ರಾಜಕೀಯ
ಕೋಟೆನಾಡಿನಲ್ಲಿ ಕಾಂಗ್ರೆಸ್ ಛಿದ್ರ: ನೈತಿಕ ಹೊಣೆ ಹೊರುವರೇ ಮಾಜಿ ಸಚಿವ ಆಂಜನೇಯ ?
ಸುದ್ದಿದಿನ, ಚಿತ್ರದುರ್ಗ: ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಜಿಲ್ಲೆ ಈಗ ಕೈ ತಪ್ಪಿದೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಚಳ್ಳಕೆರೆ ಹೊರತು ಪಡಿಸಿ ಐದರಲ್ಲಿ ಕಾಂಗ್ರೆಸ್ ಅಕ್ಷರಶಃ ಮಾಕಾಡೆ ಮಲಗಿದೆ.
ಆ.31ರಂದು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಚಿತ್ರದುರ್ಗ ಮತ್ತು ಹೊಸದುರ್ಗದಲ್ಲಿ ಕೈ ಛಿದ್ರವಾಗಿದೆ. ಚಳ್ಳಕೆರೆ ನಗರಸಭೆಯಲ್ಲಿ ಮಾತ್ರ ಸರಳ ಬಹುಮತ ಪಡೆಯುವ ಮೂಲಕ ಕಾಂಗ್ರೆಸ್ ತನ್ನ ಕೊನೆಯ ಉಸಿರು ಉಳಿಸಿಕೊಂಡಿದೆ.
ಸದ್ಯದ ಕಾಂಗ್ರೆಸ್ನ ಈ ಸ್ಥಿತಿಗೆ ಕಾರಣ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ಎಚ್.ಆಂಜನೇಯ ಕಾರಣ ಎಂಬ ಆರೋಪ ಕೇಳಿಬರುತ್ತಿವೆ. ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಈ ಮಾತು ಕೇಳಿ ಬರುತ್ತಿವೆ. ಇದಕ್ಕೆ ಕಾರಣ ಐದು ವರ್ಷ ಅಧಿಕಾರದಲ್ಲಿದ್ದರೂ ಕೂಡ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲಿಲ್ಲ. ನಿಷ್ಠಾವಂತ ಕಾರ್ಯಕರ್ತರಿಗೆ ಮನ್ನಣೆ ನೀಡಲಿಲ್ಲ ಎಂಬ ಆರೋಪಗಳು ಸ್ವ ಪಕ್ಷದವರಿಂದಲೇ ಕೇಳಿಬರುತ್ತಿವೆ.
Read This: ಮಾಜಿ ಸಚಿವ ಎಚ್.ಆಂಜನೇಯ ಪ್ರತಿಷ್ಠೆ ಮಣ್ಣುಪಾಲು !
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸೇರಿದಂತೆ ವಿವಿಧ ಸ್ಥಾನಗಳಿಗೆ ಸಮರ್ಥರಿಗೆ ಅವಕಾಶ ನೀಡಲಿಲ್ಲ. ನಿಗಮ ಮಂಡಳಿ ಸೇರಿದಂತೆ ಕೆಲವು ಸ್ಥಾನಗಳಿಗೆ ತಮಗೆ ಬೇಕಾದವರಿಗೆ ಅವಕಾಶ ನೀಡಿದರು. ಚುನಾವಣೆ ಸಂದರ್ಭದಲ್ಲಿ ಗೆಲ್ಲುವವರನ್ನು ನೋಡಿ ಪ್ರೋತ್ಸಾಹ ನೀಡಲಿಲ್ಲ ಎಂದು ಆಪಾದನೆ ಕೂಡ ಮಾಜಿ ಸಚಿವರ ಮೇಲಿದೆ.
ಅನ್ಯರಿಗೆ ಮಣೆ ನೀಡಿದ್ದು ಸಮಸ್ಯೆಗೆ ಕಾರಣ
ಸಂಸದರ ಸ್ಥಾನಕ್ಕೆ ಜಿಲ್ಲೆಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿತ್ತು. ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಬೇರೆ ಜಿಲ್ಲೆಯಿಂದ ಬಂದ ನಾಯಕರಿಗೆ ಮಾಜಿ ಸಚಿವ ಆಂಜನೇಯ ಅವಕಾಶ ನೀಡಿದ್ದರು. ಇದರಿಂದ ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿತ್ತು. ಈ ಕಾರಣಕ್ಕೆ ಇತ್ತೀಚಿಗೆ ನಡೆದ ಚುನಾವಣೆಗಳಲ್ಲಿ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಲು ಹಿಂದೇಟು ಹಾಕಿದರು ಎಂಬ ಮಾತು ಕೇಳಿ ಬರುತ್ತಿವೆ.
Read This : ‘ಸೂಟು-ಬೂಟಿನ ಸರದಾರ’ನಂತೆ ಯೂರೋಪ್ ಪ್ರವಾಸಕ್ಕೆ ತೆರಳಿದ ಸಿದ್ದು..!
ಪ್ರಮುಖ ಮುಖಂಡರ ಕಡಗಣನೆ
ಮಾದಿಗ ಸಮುದಾಯದ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ಯಾದವ ಸಮುಯಾದ ಉಮಾಪತಿ, ಡಿ.ಟಿ.ವೆಂಕಟೇಶ್ ಹಾಗೂ ಇನ್ನಿತರ ಸಮುದಾಯಗಳಿಗೆ ಸೇರಿದ ಪ್ರಮುಖ ಮುಖಂಡರನ್ನು ಕಡೆಗಣಿಸಿದ್ದೂ ಕೂಡ ಕಾಂಗ್ರೆಸ್ ಈ ಸ್ಥಿತಿಗೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ. ಇದರಿಂದ ಕೆಲವು ಮುಖಂಡರು ಬಹಿರಂಗವಾಗಿಯೇ ಮಾಜಿ ಸಚಿವ ಆಂಜನೇಯ ವಿರುದ್ಧ ಸಭೆ ನಡೆಸಿದ್ದುಂಟು.
ಲೋಕಸಭೆ ಸ್ಥಾನ ಕೈ ತಪ್ಪುವ ಭೀತಿ
ಸದ್ಯ ಜಿಲ್ಲೆಯಲ್ಲಿ ಐದು ವಿಧಾನಸಭೆ, ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ಗೆ ಈಗ ಲೋಕಸಭೆ ಸ್ಥಾನ ಕೈ ತಪ್ಪುವ ಭೀತಿ ಎದುರಾಗಿದೆ. ಹಾಲಿ ಸಂಸದರಿಗೆ ಟಿಕೆಟ್ ಪಕ್ಕಾ ಆಗಿದ್ದು, ಈ ಸಾರಿ ಗೆಲವು ಕಷ್ಟ ಎಂಬ ಮಾತು ಕೇಳಿಬರುತ್ತಿವೆ. ಒಟ್ಟಾರೆ ಮಾಜಿ ಸಚಿವ ಎಚ್.ಆಂಜನೇಯ ಅವರು ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಷಕ್ಕೆ ಸಮರ್ಥವಾಗಿ ದುಡಿಸಿಮಕೊಳ್ಳದಿರುವುದಕ್ಕೆ ಇಂದು ಕೋಟೆನಾಡಿನಲ್ಲಿ ಮರೆಯಾಗುವ ಲಕ್ಷಣ ಗೋಚರಿಸುತ್ತಿವೆ.

ದಿನದ ಸುದ್ದಿ
ಹರಿಹರ | ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೇವರಬೆಳಕೆರೆ ಇಲ್ಲಿ ಅವ್ಯವಹಾರ | ಪ್ರಾಂಶುಪಾಲ ನೀಲಪ್ಪ ಪಿಡ್ಡಣ್ಣನವರ್ ವಾರ್ಡನ್ ಹೆಚ್.ವಿ.ನಾಗರಾಜ್ ವಿರುದ್ಧ ಲೋಕಾಗೆ ದೂರು|
ಸುದ್ದಿದಿನ, ದಾವಣಗೆರೆ: ಮೊರಾರ್ಜಿ ದೇಸಾಯಿ ವಸತಿ ಶಾಲೆ (ಬಿ.ಸಿ.ಎಂ), ದೇವರಬೆಳಕೆರೆ, ಹರಿಹರ ತಾಲ್ಲೂಕು ದಾವಣಗೆರೆ ಜಿಲ್ಲೆ ಇಲ್ಲಿನ ವಸತಿ ಶಾಲೆಯ ನಿರ್ವಹಣೆಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ನಕಲಿ ಬಿಲ್ಲುಗಳನ್ನು ಸೃಷ್ಟಿಸಿ ಮತ್ತು ಕೆ.ಟಿ.ಪಿ.ಪಿ ನಿಯಮವನ್ನು ಉಲ್ಲಂಘಿಸಿ ನಡೆದಿರುವ ಅವ್ಯವಹಾರ ಹಾಗೂ ಭ್ರಷ್ಟಚಾರಗಳಲ್ಲಿ ಭಾಗಿಯಾಗಿರುವ ಪ್ರಾಂಶುಪಾಲರಾದ ನೀಲಪ್ಪ ಪಿಡ್ಡಣ್ಣನವರ್ ಹಾಗೂ ನಿಲಯಪಾಲಕ ಹೆಚ್.ವಿ.ನಾಗರಾಜ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆ (ಹಿಂದುಳಿದ ವರ್ಗ), ದೇವರಬೆಳಕೆರೆ, ಹರಿಹರ ತಾಲ್ಲೂಕು ದಾವಣಗೆರೆ ಜಿಲ್ಲೆ ಇಲ್ಲಿನ ವಸತಿ ಶಾಲೆಗೆ 2018 ರಿಂದ 2026ನೇ ಸಾಲಿನ ಅವಧಿಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಸಾಕಷ್ಟು ಅವ್ಯವಹಾರ ಮತ್ತು ಅಕ್ರಮಗಳು ನಡೆದಿರುವ ಅಧಿಕೃತ ಮಾಹಿತಿಯ ಮೇರೆಗೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆ (ಹಿಂದುಳಿದ ವರ್ಗ), ದೇವರಬೆಳಕೆರೆ, ಹರಿಹರ ತಾಲ್ಲೂಕು ಇವರಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ ಪಡೆದ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಅಪೂರ್ಣ ಮಾಹಿತಿ ನೀಡಿರುವುದು ಮಾತ್ರವಲ್ಲದೆ, ನೀಡಿರುವ ಅಲ್ಪ ಮಾಹಿತಿಯಲ್ಲೆ ಸಾಕಷ್ಟು ಅವ್ಯವಹಾರ ನಡೆದಿರುವ ದಾಖಲೆಗಳನ್ನು ಲಗತ್ತಿಸಿ ವಸತಿ ಶಾಲೆಗೆ ಬಿಡುಗಡೆಯಾದ ಅನುದಾನದ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತಗೆ ದೂರು ನೀಡಿ, ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ದಿನದ ಸುದ್ದಿ
ಬಡವರ ಪಾಲಿನ ಸಂಜೀವಿನಿ ವೈದ್ಯ ಡಾ. ಎಸ್.ಎಂ. ಎಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗೌರವ
ವಿಶೇಷ ವರದಿ : ಗೋವರ್ಧನ ನವಿಲೇಹಾಳು
ಸುದ್ದಿದಿನ,ದಾವಣಗೆರೆ: ವೈದ್ಯಕೀಯ ವೃತ್ತಿ ಇಂದು ಸೇವೆಯ ಜೊತೆಗೆ ವಾಣಿಜ್ಯೀಕರಣದ ಸ್ವರೂಪವನ್ನೂ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ, ವೈದ್ಯಕೀಯ ಸೇವೆಯೇ ಮಾನವೀಯ ಧರ್ಮ ಎಂದು ನಂಬಿ ಬದುಕುತ್ತಿರುವ ದಾವಣಗೆರೆಯ ಹಿರಿಯ ವೈದ್ಯ ಡಾ. ಸಿದ್ದಲಿಂಗಪ್ಪ ಮುರುಗೆಪ್ಪ ಎಲಿ (ಡಾ. ಎಸ್.ಎಂ. ಎಲಿ) ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸಮಾಜಸೇವೆ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಸುದೀರ್ಘ, ನಿಸ್ವಾರ್ಥ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಈ ಗೌರವಕ್ಕೆ ಆಯ್ಕೆ ಮಾಡಿದೆ.
ವೈದ್ಯಕೀಯ ವೃತ್ತಿಯನ್ನು ಕೇವಲ ಜೀವನೋಪಾಯದ ಮಾರ್ಗವಾಗಿ ನೋಡದೆ, ಬಡವರು ಮತ್ತು ಅಸಹಾಯಕರ ನೋವಿಗೆ ಸ್ಪಂದಿಸುವ ಮಾನವೀಯ ಕಾಯಕವನ್ನಾಗಿ ರೂಪಿಸಿಕೊಂಡಿರುವ ಡಾ. ಎಲಿ ಅವರು ದಾವಣಗೆರೆಯಲ್ಲಿ ‘ಬಡವರ ವೈದ್ಯರು’ ಎಂದೇ ಜನಪ್ರಿಯರಾಗಿದ್ದಾರೆ. ಅವರ ಪಾಲಿಗೆ ರೋಗಿಯ ಆರ್ಥಿಕ ಸ್ಥಿತಿಗಿಂತ ಆತನ ಆರೋಗ್ಯ ಮತ್ತು ಜೀವದ ಮೌಲ್ಯವೇ ಮುಖ್ಯ. ಇದೇ ಮೌಲ್ಯಾಧಾರಿತ ಬದುಕು ಅವರನ್ನು ಸಾವಿರಾರು ಜನರ ಪಾಲಿನ ಆತ್ಮೀಯ ವೈದ್ಯರನ್ನಾಗಿಸಿದೆ.
ಐದು ದಶಕಗಳ ಸೇವೆಯ ಪಯಣ
ಮೂಲತಃ ಧಾರವಾಡ ಜಿಲ್ಲೆಯ ಹಂಸಭಾವಿ ಗ್ರಾಮದವರಾದ ಡಾ. ಎಲಿ ಅವರು 1969ರಿಂದ ವೈದ್ಯಕೀಯ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಹಾಗೂ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ವೃತ್ತಿಪರ ಜ್ಞಾನ, ಅನುಭವ ಮತ್ತು ಸೇವಾ ಮನೋಭಾವದ ಮೂಲಕ ವಿಶಿಷ್ಟ ಗುರುತನ್ನು ಗಳಿಸಿದ್ದಾರೆ.
ನಿವೃತ್ತಿಯ ನಂತರವೂ ವಿಶ್ರಾಂತ ಜೀವನಕ್ಕೆ ಮೊರೆಹೋಗದೆ, ರೋಗಿಗಳ ಸೇವೆಯನ್ನು ಮುಂದುವರಿಸಿದ್ದಾರೆ. ನಗರದ ಎಂ.ಸಿ.ಸಿ. ‘ಬಿ’ ಬ್ಲಾಕ್ನಲ್ಲಿರುವ ತಮ್ಮ ಸರಳ ಕ್ಲಿನಿಕ್ನಲ್ಲಿ ಇಂದಿಗೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸಾಮಾನ್ಯವಾಗಿ ವೈದ್ಯಕೀಯ ಸಮಾಲೋಚನೆಗೆ ಹೆಚ್ಚಿನ ಶುಲ್ಕ ವಿಧಿಸುವ ಇಂದಿನ ವ್ಯವಸ್ಥೆಯಲ್ಲಿ, ಅವರು ಕೇವಲ 10ರಿಂದ 30 ರೂಪಾಯಿಗಳ ಅತ್ಯಲ್ಪ ಶುಲ್ಕದಲ್ಲಿ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿರುವುದು ಅವರ ಸೇವಾ ಬದ್ಧತೆಗೆ ಸಾಕ್ಷಿಯಾಗಿದೆ.
ಬಡವರ ಕಣ್ಣೀರೊರೆಸುವ ವೈದ್ಯ
ದಾವಣಗೆರೆ ಮಾತ್ರವಲ್ಲದೆ ಚಿತ್ರದುರ್ಗ, ಹಾವೇರಿ, ರಾಣೆಬೆನ್ನೂರು, ಶಿವಮೊಗ್ಗ ಸೇರಿದಂತೆ ವಿವಿಧ ಭಾಗಗಳಿಂದಲೂ ಬಡ ಮತ್ತು ಮಧ್ಯಮ ವರ್ಗದ ಜನರು ಇವರ ಬಳಿ ಚಿಕಿತ್ಸೆಗಾಗಿ ಬರುತ್ತಾರೆ. ಹಣದ ಕೊರತೆಯಿಂದ ಯಾರೂ ಚಿಕಿತ್ಸೆ ವಂಚಿತರಾಗಬಾರದು ಎಂಬ ಕಾಳಜಿ ಅವರದ್ದು. ಬಡ ರೋಗಿಗಳಿಗೆ ಉಚಿತ ಔಷಧ ಮಾದರಿಗಳನ್ನು ನೀಡುವುದು, ವೈದ್ಯಕೀಯ ಪರೀಕ್ಷೆಗಳಿಗೆ ರಿಯಾಯಿತಿ ದೊರಕಿಸಿಕೊಡುವುದು, ಅಗತ್ಯವಿದ್ದಾಗ ಪ್ರಯಾಣ ವೆಚ್ಚವನ್ನೂ ಭರಿಸುವುದು ಅವರ ಸೇವೆಯ ಭಾಗವಾಗಿದೆ.
ಕೆಲವೊಮ್ಮೆ ರೋಗಿಗಳ ಬಳಿ ಆಟೊ ಬಾಡಿಗೆಗೂ ಹಣವಿಲ್ಲದಿರುವುದನ್ನು ಗಮನಿಸಿ, ಅವರ ಪ್ರಯಾಣದ ವೆಚ್ಚವನ್ನೂ ತಾವೇ ನೀಡುತ್ತಾರೆ. ರೋಗಿಯ ಸಂಕಷ್ಟವನ್ನು ಕೇವಲ ವೈದ್ಯಕೀಯ ಸಮಸ್ಯೆಯಾಗಿ ನೋಡದೆ, ಅದರ ಹಿಂದಿರುವ ಸಾಮಾಜಿಕ ಮತ್ತು ಆರ್ಥಿಕ ನೋವನ್ನೂ ಅರ್ಥಮಾಡಿಕೊಳ್ಳುವ ಅವರ ಗುಣವೇ ಅವರನ್ನು ಜನಮಾನಸದಲ್ಲಿ ಎತ್ತರದ ಸ್ಥಾನದಲ್ಲಿ ನಿಲ್ಲಿಸಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಸೇವಾ ಮನೋಭಾವಕ್ಕೆ ಹೊಸ ಅರ್ಥ ನೀಡಿರುವ ಡಾ. ಎಲಿ ಅವರ ಬದುಕು, ವೃತ್ತಿಯ ಯಶಸ್ಸು ಹಣ ಮತ್ತು ಆಸ್ತಿಯಲ್ಲಿ ಮಾತ್ರ ಅಳೆಯಲಾಗದು ಎಂಬುದನ್ನು ಸಾರುತ್ತದೆ. ಬಡವರ ಪಾಲಿಗೆ ವೈದ್ಯರು ಕೇವಲ ಚಿಕಿತ್ಸಕರಲ್ಲ, ಸಂಕಷ್ಟದ ಸಮಯದಲ್ಲಿ ಭರವಸೆ ನೀಡುವವರೂ ಆಗಿರಬೇಕು ಎಂಬುದನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದ್ದಾರೆ.
ಅವರ ಈ ಸುದೀರ್ಘ ಸೇವಾ ಪಯಣದಲ್ಲಿ ಕುಟುಂಬದ ಬೆಂಬಲವೂ ಮಹತ್ವದ್ದಾಗಿದೆ. ಪತ್ನಿ ನಾಗರತ್ನಮ್ಮ ಅವರು ಅವರ ಸೇವಾ ಕಾರ್ಯಕ್ಕೆ ನಿರಂತರ ಪ್ರೋತ್ಸಾಹ ನೀಡಿದ್ದಾರೆ. ಮಕ್ಕಳಾದ ಡಾ. ವಿನಯ್ ಎಸ್. ಎಲಿ ಮತ್ತು ಡಾ. ಸುಮನ್ ಎಸ್. ಎಲಿ ಕೂಡ ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಸಮಾಜಸೇವೆ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ. ಎಸ್.ಎಂ. ಎಲಿ ಅವರ ಸಾಧನೆ ಕೇವಲ ವೈಯಕ್ತಿಕ ಗೌರವವಲ್ಲ; ಮಾನವೀಯ ವೈದ್ಯಕೀಯ ಸೇವೆಗೆ ಸಂದ ಮನ್ನಣೆಯಾಗಿದೆ. ವೈದ್ಯಕೀಯ ವೃತ್ತಿಯ ಮೂಲ ಆಶಯವಾದ ರೋಗಿಗಳ ಸೇವೆ, ಕರುಣೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ತಮ್ಮ ಬದುಕಿನುದ್ದಕ್ಕೂ ಎತ್ತಿಹಿಡಿದಿರುವ ಅವರ ಕಾರ್ಯ ಇಂದಿನ ಯುವ ವೈದ್ಯರಿಗೆ ಮಾದರಿಯಾಗಿದೆ.
ದಾವಣಗೆರೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸಾವಿರಾರು ಬಡ ಕುಟುಂಬಗಳ ಪಾಲಿಗೆ ಆಸರೆಯಾಗಿರುವ ಎಲಿ ಅವರ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ನೀಡಿರುವ ಈ ಪ್ರಶಸ್ತಿ ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ. ಪ್ರಶಸ್ತಿಗಳು ಸಾಧಕರನ್ನು ಗುರುತಿಸುತ್ತವೆ; ಆದರೆ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆಯುವುದು ಅವರ ಸೇವೆಯಿಂದ ಮಾತ್ರ ಸಾಧ್ಯ ಎಂಬುದಕ್ಕೆ ಡಾ. ಎಸ್.ಎಂ. ಎಲಿ ಅವರ ಬದುಕೇ ಸಾಕ್ಷಿಯಾಗಿದೆ.

ದಿನದ ಸುದ್ದಿ
ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೀಡಿರುವ ಮುಂಬಡ್ತಿಯ ಸ್ಥಳ ನಿಯುಕ್ತಿಗೆ ಸಂಬAಧಿಸಿದ ಆನ್ಲೈನ್ ಕೌನ್ಸಿಲಿಂಗ್ನಲ್ಲಿ ಪಾರದರ್ಶಕತೆಯನ್ನು ಉಲ್ಲಂಘಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಅಡಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಯುಕ್ತಗೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳನ್ನು ಸೇವಾ ಜೇಷ್ಠತೆ ಹಾಗೂ ಅರ್ಹತೆ ಆಧಾರದ ಮೇಲೆ ಅರ್ಹ ದ್ವಿತೀಯ ದರ್ಜೆ ಸಹಾಯಕರ ವೃಂದದಿAದ ಮುಂಬಡ್ತಿ ಮೂಲಕ ಭರ್ತಿ ಮಾಡಲು ಮುಂದಾಗಿದ್ದು, ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ದಿನಾಂಕ: 12-11-2025 ರಂದು ಆನ್ಲೈನ್ ಕೌನ್ಸಿಲಿಂಗ್ ನಡೆಸಿ, ಸ್ಥಳ ನಿಯುಕ್ತಿ ಮಾಡಿ, ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡ ಪ್ರಥಮ ದರ್ಜೆ ಸಹಾಯಕರ ಪಟ್ಟಿಯನ್ನು ಬಿಡುಗಡೆಗೊಸಲಾಗಿರುತ್ತದೆ.
ಆದರೆ ಕಾಲೇಜು ಶಿಕ್ಷಣ ಇಲಾಖೆಯಿಂದ ಹೊರಡಿಸಿರುವ ಪಟ್ಟಿಯಲ್ಲಿ ಆಯುಕ್ತರ ಕಛೇರಿ, ಬೆಂಗಳೂರು ಇಲ್ಲಿ 03 ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಯನ್ನು ಗುರುತಿಸಲಾಗಿರುತ್ತದೆ. ಆದರೆ ಆದೇಶ ಪ್ರತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಮುಂಬಡ್ತಿಯಲ್ಲಿ 10 ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಕಛೇರಿ, ಬೆಂಗಳೂರು ಇಲ್ಲಿಗೆ ಆಯ್ಕೆ ಮಾಡಿಕೊಂಡಿರುವ 10 ಅಭ್ಯರ್ಥಿಗಳಲ್ಲಿ 05 ಅಭ್ಯರ್ಥಿಗಳನ್ನು ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡಿ ಯಥಾ ಪ್ರಕಾರ ಮುಂದುವರೆಸಲಾಗಿರುತ್ತದೆ.
ಹೀಗಾಗಿ ಸದರಿ ಮುಂಬಡ್ತಿ ಪ್ರಕ್ರಿಯೆಯು ನಿಯಮಬಾಹಿರವಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿ 10 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


