Connect with us

ದಿನದ ಸುದ್ದಿ

ಕೊರೋನಾ ನೋಡುವುದು ಜಾತಿ – ಧರ್ಮವನ್ನಲ್ಲ, ಬದಲಿಗೆ..!?

Published

on

ರಡನೇ ಮಹಾ ಯುದ್ಧದ ಬಗ್ಗೆ ನಾವೆಲ್ಲಾ ಸಾಕಷ್ಟು ವಿಚಾರಗಳನ್ನು ತಿಳಿದಿದ್ದೇವೆ. ವಿಶ್ವ ಕಂಡ ಘನಘೋರವಾದ ಆ ಯುದ್ಧದ ಸನ್ನಿವೇಶದಲ್ಲಿ ಇಡೀ ಜಗತ್ತು ತಲ್ಲಣಗೊಂಡಿತ್ತು. ಜಗತ್ತಿನ ಸಾರ್ವಭೌಮತ್ವಕ್ಕಾಗಿ ಒಂದೆಡೆ ಅಮೆರಿಕಾ ಮತ್ತೊಂದೆಡೆ ರಷ್ಯಾ ಪರಸ್ಪರ ಬಣಗಳನ್ನು ರಚಿಸಿಕೊಂಡ ಬಳಿಕ ಬಿಗಡಾಯಿಸಿದ ಯುದ್ಧದ ಪರಿಸ್ಥಿತಿ, ಬಲಿ ತೆಗೆದುಕೊಂಡ ಜೀವಗಳ ಸಂಖ್ಯೆ ಅಸಂಖ್ಯಾತ. ದೃಷ್ಟಿ ಹಾಯಿಸಿದಷ್ಟೂ ಹೆಣಗಳ ರಾಶಿ, ಗಾಯಾಳುಗಳ ಚೀರಾಟ, ಆರ್ತನಾದ. ಎಲ್ಲೆಲ್ಲೂ ಸ್ಮಶಾನ ಸದೃಶ ವಾತಾವರಣ. ಪ್ರಸ್ತುತ ಜಗತ್ತಿನಲ್ಲೂ ಯುದ್ಧವೊಂದು ನಡೆಯುತ್ತಿದೆ.

ಹಾಲಿ ಬಂದು ವಕ್ಕರಿಸಿರುವ ಕೊರೋನಾ ಎಂಬ ಪೀಡೆ ಅಘೋಷಿತ ಹಾಗೂ ಶಸ್ತ್ರರಹಿತ ಮೂರನೇ ಮಹಾ ಯುದ್ಧದ ವಾತಾವರಣವನ್ನು ನಿರ್ಮಿಸಿದೆ. ಗಡಿಗಳಿಗಾಗಿ, ಶಸ್ತ್ರಾಸ್ತ್ರಗಳಿಗಾಗಿ, ದೊಡ್ಡ ದೊಡ್ಡ ಭೂಪಟಗಳಿಗಾಗಿ ಹೋರಾಡಿದ ರಾಷ್ಟ್ರಗಳಾದಿಯಾಗಿ ಇಂದು ಇಡೀ ಜಗತ್ತೇ ಒಂದು ಬಣ, ಇದರ ವಿರೋಧಿ ಬಣವೇ ಕೊರೋನಾ ಎಂಬ ಮಹಾಮಾರಿ ಮತ್ತು ಸಂಹಾರಿ ವೈರಸ್. ಹೀಗೆ ತನ್ನ ಶಕ್ತಿ, ಪರಾಕ್ರಮಗಳನ್ನು ತೋರಿಸಲು ಹೊರಟಿದ್ದ ರಾಷ್ಟ್ರಗಳೆಲ್ಲ ಇಂದು ಸಂಪೂರ್ಣ ಸ್ತಬ್ಧವಾಗಿವೆ.

ಇಡೀ ವಿಶ್ವವನ್ನೇ ಕ್ಷಣ ಮಾತ್ರದಲ್ಲಿ ಬಲಿ ತೆಗೆದುಕೊಳ್ಳುವ ಶಸ್ತ್ರಗಳು, ಪರಮಾಣು ಬಾಂಬ್‍ಗಳು ಬದಿಗಿರಲಿ, ಪ್ರಾಣ ಉಳಿಸಿಕೊಳ್ಳಲು ಅಗತ್ಯವಾದ ಕನಿಷ್ಠ ಆಕ್ಸಿಜನ್ ಮಾಸ್ಕ್‍ಗಳನ್ನೂ ಸಹ ಸಜ್ಜುಗೊಳಿಸಲಾಗದೆ ಕೆಲವು ರಾಷ್ಟ್ರಗಳು ಇಂದು ನಲುಗುತ್ತಿವೆ. ಹೀಗೆ ಅತ್ಯಂತ ವೇಗವಾಗಿ ರಣಕೇಕೆ ಹಾಕುತ್ತಾ ದಾಂಗುಡಿ ಇಡುತ್ತಿರುವ ಕೊರೋನಾದ ಭೀಕರತೆಯನ್ನ ನೋಡಿದಾಗ ಮನುಷ್ಯನ ಜೀವನ ನೀರಿನ ಮೇಲೆ ಗುಳ್ಳೆಯಂತೆ ಎಂಬ ಮಾತು ಸತ್ಯವೆನಿಸುತ್ತಿದೆ.

ಇಂದೂ – ಅಂದೂ ಅಲಿಪ್ತ ನೀತಿ

ಮಹಾ ಯುದ್ಧದ ನಂತರ ಜರುಗಿದ ಶೀತಲ ಯುದ್ಧದ ಸಂದರ್ಭದಲ್ಲಿ ಜಗತ್ತಿನಲ್ಲಿ ಮತ್ತದೇ ಬಣಗಳ ಗೋಳು. ಆಗ ತಾನೇ ಸ್ವತಂತ್ರ್ಯ ಪಡೆದುಕೊಂಡಿದ್ದ ನಮ್ಮ ದೇಶ ಅಂತಹ ಸಂದರ್ಭದಲ್ಲಿ ಜಗತ್ತಿನೊಂದಿಗೆ ವ್ಯವಹರಿಸಲು ಬಳಸಿದ ದಾಳವೇ ಈ ಅಲಿಪ್ತ ನೀತಿ. ಶಾಂತಿಪ್ರಿಯರಾದ ಭಾರತೀಯರು, ಅಂದು ಯಾವುದೇ ಯುದ್ಧೋತ್ಸಾಹಿಗಳ ಗುಂಪು ಸೇರದೇ, ಬದಲಾದ ಸನ್ನಿವೇಶದಲ್ಲಿ ಅವರಿಂದ ಅನೇಕ ಪ್ರಯೋಜನಗಳನ್ನು ಪಡೆದಿದ್ದು ನಿಜ. ಕೊರೋನಾ ಸಮರದ ಸನ್ನಿವೇಶದಲ್ಲಿ ಭಾರತದ ಹೆಜ್ಜೆ ಇಂದು ಅದೇ ಆಗಿದೆ.

ವಿಪರ್ಯಾಸವೆಂಬಂತೆ ನಮ್ಮ ಸಂಶೋಧನೆಯಿಂದಾದ ಅನೇಕ ಜೀವ ರಕ್ಷಕ ಔಷಧಿಗಳಿಗಾಗಿ ಇಂದು ಆರ್ಥಿಕವಾಗಿ ಅತ್ಯಂತ ಬಲಿಷ್ಠವಾಗಿರುವ ರಾಷ್ಟ್ರಗಳೆಲ್ಲಾ ದುಂಬಾಲು ಬಿದ್ದಿವೆ. ಭಾರತ ಮಾತ್ರ ಇಂದಿಗೂ ಏಕಾಂಗಿಯಾಗಿಯೇ ಕೊರೋನಾ ವಿರುದ್ಧ ತೊಡೆ ತಟ್ಟಿದೆ. ಅಲ್ಲದೇ ಅನೇಕ ರಾಷ್ಟ್ರಗಳ ಕೈಯನ್ನೂ ಹಿಡಿಯುತ್ತಿದೆ. ಬದುಕು, ಬದುಕಲು ಬಿಡು ಎಂಬಂತೆ ಈ ಔದಾರ್ಯವಂತ ರಾಷ್ಟ್ರದ ಗುಣ ಇದೀಗ ಮತ್ತೊಮ್ಮೆ ಸಾಬೀತಾಗಿದೆ.

ರೇಸ್‍ನಲ್ಲಿ ಗೆಲುವು ಯಾರಿಗೆ?

ಕೆಲವು ದಿನಗಳ ಹಿಂದೆ ಇಡೀ ಮನುಕುಲವೇ ಕಾಲಿಗೆ ಚಕ್ರಕಟ್ಟಿಕೊಂಡಂತೆ ಕಾಲದ ಪರಿವೇ ಇಲ್ಲದೆ ಅದೆಲ್ಲಿಗೆ ರೇಸ್ ಓಡುತ್ತಿತ್ತೋ ತಿಳಿಯದು. ಇದೀಗ ಕೊರೋನಾ ಆ ಚಕ್ರಕ್ಕೊಂದು ಬ್ರೇಕ್ ಹಾಕಿದೆ. ಬೆಳ್ಳಂಬೆಳಗ್ಗೆಯೇ ಕಿವಿಗಡಚಿಕ್ಕುವ ಕಾರ್ಖಾನೆಗಳ ಸದ್ದು, ಇನ್ನೊಂದೆಡೆ ಜೀವನ ಕಟ್ಟಿಕೊಳ್ಳಲು ಹೊರಟ ಕೋಟ್ಯಾಂತರ ಮಂದಿಯ ವಾಹನಗಳ ದಂಡು, ಅಲ್ಲಲ್ಲಿ ಸಾತ್ವಿಕರು, ಆಸ್ತಿಕರು, ಒಂದಷ್ಟು ಸಮಾಜಮುಖೀ ಚಿಂತನೆಯುಳ್ಳವರ ಸಮೂಹ, ಮಗದೊಮ್ಮೆ ಸಂಪತ್ತಿನ ಶೇಖರಣೆಯ ಹಪಹಪಿಗೆ ಬಿದ್ದ ಸ್ವಾರ್ಥಿಗಳ ಹಿಂಡು, ಮಗ್ಗುಲಿಗೆ ಹೊರಳಿದರೆ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ, ದಗಲ್ಬಾಜಿ, ಭೂಗತ ಲೋಕ, ಪಾಪಿಗಳ ಕೂಪ.

ಅಬ್ಬಬ್ಬಾ ! ಇದಾಗಿತ್ತಾ ಜಗತ್ತಿನ ಓಟ? ಆದರೀಗ ಇದನ್ನೆಲ್ಲಾ ಹಿಂದಿಕ್ಕಿ ಆರ್ಭಟಿಸುತ್ತಾ, ಕೇಕೇ ಹಾಕುತ್ತಾ ನಾಗಾಲೋಟದಿಂದ ಓಡುತ್ತಿರುವುದು ಕೊರೋನಾ ಮಾತ್ರ ! ಈ ರನ್ನಿಂಗ್ ರೇಸ್ ನಿಜಕ್ಕೂ ಭೀಕರ ಹಾಗೂ ಆಘಾತಕಾರಿ. ಸ್ನೇಹ, ಸಂಬಂಧಗಳ ಮೌಲ್ಯವನ್ನು ಮರೆತು ಸಾಗುತ್ತಿದ್ದ ಯಂತ್ರ ‘ಮಾನವ’ರಂತಹ ಜೀವಿಗಳ ಜೀವ ಹಿಂಡಲು ಬಂದಿರುವ ಈ ಸಾವಿನ ಓಟದಲ್ಲಿ ಸದ್ಯಕ್ಕಂತೂ ಗೆಲುವು ಸಾಧಿಸುತ್ತಿರುವುದು ಕೊರೋನಾ ಮಾತ್ರ ಎಂಬುದು ಕಟು ಸತ್ಯ. ಹೀಗೂ ಪಂದ್ಯ ಗೆಲ್ಲಬಹುದೆಂದು ತಿಳಿಸುತ್ತಿದೆ ಈ ನಂಜು. “ಮಾನವ ಜನ್ಮ ಬಹು ದೊಡ್ಡದು, ಅದನ್ನು ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರಾ” ಎಂದು ಇದಕ್ಕೇ ಹೇಳಿರುವುದು ದಾಸ ಶ್ರೇಷ್ಠರು.

ಶಸ್ತ್ರಾಸ್ತ್ರಗಳಿಗಿಂತ ಔಷಧಿಯೇ ಮುಖ್ಯವಾಗಿದೆ

ಅಮೆರಿಕಾದ ಮಾಜಿ ಅಧ್ಯಕ್ಷರಾದ ಐಸನ್ ಹೋವರ್ ಶಸ್ತ್ರಾಸ್ತ್ರ ಪೈಪೋಟಿಯನ್ನು ಕುರಿತು ಹೀಗೆ ವ್ಯಾಖ್ಯಾನಿಸುತ್ತಾರೆ “ಈ ಜಗತ್ತು ಶಸ್ತ್ರಾಸ್ತ್ರಗಳ ತಯಾರಿಕೆಗೆ ಸುರಿಯುತ್ತಿರುವ ಭಾರೀ ಪ್ರಮಾಣದ ಹಣ ಮೇಧಾವಿ ವಿಜ್ಞಾನಿಗಳ ಜ್ಞಾನವನ್ನು, ಮಕ್ಕಳ ಸುಂದರ ಭವಿಷ್ಯದ ಕನಸನ್ನು, ಕಾರ್ಮಿಕರ ಶ್ರಮವನ್ನು ಪೋಲು ಮಾಡುತ್ತಿದೆ”. ಪ್ರಸ್ತುತ ಜಗತ್ತಿನ ಪರಿಸ್ಥಿತಿ ನೋಡಿದರೆ ಇದು ನಿಜವೆನಿಸುತ್ತದೆ. ಇದೀಗ ಜಗತ್ತಿನೆಲ್ಲೆಡೆ ಜೀವ ರಕ್ಷಕ ಔಷಧಿಗಳ ತೀವ್ರ ಕೊರತೆ ಎದುರಾಗಿದೆ. ದೇಶಗಳು ತಮ್ಮ ರಕ್ಷಣೆಯ ವಿಚಾರ ಬಂದಾಗ ಕೆಲವು ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ನಿಜ.

ಆದರೆ ಅವು ಗುಣಾತ್ಮಕ ಮತ್ತು ಪ್ರಮಾಣಾತ್ಮಕವಾಗಿರಬೇಕಷ್ಟೆ. ಹೀಗಾಗಿ ಇಂದು ಜಗತ್ತಿನೆಲ್ಲೆಡೆ ಶಸ್ತ್ರಾಸ್ತ್ರಗಳಿಗಿಂತ ತುರ್ತಾಗಿ ಅಗತ್ಯವಿರುವ ಔಷಧಿಗಳನ್ನ ಅಭಿವೃದ್ಧಿಪಡಿಸುವ ಹೊಣೆ ಕೇಳಿಬರುತ್ತಿದೆ. ಹಾಲಿ ಜಗತ್ತಿನಲ್ಲಿ ಕೊರೋನಾ ವೈರಸ್‍ಗಿಂತ ದೊಡ್ಡ ಅಸ್ತ್ರ ಯಾವುದೂ ಇಲ್ಲವೆನ್ನುವಂತಾಗಿದೆ. ಸಮಸ್ತ ವಿಶ್ವದಲ್ಲಿಂದು ಕೊರೋನಾ ಯುದ್ಧ ಮಾಡುತ್ತಿದೆ. ಈ ಯುದ್ಧ ಗೆಲ್ಲಲು ಬೇಕಿರುವುದು ಭಾರೀ ಅನಾಹುತ ಸೃಷ್ಟಿಸಬಲ್ಲ ಪರಮಾಣು ಬಾಂಬ್ ಅಥವಾ ಕಿಲೋಮೀಟರ್‍ಗಟ್ಟಲೆ ಚಿಮ್ಮುವ ಕ್ಷಿಪಣಿಗಳಲ್ಲ. ಬದಲಿಗೆ ಜೀವ ರಕ್ಷಕ ಔಷಧಗಳು, ಶಸ್ತ್ರ ಹಿಡಿದು ಹೋರಾಡುವ ಸೈನಿಕರಲ್ಲ; ಪ್ರಾಣ ಉಳಿಸಬಲ್ಲ ವೈದ್ಯ ಸಮೂಹ.

ಇತಿಹಾಸ ಮರುಕಳಿಸುತ್ತಿದೆ

ನಮ್ಮ ಹಿಂದೂಸ್ಥಾನದ ಅವಿಭಾಜ್ಯದ ಅಂಗಗಳಾದ ವೇದೋಪನಿಷತ್ತುಗಳ ಬಗ್ಗೆ ನಮಗೆಲ್ಲಾ ತಿಳಿದೇ ಇದೆ. ವೇದಗಳ ಕಾಲದ ಜನರು ಅತ್ಯಂತ ಸಾತ್ವಿಕರು, ದೈವ ಭಕ್ತಿಯುಳ್ಳವರು, ಪರಸ್ಪರ ಸಹಕಾರ ಮನೋಭಾವ ಉಳ್ಳವರೂ ಆಗಿದ್ದರು. ಅಂದಿನ ಅವರ ಜೀವನ ಪದ್ಧತಿ, ವಿದ್ಯಾಭ್ಯಾಸ, ಧಾರ್ಮಿಕ ಆಚರಣೆಗಳು, ಸ್ನಾನ, ಮಡಿ, ಮೈಲಿಗೆ, ಸಂಪ್ರದಾಯಗಳು, ಪುಷ್ಟಿ ಕೊಡುತ್ತಿದ್ದ ಆಹಾರ ಪದ್ಧತಿ, ವಿಹಾರ ಎಲ್ಲವೂ ವಿಶಿಷ್ಟ ಹಾಗೂ ವಿಭಿನ್ನ. ನಮಗೆ ಅರಿವಿದ್ದಂತೆ ಅವರೆಲ್ಲಾ ನಿಸರ್ಗದ ಆರಾಧಕರಾಗಿದ್ದರು.

ಜೀವ ಜಗತ್ತು ತತ್ತರಿಸುವ ಹೋಗಿರುವ ಸದರಿ ಕೊರೊನಾ ಕಾಲದಲ್ಲಿ ಜನತೆಗೆ ಇಂದು ಎಲ್ಲಿಲ್ಲದ ದೈವ ಭಕ್ತಿ, ಶುಚಿತ್ವದ ಅರಿವು, ದೇಸೀ ಆಹಾರದತ್ತ ಆಸಕ್ತಿ, ಹೀಗೆ ನಾನ ಬಗೆಯ ಪರಿಕಲ್ಪನೆಗಳತ್ತ ಮನಸ್ಸು ಹಾಯುತ್ತಿದೆ. ದುರದೃಷ್ಟವಶಾತ್ ಇಂತಹ ಯೋಚನೆ ಹಾಗೂ ಯೋಜನೆಗಳು ಎಂದೋ ಬರಬೇಕಿತ್ತಷ್ಟೇ. ಇತಿಹಾಸ ಮರುಕಳಿಸುತ್ತದೆ ಎಂಬ ಪ್ರಸಿದ್ಧ ಹೇಳಿಕೆಗೆ ಇಂದು ಜೀವ ಬಂದಂತಾಗಿದೆ. ಜೀವನ ಶೈಲಿಯ ಬಗ್ಗೆ ಇರಬೇಕಾದ ಕಿಂಚಿತ್ ಪ್ರಜ್ಞೆಯನ್ನೂ ಮರೆತಿದ್ದ ಮನುಷ್ಯರಿಗಿಂದು ಕೊರೋನಾ ಒಂದು ಪಾಠ ಕಲಿಸುತ್ತಿರುವುದಂತೂ ಸತ್ಯ.

ಕೊರೋನಾ ಒಂದೆಡೆ ತನ್ನ ಸಾವಿನ ಗಂಟೆಯನ್ನು ಬಾರಿಸುತ್ತಲೇ ಸಾಗುತ್ತಿದೆ ಮತ್ತೊಂದೆಡೆ ಜಂಕ್ ಫುಡ್‍ಗಳ ಮೊರೆ ಹೋಗಿ ಸಣ್ಣ ವಯಸ್ಸಿನಲ್ಲೇ ಇಹಲೋಕ ಯಾತ್ರೆ ಮಾಡುತ್ತಿದ್ದ ಅನೇಕ ಜನರ ಪ್ರಾಣವನ್ನೂ ಉಳಿಸುತ್ತಿದೆ. ಒಂದರ್ಥದಲ್ಲಿ ಕೊರೋನಾ ಅತ್ಯಂತ ಕ್ರೂರಿಯೂ ಹೌದು, ಅದರ ವಿರುದ್ಧ ಹೋಗದವರಿಗೆ ಪರೋಕ್ಷವಾಗಿ ರಕ್ಷಕನೂ ಹೌದು !

ಸಮರ ಸೇನಾನಿಗಳಿಗೊಂದು ಸೆಲ್ಯೂಟ್

ಜಗತ್ತನ್ನು ಕಿತ್ತು ತಿನ್ನುತ್ತಿರುವ ಕೊರೋನಾ ವೈರಸ್ಸನ್ನು ಬಡಿದೋಡಿಸುವಲ್ಲಿ ಶ್ರಮಿಸುತ್ತಿರುವ ವೈದ್ಯರು, ರಕ್ಷಣೆಗೆ ನಿಂತಿರುವ ಪೊಲೀಸರು ಮತ್ತು ಇಡೀ ಜಗತ್ತಿಗೆ ಅನ್ನವನಿಕ್ಕುತ್ತಿರುವ ನಮ್ಮ ಅನ್ನದಾತರ ಪಾತ್ರ ಅತ್ಯಂತ ಶ್ಲಾಘನೀಯ. ಒಂದಡೆ ತಮ್ಮ ಜೀವ ಹಾಗೂ ಜೀವನವನ್ನೇ ಪಣಕ್ಕಿಟ್ಟು ಕೋಟ್ಯಾಂತರ ಸೋಂಕಿತರನ್ನು ಶುಶ್ರೂಷೆ ಮಾಡುತ್ತಿರುವ ವೈದ್ಯ ಸಮೂಹ, ಇನ್ನೊಂದೆಡೆ ಹಗಲಿರುಳೆನ್ನದೆ ಸೋಂಕು ತಗಲುದಂತೆ ಇಡೀ ಜಗತ್ತನ್ನೇ ನಿಯಂತ್ರಿಸುತ್ತಿರುವ ಪೊಲೀಸ್ ಸಮೂಹ, ಮಗದೊಂದೆಡೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ನಿಸ್ವಾರ್ಥವಾಗಿ ಇಡೀ ಜಗಕ್ಕೇ ಅನ್ನವನಿಕ್ಕುತ್ತಿರುವ ರೈತ ಬಾಂಧವರನ್ನು ಈ ಭೂ ಖಂಡ ಎಂದಿಗೂ ಮರೆಯುವಂತಿಲ್ಲ.

ತಲ್ಲಣಗೊಂಡಿರುವ ಜಗತ್ತಿಗೆ ನಿಜಕ್ಕೂ
ಮಾತೃವಿನಂತೆ ಸಾಂತ್ವನ ಹೇಳುತ್ತಿದೆ ಈ ಸಮುದಾಯ. ವೈದ್ಯ ತಂದೆ ತಾಯಿಯನ್ನೂ ಮುಟ್ಟದೆ ರೋಧಿಸುತ್ತಿರುವ ಪುಟಾಣಿಗಳ ಕರುಳು ಹಿಂಡುವ ದೃಶ್ಯ, ಮನೆ ಮಠ ಎಲ್ಲವನ್ನೂ ಮರೆತು, ಕೊನೆಗೆ ತಮ್ಮ ರಕ್ಷಣೆಯ ಬಗ್ಗೆಯೂ ಚಿಂತಿಸದೆ ಎಡಬಿಡದೆ ದುಡಿಯುತ್ತಿರುವ ಪೊಲೀಸರ ಕಾರ್ಯ ನಿಜಕ್ಕೂ ಸ್ತುತ್ಯಾರ್ಹ. ಒಂದು ವೇಳೆ ವೈದ್ಯರೇನಾದರೂ ಸುಮ್ಮನಾದರೆ ಮಣ್ಣು ಸೇರಬೇಕಾಗುತ್ತದೆ, ಹಾಗೆಯೇ ನಮ್ಮೆಲ್ಲರ ಅನ್ನದಾತ ಕೈ ಚೆಲ್ಲಿ ಕುಳಿತರೆ ಮಣ್ಣು ತಿನ್ನಬೇಕಾಗುತ್ತದೆ.

ಇವರೊಟ್ಟಿಗೆ ಕೊರೋನಾ ನಿರ್ಮೂಲನಕ್ಕಾಗಿ ಸೆಣಸಾಡುತ್ತಿರುವ ಅನೇಕ ದಾದಿಯರು, ಆರೋಗ್ಯ ಕಾರ್ಯಕರ್ತರು, ಸಫಾಯಿ ಕರ್ಮಚಾರಿಗಳು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಜ ಸೇವೆಗೈಯುತ್ತಿರುವ ಸಮಾಜ ಸೇವಕರು, ಚಾಲಕರು ಇನ್ನಿತರರಿಗೂ ಈ ಮೂಲಕ ಗೌರವವನ್ನು ಸಲ್ಲಿಸೋಣ.ಸಂಪೂರ್ಣ ಜಗತ್ತಿಗೇ ಕೊರೊನಾ ಬೀಗ ಹಾಕಿರುವ ಈ ಸಂದರ್ಭದಲ್ಲಿ ನಾವು ಇಂದು ನಿಜಕ್ಕೂ ಇವರನ್ನೆಲ್ಲಾ ದೇವರಿಗಿಂತಲೂ ಮಿಗಿಲಾಗಿ ಆರಾಧಿಸಬೇಕಿದೆ ಮತ್ತು ಅವರ ವೃತ್ತಿಗಳನ್ನು ಮರ್ಯಾದಿಸಬೇಕಿದೆ.

ಇನ್ನೂ ಕಲಿಯಬೇಕಿದೆ ಜಾತ್ಯಾತೀತ ಹಾಗೂ ಧರ್ಮಾತೀತ ಪಾಠ

ಶತಮಾನಗಳ ಹಿಂದೆಯೇ ನಮ್ಮ ಈ ಜಗತ್ತು ಕಂಡ ಮಹಾನ್ ದಾರ್ಶನಿಕರಾದ ಆಚಾರ್ಯ ಸಮುದಾಯ, ಬುದ್ಧ, ಬಸವಣ್ಣ, ಮಹಾವೀರ, ಅಂಬೇಡ್ಕರ್ ಹಾಗೂ ಅನೇಕ ದಾಸವರೇಣ್ಯರು ವಿವಿಧ ಬಗೆಯ ಸಮಾನತೆಯ ಬಗ್ಗೆ ಮಾತನಾಡಿದ್ದರು. ಇವರಲ್ಲದೆ ಅನೇಕ ಕವಿಗಳು, ಬುದ್ಧಿಜೀವಿಗಳು, ಸಮಾಜ ಸುಧಾರಕರು, ಸಂವಿಧಾನಗಳು, ಸರ್ಕಾರಗಳು ಇದನ್ನೇ ಸಾರಿ ಹೇಳಿರುವುದು ಅತಿಶಯೋಕ್ತಿಯೇನಲ್ಲ. ಆದರೆ ಮನುಷ್ಯ ಜೀವಿ ಇದನ್ನೆಲ್ಲಾ ಮರೆತು ತನ್ನದೇ ಆದ ಹಮ್ಮು-ಬಿಮ್ಮುಗಳೊಂದಿಗೆ ಸಾಗುತ್ತಿದ್ದ.

ಕುಲಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲಯನೇನಾದರು ಬಲ್ಲಿರಾ? ಎಂಬ ದಾಸ ವಾಣಿಯನ್ನು ಮರೆತು ಸಾಗುತ್ತಿದ್ದ. ಆದರೆ ಈಗ ಆರ್ಭಟಿಸುತ್ತಿರುವ ಕೊರೋನಾ ಪೀಡೆಗೆ ಜಾತಿ, ಮತ, ಧರ್ಮ ಯಾವುದೂ ಲೆಕ್ಕಕ್ಕಿಲ್ಲ. ಅದರ ಉದ್ದೇಶ ಅತ್ಯಂತ ಕ್ರೂರವಾದ ಬಲಿಯಷ್ಟೇ. ಅಂತಹ ಅನಪೇಕ್ಷಿತ ಮತ್ತು ದುರಂತಕಾರಿ ತತ್ವಗಳನ್ನು ಬದಿಗಿಟ್ಟು ಇಂದು ಎಲ್ಲರೂ ಸೇರಿ ಕೊರೋನಾ ವಿರುದ್ಧದ ಯುದ್ಧದಲ್ಲಿ ಕೆಚ್ಚೆದೆಯಿಂದ ಹೋರಾಡಬೇಕಿದೆ. ನೆನಪಿರಲಿ, ಕೊರೋನಾ ನೋಡುವುದು ಜಾತಿ ಅಥವಾ ಧರ್ಮವನ್ನಲ್ಲ, ಬದಲಿಗೆ ಮನುಷ್ಯನ ಚರ್ಮ !! ಸೋಂಕಿತರ ಸ್ಪರ್ಶವಾಯಿತೆಂದರೆ ಸಾಕು, ಆಯಸ್ಸು ಅಡ್ಡಗೋಡೆಯ ಮೇಲೆ ದೀಪವಿಟ್ಟಂತಾಗುತ್ತದೆ.

ಈಗಲಾದರೂ ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿಕ ಜೈನರುದ್ಯಾನ ಎಂಬ ಕುವೆಂಪುರವರ ಗೀತೆಯ ಸಾರವನ್ನು ತಿಳಿಯಬೇಕಿದೆ ಹಾಗೂ ಅದೇ ಹಾದಿಯಲ್ಲಿ ಅರಿತು ನಡೆಯಬೇಕಿದೆ. ಎಲ್ಲೆಡೆ ಇಂದು ಇದೇ ದನಿ ಮಾರ್ದನಿಗೊಳ್ಳಬೇಕಿದೆ. ಜೀವ ಉಳಿಸಲು ಹೊರಟಿರುವ ವೈದ್ಯರು, ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತೆಯರ ಮೇಲಿನ ದೌರ್ಜನ್ಯಗಳು ನಿಲ್ಲಬೇಕಿದೆ. ಅಂತಹ ವಿಚ್ಛಿದ್ರಕಾರಿ ಗುಂಪುಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಲೂ ಬೇಕಿದೆ. ಇಲ್ಲವಾದಲ್ಲಿ ಇಷ್ಟು ವರ್ಷಗಳ ಕಾಲವಿದ್ದ ನಾಗರೀಕ ಸಮಾಜ ಇದೇನಾ? ಎಂಬ ಪ್ರಶ್ನೆ ಉದ್ಭವಿಸದೆ ಇರಲಾರದು.

ನಿಲ್ಲಬೇಕಿದೆ ಪ್ರತಿಭಾ ಪಲಾಯನ

ಬದುಕುವುದಕ್ಕಾಗಿ ಹಣ ಬೇಕೇ ಹೊರತು, ಹಣಕ್ಕಾಗಿಯೇ ಬದುಕಬಾರದೆಂಬುದು ಅತ್ಯಂತ ಜನಪ್ರಿಯವಾದ ಮಾತು. ಮನುಷ್ಯನ ಆಯಸ್ಸು ಕ್ಷೀಣಿಸುತ್ತಿರುವ ಈ ಜಾಯಮಾನದ ಮನುಷ್ಯರು ಈ ಮಾತನ್ನು ಮರೆತು ಸಾಗುತ್ತಿದ್ದಾರೆ. ಹೆತ್ತ ತಾಯಿ, ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು ಎಂಬಂತೆ ಮಾತೃ ಭೂಮಿಯ ಋಣ ತೀರಿಸಲು ಇರುವ ಏಕೈಕ ಅವಕಾಶವೇ ಪ್ರತಿಭಾ ಪಲಾಯನವನ್ನು ಮಾಡದಿರುವುದು.

ಅಖಂಡ ಹಿಂದೂಸ್ಥಾನಕ್ಕೆ ಸೇರಿದ ಸಾವಿರಾರು ಮಂದಿ ವೈದ್ಯರು, ವಿಜ್ಞಾನಿಗಳು, ಶಿಕ್ಷಕರು, ಕೌಶಲ್ಯಗಾರರು ಇನ್ನಿತರರು ದೇಶ ತೊರೆದು ಹೋಗಿ, ಪರದೇಶಗಳಲ್ಲಿ ಜೀವನ ಕಟ್ಟಿಕೊಳ್ಳುವುದು ಸಾಮಾನ್ಯ ಸಂಗತಿ. ಆದರೆ ಭಾರತದ ಉಪಖಂಡಕ್ಕೆ ಇಂತವರ ಅಗತ್ಯತೆ ತುಂಬಾ ಇದೆ. ಅವರೆಲ್ಲಾ ಇಲ್ಲೇ ಇದ್ದುಕೊಂಡು ಮಾತೃ ಭೂಮಿಗೆ ಸೇವೆ ಸಲ್ಲಿಸುವ ಕೈಂಕರ್ಯ ಮಾಡಿದ್ದರೆ ಈ ವೇಳೆಗೆ ನಮ್ಮ ದೇಶದ ಕೀರ್ತಿ ಇನ್ನಷ್ಟು ವಿಸ್ತರಿಸಿ, ವ್ಯಾಪಿಸುತ್ತಿತ್ತು. ಹಿರಿಯೊಬ್ಬರು ಹೇಳಿದ್ದು ನೆನಪು, “ಇಂದಿನ ಶಿಕ್ಷಣ ಪದ್ಧತಿ, ಭವಿಷ್ಯದಲ್ಲಿ ಹೇಗೆ ಕೂಲಿ ಮಾಡಿ ಜೀವನ ಸಾಗಿಸಬೇಕೆಂಬುದನ್ನಷ್ಟೇ ತಿಳಿಸುತ್ತಿದೆ” ಇಂತಹ ಅಪವಾದಗಳನ್ನು ದೂರ ಮಾಡಿ ಹೆಚ್ಚಿನ ಪ್ರಮಾಣದ ಆರ್ಥಿಕ ಚಟುವಟಿಕೆ ಮಾಡುವ ಮಂದಿಯ ಜೊತೆಜೊತೆಗೇ ಈ ಹೆಮ್ಮೆಯ ರಾಷ್ಟವನ್ನು ಬೌದ್ಧಿಕವಾಗಿಯೂ ಕಟ್ಟಿ ಬೆಳೆಸುವ ಪಟುಗಳ ಅಗತ್ಯ ನಮಗಿಂದು ಇದೆ.

ವಿಪರ್ಯಾಸವೆಂಬಂತೆ ನಮ್ಮ ದೇಶವನ್ನು
ಧಿಕ್ಕರಿಸಿ ಹೋದ ಲಕ್ಷಾಂತರ ಜನರು ಇಂದು ಪ್ರಾಣ ಉಳಿಸಿಕೊಳ್ಳಲು ಪರದೇಶಗಳಿಂದ ಪುನಃ ತಾಯ್ನಾಡಿಗೆ ಮರಳುವಂತಾಗಿದೆ. ಅವಕಾಶಗಳು ಬೇಕೆಂದರೆ ಅವುಗಳನ್ನು ನಾವುಗಳೇ ಸೃಷ್ಟಿಸಿಕೊಳ್ಳಬೇಕೇ ಹೊರತು, ಪಲಾಯನ ಮಾಡುವುದು ಸರಿಯಾದ ಧೋರಣೆಯಲ್ಲ. ಈ ಹಿನ್ನೆಲೆಯಲ್ಲಿ ಇನ್ನಾದರೂ ಪ್ರತಿಭಾ ಪಲಾಯನ ನಿಂತು ಜಗತ್ತಿನ ಮುಂಚೂಣಿ ರಾಷ್ಟ್ರಗಳು ನಮ್ಮತ್ತ ತಿರುಗಿ ನೋಡುವಂತೆ ಮಾಡುವ ಕಾಲ ಸನ್ನಿಹಿತವಾಗಬೇಕಿದೆ.

ಆಗಿಂದಾಗ್ಗೆ ಬೇಕಿದೆ ಸ್ವಯಂಪ್ರೇರಿತ ಲಾಕ್‍ಡೌನ್

ವಿಶ್ವಸಂಸ್ಥೆ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳು ಇಂದು ನಮ್ಮ ಲಾಕ್‍ಡೌನ್ ನಿಲುವನ್ನು ಅಂಗೀಕರಿಸಿ ನಮ್ಮದೇ ಹಾದಿಯನ್ನು ತುಳಿಯುತ್ತಿವೆ. ಇಂದಿನ ಸ್ಮಶಾನ ಸದೃಶ ವಾತಾವರಣದಲ್ಲಿ ಕೊರೋನಾಕ್ಕೆ ‘ಛೀಮಾರಿ’ ಹಾಕಲು ಲಾಕ್‍ಡೌನ್ ಒಂದೇ ನಿಜವಾದ ಔಷಧಿಯಾಗಿದೆ. ಇದರಿಂದ ನಮಗೆ ಅನಾನುಕೂಲಗಳು ಹೆಚ್ಚು ಆಗಿದ್ದರೂ, ನಮ್ಮ ಹೆಮ್ಮೆಯ ಪ್ರಧಾನಿಯವರಾದ ಮೋದಿಯವರು ಹೇಳಿದಂತೆ ಇಂದು ನಾವು ಜೀವ ಉಳಿಸಿಕೊಂಡರೆ ಮುಂದೆ ಜೀವನ ಎನ್ನುವಂತಾಗಿದೆ. ಒಂದೆಡೆ ಕೊರೋನಾದಿಂದ ಸಾವು ಹೆಚ್ಚುತ್ತಲೂ ಇದೆ, ಮತ್ತೊಂದೆಡೆ ವಿಶ್ವವೇ ಹೊಸ ಚಿಗುರೊಡೆದಂತೆ ಭಾಸವಾಗುತ್ತಿದೆ.ಪ್ರಕೃತಿ ಮಾತೆ ನಳನಳಿಸುತ್ತಿದ್ದಾಳೆ.

ಪ್ರತಿನಿತ್ಯ ನಡೆಯುತ್ತಿದ್ದ ದರೋಡೆ, ಕೊಲೆ. ಅತ್ಯಾಚಾರಗಳು, ಭೀಕರ ಅಪಘಾತಗಳು, ಅಗಣಿತ ಪ್ರಮಾಣದ ವಾಯು ಮಾಲಿನ್ಯ, ಜಲಮಾಲಿನ್ಯ, ಶಬ್ಧಮಾಲಿನ್ಯಗಳು ನಿಂತು ಜಗತ್ತಿನ ನಯನಗಳು ತೆರೆದುಕೊಂಡಿವೆ. ನಮಗೂ ಬದುಕಲು ಬಿಡಿ ಎಂದು ಕೂಗುತ್ತಿದ್ದ ಕೋಟ್ಯಂತರ ಜೀವಿಗಳು ಇಂದು ಸಮಾಧಾನಿಸುತ್ತಿವೆ. ಆದ್ದರಿಂದ ಇಂತಹ ಲಾಕ್‍ಡೌನ್‍ನ್ನು ಆಗಿಂದಾಗ್ಗೆ ನಾವೇ ಮಾಡಿಕೊಂಡಲ್ಲಿ ಈ ಭೂ ಗ್ರಹ ಇನ್ನೊಂದಷ್ಟು ದಿನ ಉಳಿದು ಬೆಳೆಯಲು ಸಾಧ್ಯವಾಗುತ್ತದೆ. ಸಕಲ ಚರಾಚರಗಳ ನಾಶವೂ ತಪ್ಪುತ್ತದೆ. ಅಂತೆಯೇ ಮುಂದಿನ ಪೀಳಿಗೆಯವರಿಗೂ ಈ ಭೂ ಗ್ರಹವನ್ನು ಹಸ್ತಾಂತರಿಸಲು ಕಾರಣವಾಗುತ್ತದೆ.

ಕುಮಾರಸ್ವಾಮಿ.ವಿ.ಕೆ
ಹವ್ಯಾಸಿ ಬರಹಗಾರರು, ವಿರುಪಾಪುರ,
ಸುಗ್ಗನಹಳ್ಳಿ ಅಂಚೆ, ತಿಪ್ಪಸಂದ್ರ ಹೋಬಳಿ,
ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ.
ಮೊಬೈಲ್ : 9113906120, 9740840678

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ

Published

on

ಸುದ್ದಿದಿನ, ಚನ್ನಗಿರಿ (ಬಸವಾಪಟ್ಟಣ) : ಭಾರತೀಯ ಸಮಾಜದಲ್ಲಿ ಮೀಸಲಾತಿಯಿಂದ ಮಾತ್ರ ಮಹಿಳಾ ಪ್ರಗತಿ ಸಾಧ್ಯವಿಲ್ಲ. ಅವಳಿಗೆ ಪುರುಷನಂತೆ ಸಮಾನವಾದ ಪ್ರಾತಿನಿಧ್ಯ ನೀಡಿದಲ್ಲಿ‌ ಮಾತ್ರವೇ ಮಹಿಳಾ ಪ್ರಗತಿ ಸಾಧ್ಯ. ಆಗ ಮಾತ್ರವೇ ಸದೃಢವಾದ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಸಂತೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.

ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ‌ಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತ ಸಪ್ತಾಹದ ಅಡಿಯಲ್ಲಿ ‘ಭಾರತೀಯ ಸಮಾಜ ಹಾಗೂ ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆಯರ ಪ್ರಾಮುಖ್ಯತೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮಹಿಳೆಗೆ ಎಲ್ಲಿಯವರೆಗೆ ಮುಕ್ತವಾದ ಪ್ರಾತಿನಿಧ್ಯ ಲಭಿಸುವುದಿಲ್ಲವೋ ಅಲ್ಲಿಯವರೆಗೆ ಎಷ್ಟೇ ಕಾಯ್ದೆ, ಕಾನೂನುಗಳು ಜಾರಿಯಾದರೂ ಮಹಿಳೆಯರ ಬದುಕಿನಲ್ಲಿ ಸಮಗ್ರ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಡಾ.ಎಂ.ಆರ್. ಲೋಕೇಶ್ ಅವರು ಮಾತನಾಡಿ ಭಾರತೀಯ ಸಮಾಜದಲ್ಲಿ ಹೆಣ್ಣು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವುದು ಕೇವಲ ಆರ್ಥಿಕತೆಯಿಂದ ಸಾಧ್ಯವಿಲ್ಲ ಎಂದರು.

ನೈತಿಕತೆ, ಸಂಸ್ಕಾರವು ಕೂಡ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿಯೇ ಶರಣರು ಗಂಡು-ಹೆಣ್ಣು ಎಂಬ ಬೇಧವನ್ನು ಮೆಟ್ಟಿ ನಿಂತು ‘ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ, ಗಂಡು ಅಲ್ಲ’ ಎಂಬ ತಾತ್ವಿಕತೆಯ ಮೂಲಕ ಸರ್ವರನ್ನು ಸಮಾನವಾಗಿ ಕಾಣುವಂತಹ ಸಮಾಜಕ್ಕಾಗಿ ಶ್ರಮಿಸಿದರು. ಭಾರತದ ನೆಲದಲ್ಲಿ ಶರಣರು, ದಾರ್ಶನಿಕರು ರೂಪಿಸಿಕೊಟ್ಟ ಮಾರ್ಗದಲ್ಲಿ ನಡೆದು ಇಂದಿನ ಮಹಿಳೆಯರು ಸಬಲರಾಗಬೇಕು ಎಂಬುದಾಗಿ ತಿಳಿಸಿದರು.

ಸಮಾಜಶಾಸ್ತ್ರದ ಮುಖ್ಯಸ್ಥರಾದ ಡಾ.ಎ.ಡಿ.ಬಸವರಾಜ್ ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಬೋಧಕರಾದ ಹನುಮಂತಪ್ಪ, ಪ್ರಕಾಶ್, ಮಧುಸೂಧನ್, ರೆಹಮತ್ಬಿ, ಸಂದೀಪ್ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಗೋವಿಂದರೆಡ್ಡಿ ಅವರು ನಿರೂಪಿಸಿದರು. ವಿದ್ಯಾರ್ಥಿನಿ ಸೌಂದರ್ಯ ಸ್ವಾಗತಿಸಿದರು, ಯಶೋಧ, ಸಹನಾ ಪ್ರಾರ್ಥಿಸಿದರು, ರಕ್ಷಿತ ವಂದಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್

Published

on

ಸುದ್ದಿದಿನ,ದಾವಣಗೆರೆ : ಸಂವಿಧಾನ ಪೂರ್ವದ ಭಾರತದ ಸ್ಥಿತಿಗತಿ ಹಾಗೂ ಸಂವಿಧಾನದ ನಂತರ ಭಾರತದಲ್ಲಾದ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಬದಲಾವಣೆಗ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಾಗೆಯೇ ಸಂವಿಧಾನ ರಚನೆ ಮಾಡುವ ಸಮಯದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮುಂದಿದ್ದ ಬಿಕ್ಕಟ್ಟುಗಳನ್ನು ಏಕಾಂತಗಿರಿ ಟ್ರಸ್ಟ್ ನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಅವರು ತಿಳಿಸಿಕೊಟ್ಟರು.

ನಗರದ ಪ್ರೇರಣ ಮಕ್ಕಳ ಆರೈಕೆ ಕೇಂದ್ರದಲ್ಲಿ ವಿ.ಬಿ.ಪಿ ಫೌಂಡೇಷನ್ ಹಾಗೂ ಏಕಾಂತಗಿರಿ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ದೇವನಗರಿ ಸುದ್ಧಿದಿನ ಪತ್ರಿಕೆಯ ಸಂಪಾದಕರಾದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ಕಳಶದಂತಿರುವ ಸಂವಿಧಾ‌ನ ಪೀಠಿಕೆಯ ಮಹತ್ವವನ್ನು ಪರಿಚಯಿಸುವ ಮೂಲಕ ಸಂವಿಧಾ‌ನ‌ ಪೀಠಿಕೆಯನ್ನು ಬೋಧಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ಕೈ ಲೈನ್ ಸಂಸ್ಥೆಯ ಸಂಸ್ಥಾಪಕರಾದ ಬಾಲಚಂದ್ರ ಅವರು ಸಂವಿಧಾನ ಇರುವ ಕಾಲದಲ್ಲಿಯೇ ದಲಿತರು, ದಮನಿತರು ಹಾಗೂ ಮಹಿಳೆಯರ ಸ್ಥಿತಿಯು ಅತ್ಯಂತ ಶೋಚನೀಯವಾಗಿದೆ. ಆದರೆ ಸಂವಿಧಾ‌ನವಿಲ್ಲದ ಭಾರತವನ್ನು ನಾವು ಊಹಿಸಿಕೊಳ್ಳುವುದು ಕಷ್ಟ ಸಾಧ್ಯ ಎಂಬುದಾಗಿ ತಿಳಿಸಿದರು.

ಪ್ರೇರಣ ಆರೈಕೆ ಕೇಂದ್ರದ ಶಿಕ್ಷಕರಾದ ಕುಮಾರ್ ಅವರು ಮಾತನಾಡಿ, ಸರ್ವರನ್ನು ಸಮಾನವಾಗಿ ಕಾಣುವ ಸಂವಿಧಾನವು ನಮ್ಮೆಲ್ಲರ ಪವಿತ್ರ ಗ್ರಂಥ ಎಂಬುದಾಗಿ ತಿಳಿಸಿದರು. ಕುಮಾರಿ ಪೂಜಾ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರೇರಣ ಸಂಸ್ಥೆಯ ಮಕ್ಕಳು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು

Published

on

  • ಪುರಂದರ್ ಲೋಕಿಕೆರೆ

ಸುದ್ದಿದಿನ, ದಾವಣಗೆರೆ : ಸರ್ಕಾರದ ಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಇಲಾಖೆಯ ಚಿತಾವಣೆಗೆ ಸೆಡ್ಡು ಹೊಡೆದು ಕೇವಲ 110-120 ದಿನಗಳ ಒಳಗಾಗಿಅಲ್ಪಾವಧಿ ತಳಿ ನಾಟಿ ಮಾಡಿ ಯಶಸ್ವಿಯಾಗಿ ಕಾಲುವೆ ನೀರು ಬಳಸಿಕೊಂಡು ಭತ್ತ ಬೆಳೆಯುವ ಮೂಲಕ ಮಾದರಿಯಾಗಿದ್ದಾರೆ ದಾವಣಗೆರೆ ಭಾಗದ ರೈತರು.

ಬೇಸಿಗೆ ಕಾಲದಲ್ಲಿ ನಮಗೆ ತೋಟಗಳಿಗೆ ನೀರು ಹರಿಸಲು ಆನ್ ಆಪ್ ಪದ್ದತಿ ಮಾಡಿ ಎಂದು ಒತ್ತಡ ಹಾಕಿದ ಶಿವಮೊಗ್ಗ ಜಿಲ್ಲೆಯ ಅಡಿಕೆ ದಣಿಗಳಿಗೇ ಮುಖಕ್ಕೆ ಹೊಡೆದಂತೆ ಭತ್ತ ಬೆಳೆದು ತೋರಿಸಿರುವುದು ಶ್ಲಾಘನೀಯ.

100 ದಿನಗಳು ನೀರು ಹರಿಸಲು ಆದೇಶ ಹೊರಡಿಸಿ ರೈತರೆಲ್ಲ ನಾಟಿ ಮಾಡಿದ ಮೇಲೆ ಎಂದೂ ಗದ್ದೆ ನೀರು ಕಟ್ಟದ ಐಷಾರಾಮೀ ರಾಜಕಾರಣಿ ಪುತ್ರ ರತ್ನ ಸಚಿವ ಮಧು ಬಂಗಾರಪ್ಪ ಅಡಿಕೆ ತೋಟದ ರೈತರಿಗೆ ಮನ ಸೋತವರು.

ಕಲ್ಲು ಬಂಡೆ ಹೊಡೆದು ಭರ್ಜರಿ ಜೀವನ ಸಾಗಿಸುವ ಸಂಪನ್ಮೂಲ ಸಚಿವ, ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಬೇಸತ್ತ ರೈತ ರಸ್ತೆ ತಡೆದು ನೀರು ಕೊಡಿ ಎಂದು ಹೋರಾಟ ಮಾಡಿದರೂ ಕಿವಿ ಕೇಳೋಲ್ಲ ಎಂಬಂತೆ ವರ್ತಿಸಿದೆ ಆಡಳಿತ ಯಂತ್ರ.

ಆದರೆ ಈ ನಡುವೆ ಎರಡು ಭಾರಿ ಪ್ರಕೃತಿ ವರದಾನ ದಿಂದ ಭತ್ತ ಬೆಳೆಯುವ ಮೂಲಕ ಅನ್ನನೀಡುವ ರೈತ ಭತ್ತ ಬೆಳೆದು ಬಿಟ್ಟ. ಈ ಮೂರು ತಿಂಗಳ ಭತ್ತಕ್ಕೆ ನೀರು ಬಿಡುವುದು ಎಷ್ಟು ತ್ರಾಸದಾಯಕ. ಸರ್ಕಾರಗಳು ಯಾರು ಪರ ಎಂದು ಬೆತ್ತಲೆ ತೋರಿಸಿಕೊಂಡಿವೆ.

ಈಗಲಾದರೂ ಕಾಲ ಮಿಂಚಿಲ್ಲ ಕಟಾವು ಮಾಡಿದ ಭತ್ತ ಒಳ್ಳೆಯ ಗುಣಮಟ್ಟದ್ದು ಆಗಿದೆ.3000-3500 ರೂಂ ದರ ನಿಗದಿ ಮಾಡಿದರೆ ರೈತ ಸಾಲಶೂಲದಿಂದಮುಕ್ತಿ ಆಗಬಹುದು. ಭದ್ರಾ ನೀರು ಬೇಸಿಗೆ ಕಾಲದಲ್ಲಿ ಕೊಡುವುದೇ ಇಲ್ಲ ಎಂದು ಹೇಳಿರುವುದು ರೈತ ವಿರೋಧಿ ನೀತಿ.

ಗುಂಡುರಾವ್ ಕಾಲಾವಧಿಯಲ್ಲಿ 158ಅಡಿ ನೀರಿದ್ದರೂ ಭದ್ರಾ ನೀರು ಹರಿಸಲಾಗಿರುವ ದಾಖಲೆ ಇದೆ. ಕಡೆ ಪಕ್ಷ ಈ ಭಾರಿಯ ಭತ್ಖಕ್ಕೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಇಲ್ಲವೇ ಯಾವ ರೈತರ ಬಳಿ ಭತ್ತ ಖರೀದಿ ನಿಲ್ಲಿಸಿ. ರೈತರೇ ಸ್ವಂತ ಮಾರುಕಟ್ಟೆ ಹುಡುಕಿಕೊಳ್ಳುವ ಪ್ರಯತ್ನ ಮಾಡಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending