ದಿನದ ಸುದ್ದಿ
ಎಸ್ ಎಸ್ ಹಾದಿಯಲ್ಲಿ ಸಮರ್ಥ್ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
ಸುದ್ದಿದಿನ,ದಾವಣಗೆರೆ: ಜನರು ಹೆಚ್ಚಿನ ನಿರೀಕ್ಷೆಯೊಂದಿಗೆ ಮತದಾನಕ್ಕೆ ಸಜ್ಜಾಗಿದ್ದಾರೆ. ಅಪ್ಪಾಜಿ ಅವರು ಜಾತಿ, ಮತ, ಪಕ್ಷ ಮತ್ತು ಧರ್ಮ ಬೇಧವಿಲ್ಲದೆ ಎಲ್ಲರನ್ನು ಸಮಾನವಾಗಿ ನೋಡುತ್ತಿದ್ದ ಅಜಾತ ಶತ್ರುಗಳಾಗಿದ್ದರು. ಅದೇ ನಿಟ್ಟಿನಲ್ಲಿ ಸಮರ್ಥ್ ಕೂಡ ನಡೆಯುತ್ತಾರೆ ಎಂದು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ದಾವಣಗೆರೆಯ ಕೆಬಿ ಬಡಾವಣೆಯಲ್ಲಿ ಮತಪ್ರಚಾರ ನಡೆಸಿ ಮಾತನಾಡಿದ ಅವರು ಈ ಚುನಾವಣೆಯು ಶಾಮನೂರು ಶಿವಶಂಕರಪ್ಪಾಜಿಯವರ ಅಗಲಿಕೆಯಿಂದ ನಡೆಯುತ್ತಿದೆ. ಜನರು ನೀಡಿದ 5 ವರ್ಷದ ಅಧಿಕಾರಾವಧಿಯಲ್ಲಿ ಉಳಿದಿರುವ ಎರಡು ವರ್ಷಗಳನ್ನು ಸಮರ್ಥವಾಗಿ ನಿಭಾಯಿಸಲು ಪಕ್ಷವು ಸಮರ್ಥ್ ಅವರಿಗೆ ಅವಕಾಶ ನೀಡಿದೆ ಎಂದರು.
ನಮ್ಮ ಕಾಂಗ್ರೆಸ್ ಪಕ್ಷ ನೀಡಿದ 5 ಗ್ಯಾರಂಟಿ ಯೋಜನೆಗಳು ಬಡ ಜನರಿಗೆ ತಲುಪಿದ್ದು, ದಿನನಿತ್ಯದ ಬಳಕೆಯ ವಸ್ತುಗಳ ಖರೀದಿಗೆ ಈ ಯೋಜನೆಗಳು ಸಹಕಾರಿಯಾಗಿವೆ. ಸರ್ಕಾರ ಜನಪರ ಕೆಲಸಗಳಲ್ಲಿ ಸಾಕಷ್ಟು ಸಾಧನೆ ಮಾಡಿದೆ.ಜನರು ಕೂಡ ಈ ಸಂದರ್ಭದಲ್ಲಿ ಯಾರು ತಮ್ಮ ಪರ ನಿಂತಿದ್ದಾರೆ ಎಂಬುದನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ಒಳ್ಳೆಯ ರಾಜಕಾರಣಿ ಎಂದರೆ ಜನರ ಕಷ್ಟಗಳಿಗೆ ಸ್ಪಂದಿಸುವುದಾಗಿದೆ.
ಸಮರ್ಥ್ ಅವರು ತಮ್ಮ ತಾತನ ಕೆಲಸಗಳು,ಜನಸೇವೆ ನೋಡಿದ್ದಾರೆ. ಅಪ್ಪಾಜಿಯವರು ಆರು ಬಾರಿ ಆಯ್ಕೆಯಾದ ಅವಧಿಯಲ್ಲಿ ಮಾಡಿದ ಕೆಲಸಗಳನ್ನು ನೇರವಾಗಿ ನೋಡಿದ ಅನುಭವ ಸಮರ್ಥ್ ಅವರಿಗಿದೆ ಹಾಗೂ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಸಮರ್ಥ್ ಪ್ರತಿಯೊಂದು ಮನೆಗೂ ಭೇಟಿ ನೀಡಿದಾಗ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಜನ ತಮ್ಮ ಸಮಸ್ಯೆಗಳನ್ನು ಸಮರ್ಥ್ ಎದುರಿಗೆ ಹೇಳಿಕೊಳ್ಳುತ್ತಿದ್ದಾರೆಂದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನರು ಸಮರ್ಥ್ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ನಂತರ ಕೆಬಿ ಬಡಾವಣೆಯ ದೀಕ್ಷಿತ್ ರಸ್ತೆಯಲ್ಲಿರುವ ಶ್ರೀ ಗುರು ರಾಘವೇಂದ್ರ ರಾಯರ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕವಿತೆ | ಒಂಟಿಯಾನದ ಸರಕು
~ಹೊನ್ನಪ್ಪ. ನೀ. ಕರೆಕನ್ನಮ್ಮನವರ
ಗೌಜು ಗದ್ದಲವ ಸೀಳಿದ
ನಿಶ್ಯಬ್ದ ‘ಮೌನ’
ಹಾದಿಯಾಗಿ ಮಲಗಿದೆ
ತನ್ನೆದೆಗೆ ತಾ ಸಾಕ್ಷಿಯಾಗಿ
ತುಳಿದ ಹೆಜ್ಜೆಗಳ ಗೊಡವೆ ಬಿಟ್ಟು
ಕಣ್ಣಿಗಂಟಿದ ಬೆಳಕಷ್ಟೇ
ಗುರಿ ತೋರುವ ಕಂದೀಲು
ಕಾಣದೂರಿನ ಹಂಬಲಕೆ
ಸಂಪ್ರದಾಯದ ಚಾಳಿಸು
ಹಾಕಿಕೊಂಡೇ ಹೆಣ್ಣೆದೆಗೆ
ಇಣುಕುವ ಮೀಸೆಯಂಚಿನ
ತುಟಿಯ ಕುಹಕಗಳು
ದೂರಿ ದೂರಿ ದೂರವೇ ನಿಲ್ಲುತ್ತವೆ
ರಸ್ತೆಯ ಇಕ್ಕೆಲಗಳ ಮರದಂತೆ..
ನಗ್ನ ಸತ್ಯ ಅರಿಯದ ಪ್ರತಿಮೆಗಳಾಗಿ..!
ವಕಾಲತ್ತು ಹೂಡುವವರಾರಿಲ್ಲಿ..?
ಕಟಕಟೆಯಿಂದ ಜಾರಿ ಬಿದ್ದ
ಕೂಡಲೇ ತೀರ್ಪು ಆಡಿಕೊಳ್ಳುವವರ
ಬಾಯಲ್ಲಿ ಆಹುತಿಯಾಗುವುದಂತೆ..!
ಒಂದು ಪ್ರಶ್ನೆಯ ಉತ್ತರಕಿಲ್ಲಿ
ಸಾವಿರ ಪ್ರಶ್ನೆಗಳೇ ಹುಟ್ಟುತ್ತವೆ
ಕಿವುಡರಾಗಿಯೇ ನಡೆಯಬೇಕು
ಅಸಂಬದ್ಧತೆಯನ್ನು ಮೀರದ
ಈ ಲೋಕದೊಳಗೆ,
ಅದೆಷ್ಟು ಅಳೆದಳೆದು
ತೂಗಿದರೇನು
ಕೊನೆ ಇರದ ಈ ಏಕಾಂತ..?
ಆದರೂ ಒಂಟಿಯೇನಲ್ಲ ಬಿಡಿ
ನನ್ನೊಳಗೆ ನಾನಿರುವಾಗ..!
ಅಷ್ಟೇ ಏಕೆ..?
ಅಲ್ಲಿ ಯಾರದೋ ಕಾಲಿಗೆ ಸಿಕ್ಕು
ನಲುಗಿದ ಗುಲಾಬಿ ಎಸಳು
ನಡುರಸ್ತೆಯಲಿ ತಾಳಿ
ಕಿತ್ತುಕೊಂಡವನಿಂದ
ಕೈಜಾರಿ ಬಿದ್ದ ಕರಿಮಣಿ
ತೆವಲು ತೀರಿದ ಬಳಿಕ
ಇರಿದ ರಕ್ತದ ಕಲೆ
ದಾರಿಯುದ್ಧಕ್ಕೂ
ನನಗೆ ಜಾಹೀರಾತಾಗಿರುವಾಗ
ಕಾಲಿನಿಂದ ನಡೆದವರಿಗಿಂತ
ತಲೆಯಿಂದ ನಡೆದವರೇ
ಹೆಚ್ಚು ಆಪ್ತ ಮೈಲುಗಲ್ಲುಗಳಾಗುತ್ತಾರೆ
ಈ ಸುಡುವ ದಾರಿಯಲ್ಲಿ ನನಗೀಗ..!
~ಹೊನ್ನಪ್ಪ. ನೀ. ಕರೆಕನ್ನಮ್ಮನವರ, ಶಿಕ್ಷಕರು,9986334154

ದಿನದ ಸುದ್ದಿ
ಕಾರಾಗೃಹಗಳ ಇಲಾಖೆ ನೇಮಕಾತಿ ಪರೀಕ್ಷೆ : 4,697 ಅಭ್ಯರ್ಥಿಗಳು ಹಾಜರು
ಸುದ್ದಿದಿನ,ದಾವಣಗೆರೆ:ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಕಾರಾಗೃಹಗಳ ಇಲಾಖೆಯ ನೇಮಕಾತಿಗಾಗಿ ಇಂದು ನವೆಂಬರ್ 21 ನಡೆದ ಸ್ಪರ್ಧಾತ್ಮಕ ಪರೀಕ್ಷೆಗೆ ದಾವಣಗೆರೆ ನಗರದ 11 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 4,697 ಅಭ್ಯರ್ಥಿಗಳು ಹಾಜರಾಗಿದ್ದಾರೆ.
ನಗರದ ವಿವಿಧ 11 ಪದವಿಪೂರ್ವ ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪರೀಕ್ಷೆಗೆ ಒಟ್ಟು 6,505 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 4,697 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, 1,808 ಅಭ್ಯರ್ಥಿಗಳು ಗೈರುಹಾಜರಾಗಿದ್ದು ಸುಗಮವಾಗಿ ಪರೀಕ್ಷೆ ನಡೆದಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ತಿಳಿಸಿದ್ದಾರೆ.

ದಿನದ ಸುದ್ದಿ
ದಾವಣಗೆರೆ ವಿಶ್ವವಿದ್ಯಾಲಯ ಕುಲಸಚಿವ ಎಸ್.ಬಿ ಘಂಟಿ ವಿರುದ್ಧ ಲೋಕಾಗೆ ದೂರು
ದಾವಣಗೆರೆ, ಸುದ್ದಿದಿನ; ಸುಳ್ಳು ಮಾಹಿತಿ ನೀಡಿ ದಾವಣಗೆರೆ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ಸುರೇಶ್ ಎಸ್, ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಂತೆಬೆನ್ನೂರು ಇವರು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಅವಧಿಯನ್ನು ಸೂಕ್ತ ತನಿಖೆಗೆ ಒಳಪಡಿಸಿ, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿ ನಿಗಧಿತ ಕಾಲಾವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀ ಎಸ್.ಬಿ ಘಂಟಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ದಾವಣಗೆರೆ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಪದವಿ ಕಾಲೇಜುಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಒಟ್ಟು 8 ಹಿರಿಯ ಪ್ರಾಂಶುಪಾಲರುಗಳನ್ನು ಸೇವಾ ಹಿರಿತನದ ಆಧಾರದ ಮೇಲೆ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿರುತ್ತದೆ. ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯತ್ವ ಸ್ಥಾನಕ್ಕೆ ಪ್ರಾಂಶುಪಾಲರಾಗಿ ಸಲ್ಲಿಸಿದ ಸೇವಾ ಹಿರಿತನವೇ ಪ್ರಮುಖ ಮಾನದಂಡವಾಗಿರುತ್ತದೆ.
ಆದರೆ ಸುರೇಶ್ ಎಸ್, ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಂತೆಬೆನ್ನೂರು ಇವರು ನೀಡಿರುವ ಮಾಹಿತಿಯಲ್ಲಿ ದಿನಾಂಕ: 31-05-2025 ರ ವೇಳೆಗೆ 11 ವರ್ಷ 5 ತಿಂಗಳು 11 ದಿನಗಳ ಕಾಲ ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸಿರುವಂತೆ ವಿಶ್ವವಿದ್ಯಾಲಯಕ್ಕೆ ಮಾಹಿತಿ ನೀಡಿರುತ್ತಾರೆ. ಈ ಬಗ್ಗೆ ಅನುಮಾನ ವ್ಯಕ್ತವಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ದಾವಣಗೆರೆ ವಿಶ್ವವಿದ್ಯಾಲಯ ಇವರಿಂದ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಸುರೇಶ್ ಎಸ್. ಇವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಳಲ್ಕೆರೆ ಇಲ್ಲಿ ದಿನಾಂಕ: 19-11-2019 ರಿಂದ 30-04-2022 ರವರೆಗೆ ಒಟ್ಟು 2 ವರ್ಷ 09 ತಿಂಗಳುಗಳ ಸೇವೆಯನ್ನು ಸಲ್ಲಿಸಿದ್ದು, ನಂತರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಂತೆಬೆನ್ನೂರು ಇಲ್ಲಿ ದಿನಾಂಕ: 26-11-2025 ರಿಂದ ಪ್ರಭಾರ ಪ್ರಾಂಶುಪಾಲರಾಗಿ ಸೇವೆಯನ್ನು ಮುಂದುವರೆಸಿರುತ್ತಾರೆ.
ದಿನಾಂಕ: 31-05-2026 ರ ವೇಳೆಗೆ ಸುರೇಶ್ ಎಸ್. ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಂತೆಬೆನ್ನೂರು ಇವರು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಒಟ್ಟು ಅವಧಿಯು 3 ವರ್ಷ, 3 ತಿಂಗಳು ಮಾತ್ರವೇ ಆಗಿರುತ್ತದೆ. ಆದರೆ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿಗೆ ನಾಮನಿದೇರ್ಶನಗೊಳ್ಳಲು ನೀಡಿದ ಮಾಹಿತಿಯಲ್ಲಿ ದಿನಾಂಕ: 31-05-2026 ರ ವೇಳೆಗೆ 11 ವರ್ಷ 5 ತಿಂಗಳು 11 ದಿನಗಳ ಕಾಲ ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸಿರುವಂತೆ ಮಾಹಿತಿ ನೀಡಲಾಗಿರುತ್ತದೆ.
ಆದ್ದರಿಂದ ಅಧಿಕೃತ ದಾಖಲೆಗಳನ್ನು ಲಗತ್ತಿಸಿ ದಿನಾಂಕ: 11-09-2026 ರಂದು ಕುಲಸಚಿವರು, ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ ಇವರಿಗೆ ದೂರು ನೀಡಿ ಸುಳ್ಳು ಮಾಹಿತಿ ನೀಡಿ ದಾವಣಗೆರೆ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ಸುರೇಶ್ ಎಸ್, ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಂತೆಬೆನ್ನೂರು ಇವರು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಅವಧಿಯನ್ನು ಸೂಕ್ತ ತನಿಖೆಗೆ ಒಳಪಡಿಸಿ, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಲಾಗಿತ್ತು. ನಿಗಧಿತ ಕಾಲಾವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ದಿನಾಂಕ: 19-10-2026 ರಂದು ಜ್ಞಾಪನವನ್ನು ಸಹ ನೀಡಲಾಗಿರುತ್ತದೆ.
ಆದರೆ ದೂರು ಸಲ್ಲಿಸಿ 2 ತಿಂಗಳು ಕಳೆದರೂ ಕುಲಸಚಿವರು, ದಾವಣಗೆರೆ ವಿಶ್ವವಿದ್ಯಾಲಯ ಇವರು ಕೈಗೊಂಡ ಕ್ರಮದ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ನಿರ್ಲಕ್ಷö್ಯ ತೋರಿದ್ದು, ಸುಳ್ಳು ಮಾಹಿತಿ ನೀಡಿದ ಅಧಿಕಾರಿಯನ್ನು ರಕ್ಷಿಸುವ ಪ್ರಯತ್ನಕ್ಕೆ ಮುಂದಾಗಿರುವುದು ಮೇಲ್ನೋನಿರ್ಲಕ್ಷ್ಯದಿರುವ ಕಾರಣ ಕುಲಸಚಿವ ಎಸ್.ಬಿ ಘಂಟಿ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

-
ದಿನದ ಸುದ್ದಿ2 days agoಹರಿಹರ | ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೇವರಬೆಳಕೆರೆ ಇಲ್ಲಿ ಅವ್ಯವಹಾರ | ಪ್ರಾಂಶುಪಾಲ ನೀಲಪ್ಪ ಪಿಡ್ಡಣ್ಣನವರ್ ವಾರ್ಡನ್ ಹೆಚ್.ವಿ.ನಾಗರಾಜ್ ವಿರುದ್ಧ ಲೋಕಾಗೆ ದೂರು|
-
ದಿನದ ಸುದ್ದಿ1 day agoದಾವಣಗೆರೆ ವಿಶ್ವವಿದ್ಯಾಲಯ ಕುಲಸಚಿವ ಎಸ್.ಬಿ ಘಂಟಿ ವಿರುದ್ಧ ಲೋಕಾಗೆ ದೂರು
-
ಅಂತರಂಗ9 hours agoಕವಿತೆ | ಒಂಟಿಯಾನದ ಸರಕು
-
ದಿನದ ಸುದ್ದಿ1 day agoಕಾರಾಗೃಹಗಳ ಇಲಾಖೆ ನೇಮಕಾತಿ ಪರೀಕ್ಷೆ : 4,697 ಅಭ್ಯರ್ಥಿಗಳು ಹಾಜರು

