Connect with us

ಲೋಕಾರೂಢಿ

‘ಈಗಲೂ ಇಲ್ಲ ಸರ್ವರಿಗೂ ಆರೋಗ್ಯ.,ವೈದ್ಯರಿಲ್ಲದ ಲೋಕ ನರಕ..!’

Published

on

 

  • ಸೋಮನಗೌಡ.ಎಸ್.ಎಂ, ಕಟ್ಟಿಗೆಹಳ್ಳಿ,9945986049

ಒಮ್ಮೆ ಕಣ್ಮುಚ್ಚಿ ಊಹಿಸಿಕೊಳ್ಳೋಣ…ಈಗ ಇಡೀ ವಿಶ್ವಕ್ಕೆ ಅಂಟಿರುವ ಕೊರೋನಾ ಮಹಾಮಾರಿಗೆ ವೈದ್ಯರು ಚಿಕಿತ್ಸೆ ಕೊಡದಿದ್ದರೆ ಏನಾಗಬಹುದು? ಅಬ್ಬಾ..! ಇಂತಹ ಒಂದು ಸಣ್ಣ ಯೋಚನೆ ಮನದ ಮೂಲೆಯಿಂದ ನುಸುಳಿ ಮೆದುಳಿಗೆ ತಟ್ಟಿದರೆ ಸಾಕು ಮೈ ಜುಮ್ಮೆನ್ನುತ್ತೆ ಅಲ್ಲವೇ. ವೈದ್ಯಕೀಯ ಸೇವೆ ಇಲ್ಲದ ಲೋಕ ಈ ಧರೆಯಲ್ಲಿ ಎಲ್ಲೆಲ್ಲಿಯೂ ನರಕ.

ಚೀನಾದ ಕೊರೋನಾ ವೈರಸ್ (cov) ಸಾಮಾನ್ಯವಾಗಿ ನೆಗಡಿ ಹಾಗೂ ಶ್ವಾಸಕೋಶದ ಸೋಂಕಿಗೆ ಕಾರಣವಾಗುವ ವೈರಸ್. ಆದರೆ ಈಗ ಚೀನಾದದಲ್ಲಿ ಕಾಣಿಸಿಕೊಂಡಿರುವ ವೈರಸ್ ಜಗತ್ತಿನ 196 ದೇಶಗಳಿಗೂ ಹಬ್ಬಿ ಮನುಕುಲವನ್ನೇ ನಡುಗಿಸುತ್ತಿದೆ. ಸಣ್ಣವರಿಂದ ಹಿರಿಯರವರೆಗೆ ಯಾರು ಕೇಳಿದರೂ ಕೊರೋನಾ ಅಂದರೆ ಸಾಕು ಥಟ್ಟನೆ ತಿರುಗುತ್ತಾರೆ. ಆ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಕಿವಿಗೊಟ್ಟು ಲಾಲಿಸುತ್ತಾರೆ. ದೂರವಾಣಿ ಕರೆಮಾಡಿ ಈ ಮಹಾಮಾರಿಗೆ ಡಾಕ್ಟರ್‍ಗಳು ಔಷಧಿ ಕಂಡು ಹಿಡಿದಿದ್ದಾರಾ? ಎಂದು ಪ್ರಶ್ನಿಸುತ್ತಾರೆ. ಅಷ್ಟರ ಮಟ್ಟಿಗೆ ಜನರನ್ನು ತಲ್ಲಣ ಮೂಡಿಸಿದೆ ಈ ಕೊರೋನಾ. ಎಲ್ಲೆಲ್ಲೂ ಲಾಕ್‍ಡೌನ್. ಎಲ್ಲಾ ಪತ್ರಿಕೆ, ದೃಶ್ಯ ಮಾಧ್ಯಮಗಳಲ್ಲೂ ಇದರದ್ದೇ ಸುದ್ದಿ. ಶಂಕಿತ-ಸೋಂಕಿತ ಮತ್ತು ಸಾವು. ಸಾವು ಎಷ್ಟು? ಎಲ್ಲಿ? ಯಾವಾಗ? ಯಾಕೆ ಎನ್ನುವ ವಿಸೃತ ವರದಿಗಳ ಬರಪೂರ ಸುದ್ದಿಗಳ ಹೂರಣ.

ಗಾರೆ ಕೆಲಸ, ಮಣ್ಣಿನ ಕೆಲಸ ಮಾಡಿದವರು ಅರೆ ಬರೆ ಕೈತೊಳೆದುಕೊಂಡು ಗುಕ್ಕು ನುಂಗುತ್ತಿದ್ದ ಜನ ಈಗ ಸೋಪು, ಸ್ಯಾನಿಟೈಸರ್ ಹಾಕಿ ತಮ್ಮ ಕೈಗಳನ್ನು ತಿಕ್ಕಿ ತಿಕ್ಕಿ ತೊಳೆಯುತ್ತಾರೆ. ಸಾಫ್ಟ್‍ವೇರ್ ಮಂದಿಯಿಂದ ಹಾರ್ಡ್‍ವೇರ್ ಮಂದಿ ತಮ್ಮ ಕರಗಳನ್ನು ಉಜ್ಜಿ ಉಜ್ಜಿ ಸ್ವಚ್ಛಗೊಳಿಸಿಕೊಳ್ಳುತ್ತಾರೆ. ಇದಕ್ಕೆಲ್ಲಾ ಕಾರಣ ಕೊರೋನಾ   ಸೃಷ್ಟಿಸಿದ ತಲ್ಲಣ.
ವೈದ್ಯನ ಸಾವಿನ ಕರೆ ಗಂಟೆಗೆ ಎಚ್ಚರವಹಿಸಬೇಕಿತ್ತು. ಕೊರೋನಾ ಸೋಂಕು ಹರಡುವಿಕೆ ಕುರಿತು ಮೊದಲು ಚೀನಾದಲ್ಲಿ ಎಚ್ಚರಿಕೆ ಗಂಟೆ ಬಾರಿಸಿದ್ದ ಎಂಟು ಮಂದಿ ಪೈಕಿ ಬಬ್ಬರಾದ ಡಾಕ್ಟರ್ ಲೀ ವೆನ್‍ಲಿಂಗ್ ಮೃತಪಟ್ಟಾಗ ಸಾಂಕ್ರಾಮಿಕ ರೋಗವೊಂದು ಹರಡುತ್ತಿದೆ ಎಂದು ಸಹ ವೈದ್ಯರಿಗೆ ಮತ್ತು ವುಹಾನ್ ಬಹುತೇಕ ಆಸ್ಪತ್ರೆಗಳ ವೈದ್ಯರಿಗೆ ಲೀ ಕಳೆದ ವರ್ಷ ಡಿಸೆಂಬರ್ ನಲ್ಲಿ ಎಚ್ಚರಿಕೆ ನೀಡಿದ್ದರು.

ಹುಬೀ ಪ್ರಾಂತ್ಯದಲ್ಲಿ ಈ ಸೋಂಕು ಹರಡಲಿದೆ. ಆದಷ್ಟು ಬೇಗ ಮುನ್ನಚ್ಚರಿಕೆ ವಹಿಸಿ ಎಂದು ಲೀ ವೆನ್‍ಲಿಂಗ್ ಚೀನಾದ ಜನಪ್ರಿಯ ವೀಚ್ಯಾಟ್ ಆಪ್‍ನಲ್ಲಿ ತಮ್ಮ ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಗ್ರೂಪ್‍ನಲ್ಲಿ ಸಂದೇಶ ಹಾಕಿದ್ದರು. 2003ರಲ್ಲಿ ವಿಶ್ವದ್ಯಂತ 800 ಜನರನ್ನು ಬಲಿಪಡೆದ ಸಾರ್ಸ್ ಮಾದರಿಯ ಈ ಭಯಾನಕ ಸೋಂಕು ‘ಕೊರೋನಾ’ ಎಂದು ಎಚ್ಚರಿಕೆ ಸಂದೇಶ ಜನರಿಗೆ ರವಾನಿಸಿದರು. ಆದರೆ ಅಲ್ಲಿನ ಪೊಲೀಸರು ಲೀ ಎಂಬ ವೈದ್ಯ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿಕೊಂಡು ಎಚ್ಚರಿಕೆ ನೀಡಿದ್ದರು. ಆದರೆ ಇಂದು ಇಡೀ ಚೀನಾ ಆ ವೈದ್ಯನನ್ನು ನೆನೆಯುತ್ತಿದೆ. ವಿಶ್ವದ ಅನೇಕ ದೇಶಗಳ ಜನರಿಗೆ ಕೊರೋನಾ ಕರೆ ಗಂಟೆಯ ಎಚ್ಚರಿಕೆ ನೀಡಿದ್ದ ಲೀ ಅವರ ಬಗ್ಗೆ ಗೊತ್ತಿರಲಿಕ್ಕಿಲ್ಲ. ಆದರೆ ಡಾ. ಲೀ ವೆನ್‍ಲಿಂಗ್ ನಮ್ಮೊಂದಿಗಿಲ್ಲ. ಎಚ್ಚರಿಕೆ ಕೊಟ್ಟು ಸಾವಿನ ಮನೆ ಸೇರಿದ್ದಾರೆ. ಆದರೆ ಈಗ ಕೊರೋನಾ ಸೋಂಕು ವಿಶ್ವವನ್ನೇ ಬಾಧಿಸುತ್ತಿದೆ.

ಕೈ ಮೀರಿದ ಮೇಲೆ ಚಿಂತಿಸಿ ಫಲವೇನು?
ಕೋವಿಡ್-19 ರೋಗಕ್ಕೆ ವಿಶ್ವ ವಿಖ್ಯಾತ ದೇಶಗಳಾದ ಚೀನಾ, ಅಮೆರಿಕ, ಇಟಲಿ, ಫ್ರಾನ್ಸ್, ದಕ್ಷಿಣ ಕೊರಿಯಾ, ಜರ್ಮನಿ, ಸ್ವಿಟ್ಜರ್ಲೆಂಡ್, ನೆದರ್‍ಲೆಂಡ್ಸ್ ಸೇರಿದಂತೆ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳುಳ್ಳು, ಅತ್ಯಂತ ಜಾಣರಿರುವ ಜನರೇ ಮಹಾಮಾರಿಯಿಂದ ತಪ್ಪಸಿಕೊಳ್ಳಲು ಸಾಧ್ಯವಾಗಿಲ್ಲ. ಲೆಕ್ಕವಿಲ್ಲದಷ್ಟು ಹೆಣಗಳು ಹುರುಳುತ್ತಿವೆ. ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಸಾವಿರಾರು ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸವಾಲಿನ ಕೆಲಸ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಂತಂಕ ವ್ಯಕ್ತಪಡಿಸಿದ್ದಾರೆ. ಸಾಮಾನ್ಯರಿಂದ ಅಸಮಾನ್ಯರಿಗೂ ಕೊರೋನಾದ ಸೃಷ್ಟಿಸಿದ ಭೀತಿಗೆ ನಲುಗಿ ಹೋಗಿದ್ದಾರೆ. ಇಟಲಿಯಲ್ಲಿ ವೈದ್ಯರು, ಜನಸಾಮಾನ್ಯರು ಎನ್ನುವ ವ್ಯತ್ಯಾಸಗಳಿಲ್ಲದೇ ಆಸ್ಪತ್ರೆ ಸೇರುತ್ತಿದ್ದಾರೆ.

ಸಮುದಾಯಕ್ಕೆ ಹಬ್ಬಿದ ಕೊರೋನಾ ವೈರಸ್ ಮೀಟರ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜಪಾನ್‍ನ ಪ್ರಸಿದ್ಧ ಹಾಸ್ಯನಟ ಕೇನ್ ಶಿಮುರಾ ಮೃತಪಟ್ಟಿದ್ದಾರೆ. ಬ್ರಿಟನ್ ರಾಜ ಕುಮಾರ ಚಾಲ್ರ್ಸ್ ಕೋವಿಡ್‍ನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಅಲ್ಲಿನ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್‍ಕಾಕ್ ಅವರು ಕೋವಿಡ್ ಸೋಂಕು ತಗುಲಿದೆ. ವಿಶ್ವದಲ್ಲಿ 6 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಟ್ಟಿದೆ. ಜಗತ್ತು ನರಕವಾಗುತ್ತಿದೆ. ಇಷ್ಟೆಲ್ಲಾ ವೈದ್ಯರು ಹರಸಾಸಪಟ್ಟರು ನಿಯಂತ್ರಣಕ್ಕೆ ಬಾರದ ಕೊರೋನಾ ರೋಗ ವೈದ್ಯರು ಕೈಚಲ್ಲಿ ಕುಳಿತು ಬಿಟ್ಟಿದ್ದರೆ ಏನಾಗಬಹುದು ಯೋಚಿಸಿ!
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಭಾರತದಲ್ಲಿ ಸವಾಲು!

ಜಾಗತಿಕ ಆರೋಗ್ಯ ಸೇವೆ ಲಭ್ಯತೆ ಮತ್ತು ಗುಣಮಟ್ಟ ಸೂಚ್ಯಾಂಕದಲ್ಲಿ ಭಾರತವು 145ನೇ ಸ್ಥಾನದಲ್ಲಿದೆ. 1990ರ ಪರಿಸ್ಥಿತಿಗೆ ಹೋಲಿಸಿದರೆ 2020ರಲ್ಲಿ ಭಾರತದಲ್ಲಿ ಆರೋಗ್ಯ ಸೇವಾ ಲಭ್ಯತೆ ಮತ್ತು ಗುಣಮಟ್ಟ ಎರಡೂ ಅರ್ಧದಷ್ಟು ಸುಧಾರಿಸಿದೆ. ಆದರೆ ನೆರೆಯ ಕೆಲವು ದೇಶಗಳಲ್ಲಿ ಪರಿಸ್ಥಿತಿ ಭಾರತಕ್ಕಿಂತ ಉತ್ತಮವಾಗಿದೆ ಎಂದು ‘ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ’ ತನ್ನ ವರದಿಯಲ್ಲಿ ವಿಶ್ಲೇಷಿಸಿದೆ. 195 ದೇಶಗಳಲ್ಲಿ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸಿದಾಗ ನಮ್ಮ ದೇಶದಲ್ಲಿ ಆರೋಗ್ಯ ಸೇವೆಗಳ ಗುಣಮಟ್ಟ 145ನೇ ಸ್ಥಾನದಲ್ಲಿದೆ ಎಂದು ವರದಿ ನೀಡಿತ್ತು.

ಅಸಂಖ್ಯಾತ ಜನರನ್ನು ಹೊಂದಿರುವ ವಿಶ್ವದ ಎರಡನೇ ದೊಡ್ಡ ಜನಸಂಖ್ಯಾ ರಾಷ್ಟ್ರವಾದ ಭಾರತದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳದ್ದೇ ಭಾರಿ ಸಮಸ್ಯೆ. ಮಧುಮೇಹ, ಕ್ಷಯ, ಹೃದಯರೋಗ, ಪಾಶ್ವವಾಯು, ಕ್ಯಾನ್ಸರ್, ಕಿಡ್ನಿ ಸಂಬಂಧಿಸಿದ ಕಾಯಿಲೆಗಳು ಜನರನ್ನು ಭಾಧಿಸುತ್ತಿವೆ. ಇಂತಹ ರೋಗಿಗಳಿಗೆ ಚಿಕಿತ್ಸೆಗೆ ಆಸ್ಪತ್ರೆಗಳು ಸಾಲುತ್ತಿಲ್ಲ. ಈಗ ವಿಶ್ವವನ್ನೇ ಕಾಡುತ್ತಿರುವ ಕೋವಿಡ್ ಸೋಂಕಿನ ಸಂಖ್ಯೆ ಭಾರತವನ್ನು ಮಂದಗತಿಯಲ್ಲಿ ವ್ಯಾಪಿಸುತ್ತಿದೆ. ಮುಂದೆ ಇದರ ವಿಸ್ತಾರ ಬ್ರಹ್ಮರಾಕ್ಷನ ರೂಪ ತಾಳಲಿದೆ. ಸ್ವಲ್ಪ ಯಾಮಾರಿದರೂ ಕಾದಿದೆ ದೊಡ್ಡ ಅಪಾಯ ಎಂದು ಜಾನ್ಸ್ ಹಾಪಿನ್ಸ್ ವಿವಿ, ನವದೆಹಲಿಯ ದಿ ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕನಾಮಿಕ್ಸ್ ಅಂಡ್ ಪಾಲಿಸಿ (ಸಿಡಿಡಿಇಪಿ) ಸಹಯೋಗದಲ್ಲಿ ದೇಶದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ತಿಳಿಸಿದೆ. ದೇಶದಲ್ಲಿ ಇನ್ನೂ ಮೂರ್ನಾಲ್ಕು ತಿಂಗಳು ಕೊರೋನಾ ಸೋಂಕು ಹೆಚ್ಚಾಗಲಿದೆ ಎಂದು ಆಂತಕಕಾರಿ ವರದಿ ಬಿತ್ತಿರಿಸಿದೆ.ಭಾರತದಲ್ಲಿರುವ ಆಸ್ಪತ್ರೆಗಳಲ್ಲಿ ಇರುವ ವೈದ್ಯಕೀಯ ಸೌಲಭ್ಯಗಳಿಗೆ  ಕೊರೋನಾ ರೋಗಿಗಳು ತುಂಬಿಕೊಂಡರೆ ಆಸ್ಪತ್ರೆಗಳು ಸಾಲುತ್ತವೆಯೇ? ಎಂದು ಯೋಚಿಸಿದರೆ ಭವಿಷ್ಯದ ದಿನಗಳು ಭಯಾನಕವಾಗಲಿವೆ ಎಂದರೆ ತಪ್ಪಾಗಲಿಕ್ಕಿಲ್ಲ.

ಭಾರತದಲ್ಲಿರುವ ರೋಗಿಗಳಿಗೆ ಸರಾಸರಿ ವೈದ್ಯರೆಷ್ಟು? ಕೊರೋನಾದಂತ ಭಯಾನಕ ರೋಗ ನಿರ್ಮೂಲನೆ ಮಾಡಲು ಆರ್ಥಿಕವಾಗಿ ಎಷ್ಟೇ ಬಲಿಷ್ಠವಾಗಿದ್ದರೂ ವೈದ್ಯರ ನೆರವು ಅತ್ಯಗತ್ಯ. ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಅಲೋಪಥಿ, ಆಯುರ್ವೇದ, ಹೋಮಿಯೋಪಥಿ ಮತ್ತು ಯುನಾನಿ ವೈದ್ಯ ಪದ್ಧತಿಗಳನ್ನು ಒಟ್ಟಾಗಿ ಪರಿಗಣಿಸಿದರೆ ನಮ್ಮ ದೇಶದಲ್ಲಿ 893 ರೋಗಿಗಳಿಗೆ ಇರುವುದು ಒಬ್ಬ ವೈದ್ಯ ಮಾತ್ರ! ದೇಶದಲ್ಲಿರುವ ವೈದ್ಯ-ರೋಗಿ ಅನುಪಾತದ ವಿವರಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಕಳೆದ ವರ್ಷ ಲೋಕಸಭೆಗೆ ನೀಡಿದ ವರದಿಯಲ್ಲಿ ಬಹಿರಂಗವಾಗಿದೆ. 9.60 ಲಕ್ಷ ದೇಶದಲ್ಲಿರುವ ಅಲೋಪಥಿ ವೈದ್ಯರ ಸಂಖ್ಯೆ ಅದರಲ್ಲಿ 7.68 ಲಕ್ಷ ಸೇವೆಗೆ ಲಭ್ಯವಿರುವ ಅಲೋಪಥಿ ವೈದ್ಯರು. (ಅಂದರೆ ಶೇ.80 ರಷ್ಟು). 6.78 ಲಕ್ಷ ಆಯುಷ್ಮಾನ್ ವೈದ್ಯರ ಸಂಖ್ಯೆ. 7.10 ಲಕ್ಷ ದೇಶದಲ್ಲಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕರ (ಎಎಸ್‍ಎಂ) ಸಂಖ್ಯೆ. ಶೇ.80ರಷ್ಟು ಶುಶ್ರೂಷಕರು ಮತ್ತು ಶೇ.60 ರಷ್ಟು ಪ್ರಸೂತಿ ಸಹಾಯಕಿಯರು ಸೇವೆಗೆ ಲಭ್ಯರಿದ್ದಾರೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ.

ಬಿಹಾರದಲ್ಲಿ ಒಬ್ಬ ವೈದ್ಯನಿಗೆ-28,391 ರೋಗಿಗಳು ಸೇವೆಗೆ ಲಭ್ಯರಿದ್ದಾರೆ. ಉತ್ತರ ಪ್ರದೇಶದಲ್ಲಿ ಸರಾಸರಿ 19,962 ರೋಗಿಗಳಿಗೆ ಒಬ್ಬ ವೈದ್ಯನಿದ್ದಾನೆ. ಜಾರ್ಖಾಂಡ್ ರಾಜ್ಯದಲ್ಲಿ 18,519 ಒಬ್ಬ ವೈದ್ಯನಷ್ಟೇ ಲಭ್ಯ. ಮಧ್ಯಪ್ರದೇಶದಲ್ಲಿ 17,192 ರೋಗಿಗಳಿಗೆ ಒಬ್ಬ ವೈದ್ಯ ಸೇವೆಗೆ ಸಿಗುತ್ತಾನೆ.  ಮಹಾರಾಷ್ಟ್ರದಲ್ಲಿ 16,996 ರೋಗಿಗಳಿಗೆ ಒಬ್ಬ ವೈದ್ಯನ ಸೇವೆ, ಛತ್ತೀಸ್‍ಗಡದಲ್ಲಿ 15,916 ಜನ ರೋಗಿಗಳಿಗೆ ಒಬ್ಬ ವೈದ್ಯನು ಲಭ್ಯವಿರುತ್ತಾರೆ. ಕರ್ನಾಟಕದಲ್ಲಿ 13,456 ರೋಗಿಗೆ ಒಬ್ಬ ವೈದ್ಯನು ಲಭ್ಯವಿರುತ್ತಾರೆ. ಕಡೆಯದಾಗಿ ಗೋವಾದಲ್ಲಿ 3,883 ರೋಗಿಗಳಿಗೆ ಒಬ್ಬ ವೈದ್ಯನ ಸೇವೆ ಲಭ್ಯವಿದೆ.

ಅಂದರೆ ಯೋಚಿಸಿ ಕೊರೋನಾ ರೋಗಕ್ಕೆ ಮದ್ದೇ ಇಲ್ಲದ ಈ ಹೊತ್ತಿನಲ್ಲಿ ಲಾಕ್‍ಡೌನ್ ಅನ್ನು ಸಂಪೂರ್ಣವಾಗಿ ಅನುಸರಿಸದೇ ಮತ್ತು ಉಷ್ಣಾಂಶ ಮತ್ತು ತೇವಾಂಶದಲ್ಲಿ ಯಾವುದೇ ಬದಲಾವಣೆಯಾಗಿ 13 ಕೋಟಿ ಜನಕ್ಕೆ ಸೋಂಕು ತಗುಲಲಿದೆ ಎಂದು ಸಿಡಿಡಿಇಪಿ ವರದಿ ಅಂದಾಜಿಸಲಾಗಿದೆ. ಅಬ್ಬಾ ಈ ಲೆಕ್ಕಾಚಾರಗಳೆಲ್ಲವೂ ನಿಜವಾದರೆ ಎಲ್ಲೆಲ್ಲೂ ರೋಗಿಗಳ ಆರ್ಥನಾದ ಕೇಳಿಸುತ್ತದೆ.ಆಸ್ಪತ್ರೆಗಳೆಲ್ಲವೂ ತುಂಬಿ ತುಳುಕುತ್ತವೆ. ವೆಂಟಿಲೇಟರ್ ಸಮಸ್ಯೆ, ವೈದ್ಯರ ಕೊರತೆ, ಬೆಡ್‍ಗಳ ಕೊರತೆ, ಔಷಧಗಳ ಕೊರತೆ ಉಂಟಾದಾಗ ಈ ದೇಶದಲ್ಲಿನ ರೋಗಿಗಳ ಪರಿಸ್ಥಿತಿಯನ್ನು ಊಹಿಸಿಕೊಂಡರೆ ಎಂತಹ ಭಯಾನಕ ಸನ್ನಿವೇಶ ಅನ್ನಿಸುವುದಿಲ್ಲವೇ?
ಕರ್ನಾಟಕದಲ್ಲಿ ಸರ್ಕಾರಿ ವೈದ್ಯರಿಗೆ ಬರ!

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಎದುರಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದಾಗಿದೆ. ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನೋಂದಾಯಿತ ವೈದ್ಯರಿದ್ದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರತೆ ಕಾಡುತ್ತಿದೆ. ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವರದಿ ಹೇಳುತ್ತದೆ. ಸರಾಸರಿ 13,456 ರೋಗಿಗಳಿಗೆ ಒಬ್ಬ ವೈದ್ಯರಿದ್ದಾರೆ. ಇದು ರಾಷ್ಟ್ರೀಯ ವೈದ್ಯ-ರೋಗಿಗಳ (11,082:1) ಸರಾಸರಿಗಿಂತ ಹೆಚ್ಚು ಎಂದು ವರದಿಯಯಲ್ಲಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ವೈದ್ಯರಿಗೆ ನಿರಾಸಕ್ತಿ. ನಗರಪ್ರದೇಶಗಳಲ್ಲಿ ಖಾಸಗಿ ಆಸ್ಪತ್ರೆಗಳತ್ತ ಹೆಚ್ಚಿನ ವೈದ್ಯರ ಒಲವು. ಕರ್ನಾಟಕದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 2,236 ವೈದರಷ್ಟೇ ಸೇವೆ.

ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅಂದಾಜು 500 ತಜ್ಞ ವೈದ್ಯರಷ್ಟೇ ಲಭ್ಯ. ಈ ಎಲ್ಲಾ ಅಂಕಿ ಅಂಶಗಳನ್ನು ಗಮನಿಸಿದರೆ ಚೀನಾ ಮತ್ತು ಪಾಕಿಸ್ತಾನದಲ್ಲಿ ವೈದ್ಯ-ರೋಗಿಯ ಸರಾಸರಿ ಮಟ್ಟ ಉತ್ತಮವಾಗಿದೆ. ಸರ್ಕಾರಗಳು ‘ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ’ ಬದಲು ಸಮಸ್ಯೆಗೆ ಪರಿಹಾರ ಹುಡುಗಲು ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತಂದರಷ್ಟೇ ಈ ದೇಶವನ್ನು ಕೋವಿಡ್‍ನಿಂದ ರಕ್ಷಣೆ ಮಾಡಲು ಸಾಧ್ಯ.

ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ತಂದ ಲಾಕ್‍ಡೌನ್ ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ದಿನದಿಂದ ದಿನಕ್ಕೆ ಕೊರೋನಾ ವೈರಸ್ ಸಮುದಾಯಕ್ಕೆ ಹಬ್ಬಿ ವೈದ್ಯನ ಮನಃಸ್ಥಿತಿ ಏನಾದೀತು.‘ವೈದ್ಯೋ ನಾರಾಯಣೋ ಹರಿ’ ಎಂದು ಶ್ರೀಮನ್ ಭಗವಾನ್ ನಾರಾಯಣನನ್ನು ಪ್ರಾರ್ಥಿಸುತ್ತಿರಬೇಕಷ್ಟೆ. ಯಾರೂ ನಮ್ಮನ್ನು ರಕ್ಷಿಸಲಾರರು. ಸಾರ್ವಜನಿಕರೇ ಎಚ್ಚರ ಸಮುದಾಯಕ್ಕೆ ಕೊರೋನಾ ಸೋಂಕು ತಗುಲದಂತೆ ಎಚ್ಚರವಹಿಸಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Suddidina.com Kannada online news portal. Its providing Kannada news, film news Kannada, sports news Kannada, political NeWS in Kannada and more.

ಅಂಕಣ

ಕೆಪಿಸಿಸಿಯ ನೂತನ ಸಾರಥಿ ಬಿ.ಕೆ. ಹರಿಪ್ರಸಾದ್ ರಾಜಕೀಯ ಪಯಣ

Published

on

ಕರ್ನಾಟಕ ಕಾಂಗ್ರೆಸ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದಾಗಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡ ಬಳಿಕ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಮಹತ್ವದ ಜವಾಬ್ದಾರಿಯನ್ನು ಬಿ.ಕೆ. ಹರಿಪ್ರಸಾದ್ ಅವರಿಗೆ ನೀಡಿದೆ.

ಈ ನೇಮಕ ಕೇವಲ ಸಂಘಟನಾತ್ಮಕ ಬದಲಾವಣೆಯಲ್ಲ. ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ದಿಕ್ಕು, ಪಕ್ಷದ ಒಳಾಂಗಣ ಸಮತೋಲನ ಮತ್ತು ಭವಿಷ್ಯದ ಚುನಾವಣಾ ತಂತ್ರಗಳಿಗೆ ಇದು ಪ್ರಮುಖ ಸೂಚನೆಯಾಗಿದೆ. ಹಲವು ದಶಕಗಳ ರಾಜಕೀಯ ಅನುಭವ, ಸಂಘಟನಾ ಕೌಶಲ್ಯ ಮತ್ತು ಹೈಕಮಾಂಡ್‌ಗೆ ನಿಕಟ ಸಂಪರ್ಕ ಹೊಂದಿರುವ ಹರಿಪ್ರಸಾದ್ ಅವರು ಈಗ ರಾಜ್ಯ ಕಾಂಗ್ರೆಸ್‌ನ ನೂತನ ಸಾರಥಿಯಾಗಿ ಹೊರಹೊಮ್ಮಿದ್ದಾರೆ.

ಆರಂಭಿಕ ಜೀವನ ಮತ್ತು ಶಿಕ್ಷಣ

ಬಿ.ಕೆ. ಹರಿಪ್ರಸಾದ್ ಅವರು 1954ರ ಜುಲೈ 29ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎ. ಕೆಂಪಯ್ಯ ಹಾಗೂ ತಾಯಿ ಕೆ. ಗುಣಾವತಿ. ಬಾಲ್ಯದಿಂದಲೇ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳತ್ತ ಆಸಕ್ತಿ ಹೊಂದಿದ್ದ ಅವರು ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಬಿ.ಕಾಂ ಪದವಿ ಶಿಕ್ಷಣ ಪಡೆದರು. ವಿದ್ಯಾರ್ಥಿ ಜೀವನದಲ್ಲಿಯೇ ಕಾಂಗ್ರೆಸ್ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡ ಅವರು ಮುಂದೆ ಪೂರ್ಣಾವಧಿ ರಾಜಕಾರಣಿಯಾಗಿ ಬೆಳೆದರು.

ವಿದ್ಯಾರ್ಥಿ ರಾಜಕಾರಣದಿಂದ ರಾಷ್ಟ್ರೀಯ ಮಟ್ಟದ ನಾಯಕತ್ವದವರೆಗೆ

ಹರಿಪ್ರಸಾದ್ ಅವರ ರಾಜಕೀಯ ಬದುಕು ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಸಂಘಟನೆಗಳಿಂದ ಆರಂಭವಾಯಿತು. ಸಂಘಟನಾ ರಾಜಕಾರಣದಲ್ಲಿ ತೋರಿದ ಸಾಮರ್ಥ್ಯದಿಂದ ಅವರು ಶೀಘ್ರದಲ್ಲೇ ಪಕ್ಷದ ಹಿರಿಯ ನಾಯಕರ ಗಮನ ಸೆಳೆದರು.

ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಕಾಂಗ್ರೆಸ್ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ಅವರು, ಹಲವು ರಾಜ್ಯಗಳ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಹೈಕಮಾಂಡ್‌ನೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ನಾಯಕರಲ್ಲಿ ಹರಿಪ್ರಸಾದ್ ಪ್ರಮುಖರು ಎಂದು ಪರಿಗಣಿಸಲಾಗುತ್ತದೆ.

ಬಿ.ಕೆ. ಹರಿಪ್ರಸಾದ್ ಅವರು ಹಲವು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 1990ರಿಂದಲೇ ಅವರು ರಾಷ್ಟ್ರೀಯ ರಾಜಕಾರಣದಲ್ಲಿ ಸಕ್ರಿಯ ಪಾತ್ರ ವಹಿಸುತ್ತಾ ಬಂದಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಹಲವು ವಿಷಯಗಳ ಬಗ್ಗೆ ಧ್ವನಿ ಎತ್ತಿದ ಅವರು ಸಂಸತ್ತಿನ ಚರ್ಚೆಗಳಲ್ಲಿ ಗಮನ ಸೆಳೆದಿದ್ದರು.

ಅವರು ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಎನ್‌ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ವಿರುದ್ಧ ಪೈಪೋಟಿ ನಡೆಸಿದ್ದರು. ಸೋಲು ಕಂಡಿದ್ದರೂ ರಾಷ್ಟ್ರೀಯ ರಾಜಕೀಯದಲ್ಲಿ ಅವರ ಸ್ಥಾನಮಾನ ಮತ್ತಷ್ಟು ಬಲವತ್ತಾಯಿತು.

1999ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯ ಹಿರಿಯ ನಾಯಕ ಅನಂತ್ ಕುಮಾರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಜಯ ಸಾಧಿಸಲು ಸಾಧ್ಯವಾಗದಿದ್ದರೂ ಅವರು ಕಾಂಗ್ರೆಸ್‌ನ ಪ್ರಮುಖ ಮುಖವಾಗಿ ಗುರುತಿಸಿಕೊಂಡರು.

ಸಂಘಟನಾ ರಾಜಕಾರಣದಲ್ಲಿ ಹೆಚ್ಚು ಸಕ್ರಿಯರಾಗಿದ್ದ ಕಾರಣ, ಚುನಾವಣಾ ಗೆಲುವಿಗಿಂತ ಪಕ್ಷ ನಿರ್ಮಾಣದಲ್ಲಿ ಅವರ ಪಾತ್ರವೇ ಹೆಚ್ಚು ಗಮನ ಸೆಳೆಯಿತು.

ಕಾಂಗ್ರೆಸ್ ಸಂಘಟನೆಯಲ್ಲಿ ‘ಟಾಸ್ಕ್ ಮಾಸ್ಟರ್’

ಕಾಂಗ್ರೆಸ್ ಪಕ್ಷದಲ್ಲಿ ಹರಿಪ್ರಸಾದ್ ಅವರನ್ನು ಸಂಘಟನಾ ತಜ್ಞ ಎಂದು ಕರೆಯಲಾಗುತ್ತದೆ. ಪಕ್ಷ ಎದುರಿಸಿದ ಸಂಕಷ್ಟದ ಸಂದರ್ಭಗಳಲ್ಲಿ ಹಲವು ರಾಜ್ಯಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘಟನೆಯನ್ನು ಬಲಪಡಿಸಿದ ಅನುಭವ ಅವರಿಗೆ ಇದೆ.

ಇತ್ತೀಚಿನ ಅವಧಿಯಲ್ಲಿ ಅವರು ಹರಿಯಾಣ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯ ರಾಜಕೀಯದ ಸೂಕ್ಷ್ಮ ಸಮೀಕರಣಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಸಾಧಿಸುವ ಶೈಲಿ ಅವರ ವಿಶೇಷತೆ ಎಂದು ಪಕ್ಷದ ನಾಯಕರು ಹೇಳುತ್ತಾರೆ.

ಕರ್ನಾಟಕ ಕಾಂಗ್ರೆಸ್‌ನಲ್ಲಿ ಹರಿಪ್ರಸಾದ್ ಅವರು ಹಲವು ದಶಕಗಳಿಂದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳ ಸಂದರ್ಭದಲ್ಲೂ ಅವರು ಸಮತೋಲನ ಸಾಧಿಸುವ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅವರು, 2022 ರಿಂದ 2023ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸರ್ಕಾರದ ನೀತಿಗಳ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುವ ಮೂಲಕ ಅವರು ಗಮನ ಸೆಳೆದಿದ್ದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ

2026ರಲ್ಲಿ ಕರ್ನಾಟಕ ರಾಜಕೀಯದಲ್ಲಿ ನಡೆದ ನಾಯಕತ್ವ ಬದಲಾವಣೆಯ ಬಳಿಕ ಮುಖ್ಯಮಂತ್ರಿ ಹುದ್ದೆಯನ್ನು ಡಿ.ಕೆ. ಶಿವಕುಮಾರ್ ವಹಿಸಿಕೊಂಡರು. ಇದರ ಪರಿಣಾಮವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಪಕ್ಷದೊಳಗೆ ಹಲವು ನಾಯಕರ ಹೆಸರುಗಳು ಕೇಳಿಬಂದಿದ್ದರೂ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಬಿ.ಕೆ. ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿತು.

ಈ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್ ಸಂಘಟನಾ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿ ಪರಿಗಣಿಸಿದೆ. ಪಕ್ಷದ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಹರಿಪ್ರಸಾದ್ ಅವರ ಅನುಭವ ನೆರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಬಿ.ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಹಿಂದೆ ಹಲವು ರಾಜಕೀಯ ಕಾರಣಗಳಿವೆ. ಮೊದಲನೆಯದಾಗಿ, ಅವರು ಯಾವುದೇ ಒಂದು ಗುಂಪಿಗೆ ಸೀಮಿತವಾಗದ ನಾಯಕ ಎಂಬ ಚಿತ್ರಣ ಹೊಂದಿದ್ದಾರೆ. ಎರಡನೆಯದಾಗಿ, ಸಂಘಟನಾ ಅನುಭವ ಅಪಾರವಾಗಿದೆ. ಮೂರನೆಯದಾಗಿ, ಹೈಕಮಾಂಡ್‌ಗೆ ಅತ್ಯಂತ ವಿಶ್ವಾಸಾರ್ಹ ನಾಯಕರಲ್ಲಿ ಒಬ್ಬರು. ನಾಲ್ಕನೆಯದಾಗಿ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಾಮರ್ಥ್ಯ ಅವರಿಗಿದೆ ಎಂದು ಕಾಂಗ್ರೆಸ್ ನಾಯಕತ್ವ ನಂಬಿದೆ.

ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಅವರ ಮುಂದಿರುವ ಸವಾಲುಗಳು ಸಣ್ಣದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಸಂಘಟನೆಯನ್ನು ಸದೃಢವಾಗಿಡುವುದು ದೊಡ್ಡ ಜವಾಬ್ದಾರಿ. ಕಾರ್ಯಕರ್ತರ ಅಸಮಾಧಾನ, ಸಚಿವ ಸ್ಥಾನಾಕಾಂಕ್ಷಿಗಳ ಒತ್ತಡ, ಪ್ರಾದೇಶಿಕ ಸಮೀಕರಣಗಳು ಮತ್ತು ಜಾತಿ ಆಧಾರಿತ ರಾಜಕೀಯ ಬೇಡಿಕೆಗಳನ್ನು ಸಮತೋಲನಗೊಳಿಸಬೇಕಾಗಿದೆ.

ಇದರ ಜೊತೆಗೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಕಾಂಗ್ರೆಸ್ ಸಂಘಟನೆಯನ್ನು ನಿರಂತರ ಚಟುವಟಿಕೆಯಲ್ಲಿ ಇರಿಸುವುದು ಅವರ ಪ್ರಮುಖ ಗುರಿಯಾಗಲಿದೆ.

ಹರಿಪ್ರಸಾದ್ ಅವರು ಹೆಚ್ಚು ಪ್ರಚಾರಪ್ರಿಯ ರಾಜಕಾರಣಿಯಲ್ಲ. ಸಂಘಟನೆಯೊಳಗೆ ಕೆಲಸ ಮಾಡುವ ನಾಯಕ ಎಂಬ ಹೆಗ್ಗಳಿಕೆ ಅವರಿಗೆ ಇದೆ. ಕಾರ್ಯಕರ್ತರೊಂದಿಗೆ ನೇರ ಸಂಪರ್ಕ, ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಮತ್ತು ತಾಳ್ಮೆಯ ರಾಜಕೀಯ ಅವರ ಕಾರ್ಯಶೈಲಿಯ ಮುಖ್ಯ ಲಕ್ಷಣಗಳು.

ಅವರ ರಾಜಕೀಯ ಜೀವನದಲ್ಲಿ ಅನೇಕ ಏರಿಳಿತಗಳು ಬಂದಿದ್ದರೂ ಪಕ್ಷದ ಮೇಲಿನ ನಿಷ್ಠೆ ಪ್ರಶ್ನಾತೀತವಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಹಲವು ಬಾರಿ ಅವರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಿದೆ.

ರಾಜಕೀಯದ ಜೊತೆಗೆ ಸರಳ ಜೀವನಶೈಲಿಗೆ ಹೆಸರುವಾಸಿಯಾಗಿರುವ ಹರಿಪ್ರಸಾದ್ ಅವರು ಉಷಾ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅವರಿಗೆ ಒಬ್ಬ ಪುತ್ರಿಯಿದ್ದಾರೆ. ಕುಟುಂಬ ಜೀವನವನ್ನು ರಾಜಕೀಯದಿಂದ ಸಾಧ್ಯವಾದಷ್ಟು ದೂರ ಇಡುವ ನಾಯಕ ಎಂಬ ಹೆಸರನ್ನು ಅವರು ಗಳಿಸಿದ್ದಾರೆ.

ಭವಿಷ್ಯದ ರಾಜಕೀಯ ಪಾತ್ರ

ಕೆಪಿಸಿಸಿ ಅಧ್ಯಕ್ಷ ಸ್ಥಾನ ಹರಿಪ್ರಸಾದ್ ಅವರ ರಾಜಕೀಯ ಜೀವನದ ಮತ್ತೊಂದು ಮಹತ್ವದ ಅಧ್ಯಾಯವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮನ್ವಯ ಸಾಧಿಸುವಲ್ಲಿ ಅವರ ಪಾತ್ರ ನಿರ್ಣಾಯಕವಾಗಲಿದೆ.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮಟ್ಟದ ತಂತ್ರ ರೂಪಿಸುವುದು, ಕಾರ್ಯಕರ್ತರ ಬಲವರ್ಧನೆ, ಚುನಾವಣಾ ಸಿದ್ಧತೆ ಮತ್ತು ಹೈಕಮಾಂಡ್‌ನೊಂದಿಗೆ ಸಮನ್ವಯ ಸಾಧಿಸುವ ಪ್ರಮುಖ ಹೊಣೆಗಾರಿಕೆ ಅವರ ಮೇಲಿದೆ. ಈ ಎಲ್ಲ ಸವಾಲುಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ಭವಿಷ್ಯ ಬಹುಮಟ್ಟಿಗೆ ಅವಲಂಬಿತವಾಗಿದೆ.

ಸುಮಾರು ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಕಾಂಗ್ರೆಸ್ ಸಂಘಟನೆಯಲ್ಲಿ ದುಡಿದಿರುವ ಬಿ.ಕೆ. ಹರಿಪ್ರಸಾದ್ ಇಂದು ಕರ್ನಾಟಕ ಕಾಂಗ್ರೆಸ್‌ನ ಅತ್ಯುನ್ನತ ಸಂಘಟನಾ ಹುದ್ದೆಯನ್ನು ಅಲಂಕರಿಸಿದ್ದಾರೆ. ವಿದ್ಯಾರ್ಥಿ ರಾಜಕಾರಣದಿಂದ ಆರಂಭವಾದ ಅವರ ಪಯಣ ರಾಜ್ಯಸಭೆ, ರಾಷ್ಟ್ರೀಯ ಸಂಘಟನೆ, ವಿಧಾನ ಪರಿಷತ್ ಮತ್ತು ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನವರೆಗೆ ತಲುಪಿದೆ.

ಅನುಭವ, ಸಂಘಟನಾ ಕೌಶಲ್ಯ, ರಾಜಕೀಯ ಪ್ರೌಢಿಮೆ ಮತ್ತು ಪಕ್ಷದ ಮೇಲಿನ ನಿಷ್ಠೆ ಎಂಬ ನಾಲ್ಕು ಅಂಶಗಳು ಅವರ ರಾಜಕೀಯ ವ್ಯಕ್ತಿತ್ವದ ಪ್ರಮುಖ ಗುರುತುಗಳಾಗಿವೆ. ಕರ್ನಾಟಕ ಕಾಂಗ್ರೆಸ್ ಹೊಸ ರಾಜಕೀಯ ಹಾದಿಯಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ, ಬಿ.ಕೆ. ಹರಿಪ್ರಸಾದ್ ಅವರ ನಾಯಕತ್ವ ಪಕ್ಷಕ್ಕೆ ಹೊಸ ಶಕ್ತಿ ತುಂಬುತ್ತದೆಯೇ ಎಂಬುದನ್ನು ರಾಜ್ಯದ ರಾಜಕೀಯ ಕುತೂಹಲದಿಂದ ಗಮನಿಸುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ

Published

on

~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಮುನ್ನೋಟ: ಜೀವನಕ್ರಮವಾಗಿ ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವವು ಕೇವಲ ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲ; ಅದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಎತ್ತಿಹಿಡಿಯುವ ಒಂದು ಉದಾತ್ತ ಜೀವನಕ್ರಮ. ಸೈದ್ಧಾಂತಿಕವಾಗಿ ಪ್ರಜಾಪ್ರಭುತ್ವವು ‘ನಿಷ್ಪಕ್ಷಪಾತ’ ಮನೋಭಾವವನ್ನು ಪ್ರತಿಪಾದಿಸುತ್ತದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವವು ಕೇವಲ ಕಾಗದದ ಮೇಲಿನ ವಾಕ್ಯವಾಗದೆ, ಹುಟ್ಟಿನಿಂದ ಹೇರಲ್ಪಟ್ಟ ಶ್ರೇಣೀಕೃತ ವ್ಯವಸ್ಥೆಯ ಗೋಡೆಗಳನ್ನು ಕೆಡವುವ ಶಕ್ತಿಯಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ದೇಶದ ಅತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಾನಕ್ಕೇರಲು ಸಾಧ್ಯವಿರುವುದು ಈ ವ್ಯವಸ್ಥೆಯ ಅತಿದೊಡ್ಡ ಯಶಸ್ಸು.

ಸಾಮಾಜಿಕ ನ್ಯಾಯ ಮತ್ತು ಸಾಂವಿಧಾನಿಕ ಬಲ

ಸಾಮಾಜಿಕ ನ್ಯಾಯವು ಪ್ರಜಾಪ್ರಭುತ್ವದ ಅಂತರಾತ್ಮವಿದ್ದಂತೆ. ಐತಿಹಾಸಿಕವಾಗಿ ಶೋಷಣೆಗೆ ಒಳಗಾದ ಸಮುದಾಯಗಳಿಂದ ಬಂದ ವ್ಯಕ್ತಿಗಳು ನಾಯಕತ್ವದ ಸ್ಥಾನಕ್ಕೇರುವುದು ಹೊರನೋಟಕ್ಕೆ ಒಂದು ಪವಾಡದಂತೆ ಭಾಸವಾಗಬಹುದು. ಆದರೆ, ವಾಸ್ತವದಲ್ಲಿ ಇದು ಸಂವಿಧಾನ ನೀಡಿರುವ ‘ಮತದಾನದ ಹಕ್ಕು’ ಮತ್ತು ‘ಪ್ರಾತಿನಿಧ್ಯದ ಅವಕಾಶ’ಗಳ ಫಲಶೃತಿಯಾಗಿದೆ. ಪ್ರಜಾಪ್ರಭುತ್ವವು ಕೇವಲ ಬಹುಮತದ ಆಡಳಿತವಲ್ಲ, ಬದಲಿಗೆ ಅಲ್ಪಸಂಖ್ಯಾತ ಮತ್ತು ದಮನಿತ ಧ್ವನಿಗಳಿಗೂ ನೀತಿ ನಿರೂಪಣೆಯಲ್ಲಿ ಸಮಾನ ವೇದಿಕೆ ಕಲ್ಪಿಸುವ ಒಳಗೊಳ್ಳುವಿಕೆಯ (Inclusion) ಪ್ರಕ್ರಿಯೆಯಾಗಿದೆ. ಅಧಿಕಾರವು ಕೆಲವೇ ಜನರ ಕೈಯಲ್ಲಿ ಕೇಂದ್ರಿಕೃತವಾಗದೆ, ವಿಕೇಂದ್ರೀಕರಣದ ಮೂಲಕ ಸಾಮಾನ್ಯ ಜನರಿಗೂ ತಲುಪಿದಾಗ ಮಾತ್ರ ಪ್ರಜಾಪ್ರಭುತ್ವದ ಆಶಯ ಸಾಕಾರಗೊಳ್ಳುತ್ತದೆ.

ನಾಯಕತ್ವದ ನೈತಿಕತೆ ಮತ್ತು ಸಾಂವಿಧಾನಿಕ ಬದ್ಧತೆ

ಪ್ರಜಾಪ್ರಭುತ್ವದ ಅತ್ಯಂತ ನಿರ್ಣಾಯಕ ಅಂಶವೆಂದರೆ ಅಧಿಕಾರವನ್ನು ಪಡೆದವರ ನೈತಿಕ ನಡೆ. ಪ್ರಜಾಪ್ರಭುತ್ವದ ಒತ್ತಾಸೆಯಿಂದ ಅವಕಾಶ ಮತ್ತು ಅಧಿಕಾರವನ್ನು ಪಡೆಯುವ ಪ್ರತಿಯೊಬ್ಬರೂ ಪ್ರಜಾಸತ್ತಾತ್ಮಕ ನಿಲುವುಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸುವ ನೈತಿಕತೆಯನ್ನು ಹೊಂದಿರಬೇಕಾಗುತ್ತದೆ. ಅಧಿಕಾರವು ಒಂದು ಸೌಲಭ್ಯವಲ್ಲ, ಅದೊಂದು ಜವಾಬ್ದಾರಿ. ಯಾವ ವ್ಯವಸ್ಥೆಯು ಒಬ್ಬ ವ್ಯಕ್ತಿಯನ್ನು ಸಾಮಾನ್ಯ ಸ್ಥಿತಿಯಿಂದ ನಾಯಕತ್ವದ ಸ್ಥಾನಕ್ಕೆ ಏರಿಸುತ್ತದೆಯೋ, ಅದೇ ವ್ಯವಸ್ಥೆಯ ಮೌಲ್ಯಗಳನ್ನು ಎತ್ತಿಹಿಡಿಯುವುದು ಆ ನಾಯಕನ ಪರಮ ಧರ್ಮ. ಸಾಂವಿಧಾನಿಕ ಆಶಯಗಳಿಗೆ ದ್ರೋಹ ಬಗೆಯದೆ, ವೈಯಕ್ತಿಕ ಹಿತಾಸಕ್ತಿಗಿಂತ ಜನಹಿತವೇ ದೊಡ್ಡದು ಎಂಬ ನಿಲುವು ತಳೆದಾಗ ಮಾತ್ರ ಅಧಿಕಾರಕ್ಕೆ ಸಾರ್ಥಕತೆ ದೊರೆಯುತ್ತದೆ.

ಐತಿಹಾಸಿಕ ಪ್ರೇರಣೆ: ಅಬ್ರಹಾಂ ಲಿಂಕನ್ ಎಂಬ ಮಾದರಿ

ಪ್ರಜಾಪ್ರಭುತ್ವದ ಇತಿಹಾಸವನ್ನು ಚರ್ಚಿಸುವಾಗ ಅಬ್ರಹಾಂ ಲಿಂಕನ್ ಅವರ ಹೆಸರು ಅನಿವಾರ್ಯ. “ಜನರಿಗಾಗಿ, ಜನರಿಂದ, ಜನರಿಗೋಸ್ಕರ” ಎಂಬ ಅವರ ಸರಳ ವ್ಯಾಖ್ಯಾನವು ಜಗತ್ತಿನಾದ್ಯಂತ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಭದ್ರ ಬುನಾದಿ ಹಾಕಿತು. ಒಬ್ಬ ಸಾಮಾನ್ಯ ಹಿನ್ನೆಲೆಯ ವ್ಯಕ್ತಿ ಅಮೆರಿಕದ ಅಧ್ಯಕ್ಷನಾಗಿ ಗುಲಾಮಗಿರಿಯ ವಿರುದ್ಧ ಹೋರಾಡಿದ್ದು, ಪ್ರಜಾಪ್ರಭುತ್ವದ ಗುಣಕ್ಕೆ (Flexibility) ಸಾಕ್ಷಿಯಾಗಿದೆ. ಲಿಂಕನ್ ಅವರ ಹೋರಾಟವು ಮಾನವೀಯತೆ ಮತ್ತು ಸಮಾನತೆಯನ್ನು ಪ್ರಜಾಪ್ರಭುತ್ವದ ಅನಿವಾರ್ಯ ಅಂಗವನ್ನಾಗಿಸಿತು, ಇದು ಇಂದಿಗೂ ಜಾಗತಿಕ ರಾಜಕೀಯಕ್ಕೆ ದಾರಿದೀಪವಾಗಿದೆ.

ಸಿನಿಮಾ, ಸಮಾಜ ಮತ್ತು ರಾಜಕೀಯ ನಾಯಕತ್ವದ ಮನ್ವಂತರ

ತಮಿಳುನಾಡಿನಂತಹ ರಾಜ್ಯಗಳಲ್ಲಿ ರಾಜಕೀಯವು ಯಾವಾಗಲೂ ಸಾಮಾಜಿಕ ನ್ಯಾಯದ ಪ್ರಯೋಗಶಾಲೆಯಾಗಿ ಕಾರ್ಯನಿರ್ವಹಿಸಿದೆ. ದ್ರಾವಿಡ ಚಳವಳಿಯ ಹಿನ್ನೆಲೆಯಲ್ಲಿ ಬೆಳೆದು ಬಂದ ಇಲ್ಲಿನ ರಾಜಕೀಯ ಸಂಸ್ಕೃತಿಯಲ್ಲಿ, ಸಿನಿಮಾ ರಂಗದ ವ್ಯಕ್ತಿಗಳನ್ನು ಕೇವಲ ನಟರನ್ನಾಗಿ ನೋಡದೆ, ತಮ್ಮ ಸಾಮಾಜಿಕ ಆಶೋತ್ತರಗಳನ್ನು ಈಡೇರಿಸುವ ‘ಪ್ರತಿನಿಧಿ’ಗಳಾಗಿ ಜನರು ಸ್ವೀಕರಿಸುತ್ತಾ ಬಂದಿದ್ದಾರೆ. ಇತ್ತೀಚಿನ ವಿದ್ಯಮಾನಗಳಲ್ಲಿ ಸಿ. ಜೋಸೆಫ್ ವಿಜಯ್ (ನಟ ವಿಜಯ್) ಅವರಂತಹ ವ್ಯಕ್ತಿಗಳು ರಾಜಕೀಯ ಪ್ರವೇಶದ ಹಾದಿಯಲ್ಲಿರುವುದು ಈ ಪರಂಪರೆಯ ಮುಂದುವರಿಕೆಯಾಗಿದೆ. ಜನರು ಇಂತಹ ನಾಯಕರಲ್ಲಿ ಒಬ್ಬ ‘ಸ್ಟಾರ್’ಗಿಂತ ಹೆಚ್ಚಾಗಿ, ಶೋಷಿತರ ಪರವಾಗಿ ಧ್ವನಿ ಎತ್ತುವ ಮತ್ತು ಅಧಿಕಾರದ ವಿಕೇಂದ್ರೀಕರಣಕ್ಕೆ ಶ್ರಮಿಸುವ ನಾಯಕತ್ವವನ್ನು ನಿರೀಕ್ಷಿಸುತ್ತಾರೆ.

ಭವಿಷ್ಯದ ಆಶಯ

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಜಾಪ್ರಭುತ್ವವು ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ತನ್ನನ್ನು ತಾನು ರೂಪಿಸಿಕೊಳ್ಳುತ್ತಿದೆ. ಅಧಿಕಾರವು ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವ ಸಾಧನವಾಗಬೇಕೇ ಹೊರತು, ಅದು ಕೇವಲ ಆಡಳಿತ ನಡೆಸುವ ಅಧಿಕಾರವಲ್ಲ. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಅಧಿಕಾರಸ್ಥರ ನೈತಿಕ ಬದ್ಧತೆಯ ಮೂಲಕ ಮಾತ್ರ ಒಂದು ಸಮಾಜವು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವದ ಯಶಸ್ಸನ್ನು ಸಂಭ್ರಮಿಸಲು ಸಾಧ್ಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಸಮರ್ಥ್ ಶಾಮನೂರು ಪ್ರಯಾಸದ ಗೆಲುವು ಮತ್ತು ಮುಂದಿನ ಸವಾಲುಗಳು

Published

on

~ಗೋವರ್ಧನ ನವಿಲೇಹಾಳು

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಖಾಲಿಯಾದ ಈ ಕ್ಷೇತ್ರವು ಕುಟುಂಬದ ರಾಜಕೀಯ ಉತ್ತರಾಧಿಕಾರ, ಅಲ್ಪಸಂಖ್ಯಾತರ ಅಸಮಾಧಾನ ಮತ್ತು ಪಕ್ಷಾಂತರದ ಆರೋಪಗಳ ನಡುವೆ ತೀವ್ರ ಸ್ಪರ್ಧೆಯನ್ನು ಕಂಡಿತು. ಸುಮಾರು 5,708 ಮತಗಳ ಅಂತರದಿಂದ ಗೆದ್ದ ಸಮರ್ಥ್ ಅವರು ಶಾಮನೂರು ಕುಟುಂಬದ ಮೂರನೇ ಪೀಳಿಗೆಯ ಪ್ರತಿನಿಧಿಯಾಗಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಈ ಗೆಲುವು ಕಾಂಗ್ರೆಸ್‌ಗೆ ಸಂತೋಷದ ಸುದ್ದಿಯಾದರೂ, ಎಸ್‌ಡಿಪಿಐ ಪಡೆದ ಗಣನೀಯ 18,975 ಮತಗಳು ಮತ್ತು ಬಿಜೆಪಿಯ ತೀವ್ರ ಪೈಪೋಟಿ ರಾಜಕೀಯ ಸಮೀಕರಣಗಳಲ್ಲಿ ಹೊಸ ತಿರುವುಗಳನ್ನು ಸೂಚಿಸುತ್ತವೆ.

ಈ ಉಪಚುನಾವಣೆಯು ಕೇವಲ ಕ್ಷೇತ್ರೀಯ ಘಟನೆಯಾಗಿರದೆ, ಕರ್ನಾಟಕ ರಾಜಕೀಯದಲ್ಲಿ ಅಲ್ಪಸಂಖ್ಯಾತರ ಮತಬ್ಯಾಂಕ್, ಕುಟುಂಬ ರಾಜಕೀಯ ಮತ್ತು ಪ್ರತಿಪಕ್ಷದ ತಂತ್ರಗಳ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಯಿತು. ಶಾಮನೂರು ಕುಟುಂಬದ ದೀರ್ಘಕಾಲದ ಸೇವೆಯನ್ನು ಜನರು ಮೆಚ್ಚಿದ್ದರೂ, ಕಾಂಗ್ರೆಸ್‌ನಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನಿರಾಕರಣೆಯಿಂದಾಗಿ ಉಂಟಾದ ಅಸಮಾಧಾನವು ಎಸ್‌ಡಿಪಿಐಗೆ ಅವಕಾಶ ಮಾಡಿಕೊಟ್ಟಿತು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು ತೀವ್ರ ಪ್ರಚಾರ ನಡೆಸಿದ್ದರೂ, ಕಾಂಗ್ರೆಸ್‌ನ ಅಭಿವೃದ್ಧಿ ಕಾರ್ಯಗಳು ಮತ್ತು ಐದು ಗ್ಯಾರಂಟಿಗಳ ಪ್ರಭಾವವು ಗೆಲುವಿಗೆ ನೆರವಾಯಿತು. ಆದರೆ ಈ ಗೆಲುವು ಸುಲಭವಾಗಿರಲಿಲ್ಲ; ಅದು ಎಲ್ಲಾ ಪಕ್ಷಗಳಿಗೂ ಪಾಠವನ್ನು ಕಲಿಸುತ್ತದೆ.

ಸಮರ್ಥ್ ಶಾಮನೂರು ಅವರ ಮುಂದಿನ ನಡೆ

ಕಿರಿಯ ವಯಸ್ಸಿನಲ್ಲಿ (ದೇಶದ ಎರಡನೇ ಅತಿ ಕಿರಿಯ ಶಾಸಕರಾಗಿ) ಗೆದ್ದ ಸಮರ್ಥ್ ಅವರು ತಮ್ಮ ಅಜ್ಜರ ರಾಜಕೀಯ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿಯಲ್ಲಿದ್ದಾರೆ. ಮುಂದಿನ ನಡೆಯು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೇಂದ್ರೀಕರಣಗೊಳ್ಳಬೇಕು. ದಾವಣಗೆರೆಯಂತಹ ನಗರ-ಗ್ರಾಮೀಣ ಮಿಶ್ರ ಕ್ಷೇತ್ರದಲ್ಲಿ ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಬಲಪಡಿಸುವುದು ಮುಖ್ಯ. ಶಾಮನೂರು ಕುಟುಂಬದ ಹೆಸರು ಅಭಿವೃದ್ಧಿಗೆ ಸಮಾನವಾಗಿದೆ; ಇದನ್ನು ಮುಂದುವರಿಸಿ, ಎಲ್ಲಾ ಸಮುದಾಯಗಳ ನಡುವೆ ಸೇತುವೆಯಾಗಬೇಕು.

ವಿಶೇಷವಾಗಿ ಅಲ್ಪಸಂಖ್ಯಾತರ ಅಸಮಾಧಾನವನ್ನು ನಿವಾರಿಸುವುದು ಅಗತ್ಯ. ಟಿಕೆಟ್ ವಿವಾದದ ನಂತರ ಉಂಟಾದ ಬಿರುಕುಗಳನ್ನು ತುಂಬುವ ಮೂಲಕ ಏಕತೆಯ ಸಂದೇಶ ನೀಡಬೇಕು. ಯುವಕರಾಗಿರುವುದರಿಂದ ಆಧುನಿಕ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಪಾರದರ್ಶಕ ಆಡಳಿತದ ಮೂಲಕ ಹೊಸ ಚಿಂತನೆ ತರಬಹುದು. ರಾಜಕೀಯದಲ್ಲಿ ವೈಯಕ್ತಿಕ ದಾಳಿ ಬದಲು ನಿರ್ಮಾಣಾತ್ಮಕ ವಿಮರ್ಶೆಯನ್ನು ಪ್ರೋತ್ಸಾಹಿಸುವುದು ಅವರ ಯಶಸ್ಸಿಗೆ ಕಾರಣವಾಗುತ್ತದೆ. ಜನಸಂಪರ್ಕವನ್ನು ನಿರಂತರವಾಗಿ ಉಳಿಸಿಕೊಂಡು, ಕ್ಷೇತ್ರದ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತುತಪಡಿಸುವುದು ಅವರ ಮುಂದಿನ ಗುರಿಯಾಗಬೇಕು. ಗೆಲುವು ಕುಟುಂಬದ ಆಸ್ತಿಯಲ್ಲ, ಜನರ ವಿಶ್ವಾಸದ ಫಲ; ಇದನ್ನು ಕಾಯ್ದುಕೊಳ್ಳುವುದು ದೊಡ್ಡ ಸವಾಲು.

ಬಿಜೆಪಿಯ ಮುಂದಿನ ಸವಾಲುಗಳು

ಬಿಜೆಪಿ ಈ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಿದ್ದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ನ ಒಳಜಗಳಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಪೂರ್ಣವಾಗಿ ಬಳಸಿಕೊಳ್ಳಲು ವಿಫಲವಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಮುಂದೆ ಬಿಜೆಪಿಗೆ ಸವಾಲುಗಳು ಹಲವು: ಮೊದಲನೆಯದು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ನಡುವೆ ವಿಶ್ವಾಸಾರ್ಹತೆಯನ್ನು ಕಟ್ಟುವುದು. ಧ್ರುವೀಕರಣದ ತಂತ್ರಗಳು ಸೀಮಿತ ಯಶಸ್ಸು ನೀಡುತ್ತವೆ ಎಂಬುದು ಈ ಫಲಿತಾಂಶ ಸೂಚಿಸುತ್ತದೆ.

ಕ್ಷೇತ್ರದಲ್ಲಿ ಸ್ಥಳೀಯ ನಾಯಕರನ್ನು ಬಲಪಡಿಸುವುದು, ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜನಸಂಪರ್ಕ ಹೆಚ್ಚಿಸುವುದು ಅಗತ್ಯ. ರಾಜ್ಯ ಮಟ್ಟದಲ್ಲಿ ಪ್ರತಿಪಕ್ಷದ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾ, ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವುದು ಮುಂದಿನ ಚುನಾವಣೆಗಳಲ್ಲಿ ನೆರವಾಗುತ್ತದೆ. ಈ ಗೆಲುವು ಕಾಂಗ್ರೆಸ್‌ಗೆ ಎಚ್ಚರಿಕೆಯಾಗಿದ್ದರೆ, ಬಿಜೆಪಿಗೆ ಕ್ರಿಯಾಶೀಲತೆಯ ಅಗತ್ಯವನ್ನು ತೋರಿಸುತ್ತದೆ.

ಎಸ್‌ಡಿಪಿಐ ಮುಂದಿನ ಸವಾಲು

ಎಸ್‌ಡಿಪಿಐ ಈ ಚುನಾವಣೆಯಲ್ಲಿ ಗಮನಾರ್ಹ ಮತಗಳನ್ನು ಪಡೆದು ತನ್ನ ಉಪಸ್ಥಿತಿಯನ್ನು ಸಾಬೀತುಪಡಿಸಿದೆ. ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಂ ಸಮುದಾಯದ ಅಸಮಾಧಾನವನ್ನು ಬಳಸಿಕೊಂಡು ತನ್ನ ಮತಬ್ಯಾಂಕ್‌ನ್ನು ವಿಸ್ತರಿಸಿದೆ. ಆದರೆ ಇದು ಸವಾಲುಗಳನ್ನೂ ತಂದಿದೆ. ಮುಂದೆ ಎಸ್‌ಡಿಪಿಐಗೆ ಬ್ರಾಡ್ ಆಪೀಲ್ ಅಗತ್ಯ – ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಆರ್ಥಿಕ-ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಉದ್ಯೋಗದಂತಹ ವಿಷಯಗಳಲ್ಲಿ ಎಲ್ಲರಿಗೂ ಸ್ಪಂದಿಸುವ ಧೋರಣೆ ಬೆಳೆಸಬೇಕು.

ಚುನಾವಣಾ ಅನಿಯಮಗಳ ಆರೋಪಗಳು ಮತ್ತು ಮುಖ್ಯ ಪಕ್ಷಗಳ ನಡುವಿನ ತಂತ್ರಗಳ ನಡುವೆ ಸಿಲುಕದೆ, ಸ್ವತಂತ್ರ ರಾಜಕೀಯವನ್ನು ಬಲಪಡಿಸುವುದು ಮುಖ್ಯ. ದೀರ್ಘಕಾಲದ ಯಶಸ್ಸಿಗೆ ಸಮುದಾಯಗಳ ನಡುವಿನ ಸೇತುವೆಯಾಗುವುದು ಅಗತ್ಯ; ಇಲ್ಲದಿದ್ದರೆ ಮತ ವಿಭಜನೆಯ ಆರೋಪಗಳು ಮುಂದುವರಿಯುತ್ತವೆ.

ಈ ಫಲಿತಾಂಶವು ಭಾರತೀಯ ಜನತಂತ್ರದ ಜೀವಂತತೆಯನ್ನು ತೋರಿಸುತ್ತದೆ. ಗೆಲುವು ಸಂಭ್ರಮಿಸುವುದರ ಜೊತೆಗೆ, ಸೋಲಿನಿಂದ ಪಾಠ ಕಲಿಯುವುದು ಎಲ್ಲಾ ಪಕ್ಷಗಳ ಕರ್ತವ್ಯ. ಸಮರ್ಥ್ ಶಾಮನೂರು ಅವರು ತಮ್ಮ ಯುವಕರ ಉತ್ಸಾಹ ಮತ್ತು ಕುಟುಂಬ ಪರಂಪರೆಯನ್ನು ಸಂಯೋಜಿಸಿ, ಎಲ್ಲಾ ವರ್ಗಗಳ ಜನರ ಸೇವೆಗೆ ಮುಂದಾಗಬೇಕು. ಕಾಂಗ್ರೆಸ್ ಅಂತರ್ಗತ ಏಕತೆಯನ್ನು ಬಲಪಡಿಸಬೇಕು. ಬಿಜೆಪಿ ಮತ್ತು ಎಸ್‌ಡಿಪಿಐ ತಮ್ಮ ತಂತ್ರಗಳನ್ನು ಪುನರ್ ಪರಿಶೀಲಿಸಿ, ಜನಕೇಂದ್ರಿತ ರಾಜಕೀಯಕ್ಕೆ ಮರಳಬೇಕು.

ದಾವಣಗೆರೆ ದಕ್ಷಿಣದ ಜನರು ಅಭಿವೃದ್ಧಿ ಮತ್ತು ಸಾಮರಸ್ಯವನ್ನು ಬಯಸುತ್ತಾರೆ. ಹೊಸ ಶಾಸಕರು ಈ ನಿರೀಕ್ಷೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ. ರಾಜಕೀಯವು ಸೇವೆಯಾಗಬೇಕೇ ವಿನಾ ಕುಟುಂಬ ಅಥವಾ ಸಮುದಾಯ ದ್ವೇಷದ ಆಟವಾಗಬಾರದು. ಈ ಉಪಚುನಾವಣೆಯ ಪಾಠಗಳು ರಾಜ್ಯದ ಭವಿಷ್ಯದ ಚುನಾವಣೆಗಳಿಗೆ ದಾರಿ ತೋರಿಸುತ್ತವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending