ಮಲಿನತೆಯನ್ನು ಅಳಿದು ಶ್ರೇಷ್ಠರಾಗಿದ್ದಾರೆ. ತಾವು ಬದುಕಿ ಇತರರು ಬದುಕಲು ಅವಕಾಶ ಕಲ್ಪಿಸಿದ್ದಾರೆ. ಸರ್ವ ಸಮಾನತೆಯನ್ನು ಬಿಂಬಿಸುವುದೇ ಶರಣರ ಜೀವನದ ಪರಮ ಧ್ಯೇಯ. ನಿಜವಾಗಿಯೂ ದಲಿತ ವರ್ಗದಲ್ಲಿ ಜನ್ಮವೆತ್ತಿ ಸದ್ಗುರುಗಳ ಉಪದೇಶಾಮೃತದಿಂದ ಮೇಲೆದ್ದು, ಶ್ರೇಷ್ಠ ತತ್ವಜ್ಞಾನಿಯಾಗಿ, ಜೀವನ ಚೇತೋಹಾರಿ, ಸ್ಫೂರ್ತಿದಾಯಕ.
ಇವರಂತೆ ದಲಿತವರ್ಗದಲ್ಲಿ ಜನಿಸಿದ ಗುರುಮಾತೆ ಅಕ್ಕನಾಗಲಾಂಬಿಕೆ, ಅಕ್ಕಮಹಾದೇವಿ ಜೀವನಧಾರೆ, ಸತ್ಯಕ್ಕ, ಆಯ್ದಕ್ಕ ಲಕ್ಕಮ್ಮ, ಕಾಲಣ್ಣಿಯ ಕಾಮಮ್ಮ, ಸೂಳೆ ಸಂಕವ್ವೆ, ಕೊಟ್ಟಣ ಸೋಮಮ್ಮ, ಕದಿರ ರೆಮ್ಮವ್ವೆ, ಕೊಟ್ಟಣದ ಸೋಮಮ್ಮ, ಕಾಳೆವ್ವೆ, ಗಣೇಶ್ ಮಸಣಯ್ಯಗಳ ಪುಣ್ಯಸ್ತಿç, ಈಡಿಗರ ಶರಣೆ ಅಕ್ಕಮ್ಮ, ದುಗ್ಗಳೆ, ಗೊಗ್ಗವ್ವೆ, ಬೊಂತಾದೇವಿ, ಗಂಗಾಂಬಿಕೆ, ನೀಲಾಂಬಿಕೆ, ಮೋಳಿಗೆ ಮಹಾದೇವಿ, ಅಮುಗೆ ರಾಯಮ್ಮ, ಬಸವಣ್ಣ, ಅಲ್ಲಮ, ಚನ್ನಬಸವಣ್ಣ, ಅಂಬಿಗರ ಚೌಡಯ್ಯ, ಚೆನ್ನಯ್ಯ, ಧೂಳಯ್ಯ, ಹರಳಯ್ಯ, ಕಕ್ಕಯ್ಯ, ಶಿವನಾಗಿದೇವ, ಮಡಿವಾಳ ಮಾಚಯ್ಯ, ಹಡಪದ ಅಪ್ಪಣ್ಣ, ನುಲಿಯ ಚಂದಯಕ್ಯ, ಉರಿಲಿಮಗದೇವ, ಉರಿಲಿಂಗಪೆದ್ದಿ ಮುಂತಾದವರು ಪ್ರಮುಖವಾಗಿ ನಿಲ್ಲುತ್ತಾರೆ.
ಆ ಕಾಲದ ಸಾಮಾಜಿಕ ಜೀವನದಲ್ಲಿ ಕಂಡುಬಂದ ಮೂಢನಂಬಿಕೆಗಳನ್ನು ಡಾಂಬಿಕ ಆಚರಣೆಗಳನ್ನು, ಅಜ್ಞಾನವನ್ನು ಪ್ರತಿಭಟಿಸಿ, ಪರಿಶುದ್ಧವಾದ ಜೀವನವನ್ನು ರೂಪಿಸುವುದಕ್ಕೆ ಕಾರಣರಾದರು. ಧರ್ಮ, ಸಮಾಜ, ಸಾಹಿತ್ಯ ಈ ಮೂರು ಅಂಶದಲ್ಲಿ ಏಕಕಾಲಕ್ಕೆ ಕ್ರಾಂತಿಯೆಬ್ಬಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಅದರಲ್ಲಿ ವಿಶೇಷವಾಗಿ ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ ಇಂಥವರು ನಿರ್ದಾಕ್ಷಿಣ್ಯವಾದ ಕಟುವಚನಗಳನ್ನು ರಚಿಸಿದ್ದಾರೆ. ಅಂದಿನ ಹದಗೆಟ್ಟು ಸಾಮಾಜಿಕ ಜಾತಿವ್ಯವಸ್ಥೆ ಭೀಕರವಾದ ರೋಗಕ್ಕೆ ಎಲ್ಲಾ ಕಾಲಮಾನಕ್ಕೆ ಅನ್ವಯವಾಗುವಂತಹ ವಿಚಾರಗಳನ್ನು ಅರುವಿದ್ದಾರೆ.
ಅಂಬಿಗರ ಚೌಡಯ್ಯನ ವಚನಗಳು ಚಾಟಿ ಏಟಿನಂತೆ ಎಲ್ಲರನ್ನು ಗಾಸಿಗೊಳಿಸಿ ಹೊಡೆದೆಬ್ಬಿಸುತ್ತವೆ. ಪ್ರತಿಯೊಬ್ಬರಲ್ಲಿಯ ಕುಂದು ಕೊರತೆಗಳನ್ನು ನಿರ್ಧಾಕ್ಷಿಣ್ಯವಾಗಿ ಎತ್ತಿ ತೋರಿಸುತ್ತವೆ. ಅವನ ವಚನಗಳ ಮೇಲಿಂದ ಚೌಡಯ್ಯನು ಕಟು ಶಿವಭಕ್ತನಾಗಿದ್ದ. ಕೊಂಚವೂ ಅತ್ತಿತ್ತ ಅಲುಗದೆ ನೇರವಾಗಿ ಶಿವಭಕ್ತರತ್ತ ಸಾಗುವಂಥ ಅದ್ವಿತೀಯ ಶರಣನಾಗಿದ್ದನೆಂಬುದು ಆತನ (398) ಮುನ್ನೂರ ತೊಂಭತ್ತೆAಟು ವಚನಗಳು ಸಮಾಜವನ್ನು ವೈಚಾರಿಕವಾಗಿ ಮೆರೆಯುವಂತೆ ಅವರ ವಚನದಲ್ಲಿ ವಿಜೃಂಭಿಸಿದ್ದಾರೆ.
ವರ್ತಮಾನದ ದಿನಮಾನದಲ್ಲಿ ಭೌದ್ಧಿಕವಾಗಿ ಬೆಳೆದ ರಾಜಕಾರಣಿಗಳು, ಮಠಾಧೀಶರು, ಮುಲ್ಲಾಗಳು, ಪಾದ್ರಿಗಳು, ಚಿಂತಕರು ಅವರದೇ ಆದ ಬ್ಯಾರಿಕೇಡ್ ಹಾಕಿಕೊಂಡು ವ್ಯವಸ್ಥೆಯನ್ನು ಅನುಸಂಧಾನ ಮೂಲಕ ಬೆಸೆಯುವ ಪ್ರಯತ್ನದ ವಿರುದ್ಧ ಕಂಕಣ ಕಟ್ಟಿದ್ದಾರೆ. ನಾನು ಆರಂಭಿಕವಾಗಿ ಕಕೇಶಿಯನ್, ಮಂಗೋಲಿಯನ್, ದ್ರಾವಿಡ ಮೂಲ ಜನಾಂಗವನ್ನು ಗುರುತಿಸುವುದು ಇದೇ ಕಾರಣಕ್ಕೆ. ಆದರೆ ಇಂದು ಜಾತಿ ಮತ್ತು ಧರ್ಮಭೇದದ ವಿಷಬೀಜಕ್ಕೆ, ವಿಷ ಗೊಬ್ಬರ, ವಿಷದ ಔಷಧಿ ಮತ್ತು ಮಲಿನಗೊಂಡ ನೀರು ಎರೆದು ಮತಾಂಧತೆಯ ದೆವ್ವ ಗುಣಿತವನ್ನು ಕಾಣುವ ದುರದೃಷ್ಟ ಸಂಗತಿ ಒದಗಿಬಂದಿದೆ.
ನಮ್ಮ ಸಂಸ್ಕೃತಿ ಪರಾಕಾಷ್ಠೆಯ ಮುಗಿಲು ಮುಟ್ಟಿದರೂ ಜಾತಿಯೆಂಬ ಅರ್ಬುದ ರೋಗಕ್ಕೆ ಸಿಲುಕಿ ನರಳುತ್ತಿದೆ. ಪ್ರಜಾಪ್ರಭುತ್ವದ ಆಶಯ ಎಲ್ಲಾ ಕಾಲದಲ್ಲಿ ನೆಲೆಸಿರುತ್ತದೆ. ಸಾಮಾಜಿಕ ಅಸಮಾನತೆಯು ಶತ-ಶತಮಾನಗಳ ಯಾನ ಮುಂದುರೆದೆಯಿದೆ? ಅದರಲ್ಲೂ ಸಮಗ್ರಭಾಗವಾದ ತಳ ಸಮುದಾಯಗಳ ಅಲಕ್ಷಿತ ಜಾತಿಯ ಅನುಭಾವದ ವಚನಕಾರರು ಸಮಾಜವಿಜ್ಞಾನಿಗಳ ನಡೆಯಂತೆ ಮುಂದಾಗಿದ್ದಾರೆ.
ಅವರ ನಡೆ-ನುಡಿಯಲ್ಲಿ ಯಾವ ವ್ಯತ್ಯಾಸವಿಲ್ಲದ ಬದುಕಿನ, ಕ್ಲೇಶಭಾವ ತೋರದ ಅನುಭಾವಿ ವಚನಕಾರ ದಂಡು-ಹಿಂಡಾಗಿರುವುದನ್ನು ಅನುಭವ ಮಂಟಪದಲ್ಲಿ ವಿಜೃಂಭಿಸಿರುವುದು ಅವರವರ ಜಾತಿಯ ಮೂಲಕ ಪ್ರವೇಶ ಹೊಂದಿದ್ದಾರೆ. ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಸರ್ವಸಮಾನತೆಯ ಚಳುವಳಿಯಿಂದ ಪ್ರೇರಿತರಾಗಿ ಬಸವನೆಂಬ ಮಹಾವೃಕ್ಷದ ನೆರಳಲ್ಲಿ ಆಶ್ರಯ ಪಡೆದು ಸೇರಿದವರಲ್ಲಿ “ಘನವಂತ ಅಂಬಿಗರ ಚೌಡಯ್ಯ” ಆದ್ಯ ವಚನಕಾರರಾಗಿದ್ದರು. ಎಲ್ಲಾ ಕಾಲಗಳಲ್ಲಿ ಕೂಡಾ ಹೀನ ಜನಾಂಗದವರು ಇದ್ದರು, ಆದರೆ ಅವರಾರು ಮಾನಸಿಕವಾಗಿ ಹೀನರಾಗಿದ್ದಿರಲಿಲ್ಲಾ. ಅಂಥವರನ್ನು ಅವರಿಗೆ ಮಾನವ ಲಿಂಗದೀಕ್ಷೆಯನ್ನು ಬಸವಣ್ಣ ದಯಪಾಲಿಸಿದ್ದರು.
ಅರಮನೆ-ಗುರುಮನೆ-ದೇವಸ್ಥಾನಗಳಿಂದ ದೂರವೇ ಉಳಿದಿದ್ದರು. ಅವರೆಲ್ಲಾ ಜಾತ್ಯಾತೀತ ನೆಲೆಯಲ್ಲಿ ಸಮಾಜ ನಿರ್ಮಾಣಕ್ಕಾಗಿ ಮೇಲು-ಕೀಳನ್ನದೇ, ಸರ್ವರಿಗೂ ಒಳ್ಳೆಯದು ಮಾಡುವ ಮೂಲಕ – “ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ನಮ್ಮ ಕೂಡಲ ಸಂಗನ ಶರಣರೆ, ಕುಲಜನರು ಎಂದು ಸಾರಿದರು” ಅಂದು ದಲಿತ ಕುಲದವರೆಲ್ಲರೂ ಬಸವನ ತತ್ವಕ್ಕೆ ಆಕರ್ಷಿತರಾದರೆಂದರೆ ಅದೇನು ಯಾವ ಅತಿಶಯೋಕ್ತಿ ಎನಿಸುವುದಿಲ್ಲ. ಬಸವಣ್ಣನವರಂತೆ ಬ್ರಾಹ್ಮಣ ಕುಲದಲ್ಲಿ ಜನಿಸಿದವರೂ ಬಸವತತ್ವವನ್ನು ತಪ್ಪದೆ ಒಪ್ಪಿ ಪರಿಪಾಲಿಸಿ ಆತನ ವಿಚಾರಪಥವನ್ನು ಅರಿತ ಅನೇಕ ಘನವಂತ ಅನುಬಾವಿ ಶರಣ-ಶರಣೆಯರಿದ್ದರು.
ಶರಣ ಸಾಹಿತ್ಯದಲ್ಲಿ ಸರ್ವಜ್ಞವಾಣಿಯಿಂದ ಮೆರೆದ ವ್ಯಕ್ತಿ ಅಂಬಿಗರ ಚೌಡಯ್ಯ ಆ ಕಾಲಘಟ್ಟದ ವೈಚಾರಿಕ ಪ್ರಭೆಯಾಗಿದ್ದರು. ಅವರ ಚಿಂತನೆಯನ್ನು ಮಾಡಿದ ಬಂಡಾಯದ ಬಾವುಟ ಹಿಡಿದವರು. ಬದುಕೇ ಸ್ವರ್ಗ, ಆದರೆ ನಡೆಯುವ ಮಾರ್ಗ ನರಕವಾಗಬಾರದು. ಅದು ಮೂಢನಂಬಿಕೆ, ಅಜ್ಞಾನ, ಕಂದಾಚಾರ ದೇವರು, ಅಂಧಶ್ರದ್ಧೆ ಎಲ್ಲವನ್ನೂ ತಿರಸ್ಕರಿಸಿದ ಅಪರೂಪದ ಮೇರು ವ್ಯಕ್ತಿತ್ವದ ಪ್ರತಿಭೆ. “ಭೂತಕಾಲದ ಚರಿತ್ರೆಯನ್ನು ವರ್ತಮಾನ ಕಾಲದಲ್ಲಿ ಅವಲೋಕಿಸುವುದು ಬಹುಮುಖ್ಯ”.
ಈ ಹೊತ್ತಿನ ಅಂಬೇಡ್ಕರ್ ಮಾರ್ಗವು ಕೂಡ ಬಸವನ ವಿಚಾರಗಳನ್ನು ಅನುಸಂಧಾನದ ರೂಪದಲ್ಲಿ ಮುಂದುವರೆದಿದೆ.
ಆದ್ದರಿಂದ ಅಂಬೇಡ್ಕರ್ ಮಾತಿನಲ್ಲಿ “ಇತಿಹಾಸ ಅರಿಯದವ ಇತಿಹಾಸ ಸೃಷ್ಟಿಸಲಾರ, ಅಂದರೆ ಗತಕಾಲದ ಘಟನೆಯು ಇತಿಹಾಸವನ್ನು ವರ್ತಮಾನದ ಕನ್ನಡಿ ಸಹಾಯದಿಂದ ನೋಡಬೇಕಾಗುತ್ತದೆ” ಆದಕಾರಣ ಅಂಬಿಗರ ಚೌಡಯ್ಯ ಅವರ ಚಿಂತನ-ಮಂಥನ, ಅಗ್ನಿ-ನೀರಿನಂತೆ ನೋಡಿದಾಗ ಜಗತ್ತಿನ ದೇಶಗಳು ನಾಗರೀಕರಣದ ಕಾರಣದಿಂದ ಸಮೀಪವಾಗುತ್ತದೆ. ನಾಗರೀಕ ಸಾಧನವಿಲ್ಲದಲ್ಲಿ ದೇಶದ ಮೂಲೆ-ಮೂಲೆಗಳಿಂದ ಬಂದ ಶರಣರ ದಂಡು-ಹಿAಡಾಗಿ ಒಂದು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದು ಬಹುದೊಡ್ಡ ಸಾಮಾಜಿಕ ಚರಿತ್ರೆಯನ್ನು ಕನ್ನಡ ನಾಡಿನಲ್ಲಿ ಬರೆದಿದ್ದು ಅದ್ಭುತವಾದ ಶಕ್ತಿಯೆಂದು ಪರಿಗ್ರಹಿಸಬಹುದು!
ಹೀಗೆ ಶರಣ-ಶರಣೆಯರು ಮಾಡಿದ ಸೇವೆ ಅನಂತವಾದುದು. ಅವರು ಚಿಂತಿಸಿದ ವಿಚಾರಪಥ ಜನಮಾನಸದಲ್ಲಿ ಬೆರೆತು ಪರಿವರ್ತನಾಶೀಲರಾಗಿದ್ದು, ಜಾತಿಯ ಮೋಹಕ್ಕೆ ಹಿಂಬು ನೀಡಿದವರಲ್ಲ, ಆದರೆ ಇಂದು ಅದು ಬೇರೆಯೇ ಆಗಿದೆ. ಆದಕಾರಣ ಈಗಾಗಲೇ ದಮನಿತ ಸಮುದಾಯಗಳಲ್ಲಿ ಜನಿಸಿದ ಬುದ್ಧಪ್ರಜ್ಞೆಯ ಅನುಭಾವಿಗಳನ್ನು ಕುರಿತು ಚರ್ಚಿಸಿದ್ದೇನೆ.
ವಚನಗಳ ಆಶಯವೇ ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗಿರುವಂತವು, ಜೊತೆಗೆ ಅವರು ಜನಸಾಮಾನ್ಯರಾಗಿದ್ದವರು. ಚಳುವಳಿಯ ನಾಯಕ ಬಸವಣ್ಣ ಆಗಿದ್ದರು, ಅವರು ಎಂದು ನಾಯಕರಾಗಿರಲಿಲ್ಲ. ಅವರದು ಒಂದು ರೀತಿಯ ಕಿಂಗ್ ಮೇಕರ್‌ರಾಗಿದ್ದವರು. ಅವರುಗಳಲ್ಲಿ ಅಲ್ಲಮ, ಸಿದ್ಧರಾಮ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ, ಮಾಚಯ್ಯ, ಚನ್ನಯ್ಯ, ಧೂಳಯ್ಯ, ಹರಳಯ್ಯ ಮತ್ತು ಚನ್ನಬಸವನಂತಹ ಅನುಭಾವಿ ವಚನಕಾರರು ಚಳುವಳಿಯ ಪ್ರಮುಖ ನಾಯಕರಾಗಿದ್ದವರು ಎಂಬ ಸಂಗತಿಯನ್ನು ಬಸವಣ್ಣ ತನ್ನ ವಚನದಲ್ಲಿ ವಿಶ್ಲೇಷಿಸಿದ್ದಾರೆ.
ಬಸವಣ್ಣನವರ ಬದುಕು ಪಾರದರ್ಶಕವಾಗಿತ್ತು. ಅವರು ಬದುಕಿದ್ದನ್ನೇ ಬರೆದರು. ಬರೆದದ್ದನ್ನೇ ಉಪದೇಶಿಸಿದರು. ಅವರ ಬದುಕೇ ಒಂದು ಉಪದೇಶವಾಗಿತ್ತು. ಆದರೆ ಇಂದು ಉಪದೇಶವೇ ಬದುಕಿನ ಬಂಡವಾಳವಾಗುತ್ತದೆ. ನಮ್ಮ ಕೆಲವು ಧರ್ಮಾಧಿಕಾರಿಗಳ, ಮಠಾಧೀಶರ ನಿತ್ಯ ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ. ಈ ಮಾತು ಉತ್ಪೆçÃಕ್ಷೆ ಎನಿಸುವುದಿಲ್ಲ. ಜನರಲ್ಲಿ ನೈತಿಕಪ್ರಜ್ಞೆ ಬೆಳಸಿ, ಸಮಾಜ ಸಂಘಟನೆ ಮಾಡಬೇಕಾಗಿದ್ದ ಈ ಗುರು ವರ್ಗದವರೇ ವಾಮಮಾರ್ಗಿಗಳಾಗಿ ಅಧಿಕಾರಕ್ಕಾಗಿ ಕಿತ್ತಾಡುವವರನ್ನು ನೋಡುತ್ತೇವೆ. ಜೊತೆಗೆ ಅನುಭಾವ ಪರಂಪರೆಗೆ ಮೋಸವೆಸಗುತ್ತಿದ್ದಾರೆ. ಬಡವರ ತೆರಿಗೆಯ ಅನ್ನವನ್ನು ಕೈಚಾಚಿ ಬೇಡುತ್ತಾರೆ. ಇದು ರೀತಿಯಲ್ಲಿ ಸಾಮಾಜಿಕ ದ್ರೋಹ ಹಾಗೂ ಕಲ್ಯಾಣದ ಚಿಂತನೆಗೆ ಎಳ್ಳು-ನೀರನ್ನು ಇವರೇ ಬಿಡಲು ಮುಂದಾಗಿದ್ದಾರೆ.
ಬದುಕಿನ ಬೆಳಕಾದ, ಮಹಾಬೆಳಕಾದ ಬುದ್ಧ, ಮಹಾವೀರ ಮತ್ತು ಬಸವನ ತತ್ವಗಳನ್ನು ಇವತ್ತಿನ ಸಮಾಜ ಸರಿಯಾಗಿ ಅರ್ಥಮಾಡಿಕೊಂಡರೆ ಯುದ್ಧ ಭೀತಿಯೂ ಬರದು. ಬುದ್ಧನು ಚಿಂತನೆಯಂತೆ ಮನುಕುಲದ ಮುಂದೆ ಎರಡು ಪ್ರಶ್ನೆಗಳೂ “ಯುದ್ಧ ಮತ್ತು ಬುದ್ಧ” ನಾವು ಬುದ್ಧನನ್ನು ಆಯ್ಕೆ ಮಾಡಿಕೊಂಡರೆ ನೆಮ್ಮದಿಯ ಬದುಕು ಕಾಣಲು ಸಾಧ್ಯವಾಗುತ್ತದೆ. ಅಂತಹ ಸುಂದರ ಕನಸಿನ ಬುದ್ಧನೊಂದಿಗೆ ಸಂವಾದಕ್ಕೆ ಇಳಿದರೆ, ಅದರ ಪಾತಳಿಯ ಅಂಶಗಳು ತ್ವೊರೆಯಂತೆ ಚಿಮ್ಮಿ ಹರಿಯುತ್ತದೆ!
ಬುದ್ಧ ಚಿಂತಿಸಿದ ಅತ್ಯಂತ ಸರಳವಾದ ವಿಚಾರಗಳು ಎಲ್ಲಾ ಕಾಲದಲ್ಲಿ ಅಳವಡಿಸಿಕೊಳ್ಳಲು ಯಾವ ಆತಂಕವಿಲ್ಲಾ. ಬುದ್ಧನ ಜೀವ ಪರ, ಮಾನವ ಪರ, ಕಲ್ಯಾಣ ಪರವಾದ ಚಿಂತನೆಗಳಾದ ಶೀಲ, ಸಮಾಧಿ ಮತ್ತು ಪ್ರಜ್ಞೆ ಈ ಮೂರು ಬುದ್ಧನ ಶ್ರೇಷ್ಠಮಟ್ಟದ ಚಿಂತನೆಗಳು. ಇವುಗಳಲ್ಲಿ ಒಂದನ್ನು ಬಿಟ್ಟು ಇನ್ನೊಂದನ್ನು ಸ್ವತಂತ್ರವಾಗಿ ಸಾಧಿಸಲು ಹೊರಟರೆ ಗುರಿಮುಟ್ಟಲು ಸಾಧ್ಯವಾಗುವುದಿಲ್ಲ. ಪೂರ್ಣಮಟ್ಟದ ಶೀಲವನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಧಿ ತಲುಪಲು ಸಾಧ್ಯ. ಸಮಾಧಿ ಸಿದ್ಧಿಸದೆ ಪ್ರಜ್ಞೆ ಮೂಡುವುದಿಲ್ಲ.
ಪ್ರಜ್ಞೆ ಇಲ್ಲದೆ ನಿರ್ವಾಣದ ಪರಮ ಶಾಂತಿ ದೊರೆಯುದಿಲ್ಲ. ಶೀಲವೆಂದರೆ ಒಳ್ಳೆಯ ನಡೆತೆ, ಒಳ್ಳೆಯ ಚಾರಿತ್ರ್ಯ , ಸಮಸ್ತ ಜೀವ ಸಂಕುಲದ ಒಳಿತಿಗಾಗಿ ಚಿಂತನೆ ಮತ್ತು ಪ್ರಯತ್ನ ಎಂದು ಅರ್ಥ. ಸಮಾಧಿ ಎಂದರೆ ಧ್ಯಾನಭ್ಯಾಸದಲ್ಲಿ ಸಾಧಿಸುವ ಸ್ಥಿರ ಚಿತ್ತದ ಏಕಾಗ್ರತೆ. ಪ್ರಜ್ಞೆ ಎಂದರೆ ಸಮಾಧಿ ಸ್ಥಿತಿಯಲ್ಲಿ ದೊರೆಯುವ ಇಂದ್ರಿಯಾತೀತವಾದ ಜ್ಞಾನವೆಂದು ಅರ್ಥ.
ಇವು ಸಕಲ ಜೀವ ಸಂಕಲ್ಪಕ್ಕೂ ಅನ್ವಯವಾಗುತ್ತದೆ. ಹಾಗಾಗಿ ಬೌದ್ಧ ಧರ್ಮ ಪ್ರತಿಯೊಬ್ಬ ಕೂಡ ಪಂಚಶೀಲಗಳನ್ನು ತಪ್ಪದೆ ಪಾಲಿಸಬೇಕೆಂದು ಉಪದೇಶಿಸುತ್ತದೆ. ಕೊಲೆ, ಕಳ್ಳತನ, ಸುಳ್ಳು, ವ್ಯಭಿಚಾರ ಮತ್ತು ಮಧ್ಯಪಾನ ಇವುಗಳನ್ನು ಸಂಪೂರ್ಣವಾಗಿ ತ್ಯಜಿಸುವುದು. ಹೀಗೆ ಸಮಾಜದ ಮೂಲ ಘಟಕವಾದ ವ್ಯಕ್ತಿಶೀಲವಂತನಾದರೆ ಸಮಾಜವು ಶಾಂತಿಯಿಂದ, ನೆಮ್ಮದಿಯಿಂದ ಜೀವಿಸುತ್ತದೆ. ಸಮಾಜವು ಉತ್ತಮವಾದರೆ ರಾಷ್ಟç ಮತ್ತು ಜಗತ್ತು ಹಿಂಸೆ, ಶೋಷಣೆ ಇಲ್ಲದೆ ಶಾಂತಿ ನೆಮ್ಮದಿಯಿಂದಿರುತ್ತದೆ.
ಧ್ಯಾನಮಾರ್ಗದಿಂದ ಸಮಾಧಿ ಸ್ಥಿತಿಯನ್ನು ಹೊಂದುವುದರಿAದ ಮನಸ್ಸು ಪರಿಶುದ್ಧವಾಗುತ್ತದೆ. ಲೋಭ, ಮೋಹ, ದ್ವೇಷ, ಅಸೂಯೆ, ಅಹಂಕಾರ, ಕ್ರೌರ್ಯ ಮುಂತಾದ ದುರ್ಗಣಗಳನ್ನು ಧ್ಯಾನದ ಮೂಲಕ ನಾಶಮಾಡಿ ಸಮಚಿತ್ತವನ್ನು ಹೊಂದುವುದು. ತಮ್ಮ ಸಾಕ್ಷಾತ್ಕಾರಕ್ಕೆ ಅತ್ಯಂತ ಮುಖ್ಯವಾಗುವುದು. ಈ ರೀತಿಯಾಗಿ ಬುದ್ಧನು ತಾನು ಕಂಡುಹಿಡಿದ ಅನುಸರಿಸಿದ ಅಷ್ಟಾಂಗ ಮಾರ್ಗವನ್ನು ಅಭ್ಯಾಸ ಮಾಡಿದರೆ ಸಕಲ ದುಃಖಗಳಿಂದ ಮುಕ್ತಿ ಹೊಂದಿ ಬುದ್ಧನು ಅನುಭವಿಸಿದ ಪರಿಮಶಾಂತಿಯ ನಿರ್ವಾಣ ಸುಖವನ್ನು ಅನುಭವಿಸಿ ಹರಹಂತ ಸ್ಥಿತಿಯನ್ನು ತಲುಪಬಹುದೆಂದು ತಿಳಿಸಿದರು.
ವಚನ ಸಾಹಿತ್ಯ ಸುಲಭ, ಸರಳ, ಸುಸ್ಪಷ್ಟ ಎಂಬ ಸಂಗತಿಗಳಿಂದ ಕೂಡಿದೆ. ಇವು ವೈವಿಧ್ಯ ಮತ್ತು ವೈರುಧ್ಯಗಳ, ಲೋಕದೃಷ್ಟಿ, ಲೋಕಾನುಭಾವದ ಪರಿಣಾಮವಾಗಿ ಕಸುಬುದಾರರಿಗೆ ಹಾಗೂ ಮಹಿಳೆಯರು ಸೇರಿದಂತೆ ವಿವಿಧ ಕುಲ ಕಸುಬಗಳ ಜನರ, ಅವರ-ಅವರ ನಡುವೆಯೇ ಎತ್ತರದ ವಿಚಾರ ಪಥವನ್ನು ಮುಕ್ತವಾಗಿ ಸಾಮಾಜಿಕ ನೆಲೆಯಲ್ಲಿ ಮಂಡಿಸುತ್ತಿದ್ದರು.
ಅವರುಗಳಲ್ಲಿ ಪ್ರಮುಖವಾಗಿ ಅಧ್ಯಾತ್ಮಿಕ ಸಮಾನತೆಯ ಆದರ್ಶದ ನೆಲೆಯಲ್ಲಿ ಅಕ್ಕಿ ಆರಿಸುವರು, ಕಸಗುಡಿಸುವರು, ಕಟ್ಟಿಗೆ ಮಾರುವರು, ಜೋಡು ತಯಾರಿಸುವರು, ಬಟ್ಟೆ ತೊಳೆಯುವರು, ಹಡಪದ ಕೆಲಸ ಮಾಡುವವರು, ಅಗ್ಗ-ಕಣ್ಣಿ ಮತ್ತು ಕೃಷಿಯ ಪರಿಕರಗಳನ್ನು ರಾಟೆಯ ಕೆಲಸ, ಬಡಿಗೆ ಜಾತಿಯ, ಶುದ್ಧ-ಸಿದ್ಧ ಪ್ರಸಾದ ತಯಾರಿಸುವ, ಹೆಂಡದ ಮತ್ತನ್ನು ಬಿಡಿಸಿ, ಜ್ಞಾನದ ಮತ್ತನ್ನು ಕುಡಿಸಿ ಪಂಚಶೀಲವನ್ನು ನೆನಪಿಸುವ, ಧೂಪದ ಕಾಯಕ, ಸುಖ ಬೋಗವನ್ನು ತೊರೆದ ಬೊಂತಾದೇವಿ ಕಾಶ್ಮೀರದ ರಾಜನ ಮಗಳು, ಬುದ್ಧನ ಅರಮನೆ ತೊರೆದಂತೆ ಕಟ್ಟಿಗೆ ಮಾರುವ ಮಹಾದೇವಿ ರಾಯಮ್ಮ ನೆಯ್ಗೆಯ ಕಾಯಕ. ಕಾಯಕದ ಹಿಂಡು-ದಂಡಾಗಿರುವುದನ್ನು ಜಾತಿ ಮೂಲದ ವಚನಕಾರ ಮೂಲಕ ಸಾಮಾಜಿಕ ಅಸಮಾನತೆ ಮತ್ತು ಜಾತಿವಿನಾಶದ ಹೋರಾಟಗಳಿಗೆ ಸ್ಫೂರ್ತಿ ತುಂಬುವ ಪ್ರಾಚೀನ ವಿಚಾರಧಾರೆಗಳೆಂದು ನೆನೆಯಬೇಕು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಆತ್ಮಕತೆ | ಕೃಷ್ಣಪ್ಪನವರ ನಿಧನ : (09.06.1938 – 30.04.1997)

~ ರುದ್ರಪ್ಪ ಹನಗವಾಡಿ
ಭದ್ರಾವತಿಯಿಂದ ಬೆಂಗಳೂರಿಗೆ ಬಂದ ಕೃಷ್ಣಪ್ಪನವರು ಬಹುಜನ ಸಮಾಜ ಪಕ್ಷದ ಕೆಲಸ ನಿರ್ವಹಿಸುತ್ತಿದ್ದರೂ ಅವರ ರಕ್ತಮಾಂಸ ಬಸಿದು ಕಟ್ಟಿದ ಮೂಲಸಂಘಟನೆ ಡಿಎಸ್‌ಎಸ್ ಹಲವು ಗುಂಪುಗಳಾಗಿ ಒಬ್ಬರಿಗೊಬ್ಬರು ಅನುಮಾನಗಳಿಂದ ದೂರದೂರವಾಗಿದ್ದರು. ಇವರ ಜೊತೆ ಆತ್ಮೀಯ ಹೋರಾಟಗಾರರಾಗಿದ್ದ ಅನೇಕರು ಮಾತಿಲ್ಲದೆ ಅವರವರೇ ಕೊರಗುತ್ತಿದ್ದರು.
ಶಿವಮೊಗ್ಗ ಭದ್ರಾವತಿಯಲ್ಲಿ ಕೃಷ್ಣಪ್ಪನವರಿಗೆ ಎಲ್ಲಾ ಜಾತಿಯ, ಸಾಹಿತ್ಯ ಮತ್ತು ಸಾಂಸ್ಕೃತಿಕ ನಾಯಕರ ಬೆಂಬಲ, ಡಿಎಸ್‌ಎಸ್ ನ ಎಲ್ಲ ಹೋರಾಟಗಾರರಿಗೂ ಸಿಗುತ್ತಿತ್ತು. ಬೆಂಗಳೂರಿಗೆ ಬಂದ ನಂತರ ಆದ ಬೆಳವಣಿಗೆಗಳ ಬಗ್ಗೆ ಒಂದು ರೀತಿಯ ವಿಷಾದ ತುಂಬಿದ ಭಾವ ಕೃಷ್ಣಪ್ಪನವರಲ್ಲಿ ತುಂಬಿತ್ತು. ಆದರೂ ಅವರು ಮತ್ತೆ ಇದನ್ನು ಪುನಶ್ಚೇತನಗೊಳಿಸುವ ಕರ‍್ಯದಲ್ಲಿ ಹಗಲು ರಾತ್ರಿ ರಾಜ್ಯದ ವಿವಿಧೆಡೆಗೆ ಪ್ರಯಾಣ ಮಾಡುತ್ತ ವಿವಿಧ ಜಿಲ್ಲೆಗಳಿಗೆ ಹೋಗಿ ಡಿಎಸ್ ಎಸ್ ಸಂಘಟನೆಯ ಕರ‍್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಅವರು ಡಿಎಸ್‌ಎಸ್ ಸಂಘಟನೆಯಲ್ಲಿನ ಬೆಳವಣಿಗೆಗಳ ಬಗ್ಗೆ ಮಾಡಿದ ನಿರಾಶಾ ಕಾಲದಲ್ಲಿಯೇ ಛಲಬಿಡದ ವಿಕ್ರಮನಂತೆ ದಲಿತರನ್ನೆಲ್ಲ ಪುನಃ ಸಂಘಟಿಸಿ ಪುನಶ್ಚೇತನ ಗೊಳಿಸುವ ಬಗ್ಗೆ ಅವರ ಸಹಪಾಠಿ ಆರ್. ನಾಗರಾಜ್, ಅರ್ಕೇಶ್ ಮತ್ತು ನಾನು ಅವರ ಮನೆಯಲ್ಲಿ ಸೇರಿದಾಗ ಚರ್ಚಿಸುತ್ತಿದ್ದರು. ಮೈಸೂರಿನ ಮಹಾದೇವ ಬೆಂಗಳೂರಿನ ಸಿದ್ಧಲಿಂಗಯ್ಯ ಇವರುಗಳ ಸಂಬಂಧ ಬಹಳ ದೂರ ಸರಿದಿತ್ತು. ಅದನ್ನು ಪುನಃ ಪುನಶ್ಚೇತನಗೊಳಿಸುವುದಕ್ಕೆ ಬೇಕಾದ ಶ್ರಮ ಹಾಕಲು ಮಹಾದೇವನಿಗಾಗಲೀ, ಸಿದ್ಧಲಿಂಗಯ್ಯನಿಗಾಗಲೀ ಇರಲಿಲ್ಲ. ಹಾಗಾಗಿ ಮತ್ತೆ ಏಕಾಂಗಿಯಾಗಿಯೇ ಎಲ್ಲಾಕಡೆ ಇವರೊಬ್ಬರೇ ತಿರುಗಾಡಿ ಸಂಘಟಿಸಲು ಶ್ರಮಿಸುತ್ತಿದ್ದರು.
ಈ ಯೋಜನೆಯ ಭಾಗವಾಗಿ ಆಯೋಜಿಸಿದ್ದ ಅಂಬೇಡ್ಕರ್ ರ‍್ಯಾಲಿಯಲ್ಲಿ ಭಾಗವಹಿಸಲು, ಗದಗ ಜಿಲ್ಲಾ ಕೇಂದ್ರದಲ್ಲಿ ವ್ಯವಸ್ಥೆಗೊಳಿಸಿದ ಸಭೆಗೆ ಹೋಗಿದ್ದರು. ನಾನು ಯಲಹಂಕ ಆಫೀಸಿನ ಕೆಲಸ ಮುಗಿಸಿ ಮಧ್ಯಾಹ್ನ ಊಟಕ್ಕೆ ಅವರ ಮನೆಗೆ ಹೋದಾಗ ಮೇಷ್ಟರು ಗದಗ್‌ಗೆ ಹೋದ ಸುದ್ದಿ ತಿಳಿದಿತ್ತು. ಗದಗ್‌ನಲ್ಲಿ ಕೃಷ್ಣಪ್ಪನವರ ತಂಗಿಯ ಮಗಳು ಮೈತ್ರ‍್ರಾ ಕೂಡಾ ಇದ್ದುದು, ಮೈತ್ರಾಳ ಗಂಡ ಬ್ಯಾಂಕ್‌ವೊಂದರಲ್ಲಿ ಉದ್ಯೋಗಿಯಾಗಿದ್ದು, ಸಂಘಟನೆಯ ಜೊತೆ ಅವರನ್ನೆಲ್ಲಾ ನೋಡಿಕೊಂಡು ಬರುವರೆಂದು ಮಾತಾಡಿಕೊಂಡು ನಾನು ಮಧ್ಯಾಹ್ನ ಊಟ ಮುಗಿಸಿಕೊಂಡು ಮತ್ತೆ ಆಫೀಸಿಗೆ ಹೋಗಿದ್ದೆ. ಆದರೆ ಸಂಜೆ 5ರ ವೇಳೆಗೆ ಕೃಷ್ಣಪ್ಪನವರು ಗದಗ್‌ನಲ್ಲಿ ಹುಷಾರಿಲ್ಲದೆ ಆಸ್ಪತ್ರೆಯಲ್ಲಿರುವುದಾಗಿಯೂ ಗದಗ್‌ನಿಂದ ಫೋನ್ ಬಂದಿರುವುದಾಗಿಯೂ ನನ್ನ ಆಫೀಸಿಗೆ ಮಗಳು ಶಾಲಿನಿ ಫೋನ್ ಮಾಡಿದ್ದಳು. ಇಂದಿರಾ ಆಫೀಸ್ ಮುಗಿಸಿ ಮನೆಗೆ ಬರುವ ವೇಳೆಗೆ ನನ್ನ ಹೆಂಡತಿ ಗಾಯತ್ರಿಗೂ ಫೋನ್ ಮಾಡಿ ತಿಳಿಸಿದೆ. ಅರ್ಜೆಂಟಾಗಿ ನಾವು ಎಲ್ಲರೂ ಗದಗ್‌ಗೆ ಹೋಗಿ ಮೇಷ್ಟçರನ್ನ ಕರೆದುಕೊಂಡು ಬಂದು ಇಲ್ಲಿಯೇ ಶುಶ್ರೂಷೆ ಕೊಡಿಸುವ ಎಂದು ಮಾತಾಡಿಕೊಂಡು ರಾತ್ರಿಯೇ ಬೆಂಗಳೂರಿನಿಂದ ಹೊರಟು ಮಧ್ಯೆ ರಾತ್ರಿ ನಮ್ಮೂರ ಬಳಿ ನಿಂತು ನಮ್ಮ ಊರಿನವರಿಗೂ ವಿಷಯ ತಿಳಿಸಿ ಬೆಳಿಗ್ಗೆ 7 ಘಂಟೆಗೆ ಗದಗ ತಲುಪಿದೆವು.
ಬೆಂಗಳೂರು ಬಿಟ್ಟು ಹೊರಟಾಗ ಅವರ ಆರೋಗ್ಯದಲ್ಲಿನ ಸಮಸ್ಯೆ ಸ್ಪಷ್ಟವಾಗಿ ಏನೆಂದು ತಿಳಿಯದಿದ್ದರೂ-ಅವರ ಬಿಡುವಿಲ್ಲದ ತಿರುಗಾಟಕ್ಕೆ ತಡೆಹಾಕಿ ಆರೋಗ್ಯದ ಕಡೆ ಗಮನ ನೀಡಲು ಏನೆಲ್ಲ ಕ್ರಮ ಜರುಗಿಸಬೇಕೆಂದು ನನ್ನ ಹೆಂಡತಿ ಗಾಯತ್ರಿ ಇಂದಿರಾಗೆ ಸಲಹೆ ನೀಡುತ್ತಿದ್ದಳು. ಕೃಷ್ಣಪ್ಪನವರ ಆರೋಗ್ಯ ಕೆಡಿಸುವಂತಹ ಅಭ್ಯಾಸಗಳು ಅವರಿಗೆ ಮೊದಲಿನಿಂದಲೂ ಇರಲಿಲ್ಲ. ಡಿಎಸ್‌ಎಸ್‌ನ ಸಮಾವೇಶಗಳಲ್ಲೂ ಕೂಡ ಎಲ್ಲರಿಗೂ ಸ್ವಚ್ಛತೆ, ವ್ಯಾಯಾಮ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರಭಾವಿಸುತ್ತಿದ್ದರು. ಕೊಳಕುತನ, ಸೋಮಾರಿತನ ಬಾಲ್ಯದಿಂದಲೂ ಕೃಷ್ಣಪ್ಪನವರ ಬಳಿ ಸುಳಿದಿರಲಿಲ್ಲ. ಊಟ ಉಪಚಾರಗಳಲ್ಲೂ ಶಿಸ್ತುಬದ್ದರಾಗಿದ್ದು ಅವರಿಗೆ ಅನಾರೋಗ್ಯ ಎಂಬ ಮಾತು ಕೇಳಿರಲಿಲ್ಲ. ಈ ಕಾರಣದಿಂದ ಏನಾದರೂ ಆಗಿರಲಿ ಬಂದ ನಂತರ ಅವರನ್ನು ಹೆಚ್ಚು ತಿರುಗಾಡಲು ಬಿಡಬಾರದೆಂಬ ತೀರ್ಮಾನ ಮಾಡಿಕೊಂಡು ನಾವೆಲ್ಲ ಗದಗ್ ಕಡೆ ಹೊರಟಿದ್ದೆವು.
ಹೋದಾಕ್ಷಣ ಅವರನ್ನು ಐಸಿಯುನಲ್ಲಿ ನಾವು ಮೂವರೂ ಹೋಗಿ ನೋಡಿದೆವು. ಕಣ್ಣು ಬಿಟ್ಟು ನೋಡಿದ್ದನ್ನು ಬಿಟ್ಟರೆ ಬೇರೇನೂ ಮಾತಾಡಲಿಲ್ಲ. ಇಂತಹ ಪರಿಸ್ಥಿತಿಯನ್ನು ನಾವ್ಯಾರು ನಿರೀಕ್ಷಿಸಿರಲಿಲ್ಲ. ದಾರಿಯುದ್ದಕ್ಕೂ ಯೋಚಿಸಿಕೊಂಡು ಬಂದದ್ದಕ್ಕೂ ಇಲ್ಲಿನ ಪರಿಸ್ಥಿತಿ ನೋಡಿ ನಾವೆಲ್ಲಾ ಗರಬಡಿದಂತಾಗಿ ಕೂತಿದ್ದೆವು. ಗಾಯತ್ರಿ, ಇಂದಿರಾ ಮಾತಾಡದೆ ಉಸಿರಾಡುತ್ತಿದ್ದರು. ಮತ್ತೆ 10-15 ನಿಮಿಷಗಳಲ್ಲಿ ಪರಿಸ್ಥಿತಿ ಹದಗೆಡುತ್ತಿದೆ ಎಂದು ವಾರ್ಡ್ ಬಾಯ್ ಹೇಳಿದಾಗ ನಾವೆಲ್ಲ ಒಳಗೆ ಹೋದೆವು. ಬಂದ ಡಾಕ್ಟರ್ ನಮ್ಮನ್ನೆಲ್ಲ ಮತ್ತೆ ಹೊರಹೋಗಲು ಹೇಳಿ ಶುಶ್ರೂಷೆ ಮಾಡುತ್ತಿದ್ದರು. ಏನಾಯಿತು, ಹೇಗಾಯಿತು ಎಂದು ನಾವುಗಳೆಲ್ಲ ಸಾವರಿಸಿಕೊಳ್ಳುತ್ತಿರುವಾಗಲೇ ಮೇಷ್ಟರು ಕೊನೆಯುಸಿರೆಳೆದಿದ್ದರು. ಅಂದು ದಿನಾಂಕ 30-4-1997 ಬೆಳಗಿನ 8.30 ಇರಬಹುದು. ನಾವು ಬಂದು ನೋಡಿ ನಂತರ ಫ್ರೆಶ್ ಆಗಿ ನಂತರ ಏನು ಮಾಡುವುದು ಎಂದು ಯೋಚಿಸುವ ಮುನ್ನ ಇದೆಲ್ಲ ಆಗಿ ಹೋಗಿತ್ತು.
ಈಚೆ ಬಂದ ನನಗೆ ಸಾವನ್ನ ಹೀಗೆ ನೇರವಾಗಿ ಎದುರಿಸಿದ ಸಂದರ್ಭಗಳು ಇರಲಿಲ್ಲ. ಮುಂದಿನ ವಿಚಾರವನ್ನು ಯೋಚನೆ ಮಾಡುತ್ತಲೇ ಹತ್ತಿರದಲ್ಲಿದ್ದ ಟೆಲಿಫೋನ್ ಬೂತ್‌ನಿಂದ ಮೈಸೂರಿನಲ್ಲಿದ್ದ ಮಗಳು ಸೀಮಾ ಮತ್ತು ಬೆಂಗಳೂರಿನಲ್ಲಿದ್ದ ಶಾಲುಗೆ ಹಾಗೂ ಬೆಂಗಳೂರಿನ ವಿಧಾನಸೌಧದಲ್ಲಿ ಪಿಎಸ್ ಆಗಿದ್ದ ಬಸವಣ್ಯಪ್ಪನಿಗೆ ತಿಳಿಸಿ ಎಲ್ಲಾ ಡಿಎಸ್‌ಎಸ್ ಸ್ನೇಹಿತರಿಗೆ ತಿಳಿಸಲು ಹೇಳಿದೆ. ಹರಿಹರದಲ್ಲಿನ ಮೇಷ್ಟರ ತಮ್ಮಂದಿರಿಗೆ ಸುದ್ದಿ ತಿಳಿಸಿ ಬಂದೆ. ಸಿರಸಿಯಲ್ಲಿದ್ದ ಮೇಷ್ಟರ ಇನ್ನೊಬ್ಬ ತಮ್ಮ ಮಾರುತಿಗೆ ತಿಳಿಸಿ ಮೇಷ್ಟರ ಪಾರ್ಥಿವ ಶರೀರವನ್ನು ಹರಿಹರಕ್ಕೆ ತೆಗೆದುಕೊಂಡು ಹೋಗುವ ಬಗ್ಗೆ ವ್ಯವಸ್ಥೆ ಮಾಡಿದೆ. ಆಸ್ಪತ್ರೆಯ ರೀತಿನೀತಿಗಳನ್ನು ಮುಗಿಸಿ-ಸಮಾಧಿಯಾಗುವುದು ಇನ್ನೂ ಒಂದು ದಿನ ತಡವಾಗುವುದರಿಂದ ದೇಹಕ್ಕೆ ಬೇಕಾದ ರೀತಿಯಲ್ಲಿ ಇಂಜೆಕ್ಷನ್ ಕೊಡಿಸಿ ಸುಮಾರು 3-4 ಗಂಟೆಗೆ ಗದಗ ಬಿಟ್ಟು ಹರಿಹರ ಟೌನ್‌ನಲ್ಲಿದ್ದ ಮೇಷ್ಟರ ಮನೆಗೆ ಸಂಜೆ 7 ಗಂಟೆಯ ಸಮಯಕ್ಕೆ ತಲುಪಿದ್ದೆವು.
ರಾತ್ರಿ ಭಜನೆ ಮಾಡಲು ವ್ಯವಸ್ಥೆ ಮಾಡಿ ನಂತರ ಮೇಷ್ಟರ ಸಂಸ್ಕಾರ ಎಲ್ಲಿ ಏನು ಎಂದು ಅವರ ತಮ್ಮಂದಿರು ತಂಗಿಯರ ಜೊತೆ ಮಾತಾಡಿದಾಗ ಅದೆಲ್ಲ ತುಂಗಭದ್ರಾ ನದಿಯ ದಡದಲ್ಲಿ ಮಾಡುವುದು ಎಂದು ತಿಳಿಸಿದರು. ಈ ಬಗ್ಗೆ ದುಃಖದಲ್ಲಿ ಮುಳುಗಿದ್ದ ಇಂದಿರಾ ಜೊತೆ ಏನೂ ಮಾತಾಡುವ ಸ್ಥಿತಿಯಲ್ಲಿರಲಿಲ್ಲ. ಇದೇ ಚಿಂತೆಯಲ್ಲಿ ನಾನು ಮೂರು ಕಿ.ಮೀ. ದೂರದ ನಮ್ಮ ಊರಿಗೆ ಬಂದಿಳಿದೆ. ರಾತ್ರಿಯಲ್ಲಿ ನಿದ್ದೆ ಬಾರದೆ ಒದ್ದಾಡಿದೆ. ಹರಿಹರ ತುಂಗಾ ನದಿ ದಡದಲ್ಲಿ ಸಂಸ್ಕಾರ ಮಾಡುವ ಅವರ ನಿರ್ಧಾರವನ್ನು ತಿಳಿದು ಮನಸ್ಸಿಗೆ ಒಂದು ಚಿಂತೆಯಾಯಿತು. ಇಷ್ಟೊಂದು ಹೋರಾಟದ ಜೀವನ ನಡೆಸಿದ ಮನುಷ್ಯನ ನೆನಪು ನಾಳೆಗೆ ಭೌತಿಕವಾಗಿ ಕೊನೆಯಾಗುವ ಬಗ್ಗೆ ಚಿಂತೆಯಾಯಿತು. ನಾನು ನಮ್ಮ ಅಣ್ಣ ಅವ್ವ ಇವರ ಜೊತೆ ಚರ್ಚಿಸಿ-ನಮ್ಮ ತೋಟದ ಜಮೀನಿನಲ್ಲಿ ಸಮಾಧಿ ಮಾಡಿದರೆ ಹೇಗೆ ಎಂದು ಯೋಚಿಸಿ, ಬೆಳಿಗ್ಗೆ ಈ ನನ್ನ ಯೋಚನೆಯನ್ನು ಮೇಷ್ಟರ ತಮ್ಮ ಮಾರುತಿ ಬಳಿ ಚರ್ಚಿಸಿ ನಂತರ ಎಲ್ಲ ಅವರ ಸಂಬಂಧಿಗಳಿಗೂ ವಿಚಾರಿಸಿದೆ. ಅವರೆಲ್ಲರೂ ನನ್ನ ಸಲಹೆಗೆ ಒಪ್ಪಿದರು. ಅದರಂತೆ ಎಲ್ಲಾ ಡಿಎಸ್‌ಎಸ್‌ನ ಕರ‍್ಯಕರ್ತರಿಗೆ, ಅಧ್ಯಾಪಕರಿಗೆ, ರಾಜಕಾರಣಿಗಳಿಗೆ ತಿಳಿಸಿದೆವು. ಹರಿಹರದಿಂದ ನಮ್ಮೂರಿನಿಂದಲೇ ತರಿಸಿದ್ದ ಟ್ರಾಕ್ಟರ್‌ನಲ್ಲಿ ನಮ್ಮ ತೋಟದಲ್ಲಿ ಸುಮಾರು 4 ಗಂಟೆಯ ಸಮಯಕ್ಕೆ 1-5-1997ರಂದು ಕೃಷ್ಣಪ್ಪನವರ ಅಂತಿಮ ಕಾರ್ಯವನ್ನು ಮಾಡಿದೆವು. ಅಂತಿಮ ದರ್ಶನ ಪಡೆಯಲು ರಾಜ್ಯದಾದ್ಯಂತ ಪ್ರಗತಿಪರರು, ಡಿಎಸ್‌ಎಸ್ ಕರ‍್ಯಕರ್ತರು, ರಾಜಕಾರಣಿಗಳ ದಂಡೇ ಆಗಮಿಸಿತ್ತು. ಸಮಾಧಿಯಾದ ನಂತರ ಡಿಎಸ್‌ಎಸ್‌ನ ಎಲ್ಲಾ ಬಣಗಳ ಕರ‍್ಯಕರ್ತರೂ ಕೃಷ್ಣಪ್ಪನವರ ಹೋರಾಟದ ಆಶಯಗಳನ್ನು ಈಡೇರಿಸಲು ಅಂದು ಪ್ರಮಾಣ ಮಾಡುವ ಪ್ರತಿಜ್ಞೆ ಮಾಡಿ ನಿರ್ಗಮಿಸಿದ್ದರು.
1997ರಲ್ಲಿ ಕೃಷ್ಣಪ್ಪನವರ ನಿರ್ಗಮನದ ನಂತರ ಕರ್ನಾಟಕದ ದಲಿತ ಹೋರಾಟದ ಸಮಗ್ರ ಚಿತ್ರಣ ಹಲವು ಟಿಸಿಲುಗಳಾಗಿ ಹೊರಹೊಮ್ಮಿದ್ದವು. ನನ್ನ ಸರ್ಕಾರಿ ನೌಕರಿಯ ಜೊತೆ ಎಲ್ಲ ಬಣಗಳಲ್ಲಿ ನನಗೆ ಬಲ್ಲವರಿದ್ದರೂ ಯಾರೊಡನೆ ಒಡನಾಡುವುದು ಎಂಬ ಪ್ರಶ್ನೆ ಮೂಡುತ್ತಿತ್ತು. ಆದರೂ ಯಾರು ಏನೇ ಕರ‍್ಯಕ್ರಮ ಮಾಡುವಾಗ ಸಹಕಾರ ನೀಡಲು ಕೋರಿದರೆ ಮುಕ್ತ ಮನಸ್ಸಿನಿಂದ ಸಹಾಯ ಮಾಡುತ್ತಿದ್ದೆ.
ಕೃಷ್ಣಪ್ಪನವರ ನಿಧನಾನಂತರ ಬಿಎಸ್‌ಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಕಾನ್ಷಿರಾಮ್ ಅವರು ಯಲಹಂಕದಲ್ಲಿದ್ದ ಕೃಷ್ಣಪ್ಪನವರ ಮನಗೆ ಬಂದು ಇಂದಿರಾ ಮತ್ತು ಅವರ ಇಬ್ಬರು ಮಕ್ಕಳು ಶಾಲಿನಿ, ಸೀಮಾ ಅವರಿಗೆ ಸಾಂತ್ವನ ಹೇಳಿದರು. ತಕ್ಷಣದ ಅಗತ್ಯಗಳಿಗೆ ಎಂಬ ಕಾರಣದಿಂದಲೋ ಏನೋ ಎರಡು ಲಕ್ಷ ರೂಪಾಯಿಗಳನ್ನು ಇಂದಿರಾ ಅವರ ಕುಟುಂಬಕ್ಕೆ ನೀಡಿದ್ದರು. ಆದರೆ ಇಂದಿರಾ ಅವರು ನನಗೀಗ ಸರ್ಕಾರಿ ನೌಕರಿ ಇರುವ ಕಾರಣ ನೀಡಿ, ಅದನ್ನು ಕೃಷ್ಣಪ್ಪನವರ ಹೆಸರಿನಲ್ಲಿ ಮುಂದೆ ಸ್ಥಾಪಿಸಿದ ಟ್ರಸ್ಟ್ನ ಹೆಸರಿನಲ್ಲಿ ನಡೆಸುವ ಕರ‍್ಯಕ್ರಮಗಳಿಗೆ ಬಳಸಿಕೊಳ್ಳಲಾಗುವುದು ಎಂದು ಹೇಳಿ ಆ ಹಣವನ್ನು ಒಪ್ಪಿಕೊಂಡಿದ್ದರು. ಅದರಂತೆ ಕಾನ್ಷಿರಾಮ್ ಅವರು ನೀಡಿದ ಹಣ, 1997ರಲ್ಲಿ ಸ್ಥಾಪಿಸಿದ ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್ನಲ್ಲಿ ಮೂಲಧನವಾಗಿ ಉಳಿದಿದೆ. ಕೃಷ್ಣಪ್ಪನವರ ಆಶಯದಂತೆ ಕರ‍್ಯಕ್ರಮಗಳನ್ನು ನಿರ್ವಹಿಸಿಕೊಂಡು ಕಳೆದ 24 ವರ್ಷಗಳಿಂದ ಬರುತ್ತಿದ್ದೇವೆ.
ಕೃಷ್ಣಪ್ಪನವರು ಕಾಲವಾದ ಎರಡು ತಿಂಗಳಲ್ಲಿ ಡಿಎಸ್‌ಎಸ್‌ನ ಅವರ ಅನುಯಾಯಿಗಳಲ್ಲಿ ನಾನು ಮತ್ತು ಇಂದಿರಾ ಮನವಿ ಮಾಡಿ ಕೃಷ್ಣಪ್ಪನವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸುವ ಬಗ್ಗೆ ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆಯನ್ನು ಅರ್ಕೇಶ್ ಇದ್ದ ಸಿಆರ್‌ಪಿಎಫ್‌ನಲ್ಲಿನ ಒಂದು ಸಭಾಂಗಣದಲ್ಲಿ ಕರೆದಿದ್ದೆವು. ಆ ಸಭೆಗೆ ಸಾಕಷ್ಟು ಜನ ಬಾರದಿದ್ದರಿಂದ ಮತ್ತೊಂದು ಬಾರಿ ಎಲ್ಲರಿಗೂ ತಿಳಿಹೇಳಿ 9 ಅಥವಾ 11 ಜನರಿರುವ ಒಂದು ಟ್ರಸ್ಟ್ ಸ್ಥಾಪಿಸುವ ಬಗ್ಗೆ ಮತ್ತೆ ಸಭೆ ಕರೆದೆವು. ಎರಡನೇ ಸಭೆಯಲ್ಲಿ ಬಂದವರ ಅಭಿಪ್ರಾಯ ಪಡೆದು 11 ಜನರಲ್ಲಿ ದಲಿತ ಹೋರಾಟಗಾರರು, ಕೃಷ್ಣಪ್ಪನವರ ಕುಟುಂಬ ಮತ್ತು ಅವರ ಸಹಪಾಠಿಗಳನ್ನು ಸೇರಿದಂತೆ ಟ್ರಸ್ಟ್ ಸದಸ್ಯರ ಹೆಸರುಗಳನ್ನು ಅಂತಿಮಗೊಳಿಸಿದೆವು.
ನಾನು ಮತ್ತು ಇಂದಿರಾ ಮ್ಯಾನೇಜಿಂಗ್ ಟ್ರಸ್ಟಿಗಳು. ಕೃಷ್ಣಪ್ಪನವರ ಸಹಪಾಠಿಗಳಾಗಿದ್ದ ಆರ್. ನಾಗರಾಜ್ ಮತ್ತು ಕೃಷ್ಣಪ್ಪನವರ ಕಿರಿಯ ಸಹೋದರ ಬಿ. ಮಾರುತಿ, ನಮ್ಮ ಸಹೋದರ ಸಿ. ತಿಪ್ಪಣ್ಣ ಮತ್ತು ಉಳಿದಂತೆ ಡಿಎಸ್‌ಎಸ್‌ನಲ್ಲ್ಲಿದ್ದ ಕೃಷ್ಣಪ್ಪನವರ ಅನುಯಾಯಿಗಳಾದ ಚಿತ್ರದುರ್ಗದ ಜಯಣ್ಣ, ಶ್ರೀಧರ ಕಲಿವೀರ, ಮಾವಳ್ಳಿ ಶಂಕರ್, ಬಿಎಸ್‌ಪಿಯಲ್ಲಿದ್ದ ಮಾರಸಂದ್ರದ ಮುನಿಯಪ್ಪನವರ ಹೆಸರುಗಳನ್ನು ಅಂತಿಮಗೊಳಿಸಿದ್ದೆವು. ಎರಡು ಬಾರಿ ಎಲ್ಲರೂ ಸೇರಿ ನೋಂದಾಯಿಸಲು ಸಬ್ ರಿಜಿಸ್ಟಾçರ್ ಆಫೀಸಿಗೆ ಬರುವಂತೆ ದಿನಾಂಕ ನಿಗದಿ ಮಾಡಿದ್ದರೂ ಕೆಲವರು ಕೊನೆಯವರೆಗೂ ಬಾರದ ಕಾರಣ ಬಂದವರಲ್ಲಿ ಏಳು ಜನರಿರುವ ಟ್ರಸ್ಟ್ವೊಂದನ್ನು ದಿನಾಂಕ 28-11-97ರಲ್ಲಿ ಸ್ಥಾಪಿಸಿದೆವು. ಕೃಷ್ಣಪ್ಪನವರ ಆಶಯಗಳನ್ನು ಟ್ರಸ್ಟಿನ ಧ್ಯೇಯೋದ್ದೇಶಗಳಲ್ಲಿ ಉಲ್ಲೇಖಿಸಿ ನೊಂದಾಯಿಸಿದೆವು. ಅಂದಿನಿಂದ ಇಂದಿನವರೆಗೆ ಸುಮಾರು 24 ವರ್ಷಗಳಲ್ಲಿ ರಾಜ್ಯದಾದ್ಯಂತ ದಲಿತ ಹೋರಾಟಗಳಿಗೆ ಒತ್ತಾಸೆಯಾಗಿ, ಸಮಾನತೆ ಸಹೋದರತೆ ಸಾರುವ ಮಾನವೀಯ ಹೋರಾಟಗಳಲ್ಲಿ ಭಾಗವಹಿಸುತ್ತಾ, ಅಂತರ್ಜಾತಿ-ಅಂತರ್‌ಮತೀಯ ಮತ್ತು ಸರಳ ಮದುವೆಗಳನ್ನು ಮಾಡುತ್ತಾ ಜೊತೆಗೆ, ಕೃಷ್ಣಪ್ಪನವರು ಬರೆದಿದ್ದ ಹೋರಾಟದ ಕವನ ಮತ್ತು ವೈಚಾರಿಕ ಲೇಖನಗಳನ್ನು ಪ್ರಕಟಿಸಿ ಜನರಿಗೆ ತಲುಪಿಸುತ್ತಾ ಇಂದಿಗೂ ಜನಪರ ಚಳುವಳಿಗಳಲ್ಲಿ ಕೃಷ್ಣಪ್ಪ ಟ್ರಸ್ಟ್ ಸಕ್ರಿಯವಾಗಿದೆ. ಟ್ರಸ್ಟ್ನ ಕರ‍್ಯಕ್ರಮಗಳ ಭಾಗವಾದ ಕೃಷ್ಣಪ್ಪ ಸಮಾಧಿ ಸ್ಥಳ ಉದ್ಘಾಟನೆಗೆ ಬಿಎಸ್‌ಪಿಯ ಕಾನ್ಷಿರಾಮ್ ಅವರು ಹಿರಿಯ ನ್ಯಾಯವಾದಿ ಮತ್ತು ಮಾಜಿಮಂತ್ರಿಗಳಾಗಿದ್ದ ಎಲ್.ಜಿ. ಹಾವನೂರ ಅವರು, ಮಾಜಿಮಂತ್ರಿಗಳಾಗಿದ್ದ ಕಾಗೋಡು ತಿಮ್ಮಪ್ಪ ಅವರು 1997ರಲ್ಲಿ ಬಂದು ಉದ್ಘಾಟಿಸಿದ್ದರು. ಅಂದಿನಿಂದ ಇಂದಿನವರೆಗೆ ನೂರಾರು ಸಾಹಿತ್ಯ, ಸಂಸ್ಕೃತಿ, ನಾಟಕ, ಹೋರಾಟಗಳ ಸಭೆ ಸಮಾರಂಭಗಳನ್ನು ಕೃಷ್ಣಪ್ಪ ಸಮಾಧಿ ಸ್ಥಳದಲ್ಲಿ ಸಂಘಟಿಸುತ್ತಾ ಬಂದಿದೆ. ಮಂತ್ರಿಗಳು, ಮುಖ್ಯಮಂತ್ರಿಗಳು, ರಾಜ್ಯಪಾಲರಾದಿಯಾಗಿ ಜೊತೆಗೆ ನೂರಾರು ದಲಿತ ಹೋರಾಟಗಾರರು, ರಾಜಕಾರಣಿಗಳು ಅನೇಕ ಪ್ರಗತಿಪರರು, ರೈತ ಹೋರಾಟಗಾರರು ಗ್ರಾಮೀಣ ಜನರು ಸಮಾಧಿ ಸ್ಥಳದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುತ್ತಾರೆ.
2017ರಲ್ಲಿ ಸಮಾಧಿ ಸ್ಥಳದಲ್ಲಿ ಸರ್ಕಾರದ ಸಹಾಯದಿಂದ ಕೃಷ್ಣಪ್ಪ ಸ್ಮಾರಕ ಭವನ ನಿರ್ಮಿಸಿದ್ದು, ಅಲ್ಲಿ ಲೈಬ್ರರಿ ಮತ್ತು ಸ್ಮರಣಲೋಕವನ್ನು ಕೃಷ್ಣಪ್ಪನವರ ಹೋರಾಟದ ವಿವರಗಳನ್ನು ಒಳಗೊಂಡಂತೆ ಕಲೆ ಹಾಕಿದೆ. ಅನೇಕ ಪ್ರಗತಿಪರ ಕರ‍್ಯಕ್ರಮಗಳು ಜನಪರ ಗ್ರಾಮೀಣ ಜನರು ಅದರ ಸದುಪಯೋಗ ಪಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ.
ಕೃಷ್ಣಪ್ಪನವರು ತೀರಿದ ಎರಡು ತಿಂಗಳಲ್ಲಿ ಯಲಹಂಕದಲ್ಲಿನ ಪ್ರಗತಿಪರರೊಡನೆ ಜೊತೆಗೂಡಿ ಕೃಷ್ಣಪ್ಪನವರ ಸ್ಮರಣ ಕರ‍್ಯಕ್ರಮ ಆಯೋಜಿಸಿದ್ದೆವು. ಆ ಸಭೆಗೆ ನಮ್ಮ ನಗರಸಭೆಯ ಸದಸ್ಯರು ಮತ್ತು ಅನೇಕ ಪ್ರಗತಿಪರರು ಕೈಜೋಡಿಸಿದ್ದರು. ಸಭೆಗೆ ಡಿಎಸ್‌ಎಸ್ ನಾಯಕರು ಮತ್ತು ಅಂದಿನ ವಿಧಾನಸಭಾ ಅಧ್ಯಕ್ಷರಾಗಿದ್ದ ಡಿ. ಮಂಜುನಾಥ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕೃಷ್ಣಪ್ಪನವರ ಹೋರಾಟ ಮತ್ತು ತ್ಯಾಗಗಳ ಬಗ್ಗೆ ನುಡಿನಮನ ಸಲ್ಲಿಸಿದ್ದರು.
ನಮ್ಮ ಊರಿನಿಂದ ಒಂದು ದೊಡ್ಡ ದಂಡೇ ಬ್ಯಾಂಡ್‌ಸೆಟ್ ಜೊತೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಬಸವಲಿಂಗಪ್ಪನವರ ಸಮಾಧಿ ಸ್ಥಳದಿಂದ ಯಲಹಂಕದಲ್ಲಿ ನಡೆಸುತ್ತಿದ್ದ ಕೃಷ್ಣಪ್ಪನವರ ಸ್ಮರಣ ಸಮಾರಂಭದವರೆಗೆ ಮೆರವಣಿಗೆ ಮಾಡಿಕೊಂಡು ಬಂದು ಕೃಷ್ಣಪ್ಪನವರ ಬದುಕು, ಹೋರಾಟ, ಡಿಎಸ್‌ಎಸ್ ಸಂಘಟನೆಯನ್ನು ಸ್ಥಾಪಿಸಿ ಹೋರಾಟ ಮಾಡಿದ ವಿವಿಧ ವಿಷಯಗಳ ಬಗ್ಗೆ ಅಂದಿನ ಸಭೆಯಲ್ಲಿ ಭಾಗವಹಿಸಿದವರೆಲ್ಲರೂ ಮಾತನಾಡಿ ಕೃಷ್ಣಪ್ಪನವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಲೇಖಕಿ ಬಾನು ಮುಸ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ; ಗಣ್ಯರ ಅಭಿನಂದನೆ

ಸುದ್ದಿದಿನಡೆಸ್ಕ್:ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಸ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಂಭ್ರಮಿಸುವ ಹೊತ್ತು.
ಈ ನೆಲದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನು ಮುಸ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಮಗೆಲ್ಲ ಗೌರವ ತಂದುಕೊಟ್ಟಿದ್ದಾರೆ.
ಅವರು ಇನ್ನಷ್ಟು ಕಾಲ ಸತ್ವಯುತವಾಗಿ ಬರೆಯುತ್ತಾ ಕನ್ನಡದ ಕಂಪನ್ನು ಜಗದಗಲಕ್ಕೆ ಪಸರಿಸುತ್ತಾ ಇರಲಿ ಎಂದು ಹಾರೈಸುತ್ತೇನೆ.
ಬೂಕರ್ ಪ್ರಶಸ್ತಿಗೆ ಭಾಜನವಾಗಿರುವ ಅವರ ಕೃತಿ ‘ಎದೆಯ ಹಣತೆ’ಯನ್ನು ಇಂಗ್ಲೀಷ್ ಗೆ ಅನುವಾದಿಸಿರುವ ಪ್ರತಿಭಾವಂತ ಲೇಖಕಿ ದೀಪಾ ಭಸ್ತಿ ಅವರಿಗೂ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ
ಹಾಗೇ ನಾಡಿನ ಸಾಹಿತ್ಯ ಪ್ರೇಮಿಗಳು, ಹೋರಾಟಗಾರರು ಸೇರಿದಂತೆ ಕನ್ನಡಿಗರು ಸಂಭ್ರಮಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ’; ವಿದ್ಯಾರ್ಥಿಗಳ ಕಲರವ

ಸುದ್ದಿದಿನ,ಚನ್ನಗಿರಿ:ಪಟ್ಟಣದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ (ಮಾರ್ಚ್-22) ‘ಜಾನಪದ ಉತ್ಸವ – 2025″ ಅದ್ದೂರಿಯಾಗಿ ನಡೆಯಿತು.
ಜಾನಪದ ತಜ್ಞ, ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ, ಅವರು ಉತ್ಸವಕ್ಕೆ ಚಾಲನೆ ನೀಡಿದರು.
ಎತ್ತಿನ ಬಂಡಿಯಲ್ಲಿ ಅಧ್ಯಾಪಕರು, ಅತಿಥಿಗಳ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ನೀರು ತುಂಬಿದ ಪೂರ್ಣ ಕುಂಭಗಳನ್ನು ಹೊತ್ತು ಅತಿಥಿಗಳನ್ನು ಸ್ವಾಗತಿಸಿದರು.
ಅಂದು ಕಾಲೇಜಿನಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ವರ್ಷದಲ್ಲಿ ಬರುವ ಯುಗಾದಿ, ಸಂಕ್ರಾಂತಿ, ಶಿವರಾತ್ರಿ, ಕ್ರಿಸ್ ಮಸ್, ರಂಜಾನ್, ದಸರಾ, ಭೂಮಿ ಹುಣ್ಣಿಮೆ, ರಾಶಿ ಪೂಜೆ ಸೇರಿದಂತೆ, ಬಳೆಗಾರ, ಕಣಿಹೇಳುವ, ಚೌಕಾಬಾರಾ, ಗುರುಕುಲ, ಆಯುರ್ವೇದ, ಗೋ ಪೂಜೆ ಎಲ್ಲವೂ ಜಾನಪದ ಸಂಸ್ಕೃತಿಯನ್ನು ಪುನರ್ ನಿರ್ಮಾಣಮಾಡಿದ್ದವು.
ಉತ್ಸವದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು, ಪಂಚೆ, ಅಂಗಿ, ಕುರ್ತಾ, ಲಂಗಾದಾವಣಿ, ಸೀರೆ ಉಟ್ಟು ,ಬುರ್ಕಾ, ತೊಟ್ಟು ಸಡಗರ ಸಂಭ್ರಮದಿಂದ ಕುಣಿದಾಡಿದರು.
ರಾಮನವಮಿಯ ಬೆಲ್ಲದ ಪಾನಕ – ಕೋಸಂಬರಿ, ಕ್ರಿಸ್ಮಸ್ ನ ಕೇಕ್, ರಂಜಾನ್ ಹಬ್ಬದ ಇಪ್ತಾರ್ ಕೂಟದ ಫಲಾಹಾರ, ಗಣಪತಿ ಹಬ್ಬದ ಕಡುಬು, ಯುಗಾದಿಯ ಹೋಳಿಗೆ, ಭೂಮಿಪೂಜೆಯ ಪಾಯಸ ಹೀಗೆ ವಿವಿಧ ಬಗೆಯ ತಿಂಡಿತಿನಿಸುಗಳು 30 ಜಿಲ್ಲೆಗಳ ವಿಶೇಷ ಖಾಧ್ಯಗಳು ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದವು.
ವಸ್ತು ಪ್ರದರ್ಶನ
ಸುಮಾರು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಬೀಸು ಕಲ್ಲು, ಒನಕೆ, ಸೌದೆ ಒಲೆ, ಕೊಡಲಿ, ಮಚ್ಚು, ಬರ್ಜಿ, ಚನ್ನೆಮಣೆ, ಕೀಲುಗೊಂಬೆ, ಪಾರಂಪರಿಕ ಔಷಧಿ, ಕುಡುಗೋಲು, ಬಂಡಿ,ನಾಣ್ಯಗಳು,ಸೇರು, ಒಳಕಲ್ಲು, ಶಹನಾಯಿ,ಮಜ್ಜಿಗೆಯ ಕಡೆಗೋಲು, ತಾಳ, ಹಾರ್ಮೊನಿಯಂ, ಗಂಡುಕೊಡಲಿ,ಶಾವಿಗೆ ಒತ್ತು,ಹುತ್ತದ ಮಾದರಿ,ವಿಭಿನ್ನ ಬಗೆಯ ರಂಗವಲ್ಲಿ, ವಿವಿಧ ಧಾನ್ಯದ ರಾಶಿ,ಕಳಸ, ದಸರಾ ಗೊಂಬೆಗಳು, ನವರಾತ್ರಿಯ ಮಾತೃದೇವತೆ, ಕುರಾನ್ ಪ್ರತಿ, ಜಾನಮಾಜ್,ಕ್ರಿಸ್ತನ ಜನನದ ಗೋದರಿ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಮಾದರಿ ಚಿತ್ರಗಳು ವಸ್ತುಪ್ರದರ್ಶನದಲ್ಲಿದ್ದವು.
ದೇಸೀ ಆಟಗಳು
ದೇಸೀ ಆಟಗಳಾದ ಹಗ್ಗ ಜಗ್ಗಾಟ, ಲಗೋರಿ, ಬುಗುರಿ, ಕುಂಟೋಬಿಲ್ಲೆ ಹಾಗೂ ಜನಪದ ನೃತ್ಯ-ಹಾಡು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಂತಸದಿಂದ ಭಾಗವಹಿಸಿದರು.
ಉತ್ಸವದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಬಿ.ಜಿ.ಅಮೃತೇಶ್ವರ ಅವರು ವಹಿಸಿಕೊಂಡಿದ್ದರು. ಹಾಗೂ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಪಕ ಹಾಗೂ ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಷ್ಮುಖಪ್ಪ ಕೆ.ಹೆಚ್, ಐಕ್ಯುಎಸಿ ಸಂಚಾಲಕ ಪ್ರೊ.ವಿಜಯ್ ಕುಮಾರ್, ಉತ್ಸವದ ಕ್ರೀಡೆಗಳ ಆಯೋಜಕ ಹಾಗೂ ದೈಹಿಕ ನಿರ್ದೇಶಕರಾದ ಕಲ್ಲೇಶಪ್ಪ ಎಸ್.ಜಿ ಹಾಗೂ ಕಾಲೇಜಿನ ಎಲ್ಲಾ ಅಧ್ಯಾಪಕರು ಹಾಗೂ ಬೋಧಕೇತರ ಸಿಬಂದಿಗಳು ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಜಾನಪದ ಕಲೆ, ಸಂಸ್ಕೃತಿಯು ಹಿಂದಿನಿಂದಲೂ ಮನುಷ್ಯ ಜೀವನದೊಂದಿಗೆ ಸಂಬಂಧ ಹೊಂದಿದ್ದು ಇಂದಿನ ಪೀಳಿಗೆಯ ಮಕ್ಕಳು ಜಾನಪದ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಜನಪದ ಪರಂಪರೆಯ ಪ್ರತೀಕವಾಗಿ ‘ಜನಪದ ಉತ್ಸವ – 2025’ ನಮ್ಮಸಂಸ್ಕೃತಿ ನಮ್ಮ ಹೆಮ್ಮೆ ಹೆಚ್ಚು ಅರ್ಥ ಪೂರ್ಣವಾಗಿ ಮೂಡಿ ಬಂದಿದೆ.
| ಜಾನಪದ ತಜ್ಞ, ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ

ನಮ್ಮ ದೇಶಿ ಸಂಸ್ಕೃತಿಯನ್ನು ಸಂರಕ್ಷಿಸಿ, ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ತಲೆಮಾರುಗಳಿಂದ ಹೊಂದಿರುವ, ಆಯಾ ಪ್ರಾದೇಶಿಕ ಗ್ರಾಮೀಣ ವ್ಯಾಪ್ತಿಯಲ್ಲಿ ಆಚರಣೆಯಲ್ಲಿರುವ ಈ ಮೌಖಿಕ ಪರಂಪರೆಯ ಜಾನಪದ ಸಂಸ್ಕೃತಿಯ ಸೊಗಡುಗಳು ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸುವ ಒಂದು ಅತ್ಯುತ್ತಮ ಪ್ರಯತ್ನ ‘ಜಾನಪದ ಉತ್ಸವ’-2025.
| ಡಾ.ಬಿ.ಜಿ.ಅಮೃತೇಶ್ವರ, ಪ್ರಾಂಶುಪಾಲರು

ಜನಪದರ ಬದುಕು, ಆಧುನಿಕ ಜಾಗತೀಕರಣದ ಕಾಲದಲ್ಲಿ ಹೆಚ್ಚು ಪ್ರಸ್ತುತವಾಗುತ್ತಿದೆ ಅದರ ಸದಾಶಯವನ್ನು ಕಾಲೇಜು ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ನಮ್ಮ ಕಾಲೇಜಿನ ವಿಧ್ಯಾರ್ಥಿಗಳು ಎಲ್ಲಾ ಅಧ್ಯಾಪಕರ ಸಹಾಯದಿಂದ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ಅವರಿಗೆ ಅಭಿನಂದನೆಗಳು.
| ಷಣ್ಮುಖಪ್ಪ ಕೆ ಎಚ್ ,ಕಾರ್ಯಕ್ರಮದ ನಿರ್ದೇಶಕರು, ಸಂಚಾಲಕರು,ಸಾಂಸ್ಕೃತಿಕ ವೇದಿಕೆ

-
ದಿನದ ಸುದ್ದಿ4 days ago
ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ, ಗಿಗ್, ಸಿನಿ ಹಾಗೂ ಮನೆಗೆಲಸ ಕಾರ್ಮಿಕರ ಕಲ್ಯಾಣಕ್ಕಾಗಿ ಅಧಿನಿಯಮ ಜಾರಿಗೆ ಕ್ರಮ : ಸಚಿವ ಸಂತೋಷ್ ಲಾಡ್
-
ಅಂಕಣ3 days ago
ಆತ್ಮಕತೆ | ಕೃಷ್ಣಪ್ಪನವರ ನಿಧನ : (09.06.1938 – 30.04.1997)
-
ದಿನದ ಸುದ್ದಿ5 days ago
500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಸರ್ಕಾರ ನಿರ್ಧಾರ
-
ದಿನದ ಸುದ್ದಿ4 days ago
ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 9360 ಪ್ರಕರಣ ಇತ್ಯರ್ಥ ; ವಿಚ್ಚೇದನ ಕೋರಿ ಸಲ್ಲಿಸಿದ್ದ 23 ಜೋಡಿ ವೈವಾಹಿಕ ಜೀವನ ಸುಖಾಂತ್ಯ
-
ದಿನದ ಸುದ್ದಿ6 days ago
ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರೆಣೆ
-
ದಿನದ ಸುದ್ದಿ5 days ago
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ : ಕರವೇ ಮನವಿ
-
ದಿನದ ಸುದ್ದಿ6 days ago
ಪಿಹೆಚ್ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ದತ್ತಾಂಶ ನಿರ್ವಾಹಕ ಗ್ರೇಡ್ ಎ ಪರೀಕ್ಷೆಗೆ ಅರ್ಜಿ ಆಹ್ವಾನ