ದಿನದ ಸುದ್ದಿ
ನಿಮ್ಮ ಸರ್ಕಾರಕ್ಕೆ ಕನಿಷ್ಠ ಶೂ, ಸಾಕ್ಸ್, ಸೈಕಲ್ಗಳನ್ನೂ ನೀಡಲಾಗದಷ್ಟು ದರಿದ್ರ ಬಂದಿದೆಯೆ? : ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವಿರುದ್ಧ ಸಿದ್ದರಾಮಯ್ಯ ಕಿಡಿ
ಸುದ್ದಿದಿನ ಡೆಸ್ಕ್ : ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ನೀಡುವ ವಿಚಾರದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ನೀಡಿರುವ ಹೇಳಿಕೆ ಅಮಾನವೀಯ. ಅವರ ಮಾತುಗಳು ಬೇಜವಾಬ್ದಾರಿತನ ಹಾಗೂ ಕ್ರೂರತನದಿಂದ ಕೂಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಚುನಾವಣೆಗಳು ಹತ್ತಿರ ಬಂದಂತೆಲ್ಲ ಬಿಜೆಪಿಗೆ ಸುಳ್ಳು ಹೇಳುವ ದೆವ್ವ ಮೈಮೇಲೆ ಹತ್ತಿ ಕುಣಿಯಲಾರಂಭಿಸುತ್ತದೆ. ತಾವು ಮಾತನಾಡಬೇಕಾದರೆ ಕನಿಷ್ಠ ಮಟ್ಟದ ಪ್ರಜ್ಞೆ, ಲಜ್ಜೆ, ನೈತಿಕತೆ ಇವ್ಯಾವುಗಳೂ ಇಲ್ಲದಂತೆ ವರ್ತಿಸಲು ಪ್ರಾರಂಭಿಸುತ್ತಾರೆ. ಅದರ ಭಾಗವಾಗಿ ಕಲ್ಬುರ್ಗಿಯಲ್ಲಿ ನಿನ್ನೆ ಬಿ.ಸಿ ನಾಗೇಶ್ ಅವರು ಮಾತನಾಡಿದ್ದಾರೆ.
‘ಮಕ್ಕಳು ಶಾಲೆಗೆ ಬರುವುದು ಕಲಿಯುವುದಕ್ಕೆ ಹೊರತು, ಶೂ ಸಾಕ್ಸ್ ಹಾಕಿಕೊಳ್ಳುವುದಕ್ಕೆ ಅಲ್ಲ’ ಎಂದು ಸಚಿವರು ಹೇಳಿದ್ದಾರೆ. ನಾನು ನಾಗೇಶ್ ಅವರನ್ನು ಕೇಳಬಯಸುತ್ತೇನೆ, ನಿಮ್ಮ ಮಕ್ಕಳಾಗಲಿ ಅಥವಾ ನೀವಾಗಲಿ ಎಂದಾದರೂ ಕಾಲಿಗೆ ಚಪ್ಪಲಿ ಇಲ್ಲದೆ ಓಡಾಡಿದ ಅನುಭವ ಇದೆಯೆ, ಅದರ ಅವಮಾನ, ಕೀಳರಿಮೆಗಳನ್ನು ಅನುಭವಿಸಿದ ಉದಾಹರಣೆಗಳಿವೆಯೆ?
ಕಾನ್ವೆಂಟ್ ಸ್ಕೂಲಿಗೆ ಹೋಗುವ ಮಕ್ಕಳು ಶುಭ್ರ ಬಟ್ಟೆ, ಟೈ, ಕಾಲಿಗೆ ಶೂ, ಸಾಕ್ಸ್ ಹಾಕಿಕೊಂಡು ನಡೆದಾಡುವುದನ್ನು ನೋಡಿದಾಗ ಅದೇ ಬೀದಿಯಲ್ಲಿ, ಅದೇ ಹಳ್ಳಿಯಲ್ಲಿ ಆಟವಾಡುವ ಬಡವರ ಮಕ್ಕಳು ಬರಿಗಾಲಲ್ಲಿ, ಹರಿದ ಬಟ್ಟೆಯಲ್ಲಿದ್ದರೆ ನಿಮಗೆ ಏನೂ ಅನ್ನಿಸುವುದಿಲ್ಲವೆ? ಅಥವಾ ಆ ಕಷ್ಟದಲ್ಲಿರುವ ಮಕ್ಕಳಿಗೆ ಏನನ್ನಿಸುತ್ತದೆ ಎಂಬ ಅರಿವಾದರೂ ಇದೆಯೆ ನಿಮಗೆ? ಅವರು ಹಾಗೆಯೆ ಬರಿಗಾಲಿನಲ್ಲಿ ಇರಬೇಕೆಂದು ರಾಷ್ಟ್ರ ಭಕ್ತಿಯ ಬಗ್ಗೆ ಮಾತನಾಡುವ ಸಂಘ ನಿಮಗೆ ಹೇಳಿಕೊಟ್ಟಿದೆಯೆ? ಹೇಳಿಕೊಟ್ಟಿರಲು ಸಾಧ್ಯವಿದೆ. ಶೂದ್ರರ ಬಳಿ ವಿದ್ಯೆ, ಹಣ, ಅಧಿಕಾರಗಳು ಇರಬಾರದೆಂಬ ಕಾರಣಕ್ಕೆ ತಾನೆ ಈ ಸಂಘ ಹುಟ್ಟಿಕೊಂಡು ನಮ್ಮ ಮಕ್ಕಳ ಮೆದುಳಿಗೆ ವಿಷ ಹಾಕುತ್ತಿರುವುದು.
ದಲಿತರು, ಅಲೆಮಾರಿಗಳು, ಹಿಂದುಳಿದವರ ಹಾಗೂ ಎಲ್ಲ ಜಾತಿಯ ಬಡವರ ಮಕ್ಕಳಿಗೆ ಸಣ್ಣ ಸ್ವಾಭಿಮಾನ ಇರಲಿ, ಕಲಿಯುವ, ಶಾಲೆಗೆ ಹೋಗುವ ಹುಮ್ಮಸ್ಸು ಬರಲಿ ಎಂಬ ಕಾರಣಕ್ಕೆ ನಾವು ಮಕ್ಕಳ ಸ್ನೇಹಿಯಾದ ಯೋಜನೆಗಳನ್ನು ಜಾರಿಗೆ ತಂದಿದ್ದೆವು. ನಿಮ್ಮ ಸರ್ಕಾರಕ್ಕೆ ಮಕ್ಕಳಿಗೆ ಕೊಡಬೇಕಾದ್ದನ್ನು ಕೊಡುವ ಯೋಗ್ಯತೆ ಇಲ್ಲದಿದ್ದರೆ ಅವರನ್ನು ಹಂಗಿಸುವ ಸಾಹಸ ಮಾಡಬೇಡಿ.
ನಿಮ್ಮ ಸರ್ಕಾರಕ್ಕೆ ಕನಿಷ್ಠ ಶೂ, ಸಾಕ್ಸ್, ಸೈಕಲ್ಗಳನ್ನೂ ನೀಡಲಾಗದಷ್ಟು ದರಿದ್ರ ಬಂದಿದೆಯೆ? ಹಾಗಿದ್ದರೆ ನಾಡಿನ ಬಡವನೊಬ್ಬನಿಂದಲೂ ವರ್ಷಕ್ಕೆ 1 ಲಕ್ಷ ರೂಪಾಯಿಗಳಷ್ಟು ತೆರಿಗೆಯನ್ನು ಮೋದಿ ಸರ್ಕಾರ ಮತ್ತು ಬೊಮ್ಮಾಯಿಯವರ ಸರ್ಕಾರಗಳು ವಸೂಲಿ ಮಾಡುತ್ತಿವೆಯೆಂದು ಪತ್ರಿಕೆಗಳು ಸಮೀಕ್ಷೆ ಮಾಡಿದ್ದವು. ಹಾಗೆ ಬಡವರಿಂದ ದೋಚಿಕೊಂಡ ತೆರಿಗೆ ಹಣವನ್ನು ಏನು ಮಾಡುತ್ತಿದ್ದೀರಿ? 40 ಪರ್ಸೆಂಟ್ ಕಮಿಷನ್ ಸರ್ಕಾರಕ್ಕೆ ಮಕ್ಕಳ ಶಿಕ್ಷಣವನ್ನೂ ನೋಡಿಕೊಳ್ಳುವ ಯೋಗ್ಯತೆ ಇಲ್ಲದ ಮೇಲೆ ನೀವು ಯಾರ ಸುಖಕ್ಕಾಗಿ ಸರ್ಕಾರ ನಡೆಸುತ್ತಿದ್ದೀರಿ? ನಿಮಗೆ ಸಣ್ಣ ಕಾಳಜಿಯೇನಾದರೂ ಇದ್ದರೆ ಹೀಗೆಲ್ಲ ಮಾತನಾಡಲು ಸಾಧ್ಯವೆ?
ನಮ್ಮ ಸರ್ಕಾರದ ಅವಧಿಯಲ್ಲಿ 7905 ಪ್ರಾಥಮಿಕ ಶಾಲಾ ಶಿಕ್ಷಕರು, 1689 ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಮಾಡಿದ್ದೆವು. ಜೊತೆಗೆ 10000 ಪಧವೀಧರ ವಿಷಯವಾರು ಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ ಗ್ರಂಥ ಪಾಲಕರ ನೇಮಕಾತಿಯು ಅಂತಿಮಗೊಳಿಸುವ ಹಂತಕ್ಕೆ ಬಂದಿತ್ತು. ಇದರಿಂದಾಗಿ ಒಟ್ಟು 20,000 ಶಿಕ್ಷಕರ ನೇಮಕಾತಿ ಮಾಡಿದಂತಾಗಿತ್ತು. ಇದರ ಜೊತೆಗೆ ನಮ್ಮ ಅವಧಿಯಲ್ಲಿ 20,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದೆವು.
ನಮ್ಮ ಅವಧಿಯಲ್ಲಿ 1763 ಪಿಯು ಕಾಲೇಜುಗಳ ಉಪನ್ಯಾಸಕರನ್ನು ನೇಮಕಾತಿ ಮಾಡಿದ್ದೆವು.
ನಮ್ಮ ಸರ್ಕಾರ 47 ಲಕ್ಷ ಮಕ್ಕಳಿಗೆ ಸಮವಸ್ತ್ರ, ಶೂ ಮತ್ತು ಸಾಕ್ಸ್ ಹಾಗೂ 5 ಲಕ್ಷ ಮಕ್ಕಳಿಗೆ ಬೈಸಿಕಲ್ ನೀಡಿದ್ದೆವು. ನಾವು ಮಕ್ಕಳ ಪೌಷ್ಟಿಕತೆ ಹೆಚ್ಚಿಸುವುದಕ್ಕಾಗಿಯೆ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದು ವಾರದಲ್ಲಿ 5 ದಿನ ಕೆನೆಭರಿತ ಹಾಲನ್ನು ನೀಡಿದ್ದೆವು.
ನಾವು ಕೈಗೊಂಡ ಕ್ರಮಗಳಿಂದಾಗಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಮತ್ತು ಎನ್ಸಿಇಆರ್ಟಿ ಯು ರಾಜ್ಯದ ಶಾಲೆಗಳಲ್ಲಿ 3,5,8 ನೇ ತರಗತಿಗಳಲ್ಲಿ ಕಲಿಯುತ್ತಿದ್ದ 1.29 ಲಕ್ಷ ವಿದ್ಯಾರ್ಥಿಗಳಿಗೆ ನಡೆಸಿದ ರಾಷ್ಟ್ರೀಯ ಸಾಧನೆ ಸಮೀಕ್ಷೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲೆ ಇತ್ತು.
ನಾವು ಮಕ್ಕಳ ಶಿಕ್ಷಣಕ್ಕಾಗಿಯೆ 1400 ಕ್ಕೂ ಹೆಚ್ಚು ಹಾಸ್ಟೆಲ್ಗಳು, ಆಶ್ರಮ ಶಾಲೆಗಳು, ಮತ್ತು ವಸತಿ ಶಾಲೆಗಳನ್ನು ನಿರ್ಮಿಸಿದ್ದೆವು. ಬಿಜೆಪಿ ಸರ್ಕಾರ ಎಷ್ಟನ್ನು ನಿರ್ಮಿಸಿದೆ ಎಂಬುದನ್ನು ನಾಡಿಗೆ ತಿಳಿಸಬೇಕು.
ನಮ್ಮ ಸರ್ಕಾರದ ಅವಧಿಯಲ್ಲಿ ನನ್ನ ಮಾಹಿತಿಯ ಪ್ರಕಾರ 71,279 ಕೊಠಡಿಗಳ ನವೀಕರಣ, ಪುನರ್ ನವೀಕರಣ ಕಾರ್ಯಗಳನ್ನು ಮಾಡಿ ಮುಗಿಸಿದ್ದೆವು. ಈ ಕುರಿತು ಇನ್ನಷ್ಟು ಮಾಹಿತಿಯನ್ನು ಮುಂದೆ ಬಿಡುಗಡೆ ಮಾಡುವೆ.
ಬಿಜೆಪಿ ಸರ್ಕಾರ ಎಷ್ಟು ಜನ ಶಿಕ್ಷಕರನ್ನು ನೇಮಕ ಮಾಡಿದೆ? ಎಷ್ಟು ಜನ ಮಕ್ಕಳಿಗೆ ಸೈಕಲ್ ನೀಡಿದೆ? ಎಷ್ಟು ಶಾಲೆಗಳನ್ನು, ವಸತಿ ಶಾಲೆಗಳನ್ನು ನಿರ್ಮಿಸಿದೆ ಎಂದು ಹೇಳಬೇಕು. ಮಕ್ಕಳಿಗೆ ಶೂ, ಸಾಕ್ಸ್, ಪುಸ್ತಕ, ಸೈಕಲ್ ಅಷ್ಟೆ ಅಲ್ಲ ಸಮರ್ಪಕವಾಗಿ ವಿದ್ಯಾರ್ಥಿ ವೇತನಗಳನ್ನೂ ಬಿಜೆಪಿ ಸರ್ಕಾರಕ್ಕೆ ನೀಡಲು ಸಾಧ್ಯವಾಗಿಲ್ಲ.
ನಮ್ಮ ಸರ್ಕಾರ ತೆಗೆದುಕೊಂಡ ಕ್ರಮಗಳಿಂದ ಮಕ್ಕಳ ಅಪೌಷ್ಟಿಕತೆ ಕಡಿಮೆಯಾಗಿತ್ತು. ಶಾಲೆಗಳ ಹಾಜರಾತಿ ಹೆಚ್ಚಿತ್ತು. ಆದರೆ ಈಗ ಸರ್ಕಾರವೆ ಹೈ ಕೋರ್ಟಿಗೆ ಸಲ್ಲಿಸಿರುವ ವರದಿ ಪ್ರಕಾರ ಸುಮಾರು 10.12 ಲಕ್ಷ ಮಕ್ಕಳು ಶಾಲೆಯಿಂದ ಹೊರಗೆ ಇದ್ದಾರೆ. ಈ ಮಕ್ಕಳ ಭವಿಷ್ಯವೇನಾಗಬಹುದು ಎಂದು ಸರ್ಕಾರ ಯೋಚಿಸಿದೆಯೆ?
ಆಡಳಿತ ಪಕ್ಷದಲ್ಲಿರುವ ಸಚಿವರು ವಿರೋಧ ಪಕ್ಷಗಳಿಗೆ ಪ್ರಶ್ನೆ ಕೇಳುವುದಲ್ಲ. ಸರ್ಕಾರದ ಕೆಲಸಗಳು ಉತ್ತರ ನೀಡುವಂತೆ ಇರಬೇಕೆ ಹೊರತು, ಮಂತ್ರದಿಂದ ಮಾವಿನ ಉದುರಿಸಲು ಸಾಧ್ಯವಿಲ್ಲ.
ಅಷ್ಟಕ್ಕೂ ಶಿಕ್ಷಣ ಸಚಿವರಿಗೆ ಕಾಳಜಿ, ಬದ್ಧತೆ ಇದ್ದರೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯಲ್ಲಿ 2008 ರಿಂದ ಇದುವರೆಗೆ ಏನೇನಾಗಿದೆ? ಯಾವ ಸಾಧನೆಗಳಾಗಿವೆ ಎಂಬ ಕುರಿತು ಹಾಗೂ ಈ 14 ವರ್ಷಗಳಲ್ಲಿ ಸದರಿ ಇಲಾಖೆಯಲ್ಲಿ ಖರ್ಚು ಮಾಡಿದ ಪ್ರತಿ ಪೈಸೆಗೂ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸಬೇಕೆಂದು ಆಗ್ರಹಿಸುತ್ತೇನೆ ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ಇರುವ ಎಲ್ಲ ಹಿಂದಿನ ಯೋಜನೆಗಳನ್ನು ಮುಂದುವರೆಸಬೇಕು, ಶೂ, ಸಾಕ್ಸ್, ಸೈಕಲ್, ಹಾಲು, ಸಮವಸ್ತ್ರ, ಪುಸ್ತಕ, ವ್ಯವಸ್ಥಿತ ಕೊಠಡಿಗಳನ್ನು ಕೂಡಲೆ ಒದಗಿಸಬೇಕು, ಪ್ರವಾಹ, ಅತಿವೃಷ್ಟಿಯಿಂದ ಹಾನಿಯಾದ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ನಿರ್ಮಿಸುವ ಕೆಲಸ ಇನ್ನೂ ಆಗಿಲ್ಲ, ಅವುಗಳನ್ನು ಶೀಘ್ರವಾಗಿ ಪುನರ್ ನಿರ್ಮಿಸಬೇಕು. ಖಾಲಿ ಇರುವ ಎಲ್ಲ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಬಾಷಾ ಒತ್ತಾಯ
ಸುದ್ದಿದಿನ,ದಾವಣಗೆರೆ:ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡುತ್ತಿದ್ದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಭಾಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ,
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ನಂತರ 23ಕ್ಕೆ ಹೆಚ್ಚು ವಿದ್ಯಾರ್ಥಿನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ದೆಹಲಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ ವಿದ್ಯಾರ್ಥಿಗಳನ್ನು ಕೊಲ್ಲುವ ಭ್ರಷ್ಟ ಆಡಳಿತ ವ್ಯವಸ್ಥೆ ಕೊನೆಯಾಗಬೇಕು ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ *ಮಹಬೂಬ್ ಭಾಷಾ* ಆಗ್ರಹಿಸಿದ್ದಾರೆ ಸಂವಿಧಾನ ವಿರೋಧಿ ಆಡಳಿತಕ್ಕೆ ಕಡಿವಾಣ ಹಾಕಲು ದೇಶದ ಯುವಜನರು ಹಾಗೂ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು, ಸಂವಿಧಾನ ವಿರೋಧಿ ನಡೆ ಹಾಗೂ ಹೋರಾಟವನ್ನು ಹತ್ತಿಕ್ಕು ಹೊನ್ನಾರವಾಗಿದೆ.
ನೀಟ್ ಹಗರಣ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಕಾರ್ಪೊರೇಟರ್ ಶಿಕ್ಷಣ ನೀತಿಗಳ ಕಾರಣ, ಪರೀಕ್ಷೆಯ ಅಕ್ರಮ ವಿರುದ್ಧ ಹೋರಾಟ ಎರಡನೇ ಸ್ವತಂತ್ರ ಸಂಗ್ರಾಯದ ರೀತಿಯಲ್ಲಿ ದೇಶದಿಂದ ವ್ಯಾಪಿಸುತ್ತಿದ್ದು, ಆಳುವ ಸರ್ಕಾರ ರಾಷ್ಟ್ರದ ಭವಿಷ್ಯ ವಾಗಿರುವ ಯುವ ಸಮೂಹದ ಕನಸುಗಳನ್ನು ಹೊಸಕಿ ಹಾಕಬಾರದೆಂದು ಹೇಳಿದ್ದಾರೆ.
ಪರೀಕ್ಷಾ ವ್ಯವಸ್ಥೆಯ ಲೋಪದೋಷಗಳನ್ನು ತಕ್ಷಣವೇ ಸರಿಪಡಿಸಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸುದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇನೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ವಿದ್ಯಾರ್ಥಿಗಳ ಆತ್ಮಹತ್ಯೆ: ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿನಾಯಕ ಬಿ. ಎನ್ ಆಗ್ರಹ
ಸುದ್ದಿದಿನ,ದಾವಣಗೆರೆ :ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ನಂತರ20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ
ರಾಜಿನಾಮೆ ನೀಡಬೇಕು. ವಿದ್ಯಾರ್ಥಿಗಳನ್ನು ಕೊಲ್ಲುವ ಭ್ರಷ್ಟ ಆಡಳಿತ ವ್ಯವಸ್ಥೆ ಕೊನೆಯಾಗಬೇಕು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೀತಿ ,ಸಂಶೋಧನೆ ಮತ್ತು ತರಬೇತಿ ವಿಭಾಗದ ರಾಜ್ಯ ಸಂಚಾಲಕರಾದ ವಿನಾಯಕ ಬಿ.ಎನ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹ ಮಾಡಿದ್ದಾರೆ.
ಸಂವಿಧಾನ ವಿರೋಧಿ ಆಡಳಿತಕ್ಕೆ ಕಡಿವಾಣ ಹಾಕಲು ದೇಶದ
ಯುವಜನರು, ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು. ಸೊನಮ್ ವಾಂಗ್ಟಕ್ ಅವರನ್ನು ಏಕಾಏಕಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಸಂವಿಧಾನವಿರೋಧಿ ನಡೆ, ಹೋರಾಟ ಹತ್ತಿಕ್ಕುವ ಹುನ್ನಾರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೀಟ್ ಹಗರಣ, ವಿದ್ಯಾರ್ಥಿಗಳ ಆತ್ಮ ಹತ್ಯೆಗೆ ಕಾರ್ಪೊರೇಟ್ ಶಿಕ್ಷಣ ನೀತಿಗಳು ಕಾರಣ. ನೀಟ್ ಪರೀಕ್ಷೆ ಅಕ್ರಮದ ವಿರುದ್ಧದ ಹೋರಾಟ ಎರಡನೇ ಸ್ವಾತಂತ್ರ್ಯ ಸಂಗ್ರಾಮದ ರೀತಿಯಲ್ಲಿ ದೇಶದಾದ್ಯಂತ ವ್ಯಾಪಿಸುತ್ತಿದೆ. ಆಳುವ ಸರ್ಕಾರ ರಾಷ್ಟ್ರದ ಭವಿಷ್ಯವಾಗಿರುವ ಯುವ ಸಮೂಹದ ಕನಸುಗಳನ್ನು ಹೊಸಕಿ ಹಾಕಬಾರದು’.ಎಂದು ತಿಳಿಸಿದ್ದಾರೆ.
ಪರೀಕ್ಷಾ ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವಂದನೆಗಳೊಂದಿಗೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್ ಐ ಆರ್ | ರಾಜ್ಯದಲ್ಲೇ ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ
ಸುದ್ದಿದಿನ,ದಾವಣಗೆರೆ : ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕಾರ್ಯದಲ್ಲಿ ಮಾಯಾಕೊಂಡ ಕ್ಷೇತ್ರವು ನಿಗದಿತ ಅವಧಿಗಿಂತ ಮೊದಲೇ ಗಣತಿ ನಮೂನೆಗಳ ಹಂಚಿಕೆಯನ್ನು ಪೂರ್ಣಗೊಳಿಸಿರುವುದರಿಂದ ಮತ್ತು ಶೇ. 92.31 ರಷ್ಟು ಡಿಜಿಟಲೀಕರಣ ಸಾಧನೆ ಮಾಡಲಾಗಿರುವುದರಿಂದ, ಪ್ರಗತಿಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು 108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಅವರು ತಿಳಿಸಿದರು.
ಅವರು ಮಂಗಳವಾರ ದಾವಣಗೆರೆ ತಾಲ್ಲೂಕು ಕಚೇರಿಯಲ್ಲಿ ದಾವಣಗೆರೆ ಜಿಲ್ಲೆಯ 108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕುರಿತು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕಾರ್ಯದಲ್ಲಿ ಒಟ್ಟು 1,97,048 ಮತದಾರರನ್ನು ಹೊಂದಿದ್ದು ಎಲ್ಲಾ 1,97,048 ಗಣತಿ ನಮೂನೆಗಳನ್ನು ಹಂಚಿಕೆ ಮಾಡಲಾಗಿದೆ ಇದುವರೆಗೆ ಒಟ್ಟು 1,81,890 ಗಣತಿ ನಮೂನೆಗಳನ್ನು ಡಿಜಿಟಲೀಕರಿಸಲಾಗಿದ್ದು, ಶೇಕಡಾ 92.31 ರಷ್ಟು ಗುರಿಯನ್ನು ತಲುಪಲಾಗಿದೆ ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (SIR) ಪ್ರಕ್ರಿಯೆಯಲ್ಲಿ ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಗಣತಿ ನಮೂನೆಗಳ ಹಂಚಿಕೆ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಯು ಬಿರುಸಿನಿಂದ ಸಾಗಿದ್ದು, ಇನ್ನು ಕೇವಲ 4,165 ಫಾರ್ಮ್ಗಳು (ಶೇಕಡಾ 2.11) ಮಾತ್ರ ಡಿಜಿಟಲೀಕರಣಕ್ಕೆ ಬಾಕಿ ಇವೆ ಕ್ಷೇತ್ರದಲ್ಲಿ ಯಾವುದೇ ಹಂಚಿಕೆಯಾಗದ ಫಾರ್ಮ್ಗಳು ಬಾಕಿ ಉಳಿದಿಲ್ಲ, ಬಾಕಿ ಉಳಿದಿರುವ ಗಣತಿ ನಮೂನೆಗಳ ಗಣಕೀಕರಣ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದರು.
ಮನೆ ಮನೆ ಭೇಟಿ ಸಂದರ್ಭದಲ್ಲಿ ಇಂದಿನವರೆಗೆ ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 10,993 ಮತದಾರರನ್ನು ಸ್ಥಳಾಂತರ, ವಲಸೆ, ಮರಣ, ದ್ವಿಪತಿ (ಡೂಪ್ಲಿಕೇಟ್) ಸೇರಿದಂತೆ ಇತರೆ ಕಾರಣಗಳಿಗಾಗಿ ಗುರುತಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 193 ನಮೂನೆಗಳು ಸಂಗ್ರಹವಾಗದೆ ಉಳಿದಿದ್ದು, 5059 ಶಾಶ್ವತ ವಲಸೆ, 3951 ಮರಣ ಪ್ರಕರಣ, 1760 ದ್ವಿಪ್ರತಿ ನಮೂನೆಗಳು ಹಾಗೂ 30 ಇತರೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.
ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ರಾಜೇಶ್ ಕುಮಾರ್ ಸಿ ಅವರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಎಸ್ ಐ ಆರ್ | ರಾಜ್ಯದಲ್ಲೇ ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ
-
ದಿನದ ಸುದ್ದಿ4 days agoನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ವಿದ್ಯಾರ್ಥಿಗಳ ಆತ್ಮಹತ್ಯೆ: ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿನಾಯಕ ಬಿ. ಎನ್ ಆಗ್ರಹ
-
ದಿನದ ಸುದ್ದಿ3 days agoಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಬಾಷಾ ಒತ್ತಾಯ

