ಲೈಫ್ ಸ್ಟೈಲ್
ಕರ್ನಾಟಕದ ಗಿಡಗಳ ನಂಟನ್ನು ರಾಜಸ್ಥಾನದಲ್ಲೂ ಬೆಳಸುವ ಅಪರೂಪದ ಪರಿಸರ ಪ್ರೇಮಿ ‘ಬೈರವ್ ಸಿಂಗ್’..!
- ಸಂಜಯ್ ಹೊಯ್ಸಳ
ಕರ್ನಾಟಕದಿಂದ ರಾಜಸ್ಥಾನಕ್ಕೆ ಪ್ರತಿವರ್ಷ ಕೆಲವೊಂದಿಷ್ಟು ಗಿಡ ತೆಗೆದುಕೊಂಡು ಹೋಗಿ, ಕರ್ನಾಟಕದ ಗಿಡಗಳ ನಂಟನ್ನು ರಾಜಸ್ಥಾನದಲ್ಲೂ ಬೆಳಸುವ ಪ್ರಯತ್ನ ಮಾಡುತ್ತಿರುವ ಅಪರೂಪದ ಪರಿಸರ ಪ್ರೇಮಿ.
ಮೊನ್ನೆ ನಮ್ಮ ನರ್ಸರಿಗೆ ಬೈರವ್ ಸಿಂಗ್ ಬಂದಿದ್ದರು. ಇವರು ಹುಟ್ಟಿ ಬೆಳದಿದ್ದೆಲ್ಲಾ ಮೈಸೂರಿನಲ್ಲಿಯಾದರೂ, ಪೂರ್ವಜರ ತವರಾದ ರಾಜಸ್ಥಾನದ ಜೊತೆಗೆ ಇವರು ನಂಟು ಕಡಿದುಕೊಂಡಿಲ್ಲ. ಆಗಾಗ್ಗೆ ತಮ್ಮೂರಿನ ಕಡೆಗೆ ಹೋಗಿ ಬರುತ್ತಿರುತ್ತಾರೆ. ಇವರು ರಾಜಸ್ಥಾನ ಐತಿಹಾಸಿಕ ನಗರವಾದ ಜೋದ್ ಪುರ ಮೂಲದವರು. ಸದ್ಯ ಮೈಸೂರಿನಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿರುವ ಇವರು, ಮಳೆಗಾಲದ ಸಮಯದಲ್ಲಿ ಊರಿನ ಕಡೆ ಹೋಗುವಾಗ ತಪ್ಪದೆ ಮೈಸೂರಿನಿಂದ ಇಲ್ಲಿನ ಕೆಲವೊಂದಿಷ್ಟು, ಅವರಿಗೆ ವಿಶೇಷ ಎನಿಸುವ ಗಿಡಗಳನ್ನು ತೆಗೆದುಕೊಂಡು ಹೋಗಿ ಅಲ್ಲಿ ನೆಟ್ಟು ಬೆಳಸುವ ಪ್ರಯತ್ನ ಮಾಡುತ್ತಿದ್ದಾರೆ. ಮೊನ್ನೆ ಇದೇ ರೀತಿ ನಮ್ಮ ನರ್ಸರಿಗೂ ಬಂದು ಕಾಡುಬಾದಾಮಿ, ಶ್ರೀಗಂದ, ಬಿಲ್ವಪತ್ರೆ ಸೇರಿ ಐದಾರು ಗಿಡಗಳನ್ನು ತೆಗೆದುಕೊಂಡರು. ನಮ್ಮ ಅರಣ್ಯ ಇಲಾಖೆ ನರ್ಸರಿಗೆ ಬರುವ ಮುನ್ನ ತೋಟಗಾರಿಕೆ ಇಲಾಖೆಯ ನರ್ಸರಿಯಲ್ಲಿ ಕೆಲವು ಹಣ್ಣಿನ ಗಿಡಗಳನ್ನು ತಂದಿದ್ದರು.
ಈ ಸಂಧರ್ಭದಲ್ಲಿ ಇವರ ಪರಿಚಯವಾಗಿ ಲೋಕರೂಡಿಯಾಗಿ ಮಾತನ್ನಾಡುವಾಗ ರಾಜಸ್ಥಾನದ ಅರಣ್ಯ ಹಾಗೂ ವನ್ಯಜೀವಿ ಪ್ರೇಮಿ ಜನಾಂಗವೆಂದು ಹೆಸರಾಗಿರುವ ಬೀಷ್ಣೋಯಿಗಳ ಬಗ್ಗೆ ನಿಮಗೆ ಗೊತ್ತಾ? ಎಂದು ಕೇಳಿದೆ. “ಹೌದು ಗೊತ್ತು. ಅದೇ ಸಲ್ಮಾನ್ ಖಾನ್ ಗೆ ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಶಿಕ್ಷೆ ಆಗೋದಕ್ಕೆ ಕಡೆಯವರಿಗೆ ಹೋರಾಡಿದ್ರಲ್ಲ… ಮತ್ತೆ ಅನಾಥ ವನ್ಯಜೀವಿಗಳಿಗೆ ತಮ್ಮ ಎದೆಹಾಲು ಕುಡಿಸುವ ಪೋಟೋ ಎಲ್ಲಾ ನೋಡಿದಿವಲ್ಲ… ಅವ್ರಲ್ವಾ!?” ಅಂದ್ರು. ಅನಂತರ ನಾನು ಮಾತು ಮುಂದುವರೆಸಿ “ಹೌದು ಅವರೆ.
ಬೀಷ್ಣೋಯಿ ಜನಾಂಗದವರ ಪರಿಸರ ಹಾಗೂ ವನ್ಯಜೀವಿ ಪ್ರೇಮಕ್ಕೆ ದೊಡ್ಡ ಐತಿಹಾಸಿಕ ಹಿನ್ನೆಲೆ ಇದೆ. 1730 ರಲ್ಲಿ ಜೋದಪುರದ ರಾಜ ಅಭಯ್ ಸಿಂಗ್’ನ ಸೈನಿಕರು, ತಮ್ಮ ರಾಜ್ಯದ ಹೊಸ ಅರಮನೆ ನಿರ್ಮಾಣಕ್ಕಾಗಿ ಬೀಷ್ಣೋಯಿಗಳ ಬಾಹುಳ್ಯದ ಕೇಜರ್ಲಿ ಗ್ರಾಮಕ್ಕೆ ಬಂದು ಆ ಭಾಗದ ಅಪರೂಪದ ಮರವಾಗ ಕೇಜ್ರಿ ಮರ (Prosopis cineraria) ಗಳನ್ನು ಕಡಿಯಲು ಮುಂದಾಗುತ್ತಾರೆ. ಆಗ ಅವುಗಳನ್ನು ಕಡಿಯದಂತೆ ಬೀಷ್ಣೋಯಿಗಳು, ಸೈನಿಕರಿಗೆ ಪ್ರತಿರೋಧ ತೋರುತ್ತಾರೆ. ಇದರಿಂದ ಕೆರಳಿದ ರಾಜನ ಸೈನಿಕರು ಮಹಿಳೆ ಮಕ್ಕಳು ಸೇರಿದಂತೆ ಒಟ್ಟು 363 ಜನರನ್ನು ಹತ್ಯೆ ಮಾಡುತ್ತಾರೆ.
ಈ ಘಟನೆ ನಡೆದ ದಿನವಾದ ಸೆಪ್ಟೆಂಬರ್ 10ನ್ನು ಭಾರತದಾದ್ಯಂತ ‘ಅರಣ್ಯ ಹುತಾತ್ಮರ ದಿನ’ ಎಂದು ಆಚರಿಸಲಾಗುತ್ತಿದ್ದು, ಬೀಷ್ಣೋಯಿಗಳನ್ನು ಸೇರಿ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗಾಗಿ ಹೋರಾಡಿ ಹುತಾತ್ಮರಾದ ಎಲ್ಲರನ್ನು ಆ ದಿನ ಸ್ಮರಿಸಲಾಗುತ್ತದೆ.” ಎಂದು ಬೀಷ್ಣೋಯಿಗಳ ಕುರಿತಾದ ವಿವರಗಳನ್ನು ಅವರಿಗೆ ತಿಳಿಸಿದೆ.
ಅವರಿಗೆ ಕೇಜ್ರಿ ಮರಗಳ ಬಗ್ಗೆ ಹೇಳಿದಾಗ ಅವುಗಳ ಪೋಟೋವನ್ನು ತೋರಿಸಿದಾಗ ಆಗಲೇ ರಾಜಸ್ಥಾನದಲ್ಲಿದ್ದ ಅವರ ತಂದೆಗೆ ಕರೆ ಮಾಡಿ ಕೇಜ್ರಿ ಮರಗಳ ಕುರಿತು ಕೇಳಿದರು. ನನ್ನ ಬಳಿಯೂ ಅವರ ಜೊತೆ ಮಾತನ್ನಾಡಿಸಿದರು. ಕೇಜ್ರಿ ಮರದ ಬಗ್ಗೆ ಸ್ವಲ್ಪ ವಿವರಣೆ ಹೇಳಿದಾಕ್ಷಣ ಅವರ ತಂದೆ ಮರವನ್ನು ಗುರ್ತಿಸಿದರು. ಸಾಧ್ಯವಾದರೆ ಆ ಮರದ ಒಂದೆರಡು ಸಸಿ ಅಥವಾ ಒಂದಷ್ಟು ಬೀಜಗಳನ್ನು ಸಂಗ್ರಹಿಸಿ ಕೊಡಿ ಎಂದು ಹೇಳಿದೆ. ಖಂಡಿತಾ ಸಂಗ್ರಹಿಸಿ ಕೊಡುತ್ತೇನೆ ಎಂದು ಅವರು ಹೇಳಿದರು.
ಹೀಗೆ ಬೈರವ್ ಸಿಂಗ್’ರವರ ಪರಿಚಯ ಕೇಜ್ರಿ ಮರವನ್ನು ನಮ್ಮಲ್ಲಿ ಬೆಳಸಿ ಪರಿಚಯಿಸುವ ಪ್ರಯತ್ನಕ್ಕೆ ಕಾರಣವಾಯಿತು.
(ಲೇಖನ ಕೃಪೆ : ಪರಿಸರ ಪರಿವಾರ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವನಗರಿ ಸುದ್ದಿದಿನ ಪತ್ರಿಕೆಯ ದೀಪಾವಳಿ ವಿಶೇಷಾಂಕ- 2026 ರ ಕತೆ – ಕವಿತೆ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ ಹಾಗೂ ಶ್ಯಾಮ್ ಪ್ರಕಾಶನ, ನವಿಲೇಹಾಳು ವತಿಯಿಂದ ದೀಪಾವಳಿ ವಿಶೇಷಾಂಕ-2026 ರ ಕತೆ ಮತ್ತು ಕವಿತೆ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಕತಾ ಸ್ಪರ್ಧೆಯಲ್ಲಿ ಅನಂತ್ ಕುಣಿಗಲ್ ಅವರ ́ಸಂಸʼ ಕತೆಗೆ ಪ್ರಥಮ ಬಹುಮಾನ,. ರವಿ ಮಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ದ್ವಿತೀಯ ಬಹುಮಾನ ಹಾಗೂ ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕರಾದ ಗೋವರ್ಧನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಜೇಯ ಸಿಂಹ ಕೆ.ವಿ. ಅವರ ʼಮಾರ್ಜಕದ ಶ್ರೀಮುಡಿʼ, ಟಿ.ಆರ್. ಪ್ರಕಾಶ ಭಾಗವತ ಅವರ ʼಸಮಾಧಿʼ , ರಘುನಂದನ್ ಅವರ ʼಹೀಗೊಂದು ಕಛೇರಿʼ , ಡಾ||. ಮಿರ್ಜಾ ಬಷೀರ್ ಅವರ ʼ ಒಂದು ಸದ್ದಿಲ್ಲದ ಕ್ರಾಂತಿʼ, ಸುಜಾತ ಎಸ್. ಎನ್ ರೆಡ್ಡಿ ಅವರ ʼ ಸತ್ಯ ದರ್ಶನʼ, ಚಂದ್ರಿಕಾ ನಾಗರಾಜ್ ಹಿರಿಯಡಕ ಅವರ ʼ ವೆಂಕಟನ ಸ್ವೆಟರ್, ರೈಹಾನ ಅವರ ʼಬಾವಿಗೆ ಬಿದ್ದರೂʼ, ಒಟ್ಟು ಈ ಏಳುಕತೆಗಳು ತೀರ್ಪುಗಾರ ಮೆಚ್ಚುಗೆ ಪಡೆದಿವೆ.
ಕತಾ ಸ್ಪರ್ಧೆಯ ತೀರ್ಪುಗಾರರಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕತೆಗಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಅಮರೇಶ ನುಗಡೋಣಿ, ಹೊಸಪೇಟೆ, ಕವಿ ಕತೆಗಾರ , ಜಿ. ಮುದ್ದುವೀರಸ್ವಾಮಿ, ದಾವಣಗೆರೆ, ಕತೆಗಾರ್ತಿ ಹಾಗೂ ಕನ್ನಡ ಪ್ರಾಧ್ಯಾಪಕಿ, ಸುಜಾತ ಚಲಾವಾದಿ, ತಾಳಿಕೋಟೆ, ಕತೆಗಾರ ಹಾಗೂ ಅಕ್ಷರ ಸಂಗಾತ ಮಾಸ ಪತ್ರಿಕೆಯ ಸಂಪಾದಕ ಡಾ. ಟಿ ಎಸ್. ಗೊರವರ, ಗಜೇಂದ್ರಘಡ ಇವರು ಕಾರ್ಯನಿವಹಿದ್ದರು ಎಂದು ಮಾಹಿತಿ ನೀಡಿದ್ಧಾರೆ.
ಪ್ರಥಮ ಬಹುಮಾನ ಹತ್ತು ಸಾವಿರ ರೂ (10000 ರೂ ) ನಗದು, ದ್ವೀತೀಯ ಬಹುಮಾನ ಐದು ಸಾವಿರ ನಗದು, (5000 ರೂ), ತೃತೀಯ ಬಹುಮಾನ ಮೂರು ಸಾವಿರ (3000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ನೀಡಲಾಗುವುದು.
ಕವಿತೆ ಸ್ಪರ್ಧೆ ಫಲಿತಾಂಶ
ಕವಿತೆ ಸ್ಪರ್ಧೆಯಲ್ಲಿ ಆನಂದ ಕುಂಚನೂರ ಅವರ ʼ ಬೆತ್ತಲೆ ಶಿಖರʼ ಕವಿತೆಗೆ ಪ್ರಥಮ ಬಹುಮಾನ, ಅಜಯ್ ಅಂಗಡಿ ಅವರ ʼಒಂದು ಶ್ರಾವಣ ಸಂಜೆಗೆʼ ದ್ವಿತೀಯ ಬಹುಮಾನ, ಭಾಗ್ಯ ಜ್ಯೋತಿ ಹಿರೇಮಠ ಅವರ ʼ ಗೋಡೆ ಕವಿತೆಗೆ ತೃತೀಯ ಬಹುಮಾನ ದೊರೆತಿದೆ.
ಫೈಜ್ನಟ್ರಾಜ್ ಅವರ ʼಅವ್ವ ತಟ್ಟಿದ ರೊಟ್ಟಿಯಲ್ಲಿ ಬೆರಳಿನ ಗುರುತುʼ, ಹೊನ್ನಪ್ಪ. ನೀ. ಕರೆಕನ್ನಮ್ಮನವರ ಅವರ ʼಒಂಟಿಯಾನದ ಸರಕುʼ, ಕವಿತ ಎ.ವಿ ಅವರ ʼಬಂದಿದ್ದಾರೆ ಸಿಕ್ಕಿಲ್ಲʼ, ರಮ್ಯ ಕೆ.ಜಿ. ಅವರ ʼಬಿಡಿಸಿಕೊಳ್ಳುತ್ತದೊಂದು ಚಿತ್ರ,ʼ, ಮುರ್ತುಜಾ ಬೇಗಂ ಕೊಡಗಲಿ ಅವರ ʼಒಂದು ಕನ್ನಡಿ ಮೂರು ಬಿಂಬಗಳುʼ, ಮನಸ್ವಿ ಎಂ ಸ್ವಾಮಿ ಅವರ ʼ ರಾಜಧಾನಿಯಲ್ಲಿ ರಾಜʼ, ವೀಣಾ ರಾವ್ ಅವರ ʼಬಣ್ಣಗಳ ಆಚೆಗೆʼ ಒಟ್ಟು ಏಳು ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಕವಿತೆ ಸ್ಪರ್ಧೆಯ ತೀರ್ಪುಗಾರರಾಗಿ ಕವಿ ಚಂದ್ರಶೇಖರ ತಾಳ್ಯ, ಹೊಳಲ್ಕೆರೆ, ಕವಯಿತ್ರಿ ಸವಿತಾ ನಾಗಭೂಷಣ, ಶಿವಮೊಗ್ಗ, ಕವಿ ವಿಲ್ಸನ್ ಕಟೀಲು ಅವರು ಕಾರ್ಯನಿರ್ವಹಿಸಿದ್ದರು.
ಪ್ರಥಮ ಬಹುಮಾನ ಐದು ಸಾವಿರ ರೂ (5000 ರೂ ) ನಗದು, ದ್ವೀತೀಯ ಬಹುಮಾನ ಮೂರು ಸಾವಿರ ನಗದು, (3000 ರೂ), ತೃತೀಯ ಬಹುಮಾನ ಎರಡು ಸಾವಿರ (2000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ಇದೇ ಅಕ್ಟೋಬರ್ 24 ರಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ʼ ನಡೆಯುವ ದೀಪಾವಳಿ ವಿಶೇಷಾಂಕ-2026 ರ ಬಿಡುಗಡೆ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: 9980346243 ಸಂಪರ್ಕಿಸಲು ಈ ಮೂಲಕ ತಿಳಿಸಲಾಗಿದೆ.

ದಿನದ ಸುದ್ದಿ
5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
ಸುದ್ದಿದಿನ, ಬೆಂಗಳೂರು: ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಚಂದಾದಾರರಲ್ಲಿ ಬಹುದಿನಗಳಿಂದ ಒಂದು ದೊಡ್ಡ ಗೊಂದಲವಿದೆ. ನಾನು ಕೆಲಸ ಬಿಟ್ಟಿದ್ದೇನೆ, ಕಳೆದ 5 ವರ್ಷಗಳಿಂದ ಪಿಎಫ್ ಖಾತೆಗೆ ಹಣ ಜಮೆಯಾಗಿಲ್ಲ, ಹಾಗಾದರೆ ನನ್ನ ಖಾತೆಗೆ ಇನ್ನೂ ಬಡ್ಡಿ ಸಿಗುತ್ತದೆಯೇ ಅಥವಾ ನನ್ನ ಹಣ ಹಾಗೆಯೇ ಉಳಿದುಕೊಳ್ಳುತ್ತದೆಯೇ?’ ಎಂಬುದು ಆ ಪ್ರಶ್ನೆ. ಈ ಪ್ರಶ್ನೆಗೆ ಇಪಿಎಫ್‌ಒ ನೇರವಾಗಿ ನೀಡಿರುವ ಉತ್ತರ – ಹೌದು, ಖಂಡಿತವಾಗಿಯೂ ಬಡ್ಡಿ ಸಿಗುತ್ತದೆ’.ಪಿಎಫ್‌ಗೆ ಹಣ ಜಮಾ ಮಾಡುವುದು ನಿಂತ ತಕ್ಷಣವೇ ಬಡ್ಡಿ ಬರುವುದು ನಿಂತುಹೋಗುತ್ತದೆ ಎಂಬುದು ಹಲವರಲ್ಲಿರುವ ತಪ್ಪು ಕಲ್ಪನೆ. ಆದರೆ ವಾಸ್ತವವೇ ಬೇರೆ.
http://Visit : www.suddidina.com
3 ವರ್ಷಗಳ ಹಳೆಯ ನಿಯಮದ ಅಸಲಿ ಸತ್ಯವೇನು?
ಈ ಗೊಂದಲಕ್ಕೆ ಕಾರಣ 2016ಕ್ಕಿಂತ ಮೊದಲು ಇದ್ದ ನಿಯಮ. ಹಳೆಯ ನಿಯಮದ ಪ್ರಕಾರ, ಒಂದು ಪಿಎಫ್ ಖಾತೆಗೆ ಸತತ 36 ತಿಂಗಳು (3 ವರ್ಷ) ಯಾವುದೇ ವಂತಿಗೆ ಜಮೆಯಾಗದಿದ್ದರೆ, ಅದನ್ನು `ನಿಷ್ಕ್ರಿಯ ಖಾತೆ’ (Inoperative Account) ಎಂದು ಪರಿಗಣಿಸಲಾಗುತ್ತಿತ್ತು ಮತ್ತು ಅಂತಹ ಖಾತೆಗೆ ಬಡ್ಡಿ ನೀಡುವುದನ್ನು ತಡೆಹಿಡಿಯಲಾಗುತ್ತಿತ್ತು. ಇದರಿಂದಾಗಿ ಲಕ್ಷಾಂತರ ಖಾತೆದಾರರ ಹಣಕ್ಕೆ ಬಡ್ಡಿ ಸಿಗದೆ ನಷ್ಟವಾಗುತ್ತಿತ್ತು.ಆದರೆ ಚಂದಾದಾರರ ಹಿತದೃಷ್ಟಿಯಿಂದ ಇಪಿಎಫ್‌ಒ 2016 ರಲ್ಲಿ ಈ ನಿಯಮಕ್ಕೆ ಮಹತ್ವದ ತಿದ್ದುಪಡಿ ತಂದಿದೆ. ಹೊಸ ಮತ್ತು ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ, ಖಾತೆದಾರನಿಗೆ 58 ವರ್ಷ ವಯಸ್ಸಾಗುವವರೆಗೆ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ನಿಯಮಿತವಾಗಿ ಚಕ್ರಬಡ್ಡಿ (Compounding Interest) ಜಮೆಯಾಗುತ್ತಲೇ ಇರುತ್ತದೆ. ನೀವು ಕೆಲಸದಲ್ಲಿದ್ದರೂ, ಇಲ್ಲದಿದ್ದರೂ ಇದು ಅನ್ವಯಿಸುತ್ತದೆ.
ಉದಾಹರಣೆ:
ಇದನ್ನು ಒಂದು ಉದಾಹರಣೆಯೊಂದಿಗೆ ನೋಡೋಣ. ಒಬ್ಬ ವ್ಯಕ್ತಿ ತಮ್ಮ 40ನೇ ವಯಸ್ಸಿನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ, ತಮ್ಮ ಪಿಎಫ್ ಖಾತೆಯಲ್ಲಿದ್ದ 10 ಲಕ್ಷ ರೂಪಾಯಿಯನ್ನು ಹಿಂಪಡೆಯದೆ ಹಾಗೆಯೇ ಬಿಡುತ್ತಾರೆ ಎಂದುಕೊಳ್ಳಿ. ಅವರು ಮುಂದಿನ 5 ವರ್ಷಗಳ ಕಾಲ ಅಂದರೆ 45ನೇ ವಯಸ್ಸಿನವರೆಗೆ ಯಾವುದೇ ಹಣವನ್ನು ಜಮೆ ಮಾಡದಿದ್ದರೂ, ಅವರ ಖಾತೆಯಲ್ಲಿರುವ ಆ 10 ಲಕ್ಷ ರೂಪಾಯಿಗೆ ಇಪಿಎಫ್‌ಒ ಪ್ರತಿ ವರ್ಷ ಘೋಷಿಸುವ ಬಡ್ಡಿ ದರದಂತೆ (ಪ್ರಸ್ತುತ 8.25%) ಬಡ್ಡಿ ಸೇರ್ಪಡೆಯಾಗುತ್ತಲೇ ಹೋಗುತ್ತದೆ. ಇದು ಅವರಿಗೆ 58 ವರ್ಷ ತುಂಬುವವರೆಗೆ ಅಂದರೆ ಇನ್ನೂ 13 ವರ್ಷಗಳ ಕಾಲ ನಿರಂತರವಾಗಿ ಸಿಗುತ್ತದೆ. ಅದೇ ರೀತಿ 50ನೇ ವಯಸ್ಸಿನಲ್ಲಿ ಕೆಲಸ ಬಿಟ್ಟವರಿಗೆ 58 ವರ್ಷದವರೆಗೆ 8 ವರ್ಷಗಳ ಕಾಲ ಬಡ್ಡಿ ಸಿಗುತ್ತದೆ.
ಈ ಒಂದು ತೆರಿಗೆ ನಿಯಮವನ್ನು ಮಾತ್ರ ಮರೆಯಬೇಡಿ!
ನಿಮ್ಮ ಹಣಕ್ಕೆ ಬಡ್ಡಿ ಸಿಗುತ್ತದೆ ಎಂಬುದು ಖುಷಿಯ ವಿಚಾರವೇ, ಆದರೆ ಇಲ್ಲಿ ಒಂದು ಪ್ರಮುಖ ತೆರಿಗೆ ಎಚ್ಚರಿಕೆಯಿದೆ. ನೀವು ಕೆಲಸ ಮಾಡುತ್ತಿರುವಾಗ ನಿಮ್ಮ ಪಿಎಫ್ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ. ಆದರೆ ನೀವು ಕೆಲಸ ಬಿಟ್ಟ ನಂತರ ನಿಮ್ಮ ಖಾತೆಗೆ ಜಮೆಯಾಗುವ ಬಡ್ಡಿಯನ್ನು ಆದಾಯ ತೆರಿಗೆ ಇಲಾಖೆಯು `ಇತರ ಮೂಲಗಳಿಂದ ಬಂದ ಆದಾಯ’ (Income from Other Sources) ಎಂದು ಪರಿಗಣಿಸುತ್ತದೆ. ಆದ್ದರಿಂದ ಆ ಬಡ್ಡಿಯ ಮೊತ್ತವನ್ನು ನೀವು ನಿಮ್ಮ ವಾರ್ಷಿಕ ಆದಾಯದಲ್ಲಿ ತೋರಿಸಿ, ನಿಮ್ಮ ತೆರಿಗೆ ಸ್ಲ್ಯಾಬ್‌ಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.
ಖಾತೆದಾರರು ಏನು ಮಾಡಬೇಕು?
1. ಕೆಲಸ ಬದಲಾಯಿಸಿದ್ದರೆ: ಹಳೆಯ ಕಂಪನಿಯ ಪಿಎಫ್ ಹಣವನ್ನು ವಿತ್‌ಡ್ರಾ ಮಾಡುವ ಬದಲು, ನಿಮ್ಮ ಯುಎಎನ್ (UAN) ಮೂಲಕ ಹೊಸ ಕಂಪನಿಯ ಖಾತೆಗೆ ವರ್ಗಾವಣೆ (Transfer) ಮಾಡಿಕೊಳ್ಳಿ. ಇದರಿಂದ ನಿಮ್ಮ ಸೇವಾ ಅವಧಿ ನಿರಂತರವಾಗಿರುತ್ತದೆ.
2. ವೃತ್ತಿ ವಿರಾಮದಲ್ಲಿದ್ದರೆ: 58 ವರ್ಷದವರೆಗೆ ಹಣ ಸುರಕ್ಷಿತವಾಗಿ ಬೆಳೆಯುತ್ತದೆ. ಆದರೆ ನಿಮಗೆ ತುರ್ತು ಅಗತ್ಯವಿಲ್ಲದಿದ್ದರೆ, ಹೆಚ್ಚಿನ ಆದಾಯಕ್ಕಾಗಿ ಬೇರೆಡೆ ಹೂಡಿಕೆ ಮಾಡುವ ಬಗ್ಗೆಯೂ ಯೋಚಿಸಬಹುದು.
3. 58 ವರ್ಷದ ನಂತರ: ಖಾತೆದಾರನಿಗೆ 58 ವರ್ಷ ತುಂಬಿದ ನಂತರವೂ ಹಣವನ್ನು ಹಿಂಪಡೆಯದಿದ್ದರೆ ಮಾತ್ರ ಆ ಖಾತೆಯನ್ನು ಮತ್ತೆ `ನಿಷ್ಕ್ರಿಯ’ ಎಂದು ಪರಿಗಣಿಸಿ ಬಡ್ಡಿ ನೀಡುವುದನ್ನು ಶಾಶ್ವತವಾಗಿ ನಿಲ್ಲಿಸಲಾಗುತ್ತದೆ.ಆದ್ದರಿಂದ 5 ವರ್ಷದಿಂದ ಹಣ ಜಮೆಯಾಗದಿದ್ದರೂ ಚಿಂತಿಸಬೇಕಿಲ್ಲ, ನಿಮ್ಮ ಪಿಎಫ್ ಹಣ ಇಪಿಎಫ್‌ಒ ನಲ್ಲಿ ಸುರಕ್ಷಿತವಾಗಿ ಬಡ್ಡಿಯೊಂದಿಗೆ ಬೆಳೆಯುತ್ತಿದೆ.



