ದಿನದ ಸುದ್ದಿ
ಭೀಮೋದ್ಯಮಿಗಳ ಯಶೋಗಾಥೆ : ಚಿನ್ನ-ಬೆಳ್ಳಿ ಪ್ರಮೋದ್ ಎಂಬ ದಲಿತ ಯುವಕನ ಸಕ್ಸೆಸ್ ಸ್ಟೋರಿ
- ನಾಗರಾಜ್ ಹೆತ್ತೂರ್
ಬದುಕಿಗಾಗಿ ಚಿನ್ನ ಗಿರವಿ ಇಟ್ಟವ ಮುಂದೊಂದು ದಿನ ಚಿನ್ನದಂಗಡಿಯ ಮಾಲೀಕನಾದ. ಕೇವಲ 95 ಸಾವಿರದಿಂದ 70 ಕೋಟಿ ವ್ಯವಹಾರ ನಡೆಸುವ ಪ್ರಮೋದ್ ಅವರು,
- ಅಂಬೇಡ್ಕರ್ ಇಲ್ಲದಿದ್ದರೆ ನಾನಿಲ್ಲ….! ಈ ಯಶಸ್ಸಿಗೆ ಅವರೇ ಕಾರಣ
- ಕೇವಲ 95 ಸಾವಿರದ ಮೂಲ ಬಂಡವಾಳ ಈಗ ವಾರ್ಷಿಕ 70 ಕೋಟಿ ವ್ಯವಹಾರ
- ದಲಿತರು ಜ್ಯೂಯಲರಿ ಶಾಪ್ ಮಾಡುತ್ತಾರಾ ಎಂದು ನಕ್ಕು ಅವಮಾನಿಸಿದ್ದರು
ಅದು 1995 ರ ಇಸವಿ. ಡಿಗ್ರಿ ಓದುತ್ತಿದ್ದ ಆ ಯುವಕನ ತಲೆಯಲ್ಲಿ ಏನಾದರೂ ಬ್ಯುಸಿನೆಸ್ ಮಾಡಬೇಕೆಂಬ ಹಂಬಲ. ಮದ್ಯಾಹ್ನ ಕಾಲೇಜು ಮುಗಿಯುತ್ತಿತ್ತು. ಆ ಸಮಯದಲ್ಲಿ ಏನು ಮಾಡು ವುದು? ತಲೆಯಲ್ಲಿ ನೂರೆಂಟು ಯೋಚನೆ. ಕಾಲೇಜು ನಡುವೆ ಪಾರ್ಟ್ ಟೈಂ ಗೆ ಸೇರಿಕೊಂಡಿದ್ದು ಜ್ಯೂಯಲರಿ ಶಾಪ್ ಒಂದಕ್ಕೆ ಕೆಲಸಗಾರನಾಗಿ. ಕಣ್ಣೆದುರಿಗೆ ಇದ್ದ ಚಿನ್ನವನ್ನು ನೋಡಿದಾಗ ಇದು ನಮ್ಮಂತಹವರಿಗಲ್ಲ ಅಂದುಕೊಂಡಿದ್ದೆ ಹೆಚ್ಚು. ಇಷ್ಟಕ್ಕೂ ದಲಿತರು ಚಿನ್ನ ಬೆಳ್ಳಿ ಕ್ಷೇತ್ರದಲ್ಲಿ ಕಾಲಿರಿಸಿ ಉಳಿದುಕೊಳ್ಳುವುದುಂಟೆ? ಚಿನ್ನ, ಬೆಳ್ಳಿ ಉದ್ಯಮ ಎಂದರೆ ಅದು ಮಾರ್ವಾಡಿ, ಸೇಠುಗಳ ಉದ್ಯಮ. ಆ ಉದ್ಯಮದಲ್ಲಿ ದಲಿತರು ಕಾಲುಡಲು ಸಾಧ್ಯವೇ ..? ಹಾಗೆ ಸುಮ್ಮನೆ ನೆನಪಿಸಿಕೊಳ್ಳಲೂ ಅಸಾಧ್ಯದ ಮಾತು.
ವಾಸ್ತವದಲ್ಲಿ ಯಾವ ದಲಿತ ಕುಟುಂಬದಿಂದ ಬಂದವನೂ ಕಲ್ಪಿಸಿಕೊಂಡಿರುವುದೂ ಇಲ್ಲ. ಆದರೆ ಆ ಯುವಕ ಯಾರೂ ತುಳಿಯದ ಹಾದಿಯಲ್ಲಿ ಹೋಗಲು ಬಯಸಿದ್ದ. ಅಲ್ಲಿ 2 ವರ್ಷ ಕೆಲಸ ಮಾಡಿದ್ದಾಯಿತು. ಅನುಭವ ಪಡೆದಿದ್ದೂ ಆಯಿತು. ಅಷ್ಟರಲ್ಲಿ ಡಿಗ್ರಿ ಮುಗಿದಿತ್ತು. ನಾನೇಕೆ ಚಿನ್ನಬೆಳ್ಳಿ ಕ್ಷೇತ್ರಕ್ಕೆ ಕಾಲಿಡಬಾರದು…,? ನಾನೂ ಒಂದು ಜ್ಯೂಯಲರಿ ಅಂಗಡಿ ತೆರಯಬಾರದೇಕೆ? ಅದೊಂದು ದಿನ ಈ ಯೋಚನೆ ತಲೆಗೆ ಹೊಳೆದಿತ್ತು. ಅದೊಂದು ದಿನ ಆ ಕೆಲಸಕ್ಕೆ ಕೈ ಹಾಕಿದ ಆ ಹುಡುಗ ಮತ್ತೆ ಹಿಂದೆ ನೋಡಲೇ ಇಲ್ಲ.
ಸ್ನೇಹಿತರೊಬ್ಬರು ಗಿರವಿ ಇಟ್ಟು ಕೊಟ್ಟ ಐವತ್ತು ಸಾವಿರ ರೂಪಾಯಿ ಮತ್ತು ಬ್ಯಾಂಕ್‍ನಿಂದ ಕೊಟ್ಟ ತೊಂಬತ್ತೈದು ಸಾವಿರ ರೂಪಾಯಿಯಲ್ಲಿ ಆರಂಭಿಸಿದ ಚಿನ್ನ ಬೆಳ್ಳಿ ವಹಿವಾಟು ಇಂದು ವರ್ಷಕ್ಕೆ ಐವತ್ತು ಕೋಟಿ ವಹಿವಾಟು ನಡೆಸುತ್ತಿದೆ. ಜಾತಿ- ಧರ್ಮಗಳನ್ನು ಮೀರಿ ಆ ಯುವಕ ಒಬ್ಬ ಯಶಸ್ವಿ ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆ. ನಂಬಿಕೆ ಮತ್ತು ಕೆಲಸದ ಮೇಲೆ ಶ್ರದ್ಧೆ ಇದ್ದರೆ ದಲಿತರು ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಬಹುದು ಎಂದು ತೋರಿಸಿದ್ದಾರೆ ಹಾಸನದ ಆಕಾಶ್ ಜ್ಯೂಯಲರ್ಸ್ ಮಾಲೀಕ ಬಿ.ಎನ್ ಪ್ರಮೋದ್. ಅವರು ಬೆಳೆದ ಪರಿಯನ್ನು ಅವರ ಬಾಯಿಂದಲೇ ಕೇಳೋಣ:
ಕೈಯ್ಯಲ್ಲಿ ಬಿಡಿಗಾಸಿಲ್ಲದೇ ಆರಂಭಿಸಿದ ಆಕಾಶ್ ಜ್ಯೂಯಲರ್ಸ್
ಪಾರ್ಟ್ ಟೈಂ ನಲ್ಲಿ ನಾನು ಕೆಲಸ ಮಾಡ ಬೇಕೆಂದು ಓಡಾಡುತ್ತಿದ್ದಾಗ ಇಲ್ಲೊಬ್ಬರು ರಾಜಾಸ್ತಾನದವರಿದ್ದರು. ಅಂಗಡಿ ಹೆಸರು ಮನೋಜ ಬ್ಯಾಂಕರ್ಸ್ನ ಮಾಲೀಕ ಶಾಂತಿ ಲಾಲ್ ಗುಲ್ ಗುಲಿಯಾ ಅವರ ಹತ್ತಿರ ಸೇರಿಕೊಂಡೆ. ಡಿಗ್ರಿಗೆ ಹೋಗುತ್ತಲೇ ಫ್ರೀ ಟೈಂ ನಲ್ಲಿ ಅಂಗಡಿಯಲ್ಲಿ ಪಾರ್ಟ್ ಟೈಂ ಕೆಲಸವನ್ನು 2 ವರ್ಷ ಮಾಡಿದೆ. ಒಳ್ಳೆ ಅನುಭವ ಸಿಕ್ಕಿತು. ನಾವೇ ಏಕೆ ಮಾಡಬಾರದು ಎಂದು ಮನಸ್ಸಾಯಿತು. ಪಾರ್ಟ್‍ನರ್ ಯಾರೂ ಇರಲಿಲ್ಲ, ಮನೆಯಲ್ಲಿ ಬಡತನ. ಕೈಯ್ಯಲ್ಲಿ ಹಣವಿಲ್ಲ. ಆದರೂ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡೆ. ಆಗ ನನ್ನೊಂದಿಗೆ ಇದ್ದದ್ದು ಆತ್ಮವಿಶ್ವಾಸ ಮಾತ್ರ.
ದುಡ್ಡಿಗೆ ಏನು ಮಾಡುವುದು ಎಂದು ಯೋಚಿಸಿದಾಗ ನನ್ನ ಕೈ ಹಿಡಿದವರು ದೂಪ ಪೇಪರ್ ಏಜೆನ್ಸಿ ನಡೆಸುತ್ತಿದ್ದ ದೊರೆಸ್ವಾಮಿ. ಜೀವನದಲ್ಲಿ ಅವರನ್ನು ಮರೆಯುವಂತೆಯೇ ಇಲ್ಲ. `ಸಾರ್ ಅಂಗಡಿ ಮಾಡುತ್ತಿದ್ದೇನೆ’ ಅವರು ಮರು ಮಾತ ನಾಡಲಿಲ್ಲ. ಯಾಕೆಂದರೆ ನನ್ನ ಮೇಲೆ ಅವರಿಗೆ ನಂಬಿಕೆ ಇತ್ತು. ಅವರ ಮನೆಯಲ್ಲಿದ್ದ ಚಿನ್ನ ಅಡವಿಟ್ಟು 50 ಸಾವಿರ ತಂದುಕೊಟ್ಟರು.
ಆ ಕಾಲಕ್ಕೆ ಅದು ದೊಡ್ಡ ಮೊತ್ತ. ಅದನ್ನು ತೆಗೆದುಕೊಂಡು ಹೋಗಿ ಅಡ್ವಾನ್ಸ್ ಕೊಟ್ಟೆ. ಇನ್ನೊಬ್ಬರಿಗೆ ಗಿರವಿ ಇಟ್ಟು ತಂದ ಹಣದಲ್ಲಿ ಒಂದು ಸಣ್ಣ ಟೇಬಲ್- ಕುರ್ಚಿ ಹಾಕಿಕೊಂಡು ಕಳಿತೆವು. ಆಗ ಶುರುವಾಗಿದ್ದು ಆಕಾಶ್ ಜ್ಯೂಯಲರ್ಸ್. ನನ್ನ ಈ ಉದ್ಯಮದ ಹಿಂದೆ ಬೆನ್ನೆಲುಬಾಗಿ ನಿಂತವರು ಶಾಂತಿ ಲಾಲ್ ಗುಲ್ ಗುಲಿಯಾ. ಅವರನ್ನೂ ಎಂದೂ ಮರೆಯುವಂತಿಲ್ಲ.
ದಲಿತರು ಜ್ಯೂಯಲರಿ ಶಾಪ್ ಮಾಡುತ್ತಾರಾ ಎಂದು ನಕ್ಕು ಅವಮಾನಿಸಿದ್ದರು
ಅಂಗಡಿ ತೆರೆದಿದ್ದಾಯಿತು, ಮೂಲ ಬಂಡವಾಳ ಬೇಕಲ್ಲವೇ..? ನಂತರ ಪಿಎಂಆರ್ ವೈ ಪ್ರಧಾನಮಂತ್ರಿ ಜವಹಾರ್‍ಲಾಲ್ ಯೋಜನೆಗೆ ಅರ್ಜಿ ಹಾಕಿದೆ. ಆಗಲೂ ಒಂದು ಕತೆ. ನಮ್ಮವರು (ದಲಿತರು) ಡಿಫಾಲ್ಟರ್ ಆಗಿದ್ದರು, ನೀವು ಸರಿಯಾಗಿ ಹಣ ಕಟ್ಟುವುದಿಲ್ಲ ನಿಮಗೆ ಕೊಡುವುದಿಲ್ಲ ಎಂದರು.
ಮೊದಲನೆಯದಾಗಿ ನಾನು ಸೆಲೆಕ್ಟೆ ಆಗಲಿಲ್ಲ. ಕಾರಣ, ಜ್ಯುಯಲರಿ ಶಾಪ್ ಮಾಡುವುದು ಅದು ದಲಿತರು…? ನನ್ನ ಮಾತು ಕೇಳಿ ಅಲ್ಲಿನ ಆಯ್ಕೆ ಸಮಿತಿ ಅಧಿಕಾರಿಗಳು ನಕ್ಕು ಅವಮಾನ ಮಾಡಿ ಕಳುಹಿದ್ದರು. ಅದೊಂದು ಅಪರಾಧ` ಎಂಬಂತೆ ನನ್ನ ನೋಡಿದ್ದರು. `ಅದು ನಿಮ್ಮಂತಹವರಿಗಲ್ಲ ಹೋಗಯ್ಯ’ ಎಂದು ಕುಹಕವಾಡಿದ್ದರು. ಇನ್ನೂ ಹೇಳುವುದಾದರೆ ಸರಕಾರದಿಂದ ಇಂತಹ ಸ್ಕೀಂ ಗೆ ಸಾಲವೇ ಇರಲಿಲ್ಲ.
ದಿ.ಚಂದ್ರ ಪ್ರಸಾದ್ ತ್ಯಾಗಿ ಹೇಳಿ ಸಾಲ ಕೊಡಿಸಿದರು
ಆಗ ನನಗೆ ನೆನಪಾಗಿದ್ದು ದಿ. ಚಂದ್ರಪ್ರಸಾದ್ ತ್ಯಾಗಿ. ಅಗವರು ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷರಾಗಿದ್ದರು. ಅವರ ಮನೆಗೆ ಹೋಗಿ ವಿಚಾರ ಹೇಳಿದೆ. ಆಗವರು ಡಿಐಸಿ ಅಧಿಕಾರಿಗಳಿಗೆ ಕರೆ ಮಾಡಿ ಚಿನ್ನ ಬೆಳ್ಳಿ ಅಂಗಡಿ ತೆರೆಯಲು ಯಾರಾದರೂ ದಲಿತರು ಅರ್ಜಿ ಹಾಕಿದ್ದಾರೆನ್ರಿ ಎಂದು ವಿಚಾರಿಸಿದರು.
ಅವರ ಮಾತಿಗೆ ಒಪ್ಪಿದ ಅಧಿಕಾರಿಗಳು ಒಲ್ಲದ ಮನಸ್ಸಿನಿಂದಲೇ ಸೆಲೆಕ್ಷನ್ ಮಾಡಿಸಿದರು. ಅಲ್ಲಿ ಸೆಲೆಕ್ಟ್ ಆದೆ. ಆದರೆ ಬ್ಯಾಂಕಿನಲ್ಲಿ ಮತ್ತೆ ರಿಜೆಕ್ಟ್ . ವಿಜಯ ಬ್ಯಾಂಕಿನ ಮೆನೆಜರ್ `ನಿಮ್ಮವರು ಕಟ್ಟುವುದಿಲ್ಲ ಹೋಗ್ರಿ ‘ಎಂದುಬಿಟ್ಟರು. ನಾನು ಅವರೆದುರು ನಿಂತು ನೇರವಾಗಿಯೇ ಹೇಳಿದೆ ಸಾರ್ ಕೊಡಿ, ನನಗೆ ಬೇರೆಯವರ ಕತೆ ಗೊತ್ತಿಲ್ಲ. ನಾನು ಕಟ್ಟುತ್ತೇನೆ ಎಂದೆ.
ಕೇವಲ 95 ಸಾವಿರದ ಮೂಲ ಬಂಡವಾಳ
ಅದೇನೋ ನನ್ನ ಅದೃಷ್ಟ. ಏಳೂವರೆ ಸಾವಿರ ಸಬ್ಸಿಡಿ ಸೇರಿ 95 ಸಾವಿರದ ಚೆಕ್ ಕೊಟ್ಟರು ಅದೇ ನನ್ನ ಮೂಲ ಬಂಡವಾಳ. ಇದನ್ನು ತೀರಿಸಲು 7 ವರ್ಷ ಬೇಕು. ಆದರೆ ಶೃದ್ಧೆಯಿಂದ ಕೆಲಸ ಮಾಡಿದೆ. ಯಶಸ್ಸು ಸಿಕ್ಕಿತು. 3 ವರ್ಷಕ್ಕೆ ಸಾಲ ತೀರಿಸಿದೆ. ನನಗೆ ಸಾಲ ಕೊಟ್ಟ ಮ್ಯಾನೇಜರ್ ಬೆಂಗಳೂರಿನಲ್ಲಿ ಚೀಪ್ ಮ್ಯಾನೆಜರ್ ಆಗಿದ್ದರು.
ಹೋಗಿ ಅವರಿಗೆ ಕೊಟ್ಟೆ. ಅವರು ಅಚ್ಚರಿಯಿಂದ ಕೂರಿಸಿಕೊಂಡು ಮಾತನಾಡಿಸಿದರು. ಅವರಿಗೆ ಹೇಳಿದೆ `ನಮ್ಮಂತಹವರು ಬಂದರೆ ಕೊಡಿ’ ಕೆಲವರು ಹಾನೆಸ್ಟ್ ಆಗಿರುತ್ತಾರೆ ಎಂದೆ. ಆ ಮೆನೆಜರ್ ಈಗ ನಿವೃತ್ತಿ ಆಗಿದ್ದಾರೆ. ಆದರೆ ಇವತ್ತಿಗೂ ನಮ್ಮ ಕಸ್ಟಮರ್. ಈಗಲೂ ಬರುತ್ತಾರೆ ಈಗವರು ಮಂಗಳೂರಿನಲಿದ್ದಾರೆ. ಅತಿ ಕಡಿಮೆ ಹಣ ಹಾಕಿ ಈ ಎತ್ತರಕ್ಕೆ ಬೆಳೆದೆ. ಇದು ಬೆಳೆದು ಬಂದ ಹಾದಿ ಇದು ಎನ್ನುತ್ತಾರೆ ಪ್ರಮೋದ್.
ಪೆಟ್ರೋಲ್ ಬಂಕ್ ಮಾಲೀಕರಾಗಿಯೂ ಯಶಸ್ವಿ
ಒಂದು ಚಿಕ್ಕ ಅಂಗಡಿ ಮಾಡಿದ್ದು. 13 ವರ್ಷ ಕೆಲಸ ಮಾಡಿದೆ. ಇಂದು ದೊಡ್ಡ ಶೋರೂಂ ಮಾಡಿದ್ದೇನೆ. ಮಂಗಳೂರಿನಲ್ಲಿ ಪೆಟ್ರೋಲ್ ಬಂಕ್ ಮಾಡಿದ್ದೇನೆ. ಅದರಲ್ಲೂ ಯಶಸ್ವಿಯಾದೆ. 25 ರಿಂದ 30 ಮಂದಿಗೆ ಕೆಲಸ ಕೊಟ್ಟಿದ್ದೇನೆ. ತಿಂಗಳಿಗೆ ಲಕ್ಷಾಂತರ ರುಪಾಯಿ ಸಂಬಳ ನೀಡುತ್ತೇನೆ. ವಾರ್ಷಿಕವಾಗಿ ಏನಿಲ್ಲವೆಂದರೂ 80 ಕೋಟಿ ವಹಿವಾಟು ನಡೆಯುತ್ತಿದೆ ಎನ್ನುತ್ತಾರೆ.
ಚಿನ್ನ ಬೆಳ್ಳಿ ವರ್ತಕರ ಸಂಘದ ಕಾರ್ಯದರ್ಶಿಯಾಗಿ
ಚಿನ್ನ -ಬೆಳ್ಳಿ ವರ್ತಕರ ಸಂಘದ ಕಾರ್ಯದರ್ಶಿಯೂ ಆಗಿರುವ ಅವರು, ಅಸೋಸಿಯೇಷನ್ ಆರಂಭದಿಂದಲೇ ಇದ್ದವರು. ವರ್ತಕರೊಂದಿಗೆ ತಮ್ಮ ಒಡನಾಟದ ಬಗ್ಗೆ ಹೇಳುವುದಿಷ್ಟು `ನಾವು ಎಲ್ಲರೊಂದಿಗೆ ಚೆನ್ನಾಗಿರಬೇಕು, ಮೇಲಾಗಿ ಇತರೆ ವರ್ಗದವರೊಂದಿಗೆ ಬೆಳೆಯಬೇಕು. ಇದಕ್ಕಾಗಿ ಬ್ರಾಡ್ ಮೈಂಡ್ ಬೆಳೆಸಿಕೊಳ್ಳಬೇಕು. ಇತರೆ ವರ್ಗದವರ ಜೊತೆ ಬಿದ್ದಾಗ ಹೆಚ್ಚು ಕಲಿತುಕೊಳ್ಳಬಹುದು.
ಇಲ್ಲಿ ನಂಬಿಕೆಯೇ ಮುಖ್ಯ. ದಲಿತ ಎನ್ನುವುದಕ್ಕಿಂತಲೂ ಒಳ್ಳೆಯ ಉದ್ದಿಮೆದಾರರಾಗ ಬೇಕು.ಸತ್ಯ ಹೇಳಬೇಕೆಂದರೆ ದಲಿತರೊಂದಿಗೆ ಇದ್ದು ಬೆಳೆಯಲು ಕಷ್ಟ. ಆದರೆ ಇತರೆ ಜನಾಂಗದವರೊಂದಿಗೆ ಬೆಳೆಯಬೇಕು. ಇಲ್ಲದಿದ್ದರೆ ಎಲ್ಲಿರುತ್ತೇವೆಯೋ ಅಲ್ಲೇ. ನಾವು ಅವರಿಂದ ಕಲಿತುಕೊಳ್ಳಬೇಕು. ಯಾಕೆ ಅವರು ಬೇಗ ಮುಂದುವರೆಯುತ್ತಾರೆ ಅವೆಲ್ಲವನ್ನೂ ನೋಡ ಬೇಕು.
ಜನ ಈಗ ನನ್ನನ್ನು ಉದ್ಯಮಿಯಾಗಿ ನೋಡುತ್ತಾರೆ
ಈಗ ನನ್ನ ಕಸ್ಟಮರ್ಸ್ ಮತ್ತು ಹೊರಜಗತ್ತು ನನ್ನನ್ನು ದಲಿತ ಎನ್ನುವುದಕ್ಕಿಂತಲೂ ಒಳ್ಳೆಯ ಉದ್ದಿಮೆದಾರನಾಗಿ ನನ್ನನ್ನು ನೋಡುತ್ತಾರೆ. ಇತ್ತೀಚೆಗಷ್ಟೆ ರಾಜ್ಯ ಜ್ಯೂಯಲರಿ ಅಸೋಸಿಯಷನ್. ಇಡೀ ರಾಜ್ಯದಲ್ಲಿ ಈ ಉದ್ಯಮದಲ್ಲಿರುವ ದಲಿತರ ಪೈಕಿ ನಾನು ಮತ್ತು ಬೆಂಗಳೂರಿನಲ್ಲಿರುವ ಒಬ್ಬರು.
ಯಾವುದನ್ನು ನಾವು ಜೀವನದ ಪ್ರಮುಖ ವಸ್ತು, ಕೈಗೆಟಗದ ವಸ್ತು ಎಂದು ಕೊಂಡಿದ್ದೇವೋ ಅದೇ ಚಿನ್ನವನ್ನು ಇಂದು ಮಾರಾಟ ಮಾಡುತ್ತೇವೆ, ಇಂಪೋರ್ಟ್ ಮಾಡಿಕೊಳ್ಳುತ್ತೇವೆ. ನಮ್ಮದು ಚಿನ್ನದೊಂದಿಗೆ ಬದುಕು ಎನ್ನುವಂತಾಗಿದೆ. ಇದೇ ಚಿನ್ನವನ್ನು ಅಡ ಇಟ್ಟು ಅಂಗಡಿ ಕಟ್ಟಿದ್ದು ಎಂದರೆ ಒಂದು ಕ್ಷಣ ನಂಬಲು ಆಗುವುದಿಲ್ಲ.
ಬಡ ಕುಟುಂಬದಲ್ಲಿ ಹುಟ್ಟಿ ಕೋಟಿಗಟ್ಟಲೆ ವ್ಯವಹಾರ
ನಾನು ಹುಟ್ಟಿದ್ದು ಹಾಸನ ತಾಲ್ಲೂಕು ದೊಡ್ಡಬಾಗನಹಳ್ಳಿಯಲ್ಲಿ. ತಂದೆ ನಿಂಗಯ್ಯ, ತಾಯಿ ಜಯಮ್ಮ, ಡಿಗ್ರಿ ಮುಗಿದ ಸಂದರ್ಭ ನನ್ನ ತಂದೆ ತೀರಿಕೊಂಡರು. ಶಿಕ್ಷಣ ಇಲಾಖೆಯಲ್ಲಿ 4 ನೇ ದರ್ಜೆ ನೌಕರರಾಗಿದ್ದರು. ತೀರಿಕೊಂಡ ನಂತರ ತಂದೆಯ ಕೆಲಸ ನನಗೆ ಬಂತು, ತಿರಸ್ಕರಿಸಿದೆ. ನನಗೆ ಬಿಸಿನೆಸ್ ಮಾಡುವ ಹಂಬಲ. ಅಂದು ಮನೆಯವರೆಲ್ಲ ತುಂಬಾ ಒತ್ತಾಯ ಮಾಡಿದ್ದರು ಅವತ್ತು ಸರಕಾರಿ ಕೆಲಸಕ್ಕೆ ಹೋಗಿದ್ದರೆ ಈ ಮಟ್ಟಕ್ಕೆ ಬೆಳೆಯಲು ಆಗುತ್ತಿರಲಿಲ್ಲ.
ನಾವು 4 ಜನ ಇಬ್ಬರು ಗಂಡು ಇಬ್ಬರು ಹೆಣ್ಣು. ನಾನೇ ಕೊನೆ ಯವನು ಸಹೋದರ ಜಯರಾಂ ಶಿಕ್ಷಣ ಇಲಾಖೆ ಯಲ್ಲಿ ಪ್ರಥಮ ದರ್ಜೆ ನೌಕರಾಗಿದ್ದಾರೆ. ನನ್ನ ಈ ಯಶಸ್ಸಿನ ಹಿಂದೆ ಸಹೋದರ ಜಯರಾಂ ಅವರ ಪಾತ್ರ ಬಹುಮುಖ್ಯವಾಗಿದೆ. ಹಾಗೇ ಅತ್ನಿ ಎಂಸಿಇ ಕಾಲೇಜಿನ ಪ್ರೊಫೆಸರ್ ಅತ್ನಿ ಕೃಷ್ಣ, ಹಾಗೂ ಅತ್ನಿ ಮಹದೇವ್ ಹಾಗೂ ಸ್ನೇಹಿತರ ಮಾರ್ಗದರ್ಶನ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನುತ್ತಾರೆ ಪ್ರಮೋದ್.
ಬದುಕುವ ಛಲ ಇದ್ದರೆ ನಾವೂ ಈ ಕ್ಷೇತ್ರದಲ್ಲಿ ಯಶಸ್ವಿಯಾಗಬಹುದು
ಈ ಕ್ಷೇತ್ರದಲ್ಲಿ ಬರಲು ಐಡಿಯಾಸ್‍ಬೇಕು ಕೋಟ್ಯಾಂತರ ಹಣ ಬೇಡ . ಸ್ವಲ್ಪವೇ ಇದ್ದರೂ ಸಾಕು. ಈ ಕ್ಷೇತ್ರದಲ್ಲೂ ಜಯಿಸಬಹುದು ಹಾಗೆ ಆಸಕ್ತಿ ಇರುವ ಯುವಕರು ಬಂದರೆ ನಾನು ದಾರಿ ಹೇಳುತ್ತೇನೆ. ಅಂದ ಹಾಗೆ ಜ್ಯೂಯಲಿರಿ ಶಾಪ್ ಮಾಡಲೆಂದು ಸರಕಾರದಿಂದ ಯಾವ ಸ್ಕೀಮ್ ಕೂಡ ಇಲ್ಲ. ನಾನು ಇಲ್ಲಿಗೆ ಬರಲು ಸಹಾಯ ಮಾಡಿ ದವರೆಲ್ಲ ಇತರೆ ವರ್ಗದವರು, ಶೆಟ್ಟರು, ಗೌಡರು ಅವರೇ ಈ ಫೀಲ್ಡಿಗೆ ಕರೆತಂದವರು .
ಬಹುಶಃ ನಾನೇ ನಾದರೂ ನಮ್ಮ ಜಾತಿಯವರ ಜೊತೆ ಹೋಗಿದ್ದರೆ ಅವರನ್ನು ಎದುರಿಸುವುದು ಕಷ್ಟವಾಗುತ್ತಿತ್ತು ಎಂದು ಪ್ರಾಮಾಣಿಕವಾಗಿ ಹೇಳುತ್ತಾರೆ. ಚಿನ್ನ ಬೆಳ್ಳಿ ವರ್ತಕರೆಂದರೆ ಅದು ಸೇಟು, ಮಾರ್ವಾಡಿಗಳದ್ದು ಎಂಬಂತಿರುವ ಕ್ಷೇತ್ರದಲ್ಲಿ ದಲಿತ ಯುವಕನೊಬ್ಬ ಈ ಪರಿ ಬೆಳೆದು ನಿಂತಿದ್ದು ಯಶೋ ಗಾಥೆಯೇ ಸರಿ. ಉದ್ಯಮ ವಲಯಕ್ಕೆ ಹೊರಡುವರಿಗೆ ಪ್ರಮೋದ್ ಮತ್ತು ಅವರು ಕಟ್ಟಿ ಬೆಳೆಸಿದ ಆಕಾಶ ಜ್ಯೂಯಲರ್ಸ್ ಮಾದರಿಯಾಗಿದೆ ಎಂದರೆ ತಪ್ಪಿಲ್ಲ.
ಪ್ರಾಮಾಣಿಕತೆ ಮತ್ತು ತಾಳ್ಮೆ ಇದ್ದರೆ ಸಕ್ಸಸ್
ನಮ್ಮ ದಲಿತ ಯುವಕರು ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ ಅದರೂ ಭಯ. ಇಲ್ಲಿ ಉಳಿದುಕೊಳ್ಳಬೇಕು ಎಂದರೆಪ್ರಾಮಾಣಿಕತೆ, ನಂಬಿಕೆ, ಆತ್ಮವಿಶ್ವಾಸ ಮತ್ತು ಶ್ರಮ ಹಾಗಿದ್ದರೆ ಮಾತ್ರ ಉದ್ಯಮ ಕ್ಷೇತ್ರದಲ್ಲಿ ಮುಂದೆ ಬರಬಹುದು. ಅದರಲ್ಲೂ ಕಾಯುವ ತಾಳ್ಮೆ ಬೇಕು. ಇನ್ನೂ ಕೆಲವರು ಭಯದಿಂದ ಬರುತ್ತಿಲ್ಲ. ಬಜೆಟ್ ಗೆ ತಕ್ಕಂತೆ ವ್ಯವಹಾರ ಮಾಡಿ ಇತಿಮಿತಿ ಸಮಸ್ಯೆಗಳು ಬರುತ್ತವೆ. ವ್ಯಾಪಾರ ಒಂದು ಕಲೆ, ಹಾಗೆಯೇ ತಾಳ್ಮೆ ಬೇಕು ನನ್ನ ಈ ಸಕ್ಸೆಸ್ ಪ್ರಯಣದಲ್ಲಿ ಈಗ ನನ್ನ ಪತ್ನಿ ನ್ಯಾ ಕೈ ಜೋಡಿಸಿದ್ದಾರೆ.
ಬಿಇ ಕಂಪ್ಯೂಟರ್ ಸೈನ್ಸ್ ಮಾಡಿರುವ ಇವರು ನನ್ನ ಜ್ಯೂವೆಲರಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ವಿನೀಸ್ ಎನ್ ಪ್ರಮೋದ್ ಎಂಬ ಮಗಳಿದ್ದಾಳೆ.ಜ್ಯೂವೆಲ್ಲರಿಯನ್ನು ಇನ್ನೂ ಎತ್ತರಕ್ಕೆ ವಿಸ್ತರಿಸುವ ಉದ್ದೇಶ ಹೊಂದಿದ್ದೇವೆ. ಹಾಗೆ ನೊಂದವರಿಗೆ, ನಿರ್ಗತಿಕರಿಗೆ ಕೈಲಾದ ಸಹಾಯ ಮಾಡುತ್ತೇವೆ.
ಬಹುಮುಖ್ಯವಾಗಿ ಉದ್ಯಮ ಕ್ಷೇತ್ರಕ್ಕೆ ಬರುವರಿಗೆ ಸದಾ ಪ್ರೋತ್ಸಾಹಿಸಲು, ಯಾವುದೇ ಸಲಹೆ ಸಹಕಾರ ಕೊಡಲು ನಾನು ಸಿದ್ದನಿದ್ದೇನೆ. ಯಾರೂ ಬೇಕಾದರೂ ನನ್ನನ್ನು ಸಂಪರ್ಕಿಸಬಹುದು. ಆದರೆ ಹಣವನ್ನೇ ಮಾಡಬೇಕೆಂದು ಬರಬೇಡಿ ಎನ್ನುತ್ತಾರೆ ಪ್ರಮೋದ್.
ರಾಷ್ಟ್ರಪತಿ ಕೆ.ಆರ್. ನಾರಾಯಣ್ ನನ್ನ ಬಗ್ಗೆ ಕೇಳಿ ಬೆನ್ನುತಟ್ಟಿದ್ದರು
ಅಬ್ದುಲ್ ಕಲಾಂ ಹೇಳಿದಂತೆ, ಯಾವಾಗಲೂ ನಾವು ದೊಡ್ಡ ದೊಡ್ಡ ಕನಸುಗಳನ್ನೇ ಕಾಣಬೇಕು. ನಾನು ರಾಷ್ಟ್ರಪತಿಯನ್ನು ನೋಡುತ್ತೇನೆಂದು ಅಂದುಕೊಂಡವನೂ ಅಲ್ಲ. ಆದರೆ ಕೆ.ಆರ್. ನಾರಾಯಣ್ ಅವರನ್ನು ನೋಡಿ ಕೈ ಕುಲುಕು ಮಾತನಾಡಿದ್ದರು. ಅದು ನನ್ನ ಸ್ಮರಣೀಯವಾದ ಘಟನೆ. ಹಾಗೆ ಮಂತ್ರಿಗಳಾದ ಜಾರ್ಜ್ ಫರ್ನಾಂಡಿಸ್, ಬಂಗಾರು ಲಕ್ಮಣ್ ಹಾಗೂ ದೇಶದ ನಮ್ಮ ಸಮುದಾಯದ ಎಲ್ಲಾ ಎಂಪಿಗಳನ್ನು ಒಮ್ಮೆ ಭೇಟಿ ಮಾಡಿದ್ದು ಜೀವನದ ಬಹುಮುಖ್ಯ ಘಟನೆಗಳು ಒಬ್ಬ ಉದ್ಯಮಿಯಾಗಿ ಇದೆಲ್ಲ ಸಾಧ್ಯವಾಯಿತು. ರಾಷ್ಟ್ರಪತಿ ಭವನದಲ್ಲಿ ಅವರನ್ನು ಮುಟ್ಟಿ ಮಾತನಾಡಿಸಿದ್ದು ನನ್ನ ಜೀವನದ ಅವಿಸ್ಮರಣೀಯ ಹಾಗೂ ಅದ್ಭುತ ಕ್ಷಣಗಳು .
ಬಾಬಾಸಾಹೇಬರಿಲ್ಲದಿದ್ದರೆ ನಾನಿಲ್ಲ….! ಈ ಯಶಸ್ಸಿಗೆ ಅವರೇ ಕಾರಣ.
ಹೌದು…! ನನ್ನ ಎಲ್ಲಾ ಬೆಳವಣಿಗೆ, ಸಾಧನೆಯ ಯಶಸ್ಸಿನ ಹಿಂದಿನ ಆದರ್ಶ ಬಾಬಾಸಾಹೇಬ್ ಅಂಬೇಡ್ಕರ್. ಅವರೇ ನನ್ನ ದೇವರು. ಅವರು ಕೊಟ್ಟ ಭಿಕ್ಷೆಯಿಂದ ನಾವು ಈ ಮಟ್ಟಕ್ಕೆ ಬಂದಿದ್ದೇವೆ. ಅವರಿಲ್ಲದಿದ್ದರೆ ನಾನು ಈ ಕ್ಷೇತ್ರಕ್ಕೆ ಬರಲು ಸಾಧ್ಯವೇ ಇರುತ್ತಿರಲಿಲ್ಲ. ನನ್ನ ಮೊದಲ ಸ್ಪೂರ್ತಿ. ಅವರಿಂದಲೇ ನಾನು ಈ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು. ನಾನೊಬ್ಬ ಅಂಬೇಡ್ಕರ್ ಅನುಯಾಯಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.
(ಪ್ರಮೋದ್ , ಆಕಾಶ್ ಜ್ಯೂಯಲರ್ಸ್ ಮಾಲೀಕರು, ಹಾಸನ ಮೊ- 9448330416)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
ಸುದ್ದಿದಿನ ಡೆಸ್ಕ್:ಹಲವಾರು ವರ್ಷಗಳ ಕಾಲ ಬಂಗಾಳಿ ಟೆಲಿವಿಷನ್ನಲ್ಲಿ ಕೆಲಸ ಮಾಡಿದ ನಂತರ ಮತ್ತು ನಂತರ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ವಿಸ್ತರಿಸಿದ ನಂತರ, ಅಭಿನೇತಾ ಸುಶೋಭನ್ ಸೋನು ರಾಯ್ ಅವರು ‘ಟೇಕ್ ಕೇರ್ ಭಾಲೋಬಾಸ’ ಚಿತ್ರದ ಮೂಲಕ ಬಂಗಾಳಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ‘ಜಾಯ್’ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ಇದು ಸ್ನೇಹ, ಸಂಬಂಧಗಳು ಮತ್ತು ಕಾಲಾನುಕ್ರಮದಲ್ಲಿ ವಿಕಸನಗೊಳ್ಳುವ ಭಾವನೆಗಳ ಸುತ್ತ ಕೇಂದ್ರೀಕೃತವಾಗಿರುವ ಕಥೆಯಲ್ಲಿನ ಒಬ್ಬ ಸ್ನೇಹಿತ.
ನಿರ್ದೇಶಕ ಪಿಜೂಷ್ ಸಾಹಾ ಅವರ ಮಾರ್ಗದರ್ಶನದಲ್ಲಿ ಸುಶೋಭನ್ ಅವರ ಅಭಿನಯ ಪ್ರಯಾಣವು ಪ್ರಾರಂಭವಾಯಿತು, ಅಲ್ಲಿ ಅವರು ಸುಮಾರು ಎರಡು ವರ್ಷಗಳ ಕಾಲ ಅಭಿನಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದರು. ನಿಯಮಿತ ಆಡಿಷನ್ಗಳ ನಂತರ, 2019 ರಲ್ಲಿ ಅವರು ಆಕಾಶ್ ಆಠ್ ಚಾನೆಲ್ನ ‘ಆನಂದಮಯೀ ಮಾ’ ಧಾರಾವಾಹಿಯ ಮೂಲಕ ತಮ್ಮ ಟೆಲಿವಿಷನ್ ಚೊಚ್ಚಲ ಪ್ರವೇಶವನ್ನು ಮಾಡಿದರು, ಇದನ್ನು ಮರಣೋತ್ತರ ನಿರ್ದೇಶಕ ದೇವಿದಾಸ್ ಭಟ್ಟಾಚಾರ್ಯ ನಿರ್ದೇಶಿಸಿದ್ದರು, ಅದರಲ್ಲಿ ಅವರು ವೈಷ್ಣವ ಭಕ್ತನ ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ಸ್ಟಾರ್ ಜಲ್ಸಾದ ‘ಮೋಹರ್’, ‘ಕೋರಾಪಾಖಿ’, ‘ತಿತ್ಲಿ’ ಮತ್ತು ‘ಖೇಲಾಘರ್’, ಜೊತೆಗೆ ಜೀ ಬಂಗ್ಲಾದ ‘ಜಮುನಾ ಢಾಕಿ’ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು, ಹೀಗೆ ಬಂಗಾಳಿ ಟೆಲಿವಿಷನ್ನಲ್ಲಿ ತಮ್ಮ ಕೆಲಸವನ್ನು ಮುಂದುವರೆಸಿದರು.
COVID-19 ಸಾಂಕ್ರಾಮಿಕ ಸಮಯದಲ್ಲಿ, ಅಭಿನಯದ ಕೆಲಸಗಳು ಸೀಮಿತವಾದಾಗ, ಸುಶೋಭನ್ ಮಾಡೆಲಿಂಗ್ಗೆ ತಿರುಗಿದರು. 2023 ರಿಂದ ಪ್ರಾರಂಭಿಸಿ, ಅವರು ಹಾಲಿಡೇ ಇನ್ ಹೋಟೆಲ್, ಡಾಬರ್, ಟೈಟಾನ್ ಐ+, ವೆಲಾಸಿಟಿ ಐವೇರ್, ಅಮೆಜಾನ್, ಸ್ಪೆನ್ಸರ್ಸ್, ಕ್ಯಾಂಪಸ್ ಶೂಸ್, ಬಿಗ್ ಬಜಾರ್, ಬಯೋಟಿಕ್ ಮತ್ತು ಫಿಯಾಮಾ ಡಿ ವಿಲ್ಸ್ ಸೇರಿದಂತೆ ಹಲವಾರು ಬ್ರಾಂಡ್ಗಳೊಂದಿಗೆ ಕೆಲಸ ಮಾಡಿದರು. 2025 ರಲ್ಲಿ, ಕೋಲ್ಕತ್ತಾದಲ್ಲಿ ನಡೆದ ‘ಎತ್ನಿಕ್ ಎಲಿಗನ್ಸ್ 2025’ ಸೌಂದರ್ಯ ಸ್ಪರ್ಧೆಯಲ್ಲಿ ಅವರು ಪ್ರಥಮ ರನ್ನರ್-ಅಪ್ ಆಗಿ ಆಯ್ಕೆಯಾದರು.
ಹೌರಾದಲ್ಲಿ ಜನಿಸಿ ಕೋಲ್ಕತ್ತಾದಲ್ಲಿ ಬೆಳೆದ ಸುಶೋಭನ್, ಸುಮಾರು ಮೂರೂವರೆ ವರ್ಷದ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ನಂತರ ತಾಯಿಯಿಂದ ಬೆಳೆಸಲ್ಪಟ್ಟರು. ಅವರು ಕೋಲ್ಕತ್ತಾದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು 2016 ರಲ್ಲಿ ದಮ್ ದಮ್ ಮೋತಿಜೀಲ್ ರವೀಂದ್ರ ಮಹಾವಿದ್ಯಾಲಯದಿಂದ ವಾಣಿಜ್ಯದಲ್ಲಿ ಬಿ.ಕಾಮ್ ಪದವಿಯನ್ನು ಪಡೆದರು. ಅಭಿನಯವನ್ನು ಮುಂದುವರಿಸುವ ಮೊದಲು, ಅವರು ಸುಮಾರು ಎರಡು ವರ್ಷಗಳ ಕಾಲ ಪಾಶ್ಚಾತ್ಯ ನೃತ್ಯದಲ್ಲಿ ತರಬೇತಿ ಪಡೆದರು ಮತ್ತು ರಂಗ ಪ್ರದರ್ಶನಗಳಲ್ಲಿ ಭಾಗವಹಿಸಿದರು.
‘ಟೇಕ್ ಕೇರ್ ಭಾಲೋಬಾಸ’ ಸುಶೋಭನ್ ಅವರ ಮೊದಲ ಬಂಗಾಳಿ ಫೀಚರ್ ಫಿಲ್ಮ್ನಲ್ಲಿ ಕಾಣಿಸಿಕೊಳ್ಳುವುದನ್ನು ಸೂಚಿಸುತ್ತದೆ. ಈ ಚಿತ್ರದಲ್ಲಿ, ಜಾಯ್ ಅವರು ಕೆಲವೊಮ್ಮೆ ಸಂಯಮದಿಂದಿರುವ, ಆದರೆ ಉಷ್ಣತೆ, ಸ್ನೇಹಪರತೆ ಮತ್ತು ಸಹಜತೆಯನ್ನು ಪ್ರದರ್ಶಿಸುವ ಪಾತ್ರವಾಗಿ ಚಿತ್ರಿಸಲಾಗಿದೆ, ಇದು ಸಂಬಂಧಗಳು ಮತ್ತು ದೈನಂದಿನ ಭಾವನೆಗಳ ಅನ್ವೇಷಣೆಗೆ ಕೊಡುಗೆ ನೀಡುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
ಸುದ್ದಿದಿನ, ಚಿತ್ರದುರ್ಗ: ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗಗಳಲ್ಲಿ 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆಗೆ ಬಿಡುಗಡೆಯಾಗಿರುವ ಅಂದಾಜು 7 ಕೋಟಿ ಅನುದಾನದಲ್ಲಿನ ಅವ್ಯವಹಾರವನ್ನು ತನಿಖೆಗೆ ಒಳಪಡಿಸುವಂತೆ ಲೋಕಾಯುಕ್ತಾಗೆ ದೂರು ನೀಡಲಾಗಿದೆ ಎಂದು ವಕೀಲ ಕೆ.ಎ.ಓಬಳಪ್ಪ ಅವರು ತಿಳಿಸಿದರು.
ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಒಟ್ಟು 4 ಹಂತದಲ್ಲಿ 7 ಕೋಟಿ ರೂಪಾಯಿಗಳನ್ನು ಚಿತ್ರದುರ್ಗ ಜಿಲ್ಲೆಯ 06 ತಾಲ್ಲೂಕುಗಳಿಗೆ ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ಮಾಹಿತಿ ತಿಳಿದಿದೆ ಎಂದರು.
ಚಿತ್ರದುರ್ಗ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 06 ತಾಲ್ಲೂಕುಗಳ ಉಪವಿಭಾಗಗಳಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ ಮಾಹಿತಿ ಕೋರಿದಾಗ, ಯಾವುದೇ ಉಪವಿಭಾಗಗಳ ಅಧಿಕಾರಿಗಳು ಸೂಕ್ತ ಮಾಹಿತಿ ನೀಡದ ಕಾರಣ ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರಿಗೆ ಅರ್ಜಿ ಸಲ್ಲಿಸಿ, ‘2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಚಳ್ಳಕೆರೆ, ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ಮೊಳಕಾಲ್ಮೂರು ತಾಲ್ಲೂಕುಗಳಿಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ’ ದೂರು ನೀಡಲಾಗಿತ್ತು ಎಂದರು.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರು ನಮ್ಮ ದೂರು ಅರ್ಜಿಯನ್ನು ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ವರ್ಗಾಹಿಸಿ, ಸೂಕ್ತ ಕ್ರಮವಹಿಸಿ ಕಛೇರಿಗೆ ವರದಿ ಸಲ್ಲಿಸಲು ಸೂಚಿಸಿರುತ್ತಾರೆ. ಅದರಂತೆ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರು ವಿಚಾರಣೆ ನಡೆಸಿ, ಅರ್ಜಿದಾರರಿಗೆ ಕಡತ ವೀಕ್ಷಣೆ ಮಾಡಲು ಅವಕಾಶ ನೀಡಿ, ದಾಖಲೆ ನೀಡುವಂತೆ ಆದೇಶ ಹೊರಡಿಸಿರುತ್ತಾರೆ ಎಂದು ತಿಳಿಸಿದರು.
ಕಾರ್ಯಪಾಲಕ ಅಭಿಯಂತರರ ಆದೇಶದಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ಇವರುಗಳು ವಿವಿಧ ದಿನಾಂಕಗಳAದು ಉಪವಿಭಾಗಗಳಿಗೆ ಆಹ್ವಾನಿಸಿ, ಕಡತ ಪರಿಶೀಲನೆ ಮಾಡಿಕೊಳ್ಳುವಂತೆ ತಿಳಿಸಿದ ಕಾರಣ ಉಪವಿಭಾಗಗಳ ಕಾರ್ಯಪಾಲಕ ಅಭಿಯಂತರರುಗಳು ನಿಗಧಿಪಡಿಸಿದ ದಿನಾಂಕದಂದು ಉಪವಿಭಾಗಗಳ ಕಛೇರಿಗೆ ಭೇಟಿ ನೀಡಿದಾಗ ಕಂಡುಬಂದ ಅಂಶಗಳೆಂದರೆ;
1. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಚಿತ್ರದುರ್ಗ ಇಲ್ಲಿ ಒಟ್ಟು 80 ಕಾಮಗಾರಿಗಳು ನಡೆದಿದ್ದು, ಇದರಲ್ಲಿ ಕೇವಲ 23 ಕಾಮಗಾರಿಗಳ (ಅಂದಾಜು ಮೊತ್ತ ರೂ. 37.88 ಲಕ್ಷ) ಕಡತಗಳನ್ನು ತೋರಿಸಿದ್ದು, ಉಳಿದ ಕಾಮಗಾರಿಯ ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬ ನಮ್ಮ ಕಡತ ಪರಿಶೀಲನೆ ಪತ್ರಕ್ಕೆ ದೃಢೀಕರಣ ನೀಡಿರುತ್ತಾರೆ.
2. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಚಳ್ಳಕೆರೆ ಇಲ್ಲಿ ಒಟ್ಟು 80 ಕಾಮಗಾರಿಗಳ ಕಡತಗಳಲ್ಲಿ 28 ಕಾಮಗಾರಿಗಳ ಕಡತಗಳನ್ನು ತೋರಿಸಿದ್ದು, ಉಳಿದ 52 ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬ ನಮ್ಮ ಪರಿಶೀಲನೆ ಪತ್ರಕ್ಕೆ ದೃಢೀಕರಣ ನೀಡಿರುತ್ತಾರೆ.
3. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಇಲ್ಲಿಗೆ ಭೇಟಿ ನೀಡಿದ ಸಮಯದಲ್ಲಿ ಈ ಕಛೇರಿಗಳಲ್ಲಿ ಯಾವುದೇ ಕಡತಗಳು ಲಭ್ಯವಿರುವುದಿಲ್ಲ. ಕಛೇರಿಯ ಸಿಬ್ಬಂದಿಗಳು ತುರ್ತು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬುದಾಗಿ ದೃಢೀಕರಣ ನೀಡಿರುತ್ತಾರೆ ಎಂದು ತಿಳಿಸಿದರು.
ಕಡತ ಪರಿಶೀಲನೆಯ ತರುವಾಯ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ದೂರು ನೀಡಿ, ನಾವು ಕೋರಿದ ಅಗತ್ಯ ದಾಖಲೆಗಳನ್ನು ಒದಗಿಸಿಕೊಡುವಂತೆ ಕೋರಲಾಗಿತ್ತು. ಆದರೆ ಕಾರ್ಯಪಾಲಕ ಅಭಿಯಂತರರು ಇವರು ಮಾಹಿತಿ ಕೊಡಿಸುವಲ್ಲಿ ಮತ್ತು ತನಿಖಾ ವರದಿ ನೀಡುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಹಾಲಿ ಕಾರ್ಯಪಾಲಕ ಅಭಿಯಂತರರಾದ ಅಮರ್‌ನಾಥ್ ಜೈನ್ ಅವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿರುತ್ತದೆ ಎಂದರು.
ಈ ಎಲ್ಲಾ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ 6 ಉಪವಿಭಾಗಗಳಲ್ಲಿ ಕಾರ್ಯನಿರ್ವಹಿಸಿರುವ 23 ಸಹಾಯಕ ಕಾರ್ಯಪಾಲಕ ಅಭಿಯಂತರರು, 13 ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಿರಿಯ ಅಭಿಯಂತರರು, ಅಂದಿನ ಕಾರ್ಯಪಾಲಕ ಅಭಿಯಂತರರಾದ ಬಸವನಗೌಡ ಪಾಟೀಲ್ ಹಾಗೂ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಹಿರಿಯ ವಕೀಲರಾದ ನಾಗರಾಜ ಪೂಜಾರ್, ಪತ್ರಕರ್ತ ಅಶೋಕ್, ಹನುಮಂತಪ್ಪ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅನುದಾನ ದುರುಪಯೋಗ | ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಅಶೋಕ್ ಡಿ.ಆರ್ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಮೈಸೂರು ಇವರಿಗೆ ರಾಜ್ಯಾದ್ಯಂತ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಬಿಡುಗಡೆಯಾದ ರೂ. 695 ಲಕ್ಷಗಳ ಅನುದಾನದ ಖರ್ಚು ವೆಚ್ಚವನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಯಾವುದೇ ತನಿಖಾ ವರದಿನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ನಿರ್ಲಕ್ಷö್ಯ ತೋರಿದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇಲ್ಲಿನ ನಿರ್ದೇಶಕರಾದ ಡಾ. ಅಶೋಕ್ ಡಿ.ಆರ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿನ ಬುಡಕಟ್ಟು ಸಮುದಾಯಗಳ ಪ್ರಗತಿಗೆ ಸಂಬAಧಿಸಿದAತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಸಲುವಾಗಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಮೈಸೂರು ಇವರಿಗೆ ರೂ. 695 ಲಕ್ಷ ರೂಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಿರುತ್ತದೆ. ಸದರಿ ಅನುದಾನದ ಖರ್ಚು-ವೆಚ್ಚದಲ್ಲಿ ಸಾಕಷ್ಟು ಅವ್ಯವಹಾರ ಹಾಗೂ ಅಕ್ರಮಗಳು ನಡೆದಿರುವ ಅಧಿಕೃತ ದಾಖಲೆಗಳನ್ನು ಲಗತ್ತಿಸಿ ಇಲಾಖಾ ತನಿಖೆ ನಡೆಸುವಂತೆ ನಿರ್ದೇಶಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇವರಿಗೆ ದಿನಾಂಕ: 27-04-2026 ರಂದು ದೂರು ನೀಡಲಾಗಿತ್ತು.
ಆದರೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಸಾರ್ವಜನಿಕ ಹಿತಾಸಕ್ತಿ ಕೇಂದ್ರಿತ ದೂರು ಅರ್ಜಿಗೆ ಸಂಬಂಧಿಸಿದಂತೆ ನಿರ್ದೇಶಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇವರು ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡಿರುವುದಿಲ್ಲ. ಆದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಡಾ. ಅಶೋಕ್ ಡಿ.ಆರ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ22 hours agoಅನುದಾನ ದುರುಪಯೋಗ | ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಅಶೋಕ್ ಡಿ.ಆರ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ22 hours agoತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
-
ದಿನದ ಸುದ್ದಿ21 hours agoಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ

