ದಿನದ ಸುದ್ದಿ
ದಾವಣಗೆರೆ ಮುಖ್ಯ ಬಸ್ ನಿಲ್ದಾಣ ಲೋಕಾರ್ಪಣೆ ; ರಾಜ್ಯದಲ್ಲಿ ಮಾದರಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ : ಸಚಿವ ರಾಮಲಿಂಗಾರೆಡ್ಡಿ
ಸುದ್ದಿದಿನ,ದಾವಣಗೆರೆ : ದಾವಣಗೆರೆ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹಲವು ಆಧುನಿಕ ಸೌಕರ್ಯಗಳನ್ನು ಹೊಂದಿದ್ದು ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್‍ಗಳ ಜೊತೆಗೆ ಪ್ರಯಾಣಿಕರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ರಾಜ್ಯದಲ್ಲಿನ ಮೊದಲ ಬಸ್ ನಿಲ್ದಾಣ ಇದಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿಯವರು ತಿಳಿಸಿದರು.
ಅವರು ಶನಿವಾರ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣ ಮಾಡಲಾಗಿರುವ ದಾವಣಗೆರೆ ಮುಖ್ಯ ಬಸ್ ನಿಲ್ದಾಣ ಹಾಗೂ ಬೇತೂರು ರಸ್ತೆಯಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಲೋಕಾರ್ಪಣೆ ಮಾಡಿ ಮುಖ್ಯ ಬಸ್ ನಿಲ್ದಾಣದಲ್ಲಿ ಏರ್ಪಡಿಸಲಾದ ಸಮಾರಂಭದಲ್ಲಿ ಮಾತನಾಡಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣಗೆರೆ ಮುಖ್ಯ ಬಸ್ ನಿಲ್ದಾಣ ಮತ್ತು ಬೇತೂರು ರಸ್ತೆಯ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಮುಖ್ಯ ಬಸ್ ನಿಲ್ದಾಣವನ್ನು ಶೇ 109.84 ಕೋಟಿಯಲ್ಲಿ 6.07 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಶೇ 25 ರಷ್ಟು ನಿಗಮದ ಅನುದಾನ ಹಾಗೂ ಶೇ 75 ರಷ್ಟು ಸ್ಮಾರ್ಟ್ ಸಿಟಿ ಯೋಜನೆ ಅನುದಾನವಾಗಿದೆ. ಮತ್ತು ಬೇತೂರು ರಸ್ತೆಯಲ್ಲಿನ ಬಸ್ ನಿಲ್ದಾಣವನ್ನು 1.20 ಎಕರೆ ಜಾಗದಲ್ಲಿ ರೂ.8.96 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ದಾವಣಗೆರೆಯಿಂದ ಪ್ರತಿನಿತ್ಯ 1400 ಕ್ಕಿಂತ ಹೆಚ್ಚು ಬಸ್‍ಗಳು ಬಂದು ಹೋಗುತ್ತವೆ. ಇಲ್ಲಿಗೆ ಆಗಮಿಸುವ ಬಸ್‍ಗಳ ಸಂಖ್ಯೆಯು ಹೆಚ್ಚಿದ್ದು ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ಶಕ್ತಿ ತಂದ ಮೇಲೆ ಮಹಿಳೆಯರಿಗೆ ಶಕ್ತಿ
ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಸರ್ಕಾರ ಬಂದು 15 ದಿನಗಳಲ್ಲಿ ಮಹಿಳೆಯರು ಉಚಿತ ಪ್ರಯಾಣಿಸುವ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆ ಜಾರಿಯಿಂದ ಮುಂದಿನ ದಿನಗಳಲ್ಲಿ ನಿಗಮದ ಬಸ್‍ಗಳಿಗೆ ಇಂಧನ ಭರಿಸಲು ಹಣವಿಲ್ಲದಂತಾಗುತ್ತದೆ ಎಂಬ ಭಾವನೆಯನ್ನು ನಿವಾರಣೆ ಮಾಡಿ ನಿಗಮವನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಹೋಗಲಾಗುತ್ತಿದೆ. ಶಕ್ತಿ ಬಂದಾಗಿನಿಂದ ರಾಜ್ಯದಲ್ಲಿ 160 ಕೋಟಿಗಿಂತಲೂ ಹೆಚ್ಚಿನ ಮಹಿಳೆಯರು ಪ್ರಯಾಣಿಸಿದ್ದು ಇವರಿಗೆ ಆರ್ಥಿಕವಾಗಿ ಶಕ್ತಿ ತುಂಬಲಾಗಿದೆ.
ಸಿಬ್ಬಂದಿ ನೇಮಕ, ಹೊಸ ಬಸ್‍ಗಳ ಖರೀದಿ
ವಿವಿಧ ಸಾರಿಗೆ ನಿಗಮಗಳಿಗೆ ಸುಮಾರು 5800 ಹೊಸ ಬಸ್‍ಗಳನ್ನು ಖರೀದಿ ಮಾಡಲಾಗುತ್ತಿದ್ದು ಈಗಾಗಲೇ ಅರ್ಧಕ್ಕೂ ಹೆಚ್ಚು ಹೊಸ ಬಸ್‍ಗಳು ಬಂದಿವೆ. ಉಳಿದ ಅರ್ಧ ಬಸ್‍ಗಳು ಬರಬೇಕಾಗಿದೆ. 2016 ರಿಂದ ಸಾರಿಗೆ ನಿಗಮದ ಸಿಬ್ಬಂದಿಗಳ ನೇಮಕಾತಿ ನಡೆಯದ ಕಾರಣ ಹೊಸ ಬಸ್ ಖರೀದಿಸಿದರೂ ಸಿಬ್ಬಂದಿ ಕೊರತೆಯಾಗುತ್ತಿತ್ತು. ಇದನ್ನು ಮನಗಂಡು 9 ಸಾವಿರ ನಿಗಮದ ಸಿಬ್ಬಂದಿಗಳನ್ನು ನೇಮಕಾತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 1619 ಸಿಬ್ಬಂದಿಗಳಿಗೆ ಕಲ್ಯಾಣ ಕರ್ನಾಟಕ ವಲಯಕ್ಕೆ ನೇಮಕಾತಿ ಆದೇಶ ನೀಡಲಾಗಿದೆ. ಖಾಲಿ ಇರುವ ಸಿಬ್ಬಂದಿಗಳ ನೇಮಕಾತಿ ಮಾಡಿದ ತಕ್ಷಣವೇ ಕೊರೋನಾ ಸಂದರ್ಭದಲ್ಲಿ ನಿಲ್ಲಿಸಲಾಗಿದ್ದ ಹಳೆ ಮಾರ್ಗ ಮತ್ತು ಪ್ರಯಾಣಿಕರ ದಟ್ಟಣೆ ಇರುವ ಹೊಸ ಮಾರ್ಗಗಳಲ್ಲಿ ಬಸ್ ಓಡಿಸಲಾಗುತ್ತದೆ ಎಂದರು.
ಪಂಪಾಪತಿ ಹೆಸರು ಪರಿಶೀಲನೆ
ದಾವಣಗೆರೆ ಬಸ್ ನಿಲ್ದಾಣಕ್ಕಾಗಿ ಶ್ರಮಿಸಿದ ಮಾಜಿ ಶಾಸಕರಾದ ಪಂಪಾಪತಿಯವರ ಹೆಸರಿಡಬೇಕೆಂದು ಬೇಡಿಕೆ ಇದ್ದು ಈ ಬಗ್ಗೆ ನಿಗಮದ ಆಡಳಿತ ಮಂಡಳಿಯಲ್ಲಿ ನಿರ್ಧರಿಸಬೇಕಾಗಿದೆ. ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ನೂತನ ಬಸ್ ನಿಲ್ದಾಣ ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ಮಾರ್ಟ್‍ಸಿಟಿ ಯೋಜನೆಯನ್ನು ಅನುಷ್ಠಾನ ಮಾಡಲು ರೂಪಿಸಲಾದ ಮಾನದಂಡಗಳಲ್ಲಿ ದೇಶದಲ್ಲಿ ದಾವಣಗೆರೆ 9 ನೇ ಸ್ಥಾನದಲ್ಲಿತ್ತು. ಈ ಹಿಂದಿನ ಅವಧಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ರೂಪಿಸಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿತ್ತು. ಸ್ಮಾರ್ಟ್ ಸಿಟಿ ಯೋಜನೆಯಡಿ ಬೇತೂರು ರಸ್ತೆಯಲ್ಲಿನ ಬಸ್ ನಿಲ್ದಾಣ ನಿರ್ಮಾಣವಾಗಿದ್ದು ಜಗಳೂರು, ಹರಪನಹಳ್ಳಿ ಭಾಗದ ಜನರಿಗೆ ಅನುಕೂಲವಾಗಲಿದೆ. ಮುಖ್ಯ ಬಸ್ ನಿಲ್ದಾಣವು ಸುಸಜ್ಜಿತವಾಗಿ ನಿರ್ಮಾಣವಾಗಿದೆ.
ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೂ ಅನುಮೋದನೆ ನೀಡಿದ್ದು ಹಿಂದಿನ ಪ್ಲಾನ್‍ನಂತೆ ನಿರ್ಮಾಣ ಮಾಡದೆ ಇರುವುದರಿಂದ ಕೆಲವೊಂದು ಮಾರ್ಪಾಡಿನೊಂದಿಗೆ ಮುಂದಿನ ದಿನಗಳಲ್ಲಿ ಉದ್ಘಾಟನೆ ಮಾಡಿ ಖಾಸಗಿ ಬಸ್‍ಗಳು ಇಲ್ಲಿಂದಲೇ ಕಾರ್ಚಾಚರಣೆ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ ಎಂದರು.
ಗ್ಯಾರಂಟಿ ಯೋಜನೆ ಮೊದಲನೆಯದಾಗಿ ನಿಗಮದ ಬಸ್‍ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡುವ ಮೂಲಕ ರಾಜ್ಯದಲ್ಲಿ ತೀರ್ಥಸ್ಥಳ ಸೇರಿದಂತೆ ಯಾವ ಜಿಲ್ಲೆಗೆ ಬೇಕಾದರೂ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಮತ್ತು ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಯೋಜನೆಗಳನ್ನು ಚಾಚು ತಪ್ಪದೇ ಜಾರಿಗೆ ತರಲಾಗಿದೆ. ಹೇಳಿದಂತೆ ನಡೆದಿದ್ದು ಮುಂದಿನ ದಿನಗಳಲ್ಲಿಯು ನಮ್ಮ ಮೇಲೆ ವಿಶ್ವಾಸವಿರಲಿ ಎಂದರು.
ಸಾರಿಗೆ ನಿಗಮದಿಂದ ಸತತ 7 ವರ್ಷಗಳ ಕಾಲ ಅಪರಾಧ ರಹಿತ, ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ನೀಡಿದ್ದು ಇಂತಹ ಸೇವೆಯನ್ನು ಎಲ್ಲಾ ಸಿಬ್ಬಂದಿಗಳು ನೀಡಲು ಮುಂದಾಗಬೇಕು. ಇದರಿಂದ ನಿಗಮದ ಗೌರವ ಹೆಚ್ಚಲು ನೀವೇ ಕಾರಣರಾಗುತ್ತೀರಾ ಎಂದು ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ದಾವಣಗೆರೆ ಮುಖ್ಯ ಬಸ್ ನಿಲ್ದಾಣ ನಿರ್ಮಾಣಕ್ಕೆ ಮಾಜಿ ಶಾಸಕರಾದ ಪಂಪಾಪತಿಯವರ ಶ್ರಮ ಇದ್ದು ಆ ಕಾಲದಲ್ಲಿ ನಗರದ ಕೊನೆ ಭಾಗದಲ್ಲಿತ್ತು. ಜನರು ಇಲ್ಲಿಗೆ ಬರಲು ಆಟೋಗೆ ಹಣ ಕೊಡಲಿಕ್ಕಾಗಲ್ಲ ಎನ್ನುತ್ತಿದ್ದರು, ಈಗ ನಗರದ ಮಧ್ಯಭಾಗದಲ್ಲಿದೆ. ಮತ್ತು ಬೇತೂರು ರಸ್ತೆಯ ಬಸ್ ನಿಲ್ದಾಣ ನಿರ್ಮಾಣದಲ್ಲಿ ಅಂಬರ್‍ಕರ್ ಕುಟುಂಬವನ್ನು ಸ್ಮರಿಸಿಕೊಳ್ಳಬೇಕೆಂದು ತಿಳಿಸಿದರು.
ಮಾಯಕೊಂಡ ಕ್ಷೇತ್ರ ಶಾಸಕರಾದ ಕೆ.ಎಸ್.ಬಸವಂತಪ್ಪ ಮಾತನಾಡಿ ಈ ಹಿಂದೆ ದಾವಣಗೆರೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸ್ವಚ್ಚತೆಯನ್ನು ಟೆಂಡರ್ ಮೂಲಕ ಸತತ 20 ವರ್ಷಗಳ ಕಾಲ ನಾನು ನಿರ್ವಹಣೆ ಮಾಡುತ್ತಿದ್ದೆ, ಮಳೆ ಬಂತೆಂದರೆ ಬಸ್ ನಿಲ್ದಾಣದ ತುಂಬೆಲ್ಲಾ ನೀರು ನಿಂತು ಬಸ್‍ಗಳೇ ಸಂಚರಿಸುತ್ತಿರಲಿಲ್ಲ. ಆದರೆ ಈಗ ಎತ್ತರದಲ್ಲಿ ಹೊಸದಾಗಿ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದು ಇದರ ಉದ್ಘಾಟನೆಯಲ್ಲಿ ಶಾಸಕನಾಗಿ ಭಾಗಿಯಾಗಿರುವುದಕ್ಕೆ ಧನ್ಯನಾಗಿದ್ದೇನೆ ಎಂದರು.
ಮಾಯಕೊಂಡ ಕ್ಷೇತ್ರದ ಕೇಂದ್ರಸ್ಥಾನವಾಗಿದ್ದು ಇಲ್ಲಿ ಬಸ್ ನಿಲ್ದಾಣ ಇರುವುದಿಲ್ಲ. ಈ ಬಗ್ಗೆ ಸಾರಿಗೆ ಸಚಿವರಲ್ಲಿ ಮನವಿ ಮಾಡಿದ್ದೆ, ಅದಕ್ಕೆ ಅವರು ರೂ.10 ಕೋಟಿ ಅನುದಾನದಲ್ಲಿ ಮಾಯಕೊಂಡದಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಮಾಡಲು ಮಂಜೂರಾತಿ ನೀಡಿದ್ದು ಮುಂದಿನ ದಿನಗಳಲ್ಲಿ ಇದರ ಕಾಮಗಾರಿ ಆರಂಭವಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಕೆ.ಅಬ್ದುಲ್ ಜಬ್ಬಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಬೆಳ್ಳಿ ಪದಕ ವಿಜೇತ ಚಾಲಕರು; ಕೆ.ಎಸ್.ಆರ್.ಟಿ.ಸಿ.ಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಜಿ.ಮಂಜುನಾಥ್, ರವಿಕುಮಾರ್.ಆರ್, ಚಂದ್ರನಾಯ್ಕ, ಮೊಹಮ್ಮದ್ ಅಕ್ರಂ ಅಲಿ ಇವರು ಸತತ 7 ವರ್ಷಗಳ ಕಾಲ ಅಪರಾಧ ರಹಿತ, ಅಪಘಾತ ರಹಿತವಾದ ಚಾಲನೆ ಮಾಡಿದ್ದು ಇವರಿಗೆ ಬೆಳ್ಳಿ ಪದಕ ಮತ್ತು ನಗದು ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮೇಯರ್ ವಿನಾಯಕ್ ಬಿ.ಹೆಚ್, ಕೆ.ಎಸ್.ಆರ್.ಟಿ.ಸಿ. ನಿಗಮದ ಸಿಬ್ಬಂದಿ ಮತ್ತು ಜಾಗೃತ ವಿಭಾಗದದ ನಿರ್ದೇಶಕರಾದ ಡಾ: ಕೆ.ನಂದಿನಿದೇವಿ, ಪಾಲಿಕೆ ಸದಸ್ಯರಾದ ಚಮನ್‍ಸಾಬ್, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್‍ಕುಮಾರ್, ಎಲೆಬೇತೂರು ಗ್ರಾ.ಪಂ.ಅಧ್ಯರಾದ ರೇವಣಸಿದ್ದಪ್ಪ ಹಾಗೂ ಪಾಲಿಕೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಕ ಶ್ರೀನಿವಾಸ್‍ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗೀಯ ಸಂಚಾಲಕರಾದ ಫಕೃದ್ದೀನ್.ಡಿ ಸ್ವಾಗತಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಡಾ. ಶಾಮನೂರು ಶಿವಶಂಕರಪ್ಪ ನಿಧನ ; ವೀರಶೈವ ವಿಧಿವಿಧಾನದಂತೆ ಕಲ್ಲೇಶ್ವರ ಮಿಲ್‍ನಲ್ಲಿ ಅಂತ್ಯ ಸಂಸ್ಕಾರ
ಸುದ್ದಿದಿನ,ದಾವಣಗೆರೆ:ಮಾಜಿ ಸಚಿವರು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪನವರು ನಿಧನರಾಗಿದ್ದು ಅವರ ಅಂತ್ಯ ಸಂಸ್ಕಾರವು ಸರ್ಕಾರಿ ಸಕಲ ಗೌರವಗಳೊಂದಿಗೆ ಹಾಗೂ ವೀರಶೈವ ಸಂಪ್ರದಾಯದಂತೆ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಅಪಾರ ಜನಸ್ತೋಮದೊಂದಿಗೆ ಸೋಮವಾರ ಸಂಜೆ ಜರುಗಿತು.
ಡಾ; ಶಾಮನೂರು ಶಿವಶಂಕರಪ್ಪನವರಿಗೆ 95 ವರ್ಷವಾಗಿದ್ದು ವಯೋಸಹಜ ಅನಾರೋಗ್ಯದಿಂದ ಡಿಸೆಂಬರ್ 14 ರಂದು ನಿಧನ ಹೊಂದಿದ್ದರು. 6 ಭಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ ಸುಧೀರ್ಘ ರಾಜಕೀಯ ಸೇವೆಯಲ್ಲಿದ್ದ ಇವರು ರಾಜ್ಯ ಸೇರಿದಂತೆ ದಾವಣಗೆರೆಗೆ ಹೊಸ ರೂಪಕೊಟ್ಟಿದ್ದರು.
ಸೋಮವಾರ ಬೆಳಗ್ಗೆ 7.30 ಗಂಟೆಯಿಂದ ಪಾರ್ಥಿವ ಶರೀರಕ್ಕೆ ಸ್ವಗೃಹದಲ್ಲಿ ಕುಟುಂಬಸ್ಥರ ವಿವಿಧ ಪೂಜೆ ಪುನಸ್ಕಾರಗಳೊಂದಿಗೆ ವಿಧಿ ವಿಧಾನಗಳು ನಡೆದು, ಮಧ್ಯಾಹ್ನದಿಂದ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಸಾವಿರಾರು ಜನರು ಆಗಮಿಸಿ ಸರತಿ ಸಾಲಿನಲ್ಲಿ ಅಂತಿಮ ದರ್ಶನ ಪಡೆದರು.
ಮಧ್ಯಾಹ್ನ 3.30 ರಿಂದ ಹೈಸ್ಕೂಲ್ ಮೈದಾನದಿಂದ ಹೊರಟು ಹಳೇ ದಾವಣಗೆರೆ ಮಂಡಿಪೇಟೆ, ಕಾಯಿಪೇಟೆ, ಅರಳಿವೃತ್ತದ ಮೂಲಕ ಕಲ್ಲೇಶ್ವರ ಮಿಲ್‍ಗೆ ಪಾರ್ಥಿವ ಶರೀರ ತಲುಪಿತು. ಸಂಜೆ 4.30 ರಿಂದ ಅಂತಿಮ ವಿಧಿ ವಿಧಾನಗಳು ನಡೆದವು.
ಅಂತಿಮ ಸಂಸ್ಕಾರದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ರಾಜ್ಯಸಭೆ ವಿರೋಧ ಪಕ್ಷದ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಉಪ ಮುಖ್ಯಮಂತ್ರಿಯವರಾದ ಡಿ.ಕೆ.ಶಿವಕುಮಾರ್ ಅವರು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಅರಣ್ಯ ಸಚಿವರಾದ ಈಶ್ವರ ಖಂಡ್ರೆ, ಬೃಹತ್ ಕೈಗಾರಿಕೆ ಸಚಿವರಾದ ಎಂ.ಬಿ.ಪಾಟೀಲ್ ಅವರು, ಇಂಧನ ಸಚಿವರಾದ ಕೆ.ಜೆ.ಜಾರ್ಜ್‍ರವರು, ಸಮಾಜ ಕಲ್ಯಾಣ ಸಚಿವರಾದ ಡಾ; ಹೆಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ, ಅಲ್ಪಸಂಖ್ಯಾತರ ಕಲ್ಯಾಣ, ವಸತಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್, ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ ಪಾಟೀಲ, ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ.ಎಸ್.ಪಾಟೀಲ, ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ.ಸುಧಾಕರ್ ಸೇರಿದಂತೆ ಶಾಸಕರು ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಿ ಪುಷ್ಪ ನಮನ ಸಲ್ಲಿಸಿ ಅಂತಿಮ ದರ್ಶನ ಪಡೆದರು.
ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ರಾಷ್ಟ್ರಧ್ವಜವನ್ನು ಪಾರ್ಥಿವ ಶರೀರಕ್ಕೆ ಹೊದಿಸಿ ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ನುಡಿಸಿ ಗೌರವ ಸಲ್ಲಿಸಲಾಯಿತು. ನಂತರ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿ ಅಂತಿಮವಾಗಿ ಶೋಕ ವ್ಯಕ್ತಪಡಿಸಲಾಯಿತು. ರಾಷ್ಟ್ರಧ್ವಜವನ್ನು ಅವರ ಪುತ್ರರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಸ್ತಾಂತರಿಸಿದರು. ನಂತರ ಸಾಂಪ್ರದಾಯಿಕ ಪೂಜೆ, ವಿಧಿ, ವಿಧಾನಗಳೊಂದಿಗೆ ಪಾರ್ಥಿವ ಶರೀರವನ್ನು ಐಕ್ಯ ಮಂಟಪದಲ್ಲಿ ಇಡಲಾಯಿತು.
ಡಾ; ಶಾಮನೂರು ಶಿವಶಂಕರಪ್ಪನವರ ಪುತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಸೊಸೆ ಹಾಗೂ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್, ಇನ್ನಿಬ್ಬರು ಪುತ್ರರಾದ ಎಸ್.ಎಸ್.ಬಕ್ಕೇಶ್, ಎಸ್.ಎಸ್.ಗಣೇಶ್ ಸೇರಿದಂತೆ ಶಾಮನೂರು ಶಿವಶಂಕರಪ್ಪನವರ ಕುಟುಂಬಸ್ಥರು ಅಂತಿಮ ವಿಧಿ ವಿಧಾನದಲ್ಲಿ ಭಾಗವಹಿಸಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಸ್.ಆರ್.ಬೊಮ್ಮಾಯಿ, ಗೃಹ ಸಚಿವರಾದ ಜಿ.ಪರಮೇಶ್ವರ್, ಕಂದಾಯ ಸಚಿವರಾದ ಕೃಷ್ಣಬೈರೇಗೌಡ, ಕೃಷಿ ಸಚಿವರಾದ ಚಲುವರಾಯಸ್ವಾಮಿ, ಬಿ.ಜೆ.ಪಿ.ಪಕ್ಷದ ರಾಜ್ಯಾದ್ಯಕ್ಷರಾದ ಬಿ.ವೈ.ವಿಜಯೇಂದ್ರ ಸೇರಿದಂತೆ ಅನೇಕ ಶಾಸಕರು, ವಿಧಾನ ಪರಿಷತ್ ಸದಸ್ಯರು ಅಂತಿಮ ದರ್ಶನ ಪಡೆದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ
ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್‌ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ‍್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್‌ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್‌ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್‌ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.
ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್‌ಆರ್‌ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್‌ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.
ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
-
ದಿನದ ಸುದ್ದಿ7 days agoಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ
-
ದಿನದ ಸುದ್ದಿ5 days agoಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
-
ದಿನದ ಸುದ್ದಿ4 days agoಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
-
ದಿನದ ಸುದ್ದಿ4 days agoಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ
-
ದಿನದ ಸುದ್ದಿ3 days ago2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ
-
ದಿನದ ಸುದ್ದಿ10 hours agoಡಾ. ಶಾಮನೂರು ಶಿವಶಂಕರಪ್ಪ ನಿಧನ ; ವೀರಶೈವ ವಿಧಿವಿಧಾನದಂತೆ ಕಲ್ಲೇಶ್ವರ ಮಿಲ್‍ನಲ್ಲಿ ಅಂತ್ಯ ಸಂಸ್ಕಾರ

