Connect with us

ರಾಜಕೀಯ

ದಾರಿ ತಪ್ಪಿದ ಸರ್ಕಾರದಿಂದ ಜನರನ್ನ ದಾರಿ ತಪ್ಪಿಸುವ ಹುನ್ನಾರ : ಬಿ ಕೆ ಹರಿಪ್ರಸಾದ್ ವಾಗ್ದಾಳಿ

Published

on

ಸುದ್ದಿದಿನ, ಬೆಂಗಳೂರು : ಪಠ್ಯ ಪರಿಷ್ಕರಣಾ ಸಮಿತಿಯನ್ನ ವಿಸರ್ಜನೆ ಮಾಡಿ ಪರಿಷ್ಕೃತ ಪಾಠಗಳನ್ನು ಉಳಿಸಿಕೊಳ್ಳುವ ಮೂಲಕ ತಾಂತ್ರಿಕ ತಂತ್ರಗಾರಿಕೆಯ ಗಿಮಿಕ್ ಅನ್ನು ಸಿಎಂ ಬಸವರಾಜ್ ಬೊಮ್ಮಾಯಿಯವರು ಮಾಡಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿಕೆ ಹರಿಪ್ರಸಾದ್ ಅವರು ಕಿಡಿಕಾರಿದ್ದಾರೆ.

ಈ ಮೂಲಕ ಮುಖ್ಯಮಂತ್ರಿಯವರೇ ರಾಜ್ಯದ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಇಂತಹ “ಕಲೆ” ನಾಗಪುರದವರಿಂದಲೇ ಕಲಿಯುತ್ತಿರಬೇಕು. ಒಬ್ಬ ನಿಕೃಷ್ಟ ಟ್ರೋಲರ್ ಗೆ ಪಠ್ಯ ಪರಿಷ್ಕರಣೆ ಅಧ್ಯಕ್ಷರನ್ನಾಗಿ ಮಾಡಿ ಇಡೀ ಸರ್ಕಾರವೇ ಮಂಡಿಯೂರಿರುವುದಷ್ಟೇ ಅಲ್ಲ ಹೊರಳಾಡುತ್ತಿರುವುದು ನಾಚಿಕೆಗೇಡಿತನದ ಪರಮಾವಧಿ.

ಈ ನೆಲದ ಅಸ್ಮಿತೆಯಾಗಿರುವ ಬಸವಣ್ಣ, ನಾರಾಯಣ ಗುರುಗಳು, ಕುವೆಂಪುರಾದಿಯಾಗಿ ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಸುಧಾರಕರ ಬಗ್ಗೆ ತುಚ್ಛಭಾವನೆಯಿಂದ ನೋಡಿದ್ದಲ್ಲದೇ, ಪಠ್ಯ ಪುಸ್ತಕದಲ್ಲಿ ನಾಗಪುರದ ಹಿಡನ್ ಅಜೆಂಡಾಗಳನ್ನು ತುರುಕಿರುವುದು ಜಗಜ್ಜಾಹೀರಾಗುತ್ತಿದೆ. ಒಬ್ಬ ಟ್ರೋಲರ್ ಕಡೆಯಿಂದ ಇಂತಹ ಕೆಲಸ ಮಾಡಿಸಿರುವ ಸರ್ಕಾರದ ದಾರಿದ್ರ್ಯತನಕ್ಕೆ ರಾಜ್ಯದ ಸಾಕ್ಷಿ ಪ್ರಜ್ಞೆಯಂತಿರುವ ಸಾಹಿತಿಗಳು, ಸ್ವಾಮೀಜಿಗಳು, ಬರಹಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದ ಇತಿಹಾಸದಲ್ಲಿಯೇ ಈ ಮಟ್ಟದ ಆಕ್ರೋಶ ಎಂದೂ ಬಂದಿರಲಿಲ್ಲ ಎಂದಿದ್ದಾರೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಒಬ್ಬ ಟ್ರೋಲರ್ ನ ಪರವಾಗಿ ವಾದ ಮಂಡಿಸುವ ಮೂಲಕ ಸರ್ಕಾರದ ಜಂಘಾಬಲವನ್ನೇ ಕುಸಿಯುವಂತೆ ಮಾಡಿದ್ದಾರೆ. ಕುವೆಂಪುರವರು ಬರೆದ ನಾಡಗೀತೆಗೆ ಅವಮಾನ ಮಾಡಿದ್ದಲ್ಲದೇ, ಬುರ್ಜ ಖಲೀಫಾ ಬಹುಮಾನ ಕೊಡುತ್ತೇನೆ ಎಂದು ಘೋಷಿಸಿದ್ದಾನೆ. ಮುಖ್ಯಮಂತ್ರಿಗಳೇ, ಕ್ರೈಂ ಮಾಡಿದವನಿಗೆ ಬಹುಮಾನ ನೀಡುತ್ತೇನೆ ಎನ್ನುವುದು ಕೂಡ ಕ್ರೈಂ. ಕುವೆಂಪು ಅವಹೇಳನ ಮಾಡಿದ್ದೇ ನಿಮ್ಮ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ. ಚರ್ಚೆಗಾಗಿ ಆತನಲ್ಲ ಎಂದುಕೊಂಡರೂ ಕುವೆಂಪು ಅವಹೇಳನಕ್ಕೆ ಬಹುಮಾನ ಘೋಷಿಸಿ ಅಪರಾಧಕ್ಕೆ ಪ್ರೋತ್ಸಾಹಿಸಿದವನನ್ನು ಬಂಧಿಸಬೇಕಲ್ಲವೇ ?

ಸ್ವಾಮೀಜಿಗಳು, ಸಾಹಿತಿಗಳು, ಬರಹಗಾರರು ಲೇಖಕರು ಸೇರಿದಂತೆ ಇಡೀ ವಿದ್ಯಾರ್ಥಿ ಸಮೂಹ ಇಂದು ಸರ್ಕಾರದ ಅಭಿಪ್ರಾಯಗಳಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳನ್ನ ಗೌರವಿಸಿ ಆಗಿರುವ ಪ್ರಮಾದಕ್ಕೆ ನಾಡಿನ ಕ್ಷಮೆ ಕೋರಿ ಈ ಟ್ರೋಲರ್ ಚಕ್ರತೀರ್ಥನನ್ನ ಅರೆಸ್ಟ್ ಮಾಡಿ. ಬಸವಣ್ಣ, ಅಂಬೇಡ್ಕರ್, ಕುವೆಂಪು, ನಾರಾಯಣಗುರು ಸೇರಿದಂತೆ ಅನೇಕ ಮಹನೀಯರಿಗೆ ಅಪಮಾನೀಕರಿಸಿರುವ ಹೊಸ ಪಠ್ಯ ಪರಿಷ್ಕರಣೆಯನ್ನ ರದ್ದುಗೊಳಿಸಿ, ಹಿಂದೆಯಿದ್ದ ಪುಸ್ತಕಗಳನ್ನೇ ವಿದ್ಯಾರ್ಥಿಗಳಿಗೆ ಭೋದನೆ ಮಾಡಲು ಅನುವು ಮಾಡಿಕೊಡಬೇಕು.

ನಿಮ್ಮ ಸರ್ಕಾರದ ಮಂತ್ರಿ ಮಹಾಶಯರು ಸ್ವಾಮೀಜಿಗಳು, ಸಾಹಿತಿಗಳ ವಿರುದ್ಧ ನೀಡುತ್ತಿರುವ ಹೇಳಿಕೆಗಳಿಗೆ ಕಡಿವಾಣ ಹಾಕಿ. ಶಾಲೆಗಳು ಆರಂಭವಾಗಿ ಇಪ್ಪತ್ತು ದಿನಗಳಿಗೂ ಹೆಚ್ಚಾಗಿದೆ.ಶಿಕ್ಷಣ ಸಚಿವರ ಸುಳ್ಳಿನ ಕಂತೆಗಳನ್ನ ದಿನಕ್ಕೊಂದು ಧಾರಾವಾಹಿಯಂತೆ ಬಿಚ್ಚಿಡುತ್ತಿದ್ದಾರೆ. ಈಗಲಾದರೂ ಹಾವಿನಪುರದವರ ಆದೇಶಕ್ಕಾಗಿ ಕಾಯದೇ ಆರೋಗ್ಯಕರ ಭವಿಷ್ಯತ್ತು ರೂಪಿಸಲಿರುವ ಮಕ್ಕಳ ಶಿಕ್ಷಣಕ್ಕಾಗಿ ಕಿಂಚಿತ್ತಾದರೂ ಪ್ರಮಾಣಿಕ ಪ್ರಯತ್ನ ಮಾಡಿ. ಇಲ್ಲದಿದ್ದರೆ ವರ್ತಮಾನದಲ್ಲಿ ನೀವು ಮಾಡಿರುವ ಪ್ರಮಾದಕ್ಕೆ ಇತಿಹಾಸ ಕ್ಷಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕುಂದುಕೊರತೆಗಳಿಗೆ ತ್ವರಿತ ಪರಿಹಾರ ನೀಡಲು ಏಕೀಕೃತ ವ್ಯವಸ್ಥೆ; ಶನಿವಾರ ಜನಸಂಪರ್ಕ, ಬುಧವಾರ ಮೂರು ಹಂತದ ಪರಿಶೀಲನೆ

Published

on

Prajaseva Abhiyana: ಇನ್ಮುಂದೆ ಕಚೇರಿಗೆ ಅಲೆದಾಟ ಬೇಡ; ಜನರ ಮನೆ ಬಾಗಿಲಿಗೇ ಸರ್ಕಾರ, ಸೆ.5ರಿಂದ ‘ಪ್ರಜಾಸೇವಾ’ಗೆ ಚಾಲನೆ!

ಬೆಂಗಳೂರು: ಸರ್ಕಾರಿ ಸೇವೆ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆಯಬೇಕಾದ ದಿನಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ಸರ್ಕಾರ ‘ಪ್ರಜಾಸೇವಾ ಅಭಿಯಾನ’ಕ್ಕೆ ಚಾಲನೆ ನೀಡಲು ಸಜ್ಜಾಗಿದೆ. ಸೆಪ್ಟೆಂಬರ್ 5ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹೋಬಳಿಯಿಂದ ಅಭಿಯಾನ ಆರಂಭವಾಗಲಿದ್ದು, ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ಸಾಧ್ಯವಾದಷ್ಟು ಸ್ಥಳದಲ್ಲೇ ಅಥವಾ ನಿಗದಿತ ಕಾಲಮಿತಿಯಲ್ಲಿ ಪರಿಹರಿಸುವ ವ್ಯವಸ್ಥೆ ರೂಪಿಸಲಾಗಿದೆ.

ಇದುವರೆಗೆ ವಿವಿಧ ಇಲಾಖೆ, ಯೋಜನೆ ಅಥವಾ ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆ ಎದುರಾದಾಗ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಸಂಪರ್ಕಿಸಲು ಜನರು ಹಲವು ಬಾರಿ ಕಚೇರಿಗಳಿಗೆ ತೆರಳಬೇಕಾಗುತ್ತಿತ್ತು. ಇದೀಗ ಈ ಅಲೆದಾಟ ಕಡಿಮೆ ಮಾಡಿ ಜನರ ಮನೆ ಬಾಗಿಲಿಗೆ ಆಡಳಿತವನ್ನು ಕೊಂಡೊಯ್ಯುವುದು ಪ್ರಜಾಸೇವೆಯ ಪ್ರಮುಖ ಉದ್ದೇಶವಾಗಿದೆ.

ಹೈಲೈಟ್ಸ್: ಸೆ.5ರಿಂದ ಹೊಸ ಆಡಳಿತ ವ್ಯವಸ್ಥೆಗೆ ಚಾಲನೆ

  • ಸೆಪ್ಟೆಂಬರ್ 5ರಿಂದ ಕೂಡ್ಲಿಗಿಯಲ್ಲಿ ಪ್ರಜಾಸೇವಾ ಅಭಿಯಾನಕ್ಕೆ ಚಾಲನೆ
  • ಪ್ರತಿ ಶನಿವಾರ ತಾಲ್ಲೂಕು/ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಸಭೆ
  • ಬುಧವಾರ ತಾಲ್ಲೂಕು, ಉಪವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿ ಮೂರು ಹಂತದ ಪರಿಶೀಲನೆ
  • ಗ್ರಾಮ ಒನ್ ಕೇಂದ್ರ ಹಾಗೂ ಸಭಾ ಸ್ಥಳದಲ್ಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ವ್ಯವಸ್ಥೆ
  • 1902 ಸಹಾಯವಾಣಿ ಮತ್ತು IPGRS ಮೂಲಕ ಕುಂದುಕೊರತೆ ದಾಖಲಿಸುವ ಅವಕಾಶ

http://Visit : www.suddidina.com

ಪ್ರತಿ ಶನಿವಾರ ಜನರೊಂದಿಗೆ ನೇರ ಸಂಪರ್ಕ

ಪ್ರತಿ ಶನಿವಾರ ತಾಲ್ಲೂಕು ಅಥವಾ ಹೋಬಳಿ ಮಟ್ಟದಲ್ಲಿ ಪ್ರಜಾಸೇವಾ ಸಭೆಗಳನ್ನು ಪರ್ಯಾಯವಾಗಿ ನಡೆಸಲು ನಿರ್ಧರಿಸಲಾಗಿದೆ. ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕೇಂದ್ರದಲ್ಲಿ ಸಭೆ ನಡೆಯಲಿದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಅಥವಾ ಹೋಬಳಿ ಮಟ್ಟದಲ್ಲಿ ಸಭೆ ಆಯೋಜಿಸಲಾಗುತ್ತದೆ.

ಸಭೆಗಳ ಕುರಿತು ಸಾರ್ವಜನಿಕರಿಗೆ ಕನಿಷ್ಠ 15 ದಿನಗಳ ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ. ಮನೆ-ಮನೆಗೆ ಕರಪತ್ರ ವಿತರಿಸುವುದರ ಜತೆಗೆ AI ಆಧಾರಿತ ಕಾಲ್ ಸೆಂಟರ್ ಮೂಲಕ ಸಭೆಯ ದಿನಾಂಕ, ಸ್ಥಳ ಹಾಗೂ ಸಮಯದ ಕುರಿತು ಮಾಹಿತಿ ನೀಡಲಾಗುತ್ತದೆ.

ಗ್ರಾಮ ಒನ್‌ನಲ್ಲೇ ಅರ್ಜಿ ಸಲ್ಲಿಕೆ

ಜನರು ತಮ್ಮ ಅರ್ಜಿ ಹಾಗೂ ಅಹವಾಲುಗಳನ್ನು ಮುಂಚಿತವಾಗಿ ಗ್ರಾಮ ಒನ್ ಕೇಂದ್ರದಲ್ಲಿ ಸಲ್ಲಿಸಬಹುದು. ಸಭಾ ಸ್ಥಳದಲ್ಲಿಯೂ ಗ್ರಾಮ ಒನ್ ಮಳಿಗೆ ಸ್ಥಾಪಿಸಿ ಕಂಪ್ಯೂಟರ್, ಪ್ರಿಂಟರ್ ಮತ್ತು ಇಂಟರ್ನೆಟ್ ಸೌಲಭ್ಯ ಕಲ್ಪಿಸಲಾಗುತ್ತದೆ.

ಈ ಸಭೆಗಳಲ್ಲಿ ಹೊಸ ಅಹವಾಲುಗಳು ಮತ್ತು ಈಗಾಗಲೇ ದೂರು ದಾಖಲಿಸಿದ್ದರೂ ಪರಿಹಾರವಾಗದ ಅಹವಾಲುಗಳಿಗೆ ಪ್ರತ್ಯೇಕ ವ್ಯವಸ್ಥೆ ಇರಲಿದೆ. 21 ದಿನಗಳ ಬಳಿಕವೂ ಸಮರ್ಪಕ ಪರಿಹಾರ ಸಿಗದ ಪ್ರಕರಣಗಳನ್ನೂ ಆದ್ಯತೆಯಿಂದ ಪರಿಗಣಿಸಲಾಗುತ್ತದೆ.

ಬುಧವಾರ ಮೂರು ಹಂತದ ಪರಿಶೀಲನೆ

ಪ್ರಜಾಸೇವಾ ಸಭೆಗಳಲ್ಲಿ ಸ್ವೀಕರಿಸಿದ ಅರ್ಜಿ ಮತ್ತು ಅಹವಾಲುಗಳ ಮೇಲೆ ಪ್ರತಿ ಬುಧವಾರ ಮೂರು ಹಂತದ ಪರಿಶೀಲನೆ ನಡೆಯಲಿದೆ. ಬೆಳಗ್ಗೆ 9ರಿಂದ 11ರವರೆಗೆ ತಾಲ್ಲೂಕು ಮಟ್ಟದಲ್ಲಿ, 11ರಿಂದ ಮಧ್ಯಾಹ್ನ 1ರವರೆಗೆ ಉಪವಿಭಾಗ ಮಟ್ಟದಲ್ಲಿ ಹಾಗೂ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಜಿಲ್ಲಾ ಮಟ್ಟದಲ್ಲಿ ಪರಿಶೀಲನೆ ನಡೆಯಲಿದೆ.

ತಾಲ್ಲೂಕಿನಲ್ಲಿ ಬಗೆಹರಿಯದ ಸಮಸ್ಯೆಗಳು ಉಪವಿಭಾಗಾಧಿಕಾರಿಗೆ, ಅಲ್ಲಿಂದ ಜಿಲ್ಲಾಧಿಕಾರಿಗೆ ಮೇಲ್ದರ್ಜೆಗೆ ವರ್ಗಾವಣೆಯಾಗಲಿವೆ. ನಿಗದಿತ ಅವಧಿಯಲ್ಲಿ ಪರಿಹಾರವಾಗದ ಪ್ರಕರಣಗಳು ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರ ಮಟ್ಟಕ್ಕೂ ಸ್ವಯಂಚಾಲಿತವಾಗಿ ಎಸ್ಕಲೇಷನ್ ಆಗುವ ವ್ಯವಸ್ಥೆ ಇರಲಿದೆ.

ಸ್ಥಳದಲ್ಲೇ ಮಂಜೂರಾತಿ, ಆನ್‌ಲೈನ್‌ನಲ್ಲಿ ಸ್ಥಿತಿ

ಅರ್ಹ ಫಲಾನುಭವಿಗಳಿಗೆ ಕೆಲವು ಯೋಜನೆಗಳ ಮಂಜೂರಾತಿ ಪತ್ರವನ್ನು ಸ್ಥಳದಲ್ಲೇ ನೀಡಲು ಅವಕಾಶವಿದೆ. ಅರ್ಜಿ ಅಥವಾ ದೂರು ಯಾವ ಹಂತದಲ್ಲಿದೆ ಎಂಬುದನ್ನು ಸಾರ್ವಜನಿಕರು ನೈಜ-ಸಮಯದ ಸ್ಥಿತಿ ಪರಿಶೀಲನಾ ವ್ಯವಸ್ಥೆಯ ಮೂಲಕ ತಿಳಿದುಕೊಳ್ಳಬಹುದು.

ಇದಲ್ಲದೆ, ಪ್ರತಿ ಸಭೆಯ ಸಂಪೂರ್ಣ ವಿವರ, ಛಾಯಾಚಿತ್ರ, ವೀಡಿಯೋ ಹಾಗೂ ಫಲಾನುಭವಿಗಳ ಅಭಿಪ್ರಾಯಗಳನ್ನು ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತದೆ. ಸಾರ್ವಜನಿಕರು 1902 ಸಹಾಯವಾಣಿ ಅಥವಾ ಅಧಿಕೃತ IPGRS ಪೋರ್ಟಲ್ ಮೂಲಕವೂ ಕುಂದುಕೊರತೆ ದಾಖಲಿಸಬಹುದು.

ಆಡಳಿತಕ್ಕೆ ಹೊಣೆಗಾರಿಕೆ, ಜನರಿಗೆ ಉತ್ತರ

ಪ್ರಜಾಸೇವಾ ಅಭಿಯಾನದ ಯಶಸ್ಸು ಕೇವಲ ಸಭೆ ನಡೆಸುವುದರಲ್ಲಿ ಇಲ್ಲ; ದೂರು ಸ್ವೀಕರಿಸಿ, ಕಾಲಮಿತಿಯಲ್ಲಿ ಪರಿಹರಿಸಿ, ಅದರ ಹೊಣೆಗಾರಿಕೆಯನ್ನು ನಿಗದಿಪಡಿಸುವುದರಲ್ಲಿ ಇದೆ. ಜಿಲ್ಲಾಉಸ್ತುವಾರಿ ಕಾರ್ಯದರ್ಶಿಗಳು, ಅಧಿಕಾರಿಗಳು, ಸಚಿವರು ಹಾಗೂ ಜನಪ್ರತಿನಿಧಿಗಳ ನಿರಂತರ ಮೇಲ್ವಿಚಾರಣೆಯ ಮೂಲಕ ಬಾಕಿ ಪ್ರಕರಣಗಳ ವಿಲೇವಾರಿಗೆ ಒತ್ತು ನೀಡಲಾಗಿದೆ. ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಹೆಚ್ಚಿಸುವ ಈ ವ್ಯವಸ್ಥೆ ಆಡಳಿತದ ಹೊಸ ಮಾದರಿಯಾಗುವ ನಿರೀಕ್ಷೆ ಮೂಡಿಸಿದೆ.

Continue Reading

ದಿನದ ಸುದ್ದಿ

ಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್‌-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!

Published

on

kalaburagi-municipal-corporation-mayor-deputy-mayor-election-congress-win
ಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್‌-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!

ಸುದ್ದಿದಿನ,ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು 35 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದು, ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ಮತ್ತೊಮ್ಮೆ ತನ್ನದಾಗಿಸಿಕೊಂಡಿದ್ದಾರೆ. ಬಿಜೆಪಿಯ ಅಭ್ಯರ್ಥಿಗಳು 29 ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ದಾರೆ.

ಈ ಫಲಿತಾಂಶದೊಂದಿಗೆ ಕಲಬುರಗಿ ಮಹಾನಗರ ಪಾಲಿಕೆಯ ರಾಜಕೀಯದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದೆ.

ಮೇಯರ್ ಸ್ಥಾನಕ್ಕೆ ಅಜಿಲ್ ಅಹಮದ್ ಗೋಲಾ

ಈ ಚುನಾವಣೆಯಲ್ಲಿ 21ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಅಜಿಲ್ ಅಹಮದ್ ಗೋಲಾ ಅವರು ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಮತದಾನದ ಬಳಿಕ ಕಾಂಗ್ರೆಸ್ ಅಭ್ಯರ್ಥಿಗೆ ಬಹುಮತ ದೊರೆತಿದ್ದು, ಅವರು ಮೇಯರ್ ಸ್ಥಾನವನ್ನು ಅಲಂಕರಿಸಿದ್ದಾರೆ.

ಪಾಲಿಕೆಯ ಮುಂದಿನ ಆಡಳಿತದಲ್ಲಿ ಮೇಯರ್ ಸ್ಥಾನ ಪ್ರಮುಖವಾಗಿರುವ ಹಿನ್ನೆಲೆಯಲ್ಲಿ ಅಜಿಲ್ ಅಹಮದ್ ಗೋಲಾ ಅವರ ಆಯ್ಕೆ ಇದೀಗ ಗಮನ ಸೆಳೆದಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ 35 ಮತಗಳು ದೊರೆತಿರುವುದು ಚುನಾವಣೆಯಲ್ಲಿ ಪಕ್ಷದ ಬಲವನ್ನು ತೋರಿಸಿದೆ.

ಉಪ ಮೇಯರ್ ಸ್ಥಾನವೂ ಕಾಂಗ್ರೆಸ್ ಪಾಲು

20ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಫಹಾನಾ ಖಮ್ರೋ ಜಗೀರ್ದಾರ್ ಅವರು ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ದೊರೆತ ಬಹುಮತದ ಹಿನ್ನೆಲೆಯಲ್ಲಿ ಫಹಾನಾ ಖಮ್ರೋ ಜಗೀರ್ದಾರ್ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಮೇಯರ್ ಹಾಗೂ ಉಪ ಮೇಯರ್ ಎರಡೂ ಸ್ಥಾನಗಳು ಕಾಂಗ್ರೆಸ್ ಪಾಲಾಗಿರುವುದರಿಂದ ಪಾಲಿಕೆಯ ಆಡಳಿತದ ಮೇಲೆ ಪಕ್ಷದ ಹಿಡಿತ ಮತ್ತಷ್ಟು ಬಲಗೊಂಡಿದೆ.

ಆಗಸ್ಟ್ 7ರಿಂದ ಆಗಸ್ಟ್ 29ಕ್ಕೆ ಮುಂದೂಡಿಕೆ

ಆರಂಭದಲ್ಲಿ ಈ ಚುನಾವಣೆ ಆಗಸ್ಟ್ 7ರಂದು ನಡೆಯಬೇಕಿತ್ತು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಚುನಾವಣೆ ಮುಂದೂಡಲ್ಪಟ್ಟಿತ್ತು. ಬಳಿಕ ಪ್ರಾದೇಶಿಕ ಆಯುಕ್ತರ ಆದೇಶದ ನಂತರ ಪರಿಷ್ಕೃತ ದಿನಾಂಕ ನಿಗದಿಪಡಿಸಿ ಆಗಸ್ಟ್ 29ರಂದು ಚುನಾವಣೆ ನಡೆಸಲಾಯಿತು.

ಅದರಂತೆ ಶನಿವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ. ಒಟ್ಟು ಮತಗಳ ಲೆಕ್ಕಾಚಾರದಲ್ಲಿ ಕಾಂಗ್ರೆಸ್ 35 ಮತಗಳನ್ನು ಪಡೆದರೆ, ಬಿಜೆಪಿ 29 ಮತಗಳಿಗೆ ಸೀಮಿತವಾಯಿತು.

ಈ ಮೂಲಕ ಕಲಬುರಗಿ ಮಹಾನಗರ ಪಾಲಿಕೆಯ 24ನೇ ಅವಧಿಯ ಆಡಳಿತದ ಚುಕ್ಕಾಣಿ ಮತ್ತೊಮ್ಮೆ ಕಾಂಗ್ರೆಸ್ ಕೈಗೆ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ಪಾಲಿಕೆಯ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ವಿಚಾರಗಳಲ್ಲಿ ಹೊಸ ಮೇಯರ್ ಮತ್ತು ಉಪ ಮೇಯರ್ ಅವರ ಕಾರ್ಯವೈಖರಿ ಹೇಗಿರಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.

Continue Reading

ದಿನದ ಸುದ್ದಿ

ವಾಲ್ಮೀಕಿ ಹಗರಣದ ಕಿಡಿ ಮತ್ತೆ ಬಳ್ಳಾರಿಯಲ್ಲಿ: ನಾಗೇಂದ್ರ ವಿರುದ್ಧ ಜನಾರ್ಧನ ರೆಡ್ಡಿ ವಾಗ್ದಾಳಿ, ಕಾಂಗ್ರೆಸ್‌ಗೆ ರಾಜೀನಾಮೆ ಸವಾಲು!

Published

on

janardhana-reddy-attacks-b-nagendra-valmiki-scam-ballari-political-war
ಚಂದ್ರಶೇಖರ್ ಸಾವು, ನಿಗಮದ ಹಣ ದುರ್ಬಳಕೆ ವಿಚಾರ ಮುಂದಿಟ್ಟುಕೊಂಡು ಮಾಜಿ ಸಚಿವ ನಾಗೇಂದ್ರ ವಿರುದ್ಧ ರೆಡ್ಡಿ ಗಂಭೀರ ಆರೋಪ

ಸುದ್ದಿದಿನ, ಬಳ್ಳಾರಿ: ಬಳ್ಳಾರಿಯಲ್ಲಿ ರಾಜಕೀಯ ವಾಕ್ಸಮರ ಮತ್ತೊಮ್ಮೆ ತೀವ್ರಗೊಂಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣವನ್ನು ಮುಂದಿಟ್ಟುಕೊಂಡು ಮಾಜಿ ಸಚಿವ ಬಿ. ನಾಗೇಂದ್ರ ವಿರುದ್ಧ ಮಾಜಿ ಸಚಿವ ಜನಾರ್ಧನ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಿಗಮದ ಹಣ ದುರ್ಬಳಕೆ ಹಾಗೂ ಚಂದ್ರಶೇಖರ್ ಸಾವಿನ ವಿಚಾರವನ್ನು ಪ್ರಸ್ತಾಪಿಸಿ ನಾಗೇಂದ್ರ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಹೈಲೈಟ್ಸ್

  • ನಾಗೇಂದ್ರ ವಿರುದ್ಧ ಜನಾರ್ಧನ ರೆಡ್ಡಿ ತೀವ್ರ ವಾಗ್ದಾಳಿ
  • ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಆರೋಪ ಮತ್ತೆ ಮುನ್ನೆಲೆ
  • ಚಂದ್ರಶೇಖರ್ ಸಾವಿನ ವಿಚಾರದಲ್ಲಿ ಗಂಭೀರ ಆರೋಪ
  • ಬಳ್ಳಾರಿಯ 10 ಕ್ಷೇತ್ರಗಳಿಗೆ ರಾಜೀನಾಮೆ ನೀಡಿ ಚುನಾವಣೆ ಎದುರಿಸುವಂತೆ ಸವಾಲು
  • ಸಂಸದ ತುಕಾರಾಂ ರಾಜೀನಾಮೆ ನೀಡಬೇಕೆಂದು ರೆಡ್ಡಿ ಆಗ್ರಹ

ನಾಗೇಂದ್ರ ಅವರು ಕಣ್ಣೀರು ಹಾಕುವ ಮೂಲಕ ತಮ್ಮ ಮೇಲಿನ ಆರೋಪಗಳನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ರೆಡ್ಡಿ ಟೀಕಿಸಿದ್ದಾರೆ. ಚಂದ್ರಶೇಖರ್ ಸಾವಿಗೆ ಸಂಬಂಧಿಸಿದಂತೆ ನಾಗೇಂದ್ರ ಅವರ ವಿರುದ್ಧ ನೇರ ಆರೋಪದ ಧಾಟಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದ ಸಂಪೂರ್ಣ ಸತ್ಯ ಹೊರಬರಬೇಕಿದೆ ಎಂದು ಹೇಳಿದ್ದಾರೆ.

http://Visit : www.suddidina.com

₹187 ಕೋಟಿ ಹಗರಣದ ಆರೋಪ ಮತ್ತೆ ಮುನ್ನೆಲೆಗೆ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂಬ ಆರೋಪವನ್ನು ಪುನರುಚ್ಚರಿಸಿದ ಜನಾರ್ಧನ ರೆಡ್ಡಿ, ಪ್ರಕರಣದಲ್ಲಿ ಹಲವು ವ್ಯಕ್ತಿಗಳು ಮತ್ತು ನೂರಾರು ಬ್ಯಾಂಕ್ ಖಾತೆಗಳ ಬಳಕೆಯಾಗಿದೆ ಎಂದು ಹೇಳಿದ್ದಾರೆ. ತಮ್ಮ ಹೇಳಿಕೆಯಲ್ಲಿ ಕೆಲವರ ಖಾತೆಗಳಿಗೆ ₹6.50 ಕೋಟಿ ವರ್ಗಾವಣೆಯಾಗಿದೆ ಎಂದು ಉಲ್ಲೇಖಿಸಿದ ಅವರು, ನಗದು ಹಾಗೂ ಚಿನ್ನಾಭರಣ ಖರೀದಿಯ ಬಗ್ಗೆಯೂ ಆರೋಪ ಮಾಡಿದ್ದಾರೆ.

ಹಗರಣದಲ್ಲಿ ನಾಗೇಂದ್ರ ಅವರ ಪಾತ್ರವಿದೆ ಎಂಬುದು ಸ್ಪಷ್ಟ ಎಂದು ರೆಡ್ಡಿ ಆರೋಪಿಸಿದ್ದು, ತಪ್ಪು ಮಾಡಿಲ್ಲ ಎನ್ನುವ ನಾಗೇಂದ್ರ ಅವರಿಗೆ ಕಾಂಗ್ರೆಸ್ ಪಕ್ಷ ಏಕೆ ಸಚಿವ ಸ್ಥಾನದಿಂದ ರಾಜೀನಾಮೆ ಪಡೆಯಿತು ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ.

ರಾಜಕೀಯ ಹಿನ್ನೆಲೆ ಕೆದಕಿದ ರೆಡ್ಡಿ

ನಾಗೇಂದ್ರ ಅವರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯ ಪಾತ್ರವಿತ್ತು ಎಂದು ಹೇಳಿದ ರೆಡ್ಡಿ, ಬಿಜೆಪಿ ವಿರುದ್ಧ ಮಾತನಾಡುವ ಮೊದಲು ತಮ್ಮ ರಾಜಕೀಯ ಆರಂಭವನ್ನು ನೆನಪಿಸಿಕೊಳ್ಳಬೇಕು ಎಂದು ಟಾಂಗ್ ನೀಡಿದ್ದಾರೆ. ಮನुस್ಮೃತಿ, ಬಿಜೆಪಿ ಹಾಗೂ ವಾಲ್ಮೀಕಿ ಸಮುದಾಯದ ವಿಚಾರದಲ್ಲಿ ನಾಗೇಂದ್ರ ನೀಡಿರುವ ಹೇಳಿಕೆಗಳಿಗೂ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಸೋಲು-ಗೆಲುವು ಕಂಡಿರುವುದನ್ನು ಉಲ್ಲೇಖಿಸಿದ ರೆಡ್ಡಿ, ಶ್ರೀರಾಮುಲು ಅವರನ್ನು ‘ರಿಜೆಕ್ಟೆಡ್ ಪೀಸ್’ ಎಂದು ಟೀಕಿಸಿದ್ದ ನಾಗೇಂದ್ರ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

10 ಕ್ಷೇತ್ರಗಳಿಗೆ ರಾಜೀನಾಮೆ ನೀಡಿ ಚುನಾವಣೆ ಎದುರಿಸುವಂತೆ ಸವಾಲು

ಅಖಂಡ ಬಳ್ಳಾರಿ ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳ ಶಾಸಕರು ಹಾಗೂ ಸಂಸದರು ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಬಂದರೆ ಬಿಜೆಪಿ ಸಿದ್ಧವಿದೆ ಎಂದು ಜನಾರ್ಧನ ರೆಡ್ಡಿ ಸವಾಲು ಹಾಕಿದ್ದಾರೆ. ಹತ್ತು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸುವ ಮೂಲಕ ತಮ್ಮ ರಾಜಕೀಯ ಶಕ್ತಿ ಪ್ರದರ್ಶಿಸುವುದಾಗಿ ಅವರು ಹೇಳಿದ್ದಾರೆ.

ನಾಗೇಂದ್ರ ರಾಜೀನಾಮೆ ನೀಡಿದ್ದರೂ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ತುಕಾರಾಂ ರಾಜೀನಾಮೆಗೂ ಆಗ್ರಹ

ವಾಲ್ಮೀಕಿ ಹಗರಣದ ಹಣದ ಪ್ರಭಾವದಿಂದಲೇ ತುಕಾರಾಂ ಸಂಸದರಾಗಿದ್ದಾರೆ ಎಂದು ಆರೋಪಿಸಿದ ಜನಾರ್ಧನ ರೆಡ್ಡಿ, ಮೊದಲು ಕಾಂಗ್ರೆಸ್ ತುಕಾರಾಂ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಈ ಆರೋಪಗಳು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.

Continue Reading

Trending