ದಿನದ ಸುದ್ದಿ
ತುರ್ತುಪರಿಸ್ಥಿತಿಯ ಛಾಯೆಯೂ, ‘ಅರ್ನಾಬ್’ ಮಾಯೆಯೂ..!
- ನಾ ದಿವಾಕರ
“ಭೂತದ ಬಾಯಲ್ಲಿ ಭಗವದ್ಗೀತೆ,,,,” ಈ ಗಾದೆ ಮಾತಿಗೆ ಭಾರತವೇ ಜನ್ಮಭೂಮಿ. ಕರ್ಮಭೂಮಿಯೂ ಹೌದು. ಈ ಗಾದೆಯ ಅರ್ಥ ಏನು ಎಂದು ಕೇಳುವವರಿಗೆ ಭಾರತದ ರಾಜಕಾರಣಿಗಳ ಭಾಷಣ, ಹೇಳಿಕೆಗಳನ್ನು ಕೇಳುವಂತೆ ಸಲಹೆ ನೀಡಿದರೆ ಸಾಕು. ಅರ್ಥವಾಗಿಬಿಡುತ್ತದೆ. ಕಳೆದ ಆರು ವರ್ಷಗಳಲ್ಲಿ ಪ್ರಜಾತಂತ್ರ ಮೌಲ್ಯಗಳನ್ನು ಹಿಮಾಲಯದೆತ್ತರದಲ್ಲಿಟ್ಟು ವಿಶ್ವಮಾನ್ಯತೆ ಪಡೆದಿದ್ದ ಭಾರತದ ಆಡಳಿತ ವ್ಯವಸ್ಥೆ, ನ್ಯಾಯ ವ್ಯವಸ್ಥೆ ಮತ್ತು ಪ್ರಭುತ್ವಕ್ಕೆ ಇಂದು 1975ರ ಕರಾಳ ಛಾಯೆ ಆವರಿಸಿದಂತೆ ಕಾಣುತ್ತಿದೆ !!! ಈ ಹಿನ್ನೆಲೆಯಲ್ಲೇ ಮೇಲಿನ ಗಾದೆ ಮಾತು ಸಹ ನೆನಪಾಗುತ್ತಿದೆ.
ಜನಸಾಮಾನ್ಯರ ಪರಿಭಾಷೆಯಲ್ಲಿ ಬಚ್ಚಲುಬಾಯಿ ಎಂಬ ಪದವನ್ನು ಬಳಸುವುದನ್ನು ಕೇಳಿದ್ದೇವೆ. ಇತ್ತೀಚೆಗೆ ಈ ಬಚ್ಚಲು ಬಾಯಿ ಎಂಬ ಪದದ ಅರ್ಥವನ್ನೂ ನಮ್ಮ ರಾಜಕೀಯ ನಾಯಕರುಗಳು ಮನವರಿಕೆ ಮಾಡಿಕೊಟ್ಟಿದ್ದಾರೆ. ಭಾರತ ಸ್ವಚ್ಚವಾಗುತ್ತಿದೆ ಆದರೆ ಅಧಿಕಾರ ರಾಜಕಾರಣದ ವಾರಸುದಾರರ, ಜನಪ್ರತಿನಿಧಿಗಳ ಬಚ್ಚಲು ಬಾಯಿ ಸಂಸ್ಕೃತಿಯಿಂದ ಸಮಸ್ತ ಭಾರತವೇ ಕೊಳಕು ಎನಿಸುತ್ತಿದೆ.
ಬಹುಶಃ ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತವನ್ನು ಕೊಳಕು ಎಂದಾಗ ಇದೂ ಅವರ ಮನಸಿನಲ್ಲಿದ್ದಿರಬಹುದು ಈ ಹೊಲಸು ರಾಜಕಾರಣದ ಆಂತರಿಕ ಮಾಲಿನ್ಯವನ್ನು, ಬಾಹ್ಯ ಸ್ವರೂಪದ ತ್ಯಾಜ್ಯವನ್ನು ಹೊರಹಾಕಿ, ಪ್ರಜೆಗಳಲ್ಲಿ ಪ್ರಜಾತಂತ್ರ ಮೌಲ್ಯಗಳ ಬಗ್ಗೆ ಸುಪ್ರಜ್ಞೆ ಮೂಡಿಸುವ ಗುರುತರ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ಡಿಜಿಟಲ್ ಯುಗದಲ್ಲಿ ಇದು ವಿದ್ಯುನ್ಮಾನ ಸುದ್ದಿಮನೆಗಳ ಆದ್ಯತೆಯೂ ಆಗಬೇಕಿದೆ.
ಇಂತಹ ಒಂದು ಪ್ರಯತ್ನಕ್ಕೆ ಅವಕಾಶವನ್ನೂ ನೀಡದಂತೆ ಮಾಧ್ಯಮ ಜಗತ್ತನ್ನೇ ಘನತ್ಯಾಜ್ಯ ಶಿಖರವನ್ನಾಗಿ ಮಾಡುವುದರಲ್ಲಿ ತಮ್ಮದೇ ಆದ ಕೊಡುಗೆ ಸಲ್ಲಿಸಿರುವ ಸುದ್ದಿವಾಹಿನಿಯ ಸಂಪಾದಕ ಅರ್ನಾಬ್ ಗೋಸ್ವಾಮಿ ಇಂದು ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ.
ಮುಂಜಾನೆಯ ಹೊತ್ತಿನಲ್ಲಿ, ಯಾವುದೇ ಪೂರ್ವ ಸೂಚನೆ ಇಲ್ಲದೆ, ಏಕಾಏಕಿ ಮನೆಗೆ ನುಗ್ಗಿ, ಮೂರು ವರ್ಷದ ಹಿಂದಿನ ಆತ್ಮಹತ್ಯೆ ಪ್ರಕರಣವೊಂದರ ಹಿನ್ನೆಲೆಯಲ್ಲಿ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಿರುವ ರೀತಿ ಒಪ್ಪುವಂತಹುದಲ್ಲ.
ಟಿ ಆರ್ ಪಿ ಹಗರಣದಲ್ಲಿ ಗೋಸ್ವಾಮಿಯ ವಿರುದ್ಧ ಗುರುತರ ಆರೋಪಗಳು ಇರುವುದನ್ನೂ ಮರೆಯುವಂತಿಲ್ಲ. ಆದರೆ ಇಂದಿನ ಘಟನೆ ಮುಂಬೈ ಪೊಲೀಸರ ಉದ್ಧಟತನ, ಮಹಾರಾಷ್ಟ್ರ ಸರ್ಕಾರದ ಪ್ರಜಾತಂತ್ರ ವಿರೋಧಿ ಧೋರಣೆಯ ಸಂಕೇತ.
ನಿಜ, ಆದರೆ ಹೀಗೆ ಹೇಳುವ ನೈತಿಕ ಹಕ್ಕು ಮತ್ತು ಹೊಣೆಗಾರಿಕೆ ಇರುವ ರಾಜಕೀಯ ನಾಯಕರು ನಮ್ಮ ನಡುವೆ ಇದ್ದಾರೆಯೇ ? ಗೋಸ್ವಾಮಿಯ ಬಂಧನದ ನಂತರ ರಿಪಬ್ಲಿಕ್ ವಾಹಿನಿಯ ನಿರೂಪಕರು ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದ್ದುದನ್ನು ( ಸುದ್ದಿಮನೆಯ ಕೂಗುಮಾರಿ ಪರಿಭಾಷೆಯಲ್ಲಿ ಅರಚುತ್ತಿದ್ದುದು ಎಂದು ಓದಿಕೊಳ್ಳಬಹುದು) ಕಂಡು “ ಭೂತದ,,,,,” ಗಾದೆ ನೆನಪಾಯಿತು. ಈ ಗಾದೆಯ ಬಗ್ಗೆಯೇ ಅಸಹ್ಯ ಬರುವಂತಾಗಿದ್ದು ಕೆಲವು ಕೇಂದ್ರ ಬಿಜೆಪಿ ಸಚಿವರ ಟ್ವಿಟರ್ ಸಂದೇಶಗಳನ್ನು ಕಂಡು.
ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ “ ಹಿರಿಯ ಪತ್ರಕರ್ತ ಅರ್ನಾಬ್ ಗೋಸ್ವಾಮಿಯ ಬಂಧನ ಖಂಡನಾರ್ಹವಾಗಿದ್ದು, ಚಿಂತೆಗೀಡುಮಾಡುವ ವಿಚಾರವಾಗಿದೆ. ನಾವು 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೆವು ”
ಕೇಂದ್ರ ಗೃಹ ಸಚಿವ ಅಮಿತ್‍ಶಾ “ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸುವ ಮೂಲಕ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಪ್ರಜಾತಂತ್ರಕ್ಕೆ ಅವಮಾನ ಮಾಡಿವೆ.
ರಿಪಬ್ಲಿಕ್ ಟಿವಿ ವಿರುದ್ಧ ಅಧಿಕಾರ ದುರುಪಯೋಗ ಮಾಡಿದೆ. ವ್ಯಕ್ತಿಗತ ಸ್ವಾತಂತ್ರ್ಯ ಮತ್ತು ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭದ ಮೇಲೆ ಆಕ್ರಮಣ ನಡೆಸುವ ಮೂಲಕ ತುರ್ತುಪರಿಸ್ಥಿತಿಯನ್ನು ನೆನಪಿಸಿದೆ ”. ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವ ಪ್ರಕಾಶ್ ಜಾವಢೇಕರ್ “ ಮಹಾರಾಷ್ಟ್ರದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆದಿರುವ ಆಕ್ರಮಣವನ್ನು ನಾವು ಖಂಡಿಸುತ್ತೇವೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇದೇ ರೀತಿ ನಡೆಯುತ್ತಿದ್ದುದನ್ನು ಇದು ನೆನಪಿಸುತ್ತದೆ.”
ಈ ಮೂರೂ ಅಣಿಮುತ್ತುಗಳನ್ನು ಕೇಳಿಸಿಕೊಳ್ಳುವ ಕಿವಿಗಳೇ ಧನ್ಯ ಅಲ್ಲವೇ ? ನಿಜ, ಮಹಾರಾಷ್ಟ್ರ ಪೊಲೀಸರ ನಡೆ ಅಕ್ಷಮ್ಯ, ಸರ್ಕಾರದ ಧೋರಣೆ ಖಂಡನಾರ್ಹ ಆದರೆ ಶಿವಸೇನೆ ಪಳಗಿರುವ ಗರಡಿಯಲ್ಲೇ ಈ ಮೂವರೂ ನಾಯಕರು ಪಳಗಿರುವುದಲ್ಲವೇ ? ಅರ್ನಾಬ್ ಗೋಸ್ವಾಮಿಯ ವಿರುದ್ಧ ಗಂಭೀರ ಆರೋಪಗಳು ಇದ್ದುದೇ ಆದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಇದು ಶಿವಸೇನೆಯ ಸಂಸ್ಕೃತಿಗೆ ಹೊರತಾದದ್ದು ಎನ್ನುವುದನ್ನು ಬಿಜೆಪಿ ನಾಯಕರು ಮರೆತಿದ್ದಾರೆಯೇ ? ಇಂದು ಶಿವಸೇನೆ ಕಾಂಗ್ರೆಸ್ ಬಾಹುಗಳಲ್ಲಿದೆ. ಆದರೆ ಹುಟ್ಟಿದ ದಿನದಿಂದಲೂ ಬೆಳೆದಿದ್ದು ಸಂಘಪರಿವಾರದ ಮಡಿಲಲ್ಲೇ ಅಲ್ಲವೇ ?
ಈ ಗೋಸುಂಬೆಗಳನ್ನು ಬದಿಗಿಟ್ಟು ಭಾರತದ ಪ್ರಸ್ತುತ ಸನ್ನಿವೇಶವನ್ನು ಒಮ್ಮೆ ಗಮನಿಸೋಣ. ಇತ್ತೀಚೆಗೆ ತಾನೇ ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗನ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದ ಪವರ್ ಟಿವಿ ವಾಹಿನಿಯನ್ನು ಮಾನ್ಯ ಮುಖ್ಯಮಂತ್ರಿಯವರು ಮುಚ್ಚಿಸಿಬಿಟ್ಟರು. ಈಗ ಮತ್ತೊಂದು ಹೆಸರಿನಲ್ಲಿ ಆರಂಭವಾಗಿದ್ದರೂ ಬಾಯಿ ಮುಚ್ಚಿಸಿದಂತೆ ಕಾಣುತ್ತಿದೆ.
ಮಾಧ್ಯಮ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಇವೆಲ್ಲವನ್ನೂ ಗೌರವಿಸುತ್ತಲೇ ಅರ್ನಾಬ್ ಅವರನ್ನು ಬಂಧಿಸಿದ ರೀತಿಯನ್ನು ಖಂಡಿಸೋಣ. ಆದರೆ ದೇಶಾದ್ಯಂತ ಪತ್ರಕರ್ತರ ವಿರುದ್ಧ ರಣಬೇಟೆಯಾಡಿದ ಕೇಂದ್ರ ಸರ್ಕಾರದ ಕ್ರಮಗಳನ್ನು ಮೇಜು ಕುಟ್ಟಿ ಸ್ವಾಗತಿಸುತ್ತಾ ಭಟ್ಟಂಗಿಯಂತೆ ಪ್ರಭುತ್ವದ ಹೆಜ್ಜೆಗೆ ಗೆಜ್ಜೆಯಾಗಿ, ತಮ್ಮ ಪತ್ರಿಕಾ ವೃತ್ತಿಧರ್ಮವನ್ನೂ ಮರೆತು ವರ್ತಿಸಿದ ಅರ್ನಾಬ್ ಗೋಸ್ವಾಮಿಯಾಗಲೀ ಅಥವಾ ಇತರ ಬಿಜೆಪಿ ನಾಯಕರಾಗಲೀ ಈ ಪ್ರಕರಣದ ಬಗ್ಗೆ ಕನಿಷ್ಟ ಮಾತನಾಡುವ ನೈತಿಕತೆಯನ್ನು ಉಳಿಸಿಕೊಂಡಿದ್ದಾರೆಯೇ ? ನಮ್ಮನ್ನೇ ಪ್ರಶ್ನಿಸಿಕೊಳ್ಳೋಣ.
ಅರ್ನಾಬ್ ಗೋಸ್ವಾಮಿಯನ್ನು ಮೂರು ವರ್ಷದ ಹಿಂದಿನ ಆತ್ಮಹತ್ಯೆಯ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿಸಿರುವುದೇ ಮಹಾರಾಷ್ಟ್ರ ಸರ್ಕಾರದ ಘೋರ ಅಪರಾಧ ಎಂದಾದರೆ, ಸುಮ್ಮನೆ ಗುಜರಾತ್‍ನ ಹಿರಿಯ ಅಧಿಕಾರಿ ಸಂಜೀವ್ ಭಟ್ ಅವರನ್ನು ನೆನೆಯಿರಿ. ಮೂವತ್ತು ವರ್ಷದ ಹಿಂದಿನ , ಮುಚ್ಚಿಹೋಗಿದ್ದ ಪ್ರಕರಣದ ಕಡತವನ್ನು ಹೆಕ್ಕಿ ತೆಗೆದು ಅವರನ್ನು ಬಂಧಿಸಿದಾಗ ಭಾರತದ ಎಷ್ಟು ಸುದ್ದಿಮನೆಗಳು ವಿರೋಧಿಸಿದ್ದವು ? ಮಾನ್ಯ ಗೋಸ್ವಾಮಿ ಎಲ್ಲಿದ್ದರು ಸ್ವಾಮಿ ? ಭಾರತದ ಜನಸಾಮಾನ್ಯರು ಮಾಸ್ಕ್ ಧರಿಸುತ್ತಿರುವುದು ಕೊರೋನಾ ಬಂದ ನಂತರ. ಭಾರತದ ಬಹುತೇಕ ಸುದ್ದಿಮಾಧ್ಯಮಗಳು 2014ರಿಂದಲೇ ಮಾಸ್ಕ್ ಧರಿಸಲಾರಂಭಿಸಿವೆ.
ಸ್ವತಂತ್ರ ಭಾರತದ ಕಾನೂನು ವ್ಯವಸ್ಥೆಯಲ್ಲಿ ಎಫ್‍ಐಆರ್ ಎಂಬ ಪದ ಜನಸಾಮಾನ್ಯರ ಅರಿವಿಗೆ ನಿಲುಕದಷ್ಟು ಅಪರೂಪವಾಗಿತ್ತು. ಯಾವುದೋ ಗಂಭೀರ ಅಪರಾಧಗಳಲ್ಲಿ ಮಾತ್ರ ಈ ಪದ ಕೇಳಿಬರುತ್ತಿತ್ತು. ಆದರೆ ಕಳೆದ ಆರು ವರ್ಷಗಳಲ್ಲಿ ಎಫ್‍ಐಆರ್ ಎನ್ನುವುದು ಸಂತೆಯಲ್ಲಿನ ಸರಕಿನಂತೆ ಕಾಣುತ್ತಿದೆ.
ದೇಶದ್ರೋಹದ ಆರೋಪ ಮತ್ತು ಎಫ್‍ಐಆರ್ ಅಧಿಕಾರಸ್ಥರ ಬತ್ತಳಿಕೆಯಲ್ಲಿರುವ ಸುಲಭ ಅಸ್ತ್ರಗಳಾಗಿರುವುದರಿಂದಲೇ ಕೊರೋನಾ ಸಂದರ್ಭದಲ್ಲೇ 55 ಪತ್ರಕರ್ತರ ವಿರುದ್ಧ 22 ಎಫ್‍ಐಆರ್ ದಾಖಲಿಸಲಾಗಿದೆ. ಮಾರ್ಚ್ 25 ರಿಂದ ಜೂನ್ 30ರ ಅವಧಿಯಲ್ಲಿ ಕೋವಿದ್19 ವರದಿಗಳಿಗೆ ಸಂಬಂಧಪಟ್ಟಂತೆ ಇಷ್ಟು ಎಫ್‍ಐಆರ್ ಗಳನ್ನು ಪತ್ರಕರ್ತರ ವಿರುದ್ಧ ದಾಖಲಿಸಲಾಗಿದೆ.
ದ ವೈರ್ ಪತ್ರಿಕೆಯ ಸಿದ್ಧಾರ್ಥ ವರದರಾಜನ್, ವಿನೋದ್ ದುವಾ, ಅಮ್ನೆಸ್ಟಿ ಇಂಟರ್‍ನ್ಯಾಷನಲ್ ಸಂಸ್ಥೆಯ ಮಾಜಿ ನಿರ್ದೇಶಕ ಮತ್ತು ಅಂಕಣಕಾರ ಆಕರ್ ಪಟೇಲ್, ಸ್ಕ್ರೋಲ್ ಪತ್ರಿಕೆಯ ಸುಪ್ರಿಯಾ ಶರ್ಮ ಇವರು ಕೇಂದ್ರ ಸರ್ಕಾರದ ಪ್ರಹಾರಕ್ಕೆ ಬಲಿಯಾಗುತ್ತಿದ್ದಾರೆ. ಸುಪ್ರಿಯಾ ಶರ್ಮ ಅವರ ಅಪರಾಧ ಏನು ಗೊತ್ತೇ ? ಪ್ರಧಾನಮಂತ್ರಿ ಮೋದಿ ಸಂಸದ್ ಆದರ್ಶ ಗ್ರಾಮ ಯೋಜನೆಯಡಿ ದತ್ತುಪಡೆದಿರುವ ವಾರಣಾಸಿಯ ದೊಹಾರಿ ಗ್ರಾಮದಲ್ಲಿನ ಜನಜೀವನವನ್ನು ತೆರೆದಿಟ್ಟಿದ್ದು. ಉತ್ತರಪ್ರದೇಶದಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ವರದಿ ಮಾಡಿದ್ದ ಪವನ್ ಕುಮಾರ್ ಜೈಸ್ವಾಲ್ ಮತ್ತೋರ್ವ ಎಫ್‍ಐಆರ್ ಬಲಿ.
ಕೊರೋನಾ ಸಂದರ್ಭದಲ್ಲಿ ಮಹಾರಾಷ್ಟ್ರದ ವಲಸೆ ಕಾರ್ಮಿಕರ ಸಮಸ್ಯೆಗೆ ಕೋಮು ಬಣ್ಣ ನೀಡಿದ್ದ ಅರ್ನಾಬ್ ವಿರುದ್ಧ ದಾಖಲಿಸಿದ್ದ ಎಫ್‍ಐಆರ್ ಮುಂಬೈ ಹೈಕೋರ್ಟ್ ಕೃಪೆಯಿಂದ ರದ್ದಾಗಿದೆ. ಸೂಫಿ ಸಂತ ಮೊಯಿನುದ್ದಿನ್ ಕ್ರಿಸ್ಟಿಯನ್ನು ದರೋಡೆಕೋರ ಎಂದು ಅವಮಾನಿಸಿದ ಅಮೀಶ್ ದೇವಗನ್ ಸಹ ಕೋರ್ಟ್ ಕೃಪೆಗೆ ಪಾತ್ರರಾಗಿದ್ದಾರೆ. ಆದರೆ ತಮ್ಮ ಪತ್ರಿಕಾ ಧರ್ಮ ಪಾಲಿಸುತ್ತಾ ಜನಸಾಮಾನ್ಯರಿಗೆ ಸತ್ಯ ಹೇಳುವ ಆಕರ್ ಪಟೇಲ್, ವಿನೋದ್ ದುವಾ ಪೊಲೀಸ್ ಠಾಣೆಗೆ ಅಲೆಯುತ್ತಿದ್ದಾರೆ.
ಅರ್ನಾಬ್ ಗೋಸ್ವಾಮಿ ಬಂಧನದ ವೈಖರಿಯನ್ನು ಖಂಡಿಸೋಣ. ಬಂಧನಕ್ಕೆ ಕಾರಣಗಳಿದ್ದರೆ ಬಿಡುಗಡೆಗೂ ಕಾರಣಗಳಿರುತ್ತವೆ. ಎಲ್ಲವೂ ಅಧಿಕಾರ ಪೀಠದ ಕೃಪೆಯನ್ನು ಆಧರಿಸಿರುತ್ತದೆ. ಯಾವುದೇ ಆರೋಪ ಇಲ್ಲದೆ, ವಾರಂಟ್ ಇಲ್ಲದೆ, ಏಕಾಏಕಿ ಬಂಧಿಸುವುದು ಘೋರ ಅಪರಾಧವೇನೋ ಹೌದು. ಇದು ಕಾನೂನು, ಸಂವಿಧಾನ, ಪೊಲೀಸ್ ನಿಯಮಾವಳಿ ಮತ್ತು ವಾಕ್ ಸ್ವಾತಂತ್ರ್ಯಕ್ಕೆ ಮಾನ್ಯತೆ ನೀಡುವವರಿಗೆ ಅನ್ವಯಿಸುವ ಮಾತು.
ಭೀಮಾ ಕೊರೆಗಾಂವ್ ಪ್ರಕರಣದ ಹಿನ್ನೆಲೆಯಲ್ಲಿ ಆನಂದ್ ತೇಲ್ತುಂಬ್ಡೆಯವರನ್ನು ಬಂಧಿಸಿದ ರೀತಿ ಜಗಜ್ಜಾಹೀರಾಗಿದೆ. ಈ ಬಂಧನದ ಸಮಯದಲ್ಲಿ ಗೋಸ್ವಾಮಿಯವರ ಕೂಗುಮಾರಿ ಸುದ್ದಿವಾಚನವನ್ನು ಪ್ರಜ್ಞೆ ಇರುವವರು ಮರೆತಿರಲಾರರು. ಇತ್ತೀಚೆಗೆ 83ರ ವೃದ್ಧ, ಸಾಮಾಜಿಕ ಕಾರ್ಯಕರ್ತರಾದ ಸ್ಟಾನ್ ಸ್ವಾಮಿಯವರನ್ನು ಬಂಧಿಸಿದಾಗ, ಸುಧಾ ಭರದ್ವಾಜ್, ವರಾವರರಾವ್, ಉಮರ್ ಖಲೀದ್, ಗರ್ಭಿಣಿ ಮಹಿಳೆ ಸಫೂರ ಜರ್ಗರ್ ಅವರನ್ನು ಬಂಧಿಸಿದಾಗ ಗೋಸ್ವಾಮಿಯಾಗಲೀ, ತುರ್ತುಪರಿಸ್ಥಿತಿಯಲ್ಲಿ ಹೋರಾಡಿದ, ಇಂದಿನ ಟ್ವಿಟರ್ ವೀರರಾಗಲೀ ಖಂಡಿಸಿದ್ದರೇ ? ಪ್ರಭುತ್ವ ಅಥವಾ ಆಡಳಿತ ವ್ಯವಸ್ಥೆಯ ಒಂದು ಅಂಗ ಯಾರನ್ನೋ ನಗರ ನಕ್ಸಲರು ಎಂದು ಹೇಳಿಬಿಟ್ಟರೆ ಅವರನ್ನು ಯಾವ ಹೊತ್ತಿನಲ್ಲಾದರೂ, ಯಾವ ರೀತಿಯಲ್ಲಾದರೂ ಬಂಧಿಸಬಹುದು ಎಂದು ಸಂವಿಧಾನದಲ್ಲಿ ಹೇಳಲಾಗಿದೆಯೇ ?
ಇದು ವ್ಯಕ್ತಿ ಅಥವಾ ಸಂಸ್ಥೆಯ ಪ್ರಶ್ನೆಯಲ್ಲ. ಮೌಲ್ಯಗಳ ಪ್ರಶ್ನೆ. ಗೋಸ್ವಾಮಿ ಯಾವ ಮೌಲ್ಯಗಳನ್ನು ಪ್ರತಿನಿಧಿಸುತ್ತಾರೆ, ಪ್ರತಿನಿಧಿಸುತ್ತಿದ್ದಾರೆ ? ಇವರನ್ನೇ ಅನುಕರಿಸಿ, ಅನುಸರಿಸುವ ಕನ್ನಡದ ಕೂಗುಮಾರಿ ಸುದ್ದಿಮನೆಗಳು ಯಾವ ಸಂಸ್ಕೃತಿಯನ್ನು ಅನುಸರಿಸುತ್ತಿವೆ ? ತುರ್ತುಪರಿಸ್ಥಿತಿಯಲ್ಲಿ ತಾವು ಪ್ರಜಾತಂತ್ರದ ಉಳಿವಿಗಾಗಿ ನಡೆಸಿದ ಹೋರಾಟವನ್ನು ಹೆಮ್ಮೆಯಿಂದ ನೆನೆಯುವ ಸಚಿವರು, ರಾಜಕೀಯ ನಾಯಕರು ಯಾವ ಸಂಸ್ಕೃತಿ ಅನುಸರಿಸುತ್ತಿದ್ದಾರೆ ?
ಓರ್ವ ಗೋಸ್ವಾಮಿಯ ಬಂಧನದಿಂದ ತುರ್ತುಪರಿಸ್ಥಿತಿಯ ಛಾಯೆ ಕವಿದಂತೆ ಭಾವಿಸುವ ಕೇಂದ್ರ ಸಚಿವರಿಗೆ ಒಂದು ವರ್ಷದ ಕಾಲ ಗೃಹಬಂಧನದಲ್ಲಿದ್ದ ಕಾಶ್ಮೀರದ ಸಮಸ್ತ ಜನತೆ ಹೇಗೆ ಕಂಡಿದ್ದರು ? ಯಾವುದೇ ಅಪರಾಧ ಮಾಡದಿದ್ದರೂ ಸೆರೆಮನೆಯಲ್ಲಿರುವ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಹೇಗೆ ಕಾಣುತ್ತಿದ್ದಾರೆ ?
ನಡೆದಾಡುವ ಸ್ಥಿತಿಯಲ್ಲೂ ಇಲ್ಲದ ಸಾಯಿಬಾಬಾ ಅವರಂತಹ ವಿದ್ವಾಂಸರನ್ನು ಉಗ್ರಗಾಮಿ ಚಟುವಟಿಕೆಗಳ ಆರೋಪದ ಮೇಲೆ ಬಂಧಿಸಿ, ಜಾಮೀನು ಸಹ ನೀಡದೆ ಇರುವ ಆಡಳಿತ ವ್ಯವಸ್ಥೆಗೆ ಮತ್ತು ಅಧಿಕಾರಪೀಠದ ವಾರಸುದಾರರಿಗೆ ಗೋಸ್ವಾಮಿಯ ಬಂಧನ ತುರ್ತುಪರಿಸ್ಥಿತಿಯನ್ನು ನೆನಪಿಸುವುದೆಂದರೆ, ಭಾರತ ಮೌಲಿಕವಾಗಿ, ನೈತಿಕವಾಗಿ ಹಾದಿ ತಪ್ಪಿದೆ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ.
“ ಬಂಧಿಸಲಿ ಬಿಡಿ, ತಪ್ಪು ಮಾಡದಿದ್ದರೆ ಬಿಡುಗಡೆಯಾಗುತ್ತಾರೆ,,,,,” ಮಧ್ಯಮ ವರ್ಗಗಳ ಹಿತವಲಯದಲ್ಲಿ, ಬೌದ್ಧಿಕ ವಲಯದಲ್ಲಿ, ಬುದ್ಧಿಜೀವಿಗಳಲ್ಲದವರಲ್ಲಿ ಮತ್ತು ವಂದಿಮಾಗಧ ಸುದ್ದಿಮನೆಗಳಲ್ಲಿ ಕೇಳಿಬರುವ ಈ ಹೇಳಿಕೆ ಅರ್ನಾಬ್ ಗೋಸ್ವಾಮಿಗೂ ಅನ್ವಯಿಸುತ್ತದೆ. ಅವರಿಗೆ ಪ್ರಭುತ್ವವೂ ನೆರವಾಗಬಹುದು, ನ್ಯಾಯಾಂಗವೂ ನೆರವಾಗಬಹುದು.
ಇಂದಿನ ಭಾರತ ಕೇವಲ ಸಾಂವಿಧಾನಿಕ ಮೌಲ್ಯಗಳನ್ನು ಮಾತ್ರ ಕಳೆದುಕೊಳ್ಳುತ್ತಿಲ್ಲ, ಪ್ರಜಾತಂತ್ರ ಮೌಲ್ಯಗಳನ್ನೂ ಕಳೆದುಕೊಂಡಿದೆ. ಈ ಪ್ರಜ್ಞೆ ತಮ್ಮೊಳಗಿದ್ದು, ತಾವು ಪ್ರತಿನಿಧಿಸುವ “ಪತ್ರಿಕೋದ್ಯಮ ಅಥವಾ ಮಾಧ್ಯಮ ” ಎನ್ನುವ ಮೌಲ್ಯಯುತ ಸ್ತಂಭಕ್ಕೆ ಬದ್ಧತೆಯಿಂದ ನಡೆದುಕೊಂಡಿದ್ದರೆ ಬಹುಶಃ ಅರ್ನಾಬ್ ಗೋಸ್ವಾಮಿ ಜನತೆಯ ಅನುಕಂಪಕ್ಕೆ ಅರ್ಹರಾಗುತ್ತಿದ್ದರೇನೋ !
ನೆನ್ನೆ ಬಿಜೆಪಿ-ಶಿವಸೇನೆ ಮಾಡಿರುವುದನ್ನೇ ಇಂದು ಶಿವಸೇನೆ-ಕಾಂಗ್ರೆಸ್ ಸರ್ಕಾರ ಮಾಡಿದೆ. ಇದು ಒಂದು ಸರ್ಕಾರ ಅಥವಾ ಒಬ್ಬ ಮುಖ್ಯಮಂತ್ರಿಯ ಪ್ರಶ್ನೆಯಲ್ಲ.. ಮೌಲ್ಯಗಳ ಪ್ರಶ್ನೆ. ಮೌಲ್ಯ ಎಂದರೇನು ? ಇದು ಇಂದಿನ ಸಂದರ್ಭದಲ್ಲಿ ಕಾಡಬೇಕಾದ ಗಹನವಾದ ಪ್ರಶ್ನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪ್ರಮುಖ 8 ಕ್ಲಬ್‌ಗಳ ಮೇಲೆ ದಿಢೀರ್ ದಾಳಿ; ನಿಯಮ ಉಲ್ಲಂಘನೆಗೆ ನೋಟಿಸ್
ಸುದ್ದಿದಿನ,ಬೆಂಗಳೂರು: ನಗರದ ಪ್ರತಿಷ್ಠಿತ ಕ್ಲಬ್‌ಗಳಲ್ಲಿಯೂ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ನಿಯಮಗಳ ಉಲ್ಲಂಘನೆ ಕಂಡುಬಂದಿರುವುದು ಆತಂಕ ಮೂಡಿಸಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ನಗರದ ಪ್ರಮುಖ 8 ಕ್ಲಬ್‌ಗಳ ಮೇಲೆ ಮಂಗಳವಾರ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ ವೇಳೆ ಹಲವು ಗಂಭೀರ ಲೋಪಗಳು ಬೆಳಕಿಗೆ ಬಂದಿವೆ. ಆಹಾರ ಸಂಗ್ರಹಣಾ ಸ್ಥಳದಲ್ಲಿ ಅಶುಚಿತ್ವ, ಜಿರಳೆ ಹಾಗೂ ಇತರೆ ಕೀಟಗಳ ಹಾವಳಿ, ಅಸಮರ್ಪಕ ಆಹಾರ ಸಂಗ್ರಹಣೆ ಮತ್ತು ಅವಧಿ ಮೀರಿದ ಪದಾರ್ಥಗಳು ಪತ್ತೆಯಾಗಿವೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ನಿಯಮಗಳು-2011ರ ಅನ್ವಯ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿತ್ತು. ಬೌರಿಂಗ್ ಕ್ಲಬ್, ಸೆಂಚುರಿ ಕ್ಲಬ್, ಕೆಎಸ್‌ಸಿಎ ಕ್ಲಬ್, ಕ್ಯಾಥೋಲಿಕ್ ಕ್ಲಬ್, ಟೆನ್ನಿಸ್ ಕ್ಲಬ್, ವಿಜಯನಗರ ಕ್ಲಬ್, ಮಹಾಲಕ್ಷ್ಮಿ ಲೇಔಟ್ ಕ್ಲಬ್ ಮತ್ತು ಮಲ್ಲೇಶ್ವರ ಕ್ಲಬ್‌ಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.
http://Visit : www.suddidina.com
ಬೇಳೆಕಾಳಿನಲ್ಲಿ ಹುಳು, ದಾಸ್ತಾನು ಕೇಂದ್ರದಲ್ಲಿ ಜಿರಳೆ
ಬೌರಿಂಗ್ ಕ್ಲಬ್‌ನಲ್ಲಿ ಬೇಳೆಕಾಳುಗಳಲ್ಲಿ ಹುಳುಗಳು ಕಂಡುಬಂದಿದ್ದು, ದಾಸ್ತಾನು ಕೇಂದ್ರದಲ್ಲಿ ಅಶುಚಿತ್ವ ಹಾಗೂ ಜಿರಳೆಗಳಿರುವುದು ಪತ್ತೆಯಾಗಿದೆ. ಸೆಂಚುರಿ ಕ್ಲಬ್‌ನಲ್ಲಿಯೂ ಕೀಟಗಳ ಹಾವಳಿ ಮತ್ತು ನೈರ್ಮಲ್ಯದ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಎರಡೂ ಕ್ಲಬ್‌ಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಕೆಎಸ್‌ಸಿಎ ಕ್ಲಬ್‌ನಲ್ಲೂ ಹಲವು ಲೋಪ
ಕೆಎಸ್‌ಸಿಎ ಕ್ಲಬ್‌ನಲ್ಲಿ ಸಿಬ್ಬಂದಿಯ ವೈಯಕ್ತಿಕ ಸ್ವಚ್ಛತೆ, ಆಹಾರ ಪೊಟ್ಟಣಗಳ ಲೇಬಲಿಂಗ್ ಸೇರಿದಂತೆ ಹಲವು ನಿಯಮ ಉಲ್ಲಂಘನೆಗಳು ಕಂಡುಬಂದಿವೆ. ಅಸಮರ್ಪಕ ಒಳಚರಂಡಿ ವ್ಯವಸ್ಥೆ, ಶೀತಲೀಕರಣ ಘಟಕದಲ್ಲಿನ ಅನೈರ್ಮಲ್ಯ ಹಾಗೂ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರವನ್ನು ಪ್ರತ್ಯೇಕವಾಗಿ ಸಂಗ್ರಹಿಸದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಪಾತ್ರೆ ತೊಳೆಯಲು ಬಿಸಿನೀರಿನ ವ್ಯವಸ್ಥೆಯ ಕೊರತೆಯೂ ಕಂಡುಬಂದಿದೆ.
ಅವಧಿ ಮೀರಿದ ಅಣಬೆ ಪತ್ತೆ
ಕ್ಯಾಥೋಲಿಕ್ ಕ್ಲಬ್‌ನಲ್ಲಿ ಅವಧಿ ಮೀರಿದ 10 ಪ್ಯಾಕೇಟ್ ಅಣಬೆಗಳು ಪತ್ತೆಯಾಗಿವೆ. ಆಹಾರ ಪದಾರ್ಥಗಳ ಮೇಲೆ ಅಗತ್ಯ ಲೇಬಲ್‌ಗಳಿಲ್ಲದಿರುವುದು ಹಾಗೂ ಸ್ವಚ್ಛತೆಯ ಕೊರತೆಯ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಟೆನ್ನಿಸ್ ಕ್ಲಬ್‌ನಲ್ಲಿ ಆಹಾರ ನಿರ್ವಹಣಾ ಸಿಬ್ಬಂದಿ ವೈದ್ಯಕೀಯ ಪ್ರಮಾಣಪತ್ರ ಹೊಂದಿರದಿರುವುದು ಕಂಡುಬಂದಿದೆ.
ವಿಜಯನಗರ, ಮಹಾಲಕ್ಷ್ಮಿ ಲೇಔಟ್ ಮತ್ತು ಮಲ್ಲೇಶ್ವರ ಕ್ಲಬ್‌ಗಳಲ್ಲಿಯೂ ಆಹಾರ ಪದಾರ್ಥಗಳ ಅವಧಿ ಕುರಿತ ಲೇಬಲಿಂಗ್ ಕೊರತೆ ಹಾಗೂ ಸ್ವಚ್ಛತೆ-ನೈರ್ಮಲ್ಯದ ಸಮಸ್ಯೆಗಳು ಪತ್ತೆಯಾಗಿವೆ.
ಹೋಟೆಲ್‌ಗಳಿಗೂ ಕಟ್ಟುನಿಟ್ಟಿನ ಸೂಚನೆ
ಕ್ಲಬ್‌ಗಳ ಜೊತೆಗೆ ಹೋಟೆಲ್‌ಗಳು ಹಾಗೂ ಇತರೆ ಆಹಾರ ಉದ್ಯಮಗಳಲ್ಲಿನ ಲೋಪಗಳ ಬಗ್ಗೆಯೂ ಇಲಾಖೆ ಗಮನಹರಿಸಿದೆ. ಮುಂದಿನ 15 ದಿನಗಳಲ್ಲಿ ಹೋಟೆಲ್ ಅಸೋಸಿಯೇಷನ್, ರೆಸ್ಟೋರೆಂಟ್ ಅಸೋಸಿಯೇಷನ್ ಮತ್ತು ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರೊಂದಿಗೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಅಡುಗೆಮನೆ ನಿರ್ವಹಣೆ, ಆಹಾರ ತಯಾರಿ ಮತ್ತು ನೈರ್ಮಲ್ಯ ಕುರಿತು ಮಾರ್ಗಸೂಚಿ ಹಾಗೂ ತರಬೇತಿ ನೀಡುವ ಚಿಂತನೆಯೂ ಇದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ದಿನದ ಸುದ್ದಿ
ಸೆ.2ರ ಹುಟ್ಟುಹಬ್ಬ ಆಚರಿಸದಿರಲು ಕಿಚ್ಚನ ನಿರ್ಧಾರ: “ನಿಮ್ಮ ಪ್ರೀತಿಯೇ ನನಗೆ ದೊಡ್ಡ ಮೈಲಿಗಲ್ಲು
ಸುದ್ದಿದಿನ,ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ ಎಂದರೆ ಅಭಿಮಾನಿಗಳಿಗೆ ಹಬ್ಬದ ವಾತಾವರಣ. ಆದರೆ ಈ ಬಾರಿ ಸೆಪ್ಟೆಂಬರ್ 2ರಂದು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಳ್ಳದಿರಲು ಸುದೀಪ್ ನಿರ್ಧರಿಸಿದ್ದಾರೆ. ವೈಯಕ್ತಿಕ ಹಾಗೂ ಬಲವಾದ ಕೆಲವು ಕಾರಣಗಳಿಂದ ಈ ವರ್ಷದ ಜನ್ಮದಿನದ ಸಂಭ್ರಮದಿಂದ ದೂರ ಉಳಿಯುತ್ತಿರುವುದಾಗಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಭಾವನಾತ್ಮಕ ಪತ್ರದ ಮೂಲಕ ತಿಳಿಸಿದ್ದಾರೆ.
ಹುಟ್ಟುಹಬ್ಬದಂದು ಮನೆಯ ಬಳಿ ಅಭಿಮಾನಿಗಳನ್ನು ಭೇಟಿಯಾಗಲು ತಾವು ಲಭ್ಯವಿರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕಿಚ್ಚ, ಯಾವುದೇ ರೀತಿಯ ಗದ್ದಲ ಅಥವಾ ಸತ್ಕಾರಕ್ಕೆ ಮುಂದಾಗದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಸಾಮಾನ್ಯವಾಗಿ ಸಾವಿರಾರು ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಮನೆ ಮುಂದೆ ಸೇರುವ ಸಂದರ್ಭದಲ್ಲೇ, ಈ ಬಾರಿ ಸುದೀಪ್ ಅವರ ಮನವಿ ವಿಶೇಷ ಗಮನ ಸೆಳೆದಿದೆ.
ಉಡುಗೊರೆ ಬೇಡ, ಸಮಾಜಕ್ಕೆ ಸಹಾಯ ಮಾಡಿ
ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ನೀಡಲು ಉದ್ದೇಶಿಸಿರುವ ಉಡುಗೊರೆಗಳ ಬದಲಾಗಿ ಆ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸುವಂತೆ ಸುದೀಪ್ ಕರೆ ನೀಡಿದ್ದಾರೆ. ತಮ್ಮ ಹೆಸರಿನಲ್ಲಿ ನಡೆಯುವ ಸಂಭ್ರಮಕ್ಕಿಂತ ಸಮಾಜಕ್ಕೆ ನೆರವಾಗುವ ಕೆಲಸವೇ ತಮಗೆ ನಿಜವಾದ ಸಂತೋಷ ನೀಡುತ್ತದೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.
ಅಭಿಮಾನಿಗಳು ತಮ್ಮ ತಮ್ಮ ಊರು, ಪ್ರದೇಶಗಳಲ್ಲಿ ಸಮಾಜಪರ ಕಾರ್ಯಕ್ರಮಗಳನ್ನು ಆಯೋಜಿಸುವುದೇ ತಮಗೆ ದೊರೆಯುವ ಅತ್ಯುತ್ತಮ ಆಶೀರ್ವಾದ ಎಂದು ಕಿಚ್ಚ ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳ ಪ್ರೀತಿಗೆ ಹೊಸ ಅರ್ಥ ನೀಡುವ ಪ್ರಯತ್ನ ಮಾಡಿದ್ದಾರೆ.
30 ವರ್ಷಗಳ ಸಿನಿ ಪಯಣದ ನೆನಪು
ಕನ್ನಡ ಚಿತ್ರರಂಗಕ್ಕೆ ಸುದೀಪ್ ಬರೋಬ್ಬರಿ ಮೂರು ದಶಕಗಳನ್ನು ಅರ್ಪಿಸಿದ್ದಾರೆ. ಸಿನಿಮಾ ತಮ್ಮ ಪರಮ ಕಾಯಕವಾಗಿದ್ದು, ಕೆಲವೊಮ್ಮೆ ಸಿನಿಮಾಗಳು ತಡವಾಗಬಹುದು; ಅದಕ್ಕೂ ಕಾರಣಗಳಿರುತ್ತವೆ ಎಂದು ಅವರು ಹೇಳಿದ್ದಾರೆ. ಈ ಮಾತುಗಳ ಮೂಲಕ ತಮ್ಮ ವೃತ್ತಿಜೀವನದ ಮುಂದಿನ ಹೆಜ್ಜೆಗಳ ಬಗ್ಗೆ ಕುತೂಹಲ ಮೂಡಿಸಿದ್ದಾರೆ.
“ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ” ಎಂಬ ಖಡಕ್ ಡೈಲಾಗ್ ಮೂಲಕ ಮುಂದಿನ ಸಿನಿಮಾ ಅಥವಾ ಹೊಸ ಯೋಜನೆಗೆ ಸುದೀಪ್ ಸುಳಿವು ನೀಡಿದ್ದಾರೆ. ಹೀಗಾಗಿ ಅವರ ಪತ್ರ ಕೇವಲ ಹುಟ್ಟುಹಬ್ಬದ ಮನವಿಯಾಗದೆ, ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆಯನ್ನೂ ಹುಟ್ಟುಹಾಕಿದೆ.
https://x.com/KicchaSudeep/status/2092857077706506638
“ಕನ್ನಡ ನನ್ನ ಸತ್ಯ.. ಕನ್ನಡದಿಂದ ನಾನು ನಿತ್ಯ”
ತಮ್ಮ ಮಾತೃಭಾಷೆ ಕನ್ನಡದ ಮೇಲಿನ ಪ್ರೀತಿಯನ್ನೂ ಸುದೀಪ್ ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. ಎಲ್ಲೇ ಹೋದರೂ ಕನ್ನಡಿಗರನ್ನು ರಂಜಿಸುವ ವಿಷಯದಲ್ಲಿ ಎಂದಿಗೂ ರಾಜಿಯಾಗುವುದಿಲ್ಲ ಎಂದು ಹೇಳಿರುವ ಅವರು, ಕಳೆದ 30 ವರ್ಷಗಳಿಂದ ಅಭಿಮಾನಿಗಳಿಂದ ದೊರೆತ ಪ್ರೀತಿ, ಹಾರೈಕೆ, ಚಪ್ಪಾಳೆ ಮತ್ತು ಶಿಳ್ಳೆಗಳೇ ತಮ್ಮ ದೊಡ್ಡ ಬಲ ಎಂದು ಸ್ಮರಿಸಿದ್ದಾರೆ.
“ನಮ್ಮನ್ನು ಮತ್ತು ನಿಮ್ಮನ್ನು ಎಂದಾದರೂ ಬೇರ್ಪಡಿಸಲು ಸಾಧ್ಯವೇ?” ಎಂದು ಪ್ರಶ್ನಿಸುವ ಮೂಲಕ ಅಭಿಮಾನಿಗಳೊಂದಿಗಿನ ತಮ್ಮ ಭಾವನಾತ್ಮಕ ಬಂಧವನ್ನು ತೆರೆದಿಟ್ಟಿದ್ದಾರೆ. ಕೊನೆಯಲ್ಲಿ “Luv u all always…” ಎಂದು ಹೇಳುವ ಮೂಲಕ ಕಿಚ್ಚ ತಮ್ಮ ಅಭಿಮಾನಿಗಳ ಮೇಲಿನ ಅಪಾರ ಪ್ರೀತಿಯನ್ನು ಮತ್ತೊಮ್ಮೆ ಸಾರಿದ್ದಾರೆ.

ದಿನದ ಸುದ್ದಿ
ಬಿಡುಗಡೆ ಬೆನ್ನಲ್ಲೇ ನಿರ್ದೇಶಕಿಯ ಹಳೆಯ ಮಾತಿಗೆ ಹೊಸ ವಿವಾದ: ‘ಟಾಕ್ಸಿಕ್’ ಸುತ್ತ ಟ್ರೋಲ್‌ಗಳ ಸದ್ದು
ಸುದ್ದಿದಿನ,ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಹಳೆಯ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ. ಚಿತ್ರದ ಕುರಿತು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿರುವ ನಡುವೆಯೇ, ನಿರ್ದೇಶಕಿಯ ಸಿನಿಮಾ ಮಾಡುವ ವಿಧಾನಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಚರ್ಚೆಯ ಕೇಂದ್ರಬಿಂದುವಾಗಿದೆ.
ವೈರಲ್ ವಿಡಿಯೋದಲ್ಲಿ ಗೀತು ಮೋಹನ್‌ದಾಸ್ ಅವರು, ತಾವು ಬರೆಯುವುದು, ಚಿತ್ರೀಕರಿಸುವುದು ಹಾಗೂ ಎಡಿಟ್ ಮಾಡುವ ಪ್ರಕ್ರಿಯೆಯಲ್ಲಿ ಸಿನಿಮಾ ನಿಧಾನವಾಗಿ ರೂಪುಗೊಳ್ಳುತ್ತದೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ತಾವು ಸ್ಕ್ರಿಪ್ಟ್‌ಗೆ ಕಟ್ಟುನಿಟ್ಟಾಗಿ ಅಂಟಿಕೊಂಡು ಕೆಲಸ ಮಾಡುವುದಿಲ್ಲ ಎಂಬ ಅವರ ಹೇಳಿಕೆಯೇ ಇದೀಗ ನೆಟ್ಟಿಗರ ಗಮನ ಸೆಳೆದಿದೆ.
http://Visit : www.suddidina.com
‘ಸ್ಕ್ರಿಪ್ಟ್‌ನಂತೆ ಸಿನಿಮಾ ಸಿಗುವುದಿಲ್ಲ’ ಎಂದಿದ್ದ ನಿರ್ದೇಶಕಿ
ನಿರ್ಮಾಪಕರನ್ನು ಭೇಟಿಯಾಗುವಾಗಲೇ ತಮ್ಮ ಕೆಲಸದ ಶೈಲಿಯನ್ನು ಸ್ಪಷ್ಟಪಡಿಸುವುದಾಗಿ ಗೀತು ಹೇಳಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಸ್ಕ್ರಿಪ್ಟ್‌ನಲ್ಲಿ ಓದುವ ಕಥೆಯಂತೆಯೇ ಅಂತಿಮ ಸಿನಿಮಾ ಇರಬೇಕೆಂದಿಲ್ಲ ಎಂಬ ಸಂದೇಶವನ್ನು ಅವರು ನೀಡಿದ್ದರು.
ಸಾಮಾನ್ಯವಾಗಿ ದೊಡ್ಡ ಬಜೆಟ್‌ನ ಸಿನಿಮಾಗಳಲ್ಲಿ ಕಥೆ, ಚಿತ್ರಕಥೆ ಮತ್ತು ಚಿತ್ರೀಕರಣದ ಯೋಜನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಹೀಗಾಗಿ ಗೀತು ಅವರ ಈ ಹಳೆಯ ಹೇಳಿಕೆಯನ್ನು ಕೆಲವರು ಪ್ರಶ್ನಿಸುತ್ತಿದ್ದರೆ, ಮತ್ತೊಂದೆಡೆ ನಿರ್ದೇಶಕರ ಸೃಜನಶೀಲ ಪ್ರಕ್ರಿಯೆ ಒಂದೇ ರೀತಿಯಾಗಿರಬೇಕೆಂದಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
https://x.com/alpasankhyata/status/2092620787698094334
‘ಟಾಕ್ಸಿಕ್’ ಮೇಲೆ ಪರಿಣಾಮ ಬೀರಿದ ಹಳೆಯ ಹೇಳಿಕೆ?
‘ಟಾಕ್ಸಿಕ್’ ಬಿಡುಗಡೆ ಬಳಿಕ ಸಿನಿಮಾದ ಕಥೆ, ನಿರೂಪಣೆ, ಆಕ್ಷನ್ ಹಾಗೂ ಪಾತ್ರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಇದೇ ಸಮಯದಲ್ಲಿ ಹಳೆಯ ವಿಡಿಯೋ ವೈರಲ್ ಆಗಿರುವುದರಿಂದ, ಸಿನಿಮಾದಲ್ಲಿನ ಕೆಲವು ಅಂಶಗಳನ್ನು ಈ ಹೇಳಿಕೆಯೊಂದಿಗೆ ಹೋಲಿಸಿ ನೆಟ್ಟಿಗರು ಚರ್ಚಿಸುತ್ತಿದ್ದಾರೆ.
ಚಿತ್ರವು ಸ್ವಾತಂತ್ರ್ಯಪೂರ್ವದ ಗೋವಾ ಹಿನ್ನೆಲೆಯಲ್ಲಿನ ಅಪರಾಧ ಜಗತ್ತು ಮತ್ತು ಅಂಡರ್‌ವರ್ಲ್ಡ್ ಕಥೆಯನ್ನು ಒಳಗೊಂಡಿದೆ. ಯಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಸೇರಿದಂತೆ ದೊಡ್ಡ ತಾರಾಬಳಗವಿದೆ.
ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಆರಂಭ
ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆಯಾದ ‘ಟಾಕ್ಸಿಕ್’ ಮೊದಲ ದಿನವೇ ₹100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂಬ ವರದಿಗಳು ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಆರಂಭ ಪಡೆದಿರುವುದನ್ನು ಸೂಚಿಸುತ್ತವೆ. ಆದರೆ ಪ್ರೇಕ್ಷಕರ ಪ್ರತಿಕ್ರಿಯೆ ಮಾತ್ರ ಮಿಶ್ರವಾಗಿದೆ.
ಸದ್ಯ ಗೀತು ಮೋಹನ್‌ದಾಸ್ ಅವರ ಹಳೆಯ ಹೇಳಿಕೆ ಮತ್ತು ‘ಟಾಕ್ಸಿಕ್’ ಚಿತ್ರದ ಕುರಿತು ನಡೆಯುತ್ತಿರುವ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಮುಂದುವರಿದಿದೆ. ವೈರಲ್ ವಿಡಿಯೋ ಚಿತ್ರದ ಸೃಜನಶೀಲ ವಿಧಾನಕ್ಕೆ ಸಂಬಂಧಿಸಿದ ಹಳೆಯ ಅಭಿಪ್ರಾಯವಾಗಿದ್ದು, ಅದನ್ನು ಇಂದಿನ ಚಿತ್ರದ ಫಲಿತಾಂಶದೊಂದಿಗೆ ಹೇಗೆ ಸಂಪರ್ಕಿಸಬೇಕು ಎಂಬುದರ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

-
ಅಂತರಂಗ4 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ6 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ದಿನದ ಸುದ್ದಿ1 day agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ2 days agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ2 days agoಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
-
ದಿನದ ಸುದ್ದಿ2 days agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ
-
ದಿನದ ಸುದ್ದಿ2 days agoಆನ್ಲೈನ್ನಲ್ಲಿ ಮಾರಾಟವಾಗ್ತಿತ್ತು ‘ವಿಷದ ಹಣ್ಣು’! ಇ-ಕಾಮರ್ಸ್ ದೈತ್ಯರಿಗೆ ನೋಟಿಸ್


