Connect with us

ರಾಜಕೀಯ

ಸಿದ್ದರಾಮೋತ್ಸವ ; ಇದು ಗೂಗ್ಲಿಯೂ ಹೌದು; ಮೊದಲ ಬಾಲಿಗೆ ಸಿಕ್ಸರೂ ಹೌದು..!

Published

on

  • ರಾಜಾರಾಂ ತಲ್ಲೂರು

ಒಂದು ಆಡಳಿತಪಕ್ಷ ದುರಾಡಳಿತದಲ್ಲಿ ತೊಡಗಿರುವಾಗ, ವಿರೋಧಪಕ್ಷ ಶಕ್ತಿಹೀನವಾಗುತ್ತಿದೆ ಎಂದು ಬಿಂಬಿತವಾಗುತ್ತಿರುವಾಗ ರಾಜ್ಯದ ಪ್ರಮುಖ ವಿರೋಧಪಕ್ಷ ಕಾಂಗ್ರೆಸ್ಸಿಗೆ ಇಂತಹದೊಂದು ಬೂಸ್ಟರ್ ಡೋಸ್ ಬೇಕಿತ್ತು. ಈಗ ಸಂಜೆಯ ಹೊತ್ತಿಗೆ ಕಾಂಗ್ರೆಸ್ಸಿಗರಲ್ಲಿ ಬೂಸ್ಟರ್ ಡೋಸ್ ಪಡೆದ ಭಾವ ಕಾರ್ಯಕರ್ತರ ನೆಲಮಟ್ಟದಲ್ಲೂ, ಸೋಷಿಯಲ್ ಮೀಡಿಯಾದ ಮುಗಿಲಿನಲ್ಲೂ ಕಾಣಿಸುತ್ತಿದೆ ಎಂಬ ಮಟ್ಟಿಗೆ ಈವತ್ತಿನ “ದಾವಣಗೆರೆ ಶೋಆಫ್” ಯಶಸ್ವಿ.

ಒಂದು ಕ್ಷಣ, ಈ ಸಿದ್ಧರಾಮೋತ್ಸವದ ರನ್‌ಅಪ್ ಕಡೆ ಹಿಂದಿರುಗಿ ನೋಡಿ

ಆಳುವವರ ಪರ ಇರುವ ರಾಜ್ಯದ ಬಹುತೇಕ ಮಾಧ್ಯಮಗಳು, ಇದು ಸಿದ್ಧರಾಮಯ್ಯ-ಡಿಕೆ ಶಿವಕುಮಾರ್ ನಡುವಿನ ಶೋಡೌನ್ ಎಂದೇ ಬಿಂಬಿಸಿದ್ದವು. ಕಾಂಗ್ರೆಸ್ಸಿನ ಒಡಕು ಈ ಸಮಾರಂಭದ ಮೂಲಕ ಹೊರಬೀಳಲಿದೆ ಎಂಬುದು ಅವರ ತುಂಬು ನಿರೀಕ್ಷೆ ಆಗಿತ್ತು. ಸಮಾರಂಭಕ್ಕೆ “ಐವತ್ತು ಕೋಟಿ ಖರ್ಚು ಮಾಡುವ ಸಮಾಜವಾದ” ಎಂಬ ಟೀಕೆಯಿಂದ ಹಿಡಿದು, ಸಿದ್ಧರಾಮಯ್ಯ ಸುಳ್ಳು ಜನ್ಮದಿನಾಂಕದೊಂದಿಗೆ ಹುಟ್ಟಿದ ಹಬ್ಬ ಆಚರಣೆಯ ತುರ್ತಿಗೆ ಬಿದ್ದಿದ್ದಾರೆ ಎಂಬಲ್ಲಿಯ ತನಕ “ಅಪ”ಪ್ರಚಾರ ನಡೆದಿತ್ತು. ಪ್ರಚಾರಕ್ಕಿಂತ ಅಪಪ್ರಚಾರದ ಅಬ್ಬರವೇ ಹೆಚ್ಚಿತ್ತು. ಇದರ ಪರಿಣಾಮವಾಗಿ ಈ ಸಮಾರಂಭದ ಹೆಸರು “ಸಿದ್ಧರಾಮೋತ್ಸವ” ಇರಬೇಕೇ ಬೇಡವೇ ಎಂಬ ಚರ್ಚೆ ಕೂಡ ಕಾಂಗ್ರೆಸ್ಸಿನೊಳಗೆ ನಡೆದ ಬಗ್ಗೆ ಸುದ್ದಿ ಆಗಿತ್ತು.

ಇಂತಹದೊಂದು “ಶೇಕೀ ರನ್ ಅಪ್” ಜೊತೆಗೇ ಆರಂಭಗೊಂಡ “ಸಿದ್ಧರಾಮಯ್ಯನವರ 75ನೇ ಹುಟ್ಟುಹಬ್ಬದ ತಯಾರಿ, ಇಂದು ಬೆಳಗ್ಗೆಯ ಹೊತ್ತಿಗೆ ಹದಿನೈದು ಕಿಲೋಮೀಟರ್ ಹಿಂದೆಯೇ ಜನಸಂದಣಿಯ ಕಾರಣಕ್ಕೆ ಟ್ರಾಫಿಕ್ ಜಾಮ್ ಎಂಬಂತಹ ಸುದ್ದಿಗಳ ಜೊತೆ ಅಂತಿಮ ಹಂತ ತಲುಪಿದ್ದು, ಕಾಂಗ್ರೆಸ್ಸಿಗರು ಈ ಸಮಾವೇಶವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದರು ಎಂಬುದಕ್ಕೆ ಸೂಚನೆ.

ಕಾಂಗ್ರೆಸ್ಸಿಗೆ ತಾನು ಮರೆತೇ ಹೋಗಿದ್ದ “ಸ್ವಸಾಮರ್ಥ್ಯ ಮರುಪರಿಚಯ”ಕ್ಕೆ ಇಂತಹದೊಂದು ಬೂಸ್ಟರ್ ಡೋಸ್ ಅಗತ್ಯ ಇತ್ತು. ಒಂದಿಡೀ ಟರ್ಮ್ ಆಡಳಿತ ನಡೆಸಿದ್ದ ಸಿದ್ಧರಾಮಯ್ಯ ಸರ್ಕಾರ ಎರಡನೇ ಟರ್ಮಿಗೆ 55-45ರ ಸಣ್ಣ ಅಂತರದಲ್ಲಿ ಸೋತರೂ ಬಾಹ್ಯ ಬೆಂಬಲದಿಂದ ಸರ್ಕಾರ ರಚಿಸಿದ್ದು, ಪ್ರಲೋಭನೆಯ ಪಕ್ಷಾಂತರಗಳಿಂದಾಗಿ ಅಧಿಕಾರ ಕಳೆದುಕೊಂಡದ್ದು… ಎಲ್ಲವನ್ನೂ ಕಾಂಗ್ರೆಸ್ ಕಾರ್ಯಕರ್ತರು ಮರೆತಂತೆ ಕಾಣುತ್ತಿತ್ತು.

ಯಾಕೆ ಈ ಮರೆವು ಉಂಟಾಗಿತ್ತೆಂದರೆ “ಡಬ್ಬಲ್ ಎಂಜಿನ್” ಭೋರ್ಗರೆತ ಅಷ್ಟು ಗಟ್ಟಿಯಾಗಿತ್ತು! ಜೊತೆಗೆ #ಡಿಯರ್_ಮೀಡಿಯಾ ಪ್ರತಿಪಕ್ಷವನ್ನೇ ಆಡಳಿತಪಕ್ಷವೆಂದು ಪರಿಗಣಿಸಿ ಪ್ರಹಾರ ನಿರತವಾಗಿತ್ತು. ಮೆದುಳಿಗೆ ಈ ಸತತ ಪ್ರಹಾರದ ಪರಿಣಾಮ ಮತ್ತು ಕೋವಿಡ್ ಮತ್ತಿತರ ಸಂಕಷ್ಟಗಳು ಕಾಂಗ್ರೆಸ್ ಕಾರ್ಯಕರ್ತರನ್ನು ವಿನಮನಸ್ಕಗೊಳಿಸಿದ್ದವು.

ತಳಮಟ್ಟದಲ್ಲಿ ಅವರ ಶಕ್ತಿ ಸಾಮರ್ಥ್ಯಗಳು ಅವರಿಗೇ ಮರೆತುಹೋಗಿದ್ದವು. ಇಂದಿನ ಸಮಾರಂಭ ಅದನ್ನು ಬಡಿದೆಚ್ಚರಿಸಿದೆ. ಇಂದು ಸಮಾರಂಭದ ವೇದಿಕೆಯಲ್ಲಿದ್ದ ನಾಯಕಗಢಣದ ಮಾತುಗಳು, ಅಭಿವ್ಯಕ್ತಿಗಳು ಈ “ಸಂತಸ”ವನ್ನು ಸಾರಿ ಸಾರಿ ಹೇಳುತ್ತಿದ್ದವು. ಅವರೆಲ್ಲರ ನಿರೀಕ್ಷೆ ಮೀರಿ ದಾವಣಗೆರೆಗೆ ಕಾಂಗ್ರೆಸ್ ಕಾರ್ಯಕರ್ತರು ಲಗ್ಗೆ ಇಟ್ಟಿದ್ದರು!

ಈ ಸಮಾರಂಭ ಏಕೆ ಗೂಗ್ಲಿ ಎಂದರೆ, ಸಿದ್ಧರಾಮಯ್ಯ ಅವರ “ಜನ್ಮದಿನ ಸಂಭ್ರಮ” ಎಂದೇ ಎಲ್ಲರೂ ಊಹಿಸಿಕೊಂಡಿದ್ದ ಈ ಕಾರ್ಯಕ್ರಮ, ಕಾಂಗ್ರೆಸ್ಸಿನ ಮಟ್ಟಿಗೆ ವಿಧಾನಸಭಾ ಚುನಾವಣೆಗಳಿಗೆ ತಯಾರಿಯ ಉದ್ಘಾಟನಾ ಸಮಾರಂಭ ಆಗಿ ಬದಲಾಗಿತ್ತು. ಆ ಮಟ್ಟಿಗೆ ಕಾರ್ಯಕ್ರಮದ ಆಯೋಜಕರು ಮತ್ತು ಸಿದ್ಧರಾಮಯ್ಯನವರ ಸೂಕ್ಷ್ಮಗ್ರಾಹಿತ್ವವನ್ನು ಮೆಚ್ಚಬೇಕು. ಆಡಳಿತಪಕ್ಷಕ್ಕೆ ಇದು ಅನಿರೀಕ್ಷಿತ. ಇಂತಹದೊಂದು ನಿರೀಕ್ಷೆ ಇದ್ದಿದ್ದರೆ, ಅವರದನ್ನು ಬೇರೆ ರೀತಿಯಲ್ಲಿ ನಿಭಾಯಿಸಲು ಅವಕಾಶಗಳಿದ್ದವು.

ಬೇರೆಲ್ಲ ವ್ಯವಸ್ಥೆ ಮಾಡಿಕೊಂಡು, ಸಿದ್ಧರಾಮಯ್ಯನವರನ್ನು ಕಟ್ಟಿ ಹಾಕುವುದು ಹೇಗೆ ಎಂಬ ಚಿಂತೆಯಲ್ಲಿದ್ದ ಆಡಳಿತ ಪಕ್ಷಕ್ಕೆ ಈವತ್ತು ದಾವಣಗೆರೆಯಲ್ಲಿ ಸೇರಿದ ಜನಸಾಗರ, ವೇದಿಕೆಯಲ್ಲಿದ್ದ ಕಾಂಗ್ರೆಸ್ ನಾಯಕರ ಮೂಡ್ ಹೊಸ ಚಿಂತೆಯ ಗೆರೆಗಳನ್ನು ಮೂಡಿಸಿದ್ದರೆ ಅಚ್ಚರಿ ಇಲ್ಲ. ತಳಮಟ್ಟದಲ್ಲಿ ಎಲ್ಲವೂ ಸರಿಯಾಗಿಲ್ಲ, ಜನಸಾಮಾನ್ಯರ ಪರಿಸ್ಥಿತಿ ತೀರಾ ಕೆಟ್ಟಿದ್ದು, ಕೇವಲ “ಮೋದಿ” ಹೆಸರು ಈ ಬಾರಿ ಮತ್ತೊಮ್ಮೆ ಓಟು ತಂದುಕೊಡದು ಎಂಬುದು ಅವರಿಗೂ ಅರಿವಿದೆ.

ಈವತ್ತು ಬೆಳಗ್ಗೆ ದಾವಣಗೆರೆಯಲ್ಲಿ ಒಮ್ಮೆ ಜನಸಾಗರವನ್ನು ನೋಡಿದ ಬಳಿಕ ಕಾಂಗ್ರೆಸ್ ನಾಯಕರೆಲ್ಲರೂ “ಸಿಕ್ಸರ್” ಬಾರಿಸುವ ಹುಮ್ಮಸ್ಸಿನಲ್ಲಿದ್ದರು. ಅವರ ಮಾತುಗಳಲ್ಲಿ ಅದು ಮತ್ತೆ ಮತ್ತೆ ವ್ಯಕ್ತವಾಯಿತು. ಡಿ ಕೆ ಶಿವಕುಮಾರ್, ಸಿದ್ಧರಾಮಯ್ಯ ಮತ್ತು ಅವರ ಸರ್ವೋಚ್ಛನಾಯಕ ರಾಹುಲ್ ಗಾಂಧಿ ಮೂವರೂ ಬಹಳ ಎಚ್ಚರಿಕೆಯಿಂದ ತಮ್ಮ ಮಾತುಗಳನ್ನು ಆಯ್ದುಕೊಳ್ಳುವ ಮೂಲಕ, “ಸಿದ್ಧರಾಮೋತ್ಸವ” ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 2023ರ ಚುನಾವಣಾ ಪ್ರಚಾರದ ಆರಂಭ ಎಂಬುದನ್ನು ಕಾರ್ಯಕರ್ತರಿಗೆ ತಲುಪಿಸಿದರು.

ಈ ಸಿಕ್ಸರ್ ಕೂಡ ಆಡಳಿತ ಪಕ್ಷಕ್ಕೆ ಅನಿರೀಕ್ಷಿತ

ಆಟ ಇಲ್ಲಿಗೇ ಮುಗಿಯುವುದಿಲ್ಲ. ಇದಿನ್ನೂ ಆರಂಭ ಮಾತ್ರ. ಆದರೆ ತಯಾರಿಯ ಕೊರತೆಯಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಮಟ್ಟಿಗೆ ಇವತ್ತಿನದು ಭರ್ಜರಿ ಆರಂಭ ಎಂಬುದರಲ್ಲಿ ಸಂಶಯ ಇಲ್ಲ. ಕಾಂಗ್ರೆಸ್ಸಿಗರು ಈವತ್ತಿನದೇ ಕೊನೆಯ ಬಾಲ್, ಸಿಕ್ಸರ್ ಬಿದ್ದಿದೆ ಅಂದುಕೊಂಡು ತಣ್ಣಗೆ ಕುಳಿತರೆ ಮಾತ್ರ ಕೆಟ್ಟರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

Published

on

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.

ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.

ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.

ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.

ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು‌.”

  • ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
  • ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ:2023-24ನೇ ಸಾಲಿನಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿ 5 ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್, ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳೇಶ್ ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಕೋಟ್ಯಾಂತರ ರೂಪಾಯಿಗಳನ್ನು ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡ ಮಾಹಿತಿ ತಿಳಿದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಉಪ ವಿಭಾಗ, ಚನ್ನಗಿರಿ ಇವರಿಂದ ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಪಡೆಯಲಾಗಿದೆ.

ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಸಾಕಷ್ಟು ಅವ್ಯವಹಾರ ನಡೆದಿರುವುದು ಕಂಡುಬಂದ ಕಾರಣ ಸೂಕ್ತ ದಾಖಲೆಗಳೊಂದಿಗೆ ದಿನಾಂಕ: 05-07-2025 ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ, ದಾವಣಗೆರೆ ಇವರಿಗೆ ದೂರು ನೀಡಿ, ತನಿಖೆಗೆ ಒಳಪಡಿಸುವಂತೆ ಕೋರಿದ್ದರು. ದೂರು ನೀಡಿ 3 ತಿಂಗಳು ಕಳೆದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ತನಿಖೆಯನ್ನು ಕೈಗೊಂಡ ಬಗ್ಗೆ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ದಿನಾಂಕ: 29-10-2025 ರಂದು ಜ್ಞಾಪನವನ್ನು ಸಹ ನೀಡಲಾಗಿತ್ತು.

ಆದರೆ ನಾವು ಜ್ಞಾಪನ ನೀಡಿ ಒಂದು ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳೇಶ್ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆಯಲ್ಲಿ ಸರ್ಕಾರಿ ನಿವೇಶನಗಳು ಖಾಲಿ ಇದ್ದರೆ ಅವುಗಳನ್ನು ಕೂಡಲೇ ಸರ್ಕಾರಿ ಕಚೇರಿಗಳ ಉಪಯೋಗಕ್ಕೆ ನೀಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದರು.

ಮಂಗಳವಾರ(ಡಿ.2) ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕೊರತೆಯಾಗಬಾರದು. 100 ವಿದ್ಯಾರ್ಥಿಗಳು ವಾಸಿಸುವ ಕಟ್ಟಡಕ್ಕೆ ಬದಲಾಗಿ 400 ವಿದ್ಯಾರ್ಥಿಗಳು ವಾಸ ಮಾಡುವ ಕಟ್ಟಡವನ್ನು ನಿರ್ಮಿಸಬೇಕು ಎಂದರು. ಖಬರಸ್ಥಾನಕ್ಕೆ ಮತ್ತು ಸ್ಮಶಾನಕ್ಕೆ ಜಾಗದ ಅವಶ್ಯಕತೆ ಇದ್ದರೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಅಂಗನವಾಡಿ ಕೇಂದ್ರಗಳನ್ನು ಅಲ್ಪಸಂಖ್ಯಾತರ ಸಮುದಾಯದ ಜನರು ಅಧಿಕವಾಗಿ ವಾಸಿಸುತ್ತಿರುವ ತಾಲ್ಲೂಕುಗಳು ಮತ್ತು ಗ್ರಾಮಗಳಲ್ಲಿ ತೆರೆಯುವುದು, ಇದರಿಂದಾಗಿ ಯೋಜನೆಯ ಪ್ರಯೋಜನೆಗಳು ಅವರುಗಳಿಗೆ ನೇರವಾಗಿ ಸಿಗುತ್ತವೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆ, ಕಾಲೇಜು ಹಾಗೂ ಅಂಗನವಾಡಿಗಳಿಗೆ ವಕ್ಫ್ ಬೋರ್ಡ್ ಅಥವಾ ಯಾವುದೇ ಇಲಾಖೆಯ ಅಧೀನದಲ್ಲಿನ ನಿವೇಶನವಿದ್ದರೂ ಗುರುತಿಸಿ ಶಾಲೆ, ಕಾಲೇಜುಗಳ ಕಟ್ಟಡ ನಿರ್ಮಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಇಲಾಖೆಗಳಲ್ಲಿನ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು.

ವಿವಿಧ ಇಲಾಖೆಯ ಅನುಪಾಲನಾ ವರದಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಭಕ್ತಮಾರ್ಕಡೇಶ್ವರ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದರು.

ಸಮಾಜದ ಧಾರ್ಮಿಕ ಮುಖಂಡರು ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ವಸತಿ ಶಾಲೆಗೆ ಸೇರಿಸುವಂತಾಗಲು ಪ್ರೇರೇಪಿಸಬೇಕು. ವಸತಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದರ ಜೊತೆಗೆ ಅಗತ್ಯ ಸೌಲಭ್ಯ ಇರುವ ಬಗ್ಗೆ ತಿಳಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಮತ ಹೊಸಗೌಡ್ರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ, ಡಿಡಿಪಿಐ ಕೊಟ್ರೇಶ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿರುವರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending