Connect with us

ಬಹಿರಂಗ

ಗುರಿ ಮುಟ್ಟಲು ಮೋದಿ ಬಹಳ ದೂರ ಕ್ರಮಿಸಬೇಕಿದೆ..!

Published

on

  • ಮೂಲ : ಸುಬ್ರಮಣ್ಯನ್‌ ಸ್ವಾಮಿ, ಅನುವಾದ : ನಾ ದಿವಾಕರ

ಭಾರತದ ಅರ್ಥವ್ಯವಸ್ಥೆಗೆ ಹೊಸ ಅರ್ಥಿಕ ನೀತಿ ಬೇಕಿದೆ ಅಸಂಬದ್ಧ ಘೋಷಣೆಗಳಲ್ಲ


ಮೇ 31 2022ರಂದು ರಾಷ್ಟ್ರೀಯ ಆದಾಯದ ತಾತ್ಕಾಲಿಕ ಅಂದಾಜು ಪ್ರಕಟಿಸಿದ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) 2021-22ರ ಆರ್ಥಿಕ ವರದಿಯನ್ನು ಬಿಡುಗಡೆ ಮಾಡಿದೆ. 2020-21ರ ಹಣಕಾಸು ವರ್ಷಕ್ಕೆ ಹೋಲಿಸಿದರೆ, ವಾರ್ಷಿಕ ಸಮಾನಾರ್ಥಕವಾಗಿ ಏಪ್ರಿಲ್‌ 1-ಮಾರ್ಚ್‌ 31 2022 ರ ಹಣಕಾಸು ವರ್ಷದಲ್ಲಿ ನಾಲ್ಕನೆ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯ ದರ ಶೇ 4.1ರಷ್ಟಿರುತ್ತದೆ ಎಂದು ಹೇಳಿದೆ.

2020-21ರ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌ 1 ರಿಂದ ಜೂನ್‌ 30) ಎನ್‌ಎಸ್‌ಒ ಮಾಹಿತಿಯ ಅನುಸಾರ ಜಿಡಿಪಿ ಬೆಳವಣಿಗೆಯ ದರ ಶೇ -23.8 ರಷ್ಟಿತ್ತು. ಇದು ಕೋವಿದ್‌ ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿದ್ದ ಅವಧಿಯಾಗಿತ್ತು. ಇದರ ನಂತರದ ಮೂರು ತ್ರೈಮಾಸಿಕ ಅವಧಿಯಲ್ಲಿ ಒಟ್ಟು ಬೆಳವಣಿಗೆಯ ದರ ನಕಾರಾತ್ಮವಾಗಿಯೇ ಮುಂದುವರೆದಿತ್ತು. ಹಾಗಾಗಿಯೇ 2020-21ರ ಹಣಕಾಸು ವರ್ಷದಲ್ಲಿ ನಾಲ್ಕು ತ್ರೈಮಾಸಿಕಗಳ ವಾರ್ಷಿಕ ಜಿಡಿಪಿ ಬೆಳವಣಿಗೆ ಶೇ -4.8ರಷ್ಟಿತ್ತು.

ಇಲ್ಲಿ ನರೇಂದ್ರ ಮೋದಿ ಸರ್ಕಾರ ಅವಶ್ಯವಾಗಿ ಗಮನಿಸಲೇಬೇಕಾದ ಎರಡು ವಾಸ್ತವ ಸಂಗತಿಗಳಿವೆ. ಮೊದಲನೆಯದಾಗಿ, ಭಾರತದ ಆರ್ಥಿಕತೆಯು 2016ರಿಂದಲೂ ಸತತವಾಗಿ ಕುಸಿಯುತ್ತಲೇ ಇದೆ. ಅರ್ಥಶಾಸ್ತ್ರಜ್ಞರು 1950-77ರ ಅವಧಿಯ ಕಾಂಗ್ರೆಸ್‌ ಆಡಳಿತಾವಧಿಯ ಜಿಡಿಪಿ ಬೆಳವಣಿಗೆಯನ್ನು “ ಹಿಂದೂ ಬೆಳವಣಿಗೆಯ ದರ ” ಎಂದು ಗುರುತಿಸಿದ್ದಾರೆ.

ಇದು ಶೇ 3.5 ರಿಂದ ಶೇ 4ರವರೆಗೆ ಜಿಡಿಪಿ ಬೆಳವಣಿಗೆಯನ್ನು ಸೂಚಿಸುತ್ತದೆ. 2016ರ ನಂತರದ ಬೆಳವಣಿಗೆ ಇದಕ್ಕಿಂತಲೂ ಕಡಿಮೆ ಇರುವುದನ್ನು ಗಮನಿಸಬೇಕಿದೆ. ಎರಡನೆಯದಾಗಿ, 2014ರಿಂದ ಬಿಜೆಪಿ ಆಡಳಿತಾವಧಿಯಲ್ಲಿ ನರೇಂದ್ರ ಮೋದಿ ಅನುಸರಿಸಿದ ʼ ವಿಕಾಸ ʼದ ಮಾರ್ಗ ಬಹುಪಾಲು ಜವಹರಲಾಲ್‌ ನೆಹರೂ ಅವರʼ ಹಿಂದೂ ಬೆಳವಣಿಗೆಯ ದರ ʼದ ಯೋಜನೆಯನ್ನೇ ಹೋಲುತ್ತದೆ.

ಪಿ ವಿ ನರಸಿಂಹರಾವ್‌ ಅವರ ಅವಧಿಯಲ್ಲಿ ಜಾರಿಗೊಳಿಸಿದ ರಾಚನಿಕ ಸುಧಾರಣೆಗಳನ್ನು ವ್ಯವಸ್ಥಿತವಾಗಿ ಅನುಷ್ಟಾನಗೊಳಿಸಿದಂತೆ ಕಾಣುವುದಿಲ್ಲ. 2016ರಿಂದ ಈವರೆಗೆ ಜಿಡಿಪಿ ಬೆಳವಣಿಗೆಯ ದರದಲ್ಲಿ ಕುಸಿತವನು ಗಮನಿಸಿದರೆ, ವಿಕಾಸದ ಮಾರ್ಗ ಅನುಸರಿಸುತ್ತಿರುವ ಸರ್ಕಾರದ ಮಟ್ಟಿಗೆ ನಾಚಿಕೆಗೇಡಿನ ಸಂಗತಿ ಎನಿಸುತ್ತದೆ.

2016ರಿಂದ ಜಿಡಿಪಿ ಬೆಳವಣಿಗೆಯ ದರ ನಿರಂತರವಾಗಿ ಕುಸಿಯುತ್ತಿರುವುದೇ ಅಲ್ಲದೆ, ಪ್ರಮುಖ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸದೆ ಸಾಧಿಸಲು ಅಸಾಧ್ಯವಾದ ನಿರೀಕ್ಷೆಗಳನ್ನು ಅಬ್ಬರದಿಂದ ಪ್ರಚಾರ ಮಾಡಲಾಗಿದೆ. ಉದಾಹರಣೆಗೆ 2024-25ರ ವೇಳೆಗೆ ಭಾರತ ಐದು ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗುತ್ತದೆ ಎಂದು 2019ರಲ್ಲೇ ಘೋಷಿಸಲಾಗಿದೆ.

ಮಾಧ್ಯಮಗಳಲ್ಲಿ ಅಬ್ಬರದ ಪ್ರಚಾರ ಪಡೆದ ಈ ನಿರೀಕ್ಷಿತ ಬೆಳವಣಿಗೆಯನ್ನು ಸಾಕಾರಗೊಳಿಸಬೇಕಾದರೆ ಭಾರತದ ಆರ್ಥಿಕತೆ ವಾರ್ಷಿಕ ಶೇ 14.8ರಷ್ಟು ಜಿಡಿಪಿ ಬೆಳವಣಿಗೆಯನ್ನು ಸಾಧಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ನರೇಂದ್ರ ಮೋದಿಯವರ ನಿರೀಕ್ಷಿತ ʼ ಮೋದಿನಾಮಿಕ್ಸ್‌ ʼ ಬಗ್ಗೆ ಸಾರ್ವಜನಿಕ ಚರ್ಚೆಗೆ ಯಾವುದೇ ಸರ್ಕಾರಿ ಅಧಿಕಾರಿ ಮುಂದಾದರೂ ನಾನು ತಯಾರಿದ್ದೇನೆ. ಒಟ್ಟಾರೆ ಹೇಳುವುದಾದರೆ 2014 ರಿಂದ ಇಲ್ಲಿಯವರೆಗೆ ತಮ್ಮ ಆಡಳಿತಾವಧಿಯಲ್ಲಿ ಪ್ರಧಾನಿ ಮೋದಿ ಯಾವುದೇ ಘೋಷಿತ ಬೃಹದಾರ್ಥಿಕ ಗುರಿಯನ್ನು ತಲುಪುವ ಪ್ರಯತ್ನಗಳನ್ನು ಮಾಡಿಲ್ಲ.

ಏನು ಮಾಡಬೇಕು..?

ಭಾರತದ ಆರ್ಥಿಕತೆಗೆ ಇಂದು ಅಗತ್ಯವಾಗಿರುವುದು ನಿರ್ದಿಷ್ಟ ವಸ್ತುನಿಷ್ಠ ಗುರಿ ಹೊಂದಿರುವ, ಸ್ಪಷ್ಟ ಆದ್ಯತೆಗಳನ್ನು ಹೊಂದಿರುವ ಮತ್ತು ಗುರಿ ಸಾಧಿಸಲು ಸ್ಪಷ್ಟ ರಣತಂತ್ರವನ್ನು ಹೊಂದಿರುವಂತಹ ಒಂದು ಹೊಸ ಆರ್ಥಿಕ ನೀತಿ. ಇದಕ್ಕೆ ಪೂರಕವಾಗಿ ಜಾಣ್ಮೆಯ, ಪಾರದರ್ಶಕವಾದ ಸಂಪನ್ಮೂಲ ಕ್ರೋಢೀಕರಣದ ಯೋಜನೆಯೂ ಅತ್ಯವಶ್ಯ.

2004ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರವು ತಮ್ಮ ಭ್ರಮಾತ್ಮಕ “ಭಾರತ ಪ್ರಕಾಶಿಸುತ್ತಿದೆ” ಎಂಬ ಘೋಷಣೆಯನ್ನೇ ಮುಂದಿಟ್ಟುಕೊಂಡು, ಆರು ತಿಂಗಳು ಮುಂಚಿತವಾಗಿಯೇ ಲೋಕಸಭಾ ಚುನಾವಣೆಗಳನ್ನೆದುರಿಸಿ ದಯನೀಯವಾಗಿ ಸೋಲು ಅನುಭವಿಸಿತ್ತು. ಇದರ ನಂತರ ಹತ್ತು ವರ್ಷಗಳ ಕಾಲ ಬಿಜೆಪಿ ಅಧಿಕಾರಕ್ಕೆ ಬರಲಾಗಲಿಲ್ಲ. 2014ರಲ್ಲಿ ೨ಜಿ ತರಂಗಾಂತದ ಹಗರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ ತೀರ್ಪು, ಮಂಜೂರಾದ ಪರವಾನಗಿಯ ರದ್ದತಿ, ರಾಮಮಂದಿರ ನಿರ್ಮಾಣದ ಭರವಸೆ ಮತ್ತು ಕುಸಿಯುತ್ತಿದ್ದ ಆರ್ಥಿಕತೆಯ ಪರಿಣಾಮವಾಗಿ ಬಿಜೆಪಿ ಮರಳಿ ಅಧಿಕಾರದ ಗದ್ದುಗೆ ಏರಿತ್ತು.

ಇಂದು ಬಿಜೆಪಿ ಎಂಟು ವರ್ಷಗಳ ಆಡಳಿತವನ್ನು ಪೂರೈಸಿದೆ. ಕೊಂಚ ಮಟ್ಟಿಗೆ ಸಾಮಾಜಿಕ-ಧಾರ್ಮಿಕ ನೆಲೆಯಲ್ಲಿನ ಸಾಫಲ್ಯ ಬಿಜೆಪಿಯ ಕಾರ್ಯಕರ್ತರ ಉತ್ಸಾಹವನ್ನು ಉದ್ದೀಪನಗೊಳಿಸಿದ್ದರೂ, 2024ರ ಚುನಾವಣೆಯ ಫಲಿತಾಂಶವನ್ನು ಖಚಿತವಾಗಿ ನಿರೀಕ್ಷಿಸಲಾಗುವುದಿಲ್ಲ. ಪಂಜಾಬ್‌ ಮತ್ತು ಪಶ್ಚಿಮ ಬಂಗಾಲದ ಚುನಾವಣಾ ಫಲಿತಾಂಶಗಳೂ ಸಹ ಶುಭಸೂಚನೆಯನ್ನೇನೂ ನೀಡಿಲ್ಲ.

ಇತ್ತೀಚೆಗೆ ನಡೆದ ಉತ್ತರಪ್ರದೇಶ ಚುನಾವಣೆಗಳಲ್ಲಿ ಬಹುತೇಕ ಸ್ಥಾನಗಳಲ್ಲಿ ಬಿಜೆಪಿಯ ಗೆಲುವಿನ ಅಂತರ ಕಡಿಮೆಯಾಗಿದೆ. ನನ್ನ ಅಭಿಪ್ರಾಯದಲ್ಲಿ, ಈಗ ಕಂಡುಬರುತ್ತಿರುವ ಆರ್ಥಿಕ ವೈಫಲ್ಯಗಳೂ 2024ರ ಚುನಾವಣೆಯ ಬಗ್ಗೆ ಇರುವ ನಿರೀಕ್ಷೆಗಳನ್ನು ಹುಸಿಗೊಳಿಸಲು ನೆರವಾಗಬಹುದು. ಹತಾಶ ರಾಜಕೀಯ ತೀವ್ರಗಾಮಿಗಳಿಂದ ಪ್ರಜಾತಂತ್ರ ವ್ಯವಸ್ಥೆಯೇ ಅಪಾಯ ಎದುರಿಸಬಹುದು.

ಪ್ರತಿಯೊಂದು ದೇಶದಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಯು ನಾಲ್ಕು ಸ್ತಂಭಗಳನ್ನು ಆಶ್ರಯಿಸುತ್ತದೆ. ಚುನಾಯಕ ರಾಜಕಾರಣದ ಔಚಿತ್ಯ, ಸಾಂವಿಧಾನಿಕ ರಕ್ಷಣಾ ಕ್ರಮಗಳು, ಕಾರ್ಯತಃ ಸ್ವತಂತ್ರವಾಗಿರುವ ಸಂಸ್ಥೆಗಳು ಮತ್ತು ವಿಶ್ವಾಸಾರ್ಹ ಉತ್ತರದಾಯಿತ್ವ. ಕೇವಲ ಚುನಾವಣೆಗಳು ಮಾತ್ರವೇ ಪ್ರಜಾಪ್ರಭುತ್ವದ ಉಳಿವಿಗೆ ಸಾಕಾಗುವುದಿಲ್ಲ. ಇಲ್ಲಿ ಮಾರುಕಟ್ಟೆ ಮತ್ತು ಪ್ರಜಾತಂತ್ರದ ನಡುವೆ ಇರುವ ಸಂಘರ್ಷವನ್ನು ನಿವಾರಿಸಬೇಕಾಗುತ್ತದೆ.

ಭ್ರಷ್ಟತೆಗೆ ಒಳಗಾಗದ ಬಹುಸಂಖ್ಯಾತ ಬಡ ಜನತೆಯ ಸಬಲೀಕರಣದ ಮೂಲಕ ಚಾಲ್ತಿಯಲ್ಲಿರಬಹುದಾದ ಒಂದು ಅತ್ಯುತ್ಸಾಹಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ, ಅಲ್ಪಸಂಖ್ಯೆಯಲ್ಲಿರುವ ಶ್ರೀಮಂತ ಬಂಡವಾಳಶಾಹಿಗಳ ಮತ್ತು ಉದ್ಯಮಿಗಳ ಹಿತಾಸಕ್ತಿಗೆ ವ್ಯತಿರಿಕ್ತವಾದ ಶಾಸನಗಳನ್ನು ಜಾರಿಗಳಿಸುವ ಒತ್ತಡಗಳು ಸಹಜವಾಗಿಯೇ ಹೆಚ್ಚಾಗಿರುತ್ತದೆ.

ಮತ್ತೊಂದೆಡೆ ಸಬಲೀಕರಣಗೊಂಡ ಅಲ್ಪಸಂಖ್ಯೆಯ ಶ್ರೀಮಂತ ವರ್ಗಗಳಿಗೆ ಬಂಡವಾಳವನ್ನು ಸುಲಭವಾಗಿ ಎಟುಕುವಂತೆ ಮಾಡುವ ಮಾರುಕಟ್ಟೆ ಆರ್ಥಿಕತೆಯಲ್ಲಿ ಮಾಧ್ಯಮ, ಕೌಶಲ್ಯ ಮತ್ತು ಇತರ ಜಾಲಗಳ ಮೇಲೆ ಸುಲಭವಾಗಿ ನಿಯಂತ್ರಣ ಸಾಧಿಸುವ ಬಂಡವಳಿಗ ವರ್ಗವು ಚುನಾವಣಾ ವ್ಯವಸ್ಥೆಗೆ ಹಣಕಾಸು ನೆರವು ಒದಗಿಸುತ್ತಲೇ ಅದನ್ನು ನಗಣ್ಯಗೊಳಿಸುವ ಸಾಧ್ಯತೆಗಳೂ ಇರುತ್ತವೆ.

ಆದುದರಿಂದ ಪ್ರಜಾತಂತ್ರ ವ್ಯವಸ್ಥೆಯ ನಿಯಮಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ನರಸಿಂಹರಾವ್‌ ಅವರಂತಹ ಆರ್ಥಿಕ ಸುಧಾರಣೆಯ ಹರಿಕಾರರೂ ಭಾರತದಲ್ಲಿ ಚುನಾವಣಾ ವೈಫಲ್ಯ ಎದುರಿಸಿರುವುದನ್ನು ಗಮನಿಸಬೇಕಿದೆ.

ಹಾಗಾಗಿ ಸುಧಾರಣೆಗಳ ಮಾದರಿ ಮುಖ್ಯವಾಗುತ್ತದೆ. ಈ ಸುಧಾರಣೆಗಳನ್ನು ಜಾರಿಗೊಳಿಸುವವರು ಚುನಾವಣೆಗಳಲ್ಲಿ ಗೆಲ್ಲಬೇಕಾಗುತ್ತದೆ. ಇಲ್ಲಿ ಕೆಲವು ಉದಾಹರಣೆಗಳನ್ನು ಗಮನಿಸುವುದಾದರೆ, ಪ್ರಜಾತಂತ್ರ ವ್ಯವಸ್ಥೆಯನ್ನು ಹೊಂದಿರುವ ಜಪಾನ್‌ ಯಾವುದೇ ರೀತಿಯ ವಿವೇಕಯುತ ನಿಯಮಗಳಿಲ್ಲದ ಉತ್ತರದಾಯಿತ್ವ ಇಲ್ಲದ ಅಪಾರದರ್ಶಕ ಹಣಕಾಸು ವ್ಯವಸ್ಥೆಯನ್ನು ಸ್ಥಾಪಿಸಲು ಹೇಗೆ ಬಂಡವಾಳ ಸ್ನೇಹಿ ವಾತಾವರಣವನ್ನು ಸೃಷ್ಟಿಸಬೇಕಾಯಿತು ಎಂದು ಗಮನಿಸಬೇಕು. ಹಾಗೆಯೇ ನೂತನ ಹಣಕಾಸು ಉತ್ಪನ್ನಗಳನ್ನು ನಿಯಂತ್ರಿಸುವ ಯಾವುದೇ ಸ್ಪಷ್ಟ ಶಾಸನಗಳನ್ನು ಹೊಂದಿರದಿದ್ದರೂ ಅಮೆರಿಕ ಮಾರುಕಟ್ಟೆ ದುರಾಸೆಯ ಹಾದಿಗಳಿಗೆ ಮುಕ್ತ ಅವಕಾಶ ನೀಡಿದ್ದರಿಂದ 2007-09ರ ಹಣಕಾಸು ಬಿಕ್ಕಟ್ಟನ್ನು ಎದುರಿಸಿತ್ತು ಎನ್ನುವುದನ್ನೂ ಗಮನಿಸಬೇಕು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ, ದಲ್ಲಾಳಿಗಳು ಚುನಾವಣೆಗಳ ಮೇಲೆ ಪಾರಮ್ಯ ಸಾಧಿಸದಿರುವಂತೆ ಎಚ್ಚರ ವಹಿಸಬೇಕಾಗುತ್ತದೆ. (ಸಾಮಾನ್ಯವಾಗಿ ಶ್ರೀಮಂತ ಬಂಡವಳಿಗರಿಗೆ ಪರವಾನಗಿ, ಮಂಜೂರಾತಿಯನ್ನು ಒದಗಿಸಲು ದಲ್ಲಾಳಿಗಳಂತೆ ಕಾರ್ಯನಿರ್ವಹಿಸುವವರು ಆರ್ಥಿಕ ನಿಬಂಧನೆಗಳಿಲ್ಲದ ಸುಧಾರಣಾ ನೀತಿಯಿಂದ ತಮ್ಮ ಆದಾಯವನ್ನು ಕಳೆದುಕೊಳ್ಳುತ್ತಾರೆ.) ಹಾಗೆಯೇ ಸುಧಾರಣಾ ಕ್ರಮಗಳಿಂದ ತಕ್ಷಣಕ್ಕೆ ಯಾವುದೇ ಉಪಯೋಗ ಪಡೆಯದ ಅಸಂಘಟಿತ ವಲಯದ ಬಡ ಜನರನ್ನು ಸಂತೃಪ್ತಿಪಡಿಸಲು ಹಣದುಬ್ಬರ ನಿಯಂತ್ರಿಸಿ ನಿರುದ್ಯೋಗ ಪ್ರಮಾಣವನ್ನು ಕಡಿಮೆ ಮಾಡಬೇಕಾಗುತ್ತದೆ. ಆರ್ಥಿಕ ನಿಬಂಧನೆಗಳನ್ನು ತೆರವುಗೊಳಿಸುವುದೆಂದರೆ ಸರ್ಕಾರಗಳು ಸಕಾರಾತ್ಮಕ ಕ್ರಮಗಳಿಂದ ಹಿಂದೆಗೆಯಬೇಕಿಲ್ಲ. ಜನತೆಯ ಸುರಕ್ಷತಾ ಜಾಲಗಳನ್ನು ದುರ್ಬಲಗೊಳಿಸಬೇಕಿಲ್ಲ. ಸಮಾನ ಅವಕಾಶಗಳನ್ನು ಕಲ್ಪಿಸುವುದಕ್ಕೆ ಹಿಂಜರಿಯಬೇಕಿಲ್ಲ. ಮಾರುಕಟ್ಟೆ ವೈಫಲ್ಯಗಳನ್ನು ಸಹಿಸಿಕೊಳ್ಳಬೇಕೆಂದೂ ಇಲ್ಲ
.
ನಿಬಂಧನೆಗಳನ್ನು ಸಡಿಲಗೊಳಿಸುವ ಪ್ರಕ್ರಿಯೆಯು ತೀವ್ರಗೊಂಡಂತೆಲ್ಲಾ ಉಲ್ಬಣಿಸಬಹುದಾದ ಸಾಮಾಜಿಕ ಕ್ಷೋಭೆಯನ್ನು ನಿಭಾಯಿಸಲು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಸಜ್ಜುಗೊಳಿಸಿ ಬಲಪಡಿಸಬೇಕಾಗುತ್ತದೆ. 1991ರ ನಂತರದಲ್ಲಿ ರಷ್ಯಾ ಇಂತಹ ಪರಿಸ್ಥಿತಿಯನ್ನು ಎದುರಿಸಿದೆ. ರಷ್ಯಾದಲ್ಲಿ ಸಾಮಾಜಿಕ ಕ್ಷೋಭೆ ಮತ್ತು ದುರವಸ್ಥೆ ಪರಾಕಾಷ್ಠೆ ತಲುಪಿದ್ದರಿಂದಲೆ ಸರ್ವಾಧಿಕಾರ ಮರಳಿ ಬಂದಿದೆ. ಆದುದರಿಂದ ಸಾರ್ವಜನಿಕ ಸುವ್ಯವಸ್ಥೆ ಮತ್ತು ಅನಿಯಂತ್ರಿತ ಆರ್ಥಿಕತೆಯ ನಡುವೆ ಏರ್ಪಡುವ ಸಂಘರ್ಷವನ್ನು ಸಕಾರಾತ್ಮಕ ಕ್ರಮಗಳ ಮೂಲಕ ಸರಿಪಡಿಸಬೇಕಾಗುತ್ತದೆ.

ವ್ಯವಸ್ಥೆಯಲ್ಲಿ ಬಡಜನತೆಗೆ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸುರಕ್ಷತಾ ಜಾಲಗಳನ್ನು ಮತ್ತು ಸಾಮಾಜಿಕ ಭದ್ರತೆಯನ್ನು ಕಲ್ಪಿಸಬೇಕಾಗುತ್ತದೆ. ಸಮಾನ ಅವಕಾಶದ ನೆಲೆಗಳನ್ನು ಕಲ್ಪಿಸುವ ಮೂಲಕ, ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ಮೂಲಕ, ಧರ್ಮದರ್ಶಿತ್ವವನ್ನು ಉತ್ತೇಜಿಸುವ ಮೂಲಕ, ಮಾರುಕಟ್ಟೆ ವ್ಯವಸ್ಥೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಪೋರೇಟ್‌ ಆಡಳಿತವನ್ನು ನ್ಯಾಯಸಮ್ಮತಗೊಳಿಸಬೇಕಾಗುತ್ತದೆ.

ಮಾರುಕಟ್ಟೆ ವ್ಯವಸ್ಥೆ ಎಂದರೆ ಸರ್ವ ಸ್ವತಂತ್ರ ಮುಕ್ತ ಅವಕಾಶದ ನೆಲೆ ಅಲ್ಲ. ವ್ಯಾಪಾರ ವಹಿವಾಟುಗಳನ್ನು ಇಲ್ಲಿ ಬಂಡವಾಳಶಾಹಿಯೇ ನಿಯಂತ್ರಿಸುತ್ತದೆ. ಈ ನಿಯಮದೊಂದಿಗೆ, ಬಂಡವಾಳಶಾಹಿಯ ಮಾರುಕಟ್ಟೆ ವ್ಯವಸ್ಥೆ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಮುಖ್ಯ ಚಾಲಕ ಶಕ್ತಿ ಬಂಡವಾಳವೇ ಆಗಿರುವುದರಿಂದ ಬಂಡವಾಳ ಹೂಡಿಕೆಯ ಮೂಲಕ ಉತ್ಪಾದಕೀಯತೆಯನ್ನು ಹೆಚ್ಚಿಸುವುದು ಮುಖ್ಯವಾಗುತ್ತದೆ.

(ಮೂಲ : Modinomics and the long distance to finish ಸುಬ್ರಮಣ್ಯನ್‌ ಸ್ವಾಮಿ- ದ ಹಿಂದೂ ಪತ್ರಿಕೆ, 06-06-2022,ಲೇಖಕರು ಮಾಜಿ ಕೇಂದ್ರ ಸಚಿವರು ಮತ್ತು ಆರು ಅವಧಿಯ ಲೋಕಸಭಾ ಸದಸ್ಯರು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ

Published

on

mysuru-dasara-elephants-srikanta-5790-kg-ekalavya-elephant-weight
Mysuru Dasara Elephants: 5,790 ಕೆಜಿ ತೂಕದ ಶ್ರೀಕಂಠ ನಂಬರ್ 1; ಗಜಪಡೆಯ ಆನೆಗಳ ತೂಕ ಎಷ್ಟು?

ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.

ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.

ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ

  • ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಮೊದಲ ಸ್ಥಾನ
  • ಏಕಲವ್ಯ 5,600 ಕೆಜಿ ತೂಕದೊಂದಿಗೆ ಎರಡನೇ ಸ್ಥಾನ
  • ಮೊದಲ ಹಂತದಲ್ಲಿ ಒಟ್ಟು 9 ಆನೆಗಳಿಗೆ ತೂಕ ಪರೀಕ್ಷೆ
  • ಆನೆಗಳ ತೂಕದ ಆಧಾರದ ಮೇಲೆ ಆಹಾರ ಮತ್ತು ತಾಲೀಮು ನಿರ್ಧಾರ
  • ಅಂತಿಮ ತಾಲೀಮಿನ ಬಳಿಕವೇ ಚಿನ್ನದ ಅಂಬಾರಿ ಆನೆ ಆಯ್ಕೆ

http://Visit : www.suddidina.com

ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ

ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.

9 ಆನೆಗಳ ತೂಕದ ಆಧಾರದಲ್ಲೇ ಆಹಾರ

ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.

ಅಂಬಾರಿ ಆನೆ ಯಾರು? ಕುತೂಹಲ

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.

ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್‌ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.

ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ

ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್‌ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”

                                                   – ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್‌ 

ದಸರಾ ಗಜಪಡೆಯ ತೂಕದ ವಿವರ

  • ಶ್ರೀಕಂಠ: 5,790 ಕೆಜಿ
  • ಏಕಲವ್ಯ: 5,600 ಕೆಜಿ
  • ಧನಂಜಯ: 5,530 ಕೆಜಿ
  • ಮಹೇಂದ್ರ: 5,490 ಕೆಜಿ
  • ಪ್ರಶಾಂತ: 5,205 ಕೆಜಿ
  • ಗೋಪಿ: 5,170 ಕೆಜಿ
  • ಶ್ರೀರಾಮ: 4,820 ಕೆಜಿ
  • ಲಕ್ಷ್ಮೀ: 3,990 ಕೆಜಿ
  • ಕಾವೇರಿ: 3,075 ಕೆಜಿ
Continue Reading

ದಿನದ ಸುದ್ದಿ

ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!

Published

on

bengaluru-koodlugate-snn-raj-eternia-18-floor-building-demolition
ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ

ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ


ಸುದ್ದಿದಿನ,ಬೆಂಗಳೂರು:
ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ಎಸ್ಟೇಟ್‌ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್‌ ರಾಜ್‌ ಕಾರ್ಪ್‌ ಸಂಸ್ಥೆಯು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್‌ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.

₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ

ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ

ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್‌ ಅಪಾರ್ಟ್‌ಮೆಂಟ್‌ ನಿರ್ದೇಶಕ ಅನೂಜ್‌ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.

ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಾಣ

ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್‌ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.

ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

Continue Reading

ದಿನದ ಸುದ್ದಿ

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

Published

on

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.

ಹೈಲೈಟ್ಸ್

  • ಪೂಂಚ್‌ನ ಮೆಂಧರ್ ಸೆಕ್ಟರ್‌ನಲ್ಲಿ ಶಂಕಿತ ಡ್ರೋನ್ ಹಾರಾಟ
  • 🇵🇰 ಡ್ರೋನ್ ಪಾಕಿಸ್ತಾನದ ದಿಕ್ಕಿಗೆ ವಾಪಸ್ ತೆರಳಿದ ಶಂಕೆ
  • ಡ್ರೋನ್‌ನಿಂದ ವಸ್ತುಗಳನ್ನು ಕೆಳಗೆ ಹಾಕಲಾಗಿದೆಯೇ ಎಂದು ಶೋಧ
  • ಉಧಂಪುರ, ಕಥುವಾ, ರಾಜೌರಿಯಲ್ಲಿ ಜಂಟಿ ಸರ್ಚ್ ಆಪರೇಷನ್
  • ಶಸ್ತ್ರಸಜ್ಜಿತ ವ್ಯಕ್ತಿಗಳ ಮಾಹಿತಿ ಹಿನ್ನೆಲೆ ರಾಜೌರಿಯಲ್ಲೂ ಹೈ ಅಲರ್ಟ್

http://Visit : www.suddidina.com

ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್

ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ

ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.

ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.

ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ

ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಯಲ್ಲಿ ಹೆಚ್ಚಿದ ಕಣ್ಗಾವಲು

ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.

ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

Continue Reading

Trending