ಸಿನಿ ಸುದ್ದಿ
HaPpY BiRtHdAy | ಸ್ವಾಮಿ ದೇವನೆ ಲೋಕ ಪಾಲನೆ ತೇನಮೋಸ್ತು ನಮೋಸ್ತುತೇ | ಬಿ.ಆರ್. ಪಂತುಲು
ಪದ್ಮಿನಿ ಪಿಕ್ಚರ್ಸ್ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆಗಳಿಸಿ ದಕ್ಷಿಣ ಭಾರತದಲ್ಲಿ ಕನ್ನಡ ಚಿತ್ರರಂಗವನ್ನು ಸದಭಿರುಚಿಯ ಸಿನಿಮಾಗಳ ಮೂಲಕ ಕೀರ್ತಿಯ ಉತ್ತುಂಗಕ್ಕೇರಿದ ಬಿ.ಆರ್. ಪಂತುಲು ಅವರಿಗೆ ಜನ್ಮದಿನದ ಶುಭಾಶಯಗಳು.
“ಸ್ವಾಮಿ ದೇವನೆ ಲೋಕಪಾಲನೆ ತೇನಮೋಸ್ತು ನಮೋಸ್ತುತೆ” ಎಂದು ಮಕ್ಕಳಿಗೆ ಪಾಠ ಹೇಳಿಕೊಟ್ಟು ನಮಗೆ ಇಷ್ಟವಾಗಿರುವ ಮೇಷ್ಟರ ಹಾಗೆ ಇವರೂ ಕೂಡಾ ಎಂದು ಭಾವ ಹುಟ್ಟಿಸಿದ ‘ಸ್ಕೂಲ್ ಮಾಸ್ಟರ್’ ಎಂದೇ ಪ್ರಿಯರಾದ ಬಿ.ಆರ್. ಪಂತುಲು ಅವರು ಕನ್ನಡಿಗರಿಗೆ ಮಾತ್ರವಲ್ಲ, ದಕ್ಷಿಣ ಭಾರತ ಚಿತ್ರರಂಗಕ್ಕೇ ಒಂದು ಅವಿಸ್ಮರಣೀಯ ನೆನಪು. ಅವರು ಶ್ರೀಕೃಷ್ಣದೇವರಾಯ ಚಿತ್ರದಲ್ಲಿ ಮಂತ್ರಿ ತಿಮ್ಮರಸುವಾಗಿ ಕಂಗೊಳಿಸಿದ ರೀತಿ ಅವಿಸ್ಮರಣೀಯವಾದುದು. “ಒಂದರಿಂದ ಇಪ್ಪತ್ತೊಂದರವರೆಗೆ ಜಂಜಾಟ, ಬಂಡಾಟ” ಎಂದು ಅವರ ಮೊದಲ ತೇದಿಯಲ್ಲಿ ಮೂಡಿದ ಹಾಡು, ಅಂದಿನ ಎಲ್ಲಾ ಮಧ್ಯಮ ಮತ್ತು ಕೆಳವರ್ಗದ ಜನಕ್ಕೆ ಇದು ನಮ್ಮ ಜೀವನವೇ ಎಂದು ಅನ್ವಯಿಸಿಕೊಳ್ಳುವಷ್ಟು ಪ್ರಖ್ಯಾತವಾಗಿತ್ತು. ತಮಿಳು ಗೊತ್ತಿದ್ದು ಅಂದಿನ ಕರ್ಣ ತಮಿಳು ಚಿತ್ರದ ‘ಉಳ್ಳತ್ತಿಲ್ ನಲ್ಲ ಉಳ್ಳಂ ಉರಂಗಾದು ಎನ್ಬದು … ವಲ್ಲವನ್ ವಗುತ್ತದಡ’ ಹಾಡು ಕೇಳಿದ್ದರೆ, ಕರ್ಣನಂತಹವನಿಗೇ ಹೀಗಾಯಿತಲ್ಲಾ ಎಂದು ಸ್ವಯಂ ಕೃಷ್ಣನೇ ಶೋಕಿಸುವ ಈ ಸೃಷ್ಟಿಯ ಪರಿ ಆತ್ಮೀಯವಾಗಿತ್ತು. ಕನ್ನಡ ಚಿತ್ರರಂಗದ ಸುವರ್ಣಯುಗದ ಹರಿಕಾರ, ಬೆಳ್ಳಿತೆರೆಯ ಗಾರುಡಿಗರೆಂದೇ ಅವರು ಪ್ರಸಿದ್ಧಿ.
ರಾಜ್ ಕುಮಾರ್ ಅವರು ಕೃಷ್ಣದೇವರಾಯನಾಗಿ ಪ್ರಸಿದ್ಧಿ ಪಡೆದುದು ಮಾತ್ರವಲ್ಲ ಅವರ ಹಲವಾರು ಮನೋಜ್ಞ ಚಿತ್ರಗಳನ್ನು ನಿರ್ಮಿಸಿದವರು ಪಂತುಲು ಅವರೇ. ನರಸಿಂಹರಾಜು ಅವರ ಸುಂದರ ಅಭಿನಯವನ್ನು ಕನ್ನಡ ಚಿತ್ರಗಳಲ್ಲಿ ಪ್ರಧಾನ ಅಂಶವಾಗಿ ರೂಪಿಸಿ ಮೆರೆಸಿದವರು ಕೂಡಾ ಪಂತುಲು ಅವರೇ. ಸ್ಕೂಲ್ ಮಾಸ್ಟರ್ ಚಿತ್ರದಲ್ಲಿ ಅವರ ವಿದ್ಯಾರ್ಥಿಯಾಗಿ ರೂಪಿತನಾದ ಶಿವಾಜಿ ಗಣೇಶನ್ ಅವರನ್ನು ವೀರಪಾಂಡ್ಯ ಕಟ್ಟಬೊಮ್ಮನ್, ಕರ್ಣ ಅಂತಹ ಪಾತ್ರಗಳಿಂದ ರೂಪಿಸಿದವರು ಪಂತುಲು ಅವರೇ. ಕಿತ್ತೂರು ರಾಣಿ ಚೆನ್ನಮ್ಮನನ್ನು ಸುಂದರ ಅಭಿನೇತ್ರಿಯಾದ ಬಿ. ಸರೋಜಾದೇವಿಯವರಲ್ಲಿ ಮರೆಯಲಾಗದಂತೆ ಮೂಡಿಸಿದವರು ಕೂಡಾ ಪಂತುಲು ಅವರೇ. ಅಷ್ಟೇಕೆ ನಮ್ಮ ಕನ್ನಡದ ಶ್ರೇಷ್ಠ ದಿಗ್ದರ್ಶಕ ಪುಟ್ಟಣ್ಣ ಕಣಗಾಲ್, ಸಾಹಿತಿ ಕಣಗಾಲ್ ಪ್ರಭಾಕರ ಶಾಸ್ತ್ರಿ, ಸಂಗೀತ ನಿರ್ದೇಶಕ ಟಿ.ಜಿ. ಲಿಂಗಪ್ಪ, ನಟಿಯಾದ ಪಂತುಲು ಅವರ ಪತ್ನಿ ಎಂ.ವಿ.ರಾಜಮ್ಮ ಇವರುಗಳೆಲ್ಲಾ ಶ್ರೇಷ್ಠರಾಗಿ ಹೊರಹೊಮ್ಮಿದ್ದು ಪಂತುಲು ಅವರ ಪದ್ಮಿನಿ ಪಿಕ್ಚರ್ಸ್ ಗರಡಿಯಲ್ಲೇ.
ಬಡಗೂರು ರಾಮಕೃಷ್ಣ ಪಂತುಲು ಅವರು ಜನಿಸಿದ್ದು 1911 ಜುಲೈ 28ರಂದು ಕರ್ನಾಟಕ-ಆಂಧ್ರಪ್ರದೇಶದ ಗಡಿಯಲ್ಲಿನ ಬಂಗಾರ ಪೇಟೆಯ ಬಳಿಯಿರುವ ಕುಪ್ಪಂನಿಂದ ಹನ್ನೊಂದು ಕಿಲೋಮೀಟರ್ ದೂರದ ಕುಗ್ರಾಮ ಬಡಗೂರಿನಲ್ಲಿ. ಗಡಿ ಪ್ರದೇಶದಲ್ಲಿರುವ ಈ ಊರಿನಲ್ಲಿ ಕನ್ನಡದಂತೆ ತೆಲುಗು, ತಮಿಳು ಕೂಡ ಮುಖ್ಯ ಭಾಷೆಗಳಾಗಿದ್ದವು. ಹೀಗಾಗಿ ಬಾಲ್ಯದಿಂದಲೇ ಪಂತುಲು ಅವರಿಗೆ ಮೂರು ಭಾಷೆಗಳ ಒಡನಾಟ ಬರಲು ಕಾರಣವಾಯಿತು. ಪಂತುಲು ಅವರ ತಂದೆ ವೆಂಕಟಾಚಲಯ್ಯನವರಿಗೆ ಕಿರಿಯವರಾದ ಪಂತುಲು ಸೇರಿದಂತೆ ಐವರು ಮಕ್ಕಳು, ಮೂರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು. ಪಂತುಲು ಅವರ ತಂದೆ ಸಂಗೀತ, ಸಾಹಿತ್ಯ ಮತ್ತು ನೃತ್ಯಗಳಲ್ಲಿ ಉತ್ತಮ ಅಭಿರುಚಿ ಪಡೆದಿದ್ದರು. ಆಗಾಗ ಊರಿನಲ್ಲಿ ನಾಟಕಗಳನ್ನು ಆಡಿಸುತಿದ್ದರು. ತಂದೆಯ ಜೊತೆ ಮಗನೂ ಆಗಾಗ ರಂಗ ತರಬೇತಿ ನೋಡಲು ಹೋಗುತ್ತಿದ್ದನು. ಚಂದ್ರಹಾಸನ ಪಾತ್ರ ನೀಡುವ ಮೂಲಕ ತಂದೆಯೇ ಆತನ ರಂಗ ಪ್ರವೇಶಕ್ಕೆ ಕಾರಣಕರ್ತರಾದರು.
ರಾಮಕೃಷ್ಣರ ಪ್ರಾಥಮಿಕ ಶಿಕ್ಷಣ ಬಡಗೂರಿನಲ್ಲಿಯೇ ನಡೆದರೂ ಮುಂದಿನ ಶಿಕ್ಷಣಕ್ಕೆ ಅಲ್ಲಿ ಅವಕಾಶ ಇರದ ಕಾರಣ ತಮ್ಮ ತಾತನ ಮನೆಯಾದ ಕೊಲಾರದಲ್ಲಿದ್ದು ಎಸ್.ಎಸ್.ಎಲ್.ಸಿ.ವರೆಗಿನ ಶಿಕ್ಷಣ ಪಡೆದರು. ಶಾಲಾ ಜೀವನದಲ್ಲಿಯೂ ಅವರು ನಾಟಕದ ಅಭಿನಯದಲ್ಲಿ ಪ್ರಸಿದ್ದಿ ಪಡೆದಿದ್ದರು. ಪಂತುಲು ಮುಂದೆ ಪ್ರಾಥಮಿಕ ಶಿಕ್ಷಕರಾಗಿ ನೇಮಕಗೊಂಡರು. ಕಲಾವಿದರಾದ ಅವರು ಶಾಲೆಯಲ್ಲಿ ಪಾಠ ಮಾಡಿದ್ದಕ್ಕಿಂತ ಮಕ್ಕಳಿಗೆ ನಾಟಕ ಕಲಿಸಿದ್ದೇ ಹೆಚ್ಹು. ಒಂದುದಿನ ವಿದ್ಯಾ ಇಲಾಖೆಯ ಇನ್ಸ್ಪೆಕ್ಟರ್ ಶಾಲೆಗೆ ಬಂದಾಗ, ಪಾಠ ಮಾಡುವ ಬದಲು ಮಕ್ಕಳಿಗಾಗಿ ನಾಟಕ ಕಲಿಸುತ್ತಿದ್ದ ಪಂತುಲು ಅವರನ್ನು ಕಂಡು ಕೆಂಡಾಮಂಡಲವಾದರು. ಇನ್ನೊಮ್ಮೆ ಹೀಗಾದರೆ ವಜಾಮಾಡುವೆನೆಂದು ನೋಟೀಸ್ ಜಾರಿ ಮಾಡಿದರು. ಇದರಿಂದ ನೊಂದ ಪಂತುಲು ಶಿಕ್ಷಕ ವ್ರತ್ತಿಗೆ ರಾಜೀನಾಮೆ ನೀಡಿ ಕಲೆಯಲ್ಲಿಯೇ ಬದುಕನ್ನು ಅರಸುತ್ತ ಬೆಂಗಳೂರಿಗೆ ಬಂದು ಅವರ ಹಿರಿಯರಾದ ಪಾಪಯ್ಯನವರಿದ್ದ ಮಹಮ್ಮದ್ ಪೀರ್ ಅವರ ‘ಚಂದ್ರಕಲಾ ನಾಟಕ ಮಂಡಳಿ’ಗೆ ಸೇರಿದರು. ಮುಂದೆ ಇವರಿಗೆ ಹೆಚ್ ಎಲ್ ಎನ್ ಸಿಂಹ ಮತ್ತು ಮಹಮದ್ ಪೀರ್ ಅವರ ಗೆಳೆತನ ಬಣ್ಣದಲೋಕದ ನಂಟನ್ನು ತಂದಿತು. ಪಂತುಲು ಅವರ ಮಗ ರವಿಶಂಕರ್ ಕೆಲ ಕಾಲ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದರು. ಮಗಳು ಬಿ.ಆರ್.ವಿಜಯಲಕ್ಷ್ಮಿ ಛಾಯಾಗ್ರಾಹಕಿಯಾಗಿ ಹೆಸರು ಮಾಡಿದ್ದರು.
ಪಂತುಲು ಅವರು 1936ರಲ್ಲಿ ‘ಸಂಸಾರ ನೌಕೆ’ ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ‘ರಾಧಾ ರಮಣ’ ಚಲನಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದರು. 1955ರಲ್ಲಿ ಪಂತುಲು ಅವರು ಪ. ನೀಲಕಂಠನ್ ಸಹಯೋಗದೊಂದಿಗೆ ಪದ್ಮಿನಿ ಪಿಕ್ಚರ್ಸ್ ಸಂಸ್ಥೆ ಸ್ಥಾಪಿಸಿ ‘ಮೊದಲ ತೇದಿ’ ಎಂಬ ಚಿತ್ರ ನಿರ್ಮಿಸಿದರು. ಎರಡನೆ ಚಿತ್ರ ‘ಶಿವಶರಣೆ ನಂಬೆಕ್ಕ’. 1957ರಲ್ಲಿ ಕುತೂಹಲಭರಿತ ‘ರತ್ನಗಿರಿ ರಹಸ್ಯ’ ಎಂಬ ಚಿತ್ರವನ್ನು ನಿರ್ಮಿಸಿದರು. ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಸಾಹಿತ್ಯ, ಟಿ ಜಿ ಲಿಂಗಪ್ಪ ಅವರ ಸಂಗೀತ ಈ ಚಿತ್ರಕ್ಕೆ ಅಪಾರ ಯಶಸ್ಸನ್ನು ತಂದುಕೊಡುವಲ್ಲಿ ನೆರವಾದವು. ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ ರಜತೋತ್ಸವ ಆಚರಿಸಿದ ಸಾಮಾಜಿಕ ಚಿತ್ರವೆಂದು ಖ್ಯಾತಿ ಪಡೆದ ‘ಸ್ಕೂಲ್ ಮಾಸ್ಟರ್’ ಚಿತ್ರವನ್ನು 1958ರಲ್ಲಿ ನಿರ್ಮಿಸಿದರು. ಅನಂತರ ಅವರ ಪದ್ಮಿನಿ ಪಿಕ್ಚರ್ಸ್‌ನಲ್ಲಿ ಕಿತ್ತೂರು ಚೆನ್ನಮ್ಮ, ಮಕ್ಕಳ ರಾಜ್ಯ, ಗಾಳಿ ಗೋಪುರ, ಚಿನ್ನದ ಗೊಂಬೆ, ಎಮ್ಮೆ ತಮ್ಮಣ್ಣ, ಬೀದಿ ಬಸವಣ್ಣ, ಅಮ್ಮ, ಶ್ರೀ ಕೃಷ್ಣದೇವರಾಯ, ಮಾಲತಿ ಮಾಧವ, ಒಂದು ಹೆಣ್ಣಿನ ಕಥೆ ಮುಂತಾದ ಅಮೋಘ ಚಿತ್ರಗಳು ನಿರ್ಮಾಣವಾದವು. ಇವುಗಳಲ್ಲಿ ‘ಸ್ಕೂಲ್ ಮಾಸ್ಟರ್’ ಮತ್ತು ‘ಕಿತ್ತೂರು ಚೆನ್ನಮ್ಮ’ ಚಿತ್ರಗಳು ರಾಷ್ಟ್ರಪ್ರಶಸ್ತಿ ಪಡೆದವು.”ಶ್ರೀ ಕೃಷ್ಣದೇವರಾಯ” ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ದೊರಕಿತು. ಇದೇ ಚಿತ್ರದಲ್ಲಿ ಬಿ.ಆರ್.ಪಂತುಲು ಅವರು ನಿರ್ವಹಿಸಿದ ‘ತಿಮ್ಮರಸು’ ಪಾತ್ರಕ್ಕೆ ಶ್ರೇಷ್ಥ ನಟ ಪ್ರಶಸ್ತಿ ದೊರೆಯಿತು. ಶ್ರೀ ಕೃಷ್ಣದೇವರಾಯ ಚಿತ್ರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಬಿ.ಆರ್. ಪಂತುಲು ನಿರಾಕರಿಸಿದ್ದರು. ಆ ಸಿನಿಮಾದ ಅತ್ಯುತ್ತಮ ಅಭಿನಯಕ್ಕಾಗಿ ರಾಜ್‌ಕುಮಾರ್ ಅವರಿಗೆ ಪ್ರಶಸ್ತಿ ನೀಡಬೇಕಿತ್ತು ಎನ್ನುವುದು ಅವರ ವಾದವಾಗಿತ್ತು.
ಬಿ.ಆರ್.ಪಂತುಲು ಸುಮಾರು ಇಪ್ಪತ್ತೈದು ವರ್ಷಗಳ ಕಾಲ, ನಾಲ್ಕು ಭಾಷೆಗಳಲ್ಲಿ ಐವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ, ಚಿತ್ರೋದ್ಯಮಕ್ಕಾಗಿ ತಮ್ಮನ್ನೇ ತಾವು ತೇದುಕೊಂಡ ಮಹಾಪರುಷ. ಇವರು ಉದ್ಯಮಕ್ಕೆ ಕಾಲಿಟ್ಟಾಗ ಕನ್ನಡ ಚಿತ್ರರಂಗವಿನ್ನೂ ಕುಂಟುತ್ತಿತ್ತು. ಮದ್ರಾಸಿನಿಂದ ತಯಾರಾಗುತ್ತಿದ್ದ ಕನ್ನಡ ಚಿತ್ರಗಳಲ್ಲಿ ಕನ್ನಡತನವನ್ನು ಹುಡುಕಬೇಕಾಗಿತ್ತು. ಇದನ್ನ ಮನಗಂಡ ಪಂತುಲು ತಮಿಳರೊಂದಿಗೆ ಕಲೆತು ಮೊಟ್ಟಮೊದಲಿಗೆ `ಮೊದಲ ತೇದಿ’ ಚಿತ್ರ ನಿರ್ಮಿಸಿದರು. ಇದು ಸರ್ಕಾರಿ ನೌಕರನ ಬದುಕಿನ ಬವಣೆಯ ಸುತ್ತಲಿನದು. ಅಂದಿನ ಸಾಮಾಜಿಕ ಸ್ಥಿತಿಗತಿಯನ್ನು ಪ್ರತಿಬಿಂಬಿಸುವಂಥಾದ್ದು. ಚಿತ್ರ ಹಿಟ್ ಆಯ್ತು. ಧೈರ್ಯ ಬಂತು. ತಮಿಳಿನ ಒಡನಾಟದಲ್ಲಿದ್ದುಕೊಂಡೇ ಕನ್ನಡ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದರು. ರಾಜ್ ಕುಮಾರ್, ನರಸಿಂಹರಾಜು, ಚಿ.ಉದಯಶಂಕರ್, ಪುಟ್ಟಣ್ಣ ಕಣಗಾಲರಂತಹ ಪ್ರತಿಭಾವಂತರನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಟ್ಟರು. ರಾಜ್ ಕುಮಾರ್ ಅವರಿಗಾಗಿಯೇ ಗಾಳಿಗೋಪುರ, ಸಾಕುಮಗಳು, ಎಮ್ಮೆ ತಮ್ಮಣ್ಣ, ಬೀದಿ ಬಸವಣ್ಣ, ಅಮ್ಮ, ಗಂಡೊಂದು ಹೆಣ್ಣಾರು ಚಿತ್ರಗಳನ್ನು ಮಾಡಿದ ಪಂತುಲು, ನರಸಿಂಹರಾಜು ಅವರಿಗಾಗಿಯೇ ಪ್ರತ್ಯೇಕ ಪಾತ್ರ ಸೃಷ್ಟಿಸಿ ಹಾಸ್ಯದ ಹೊಸ ಟ್ರ್ಯಾಕೊಂದನ್ನು ಅನಿವಾರ್ಯವಾಗಿ ಚಿತ್ರದಲ್ಲಿರುವಂತೆ ನೋಡಿಕೊಂಡರು. ಹಾಗೆಯೇ ಇವರ ಸರಿಸುಮಾರು ಎಲ್ಲಾ ಚಿತ್ರಗಳಿಗೂ ಟಿ.ಜಿ.ಲಿಂಗಪ್ಪ ಸಂಗೀತ ನಿರ್ದೇಶಕರಾಗಿದ್ದುದು ಒಂದು ವಿಶೇಷ.
ಪಂತುಲು ಅವರು ‘ಕಾಲೇಜು ರಂಗ’ ಚಿತ್ರದ ಸಿದ್ಧತೆಯಲ್ಲಿದ್ದಾಗ, ಅಕ್ಟೋಬರ್ 8, 1974ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು. ಅವರ ಪಟ್ಟ ಶಿಷ್ಯ ಪುಟ್ಟಣ್ಣ ಕಣಗಾಲರು ಈ ಚಿತ್ರವನ್ನು ಪೂರ್ತಿ ಮಾಡಿ, ಗುರುಕಾಣಿಕೆಯಾಗಿ ಅರ್ಪಿಸಿದರು. ಇದು ಪದ್ಮಿನಿ ಪಿಕ್ಚರ್ಸ್ ಅವರ ಕೊನೆಯ ಚಿತ್ರವಾಯಿತು. ಆ ಮೂಲಕ ಭಾರತೀಯ ಚಿತ್ರರಂಗದ ಸುವರ್ಣ ಅಧ್ಯಾಯವೊಂದು ಕೊನೆಗೊಂಡಿತು.
ಪುಟ್ಟಣ್ಣ ಕಣಗಾಲರ ಪ್ರಕಾರ ಜನಸಾಮಾನ್ಯರನ್ನು ಚಿತ್ರಮಂದಿರಗಳತ್ತ ತರುವಂತೆ ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿದ್ದು ಬಿ.ಆರ್. ಪಂತುಲು. ಅವರು ಅಭಿನಯ-ನಿರ್ದೇಶನ-ನಿರ್ಮಾಣ ಈ ಮೂರೂ ಕಲೆಗಳನ್ನು ಕರಗತ ಮಾಡಿಕೊಂಡು ಕನ್ನಡ ಚಿತ್ರರಂಗವನ್ನು ಅತ್ಯುತ್ತಮ ಗುಣಮಟ್ಟದ ಚಿತ್ರಗಳಿಂದ ಶ್ರೀಮಂತಗೊಳಿಸಿದವರು. 1957ರಿಂದ 1972ರವರೆಗೆ ಅವರು ಕನ್ನಡದಲ್ಲಿ ನಿರ್ಮಿಸಿದ ಚಿತ್ರಗಳು, ಕನ್ನಡ ಚಿತ್ರರಂಗದತ್ತ ಇಡೀ ಭಾರತೀಯ ಚಿತ್ರರಂಗವೇ ನೋಡುವಂಥ ಇತಿಹಾಸವನ್ನು ನಿರ್ಮಿಸಿತ್ತು. ಅವರ ಶೇಕಡಾ 90ರಷ್ಟು ಚಿತ್ರಗಳಲ್ಲಿ ಡಾ. ರಾಜ್‌ಕುಮಾರ್ ನಾಯಕನಟರಾಗಿ ಅಭಿನಯಿಸಿರುವುದೊಂದು ವಿಶೇಷ. ಜೊತೆಗೆ ಸ್ವತಃ ಬಿ.ಆರ್.ಪಂತುಲುರವರೂ ಒಂದು ಮುಖ್ಯ ಪೋಷಕ ಪಾತ್ರದಲ್ಲಿದ್ದು ತಂದೆಯಂತೆ ಆ ಇಡೀ ಚಿತ್ರದ ಏಳಿಗೆಗೆ ಕಾರಣವಾಗುತ್ತಿದ್ದುದು ಆ ಚಿತ್ರಗಳ ಮತ್ತೊಂದು ಸುವಿಶೇಷ.
1955ರಲ್ಲಿ ಪದ್ಮಿನಿ ಪಿಕ್ಚರ್ಸ್ ಲಾಂಛನದಡಿಯಲ್ಲಿ ಪಂತುಲುರವರು ತಮ್ಮ ಚಿತ್ರ ನಿರ್ಮಾಣವನ್ನು ಆರಂಭಿಸಿದರಾದರೂ, ಅವರ ಚಿತ್ರಗಳನ್ನು “ಪಂತುಲು ಚಿತ್ರಗಳು” ಎಂದು ಕರೆಯುವುದೇ ವಾಡಿಕೆ. ‘ಸ್ಕೂಲ್ ಮಾಸ್ಟರ್’ ಚಿತ್ರದ ಧ್ಯಾನದ ಆರಂಭವಾದ “ಸ್ವಾಮಿ ದೇವನೆ” ಎಂಬ ಒಂದು ಹಾಡು ಸಾಕು, ಪಂತುಲು ಅವರು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಪ್ರಾತಃ ಸ್ಮರಣೀಯರಾಗಲು. ಸೋಸಲೆ ಅಯ್ಯಾ ಶಾಸ್ತ್ರಿಗಳ ಈ ಗೀತೆಯನ್ನು ಕಣಗಾಲ್ ಪ್ರಭಾಕರ ಶಾಸ್ತ್ರಿಗಳು ಒಂದಷ್ಟು ಬದಲಾವಣೆಯಿಂದ ಚಿತ್ರಗೀತೆಯಾಗಿ ಅಳವಡಿಸಿದ್ದರು. ಈ ಹಾಡು ನಮ್ಮ ನಿಮ್ಮೆಲ್ಲರ ಪ್ರೈಮರಿ ಶಾಲೆಯ ಮಗ್ಗಿ ಪುಸ್ತಕದ ಮೊದಲ ಪುಟದ ಪ್ರಾರ್ಥನಾ ಗೀತೆ ಯಾಗಿ ಸೇರಿಕೊಂಡು ಸಿನಿಮಾ ಹಾಡೆಂಬ ಪ್ರತ್ಯೇಕತೆಯ ರಿಯಾಯಿತಿಯಿಲ್ಲದಂತೆ ನಮ್ಮಲ್ಲಿ ಉತ್ಸಾಹ ತರುವ ಪ್ರಾರ್ಥನೆಯೇ ಆಗಿ ಹೋಗಿತ್ತು. ಇಂದೂ ಬಹಳಷ್ಟು ಶಾಲೆಗಳು ಇದನ್ನು ಪ್ರಾರ್ಥಣೆಯಾಗಿ ಬಳಸುತ್ತಿವೆ. ‘ಸ್ಕೂಲ್‌ಮಾಸ್ಟರ್’ ಚಿತ್ರದಲ್ಲಿ ಮೇಷ್ಟ್ರರಾಗಿ ಸ್ವತಃ ಪಂತುಲುರವರ ಮನೋಜ್ಞ ಅಭಿನಯ-ಹಾವಭಾವ ಅಪ್ರತಿಮವಾದದ್ದು. ಮೇಷ್ಟ್ರರ ಹೆಂಡತಿಯಾಗಿ ಅವರ ನಿಜ ಜೀವನದ ಪತ್ನಿಯೂ ಆಗಿದ್ದ ಎಂ.ವಿ. ರಾಜಮ್ಮನವರು ಪಂತುಲುವಿಗೆ ತಕ್ಕಂತೆ ಅಭಿನಯಿಸಿದ್ದರು.
ರತ್ನಗಿರಿ ರಹಸ್ಯ, ಸ್ಕೂಲ್ ಮಾಸ್ಟರ್, ಮಕ್ಕಳ ರಾಜ್ಯ, ಕಿತ್ತೂರು ಚೆನ್ನಮ್ಮ, ಗಾಳಿಗೋಪುರ, ಸಾಕು ಮಗಳು, ಚಿನ್ನದ ಗೊಂಬೆ, ದುಡ್ಡೇ ದೊಡ್ಡಪ್ಪ, ಎಮ್ಮೆ ತಮ್ಮಣ್ಣ, ಗಂಗೆ ಗೌರಿ, ಬೀದಿ ಬಸವಣ್ಣ, ಚಿನ್ನಾರಿ ಪುಟ್ಟಣ್ಣ, ಅಮ್ಮ, ಗಂಡೊಂದು ಹೆಣ್ಣಾರು, ಶ್ರೀ ಕೃಷ್ಣದೇವರಾಯ, ಅಳಿಯ ಗೆಳೆಯ, ಮಾಲತಿ ಮಾಧವ, ಒಂದು ಹೆಣ್ಣಿನ ಕಥೆ ಮುಂತಾದವು ಪಂತುಲು ಅವರ ಕನ್ನಡ ಚಿತ್ರಗಳಾದರೆ, ಕರ್ಣ, ಅಮರ್ ಶಹೀದ್, ವೀರ ಪಾಂಡ್ಯ ಕಟ್ಟಬೊಮ್ಮನ್, ದಶಾವತಾರ ಪಂತುಲು ಅವರು ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ನಿರ್ಮಿಸಿ ನಿರ್ದೇಶಿಸಿದ ಕೆಲವು ಚಿತ್ರಗಳು. ಈ ಮಹಾನ್ ಚೇತನಕ್ಕೆ ನಮ್ಮ ಹೃತ್ಪೂರ್ವಕ ನಮನಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಸಿನಿ ಸುದ್ದಿ
ಅಭಿಮಾನಿಗಳ ಸಂಭ್ರಮದಿಂದ ದೂರ ಕಿಚ್ಚನ ಬರ್ತ್ಡೇ; 53ನೇ ವಸಂತದಲ್ಲಿ ಸುದೀಪ್ ಸಿನಿಮಾ ಸರ್ಪ್ರೈಸ್ಗೆ ಕೌಂಟ್ಡೌನ್!
ಸುದ್ದಿದಿನ,ಬೆಂಗಳೂರು: ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಇಂದು, ಸೆಪ್ಟೆಂಬರ್ 2, ವಿಶೇಷ ದಿನ. 53ನೇ ವಸಂತಕ್ಕೆ ಕಾಲಿಡುತ್ತಿರುವ ಸುದೀಪ್, ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಸೆ.2ರಂದು ಮನೆ ಬಳಿ ಅಭಿಮಾನಿಗಳು ಯಾರೂ ಬರಬಾರದು ಎಂದು ಸುದೀಪ್ ಈಗಾಗಲೇ ಮನವಿ ಮಾಡಿದ್ದರು. ಹೀಗಾಗಿ ಪ್ರತಿ ವರ್ಷ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದ ಕಿಚ್ಚನ ಬರ್ತ್ಡೇ ಈ ಬಾರಿ ವಿಭಿನ್ನವಾಗಿದೆ.
ಆದರೆ, ಅಭಿಮಾನಿಗಳಿಗೆ ನಿರಾಸೆಯಾಗದಂತೆ ಸಿನಿಮಾ ವಿಚಾರದಲ್ಲಿ ಭರ್ಜರಿ ಸರ್ಪ್ರೈಸ್ ಸಿಗುವ ನಿರೀಕ್ಷೆ ಮೂಡಿದೆ. ಹುಟ್ಟುಹಬ್ಬದ ಸಂದರ್ಭದಲ್ಲೇ ಕಿಚ್ಚನ ಮುಂಬರುವ ಸಿನಿಮಾಗಳ ಕುರಿತು ಮಹತ್ವದ ಅಪ್ಡೇಟ್ಗಳು ಹೊರಬರುವ ಸಾಧ್ಯತೆ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
http://Visit : www.suddidina.com
53ನೇ ವಸಂತ, 30 ವರ್ಷದ ಸಿನಿ ಪಯಣ
ಕಿಚ್ಚ ಸುದೀಪ್ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರು, 1997ರಲ್ಲಿ ಬಿಡುಗಡೆಯಾದ ‘ತಾಯವ್ವ’ ಚಿತ್ರದ ಮೂಲಕ ಸಿನಿಮಾ ಪಯಣ ಆರಂಭಿಸಿದ್ದರು. ಇದೀಗ ಚಿತ್ರರಂಗದಲ್ಲಿ ಮೂರು ದಶಕಗಳ ಪಯಣ ಪೂರ್ಣಗೊಳಿಸಿರುವುದು ಈ ಹುಟ್ಟುಹಬ್ಬದ ಮತ್ತೊಂದು ವಿಶೇಷ.
ನಟನೆಯ ಜೊತೆಗೆ ನಿರ್ದೇಶನ, ನಿರ್ಮಾಣ ಹಾಗೂ ಕಿರುತೆರೆಯಲ್ಲಿಯೂ ಸುದೀಪ್ ತಮ್ಮದೇ ಗುರುತು ಮೂಡಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದ ನಿರೂಪಕರಾಗಿ ಸತತವಾಗಿ ಮುಂದುವರಿದಿರುವುದು ಅವರ ಜನಪ್ರಿಯತೆಗೆ ಮತ್ತೊಂದು ಸಾಕ್ಷಿಯಾಗಿದೆ.
View this post on Instagram
‘ಬಿಲ್ಲ ರಂಗ ಭಾಷಾ’ ಮೇಲೆ ಹೆಚ್ಚಿದ ನಿರೀಕ್ಷೆ
‘ವಿಕ್ರಾಂತ್ ರೋಣ’ ಬಳಿಕ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಸುದೀಪ್ ಮತ್ತೊಮ್ಮೆ ‘ಬಿಲ್ಲ ರಂಗ ಭಾಷಾ’ ಮೂಲಕ ಒಂದಾಗಿದ್ದಾರೆ. ಈಗಾಗಲೇ ಚಿತ್ರದ ಲುಕ್ ಅಭಿಮಾನಿಗಳ ಗಮನ ಸೆಳೆದಿದ್ದು, ಮಾಸ್ ಅವತಾರದಲ್ಲಿ ಕಿಚ್ಚ ಕಾಣಿಸಿಕೊಂಡಿರುವುದು ನಿರೀಕ್ಷೆ ಹೆಚ್ಚಿಸಿದೆ.
ಚಿತ್ರದ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಕೂಡ ಉತ್ಸಾಹ ವ್ಯಕ್ತಪಡಿಸಿದ್ದು, ಸುದೀಪ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಸಿನಿಮಾಗೆ ಸಂಬಂಧಿಸಿದ ಹೊಸ ಅಪ್ಡೇಟ್ ಸಿಗುವ ಸಾಧ್ಯತೆ ಇದೆ. ಸಿನಿಮಾ 2027ರಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.
4 ಸಿನಿಮಾಗಳ ಸದ್ದು?
2024ರಲ್ಲಿ ‘ಮ್ಯಾಕ್ಸ್’ ಬಿಡುಗಡೆಯಾದ ಬಳಿಕ ಸುದೀಪ್ ಅವರ ಹೊಸ ಸಿನಿಮಾ ತೆರೆಗೆ ಬಂದಿಲ್ಲ. ಇದೀಗ ಒಂದೇ ಬಾರಿ ನಾಲ್ಕು ಸಿನಿಮಾಗಳ ಕುರಿತಂತೆ ಘೋಷಣೆ ಅಥವಾ ಅಪ್ಡೇಟ್ ಸಿಗಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಈ ಮೂಲಕ ಬರ್ತ್ಡೇ ಸಂಭ್ರಮದಿಂದ ದೂರವಿದ್ದರೂ, ಸಿನಿಮಾ ಸುದ್ದಿಗಳ ಮೂಲಕ ಕಿಚ್ಚ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲಿದ್ದಾರೆ.
ಸೆ.6ಕ್ಕೆ ಮತ್ತೆ ಟಿವಿ ಪರದೆ ಮೇಲೆ ಕಿಚ್ಚ
ಸಿನಿಮಾ ಮಾತ್ರವಲ್ಲದೆ ಕಿರುತೆರೆಯಲ್ಲೂ ಕಿಚ್ಚನ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ಗ್ರ್ಯಾಂಡ್ ಪ್ರೀಮಿಯರ್ ಸೆಪ್ಟೆಂಬರ್ 6ರಂದು ನಡೆಯಲಿದ್ದು, ಮತ್ತೊಮ್ಮೆ ಸುದೀಪ್ ನಿರೂಪಕರಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಹೀಗಾಗಿ 53ನೇ ಹುಟ್ಟುಹಬ್ಬ, 30 ವರ್ಷದ ಸಿನಿ ಪಯಣ, ಹೊಸ ಸಿನಿಮಾಗಳ ನಿರೀಕ್ಷೆ ಹಾಗೂ ‘ಬಿಗ್ ಬಾಸ್’ ಎಂಟ್ರಿ—ಈ ಬಾರಿ ಕಿಚ್ಚನ ಬರ್ತ್ಡೇಗೆ ವಿಶೇಷ ಅರ್ಥ ಸಿಕ್ಕಿದೆ.

ದಿನದ ಸುದ್ದಿ
Bigg Boss Kannada 13: ಹೊಸ ಥೀಮ್, ಹೊಸ ಸ್ಪರ್ಧಿಗಳು, 24×7 ಲೈವ್; ಕಿಚ್ಚ ಸುದೀಪ್ ಸಾರಥ್ಯದ ಬಿಗ್ಬಾಸ್ ಕನ್ನಡ 13ರ ವಿಶೇಷತೆಗಳೇನು?
ಸುದ್ದಿದಿನ,ಬೆಂಗಳೂರು: ಅಂತೂ ಇಂತೂ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ **‘ಬಿಗ್ಬಾಸ್ ಕನ್ನಡ ಸೀಸನ್ 13’**ಗೆ ಅಧಿಕೃತ ಚಾಲನೆ ಸಿಗುವ ಸಮಯ ಬಂದಿದೆ. ಈಗಾಗಲೇ ‘ಬಿಗ್ಬಾಸ್ ಅಗ್ನಿಪರೀಕ್ಷೆ’ ಮೂಲಕ ಕುತೂಹಲ ಹೆಚ್ಚಿಸಿರುವ ಕಾರ್ಯಕ್ರಮದ ಟಿವಿ ಸೀಸನ್ ಸೆಪ್ಟೆಂಬರ್ 6ರಿಂದ ಆರಂಭವಾಗಲಿದೆ. ಹೊಸ ಸೀಸನ್ನಲ್ಲಿ ಮನೆ, ಥೀಮ್, ಸ್ಪರ್ಧಿಗಳ ಆಯ್ಕೆ ಹಾಗೂ ವೀಕ್ಷಣಾ ಅನುಭವದಲ್ಲೂ ಹಲವು ವಿಶೇಷತೆಗಳನ್ನು ಪರಿಚಯಿಸಲಾಗುತ್ತಿದೆ.
ಕಳೆದ 12 ಸೀಸನ್ಗಳಂತೆ ಈ ಬಾರಿಯೂ ಕಿಚ್ಚ ಸುದೀಪ್ ಕಾರ್ಯಕ್ರಮದ ನಿರೂಪಕರಾಗಿ ಮುಂದುವರಿಯಲಿದ್ದಾರೆ. ಸತತ 13 ಸೀಸನ್ಗಳನ್ನು ನಿರೂಪಣೆ ಮಾಡುತ್ತಿರುವುದು ಬಿಗ್ಬಾಸ್ ಇತಿಹಾಸದಲ್ಲೇ ಗಮನಾರ್ಹ ದಾಖಲೆಯಾಗಿದೆ.
ಹೈಲೈಟ್ಸ್: ಸೆಪ್ಟೆಂಬರ್ 6ರಿಂದ ಬಿಗ್ಬಾಸ್ ಹವಾ |
|
http://Visit : www.suddidina.com
ಈ ಬಾರಿ ‘Flight’ ಥೀಮ್ ಏಕೆ ವಿಶೇಷ?
ಕಳೆದ ಸೀಸನ್ನಲ್ಲಿ ವೀಕ್ಷಕರು ಅರಮನೆ ಮಾದರಿಯ ಬಿಗ್ಬಾಸ್ ಮನೆಯನ್ನು ಕಂಡಿದ್ದರು. ಆದರೆ ಈ ಬಾರಿ ಇಡೀ ಕಾರ್ಯಕ್ರಮದ ಕಲ್ಪನೆಯೇ ಬದಲಾಗಿದೆ. ‘Flight’ ಥೀಮ್ ಆಧಾರಿತವಾಗಿ ಸೀಸನ್ 13 ರೂಪಿಸಲಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋದಲ್ಲೂ ಇದರ ಝಲಕ್ ಕಾಣಿಸಿಕೊಂಡಿದೆ.
ವಿಶೇಷವೆಂದರೆ ಫ್ಲೈಟ್ ಥೀಮ್ ಕೇವಲ ಪ್ರೋಮೋಗೆ ಸೀಮಿತವಾಗಿಲ್ಲ. ಬಿಗ್ಬಾಸ್ ಮನೆಯ ವಿನ್ಯಾಸದಲ್ಲೂ ಇದೇ ಪರಿಕಲ್ಪನೆಯನ್ನು ಬಳಸಲಾಗಿದೆ. ಹೀಗಾಗಿ ಈ ಬಾರಿ ಮನೆ ಹೇಗೆ ಕಾಣಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಸೆಲೆಬ್ರಿಟಿಗಳ ಜತೆಗೆ ಕಾಮನ್ ಮ್ಯಾನ್ ಎಂಟ್ರಿ
ಬಿಗ್ಬಾಸ್ ಕನ್ನಡದ ಪ್ರತಿ ಸೀಸನ್ನಲ್ಲೂ ಸ್ಪರ್ಧಿಗಳ ಆಯ್ಕೆ ಪ್ರಮುಖ ಆಕರ್ಷಣೆಯಾಗಿರುತ್ತದೆ. ಈ ಬಾರಿ ಸೆಲೆಬ್ರಿಟಿಗಳ ಜತೆಗೆ ಸಾಮಾನ್ಯ ಜನರಿಗೂ ಅವಕಾಶ ಕಲ್ಪಿಸಲಾಗುತ್ತಿದೆ.
‘ಬಿಗ್ಬಾಸ್ ಅಗ್ನಿಪರೀಕ್ಷೆ’ ಮೂಲಕ ಆಯ್ಕೆಯಾಗುವ ಮೂವರು ಸಾಮಾನ್ಯ ಸ್ಪರ್ಧಿಗಳು ಸೀಸನ್ 13ರ ಮನೆಗೆ ಪ್ರವೇಶಿಸಲಿದ್ದಾರೆ. ಇದರಿಂದ ಮನೆಯಲ್ಲಿ ವಿಭಿನ್ನ ಹಿನ್ನೆಲೆಯ ವ್ಯಕ್ತಿಗಳ ನಡುವಿನ ಸಂವಹನ, ಅಭಿಪ್ರಾಯ ಭೇದ ಹಾಗೂ ಹೊಸ ರೀತಿಯ ಸ್ಪರ್ಧೆ ಮೂಡುವ ನಿರೀಕ್ಷೆಯಿದೆ.
ಮನೆಯ ಪ್ರತಿಕ್ಷಣವೂ 24×7 ಲೈವ್
ಈ ಬಾರಿ ವೀಕ್ಷಕರಿಗೆ ಮತ್ತೊಂದು ದೊಡ್ಡ ಸೌಲಭ್ಯ ಸಿಗಲಿದೆ. ಟಿವಿ ಎಪಿಸೋಡ್ಗಳಿಗೆ ಮಾತ್ರ ಸೀಮಿತವಾಗದೆ, ಜಿಯೋಹಾಟ್ಸ್ಟಾರ್ನಲ್ಲಿ ಬಿಗ್ಬಾಸ್ ಮನೆಯ 24×7 ಲೈವ್ ವೀಕ್ಷಣೆ ಲಭ್ಯವಿರಲಿದೆ.
ಅಂದರೆ ದಿನದ ಎಪಿಸೋಡ್ನಲ್ಲಿ ಪ್ರಸಾರವಾಗದ ಮನೆಯೊಳಗಿನ ಹಲವು ಬೆಳವಣಿಗೆಗಳನ್ನೂ ವೀಕ್ಷಕರು ಗಮನಿಸಬಹುದು. ಸ್ಪರ್ಧಿಗಳ ನಡುವಿನ ಮಾತುಕತೆ, ಚಟುವಟಿಕೆಗಳು ಹಾಗೂ ಅನಿರೀಕ್ಷಿತ ಘಟನೆಗಳನ್ನು ಇನ್ನಷ್ಟು ಹತ್ತಿರದಿಂದ ನೋಡುವ ಅವಕಾಶ ಸಿಗಲಿದೆ.
ಪ್ರಸಾರದ ಸಮಯವೂ ಫಿಕ್ಸ್
ಸೆಪ್ಟೆಂಬರ್ 6ರಂದು ಸಂಜೆ 7 ಗಂಟೆಗೆ ಗ್ರ್ಯಾಂಡ್ ಪ್ರೀಮಿಯರ್ ಪ್ರಸಾರವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30ಕ್ಕೆ ಹೊಸ ಸಂಚಿಕೆಗಳು ಪ್ರಸಾರವಾಗಲಿವೆ.
ಇನ್ನು ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ನಡೆಸಿಕೊಡುವ ಶನಿವಾರ ಮತ್ತು ಭಾನುವಾರದ ವಿಶೇಷ ಸಂಚಿಕೆಗಳು ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿವೆ.
ಬಿಗ್ಬಾಸ್ ಪ್ರಯಾಣ ಯಾವ ದಿಕ್ಕಿಗೆ?
ಫ್ಲೈಟ್ ಥೀಮ್, ಹೊಸ ಮುಖಗಳು, ಸಾಮಾನ್ಯ ಸ್ಪರ್ಧಿಗಳ ಪ್ರವೇಶ ಮತ್ತು 24×7 ಲೈವ್ ವೀಕ್ಷಣೆಯೊಂದಿಗೆ ಸೀಸನ್ 13 ಕುತೂಹಲ ಮೂಡಿಸಿದೆ. ಈ ‘ಫ್ಲೈಟ್’ನಲ್ಲಿ ಯಾರು ಟೇಕಾಫ್ ಆಗುತ್ತಾರೆ, ಯಾರು ಮಧ್ಯದಲ್ಲೇ ಎಲಿಮಿನೇಟ್ ಆಗುತ್ತಾರೆ ಮತ್ತು ಕೊನೆಯವರೆಗೂ ಯಾರು ಪ್ರಯಾಣ ಮುಂದುವರಿಸುತ್ತಾರೆ ಎಂಬುದೇ ಮುಂದಿನ ದಿನಗಳ ಪ್ರಮುಖ ಪ್ರಶ್ನೆ.

ದಿನದ ಸುದ್ದಿ
Bigg Boss Agniparikshé: ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಿಂದ ಕುಮಾರಿ ಎಕ್ಸಿಟ್; ಆಟ ಮುಗಿದರೂ ಭವಿಷ್ಯಕ್ಕೆ ಸಿಕ್ಕಿತು ದೊಡ್ಡ ಗಿಫ್ಟ್
ಸುದ್ದಿದಿನ,ಬೆಂಗಳೂರು: ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ರಿಯಾಲಿಟಿ ಶೋನಲ್ಲಿ ತಮ್ಮ ಸರಳತೆ, ಮುಗ್ಧತೆ ಹಾಗೂ ಸಹಜ ವರ್ತನೆಯಿಂದ ವೀಕ್ಷಕರ ಗಮನ ಸೆಳೆದಿದ್ದ ನಂಜನಗೂಡಿನ ಕುಮಾರಿ ಇದೀಗ ಅನಾರೋಗ್ಯದ ಕಾರಣದಿಂದ ಕಾರ್ಯಕ್ರಮದಿಂದ ಅರ್ಧಕ್ಕೆ ನಿರ್ಗಮಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕುಮಾರಿ, ವೈದ್ಯರ ಸಲಹೆಯಂತೆ ಆಟವನ್ನು ಮುಂದುವರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಶೋನಿಂದ ಹೊರಬಂದಿದ್ದಾರೆ.
ಕಳೆದ ಕೆಲವು ಸಂಚಿಕೆಗಳಲ್ಲಿ ಕುಮಾರಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿತ್ತು. ಅವರು ಯಾಕೆ ಕಾರ್ಯಕ್ರಮದಲ್ಲಿ ಕಾಣಿಸುತ್ತಿಲ್ಲ ಎಂಬ ಪ್ರಶ್ನೆಯೂ ಚರ್ಚೆಗೆ ಬಂದಿತ್ತು. ಇದೇ ಸಂದರ್ಭದಲ್ಲಿ ಮತ್ತೊಬ್ಬ ಸ್ಪರ್ಧಿ ಪೂರ್ಣಿಮಾ, ತಮ್ಮನ್ನು ಕಳುಹಿಸಿ ಕುಮಾರಿಯನ್ನು ಕರೆತರಲಾಗುತ್ತಿದೆ ಎಂದು ಆರೋಪಿಸಿದ್ದರು. ಇದೀಗ ಕುಮಾರಿ ಶೋನಿಂದ ದೂರ ಉಳಿದಿರುವ ನಿಜವಾದ ಕಾರಣ ಅನಾರೋಗ್ಯ ಎಂಬುದು ಸ್ಪಷ್ಟವಾಗಿದೆ.
http://Visit : www.suddidina.com
ಆಟ ಅರ್ಧಕ್ಕೆ ನಿಂತರೂ ಸಿಕ್ಕಿತು ₹5 ಲಕ್ಷ!
ಕುಮಾರಿಯ ಬಿಗ್ ಬಾಸ್ ಪಯಣ ಅರ್ಧಕ್ಕೆ ಅಂತ್ಯಗೊಂಡಿದ್ದರೂ, ಕಾರ್ಯಕ್ರಮದ ವೇದಿಕೆ ಅವರಿಗೆ ನಿರೀಕ್ಷೆಗೂ ಮೀರಿದ ನೆರವು ನೀಡಿದೆ. ಕಾರ್ಯಕ್ರಮದ ಪ್ರಾಯೋಜಕರಾದ ಇಕೋ ಪ್ಲ್ಯಾನೆಟ್ ಎಲಿವೇಟರ್ ಸಂಸ್ಥೆ ಕುಮಾರಿಗೆ ಬರೋಬ್ಬರಿ ₹5 ಲಕ್ಷ ನಗದು ನೆರವು ನೀಡಿದೆ.
ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಕುಮಾರಿಗೆ ಈ ಹಣ ದೊಡ್ಡ ಆರ್ಥಿಕ ಆಸರೆಯಾಗುವ ನಿರೀಕ್ಷೆಯಿದೆ. ವಿಶೇಷವಾಗಿ ಕುಟುಂಬದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯ ಚಿಕಿತ್ಸೆಗೆ ಈ ಹಣ ನೆರವಾಗಬಹುದು ಎಂಬ ನಿರೀಕ್ಷೆಯೂ ಇದೆ.
ಶಿಕ್ಷಣದ ಬಳಿಕ ಉದ್ಯೋಗಕ್ಕೂ ಭರವಸೆ
₹5 ಲಕ್ಷ ನೆರವಿನ ಜತೆಗೆ ಕುಮಾರಿಗೆ ಮತ್ತೊಂದು ಮಹತ್ವದ ಅವಕಾಶವನ್ನು ಸಂಸ್ಥೆ ಘೋಷಿಸಿದೆ. ಅವರು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ ಕರ್ನಾಟಕದಲ್ಲಿರುವ ಸಂಸ್ಥೆಯ ಯಾವುದೇ ಶಾಖೆಯಲ್ಲಿ ಅಥವಾ ದುಬೈನಲ್ಲಿರುವ ಶಾಖೆಯಲ್ಲಿ ಉದ್ಯೋಗ ಪಡೆಯುವ ಅವಕಾಶ ನೀಡಲಾಗಿದೆ.
ಇದು ಕುಮಾರಿಯ ಭವಿಷ್ಯಕ್ಕೆ ಹೊಸ ದಿಕ್ಕು ನೀಡುವ ಘೋಷಣೆಯಾಗಿದೆ. ರಿಯಾಲಿಟಿ ಶೋನಿಂದ ಸಿಕ್ಕ ಜನಪ್ರಿಯತೆಯ ಜತೆಗೆ ಇದೀಗ ಶಿಕ್ಷಣ ಮತ್ತು ಉದ್ಯೋಗದ ಮೂಲಕ ಸ್ವಾವಲಂಬನೆಯತ್ತ ಹೆಜ್ಜೆ ಇಡುವ ಅವಕಾಶವೂ ದೊರೆತಿದೆ.
ಭಾವುಕ ವಿದಾಯ, ಹೊಸ ಬದುಕಿನ ಭರವಸೆ
ಹಳ್ಳಿಯಿಂದ ಬಂದ ಕುಮಾರಿಗೆ ಬೆಂಗಳೂರನ್ನು ನೋಡುವ ಅವಕಾಶದಿಂದ ಹಿಡಿದು ದೊಡ್ಡ ರಿಯಾಲಿಟಿ ಶೋ ವೇದಿಕೆಯಲ್ಲಿ ಸ್ಪರ್ಧಿಸುವವರೆಗೆ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಹಲವು ಹೊಸ ಅನುಭವಗಳನ್ನು ನೀಡಿದೆ. ಶೋನಿಂದ ನಿರ್ಗಮಿಸುವ ಸಂದರ್ಭದಲ್ಲಿ ಕುಮಾರಿ ಸೇರಿದಂತೆ ಇತರ ಸ್ಪರ್ಧಿಗಳು ಭಾವುಕರಾದರು.
ಸ್ಪರ್ಧೆಯಲ್ಲಿ ಮುಂದುವರಿಯಲು ಸಾಧ್ಯವಾಗದ ನೋವಿನ ನಡುವೆಯೂ, ಇಷ್ಟು ದೊಡ್ಡ ವೇದಿಕೆಯಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಕುಮಾರಿ ಸಂತಸ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯದಿಂದಾಗಿ ಅವರ ಆಟ ಅಂತ್ಯಗೊಂಡಿದ್ದರೂ, ₹5 ಲಕ್ಷ ನೆರವು ಮತ್ತು ಭವಿಷ್ಯದ ಉದ್ಯೋಗದ ಭರವಸೆ ಕುಮಾರಿಯ ಜೀವನದಲ್ಲಿ ಹೊಸ ಅಧ್ಯಾಯಕ್ಕೆ ಕಾರಣವಾಗುವ ಸಾಧ್ಯತೆಯಿದೆ.
ಹೀಗಾಗಿ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಲ್ಲಿ ಕುಮಾರಿಯ ಆಟ ಅರ್ಧಕ್ಕೆ ನಿಂತಿದ್ದರೂ, ಕಾರ್ಯಕ್ರಮದ ವೇದಿಕೆಯಿಂದ ಸಿಕ್ಕ ಬೆಂಬಲ ಅವರ ಮುಂದಿನ ಬದುಕಿಗೆ ಮಹತ್ವದ ತಿರುವು ನೀಡಿದೆ.

-
ದಿನದ ಸುದ್ದಿ2 days agoಬರ ನಿರ್ವಹಣೆಗೆ ಸಚಿವ ಸಂಪುಟ ಉಪಸಮಿತಿ ಸಭೆ – ದಾವಣಗೆರೆಯಲ್ಲಿ ಕುಡಿಯುವ ನೀರು, ಮೇವು ಕೊರತೆ ಬಗ್ಗೆ ಸಚಿವ ಮಲ್ಲಿಕಾರ್ಜುನ್ ಪ್ರಸ್ತಾಪ
-
ದಿನದ ಸುದ್ದಿ2 days agoಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು
-
ದಿನದ ಸುದ್ದಿ2 days agoರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!
-
ದಿನದ ಸುದ್ದಿ2 days agoಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!
-
ದಿನದ ಸುದ್ದಿ2 days ago5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
-
ದಿನದ ಸುದ್ದಿ2 days agoಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
-
ದಿನದ ಸುದ್ದಿ2 days agoಭದ್ರೆ ಆಗಮನದಿಂದ ರೈತರಲ್ಲಿ ಹೊಸ ಭರವಸೆ – ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ
-
ದಿನದ ಸುದ್ದಿ2 days agoವಿಶೇಷ ಚೇತನ ಮಕ್ಕಳು ದೇವರ ಮಕ್ಕಳು – ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್


