ನೆಲದನಿ
ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ..!
- ಪಿ. ಲಂಕೇಶ್
ಈತ ನನ್ನನ್ನು ಚಕಿತಗೊಳಿಸುತ್ತಾನೆ. ಮತ್ತೆ ಮತ್ತೆ ನನ್ನ ಮನಸ್ಸಿಗೆ ಬಂದು ಹೊಸ ಹೊಸ ತಿಳಿವಳಿಕೆಗೆ ಕಾರಣವಾಗುವ ಈತನನ್ನು ನಿಮ್ಮೊಂದಿಗೆ ನೆನೆಯಲು ಯತ್ನಿಸುತ್ತೇನೆ. ಈತ ಪ್ರಖ್ಯಾತ ಗುರುವಾಗಿದ್ದ; ಸಾವಿರಾರು ಮೈಲುಗಳಿಂದ ದೊರೆಗಳು, ಸೇನಾನಿಗಳು ಬಂದು ಈತನನ್ನು ನೋಡಿ ಗೌರವಿಸುತ್ತಿದ್ದರು. ಈತ ಜನಕ್ಕೆ ಉಪದೇಶ ನೀಡುತ್ತಿದ್ದ.
ಹಾಗೆ ನೋಡಿದರೆ ಈತನಿಗೆ ದಿನದ ವೇಳೆಯೇ ಸಾಕಾಗುತ್ತಿರಲಿಲ್ಲ. ಆದರೆ ಎಂದೋ ನೋಡಿದ ಸಾಮಾನ್ಯನೊಬ್ಬನಿಗೆ ಕಾಯಿಲೆಯಾದರೆ, ಯಾವುದೇ ತೊಂದರೆಯಾದರೆ ಈತ ಹತ್ತಾರು ಮೈಲಿ ನಡೆದುಹೋಗಿ ಆತನನ್ನು ಕಂಡು ಆರೈಕೆ ಮಾಡುತ್ತಿದ್ದ; ಅವನ ತೊಂದರೆಗಳಿಗೆ ಪರಿಹಾರ ಹುಡುಕುತ್ತಿದ್ದ. ಒಮ್ಮೆ ಈತನ ಆಶ್ರಮದ ಮುದಿ ರೋಗಿಯೊಬ್ಬನನ್ನು ಯಾರೂ ಸರಿಯಾಗಿ ನೋಡಿಕೊಳ್ಳಲಿಲ್ಲ. ತನ್ನ ಕೆಲಸಗಳ ನಡುವೆ ಆ ಕಡೆ ಗಮನ ಹರಿಸದಿದ್ದಕ್ಕೆ ಗುರುವಿಗೆ ತನ್ನ ಬಗ್ಗೆ ಬೇಸರವಾಯಿತು. ಆ ಮುದಿ ರೋಗಿಯನ್ನು ತಾನೇ ಉಪಚರಿಸಿ ನೋಡಿಕೊಂಡ. ಅದು ತನ್ನೆಲ್ಲಾ ಉಪದೇಶಕ್ಕಿಂತ ಮುಖ್ಯವಾದದ್ದೆಂದು ಈ ಮನುಷ್ಯ ತಿಳಿದಿದ್ದ.
ನೀವು ಊಹಿಸಿರಬಹುದಾದಂತೆ ಈತ ಗೌತಮ. ಈತನ ಬಗ್ಗೆ ಕತೆಗಳನ್ನು ಕೇಳುತ್ತಾ ಈತನ ಉಪದೇಶಗಳನ್ನು ಓದುತ್ತಾ ನಾವೆಲ್ಲ ಈ ಗೌತಮ ಅಥವಾ ಸಿದ್ಧಾರ್ಥ ಎಂಬ ಮನುಷ್ಯನ ಬಗ್ಗೆ ದಡ್ಡುಗಟ್ಟಿದ್ದೇವೆ; ಈತ ಇನ್ನೊಬ್ಬ ಮಹಾತ್ಮ ಎಂದು ತಿಳಿದು ನಿರ್ಲಕ್ಷಿಸಲು ಬೇಕಾದ ಗೌರವವನ್ನು ಮಾತ್ರ ಇಟ್ಟುಕೊಂಡು ಸುಮ್ಮನಾಗುತ್ತೇವೆ. ಆದರೆ ಕೇವಲ ಮನುಷ್ಯನಾಗಿ ಈತನ ನಡವಳಿಕೆ ಅಚ್ಚರಿ ಹುಟ್ಟಿಸುತ್ತದೆ; ನನ್ನ ಅಚ್ಚರಿಯನ್ನು ಮಾತ್ರ ಇಲ್ಲಿ ವಿವರಿಸುತ್ತೇನೆ.
ವೈಶಾಖ ಶುದ್ಧ ಪೂರ್ಣಿಮೆಯಂದು ಚೆನ್ನನೊಂದಿಗೆ ಈತ ಅರಮನೆಯನ್ನು ಬಿಟ್ಟಿದ್ದು ಓದಿದ್ದೇವೆ. ಹೀಗೆ ಅರಮನೆ, ಅದರ ಸಂಪತ್ತು ಸುಖವನ್ನೆಲ್ಲ ಬಿಟ್ಟು ಹೊರಟಿದ್ದು ಈತನ ಉನ್ನತ ಗುಣ ತೋರುತ್ತದೆ ಎಂದು ಹೇಳುತ್ತಾರೆ. ಆದರೆ ನನಗೆ ಈ ಗೌತಮನ ಸಾಮಾನ್ಯತೆಯೇ ಇಲ್ಲಿ ಕಂಡುಬರುತ್ತದೆ. ಯಾಕೆಂದರೆ ಈತ ಹುಟ್ಟಿದಾಗಲೇ ಈತನ ತಂದೆ ಶುದ್ಧೋದನನ ಪುರೋಹಿತರು ಗೌತಮನೊಬ್ಬ ಮಹಾತ್ಮನಾಗುವ ಬಗ್ಗೆ, ಮಹಾನ್ ಗುರುವಾಗುವ ಬಗ್ಗೆ ಹೇಳಿದ್ದರಂತೆ; ಒಳಗೊಳಗೇ ಗೌತಮನ ಬಗ್ಗೆ ಭಕ್ತಿಯನ್ನಿಟ್ಟುಕೊಂಡಿದ್ದ ದೊರೆ ಗೌತಮ ಸಂನ್ಯಾಸಿಯಾದಾನೆಂದು ಹೆದರಿ ಆತನನ್ನು ರಾಜಭೋಗದಲ್ಲಿ ಇಟ್ಟಿದ್ದನಂತೆ.
ಇದು ನಿಜವಾದರೆ ಗೌತಮ ಅರಮನೆ ಬಿಡುವ ಅಗತ್ಯವಿರಲಿಲ್ಲ; ಆತನು ಮಹಾನ್ ಗುರುವಾಗುವುದು ಮೊದಲೇ ನಿಶ್ಚಿತವಾಗಿದ್ದರೆ ಅದಕ್ಕಾಗಿ ಗೌತಮ ಪ್ರಯತ್ನಿಸಬೇಕಾದ ಅಗತ್ಯವಿರಲಿಲ್ಲ. ಇಲ್ಲಿ ಗೌತಮನ ಸಹಜ ಕುತೂಹಲ, ಮನುಕುಲದ ದುರಂತದ ಬಗ್ಗೆ ಕಾಳಜಿ ಕಂಡುಬರುತ್ತದೆ. ಅರಮನೆ ಏನೂ ಗೊತ್ತಿಲ್ಲದ, ಏನೂ ಗೊತ್ತಾಗದಂತೆ ಇರುವ ಜಾಗವಾಗುತ್ತದೆ. ಆತ ಅರಿವು ಹುಡುಕಿ ಹೊರಡುತ್ತಾನೆ. ಇಲ್ಲಿ ಕೂಡ ಒಂದು ಪ್ರಶ್ನೆ ಏಳುತ್ತದೆ, ಗೌತಮ ದೊರೆಯಾಗಿ ಮನುಷ್ಯರಿಗೆ ನೆರವಾಗಲು ಆಗುತ್ತಿರಲಿಲ್ಲವೇ? ಆದರೆ ದೊರೆ ಮನುಷ್ಯರ ಯಾವುದೇ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ಆಗುವುದಿಲ್ಲ ಎಂಬುದು ಗೌತಮನಿಗೆ ಗೊತ್ತಾಗಿದೆ. ರೋಗ, ಮುಪ್ಪು , ಸಾವುಗಳಿಗೆ ಉತ್ತರ ಹುಡುಕಿ ಹೊರಟ ಗೌತಮನ ದಾರಿ ಮತ್ತು ಮುಟ್ಟಿದ ಗುರಿ ವಿಚಿತ್ರವಾದ ಅರ್ಥಗಳಿಂದ ಕೂಡಿದೆ.
ಗೌತಮ ಅರಮನೆಯನ್ನು ಬಿಟ್ಟವನು ಕಾಡಿಗೆ ಹೋಗಲಿಲ್ಲ; ಮನುಷ್ಯರಲ್ಲಿಗೆ ಹೋದ. ಅನೇಕ ವಿದ್ವಾಂಸರನ್ನು, ವಿದ್ಯಾಲಯಗಳನ್ನು ಎಡತಾಕಿದ. ಅವರೊಂದಿಗೆ ಚರ್ಚಿಸಿ ಕಲಿಯಲು ಯತ್ನಿಸಿದ. ಅಲ್ಲಿಂದ ಅಧ್ಯಾತ್ಮದ ಗುರುಗಳನ್ನು ಕಂಡು ವಿನಯಪೂರ್ವಕವಾಗಿ ಕಲಿಯಲು ಯತ್ನಿಸಿದ. ಅವರಲ್ಲಿ ಕಲಿತಾಗ ಅವರನ್ನು “ಮುಂದೇನು?” ಎಂದು ಕೇಳಿದ.
ಆ ಅಧ್ಯಾತ್ಮದ ಗುರುಗಳು ತಮ್ಮ ಸಾಧನೆ ಅಷ್ಟಕ್ಕೇ ಮುಗಿಯಿತು, ಗೌತಮ ಈಗ ಅವರ ಸಮಾನ ಎಂದು ಹೇಳಿದರು. ಗೌತಮನಿಗೆ ತೃಪ್ತಿಯಾಗಲಿಲ್ಲ. ಮತ್ತೆ ಹುಡುಕಿ ಹೊರಟ. ಯಾರೋ ಅವನಿಗೆ ಸತ್ಯವನ್ನು ಕಾಣಲು ದೇಹದಂಡನೆಯ ಅಗತ್ಯದ ಬಗ್ಗೆ ಹೇಳಿದರು. ಊಟ, ನಿದ್ರೆಗಳನ್ನು ತ್ಯಜಿಸಿ ಹಠವಾದಿಯಂತೆ ಧ್ಯಾನಿಸತೊಡಗಿದ. ಅನೇಕ ವರ್ಷಗಳ ಬಳಿಕ ಗೌತಮ ತನ್ನ ಈ ಹಂತದ ಬಗ್ಗೆ ತಣ್ಣಗೆ, ನಸು ಹಾಸ್ಯದಿಂದ, ವಿಷಾದದಿಂದ ಹೇಳುತ್ತಿದ್ದ:
“ಆ ದಿನಗಳಲ್ಲಿ ನನ್ನ ಕೈಕಾಲುಗಳೆಲ್ಲ ಒಣಗಿದ ಬಳ್ಳಿಯಂತೆ, ಗಂಟುಗಂಟಾದ ಪುರಲೆಗಳಂತೆ ಆಗಿದ್ದವು; ನನ್ನ ಪುಷ್ಠ ಎಮ್ಮೆಯ ಗೊರಸಿನಂತೆ ಆಗಿತ್ತು; ನನ್ನ ಬೆನ್ನುಹುರಿ ಬಾಗಿದ ಚೆಂಡಿನ ಸರದಂತಾಗಿತ್ತು; ನನ್ನ ಎದೆಯ ಮೂಳೆಗಳು ಪಾಳುಬಿದ್ದ ಗುಡಿಸಲಿನಂತಾಗಿದ್ದವು; ನನ್ನ ಕಣ್ಣುಗಳು ತಮ್ಮ ಗುಳಿಯಲ್ಲಿ ಆಳವಾದ ಬಾವಿಯ ನೀರಿನಂತೆ ಕಾಣುತ್ತಿದ್ದವು; ನನ್ನ ತಲೆ ಬಿಸಿಲುಗಾಳಿಗೆ ಒಣಗಿದ ಸೋರೆಕಾಯಿಯಂತೆ ಆಗಿತ್ತು… ನನ್ನ ಹೊಟ್ಟೆಯ ಚರ್ಮ ಬೆನ್ನಿಗೆ ಅಂಟಿಕೊಂಡಿತ್ತು; ಬಹಿರ್ದೆಸೆಗೆ ಹೋಗಿ ಕೂತರೆ ಮುಖದ ಮೇಲೆ ನೆಲಕ್ಕೆ ಬಿದ್ದುಬಿಡುತ್ತಿದ್ದೆ; ನನ್ನ ಕೈಕಾಲುಗಳನ್ನು ತುರಿಸಿಕೊಂಡರೆ ಕೂದಲು ತಮ್ಮ ಬೇರು ಸಮೇತ ಕಿತ್ತುಕೊಂಡು ಬರುತ್ತಿದ್ದವು…”
ಈ ಸ್ಥಿತಿಯಿಂದ ಗೌತಮನಿಗೆ ಜ್ಞಾನೋದಯವಾಗಲಿಲ್ಲ. ಈ ಬಗೆಯ ದೇಹದಂಡನೆಯನ್ನು ಬಿಟ್ಟ, ಸುಜಾತ ಎಂಬ ಹೆಣ್ಣುಮಗಳು ಆತನಿಗೆ ಊಟ ನೀಡಿದಳು. ಅವನು ಸಹಜ ಮನುಷ್ಯನಂತೆ ಬದುಕುತ್ತ ಧ್ಯಾನಿಸಲು ಆರಂಭಿಸಿದಾಗ ಅವನ ಜೊತೆಗಾರರು ಕೆಲವರು ಆಕ್ಷೇಪಿಸಿ ಹೊರಟುಹೋದರು; ಗೌತಮ ಏಕಾಂಗಿಯಾಗಿ ಸತ್ಯ ಹುಡುಕತೊಡಗಿದ. ಮನುಷ್ಯ ತನ್ನ ಬಡತನ, ರೋಗ, ಸಾವು, ನೋವು, ಅನ್ಯಾಯಗಳನ್ನು ಗೆಲ್ಲುವ ಸಾಧ್ಯತೆಗಳನ್ನು ಹುಡುಕತೊಡಗಿದ. ನಿರ್ವಾಣ, ಮೋಕ್ಷ ಸಾಧ್ಯವೇ ಎಂದು ನೋಡಿದ. ದೇವರ ಅಸ್ತಿತ್ವಕ್ಕಾಗಿ ತಡಕಾಡಿದ.
ಹುಟ್ಟಿದಂತೆಯೇ ವೈಶಾಖ ಶುದ್ಧ ಪೂರ್ಣಿಮೆಯಂದು ಗೌತಮನಿಗೆ ಉತ್ತರ ದೊರಕಿತು. ಅದನ್ನು ಜ್ಞಾನೋದಯ ಎಂದು ಅನೇಕರು ಕರೆದರು. ಹಾಗೆ ಗೌತಮ ಎಂದೂ ಹೇಳಿಕೊಳ್ಳಲಿಲ್ಲ. ನಾನು ಕೂಡ ಅದನ್ನು ಜ್ಞಾನೋದಯ ಎಂದು ಕರೆಯದೆ ಮನುಷ್ಯನ ದುಃಖಕ್ಕೆ ಇರಬಹುದಾದ ಉತ್ತರ ಎಂದು ಕರೆಯಲು ಆಶಿಸುತ್ತೇನೆ.
ಯಾಕೆಂದರೆ ಗೌತಮನಲ್ಲಿ ಜ್ಞಾನೋದಯವಾದ ಒಂದೇ ಒಂದು ಸೂಚನೆ ಇದ್ದದ್ದು ಆತನ ಪ್ರಶಾಂತತೆಯಲ್ಲಿ; ಮನುಷ್ಯನ ಬಗ್ಗೆ ತಿಳಿವಳಿಕೆಯಲ್ಲಿ. “ದೇವರು ಇದ್ದಾನೆಯೆ?” ಎಂಬ ಪ್ರಶ್ನೆಗೆ ಗೌತಮನಲ್ಲಿ ಉತ್ತರವಿರಲಿಲ್ಲ. “ಆತ್ಮ ಎಂಬುದು ಇದೆಯೇ?” ಎಂಬುದಕ್ಕೆ ಆತನಲ್ಲಿ ಉತ್ತರವಿರಲಿಲ್ಲ. ತನಗೆ ಗೊತ್ತಿಲ್ಲದ್ದನ್ನು ಹೇಳಲು ನಿರಾಕರಿಸುವ ಗೌತಮನ ಜ್ಞಾನೋದಯ ಮನುಷ್ಯನ ಬದುಕಿನ ವಿವರಗಳನ್ನು ಒಳಗೊಂಡಿತ್ತು.
ಸಂನ್ಯಾಸ, ಧ್ಯಾನ, ತಪಸ್ಸುಗಳು ಸಾಮಾನ್ಯ ಮನುಷ್ಯನಲ್ಲಿ ಗೌರವದ ಜೊತೆಗೆ ಅಂಜಿಕ ಹುಟ್ಟಿಸುತ್ತವೆ. ಅವೆಲ್ಲ ತನ್ನಿಂದ ಸಾಧ್ಯವಾಗುವುದಿಲ್ಲ, ತನ್ನ ಸಣ್ಣಪುಟ್ಟ ಸಂತೋಷಗಳೊಂದಿಗೆ ಹೊಂದಿಕೊಳ್ಳುವುದಿಲ್ಲ ಎಂದುಕೊಳ್ಳುವ ಗೌತಮ ನಂತರ ಅವನ್ನೆಲ್ಲ ಹೊಕ್ಕು ಪರೀಕ್ಷಿಸಿ ಹೊರಬಂದ ಮೇಲೆ ಒಂದು ಘಟನೆ ನಡೆಯುತ್ತದೆ.
ಗೌತಮ ಉಪವಾಸ, ದೇಹದಂಡನೆ ಇತ್ಯಾದಿಗಳನ್ನು ಬಿಟ್ಟೊಡನೆ ಅವನನ್ನು ಬಿಟ್ಟು ಹೊರಟುಹೋದ ಗೆಳೆಯರನ್ನು ಕಾಣುತ್ತಾನೆ, ತನಗೆ ಮನುಷ್ಯನ ದುರಂತಕ್ಕೆ ಉತ್ತರ ದೊರಕಿದೆ ಎಂದು ಹೇಳುತ್ತಾನೆ. ಆ ಗೆಳೆಯರು ನಂಬುವುದಿಲ್ಲ, “ಎಲ್ಲರಂತೆ ಬದುಕಿದ ನಿನಗೆ ಜ್ಞಾನೋದಯವಾಗಿರುವುದು ಸಾಧ್ಯವಿಲ್ಲ” ಎಂದು ಹೇಳುತ್ತಾರೆ.
ಗೌತಮ ಏನು ಹೇಳಿದರೂ ನಂಬುವುದಿಲ್ಲ, ಆಗ ಗೌತಮ ಅನ್ಯೋನ್ಯತೆಯಿಂದ, “ನನ್ನ ಧ್ವನಿ ಮುಂಚಿನಂತಿದೆಯೇ? ನನ್ನ ಮಾತು ಬೇರೆ ಥರ ಎನಿಸುವುದಿಲ್ಲವೆ?” ಎಂದು ಕೇಳುತ್ತಾನೆ. ಆಗ ಅವರಿಗೆ ಗೌತಮನಲ್ಲಿ ಏನೋ ಹೊಸತು ಗೋಚರವಾಗುತ್ತದೆ. ಗೌತಮನ ಜೊತೆಗಾರಿಕೆಯಲ್ಲಿ ಆತನ ತಿಳಿವಳಿಕೆಯ ಅರಿವಾಗುತ್ತದೆ.
ದೇಶದ ಉದ್ದಗಲಕ್ಕೆ ಓಡಾಡಿದ ಸಿದ್ಧಾರ್ಥ ಜನಕ್ಕೆ ಬೋಧಿಸುತ್ತಿದ್ದುದು ಸರಳವಾಗಿತ್ತು. ‘ಆಶೆಯೇ ದುಃಖಕ್ಕೆ ಮೂಲ’ ಎಂದು ಹೇಳುತ್ತಿದ್ದ. ನೀತಿ, ವಿನಯ, ಪ್ರಾಮಾಣಿಕತೆಯನ್ನು ಬೋಧಿಸುತ್ತಿದ್ದ. ಒಮ್ಮೆ “ತಪ್ಪಿತಸ್ಥರನ್ನು ಶಿಕ್ಷಿಸುವುದರಿಂದ ಅಪರಾಧ ಕಮ್ಮಿಯಾಗುವುದಿಲ್ಲ” ಎಂದು ಹೇಳಿದ. ಅದರ ಬಗ್ಗೆ ವಿವರಣೆ ಕೇಳಿದಾಗ ಸಿದ್ಧಾರ್ಥ ಯಾವುದೇ ಪವಾಡದ ಬಗ್ಗೆ, ದೇವರನ್ನು ಕುರಿತ ಭಯದ ಬಗ್ಗೆ ಹೇಳಲಿಲ್ಲ. “ಬಡತನದ ನಿವಾರಣೆಯಾದರೆ ಮಾತ್ರ ಅಪರಾಧ, ಕ್ರೌರ್ಯ, ಅನ್ಯಾಯಗಳು ಹೋಗುತ್ತವೆ” ಎಂದು ಹೇಳಿದ. “ಶ್ರೀಮಂತರಾದರೆ?” ಎಂದು ಕೇಳಿದರೂ ಸಿದ್ಧಾರ್ಥ ಶ್ರೀಮಂತರ ದಾಹ, ಸ್ವಾರ್ಥ, ಶೋಷಣೆಯ ಬಗ್ಗೆ ಹೇಳುತ್ತಿದ್ದ. ಈತನ ಬೋಧನೆ ಎಲ್ಲರಿಗೆ ಗೊತ್ತಿರುವುದರಿಂದ ಇಲ್ಲಿ ಮತ್ತೆ ಹೇಳಬೇಕಿಲ್ಲ.
ಆದರೆ ಸರಿಯಾಗಿ ಎರಡೂವರೆ ಸಾವಿರ ವರ್ಷದ ಹಿಂದೆ ಬದುಕಿದ್ದ ಈ ಮನುಷ್ಯನ ವ್ಯಕ್ತಿತ್ವ ನೋಡಿ. ಅರಮನೆ, ದೇವಾಲಯಗಳನ್ನು ಬಿಟ್ಟು ನಿರ್ವಾಣವನ್ನು ಕಂಡುಕೊಳ್ಳಲು ಹೊರಟ ಈತ ದೇವರನ್ನು ತಲುಪಲಿಲ್ಲ. ಮನುಷ್ಯರನ್ನು ತಲುಪಿದ. ಅದು ಪ್ರೀತಿಯ ಮೂಲಕ, ನಿರ್ಮೋಹದ ನೋಟದ ಮೂಲಕ. ಸಿದ್ಧಾರ್ಥನಿಗೆ ವಯಸ್ಸಾದಂತೆಲ್ಲ ಆತನ ಸಹಜತೆ ಕೂಡ ಬೆಳೆಯುತ್ತಿತ್ತು.
ಗಾಢ ವ್ಯಾಮೋಹ, ದುಃಖ, ಸಾವುನೋವು, ವಿರಹಗಳ ಬಲೆಯಲ್ಲಿ ಬಿದ್ದ ಮನುಷ್ಯನ ಅಸಹಾಯಕ ಸ್ಥಿತಿಗೆ ಪರಿಹಾರವಾಗಿ ಈತನಲ್ಲಿ ಅಪಾರ ಪ್ರೀತಿ ಮಾತ್ರ ಇತ್ತು. ಲಕ್ಷಾಂತರ ಶಿಷ್ಯರು, ಅಭಿಮಾನಿಗಳನ್ನು ಪಡೆದಿದ್ದ ಬುದ್ಧ ಶಿಸ್ತಿಗೆ, ದಕ್ಷತೆಗೆ ಪ್ರಖ್ಯಾತನಾಗಿದ್ದ. ಈತನ ಆಶ್ರಮಗಳು ನಡೆಯುತ್ತಿದ್ದ ಬಗೆಯನ್ನು, ಈತನ ಅನುಯಾಯಿಗಳ ಜೀವನ ಕ್ರಮವನ್ನು ಗಮನಿಸಿದ ರಾಜನೊಬ್ಬ, “ನನ್ನೆಲ್ಲ ಸೈನ್ಯ, ಶಕ್ತಿ ಬಳಸಿದರೂ ಪ್ರಜೆಗಳಲ್ಲಿ ಈ ಶಿಸ್ತು ತರಲಾಗುತ್ತಿಲ್ಲ” ಅಂದ. ಅದಕ್ಕೆ ಸಿದ್ಧಾರ್ಥ, “ವಿಶ್ವಾಸ, ಪ್ರೀತಿ ಇದ್ದಲ್ಲಿ ಮಾತ್ರ ಶಿಸ್ತು ಸಾಧ್ಯ” ಎಂದು ಹೇಳಿದ.
ಸಿದ್ಧಾರ್ಥ ಜ್ಞಾನಿಯಾಗಿದ್ದ, ವಿದ್ವಾಂಸನಾಗಿರಲಿಲ್ಲ. ಗೊಡ್ಡು ಪಾಂಡಿತ್ಯ ಕಂಡು ವಿಸ್ಮಿತನಾಗುತ್ತಿದ್ದ. ಪ್ರಖಾಂಡ ಪಂಡಿತನೊಬ್ಬ ತನ್ನ ಪಾಂಡಿತ್ಯದಿಂದ ಎಲ್ಲರಿಗೂ ಮುಖಭಂಗ ಮಾಡುವುದರಲ್ಲಿ ನಿಷ್ಣಾತನಾಗಿದ್ದ. ಆತ ಸಿದ್ಧಾರ್ಥನನ್ನು ವಾದದಲ್ಲಿ ಸೋಲಿಸುವ ಸಲುವಾಗಿ ಬಂದು “ಬ್ರಾಹ್ಮಣನ ಮುಖ್ಯ ಲಕ್ಷಣಗಳೇನು?” ಎಂದು ಕೇಳಿದ. ಆಗ ಬುದ್ಧ ಗಂಭೀರವಾಗಿ, “ನೀಚತನದಿಂದ ಮುಕ್ತನಾದವನು, ಪರಿಶುದ್ಧ ಹೃದಯವುಳ್ಳವನು ಮತ್ತು ಇತರರ ಮುಖಭಂಗ ಮಾಡದಿರುವವನು” ಅಂದು ನಸುನಕ್ಕ.
ಗೌತಮನ ಮನುಷ್ಯತ್ವ, ಹಾಸ್ಯ, ರಸಿಕತೆ, ಭೂತದಯೆ, ಜೀವನ ಪ್ರೇಮವನ್ನು ಒಳಗೊಂಡಿತ್ತು. ಆತ ತಾನು ಕಂಡ ನದಿ, ಬೆಟ್ಟ, ಕಾಡುಗಳನ್ನು, ತನ್ನ ಪ್ರೀತಿಯ ಸ್ಥಳಗಳನ್ನು ಕುರಿತು ಭಾವುಕನಾಗಿ ಮಾತನಾಡುತ್ತಿದ್ದ. ಅನೇಕ ಸಲ ನೀನು ಈ ಭೂಮಿಯಲ್ಲಿ ಸ್ವರ್ಗ ಕಾಣಬೇಕೆಂದಿದ್ದರೆ ಈ ಜಿಲ್ಲೆಯ ಗಿರಿಜನರ ಹೆಣ್ಣುಮಕ್ಕಳನ್ನು ನೋಡು- ಎಂದು ಹೇಳಬಲ್ಲವನಾಗಿದ್ದ.
ಮುಖ್ಯವಾಗಿ ಈ ಸತ್ಯಶೋಧಕ ಸಿದ್ಧಾರ್ಥನ ಎದುರು ಜನ ಯಕ್ಷಿಣಿಗಾಗಿ, ಪವಾಡಕ್ಕಾಗಿ ಸೇರುತ್ತಿರಲಿಲ್ಲ. ಆತನ ಪ್ರೀತಿಯ ಸಂಗಕ್ಕಾಗಿ, ಆತನ ತಾಯ್ತನಕ್ಕಾಗಿ ಸೇರುತ್ತಿದ್ದರು. ನೊಂದ, ಅನ್ಯಾಯಕ್ಕೊಳಗಾದ, ಕ್ರೌರ್ಯದಲ್ಲಿ ಬೆಂದವರೆಲ್ಲ ಅಲ್ಲಿ ಪ್ರೀತಿ ಎಂಬ ಜ್ಞಾನದಲ್ಲಿ ಸ್ವಸ್ಥರಾಗುತ್ತಿದ್ದರು.
ಈಗ ಕೇಳಿಕೊಳ್ಳಿ. ಆತ ಇದಕ್ಕಾಗಿ ತನ್ನ ರಾಜ್ಯ ಬಿಟ್ಟಿದ್ದು ಸರಿಯೆ? ಆಡಳಿತಗಾರನಾಗಿ ಏನನ್ನಾದರೂ ಸಾಧಿಸಲು ಆಗುತ್ತಿರಲಿಲ್ಲವೆ? ಇದಕ್ಕೆ ನನ್ನಲ್ಲಿ ಒಂದು ಸಣ್ಣ ಉತ್ತರವಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ, ನೆಹರೂ, ಪಟೇಲರೆಲ್ಲ ಸಂಭ್ರಮದಿಂದ ಕೂಗಾಡುತ್ತಿದ್ದ ದಿನ ಗಾಂಧೀಜಿ ಕಲ್ಕತ್ತಾದಲ್ಲಿ ಒಬ್ಬೊಂಟಿಯಾಗಿ ಓಡಾಡುತ್ತಿದ್ದರು.
ಎರಡೂವರೆ ಸಾವಿರ ವರ್ಷಗಳ ಬಳಿಕ ಬುದ್ಧನ ಅಂಶಗಳನ್ನು ಪಡೆದು ಬಂದ ಗಾಂಧಿ ಪ್ರಧಾನಿಯಾಗಿ ಆಗಲಿ, ರಾಷ್ಟ್ರಾಧ್ಯಕ್ಷರಾಗಿ ಆಗಲೀ ಅಧಿಕಾರ ಸ್ವೀಕರಿಸುವ ಸ್ಥಿತಿಯಲ್ಲಿ ಇರಲಿಲ್ಲ. ಆ ಬಾಪುವಿನದು ಕೂಡ ಬುದ್ಧನ ದಾರಿಯಾಗಿತ್ತು.
ಈತ ಕೂಡ ಸತ್ಯವನ್ನು, ದೇವರನ್ನು ಹುಡುಕುತ್ತಾ ಹೋಗಿ, ಬದುಕಿನ ವಿರೋಧಾಭಾಸಗಳನ್ನು, ಜೀವಸೆಲೆಗಳನ್ನು ಹುಡುಕುತ್ತಾ ಹೋಗಿ ಸರಳ ಕಾಣ್ಕೆಯನ್ನು ಕಂಡುಕೊಂಡಿದ್ದರು. ಈಶ್ವರನಿಗಾಗಿ ಹುಡುಕಾಟದಿಂದಾಗಿಯೇ ನಿರೀಶ್ವರವಾದಿಯ ನಿಷ್ಠುರತೆಯನ್ನೂ, ದುರಂತ ಪ್ರಜ್ಞೆಯನ್ನೂ ಪಡೆದುಕೊಂಡಿದ್ದರು. ಸಿದ್ಧಾರ್ಥನಂತೆಯೇ ಕನಿಷ್ಠ ಜೀವಿಯಲ್ಲೂ ಗಾಢ ಪ್ರೀತಯನ್ನು ಇಟ್ಟಿದ್ದ ಗಾಂಧಿ ಮನುಷ್ಯ ತನಗಾಗಿ ಸೃಷ್ಟಿಸಿಕೊಂಡಿರುವ ಜಾತಿ, ಮೂಢನಂಬಿಕೆ, ಕ್ರೌರ್ಯ, ಅಸಹಾಯಕತೆಯನ್ನು ಕಂಡು ತಮ್ಮ ಸರಳ ಸಿದ್ಧಾಂತಗಳನ್ನು ರೂಪಿಸಿಕೊಂಡಿದ್ದರು.
ಸಿದ್ಧಾರ್ಥನನ್ನು ಆತನ ಕಾಣ್ಕೆಯೊಂದಿಗೇ ಹೊರಗಟ್ಟಿದ್ದ ಭಾರತೀಯ ಗಾಂಧಿಯನ್ನೂ ಇಟ್ಟುಕೊಳ್ಳಲಿಕ್ಕಿಲ್ಲ. ಅಂದರೆ ಅವರ ಪ್ರೇಮವನ್ನು, ತಾಯ್ತನವನ್ನು, ಸರಳ ನೆಮ್ಮದಿಯನ್ನು. ಯಾವ ಅಧಿಕಾರದ ಗದ್ದುಗೆಯೂ, ಸೈನ್ಯದ ಆರ್ಭಟವೂ ಮನುಕುಲಕ್ಕೆ ನೀಡಲಾರದ ಕಾಣಿಕೆ ಇದು.
(ಡಿಸೆಂಬರ್ 28, 1986)-ಟೀಕೆ-ಟಿಪ್ಪಣಿ ಪುಸ್ತಕದಿಂದ (ಸಂಪುಟ-01, 1991)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಆತ್ಮಕತೆ | ಸರಳ ಹಾಗೂ ಒಲವಿನ ಮದುವೆಗಳ ಸಾಲುಸಾಲು
- ರುದ್ರಪ್ಪ ಹನಗವಾಡಿ
ನಾನು ಮದುವೆಯಾದ ಮೇಲೆ ನಮ್ಮೂರಿನಲ್ಲಿಯೇ 3-4 ಅಂತರ್ಜಾತಿ ಮದುವೆಗಳಾದವು. ಮೈಸೂರಿನಲ್ಲಿ ನಮ್ಮ ಜೊತೆಗಿದ್ದ ಪ್ರೊ. ಗೊಟ್ಟಿಗೆರೆ ಶಿವರಾಜು ಚನ್ನರಾಯ ಪಟ್ಟಣದಲ್ಲಿ ರಾಜ್ಯಶಾಸ್ತçದ ಅಧ್ಯಾಪಕನಾಗಿದ್ದ. ಅವನ ಸಹೋದ್ಯೋಗಿಗಳಾಗಿದ್ದ ನರಸಿಂಹಾಚಾರ್ ಇಂಗ್ಲಿಷ್ ಅಧ್ಯಾಪಕ ಮತ್ತು ಪ್ರೊ. ಸುಮತಿ ಎನ್. ಗೌಡ ಅಧ್ಯಾಪಕರಾಗಿದ್ದ ಅವರು ಪರಸ್ಪರ ಪ್ರೀತಿಸುತ್ತಿದ್ದರು.
ಅವರನ್ನು ನೇರ ಬಿಆರ್‌ಪಿಗೆ ಕರೆತಂದು, ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದನು. ನಾನು ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಕೃಷ್ಣಪ್ಪನವರಿಗೆ ಸುದ್ದಿ ಮುಟ್ಟಿಸಿ, ಮದುವೆಯ ಏರ್ಪಾಡು ಮಾಡಿದೆ. ಹುಡುಗಿ ಒಕ್ಕಲಿಗ ಜಾತಿ, ಹುಡುಗ ಬ್ರಾಹ್ಮಣನಾಗಿದ್ದ. ಸಹೋದ್ಯೋಗಿಗಳ ಪ್ರೀತಿಯ ಮದುವೆ ಮಾಡಿದ ಪ್ರೊ. ಜಿ.ಬಿ. ಶಿವರಾಜು ನಂತರ ದಿನಗಳಲ್ಲಿ ಗೌಡ ಜಾತಿಗೆ ಸೇರಿದ ಸಂಬಂಧಿಕರಿಂದ ಅನೇಕ ರೀತಿಯ ಕಿರುಕುಳಕ್ಕೂ ಒಳಗಾಗಬೇಕಾಯಿತು. ಆದರೆ ಈ ದಂಪತಿಗಳು ಶಿವರಾಜು ಪರ ಇರಬೇಕಾದವರು ನಂತರದ ದಿನಗಳಲ್ಲಿ ಇವರುಗಳಿಂದಲೇ ಕಿರುಕುಳ ಅನುಭವಿಸುವಂತೆ ಆದುದು ವಿಪರ್ಯಾಸವೇ ಸರಿ. ಮಾಡಿದ ಉಪಕಾರ ಸ್ಮರಣೆ ನಮ್ಮ ವ್ಯಕ್ತಿತ್ವದಲ್ಲಿ ಇರದಿದ್ದರೆ, ಮನುಷ್ಯನಿಂದ ಮತ್ತಿನ್ನೇನನ್ನು ಮಾಡಲು ಸಾಧ್ಯ?
ಈ ಸರಣಿಯಲ್ಲಿ ಇಲ್ಲಿಯೇ ಇನ್ನೊಬ್ಬನ ಕಥೆ ಹೇಳಿ ಮುಗಿಸುವೆ. ಬಳ್ಳಾರಿ ಮೂಲದ ಒಬ್ಬ ಡಾಕ್ಟರ್ ಮತ್ತು ಅವರ ಕೈಕೆಳಗೆ ಇದ್ದ ನರ್ಸ್ ಇಬ್ಬರೂ ಪ್ರೀತಿಸಿದ್ದು, ಮದುವೆಯಾಗುವ ತಯಾರಿಯಲ್ಲಿದ್ದರು. ಶಿವಮೊಗ್ಗದ ಕಡೆಯ ಗೆಳೆಯರೊಬ್ಬರ ಮೂಲಕ ನನ್ನಲ್ಲಿಗೆ ಬಂದರು. ಇಬ್ಬರೂ ಮದುವೆಗೆ ಅರ್ಹ ವಯಸ್ಸಿನವರಾಗಿದ್ದು, ಬೇರೆ ಬೇರೆ ಜಾತಿಯವರಾದ ಕಾರಣ, ಹುಡುಗಿಗೆ ನನ್ನದೇ ಮನೆ ವಿಳಾಸಕೊಟ್ಟು ಮದುವೆ ಮಾಡಿಸಿ ಕಳಿಸಿಕೊಟ್ಟೆವು. ನಾನಾಗ ಪ್ರೊಬೆಷನರಿ ತಹಸೀಲ್ದಾರ್‌ನಾಗಿ ತರೀಕೆರೆಯಲ್ಲಿದ್ದೆ. ಅಲ್ಲಿನ ಸಬ್ ರಿಜಿಸ್ಟ್ರಾರ್ ಚಳಗೇರಿ ಎನ್ನುವವರ ಜೊತೆ ಮಾತಾಡಿ ರಿಜಿಸ್ಟ್ರೇಷನ್ ಮುಗಿಸಿ ಕಳಿಸಿದೆ.
ಇದೆಲ್ಲ ಆಗಿ ಒಂದು ವಾರದಲ್ಲಿ ಹುಡುಗನ ಕಡೆಯ ನಿವೃತ್ತ ಸೇನಾ ಅಧಿಕಾರಿ ಬಂದು ಗಾಯತ್ರಿಯೊಬ್ಬಳೇ ಮನೆಯಲ್ಲಿದ್ದಾಗ ನನ್ನ ಬಗ್ಗೆ ಆಕ್ಷೇಪಿಸಿ ನಾನು ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರ ಸಂಬಂಧಿ, ನಿನ್ನ ಗಂಡನ ಕೆಲಸ ಕೂಡ ಕಳೆದುಕೊಳ್ಳುವಂತೆ ಮಾಡುತ್ತೇನೆ’ ಎಂದೆಲ್ಲ ಕೂಗಾಡಿ ಹೋಗಿದ್ದ. ನಾನು ತರೀಕೆರೆಯಿಂದ ಬಂದಾಕ್ಷಣ ಇವಳು ಆತಂಕದಿAದ `ನಾವೇನೋ ಮದುವೆಯಾಗಿದ್ದೇವೆ. ಬೇರೆಯವರ ಮದುವೆ ಮಾಡಲು ಹೋಗಿ ಯಾಕೆ ತೊಂದರೆಗೊಳಗಾಗಬೇಕೆಂದು’ ಅಲವತ್ತುಕೊಂಡಳು.
ನಾನು ಈ ರೀತಿ ಮದುವೆಗಳ ಬಗ್ಗೆ ಖಚಿತ ತಿಳುವಳಿಕೆಯುಳ್ಳವನಾಗಿದ್ದು, ಈ ಬಗ್ಗೆ ರಾಜ್ಯದಲ್ಲಿ ನಡೆದಿದ್ದ ಶಿವರಾಮ ಕಾರಂತ, ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಕೆ. ರಾಮದಾಸ್, ಕೃಷ್ಣಪ್ಪ, ಪ್ರೊ. ಎಂ. ನಂಜುಂಡಸ್ವಾಮಿ, ಪ್ರೊ. ರವಿವರ್ಮಕುಮಾರ್, ಹೀಗೆ ಮದುವೆಯಾದವರ ಬಗ್ಗೆ ಸಾಲು ಸಾಲು ಹೆಸರುಗಳನ್ನು ತಿಳಿಸಿ ಗಾಯತ್ರಿಗೆ ಸಮಾಧಾನ ಮಾಡುತ್ತಿದ್ದೆ.
ನಾವು ಮದುವೆಯಾಗಿ ಆರು ತಿಂಗಳು ಆಗಿರಲಿಲ್ಲ, ನಮ್ಮ ವಿದ್ಯಾರ್ಥಿಯೊಬ್ಬರ ಅಕ್ಕ ಪ್ಲಾರಿ ಬಿಆರ್‌ಪಿ ಹತ್ತಿರವಿರುವ ಜಂಕ್ಷನ್‌ನಿಂದ ಭದ್ರಾವತಿಗೆ ಸ್ಟೆಫೆಂಡಿಯರಿ ಗ್ರಾಜ್ಯುಯೇಟ್ ಸ್ಕೀಂನಲ್ಲಿ ತಾಲ್ಲೂಕು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಹುಡುಗ ಸಿದ್ದಯ್ಯ ಭದ್ರಾವತಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಆತ ಬಿಆರ್‌ಪಿ ಹತ್ತಿರದ ಶಾಂತಿನಗರದಿಂದ ದಿನವೂ ಬಸ್‌ನಲ್ಲಿ ಓಡಾಡುತ್ತಿರುವಾಗ ಪರಿಚಯವಾಗಿ ಪ್ರೀತಿಯ ಸೆಳೆತದಲ್ಲಿದ್ದರು. ಒಂದು ದಿನ ಬೆಳಗಿನ ಜಾವ ಹುಡುಗನ ಅಣ್ಣ ಬಂದು ಅವರಿಬ್ಬರ ಪ್ರೀತಿಗೆ ತಮ್ಮ ಒಪ್ಪಿಗೆ ಇದ್ದು ಹುಡುಗಿ ಕಡೆಯವರು ಒಪ್ಪುವುದಿಲ್ಲ, ಮದುವೆ ಮಾಡಿಸಬೇಕಾಗಿ ಕೋರಿದ.
ಹುಡುಗಿಯ ತಮ್ಮ ನನ್ನ ವಿಭಾಗದಲ್ಲಿಯೇ ನೇರ ವಿದ್ಯಾರ್ಥಿಯಾಗಿದ್ದ. ಈಗಾಗಲೇ ನಮ್ಮ ವಿಭಾಗದಲ್ಲಿ ಇವರು ಬರೀ ಇಂತದೇ ಕೆಲಸ ಮಾಡುತ್ತಿರುತ್ತಾನೆಂದು ಅಪಪ್ರಚಾರ ಬೇರೆ ಮಾಡುತ್ತಿದ್ದರು. ಆದರೂ ಎಲ್ಲ ಸೇರಿಕೊಂಡು ಇಂದಿರಾ ಕೃಷ್ಣಪ್ಪನವರಿಗೆ ತಿಳಿಸಿ ಭದ್ರಾವತಿಯಲ್ಲಿ ಮದುವೆ ನಡೆಸಲಾಯಿತು. ಮದುವೆಯಾದ ನಂತರ ಹೆಣ್ಣಿನ ಕಡೆಯವರು ನನ್ನನ್ನು ಹೊಡೆಯಲು ಜಂಕ್ಷನ್ ಎಂಬಲ್ಲಿ ಕಾಯುತ್ತಿದ್ದಾರೆ, ಇಲ್ಲಿ ಕಾಯುತ್ತಿದ್ದಾರೆ ಎಂದು ಪುಕಾರು ಹಬ್ಬಿಸುತ್ತಿದ್ದರು. ಆದರೆ ದಿನಗಳೆದಂತೆ ಹುಡುಗ-ಹುಡುಗಿಯ ಮದುವೆಯನ್ನು ಈರ್ವರ ಕಡೆಯವರು ಒಪ್ಪಿ ನಂತರ ನಮ್ಮ ಕಡೆಗೆ ದೂರುವುದನ್ನು ನಿಲ್ಲಿಸಿದರು. ಈಗ ಇಬ್ಬರೂ ತಮ್ಮ ವೃತ್ತಿಯಲ್ಲಿ ಮುಂದುವರಿದು ಮಕ್ಕಳೊಂದಿಗೆ ಆರೋಗ್ಯಕರ ಜೀವನ ಸಾಗಿಸುತ್ತಿದ್ದಾರೆ.
ಹೀಗೆ ಶಿವಮೊಗ್ಗ, ಭದ್ರಾವತಿಯಲ್ಲಿ ಕೃಷ್ಣಪ್ಪನವರು ಪ್ರಾರಂಭಿಸಿದ ಒಲವಿನ ಸರಳ ಮದುವೆಗಳು ಸಾಲು ಸಾಲಾಗಿ ನಡೆಯುತ್ತಾ, ಡಿ.ಎಸ್.ಎಸ್. ಮತ್ತು ರೈತ ಸಂಘದ ಅನೇಕ ಕಾರ್ಯಕರ್ತರು ತಮ್ಮ ಕಾರ್ಯಸೂಚಿಯಲ್ಲಿ ಕಾರ್ಯಗತ ಮಾಡಬೇಕಾದ ಜವಾಬ್ದಾರಿ ಎಂಬಂತೆ ಸರಳ ಅಂತರ್‌ಜಾತಿ ಮದುವೆಗಳನ್ನು ನಡೆಸುವಂತಾಯಿತು. ಅದು ಇಂದಿಗೂ ಕರ್ನಾಟಕದಲ್ಲಿ ನಡೆದುಕೊಂಡು ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಆತ್ಮಕತೆ | ನಮ್ಮ ಬಿಆರ್‌ಪಿ ಸ್ನಾತಕೋತ್ತರ ಕೇಂದ್ರ
- ರುದ್ರಪ್ಪ ಹನಗವಾಡಿ
ದಟ್ಟ ಮಲೆನಾಡಲ್ಲದಿದ್ದರೂ ಮಳೆಗಾಲದಲ್ಲಿ ಹೆಚ್ಚು ಮಳೆ ಸುರಿದು ನಿಸರ್ಗ ಸೌಂದರ್ಯವನ್ನು ಹೆಚ್ಚಿಸುತ್ತಿತ್ತು. ಆದರೆ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಶಾಖೆಗಳಾಗಲೀ, ಒಂದು ಸ್ವತಂತ್ರ ವಿಶ್ವವಿದ್ಯಾಲಯವಾಗುವ ಯಾವ ತಯಾರಿಯೂ ಕಾಣುತ್ತಿರಲಿಲ್ಲ.
ಪ್ರಾರಂಭದಿಂದ ಇದ್ದ, ನಾಲ್ಕು ವಿಭಾಗಗಳು ಮತ್ತು 15-16ಜನ ಅಧ್ಯಾಪಕರುಗಳಾಗಿದ್ದನ್ನು ಬಿಟ್ಟರೆ ವಿಕಾಸದ ಯಾವ ಲಕ್ಷಣಗಳೂ ಇರಲಿಲ್ಲ. ನಾನು ಬಂದು ನಾಲ್ಕು ವರ್ಷಗಳಲ್ಲಿ ನನ್ನ ಜೀವನದಲ್ಲಿ ಮದುವೆ ಮತ್ತು ನಮಗೆ ಮಗುವಾದುದ್ದನ್ನು ಬಿಟ್ಟರೆ ಸ್ನಾತಕೋತ್ತರ ಕೇಂದ್ರದ ಬೆಳವಣಿಗೆಯಲ್ಲಿ ಮತ್ತೇನೂ ಬೆಳವಣಿಗೆಗಳು ನಡೆಯಲಿಲ್ಲ.
ಸ್ವಂತ ವಿಷಯದಲ್ಲಿ ನಾನು ಆರ್ಥಿಕ ಸಂಕಷ್ಟಕ್ಕೆ ಬಿದ್ದಿದ್ದೆ. ಮದುವೆಯಾಗುವ ಯಾವ ಪೂರ್ವಭಾವಿ ತಯಾರಿ ಇಲ್ಲದೆ ತಕ್ಷಣ ಆಗಬೇಕಾದ ಕಾರಣ ಸುಮಾರು 15 ಸಾವಿರದಷ್ಟು ವಿಶ್ವಾಸಿಕ ಸ್ನೇಹಿತರಿಂದ ಸಾಲ ಮಾಡಿದ್ದೆ. ಹೊಸ ಸಂಸಾರ ಹೂಡಿಕೆಗೆ ಬೇಕಾದ ಕನಿಷ್ಠ ಸೌಕರ್ಯಗಳೂ ಇಲ್ಲದೆ ಇದ್ದರೂ ಸದ್ಯ ಪಿಡಬ್ಲೂಡಿ ಕ್ವಾಟ್ರಸ್ ಒಂದನ್ನು ಅಲಾಟ್‌ಮೆಂಟ್ ಮಾಡಿಸಿಕೊಂಡಿದ್ದೆ. ಹಾಗಾಗಿ ಮದುವೆಯಾದಾಕ್ಷಣ ಉಳಿದುಕೊಳ್ಳಲು ಅದು ಅನುಕೂಲವಾಗಿತ್ತು. ಪ್ರಭು ಮತ್ತು ರೈತಸಂಘದ ಮಂಜಪ್ಪ, ಸ್ಟೀಲ್ ಅಂಗಡಿ ಶಾಂತು ಎಲ್ಲ ಶಿವಮೊಗ್ಗದಲ್ಲಿ ಪ್ರಭುವಿನ ಸ್ನೇಹಿತರಾಗಿದ್ದರು. ಬೇಕಾದ ಕನಿಷ್ಠ ಪಾತ್ರೆಗಳನ್ನು ಅವನ ಸ್ನೇಹಿತನಿಂದಲೇ ಸಾಲವಾಗಿ ತಂದಿದ್ದೆ. ಉಳಿದಂತೆ ಅವಶ್ಯ ಬಿದ್ದಾಗ ನನ್ನ ಸ್ನೇಹಿತರಾಗಿದ್ದ ಪ್ರಭು, ಜಿಎನ್‌ಕೆ ಜೊತೆ ಸಾಲ ಮಾಡಿ ತೀರಿಸೋ ವ್ಯವಸ್ಥೆಯಲ್ಲಿ ದಿನಗಳು ಕಳೆಯುತ್ತಿದ್ದವು.
ಆರ್ಥಿಕ ಸಂಕಷ್ಟ ಬಿಟ್ಟರೆ ನಮ್ಮಿಬ್ಬರ ಹೊಂದಾಣಿಕೆ ಅನನ್ಯವಾಗಿತ್ತು. ಬೇಂದ್ರೆಯವರ ಕವನದ ಸಾಲಿನಂತೆ
‘ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು’ ಎಂಬಂತೆ ಪ್ರೀತಿಯಲ್ಲಿ ಮುಳುಗಿ ಹೋಗಿದ್ದೆವು.
ರಜಾ ದಿನಗಳಲ್ಲಿ ಬಿಆರ್‌ಪಿಯಲ್ಲಿ ಇದ್ದ ಟೆಂಟ್ ಸಿನಿಮಾಕ್ಕೆ ಇಲ್ಲವೇ ಶಿವಮೊಗ್ಗಕ್ಕೆ ರಾಜಕುಮಾರ್ ಅವರ ಹೊಸ ಸಿನಿಮಾಗಳಿಗೆ ಹೋಗಿ ಬರುತ್ತಿದ್ದೆವು. ಇಂದಿರಾ ಕೃಷ್ಣಪ್ಪನವರ ಭದ್ರಾವತಿ ಮನೆಗೆ ರಜಾ ದಿನಗಳಲ್ಲಿ ಹೋಗಿ ಬರುತ್ತಿದ್ದೆವು. ಮದುವೆಯಾದಾಕ್ಷಣ ಎಲ್ಲೂ ‘ಹನಿಮೂನ್’ಗೆಂದು ತಿರುಗಾಡಲು ಹೋಗಲಿಲ್ಲ. ಇದ್ದ ಸ್ನೇಹಿತರ ಮನೆ ಕಡೆಗೆ ಹೋಗಿ ಕಾಲ ಕಳೆದು ಬರುತ್ತಿದ್ದೆವು. ಕುಮ್ಮೂರ ಬಸವಣ್ಯಪ್ಪ, ಉಮಾ ಚಿತ್ರದುರ್ಗದಲ್ಲಿ ಇಬ್ಬರೂ ಜ್ಯೂನಿಯರ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಅವರ ಮನೆಯಲ್ಲಿ ಉಳಿದು ಚಿತ್ರದುರ್ಗದ ಕೋಟೆಯನ್ನು ಇಬ್ಬರೇ ಸುತ್ತಿಕೊಂಡು ಬಂದು ಮಾರನೆ ದಿನ ಚಳ್ಳಕೆರೆಗೆ ಹೋಗಿದ್ದೆವು.
ಚಳ್ಳಕೆರೆಯಲ್ಲಿ ಗಾಯತ್ರಿಯ ಸೀನಿಯರ್ ಮತ್ತು ನನ್ನ ಹಳೇ ವಿದ್ಯಾರ್ಥಿನಿ ಶಾರದಾ, ಡಾ. ಚಂದ್ರಶೇಖರ್ ಎಂಬ ಅವರ ಸೋದರ ಮಾವನನ್ನು ಮದುವೆಯಾಗಿ ಅಲ್ಲಿನ ಪಿಹೆಚ್‌ಸಿಯಲ್ಲಿ ಡಾಕ್ಟರ್ ಆಗಿ ಕೆಲಸದಲ್ಲಿದ್ದರು. ನಾವಿದ್ದ ಎರಡೂ ದಿನಗಳಲ್ಲ್ಲಿ ಅಕ್ಕರೆಯಿಂದ ವಿಶೇಷ ಅಡುಗೆ ಮಾಡಿ ತುಂಬ ವಾತ್ಸಲ್ಯದಿಂದ ನಮ್ಮನ್ನು ಸತ್ಕರಿಸಿದ್ದಳು. ಅವರಿಬ್ಬರ ಅಕ್ಕರೆಯ ಆತಿಥ್ಯ ನಾವಿಬ್ಬರೂ ಎಂದೂ ಮರೆಯಲಾಗದ ನೆನಪಾಗಿ ಉಳಿದಿದೆ. ಆ ನಂತರದ ದಿನಗಳಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಶಾರದ ಎಲ್ಲಿದ್ದಾರೆ ಎಂಬುದು ತಿಳಿಯದೆ 40 ವರ್ಷಗಳೇ ಕಳೆದು ಹೋಗಿದ್ದವು.
ಈಗ್ಗೆ ಎರಡು ವರ್ಷಗಳಲ್ಲಿ ಯರ‍್ಯಾರನ್ನೋ ಕೇಳಿ, ಅವರ ವಿಳಾಸ ಪಡೆದು ನಾವಿಬ್ಬರು ನೆನಪು ಮಾಡಿ ಮಾತಾಡಿದೆವು. ಮನೆಗೆ ಆಹ್ವಾನಿಸಿದ ಮೇರೆಗೆ ಇತ್ತೀಚೆಗಷ್ಟೆ ಬಂದು ಹೋಗಿದ್ದಳು. ಹೀಗೆ ಬಂದು ಹೋಗಿ 3 ತಿಂಗಳಲ್ಲಿ ಹೃದಯಾಘಾತದಿಂದ ಶಾರದಾ ತೀರಿಕೊಂಡಳು. ಇಷ್ಟು ದೀರ್ಘ ಕಾಲದ ಅಜ್ಞಾತವಾಸದ ಕಾರಣ ತಿಳಿದು ಬೇಸರವಾಗಿತ್ತು. ಶಾರದಾ-ಚಂದ್ರಶೇಖರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬಳು ಅಕಾಲಿಕ ಮರಣ ಹೊಂದಿದ್ದಳು.
ಇನ್ನೊಬ್ಬಳು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಳಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ. ಗಂಡ ಡಾಕ್ಟರ್ ಆಗಿದ್ದರೂ ಮನೆಯಲ್ಲಿ ಒಂದು ಎಮ್ಮೆ ಸಾಕಿಕೊಂಡು ಮೇಯಿಸುತ್ತಾ ಗಂಡ ಮಕ್ಕಳಿಗೆ ಹಾಲು, ಮಜ್ಜಿಗೆ ಮಾಡಿ ಉಣಿಸುತ್ತಿದ್ದ ಶಾರದಾ ಅವರಿಗೆ ಬದುಕಿನಲ್ಲಿ ನೆಮ್ಮದಿಗಿಂತ ನೋವೇ ಜಾಸ್ತಿಯಾಗಿದ್ದೊಂದು ವಿಷಾದದ ಸಂಗತಿ. ಒಳ್ಳೆಯ ಮನಸ್ಸುಗಳಿಗೆ ನೋವುಗಳೇ ಹೆಚ್ಚೆಂಬುದು ಅವಳ ವಿಚಾರದಲ್ಲಿ ನಿಜವಾಗಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು
- ರುದ್ರಪ್ಪ ಹನಗವಾಡಿ
ಇದೆಲ್ಲ ಹೊರಗಿನದಾದರೆ ನಮ್ಮ ವಿಭಾಗದಲ್ಲಿ ಸ್ವಲ್ಪ ಬದಲಾವಣೆಗಳಾಗಿದ್ದವು. ನಮ್ಮ ಜೊತೆಗಿದ್ದ ಡಾ. ಕೆ.ಎಂ. ನಾಯ್ಡು ಅವರು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದ ಹೊಸ ಸ್ನಾತಕೋತ್ತರ ಕೇಂದ್ರಕ್ಕೆ ಮುಖ್ಯಸ್ಥರಾಗಿ ಆಯ್ಕೆಯಾಗಿ ಹೋಗಿದ್ದರು.
ನಾನು ಎಂ.ಎ. ಓದುವಾಗ ನನಗೆ ಪ್ರಾಧ್ಯಾಪಕರಾಗಿದ್ದ ಡಾ. ಬಿ.ಎಸ್. ಶ್ರೀಕಂಠಾರಾಧ್ಯರು ಇಲಾಖೆಗೆ ಮುಖ್ಯಸ್ಥರಾಗಿ ಬಂದಿದ್ದರು. ನನ್ನ ಬಗ್ಗೆ ನಮ್ಮ ವಿಭಾಗದಲ್ಲಿ ಮತ್ತು ಮೈಸೂರಿನ ಗಂಗೋತ್ರಿ ವಿಭಾಗದಲ್ಲಿ ನಾನು ಮದುವೆಯಾಗಿರುವ ಬಗ್ಗೆ ಅಸಮಾಧಾನವಿತ್ತು. ಅದನ್ನೆಲ್ಲ ತಲೆಯಲ್ಲಿ ತುಂಬಿಕೊಂಡು ಬಂದಿದ್ದ ಬಿಎಸ್‌ಎಸ್ ಗುರುಗಳು ಕೂಡ ನನ್ನ ಬಗ್ಗೆ ಅಸಮಾಧಾನಗೊಂಡವರಂತೆ ತೋರುತ್ತಿದ್ದರು.
ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಶ್ರೀಕಂಠಾರಾಧ್ಯರು ಅಧ್ಯಾಪಕರೆಲ್ಲರಿಗೂ ತೆಗೆದುಕೊಳ್ಳುವ ತರಗತಿಗಳ ವೇಳಾಪಟ್ಟಿ ತಯಾರಿಸಿಕೊಟ್ಟಿದ್ದರು. ನನಗೆ ಆಶ್ಚರ್ಯವಾಗುವಂತೆ ನನಗೆ ಯಾವುದೇ ಸಾಮಾನ್ಯ ತರಗತಿಗೆ ಪಾಠ ಮಾಡುವ ಅವಕಾಶವಿರದಂತೆ ತರಗತಿಗಳನ್ನು ಹಂಚಿಕೆ ಮಾಡಿದ್ದರು. ಐಚ್ಛಿಕವಾಗಿದ್ದ ಎರಡು ವಿಷಯಗಳಾದ ಪ್ರಾದೇಶಿಕ ಅರ್ಥಶಾಸ್ತ್ರ ಮತ್ತು ಕೃಷಿ ಅರ್ಥಶಾಸ್ತ್ರಗಳನ್ನು ಹಂಚಿಕೆ ಮಾಡಿ ಮುಗಿಸಿದ್ದರು. ನನಗೆ ವಿದ್ಯಾ ಗುರುಗಳು ಹೆಚ್ಚು ಸಲಿಗೆ ಇಲ್ಲದೆ ಇದ್ದ ಅವರೊಡನೆ ಇದು ಸರಿ ಇಲ್ಲ. ಇದನ್ನು ಸರಿಯಾಗಿ ಹಂಚಿಕೆಯಾಗಬೇಕೆಂದು ನನ್ನ ಅಸಮಾಧಾನ ತೋರಿ ಅವರ ಟೇಬಲ್ ಮೇಲೆ ತಾತ್ಸಾರದಿಂದಲೇ ಆದೇಶದ ಪ್ರತಿಯನ್ನು ಬಿಟ್ಟು ಬಂದಿದ್ದೆ. ಅತ್ಯಂತ ಮಿತಭಾಷಿ, ಸರಳ ಮತ್ತು ಆಳ ಅಧ್ಯಯನದಿಂದ ಗಳಿಸಿದ ಗಂಭೀರತೆಯಲ್ಲಿದ್ದ ಅವರಿಗೆೆ ನನ್ನ ಬಗ್ಗೆ, ನಾನು ಮದುವೆಯಾದ ಬಗ್ಗೆ ಇಲ್ಲ ಸಲ್ಲದ ಕಥೆಗಳನ್ನು ಕಟ್ಟಿ ಅವರಿಗೆ ಹೇಳಿ ನನಗೆ ಈ ರೀತಿಯ ಅನಾದರಣೆ ತೋರಿಸುವಂತೆ ನಮ್ಮವರೇ ಆಗಿದ್ದ ಕೆಲವು ಅಧ್ಯಾಪಕರು ಹೊಸಬರಾಗಿ ಬಂದಿದ್ದ ಇವರಿಗೆ ಹೇಳಿದ್ದರು.
ಆರಾಧ್ಯರೂ ಕೂಡ ಮೈಸೂರಿನ ಗಂಗೋತ್ರಿಯಲ್ಲಿ ಪಾಠ ಮಾಡುತ್ತಿದ್ದವರು, ಅಲ್ಲಿಯೇ ಪ್ರಾಧ್ಯಾಪಕರಾಗಬೇಕಾಗಿದ್ದವರನ್ನು ಬಿಆರ್‌ಪಿಗೆ ಒಬ್ಬ ಹಿರಿಯ ಪ್ರಾಧ್ಯಾಪಕರು ಬೇಕೆಂಬ ನೆಪವೊಡ್ಡಿ ಅವರನ್ನು ವರ್ಗಾವಣೆ ಮಾಡಿ ಇಲ್ಲಿಗೆ ಕಳಿಸಿದ್ದರು. ಇಲ್ಲಿಗೆ ಬರುವ ಬಗ್ಗೆ ಮನಸ್ಸಿಲ್ಲದ ಕಾರಣ ಅಸಮಾಧಾನವೂ ಅವರಲ್ಲಿ ಮನೆಮಾಡಿತ್ತು. ಬಂದಾಕ್ಷಣ ಇಲ್ಲಿನವರ ಚಾಡಿ ಮಾತು ಕೇಳಿ ನನ್ನ ಬಗ್ಗೆ ಈ ರೀತಿ ನಡೆದುಕೊಂಡಿದ್ದರು. ಆ ನಂತರ ಎಲ್ಲರೂ ಚರ್ಚಿಸಿ ಸಮಾನ ವಿಷಯಗಳ ಮತ್ತು ತರಗತಿಗಳನ್ನು ಹಂಚಿಕೆ ಮಾಡಿಕೊಂಡು ಎಂದಿನಂತೆ ತರಗತಿಗಳು ನಡೆಯಲಾರಂಭಿಸಿದವು. ಪ್ರಾರಂಭದಲ್ಲಿ ಆಗಿದ್ದ ನನ್ನ ಮತ್ತು ನನ್ನ ಗುರುಗಳಾಗಿದ್ದ ಶ್ರೀಕಂಠಾರಾಧ್ಯರ ನಡುವೆ ನಡೆದ ಸಣ್ಣ ಅಸಮಾಧಾನ ಕರಗಿ ಎಂದಿನ ಲವಲವಿಕೆಯಿಂದ ವಿಭಾಗದಲ್ಲಿ ಚಟುವಟಿಕೆಗಳು ಪ್ರಾರಂಭವಾದವು. ( ಸುದ್ದಿದಿನ.ಕಾಂ|ವಾಟ್ಸಾಪ್|9980346243)
-
ದಿನದ ಸುದ್ದಿ6 days ago
ಪರಿಶಿಷ್ಟ ಜಾತಿ ಯುವಕ , ಯುವತಿಯರಿಗೆ ಜಿಮ್ ಫಿಟ್ನೆಸ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ರಾಯಚೂರು | ಶಾಲಾ ಬಸ್ ಅಪಘಾತ ; ಇಬ್ಬರು ವಿದ್ಯಾರ್ಥಿಗಳು ಸಾವು
-
ದಿನದ ಸುದ್ದಿ5 days ago
ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ
-
ದಿನದ ಸುದ್ದಿ4 days ago
ಆತ್ಮಕತೆ | ಸರಳ ಹಾಗೂ ಒಲವಿನ ಮದುವೆಗಳ ಸಾಲುಸಾಲು
-
ದಿನದ ಸುದ್ದಿ6 days ago
ಸರ್ಕಾರಿ ಐಟಿಐ ಪ್ರವೇಶಕ್ಕೆ ಆಹ್ವಾನ
-
ದಿನದ ಸುದ್ದಿ5 days ago
ಭಾನುವಾರವೂ ಕ್ಯಾಶ್ ಕೌಟರ್ ಓಪನ್ ; ವಿದ್ಯುತ್ ಬಿಲ್ ಬಾಕಿ ಪಾವತಿಸಿ : ಬೆಸ್ಕಾಂ
-
ದಿನದ ಸುದ್ದಿ4 days ago
ರಿವರ್ ಕ್ರಾಸಿಂಗ್ ತರಬೇತಿ ; ಬೋಟ್ ಮುಳುಗಿ ಇಬ್ಬರು ಕಮಾಂಡೋಗಳು ಸಾವು
-
ದಿನದ ಸುದ್ದಿ5 days ago
ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ