ದಿನದ ಸುದ್ದಿ
ಗ್ರಾಮಗಳಲ್ಲಿ ಕಲುಷಿತ ನೀರು ಪೂರೈಕೆಯಾಗದಂತೆ ನೋಡಿಕೋಳ್ಳಲು ಕಟ್ಟುನಿಟ್ಟಿನ ಸೂಚನೆ : ಸಿ.ಇ.ಓ ಸುರೇಶ್ ಬಿ.ಇಟ್ನಾಳ್
ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ಗ್ರಾಮಗಳ ವ್ಯಾಪ್ತಿಯಲ್ಲಿ ಪೂರೈಕೆಯಾಗುವ ನೀರಿನಲ್ಲಿ ಕಲುಷಿತ ನೀರು ಪೂರೈಕೆಯಾಗದಂತೆ ನೋಡಿಕೊಳ್ಳಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ನೀಡಿದರು.
ಅವರು ಸೋಮವಾರ ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಇವರ ಸಹಯೋಗದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಫೀಲ್ಡ್ ಟೆಸ್ಟ್ ಕಿಟ್ ಎಚ್2ಎಸ್ ವೈಲ್ಸ್ ಉಪಯೋಗಿಸಿ ನೀರಿನ ಪರೀಕ್ಷೆಗಳನ್ನು ಕೈಗೊಳ್ಳುವ ಬಗ್ಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾದ ತರಬೇತಿ ಕಾರ್ಯಗಾರದಲ್ಲಿ ಅಧ್ಯಕ್ಷತೆ ವಹಿಸಿ ಮತನಾಡಿದರು.
ಗ್ರಾಮೀಣ ಭಾಗದಲ್ಲಿ ಕಲುಷಿತ ನೀರಿನ ಸೇವನೆಯಿಂದ ಸಾರ್ವಜನಿಕರ ಅನಾರೋಗ್ಯಕ್ಕೆ ಕಾರಣವಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಕುಡಿಯುವ ನೀರಿನ ಪರೀಕ್ಷೆ, ಕುಡಿಯುವ ನೀರು ಕಲುಷಿತಕ್ಕೆ ಕಾರಣಗಳು, ಇದರ ದುಷ್ಪರಿಣಾಮಗಳು ಹಾಗೂ ನೀರು ಕಲುಷಿತವಾಗದಂತೆ ನಿರ್ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿವರವಾಗಿ ಪರಿಶೀಲನೆ ನಡೆಸಬೇಕಾಗಿ ಸೂಚಿಸಿದರು.
ಪೈಪ್‍ಲೈನ್ ನೆಟ್‍ವರ್ಕ್‍ನಲ್ಲಿ ಎಲ್ಲಿಯಾದರು ಸೋರಿಕೆಯಾಗಿದೆ ಎಂದು ಕಂಡು ಬಂದರೆ ಅದನ್ನು ಪ್ಲಗ್ ಮಾಡಿ ಸೋರಿಕೆಯಾಗದಂತೆ ಕ್ರಮವಹಿಸಬೇಕು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಗ್ರಾಮದ ನೀರಿನ ಮೂಲಗಳ ಶುದ್ಧತೆಯ ಕುರಿತು ವರ್ಷದಲ್ಲಿ ಕನಿಷ್ಠ ನಾಲ್ಕು ಬಾರಿ ಕಡ್ಡಾಯವಾಗಿ ಪರೀಕ್ಷೆ ನಡೆಸಬೇಕು. ಈ ರೀತಿ ಪರೀಕ್ಷೆ ನಡೆಸಲು ಪ್ರತಿ ಗ್ರಾಮ ಪಂಚಾಯಿತಿಗೆ ಎಫ್.ಟಿ.ಕೆ ಫೀಲ್ಡ್ ಟೆಸ್ಟ್ ಕಿಟ್ ನೀಡಲಾಗಿದ್ದು ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಲ್ಯಾಬ್‍ಗಳಲ್ಲಿ ನೀರು ಸಂಗ್ರಹಗಾರರಿಂದ ನೀರು ಸಂಗ್ರಹಿಸಿ ನೀರಿನ ಮೂಲಗಳನ್ನು ಪರೀಕ್ಷೆ ನಡೆಸಿ ವರದಿಯನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಲು ತಿಳಿಸಿದರು.
ಮಳೆಗಾಲ ಆರಂಭವಾಗಿರುವುದರಿಂದ ಸಾಂಕ್ರಾಮಿಕ ರೋಗ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಈ ಸಮೀಕ್ಷೆ ನಡೆಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರ ಜೊತೆ ಮನೆಗೆ ತೆರಳಿ ಸಮೀಕ್ಷೆ ಸಮಯದಲ್ಲಿ ನಿಂತ ನೀರಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳಾದ ಹೂವಿನ ಕುಂಡ, ಹಳೆ ಟೈರ್, ಹಳೆ ಎಣ್ಣೆಯ ಡ್ರಮ್‍ಗಳಲ್ಲಿ ಕಂಡು ಬಂದ ಲಾರ್ವ ತಾಣಗಳನ್ನು ತಕ್ಷಣ ನಾಶಕ ಟೇಮಿಪಾಸ್ ದ್ರಾವಣವನ್ನು ಹಾಕಿ ಸೊಳ್ಳೆಗಳಿಂದ ಹರಡುವ ರೋಗ ತಡೆಯಬೇಕು ಎಂದು ತಿಳಿಸಿದರು.
ಅನೇಕ ಜಿಲ್ಲೆಗಳ ಗ್ರಾಮಗಳಲ್ಲಿ ಕಲುಷಿತ ನೀರು ಸೇವನೆಯಿಂದ ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿನ್ನಲೆಯಲ್ಲಿ ನೀರಿನ ಪರೀಕ್ಷೆ ಮಾಡಿದ ನಂತರ ನೀರು ಕಲುಷಿತವಾಗಿದ್ದಲ್ಲಿ ಮತ್ತು ಕುಡಿಯಲು, ಬಳಸಲು ಯೋಗ್ಯವಲ್ಲದ ನೀರು ಬಳಸದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರಮ ವಹಿಸಬೇಕಾಗಿರುತ್ತದೆ. ಒಂದು ವೇಳೆ ಕಲುಷಿತ ನೀರಿನಿಂದ ಸಮಸ್ಯೆ ಬಂದರೆ ಪಿಡಿಓ ಮತ್ತು ಸಹಾಯಕ ಇಂಜಿನಿಯರ್ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ನೀರಿನ ಬಾವಿ, ಕೆರೆ, ನದಿ, ನಳ ನೀರು, ಟ್ಯಾಂಕ್‍ಗಳ ನೀರಿನ ಗುಣಮಟ್ಟದ ಬಗ್ಗೆ ಗ್ರಾಮ ಪಂಚಾಯತಿಗಳಲ್ಲಿ ಎಫ್.ಟಿ.ಕೆ ಟೆಸ್ಟ್ ಮೂಲಕ ಪರೀಕ್ಷಿಸಿ ನಂತರವೇ ಬಳಸಲು `ಶುದ್ಧ ನೀರಿನ ಬಳಕೆ ನಿಮ್ಮ ಆದ್ಯತೆಯಾಗಲಿ` ಎಂಬ ಶೀರ್ಷಿಕೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ, ಜಿಲ್ಲಾ ಪಂಚಾಯತ್ ಮುಖ್ಯಯೋಜನಾಧಿಕಾರಿ ಮಲ್ಲನಾಯ್ಕ, ಕಾರ್ಯನಿರ್ವಹಣಾಧಿಕಾರಿ ಉತ್ತಮ್, ರಾಘವೇಂದ್ರ ಹೊನ್ನಳ್ಳಿ, ಗ್ರಾಮೀಣ ನೀರು ಸರಬರಾಜು ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಸೋಮ್ಲನಾಯಕ್, ಜಿಲ್ಲಾ ಯೋಜನಾ ವ್ಯವಸ್ಥಾಪಕ ಜಗದೀಶ್ ಬಿ.ಟಿ, ಪ್ರಯೋಗಾಲಯ ಸಿಬ್ಬಂದಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವದಾಸಿ ಪುನರ್‍ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್‍ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್‍ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್‍ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್‍ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ
ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ದಿನದ ಸುದ್ದಿ
ಕಾಗದ ರಹಿತ ನೋಂದಣಿ ವ್ಯವಸ್ಥೆಯ ತರಬೇತಿ
ಸುದ್ದಿದಿನ,ದಾವಣಗೆರೆ:ಕಾಗದ ರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಗೆ ಬರುವ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ದಾವಣಗೆರೆ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ ಸಿಬ್ಬಂದಿ ವರ್ಗದವರಿಗೆ ತರಬೇತಿ ಆಯೋಜಿಸಲಾಗಿದೆ.
ತರಬೇತಿಯು ಜ.30 ರಂದು ಹೊನ್ನಾಳಿ ಉಪ ನೋಂದಣಿ ಕಚೇರಿ ಆವರಣ, ಜ.31 ರಂದು ಚನ್ನಗಿರಿ ಉಪ ನೋಂದಣಿ ಕಚೇರಿ ಆವರಣ, ಫೆ.2 ರಂದು ಹರಿಹರ ಉಪ ನೋದಣಿ ಕಚೇರಿ ಆವರಣ, ಫೆ.3 ರಂದು ದಾವಣಗೆರೆ ಉಪ ನೋಂದಣಿ ಕಚೇರಿ, ಫೆ.4 ರಂದು ಜಗಳೂರು ಉಪ ನೋಂದಣಿ ಕಚೇರಿ ಆವರಣಗಳಲ್ಲಿ ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ನಡೆಯಲಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ತಿಳಿಸಿದ್ದಾರೆ.


