Connect with us

ದಿನದ ಸುದ್ದಿ

ಕೋವಿದ್ ಪ್ರಭಾವಳಿಯಲ್ಲಿ ಪ್ರಭುತ್ವದ ಕ್ರೌರ್ಯ

Published

on

  • ನಾ ದಿವಾಕರ

ಜಗತ್ತಿನ ಪಾಲಿಗೆ 2020ರ ವರ್ಷ ಕೋವಿದ್ ಮತ್ತು ಅದರ ಸುತ್ತಲಿನ ಸಾವು ನೋವುಗಳ ಕರಾಳ ವರ್ಷವಾಗಿ ಕಾಣುತ್ತದೆ. ಕೋವಿದ್ 19 ಮಾನವ ಸಮಾಜದ ಆಂತರ್ಯದಲ್ಲಿ ಅಡಗಿದ್ದ ಎಲ್ಲ ಕೊಳಕುಗಳನ್ನೂ ಹೊರಹಾಕಿದ್ದು ಮಾತ್ರ ಸತ್ಯ . ನಿಸರ್ಗದ ಒಂದು ಸಣ್ಣ ಕ್ರಿಯೆ ಬಲಿಷ್ಠ ಮನುಕುಲವನ್ನು ಕ್ಷಣಮಾತ್ರದಲ್ಲಿ ಅಲುಗಾಡಿಸಿದ ಒಂದು ಪ್ರಹಸನಕ್ಕೆ ಇನ್ನೂ ಅಂತಿಮ ತೆರೆ ಬಿದ್ದಿಲ್ಲ.

ಆದರೂ ಮಾನವ ಸಮಾಜ ಗೆದ್ದೆನೆಂಬ ಅಹಮಿಕೆಯಿಂದ ತನ್ನ ಹಾದಿಯಲ್ಲೇ ಕ್ರಮಿಸುತ್ತಿದೆ. ಒಂದು ರೀತಿಯಲ್ಲಿ 2020 ಮರೆತುಹೋಗಬೇಕಾದ ವರ್ಷದಂತೆ ಕಾಣುತ್ತದೆ. ಅಸಹಜ, ಅನಿರೀಕ್ಷಿತ ಸಾವು ನೋವುಗಳು ಮಾನವ ಸಮಾಜಕ್ಕೆ ಹೊಸತೇನೂ ಅಲ್ಲ. ಚಂಡಮಾರುತ, ಪ್ರವಾಹ, ಭೂಕಂಪ, ಸುನಾಮಿ ಹೀಗೆ ಹಲವು ಪ್ರಾಕೃತಿಕ ವಿಕೋಪಗಳು ಮನುಕುಲವನ್ನು ವಿನಾಶದ ಅಂಚಿಗೆ ಕೊಂಡೊಯ್ದಿವೆ. ಜಗತ್ತು ಮತ್ತೆ ಮತ್ತೆ ಚೇತರಿಸಿಕೊಂಡಿದೆ.

ಆದರೆ ವಿಶ್ವದ ಪ್ರಬಲ ರಾಷ್ಟ್ರಗಳೂ ಸಹ ತಮ್ಮ ಸಾಮಾಜಿಕ ಮತ್ತು ಆರ್ಥಿಕ ಪ್ರಾಬಲ್ಯದ ಮೂಲಕ ಎಂತಹ ವಿನಾಶಕಾರಿ ವಿಕೋಪವನ್ನಾದರೂ ಎದುರಿಸಲು ಸಾಧ್ಯ ಎನ್ನುವ ಭ್ರಮೆ ಕೋವಿದ್ 19 ಸಂದರ್ಭದಲ್ಲಿ ಕಳಚಿಬಿದ್ದಿದೆ. ಬಂಡವಾಳ ವ್ಯವಸ್ಥೆಯ ಲೋಪಗಳನ್ನು, ವಿಶ್ವದಾದ್ಯಂತ ಆಳುವ ವರ್ಗಗಳ ದೌರ್ಬಲ್ಯಗಳನ್ನು ಮತ್ತು ಕಲ್ಪಿತ ಸಮೃದ್ಧಿಯ ನಡುವೆಯೇ ಹುದುಗಿಹೋಗಿದ್ದ ಬಡತನ, ದಾರಿದ್ರ್ಯ ಹಾಗೂ ಅನಿಶ್ಚಿತತೆಗಳನ್ನು ಕೋವಿದ್ ಹೊರಹಾಕಿದೆ.

ನಾವು ಕೋವಿದ್ ವಿರುದ್ಧ ಗೆದ್ದಿದ್ದೇವೆ ಎಂದು ಅಹಂಕಾರದಿಂದ ಬೆನ್ನುತಟ್ಟಿಕೊಳ್ಳುವ ಮುನ್ನ ಮಾನವ ಸಮಾಜ ಈ ವೈರಾಣು ಸೃಷ್ಟಿಸಿದ ಮತ್ತು ಅನಾವರಣಗೊಳಿಸಿದ ವಾಸ್ತವ ಪ್ರಪಂಚದತ್ತ ಒಮ್ಮೆ ಕಣ್ಣು ಹಾಯಿಸಿದರೆ ಬಹುಶಃ ಮತ್ತೊಂದು ವಿಕೋಪವನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಬಹುದು.

ಅಮೆರಿಕದ ಫ್ಲಾಯ್ಡ್ ಹತ್ಯೆ ಮತ್ತು ಸಂಬಂಧಿತ ಗಲಭೆಗಳಿಂದ ಹಿಡಿದು ಭಾರತದ ವಲಸೆ ಕಾರ್ಮಿಕರ ಬವಣೆಯವರೆಗಿನ ಚಿತ್ರಣವನ್ನು ಗಮನಿಸಿದಾಗ ಜಾಗತಿಕ ಬಂಡವಾಳ ವ್ಯವಸ್ಥೆ ಕೋವಿದ್ ಸಂದರ್ಭದಲ್ಲಿ ತನ್ನ ದೌರ್ಬಲ್ಯಗಳನ್ನು ಹೊರಹಾಕಿದೆ ಎಂದು ಅರ್ಥವಾಗುತ್ತದೆ.

ಮಾನವನ ಮೂಲಭೂತ ಅವಶ್ಯಕತೆಗಳನ್ನೇ ಪೂರೈಸಲಾಗದಂತಹ ದುಸ್ಥಿತಿಯಲ್ಲಿ ಬಂಡವಾಳ ವ್ಯವಸ್ಥೆ ‘ವಿಶ್ವಗುರು’ಗಳನ್ನು ಸೃಷ್ಟಿಸಲು, ‘ ಸೂಪರ್ ಪವರ್’ ಗಳನ್ನು ಸೃಷ್ಟಿಸಲು ಯತ್ನಿಸುತ್ತಿರುವುದು ಎಷ್ಟು ಬಾಲಿಶ ಪ್ರಯತ್ನ ಎನ್ನುವುದನ್ನು ಕೋವಿದ್ ನಿರೂಪಿಸಿದೆ. ಭಾರತದ ಮಟ್ಟಿಗೆ ಹೇಳುವುದಾದರೆ 2020 ಈ ದೇಶದ ಆಂತರ್ಯದಲ್ಲಿ ಅಡಗಿರುವ ಕ್ರೌರ್ಯವನ್ನು ಸಂಪೂರ್ಣವಾಗಿ ಬಹಿರಂಗಪಡಿಸಿದೆ.

2020ರ ಆರಂಭದಲ್ಲಿ ಭಾರತವನ್ನು ಅಕ್ರಮ ವಲಸಿಗರಿಂದ, ಭ್ರಷ್ಟಾಚಾರದಿಂದ ಸಂಪೂರ್ಣ ಮುಕ್ತಗೊಳಿಸುವುದಾಗಿ ಘೋಷಿಸಿದ ಪ್ರಭುತ್ವಕ್ಕೆ ತನ್ನ ನೆಲದೊಳಗೇ ಇರುವ ವಲಸೆ ಕಾರ್ಮಿಕರು ಬದುಕಿನ ವಾಸ್ತವವನ್ನು ತೋರಿಸಿಕೊಟ್ಟಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯ ಹಿನ್ನೆಲೆಯಲ್ಲಿ ಸಾಂಘಿಕ ಹಿಂಸೆ ಮತ್ತು ಕ್ರೌರ್ಯದ ಮೂಲಕ ಆರಂಭವಾದ 2020ರ ವರ್ಷ, ಕೊನೆಯ ದಿನಗಳಲ್ಲಿ ರೈತ ಚಳುವಳಿಯ ಹಿನ್ನೆಲೆಯಲ್ಲಿ ಪ್ರಭುತ್ವದ ಕ್ರೌರ್ಯವನ್ನು ಅನಾವರಣಗೊಳಿಸುವ ಮೂಲಕ ಅಂತ್ಯವಾಗಿದೆ.

ಈ ನಡುವೆಯೇ ಕೋವಿದ್ 19 ನಿಯಂತ್ರಿಸಲು ಲಸಿಕೆಯೂ ಸಿದ್ಧವಾಗುತ್ತಿದ್ದು ಹೊಸ ವರ್ಷದಲ್ಲಿ ಜನತೆ ಕೊರೋನಾ ವೈರಾಣುವಿನ ಭೀತಿಯಿಂದ ಮುಕ್ತರಾಗುವ ಸಾಧ್ಯತೆಗಳಿವೆ. ಹಾಗೆಯೇ ಪ್ರಭುತ್ವದ ಕ್ರೌರ್ಯ ಮತ್ತು ದಬ್ಬಾಳಿಕೆ ಎಷ್ಟೇ ಇದ್ದರೂ ಭಾರತದಲ್ಲಿ ಪ್ತತಿರೋಧದ ದನಿ ಇನ್ನೂ ಉಸಿರಾಡುತ್ತಿದೆ ಎನ್ನುವ ಆಶಾದಾಯಕ ಬೆಳವಣಿಗೆಗಳೊಂದಿಗೆ 2020 ಮುಗಿದಿದೆ.

2020ರ ಭಾರತದ ರಾಜಕಾರಣದಲ್ಲಿ ಎರಡು ಧೃವಗಳನ್ನು ಕಂಡಿದ್ದೇವೆ. ಒಂದೆಡೆ ಯಾವುದೇ ಪ್ರತಿರೋಧದ ದನಿಯನ್ನು ಸಹಿಸದೆ ನಿರ್ದಾಕ್ಷಿಣ್ಯವಾಗಿ ದಮನಿಸುವ ನಿರ್ದಯಿ ಸರ್ಕಾರ ಮತ್ತೊಂದೆಡೆ ಪ್ರಭುತ್ವದ ದಬ್ಬಾಳಿಕೆಯನ್ನು ಲೆಕ್ಕಿಸದೆ ಎದೆಗೊಟ್ಟು ಹೋರಾಡುವ ಜನಸಮುದಾಯಗಳು. ಈ ಎರಡೂ ಧೃವಗಳ ನಡುವೆ ಮತೀಯ ದ್ವೇಷ, ಮತಾಂಧ ರಾಜಕಾರಣ ಮತ್ತು ಕೋವಿದ್ 19ರ ಸಂದರ್ಭದಲ್ಲೂ ಹರಡಿದ್ದ ಮತಧಾರ್ಮಿಕ ದ್ವೇಷದ ಮಹಾಪೂರವನ್ನೂ ಕಂಡಿದ್ದೇವೆ.

ಇದೇ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲೂ ಮತಾಂಧತೆಯ ಹೊಸ ಆಯಾಮಗಳನ್ನೂ 2020 ಒದಗಿಸಿದೆ. 2020ರಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗಿ ಕಂಡುಬಂದಿಲ್ಲ. ಆದರೆ ಭಾರತವನ್ನೂ ಸೇರಿದಂತೆ ಹಲವು ದೇಶಗಳಲ್ಲಿ ಮತೀಯ ಮೂಲಭೂತವಾದಿಗಳು ಮತ್ತು ಮತಾಂಧರ ದಾಳಿಗಳು ವ್ಯವಸ್ಥಿತವಾಗಿ ನಡೆದಿದೆ.

ಆಸ್ಟ್ರಿಯಾದ ವಿಯೆನ್ನಾದಲ್ಲಿ 20 ವರ್ಷದ ಯುವಕನೊಬ್ಬ ಸಾರ್ವಜನಿಕರ ಮೇಲೆ ಗುಂಡಿನ ದಾಳಿ ನಡೆಸಿ ನಾಲ್ವರ ಸಾವಿಗೆ ಕಾರಣನಾಗಿ ಆತನೂ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದ. ಈ ದಾಳಿಯಲ್ಲಿ 22 ಜನರು ಗಾಯಗೊಂಡಿದ್ದರು. ಈ ಕೃತ್ಯದ ಹಿಂದೆ ತನ್ನ ಕೈವಾಡವಿದೆ ಎಂದು ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೇಳಿಕೊಂಡಿತ್ತು.

ಫ್ರಾನ್ಸ್‍ನ ಶಾಲೆಯೊಂದರಲ್ಲಿ ಪಾಠ ಮಾಡುತ್ತಿದ್ದ ಸ್ಯಾಮುಯೆಲ್ ಪ್ಯಾಟಿ ಎಂಬ ಶಿಕ್ಷಕಿಯ ಶಿರಚ್ಚೇದ ಮಾಡಿದ ಘಟನೆ ಅಲ್ಲಿನ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. 18 ವರ್ಷದ ಚೆಚನ್ ಯುವಕನೊಬ್ಬ ಈ ಕೃತ್ಯ ಎಸಗಿದ್ದು, ಚಾರ್ಲಿ ಹೆಬ್ಡೋ ಪತ್ರಿಕೆಯಲ್ಲಿ ಪ್ರವಾದಿ ಮೊಹಮದರ ವ್ಯಂಗ್ಯ ಚಿತ್ರವನ್ನು ಮತ್ತೊಮ್ಮೆ ಪ್ರಕಟಿಸಿರುವುದು ಮತ್ತು ಈ ಶಿಕ್ಷಕಿ ವಿದ್ಯಾರ್ಥಿಗಳಿಗೆ ಪತ್ರಿಕೆಯನ್ನು ತೋರಿಸಿರುವುದು ಘಟನೆಗೆ ಕಾರಣ ಎನ್ನಲಾಗಿದೆ.

ಅಕ್ಟೋಬರ್ 29ರಂದು ಪ್ರವಾದಿ ಮೊಹಮ್ಮದರ ಜನ್ಮದಿನದಂದೇ ಫ್ರಾನ್ಸ್‍ನ ನೈಸ್ ಪಟ್ಟಣದಲ್ಲಿ ಮತ್ತೊಂದು ಭಯೋತ್ಪಾದಕ ದಾಳಿ ನಡೆದಿದ್ದು ಹಾಡ ಹಗಲಲ್ಲೇ ನಾಲ್ಕು ಜನರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು. ಫ್ರಾನ್ಸ್‍ನ ಮುಸ್ಲಿಂ ಕೌನ್ಸಿಲ್ ಜನ್ಮದಿನಾಚರಣೆಯ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸುವ ಮೂಲಕ ಈ ಘಟನೆಗೆ ಪ್ರತಿರೋಧ ವ್ಯಕ್ತಪಡಿಸಿತ್ತು.

ಸ್ಯಾಮುಯೆಲ್ ಪ್ಯಾಟಿಯ ಶಿರಚ್ಚೇದನದ ನಂತರ ಫ್ರಾನ್ಸ್ ಸರ್ಕಾರ ಚಾರ್ಲಿಹೆಬ್ಡೋ ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯ ಚಿತ್ರವನ್ನು ಮತ್ತೊಮ್ಮೆ ಪ್ರಕಟಿಸಲು ನಿರ್ಧರಿಸಿದ್ದು ಈ ಘಟನೆಗಳಿಗೆ ಕಾರಣ ಎನ್ನಲಾಗಿದೆ. ಭಾರತದಲ್ಲಿ ಇದೇ ಮತಾಂಧತೆ ಮತ್ತು ಅಸಹಿಷ್ಣುತೆಯನ್ನು ಹಿಂದೂ ಮೂಲಭೂತವಾದಿಗಳು ದೆಹಲಿಯ ಶಹೀನ್‍ಬಾಗ್‍ನಲ್ಲಿ ಪ್ರದರ್ಶಿಸಿದ್ದವು.

ಭಯೋತ್ಪಾದನೆ ಮತ್ತು ಹಿಂಸಾವಾದದ ಮೂಲ ಮತಧರ್ಮಗಳಲ್ಲ, ಮತಾಂಧತೆ ಎನ್ನುವುದನ್ನು ವಿಶ್ವದಾದ್ಯಂತ ಮತಾಂಧರು ಪದೇ ಪದೇ ನಿರೂಪಿಸುತ್ತಲೇ ಇದ್ದಾರೆ. ಆದರೂ ನಾವು ಮತಧರ್ಮಗಳ ಚೌಕಟ್ಟಿನಲ್ಲಿ ಈ ವಿದ್ಯಮಾನವನ್ನು ವಿಶ್ಲೇಷಿಸುತ್ತಿದ್ದೇವೆ.

ಭಾರತದ ಮಟ್ಟಿಗೆ 2020 ಆರಂಭವಾದದ್ದೇ ಈ ಬೌದ್ಧಿಕ ಭಯೋತ್ಪಾದನೆಯ ಮೂಲಕ. ಪ್ರತಿಷ್ಠಿತ ಜೆ ಎನ್ ಯು ವಿಶ್ವವಿದ್ಯಾಲಯದಲ್ಲಿ ಜನವರಿ 5 2020ರಂದು ನಡೆದ ಘಟನೆಗಳು ಯಾವುದೇ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡುತ್ತವೆ. ಆದರೆ ಭಾರತದ ನಾಗರಿಕ ಸಮಾಜದ ಒಂದು ಬೃಹತ್ ವರ್ಗ ಹೆಮ್ಮೆಯಿಂದ ಬೆನ್ನುತಟ್ಟಿಕೊಂಡು ನಿಂತಿತ್ತು.

ಏಕೆಂದರೆ ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ಭಾರತದ ಪ್ರಭುತ್ವ ಈ ದೇಶದ ಜನರ ಅಸ್ತಿತ್ವ ಮತ್ತು ಪೌರತ್ವವನ್ನೇ ಪ್ರಶ್ನಿಸುವ ವಾತಾವರಣವನ್ನು ಸೃಷ್ಟಿಮಾಡಿತ್ತು. ತಾನು ಭಾರತೀಯ ಪ್ರಜೆ ಎಂದು ಸಾಕ್ಷ್ಯಾಧಾರಗಳ ಸಮೇತ ನಿರೂಪಿಸುವ ಹೊಣೆ ಪ್ರತಿಯೊಬ್ಬ ಪ್ರಜೆಯದ್ದಾಗಿತ್ತು. ತಮ್ಮ ಚೌಕಟ್ಟಿನೊಳಗೆ ಹೊಂದದವರನ್ನು ಸುಲಭವಾಗಿ ಅನ್ಯರ ಗುಂಪಿಗೆ ಸೇರಿಸಿ ಪ್ರತ್ಯೇಕಿಸಬಹುದಾದ ಒಂದು ಕ್ರೂರ ವ್ಯವಸ್ಥೆಗೆ ಜೆ ಎನ್ ಯು ಘಟನೆಗಳು ಪ್ರಾತ್ಯಕ್ಷಿಕೆಯಾಗಿದ್ದವು.

ಶಹೀನ್ ಬಾಗ್‍ನಲ್ಲಿ ನಡೆದ ಗಲಭೆಗಳು ದೇಶವನ್ನು ಮೂರು ದಶಕಗಳಷ್ಟು ಹಿಂದಕ್ಕೆ ಕರೆದೊಯ್ದಿತ್ತು. ಆಡಳಿತ ವ್ಯವಸ್ಥೆಯ ಪ್ರಜ್ಞಾಪೂರ್ವಕ ನಿಷ್ಕ್ರಿಯತೆ ಹೇಗೆ ವಿಧ್ವಂಸಕ ಮನಸುಗಳನ್ನು ಪ್ರೇರೇಪಿಸುತ್ತದೆ ಎಂದು ಈ ಕೋಮು ಗಲಭೆಗಳು ನಿರೂಪಿಸಿದ್ದವು.

ಸಾರ್ವಜನಿಕ ವೇದಿಕೆಯ ಮೇಲೆ ನಿಂತು “ ಗೋಲಿ ಮಾರೋ ಸಾಲೋಂಕೋ ” ಎಂದು ಘೋಷಿಸಿದ ಬಿಜೆಪಿ ಸಂಸದ, ಪೊಲೀಸರ ಎದುರಿನಲ್ಲೇ ಪ್ರತಿಭಟನಾಕಾರರಿಗೆ ಪಿಸ್ತೂಲು ತೋರಿಸಿದ ಒಬ್ಬ ಕಾರ್ಯಕರ್ತನ ವಿರುದ್ಧ ಪೊಲೀಸ್ ದೂರನ್ನೂ ದಾಖಲಿಸಲಾಗಿಲ್ಲ ಆದರೆ ಅಮಾಯಕ ವಿದ್ಯಾರ್ಥಿ ಉಮರ್ ಖಾಲಿದ್ ಬಂಧನಕ್ಕೊಳಗಾಗಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಜೆಎನ್‍ಯು ಘಟನೆಗೆ ಕಾರಣರಾದ ದುಷ್ಕರ್ಮಿಗಳನ್ನು, ಮತಾಂಧರನ್ನು ಈವರೆಗೂ ಬಂಧಿಸಲಾಗಿಲ್ಲ. ಆದರೆ ಏಟು ತಿಂದ ಹಲವು ಜೆಎನ್‍ಯು ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದಾರೆ. ಒಂದು ರೀತಿಯಲ್ಲಿ ನ್ಯಾಯದೇವತೆಯ ಶೀರ್ಷಾಸನ ಪ್ರಹಸನವನ್ನು ಭಾರತ 2020ರಲ್ಲಿ ವೀಕ್ಷಿಸಿದೆ.

ಈ ಸಂಕಷ್ಟಗಳ, ಪ್ರಕ್ಷುಬ್ಧತೆಯ, ವಿಧ್ವಂಸಕ ಕೃತ್ಯಗಳ ನಡುವೆಯೇ ಭಾರತಕ್ಕೆ ದಾಳಿ ಇಟ್ಟ ಕೋವಿದ್ 19 ಒಂದೆಡೆ ಭಾರತದ ಆರೋಗ್ಯ ವ್ಯವಸ್ಥೆಯಲ್ಲಿನ ಅವ್ಯವಸ್ಥೆಯನ್ನು ಹೊರಗೆಡಹಿದರೆ ಮತ್ತೊಂದೆಡೆ ಭಾರತೀಯ ಸಮಾಜದಲ್ಲಿ ವ್ಯವಸ್ಥಿತವಾಗಿ ಬಿತ್ತಲಾಗಿದ್ದ ಮತಾಂಧತೆಯ ಬೀಜಗಳು ಮೊಳಕೆಯೊಡೆಯುವಂತೆಯೂ ಮಾಡಿದೆ.

ಲಜ್ಜೆಗೆಟ್ಟ ವಿದ್ಯುನ್ಮಾನ ಸುದ್ದಿಮನೆಗಳು ಒಂದು ನಿರ್ದಿಷ್ಟ ಧರ್ಮದ ವಿರುದ್ಧ ವ್ಯವಸ್ಥಿತವಾದ ಅಪಪ್ರಚಾರ ನಡೆಸಿ, ದ್ವೇಷ ರಾಜಕಾರಣದ ಫಲವತ್ತಾದ ಬೆಳೆಗೆ ಮತ್ತಷ್ಟು ನೀರು ಗೊಬ್ಬರ ಎರೆಯುವುದಕ್ಕೆ ಕೋವಿದ್ 19 ಗುರಾಣಿಯಾಗಿ ಪರಿಣಮಿಸಿದ್ದು ದುರಂತ, ಆದರೂ ವಾಸ್ತವ.

ಇಂದು ಭಾರತ ಕೋವಿದ್ ಮುಕ್ತವಾಗುತ್ತಿದೆ ಆದರೆ ಸುದ್ದಿಮನೆಗಳು ಬಿತ್ತಿದ ವಿಷಬೀಜಗಳು 2021ರಲ್ಲಿ ಮತ್ತೆ ಮೊಳಕೆಯೊಡೆಯಲು ಆರಂಭಿಸಿವೆ. ಪ್ರಜಾತಂತ್ರದ ನಾಲ್ಕನೆಯ ಸ್ತಂಭ ಕುಲಗೆಟ್ಟರೆ ಒಂದು ಪ್ರಜಾಪ್ರಭುತ್ವ ರಾಷ್ಟ್ರದ ಪರಿಸ್ಥಿತಿ ಏನಾಗಬಹುದು ಎನ್ನುವುದಕ್ಕೆ 2020 ಸಾಕ್ಷಿಯಾಗಿ ದಾಖಲಾಗಿಬಿಟ್ಟಿದೆ.

ಕೇಂದ್ರ ಸರ್ಕಾರ ಕೇವಲ ನಾಲ್ಕು ಗಂಟೆಗಳ ಅವಕಾಶ ನೀಡಿ, ಹಠಾತ್ತನೆ ಘೋಷಿಸಿದ ಲಾಕ್ ಡೌನ್ ಉಂಟುಮಾಡಿದ ಸಂಕಷ್ಟಗಳು ಈ ದೇಶದ ಕೋಟ್ಯಂತರ ಪ್ರಜೆಗಳನ್ನು ವಿನಾಶದ ಅಂಚಿಗೆ ಕೊಂಡೊಯ್ದಿತ್ತು. ವಿಶ್ವದಾದ್ಯಂತ ಖಂಡನೆಗೊಳಗಾಗುತ್ತಿದ್ದರೂ, ಆತ್ಮರತಿಯಲ್ಲಿ ಬೀಗುತ್ತಲೇ ಈ ನಿರ್ಧಾರವನ್ನು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರಕ್ಕೆ ಲಕ್ಷಾಂತರ ವಲಸೆ ಕಾರ್ಮಿಕರ ಸಂಕಷ್ಟಗಳು ಗಮನಕ್ಕೇ ಬರದೆ ಹೋದುದೂ 2020ರ ವಿಶೇಷ.

ಸಾವಿರಾರು ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಕ್ರಮಿಸಿದ ಕಾರ್ಮಿಕರ ಬಗ್ಗೆ ಕಣ್ಣೆತ್ತಿಯೂ ನೋಡದ ಒಂದು ನಿರ್ದಯಿ ಸರ್ಕಾರ ಈ ಪ್ರಕ್ರಿಯೆಯಲ್ಲಿ ಮಡಿದ ಕೆಲವೇ ಕಾರ್ಮಿಕರಿಗೆ ಪರಿಹಾರ ನೀಡಲೂ ನಿರಾಕರಿಸಿದ್ದು ಕ್ರೌರ್ಯದ ಪರಾಕಾಷ್ಠೆ. ಒಂದು ದೇಶದ ಅರ್ಥವ್ಯವಸ್ಥೆಯ ಸುಸ್ಥಿರತೆಗೆ ಒಂದು ಸಾಮಾಜಿಕ ಮತ್ತು ಮಾನವೀಯ ಆಯಾಮವೂ ಇದೆ ಎನ್ನುವ ಪ್ರಜ್ಞೆಯನ್ನೇ ಕಳೆದುಕೊಂಡಿರುವ ಸರ್ಕಾರಗಳು ನಮ್ಮನ್ನು ಆಳುತ್ತಿರುವುದನ್ನು ಕೋವಿದ್ 19 ಬಹಿರಂಗಪಡಿಸಿದೆ. ಆದಾಗ್ಯೂ ನಮ್ಮನ್ನು ಈ ಪಾಪಪ್ರಜ್ಞೆ ಕಾಡುತ್ತಿಲ್ಲ.

ಸಂವೇದನೆ ಮತ್ತು ಮನುಜ ಸೂಕ್ಷ್ಮತೆ ಇರುವ ಯಾವುದೇ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆ , ಯಾವುದೇ ಚುನಾಯಿತ ಸರ್ಕಾರ ಕೊರೋನಾ ಸೃಷ್ಟಿಸಿದ ದುರಂತಗಳ ನಡುವೆ ಜನವಿರೋಧಿ ಶಾಸನಗಳನ್ನು, ಮಸೂದೆಗಳನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ.

ಆದರೆ ಕೇಂದ್ರ ಸರ್ಕಾರ ಕೃಷಿ, ಕಾರ್ಮಿಕ, ಕೈಗಾರಿಕೆ, ಭೂಮಿ, ಶಿಕ್ಷಣ, ಸಾರ್ವಜನಿಕ ಉದ್ದಿಮೆ ಮತ್ತು ಅವಶ್ಯಕ ವಸ್ತುಗಳು ಹೀಗೆ ಜನಸಾಮಾನ್ಯರ ನಿತ್ಯ ಬದುಕನ್ನು ಬಾಧಿಸುವ ಎಲ್ಲ ಕ್ಷೇತ್ರಗಳಲ್ಲೂ ನೂತನ ಕಾನೂನು ತಿದ್ದುಪಡಿಗಳನ್ನು ಜಾರಿಗೊಳಿಸುವ ಮೂಲಕ ತನ್ನ ಬೌದ್ಧಿಕ ಕ್ರೌರ್ಯವನ್ನು ಮೆರೆದಿದೆ. ಇದು ಜಾಗತಿಕ ಇತಿಹಾಸದಲ್ಲೇ ಅಭೂತಪೂರ್ವ ಎನ್ನಬಹುದು.

ಕೊರೋನಾ ಸಂಬಂಧಿತ ನಿರ್ಬಂಧಗಳ ಪರಿಣಾಮ ಸಾರ್ವಭೌಮ ಪ್ರಜೆಗಳಿಗೆ ಮುಕ್ತ ಪ್ರತಿಭಟನೆಯ ಅವಕಾಶಗಳೇ ಇಲ್ಲದ ಸಂದರ್ಭದಲ್ಲಿ, ಜನರು ಒಂದೆಡೆ ಸೇರಲು ಹೇರಲಾಗಿದ್ದ ನಿರ್ಬಂಧಗಳ ನಡುವೆ, ಇದೇ ಪ್ರಜೆಗಳ ಬದುಕಿಗೆ ಮಾರಕವಾಗುವಂತಹ ಶಾಸನಗಳನ್ನು, ಮಸೂದೆಗಳನ್ನು, ಶಾಸನಸಭೆಗಳಲ್ಲಿ ಚರ್ಚೆಗೂ ಒಳಪಡಿಸದೆ, ಸುಗ್ರೀವಾಜ್ಞೆಗಳ ಮೂಲಕ ಜಾರಿಗೊಳಿಸಿರುವುದು ಸಂವಿಧಾನ ಮತ್ತು ಪ್ರಜಾತಂತ್ರ ವ್ಯವಸ್ಥೆಗೆ ಎಸಗಿದ ಅಪಚಾರ ಮಾತ್ರವೇ ಅಲ್ಲದೆ, ಜನದ್ರೋಹಿ ಧೋರಣೆಯೂ ಆಗಿದೆ. ಇದನ್ನು ಸಾಂವಿಧಾನಿಕ ಕ್ರೌರ್ಯ ಎನ್ನಬಹುದೇನೋ.

ಕೊರೋನಾ ದೇಶಾದ್ಯಂತ ವ್ಯಾಪಿಸುತ್ತಿದ್ದ ಸಂದರ್ಭದಲ್ಲೇ ಕನ್ನಡದ ಸುದ್ದಿಮನೆಗಳು ಬಿತ್ತರಿಸಿದ ಸುದ್ದಿಗಳು, ವಿಶ್ಲೇಷಣೆಗಳು, ಕೂಗುಮಾರಿ ನಿರೂಪಕರ ವರದಿಗಳು ರಾಜ್ಯದ ಮುಸ್ಲಿಂ ಸಮುದಾಯವನ್ನು ಅಪರಾಧಿಗಳ ಸ್ಥಾನದಲ್ಲಿ ನಿಲ್ಲಿಸಿದ್ದು ನಮ್ಮ ಪ್ರಜ್ಞೆಯನ್ನು ಆವರಿಸಿರುವ ಕ್ರೌರ್ಯದ ಮತ್ತೊಂದು ಆಯಾಮ.

ತಬ್ಲೀಗಿ ಜಮಾತ್ ವಿರುದ್ಧ ಈ ಸುದ್ದಿಮನೆಗಳು ನಡೆಸಿದ ಅಪಪ್ರಚಾರ ಮತ್ತು ಬೆಂಗಳೂರಿನ ಪಾದರಾಯನಪುರದ ಘಟನೆಗಳ ಸುತ್ತ ಹೆಣೆದ ಕಪೋಲಕಲ್ಪಿತ ಕಥನಗಳು ಸುದ್ದಿಮನೆಗಳನ್ನು ಸಂಪೂರ್ಣ ಬೆತ್ತಲೆಗೊಳಿಸಿದ್ದು ಸಹ 2020ರ ವಿಶೇಷ ಸಂಗತಿಗಳಲ್ಲೊಂದು. ಮೇಲೆ ಉಲ್ಲೇಖಿಸಿದ ಮಸೂದೆಗಳ ಬಗ್ಗೆ ಒಂದಕ್ಷರವನ್ನೂ ಆಡದೆ, ಕ್ಷುಲ್ಲಕ ವಿಚಾರಗಳ ಸುತ್ತ ಕ್ಷುದ್ರ ರಾಜಕಾರಣದಲ್ಲಿ ತೊಡಗುವ ಮೂಲಕ ಸುದ್ದಿಮನೆಗಳು ತಮ್ಮೊಳಗೆ ಅಂತರ್ಗತವಾಗಿದ್ದ ಕ್ರೌರ್ಯವನ್ನು ಹೊರಗೆಡಹಿದ್ದು 2020ರ ವೈಶಿಷ್ಟ್ಯ.

ಕೊರೋನಾ ಭಾರತದ ಜನಸಾಮಾನ್ಯರನ್ನು ಕಂಗೆಡಿಸಿತ್ತು ಆದರೆ ಧೃತಿಗೆಡಿಸಿರಲಿಲ್ಲ ಎನ್ನುವುದನ್ನು ವರ್ಷದ ಕೊನೆಯ ಕೆಲವು ಜನಾಂದೋಲನಗಳು ಸುಸ್ಪಷ್ಟವಾಗಿ ನಿರೂಪಿಸಿವೆ. ಕೋವಿದ್ 19 ನಡುವೆಯೇ ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೂರು ಕೃಷಿ ಮಸೂದೆಗಳು, ರೈತರ ಪಾಲಿಗೆ ಮರಣಶಾಸನವಾಗಿದ್ದು ಈ ಕಾಯ್ದೆಗಳನ್ನು ಹಿಂಪಡೆಯುವಂತೆ ಲಕ್ಷಾಂತರ ರೈತರು ರಾಜಧಾನಿ ದೆಹಲಿಯ ಸುತ್ತ ಪ್ರತಿಭಟನೆ ನಡೆಸುತ್ತಿದ್ದಾರೆ.

43 ದಿನಗಳ ನಂತರವೂ ಮುಷ್ಕರ ಕಿಂಚಿತ್ತೂ ವಿಚಲಿತವಾಗದೆ, ಸರ್ಕಾರದ ಚಿತ್ರಹಿಂಸೆ, ಕಿರುಕುಳ, ದೌರ್ಜನ್ಯ, ಬೌದ್ಧಿಕ ದಾಳಿ ಮತ್ತು ಪೊಲೀಸರ ಆಕ್ರಮಣವನ್ನು ಎದುರಿಸಿ ಹೋರಾಟ ಮುಂದುವರೆಸಿರುವ ರೈತಾಪಿಗೆ ಭಾರತದ ಕಾರ್ಮಿಕ ವರ್ಗಗಳು, ಪ್ರಜ್ಞಾವಂತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇದರೊಂದಿಗೆ ನವಂಬರ್ 26ರ ರಾಷ್ಟ್ರವ್ಯಾಪಿ ಕಾರ್ಮಿಕರ ಮುಷ್ಕರ ಭಾರತದ ಶ್ರಮಜೀವಿಗಳಲ್ಲಿ ಒಂದು ಭರವಸೆಯನ್ನು ಮೂಡಿಸಿದೆ. ಇದು 2020ರಲ್ಲಿ ಕಂಡುಬಂದ ಏಕೈಕ ಆಶಾಕಿರಣ ಎನ್ನಬಹುದು.

ಆದರೆ ಈ ಕಿರಣಗಳ ನಡುವೆಯೇ ಪ್ರಭುತ್ವದ ಕ್ರೌರ್ಯದ ದರ್ಶನವೂ ಆಗಿದೆ. ತೀವ್ರವಾದ ಚಳಿ ಮತ್ತು ಹಠಾತ್ ಮಳೆಯ ನಡುವೆಯೂ ಮುಷ್ಕರದಲ್ಲಿ ತೊಡಗಿರುವ ರೈತರ ಮೇಲೆ ಅಶ್ರುವಾಯು , ಜಲಫಿರಂಗಿ, ಲಾಠಿ ಪ್ರಹಾರ ಹೀಗೆ ಹಲವು ಆಡಳಿತಾತ್ಮಕ ಕ್ರೌರ್ಯದ ಸಾಧನಗಳನ್ನು ಬಳಸುವ ಮೂಲಕ ಭಾರತದ ಪ್ರಭುತ್ವ ತನ್ನೊಳಗಿನ ಕಿರಾತಕ ಪ್ರವೃತ್ತಿಯನ್ನು ಪ್ರದರ್ಶಿಸಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಈ ಪ್ರಮಾಣದ ಜನಾಂದೋಲನವನ್ನು ಕಂಡಿರಲಿಲ್ಲ ಎನ್ನುವಂತೆಯೇ, 73 ವರ್ಷಗಳ ಆಳ್ವಿಕೆಯಲ್ಲಿ ಈ ಪ್ರಮಾಣದ ಪ್ರಭುತ್ವ ಕ್ರೌರ್ಯವನ್ನೂ ಕಂಡಿರಲಿಲ್ಲ ಎನ್ನುವುದೂ ಅಷ್ಟೇ ಸತ್ಯ. ಮುಷ್ಕರ ನಿರತ ರೈತರಲ್ಲಿ 60 ಜನರು ಸಾವಿಗೀಡಾಗಿದ್ದರೂ ಒಂದೇ ಒಂದು ಅನುಕಂಪದ ಮಾತನಾಡದ ಪ್ರಧಾನಮಂತ್ರಿ ಅಥವಾ ಕೇಂದ್ರ ಸಚಿವರು, ರಾಜಕೀಯ ಪಕ್ಷಗಳು, ಹಿರಿಯ ರಾಜಕೀಯ ನಾಯಕರು ಈ ಕ್ರೌರ್ಯದ ಚಿಗುರಿಗೆ ನೀರೆರೆಯುತ್ತಿರುವಂತೆ ತೋರುತ್ತಿದೆ. ಮಸೂದೆಗಳನ್ನು ಹಿಂಪಡೆಯುವುದು ಆಡಳಿತಾತ್ಮಕ ನಿರ್ಧಾರ ಆದರೆ ಸತ್ತವರಿಗೆ ಅನುಕಂಪ ತೋರುವುದು ವ್ಯಕ್ತಿಗತ ಸಂವೇದನೆಯ ದ್ಯೋತಕ. ಇಷ್ಟು ವ್ಯತ್ಯಾಸವನ್ನಾದರೂ ಅಧಿಕಾರದಲ್ಲಿರುವವರು ಅರಿತಿರಬೇಕಲ್ಲವೇ ?

ಹಲವು ದುರಂತಗಳು, ಲಕ್ಷಾಂತರ ಸಾವುಗಳು, ಹಥ್ರಾಸ್ ನಂತಹ ಅಮಾನುಷ ಘಟನೆ, ಆಡಳಿತ ವ್ಯವಸ್ಥೆಯ ಸಂಪೂರ್ಣ ನಿಷ್ಕ್ರಿಯತೆ, ಆಳುವವರ ನಿರ್ವೀರ್ಯತೆ, ನಿರ್ದಯಿ ಪ್ರಭುತ್ವ, ಆರೋಗ್ಯ ಕ್ಷೇತ್ರದ ದುರವಸ್ಥೆ, ರಾಜಕೀಯ ಪಕ್ಷಗಳ ನಿರ್ಲಜ್ಜ ಮೌನ ಮತ್ತು ಸುದ್ದಿಮನೆಗಳ ಬೆತ್ತಲೆ ನರ್ತನ ಇವೆಲ್ಲದರ ನಡುವೆ 2020 ಹಲವು ಕರಾಳ ನೆನಪುಗಳನ್ನು ಬಿಟ್ಟು ಮರೆಯಾಗಿದೆ. 2021ರಲ್ಲಿ ಇವೆಲ್ಲವನ್ನೂ ನಿವಾರಿಸಿ ಮುನ್ನಡೆಯಬೇಕಾದ ಹೊಣೆಗಾರಿಕೆ ನಾಗರಿಕ ಸಮಾಜದ ಮೇಲಿದೆ. ನಮ್ಮೊಳಗಿನ ನಾಗರಿಕ ಪ್ರಜ್ಞೆ ಜಾಗೃತವಾಗಬೇಕಷ್ಟೇ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ

Published

on

ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.

ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್.‌ ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್‌. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.

ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.

ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.

ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ

Published

on

ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್‌ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್‌ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್‌ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್‌ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್‌, ಚೇತನ್‌ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.

ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್‌ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್‌ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್‌ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.

ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending