Connect with us

ಬಹಿರಂಗ

ಆಷಾಢ ಪೂರ್ಣಿಮೆ ಮತ್ತು ಧಮ್ಮಚಕ್ಕಪವತ್ತನದಿನ

Published

on

ಜುಲೈ 05 ಆಷಾಢ ಪೂರ್ಣಿಮೆಯ ಪ್ರಯುಕ್ತ

  • ಶಿವಸ್ವಾಮಿ

ಗುರು ಎಂದರೆ ವ್ಯಕ್ತಿಯಲ್ಲ ಒಂದು ಶಕ್ತಿ ಕತ್ತಲೆಯ ಕಳೆದು ಸುಜ್ಞಾನದ ಬೆಳಕಿನಡೆಗೆ ಕರೆದುಕೊಂಡು ಹೋಗುವ ಶಬ್ದವೇ “ಗುರು

ಗೌತಮ ಬುದ್ಧ

ಭಾರತದ ಮೂಲನಿವಾಸಿಗಳ ಪಾಲಿಗೆ ಮಾತ್ರ ಆಷಾಢ ಮಾಸವು ಅನಿಷ್ಟ, ಅಶುಭ, ಈ ತಿಂಗಳಿನಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡಬಾರದು, ಜಾತಿ ಧರ್ಮ ಶಾಸ್ತ್ರ ಪುರಾಣ ದೇವರು, ಪೂಜೆ ಪುನಸ್ಕಾರಗಳ ಹೆಸರಿನಲ್ಲಿ ಭಯದ ಉತ್ಪಾಧಕರೆನಿಸಿಕೊಂಡವರು ಸುಳ್ಳುಗಳನ್ನೇ ಸತ್ಯವೆಂದು ನಂಬಿಸಿ ಮಾನಸಿಕ ಗುಲಾಮಗಿರಿಗೆ ತಳ್ಳಿ ಇಲ್ಲಿನ ಮೂಲನಿವಾಸಿಗಳ ಮೆದುಳಿಗೆ ಬ್ರಾಹ್ಮಣ್ಯವೆಂಬ ಬೇಡಿಯನ್ನು ತೊಡಿಸಿ ಅದರಿಂದ ಹೊರಬರದಂತೆ ವಿಲ ವಿಲ ಹೊದ್ದಾಡುವಂತೆ ಮಾಡಿ, ತಾವುಗಳು ಮಾತ್ರ ತಮ್ಮ ಮದುವೆ ಮುಂಜಿ ಕಾರ್ಯಗಳನ್ನು ಕಡಿಮೆ ಖರ್ಚಿನಲ್ಲಿ ಮಾಡಿಕೊಳ್ಳುತ್ತಾರೆ.

ಆದರೆ, ಅವರಿಗೆ ಈ ಆಷಾಡ ಮಾಸದಿಂದ ಯಾವ ತೊಂದರೆಯು ಆಗುವುದಿಲ್ಲ, ಆಷಾಢ ಮಾಸ ಅಶುಭವೆಂದು ಇತಿಹಾಸದ ಕತ್ತಲ ಗರ್ಭದಲ್ಲಿ ಹೂತಿಟ್ಟು ನಮ್ಮ ಪೂರ್ವಿಕರ ಇತಿಹಾಸವು ನಮಗೆ ತಿಳಿಯದಂತೆ ಮಾಡಿದ್ದಾರೆ ಅದಕ್ಕೆ ಬಾಬಾಸಾಹೇಬರು ಹೇಳಿದ್ದು “ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು” ಅಂತ ಬಂಧುಗಳೇ ಸತ್ಯವನ್ನು ಸತ್ಯವೆಂದು ಸುಳ್ಳನ್ನು ಸುಳ್ಳೆಂದು ಸಾರಿದ ನಿಜವಾದ ಭಾರತೀಯಾರಾದ ನಾವು ಇತಿಹಾಸವನ್ನು ತಿಳಿದುಕೊಳ್ಳೋಣ.

ಎಲ್ಲಾ ತಿಂಗಳುಗಳಂತೆಯೇ ಆಷಾಡ ಮಾಸದಲ್ಲಿ ಸೂರ್ಯ ಚಂದ್ರರು ಬೆಳಗುತ್ತಾರೆ, ಮಳೆ ಸುರಿಯುತ್ತದೆ, ಗಿಡಮರಗಳು ಚಿಗುರುತ್ತವೆ, ಗಾಳಿ ಬೀಸುತ್ತದೆ, ಹೂವುಗಳು ಮೊಗ್ಗಾಗಿ ಅರಳಿ ಪರಿಮಳವನ್ನು ಬೀರುತ್ತ ಪ್ರಕೃತಿ ಎಂದಿನಂತೆ ತನ್ನ ಕೆಲಸದಲ್ಲಿ ನಿರತವಾಗಿರುತ್ತದೆ.

ಆದರೆ ಭಾರತದ ಮೂಲನಿವಾಸಿಗಳ ಪಾಲಿಗೆ ಮಾತ್ರ ಆಷಾಢ ಮಾಸವು ಅನಿಷ್ಟ, ಅಶುಭ ಈ ತಿಂಗಳಿನಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದೆಂದು ಜಾತಿ ಧರ್ಮ ಶಾಸ್ತ್ರ ಪುರಾಣ ದೇವರು ದಿಂಡರುಗಳ ಹೆಸರಲ್ಲಿ ಭಯದ ಉತ್ಪಾಧಕರೆನಿಸಿಕೊಂಡ ವೈದಿಕ ಮಹಾಶೆಯರು ಸುಳ್ಳುಗಳನ್ನೇ ಸತ್ಯವೆಂದು ನಂಬಿಸಿ ಮಾನಸಿಕ ಗುಲಾಮಗಿರಿಗೆ ತಳ್ಳಿ ಇಲ್ಲಿನ ಮುಗ್ಧ ಜನರ ಮೆದುಳಿಗೆ ಬ್ರಾಹ್ಮಣ್ಯವೆಂಬ ಬೇಡಿಯನ್ನು ತೊಡಿಸಿ ಅದರಿಂದ ಹೊರ ಬರಲಾಗದಂತೆ ವಿಲ ವಿಲ ಹೊದ್ದಾಡುವಂತೆ ಮಾಡಿ, ತಾವುಗಳು ಮಾತ್ರ ತಮ್ಮ ತಮ್ಮ ಮದುವೆ ಮುಂಜಿ ಇನ್ನಿತರ ಶುಭ ಕಾರ್ಯಗಳನ್ನು ಕಡಿಮೆ ಖರ್ಚಿನಲ್ಲಿ ಹೊರೆಯಾಗದಂತೆ ಮಾಡಿಕೊಳ್ಳುತ್ತಾರೆ.ಆದರೆ, ಅವರಿಗೆ ಈ ಆಷಾಡ ಮಾಸದಿಂದ ಯಾವ ತೊಂದರೆಯು ಆಗುವುದಿಲ್ಲ.

ಆಷಾಢ ಮಾಸದಲ್ಲಿ ಧೋ..ಎಂದು ಸುರಿಯುವ ಜಿಟಿ ಜಿಟಿ ಮಳೆರಾಯನ ಹರ್ಷಕೆ ಇಳೆ ತಂಪಾಗಿ ಹಚ್ಚ ಹಸಿರಿನ ಸೀರೆಯನುಟ್ಟು ಭೂತಾಯಿ ಕಂಗೊಳಿಸುತ್ತಿರುವ ಆಷಾಡ ಮಾಸವನ್ನು ವಿಪ್ರರೆತಕೆ ಅನಿಷ್ಟ ಅಶುಭವೆಂದರು.. !?

ಬುದ್ಧ ಪೂರ್ವದಲ್ಲಿ ಶತಶತಮಾನಗಳಿಂದ ಇಡೀ ವ್ಯವಸ್ಥೆಯನ್ನೇ ತಮ್ಮ ಧಾರ್ಮಿಕ ಕಪಿಮುಸ್ಷ್ಠಿಯಲ್ಲಿ ಮೌಢ್ಯವನ್ನೇ ಬಿತ್ತುತ್ತಾ ಜಾತಿ ಧರ್ಮ, ಮರ್ಮ ಕರ್ಮ, ಸ್ವರ್ಗ ನರಕವೆಂಬ ಕಾಣದ ಕಲ್ಪನೆಯ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಮುಗ್ಧ ಜನರನ್ನು ಬಂಧಿಸಿ ತಾವು ಮಾತ್ರ ಶ್ರೇಷ್ಠ ಇತರರು ಕನಿಷ್ಠವೆಂದು ಮೌಢ್ಯವನ್ನೇ ಬಂಡವಾಳ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತಿದ್ದ ವೈದಿಕರಿಗೆ ಸೆಡ್ಡು ಹೊಡೆದ ಸಿದ್ಧಾರ್ಥ ಗೌತಮರು ಈ ಆಷಾಢ ಪೂರ್ಣಿಮೆಯಂದೇ ಜ್ಞಾನೋದಯವಾಗಿ ಬೋಧಿಯನ್ನು ಪಡೆದು ಬುದ್ಧರಾಗುತ್ತಾರೆ.

ನಂತರ ತಾವು ಪಡೆದು ಅನುಭವಿಸಿದ ಅಂತಿಮ ಸತ್ಯದ ಧಮ್ಮಮಾರ್ಗವನ್ನು ಇತರರಿಗೂ ಹಂಚಬೇಕೆಂದು ನಿಶ್ಚಯಿಸಿ ಯಾರಿಗೆ ಮೊದಲು ಧಮ್ಮವನ್ನು ಬೋಧಿಸಬೇಕೆಂದು ಯೋಚಿಸುವಾಗ ತಾನು ಕಠಿಣ ತಪಸ್ಸನ್ನು ಮಾಡುವಾಗ ತನ್ನೊಂದಿಗಿದ್ದ ಐದು ಜನ ಸಮಣ ಭಿಕ್ಕುಗಳು ನೆನಪಿಗೆ ಬಂದು ಅವರನ್ನು ಹುಡುಕುತ್ತಾ ಸಾರಾನಾಥದ ಇಸಿಪತನದ ಜಿಂಕೆವನಕ್ಕೆ ಬಂದು ತಮ್ಮ ಪ್ರಥಮ ಧಮ್ಮೋಪದೇಶವನ್ನು ನೀಡುವುದರ ಮೂಲಕ ಧಮ್ಮ ಪ್ರಸಾರದ ಚಕ್ರವನ್ನು ಉರುಳಿ ಬಿಡುತ್ತಾರೆ ಇದನ್ನು ಧಮ್ಮ ಚಕ್ಕ ಪವತ್ತನ ಸುತ್ತ ಎಂದೂ…ಇದೇ ದಿನವನ್ನು ಧಮ್ಮ ಚಕ್ಕ ಪವತ್ತನ ದಿನವೆಂದು ಕರೆಯುತ್ತಾರೆ.

ಧಮ್ಮಚಕ್ಕಪವತ್ತನ(ಸುತ್ತ) ದಿನ

ಗೌತಮರು ಭೋಧಿ ಪಡೆದು ಬುದ್ಧರಾದ ಮೇಲೆ ತಮ್ಮ ಮೊದಲ ಧಮ್ಮೋಪದೇಶವನ್ನು (ಧಮ್ಮಚಕ್ಕ ಪವತ್ತನ ಸುತ್ತ )ತನ್ನ ಶಿಷ್ಯರಾದ ಕೊಂಡಣ್ಣ, ಭದ್ದಿಯಾ, ವಪ್ಪ, ಮಹಾನಾಮ, ಅಸ್ಸಜ್ಜಿ, ಎಂಬ ಐದು ಜನ ಭಿಕ್ಕುಗಳಿಗೆ ಬೋಧಿಸಿದರು ಇದು ಧಮ್ಮ ಚಕ್ಕ ಪವತ್ತನ ಸುತ್ತವೆಂದೇ ಪ್ರಸಿದ್ದಿ ಪಡೆದು ಇಲ್ಲಿಂದಲೇ ಬುದ್ಧರ ಧಮ್ಮ ಚಕ್ರವು ಉರುಳಲಾರಂಭಿಸಿತು, ಬುದ್ಧರ ಹೃದಯದಲ್ಲಿ ಮಿಂಚಿದ ಜ್ಞಾನದ ಧರ್ಶನವೇ ಈ ಸುತ್ತದ ಸಾರವಾಗಿದೆ ಇದನ್ನು ಚತುರಾರ್ಯ ಸತ್ಯಗಳು ಅಥವಾ ನಾಲ್ಕು ಆರ್ಯ ಸತ್ಯಗಳೆಂದು ಕರೆಯುತ್ತಾರೆ.

ಪಾಳಿಯಲ್ಲಿ “ಚರಿತ ಭಿಕ್ಖವೇ ಚಾರಿಕಂ ಬಹುಜನ ಹಿತಾಯ ಬಹುಜನ ಸುಖಾಯ ಲೋಕಾನು ಕಂಪಾಯ ಅತ್ತಾಯ ಹಿತಾಯ ಸುಖಾಯ ದೇವಾ ಮನಸ್ಸಂ” ಕನ್ನಡದಲ್ಲಿ ನಾನೊಂದು ಧಮ್ಮ ಚಕ್ರ, ಮಾನವ ಚಕ್ರ, ಸಂಸಾರವೆಂಬ ಚಕ್ರವನ್ನು ಉರುಳಿಬಿಟ್ಟಿದ್ದೇನೆ, ಅದು ಬಹುಜನರ ಹಿತಕ್ಕಾಗಿ ಬಹುಜನರ ಸುಖಕ್ಕಾಗಿ ಲೋಕದ ಮೇಲೆ ಕರುಣೆ ನೆಲೆಗೊಳಿಸುವುದಾಗಿದೆ.
ಅದು ತನ್ನ ಹಿತಸುಖಕ್ಕಾಗಿ ದೇವಾ ಮಾನವರ ಹಿತಸುಖಕ್ಕಾಗಿ ಉರುಳಿಬಿಡಲಾಗಿದೆ.

4 ಆರ್ಯ ಸತ್ಯಗಳು

01. ದುಃಖ್ಖ ಸತ್ಯ

ಲೋಕದಲ್ಲಿ ದುಃಖ್ಖವಿದೆ ಹುಟ್ಟು ದುಃಖ್ಖ, ರೋಗ ದುಃಖ್ಖ, ವಯಸ್ಸಾಗುವುದು ದುಃಖ್ಖ, ಸಾವು ದುಃಖ್ಖ.ದೈಹಿಕ ಮತ್ತು ಮಾನಸಿಕ ನೋವು ಯಾತನೆ ಕೊರಗು ಇದೆಲ್ಲವೂ ದುಖ್ಖವೇ.

02. ದುಃಖ್ಖಕ್ಕೆ ಕಾರಣ ಸತ್ಯ

ದುರಾಸೆ ಅಥವಾ ತೃಷ್ಣೆ
ಮೂರು ವಿಧವಾದ ತೃಷ್ಣೆಗಳಿವೆ

  • ಕಾಮ ತೃಷ್ಣೆ

ಪಂಚ ಇಂದ್ರಿಯಗಳ ವಿಷಯಗಳನ್ನು ಅನುಭವಿಸಬೇಕೆನ್ನುವ ಇಚ್ಛೆಯೇ ಕಾಮತೃಷ್ಣೆ

  • ಭಾವತೃಷ್ಣೆ

ನಾನು ಶಾಶ್ವತವಾಗಿ ಜೀವಿಸಬೇಕೆಂಬುದು ಮತ್ತು ನಾನು ಶ್ರೀಮಂತನಾಗಿ ಸದಾ ಭೋಗಜೀವನದಲ್ಲಿರಬೇಕೆಂಬುದೇ ಆಗಿದೆ

  • ವಿಭವ ತೃಷ್ಣೆ

ನಾನು ಈ ಪ್ರಪಂಚದಲ್ಲಿ ನಾನು ಇರಲೇಬಾರದೆಂಬ ಹತಾಶೆಯ ಮನಸ್ಥಿತಿ.

03. ದುಃಖ್ಖ ನಿರೋಧ ಸತ್ಯ

ಈ ಲೋಕದಲ್ಲಿ ದುಃಖ್ಖವಿದೆ, ದುಃಖ್ಖಕ್ಕೆ ಕಾರಣವು ಇದೆ, ಎಂದಮೇಲೆ ದುಃಖ್ಖ ನಿರೋಧದ ಮೂಲಗಳಾದ ಅಜ್ಞಾನ ಮತ್ತು ದುರಾಸೆಗಳಿಂದ ಹೊರ ಬಂದರೆ ದುಖ್ಖವೂ ದೂರವಾಗುತ್ತದೆ.

04. ದುಃಖ್ಖ ನಿರೋಧ ಗಾಮಿನಿ ಪಟಿಪದ
(ದುಃಖ್ಖ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗ)

ನಾಲ್ಕನೇ ಸತ್ಯವಾದ ದುಃಖ್ಖ ನಿರೋಧ ಮಾರ್ಗ ಅಥವಾ ಆರ್ಯ ಅಷ್ಟಾಂಗ ಮಾರ್ಗ ಅಥವಾ ಮಧ್ಯಮ ಮಾರ್ಗ,ಪಂಚ ಇಂದ್ರಿಯಗಳ ಸುಖಕ್ಕಾಗಿ ಭೋಗಜೀವನದಲ್ಲಿ ತೊಡಗಿರುವುದು ಮತ್ತು ನೋವಿನಿಂದ ಕೂಡಿದ ಕಠಿಣ ತಪಸ್ಸು ಅಥವಾ ದೇಹ ದಂಡನೆ ಎಂಬ ಎರಡು ಅತಿರೇಖಾ ಮಾರ್ಗಗಳನ್ನು ಬುದ್ಧ ಕೈ ಬಿಟ್ಟಿದ್ದೆ ಅಲ್ಲದೆ ಸುಖ ಶಾಂತಿ ಪ್ರಜ್ಞೆಯ ಮಾರ್ಗವಾದ ಮನುಷ್ಯರನ್ನು ನಿಬ್ಬಾಣದ ಸತ್ಯದ ಕಡೆಗೆ ಕರೆದೊಯ್ಯುವ ಮಾರ್ಗ ಕಂಡು ಹಿಡಿದರು ಅದುವೇ ಬುದ್ಧರ ಮಧ್ಯಮ ಮಾರ್ಗ ಅಥವಾ ಆರ್ಯ ಅಷ್ಟಾಂಗ ಮಾರ್ಗ.

ಅಷ್ಟಾಂಗ ಮಾರ್ಗ

ಬುದ್ಧರ ಧಮ್ಮ ಚಕ್ರದ 8 ಅಂಶಗಳು ದುಃಖ್ಖ ನಿವಾರಣೆಗಾಗಿ ಇರುವ ಮಧ್ಯಮ ಮಾರ್ಗವಾಗಿದೆ

1.ಸರಿಯಾದ ದೃಷ್ಟಿ

2.ಸರಿಯಾದ ಯೋಚನೆ

3.ಸರಿಯಾದ ಮಾತು

4.ಸರಿಯಾದ ಕೆಲಸ

5.ಸರಿಯಾದ ಜೀವನೋಪಾಯ

6.ಸರಿಯಾದ ಪ್ರಯತ್ನ

7.ಸರಿಯಾದ ಎಚ್ಚರಿಕೆ

8.ಸರಿಯಾದ ಏಕಾಗ್ರತೆ

ನಿಮಗೆ ನೀವೇ ಬೆಳಕಾಗಿ, ನಿಮಗೆ ನೀವೇ ಶ್ರಮಿಸಬೇಕು‌. ತಥಾಗತರು ಕೇವಲ ಮಾರ್ಗದಾತರಷ್ಟೇ, ಬುದ್ಧರ ಅಷ್ಟಾಂಗ ಮಾರ್ಗದ ಉಪದೇಶವು ಇಲ್ಲಿಯೇ ಈಗಲೇ ಪರಮಸುಖವನ್ನು ಪಡೆಯಲು ದಾರಿದೀಪವಾಗಿದೆ ಜಾತಿ ಮತ ಧರ್ಮಗಳ ಬೇಧವಿಲ್ಲದೆ ಸರ್ವರು ಈ ಮಾರ್ಗದಲ್ಲಿ ನಡೆದು ಬುದ್ಧರ ಬೋಧನೆಯಂತೆ ದುಃಖ್ಖದಿಂದ ಮುಕ್ತರಾಗಬಹುದು.

ನಾಲ್ಕು ಆರ್ಯ ಸತ್ಯಗಳನ್ನು ವಿಶ್ಲೇಷಿಸಿದಾಗ 24 ಅಂಶಗಳು ಕಂಡು ಬರುತ್ತವೆ ಆದ್ದರಿಂದ ಬುದ್ಧರು ಬೋಧಿಸಿದ ಈ ಸ್ಥಳದಲ್ಲಿ ಸಾಮ್ರಾಟ್ ಅಶೋಕ ಚಕ್ರವರ್ತಿಯು ಸ್ಟಂಭವನ್ನು ಸ್ಥಾಪಿಸಿ ಅದರ ಮೇಲೆ 4 ದಿಕ್ಕುಗಳಲ್ಲಿ ಸತ್ಯದ ಧಮ್ಮದ ಸಂದೇಶಗಳು ಸಿಂಹಗರ್ಜನೆಯಂತೆ ಹರಡಲಿ ಎಂದು 4 ಸಿಂಹ ಮತ್ತು 24 ಅರೆಗಳುಳ್ಳ ಧಮ್ಮಚಕ್ರವನ್ನು ಕೆತ್ತಿಸಿದರು ಅವುಗಳೇ ನಮ್ಮ ರಾಷ್ಟ್ರ ಲಾಂಛನವಾಗಿ ಸ್ವತಂತ್ರ ಸಮಾನತೆ ನ್ಯಾಯ ಸಹೋದರತೆಯ ಸಂಕೇತವಾಗಿ ಸದಾ ನಮ್ಮನ್ನು ನೆರಳಿನಂತೆ ಹಿಂಬಾಲಿಸುತ್ತವೆ.

ಹೀಗೆ ಭಗವಾನ್ ಬುದ್ಧರು ಧಮ್ಮಚಕ್ಕ ಪವತ್ತನ ಸುತ್ತವನ್ನು ಬೋಧಿಸುತ್ತಾರೆ, ಈ ದಿನವೂ ಜುಲೈ ತಿಂಗಳು ಆಷಾಡ ಮಾಸದ ಪೂರ್ಣಿಮೆಯಂದೇ ಬರುವುದರಿಂದ ಜಗತ್ತಿನಲ್ಲೆಡೆ ಇರುವ ಬೌದ್ಧರು ಧಮ್ಮ ಚಕ್ಕ ಪವತ್ತನಾ ದಿನವೆಂದು ತಮ್ಮ ತಮ್ಮ ಮನ ಮನೆಗಳಲ್ಲಿ ದೊಡ್ಡ ಹಬ್ಬದಂತೆ ಸಡಗರ ಸಂಭ್ರಮದಿಂದ ಆಚರಿಸಿ ಸರ್ವ ಜೀವಿಗಳಿಗೂ ಗುರುವಾಗಿ ಧಮ್ಮೋಪದೇಶ ನೀಡಿದ ಬುದ್ಧ ಗುರುವಿಗೆ ವಂದಿಸುತ್ತಾರೆ.

ಅದೇ ದಿನ ಮಹಾಮಾಯೆಯು ಗರ್ಭ ಧರಿಸಿದ ದಿನ, ಅದೇ ದಿನ ಸಿದ್ಧಾರ್ಥ ಗೌತಮರು ಗೃಹತ್ಯಾಗ ಮಾಡಿದ ದಿನ, ಅದೇ ದಿನ ಬೌದ್ಧ ಭಿಕ್ಕುಗಳಿಗೆ ವರ್ಷ ವಾಸ ಪ್ರಾರಂಭದ ದಿನ ಅಂದರೆ ಬೌದ್ಧ ಭಿಕ್ಕುಗಳು ಮಳೆಗಾಲದಲ್ಲಿ ಜುಲೈ, ಆಗಸ್ಟ್, ಸೆಪ್ಟೆಂಬರ್ ಮೂರು ತಿಂಗಳುಗಳ ಕಾಲ ಒಂದೇ ಸ್ಥಳದಲ್ಲಿ ಉಳಿದುಕೊಂಡು ಧಮ್ಮ ಶಮಣ ಮಾಡುವರು.

ಭಾರತದಲ್ಲಿ ಮಾತ್ರ ವೈದಿಕ ಮನುವಾದಿಗಳು ಗುರುಪೂರ್ಣಿಮೆಯೆಂದು ಆಚರಿಕೊಂಡು ಬರುತ್ತಲೇ ಇದ್ದಾರೆ ವೈದಿಕ ಪುರೋಹಿತರೆನಿಸಿಕೊಂಡವರು ಮಾತ್ರ ಶುಭ ಕಾರ್ಯಗಳನ್ನು ಮಾಡಬಹುದು, ಇತರೇ ಸಮುದಾಯಗಳು ಶುಭಕಾರ್ಯಗಳನ್ನು ಮಾಡಿದರೆ ಅವರಿಗೆ ಅನಿಷ್ಟ ಅಶುಭವಾಗುತ್ತದೆ ಹೇಗಿದೆ ನೋಡಿ ಮನುವಾದಿಗಳ ಆಷಾಡ ಮಾಸದ ಆಷಾಡ ಭೂತಿತನದ ಒಳಮರ್ಮ!?

ಬೌದ್ಧರಿಗೆ ಪ್ರತಿ ಹುಣ್ಣಿಮೆಯು ಶುಭಸೂಚಕವಾದರೆ, ಇತರರಿಗೆ ಹೇಗೆ ಅಶುಭವಾಗುತ್ತದೆ? ಆಷಾಢವು ಅಶುಭ ಮಾಸವೆಂದು ಇತಿಹಾಸದ ಕತ್ತಲ ಗರ್ಭದಲ್ಲಿ ಹೂತಿಟ್ಟು ನಮ್ಮ ಪೂರ್ವಿಕರ ಇತಿಹಾಸವು ನಮಗೆ ತಿಳಿಯದಂತೆ ಮಾಡಿದ್ದಾರೆ ಅದಕ್ಕೆ ಬಾಬಾಸಾಹೇಬರು ಹೇಳಿದ್ದು “ಇತಿಹಾಸ ಮರೆತವರು ಇತಿಹಾಸ ಸೃಷ್ಷ್ಠಿಸಲಾರರು”ಅಂತ ಆದರೆ ಆಷಾಡ ಮಾಸವು ಸಮಸ್ತ ಭಾರತೀಯರಿಗೆ ಜ್ಞಾನದ ಭಾಗಿಲನ್ನು ತೆರೆದ ತಿಂಗಳು, ಸತ್ಯವನ್ನು ಸತ್ಯವೆಂದು ಸುಳ್ಳನ್ನು ಸುಳ್ಳೆಂದು ಸಾರಿದ ಭಾರತೀಯರಾದ ನಾವುಗಳು ಬಹುಜನರಿಗೆ ನಿಜವಾದ ಇತಿಹಾಸವನ್ನು ತಿಳಿಸೋಣ.

ವೈದಿಕರಿಂದ ಸೃಷ್ಟಿಯಾದ ಅಸಮಾನತೆಯ ಕತ್ತಲ ಕೂಪದ ಈ ನೆಲದಲ್ಲಿ ಮಹಾ ಕಾರುಣಿಕನ ಮಾನವೀಯ ಲೋಕದ ಧಮ್ಮಚಕ್ರವು ಉರುಳಿ ಸಾಮಾನ್ಯರಿಂದಿಡಿದು ಸಾಮ್ರಾಟ್ ಅಶೋಕರಂತಹ ಆಳರಸರ ಮನಕ್ಕೆ ಬುದ್ಧತ್ವವು ಹೊಕ್ಕಿ ಮಾನವೀಯ ಮನುಷ್ಯರಾಗುತ್ತಾರೆ, ಇದರಿಂದ ಮೌಢ್ಯವನ್ನೇ ಬಂಡವಾಳ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತಿದ್ದ ವೈದಿಕರು ನಿರುದ್ಯೋಗಿಗಳಾಗುತ್ತಾರೆ ತಮ್ಮ ನಿರುದ್ಯೋಗಕ್ಕೆ ಕಾರಣವಾದ ಆಷಾಡ ಮಾಸವು ಅನಿಷ್ಟ ಅಶುಭವೆಂದು ಜನರು ತಿರಸ್ಕರಿಸುವಂತೆ ಮಾಡಿ ಯಶಸ್ವಿಯಾಗುತ್ತಾರೆ.

ಬುದ್ಧರೆಂಬ ಅರಿವಿನ ಹಣತೆಯಿಂದ ಆಷಾಢಮಾಸದ ತಿಂಗಳು ಸಕಲ ಜೀವರಾಶಿಗಳಿಗೂ ಶ್ರೇಶ್ಟವಾದರೆ ವೈದಿಕ ಪುರೋಹಿತರ ದೃಷ್ಟಿಯಲ್ಲಿ ಮಾತ್ರ ಕನಿಷ್ಠವಾಗುತ್ತದೆ ಕುಟಿಲತೆಯಿಂದ ಅಧಿಕಾರವನ್ನು ಕಸಿದುಕೊಂಡು ತಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸಿ ಬುದ್ಧ ಧಮ್ಮವನ್ನು ಈ ನೆಲದಿಂದಲೇ ಓಡಿಸಿದ ವೈದಿಕರು ತಾವು ಬರೆದುದೆಲ್ಲವನ್ನು ಕಾನೂನನ್ನಾಗಿಸಿ ಇದರ ವಿರುದ್ಧ ಯಾರು ಪ್ರಶ್ನಿಸಬಾರದೆಂದು ಇಲ್ಲಿನ ಮೂಲನಿವಾಸಿಗಳ ಮೇಲೆ ಧಾರ್ಮಿಕ ಗುಲಾಮಗಿರಿಯನ್ನೇರಿ ಅದನ್ನು ಒಪ್ಪಿಕೊಳ್ಳುವಂತೆ ಮಾಡಿರುವುದು ಈ ದೇಶದ ದುರಂತವೇ ಸರಿ.

ಸರ್ವರೂ ಕತ್ತಲೆಯಿಂದ ಬೆಳಕಿನ ಕಡೆ ಬರುವಂತಾಗಲಿ ಇಡೀ ವಿಶ್ವವು ಎಲ್ಲಾ ರೋಗ ರುಜಿನಗಳಿಂದ ಮುಕ್ತವಾಗಿ ಸುಖದಿಂದ ಜೀವಿಸುವಂತಾಗಲಿ

ಸರ್ವರಿಗೂ ಬುದ್ಧಗುರು ಮೊದಲ ಧಮ್ಮೋಪದೇಶ ನೀಡಿದ ದಿನವಾದ ಆಷಾಡ ಮಾಸದ ಹುಣ್ಣಿಮೆಯ ಧಮ್ಮ ಚಕ್ರ ಪರಿವರ್ತನಾ ದಿನದ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ

‘ಕೋರೆಗಾಂವ್’ ಎಂಬ ಶೋಷಿತರು ನಡೆಸಿದ ಶ್ರೇಷ್ಠ ಯುದ್ಧದ ಬಗ್ಗೆ

Published

on

  • ರಘೋತ್ತಮ. ಹೊಬ

ಭಾರತದ ಇತಿಹಾಸದಲ್ಲಿ ನಡೆದಿರುವ ವಿವಿಧ ಯುದ್ಧಗಳಲ್ಲಿ, ಬರೇ ಆ ರಾಜರು ಈ ರಾಜರ ವಿರುದ್ಧ, ಮಹಮ್ಮದೀಯರು ಬ್ರಿಟಿಷರ ವಿರುದ್ಧ, ಬ್ರಿಟಿಷರು ಫ್ರೆಂಚರ ವಿರುದ್ಧ, ಫ್ರೆಂಚರು ಡಚ್ಚರ ವಿರುದ್ಧ… ಹೀಗೆ ಸಾಮ್ರಾಜ್ಯಶಾಹಿಗಳು ನಡೆಸಿದ ಯುದ್ಧಗಳ ಬಗ್ಗೆಯಷ್ಟೆ ಚರಿತ್ರೆ ದಾಖಲಿಸಲಾಗಿದೆ. ಆದರೆ ಶೋಷಿತರು ಮೇಲ್ಜಾತಿ ಶೋಷಕರ ವಿರುದ್ಧ, ಅವರ ಶೋಷಣೆಯ ನಡವಳಿಕೆಯ ವಿರುದ್ಧ ಯುದ್ಧ ಘೋಷಿಸಿದ, ನಡೆಸಿ ಗೆಲುವು ದಾಖಲಿಸಿದ ಬಗ್ಗೆ ಎಲ್ಲಿಯೂ ದಾಖಲಾಗಿಲ್ಲ! ಇತಿಹಾಸ ಕೃತಿಯ ಯಾವ ಪುಟದಲ್ಲೂ ಅಂತಹದ್ದೊಂದು ಯುದ್ಧದ ಬಗ್ಗೆ ಉಲ್ಲೇಖವಿಲ್ಲ. ಯಾಕೆ? ಖಂಡಿತ ಅದು ಶೋಷಿತ ಸಮುದಾಯದ ಬಗೆಗಿನ ಇತಿಹಾಸಕಾರರ ದಿವ್ಯ ತಾತ್ಸಾರವಷ್ಟೆ!

ಈ ನಿಟ್ಟಿನಲ್ಲಿ ಶೋಷಿತರು ಶೋಷಕ ಶಕ್ತಿಗಳ ವಿರುದ್ಧ ಸಾರಿದ ಯುದ್ಧದ ಬಗ್ಗೆ ಹೇಳಲೇಬೇಕಾಗುತ್ತದೆ. ಖಂಡಿತ, ಆ ಯುದ್ಧ ಕೋರೇಗಾಂವ್ ಯುದ್ಧ. ಭೀಮಾ ನದಿಯ ತೀರದಲ್ಲಿ ನಡೆದಿದ್ದರಿಂದ ಅದು ಇತಿಹಾಸದಲ್ಲಿ ‘ಭೀಮಾ ಕೋರೇಗಾಂವ್ ಯುದ್ಧ’ವೆಂದೇ ಪ್ರಸಿದ್ಧವಾಗಿದೆ. ಹಾಗಿದ್ದರೆ ಆ ಯುದ್ಧ ಯಾರ ವಿರುದ್ಧ ನಡೆಯಿತು? ಯಾರು ನಡೆಸಿದರು? ಎಂಬ ಪ್ರಶ್ನೆ ಮೂಡುತ್ತದೆ. ಈ ನಿಟ್ಟಿನಲ್ಲಿ 1818ರ ಹೊಸ ವರ್ಷದ ಸಂದರ್ಭದಲ್ಲಿ ನಡೆದ ಆ ಯುದ್ಧದ details ಹೇಳುವುದಕ್ಕೂ ಮುನ್ನ ಆ ಸಮಯದಲ್ಲಿ ಇದ್ದ ಸಾಮಾಜಿಕ ಸ್ಥಿತಿಗತಿಯನ್ನು ದಾಖಲಿಸುವುದು ಸೂಕ್ತವೆನಿಸುತ್ತದೆ.

ಹೌದು, 1818 ಅದು ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತದ ಕಾಲ. ಆಗಿನ ಪೇಶ್ವೆ ಅಥವಾ ಬ್ರಾಹ್ಮಣ ಮಂತ್ರಿ 2ನೇ ಬಾಜೀರಾಯನಾಗಿದ್ದ. ಹಾಗಿದ್ದರೆ ಪೇಶ್ವೆಗಳ ಆ ಕಾಲದಲ್ಲಿ ಸಾಮಾಜಿಕ ಪರಿಸ್ಥಿತಿ ಹೇಗಿತ್ತು? ಬಾಬಾಸಾಹೇಬ್ ಅಂಬೇಡ್ಕರರ ಪ್ರಕಾರವೇ ಹೇಳುವುದಾದರೆ “ಮರಾಠರ ರಾಜ್ಯದಲ್ಲಿ ಪೇಶ್ವೆಗಳ ಆಡಳಿತದಲ್ಲಿ, ಅಸ್ಪೃಶ್ಯರ ನೆರಳು ಹಿಂದೂವೊಬ್ಬನ ಮೇಲೆ ಬಿದ್ದು ಆತ ಮಲಿನವಾಗುವುದನ್ನು ತಪ್ಪಿಸಲು ಸಾರ್ವಜನಿಕ ಬೀದಿಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು. ಒಂದು ವೇಳೆ by mistake ಅಸ್ಪೃಶ್ಯನೊಬ್ಬನನ್ನು ಹಿಂದೂವೊಬ್ಬ ಮುಟ್ಟಿದರೆ ಆಗ ಆ ಹಿಂದೂ ಮಲಿನಗೊಳ್ಳುವುದನ್ನು ತಪ್ಪಿಸಲು ಅಸ್ಪೃಶ್ಯನು ತನ್ನ ಕುತ್ತಿಗೆಗೆ ಅಥವಾ ಮುಂಗೈಗೆ ಕಪ್ಪು ದಾರವೊಂದನ್ನು ಕಟ್ಟಿಕೊಳ್ಳುವುದು ಆ ದಿನಗಳಲ್ಲಿ ಕಡ್ಡಾಯವಾಗಿತ್ತು.

ಅಲ್ಲದೆ ಪೇಶ್ವೆಗಳ ಆಗಿನ ರಾಜಧಾನಿಯಾದ ಪೂನಾದಲ್ಲಿ ಅಸ್ಪೃಶ್ಯನೋರ್ವ ನಡೆದ ದಾರಿಯಲ್ಲಿ ಹಿಂದೂಗಳು ನಡೆದು ಸದರಿ ಹಿಂದೂ ಮಲಿನಗೊಳ್ಳುವುದನ್ನು ತಡೆಯಲು ಅಸ್ಪೃಶ್ಯನು ತನ್ನ ನಡುವಿಗೆ ಹಗ್ಗವೊಂದನ್ನು ಬಿಗಿದು ಅದಕ್ಕೆ ಕಸಪೊರಕೆಯೊಂದನ್ನು ಕಟ್ಟಿ ತಾನು ನಡೆದ ದಾರಿಯನ್ನು ತಾನೇ ಗುಡಿಸಬೇಕಾಗಿತ್ತು! ಅದಲ್ಲದೆ ಅದೇ ಪೂನಾ ನಗರದಲ್ಲಿ ಅಕಸ್ಮಾತ್ ಅಸ್ಪೃಶ್ಯನೊಬ್ಬ ದಾರಿಯಲ್ಲಿ ಉಗಿದರೆ ಮತ್ತು ಆ ಉಗುಳನ್ನು ಹಿಂದೂವೊಬ್ಬ ತುಳಿದು ಆತ ಮಲಿನವಾಗುವುದನ್ನು ತಪ್ಪಿಸಲು ಅಸ್ಪೃಶ್ಯ ತನ್ನ ಕೊರಳಿಗೆ ಮಣ್ಣಿನ ಮಡಕೆಯೊಂದನ್ನು ನೇತುಹಾಕಿಕೊಳ್ಳಬೇಕಾಗುತ್ತಿತ್ತು ಮತ್ತು ಉಗಿಯಬೇಕೆಂದಾಗ ಆತ ಆ ಮಡಕೆಯಲ್ಲಿ ಉಗಿಯಬೇಕಾಗಿತ್ತು”! ಪೇಶ್ವೆಗಳ ಕಾಲದ ಅಸ್ಪೃಶ್ಯರ ಸ್ಥಿತಿಗತಿಯನ್ನು ಅಂಬೇಡ್ಕರರು ಹೀಗೆ ವಿವರಿಸುತ್ತಾ ಹೋಗುತ್ತಾರೆ.

ಹೀಗಿರುವಾಗ ಇಂತಹ ವಿಚಿತ್ರ ಸಾಮಾಜಿಕ ದುಸ್ಥಿತಿಯ ಸಂದರ್ಭದಲ್ಲಿ ಮಾಹಾರಾಷ್ಟ್ರದ ಅಸ್ಪೃಶ್ಯರಾದ ಮಹಾರರಿಗೆ ದೌರ್ಜನ್ಯಕೋರ ಇಂತಹ ಪೇಶ್ವೆಗಳ, ಮತ್ತವರ ಸಾಮ್ರಾಜ್ಯದ ವಿರುದ್ಧ ಹೋರಾಡುವ ಅದ್ಭುತ ಅವಕಾಶವೊಂದು ಬರುತ್ತದೆ. ಹೌದು, ಅದೇ ಕೋರೇಗಾಂವ್ ಯುದ್ಧ! ಅಂದಹಾಗೆ ಇದೇನು ಅಸ್ಪೃಶ್ಯರು ಮೇಲ್ಜಾತಿಗಳ ವಿರುದ್ಧ, ಅವರ ದೌರ್ಜನ್ಯದ ವಿರುದ್ಧ ನೇರಾನೇರ ಕಾದಾಟಕ್ಕಿಳಿದದ್ದಲ್ಲ. ಆದರೆ ಯಾವ ಜಾತಿ/ವರ್ಣವ್ಯವಸ್ಥೆಯಲ್ಲಿ ಶಸ್ತ್ರಹಿಡಿಯುವುದು ಇಂತಹ ಜಾತಿಗೆ/ವರ್ಣಕ್ಕೆ ಎಂದು ಮೀಸಲಾಗಿತ್ತೋ ಅಂತಹ ಶ್ರೇಣೀಕೃತ ಜಾತಿವ್ಯವಸ್ಥೆಯ ಸಮಯದಲ್ಲಿ ಬ್ರಿಟಿಷರ ಪರವಾಗಿ, ಅವರ ಸೇನೆಯಲ್ಲಿ ಸೈನಿಕರಾಗಿಯಷ್ಟೆ ಅಸ್ಪೃಶ್ಯ ಮಹಾರರು ಕಾದಾಡಿದ್ದು.

ಹಾಗಿದ್ದರೆ ಆ ಹೋರಾಟ ಹೇಗಿತ್ತು? ಬಾಬಾಸಾಹೇಬ್ ಅಂಬೇಡ್ಕರರ ಬರಹಗಳು ಮತ್ತು ಭಾಷಣಗಳು, ಸಂಪುಟ 17, ಭಾಗ 3(ಇಂಗ್ಲೀಷ್ ಆವೃತ್ತಿ) ಪುಟ.4ರ ಪ್ರಕಾರ ಹೇಳುವುದಾದರೆ “ಭೀಮಾನದಿಯ ತೀರದಲ್ಲಿದ್ದ ಆ ಕೋರೇಗಾಂವ್ ರಣಾಂಗಣದಲ್ಲಿ ಬಾಂಬೆ ರೆಜಿಮೆಂಟ್‍ನ ಕೇವಲ 500 ಜನ ಮಹಾರ್ ಕಾಲ್ದಳದ ಸೈನಿಕರು ಪೂನಾದ 250 ಅಶ್ವದಳದವರ ನೆರವಿನೊಂದಿಗೆ, ಜೊತೆಗೆ ಮದ್ರಾಸ್‍ನ 24 ಗನ್‍ಮೆನ್‍ಗಳ ಸಹಾಯದಿಂದ 20000 ಅಶ್ವದಳವಿದ್ದ, 8000ದಷ್ಟು ಕಾಲ್ದಳವಿದ್ದ ಪೇಶ್ವೆಯ ಬೃಹತ್ ಸೇನೆಯ ವಿರುದ್ಧ 1818 ಜನವರಿ 1ರಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ಸತತ 12ಗಂಟೆಗಳು ಯಾವುದೇ ವಿಶ್ರಾಂತಿ ಆಯಾಸವಿಲ್ಲದೆ, ಆಹಾರ-ನೀರಿನ ಪರಿವಿಲ್ಲದೆ ಕ್ಯಾಪ್ಟನ್ ಎಫ್.ಎಫ್.ಸ್ಟಾಂಟನ್‍ನ ನೇತೃತ್ವದಲ್ಲಿ ಹೋರಾಡಿ ಅಭೂತಪೂರ್ವ ಗೆಲುವು ಸಾಧಿಸುತ್ತಾರೆ”!

ಸವಿಸ್ತಾರವಾಗಿ ಹೇಳುವುದಾದರೆ ಕ್ಯಾಪ್ಟನ್ ಸ್ಟಾಂಟನ್‍ನ ನೇತೃತ್ವದಲ್ಲಿ ಸಿರೂರ್‍ನಿಂದ 1818 ಡಿಸೆಂಬರ್ 31ರ ರಾತ್ರಿ ಹೊರಟ ಮಹಾರ್ ಸೇನೆ ಸತತ 27 ಕಿ.ಮೀ ನಡೆದು ಮಾರನೇ ದಿನ 1ನೇ ತಾರೀಖು ಬೆಳಿಗ್ಗೆ ಕೋರೇಗಾಂವ್ ರಣಾಂಗಣವನ್ನು ತಲುಪುತ್ತದೆ. ಅದೇ ಸಮಯದಲ್ಲಿ ಮೂರೂ ದಿಕ್ಕುಗಳಿಂದಲೂ ತಲಾ 600ರಷ್ಟಿದ್ದ ಪೇಶ್ವೆಯ ಕಾಲ್ದಳದ 3 ತುಕಡಿಗಳು ಕ್ಯಾಪ್ಟನ್ ಸ್ಟಾಂಟನ್‍ನ ಪಡೆಯನ್ನು ಸುತ್ತುವರೆಯುತ್ತವೆ.

ಅಲ್ಲದೆ ಪೇಶ್ವೆಯ ಈ ಸೈನ್ಯದ ಬೆಂಬಲಕ್ಕೆ ಬೃಹತ್ ಅಶ್ವದಳ, ರಾಕೆಟ್‍ದಳ ಬೇರೆ! ಒಟ್ಟಾರೆ ಸಂದಿಗ್ಧ ಸ್ಥಿತಿಯಲ್ಲಿ ಬ್ರಿಟಿಷ್ ಸೇನೆಯು ಪೇಶ್ವೆಗಳ ಕಾಲ್ದಳ ಮತ್ತು ಫಿರಂಗಿದಳಗಳಿಂದ ಸಂಪೂರ್ಣ ವೃತ್ತಾಕಾರ ಮಾದರಿಯಲ್ಲಿ ಸುತ್ತುವರಿಯಲ್ಪಡುತ್ತದೆ. ಹೇಗೆಂದರೆ ಪಕ್ಕದಲ್ಲೇ ಇದ್ದ ಭೀಮಾನದಿಗೆ ಹೋಗುವ ದಾರಿಗಳೆಲ್ಲ ಬಂದ್ ಆಗುವ ಮಟ್ಟಿಗೆ! ಕಡೆಗೆ ವಿಧಿಯಿಲ್ಲದೆ ಎರಡೂ ದಳಗಳೂ ಕೋರೇಗಾಂವ್ ಗ್ರಾಮವನ್ನು ಪ್ರವೇಶಿಸುತ್ತವೆ.

ಕೋರೇಗಾಂವ್ ಗ್ರಾಮವನ್ನು ಪ್ರವೇಶಿಸಿದ್ದೇ ತಡ ಎರಡೂ ಪಡೆಗಳೂ ಬೀದಿಬೀದಿಗಳಲ್ಲಿ, ಮನೆ-ಗುಡಿಸಲುಗಳ ಮುಂದೆ ಕೈಕೈ ಮಿಲಾಯಿಸುತ್ತಾ ನೇರಾ-ನೇರ ಕಾದಾಟಕ್ಕಿಳಿಯುತ್ತವೆ. ಅದರಲ್ಲೂ ಬಹುತೇಕ ಮಹಾರರೇ ತುಂಬಿದ್ದ ಬ್ರಿಟಿಷ್ ಸೈನ್ಯಕ್ಕೆ ಬಹಳ ಹಾನಿಯಾಗುತ್ತದೆ.

ಆದರೂ ಎದೆಗುಂದದ ಮಹಾರ್ ಸೈನಿಕರು ಅತ್ಯುತ್ಕೃಷ್ಟ ಧೈರ್ಯದಿಂದ ಮುನ್ನುಗ್ಗುತ್ತಲೇ ಹೋಗುತ್ತಾರೆ. ಪಡೆಯ ನೇತೃತ್ವ ವಹಿಸಿದ್ದ ಕ್ಯಾಪ್ಟನ್ ಸ್ಟಾಂಟನ್‍ನಂತೂ “ಕಡೆಯ ಸೈನಿಕನಿರುವ ತನಕ, ಕಡೆಯ ಬುಲೆಟ್ ಇರುವ ತನಕ ಹೋರಾಡುತ್ತಲೇ ಇರಿ” ಎಂದು ಹುರಿದುಂಬಿಸುತ್ತಲೇ ಇರುತ್ತಾನೆ. ಪರಿಣಾಮವಾಗಿ ಮಹಾರ್ ಸೈನಿಕರು ಅತ್ಯಮೋಘ ಧೈರ್ಯದಿಂದ, ಎಲ್ಲಾ ದುರಾದೃಷ್ಟಗಳ ನಡುವೆ ಹೋರಾಡುತ್ತ ವೀರಾವೇಶದಿಂದ ಮುನ್ನುಗ್ಗುತ್ತಾರೆ. ಅಂದಹಾಗೆ ಮಹಾರ್ ಸೈನಿಕರ ಅಂತಹ ಮುನ್ನುಗ್ಗುವಿಕೆಯಲ್ಲಿ ಅದೆಂತಹ, ಅದೆಷ್ಟು ಶತಮಾನಗಳ ನೋವಿನ ಆಕ್ರೋಶವಿತ್ತು? ತತ್ಫಲವಾಗಿ ಬಹುಸಂಖ್ಯೆಯಲ್ಲಿದ್ದರೂ ಕೂಡ ಪೇಶ್ವೆಯ ಸೈನ್ಯ ಹಿಮ್ಮೆಟ್ಟಿ ಸೋತು ರಾತ್ರಿ 9 ಗಂಟೆಗೆ ಧಾಳಿಯನ್ನು ನಿಲ್ಲಿಸುತ್ತದೆ ಹಾಗೂ ವಿಧಿಯಿಲ್ಲದೆ ಕೋರೇಗಾಂವ್‍ನಿಂದ ರಾತ್ರೋರಾತ್ರಿ ಕಾಲ್ಕೀಳುತ್ತದೆ!

ಒಟ್ಟಾರೆ ಅತ್ಯಮೋಘ ಧೈರ್ಯ ಮತ್ತು ಶಿಸ್ತುಬದ್ಧ ಶೌರ್ಯವನ್ನು ಪ್ರದರ್ಶಿಸಿದ ಮಹಾರ್ ಸೈನಿಕರು ಶೋಷಕ ಪೇಶ್ವೆಗಳ ವಿರುದ್ಧ ಅಭೂತಪೂರ್ವ ಜಯ ದಾಖಲಿಸುತ್ತಾರೆ. ಅಂದಹಾಗೆ ಈ ಯುದ್ಧದ ನಂತರ ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತ ಕೊನೆಗೊಳ್ಳುತ್ತದೆ. ಹಾಗೆಯೇ ಅಸ್ಪೃಶ್ಯರ ದಯನೀಯ ಸ್ಥಿತಿ ಕೂಡ ಸುಧಾರಣೆ ಕಾಣಲು ಆರಂಭಿಸುತ್ತದೆ. ಈ ಯುದ್ಧದಲ್ಲಿ ಜಯ ತಂದುಕೊಟ್ಟು ಮಡಿದ 22 ಮಹಾರ್ ಸೈನಿಕರ ಸ್ಮರಣಾರ್ಥ ಕೋರೇಗಾಂವ್‍ನಲ್ಲಿ ಮಹಾರ್ ಸೈನಿಕರು ಪ್ರಥಮ ಗುಂಡು ಸಿಡಿಸಿದ ಸ್ಥಳದಲ್ಲೇ 65 ಅಡಿ ಎತ್ತರದ ಒಂದು ಶಿಲಾ ಸ್ಮಾರಕ ಕೂಡ 1821 ಮಾರ್ಚ್ 26ರಂದು ನಿರ್ಮಾಣಗೊಳ್ಳುತ್ತದೆ. ಹಾಗೂ ಆ ಸ್ಮಾರಕದಲ್ಲಿ ಮಡಿದ 22 ಸೈನಿಕರ ಜೊತೆಗೆ ಗಾಯಗೊಂಡವರ ಹೆಸರನ್ನೂ ಕೆತ್ತಿಸಲಾಗುತ್ತದೆ.

ಒಂದು ವಾಸ್ತವ, ಅದೆಂದರೆ “ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು” ಎಂದು ಹೇಳಿದ ಬಾಬಾಸಾಹೇಬ್ ಅಂಬೇಡ್ಕರರಿಗೆ ತನ್ನ ಜನರ ಇಂತಹ ಅದ್ಭುತ ಐತಿಹಾಸಿಕ ಜಯದ ಬಗ್ಗೆ ಬಹಳ ಹೆಮ್ಮೆ ಇತ್ತು. ಆ ಕಾರಣಕ್ಕಾಗಿ ಕೋರೆಗಾಂವ್‍ನಲ್ಲಿನ ಮಹಾರ್ ಸೈನಿಕರ ಈ ಸ್ಮಾರಕಕ್ಕೆ ಅಂಬೇಡ್ಕರರು ಪ್ರತೀ ವರ್ಷ ಕುಟುಂಬ ಸಮೇತರಾಗಿ ಭೇಟಿ ನೀಡುತ್ತಿದ್ದರು.

ಅಲ್ಲದೆ ಅಗಲಿದ ಯೋಧರಿಗೆ ಬಾಬಾಸಾಹೇಬರು ತಮ್ಮ ಅಭೂತಪೂರ್ವ ನಮನ ಸಲ್ಲಿಸುತ್ತಿದ್ದರು. ಯಾಕೆಂದರೆ ಬಾಬಾಸಾಹೇಬರಿಗೆ ತಿಳಿದಿತ್ತು ಕೋರೇಗಾಂವ್‍ನಲ್ಲಿ ಮಹಾರ್ ಸೈನಿಕರು ಹೋರಾಡಿದ್ದು ಒಂದು ಸಾಮ್ರಾಜ್ಯದ ವಿರುದ್ಧವಲ್ಲ ವ್ಯವಸ್ಥೆಯ ವಿರುದ್ಧ, ಯಾವ ವ್ಯವಸ್ಥೆ ತಮ್ಮನ್ನು ಕೀಳಾಗಿ ಕಾಣುತ್ತಿತ್ತೋ ಪ್ರಾಣಿಗಳಿಗಿಂತ ಹೀನಾಯವಾಗಿ ನಡೆಸಿಕೊಳ್ಳುತ್ತಿತ್ತೋ ಅಂತಹ ದೌರ್ಜನ್ಯಕೋರ ಸಂಸ್ಕೃತಿಯ ವಿರುದ್ಧ ಎಂದು.

ಒಂದು ವೇಳೆ ಕೋರೇಗಾಂವ್ ಯುದ್ಧ ನಡೆಯದಿದ್ದರೆ ಪೇಶ್ವೆಗಳ ಅಟ್ಟಹಾಸ ಮತ್ತೂ ಮುಂದುವರಿದಿರುತ್ತಿತ್ತು. ಅಂದಹಾಗೆ ಅಂತಹ ಅಟ್ಟಹಾಸದ ವಾತಾವರಣದಲ್ಲಿ ಆ ಯುದ್ಧ ನಡೆದು 73 ವರ್ಷಗಳ ನಂತರ(1891) ಹುಟ್ಟಿದ ಬಾಬಾಸಾಹೇಬ್ ಅಂಬೇಡ್ಕರರು ಶಿಕ್ಷಣ ಪಡೆಯಲಾಗುತ್ತಿತ್ತೇ? ವಿದೇಶಿ ವ್ಯಾಸಂಗಕ್ಕೆ ತೆರಳಲಾಗುತ್ತಿತ್ತೆ? ಸಂವಿಧಾನ ಶಿಲ್ಪಿಯಾಗಲು ಸಾಧ್ಯವಿತ್ತೆ? ಈ ನಿಟ್ಟಿನಲ್ಲಿ ಕೋರೇಗಾಂವ್ ಯುದ್ಧ ಅಸ್ಪೃಶ್ಯರ ಹೋರಾಟದ ಇತಿಹಾಸದಲ್ಲಿ ಒಂದು ಅಪರೂಪದ ಮೈಲುಗಲ್ಲಾಗಿ ಉಳಿಯುತ್ತದೆ. ಹಾಗೆಯೇ ಸ್ಫೂರ್ತಿಯ ಸಂಕೇತವೂ ಅದಾಗುತ್ತದೆಯೆಂದರೆ ಅತಿಶಯೋಕ್ತಿಯೇನಲ್ಲ.

(ಈ ಲೇಖನ 2014 ರಲ್ಲಿ ಬಿಡುಗಡೆಯಾದ ನನ್ನ ಮೂರನೇ ಕೃತಿ “ಎದೆಗೆ ಬಿದ್ದ ಗಾಂಧಿ” ಯಲ್ಲಿ ಪ್ರಕಟವಾಗಿದೆ. – ರಹೊಬ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಮತಾಂತರ ನಿಷೇಧ ಕಾಯ್ದೆ : ಅಸಾಂವಿಧಾನಿಕ ಶಾಸನ ಮಾನವೀಯ ಜಗತ್ತಿಗೆ ಮಾನವ ಸೌಹಾರ್ದತೆಗೆ ಮತ ಅನಿವಾರ್ಯವಲ್ಲ ನಿಮಿತ್ತ ಮಾತ್ರ

Published

on

ಸಾಂದರ್ಭಿಕ ಚಿತ್ರ
  • ನಾ ದಿವಾಕರ

ಒಂದು ಸ್ವಸ್ಥ ಸಮಾಜಕ್ಕೆ ಬೇಕಾಗಿರುವುದು ಪರಸ್ಪರ ಸೌಹಾರ್ದಯುತವಾಗಿ ಬಾಳಲು ಅನುಕೂಲವಾದಂತಹ ಮನುಜ ಸಂಬಂಧಗಳು. ಮನುಜ ಸಂಬಂಧಗಳನ್ನು ನಿರ್ಮಿಸಲು ಬೇಕಿರುವುದು ಪರಸ್ಪರ ವಿಶ್ವಾಸ ಮತ್ತು ನಂಬಿಕೆ. ಈ ನಂಬಿಕೆಗಳನ್ನು ರೂಢಿಸಿಕೊಳ್ಳಲು ಬೇಕಿರುವುದು ಮಾನವ ಪ್ರಜ್ಞೆ. ಇದನ್ನು ಹೊರತಾದ ಯಾವುದೇ ಅಸ್ಮಿತೆಗಳು ಮಾನವ ಜಗತ್ತಿಗೆ ಅನಗತ್ಯವಾದುದು. ಹಾಗೆಯೇ ಒಂದು ಮತ ಅಥವಾ ಧರ್ಮ ಅಥವಾ ಜಾತಿ, ಪಂಥ, ಪಂಗಡ ಇತ್ಯಾದಿ.

ಆದರೂ ಮಾನವ ಸಮಾಜ ತನ್ನ ಸಾಂಸ್ಥಿಕ, ಸಾಮುದಾಯಿಕ, ಜನಾಂಗೀಯ ಅಸ್ಮಿತೆಗಳಿಂದಾಚೆಗೆ ಬದುಕುವುದನ್ನೇ ಕಲಿತಿಲ್ಲ ಎನ್ನುವುದು ನಮ್ಮ ಕಣ್ಣೆದುರಿನ ವಾಸ್ತವ. ಮಾನವ ಸಮಾಜವೇ ರೂಪಿಸಿಕೊಂಡ ಒಂದು ನಿರ್ದಿಷ್ಟ ಮತ, ಹಿಂದೂ-ಇಸ್ಲಾಂ-ಕ್ರೈಸ್ತ ಇತ್ಯಾದಿ, ತನ್ನ ಸಾಂಸ್ಥಿಕ ಸ್ವರೂಪವನ್ನು ಗಟ್ಟಿಗೊಳಿಸುವ ಹಾದಿಯಲ್ಲಿ ಮಾನವೀಯ ಸ್ಪರ್ಶವನ್ನೇ ಕಳೆದುಕೊಂಡು ಅಸ್ಮಿತೆಗಳ ಶರಮಂಚದ ಮೇಲೆ ಆಸೀನರಾಗಿಬಿಡುತ್ತವೆ.

ಈ ಅಸ್ಮಿತೆಗಳ ಚೌಕಟ್ಟಿನಲ್ಲೇ ಹುಟ್ಟಿ ಬೆಳೆದು ತಮ್ಮ ವ್ಯಕ್ತಿಗತ ನಂಬಿಕೆಗಳನ್ನು ರೂಢಿಸಿಕೊಳ್ಳುವ ಮನುಷ್ಯನಿಗೆ ಮತ ಅಥವಾ ಧರ್ಮ ಎನ್ನುವುದು ಒಂದು ಸಾಂತ್ವನದ ನೆಲೆಯಾಗಿ ಮಾತ್ರವೇ ನೆರವಾಗುತ್ತದೆ. ನಿತ್ಯ ಜೀವನದ ಸಂಕಷ್ಟಗಳನ್ನು ಮರೆಯಲು, ತನ್ನ ಬದುಕಿನ ಹತಾಶೆ ಮತ್ತು ಆತಂಕಗಳನ್ನು ಹೋಗಲಾಡಿಸಿಕೊಳ್ಳಲು ಮನುಷ್ಯ ಜೀವಿಗೆ ತನ್ನ ವ್ಯಾಪ್ತಿಗೆ ನಿಲುಕದ ಅತೀತ ಶಕ್ತಿಯ ಮೊರೆ ಹೋಗುವುದು ಅನಿವಾರ್ಯವಲ್ಲವಾದರೂ, ಹಲವಾರು ಸಂದರ್ಭಗಳಲ್ಲಿ ಅವಶ್ಯಕವಾಗಿಬಿಡುತ್ತದೆ.

ಬಡತನದ ಬೇಗುದಿ, ಹಸಿವು, ಸಾಮಾಜಿಕ ತಾರತಮ್ಯ , ದೌರ್ಜನ್ಯ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಜಾತಿ ಶ್ರೇಷ್ಠತೆಯಿಂದ ಪೋಷಿಸಲ್ಪಡುವ ಅಸ್ಪೃಶ್ಯತೆ ತಳಸಮುದಾಯಗಳ ಬದುಕಿನ ಹಾದಿಗೆ ಮುಳ್ಳುಗಳಾಗಿಯೇ ಕಾಣುತ್ತದೆ. ಈ ಸಾಮಾಜಿಕ ಅನ್ಯಾಯಗಳ ಚೌಕಟ್ಟಿನಲ್ಲೇ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಮತ್ತು ಘನತೆಯ ಬದುಕಿನ ಹಕ್ಕಿನಿಂದ ವಂಚಿತನಾಗುವ ವ್ಯಕ್ತಿ ಅಥವಾ ಸಮುದಾಯ, ಜನ್ಮದಾರಭ್ಯ ಒದಗಿಬಂದ ಮತ ಅಥವಾ ಧರ್ಮದ ನೆಲೆಗಳನ್ನು ತೊರೆದು ಮತ್ತೊಂದು ನೆಮ್ಮದಿಯ ತಾಣವನ್ನು ಅರಸುವುದು ಒಂದು ಸಹಜ ಸ್ವಾಭಾವಿಕ ಪ್ರಕ್ರಿಯೆ.

ಇಂದು ವ್ಯಾಪಕ ಚರ್ಚೆ ಮತ್ತು ವಿವಾದಕ್ಕೊಳಗಾಗಿರುವ ಮತಾಂತರದ ಪ್ರಶ್ನೆಯನ್ನೂ ಹೀಗೆಯೇ ನೋಡಬೇಕಿದೆ. ಸಾಂವಿಧಾನಿಕವಾಗಿ ಒದಗಿಸಲಾಗಿರುವ ವ್ಯಕ್ತಿಸ್ವಾತಂತ್ರ್ಯದೊಂದಿಗೇ ಭಾರತದ ಪ್ರಜೆಗಳಿಗೆ ತಮ್ಮ ಆಯ್ಕೆಯನುಸಾರ ಯಾವುದೇ ಮತವನ್ನು ಅನುಸರಿಸುವ ಸ್ವಾತಂತ್ರ್ಯವನ್ನೂ ನೀಡಲಾಗಿದೆ. ಸಂವಿಧಾನದ ಮೂರನೆಯ ಪರಿಚ್ಚೇದದಲ್ಲಿ ಮೂಲಭೂತ ಹಕ್ಕುಗಳನ್ನು ಪ್ರಸ್ತಾಪಿಸಲಾಗಿದೆ.

ಸಂವಿಧಾನ ವಿಧಿ 25 ರಿಂದ 28ರವರೆಗಿನ ನಿಯಮಗಳು ಭಾರತದ ಪ್ರತಿಯೊಬ್ಬ ಪ್ರಜೆಗೂ ಯಾವುದೇ ಧರ್ಮವನ್ನು ಪಾಲಿಸುವ, ಅನುಸರಿಸುವ, ಪ್ರಚಾರ ಮಾಡುವ ಮತ್ತು ಆಚರಿಸುವ ಹಕ್ಕನ್ನು ನೀಡುತ್ತದೆ. ಸಾರ್ವಜನಿಕ ಸುವ್ಯವಸ್ಥೆಯನ್ನು, ನೈತಿಕತೆಯನ್ನು ಮತ್ತು ಆರೋಗ್ಯಕರ ವಾತಾವರಣವನ್ನು ಕಾಪಾಡಿಕೊಳ್ಳುವುದು ಈ ನಿಟ್ಟಿನಲ್ಲಿ ಅವಶ್ಯವಾಗಿರುತ್ತದೆ. ಅಂದರೆ ಯಾವುದೇ ವ್ಯಕ್ತಿಗೆ ತನ್ನ ವ್ಯಕ್ತಿಗತ ಬದುಕಿನಲ್ಲಿ ತನ್ನ ಮತವನ್ನು ತೊರೆದು ಮತ್ತೊಂದು ಮತವನ್ನು ಆಚರಿಸುವ ಹಕ್ಕು ಇರುತ್ತದೆ. ಈ ಸಾಂವಿಧಾನಿಕ ಹಕ್ಕು ಇಂದು ಮತಾಂತರದ ಪ್ರಶ್ನೆಯಾಗಿ ಪರಿಣಮಿಸಿದೆ.

ಮತಾಂತರ ಮತ್ತು ರಾಜಕಾರಣ

1960ರ ದಶಕದಿಂದಲೂ ಭಾರತದಲ್ಲಿ ಮತಾಂತರ ಒಂದು ರಾಜಕೀಯ ಚೌಕಟ್ಟಿನಲ್ಲೇ ಚರ್ಚೆಗೊಳಗಾಗುತ್ತಿದೆ. ಜನಸಾಮಾನ್ಯರ ಬದುಕಿನಲ್ಲಿ ಯಾವುದೇ ಪ್ರಕ್ಷುಬ್ಧತೆ ಉಂಟುಮಾಡದ ಈ ವಿದ್ಯಮಾನ ರಾಜಕೀಯ ವಲಯದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡುತ್ತದೆ. ಬಿಜೆಪಿ ಸರ್ಕಾರಗಳಿಗೆ ಮತ್ತು ಸಂಘಪರಿವಾರಕ್ಕೆ ತಮ್ಮ ಹಿಂದುತ್ವ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸಲು ಮತಾಂತರದ ಪ್ರಶ್ನೆ ಒಂದು ಪ್ರಬಲ ಅಸ್ತ್ರವಾಗಿದೆ. “ ಅವಿದ್ಯಾವಂತ, ಬಡ ಹಿಂದೂಗಳು ಹಿಂದೂ ಧರ್ಮದ ವಿರುದ್ಧ ನಡೆಯುತ್ತಿರುವ ಅಪಪ್ರಚಾರಕ್ಕೆ ಬಲಿಯಾಗಿ ಅನ್ಯಧರ್ಮಗಳನ್ನು ಸ್ವೀಕರಿಸುತ್ತಿದ್ದಾರೆ.

ಹಾಗಾಗಿ ಇತರ ರಾಜ್ಯಗಳಲ್ಲಿನ ಮತಾಂತರ ನಿಷೇಧ ಕಾಯ್ದೆಗಳನ್ನು ಪರಾಮರ್ಶಿಸಿ ರಾಜ್ಯದಲ್ಲೂ ಅಂತಹುದೇ ಕಾಯ್ದೆಯನ್ನು ಜಾರಿಗೊಳಿಸಬೇಕು ” ಎಂದು ಭಾಜಪದ ಮಂತ್ರಿಗಳೊಬ್ಬರು 2009ರಲ್ಲೇ ಹೇಳಿದ್ದುಂಟು. ಈಗ ಬೊಮ್ಮಾಯಿ ಸರ್ಕಾರ ಇಂತಹ ಕಾಯ್ದೆಯೊಂದನ್ನು ಜಾರಿಗೊಳಿಸಲು ಮುಂದಾಗಿದೆ.

ಕ್ರೈಸ್ತ ಮಿಷನರಿಗಳು ಬಲವಂತವಾಗಿ, ಪ್ರಲೋಭನೆಗಳನ್ನೊಡ್ಡಿ, ಆಸೆ ಆಮಿಷಗಳನ್ನು ತೋರಿಸಿ ಮತಾಂತರಕ್ಕೆ ಪ್ರಚೋದಿಸುತ್ತಿದ್ದಾರೆ ಎಂಬ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲದಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಕೆಲವು ಮತೀಯ ಕಾವಲುಪಡೆಗಳ ಉನ್ಮತ್ತ ಭಾವನೆ ಮತ್ತು ಅಭಿಪ್ರಾಯಗಳನ್ನೇ ಅಂತಿಮ ಸತ್ಯ ಎಂದೆಣಿಸುವುದು ಪ್ರಸ್ತುತ ಸನ್ನಿವೇಶಕ್ಕೆ ಕಾರಣವಾಗಿದೆ. “ಮತಾಂತರವನ್ನು ಒಪ್ಪಬಹುದು ಆದರೆ ಬಲವಂತದ ಮತಾಂತರ ಒಪ್ಪಲಾಗುವುದಿಲ್ಲ” ಎಂಬ ಉದಾರವಾದಿ ಚಿಂತನೆಗೂ ಸಾಕಷ್ಟು ಮೆರುಗು ನೀಡುವಲ್ಲಿ ಪ್ರಸ್ತುತ ಬೆಳವಣಿಗೆಗಳು ಸಹಕಾರಿಯಾಗಿವೆ.

ಭಾರತದ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಮತ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ಪಾಲಿಸುವ ಸಂವಿಧಾನಾತ್ಮಕ ಹಕ್ಕು ಇರುವುದಾದರೂ, ಸಂವಿಧಾನವನ್ನು ಒಪ್ಪಿರುವ ರಾಜಕೀಯ ಪಕ್ಷಗಳೇ ಮತಾಂತರದ ವಿರುದ್ಧ ಸಮರ ಸಾರುತ್ತಿರುವುದು ಮತನಿರಪೇಕ್ಷ ಸಂವಿಧಾನಕ್ಕೆ ದ್ರೋಹ ಬಗೆದಂತಾಗಿದೆ.

ಸ್ವಾತಂತ್ರ್ಯಪೂರ್ವದಲ್ಲೂ ಸಹ, 1936ರಲ್ಲಿ ರಾಯ್‍ಘರ್, 1942ರಲ್ಲಿ ಸರಗುಜಾ, 1946ರಲ್ಲಿ ಉದಯ್‍ಪುರ ಸಂಸ್ಥಾನಗಳು ಮತಾಂತರ ನಿಷೇದ ಕಾಯ್ದೆಯನ್ನು ಜಾರಿಗೊಳಿಸಿದ್ದನ್ನು ದಾಖಲಿಸಲಾಗಿದೆ. ಸ್ವತಂತ್ರ ಭಾರತದಲ್ಲಿ ಮೊಟ್ಟ ಮೊದಲನೆಯದಾಗಿ ಧರ್ಮ ಪರಿವರ್ತನೆಯ ವಿರುದ್ಧ ಶಾಸನ ಜಾರಿಗೊಳಿಸಿದ್ದು ಒರಿಸ್ಸಾದಲ್ಲಿ, 1967ರ ಒರಿಸ್ಸಾ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯ ಮೂಲಕ.

ಈ ಕಾಯ್ದೆಯಲ್ಲಿ “ ಯಾವುದೇ ವ್ಯಕ್ತಿಯು ನೇರವಾಗಿ ಅಥವಾ ಪರೋಕ್ಷವಾಗಿ ಮತ್ತೊಬ್ಬ ವ್ಯಕ್ತಿಯನ್ನು, ಪ್ರಲೋಭನೆಯನ್ನು ಒಡ್ಡಿ, ಬಲಾತ್ಕಾರ ಮಾಡಿ ಅಥವಾ ಮೋಸ ಮಾಡಿ, ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಪರಿವರ್ತಿಸುವಂತಿಲ್ಲ ” ಎಂದು ಹೇಳಲಾಗಿದೆ. ತದನಂತರ ಇದೇ ಹಾದಿಯನ್ನು ಅನುಸರಿಸಿ ಮಧ್ಯಪ್ರದೇಶ-1968, ಅರುಣಾಚಲಪ್ರದೇಶ-1978, ಗುಜರಾತ್-2003, ಛತ್ತಿಸ್‍ಗಢ್-2003, ರಾಜಸ್ತಾನ-2005, ಹಿಮಾಚಲ ಪ್ರದೇಶ-2006 ಮತ್ತು ತಮಿಳುನಾಡು-2002 ರಲ್ಲಿ ಇದೇ ರೀತಿಯ ಶಾಸನವನ್ನು ಜಾರಿಗೊಳಿಸಿದ್ದವು. ಈಗ ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದು ಇದು ಮೂಲತಃ ಮುಸ್ಲಿಂ ಯುವಕರ ಮೇಲೆ ಗುಂಪು ಹಲ್ಲೆ ನಡೆಸಲು ಮತೀಯ ಕಾವಲುಪಡೆಗಳಿಗೆ ಮುಕ್ತ ಅವಕಾಶ ನೀಡಿದಂತಾಗಿದೆ. ತಮಿಳುನಾಡಿನಲ್ಲಿ 2004ರಲ್ಲಿ ಈ ಕಾಯ್ದೆಯನ್ನು ಹಿಂಪಡೆಯಲಾಯಿತು.

1950ರಲ್ಲಿ ಸಂವಿಧಾನವನ್ನು ಅನುಷ್ಟಾನಗೊಳಿಸಿದ ಸಂದರ್ಭದಲ್ಲಿ ಸಂವಿಧಾನದ ವಿಧಿ 25ರ ಅಡಿ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ತನ್ನದೇ ಆದ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ, ಪಾಲಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ಮಾನ್ಯ ಮಾಡಲಾಯಿತು. ಹಾಗಾಗಿ ಈ ರಾಜ ಸಂಸ್ಥಾನಗಳ ಶಾಸನಗಳು ಅನೂರ್ಜಿತವಾದವು. ಆದಾಗ್ಯೂ ಹೆಚ್ಚು ಸಂಖ್ಯೆಯ ಆದಿವಾಸಿಗಳನ್ನೊಳಗೊಂಡಿದ್ದ ಮಧ್ಯ ಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ವ್ಯಾಪಕವಾಗಿ ಕಾರ್ಯನಿರತವಾಗಿದ್ದ ಕ್ರೈಸ್ತ ಮಿಷನರಿಗಳ ಚಟುವಟಿಕೆಗಳ ಬಗ್ಗೆ ಗುಮಾನಿ ವ್ಯಕ್ತವಾಗುತ್ತಿದ್ದ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶ ಸರ್ಕಾರವು ಮಿಷನರಿಗಳ ಕಾರ್ಯವೈಖರಿಯ ಮೇಲೆ ನಿಗಾವಹಿಸಲು ಸಮಿತಿಯೊಂದನ್ನು ನೇಮಿಸಿತ್ತು.

ಸಮಿತಿಯು ತನ್ನ ವರದಿಯಲ್ಲಿ ವಿದೇಶದಿಂದ ಹರಿದುಬರುವ ಹಣದ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ್ದು, ಸಮಾಜ ಸೇವೆ ಮತ್ತು ದಾನಶೀಲತೆಯ ಹೆಸರಿನಲ್ಲಿ ದುರುಪಯೋಗ ನಡೆಯಬಹುದೆಂದು ಶಂಕೆ ವ್ಯಕ್ತಪಡಿಸಿತ್ತು. ಈ ಸಮಿತಿಯ ವರದಿಯೇ ಒರಿಸ್ಸಾದ ಕಾಯ್ದೆಗೆ ತಳಹದಿಯಾಗಿ ಪರಿಣಮಿಸಿತ್ತು. ಕರ್ನಾಟಕದ ಕಾಯ್ದೆಗೂ ಇದೇ ತಳಹದಿಯಾಗಿದೆ.

ಮತಾಂಧ ಪಡೆಗಳು ಮತ್ತು ಮತಾಂತರ

ಪ್ರಸ್ತುತ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಥವಾ ಸಂಘಪರಿವಾರ ಹೇಳುವ ಮಟ್ಟಿಗೆ ಮತಾಂತರ ನಡೆಯುತ್ತಿಲ್ಲ. ಆದರೆ ಕೈಯ್ಯಲ್ಲಿ ಬೈಬಲ್ ಹಿಡಿದು ಓಡಾಡುವುದೇ ಮಹಾಪರಾಧವಾಗಿರುವುದಂತೂ ಸತ್ಯ. ಕೋಲಾರದ ಶ್ರೀನಿವಾಸಪುರದಲ್ಲಿ ಕರಪತ್ರ ಹಂಚುತ್ತಿದ್ದ ಕ್ರೈಸ್ತರ ಮೇಲೆ ಮತೀಯ ಕಾವಲುಪಡೆಗಳು ದಾಳಿ ನಡೆಸಿವೆ. ಇತ್ತೀಚೆಗೆ ಬೇಲೂರಿನಲ್ಲೂ ಪ್ರಾರ್ಥನಾ ಸಭೆಯೊಂದರ ಮೇಲೆ ದಾಳಿ ನಡೆಸಲಾಗಿತ್ತು. ಧರ್ಮ ಬೋಧನೆಗೆ ಮತ್ತು ಪ್ರಚಾರಕ್ಕೆ ಸಂವಿಧಾನದಲ್ಲಿ ಅವಕಾಶವಿದೆ.

ಈ ಬೋಧನೆಯ ಮೂಲಕ ಮತಾಂತರಕ್ಕೆ ಬಲವಂತ ಮಾಡುವುದನ್ನು ನಿರ್ಬಂಧಿಸಲಾಗಿದೆ. ಆದರೆ ಈ ಬಲವಂತದ ಮತಾಂತರದ ಅರ್ಥ ಏನೆಂದು ತಿಳಿಯಬೇಕಲ್ಲವೇ ? ಕ್ರೈಸ್ತ ಮತ ಪ್ರಚಾರಕರ ಬೋಧನೆಗೆ ಶರಣಾಗಿ ತಮ್ಮ ಮೂಲ ಮತವನ್ನು ತ್ಯಜಿಸುವವರಿಗೆ ಸಂವಿಧಾನ ಆ ಹಕ್ಕನ್ನು ನೀಡಿದೆಯಲ್ಲವೇ ? ಇದನ್ನು ನಿರ್ಬಂಧಿಸುವುದೆಂದರೆ ಅದು ಸಾಂವಿಧಾನಿಕ ವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತದೆ.

ಆದರೆ ಕರ್ನಾಟಕದಲ್ಲಿ ಮತಾಂತರ ಪ್ರಕ್ರಿಯೆ ವ್ಯಾಪಕವಾಗಿ ನಡೆಯುತ್ತಿದೆ ಎನ್ನಲು ಯಾವುದೇ ಪುರಾವೆಗಳಿಲ್ಲ. ಕ್ರೈಸ್ತ ಧರ್ಮ ಪ್ರಚಾರಕರು ಗ್ರಾಮಗಳಲ್ಲಿ, ಆದಿವಾಸಿ ಹಾಡಿಗಳಲ್ಲಿ ತಮ್ಮ ಧರ್ಮ ಪ್ರಚಾರ ಮಾಡಿದ ಮಾತ್ರಕ್ಕೆ ಮತಾಂತರಕ್ಕೆ ಯತ್ನಿಸುತ್ತಿದ್ದಾರೆಂದು ಭಾವಿಸುವುದೂ ತರವಲ್ಲ. ಹಾಗೆ ನೋಡಿದರೆ ಧರ್ಮ ಪ್ರಚಾರ ಕಾರ್ಯವನ್ನು ಎಲ್ಲ ಧರ್ಮಗಳೂ ಕೈಗೊಳ್ಳುತ್ತವೆ. ಹಿಂದೂ ಧರ್ಮದ ಪ್ರಚಾರಕರೂ ಪ್ರವಚನಗಳನ್ನು ನೀಡುತ್ತಲೇ ಇರುತ್ತಾರೆ.

ದಿನಬೆಳಗಾದರೆ ಟಿವಿ ವಾಹಿನಿಗಳಲ್ಲಿ ಪ್ರವಚನಗಳ ಹೊಳೆಯೇ ಹರಿಯುತ್ತದೆ. ಇವೆಲ್ಲವನ್ನೂ ಮತಾಂತರದ ಪ್ರಯತ್ನಗಳೆಂದು ಭಾವಿಸಲು ಸಾಧ್ಯವೇ ? ಅಥವಾ ಕ್ರೈಸ್ತರು ಕೈಗೊಳ್ಳುವ ಪ್ರಚಾರ ಮಾತ್ರ ಮತಾಂತರ ಪ್ರೇರಿತ ಎಂದು ಭಾವಿಸಲು ಸಾಧ್ಯವೇ ? ಇನ್ನು ಮೂವತ್ತು ವರ್ಷಗಳಲ್ಲಿ ಭಾರತ ಕ್ರೈಸ್ತ ಅಥವಾ ಮುಸಲ್ಮಾನ ರಾಷ್ಟ್ರವಾಗುತ್ತದೆ, ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ ಎಂದು ಸಂಘಪರಿವಾರ ಮೂವತ್ತು ವರ್ಷಗಳಿಂದ ಹೇಳುತ್ತಲೇ ಬರುತ್ತಿದೆ. ಹುಯಿಲೆಬ್ಬಿಸುತ್ತಿದೆ. ಪರಿವಾರದ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿಯ ಪ್ರಚಾರವೂ ಒಂದು ಅಸ್ತ್ರವಷ್ಟೆ.

2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಕ್ರೈಸ್ತರ ಜನಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. 2001ರಲ್ಲಿ ಶೇ 1.91 (11.42 ಲಕ್ಷ) ಇದ್ದುದು 2011ರಲ್ಲಿ ಶೇ 1.87 (10.09 ಲಕ್ಷ)ಕ್ಕೆ ಇಳಿದಿದೆ. ಜನಸಂಖ್ಯಾ ಪ್ರಮಾಣದ ಹೆಚ್ಚಳದ ಪ್ರಮಾಣ ಕ್ರೈಸ್ತರಲ್ಲಿ ಶೇ 15.54ರಷ್ಟಿದೆ. ಮುಸಲ್ಮಾನರ ಜನಸಂಖ್ಯೆ 2001ರಲ್ಲಿ ಶೇ 12.12ರಷ್ಟಿದ್ದುದು (64.63 ಲಕ್ಷ) 2011ರಲ್ಲಿ ಶೇ 12.91ಕ್ಕೆ (78.93 ಲಕ್ಷ) ಏರಿದೆ. ಮುಸ್ಲಿಮರ ಜನಸಂಖ್ಯಾ ಹೆಚ್ಚಳದ ಪ್ರಮಾಣ ಇದೇ ಅವಧಿಯಲ್ಲಿ ಶೇ 29.52ರಿಂದ ಶೇ 24.60ಕ್ಕೆ ಇಳಿದಿದೆ. ಅಂದರೆ ಭಾರತ ಪಾಕಿಸ್ತಾನವಾಗುತ್ತದೆ, ಮುಸ್ಲಿಮರು, ಕ್ರೈಸ್ತರು ಬಹುಸಂಖ್ಯಾತರಾಗುತ್ತಾರೆ ಎಂಬ ಹುರುಳಿಲ್ಲದ ಪ್ರಚಾರಗಳನ್ನು ಈ ಅಧಿಕೃತ ಅಂಕಿಅಂಶಗಳೇ ಅಲ್ಲಗಳೆಯುತ್ತವೆ ಅಲ್ಲವೇ ?

ಭಾರತದ ಸಂದರ್ಭದಲ್ಲಿ ಮತಾಂತರ ಎಂಬ ಪದ ಬಳಕೆಯಲ್ಲೇ ಸಮಸ್ಯೆ ಕಾಣುತ್ತದೆ. ಹಿಂದೂ ಎಂದು ಹೇಳಲಾಗುವ ಮತ ಮೂಲತಃ ಹಲವು ಜಾತಿಗಳ ಒಕ್ಕೂಟವೇ ಹೊರತು ಒಂದು ನಿರ್ದಿಷ್ಟ ಸಾಂಸ್ಥಿಕ ಸ್ವರೂಪವನ್ನು ಹೊಂದಿಲ್ಲ. ಈ ಸಾಂಸ್ಥಿಕತೆಯನ್ನು ರೂಪಿಸಲು ಸಂಘಪರಿವಾರ ಪ್ರಯತ್ನಿಸುತ್ತಿದೆ. ಅಂಬೇಡ್ಕರ್ ಮತಾಂತರಕ್ಕೆ ಎರಡು ಕಾರಣಗಳನ್ನು ನೀಡುತ್ತಾರೆ. ಮೊದಲನೆಯದು ಅಸ್ತಿತ್ವಕ್ಕೆ ಸಂಬಂಧಿಸಿದ್ದು, ಎರಡನೆಯದು ಆಧ್ಯಾತ್ಮಿಕವಾದದ್ದು. ಅಸ್ತಿತ್ವಕ್ಕೆ ಸಂಬಂಧಿಸಿದಂತೆ ದಲಿತರು ನಿತ್ಯ ಎದುರಿಸುತ್ತಿರುವ ದೌರ್ಜನ್ಯ, ತಾರತಮ್ಯ, ಅಸ್ಪೃಶ್ಯತೆಯ ಅಪಮಾನ ಮುಂತಾದುವನ್ನು ಅಂಬೇಡ್ಕರ್ ಉದಾಹರಣೆಯಾಗಿ ನೀಡುತ್ತಾರೆ. ಇದನ್ನು ಅವರು ವರ್ಗ ಸಂಘರ್ಷ ಎಂದೇ ಭಾವಿಸುತ್ತಾರೆ.

“ ಅದು ಎರಡು ವ್ಯಕ್ತಿಗಳು ಅಥವಾ ಗುಂಪುಗಳ ನಡುವಿನ ಸಂಘರ್ಷವಲ್ಲ. ಅದು ಎರಡು ವರ್ಗಗಳ ನಡುವಿನ ಸಂಘರ್ಷ. ಒಬ್ಬ ವ್ಯಕ್ತಿ ಮತ್ತೊಬ್ಬನ ಮೇಲೆ ದಬ್ಬಾಳಿಕೆ ಅಥವಾ ಅನ್ಯಾಯ ಮಾಡುವುದಲ್ಲ. ಒಂದು ವರ್ಗ ಮತ್ತೊಂದರ ಮೇಲೆ ಮಾಡುವ ಅನ್ಯಾಯ. ಈ ಸಂಘರ್ಷಗಳನ್ನು ಗಮನಿಸಿದರೆ ಒಂದು ಸಂಗತಿ ಸ್ಪಷ್ಟವಾಗುತ್ತದೆ. ನೀವು ಮೇಲ್ವರ್ಗದವರೊಡನೆ ಸಮಾನತೆಯನ್ನು ಅಪೇಕ್ಷಿಸಿದಾಗ ಸಂಘರ್ಷ ಉಂಟಾಗುತ್ತದೆ. ನೀವು ನ್ಯಾಯಕ್ಕಾಗಿ ಆಗ್ರಹಿಸುವ ನಿಮ್ಮ ವರ್ತನೆಯೇ ಅವರ ಆಕ್ರೋಶಕ್ಕೆ ಕಾರಣವಾಗುತ್ತದೆ.ಇದು ಅವರ ಅಹಂಗೆ ಚ್ಯುತಿ ಉಂಟುಮಾಡುತ್ತದೆ.” “ ಸ್ಪೃಶ್ಯರು ಮತ್ತು ಅಸ್ಪೃಶ್ಯರ ನಡುವಿನ ಸಂಘರ್ಷ ನಿರಂತರವಾದುದು, ಶಾಶ್ವತವಾದುದು, ಏಕೆಂದರೆ ಅವರ ಪ್ರಕಾರ ನಿಮಗೆ ಕೆಳಸ್ತರದ ಸ್ಥಾನ ಕಲ್ಪಿಸಿರುವ ಧರ್ಮ ಸನಾತನವಾದುದು ಅದನ್ನು ಬದಲಾಯಿಸಲಾಗುವುದಿಲ್ಲ ” ಎಂದು ಅಂಬೇಡ್ಕರ್ ಹೇಳುತ್ತಾರೆ. ಈ ಹಿನ್ನೆಲೆಯಲ್ಲೇ ಅಂಬೇಡ್ಕರ್ ದಲಿತರ ಮತಾಂತರದ ಅಪೇಕ್ಷೆಯನ್ನು ಅಸ್ತಿತ್ವದ ಸಮಸ್ಯೆ ಎಂದೇ ಗುರುತಿಸುತ್ತಾರೆ.

ಹಿಂದೂ ವ್ಯಕ್ತಿ ಮತಾಂತರ ಹೊಂದಿದರೆ ಅವರು ಜಿಗಿಯುವುದು ಮತದಿಂದದ ಮತಕ್ಕೆ ಅಲ್ಲ, ಒಂದು ಜಾತಿಯಿಂದ ಜಾತಿಯ ಸೋಂಕಿಲ್ಲದ ಮತಕ್ಕೆ. ಮರುಮತಾಂತರವಾದರೆ ಅವರು ತಮ್ಮ ಮೊದಲ ಗೂಡಿಗೇ ಮರಳಬೇಕಲ್ಲವೇ ? ಹಿಂದೂ ಮತಕ್ಕೆ ಮರಳುವವರನ್ನು ಎಲ್ಲಿ ಕೂರಿಸುತ್ತಾರೆ ? ಮತ್ತದೇ ಮೂಲ ಜಾತಿಯ ವೃಕ್ಷಗಳಡಿ ಅಲ್ಲವೇ ? ಇಲ್ಲಿ ವ್ಯಕ್ತಿಗತವಾಗಿ ತನ್ನ ಆರ್ಥಿಕ ಸ್ಥಾನಮಾನಗಳಿಗನುಗುಣವಾಗಿ ಅಸ್ಪೃಶ್ಯತೆ, ತಾರತಮ್ಯ ಎದುರಿಸದಿದ್ದರೂ ಸಾಮುದಾಯಿಕವಾಗಿ ಇದು ಇದ್ದೇ ಇರುತ್ತದೆ. ಇದನ್ನು ಹೇಗೆ ಅರ್ಥೈಸುವುದು ? ಇಂದಿಗೂ ನಮ್ಮ ಸಮಾಜವನ್ನು ಕಾಡುತ್ತಿರುವ ಅಸ್ಪೃಶ್ಯತೆಯ ಹಿನ್ನೆಲೆಯಲ್ಲಿ ಇದನ್ನು ನೋಡಿದಾಗ, ಅಸ್ಪೃಶ್ಯ ಸಮುದಾಯಗಳು ತಮ್ಮ ನೆಲೆಯನ್ನು “ ಹಿಂದೂ ” ಎಂದು ಪರಿಭಾವಿಸಲಾಗುವ ಮತದ ಚೌಕಟ್ಟಿನಲ್ಲಿ ಏಕೆ ಕಂಡುಕೊಳ್ಳಬೇಕು. ಕೊಪ್ಪಳದ ದೇವಾಲಯಕ್ಕೆ ಎಂಟು ವರ್ಷದ ಹಸುಳೆ ಪ್ರವೇಶಿಸಿದ್ದಕ್ಕೆ ಬಹಿಷ್ಕಾರ ಹಾಕಿ ದಂಡ ವಿಧಿಸಿದ ಒಂದು ಸಮಾಜಕ್ಕೆ, ಅದೇ ಅಸ್ಪೃಶ್ಯರನ್ನು ನಮ್ಮೊಡನೆ ಇರಿ ಎಂದು ಹೇಳುವ ನೈತಿಕತೆ ಹೇಗಿರಲು ಸಾಧ್ಯ ?

ಅಸ್ಪೃಶ್ಯತೆ, ಜಾತಿ ದೌರ್ಜನ್ಯ, ತಾರತಮ್ಯ ಮತ್ತು ಅಪಮಾನಗಳಿಂದ ವಿಮುಕ್ತಿ ಪಡೆಯುವ ಒಂದು ಸಾರ್ವತ್ರಿಕ ಪ್ರಕ್ರಿಯೆಯಾಗಿ ಮತಾಂತರವೂ ನಡೆಯುತ್ತದೆ. ಹಾಗಾಗಿಯೇ ನಮ್ಮ ಸಂವಿಧಾನದಲ್ಲೂ ಇದಕ್ಕೆ ನಿರ್ಬಂಧಿತ ಅವಕಾಶವನ್ನು ಕಲ್ಪಿಸಲಾಗಿದೆ. ಬಲವಂತದ ಮತಾಂತರ, ಆಮಿಷ ಪ್ರಲೋಭನೆಗಳ ಮೂಲಕ ಮಾಡುವ ಮತಾಂತರವನ್ನು ನಿಷೇಧಿಸುವ ಮುನ್ನ ಸರ್ಕಾರ ಈ ಪದಗಳ ವ್ಯಾಪ್ತಿ ಮತ್ತು ಸ್ಪಷ್ಟವಾದ ಅರ್ಥವನ್ನು ಜನತೆಗೆ ತಿಳಿಸಬೇಕಿದೆ.

ಅವಕಾಶವಂಚಿತರಿಗೆ ಶಿಕ್ಷಣ ನೀಡುವುದು, ಹಸಿದವರಿಗೆ ಅನ್ನ ನೀಡುವುದು, ನೆಲೆಯಿಲ್ಲದವರಿಗೆ ಸೂರು ಒದಗಿಸುವುದು ಆಮಿಷ ಎನಿಸಿಕೊಳ್ಳುವುದಿಲ್ಲ. ಮತ ಮತ್ತು ಧರ್ಮಗಳ ಪರಿಧಿಯಿಂದಾಚೆಗೆ ಇವು ಮಾನವೀಯ ಸಂವೇದನೆಯ ಮಾರ್ಗಗಳಾಗುತ್ತವೆ. ಬಿಜೆಪಿ ಸರ್ಕಾರ ಈ ಪದಗಳ ನಿಷ್ಕರ್ಷೆಯ ಅಧಿಕಾರವನ್ನು ಭಜರಂಗದಳ, ಹಿಂದೂ ಸೇನೆಯಂತ ಮತೀಯ ಕಾವಲುಪಡೆಗಳಿಗೆ ನೀಡುವ ಮೂಲಕ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುವ ಮುಕ್ತ ಅವಕಾಶವನ್ನು ಕಲ್ಪಿಸಿದೆ.

ಈಗ ರಾಜ್ಯ ಸಂಸ್ಕೃತಿ ಇಲಾಖೆಯ ಸಚಿವರು ಲವ್ ಜಿಹಾದ್ ನಿಷೇಧ ಮಸೂದೆಯನ್ನೂ ಮಂಡಿಸುವುದಾಗಿ ಹೇಳಿದ್ದಾರೆ. ಲವ್ ಜಿಹಾದ್ ಒಂದು ಕಪೋಲ ಕಲ್ಪಿತ ಪರಿಕಲ್ಪನೆ ಎಂದು ನ್ಯಾಯಾಲಯಗಳೇ ಹೇಳಿವೆ. ಎರಡು ವಿಭಿನ್ನ ಮತಗಳ ಯುವಕ-ಯುವತಿ ಒಟ್ಟೊಟ್ಟಿಗೆ ಓಡಾಡುವುದೂ ಕಷ್ಟವಾಗುವಂತಹ ಪರಿಸ್ಥಿತಿ ಕರಾವಳಿಯಲ್ಲಿ ಉದ್ಭವಿಸಿದೆ. ಮುಸ್ಲಿಂ ಮತಾಂಧರೂ ಸಹ ಇಂತಹ ದಾಳಿಗಳನ್ನು ನಡೆಸುತ್ತಿದ್ದಾರೆ. ಜಾತಿ, ಮತ, ಧರ್ಮ ಮತ್ತು ಸಾಮುದಾಯಿಕ ಅಸ್ಮಿತೆಗಳನ್ನು ದಾಟಿದ ಮನುಜ ಸಂಬಂಧವೂ ಒಂದಿದೆ ಎಂಬ ಸಾಮಾನ್ಯ ಪರಿಜ್ಞಾನವನ್ನೂ ಕಳೆದುಕೊಂಡಿರುವ ಒಂದು ಸಮಾಜದಲ್ಲಿ ಮಾತ್ರ ಈ ರೀತಿಯ ಘಟನೆಗಳು ಸಂಭವಿಸಲು ಸಾಧ್ಯ. 12ನೆಯ ಶತಮಾನದ ಬಸವಣ್ಣನ ಕಾಲದಲ್ಲಿದ್ದ ಅಸ್ಪೃಶ್ಯತೆ ಮತ್ತು ಜಾತಿ ದೌರ್ಜನ್ಯ ಅಪಮಾನಗಳು ಇಂದಿಗೂ ಪ್ರಚಲಿತವಾಗಿವೆ ಎಂದರೆ ನಾವು ನಾಚಿಕೆಯಿಂದ ತಲೆತಗ್ಗಿಸಬೇಕಲ್ಲವೇ ? ಅಂದು ನಡೆದ ಮತಾಂತರದ ಪ್ರಕ್ರಿಯೆಯೇ ಇಂದೂ ನಡೆಯುತ್ತಿದೆ ಎಂದರೆ ಅದನ್ನು ಒಪ್ಪಿಕೊಳ್ಳಬೇಕಲ್ಲವೇ ?

ವಿಶ್ವದ ಶ್ರೇಷ್ಠ ಸಂವಿಧಾನವನ್ನು ಹೊಂದಿರುವ ಭಾರತದಲ್ಲಿ ಅಸ್ಪೃಶ್ಯತೆಯಂತಹ ಅಮಾನುಷ ಆಚರಣೆಯನ್ನು ಇನ್ನೂ ಜೀವಂತವಾಗಿರಿಸಿರುವ ಭಾರತೀಯ ಸಮಾಜ ಮನುಜ ಸಂಬಂಧಗಳನ್ನು ಜಾತಿ-ಮತ-ಧರ್ಮದ ಹಂಗಿಲ್ಲದೆ ಬೆಸೆಯುವ ನಿಟ್ಟಿನಲ್ಲಿ ಮುನ್ನಡೆಯುವ ಸಂಕಲ್ಪ ಮಾಡಬೇಕಿದೆ. ಆದರೆ ಮತಾಂತರ ನಿಷೇಧದಂತಹ ಅಸಾಂವಿಧಾನಿಕ ಶಾಸನಗಳನ್ನು ಜಾರಿಗೊಳಿಸುವ ಮೂಲಕ ಬಿಜೆಪಿ ಸರ್ಕಾರಗಳು ಈ ಮುನ್ನಡೆಯ ಹಾದಿಗಳಿಗೆ ಮುಳ್ಳು ಬೇಲಿಗಳನ್ನು ನಿರ್ಮಿಸುತ್ತಿದೆ. ನಮ್ಮ ಸಂವಿಧಾನದ ಶ್ರೇಷ್ಠತೆ ಇರುವುದು ಈ ಸಮನ್ವಯ ಮತ್ತು ಸೌಹಾರ್ದತೆಯಲ್ಲಿ, ಇದನ್ನು ಕಾಪಾಡಲು ಮತ ಮತ್ತು ಧರ್ಮ ನಿಮಿತ್ತ ಮಾತ್ರ, ಮಾನವೀಯ ಸ್ಪಂದನೆ ಮತ್ತು ನೈತಿಕ ಮೌಲ್ಯಗಳು ಮುಖ್ಯವಾಗುತ್ತವೆ. ಹಿಂದೂ ಎನ್ನಲಾಗುವ ಮತಾಚರಣೆಯಲ್ಲಿ ಮತ್ತು ವೈದಿಕಶಾಹಿಯ ಧಾರ್ಮಿಕ ಚಿಂತನೆಗಳಲ್ಲಿ ಈ ಮನುಜ ಕೇಂದ್ರಿತ ನೈತಿಕತೆ ಇಲ್ಲದ ಹೊರತು ಮತಾಂತರವನ್ನು ನಿರ್ಬಂಧಿಸುವ ನೈತಿಕ ಹಕ್ಕೂ ಇರುವುದಿಲ್ಲ.

ಮತೀಯ ಸೌಹಾರ್ದತೆಯ ಸಹಬಾಳ್ವೆಯ ಹಾದಿಗಳನ್ನು ಹಾಳುಗೆಡಹುವ ಮತಾಂಧ ಶಕ್ತಿಗಳಿಗೆ ಮತ್ತಷ್ಟು ಪ್ರಚೋದನ ನೀಡುವ ಮತಾಂತರ ನಿಷೇಧ ಕಾಯ್ದೆ ಅಸಾಂವಿಧಾನಿಕವಷ್ಟೇ ಅಲ್ಲ, ಅನೈತಿಕವೂ ಹೌದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಹುಜನರು ನಂಬಿರುವ ‘ಕತ್ತೆ ಕಥೆ’..!

Published

on

  • ಪರಶುರಾಮ್. ಎ

ಕತ್ತೆ ಕಥೆ ಇದೇನು ಪಂಚತಂತ್ರ ಕತೆಯೊ ಅಥವಾ ನೀತಿಕತೆಯೋ ಅಲ್ಲ. ನಿಮ್ಮಗಳ ನಿಜ ಜೀವನದಲ್ಲಿ ನೀವುಗಳೇ ನಂಬಿರುವ ಕಥೆಯಿದು. ನಿಮ್ಮ ಇಡೀ ಜೀವನದಲ್ಲಿ ಹಾಸು ಹೊಕ್ಕಾಗಿರುವ ದಿನನಿತ್ಯ ಕೈಮುಗಿದು ಮೂರ್ಖರಾಗಿರುವ ಮೂರ್ಖರನ್ನಾಗಿಸಿರುವ ಕತೆ. ಬಹುಶಃ ಈ ಕಥೆಯಲ್ಲಿ ನೀವುಗಳೇ ನಿಮ್ಮ ನಂಬಕೆಗಳೇ ಪ್ರಧಾನ ಆಗಿವೆ.

ನಂಬಿಕೆ, ಭಕ್ತಿ, ಮೌಲ್ಯಗಳನ್ನು ಬಂಡವಾಳವಾಗಿಸಿಕೊಂಡಿರುವವರೇ ಈ ಕಥೆಯ ಸೃಷ್ಟಿಕರ್ತರು. ಯಾವುದೋ ಒಂದು ಕಾಲದಲ್ಲಿ ಹುಟ್ಟಿರಬಹುದಾದ ಈ ಕಥೆ ಇನ್ನೂ ನಿಮ್ಮನ್ನು ಬಂಧನದಲ್ಲಿ ಇಟ್ಟಿದೆ ಎಂದರೆ ಅದಿನ್ನೆಂತಹ ಕ್ರೂರ ಲಾಭಕೋರ ವ್ಯವಸ್ಥೆ ಇರಬಹುದು ನೀವೇ ಊಹಿಸಿ ಯೋಚಿಸಿ! ಈ ಕಥೆ ಬಗ್ಗೆ ಈಗಾಗಲೇ ಕನ್ನಡದ ಲೇಖಕರು ಭಾಷಣಕಾರರು ಬಹುಜನರಿಗೆ ತಿಳಿಸಿ ಎಚ್ಚರಿಸುತಿದ್ದರು ಬಹುಜನರು ಇನ್ನೂ ಅದೇ ಕುತಂತ್ರ ಷಡ್ಯಂತ್ರಗಳಿಗೆ ಬಲಿಯಾಗಿರುವುದು ಸಮಾಜದ ಅಧೋಗತಿಗೆ ಒಂದು ಕಾರಣವು ಹೌದು. ತಮ್ಮನ್ನು ತಾವು ಶೋಷಿಸಿಕೊಳ್ಳುವುದು ಮತಿಹೀನ ಕೃತ್ಯ ಅಜ್ಞಾನ ಮೌಢ್ಯ ಪ್ರದರ್ಶನವಾಗಿದೆ.

ಡಾ.ಸಿದ್ದಲಿಂಗಯ್ಯ ನವರ “ಕತ್ತೆ ಮತ್ತು ಧರ್ಮ” ಕವನದಲ್ಲಿದೆ ನಾನು ಹೇಳಲು ಹೊರಟ ಸಾರಾಂಶ. (ಬಹುಜನರು ಕತ್ತೆ ಮತ್ತು ಧರ್ಮ ಕವನ ಓದಿ) ನಾನು ಇಲ್ಲಿ ಅದರ ಸಣ್ಣ ಸಾರಾಂಶ ಮಾತ್ರ ಉದಾಹರಿಸುವೆ. ಸಿದ್ದಯ್ಯನೆಂಬ ಅಗಸನಿಗೆ ಕತ್ತೆ ಎಂಬುದು ಜೊತೆಗಾರ, ಅದರೊಂದಿಗೆ ಅಪಾರ ಸ್ನೇಹ ಮಮತೆ ಹೊಂದಿದವನು ಈತ. ಎಷ್ಟರಮಟ್ಟಿಗೆ ಎಂದರೆ ಜನಗಳು ಕತ್ತೆಯನ್ನು ಸಿದ್ದಯ್ಯನ ಸಾಕುಮಗಳು ಅನ್ನುವಷ್ಟು ಪ್ರೀತಿ ಒಬ್ಬರಿಗೊಬ್ಬರಿಗೆ.

ಇಂಥ ತನ್ನ ನೆಚ್ಚಿನ ಕತ್ತೆ ಒಂದು ದಿನ ಇದ್ದಕ್ಕಿದ್ದಂತೆ ಕೊನೆಯುಸಿರೆಳೆದು ಮಲಗಿತು. ದಾರಿಯ ಮೂಲೆಯಲ್ಲಿ ಒಂದು ಕಡೆ ಮಣ್ಣು ಮಾಡಿ ಸಮಾಧಿಗೆ ನಮಿಸಿ ಪೂಜಿಸಿ ನೊಂದ ಸಿದ್ದಯ್ಯ ದೇಶಾಂತರ ಹೊರಟು ಹೋದ. ವ್ಯಾಪಾರಕ್ಕೆ ಅದೇ ದಾರಿಯಲ್ಲಿ ಹೊರಟಿದ್ದ ಜಯಶೆಟ್ಟಿ ಎಂಬುವನು ಅಗಸನ ಪೂಜೆ ನೋಡಿ ಯಾವುದೊ ಮಹಾತ್ಮರ ಸನ್ನಿಧಿಯೆಂದುಕೊಂಡು ಕೈ ಮುಗಿದು ತನ್ನ ವ್ಯಾಪಾರಕ್ಕೆ ಮರಳಿದ.

ಶೆಟ್ಟಿಗೆ ಅವತ್ತು ಲಾಭದ ಮೇಲೆ ಲಾಭ ವ್ಯಾಪಾರ ‘ದಿಲ್ಕುಷ್’ ಆಗಿ ಸಮಾಧಿಗೆ ದೇವರಕಂಬ ಎಣ್ಣೆ ತಂದುಕೊಟ್ಟ. ಈ ಸುದ್ದಿ ಇಡೀ ಊರಿಗೆ ಹರಡಿ ಕೆಲವೇ ದಿನಗಳಲ್ಲಿ ಭಕ್ತರು ಹೆಚ್ಚಾಗಿ ಅಲ್ಲೊಂದು ದೇವಾಲಯ ನಿರ್ಮಾಣವಾಗಿ ಪರಿಷೆ ನಡೆಯೊ ಮಟ್ಟಿಗೆ ಬೆಳೆದಿರುತ್ತೆ. ಆ ದೇವಾಲಯದ ಮುಂದೆ ಭಿಕ್ಷುಕರು ಸಣ್ಣ ಸಣ್ಣ ಅಂಗಡಿಗಳು ಜನಗಳು ವೈದಿಕರು, ದಾನ ನೀಡಲು ಸಾಹುಕಾರರು ಎಲ್ಲರೂ ಸೇರಿರುತ್ತಾರೆ.

ಈ ಸುದ್ದಿ ಅರಮನೆಯ ತಲುಪಿ ರಾಜ ರಾಣಿ ಈ ದೇವಾಲಯ(ಅಲ್ಲಲ್ಲ ಕತ್ತೆ ಸಮಾಧಿ) ನೋಡಲು ಬಯಸಿ ಹೊರಟು ಬರುತ್ತಾರೆ. ವರ್ಷ ಕಳೆದ ನಂತರ ಅಗಸ ಸಿದ್ದಯ್ಯ ತಾನು ಮಾಡಿದ ಕತ್ತೆ ಸಮಾಧಿ ಹುಡುಕಿ ಕಾಣಲು ಬರುತ್ತಾನೆ ಆದರೆ ತಳವಾರರು ಅವನನ್ನು ಕತ್ತು ಹಿಡಿದು ಆಚೆ ತಳ್ಳುತ್ತಾರೆ ಇದಿಷ್ಟು ಕವನದ ಸಾರಾಂಶ.

ಈ ಕವನದಲ್ಲಿ ಬಹುಜನರು ನಂಬಿರಬಹುದಾದ ಅನೇಕ ಮೌಢ್ಯಗಳನ್ನು ಹೊತ್ತಿವೆ. ಜ್ಞಾನದ ಮಾರ್ಗವು ಸಹ ಇದೆ. ನಮಗೆಲ್ಲರಿಗೂ ಗೊತ್ತು ಸಿಂಧೂ ಬಯಲಿನ ನಾಗರೀಕತೆಯಿಂದಲೂ ಇಲ್ಲಿನ ಮೂಲನಿವಾಸಿ ತಳಸಮುದಾಯದ “ಬಹುಜನರು” ಪ್ರಾಣಿ- ಪಕ್ಷಿ. ನಾಯಿ. ಪಶುಸಂಗೋಪನೆ, ಕಾಡು ಪ್ರಾಣಿಗಳ ಬೇಟೆಯಲ್ಲಿ ಬಹು ಪ್ರಸಿದ್ಧರು ನಿಷ್ಣತೆಯುಳ್ಳವರು ಕೂಡಾ.

ಅವು ತಮ್ಮ ಜೀವನದ ಅವಿಭಾಜ್ಯ ಅಂಗವೇನೊ ಎಂಬ ಮಟ್ಟಿಗೆ ಸಹ ಪಳಗಿಸಿ ಸಾಕುತ್ತಿದ್ದರು. ಹೀಗೆಯೇ ಸಿದ್ದಯ್ಯನೆಂಬ ಅಗಸ ತನ್ನ ಕತ್ತೆ ಸಾಕಿದ್ದು ಅದು ಸತ್ತ ನಂತರ ಅದರ ಗುರುತಿಗೆ ಮಣ್ಣು ಮಾಡಿ ಧನ್ಯವಾದಕ್ಕಾಗಿ ಪೂಜೆ ಸಲ್ಲಿಸುವುದು ಸಹ ಈ ನೆಲದ ನೈಜ ಸಂಸ್ಕೃತಿಗಳ ಬಿಂಬವೇ ಅಗಿದೆ.

ಈಗಲೂ ಕೂಡ ನಾವುಗಳು ಸತ್ತವರ ಸಮಾಧಿ ಮೇಲೆ ತುಳಸಿ ಗಿಡ ವಿವಿಧ ಸಸಿ ನೆಟ್ಟು ಪೋಷಿಸುವುದು ಕಾಣಬಹುದು.(ಬೆಂಕಿಯಲ್ಲಿ ದೇಹ ಸುಟ್ಟು ಅದರ ಅಸ್ಥಿಯನ್ನು ನೀರಿನಲ್ಲಿ ಬಿಟ್ಟು ಗುರುತೇ ಇಲ್ಲದಂತೆ ಸಂಬಂಧ ಕಡಿದು ಕೊಳ್ಳುವುದು ಕುತಂತ್ರಿ ಆರ್ಯರ ಸಂಸ್ಕೃತಿಯಾಗಿದೆ ನೆನಪಿರಲಿ).

ಮಹಾನವಮಿ ಅಥವಾ ಮಾರ್ನಾಮಿ ಹಬ್ಬದ ಸಂದರ್ಭದಲ್ಲಿ ತೀರಿ ಹೋದ ಹಿರಿಯರಿಗೆ – ವ್ಯಕ್ತಿಗಳಿಗೆ ಎಡೆ ಇಡುವುದು ಈ ನೆಲ ಮೂಲದ ಸಂಸ್ಕೃತಿ, ಪಿಂಡ ಪ್ರದಾನವಲ್ಲ. ಆದರೆ ಈ ಕುತಂತ್ರಕ್ಕೂ ಬಹುಜನರು ಬಲಿಯಾಗಿದ್ದಾರೆ. ಕತ್ತೆ ಸಮಾಧಿಗೆ ಪೂಜೆ ಸಲ್ಲಿಸುವಾಗ ಜಯಶೆಟ್ಟಿ ಎಂಬುವ ವ್ಯಾಪಾರಸ್ಥ ನೋಡಿ ಕೈಮುಗಿದು ಹೋದ ನಂತರ ಲಾಭವಾಯಿತು ಎಂಬುದು ಇಲ್ಲಿ ಬೇರೆಯವರು ಯಾರು ಏನು ಮಾಡುತ್ತಿದ್ದಾರೆ ತಾನು ಅವರಂತೆ ಅನುಕರಿಸುವುದು ಸಾಬೀತಾಗುತ್ತದೆ.

ಆಗಲೇ ಹೇಳಿದಂತೆ ನಮ್ಮದಲ್ಲದ ಪಿಂಡ ಪ್ರದಾನವೂ ಸಹ. ನಿಮಗೆ ಗೊತ್ತಿರಲಿ ಧ್ಯಾನ ಯೋಗ ಪ್ರಾರ್ಥನೆ ವಿವಿಧ ಚಟುವಟಿಕೆ ಯಿಂದ ಮನಸ್ಸು ಉಲ್ಲಾಸಿತಗೊಂಡು ಪಾಸಿಟಿವ್ ನಿಂದ ಆ ದಿನದ ಚಟುವಟಿಕೆಯ ಎಲ್ಲದರ ಮೇಲೂ ಪ್ರಭಾವ ಬೀರುತ್ತದೆ. ಶೆಟ್ಟಿಗೆ ಇಲ್ಲಾಗಿದ್ದು ಅದೇ. ನಂತರ ತನ್ನ ಸ್ವಪ್ರಯತ್ನ ಸ್ವಂತ ಶಕ್ತಿ ಮರೆತವನೊಬ್ಬ ಸಮಾಧಿಯ ಬಗ್ಗೆ ದೊಡ್ಡ ಪುಕಾರು ಮಾಡಿ ಮೌಢ್ಯ ಪ್ರಸಾರದಲ್ಲಿ ತೊಡಗಿದ.

ಅಲ್ಲೊಂದು ಜಾತ್ರೆ ಪೂಜೆ ನಡೆಯುತ್ತದೆ. ದಾನ ವ್ಯವಹಾರ ಆಗುವಂತೆ ಮಾಡುವಲ್ಲಿ ತಾನು ತೊಡಗಿಸಿಕೊಂಡ. ಇಂತದ್ದೇ ಪರಿಸ್ಥಿತಿ ಈಗಲೂ ಕಾಣಬಹುದು. ವರ್ಷ ಕಳೆದ ನಂತರ ಕತ್ತೆ ಸಮಾಧಿಯ ಜಾಗ ಹುಡುಕಿ ಸತ್ಯ ಅರಿತಿದ್ದ ಸಿದ್ದಯ್ಯ ಅಲ್ಲಿಗೆ ಬಂದ. ತಳವಾರ್ರು ಅವನನ್ನು ಕತ್ತು ಹಿಡಿದು ಆಚೆ ತಳ್ಳಿ ದೇವಾಲಯದ ಹತ್ತಿರವು ಬಿಟ್ಟು ಕೊಳ್ಳಲಿಲ್ಲ.

ಇದು ಈಗಲೂ ಸತ್ಯ ಬೇಕಾದರೆ ನೋಡಿ ದೇವಸ್ಥಾನದಲ್ಲಿ ಇರುವ ಸತ್ಯವನ್ನು ವಿವಿಧ ಸಂಶೋಧಕರು, ಲೇಖಕರು ಮೌಢ್ಯಭಂಜಕರು ಅದನ್ನು ಬಯಲಿಗೆಳೆಯುವರು ಎಂಬ ಭಯ ಆ ವರ್ಗಕ್ಕಿದೆ. ಅದಕ್ಕೆ ಆಳುವ ಜನರ ಸಹಕಾರವು ಸಿಗುತ್ತದೆ. ಕತ್ತೆ ಸಮಾಧಿ ಎಲ್ಲಿಯಾದರೂ ಪವಾಡ ಸೃಷ್ಟಿಸಲು ಸಾಧ್ಯವ? ಇಂತಹ ಅದೆಷ್ಟೋ ನಿರ್ವೀರ್ಯ ಕತ್ತೆಯ ಸಮಾಧಿಗಳು ಓಣಿ ಓಣಿಗಳಲ್ಲಿ ರಸ್ತೆ ರಸ್ತೆಯಲ್ಲಿ ಸಿಗುತ್ತವೆ.

ಅದೆಲ್ಲವೂ ದೇವಾಲಯವೆಂಬ ಮೌಢ್ಯದ ಆಸ್ಥಾನಗಳೆಂದು ತಿಳಿದಿರಲಿ. ಇನ್ನೂ ಕರ್ನಾಟಕದ ವಾಗ್ಮಿಗಳಾದ ಗುರುರಾಜ ಕರ್ಜಗಿಯವರು ಕರುಣಾಳು ಬಾ ಬೆಳಕೆ 2ನೇ ಸಂಪುಟದಲ್ಲಿ ಉಲ್ಲೇಖಿಸಿರುವಂತೆ ‘ಸಮಾಧಿಯ ಮಹಿಮೆ’ ಎಂಬ ಲೇಖನ ಸಹ ಇದೇ ಕತೆಯ ತಿರುಳು ಹೊಂದಿದೆ. ಗುರುಕುಲದಲ್ಲಿ ಲೋಕ ಜ್ಞಾನ ವ್ಯವಹಾರ ಜ್ಞಾನವಿಲ್ಲದ ದಡ್ಡ ವಿದ್ಯಾರ್ಥಿಯೊಬ್ಬನಿಗೆ ಬರಗಾಲ ಬಂದಾಗ ಗುರುಗಳು ಆತನಿಗೆ ಒಂದು ಕತ್ತೆಯನ್ನು ನೀಡಿ ನಿನ್ನ ಜೀವನ ನೀನು ನೋಡಿಕೊ ಎಂದು ಕಳುಹಿಸಿ ಕೊಡುವರು.

ಮುಂದೊಂದು ದಿನ ಆ ಕತ್ತೆ ಸತ್ತಾಗ ಅದನ್ನು ಮಣ್ಣು ಮಾಡಿ ಸಮಾಧಿಗೆ ತನಗೆ ತಿಳಿದಂತೆ ದಿನನಿತ್ಯ ಪೂಜೆ ಸಲ್ಲಿಸುತ್ತಿರುತ್ತಾನೆ. ಈ ದಡ್ಡ ವಿದ್ಯಾರ್ಥಿಯ ಕತ್ತೆ ಸಮಾಧಿ ಮುಂದೆ ಅದೊಂದು ಜಾಗೃತ ಸ್ಥಾನವೆಂಬಂತೆ ಪ್ರಚಲಿತಗೊಂಡು ಹರಕೆ ಹೊತ್ತು ಜನ ಬಂದರು. ಈತನ ಆದಾಯ ಹೆಚ್ಚಿತು. ಸಮಾಧಿಗೊಂದು ದೇವಾಲಯ ಶಿಷ್ಯನಿಗೆ ಒಂದು ಕೊಠಡಿ ಆಯಿತು.

ಶಿಷ್ಯನ ಗುರುಗಳು ಭೇಟಿಯಾಗಿ ಅದು ಯಾವ ಮಹಾತ್ಮನ ಕಂಡು ನಿನ್ನ ಜೀವನ ಉದ್ದರಿಸಿಕೊಂಡೆ ಎಂದು ಪ್ರಶ್ನಿಸಿದಾಗ ಶಿಷ್ಯ ನೀವು ಕೊಟ್ಟ ಕತ್ತೆಯೇ ನನ್ನ ಪಾಲಿನ ಮಹಾತ್ಮ: ಅದರ ಸಮಾಧಿಯೇ ಈ ದೇವಾಲಯ. ಅದ ನಂಬಿದ ಮೂರ್ಖ ಮಂದಿಗಳ ಭಕ್ತಿಯೇ ಇಂದಿನ ನನ್ನ ಆದಾಯ ಎಂದು ಹೇಳಿ ಬೆರಗಾಗಿಸಿದ್ದ. ಒಟ್ಟಾರೆ ಈ ಮೇಲಿನ ಎರಡೂ ಕತೆಗಳು ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡ ವರ್ಗವೊಂದು ಅದರ ಹೆಸರಿನಲ್ಲಿ ವ್ಯವಹಾರಕ್ಕಿಳಿದು ಪೂಜೆ ಪುರಸ್ಕಾರ ಜಾತ್ರೆ ಹೋಮ ಹವನ ಅರ್ಚನೆ ದಕ್ಷಿಣೆ ಅಂಗಡಿ ಇತರೆ ಎಲ್ಲರಿಂದಲೂ ಲಾಭಗಳನ್ನು ಪಡೆಯುತ್ತ ಬಂದರು.

ತಮ್ಮ ಬುದ್ದಿ ಸಾಮರ್ಥ್ಯ ಮರೆತು ಸತ್ಯವನ್ನರಿಯದ ಗೋಜಿಗೆ, ಸತ್ಯ ಮಾರ್ಗಕ್ಕೆ ಹೋಗದೇ ತಮ್ಮನ್ನು ತಾವೇ ಶೋಷಣೆಗೆ ಒಡ್ಡಿ ಬಹುಜನರು ಪ್ರಜ್ಞಾಹೀನ ಸ್ಥಿತಿಯ ತಲುಪಿದರು. ಮೌಢ್ಯಕ್ಕೆ ಬಲಿಯಾದರು. ಇಂತಹ ವರ್ಣ ರಂಜಿತ ಕತೆಗಳನ್ನು ಈಗಲೂ ಹಲವಾರು ದೇವರು ನಂಬಿ ನಿಮಗೆ ಒಳ್ಳೆಯದಾಗುತ್ತೆ, ನಾನು ಹೇಳೊದು ಕೇಳಿ: ಹೇಳಿದಂತೆ ಮಾಡಿ ನಿಮ್ಮ ಭವಿಷ್ಯ ಸರಿ ಹೋಗುತ್ತೆ ಎಂದು ಬೊಬ್ಬೆ ಇಡುವವರೇ ಹೆಚ್ಚು. ಇಂತಹವರ ಮದ್ಯದಲ್ಲಿ ಸತ್ಯ ನುಡಿಯುವ ಬಹುಜನರಿಗೆ ವೈಚಾರಿಕತೆ ಬಿತ್ತುವ ಸತ್ಯ ಮಾರ್ಗಕ್ಕೆ ಮಾರ್ಗದರ್ಶನ ನೀಡುವ ಶ್ರೀನಿಜಗುಣಾನಂದ ಸ್ವಾಮಿಗಳೇ ನಮ್ಮೆಲ್ಲರಿಗೂ ಆದರ್ಶ.

ನಿಜಗುಣ ಸ್ವಾಮಿಗಳು ವಿವಿಧ ವೇದಿಕೆಯಲ್ಲಿ ಈ ಮೇಲಿನ ಕತೆಯನ್ನು ಉದಾಹರಿಸಿ ಜನರನ್ನು ಮೌಢ್ಯದಿಂದ ಬಿಡುಗಡೆಗೊಳಿಸಲು ಪ್ರಯತ್ನಿಸಿದ್ದಾರೆ. ಜನರಿಗೆ ತಿಳಿ ಹೇಳಿ ಜ್ಞಾನ ಹಂಚುತ್ತಿದ್ದಾರೆ. ನಮಗೆ ಆದರ್ಶವಾಗಬೇಕಾದವರು ನಿಜಗುಣ ಸ್ವಾಮೀಜಿಗಳೆ ಹೊರತು ಬ್ರಹ್ಮಾಂಡ ಅಂಡ ಪಿಂಡ ದಿನ ವಾರ ವರ್ಷ ಭವಿಷ್ಯ ನುಡಿವ, ಸ್ತ್ರೀವಶ, ಧನಪ್ರಾಪ್ತಿ ಅತ್ತೆ ಸೊಸೆ ಕಿತ್ತಾಟ ಕೋರ್ಟ್ ಕೇಸ್ ಈಡೇರಿಸಿ ಕೊಡುವೆನೆಂಬ ಸಾಧು ಗುರೂಜಿಗಳಲ್ಲ. ನಿಮ್ಮನ್ನು ಮೌಢ್ಯದಿಂದ ಬಿಡುಗಡೆಗೊಳಿಸಿ ಸನ್ಮಾರ್ಗದಲ್ಲಿ ಕೊಂಡೊಯ್ಯುವವರ ಬಳಿ ಸಾಗಿ. ಮೌಢ್ಯದ ಬಾವಿಗೆ ಹಾಕುವವರೆಡೆಯಲ್ಲ. ಈ ಕತ್ತೆ ಕಥೆ ನಿಮಗೆ ಸತ್ಯವನ್ನು ತಿಳಿಯಲು ಸಾಧ್ಯವಾಯಿತು ಎಂದು ಭಾವಿಸಿ ಕುವೆಂಪುರವರ ಈ ಸಾಲು

ಸುಳ್ಳಿನ ಮಾಲೆಯ ಕೊರಳಿಗೆ ಸೂಡಿ
ಕಳ್ಳನೊಬ್ಬನನ್ನು ಗುರುವನು ಮಾಡಿ
ಬಡವರ ಹಣವನು ಕಾಣಿಕೆ ನೀಡಿ
ಧರ್ಮವ ಮೆರೆದರು ನೋಡಯ್ಯ

ಪವಾಡ – ಮೂಢನಂಬಿಕೆಗಳು, ದುರ್ಬಲತೆ ಮತ್ತು ಮೃತ್ಯುವಿನ ಸಂಕೇತಗಳು ಅವುಗಳ ಬಗ್ಗೆ ಎಚ್ಚರಿಕೆಯಿಂದಿರಿ”

ಸ್ವಾಮಿ ವಿವೇಕಾನಂದರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending