Connect with us

ಲೈಫ್ ಸ್ಟೈಲ್

ರೌಡಿ ಎಮ್ಮೆ ಮತ್ತದರ ಮೂಗುದಾರ..!

Published

on

  • ಡಾ.ಎನ್.ಬಿ.ಶ್ರೀಧರ, ಶಿವಮೊಗ್ಗ

ದೂರವಾಣಿಯ ಆ ಕಡೆಯಿಂದ “ ಡಾಕ್ಟ್ರೇ.. ಈ ಕಡೆ ಬರುವಾಗ ನಮ್ಮನೆ ರೌಡಿ ಎಮ್ಮೆಗೆ ಮೂಗುದಾರ ತರಲು ಮರೀಬೇಡಿ” ಅಂದಾಗಲೇ ನನಗೆ ನೆನಪಾಗಿದ್ದು ಅವರ ಮನೆಯ ರೌಡಿ ಶೀಟರ್ ಮಹಿಷಿಯ ಅಪರಾವತಾರದ ಎಮ್ಮೆಗೆ ಮೂಗುದಾರ ಹಾಕಿ ನಿಯಂತ್ರಿಸಲು ನಾನೇ ಹೇಳಿದ್ದ ಸಲಹೆಯನ್ನು ಅನುಷ್ಠಾನಕ್ಕೆ ತರುವುದನ್ನು ಮರೆತಿದ್ದು. ಆಗಲೇ ಸಣ್ಣದಾಗಿ ಮಳೆಗಾಲ ಪ್ರಾರಂಭವಾಗಿದ್ದರಿಂದ ದನ ಎಮ್ಮೆಗಳಿಗೆ ಗಂಟಲು ಬೇನೆ ಲಸಿಕೆಯನ್ನು ಹಾಕುವ ಕಾರ್ಯದಲ್ಲಿ ಬ್ಯುಸಿಯಾಗಿದ್ದರಿಂದ ಇಂತಹದ್ದೊಂದು ಕಾರ್ಯವಿದೆ ಎಂಬುದೇ ನನ್ನ ಮಸ್ತಿಷ್ಕದಿಂದ ಆವಿಯಂತೆ ಮಾಯವಾಗಿತ್ತು.

ನನ್ನ ಶಿಷ್ಯನಿಗೆ “ ಒಂದ್ ಮೂಗುದಾರ ಸೆಟ್ ರೆಡಿ ಮಾಡೋ.. ಆ ದಿನದಿಂದ ಹೇಳ್ತಾ ಇದೀನಿ. ನೆನಪೇ ಮಾಡ್ಲಿಲ್ಲ ನೀನು” ಎಂದು ನಾನು ಮರೆತಿರುವ ಈ ವಿಷಯವನ್ನು ಆತನ ತಲೆಗೆ ಕಟ್ಟಿದೆ. ಆ ದಿನ ಶನಿವಾರವಾದ್ದರಿಂದ ಆತನಿಗೆ ಅನೇಕ “ಮಹತ್ವ”ದ ಕೆಲಸಗಳಿರುವುದರಿಂದ “ಸಾರ್. ಈವತ್ತು ನಾನು ಬರಕ್ಕಾಗಲ್ಲ. ತುಂಬಾ ಕೆಲ್ಸ ಇದೆ”.. ಎಂದು ನಾನು ಹೇಳುವ ಮೊದಲೇ ಪೂರ್ವನಿರೀಕ್ಷಿತ ಜಾಮಿನು ಅರ್ಜಿ ಹಾಕಿಕೊಂಡು ನಾನೊಬ್ಬನೇ ಈ ಕೆಲಸಕ್ಕೆ ಹೊರಡುವುದು ಎಂದು ತೀರ್ಮಾನಿಸಿಬಿಟ್ಟ.

ಸಂತೆಯ ದಿನ ಕುದುರುವ ಆತನ ಇಂತಹ ಅನೇಕ ವ್ಯವಹಾರಗಳ ಬಗ್ಗೆ ಸಕಲವನ್ನೂ ಅಮೂಲಾಗ್ರವಾಗಿ ತಿಳಿದಿದ್ದ ನಾನು ಅವನ ಬರುವಿಕೆಯ ಬಗ್ಗೆ ಅಷ್ಟೇನೂ ಆಸಕ್ತಿ ವಹಿಸಲಿಲ್ಲ. ನಿಜ. ಎತ್ತುಗಳಿಗೆ ಬಯಲು ಸೀಮೆಯ ಕಡೆ ಮೂಗುದಾರ ಇರದೇ ಇರುವುದನ್ನು ನೋಡಿದರೆ ಮದುವೆಯಾಗಿ ಮಂಗಳ ಸೂತ್ರವಿಲ್ಲದೇ ಓಡಾಡುವ ಬೆಂಗಳೂರಿನ ಕೆಲ ಹೆಣ್ಣುಮಕ್ಕಳು ನೆನಪಾಗಿ ಬಿಡುತ್ತಾರೆ. ಮಲೆನಾಡಿನಲ್ಲಿ ಗೋಪಾಲಕರು ಮೂಗುದಾರ ಹಾಕಿ ಜಾನುವಾರುಗಳನ್ನು ನಿಯಂತ್ರಿಸುವುದು ಕಡಿಮೆಯೇ ಸರಿ.

ಒಂದೋ ಜಾನುವಾರು ತೀರಾ ಹರಾಮಿಯಾಗಿ ಹಿಡಿತ ತಪ್ಪಿ ಹೋಗಿ ಬೆಂಗಳೂರು ಸೇರಿ ಹೊಟೇಲಿನಲ್ಲಿ ಕೆಲಸ ಮಾಡುವ ಹವ್ಯಕ ಮಾಣಿಯಂತೆ ಆಗಿರಬೇಕು ಇಲ್ಲವೇ ಸುಖಾ ಸುಮ್ಮನೇ ಬಿಲ್ಡಪ್ ಕೊಡುವ ಚಂದದ ಮಾಡರ್ನ್ ಹೆಣ್ ಹೈಕಳಂತೆ ಸ್ಟೈಲ್ ಮಾಡುವ ಬಿನ್ನಾಣಗಿತ್ತಿಯ ತರದ ದನಗಳನ್ನು ಹತೋಟಿಯಲ್ಲಿಡುವ ಬ್ರಹ್ಮಾಸ್ತ್ರ ಇದಾಗಿತ್ತು. ಬಯಲು ಸೀಮೆಯಲ್ಲೆಲ್ಲ ಈ “ಮೂಗುದಾರ” ಹಾಕುವ ಯಕಶ್ಚಿತ್ ಕಾರ್ಯಕ್ಕೆಲ್ಲ ಪಶುವೈದ್ಯರನ್ನು ಕರೆಯುತ್ತಲೇ ಇರಲಿಲ್ಲ.

ಹೋರಿಗಳ ಬೀಜ ತೆಗೆಯುವುದು, ದನದ ಕಾಲಲ್ಲಿರುವ ಹುಳವನ್ನು ಚಿಮ್ಮಟ ಹಾಕಿ ತೆಗೆಯುವುದು, ಮೂಗುದಾರ ಹಾಕುವುದು ಇದೆಲ್ಲಾ ಕಾರ್ಯ “ಕಂಪೌಂಡರ್” ಎಂದು ನಾಮಾಂಕಿತರಾದ ಜವಾನರೇ ಸದ್ದುಗದ್ದಲವಿಲ್ಲದೇ ಸಾಂಗೋಪಾಂಗವಾಗಿ ನೆರವೇರಿಸಿಬಿಡುತ್ತಿದ್ದರು.

ಗೋಕರ್ಣದ ದೊಡ್ದ ಭಟ್ಟರುಗಳು ದೊಡ್ಡ ದೊಡ್ಡ ಯಾಗ ಯಜ್ಞಗಳನ್ನು ನಡೆಸುವಾಗ ದರ್ಭೆ ಆಯುವುದು,ಹೋಮದ ಬೂದಿ ತೆಗೆಯುವುದು, ಚಿಲ್ಲರೆ ನಾಣ್ಯಗಳನ್ನು ಎಣಿಸುವುದು, ಬಾಳೆಕಂಬ ಹೊಂದಿಸುವುದು ಇತ್ಯಾದಿ ತಾಟಿ ಪಿಟಿ ಕೆಲಸಗಳಿಗೆ ಮರಿ ಭಟ್ಟರುಗಳನ್ನು ತೊಡಗಿಸಿ ತಾವು ಮಾತ್ರ ಗತ್ತಿನಿಂದ ಮಂತ್ರಗಳನ್ನು ಪಠಿಸುವಂತೆ ಈ ಮೂಗುದಾರ ಹಾಕುವ ಕೆಲಸವನ್ನು ಕೆಲ ಪಶುವೈದ್ಯರು ಅಸಡ್ಡೆಯಿಂದ ಗಮನಿಸಿ ದಿವ್ಯ ನಿರ್ಲಕ್ಷ್ಯದ ನೋಟ ಬೀರುತ್ತಿದ್ದರು.

ಬಯಲು ಸೀಮೆಯ ಆಸ್ಪತ್ರೆಗಳಲ್ಲಿ ಕಂಪೌಂಡರ್ ಅಲ್ಲಲ್ಲ.. ಜವಾನರು ತರಹೇವಾರಿ ಬಣ್ಣ ಬಣ್ಣದ ಕಾಟನ್, ನೈಲಾನ್, ಪ್ಲಾಸ್ಟಿಕ್ ಮೂಗುದಾರಗಳನ್ನು ಹುಬ್ಬಳ್ಳಿಯಿಂದ ತಂದು ಸ್ಟಾಕು ಮಾಡಿಕೊಂಡು ನಾನಾ ತರದ ರೇಟನ್ನು ಕುದುರಿಸಿ ರೈತರ ಎತ್ತುಗಳು ಹೋರಿಗಳಿಗೆ ಹಾಕುವುದು ಗೊತ್ತಿದ್ದರೂ ಸಹ ನಾವೆಲ್ಲಾ ಈ ವ್ಯವಹಾರಕ್ಕೂ ನಮಗೂ ಏನೂ ಸಂಬಂಧವಿಲ್ಲದಂತೆ ಸುಮ್ಮನಿರುತ್ತಿದ್ದೆವು. ಅದರಲ್ಲೂ ಹೋರಿಗಳ ಸಂತಾನ ಹರಣ ಕೇವಲ ಕಂಪೌಂಡರುಗಳ ಕಾರ್ಯವೆಂದೇ ಬಹುತೇಕರ ಭಾವನೆ.

ಹೋರಿಗಳನ್ನು ಕೆಡವಿಕೊಂಡು ಅವುಗಳ ವೃಷಣ ಚೀಲದ ಬುಡವನ್ನು ಬರ್ಡಿಜ಼ೋ ಕ್ಯಾಸ್ಟ್ರೇಟರ್ ಎಂಬ ಬಲೀಷ್ಠವಾದ ಇಕ್ಕಳದ ಮಧ್ಯೆ ಸಿಲುಕಿಸಿ ವೃಷಣಗಳಿಗೆ ಸರಬರಾಜಾಗುವ ರಕ್ತವನ್ನು ಒಮ್ಮೆಯೇ ಬಂದು ಮಾಡಿ ಅದು ಅನುತ್ಪಾದಕವಾಗಿ ಸೊರಗಿ ಹೋಗುವಂತೆ ಮಾಡುವುದಕ್ಕೆ ಗಿಡದ ಸಂತಾನವನ್ನು ಹೆಚ್ಚಿಸುವ ಕಲೆಯಾದ “ಕಸಿ” ಮಾಡುವುದು ಎಂದು ಅದ್ಯಾರು ಹೆಸರಿಟ್ಟರೋ?.

ಕಸಿಯಾದ ಮೇಲೆ ಹೋರಿಗಳು ಮಾಜಿಗಳಾಗಿ ಅವುಗಳ ಸಂತಾನದ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡು ಎತ್ತಾಗಿ ರೈತನ ಹೇಳಿದಂತೆ ಕೇಳಿಕೊಂಡು ರೈತನ ಗಾಡಿ ಎತ್ತಾಗಿಯೋ ಅಥವಾ ಉಳುಮೆಯ ಎತ್ತಾಗಿಯೋ ಜೀವನವನ್ನು ಸವೆಸುತ್ತಿದ್ದವು.

ಪ್ರಾಣಿಪ್ರಿಯರ ಪ್ರಕಾರ ಇದೊಂದು ಪ್ರಾಣಿ ಹಿಂಸೆಯ ಪರಮಾವಧಿಯ ಪೈಶಾಚಿಕ ಕೃತ್ಯ. ಅವರ ಹೇಳುವ ಹಾಗೇ ಎತ್ತನ್ನು ಉಳುಮೆಗೆ, ಗಾಡಿ ಎಳೆಯಲು ಉಪಯೋಗಿಸುವುದೇ ಪ್ರಾಣಿ ಹಿಂಸೆ. ನಮ್ಮ ರೈತ ಬಾಂಧವರಿಗೆ ಇದೆಲ್ಲಾ ಅರ್ಥವಾಗುವುದು ಇನ್ನೊಂದು ಶತಮಾನವಾದರೂ ಸಾಧ್ಯವಿಲ್ಲ.

ಪಶುಗಳನ್ನು ತಲತಲಾಂತರದಿಂದ ಪ್ರೀತಿಯಿಂದ ಸಾಕುತ್ತಿರುವ ಉತ್ತರ ಕರ್ನಾಟಕದ ರೈತರ ಪ್ರಕಾರ ಪ್ರಾಣಿಹಿಂಸೆ, ಪ್ರಾಣಿಪ್ರೀತಿ ಬೆಂಗಳೂರಿನ ಶ್ರೀಮಂತರ ಮನೆಯ ಹೆಣ್ಮಕ್ಕಳು ಬೀದಿಯ ಕಂತ್ರಿ ನಾಯಿಗಳಿಗೆ ಬ್ರೆಡ್ಡು ಹಾಕುತ್ತಾ ಅದೇ ಪಶು ಪ್ರೀತಿ ಎಂದು ದೊಡ್ಡದಾಗಿ ಪೋಸು ಕೊಡುವ ಟೈಮ್ ಪಾಸ್ ಕೆಲಸ. ಅವರಿಗೆ ಪ್ರಾಣಿ ಪ್ರೀತಿಯ ಪಾಠ ಮಾಡ ಹೊರಟರೆ “ ಸಾಹೇಬ್ರೇ. ಸುಮ್ನಿರ್ರೀ. ಕುರಿಕೋಳಿ ಕಟದ್ ತಿನ್ನೋರು ಅದ್ಯಾಂಗ್ ಪ್ರಾಣಿ ಹಿಂಸೆ ಅಂತಾರ್ರೀ? ಅವು ಪ್ರಾಣಿ ಅಲ್ಲೇನ್ರಿ? ಜೀವ ಇಲ್ಲೇನ್ರಿ? ಎಂದು ಅವರು ಎತ್ತುಗಳನ್ನು ದುಡಿಸಿಕೊಳ್ಳುವದನ್ನು ವಿರೋಧಿಸುವವರ ಬಗ್ಗೆ ಅಭಿಪ್ರಾಯ ನೀಡುತ್ತಿದ್ದರು.

ನನ್ನ ಶಿಷ್ಯ ತಾಳಗುಪ್ಪದಲ್ಲಿರುವ ಸಕಲ ವಸ್ತುಗಳೂ ದೊರಕುವ ಹೈಟೆಕ್ ಅಂಗಡಿಯಾದ ಶೆಟ್ಟರ ಅಂಗಡಿಗೆ ಹೋಗಿ ಕಿರುಬೆರಳು ಗಾತ್ರದ ಉದ್ದನೆಯ ಕಾಟನ್ ದಾರವನ್ನು ತಂದು ಅದರ ತುದಿಯ ಹಲವು ಎಳೆಗಳನ್ನು ತೆಗೆದು ಕಲಾತ್ಮಕವಾಗಿ ಚೂಪಾಗಿ ಮಾಡಿ ಅದನ್ನು ಹುಡುಗಿಯರ ಜಡೆಯಂತೆ ನೇಯ್ದು, ಸೆಫ್ಟಿಕ್ ಆಗದಂತೆ ಇರಲು ಪೊವಿಡೋನ್ ಆಯೋಡಿನ್ ಎಂಬ ಸ್ಯಾನಿಟೈಸರ್ ತರದ ಕಂದು ಬಣ್ಣದ ದ್ರಾವಣದಲ್ಲಿ ಅದ್ದಿದರೆ ಅದು ಅರಿಷಿಣದಲ್ಲಿ ಮಿಂದ ಹೊಸ ಮಾಂಗಲ್ಯದಂತೆ ಮಿಂಚುತ್ತಿತ್ತು.

ಎಮ್ಮೆಗಳಿಗೆ ಎತ್ತುಗಳಿಗೆ ಹಾಕಿದಂತೇ ಮೂಗುದಾರ ಹಾಕುವುದೇನೂ ಅಷ್ಟೇನೂ ಸುಲಭವಲ್ಲ. ಮೂಗು ಮುಟ್ಟಲೂ ಸಹ ಎಮ್ಮೆಗಳಂತೂ ಬಿಡುವುದೇ ಇಲ್ಲ. ಅವುಗಳ ಕೋಡಿನ ಸುತ್ತ ಮಾರುದ್ಧ ಹಗ್ಗ ಹಾಕಿ ಹಣೆಯ ಮಧ್ಯದಲ್ಲಿ ಒಂದು ಗಂಟು ಹೊಡೆದು, ಅದರ ಮೂತಿಯ ಸುತ್ತ ಇನ್ನೊಂದು ಸುತ್ತಿನ ಸರಗುಣಿಕೆ ಹಾಕಿ ಗಟ್ಟಿಯಾದ ಕಂಬಕ್ಕೆ ಎಳೆದು ಹಿಡಿದರೆ ಮಾತ್ರ ಅವು ಬಗ್ಗುವುದು.

ಹಾವಿನಂತೆ ಬುಸ್ಸೆನ್ನುತ್ತಾ ಕೊಸರಾಡುವ ಅವುಗಳ ಮೂತಿಯನ್ನು ಕಟ್ಟಿದ ಪಕ್ಕದ ಕಂಬಕ್ಕೆ ಇಲ್ಲವೇ ಗೋಡೆಯೊಂದಕ್ಕೆ ಒತ್ತಿ ಹಿಡಿದು ಅದೇ ಸ್ಥಿತಿಯಲ್ಲಿಯೇ ಎಲ್ಲಾ ಕೆಲಸವನ್ನು ಪೂರೈಸಬೇಕಿತ್ತು. ಬಯಲು ಸೀಮೆಯಲ್ಲಿ ಇವನ್ನೆಲ್ಲಾ ಕೂಡಿಹಾಕಿ ಬಗ್ಗಿಸಿ ದಾರಿಗೆ ತರಲು ಟ್ರೆವಿಸ್ ಎಂಬ ಉಪಕರಣವಿರುವುದರಿಂದ ಮತ್ತು ಈ ಎಮ್ಮೆ, ಕೋಣ, ಕತ್ತೆ,ಹಂದಿ, ಎತ್ತುಗಳನ್ನೆಲ್ಲಾ ನಾಯಿಮರಿಯಂತೆ ಪಳಗಿಸಿ ಅನುಭವದ ಕೊಡಗಳಿಂತಿರುವ ಜವಾನ ಅಲ್ಲಲ್ಲ.. ಕಂಪೌಂಡರುಗಳು ಇರುವುದರಿಂದ ಈ ಕೆಲಸ ನಮಗೇನೂ ಕಷ್ಟ ತರುತ್ತಿರಲಿಲ್ಲ.

ಅಲ್ಲದೇ ಅವರೇ ನಿರ್ಧರಿಸಿದಂತೆ ಇಂತಹ ನಿಕೃಷ್ಠ ಕಾರ್ಯಗಳೆಲ್ಲಾ ತಜ್ಞ ಪಶುವೈದ್ಯರು ಮಾಡುವುದು ಅವರ ಕೆಲಸವೇ ಅಲ್ಲ ಎಂಬ ರೈತರ ಭಾವನೆ ಕೆಲ ಪಶುವೈದ್ಯರಲ್ಲಿ ಬಂದು ಬಹಳ ಕಾಲವೇ ಆಗಿ ಹೋಗಿತ್ತು. ಮೂಗಿಗೆ ಮೂಗುದಾರ ಹಾಕಿಸಿಕೊಂಡು, ಕಿವಿಗೊಂದು ಓಲೆ ಹಾಕಿಸಿಕೊಂಡು ಸಂತೆಯಲ್ಲಿ ಠಳಾಯಿಸುವ ಹೊಳೆಯುವ ಶರೀರದ ಸ್ಮಾರ್ಟಾದ ಎಮ್ಮೆಗಳನ್ನು ನೋಡುತ್ತಿದ್ದರೆ ನನಗೆ ನಮ್ಮ ಬಿವಿಎಸ್ಸಿ ವಿದ್ಯಾರ್ಥಿನಿಯೊಬ್ಬಳು ಅವಳ ಇರುವ ಎರಡು ಕಿವಿಗೆ ಹತ್ತಾರು ರಂಧ್ರಗಳನ್ನು ಮಾಡಿಸಿ ಅದಕ್ಕೆಲ್ಲಾ ತರಹೇವಾರಿ ಬಂಗಾರದ್ದೋ ಮತ್ತೆಂತದೋ ಜುಮುಕಿ ತರದ ನೇತಾಡುವ ಆಭರಣಗಳನ್ನು ಸಿಗಿಸಿಕೊಂಡು, ಮೂಗಿನ ಮಧ್ಯೆ ಅದೆಂತದೋ ನೇತಾಡುವ ರಿಂಗಿನಂತ ಆಭರಣ ಹಾಕಿರುವದನ್ನು ನೋಡಿದರೆ ಸಾನಿಯಾ ಮಿರ್ಜಾ ತರ ಮೂಗುತಿ ಸುಂದರಿಯಾಗಲು ಶತ ಪ್ರಯತ್ನ ಮಾಡುತ್ತಿರುವುದು ನೆನಪಾಗುತ್ತಿತ್ತು.

ಡಬ್ಬಣದಂತೆ ಚೂಪಾಗಿರುವ ಟ್ರೊಕಾರ್ ಎಂಬ ದಪ್ಪ ಸೂಜಿಯಂತಿರುವ ಉಪಕರಣಕ್ಕೆ ಮೂಗುದಾರದ ಚೂಪು ಮಾಡಿದ ತುದಿಯನ್ನು ಸಿಗಿಸಿ ಮೂಗಿನ ಹೊರಳೆಗಳ ಮಧ್ಯೆ ಇರುವ ಮೃದುವಾದ ಪಠಲವನ್ನು ಭೇಧಿಸಿ ತೂತು ಕೊರೆದು ಒಮ್ಮೆಯೇ ಬಲ ಬಿಟ್ಟು ಸರ್ರನೇ ದಾರ ಹಾಯಿಸಿ ಎರಡೂ ಕೈಗಳಿಂದ ಎಮ್ಮೆಯ ಎರಡೂ ಕೋಡುಗಳನ್ನು ಬಳಸಿ ತಾಳಿ ಕಟ್ಟುವಾಗ ಹೇಗೆ ಮೂರು ಗಂಟನ್ನು ಗಂಡಸರು ಹಾಕುತ್ತಾರೋ ಹಾಗೇ ಮೂರು ಗಂಟುಗಳನ್ನು ಭದ್ರವಾಗಿ ಹಾಕಿದರೆ ಮೂಗುದಾರ ಸರಿಯಾಗಿ ಬಿದ್ದ ಹಾಗೇ.

ಪುರೋಹಿತರುಗಳ “ಮಾಂಗಲ್ಯಂ ತಂತು ನಾನೇನ.. ಮಮ ಜೀವನ ಹೇತುನಾ.. ಎಂಬ ರಾಗವಾದ ಮಂತ್ರ ಘೋಷದ ಮಧ್ಯೆ ಮಾಂಗಲ್ಯ ಧಾರಣೆ ಸಮಯದಲ್ಲಿ ಹೆಣ್ಣು ಮಕ್ಕಳು ವಿನೀತರಾಗಿ ಸಹಸ್ರ ಜನರ ಮುಂದೆ ತಲೆ ಬಗ್ಗಿಸಿ ಗಂಟು ಹಾಕಿಸಿಕೊಂಡ ನಂತರ ಹೇಗೆ ಹುಲಿಯಾಗುತ್ತಾರೋ ಹಾಗೆ ನಮ್ಮಿಂದ ಮೂಗುದಾರ ಹಾಕಿಸಿಕೊಂಡ ಸ್ವಲ್ಪ ಹೊತ್ತಿಗೆ ಎಮ್ಮೆ ತಕ ಥೈ ಎಂದು ಡ್ಯಾನ್ಸ್ ಪ್ರಾರಂಭಿಸುತ್ತಿತ್ತು. ಆದರೆ ಮೂಗುದಾರವನ್ನು ಕೈ ಬೆರಳ ನಡುವೆ ಹಾಕಿ ಹಿಡಿದರೆ ಸಾಕು, ಮೂಗಿನ ಪಠಲದ ಮೆತ್ತನೇ ಭಾಗದ ಮೇಲೆ ಬೀಳುವ ಒತ್ತಡದ ನೋವಿನಿಂದದಲೋ ಏನೋ ಕುತ್ತಿಗೆಯ ಚರ್ಮ ಹಿಡಿದರೆ ಹರಾಮಿ ಹಲಾಲುಕೋರ ಹಾಲುಕಳ್ಳ ಕಳ್ಳ ಬೆಕ್ಕೂ ಸಹ ಮೆತ್ತಗಾಗುವಂತೆ ಎಮ್ಮೆಗಳೂ ಮೆತ್ತಗಾಗಿ ಬಿಡುತ್ತಿದ್ದವು.

ದನದ ಸಂತೆಗಳಲ್ಲೆಂತೂ ಕೆಲ ಮನೆಹಾಳ ದನದ ವ್ಯಾಪಾರಿಗಳು ಎತ್ತು, ಎಮ್ಮೆ, ಆಕಳುಗಳಿಗೆ ಬಣ್ಣ ಬಣ್ಣದ ಮೂಗುದಾರ ಹಾಕಿ ಅವುಗಳಿಗೊಂದಿಷ್ಟು ಬಣ್ಣಗಳ ಪ್ರೋಕ್ಷಣೆ ಮಾಡಿ ಗಿಡ್ಡ, ದಪ್ಪ, ಎತ್ತರ, ಡುಮ್ಮ, ಬಡಕಲು ಎಮ್ಮೆಗಳನ್ನು ಸುಂದರವಾಗಿ ಕಾಣುವಂತೆ ಮಾಡಿ ರೈತರನ್ನು ಬಕರಾ ಬಿದ್ದು ಖರೀದಿಸುವಂತೆ ಖೆಡ್ಡಾ ಕೆಡವುತ್ತಿದ್ದರು.

ಹೋರಿ ಎತ್ತುಗಳ ಕೊಂಬು ಕೆತ್ತಿ, ಇರುವ ಎರಡೇ ಬೆಳ್ಳಗಾದ ಕೂದಲುಗಳಿಗೆ ಬಣ್ಣ ಹಚ್ಚಿ ಯಂಗಾದೆವೆಂಬ ಬಿಂಕದಿಂದ ಬೀಗುವ ಪುರುಷರಂತೆ, ಅವುಗಳ ವಯಸ್ಸು ಮರೆಮಾಚುವ ಪ್ರಯತ್ನ ಮಾಡುತ್ತಿದ್ದರು. ಅದರಲ್ಲೂ ಎಮ್ಮೆಗಳ ಮೈಯ ರೋಮಗಳನ್ನೆಲ್ಲಾ ತರಿದು, ಕೊಂಬಿಗೆ ಹರಳೆಣ್ಣೆ ಸವರಿ, ಇಡೀ ಮೈಗೆ ಬೇವಿನ ಎಣ್ಣೆ ಹಚ್ಚಿ, ಕುತ್ತಿಗೆಗೆ ಆಗಾಗ ಟಣ್. ಟಣ್ ಎಂಬ ಚಂದದ ಶಬ್ದದಿಂದ ಮನಸೆಳೆಯುವ ಗಂಟೆ ಕಟ್ಟಿ ಆಕರ್ಷಣೆಯ ಮಾಡುತ್ತಿದ್ದರು.

ಇವೆಲ್ಲ ನೋಡಿದರೆ ಮದುವೆಯ ಸಮಯದಲ್ಲಿ ಮಿರ ಮಿರ ಮಿಂಚುವ ರೇಶ್ಮೆ ಸೀರೆ ಉಟ್ಟು, ಮೈಮೇಲೆಲ್ಲಾ ಬಂಗಾರದ ಪರ್ವತವನ್ನೇ ಹೇರಿಕೊಂಡಿರುವ, ಮದುವೆಗೆಂದೇ ಅಲಂಕಾರ ಮಾಡಲು ಬ್ಯೂಟಿಪಾರ್ಲರಿನಿಂದ ಕರೆಸಿದ ಬ್ಯುಟಿಶಿಯನ್ ಅಲಂಕಾರ ಮಾಡಿದ ಹಳ್ಳಿಯ ಮದುವಣಗಿತ್ತಿಯಂತೆ ಈ ಎಮ್ಮೆಗಳು ಕಾಣುತ್ತಿದ್ದವು.

ಸದಾ ಹಾವು ಕಪ್ಪೆಗಳನ್ನು ಅಟ್ಟಿಸಿಕೊಂಡು ಹೋಗುವ, ಸೊಪ್ಪು ಸೊದೆಗಳು ಕೊಳೆತು ನಾರುವ ಅರಲು ಕೆಸರು ಹೊಂಡದಲ್ಲಿ ಹೊರಳಾಡಿ ತಾಲಿ ಹೊಡೆದು ದುರ್ವಾಸನೆಯ ಸಗಣಿಯನ್ನು ಮೈಗೆಲ್ಲಾ ಹಚ್ಚಿಕೊಂಡು “ದಿಮ್ ರಂಗ” ಎಂದು ಸ್ವಚ್ಚಂದವಾಗಿ ಓಡಾಡಿಕೊಂಡಿರುವ ಈ ಎಮ್ಮೆಗಳಿಗೆ ಈ ರೀತಿ ಅಲಂಕಾರ ಮಾಡಿದರೆ ಒಂತರಾ ಸುಂದರವಾಗಿ ಕಾಣುತ್ತಿದ್ದವು.

ಎಂದೆಂದೂ ಚಂದದ ತುಟಿಗೆ ರಂಗನ್ನೇ ಹಚ್ಚದ ಹಳ್ಳಿ ಯುವತಿಯ ತುಟಿಗೆಲ್ಲಾ ಕಡುಗೆಂಪು ಬಣ್ಣದ ಲಿಪ್ ಸ್ಟಿಕ್ ಬಳಿದು, ಫ್ರೆಶ್ಶಾಗಿ ಆಗಷ್ಟೇ ಇಲಿ ಹೆಗ್ಗಣ ತಿಂದು ರಕ್ತ ಬಾಯಿಗೆ ಅಂಟಿಸಿಕೊಂಡ ಮಾರ್ಜಾಲಗಳಂತೆ ಮಾಡುವ ಪಟ್ಟಣದ ಬ್ಯುಟಿಶಿಯನ್ನುಗಳ ಸಾಲಿಗೆ ಈ ವ್ಯಾಪಾರಿಗಳು ಸೇರುತ್ತಿದ್ದರು.

ಈ ಎಮ್ಮೆಗಳನ್ನು ಒಂದೆರಡು ದಿನ ಹಾಲು ಕರೆಯದೇ ಕೆಚ್ಚಲೆಲ್ಲಾ ತುಂಬಿ ಕಾಮದೇನುವಿನಂತೆ ಕಾಣುವ ಚಂದಕ್ಕೆ ಮರುಳಾಗಿ ಒಂದಕ್ಕೆರಡು ರೇಟು ನೀಡಿ ಖರೀದಿಸಿ ಮನೆಗೆ ಹೋಗಿ ಹಾಲು ಹಿಂಡಿದರೆ ಮೊದಲನೇ ದಿನ ಭರಪೂರ ಹಾಲು ನೀಡುವ ಎಮ್ಮೆ ಮಾರನೇ ದಿನದಿಂದ ರಣಚಂಡಿಯಾಗಿ ಪಟಾರ್ ಎಂದು ಮುಖಕ್ಕೆ ಹಿಂಗಾಲಿನಿಂದ ಮುಲಾಜಿಲ್ಲದೇ ಭಾರಿಸುವ ಮಹಿಷಾಸುರನ ಧೂತನಾಗಿ ಪರಿವರ್ತಿತವಾಗುತ್ತಿತ್ತು.

ನಮ್ಮ ಯಜಮಾನರೂ ಹೀಗೇ ಮೋಸ ಹೋಗಿದ್ದು. ಭಾರಿ ಮೈಕಟ್ಟು ಹೊಂದಿ ಅಗಲ ಚೂಪಾದ ಕೋಡಿನ ಎತ್ತರದ ಈ ಎಮ್ಮೆ ರಾಗಿಣಿ, ಹರಿಪ್ರಿಯಾರಂತೆ ಎತ್ತರವಾಗಿದ್ದರಿಂದ ದೇವತೆಯ ಪಾತ್ರ ವಹಿಸಿದ ರಮ್ಯಾ ರಚಿತಾರಂತೆ ಚಂದ ಕಂಡಿದ್ದರಿಂದಲೋ ಏನೋ ದಲಾಲಿಯು ಮಿರಮಿರ ಮಿಂಚುವ ಅಲಂಕಾರಕ್ಕೆ ಬೆರಗು ಮಾತಿಗೆ ಮರುಳಾಗಿ ಎಮ್ಮೆ ತಂದ ಮೇಲೇಯೇ ಗೊತ್ತಾಗಿದ್ದು ಅದರ ರಮಾದೇವಿಯ ಗಯ್ಯಾಳಿ ಬುದ್ಧಿ. ನೋಡಲು ಭೀಕರವಾಗಿ ಕಂಡರೂ ಮನೆಯ ಯಜಮಾನಿಯನ್ನು ಮಾತ್ರ ಆ ಎಮ್ಮೆ ನಂಬುತ್ತಿದ್ದರಿಂದ ಆಯಮ್ಮನೇ ಅದರ ಸಕಲ ಉಸ್ತುವಾರಿಯನ್ನು ವಹಿಸಿದ್ದರು.

ಆದರೆ ಅವರು ಕಾರ್ಯನಿಮಿತ್ತ ಮಗಳ ಮನೆಗೋ, ತವರು ಮನೆಗೋ ಹೋದಾಗಲೋ ರಾಯರಿಗೆ ಭೂತಯ್ಯನ ಮಗ ಅಯ್ಯುವಿನ ದಿನೇಶ್ ಪಾತ್ರ ವಹಿಸಿ ಎಮ್ಮೆಯಿಂದ ಹಾಲೆಂಬ ಅಮೃತವನ್ನು ಪಡೆಯಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. ಅವರೂ ಸಿನಿಮಾದಲ್ಲಿ ದಿನೇಶ್ ಸೀರೆ ಉಟ್ಟುಕೊಂಡು ಹೋಗಿ ಒದೆ ತಿನ್ನುವಂತೆ ಒದೆ ತಿಂದಾದ ಮೇಲೆ ಈ ಸಾಹಸ ಕೈಬಿಟ್ಟಿದ್ದರು. ಇನ್ನು ಹಿಂಡಿ ಇಟ್ಟು ಅದು ಹಿಂಡಿ ತಿನ್ನುವಲ್ಲಿ ಮಗ್ನನಾದರೆ ಈ ಕಡೆ ಕಳ್ಳನಂತೆ ಯಾಮಾರಿಸಿ ಹಾಲು ಕರೆಯುವ ಟೆಕ್ನಿಕ್ಕು ಎಲ್ಲಾ ಸಲ ಕೆಲಸ ಮಾಡುತ್ತಿರಲಿಲ್ಲ.

ಈ ಎಮ್ಮೆಗಳಿಗೆ ಅವುಗಳ ಕರುಗಳ ಮೇಲೆ ಅಪಾರ ಮಮತೆ. ಮನೆಯಲ್ಲೇ ಅವನ ತಮ್ಮ ತಂಗಿ ಇದ್ದರೂ ಅವರು “ಬೋಂಡಾ ಮಾಡಿ ಕೊಡಮ್ಮಾ” ಎಂದು ಗೋಗೆರೆದರೂ ಒಲೆ ಮೇಲೆ ಬಾಂಡ್ಲಿ ಇಡದ ಅಮ್ಮಂದಿರು, ದೂರದ ಅಮೇರಿಕಾದಲ್ಲಿ ಕುಳಿತು ಆಗಾಗ ಕರೆ ಮಾಡುವ ಟೆಕ್ಕಿ ಮಗ ಅಥವಾ ಮಗಳು ಮನೆ ಬಂದಾಗ ಅವರಿಗೆ ತರ ತರದ ತಿಂಡಿ ಮಾಡಿ ಹಾಕಿ “ತಿನ್ನು ಮಗಾ” ಎಂದು ಮಮಕಾರ ತೋರಿಸುವ ನಮ್ಮೆಲ್ಲಾ ಮಲೆನಾಡಿನ ಹಲವು ತಾಯಂದಿರಿಗೆ “ವಿಶೇಷ” ಮಮಕಾರ ಇರುವಂತೆ ಈ ಎಮ್ಮೆಯೂ ಸಹ ತನ್ನ ಕರುವಿಗೆ ಮಮಕಾರ ತೋರಿಸುತ್ತಿತ್ತು.

ಆ ಕರು ಜಂತು ನಾಶಕ ಹಾಕದಿರುವುದರಿಂದಲೋ ಅಥವಾ ಇ ಕೊಲೈ ಬಿಳಿ ಬೇಧಿಯಿಂದಲೋ ಬಳಲಿ ಹಳ್ಳಿ ಔಷಧಿ ನಾಟದೇ ಶಿವನ ಪಾದ ಸೇರಿದ ಮೇಲೆಯೇ ಎಮ್ಮೆಯ ನಿಜ ರೂಪದ ದರ್ಶನವಾಗಿದ್ದು. ಎಮ್ಮೆ ಕುಲದ ಸಕಲ ಗುಣಾವಗುಣಗಳೂ ಈ ಎಮ್ಮೆಯ ಮೈಸೇರಿದ್ದವು. ಈ ಎಮ್ಮೆಗಳಿಗೆ ಕರು ಯಾವಾಗಲೂ ಪಕ್ಕದಲ್ಲೇ ಇರಬೇಕು. ಹೊಸಬರು ಯಾರಾದರೂ ಬಂದು ಮುದ್ದಾದ ಎಮ್ಮೆ ಕರುವಿನ ತಲೆ ನೇವರಿಸಿ ಪ್ರೀತಿ ತೋರಿಸಲು ಹೋದಲ್ಲಿ ನಿಂತಲ್ಲೇ ರಣಚಂಡಿ ಅವತಾರ ತಾಳಿ ಬುಸ್ಸೆನ್ನುತ್ತಾ ಹಾಯಲು ಬರುತ್ತಿತ್ತು.

ಕರು ಸತ್ತ ಸುಮಾರು ದಿನಗಳ ವರೆಗೆ ಹತ್ತಿರವೂ ಸೇರಿಸದ ಬೃಹತ್ ಕೋಡಿನ ಎಮ್ಮೆ ಕ್ರಮೇಣ ಸತ್ತು ಹೋದ ಕರುವಿನ ನೆನಪು ಮಾಸಿದಂತೆ ಹಿಂಡಿ ತಿನ್ನುತ್ತಾ ಹಾಲು ಕೊಡಲು ಪ್ರಾರಂಭಿಸಿತಂತೆ. ಸ್ವಲ್ಪ ದಿನಗಳಲ್ಲಿ ಒಂದೆರಡು ಸಲ ಒದ್ದ ಮೇಲೆ ಬುದ್ಧಿ ಬಂದು ಅದರ ಮುಂದೆ ಕೋಲು ಹಿಡಿದು ನಿಂತು ಬೆದರಿಸುತ್ತಿದ್ದರೆ ಹಾಲಿನ ತೊರೆ ಇಳಿಸಿ ಹಾಲು ನೀಡುತ್ತಿತ್ತಂತೆ. ಇನ್ನೂ ಕೊಸರಾಟ ಪ್ರಾರಂಭಿಸಿದ ಮೇಲೇಯೇ ಈ ಮೂಗುದಾರ ಹಾಕುವ ಐಡಿಯಾ ಹೇಳಿದ್ದು.

ಹೌದು. ಇಷ್ಟೆಲ್ಲಾ ಹರಾಮಿ ಗುಣದ ಎಮ್ಮೆಯನ್ನು ಹುಟ್ಟಿದಷ್ಟು ಹಣಕ್ಕೆ ಮಾರಿಬಿಡಬಹುದಲ್ಲ?! ಇದು ನಿಮ್ಮ ಪ್ರಶ್ನೆ. ಇದರ ಕಲ್ಯಾಣ ಗುಣಗಳು ಬಾಯಿಂದ ಬಾಯಿಗೆ ಹಬ್ಬಿ ಆಗಲೇ ಕುಖ್ಯಾತಿ ಪಡೆದಿರುವುದರಿಂದ ಸ್ಥಳೀಯವಾಗಿ ಯಾವುದೇ ಗಿರಾಕಿಗಳು ಇಲ್ಲದಿರುವುದರಿಂದ ಈ ಎಮ್ಮೆಯನ್ನು ಸಾಠಿ ಮಾಡಿ ಅದೇ ಎಮ್ಮೆಯನ್ನು ಇವರಿಗೆ ಮಾರಿದ ದಲಾಲಿಗೆ ಮಾರುವುದೂ ಕಷ್ಠವಾಗಿತ್ತು. ಇನ್ನು ಉಳಿದಿದ್ದು ಒಂದೇ ದಾರಿ.

ಕಟುಕರ ಕತ್ತಿಗೆ ನೀಡುವುದು. ಅದು ಅದರ ದಪ್ಪನೇ ಸಿಕ್ಕಾಪಟ್ಟೆ ಎಸ್ ಎನ್ ಎಫ್ ಮತ್ತು ಫ್ಯಾಟ್ ಜಾಸ್ತಿ ಇರುವ ಹಾಲನ್ನು ಹಾಕಿ ಕಾಫಿ ಕಾಯಿಸಿ ಕುಡಿದ ಋಣ ಹೊತ್ತಿರುವ ಅವರ ಅಮ್ಮನಿಗೆ ಸುತರಾಂ ಇಷ್ಟವಿರಲಿಲ್ಲ. ಆದರೂ ಅವರಿಲ್ಲದಾಗ ಅದರ ವ್ಯಾಪಾರವಾಗಿ,ಶತಾಯು ಗತಾಯು ಪ್ರಯತ್ನಿಸಿದರೂ ಸಹ, ಅದನ್ನು ಲಾರಿ ಹತ್ತಿಸಲಾಗಿದೇ ಹೋದದ್ದರಿಂದ ಎಮ್ಮೆ ಖಾಯಂ ಇವರ ಮನೆಯಲ್ಲೇ ಲಟ್ಟ ಠೊಣಪನ ತರ ಠಿಕಾಣಿ ಹೂಡಿಯಾಗಿತ್ತು.

ಈ ಎಮ್ಮೆಗೆ ಮೂಗುದಾರ ಹಾಕುವ ಸಕಲ ಸಿದ್ಧತೆಗಳೊಂದಿಗೆ ಕಾರ್ಗಿಲ್ಲಿನತ್ತ ನುಗ್ಗುವ ಸೈನಿಕನಂತೆ ನಾನು ಅವರ ಮನೆಯ ಹತ್ತಿರ ಬೈಕು ನಿಲ್ಲಿಸುತ್ತಿದ್ದಂತೆ ನನ್ನ ಬೈಕಿನ ಶಬ್ಧದ ಶಬ್ಧ ಕೇಳಿಯೇ ಎಮ್ಮೆಗೆ ತಳ ಮಳ ಪ್ರಾರಂಭವಾಗಿತ್ತು ಅನಿಸುತ್ತದೆ. ಬುಸು .. ಬುಸು. ದರ.. ಬರ. ಶಬ್ಧ ಮಾಡುತ್ತಾ ಸೊಪ್ಪು ಹಾಕಿದ್ದ ಕೊಟ್ಟಿಗೆಯಲ್ಲಿ ಕಟ್ಟಿದ ಹಗ್ಗವನ್ನು ತುಂಡರಿಸುವಂತೆ ಎಳೆದಾಡುತ್ತಿತ್ತು. ಆಲದ ಮರದಂತೇ ವಿಶಾಲವಾಗಿ ದಶದಿಕ್ಕುಗಳಿಗೂ ಹರಡಿಕೊಂಡಂತಿದ್ದ ಅದರ ಕೋಡನ್ನು ಹತ್ತಿರವಿದ್ದ ಗೋಡೆಗೆ ಸದಾ ಉಜ್ಜುತ್ತಿದ್ದರಿಂದಲೋ ಏನೋ ಮಹಾಕಾಳಿಯ ಶೂಲದಷ್ಟು ಹರಿತವಾಗಿದ್ದವು.

ಕಣ್ಣುಗಳು ಗಾಬರಿಯಿಂದ ಹಿರಣ್ಯಕಶ್ಯಪುವಿನ ಕಣ್ಣಿನ ಹಾಗೇ ಗರ ಗರ ತಿರುಗುತ್ತಾ ಭಯ ಬೀಳಿಸುವ ಹಾಗಿದ್ದವು. ಬಲವಾದ ಪ್ಲಾಸ್ಟಿಕ್ ದಾಬಿನಲ್ಲಿ ಕಟ್ಟಿದ್ದರಿಂದ ಬಿಚ್ಚಿಕೊಂಡು ಹೋಗುವ ಸಾಧ್ಯತೆ ಕಡಿಮೆ ಇತ್ತು. ನಾನೂ ಸಹ ಧೈರ್ಯದಿಂದ ದಪ್ಪನೇ ಕಣ್ಣಿಯ ಹಗ್ಗ ತೆಗೆದುಕೊಂಡು ಅದರ ಎರಡೂ ಕೊಂಬಿನ ಸುತ್ತಲೂ ಹಾಕಲು ತೀವ್ರವಾಗಿ ಪ್ರಯತ್ನಿಸಿದೆ. ಆದರೆ ಅದರ ಅಗಲವಾದ ಕೊಂಬುಗಳು ನನ್ನ ಈ ಪ್ರಯತ್ನಕ್ಕೆ ತಣ್ಣೀರೆರಚುತ್ತಾ ಇದ್ದವು. ಈ ಎಮ್ಮೆಗಳೇ ಹೀಗೆ. ಹೆದರಿಕೆಯಿಂದಲೇ ಸಕಲ ಆಟ ಆಡಿ ಕೊನೆಗೆ ಸುಸ್ಥಾಗಿ ಬಾಯಿ ಅಗಲವಾಗಿ ತೆಗೆದುಕೊಂದು ನಾಲಿಗೆ ಹೊರಹಾಕಿ ನಿಂತು ಬಿಡುತ್ತವೆ.

ಎಷ್ಟೊತ್ತು ಆಟವಾಡೀತು ? ಎಂದು ನಾನೂ ಸಹ ಅದರ ಕೊಂಬಿನ ಮಧ್ಯೆ ಹಗ್ಗ ಹಾಕುವ ಪ್ರಯತ್ನ ಪ್ರಯತ್ನ ಬಿಡಲೇ ಇಲ್ಲ. ಜೊತೆ ಇದ್ದ ಆ ಮನೆಯ ಆಳೂ ಸಹ ಅದರ ಮುಂದಿನ ಎರಡೂ ಕಾಲುಗಳನ್ನು ಕಟ್ಟಿ ಹಾಕಿ ಆಟ ನಡೆಯದಂತೆ ಮಾಡಲು ಪ್ರಯತ್ನಿಸಿದ. ಆದರೆ ಹತ್ತಿರ ಹೋಗಲು ಬಿಟ್ಟೀತೇ ಎಮ್ಮೆ ? ನಮ್ಮೆಲ್ಲಾ ಪ್ರಯತ್ನಗಳೂ ಮುಗಿದು ನಮಗೂ ಸುಸ್ತಾಯಿತು. ಆದರೆ ಸೋಲೊಪ್ಪುವ ಪ್ರಶ್ನೆಯೇ ಇರಲಿಲ್ಲ. ಇಷ್ಟೆಲ್ಲಾ ಮಾಡಿದರೂ ಮನುಷ್ಯರನ್ನೇ ಕಾಣದೇ ಕಾಡು ಪ್ರಾಣಿಯಂತಿರುವ ಈ ಎಮ್ಮೆಗೆ ಮೂಗುದಾರ ಹಾಕಿ ಬಗ್ಗಿಸಲೇ ಬೇಕು ಎಂದು ನಾನು ಮತ್ತು ಅವರ ಮನೆಯ ಆಳು ಆಗಲೇ ತೀರ್ಮಾನಿಸಿ ಆಗಿತ್ತು.

ಈ ಸಲ ಎಮ್ಮೆಯ ಕಾಲ ಬುಡಕ್ಕೆ ಒಂದಿಷ್ಟು ಹುಲ್ಲು ಹಾಕಿಕೊಂಡು ಸಾಕಷ್ಟು ಚಾಕಚಕ್ಯತೆಯಿಂದ ಅದರ ಕೋಡುಗಳೆರಡಕ್ಕೆ ಹಗ್ಗ ಹಾಕಿಯೇ ಬಿಟ್ಟೆ. ಸರಕ್ಕನೇ ಅದರ ಮೂತಿಯ ಸುತ್ತಲೂ ಬಿಗಿದು ಸರಗುಣಿಕೆ ಸರ್ರನೇ ಎಳೆದು ಪಕ್ಕದ ಕಂಬಕ್ಕೆ ಕಟ್ಟಿಯೇ ಬಿಟ್ಟೆ. ಇದೇ ಸಂದರ್ಭವೆಂದು ಆಳು ಸಣ್ಣ ಹಗ್ಗದಿಂದ ಅದರ ಮುಂದಿನ ಕಾಲೆರಡನ್ನೂ ಹತ್ತಿರ ಬರುವಂತೆ ಬಿಗಿದು ಕಟ್ಟಿದ.

ಒಟ್ಟಿನಲ್ಲಿ ಎಮ್ಮೆ ನಮ್ಮ ತಿಲಕಾಷ್ಠವಲ್ಲದ ಮಹಿಷ ಬಂಧನದಲ್ಲಿ ಸೆರೆಯಾಯ್ತು. ಅದರ ಹಾರಾಟ ಜಿಗಿದಾಟದ ಈ ಸಮಯದಲ್ಲಿ ನಮ್ಮ ಮೈಗೆಲ್ಲಾ ಅದು ಚಿರಿ.. ಚಿರಿ ಎಂದು ಪದೇ ಪದೇ ಹಾರಿಸುವ ಮೂತ್ರದಿಂದ ಮತ್ತು ಹೆದರಿಕೆಯಿಂದ ಅದು ಹಾಕಿದ ತೆಳ್ಳಗಿನ ಸಗಣಿ, ಸಿರ್ಸಿ ಯೆಲ್ಲಾಪುರ ಬದಿಯ ಹವ್ಯಕ ಅತ್ಗೇರುಗಳು ಬೆಳಿಗ್ಗೆ ಮಾಡುವ ತೆಳ್ಳವ್ವು ದೋಸೆ ಹಿಟ್ಟಿನಷ್ಟು ನೀರಾಗಿದ್ದರಿಂದ ಇವೆರಡರಿಂದ ನಮ್ಮ ಮೈಯೆಲ್ಲಾ ಸಿಂಚನವಾಗಿ ನಾವಿಬ್ಬರು ದುರ್ವಾಸನೆಯ ಕೂಪವಾದೆವು. ನಾವಂದು ಕೊಂಡ ಮೂಗುದಾರ ಹಾಕುವ ಅಮೃತ ಘಳಿಗೆ ಸನಿಹವಾಗಿದ್ದರೆಂದಲೋ ಏನೋ ನನ್ನ ಉತ್ಸಾಹ ಇಮ್ಮಡಿಯಾಯಿತು. ಇದೇ ಮುಂದೆ ದೊಡ್ಡ ಅನಾಹುತಕ್ಕೆ ಎಡೆ ಮಾಡಿಕೊಡುತ್ತದೆಯೆಂಬುದು ಅನಾಹುತವಾದ ಮೇಲೆಯೇ ಗೊತ್ತಾಗಿದ್ದು.

ನಾನು ನನ್ನ ಸಕಲ ಪರಿಕರಗಳನ್ನು ಅತ್ತು ಅದಕ್ಕೆಂದೇ ನನ್ನ ಶಿಷ್ಯ ವಿಶೇಷವಾಗಿ ಸಿದ್ಧ ಪಡಿಸಿದ ಮೂಗುದಾರವನ್ನು ಅರ್ಜುನನು ರಣರಂಗದಲ್ಲಿ ಕರ್ಣನ ಮೇಲೆ ಸರ್ಪಾಸ್ತ್ರವನ್ನು ಬಿಡುವ ಮೊದಲು ಮಂತ್ರಿಸುವಂತೆ ತದೇಕಚಿತ್ತದಿಂದ ತುದಿಯನ್ನು ಹೊಸೆದು ಡಬ್ಬಣದಲ್ಲಿ ಪೋಣಿಸಿ ಎಮ್ಮೆಯ ಮೂತಿಯನ್ನು ಅದು ಅಕ್ಕಚ್ಚು ಕಲಗಚ್ಚು ಕುಡಿಯುವ ದೋಣಿಯಂತ ಕಾಲುವೆಯ ಅಂಚಿಗೊತ್ತಿ ಹಿಡಿದು ಅದರ ಮೂಗಿನ ಹೊರಳೆಗಳ ನಡುವೆ ಇರುವ ಮೆತ್ತನೇ ಸ್ಥಳವನ್ನು ಬೆರಳಿನಲ್ಲಿ ಗುರುತಿಸಿಕೊಂಡೆ.

ಮೂಗಿಗೆ ಕೈಹಾಕಿದ ಕೂಡಲೇ ಎಮ್ಮೆಗೆ ಗುಳು ಗುಳು ಅನಿಸಿತೋ ಏನೋ, ಸಕಲ ಶಕ್ತಿಯನ್ನೂ ಹಾಕಿ “ಡ್ರೀ….ಸ್” ಎಂದು ಬಲವಾಗಿ ಸೀನಿತು. ನನ್ನ ಮುಖ ಎಮ್ಮೆಯ ಮೂತಿಗೆ ಬಹಳ ಹತ್ತಿರವಿದ್ದುದರಿಂದ ಮೂಗಿನಲ್ಲಿರುವ ಲೋಳೆ ಮಿಶ್ರಿತವಾದ ಸ್ರಾವಗಳೆಲ್ಲಾ ನನ್ನ ಮುಖ, ಮೂಗು, ಬಾಯಿ ಎಲ್ಲಾ ಕಡೆ ಸ್ಪ್ರೇ ಆಯಿತು.

ಛಲ ಬಿಡದ ಮಲ್ಲನಾದ ನಾನು ಮತ್ತು ನನ್ನ ನಿರ್ಧಾರಕ್ಕೆ ದ್ವಿಗುಣ ಸಂಕಲ್ಪ ಹೊಂದಿದ ಆಳು, ಸಕಲ ಶಕ್ತಿಯನ್ನೂ ಹಾಕಿ ಮೂಗಿನ ಹೊರಳೆಯ ಮಧ್ಯದ ಜಾಗದಲ್ಲಿ ಡಬ್ಬಣದಂತ ಟ್ರೊಕಾರ್ ಒತ್ತಿ ತೂತು ಮಾಡಿ, ಮೂಗುದಾರದ ತುದಿಯನ್ನು ಹಿಡಿದು ಎಳೆದ ಹೊಡೆತಕ್ಕೆ ದಾರ ಪಾರಾಗಿ ಈ ಕಡೆ ಬಂದಿತು. ನಾನು ದಾರದ ಎರಡೂ ತುದಿಗಳನ್ನು ಎಮ್ಮೆಗೆ ಮಾಂಗಲ್ಯ ಕಟ್ಟುವಂತೆ ಕೊಂಬಿನ ಮಧ್ಯೆ ತಂದು ಎರಡು ಗಂಟು ಹಾಕಿ ಕೊನೆಯ ಮತ್ತು ಮೂರನೆಯ ಗಂಟು ಇನ್ನೇನು ಹಾಕಬೇಕು.., ಅಷ್ಟರಲ್ಲಿಯೇ ಆಗಿ ಹೋಯಿತು ಅನಾಹುತ !.

ಇಷ್ಟು ಹೊತ್ತೂ ಎಮ್ಮೆಯ ಮೂತಿಗೆ ಹಾಕಿದ ಹಗ್ಗವನ್ನು ಎಳೆದು ಹಿಡಿದ ಯಜಮಾನರು ಕೈಸೋತೋ ಅಥವಾ ನಮ್ಮ ಮೂಗುದಾರ ಹಾಕುವ ಕಾಯಕ ಮುಗಿಯಿತೆಂದೋ ಹಗ್ಗವನ್ನು ಸಡಿಲ ಬಿಟ್ಟರು ಅಂತ ಕಾಣಿಸುತ್ತದೆ. ಮೊದಲೇ ನೋವಿನಿಂದ ನಲುಗುತ್ತಿದ್ದ ಮತ್ತು ಮಹಾ ರೋಷದಿಂದಿರುವ ಅದರ ಸಮಯಕ್ಕಗಿ ಕಾಯುತ್ತಿದ್ದ ಎಮ್ಮೆ ನಭದೆಡೆ ಚೂಪಾದ ಕೋಡುಗಳನ್ನು ಹೊಂದಿರುವ ಬಂಡೆಯಂತೆ ಘಟ್ಟಿಯಾದ ತಲೆಯನ್ನು ಒಮ್ಮೆಯೇ ಸ್ಪ್ರಿಂಗಿನಂತೆ ಚಿಮ್ಮಿ ಬಿಟ್ಟಿತು.

ಇಂತಹ ತುರ್ತು ಪರಿಸ್ಥಿತಿಯನ್ನು ನಿರೀಕ್ಷಿಸದ ನಾನು ಮೂರನೇ ಗಂಟು ಹಾಕುವಲ್ಲಿ ಮಗ್ನನಾಗಿದ್ದೆ. ನನ್ನ ಕಾಲುಗಳ ಸಂದಿಯಲ್ಲಿ ಸಿಮೆಂಟಿನ ಗೋಡೆಗೆ ಪದೇ ಪದೇ ತಿಕ್ಕಿ ಚೂಪಾದ ಕೊಂಬುಗಳು “ಸಳ್” ಎಂದು ಹೊಕ್ಕಿರಬೇಕು. ನನ್ನ ಪ್ಯಾಂಟು ಅದರ ಮೇಲೆ ಹಾಕಿದ ಮಳೆಕೋಟು ಎರಡು ಒಂದೇ ಸಲಕ್ಕೆ ಸೀಳಿ ಹೋದವು. ಎಮ್ಮೆಯು ಚಿಮ್ಮಿದ ರಾಕೆಟ್ ವೇಗಕ್ಕೆ ಸಿಲುಕಿ ಎಮ್ಮೆಯಿಂದ ಮೂರು ಮಾರು ದೂರದಲ್ಲಿ ಸೊಪ್ಪಿನ ರಾಶಿಯಲ್ಲಿ ರಭಸದಿಂದ ಹಾರಿ ಬಿದ್ದೆ. ಸೊಪ್ಪಿನ ಕೊಟ್ಟಿಗೆಯಾಗಿದ್ದರಿಂದಲೋ ಏನೋ ಸೊಂಟ ಮುರಿದಿಲ್ಲ ಅನಿಸಿದ್ದು ಎದ್ದು ಕುಳಿತು ಕೊಳ್ಳಲು ಸಾಧ್ಯಾವಾಗಿದ್ದರಿಂದ.

ಗಾಬರಿಯಾದ ಯಜಮಾನರು ಮತ್ತು ಆಳು ನನ್ನನ್ನು ಬಂದೆತ್ತಿದರು. ಏನಾದರೂ ಆಯ್ತಾ ಡಾಕ್ಟ್ರೇ.. ಎಂದು ಅವರು ಕಕ್ಕುಲತೆಯಿಂದ ಕಾಳಜಿಯಿಂದ ಕೇಳುವ ಶಬ್ಧ ನನಗೆ ಎಲ್ಲೋ ಗುಹೆಯಿಂದ ಕ್ಷೀಣವಾಗಿ ಹೊರಬರುವ ಸನ್ಯಾಸಿಯು ಹೇಳುವ ’ಓಂ” ಮಂತ್ರದಂತೆ ಕೇಳಿಸಹತ್ತಿತು. ಎಲ್ಲೆಲ್ಲೋ ಅಸಾಧ್ಯ ನೋವು ಇದ್ದರೂ ಇದನ್ನು ವ್ಯಕ್ತಪಡಿಸಿದರೆ ನಾನು ಸೋತಂತೆ ಎಂದುಕೊಂಡು “ಹೆ… ಹೆ.. ಏನೂ ಆಗಿಲ್ಲ. ಸ್ವಲ್ಪ ಮೂಗ ಪೆಟ್ಟು ಅಷ್ಟೇ.. ಎಂದು ದೇಶಾವರಿ ನಗೆ ಬೀರುತ್ತಾ ತಡವರಿಸುತ್ತಾ ಎದ್ದೆ.

ಸಂಗೀತದವರು ಕಚೇರಿ ಮುಗಿದ ನಂತರ ಅವರ ತಬಲಾ ಹಾರ್ಮೋನಿಯಂ ಜೋಡಿಸಿದಂತೆ ನನ್ನ ಸಕಲ ಸರಂಜಾಮುಗಳನ್ನು ವಸ್ತುಗಳನ್ನೂ ಆಳು ಜೋಡಿಸಿ ನನ್ನ ಬ್ಯಾಗಿಗೆ ಹಾಕಿದ. ಎಮ್ಮೆಗೆ ನೋವು ಕಡಿಮೆ ಮಾಡುವ ಚುಚ್ಚುಮದ್ದು ಮತ್ತು ನಂಜುನಿವಾರಕ ನೀಡಬೇಕಿತ್ತು. ಆದರ ರಂಪಾಟದಿಂದ ಬೇಸರಗೊಂಡ ಯಜಮಾನರು “ನೋವಿನಿಂದ ನರಳಲಿ ಬಿಡ್ರೀ.. ದರೀದ್ರ ಎಮ್ಮೆ” ಎಂದು ಶಪಿಸಿದರು. ಬೈಕು ಸ್ಟಾರ್ಟ್ ಮಾಡಿದ ನಾನು ಯಜಮಾನರು “ಡಾಕ್ಟ್ರೇ ಆಸ್ರಿಗೆ ಏನ್ ಮಾಡ್ಸ್ಲಿ.. ಟೀನಾ ಕಾಫೀನಾ” ಎಂದರೂ ಕೇಳಿಸಿಕೊಳ್ಳದೇ ಬೈಕಿನ ಕ್ಲಚ್ ಬಿಟ್ಟು ಅಕ್ಸಲರೇಟರ್ ಒತ್ತಿದೆ.

ಸಣ್ಣ ಜಿಟಿ ಜಿಟಿ ಮಳೆ ಆಗಲೇ ಪ್ರಾರಂಭವಾಗಿತ್ತು. ಸುಮಾರು ಒಂದೆರಡು ಕಿಲೋ ಮೀಟರು ದೂರ ಬಂದಿರಬೇಕು. ಬಲಗಡೆಯ ಮೊಣಕಾಲಿನ ಹತ್ತಿರ ಒಂತರಾ ಬಿಸಿ..ಬಿಸಿ.. ಆದ ಹಾಗೇ ಅನಿಸಿತು. ಮಳೆಯಂಗಿಯ ತೂತಿನಿಂದ ನೀರು ಹೊಕ್ಕಿರಬೇಕು. ಶರೀರದ ತಾಪಕ್ಕೆ ಬಿಸಿಯಾಗಿರಬಹುದು ಎಂದುಕೊಂಡು ಇನ್ನೊಂದೆರಡು ಕಿಲೋಮೀಟರು ಬೈಕು ಓಡಿಸಿದೆ. ತಲೆ ಎಲ್ಲಾ ಸುತ್ತಿದ ಹಾಗೇ ಕಣ್ಣೆಲ್ಲಾ ಮಂಜಾದ ಹಾಗೇ ಆಯಿತು. ಮೈ ಕೈನ ಕಣಗಳೆಲ್ಲಾ ನೋವಿನಿಂದ ಕಥೆ ಹೇಳುತ್ತಿದ್ದವು.

ಬೈಕಿನ ಫುಟ್ ರೆಸ್ಟಿನ ಮೇಲಿದ್ದ ಕಾಲುಗಳನ್ನು ಗಮನಿಸಿಕೊಂಡೆ. ಏಕೋ ಮಳೆಯ ನೀರಿನ ಜೊತೆ ಕೆಂಪು ಮಿಶ್ರಣ ಹೊರಬರುತ್ತಿದ್ದ ಹಾಗನಿಸಿತು. ಸ್ವಲ್ಪ ದೂರ ಹೋಗಿ ರಸ್ತೆ ಬದಿಯಲ್ಲಿ ಬೈಕಿನ ಸ್ಟ್ಯಾಂಡ್ ಹಾಕಿ ನಿಲ್ಲಿಸಿದೆ. ಮಳೆಯ ಪ್ಯಾಂಟು ಮತ್ತು ಕಾಟನ್ ಪ್ಯಾಂಟುಗಳೆರಡು ರಕ್ತದಿಂದ ತೋಯ್ದು ಹೋಗಿದ್ದವು. ಮಲೆನಾಡಿನಲ್ಲಿ ಮಳೆಗಾಲದಲ್ಲಿ ರಕ್ತ ಹೀರುವ ಜಿಗಣೆ ಉಂಬಳ ಹೋಗಬಾರದ ಕೇಂದ್ರ ಸರ್ಕಾರದ ಬಳಿ ಹೋಗಿ ಕಚ್ಚಿರುವುದರಿಂದ ಹೀಗಾಗಿರಬಹುದು ಅಂದುಕೊಂಡೆ.

ಆದರೆ ಈ ಪ್ರಮಾಣದಲ್ಲಿ ರಕ್ತ ನಿಲ್ಲದೇ ಹೋಗುವುದು ಜಿಗಣೆ ಕಡಿತದಿಂದಲ್ಲ. ಇದು ಎಮ್ಮೆಯ ಚೂಪಾದ ಕೋಡಿನ ಪ್ರತಾಪ ಎಂದು ತಕ್ಷಣಕ್ಕೆ ಹೊಳೆಯಿತು. ಬವಳಿ ಬಂದ ಹಾಗಾದರೂ ನೇರವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದೆ. ವೈದ್ಯರ ಹತ್ತಿರ ಹೋಗಿ ಘಟನೆ ವಿವರಿಸಿ ನನ್ನ ಸಕಲ ಅಂಗಾಂಗಗಳನ್ನು ತೀವ್ರವಾದ ತಪಾಸಣೆಗೆ ಒಳಪಡಿಸುವಂತೆ ಬೇಡಿಕೆ ಇಟ್ಟೆ.

ನನ್ನ ಸ್ನೇಹಿತರಾದ ಅವರು ಡ್ರೆಸಿಂಗ್ ಮಾಡುತ್ತಾ “ಏನ್ ಡಾಕ್ಟ್ರೇ.. ಡಕಾಯಿತರು ಚೂರಿ ಹಾಕಿದ್ರಾ? ತಾಳಗುಪ್ಪದ ರೈಲಿಗೆ ಗುದ್ದಿದ್ರಾ? ಅಥ್ವಾ ಲಿಂಗಿನಮಕ್ಕಿಗೆ ಟರ್ಬೈನುಗಳನ್ನು ಸಾಗಿಸುವ ಯಮಗಾತ್ರದ ಲಾರಿಗೆ ಗುದ್ದಿದ್ರಾ? ಈ ಪರಿ ಗಾಯವಾಗಿದೆ?“ ಎಂದು ಕಕ್ಕುಲತೆ ಮೆರೆದರು. ನನ್ನ ತೊಡೆಯ ಮೇಲ್ಬಾಗದಲ್ಲಿ ಸುಮಾರು ಮೂರು ಇಂಚು ಚೂಪಾದ ಚಾಕುವಿನಿಂದ ತಿವಿದಂತೆ ಗಾಯವಾಗಿ ಅದರಿಂದ ಸಾಕಷ್ಟು ರಕ್ತ ಹರಿದಿತ್ತು.

ಅದಕ್ಕೆ ಡ್ರೆಸಿಂಗ್ ಮಾಡಿ ಆಳವಾದ ಗಾಯಕ್ಕೆ ಹೊಲಿಗೆ ಹಾಕಿ, ಪೌಡರು ಇಂತಹದ್ದೆಲ್ಲಾ ಮೆತ್ತಿ, ಟಿಟಿಯಂತ ಎಂತದೋ ಇಂಜೆಕ್ಷನ್ ಚುಚ್ಚಿ ಹದಿನೈದು ದಿನ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಹೇಳಿ ಕಳಿಸಿದರು. ಎಲ್ಲಿಯ ವಿಶ್ರಾಂತಿ?! ಮನೆಗೆ ಹೋಗಿ ಮಲಗಿ ಒಂದು ವಾರದವರೆಗೆ ಸ್ವಲ್ಪ ಸುಧಾರಿಸಿಕೊಂಡು ಗಾಯ ವಾಸಿಯಾಗಿದೆ ಎಂದು ಖಚಿತ ಮಾಡಿಕೊಂಡು ನನ್ನ ಚಟುವಟಿಕೆಗಳನ್ನು ಎಂದಿನಂತೆ ಮುಂದುವರೆಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಆರಗದಲ್ಲಿ ಗರುಡ ಪದ್ಧತಿಯ ಶಿರ ಛೇದನ ಸ್ಮಾರಕ ಶಿಲ್ಪ ಪತ್ತೆ

Published

on

ಸುದ್ದಿದಿನ,ಶಿವಮೊಗ್ಗ:ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಂಪಿಯ ನಿರ್ದೇಶಕರಾದ(ಪುರಾತತ್ತ್ವ )(ಪ) ಡಾ.ಆರ್.ಶೇಜೇಶ್ವರ ಇವರು ಕ್ಷೇತ್ರ ಕಾರ್ಯ ಕೈಗೊಂಡಾಗ ತೀರ್ಥಹಳ್ಳಿ ತಾಲ್ಲೂಕಿನ ಆರಗದ ವೀರಭದ್ರ ದೇವಾಲಯದ ಆವರಣದಲ್ಲಿ ಸುಮಾರು ಎರಡು ಮೀಟರ್ ಉದ್ದದ ಗ್ರಾನೈಟ್ ಶಿಲೆಯ “ಗರುಡ ಪದ್ಧತಿಯ ಶಿರ ಛೇದನ ಸ್ಮಾರಕ ಶಿಲ್ಪ ಪತ್ತೆಯಾಗಿದೆ”.

ಶಿರ ಛೇದನ ಸ್ಮಾರಕ ಶಿಲ್ಪವು ಎರಡು ಪಟ್ಟಿಕೆಗಳಿಂದ ಕೂಡಿದ್ದು ಕೆಳಗಿನ ಪಟ್ಟಿಕೆಯಲ್ಲಿ ವೇಳಾವಳಿ/ ಗರುಡ ಹೋಗುವ ವೀರ ಕುದುರೆಯ ಮೇಲೆ ಕುಳಿತು ಕತ್ತಿಯನ್ನು ಹಿಡಿದಿದ್ದಾನೆ, ಇವನಿಗೆ ಹಿಂಭಾಗದಲ್ಲಿ ಸೇವಕ ಛತ್ರಿಯನ್ನು ಹಿಡಿದಿದ್ದಾನೆ, ಆದ್ದರಿಂದ ಇವನನ್ನು ರಾಜ ಪ್ರಮುಖನೆಂದು ತಿಳಿಯಬಹುದಾಗಿದೆ. ಹಿಂಭಾಗದಲ್ಲಿ ಮಹಿಳೆಯು ಕತ್ತಿಯನ್ನು ಹಿಡಿದು ನಿಂತಿದ್ದಾಳೆ.

ಎರಡನೇ ಪಟ್ಟಕೆಯಲ್ಲಿ ಗರುಡ ಹೊಂದತಹ ವೀರನು ವೀರಾಸನದಲ್ಲಿ ನಿಂತಿದ್ದು ರುಂಡವನ್ನು ಕತ್ತರಿಸಲಾಗಿದ್ದು, ಬಲಗೈಯಲ್ಲಿ ಕತ್ತಿಯನ್ನು ಹಿಡಿದು ಮುಂಡದ ಮೇಲೆ ಹಲಗೆಯ ರೀತಿಯನ್ನು ಹೊತ್ತುಕೊಂಡಿದ್ದು ಇದನ್ನು ಕೈಯಲ್ಲಿ ಹಿಡಿದಿರುವಂತಿದೆ. ಈ ಶಿರ ಛೇದನ ಶಿಲ್ಪದ ಪಕ್ಕದಲ್ಲಿ ಮಹಿಳೆಯು ಶಿರ ಛೇದನವಾದ ರುಂಡವನ್ನು ಕೈಯಲ್ಲಿ ಹಿಡಿದು ನಿಂತಿದ್ದಾಳೆ.

ಮೂರನೇ ಪಟ್ಟಿಕೆಯಲ್ಲಿ ಪಟ್ಟಿಕೆಯ ಶಿಲ್ಪಗಳ ಬದಲು ಲಿಂಗದ ರೀತಿಯಲ್ಲಿ ಇರುವ ಕಂಬವಿದ್ದು ಇದರಲ್ಲಿ ಲಿಂಗದ ಉಬ್ಬು ಶಿಲ್ಪವಿದೆ. ಈ ಲಿಂಗದ/ಕAಬದ ಮೇಲೆ ಸಮತಟ್ಟಾಗಿದೆ.
ಗರುಡ ಪದ್ಧತಿಯ ಶಿರ ಛೇದನ ಸ್ಮಾರಕ ಶಿಲ್ಪದ ಮಹತ್ವ: ಆತ್ಮಬಲಿದಾನವು ಹಿಂದೂಗಳ ದೃಷ್ಟಿಯಲ್ಲಿ ಮಹತ್ವಪೂರ್ಣವಾಗಿದ್ದು, ಆತ್ಮ ಬಲಿದಾನ ಮಾಡಿಕೊಳ್ಳಲು ಶುಭ ತಿಥಿಗಳು ಒಳ್ಳೆಯವು ಎಂಬ ನಂಬಿಕೆಯಿದ್ದು, ವ್ಯಕ್ತಿಗಳು ತಮ್ಮ ಪ್ರಾಣವನ್ನು ತಾವೇ ತೆಗೆದುಕೊಳ್ಳುವಂತಹ ಅಥವಾ ಇನ್ನೊಬ್ಬರ ಸಹಾಯದಿಂದ ಮಾಡಿಕೊಳ್ಳುವಂತಹದ್ದು ಆತ್ಮ ಬಲಿದಾನ(ದೇಹತ್ಯಾಗ) ಎನ್ನಬಹುದಾಗಿದೆ.

ಆತ್ಮಬಲಿದಾನವು ಆತ್ಮಹತ್ಯೆಗಿಂತ ವಿಶೇಷವಾಗಿದ್ದು ಇದು ಸಮಾಜದ ಒಳತಿಗೋಸ್ಕರ ಆಗಿರುವಂತಹದ್ದು ಹಾಗೂ ಪೂರ್ವ ನಿಯೋಜಿತವಾಗಿರುವಂತಹದ್ದು. ಈ ಆತ್ಮ ಬಲಿದಾನದಲ್ಲಿ ಹಲವು ಬಗೆಗಳಿವೆ. ಆತ್ಮಬಲಿದಾನವನ್ನು ಮಾಡಿಕೊಂಡ ವೀರರು ಯಾವುದೇ ಹೋರಾಟದಲ್ಲಿ ಹೋರಾಡಿ ಮಡಿದವರಾಗಿರುವುದಿಲ್ಲ. ಆದರೆ ಇವರು ಯಾವುದೇ ಹೋರಾಟದಲ್ಲಿ ಮಡಿದ ವೀರರಿಗಿಂತ ಕಡಿಮೆಯಿರುವುದಿಲ್ಲ.

ಆತ್ಮ ಬಲಿದಾನದಲ್ಲಿ ಚಿತಾಪ್ರವೇಶ, ಜಲಪ್ರವೇಶ, ಊರ್ಧ್ವಪತನದ ಬಗೆಗಳಿವೆ. ಚಿತಾ ಪ್ರವೇಶ ಎಂದರೆ ಬೆಂಕಿಗೆ ಹಾರಿ ಆತ್ಮಬಲಿದಾನ ಮಾಡಿಕೊಳ್ಳುವಂತಹದ್ದು, ಜಲಪ್ರವೇಶ ಎಂದರೆ ಗಂಗೆ, ವಾರಾಣಾಸಿ, ಪ್ರಯಾಗ, ತುಂಗಭದ್ರೆ ಮೊದಲಾದೆಡೆ ನೀರಿನಲ್ಲಿ ಮುಳುಗಿ ಆತ್ಮಬಲಿದಾನ ಮಾಡಿಕೊಳ್ಳುವಂತಹದ್ದು ಹಾಗೂ ಊರ್ಧ್ವ ಬಲಿದಾನವೆಂದರೆ ಬೆಟ್ಟ, ಮರ ಹಾಗೂ ದೇವಾಲಯಗಳ ಶಿಖರಗಳಿಂದ ಕೆಳಗೆ ಬಿದ್ದು ಅಥವಾ ಹಾರಿ ಆತ್ಮಬಲಿದಾನ ಮಾಡಿಕೊಳ್ಳುವಂತಹದ್ದು ಎನ್ನಬಹುದು.

ಈ ಆತ್ಮಬಲಿದಾನದಲ್ಲಿ ಸಹಗಮನ ಪದ್ಧತಿ, ನಿಸಿಧಿ ಶಾಸನ ಶಿಲ್ಪಗಳು, ಸೂರ್ಯಗ್ರಹಣ ಶಾಸನ ಶಿಲ್ಪಗಳು ಇದರಲ್ಲಿ ಉರಿ ಉಯ್ಯಲೆ ಶಿಲ್ಪಗಳು, ಶೂಲ ಬಲಿ, ಶಿರ ಛೇದನ(ಬಲಿ) ಶಿಲ್ಪ, ಸಿಡಿದಲೆ ಶಾಸನ ಶಿಲ್ಪಗಳು, ಇರಿತ ಬಲಿ, ಬೆಂಕಿಬಲಿ ಶಿಲ್ಪ, ಕಿಳ್ಗುಂಟೆ, ಗರುಡ ಪದ್ಧತಿ ಹಾಗೂ ವಿಶೇಷವಾಗಿ ಚಾಟಿ ವಿಟನಿಂದ ಆತ್ಮಬಲಿದಾನ ಮಾಡಿಕೊಂಡಿದ್ದು, ಇವನ ಜೊತೆಯಲ್ಲಿ ಇವನ ಹೆಂಡತಿಯು ಸಹಗಮನ ಮಾಡಿಕೊಂಡಿರುವ ಆತ್ಮಬಲಿದಾನದ ಸ್ಮಾರಕ ಶಿಲ್ಪಮೊದಲಾದ ಆತ್ಮ ಬಲಿದಾನದ ಸ್ಮಾರಕ ಶಾಸನ ಶಿಲ್ಪಗಳು ಕರ್ನಾಟಕಲ್ಲಿ ಕಂಡುಬರುತ್ತವೆ.

ಈ ಸ್ಮಾರಕ ಶಿಲ್ಪವು ಇದುವರೆಗೂ ದೊರೆತಿರುವ ಶಿರ ಛೇದನ ಶಿಲ್ಪಗಳಲ್ಲಿ ತುಂಬಾ ಅಪರೂಪದ್ದು, ಈ ಸ್ಮಾರಕ ಶಿಲ್ಪವನ್ನು ಗರುಡ ಸ್ತಂಭವೆAದು ಕರೆಯಬಹುದು. ಕರ್ನಾಟಕದಲ್ಲಿ ಇದುವರೆಗೂ ಗರುಡರಾಗಿರುವಂತಹ ಎರಡು ಸ್ತಂಭಗಳು ಹಳೇಬೀಡು ಮತ್ತು ಅಗ್ರಹಾರ ಬಾಚಿಹಳ್ಳಿಯಲ್ಲಿ ಮಾತ್ರ ಕಂಡುಬAದಿವೆ. ಇವು ಹೊಯ್ಸಳರ ಕಾಲದ್ದಾಗಿವೆ.

ಆರಗದಲ್ಲಿ ದೊರೆತಿರುವ ಈ ಶಿರ ಛೇದನ ಸ್ಮಾರಕ ಶಿಲ್ಪವು ಶಾಸನರಹಿತವಾಗಿದ್ದು, ಮೇಲ್ಬಾಗದಲ್ಲಿ ಲಿಂಗದ ಆಕೃತಿಯನ್ನು ಹೊಂದಿದ್ದರೂ ಹಳೇಬೀಡಿನಲ್ಲಿ ಕಂಡುಬರುವ ಸ್ತಂಭದ ರೀತಿಯಲ್ಲಿದೆ. ಕೆಳಭಾಗದಲ್ಲಿ ಚೌಕಾಕರಾವಾಗಿದ್ದು ಶಿಲ್ಪಗಳಿಂದ ಕೂಡಿದೆ.

ಲಿಂಗದ ರೀತಿಯ ಸ್ತಂಬದ ಮೇಲ್ಬಾಗದಲ್ಲಿ ಚಪ್ಪಟೆಯಾಗಿದೆ. ಆದ್ದರಿಂದ ಇದನ್ನು ಶಿವಲಿಂಗ ಎಂದು ಹೇಳುವುದು ಕಷ್ಟವಾಗಿದೆ. ಈ ಭಾಗವು ಹಳೆಬೀಡಿನ ಗರುಡಸ್ತಂಭದ ವೃತ್ತಾಕಾರದ ರೀತಿಯಲ್ಲಿದೆ. ಆರಗ ಶಿಲ್ಪದ ವೃತ್ತಾಕಾರದ ಸ್ತಂಭದ ಬುಡದಲ್ಲಿ ಯಾವುದೇ ಚಿಕಣಿ ಶಿಲ್ಪಗಳಿಲ್ಲ ಆದರೆ ಲಿಂಗದ ಉಬ್ಬು ಶಿಲ್ಪವನ್ನು ಕಂಡರಿಸಲಾಗಿದೆ.

ಕೆಳಭಾಗದ ಚೌಕಾಕಾರದ ಭಾಗದಲ್ಲಿ ಕೈಯಲ್ಲಿ ಹಿಡಿದಿರುವ ರುಂಡವನ್ನು ಮಹಿಳೆಯು ದೇವರಿಗೆ ಅರ್ಪಿಸಿ ಸತಿ ಹೊಗಿರಬಹುದು. ಗರುಡ ಹೋಗಿರುವಂತವರು ಶೈವರಾದಕಾರಾಗಿದ್ದು ರುಂಡವನ್ನು ಉಬ್ಬು ಶಿಲ್ಪದ ಲಿಂಗಕ್ಕೆ ಅರ್ಪಿಸಿದ್ದಾರೆ.

ಹೊಯ್ಸಳರ ಕಾಲದವರೆಗೆ ಇದ್ದಂತಹ ಗರುಡ ಪದ್ಧತಿ ವಿಜಯನಗರ ಅರಸರ ಕಾಲದಲ್ಲಿಯೂ ಮುಂದುವರೆಯಿತು ಎಂದು ಈ ಗರುಡ ಪದ್ಧತಿಯ ಶಿರ ಛೇದನ ಸ್ಮಾರಕ ಶಿಲ್ಪ ಪತ್ತೆಯಿಂದ ತಿಳಿಯಬಹುದಾಗಿದೆ. ಹಳೇಬೀಡು ಮತ್ತು ಆರಗದ ಸ್ಥಂಬಗಳನ್ನು ಗಮನಿಸಿದಾಗ ಒಟ್ಟಾರೆಯಾಗಿ ಗರುಡ ಪದ್ಧತಿಯಲ್ಲಿ ಇದೇ ರೀತಿಯ ಸ್ತಂಭಳನ್ನು ಸ್ಥಾಪಿಸಿತಿದ್ದಿರಬೇಕು ಎಂಬುದನ್ನು ಊಹಿಸಬಹುದಾಗಿದೆ.

ಈ ಗರುಡ ಪದ್ಧತಿಯ ಸ್ಮಾರಕ ಶಿಲ್ಪದ ಬಗ್ಗೆ ಮಾಹಿತಿಯನ್ನು ಒದಗಿಸಿದ ಡಾ.ದೇವರಾಜಸ್ವಾಮಿ, ಡಾ. ಜಗದೀಶ, ಟಿ.ಎಂ.ಕೇಶವ, ಡಾ.ಗಂಗಾಂಬಿಕೆ ಗೋವರ್ಧನ, ರಮೇಶ ಹಿರೇಜಂಬೂರು, ಶಶಿಧರ ಹಾಗೂ ಮೋಹನ್ ಇವರುಗಳಿಗೆ ಪುರಾತತ್ತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಬಳ್ಳಾರಿ ನಿರ್ದೇಶಕರಾದ ಡಾ.ಆರ್.ಶೇಜೇಶ್ವರ ಧನ್ಯವಾದಗಳನ್ನು ತಿಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆತ್ಮಕತೆ | ಸರಳ ಹಾಗೂ ಒಲವಿನ ಮದುವೆಗಳ ಸಾಲುಸಾಲು

Published

on

  • ರುದ್ರಪ್ಪ ಹನಗವಾಡಿ

ನಾನು ಮದುವೆಯಾದ ಮೇಲೆ ನಮ್ಮೂರಿನಲ್ಲಿಯೇ 3-4 ಅಂತರ್ಜಾತಿ ಮದುವೆಗಳಾದವು. ಮೈಸೂರಿನಲ್ಲಿ ನಮ್ಮ ಜೊತೆಗಿದ್ದ ಪ್ರೊ. ಗೊಟ್ಟಿಗೆರೆ ಶಿವರಾಜು ಚನ್ನರಾಯ ಪಟ್ಟಣದಲ್ಲಿ ರಾಜ್ಯಶಾಸ್ತçದ ಅಧ್ಯಾಪಕನಾಗಿದ್ದ. ಅವನ ಸಹೋದ್ಯೋಗಿಗಳಾಗಿದ್ದ ನರಸಿಂಹಾಚಾರ್ ಇಂಗ್ಲಿಷ್ ಅಧ್ಯಾಪಕ ಮತ್ತು ಪ್ರೊ. ಸುಮತಿ ಎನ್. ಗೌಡ ಅಧ್ಯಾಪಕರಾಗಿದ್ದ ಅವರು ಪರಸ್ಪರ ಪ್ರೀತಿಸುತ್ತಿದ್ದರು.

ಅವರನ್ನು ನೇರ ಬಿಆರ್‌ಪಿಗೆ ಕರೆತಂದು, ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದನು. ನಾನು ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಕೃಷ್ಣಪ್ಪನವರಿಗೆ ಸುದ್ದಿ ಮುಟ್ಟಿಸಿ, ಮದುವೆಯ ಏರ್ಪಾಡು ಮಾಡಿದೆ. ಹುಡುಗಿ ಒಕ್ಕಲಿಗ ಜಾತಿ, ಹುಡುಗ ಬ್ರಾಹ್ಮಣನಾಗಿದ್ದ. ಸಹೋದ್ಯೋಗಿಗಳ ಪ್ರೀತಿಯ ಮದುವೆ ಮಾಡಿದ ಪ್ರೊ. ಜಿ.ಬಿ. ಶಿವರಾಜು ನಂತರ ದಿನಗಳಲ್ಲಿ ಗೌಡ ಜಾತಿಗೆ ಸೇರಿದ ಸಂಬಂಧಿಕರಿಂದ ಅನೇಕ ರೀತಿಯ ಕಿರುಕುಳಕ್ಕೂ ಒಳಗಾಗಬೇಕಾಯಿತು. ಆದರೆ ಈ ದಂಪತಿಗಳು ಶಿವರಾಜು ಪರ ಇರಬೇಕಾದವರು ನಂತರದ ದಿನಗಳಲ್ಲಿ ಇವರುಗಳಿಂದಲೇ ಕಿರುಕುಳ ಅನುಭವಿಸುವಂತೆ ಆದುದು ವಿಪರ್ಯಾಸವೇ ಸರಿ. ಮಾಡಿದ ಉಪಕಾರ ಸ್ಮರಣೆ ನಮ್ಮ ವ್ಯಕ್ತಿತ್ವದಲ್ಲಿ ಇರದಿದ್ದರೆ, ಮನುಷ್ಯನಿಂದ ಮತ್ತಿನ್ನೇನನ್ನು ಮಾಡಲು ಸಾಧ್ಯ?

ಈ ಸರಣಿಯಲ್ಲಿ ಇಲ್ಲಿಯೇ ಇನ್ನೊಬ್ಬನ ಕಥೆ ಹೇಳಿ ಮುಗಿಸುವೆ. ಬಳ್ಳಾರಿ ಮೂಲದ ಒಬ್ಬ ಡಾಕ್ಟರ್ ಮತ್ತು ಅವರ ಕೈಕೆಳಗೆ ಇದ್ದ ನರ್ಸ್ ಇಬ್ಬರೂ ಪ್ರೀತಿಸಿದ್ದು, ಮದುವೆಯಾಗುವ ತಯಾರಿಯಲ್ಲಿದ್ದರು. ಶಿವಮೊಗ್ಗದ ಕಡೆಯ ಗೆಳೆಯರೊಬ್ಬರ ಮೂಲಕ ನನ್ನಲ್ಲಿಗೆ ಬಂದರು. ಇಬ್ಬರೂ ಮದುವೆಗೆ ಅರ್ಹ ವಯಸ್ಸಿನವರಾಗಿದ್ದು, ಬೇರೆ ಬೇರೆ ಜಾತಿಯವರಾದ ಕಾರಣ, ಹುಡುಗಿಗೆ ನನ್ನದೇ ಮನೆ ವಿಳಾಸಕೊಟ್ಟು ಮದುವೆ ಮಾಡಿಸಿ ಕಳಿಸಿಕೊಟ್ಟೆವು. ನಾನಾಗ ಪ್ರೊಬೆಷನರಿ ತಹಸೀಲ್ದಾರ್‌ನಾಗಿ ತರೀಕೆರೆಯಲ್ಲಿದ್ದೆ. ಅಲ್ಲಿನ ಸಬ್ ರಿಜಿಸ್ಟ್ರಾರ್ ಚಳಗೇರಿ ಎನ್ನುವವರ ಜೊತೆ ಮಾತಾಡಿ ರಿಜಿಸ್ಟ್ರೇಷನ್ ಮುಗಿಸಿ ಕಳಿಸಿದೆ.

ಇದೆಲ್ಲ ಆಗಿ ಒಂದು ವಾರದಲ್ಲಿ ಹುಡುಗನ ಕಡೆಯ ನಿವೃತ್ತ ಸೇನಾ ಅಧಿಕಾರಿ ಬಂದು ಗಾಯತ್ರಿಯೊಬ್ಬಳೇ ಮನೆಯಲ್ಲಿದ್ದಾಗ ನನ್ನ ಬಗ್ಗೆ ಆಕ್ಷೇಪಿಸಿ ನಾನು ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರ ಸಂಬಂಧಿ, ನಿನ್ನ ಗಂಡನ ಕೆಲಸ ಕೂಡ ಕಳೆದುಕೊಳ್ಳುವಂತೆ ಮಾಡುತ್ತೇನೆ’ ಎಂದೆಲ್ಲ ಕೂಗಾಡಿ ಹೋಗಿದ್ದ. ನಾನು ತರೀಕೆರೆಯಿಂದ ಬಂದಾಕ್ಷಣ ಇವಳು ಆತಂಕದಿAದ `ನಾವೇನೋ ಮದುವೆಯಾಗಿದ್ದೇವೆ. ಬೇರೆಯವರ ಮದುವೆ ಮಾಡಲು ಹೋಗಿ ಯಾಕೆ ತೊಂದರೆಗೊಳಗಾಗಬೇಕೆಂದು’ ಅಲವತ್ತುಕೊಂಡಳು.

ನಾನು ಈ ರೀತಿ ಮದುವೆಗಳ ಬಗ್ಗೆ ಖಚಿತ ತಿಳುವಳಿಕೆಯುಳ್ಳವನಾಗಿದ್ದು, ಈ ಬಗ್ಗೆ ರಾಜ್ಯದಲ್ಲಿ ನಡೆದಿದ್ದ ಶಿವರಾಮ ಕಾರಂತ, ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಕೆ. ರಾಮದಾಸ್, ಕೃಷ್ಣಪ್ಪ, ಪ್ರೊ. ಎಂ. ನಂಜುಂಡಸ್ವಾಮಿ, ಪ್ರೊ. ರವಿವರ್ಮಕುಮಾರ್, ಹೀಗೆ ಮದುವೆಯಾದವರ ಬಗ್ಗೆ ಸಾಲು ಸಾಲು ಹೆಸರುಗಳನ್ನು ತಿಳಿಸಿ ಗಾಯತ್ರಿಗೆ ಸಮಾಧಾನ ಮಾಡುತ್ತಿದ್ದೆ.

ನಾವು ಮದುವೆಯಾಗಿ ಆರು ತಿಂಗಳು ಆಗಿರಲಿಲ್ಲ, ನಮ್ಮ ವಿದ್ಯಾರ್ಥಿಯೊಬ್ಬರ ಅಕ್ಕ ಪ್ಲಾರಿ ಬಿಆರ್‌ಪಿ ಹತ್ತಿರವಿರುವ ಜಂಕ್ಷನ್‌ನಿಂದ ಭದ್ರಾವತಿಗೆ ಸ್ಟೆಫೆಂಡಿಯರಿ ಗ್ರಾಜ್ಯುಯೇಟ್ ಸ್ಕೀಂನಲ್ಲಿ ತಾಲ್ಲೂಕು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಹುಡುಗ ಸಿದ್ದಯ್ಯ ಭದ್ರಾವತಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಆತ ಬಿಆರ್‌ಪಿ ಹತ್ತಿರದ ಶಾಂತಿನಗರದಿಂದ ದಿನವೂ ಬಸ್‌ನಲ್ಲಿ ಓಡಾಡುತ್ತಿರುವಾಗ ಪರಿಚಯವಾಗಿ ಪ್ರೀತಿಯ ಸೆಳೆತದಲ್ಲಿದ್ದರು. ಒಂದು ದಿನ ಬೆಳಗಿನ ಜಾವ ಹುಡುಗನ ಅಣ್ಣ ಬಂದು ಅವರಿಬ್ಬರ ಪ್ರೀತಿಗೆ ತಮ್ಮ ಒಪ್ಪಿಗೆ ಇದ್ದು ಹುಡುಗಿ ಕಡೆಯವರು ಒಪ್ಪುವುದಿಲ್ಲ, ಮದುವೆ ಮಾಡಿಸಬೇಕಾಗಿ ಕೋರಿದ.

ಹುಡುಗಿಯ ತಮ್ಮ ನನ್ನ ವಿಭಾಗದಲ್ಲಿಯೇ ನೇರ ವಿದ್ಯಾರ್ಥಿಯಾಗಿದ್ದ. ಈಗಾಗಲೇ ನಮ್ಮ ವಿಭಾಗದಲ್ಲಿ ಇವರು ಬರೀ ಇಂತದೇ ಕೆಲಸ ಮಾಡುತ್ತಿರುತ್ತಾನೆಂದು ಅಪಪ್ರಚಾರ ಬೇರೆ ಮಾಡುತ್ತಿದ್ದರು. ಆದರೂ ಎಲ್ಲ ಸೇರಿಕೊಂಡು ಇಂದಿರಾ ಕೃಷ್ಣಪ್ಪನವರಿಗೆ ತಿಳಿಸಿ ಭದ್ರಾವತಿಯಲ್ಲಿ ಮದುವೆ ನಡೆಸಲಾಯಿತು. ಮದುವೆಯಾದ ನಂತರ ಹೆಣ್ಣಿನ ಕಡೆಯವರು ನನ್ನನ್ನು ಹೊಡೆಯಲು ಜಂಕ್ಷನ್ ಎಂಬಲ್ಲಿ ಕಾಯುತ್ತಿದ್ದಾರೆ, ಇಲ್ಲಿ ಕಾಯುತ್ತಿದ್ದಾರೆ ಎಂದು ಪುಕಾರು ಹಬ್ಬಿಸುತ್ತಿದ್ದರು. ಆದರೆ ದಿನಗಳೆದಂತೆ ಹುಡುಗ-ಹುಡುಗಿಯ ಮದುವೆಯನ್ನು ಈರ್ವರ ಕಡೆಯವರು ಒಪ್ಪಿ ನಂತರ ನಮ್ಮ ಕಡೆಗೆ ದೂರುವುದನ್ನು ನಿಲ್ಲಿಸಿದರು. ಈಗ ಇಬ್ಬರೂ ತಮ್ಮ ವೃತ್ತಿಯಲ್ಲಿ ಮುಂದುವರಿದು ಮಕ್ಕಳೊಂದಿಗೆ ಆರೋಗ್ಯಕರ ಜೀವನ ಸಾಗಿಸುತ್ತಿದ್ದಾರೆ.

ಹೀಗೆ ಶಿವಮೊಗ್ಗ, ಭದ್ರಾವತಿಯಲ್ಲಿ ಕೃಷ್ಣಪ್ಪನವರು ಪ್ರಾರಂಭಿಸಿದ ಒಲವಿನ ಸರಳ ಮದುವೆಗಳು ಸಾಲು ಸಾಲಾಗಿ ನಡೆಯುತ್ತಾ, ಡಿ.ಎಸ್.ಎಸ್. ಮತ್ತು ರೈತ ಸಂಘದ ಅನೇಕ ಕಾರ್ಯಕರ್ತರು ತಮ್ಮ ಕಾರ್ಯಸೂಚಿಯಲ್ಲಿ ಕಾರ್ಯಗತ ಮಾಡಬೇಕಾದ ಜವಾಬ್ದಾರಿ ಎಂಬಂತೆ ಸರಳ ಅಂತರ್‌ಜಾತಿ ಮದುವೆಗಳನ್ನು ನಡೆಸುವಂತಾಯಿತು. ಅದು ಇಂದಿಗೂ ಕರ್ನಾಟಕದಲ್ಲಿ ನಡೆದುಕೊಂಡು ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ

Published

on

ಸುದ್ದಿದಿನಡೆಸ್ಕ್:ಇಂದು ಗಣೇಶ ಚತುರ್ಥಿ, ದೇಶ ಸೇರಿ ನಾಡಿನದ್ಯಂತ ಹಿಂದೂ ಸಂಪ್ರದಾಯದಲ್ಲಿ ನಾಡಿನ ಜನತೆ ತಮ್ಮ ಒಳಿತಿಗಾಗಿ, ಜ್ಞಾನ ಸಮೃದ್ಧಿಗಾಗಿ ಶಿವನ ಪುತ್ರ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಅತ್ಯಂತ ಶ್ರದ್ದಾ ಭಕ್ತಿಯಿಂದ ಈ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ ಅದರಂತೆ ಬೆಂಗಳೂರು ಜನತೆ ಮನೆ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶನ ಮೂರ್ತಿಗಳನ್ನು ಜಲ ಮೂಲಗಳಲ್ಲಿ ವಿಸರ್ಜಿಸಲು ಬೆಂಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಇನ್ನೂ ಗಣೇಶ ಚತುರ್ಥಿ ವಿಶೇಷವಾಗಿ ನಾಡಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತ್ತೆ ಅನೇಕ ಸಚಿವರು ಹಾಗೂ ಗಣ್ಯರು ಶುಭ ಹಾರೈಸಿದ್ದಾರೆ.

ಗಣೇಶ ಹಬ್ಬದ ಆಚರಣೆಯ ಸಂದರ್ಭದಲ್ಲಿ ಮದ್ಯಪಾನಾಸಕ್ತರು ಗಲಭೆಮಾಡುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಅಬಕಾರಿ ನಿಯಮಗಳಡಿ ಇಂದಿನಿಂದ ಉಡುಪಿ ಜಿಲ್ಲೆಯಾದ್ಯಂತ ಹಾಗೂ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಇದೇ 9 ಮತ್ತು ಸೆಪ್ಟೆಂಬರ್ 11 ರಂದು ಮಧ್ಯಾಹ್ನ 2 ರಿಂದ ಮದ್ಯರಾತ್ರಿ 12.00 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.

ನೈಸರ್ಗಿಕವಾಗಿ ತಯಾರಿಸಿದ ಮಣ್ಣಿನ ಗಣೇಶನ ವಿಗ್ರಹಗಳನ್ನು ಮಾತ್ರ ಬಳಸುವ ಮೂಲಕ ಕೆರೆ, ನದಿ ಮೂಲಗಳು ಕಲುಷಿತಗೊಳಿಸದಂತೆ ಕಾಪಾಡುವುದು ನಮ್ಮ ಕರ್ತವ್ಯ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending