ಸಿನಿ ಸುದ್ದಿ
EXCLUSIVE INTERVIEW | ‘ಶಬ್ಧ ಗಾರುಡಿಗ ಟಗರು ಮಾಸ್ತಿ’ ಮನದಾಳ

” ಚಿಟ್ಟೆ…ಅಂಕಲ್ ನಾ ಹೊಡಿತೀನಿ…ಹೇ ಬಿಡು ಸುಬ್ಬಿ…ಬೆಳಗ್ಗೆ ಹಾಲು ತುಪ್ಪ ಬಿಡೋದ್ರೊಳಗೆ ಅಂಕಲ್ ನಾ ಹೊಡಿತೀನಿ; ಅಂಕಲ್ ನಾ ಹೊಡಿತೀನಿ”. ” ನಿಂದು ಒಂದ್ ಜನ್ಮ, ನಿಮ್ಗೂ ಒಂದ್ ಜನ್ಮದಿನ ಬೇರೆ ಕೇಡು”. ” ಮೀಸೆ, ಗಡ್ಡ, ಬಿಟ್ಟೋರ್ನೆಲ್ಲ ಗಂಡ್ಸು ಅನ್ನೋದಾದ್ರೆ ಕರಡಿ ಎಲ್ಲಕ್ಕಿಂತ ದೊಡ್ ಗಂಡ್ಸು”. ” ನಾವು ಮ್ಯಾಚ್ನಲ್ಲಿ ಸೋಲಲ್ಲ, ಅಕಸ್ಮಾತ್ ಸೋತ್ರೂ..ಮ್ಯಾನ್ ಆಫ್ ದಿ ಮ್ಯಾಚ್ ನಮ್ದೆ”. ಸುಕ್ಕಾ ಸೂರಿಯವರ ‘ಟಗರು’ ಸಿನೆಮಾದ ಇಂಥ ಸಂಭಾಷಣೆಯ ಜಂಗಮ ಭಾವ, ನೋಡುಗನ ಎದೆಯಲ್ಲಿ ಸ್ಥಾವರಗೊಳ್ಳುವಂತೆ ಮಾಡಿ, ತಮ್ಮ ರೋಚಕ, ರಂಜನೀಯ, ಕಿಲಾಡಿತನದ ಮಾತುಗಳ ಮೂಲಕ ಕನ್ನಡಿಗರ ಮನೆಮಾತಾಗಿದ್ದಾರೆ ಸಂಭಾಷಣಾಕಾರ ಮಂಜು ಮಾಸ್ತಿ. ಇವರು ಮಾಸ್ತಿ ಎಂತಲೇ ಚಂದನವನದಲ್ಲಿ ಚಿರಪರಿಚಿತ.
‘ಶಬ್ದದೊಳಗೆ ನಿಶ್ಯಬ್ದ ; ನಿಶ್ಯಬ್ದದೊಳಗೆ ಶಬ್ದ’ ಹುಡುಕುತ್ತಾ..ಕತೆಗಾರನಾಗಿ, ಸಂಭಾಷಣಾಕಾರನಾಗಿ, ನಟನಾಗಿ, ಒಬ್ಬ ಒಳ್ಳೆಯ ಓದುಗನಾಗಿ ಎಲ್ಲರ ಚಿತ್ತ ತನ್ನತ್ತ ಹೇಗೆ ಸೆಳೆಯ ಬೇಕು ಎಂಬ ಚಾಲಾಕಿತನದ ಶಬ್ದಮಾಂತ್ರಿಕ ಮಾಸ್ತಿ ಅವರು, ನಿಜಕ್ಕೂ ಒಬ್ಬ ಬರಹಗಾರ ತಮ್ಮ ಬರವಣಿಗೆಯನ್ನ ಪಾಲಿಶ್ ಮಾಡಿಕೊಳ್ಳ ಬೇಕಾದಾಗ, ತಾನು ಬದುಕುತ್ತಿರುವ ಸಮಾಜದೊಟ್ಟಿಗೆ ಹೇಗೆಲ್ಲಾ ಸಂಪರ್ಕವಿಟ್ಟುಕೊಳ್ಳಬೇಕು, ದೈನಂದಿನ ಜೀವನದ ಸಂಗತಿಗಳನ್ನು ತನ್ನ ಕುತೂಹಲದ ಕಣ್ಣಿನ್ನಿಂದ ಹೇಗೆಲ್ಲಾ ನೋಡ ಬಹುದು ಎಂಬುದಕ್ಕೆ ಟಗರು ಸಿನೆಮಾದ ಸಂಭಾಷಣೆಯೇ ಸಾಕ್ಷಿ. ಶಬ್ದಗಾರುಡಿಗ ನಂತೆ ಕಾಣುವ ಈ ಮಾಸ್ತಿ ನಿಜಕ್ಕೂ ಕನ್ನಡದ ಆಸ್ತಿಯೇ. ಏಕೆಂದರೆ ಇವರೊಳಗಿರುವ ಒಬ್ಬ ಸಹೃದಯನೇ ಇವರನ್ನ ಬೆಳೆಸಿದೆ, ಮುಂದೆಯೂ ಬೆಳೆಸುತ್ತದೆ ಎಂಬುದು ನಮ್ಮ ಮನದ ಸೂಕ್ಷ ಗ್ರಹಿಸಿದ್ದು. ಇಂತಹ ಒಬ್ಬ ‘ಸೂಕ್ಷ್ಮಜ್ಞ’ನೊಂದಿಗೆ ಸುದ್ದಿದಿನ ತನ್ನ ಮಾತು-ಕತೆಯಲ್ಲಿ ಮಾತನಾಡಿಸಿದಾಗ ಅವರು ಎದೆ ತುಂಬಿ ಮಾತನಾಡಿದ್ದಾರೆ. ಅದರ ಅಕ್ಷರ ರೂಪ ಇಲ್ಲಿದೆ.
ಟಗರು ಮಾಸ್ತಿ ಮನದಾಳ
ಬಾಲ್ಯದಿಂದಲೂ ಸಾಹಿತ್ಯದ ಓದು, ಬರವಣಿಗೆಯಲ್ಲಿ ತೊಡಗಿಸಿಕೊಂಡು,ಬರವಣಿಗೆಯಲ್ಲಿಯೇ ಬದುಕು ಕಾಣಬೇಕು ಎಂಬ ಕನಸಿದ್ದರೂ ಅದು ಅಸಾಧ್ಯವೇನೋ ಎಂಬ ಅಪನಂಬಿಕೆ ನನ್ನನ್ನು ಕಾಡಿದ್ದು ಸತ್ಯ. ಆದರೆ ಸಿನೆಮಾರಂಗಕ್ಕೆ ಬಂದಮೇಲೆ ಬರಹಗಾರನಿಗಿರುವ ಶಕ್ತಿ ಎಂಥದ್ದು ಅನ್ನೋದು ನನಗೆ ಮನವರಿಕೆಯಾಗಿದೆ. ಅದರಲ್ಲೂ ಸೂರಿ ಸರ್ ‘ಟಗರು’ ಸಿನೆಮಾ ನನ್ನನ್ನು ಈ ಮಟ್ಟಿಗೆ ಗುರುತಿಸುವಂತೆ ಮಾಡಿದ ಮೇಲಂತೂ ಬರವಣಿಗೆಯೇ ನನ್ನ ಜೀವಾಳ,ಜೀವನ ಆಗಿಬಿಟ್ಟಿದೆ.
ಅಂದಹಾಗೆ ನಾನು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಕೆ.ಉಪ್ಪಾರಹಳ್ಳಿ ಎಂಬ ಗ್ರಾಮದವನು. ನಮ್ಮದು ಮಿಡಲ್ ಕ್ಲಾಸ್ ಫ್ಯಾಮಿಲಿ. ತುಂಬಾ ಕಷ್ಟಗಳ ಜೊತೆಗೆ ಬೆಳೆದವನು. ಆ ಕಷ್ಟಗಳನ್ನೇ ನನ್ನ ಜೀವನೋತ್ಸಾಹವಾಗಿ ಪ್ರೀತಿಯಿಂದ ಬದುಕುತ್ತಾ ಬಂದೆ. ನನ್ನ ಕಡು ಕಷ್ಟಗಳೇ ನನ್ನ ಒಬ್ಬ ಬರಹಗಾರನಾಗಿ ಮಾಡಿದವು ಅಂದ್ರೆ ತಪ್ಪಾಗಲಾರದು. ನನ್ನ ಆ ದಿನಗಳ ‘ನೆನಪಿನ ಬುತ್ತಿ’ ಯನ್ನೇ ಬರವಣಿಯ ಮೂಲವಾಗಿಸಿಕೊಂಡು ಬರೆಯಲು ಹೊರಟೆ. ಪ್ರೈಮರಿ ಶಾಲೆಯಿಂದಲೂ ನಾನು ಬಾಲಮಿತ್ರ, ಚಂದಮಾಮ, ಕಾಮಿಕ್ಸ್ ಬುಕ್, ಜನಪದ ಕತೆಗಳು, ಪಂಚತಂತ್ರ ಕತೆಗಳನ್ನು ನಾನು ಅಚ್ಚುಕಟ್ಟಾಗಿ ಓದಿಕೊಂಡು ಬಂದೆ. ಆ ಕತೆಗಳ ಮೂಲ ಆಶಯ ‘ನೀತಿ’ ಹೇಳುವುದೇ ಆಗಿದ್ದರಿಂದ ಅವು ನನ್ನನ್ನು ಆವಾಹಿಸಿಕೊಂಡು ಬಿಟ್ಟವು. ಹಾಗೇ ಶಾಲೆಯಲ್ಲಿ ಮೇಷ್ಟ್ರುಗಳು ಹೇಳುತ್ತಿದ್ದ ಕತೆಗಳು ನನ್ನನ್ನ ತುಂಬಾ ಕಾಡಿದವು. ನಮ್ಮ ಮೇಷ್ಟುಗಳು ತುಂಬಾ ವಿಶಿಷ್ಟವಾಗಿ ಕತೆಹೇಳುವ ಪರಿಯೇ ನನ್ನ ಕುತೂಹಲವನ್ನು ಕೆರಳಿಸುತ್ತಿದ್ದವು.ನಾನು ಕತೆಗಳನ್ನು ಮಂತ್ರ ಮುಗ್ಧನಾಗಿ ಕೇಳುತ್ತಿದ್ದೆ.
ನಮ್ಮ ಮನೆಯಲ್ಲಿ ಆಗಾಗ ನಮಗೆ ಕಾಸುಕೊಟ್ಟು ಟೆಂಟ್ ಗಳಲ್ಲಿ ಸಿನೆಮಾ ನೋಡಲು ಕಳುಹಿಸುತ್ತಿದ್ದರು. ಟೆಂಟ್ ಒಳಗೆ ಕೂತು ನೋಡುವ ಸಿನೆಮಾಗಳು ನನಗೆ ಮಾಯಾಲೋಕದಂತೆ ಭಾಸವಾಗುತ್ತಿತ್ತು. ಸಿನೆಮಾ ನೋಡಿ ಬಂದಾಗಿನ ಖುಷಿ ಹೇಳಲು ನನಗೆ ಪದಗಳೇ ಸಾಲುತ್ತಿರಲಿಲ್ಲ. ಅಷ್ಟೊಂದು ಆಳವಾಗಿ ಇಳಿದು ಹೋಗಿಬಿಡ್ತಾಇದ್ದೆ ಸಿನೆಮಾಗಳನ್ನ ನೋಡಿ. ಈಗ ವಿದೇಶಕ್ಕೆ ಹೋಗಿಬಂದಾಗ ಆಗುವಂತಹ ಖುಷಿ , ಆಗ ಸಿನೆಮಾ ನೋಡಿದಾಗ ಆಗ್ತಾ ಇತ್ತು. ಸಿನೆಮಾ ಪರದೆಯೊಳಗೆ ಕಾಣುವ ದೃಶ್ಯಗಳು ನನ್ನನ್ನ ಮೈಮರೆಸುತ್ತಿದ್ದವು. ಆಗ ಅಂಥಹ ಸಿನೆಮಾಗಳು ಬರ್ತಾ ಇದ್ವು ಬಿಡಿ (ಈಗಲೂ ಬರ್ತಾ ಇದಾವೆ) . ಹೀಗೆ ಸಿನೆಮಾಗಳು ನನ್ನ ಕಾಡಿದ್ದರಿಂದ ಸಿನೆಮಾವನ್ನ ಆರಾಧಿಸುತ್ತಾ ಬಂದೆ. ಕೆಲವು ನನ್ನ ಸ್ನೇಹಿತರು ಸಿನೆಮಾ ನೋಡಿ ಬಂದು ಅಭಿನಯದ ಮೂಲಕ ರೋಚಕವಾಗಿ ಸಿನೆಮಾ ಕತೆ ಹೇಳ್ತಾ ಇದ್ರು, ಅವರು ಹೇಳೋ ಕತೆಗಳನ್ನ ತದೇಕ ಚಿತ್ತದಿಂದ ಕೇಳ್ತಾ, ನೋಡ್ತಾ ಇದ್ದೆ. ಈ ಸಂಗತಿಗಳೂ ಕೂಡಾ ನನ್ನ ಸಿನೆಮಾ ಮೇಲಿನ ಪ್ರೀತಿಯನ್ನ ಹೆಚ್ಚಿಸ್ತಾ ಬಂದ್ವು. ಜೊತೆಗೆ ಅಪರೂಪಕ್ಕೊಮ್ಮೆ ನನಗೆ ಮನೇಲಿ ಹೊಸ ಪುಸ್ತಕ ಕೊಡಿಸ್ತಾ ಇದ್ರು, ನಾನು ಆ ಪುಸ್ತಕದ ಪುಟಗಳನ್ನ ತಿರುವಿಹಾಕಿ ಹಾಳೆಗಳ ವಾಸನೆಯನ್ನ ಗ್ರಹಿಸ್ತಾ ಇದ್ದೆ. ಬಹುಶಃ ಹಾಳೆಗಳ ಅಕ್ಷರದ ಇಂಕು ಹಾಗೂ ಹಾಳೆಗಳ ಪರಿಮಳವೇ ಕತೆಗಳನ್ನ ಓದಿ ಆಸ್ವಾದಿಸುವ ಹುಚ್ಚು ಬಿಡಿಸಿ ಬಿಟ್ಟವು. ಒಟ್ಟಾರೆ ಕನ್ನಡ ಮೀಡಿಯಂ, ಸರ್ಕಾರಿ ಶಾಲೆಗಳೇ ನನ್ನ ಬರವಣಿಗೆಯ ಶಕ್ತಿ ಎಂದರೆ ಅತಿಶಯೋಕ್ತಿಯಾಗಲಾರದು.
ನಮ್ಮ ಊರಿಗೆ ತೆಲುಗು ಭಾಷೆಯ ಪ್ರಭಾವ ಹೆಚ್ಚು, ನಾನು ಅದರ ಪ್ರಭಾವಕ್ಕೆ ಬಲಿಯಾಗಲಿಲ್ಲ. ತೆಲುಗು ಸಿನೆಮಾಗಳು ತುಂಬಾ ಪ್ರದರ್ಶನ ಕಾಣ್ತಾಇದ್ವು ಆಗ. ತೆಲುಗಿನ ಹಲವು ಸಿನೆಮಾಗಳು ಕ್ರೈಂ ಮತ್ತು ಸೆಕ್ಸ್ ಅನ್ನ ವೈಭವೀಕರಿಸಿ ಸಹಜತೆಯೇ ಕಾಣೆಯಾಗಿದ್ದುದರಿಂದ ನಾನು ಅಂಥಹ ಸಿನೆಮಾಗಳನ್ನು ವಿರೋಧಿಸುತ್ತಾ ಬಂದೆ. ತೆಲುಗಿನ ಅಂತಹ ಸಿನೆಮಾಗಳು ಕನ್ನಡ ಸಿನೆಮಾಗಳ ಮೇಲೂ ಪ್ರಭಾವ ಬೀರಿದವು. ಆದರೆ ಅವ್ಯಾವೂ ಅಷ್ಟು ಹಿಟ್ ಆಗಲಿಲ್ಲ, ಜನರು ಅಂಥಹ ಸಿನೆಮಾಗಳನ್ನ ತಿರಸ್ಕರಿಸಿದ್ರೂ ಕೂಡಾ. ಏಕಂದ್ರೆ ಅವು ನಮ್ಮ ಕನ್ನಡದ ನೆಲಕ್ಕೆ ಒಗ್ಗುವಂತವಲ್ಲ. ನಮ್ಮ ನೆಲದಗುಣವಿರುವ ಕನ್ನಡ ಸಿನೆಮಾಗಳು ಅಮ್ಮ ಮಾಡಿದ ಅಡುಗೆ ತರ, ತುಂಬಾ ರುಚಿ ಹಾಗೂ ದೇಹಕ್ಕೆ ಒಳ್ಳೆಯದು.ಹಾಗಾಗಿ ಕನ್ನಡ ಸಿನೆಮಾರಂಗಕ್ಕೆ ಹೇಗಾದ್ರೂ ಬರಬೇಕು ಅನ್ನೋತುಡಿತ ನನ್ನಲ್ಲಿ ಹೆಚ್ಚಾಗ್ತಾ ಬಂತು. ನನಗೆ ಸಿನೆಮಾದ ಹಿನ್ನೆಲೆಯಿಲ್ಲದಿದ್ದರೂ ನನಗೆ ಸಿನೆಮಾ ಮೇಲಿರುವ ಪ್ರೀತಿಯೇ ನನ್ನ ಸಿನೆಮಾ ಹಿನ್ನೆಲೆ.
ನನ್ನ ಸಿನೆಮಾ ಎಂಟ್ರಿ
ಸಿನೆಮಾದಲ್ಲಿ ಹೇಗಾದರೂ ಕೆಲಸ ಮಾಡ್ಬೇಕು ಅನ್ನೋ ಹಂಬಲದಿಂದ ತುಂಬಾ ಸೈಕಲ್ ಹೊಡೆದೆ. ಆದ್ರೆ ಯಾವ ಅವಕಾಶಗಳೂ ನನಗೆ ದಕ್ಕಲಿಲ್ಲ. ಆದ್ರೆ ಒಮ್ಮೆ ನಮ್ಮ ಮನೆಯ ಹತ್ತಿರದಲ್ಲಿ ತುಷಾರ್ ರಂಗನಾಥ್ (ಗುಲಾಮ, ಕಂಠೀರವ ಸಿನೆಮಾ ನಿರ್ದೇಶಕ) ಸಿನೆಮಾದಲ್ಲಿ ಕೆಲಸ ಮಾಡ್ತಾರೆ ಅಂತ ಗೊತ್ತಿತ್ತು. ಅವರನ್ನ ಹೇಗೋ ಕಷ್ಟಪಟ್ಟು ಪರಿಚಯ ಮಾಡ್ಕೊಂಡೆ. ಈ ಸಮಯದಲ್ಲಿ ಅವರು ಸಾಧುಕೂಕಿಲಾ ನಿರ್ದೇಶನದ, ದರ್ಶನ್ ಅಭಿನಯದ ‘ಸುಂಟರಗಾಳಿ’ ಸಿನೆಮಾಗೆ ಸಹ ನಿರ್ದೇಶಕ ನಾಗಿ ಕೆಲಸ ಮಾಡ್ತಿದ್ರು. ಈ ಸಿನೆಮಾ ‘ಚಿತ್ರಕತೆ’ ಯ ಬಗ್ಗೆ ಚರ್ಚೆ ಮಾಡೋದಿಕ್ಕಾಗಿ ನನ್ನ ಕರ್ಕೊಂಡ್ ಹೋದ್ರು. ಸುಂಟರಗಾಳಿ ಸಿನೆಮಾದಲ್ಲಿ ದರ್ಶನ್ ಅವರು ಹೇಗೆ ಎಂಟ್ರಿ ಆಗ್ಬೇಕು ಅನ್ನೋ ದೃಶ್ಯದ ಬಗ್ಗೆ ಚರ್ಚೆ ನಡೀತಾ ಇತ್ತು, ಆಗ ನನಗೆ ತೋಚಿದ, ಪಕ್ಕಾ ಮಾಸ್ ಆಗಿ ಇರೋ ಒಂದ್ ದೃಶ್ಯಾನ ವಿವರಿಸ್ತಾ ಹೋದೇ, ಆಗ ಎಲ್ರೂ ಖುಷಿಯಿಂದ ಒಪ್ಪೊಂಡ್ರು. ಅವತ್ತೇ ನನ್ನ ಸಿನೆಮಾದ ಎಂಟ್ರಿಯೂ ಆಗೋಯ್ತು. ತುಂಬಾನೆ ಖುಷಿಕೊಡೋ ಸಂಗತಿ ನನಗದು.
ಸೂರಿ – ಭಟ್ಟರ ಸಹವಾಸ
ಸುಂಟರಗಾಳಿ ಸಿನೆಮಾಗೆ ಸೂರಿ ಸರ್ ಕೂಡ ಸಹ ನಿರ್ದೇಶಕರಾಗಿ ಕೆಲಸ ಮಾಡ್ತಿದ್ರು. ತುಷಾರ್ ರಂಗನಾಥ್ ಕಡೆಯಿಂದ ಅವರ ಪರಿಚಯವಾಯ್ತು. ನಂತರ ಅದೇ ಸಮಯದಲ್ಲಿ ಸೂರಿ ಸರ್ ಹಾಗೂ ಯೋಗರಾಜ್ ಭಟ್ ಸರ್ ಬಿ.ಸುರೇಶ್ ಅವರ ನಿರ್ದೇಶನದ ‘ಸಾಧನೆ’ ಎಂಬ ಧಾರಾವಾಹಿಯಲ್ಲಿ ಕೆಲಸ ಮಾಡ್ತಿದ್ರು. ಸಾಧನೆ ಧಾರಾವಾಹಿಯ ಸೆಟ್ ಗೆ ನನ್ನನ್ನೂ ಕೂಡ ಕರೆದುಕೊಂಡು ಹೋಗ್ತಾದ್ರು ತುಷಾರ್ ರಂಗನಾಥ್. ಆಗ ಅವರ ಜೊತೆ ಸಿನೆಮಾಗೆ ಸಂಭಂದಿಸಿದ ವಿಷಯಗಳನ್ನ ಚರ್ಚೆ ಮಾಡ್ತಾ ಅವರೊಳಗೆ ನನ್ನೊಬ್ಬನನ್ನಾಗಿ ಮಾಡ್ಕೊಂಡ್ರು ಸೂರಿ ಸರ್ ಹಾಗೂ ಭಟ್ ಸರ್. ಹಾಗೇ ಇನ್ನೊಂದ್ ವಿಷಯ ಹೇಳಲೇ ಬೇಕು ನಾನು. ಮುಂಗಾರು ಮಳೆ ಸಿನೆಮಾ ಮಾಡಿ ಭಟ್ ಸರ್ ಒಂದ್ ಟ್ರೆಂಡ್ ಸೆಟ್ ಮಾಡಿದ್ರು,ಹಾಗೆ ಸಿನೆಮಾ ಒಳ್ಳೆಯ ಲಾಭವನ್ನ ನಿರ್ಮಾಪಕರಿಗೆ ತಂದು ಕೊಡ್ತು. ಆಗ ಇನ್ಫೋಸಿಸ್ ನ ನಾರಾಯಾಣ ಮೂರ್ತಿಯವರು ಭಟ್ ಸರ್ ಅವರನ್ನ ಕರೆಸಿ ಹೇಳಿದ್ರಂತೆ, ” ಕನ್ನಡದಲ್ಲಿ ಇಂತಹ ಒಂದು ಒಳ್ಳೆಯ ಸಿನೆಮಾ ಕೋಟಿಗಟ್ಟಲೆ ಹಣ ಮಾಡೋದು ಅಂದ್ರೆ ಸುಮ್ನೆ ಮಾತಲ್ಲ, ನಾವು ಏನೆಲ್ಲಾ ಮಾಡ್ತೀವಿ, ಅದ್ರೆ ಒಂದ್ ಸಿನೆಮಾ ಮಾಡಿ ನೀವು ಎಲ್ಲರೀತಿಯಿಂದಲೂ ಯಶಸ್ಸುಗಳಿಸಿದರ ಬಗ್ಗೆ ತುಂಬಾ ಹೆಮ್ಮೆಯಿಂದ ಹೇಳಿದ್ರಂತೆ, ಅಂತಹ ಭಟ್ ಸರ್ ಗೆ ನಾನು ಕತೆ ಹೇಳಿದ್ದು ತುಂಬಾ ಖುಷಿಕೊಡ್ತು. ಅದೇ ಕನ್ನಡಕ್ಕಿರುವ ತಾಕತ್ತು ಅಂತಾನೂ ನಂಗೆ ಅರಿವಾಯ್ತು.
ಕತೆಗಾರನಾಗಿ
ನಾನು ಒಂದಷ್ಟು ಕತೆಗಳನ್ನ ಬರೆದೆ. ಅದರಲ್ಲಿ ಬಾಲ್ ಪೆನ್ ಅನ್ನೋ ಕತೆಯನ್ನ ಪತ್ರಕರ್ತ ರವಿಬೆಳೆಗೆರೆಯವರು ಕೇಳಿ ತುಂಬಾ ಇಷ್ಟ ಪಟ್ರು. ನಂತರ ಅವರ ಮಗಳು, ನಟ ಶ್ರೀನಗರ ಕಿಟ್ಟಿ ಅವರ ಪತ್ನಿ ಭಾವನಾ ಬೆಳಗೆರೆಯವರು ನಿರ್ಮಾಣ ಮಾಡಿದ್ರು. ಸಿನೆಮಾಗೆ ಒಳ್ಳೆಯ ಹೆಸರೂ ಬಂತು. ಹಾಗೆ ತುಂಬಾ ಕತೆಗಳನ್ನ ಬರೆದೆ. ಸಿನೆಮಾಗೆ ಆಗದೇ ಇರೋ ಕತೆಗಳು ಇವೆ. ಅವನ್ನೆಲ್ಲಾ ಸೇರಿಸಿ ಒಂದು ಪುಸ್ತಕ ಮಾಡುವ ಯೋಚನೆಯೂ ಇದೆ. ಸಿನೆಮಾ ಬರವಣಿಗೆಯಲ್ಲಿ ಸಧ್ಯಕ್ಕೆ ಹೆಚ್ಚು ತೊಡಗಿಸಿಕೊಂಡಿರೋದ್ರಿಂದ ಪುಸ್ತಕ ಬರೋದು ಸ್ವಲ್ಪ ತಡವಾಗಬಹುದು.
ಸಂಭಾಷಣಾಕಾರನಾಗಿ
ಸೂರಿ ಸರ್ ನಿರ್ದೇಶನದ ಜಂಗ್ಲಿ, ಜಾಕಿ, ಕೆಂಡಸಂಪಿಗೆ ಸಿನೆಮಾಗಳ ಕತೆ, ಚಿತ್ರಕತೆ ಸಂಭಾಷಣೆಯ ಚರ್ಚೆಗಳಲ್ಲಿ ನನ್ನನ್ನೂ ತೊಡಗಿಸಿಕೊಂಡರು. ನಂತರ ಕಡ್ಡಿ ಪುಡಿ ಸಿನೆಮಾಗೆ ನಾನು ಮತ್ತು ಸೂರಿ ಸರ್ ಸಂಭಾಷಣೆ ಬರೆದ್ವಿ. ಕಡ್ಡಿಪುಡಿ ಸಿನೆಮಾದಲ್ಲಿನ ಸಂಭಾಷಣೆ ಸೂರಿ ಸರ್ ಕೈಚಳಕವೇ ಹೆಚ್ಚು, ಆದ್ರೂ ನನಗೂ ಕ್ರೆಡಿಟ್ ಕೊಟ್ರು ಸೂರಿ ಸರ್. ನಂತರ, ಕಾಲೇಜ್ ಕುಮಾರ್ ಎಂಬ ಸಿನೆಮಾಗೆ ಸಂಭಾಷಣೆ ಬರೆದೆ. ನಂತರ ‘ಟಗರು’ ಸಿನೆಮಾಗೆ ಸಂಭಾಷಣೆ ಬರೆಯುವ ಜವಾಬ್ದಾರಿಯನ್ನ ಕೊಟ್ರು ಸೂರಿ ಸರ್. ಅವರು ನನ್ನ ಮೇಲಿಟ್ಟು ಹೊರಿಸಿದ ಜವಾಬ್ದಾರಿಯನ್ನ ಸ್ಬಲ್ಪ ಮಟ್ಟಿಗೆ ನಿಭಾಯಿಸಿದ್ದೇನೆ ಅನ್ಸುತ್ತೆ. ಯಾಕಂದ್ರೆ ಸೂರಿ ಸರ್ ನನ್ನಿಂದ ಅಷ್ಟು ಕೆಲಸ ತೆಗೆಸಿದ್ರು ಅಂತ ಹೇಳೋಕೆ ನಂಗೆ ಹೆಮ್ಮೆ ಆಗುತ್ತೆ. ಹಾಗೇ ಸೂರಿ ಸರ್ ಮುಂದಿನ ಸಿನೆಮಾ ,’ಪಾಪ್ ಕಾರ್ನ್ ಮಂಕಿ ಟೈಗರ್’ ಸಿನೆಮಾಗೆ ಸಂಭಾಷಣೆ ಬರೆಯೋಕೆ ಮತ್ತೆ ಅವಕಾಶ ಮಾಡಿಕೊಟ್ಟಿದ್ದಾರೆ. ಟಗರು ಸಿನೆಮಾ ನೋಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತೆಲುಗು ಹಾಗೂ ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ‘ಭೈರವ ಗೀತಾ’ ಸಿನೆಮಾಗೆ ಸಂಭಾಷಣೆ (ಕನ್ನಡ ಅವತರಿಣಿಕೆಗೆ) ಬರಯೋದಿಕ್ಕೆ ಅವಕಾಶ ಸಿಕ್ಕಿದೆ. ಅವಕಾಶ ಸಿಕ್ಕಿದ್ದರಲ್ಲಿ ನಟ ಧನಂಜಯ್ ಪಾತ್ರವೂ ದೊಡ್ಡದಿದೆ. ಧನಂಜಯ್ ಗೆ ಒಂದು ಸಲಾಮ್ ಹೇಳಲು ಈ ಸಮಯದಲ್ಲಿ ಇಷ್ಟ ಪಡ್ತೇನೆ. ಇತ್ತೀಚಿಗೆ ಬಿಡುಗಡೆಯಾದ ‘ ಕಟ್ಟುಕತೆ’ ಸಿನೆಮಾಗೂ ಸಂಭಾಷಣೆ ಬರೆದಿದ್ದೇನೆ. ಹಾಗೆ ನೀನಾಸಂ ಸತೀಶ್ ಅಭಿನಯದ ಅಯ್ಯೋಗ್ಯ ಸಿನೆಮಾ, ದುನಿಯಾ ವಿಜಯ್ ಅವರ ಕುಸ್ತಿ, ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ತಂಗಿ ಮಗನ ‘ಅಖಿಲ್’ ಎಂಬ ಸಿನೆಮಾಕ್ಕೆ ಸಂಭಾಷಣೆ ಬರೆದಿದ್ದೇನೆ. ಸಿನೆಮಾ ನಿರ್ದೇಶನ ಮಾಡೋ ಆಸೆ ಇದೆ ಬರವಣಿಗೆಯ ಒತ್ತಡದಲ್ಲಿ ಅದು ಸಾಧ್ಯ ಆಗ್ತಾ ಇಲ್ಲ. ಮುಂದೊಂದು ದಿನ ನಿರ್ದೇಶಕನಾಗಿ ನಿಮ್ಮ ಮುಂದೆ ಬರ್ತೇನೆ.
ನಟನಾಗಿ
ನಾನು ಕೆಲಸ ಮಾಡಿರೋ ಸಿನೆಮಾಗಳಲ್ಲೇ ಚಿಕ್ಕ- ಪುಟ್ಟ ಪಾತ್ರಗಳನ್ನ ಮಾಡ್ತಾ ಬಂದಿದೀನಿ. ಕಡ್ಡಿಪುಡಿ, ಕೆಂಡಸಂಪಿಗೆ, ಹಾಗೇ ಯೋಗರಾಜ್ ಭಟ್ ನಿರ್ದೇಶನ ‘ಪಂಚತಂತ್ರ’ ಸಿನೆಮಾದಲ್ಲೂ ಅಭಿನಯಿಸಿದ್ದೇನೆ.
ನನ್ನಿಷ್ಟದ ಸಿನೆಮಾ-ನಿರ್ದೇಶಕ-ಸಂಭಾಷಣಾಕಾರ
ನನಗೆ ವೈಯಕ್ತಿಕವಾಗಿ ಇಷ್ಟವಾಗುವ ಸಿನೆಮಾಗಳು ತುಂಬಾ ಇದಾವೆ. ಅದ್ರಲ್ಲಿ ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ತೆರೆಕಂಡು ಜನಮಾನಸದಲ್ಲಿ ಉಳಿದ, ಎದ್ದೇಳು ಮಂಜುನಾಥ ಹಾಗೂ ತಿಥಿ ಸಿನೆಮಾ. ನನಗೆ ಕೆಲಸ ಕಲಿಸಿಕೊಟ್ಟ ಸೂರಿ ಸರ್ ಹಾಗೂ ಯೋಗರಾಜ್ ಭಟ್ ಸರ್, ಅವರಿಬ್ಬರೂ ನನ್ನ ಗುರು ಸಮಾನರು. ಸೂರಿ ಸರ್ ಇಂದ ಶಿಸ್ತು, ಭಟ್ ಸರ್ ಇಂದ ಶ್ರದ್ಧೆ ಕಲಿತೆ. ಹಾಗೇ ತೆಲುಗು ಸಿನೆಮಾ ಸಂಭಾಷಣಾಕಾರರಾದ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಕನ್ನಡದಲ್ಲಿ ಪ್ರಶಾಂತ್ ರಾಜಪ್ಪ ನನಗೆ ತುಂಬಾ ಕಾಡಿರೋ ಸಂಭಾಷಣಾಕಾರರು.
ಕನ್ನಡದಲ್ಲಿ ತುಂಬಾ ಒಳ್ಳೆಯ ಕತೆಗಳು ಇದಾವೆ. ಕತೆಗಾರರೂ ಇದ್ದಾರೆ. ಅವರನ್ನ ಗುರುತಿಸಿ ಒಂದು ಅವಕಾಶಮಾಡಿಕೊಟ್ಟರೆ ನಮ್ಮ ಕನ್ನಡ ಸಿನೆಮಾರಂಗ ಇನ್ನೂ ಎತ್ತರಕ್ಕೆ ಬೆಳೆಯುವುದರಲ್ಲಿ ಸಂಶಯವೇ ಇಲ್ಲ.
ಕನ್ನಡವೇ ಸತ್ಯ ; ಕನ್ನಡವೇ ನಿತ್ಯ
ಇಂತಿ ನಿಮ್ಮ ಮಾಸ್ತಿ

ದಿನದ ಸುದ್ದಿ
‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರದ ಟಿಕೆಟ್ ಮೇಲೆ ಶೆ.20ರಷ್ಟು ಕಡಿತ

ಸುದ್ದಿದಿನ ಡೆಸ್ಕ್ : ರಕ್ಷಿತ್ ಶೆಟ್ಟಿ ಮತ್ತು ರುಕ್ಷಿಣಿ ವಸಂತ್ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಗಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.
ಈ ಮಧ್ಯೆ, ಇನ್ನಷ್ಟು ಹೆಚ್ಚು ಜನರನ್ನು ಚಿತ್ರಮಂದಿರಗಳಿಗೆ ಕರೆತರುವ ನಿಟ್ಟಿನಲ್ಲಿ ಚಿತ್ರತಂಡ ಇಂದಿನಿಂದ ಪ್ರತಿ ಟಿಕೆಟ್ ಶೇ. 20ರಷ್ಟು ರಿಯಾಯ್ತಿಯನ್ನು ಚಿತ್ರತಂಡ ಘೋಷಿಸಿದೆ. ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ, ಚೈತ್ರಾ ಆಚಾರ್, ಅಚ್ಯುತ್ ಕುಮಾರ್, ರಮೇಶ್ ಅರವಿಂದ್ ಮುಂತಾದವರು ನಟಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನೋಡಿದ ಮೊದಲ ಪ್ರೇಕ್ಷಕ ದರ್ಶನ್

ಸುದ್ದಿದಿನ ಡೆಸ್ಕ್ : ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಶ್ ಅಭಿನಯಿಸಿರುವ ‘ಬ್ಯಾಡ್ ಮ್ಯಾನರ್ಸ್’ ಚಿತ್ರವು ಇದೇ ನ.24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಮಧ್ಯೆ, ಇತ್ತೀಚೆಗೆ ಚಿತ್ರತಂಡ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ದರ್ಶನ್ ಮತ್ತು ಸುಮಲತಾ ಅಂಬರೀಷ್ ಅವರು ಚಿತ್ರವನ್ನು ನೋಡಿದ್ದಾರೆ. ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡಿರುವ ದರ್ಶನ್, ಅಭಿ ಬೆನ್ನಿಗೆ ‘ನಿಮ್ಮಪ್ರೀತಿಯ ದಾಸ’ ಎಂದು ಬರೆದು 5ಕ್ಕೆ 5 ಸ್ಟಾರ್ ಗಳನ್ನ ಕೊಟ್ಟಿದ್ದಾರೆ.
“ಈ ಸಿನಿಮಾದಲ್ಲಿ ನೀವು ರಿಯಲ್ ರೆಬೆಲ್ ಸ್ಟಾರ್ನ ನೋಡ್ತೀರಿ. ಹೆಮ್ಮೆಯಾಗ್ತಿದೆ ಎರಡನೇ ಸಿನಿಮಾದಲ್ಲಿ ಈ ಲೆವ್ವೆಲ್ಲಿಗೆ ಅಭಿ ಮಾಗಿರೋದು. ಸಿನಿಮಾ ಬೇರೆ ಲೆವ್ವಲ್ ಇದೆ. ದೊಡ್ಡ ಯಶಸ್ಸು ಇದಕ್ಕೆ ಖಂಡಿತ ಧಕ್ಕಲಿದೆ’ ಎಂದು ಬರೆಯುವ ಮೂಲಕ ದರ್ಶನ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
10,000 ಅಡಿ ಉದ್ದದ ‘ಘೋಸ್ಟ್’ ಪೋಸ್ಟರ್ ಬಿಡುಗಡೆ

ಸುದ್ದಿದಿನ ಡೆಸ್ಕ್ : ಶಿವರಾಜಕುಮಾರ್ ಅಭಿನಯದ ‘ಘೋಸ್ಟ್’ ಚಿತ್ರವು ಈಗಾಗಲೇ ನವೆಂಬರ್ 17ರಂದು ಜೀ5ನಲ್ಲಿ ಬಿಡುಗಡೆಯಾಗಿದೆ.
ಈ ಚಿತ್ರದ ಪ್ರಮೋಷನ್ಗೆ ಬರೋಬ್ಬರಿ 10 ಸಾವಿರ ಚದರ ಅಡಿಯ ‘ಘೋಸ್ಟ್’ ಪೋಸ್ಟರನ್ನು ಜೀ5 ಬಿಡುಗಡೆ ಮಾಡಿದೆ. ಜಯನಗರದ ಎಂ.ಇ.ಎಸ್ ಗ್ರೌಂಡ್ ನಲ್ಲಿ ‘ಘೋಸ್ಟ್’ ಸಿನಿಮಾದ 10,000 ಅಡಿ ಪೋಸ್ಟರ್ ಅನಾವರಣ ಮಾಡಲಾಗಿದೆ. ಥಿಯೇಟರ್ಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗೆ ಬ್ಯಾನರ್, ಪೋಸ್ಟರ್ ಹಾಕೋದು ಸಹಜ. ಆದರೆ, ಈ ಬಾರಿ ಒಟಿಟಿ ರಿಲೀಸ್ಗೆ ಪೋಸ್ಟರ್ ಹಾಕಿ ವಿಭಿನ್ನವಾಗಿ ಪ್ರಚಾರ ಮಾಡಿದೆ ಜೀ ಕನ್ನಡ.
ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ‘ಘೋಸ್ಟ್’ ಚಿತ್ರವನ್ನು ಆರ್.ಜೆ. ಶ್ರೀನಿ ಬರೆದು, ನಿರ್ದೇಶಿಸಿದ್ದು, ಅರ್ಜುನ್ ಜನ್ಯಾ ಸಂಗೀತವಿದೆ. ಶಿವರಾಜಕುಮಾರ್ ಜೊತೆ ಮಲಯಾಳಂ ನಟ ಜಯರಾಮ್, ಹಿಂದಿ ನಟ ಅನುಪಮ್ ಖೇರ್, ಅರ್ಚನಾ ಜೋಯಿಸ್, ಸತ್ಯಪ್ರಕಾಶ್, ನಿರ್ದೇಶಕ ಎಂಜಿ ಶ್ರೀನಿವಾಸ್ ಹಾಗೂ ಇನ್ನಿತರರು ನಟಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
