ದಿನದ ಸುದ್ದಿ
ಮೊಹರಂ : ಜನತೆಯ ಧರ್ಮ
- ಡಾ.ರಹಮತ್ ತರೀಕೆರೆ
ಏಳನೇ ಶತಮಾನದಲ್ಲಿ, ಮಹಮದ್ ಪೈಗಂಬರರ ಮೊಮ್ಮಕ್ಕಳಾದ ಹುಸೇನ್ ಹಾಗೂ ಅವರ ಸಂಗಡಿಗರು ಯಜೀದನೆಂಬುವವನ ವಿರುದ್ಧ, ಕರ್ಬಲಾ ಮೈದಾನದಲ್ಲಿ ಲಡಾಯಿ ಮಾಡುತ್ತ ಜೀವಬಿಟ್ಟರು. ಇದರ ಶೋಕಾಚರಣೆಯ ಭಾಗವಾಗಿ ಮೊಹರಂ ಆಚರಣೆ ಶುರುವಾಯಿತು.
ಕರ್ಬಲಾ ವೀರರ ಸಾವು ದಾರುಣ ಸಂಗತಿಯಾಗಲು ಕಾರಣ, ಅವರ ತಲೆಕಡಿದು ಮೆರವಣಿಗೆ ಮಾಡಲಾಯಿತು. ಜತೆಯಿದ್ದ ಎಳೆಗೂಸುಗಳು ಕುಡಿಯಲು ನೀರಿಲ್ಲದೆ ಪರಿತಪಿಸುತ್ತ ಸತ್ತರು. ಮಹಿಳೆಯರು ದುಃಖದಿಂದ ಪರಿತಪಿಸಿದರು. ಇದನ್ನು ಜನಪದರು ‘ಧರಮಕ ಸತ್ತವರಾ ಕೋಟಿಗೊಬ್ಬ ಜನರಾ, ಆರಾಣ್ಯಾದಾಗ ಅವರಾ ಕಾಣದ ಮೂರು ದಿವಸ ನೀರಾ, ಕುಡದಾರೋ ಕಣ್ಣೀರಾ ಮಕ್ಕಳು ಹುಡುಗರು ಹೆಂಗಸರಾ’ ಎಂದು ಹಾಡಿರುವುದುಂಟು. ಇಂತಹ ದುಗುಡದ ನೆನಪಿನಲ್ಲಿ ಹುಟ್ಟಿದ ಧಾರ್ಮಿಕ ಆಚರಣೆಯೊಂದು ಕರ್ನಾಟಕದಲ್ಲಿ ಸಾಂಸ್ಕೃತಿಕ ಆಚರಣೆಯಾಗಿ ರೂಪಾಂತರ ಪಡೆಯಿತು. ಉತ್ತರ ಕರ್ನಾಟದಲ್ಲಿ ಎಲ್ಲ ಧರ್ಮದ ಜಾತಿಯ ಜನರು ಒಟ್ಟಾಗಿ ಆಚರಿಸುವ ಊರಹಬ್ಬವಾಯಿತು. ಹೀಗಾಗಿ ಮುಸ್ಲಿಮರೇ ಇಲ್ಲದ ನೂರಾರು ಊರುಗಳಲ್ಲೂ ಮೊಹರಂ ನಡೆಯುತ್ತದೆ.
ಮೊಹರಂನಲ್ಲಿ ಶೋಕಗೀತೆಯ ರಚನೆ, ಹಾಡಿಕೆ, ಕುಣಿತ, ವೇಷಗಾರಿಕೆ,ಮೆರವಣಿಗೆ, ವಿಶೇಷ ಆಹಾರಗಳ ಆಯಾಮಗಳಿವೆ. ಇದರ ಫಲವಾಗಿ ಕರ್ನಾಟಕದಲ್ಲಿ ಹಾಡು ಕಟ್ಟುವ ಸಾವಿರಾರು ಶಾಹಿರರೂ ಗಾಯಕರೂ ಇದ್ದಾರೆ. ಹೆಜ್ಜೆಕುಣಿತ, ಕೋಡಂಗಿ ಕುಣಿತ, ಡಬಗಳ್ಳಿ ಕುಣಿತ ಮಾಡುವ, ಹುಲಿವೇಷ, ಅಚೊಳ್ಳಿಸೋಗು, ಭಡಂಗ್ವೇಷ ಹಾಕುವ ಹರಕೆ ಕಲಾವಿದರಿದ್ದಾರೆ. ನಾನು ಕಂಡಂತೆ,
ಬೀಳಗಿ, ಕೆರೂರ ಕುದುರೆಮೋತಿ ಅಗಸನೂರ , ಆಯನೂರು ಯರಗುಪ್ಪಿ ಗೋಕಾಕಫಾಲ್ಸ ಮುದಗಲ್ ಮೊಹರಂ ವಿಶಿಷ್ಟವಾದವು. ಪ್ರತಿಯೊಂದೂ ಊರು ತನ್ನದೇ ಆಚರಣೆಯನ್ನು ರೂಢಿಸಿಕೊಂಡಿದೆ.
ಅಗಸನೂರಿನಲ್ಲಿ ಹತ್ತು ದಿನಗಳ ಕಾಲ ಚಪ್ಪಲಿ ತೊಡುವುದಿಲ್ಲ. ಮಂಚದಲ್ಲಿ ಮಲಗುವುದಿಲ್ಲ. ಬೀಳಗಿಯಲ್ಲಿ ತೇರಿನಂಥ ರಚನೆಗೆ ಹಿಲಾಲುಗಳನ್ನು ಸಿಕ್ಕಿಸಿ ಉರಿವವೃಕ್ಷವನ್ನೇ ಸೃಷ್ಟಿಸುತ್ತಾರೆ. ಆಯನೂರಲ್ಲಿ ಯಜೀದನ ಸಂಕೇತವಾಗಿ ರಾವಣನ ಪ್ರತಿಕೃತಿ ಸುಡುತ್ತಾರೆ; ಅಗಸನೂರಿ ನಲ್ಲಿ ಅಲಾವಿಯ ಸುತ್ತ ಮಾಡುವ ಹೆಜ್ಜೆ ನೃತ್ಯವು ಅಪೂರ್ವವಾಗಿದೆ. ಕುದುರೆಮೋತಿ, ಹೊಸಪೇಟೆ, ಗಜೇಂದ್ರಗಡಗಳು ಹುಲಿವೇಷಕ್ಕೆ ಹೆಸರಾಗಿವೆ; ಮುದಗಲ್ಲಿನಲ್ಲಿ ಅಗಲಿದ ಹಸನ- ಹುಸೇನರ ಮಿಲನವಾ ಗುವ ಆಚರಣೆ ಕಣ್ತುಂಬಿಕೊಳ್ಳಲು ಕೋಟೆಯ ಹೊರಗೆ ಸಾವಿರಾರು ಜನ ಸೇರುತ್ತಾರೆ. ಇಂಡಿ ಕಡೆ ಭಡಂಗ್ ಎನ್ನುವ ಹರಕೆವೇಷ ಹಾಕುತ್ತಾರೆ; ಬಾಗಲಕೋಟೆ-ವಿಜಯಪುರ ಸೀಮೆಯಲ್ಲಿ ಆಫ್ರಿಕನ್ ಸಿದ್ದಿಗಳನ್ನು ನೆನಪಿಸುವ ಅಚೊಳ್ಳಿ- ಬಿಚೊಳ್ಳಿ ಸೋಗುಗಳಿವೆ.
ಈ ಸೋಗಿಗೆ ಮುಖಕ್ಕೆ ಕಪ್ಪುಮಸಿ ಬಳಿದು, ಸೊಂಟಕ್ಕೆ ಗಂಟೆ ಕಟ್ಟಿ, ತಲೆಗೆ ಲಾಲಿಕೆಯಾಕಾರದ ಅಲಂಕೃತ ಟೋಪಿ ಧರಿಸುತ್ತಾರೆ. ಮೊಹರಂ ಆಚರಣೆಯ ದಿನಗಳಲ್ಲಿ ಮುಸ್ಲಿಮೇತರರು ಲಾಡಿ ಧರಿಸಿ ಫಕೀರರಾಗುವ ಪದ್ಧತಿಯೂ ಇದೆ. ಮುಸ್ಲಿಮೇತರ ಕುಟುಂಬಗಳು ಐದು ಜನ ಫಕೀರರಿಗೆ ಕರೆದು ಬಿನ್ನಹ ಮಾಡಿಸಿದಲ್ಲದೆ ತಾವು ಉಣ್ಣುವುದಿಲ್ಲ. ಚೋಂಗೆ, ಮಾಲ್ದಿ ಎಂಬ ಸಿಹಿ ಅಡುಗೆ, ಶರಬತ್ತು ಹಾಗೂ ಮೊಸರನ್ನ ಮೊಹರಂ ಮುಖ್ಯ ಅಡುಗೆಗಳು. ಕರ್ಬಲಾ ವೀರರು ಊಟ ನೀರಿಲ್ಲದೆ ಮಡಿದವರಾದ್ದರಿಂದ, ಹಸಿದವರಿಗೆ ಉಣಿಸುವ ಮತ್ತು ಬಾಯಾರಿದವರಿಗೆ ಶರಬತ್ತು ಕುಡಿಸುವ ಪದ್ಧತಿ ರೂಢಿಯಲ್ಲಿದೆ. ಇಂಡಿ ಮತ್ತು ಸೇಡಂ ಭಾಗದಲ್ಲಿ ಕುರಿಬ್ಯಾಟೆ ಕೊಡುವ ಪದ್ಧತಿಯಿದೆ. ಹೀಗೆ ಉತ್ತರ ಕರ್ನಾಟಕದ ಮೊಹರಂ ಬಹುರೂಪಿಯಾಗಿದೆ.
ದೂರದ ಇರಾಕಿನಲ್ಲಿ ಸಾವಿರಾರು ವರ್ಷದ ಹಿಂದೆ ನಡೆದ ಒಂದು ಮಾನವ ದುರಂತವನ್ನು, ತಮ್ಮ ಬೀದಿಯಲ್ಲಿ ನಿನ್ನೆ ಮೊನ್ನೆ ಸಂಭವಿಸಿದ್ದು ಎಂದು ಇನ್ನೊಂದು ದೇಶಕ್ಕೆ, ಕಾಲಕ್ಕೆ ಸಂಸ್ಕೃತಿ ಮತ್ತು ಧರ್ಮಕ್ಕೆ ಸೇರಿದ ಜನಸಮುದಾಯ ಭಾವಿಸಿ ಮಿಡಿಯುವುದೇ ಸೋಜಿಗ. ಇದು ಜನಪದ ಮನಸ್ಸಿನ ಮಾನವೀಯ ಗುಣ. ಇಲ್ಲಿ ಚರಿತ್ರೆಯನ್ನು ಸಮಕಾಲೀನಗೊಳಿಸುವ ಗುಣವೂ ಇದೆ. ವಿಶೇಷವೆಂದರೆ, ಕರ್ಬಲಾ ಹಾಡುಗಳಿಗೆ ದುರಂತದ ವಸ್ತುವಿಗೆ ಸ್ಥಳೀಯ ದುರಂತ ಘಟನೆಗಳೂ ಸೇರಿಕೊಳ್ಳುವುದು. ಬಸ್ಸು ಕಾಲುವೆಗೆ ಉರುಳಿ ಜನ ಸತ್ತದ್ದು, ಎತ್ತುಗಳನ್ನು ರಕ್ಷಣೆ ಮಾಡುತ್ತ ರೈತ ಕಳ್ಳರ ಕೈಲಿ ಕೊಲೆಯಾಗಿದ್ದು, ದುಷ್ಟನಿಂದ ತನ್ನನ್ನು ಕಾಪಾಡಿಕೊಳ್ಳುವ ಅವಸರದಲ್ಲಿ ತಾಯೊಬ್ಬಳು ಕೂಸನ್ನು ಕಳೆದುಕೊಂಡಿದ್ದು, ಗೆಳೆಯನ ಮಡದಿಯನ್ನು ಪ್ರೇಮಿಸಿ ಸ್ವಹತ್ಯೆ ಮಾಡಿಕೊಂಡಿದ್ದು – ಇವೂ ಮೊಹರಂ ಹಾಡುಗಳ ವಸ್ತುಗಳಾಗಿವೆ. ಬೀಳಗಿ ತಾಲ್ಲೂಕಿನ ರೊಳ್ಳಿಯಲ್ಲಿ ಆಲಮಟ್ಟಿ ಡ್ಯಾಂನ ನೀರಿನಲ್ಲಿ ಊರು ಮನೆ ಜಮೀನು ಮುಳುಗಡೆಯಾದ ದುಃಖವನ್ನು ಕೇಳುವವರ ಎದೆಕಲಕುವಂತೆ ಹಾಡಾಗಿ ಹಾಡಿದ್ದರು.
ಮೊಹರಂ ಹಾಡುಪರಂಪರೆ, ಭಾರತೀಯ ಗುರುಪರಂಪರೆಯ ಭಾಗವಾಗಿದೆ. ಶಾಸ್ತ್ರೀಯ ಸಂಗೀತದಲ್ಲಿ ಇರುವಂತೆ, ಇಲ್ಲೂ ಹಾಡಿಕೆ ಕಲಿಯುವ ಶಿಷ್ಯರು ಗುರುವಿನಿಂದ ದೀಕ್ಷೆ ಪಡೆದು ಜತೆಯಲ್ಲಿ ಹಾಡುತ್ತ, ಒಂದು ದಿನ ಗುರುವಿನ ಅನುಮತಿಯಿಂದ ಸ್ವತಂತ್ರವಾಗಿ ಹಾಡುತ್ತಾರೆ; ಹಾಡಿನಲ್ಲಿ ಗುರುವಿನ ಹೆಸರನ್ನು ಸ್ಮರಿಸುತ್ತಾರೆ; ಬೇರೆ ಬೇರೆ ತಂಡಗಳು ಪರಸ್ಪರ ಎದುರಾಗಿ, ಜಿದ್ದಾಜಿದ್ದಿ ಸವಾಲ್- ಜವಾಬ್ ನಡೆಸುತ್ತಾರೆ.
ನರಗುಂದ ತಾಲ್ಲೂಕಿನ ಕೊಣ್ಣೂರಿನಲ್ಲಿ ಸವಾಲ್ ಜವಾಬ್ ಹಾಡಿಕೆಯ ಸ್ಪರ್ಧೆ ನಡೆಯುತ್ತದೆ. ಅದೊಂದು ಬೌದ್ಧಿಕ ಕದನ. ಇದರಲ್ಲಿ ಸೋತವರು ಸಾಯುವ ತನಕ ಹಾಡಿಕೆಗೆ ವಿದಾಯ ಹೇಳಿದ್ದುಂಟು; ಗೆದ್ದವರು ಪದಕ ಧರಿಸಿ, ಜನರಿಂದ ಆಹೇರಿ ಪಡೆದು, ಹೊಲವನ್ನು ಭಕ್ಷೀಸಾಗಿ ಪಡೆದದ್ದುಂಟು. ವೆಂಕಟಬೇನೂರಿನ (ಕಲಬುರ್ಗಿ) ಕಾಕಿಪೀರಾ, ಕದರಮಂಡಲಗಿಯ (ಬ್ಯಾಡಗಿ) ಅಲ್ಲಾಭಕ್ಷ್, ಹುಲಕುಂದದ (ರಾಮದುರ್ಗ) ಭೀಮಕವಿ, ನಿಡಗುಂದದ (ಚಿಂಚೋಳಿ) ಕೆರೂರ ನದಾಫಸಾಬ್ (ಬದಾಮಿ)ಬಸವಂತರಾವ್, ಗೋಕಾಕದ ಭರಮಣ್ಣ ಬೂಶಿ, ಸತ್ತೂರಿನ ಇಮಾಂಸಾಬ್ ಪ್ರಸಿದ್ಧ ಶಾಹಿರರು. ಇಂಡಿ, ಸೇಡಂ, ಬೀಳಗಿ ಭಾಗದಲ್ಲಿ ಮಹಿಳೆಯರು ಗುಂಪಾಗಿ ಕುಳಿತು ಶೋಕಗೀತೆಗಳನ್ನು ಹಾಡುತ್ತಾರೆ. ಈ ಗೀತೆಗಳ ವಸ್ತು, ಅಸಘರನೆಂಬ ಕೂಸಿನ ಸಾವು, ಅಭಿಮನ್ಯುವಿನ ಹಾಗೆ ಚಿಕ್ಕ ಹುಡುಗನಾದ ಕಾಸೀಮ್ನನ್ನು ರಣರಂಗಕ್ಕೆ ಕಳಿಸಿಕೊಡುವುದು, ಕಾಸೀಮನ ಮರಣ, ಅವನ ಎಳೆಹೆಂಡತಿ ಸಕೀನಾಳನ್ನು ವಿಧವೆಯಾಗಿಸುವುದು, ಅವಳ ಪ್ರಲಾಪ ಇತ್ಯಾದಿ.
ಮೊಹರಂ ಹಾಡುಗಾರರು ಇಸ್ಲಾಮಿನ ಚರಿತ್ರೆ ಪುರಾಣಗಳಂತೆ, ಮಹಾಭಾರತ, ರಾಮಾಯಣ, ಶಿವಪುರಾಣಗಳಲ್ಲಿಯೂ ಪರಿಣತಿ ಪಡೆದಿದ್ದಾರೆ. ಅವರ ಹಾಡುಗಳಲ್ಲಿ ಯಜೀದ್- ಹುಸೇನರ ಕದನದ ಚರಿತ್ರೆಯು ದೇಸಿ ಪುರಾಣಗಳ ಜತೆ ಬೆರೆತುಬಿಡುತ್ತದೆ. ಬಾಗೇವಾಡಿ ತಾಲ್ಲೂಕಿನಲ್ಲಿ ಪೈಗಂಬರನ್ನು ರಾಮನನ್ನಾಗಿ, ಬೀಬೀ ಫಾತಿಮಾರನ್ನು ಸೀತೆಯನ್ನಾಗಿ, ಹಸನ-ಹುಸೇನರನ್ನು ಲವ-ಕುಶರನ್ನಾಗಿ ಸಮೀಕರಿಸಿ ಹಾಡುತ್ತಾರೆ. ಈ ಹಾಡುಗಳಲ್ಲಿ ಪೈಗಂಬರರನ್ನು ಶರಣ ಎಂದೇ ಕರೆಯಲಾಗಿದೆ. ಬಸವಣ್ಣ, ಮಹದೇವ ಹಾಗೂ ಪೈಗಂಬರ್ ಒಟ್ಟಿಗೇ ಇರುವ ಮಂತ್ರವನ್ನು ಅನೇಕ ಮೊಹರಂ ಮಸೀದಿಯ ತಲೆಬಾಗಿಲಲ್ಲಿ ಕೆತ್ತಲಾಗಿದೆ. ಇಲ್ಲಿರುವ ತತ್ವವೆಂದರೆ, ಲೋಕಹಿತ ಬಯಸುವ ಲೋಕದ ಸಮಸ್ತ ದಾರ್ಶನಿಕರೂ ದೈವಗಳೂ ಮೂಲತಃ ಒಂದೇ ಎಂಬುದು.
ಕರ್ನಾಟಕ ಸಂಸ್ಕೃತಿಯ ವೈಶಿಷ್ಟ್ಯವೆಂದರೆ ಬಹುತ್ವ ಪ್ರಜ್ಞೆ. ಈ ಪ್ರಜ್ಞೆಯು ಪುರಾಣ ಮತ್ತು ಇತಿಹಾಸವನ್ನು ಬೆರೆಸುತ್ತದೆ; ಬೇರೆ ಬೇರೆ ಮತಧರ್ಮದ ಕಥನಗಳಲ್ಲಿರುವ ಸಮಾನ ಅಂಶಗಳನ್ನು ಒಂದೆಡೆ ಜೋಡಿಸುತ್ತದೆ. ಇದು ಭಾರತದ ನಿಜವಾದ ಸಾಂಸ್ಕೃತಿಕ ಪ್ರತಿಭೆ. ಮಧ್ಯಕಾಲೀನ ದೊರೆಗಳು ರಾಜ್ಯವಿಸ್ತರಣೆಗಾಗಿ ಮಾಡಿದ ರಾಜಕೀಯ ಯುದ್ಧಗಳನ್ನೇ ಇರಿಸಿಕೊಂಡು ಚರಿತ್ರೆ ಮತ್ತು ವರ್ತ ಮಾನವನ್ನು ನೋಡುವವರಿಗೆ, ಜನ ಕಟ್ಟುವ ಈ ಸೃಜನಶೀಲ ಪರಂಪರೆ ತಿಳಿಯುವುದಿಲ್ಲ. ಮೊಹರಂ ತಾಳಿರುವ ಬಹುರೂಪವು ಸಂಪ್ರದಾಯವಾದಿಗಳನ್ನು ಕಂಗೆಡಿಸುತ್ತದೆ. ‘ಇದೆಂತಹ ಧರ್ಮ; ಎಲ್ಲ ಕಲಬೆರಕೆಯಾಗಿದೆ’ ಎಂದವರು ಗೊಣಗುವರು. ಆದರೆ ಸಾಮಾನ್ಯ ಜನ ಧರ್ಮ, ಜಾತಿಗಳನ್ನು ಮೀರಿ ಸೃಷ್ಟಿಸಿಕೊಂಡಿರುವ ಅಸ್ಮಿತೆಯಾಗಿ ಮೊಹರಂ ರೂಪುಗೊಂಡಿದೆ. ‘ಪ್ರಧಾನ’ ಧರ್ಮಗಳು ಸಂಘರ್ಷಕ್ಕೆ ಕಾಲು ಕೆರೆಯುತ್ತಿವೆ; ಪರಸ್ಪರ ಸಂವಾದ ಮಾಡುವ ಬಾಗಿಲು ಕಿಟಕಿಗಳನ್ನು ಮುಚ್ಚಿಕೊಳ್ಳುತ್ತಿವೆ. ಇಂತಹ ಸನ್ನಿವೇಶದಲ್ಲಿ, ಧರ್ಮಗಳ ನಡುವೆ, ಸಂಸ್ಕೃತಿಗಳ ನಡುವೆ ಸಂವಾದ ಸಾಧ್ಯವಿದೆ ಎಂದು ಮೊಹರಂ ತೋರಿಸಿಕೊಡುತ್ತದೆ.
ಪಟ: ಕವಿ ಕೆರೂರ ನದಾಫ ಸಾಹೇಬರೊಡನೆ; ಅಚೊಳ್ಳಿ ಬಿಚೊಳ್ಳಿ ಸೋಗುಗಾರ; ಹುಲಿವೇಷದ ಹರಕೆ ಹುಬ್ಬಳ್ಳಿ; ಕರ್ಬಲಾ ಕದನದಲ್ಲಿ ಕಾಸಿಮಲಿ ಸಾವು ಚಿತ್ರ; ಅಬ್ಬಾಸ ಅಲಿ ಸಮಾಧಿಯೆದುರು (ಕರ್ಬಲಾ, ಇರಾಕ್); ಹುಲಿವೇಷಕ್ಕೆ ಬಣ್ಣಗಾರಿಕೆ; ಹೆಜ್ಜಕುಣಿತ ಕುಷ್ಟಗಿ; ಕರ್ಬಲಾ ನಗರದಲ್ಲಿ ಶೋಕಾಚರಣೆ ( ಬರಹಕೃಪೆ:ನಿವೃತ್ತ ಪ್ರೊಫೆಸರ್ ರಹಮತ್ ತರೀಕೆರೆ, ಫೇಸ್ಬುಕ್ ನಿಂದ)ಸುದ್ದಿದಿನ.ಕಾಂ|ವಾಟ್ಸಾಪ್|9980346243)

ದಿನದ ಸುದ್ದಿ
ಈಜುಕೊಳದಲ್ಲಿ ಸಾವು ; ಪರಿಹಾರಕ್ಕೆ ಆದೇಶ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮೊಹಮ್ಮದ್ ಮುಕ್ತಿಯಾರ್ ಬಿನ್ ಎಸ್. ಆರ್ ಸಮೀವುಲ್ಲ ಇವರ ಮಗ ಮೊಹಮ್ಮದ್ ಮುಬಾರಕ್ @ ಮುಬಾರಕ್ ಈತ ಮತ್ತು ನಿಸಾರ್ ಅಹಮದ್ ಬಿನ್ ಮಹಮ್ಮದ್ ಅಬಿದ್ ಮತ್ತು ಇನ್ನೊಬ್ಬರು, ಬೇತೂರು ರೋಡ್, ಸಿದ್ಧರಾಮೇಶ್ವರ ಬಡಾವಣೆ ಇವರು ತಮ್ಮ ಮಗ ತಾಜು @ ತಾಜುದ್ದೀನ್ ಇವರು ಸ್ವಿಮ್ಮಿಂಗ್ ಪೂಲ್ನಲ್ಲಿ ಈಜಾಡುವ ಸಂಧರ್ಭದಲ್ಲಿ ಮರಣ ಹೊಂದಿರುತ್ತಾರೆ.
ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 4ನೇ ಎದುರುದಾರರಾದ ಸದಾನಂದ ವಗಲೆ ಹಾಗೂ 1 ರಿಂದ 3ನೇ ಎದುರುದಾರರ ವಿರುದ್ಧ, ತಮ್ಮ ಸೇವೆಯಲ್ಲಿನ ನಿರ್ಲಕ್ಷತೆಯಿಂದ ಘಟನೆ ಸಂಭವಿಸಿದ್ದು ಎಂಬ ತೀರ್ಮಾನಕ್ಕೆ ಆಯೋಗವು ಬಂದಿದ್ದು, ಈಗಾಗಲೇ, 1 ರಿಂದ 3ನೇ ಎದುರುದಾರರು, ದೂರುದಾರರಿಗೆ ರೂ.500,000/- ಲಕ್ಷವನ್ನು ಪರಿಹಾರವಾಗಿ ಈಗಾಗಲೆ ಕೊಟ್ಟಿದ್ದು, ಆದ್ದರಿಂದ 1 ರಿಂದ 3ನೇ ಎದುರುದಾರರ ವಿರುದ್ಧ ಪ್ರಕರಣವನ್ನು ವಜಾ ಮಾಡಿದೆ.
4ನೇ ಎದುರುದಾರರಾದ ಸದಾನಂದ ವಗಲೆ, ಕಾಂಟ್ರಕ್ಟರ್, ಇವರು ಈ ಎರಡು ಪ್ರಕರಣದ ದೂರುದಾರರಿಗೆ ಆದೇಶಿಸಿದ ದಿನದಿಂದ ಒಂದು ತಿಂಗಳೊಳಗೆ ಆದೇಶದ ಪ್ರಕಾರ ಪಾವತಿಸುವಂತೆ ಮೇ.19 ರಂದು ಆದೇಶಿಸಿ ರೂ. 5 ಲಕ್ಷಗಳನ್ನು ಶೇಕಡಾ 6 ವಾರ್ಷಿಕ ಬಡ್ಡಿಯೊಂದಿಗೆ ಹಾಗೂ ದೂರು ಖರ್ಚು ಹಾಗೂ ಮಾನಸಿಕ ಯಾತನೆಗೆ ತಲಾ ರೂ.5 ಸಾವಿರದಂತೆ, ಒಟ್ಟು ರೂ.10,000/-ಗಳನ್ನು ಪರಿಹಾರ ರೂಪವಾಗಿ ದೂರುದಾರರಿಗೆ ನೀಡುವಂತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಹೆಚ್.ಎನ್.ಮೀನಾ ಮತ್ತು ಸದಸ್ಯರಾದ ಸಿ.ಎಸ್. ತ್ಯಾಗರಾಜನ್ ಆದೇಶಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಯುವಜನತೆಗೆ ಪ್ರೇರಣೆ ; ವಿಶ್ವನಾಥ.ಡಿ. ಅರ್
ಸುದ್ದಿದಿನ,ಬನ್ನಿಕೋಡು:ಮಾ.ಸ.ಬ. ಕಾಲೇಜ್, ದಾವಣಗೆರೆ ಹಾಗೂ ಬನ್ನಿಕೋಡು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಎನ್.ಎಸ್.ಎಸ್. (ರಾಷ್ಟ್ರೀಯ ಸೇವಾ ಯೋಜನೆ) ವಿಶೇಷ ಶಿಬಿರದ ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ರಂಗಸ್ವಾಮಿ ಟಿ.ಆರ್. ವಹಿಸಿ, ವಿದ್ಯಾರ್ಥಿಗಳಿಗೆ ಲಭ್ಯವಾಗಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಶೇಷ ಉಪನ್ಯಾಸದಲ್ಲಿ ಶ್ರೀ ವಿಶ್ವನಾಥ್ ಡಿ.ಆರ್., ಉಪನ್ಯಾಸಕರು ಹಾಗೂ ಪತ್ರಿಕಾ ವರದಿಗಾರರು, ಕೆ. ಬೇವಿನಹಳ್ಳಿ ಅವರು “ಸ್ವಾಮಿ ವಿವೇಕಾನಂದ ಮತ್ತು ಯುವಜನತೆ” ವಿಷಯದ ಕುರಿತು ಪ್ರೇರಣಾದಾಯಕ ಉಪನ್ಯಾಸ ನೀಡಿದರು. ಸ್ವಾಮಿ ವಿವೇಕಾನಂದರ ಜೀವನ ಸಾಧನೆ, ವ್ಯಕ್ತಿತ್ವ ಹಾಗೂ ದೇಶಭಕ್ತಿ ಕುರಿತು ವಿವರಿಸಿ, ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಅನುಸರಿಸಿ ಉತ್ತಮ ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಯುವಜನತೆ ತಮ್ಮ ಶಕ್ತಿಯನ್ನು ಸಮಾಜಸೇವೆ ಹಾಗೂ ದೇಶದ ಅಭಿವೃದ್ಧಿಗೆ ಬಳಸಬೇಕು ಎಂದು ಕರೆ ನೀಡಿದರು.
“ಎದ್ದು ನಿಲ್ಲಿ, ಜಾಗ್ರತವಾಗಿರಿ, ಗುರಿ ಸಾಧಿಸುವ ತನಕ ನಿಲ್ಲಬೇಡಿ” ಎಂಬ ಸ್ವಾಮಿ ವಿವೇಕಾನಂದರ ಅಮೂಲ್ಯ ವಾಕ್ಯವನ್ನು ಉಲ್ಲೇಖಿಸಿ, ಯುವಕರಲ್ಲಿ ಆತ್ಮವಿಶ್ವಾಸ ಮತ್ತು ಗುರಿನಿಷ್ಠೆ ಬೆಳೆಸುವಂತೆ ಪ್ರೇರೇಪಿಸಿದರು.
ಶ್ರೀ ಎ. ಜಯಪ್ಪ ಅವರು ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳು ಸಮಾಜಸೇವೆ ಹಾಗೂ ಸಾಮಾಜಿಕ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಶ್ರೀ ಪಿ.ವಿ. ಸತೀಶ್ ಅವರು ಹಳ್ಳಿ ಜೀವನದ ಮಹತ್ವ ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.
ಉಪನ್ಯಾಸಕಿ ಕಾವ್ಯ ಶ್ರೀ ಅವರು ಮಹಿಳಾ ಸಬಲೀಕರಣದ ಕುರಿತು ಮಾತನಾಡಿ, ಮಹಿಳೆಯರು ಶಿಕ್ಷಣ ಹಾಗೂ ಆತ್ಮವಿಶ್ವಾಸದಿಂದ ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನವನ್ನು ಪಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಹಾಗೂ ಮುಖಂಡರಾದ ವಾಗೀಶ್ ಸುದರ್ಶನ ಎಸ್.ಸಿ., ವಿಜಯ, ಹನುಮಂತಪ್ಪ ಯು., ಕೆ.ಎಸ್. ಬಸವರಾಜು, ಕೆ. ರೇವಣಸಿದ್ಧಪ್ಪ ಮುಂತಾದವರು ಭಾಗವಹಿಸಿದ್ದರು.
ಶಿಬಿರಾಧಿಕಾರಿಗಳಾದ ಡಾ. ರಾಘವೇಂದ್ರ ಹಾಗೂ ಡಾ. ಪ್ರವೀಣಕುಮಾರ್, ದೈಹಿಕ ನಿರ್ದೇಶಕರಾದ ಧನಂಜಯ್ ಹಾಗೂ ಉಪನ್ಯಾಸಕರಾದ ಶ್ರೀ ಶಾಂತಕುಮಾರ್ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಎರಡನೇ ದಿನದ ಶಿಬಿರವು ಮುಕ್ತಾಯಗೊಂಡಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಲೋಕಾಯುಕ್ತ ಪೋಲಿಸ್ ಇನ್ಸ್ಪೆಕ್ಟರ್ ಪ್ರಭು ಬಿ. ಸೂರಿನ ಅವರಿಂದ ಕಾನೂನು ಅರಿವು
ಸುದ್ದಿದಿನ,ಬನ್ನಿಕೋಡು: ಮಾ.ಸ.ಬ. ಕಾಲೇಜು, ದಾವಣಗೆರೆ ಹಾಗೂ ಬನ್ನಿಕೋಡು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಎನ್.ಎಸ್.ಎಸ್. (ರಾಷ್ಟ್ರೀಯ ಸೇವಾ ಯೋಜನೆ) ವಿಶೇಷ ಶಿಬಿರದ ಅಧ್ಯಕ್ಷತೆಯನ್ನು ಮಾ.ಸ.ಬ. ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಿಜಯಕುಮಾರ್ ಎ.ಬಿ. ವಹಿಸಿದ್ದರು.
ಮುಖ್ಯ ಉಪನ್ಯಾಸಕರಾಗಿ ಕರ್ನಾಟಕ ಲೋಕಾಯುಕ್ತ, ದಾವಣಗೆರೆ ಇವರ ಪೋಲಿಸ್ ಇನ್ಸ್ಪೆಕ್ಟರ್ ಶ್ರೀ ಪ್ರಭು ಬಿ. ಸೂರಿನ ಭಾಗವಹಿಸಿ “ಕರ್ನಾಟಕ ಲೋಕಾಯುಕ್ತ ಕಾಯ್ದೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆ” ಕುರಿತು ಸಮಗ್ರ ಮಾಹಿತಿ ನೀಡಿದರು. ಕರ್ನಾಟಕ ಲೋಕಾಯುಕ್ತದ ಸ್ಥಾಪನೆ ಮತ್ತು ಹಿನ್ನೆಲೆ, ಸಂಸ್ಥೆಯ ವ್ಯಾಪ್ತಿ, ದೂರು ಸಲ್ಲಿಸುವ ವಿಧಾನ, ವಿಚಾರಣೆ ಕ್ರಮ, ಭ್ರಷ್ಟಾಚಾರ ತಡೆ ಕಾಯ್ದೆಯ ಪ್ರಮುಖ ಅಂಶಗಳು, ಲೋಕಾಯುಕ್ತ ಸಂಸ್ಥೆಯ ವೈಶಿಷ್ಟ್ಯತೆಗಳು, ಹಗರಣಗಳ ತನಿಖಾ ವಿಧಾನ ಹಾಗೂ ಸರ್ಕಾರಿ ಹಣದ ದುರುಪಯೋಗ ತಡೆ ಕ್ರಮಗಳ ಬಗ್ಗೆ ವಿವರಿಸಿದರು. ಉಪನ್ಯಾಸದ ಅಂತ್ಯದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಾ. ಹೆಚ್.ಆರ್. ತಿಪ್ಪೇಸ್ವಾಮಿ ಅವರು ಯುವಜನತೆ ಹಾಗೂ ಸಾಮಾಜಿಕ ಸಾಮರಸ್ಯ ಕುರಿತು ಪ್ರೇರಣಾದಾಯಕ ಸಂದೇಶ ನೀಡಿದರು.
ಶಿಬಿರಾಧಿಕಾರಿಗಳಾದ ಡಾ. ರಾಘವೇಂದ್ರ ಮತ್ತು ಡಾ. ಪ್ರವೀಣಕುಮಾರ್, ದೈಹಿಕ ನಿರ್ದೇಶಕರಾದ ಧನಂಜಯ್, ಗ್ರಾಮದವರಾದ ಬಸವರಾಜ್, ಹಾಲಪ್ಪ, ಮಹದೇವಪ್ಪ, ಕುರಿಯರ್ ದುರುಗಪ್ಪ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕಾನೂನು ಜಾಗೃತಿ ಹಾಗೂ ಭ್ರಷ್ಟಾಚಾರ ವಿರೋಧಿ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoನಕಲಿ ಬಿಲ್ಲುಗಳ ಮೂಲಕ ಲಕ್ಷಾಂತರ ರೂಪಾಯಿ ಅವ್ಯವಹಾರ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ನಾಗರಾಜ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoಬ್ಯಾಕ್ಲಾಗ್ ನಿಯಮಾವಳಿ ಉಲ್ಲಂಘನೆ ; ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಕರಿಚಣ್ಣನವರ್ ವಿರುದ್ಧ ಲೋಕಾಗೆ ದೂರು
-
ಅಂಕಣ4 days agoನೀಟ್ ಸೃಷ್ಟಿಸಿದ ಅವಾಂತರಗಳು ಮತ್ತು ಅದರ ಬಹುಮುಖಿ ಬಿಕ್ಕಟ್ಟುಗಳು: ಒಂದು ವಿಮರ್ಶಾತ್ಮಕ ನೋಟ
-
ದಿನದ ಸುದ್ದಿ7 days agoನಾಳೆ ಹರಿಹರ ರೈಲು ನಿಲ್ದಾಣದಲ್ಲಿ ವಾರ್ಷಿಕ ವಿಪತ್ತು ನಿರ್ವಹಣೆ ಅಣುಕು ಅಭ್ಯಾಸ
-
ದಿನದ ಸುದ್ದಿ4 days agoಲಾರಿ, ಟ್ರಾಕ್ಟರ್ ಗಳಿಗೆ ಟ್ರಿಪ್ ಚೀಟಿ ಇಲ್ಲದೆ ಅಕ್ರಮ ಸಾಗಾಣಿಕೆ ; ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲು..!?
-
ದಿನದ ಸುದ್ದಿ6 days ago‘ಹಿಟ್ಲರ್ ಕಲ್ಯಾಣ’ದ ನಾಯಕನ ಬದುಕಿನ ಪಯಣ ಹೀಗಿತ್ತು
-
ದಿನದ ಸುದ್ದಿ4 days agoಕೆ. ಶಿವರಾಜಕುಮಾರ್ ಅವರಿಗೆ ಪಿಎಚ್ ಡಿ ಪದವಿ
-
ದಿನದ ಸುದ್ದಿ3 days agoಶಿಕ್ಷಕರು, ವಾರ್ಡನ್ಗಳಿಗೆ ಪೋಕ್ಸೊ ಕಾಯ್ದೆ ತರಬೇತಿ ನೀಡಿ

