ದಿನದ ಸುದ್ದಿ
ಜನಸಾಮಾನ್ಯರ ಬಳಕೆಗೆ ‘ದಾವಣಗೆರೆ ಆನ್ ಮ್ಯಾಪ್’ ಮೊಬೈಲ್ ಆ್ಯಪ್ ಲೋಕಾರ್ಪಣೆ
ಸುದ್ದಿದಿನ,ದಾವಣಗೆರೆ : ಜನಸಾಮಾನ್ಯರಿಗೆ ಸರ್ಕಾರಿ ಕಚೇರಿಗಳ, ಆಸ್ಪತ್ರೆಗಳ, ಯಾತ್ರಾಸ್ಥಳ, ಜನೌಷದಿ ಇತ್ಯಾದಿ ಸ್ಥಳ, ವಿಳಾಸ ಮತ್ತು ಇತರ ಮಾಹಿತಿಯನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ‘ದಾವಣಗೆರೆ ಆನ್ ಮ್ಯಾಪ್’ ಮೊಬೈಲ್ ಆ್ಯಪ್‍ನ್ನು ಜಿಲ್ಲೆಯ ಎನ್‍ಐಸಿ ಅಧಿಕಾರಿಗಳು ಅಭಿವೃದ್ದಿಪಡಿಸಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯ ನ್ಯಾಷನಲ್ ಇನ್‍ಫರ್ಮಾಟಿಕ್ಸ್ ಸೆಂಟರ್(ಎನ್‍ಐಸಿ) ಅಧಿಕಾರಿಗಳು ಅಭಿವೃದ್ದಿಪಡಿಸಿರುವ ‘ದಾವಣಗೆರೆ ಆನ್ ಮ್ಯಾಪ್’ ಮೊಬೈಲ್ ಆ್ಯಪ್‍ಗೆ ಜಿಲ್ಲಾಡಳಿತ ಕಚೇರಿಯಲ್ಲಿ ಗುರುವಾರ ಅಧಿಕೃತವಾಗಿ ಚಾಲನೆ ನೀಡಿ, ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಲು ಆಯೋಜಿಸದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲೇ ಈ ಆ್ಯಪ್‍ನ್ನು ಲೋಕಾರ್ಪಣೆಗೊಳಿಸಿದ ಮೊದಲ ಜಿಲ್ಲೆ ನಮ್ಮದು ಎಂದರು.
ಕೇಂದ್ರ ಸರ್ಕಾರದಿಂದ ಎಲ್ಲ ರಾಜ್ಯಗಳಿಗೆ ಮಾ.29 ರೊಳಗೆ ಈ ರೀತಿ ಆಪ್ ಪ್ರಕಟಿಸಲು ಸಮಯ ನಿಗದಿಗೊಳಿಸಲಾಗಿದ್ದು, ರಾಜ್ಯದಲ್ಲೇ ಮೊದಲನೆಯದಾಗಿ ನಮ್ಮ ಜಿಲ್ಲೆಯಲ್ಲಿ ಈ ಆಪ್‍ನ್ನು ಅಭಿವೃದ್ದಿಪಡಿಸಿ ಇಂದು ಲೋಕಾರ್ಪಣೆ ಮಾಡಲಾಗಿದೆ ಎಂದರು.
‘ದಾವಣಗೆರೆ ಆನ್ ಮ್ಯಾಪ್’ ಒಂದು ವಿಶಿಷ್ಟವಾದ ಮೊಬೈಲ್ ಆ್ಯಪ್ ಆಗಿದೆ. ಡಿಸ್ಟ್ರಿಕ್ಟ್ ಗವರ್ನೆನ್ಸ್ ಮೊಬೈಲ್ ಚಾಲೆಂಜ್ ಅಡಿಯಲ್ಲಿ ದೇಶದ ಎಲ್ಲಾ ಜಿಲ್ಲೆಗಳ ಎನ್‍ಐಸಿ ಅಧಿಕಾರಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಇದರ ಅಂಗವಾಗಿ ‘ದಾವಣಗೆರೆ ಆನ್ ಮ್ಯಾಪ್ ಮೊಬೈಲ್ ಆಪ್‍ನ್ನು ಕೇವಲ 15 ರಿಂದ 20 ದಿನಗಳಲ್ಲಿ ನಮ್ಮ ಅಧಿಕಾರಿಗಳು ಅಭಿವೃದ್ದಿಪಡಿಸಿದ್ದಾರೆ ಎಂದರು.
ಆರು ಸೇವೆ ಮಾಹಿತಿ ಅಳವಡಿಕೆ
ಇದು ಮುಖ್ಯವಾಗಿ ಜನಸಾಮಾನ್ಯರಿಗೆ ಒಂದು ಯುಟಿಲಿಟಿ ಆಗಿ ಹೆಚ್ಚು ಉಪಯೋಗ ಆಗಲಿದ್ದು, ಇದರಲ್ಲಿ ದಾವಣಗೆರೆ ಜಿಲ್ಲೆಯ ಆರು ಪ್ರಮುಖ ಮಾಹಿತಿಗಳನ್ನು ಅಳವಡಿಸಲಾಗಿದೆ. ಅವುಗಳೆಂದರೆ ಆಸ್ಪತ್ರೆಗಳು, ಜನೌಷಧ ಕೇಂದ್ರಗಳು, ಪೊಲೀಸ್ ಸ್ಟೇಷನ್‍ಗಳು, ಪೆಟ್ರೋಲ್ ಬಂಕ್‍ಗಳು, ಗ್ರಾಮ ಒನ್ ಕೇಂದ್ರಗಳು ಮತ್ತು ಯಾತ್ರಾ ಸ್ಥಳಗಳು.
ಉದಾಹರಣೆಗೆ ಆಸ್ಪತ್ರೆಗಳು ಆಯ್ಕೆ ಮಾಡಿದಾಗ ಇವುಗಳಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಗೂಗಲ್ ಮ್ಯಾಪ್ ನಲ್ಲಿ ನೋಡಿಕೊಳ್ಳಬಹುದು. ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 400ಕ್ಕಿಂತ ಹೆಚ್ಚು ಸರ್ಕಾರಿ ಆಸ್ಪತ್ರೆಗಳಿವೆ. ಅದರಲ್ಲಿ ಬೇರೆ ಬೇರೆ ವರ್ಗದ ಆಸ್ಪತ್ರೆಗಳನ್ನು ಆಯ್ಕೆ ಮಾಡುವ ಅವಕಾಶವನ್ನು ಸಹ ನೀಡಲಾಗಿದೆ. ಯಾವುದೇ ವರ್ಗವನ್ನು ಆಯ್ಕೆ ಮಾಡಿದ ನಂತರ ಅದಕ್ಕೆ ಸಂಬಂಧಪಟ್ಟ ಆಸ್ಪತ್ರೆಗಳೆಲ್ಲವೂ ಗೂಗಲ್ ಮ್ಯಾಪ್ ಮೇಲೆ ಕಾಣಿಸುತ್ತದೆ.
ಇವುಗಳಲ್ಲಿ ಯಾವುದನ್ನಾದರೂ ಕ್ಲಿಕ್ ಮಾಡಿದಾಗ ಈ ಆಸ್ಪತ್ರೆಯ ಮಾಹಿತಿ ವಿಂಡೋ ಕಾಣಿಸುತ್ತದೆ. ಮಾಹಿತಿ ವಿಂಡೋ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿದಾಗ ಅದರಲ್ಲಿರುವ ದೂರವಾಣಿ ಸಂಖ್ಯೆಗೆ ನೇರವಾಗಿ ಫೋನ್ ಕಾಲ್ ಹೋಗುತ್ತದೆ. ಇನ್ನೂ ಹೆಚ್ಚುವರಿಯಾಗಿ ನಾವು ಇರುವ ಸ್ಥಳದಿಂದ ಆಸ್ಪತ್ರೆಗೆ ರಸ್ತೆ ಮಾರ್ಗ, ದೂರ ಮತ್ತು ಅಲ್ಲಿಗೆ ತಲುಪುವ ಸಮಯ ಸಹ ಕಾಣಿಸುತ್ತದೆ. ಇದೇ ರೀತಿ ಮೇಲ್ಕಂಡ ಉಳಿದ ಇಲಾಖೆಗಳ ಮಾಹಿತಿಯನ್ನು ಪಡೆಯಬಹುದು.
ಹೆಚ್ಚುವರಿಯಾಗಿ ದಾವಣಗೆರೆ ಜಿಲ್ಲೆಯ ವೆಬ್‍ಸೈಟ್ ಸಹ ಇದರಲ್ಲಿಯೇ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇತರೆ ಇಲಾಖೆಗಳ ಮಾಹಿತಿಗಳನ್ನು ಆ್ಯಪ್‍ನಲ್ಲಿ ಅಳವಡಿಸಲಾಗುವುದು. ಅದರಲ್ಲಿ ಮುಖ್ಯವಾಗಿ ಶಾಲೆಗಳು, ರೈತ ಸಂಪರ್ಕ ಕೇಂದ್ರಗಳು, ವೆರ್ಟನರಿ ಹಾಸ್ಪಿಟಲ್‍ಗಳು ಮತ್ತು ಗ್ರಾಮ ಪಂಚಾಯಿತಿಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ.
ಈ ಮೊಬೈಲ್ ಆಪ್ ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಲಭ್ಯವಿದೆ. ಯಾರು ಬೇಕಾದರೂ ಇದನ್ನು ಡೌನ್‍ಲೋಡ್ ಮಾಡಿಕೊಂಡು ಉಪಯೋಗಿಸಬಹುದು. ಪ್ಲೇಸ್ಟೋರ್ ಲಿಂಕ್ ಈ ರೀತಿ ಇದೆ.
https://play.google.com/store/apps/details?id=davanagere.kar.nic.in.testmap1
ಮತ್ತು ಇದರ ಲಿಂಕ್ ಅನ್ನು davanagre.nic.in
ವೆಬ್‍ಸೈಟ್ ಮುಖಾಂತರ ಸಹ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಹಾಗೂ ಮುಂದಿನ ದಿನಗಳಲ್ಲಿ ಸಾರ್ವಜನಿಕರು ವೆಬ್‍ಪೋರ್ಟಲ್‍ನಲ್ಲಿ ಜಿಲ್ಲೆಯ ವಿವರವಾದ ಮಾಹಿತಿಯನ್ನು ಸಹ ಪಡೆಯುವಂತೆ ಆ್ಯಪ್‍ನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಇದೊಂದು ಜನರಿಗೆ ಉಪಯುಕ್ತವಾದ ಸೇವೆಯಾಗಿದೆ ಎಂದು ಎನ್‍ಐಸಿ ಅಧಿಕಾರಿಗಳಾದ ಉದಯಕುಮಾರ್ ಮತ್ತು ರಮೇಶ್ ತಿಳಿಸಿದರು.
ಖಾಸಗಿಯವರನ್ನು ನಂಬಿ ಮೋಸ ಹೋಗದಿರುವಂತೆ ಡಿಸಿ ಎಚ್ಚರಿಕೆ
ಪಳನಿಸ್ವಾಮಿ ಎಂಬುವವರು ಆಶ್ರಯ ಮನೆಗಳನ್ನು ಕೊಡಿಸುವುದಾಗಿ ಜನರಿಂದ ಹಣಕಾಸು ವ್ಯವಹಾರ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಜನರು ಯಾವುದೇ ಖಾಸಗಿ ವ್ಯಕ್ತಿಗಳನ್ನು ನಂಬಿ ಹಣ ನೀಡಿ ಮೋಸ ಹೋಗಬಾರದು.
ಜಿಲ್ಲಾಡಳಿತ ಆಗಲೀ ಅಥವಾ ಯಾವುದೇ ಸಕ್ಷಮ ಪ್ರಾಧಿಕಾರ ಅವರಿಗೆ ಯಾವುದೇ ಅಧಿಕಾರ ನೀಡಿಲ್ಲ ಎಂದು ಸ್ಪಷ್ಪಪಡಿಸಿದ ಅವರು ಆಶ್ರಯ ನಿವೇಶನಗಳಿಗಾಗಿ ರಾಜೀವಗಾಂಧಿ ವಸತಿ ನಿಗಮಕ್ಕೆ ನಮ್ಮಿಂದ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ. ನಿವೇಶನ ಮಂಜೂರಾದ ನಂತರ ಜೇಷ್ಟತೆಯ ಆದ್ಯತೆ ಮೇರೆಗೆ ನಿವೇಶನ ಹಂಚಿಕೆ ಮಾಡಲಾಗುವುದು. ಅಲ್ಲಿಯವರೆಗೆ ಜನರು ಯಾವುದೇ ಖಾಸಗಿ ವ್ಯಕ್ತಿಗಳನ್ನು ನಂಬಿ ಮೋಸ ಹೋಗಬಾರದು ಎಂದು ಎಚ್ಚರಿಕೆ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮ’
ಸುದ್ದಿದಿನ,ದಾವಣಗೆರೆ: ನಗರದ ಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಥಮ ವರ್ಷದ ಹಾಗೂ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ರಶ್ಮಿ . ಸಿ. ಹೆಚ್ ಅವರು ಉದ್ಘಾಟಿಸಿದರು.
ಸನಾವುಲ್ಲಾ ನವಿಲೇಹಾಳು ಅವರು ಉಪನ್ಯಾಸ ಮಾಡಿ ಹೊಸ ತಲೆಮಾರಿನವರು ಸಮಾಜಿಕ ಜಾಲತಾಣಗಳಲ್ಲಿ ಗೇಮ್ , ರೀಲ್ಸ್ ಇತರೆ ವಿಷಯಗಳಲ್ಲಿ ಮುಳುಗಿ ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಶಿಕ್ಷಣ ಪಡೆದು ಉತ್ತಮ ವ್ಯಕ್ತಿತ್ವ ಕಟ್ಟಿಕೊಳ್ಳಬೇಕು. ತ್ಯಾಗ ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆಕೊಟ್ಟರು.
ಉಪಸ್ಥಿತರಿದ್ದ ಕಾಲೇಜಿನ ಕುಲಸಚಿವರಾದ ಶ್ರೀ ಜಗದೀಶ್ ಹೆಚ್ ಅವರು ಮಾತನಾಡಿ ವಿದ್ಯಾರ್ಥಿಗಳು ತಮಗೆ ಎದುರಾಗುವ ಸಮಸ್ಯೆಗಳನ್ನು ಮೆಟ್ಟಿನಿಂತು ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಡಬೇಕು ಎಂದರು. ಸಿಸಿಟೆಕ್ ಮ್ಯಾನೇಜರ್ ಆದ ಶ್ರೀ ಶಿವಕುಮಾರ ಸ್ವಾಮಿ ಎಸ್.ಹೆಚ್. ಸಂಯೋಜಕರಾದ ಶ್ರೀ ಮತಿ ಆಸೀಯಾ ಬಾನು ಬಿ. ಪ್ರಾಸ್ಥಾವಿಕವಾಗಿ ಮಾತನಾಡಿದರು ಹಾಗೂ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಬೃಂದ ಕಾರ್ಯಕ್ರಮ ನಿರೂಪಿಸಿದರು,
ವೈಷ್ಣವಿ, ಲಾವಣ್ಯ, ಭಾವನ ಪ್ರಾರ್ಥಿಸಿದರು, ಉಪನ್ಯಾಸಕಿ ಪ್ರಿಯಾಂಕ ಟಿ ಎಸ್ ವಂದಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ.
23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.
ಆದರೆ ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್‌ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್ ಸಂಜೀವ್ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.
ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.
ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್, ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ಒಂದು ಮೊಬೈಲ್ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days agoನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
-
ದಿನದ ಸುದ್ದಿ2 days agoಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
ದಿನದ ಸುದ್ದಿ2 days agoದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು
-
ದಿನದ ಸುದ್ದಿ2 days agoಪಲ್ಸ್ ಪೋಲಿಯೋದಿಂದ ಯಾವುದೇ ಮಗು ವಂಚಿತವಾಗದಂತೆ ಕ್ರಮವಹಿಸಿ: ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್
-
ದಿನದ ಸುದ್ದಿ12 hours agoಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮ’

