ದಿನದ ಸುದ್ದಿ
ದೇಬಿಪ್ರಸಾದ್ ಚಟ್ಟೋಪಾಧ್ಯಾಯರನ್ನು ನೆನೆಯುತ್ತ..!
- ಶಶಿಕುಮಾರ್
ದೇಬಿಪ್ರಸಾದ್ ಚಟ್ಟೋಪಾಧ್ಯಾಯ((19 ನವೆಂಬರ್ 1918 – 8 ಮೇ 1993) ಅವರು ತಮ್ಮ Lokayata: A Study in Ancient Indian Materialism (1959) ಕೃತಿಯಿಂದ ವಿಶ್ವಮಾನ್ಯರಾದ ಮಾರ್ಕ್ಸ್ ವಾದಿ ತತ್ವಶಾಸ್ತ್ರಜ್ಞರು. ಕನ್ನಡಿಗರಿಗೆ ಪರಿಚಯವಾಗಿರುವುದು ಕೂಡ ನವಕರ್ನಾಟಕ ಪ್ರಕಟಿಸಿದ ಜಿ. ರಾಮಕೃಷ್ಣ ಅವರ ಕನ್ನಡ ಸಂಗ್ರಹಾನುವಾದದ ಮೂಲಕವೇ.
ಯೋಗೇಶ್ ಮಾಸ್ಟರ್ ಅವರ ವಿವಾದಾಸ್ಪದ ಕೃತಿ ಢುಂಢಿ: ಅರಣ್ಯಕನೊಬ್ಬ ಗಣಪತಿಯಾದ ಕತೆ(2013)ಗೆ ಕೂಡ ಈ ಕೃತಿಯಿಂದಲೇ ಪ್ರೇರಣೆ ಪಡೆದಿದೆ. ಇದಲ್ಲದೆ, ವೈಚಾರಿಕರಾದ ಬಿ ವಿ ವೀರಭದ್ರಪ್ಪನವರು ತಮ್ಮ ಮನೆಗೆ ‘ಲೋಕಾಯತ’ ಎಂದು ಹೆಸರಿಟ್ಟಿದ್ದು, ಮೈಸೂರಿನ ವಿಚಾರವಾದಿ ಕೆ. ರಾಮದಾಸ್ ತಮ್ಮ ಮನಗೆ ‘ಚಾರ್ವಾಕ’ ಎಂದು ಹೆಸರಿಟ್ಟಿದ್ದನ್ನು ಇಲ್ಲಿ ಪ್ರಾಸಂಗಿಕವಾಗಿ ನೆನೆಯಬಹುದು. ಲೋಕಾಯತದ ಬಗ್ಗೆ ಕನ್ನಡದಲ್ಲಿ ಪ್ರಾಯಃ ಮೊದಲು ಬರೆದಿದ್ದು ಗೌರೀಶ ಕಾಯ್ಕಿಣಿಯವರಿರಬೇಕು ಎಂದು ಕಾಣುತ್ತದೆ.
ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸುರೇಂದ್ರನಾಥ್ ದಾಸ್ ಗುಪ್ತರಂತಹ ಅಂದಿನ ಪ್ರಸಿದ್ಧ ತತ್ವಶಾಸ್ತ್ರಜ್ಞರಿಂದ ತತ್ವಶಾಸ್ತ್ರದಲ್ಲಿ ತರಬೇತಿ ಪಡೆದರೂ ಅವರಿಬ್ಬರ ಪ್ರಭಾವಕ್ಕೊಳಗಾಗದೆ ಬೇರೆ ಹಾದಿಯಲ್ಲಿ ನಡೆದವರು.ತಮ್ಮ ಲೋಕಾಯತ ಕೃತಿಯ ಮೂಲಕ ಪ್ರಾಚೀನ ಭಾರದಲ್ಲಿ ತತ್ವಶಾಸ್ತ್ರ ಹಾಗೂ ವಿಜ್ಞಾನವನ್ನು ಶೋಧಿಸಿದಂತಹವರು. ಹಾಗಾಗಿಯೇ, ಜರ್ಮನ್ ಇಂಡಾಲಜಿಸ್ಟ್ ವಾಲ್ಟರ್ ರೂಬೆನ್ ರಿಂದ “ಚಿಂತನಾ-ಸುಧಾರಕ”(thought-reformer) ಎಂದು ಕರೆಸಿಕೊಂಡವರು. ಲೋಕಾಯತ, ಅಲ್ಲಿಯವರೆಗೆ ಭಾರತವೆಂದರೆ, ಯೋಗಿಗಳು, ಕನಸುಗಾರರ ನಾಡು ಎಂಬ ಒಂದು ತಪ್ಪು ಕಲ್ಪನೆಯನ್ನು ಹೋಗಲಾಡಿಸುವಲ್ಲಿ ಈ ಕೃತಿ ಮಹತ್ತರ ಪಾತ್ರವನ್ನು ವಹಿಸಿತೆಂಬುದನ್ನಿಲ್ಲಿ ನೆನಯಬಹುದು.
Philosophy ಗೆ ಕನ್ನಡದಲ್ಲಿ ದರ್ಶನ, ತತ್ವಶಾಸ್ತ್ರ, ತತ್ವಜ್ಞಾನ ಎಂಬ ಪದಗಳನ್ನು ಸಂವಾದಿಯಾಗಿ ಬಳಸುವುದುಂಟು. ನೋಡು ಎಂಬ ಕ್ರಿಯಾಪದದ ಧಾತುವಿನಿಂದ ಬಂದಿರುವ (dṛs) ಎಂದರೆ, ಒಂದು ನೋಟಕ್ರಮ, ಚಿಂತನಾಕ್ರಮ ಎಂದು ಹೇಳಬಹುದು. ಹಾಗೆಯೇ, ಕಾಣ್ಕೆ ಎಂದೂ ಹೇಳಬಹುದು. ಅಂದರೆ, ಭಾರತೀಯ ಚಿಂತನಾಕ್ರಮ ಎಂಬುದು ವಾದಕ್ಕಿಂತ ಒಳನೋಟವನ್ನು ಆಧರಿಸಿದೆ ಎಂದರ್ಥ.
ಅದರಿಂದಾಗಿಯೇ, ‘ಆನ್ವೀಕ್ಷಿಕೀ’ ಎಂಬ ಸಂಸ್ಕೃತ ಪದವನ್ನು ಬಳಸುವುದುಂಟು. ಹಾಗೆಂದರೆ, ವಿಮರ್ಶಾತ್ಮಕ ವಿಚಾರಣೆ ಅಥವಾ ಶೋಧನೆ ಎಂದರ್ಥ. ‘ಆನ್ವೀಕ್ಷಿಕೀ’ ಪದವನ್ನು ಪ್ರಾಚೀನ ತತ್ವಜ್ಞಾನಿಗಳು ಹೆಚ್ಚಾಗಿ ಬಳಸಿದ್ದುಂಟು. ಅದಕ್ಕೆ ದೊಡ್ಡ ಉದಾಹರಣೆ ಕೊಡುವುದಾದರೆ, ಕೌಟಿಲ್ಯನ ‘ಅರ್ಥಶಾಸ್ತ್ರ.’ ಮಗಧ ಸಾಮ್ರಾಜ್ಯದಲ್ಲಿ ಮಹಾಮಂತ್ರಿಯಾಗಿದ್ದ ಕೌಟಿಲ್ಯ, ಅರ್ಥಶಾಸ್ತ್ರವನ್ನು ಬರೆದಿದ್ದು ರಾಜಕುಮಾರರ ಶಿಕ್ಷಣಕ್ಕೆ ನೆರವಾಗಲೆಂದು. ಹಾಗಾಗಿಯೇ, ಅವರು ಕಲಿಯಲೇಬೇಕಾದ ನಾಲ್ಕು ವಿದ್ಯೆಗಳಲ್ಲಿ ‘ಆನ್ವೀಕ್ಷಿಕೀ’ಯನ್ನೂ ಸೇರಿಸಿದ್ದ.
ಇದರೊಂದಿಗೆ, ಮೂರು ವೇದಗಳಿಂದ ರೂಪಿಸಲ್ಪಟ್ಟ ‘ತ್ರಾಯಿ,’ ವ್ಯಾಪಾರ ಹಾಗೂ ಕೃಷಿಯಂತಹ ಭೌತಿಕ ಸಂಪಾದನೆಯ ವಿಜ್ಞಾನವಾದ ‘ವಾರ್ತಾ,’ ಹಾಗೂ ಕೊನೆಯದಾಗಿ ‘ದಂಡನೀತಿ,’ ಅಂದರೆ ವಾಚ್ಯಾರ್ಥದಲ್ಲಿ ಕೋಲಿನ ಮೂಲಕ ಆಡಳಿತ ನಡೆಸುವುದು. ನಿಜಾರ್ಥದಲ್ಲಿ, ರಾಜಾಡಳಿತ ಹಾಗೂ ಸರಕಾರ. ‘ಆನ್ವೀಕ್ಷಿಕೀ’ಯ ಬಗ್ಗೆ ಇನ್ನೂ ದೊಡ್ಡ ವ್ಯಾಖ್ಯಾನವೇ ಇದೆಯಾದರೂ, ಈ ಟಿಪ್ಪಣಿಗೆ ಅದರ ಆವಶ್ಯಕತೆಯಿಲ್ಲ. ಸದ್ಯಕ್ಕೆ, ಹೇಳುವುದಾದರೆ, ಕೌಟಿಲ್ಯನಿಗೆ, ‘ಆನ್ವೀಕ್ಷಿಕೀ’ ಅನ್ನೋದು ಬರೀ ಜ್ಞಾನದ ಒಂದು ಶಾಖೆಯಾಗಿರಲಿಲ್ಲ. ಅದು ಹಲವು ಆಯಾಮಗಳನ್ನು ಪಡೆದುಕೊಂಡಿತ್ತು.
ಒಂದು ರೀತಿಯಲ್ಲಿ ಕ್ರಮಾನುಸರಣೆ ಅನ್ನಬಹುದೇನೋ. ಅದರೊಂದಿಗೆ “ವಿಚಾರಣೆಯನ್ನು ಎಲ್ಲ ಶಾಖೆಗಳ ಅಧ್ಯಯನಕ್ಕೊಂದು ದೀವಿಗೆ, ಎಲ್ಲ ಧಾರ್ಮಿಕ ಹಾಗೂ ಸಾಮಾಜಿಕ ಕರ್ತವ್ಯಗಳ ಬೆಂಬಲ ಎಂಬುದಾಗಿ ಹೇಳುತ್ತಾನೆ.”ಅಂತಹ ವಿಚಾರಣೆಗಳ ಬಗೆಗಳಲ್ಲಿ ಸಾಂಖ್ಯ, ಯೋಗದೊಂದಿಗೆ, ಲೋಕಾಯತ ಕೂಡ ಒಂದು ಎಂದು ಆತ ಪರಿಗಣಿಸುತ್ತಾನೆ. ಇವು ಹಿಂದಿನ ಪೋಸ್ಟ್ ನಲ್ಲಿ ಹೇಳಿದ ಹಾಗೆ, ಭಾರತೀಯ ದರ್ಶನಾ ಮಾರ್ಗಗಳು. ಆದರೆ, ಕೌಟಿಲ್ಯ ಮಾತ್ರ ಇವನ್ನು ಬೇರೆಯ ರೀತಿಯೇ ನೋಡುತ್ತಾನೆ. ಈ ಮೂರೂ ವಿಧಾನಗಳೊಂದಿಗೆ, ನ್ಯಾಯ ಹಾಗೂ ಮೀಮಾಂಸೆಯನ್ನು ಹೆಚ್ಚುವರಿಯಾಗಿ ಸೇರಿಸುತ್ತಾನೆ. ಈಗ ಇಷ್ಟುದ್ದ ವಿವರಣೆಯನ್ನು ಯಾಕೆ ನೀಡಿದೆ ಎಂಬುದು ಮನದಟ್ಟಾಗಿರಬಹುದು.
ಲೋಕಾಯತಕ್ಕೆ ಮರಳುವುದಾದರೆ, ‘ಸೆಕ್ಯುಲರ್'(ಧರ್ಮ ನಿರಪೇಕ್ಷ, ‘ಜಾತ್ಯತೀತ’ ಎಂದು ಕರೆಯುವುದುಂಟು. ಕುವೆಂಪು ‘ಧರ್ಮಸಮನ್ವಯ’ ಎಂಬ ಪದವನ್ನೂ ಸೂಚಿಸಿದ್ದರು.) ಎಂಬ ಪರಿಕಲ್ಪನೆ ಪಶ್ಚಿಮದಿಂದ ಬಂದಿದ್ದೆಂಬುದು ಎಲ್ಲರಿಗೂ ತಿಳಿದಿರುವಂತದ್ದೆ. ಆದರೆ, ‘ಧರ್ಮನಿರಪೇಕ್ಷತೆ’ ಎಂಬಂತಹ ಪರಿಕಲ್ಪನೆ ಅಥವಾ ತತ್ವ ಇರದಂಹತ ಪ್ರಾಚೀನ ಭಾರತದ ಚಿಂತನೆ ಅಥವಾ ತತ್ವಶಾಸ್ತ್ರವನ್ನು ಸೆಕ್ಯುಲರ್ ರೀತಿಯಲ್ಲಿ ಮಂಡಿಸುವುದು ಹೇಗೆ? ಅಥವಾ ವೈಚಾರಿಕವಾಗಿ ಮರುರೂಪಿಸುವುದು ಹೇಗೆ? ಈ ಪ್ರಶ್ನೆ ಯಾಕೆಂದರೆ, ಮಧ್ಯಕಾಲೀನ ಯುಗದಲ್ಲಿ ಭಾರತೀಯ ದರ್ಶನವನ್ನು ‘ಸರ್ವ ದರ್ಶನ ಸಂಗ್ರಹ’(14ನೇ ಶ.) ಎಂಬ ಹೆಸರಿನಲ್ಲಿ ರಚಿಸಿದ, ಶೃಂಗೇರಿ ಮಠದ ಮುಖ್ಯಸ್ಥರಾಗಿದ್ದ ಅದ್ವೈತ ವೇದಾಂತಿಯಾದ ಮಾಧವಾಚಾರ್ಯ ಅಥವಾ ವಿದ್ಯಾರಣ್ಯ ಸ್ವಾಮಿ ಅದನ್ನು ಮಂಡಿಸಿದ್ದ ರೀತಿ ಬೇರೆಯಾಗಿತ್ತು. ಸಾಲದ್ದಕ್ಕೆ ಅದು ಎಷ್ಟು ಜನಪ್ರಿಯವೆಂದರೆ, ಭಾರತೀಯ ದರ್ಶನವೆಂದರೇ ಇದೇ ಎಂದು ಭಾವಿಸುವಂತಾಗಿತ್ತು.
ಇದರರ್ಥ ಮಾಧವಾಚಾರ್ಯರು ಮಾಡಿದ್ದನ್ನು ಸಂಪೂರ್ಣವಾಗಿ ತಿರಸ್ಕರಿಸಿಬಿಡಬೇಕೆಂದಲ್ಲ..ಹಿಂದಿನ ಪೋಸ್ಟ್ ನಲ್ಲಿ ಹೆಸರಿಸಿದ್ದ ಭಾರತೀಯ ಷಡ್ದರ್ಶನಗಳಾದ, ನ್ಯಾಯ, ವೈಶೇಷಿಕ. ಯೋಗ, ಸಾಂಖ್ಯ, ವೇದಾಂತ, ಮೀಮಾಂಸಗಳ ಜೊತೆಗೆ ನಾಸ್ತಿಕ ದರ್ಶನಗಳನ್ನೊಳಗೊಂಡಂತೆ ಹತ್ತು ಇತರೆ ದರ್ಶನಗಳನ್ನೂ ಸೇರಿಸಿ, ಷೋಡಶ ಅಥವಾ ಹದಿನಾರು ದರ್ಶನಗಳ ಬಗ್ಗೆ ಬರೆದಿದ್ದರು. ಅದರಲ್ಲಿ ಮೊದಲನೆಯದೇ ಚಾರ್ವಾಕ.
ಆ ಷೋಡಶ ಅಥವಾ ಹದಿನಾರು ದರ್ಶನಗಳೆಂದರೆ, ಚಾರ್ವಾಕ, ಬೌದ್ಧ, ಅರ್ಹತ ಅಥವಾ ಜೈನ, ರಾಮಾನುಜ ಸಿದ್ಧಾಂತ, ಪೂರ್ಣಪ್ರಜ್ಞ, ನಕುಲೀಶ-ಪಾಶುಪತ, ಶೈವ, ಪ್ರತ್ಯಭಿಜ್ಞಾನ, ರಸೇಶ್ವರ, ವೈಶೇಷಿಕ ಅಥವಾ ಔಲೂಕ್ಯ, ಅಕ್ಷಪಾದ ಅಥವಾ ನ್ಯಾಯ, ಜೈಮಿನೀಯ, ಪಾಣಿನೀಯ, ಸಾಂಖ್ಯ, ಪಾತಂಜಲ ಅಥವಾ ಯೋಗ, ವೇದಾಂತ ಅಥವಾ ಶಂಕರ ಆಚಾರ್ಯರ ಸಿದ್ಧಾಂತಗಳು ಸೇರಿವೆ. ಸಹಜವಾಗಿಯೇ, ಮಾಧವಾಚಾರ್ಯರು ಭೌತವಾದವನ್ನು ಪ್ರತಿಪಾದಿಸಿದ ‘ಲೋಕಾಯತ’ ಅಥವಾ ‘ಚಾರ್ವಾಕ’ವನ್ನು ಅತ್ಯಂತ ಹೀನವಾದದ್ದು ಎಂದು ಬಿಂಬಿಸಿದ್ದಾರೆ.
ಲೋಕಾಯತ, ವ್ಯುತ್ಪತ್ತಿಯನ್ನು ಗಮನಿಸಿದರೆ, ‘ಜನರ ನಡುವೆ ನೆಲೆಸಿರುವಂತದ್ದು ಹಾಗೂ ಮೂಲಭೂತವಾಗಿ ಈ ಲೋಕದ್ದು.’ ‘ಚಾರ್ವಾಕ’ ಎಂದರೆ, ‘ಚಾರು’ ಮತ್ತು ‘ವಾಕ್’ ಎರಡು ಶಬ್ದಗಳಿಂದಾದುದು, ಸುಂದರವಾದ ಅಥವಾ ಆಕರ್ಷಕವಾದ ಮಾತು ಎಂದರ್ಥ.
ಲೋಕಾಯತದ ಯಾವ ಪಠ್ಯವೂ ನಮಗೆ ದೊರಕಿಲ್ಲ ಎಂಬುದು ಗೊತ್ತಿರುವಂತದ್ದೇ. ಬ್ರಾಹ್ಮಣ ಅಥವಾ ಬೌದ್ಧ ದರ್ಶನಗಳಲ್ಲಿ ಕಂಡುಬರುವಂತಹ ಪೂರ್ವಪಕ್ಷ(ನಿರಾಕರಿಸುವುದಕ್ಕಾಗಿ ವಿರುದ್ಧ ಸ್ಥಾನದಲ್ಲಿರಿಸುವಂತಹದ್ದು) ಲೋಕಾಯತದ ಮೂಲ ಅಂಶಗಳನ್ನು ಎತ್ತಿಕೊಂಡು ಇಂದು ಚರ್ಚಿಸಲಾಗುತ್ತಿದೆ.
ಪುರಾಣಗಳು ಹಾಗೂ ಮಹಾಕಾವ್ಯಗಳು, ವ್ಯಾಕರಣ ಗ್ರಂಥಗಳು, ‘ಅರ್ಥಶಾಸ್ತ್ರ,’ ‘ಪ್ರಬೋಧಚಂದ್ರೋದಯ’ದಂತಹ ಜನಪ್ರಿಯ ಬಳಕೆಗಾಗಿ ಇದ್ದಂತಹ ನಾಟಕಗಳಲ್ಲಿ ಲೋಕಾಯತದ ಉಲ್ಲೇಖಗಳು ದೊರೆಯುತ್ತವೆ.ಪ್ರಾಚೀನ ಗ್ರಂಥಗಳಲ್ಲಿನ ಉಲ್ಲೇಖಗಳನ್ನಿಟ್ಟುಕೊಂಡು, ಭೌತವಾದವನ್ನು ಬೌದ್ಧ-ಪೂರ್ವ ಅಥವಾ ಉಪನಿಶತ್-ಪೂರ್ವ ಎಂದು ಹೇಳಲಾಗುತ್ತದೆಯಾದರೂ, ನಿಖರವಾಗಿ ಕಾಲವನ್ನು ಗುರುತು ಹಚ್ಚಲಾಗಿಲ್ಲ.
ಅದಿರಲಿ. ಲೋಕಾಯತದ ಎರಡು ಮುಖ್ಯ ಅಂಶಗಳೆಂದರೆ, ಕರ್ಮ ಎಂಬುದಿಲ್ಲ ಹಾಗೂ ಜ್ಞಾನವನ್ನು ಅರಿಯಲು ಪ್ರತ್ಯಕ್ಷ ಒಂದೇ ದಾರಿ. ಇವೆರಡೂ ಅಂಶಗಳು ವೈದಿಕ ಸಂಪ್ರದಾಯಕ್ಕೆ ದೊಡ್ಡ ಹೊಡೆತ ನೀಡಿದವು. ಹಾಗಾಗಿಯೇ, ದೇಬಿಪ್ರಸಾದರ Protomaterialism(ಮೂಲಭೌತವಾದ?) ನ ವಿದ್ವತ್ ಅಧ್ಯಯನವು ಬ್ರಹ್ಮದ ಪರಿಕಲ್ಪನೆಯೇ ದರ್ಶನದ ಪರಮ ಗುರಿ ಎಂದು ಬಿಂಬಿಸಿದ್ದ ಭಾರತೀಯ ಚಿಂತನೆಗೆ ಕೊಡಲಿಯೇಟನ್ನು ಹಾಕಿತ್ತು.
ಇದನ್ನು ಸಾಬೀತುಪಡಿಸಲು ದೇಬಿಪ್ರಸಾದರು ಭಾರತೀಯ ದರ್ಶನದ ಹಲವು ಎಳೆಗಳ ಆಳವಾದ ಅಧ್ಯಯನ ಕೈಗೊಂಡರಲ್ಲದೆ, ಭಾರತೀಯ ದರ್ಶನದ ಜನಪ್ರಿಯ ಗ್ರಹಿಕೆಯನ್ನು ಬದಲಾಯಿಸುವಲ್ಲಿ ಮಹತ್ವದ ಪಾತ್ರನಿರ್ವಹಿಸಿದರು. ಮಹತ್ವದ ಎಂದು ಯಾಕೆ ಹೇಳಿದೆ ಎಂದು ವಿವರಿಸುವೆ, ದೇಬಿಪ್ರಸಾದರು ಲೋಕಾಯತ ಬರೆಯುವ ಮುಂಚೆ ಲೋಕಾಯತ ಎಂದರೆ, ಯಾರಿಗೂ ಗೊತ್ತೇ ಇರಲಿಲ್ಲ ಎಂದೇನವಲ್ಲ. ಆದರೆ, ಗೊತ್ತಿದ್ದೆಲ್ಲವೂ ಮಾಧವಾಚಾರ್ಯರ ಕೃತಿಯ ಮೂಲಕವಷ್ಟೇ. ಅದನ್ನು ಬದಲಾಯಿಸಿದ್ದು ದೇಬಿಪ್ರಸಾದರು.
ಲೋಕಾಯತದ ಮಾರ್ಕ್ಸ್ ವಾದಿ ಗ್ರಹಿಕೆ ಎಂದರೇನು? ಎಂಬ ಪ್ರಶ್ನೆಯನ್ನು ಹಾಕಿಕೊಂಡರೆ, ಅದಕ್ಕೆ ಉತ್ತರ ಹೀಗಿದೆ: ಮೊದಲನೆಯದಾಗಿ, ಆದಿಮ ಯುಗದ ದೇಹವಾದ ಹಾಗೂ ಅದಕ್ಕೆ ಸಂಬಂಧಿಸಿದ ಕ್ರಿಯಾಚರಣೆಗಳ ಆತ್ಯಂತ ಭೌತಿಕ ತಳಹದಿ ಹೇಗಿರಬಹುದು, ಯಾವ ಹಂತದಲ್ಲಿ ಇವು ಮೂಲಭೂತವಾಗಿ ವಿಕಾಸ ಹೊಂದಿದವು, ಇವುಗಳನ್ನು ಜೀವಾನಾಧಾರಕ್ಕೆ ಬೇಕಾದ ಬೌತಿಕ ಸಾಧನಗಳನ್ನು ಪಡೆವುವ ಮಾರ್ಗದೊಂದಿಗೆ ತಳಕುಹಾಕಬಹುದೇ ಎಂಬುದು. ಎರಡನೆಯದಾಗಿ, ಈ ಆರ್ಷೇಯ ಧೋರಣೆ ಅಂತಿಮವಾಗಿ ಪಡೆದುಕೊಂಡ ಸ್ವರೂಪವೇನು?
ಕೊನೆಯದಾಗಿ, ಭಾರತದಲ್ಲಿ ಧರ್ಮ ಹಾಗೂ ತತ್ವಶಾಸ್ತ್ರವನ್ನು ಅಪೂರ್ಣವಾಗಿ ಪ್ರತ್ಯೇಕಗೊಂಡಿದ್ದನ್ನು ತೀವ್ರವಾಗಿ ಮನಗಂಡಿದ್ದ ದೇಬಿಪ್ರಸಾದರು ಮಾಡಿದ್ದೇನೆಂದರೆ, ಭಾರತೀಯ ತತ್ವಶಾಸ್ತ್ರದಲ್ಲಿ ಜೀವಂತ ಹಾಗೂ ಮೃತವಾಗಿರುವುದು ಏನು ಎಂಬುದನ್ನು ತಮ್ಮ ಆಳವಾದ ಅಧ್ಯಯನದಿಂದ ಗುರುತಿಸಿದರು. ಹಾಗೆಯೇ, ಭಾರತೀಯ ಚಿಂತನಾಕ್ರಮದ ಸಮೃದ್ಧ ಪರಂಪರೆಯಾದ ಬಹುತ್ವವನ್ನು ಎತ್ತಿಹಿಡಿದರು. ಆ ಮೂಲಕ ಅಲ್ಲಿಯವರೆಗೆ ಅಸ್ತಿತ್ವದಲ್ಲಿ ಸಮನ್ವಯ ವ್ಯಾಖ್ಯಾನವನ್ನು ಕಟುವಾಗಿ ಟೀಕಿಸಿದರು.
ಏಕೆಂದರೆ, ಆ ವ್ಯಾಖ್ಯಾನ ವಿಭಿನ್ನ ಭಾರತೀಯ ತತ್ವಶಾಸ್ತ್ರೀಯ ಶಾಖೆಗಳು ಅಂತಿಮವಾಗಿ ಅದ್ವೈತ ವೇದಾಂತ ದರ್ಶನದೆಡೆಗೆ ಕೊಂಡೊಯ್ಯುವಂತೆ ಮಾಡಿತ್ತು. ಭಾರತೀಯ ಚಿಂತನಾ ಕ್ರಮ ಎಷ್ಟು ಸಂಕೀರ್ಣವಾಗಿತ್ತೆಂದರೆ, ಒಂದು ವಿಷಯವನ್ನು ಅನೇಕ ಚಿಂತನಾ ಕ್ರಮಗಳ ಮೂಲಕ ನೋಡಿದರೆ, ಅವುಗಳ ನಡುವೆ ಇದ್ದ ವಿರೋಧಾಭಾಸಗಳು, ಪೈಪೋಟಿಗಳು ಎದ್ದು ಕಾಣಿಸತೊಡಗುವುದು. ಉದಾಹರಣೆಗೆ, ಅಣು ಸಿದ್ಧಾಂತದ ಬಗ್ಗೆ ಹೇಳುವುದಾದರೆ, ಜೈನರು ಅದನ್ನು ಸಂಶಯಿಸುವುದಿಲ್ಲ.
ಆದರೆ, ವೇದಾಂತಿಗಳು ಅದನ್ನು ವಿರೋಧಿಸುತ್ತಾರೆ. ನ್ಯಾಯ ವೈಶೇಷಿಕರು ಕಲ್ಪಿತ ಸಿದ್ಧಾಂತಗಳ ಸಮರ್ಥಕರು. ಬೌದ್ಧರಲ್ಲಿ ಪರವಿರೋಧಿ ಗುಂಪುಗಳನ್ನು ಕಾಣಬಹುದು. ಅಂದರೆ. ಅಣುವಾದಿಗಳು, ಅಣುವಿರೋಧಿಗಳು ಇಬ್ಬರೂ. ಭಾರತೀಯ ದರ್ಶನದ ಇಂತಹ ಒಂದು ಸಮೃದ್ಧವಾದ ವೈವಿಧ್ಯತೆ ಹಾಗೂ ನೋಟಕ್ರಮಗಳ ಬಹುತ್ವವನ್ನು ಎತ್ತಿಹಿಡಿಯುವಂತಹ ಮಾರ್ಗಗಳನ್ನು ಕಂಡುಹಿಡಿದುಕೊಳ್ಳುವಲ್ಲಿ ದೇಬಿಪ್ರಸಾದರ ಕೊಡುಗೆ ಅನನ್ಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್
ಸುದ್ದಿದಿನ,ದಾವಣಗೆರೆ: ದಾವಣಗೆರೆಯ ಹೆಮ್ಮೆಯ ಶಿಕ್ಷಣ ತಜ್ಞೆ, ಉದ್ಯಮಿ ಹಾಗೂ Parvatha Global Ventures LLP ಸಂಸ್ಥೆಯ ಸಂಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (Founder & CEO) ಡಾ. ಪ್ರೀತಿ ಅವರು ರಾಷ್ಟ್ರ ಮಟ್ಟದ ಪ್ರತಿಷ್ಠಿತ “Param Bhushan National Excellence Award – 2026” ಪ್ರಶಸ್ತಿಯನ್ನು ಪಡೆದಿದ್ದಾರೆ.
ಶಿಕ್ಷಣ, ಆಡಳಿತ, ಮಾನವ ಸಂಪನ್ಮೂಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಸಮಾಜಸೇವೆಯಲ್ಲಿ ನೀಡಿದ ಅತ್ಯುತ್ತಮ ಕೊಡುಗೆಗಳನ್ನು ಪರಿಗಣಿಸಿ Jivran Foundation ವತಿಯಿಂದ ಈ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಡಾ. ಪ್ರೀತಿ ಅವರು ವಿದೇಶಿ ವೈದ್ಯಕೀಯ ಶಿಕ್ಷಣ (MBBS Abroad), ಉದ್ಯೋಗ ಮಾರ್ಗದರ್ಶನ, ಶಿಕ್ಷಣ ಸಲಹಾ ಸೇವೆಗಳು, ಕೌಶಲ್ಯಾಭಿವೃದ್ಧಿ ಹಾಗೂ ಯುವಜನರ ಸಬಲೀಕರಣ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಈ ಪ್ರಶಸ್ತಿ ಅವರ ಸಾಧನೆಗೆ ಮಾತ್ರವಲ್ಲದೆ, ಕರ್ನಾಟಕದ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರಕ್ಕೂ ರಾಷ್ಟ್ರೀಯ ಮಟ್ಟದಲ್ಲಿ ದೊರೆತ ಗೌರವವಾಗಿದೆ.
ಈ ಸಂದರ್ಭದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಮಾಜದ ಗಣ್ಯರು, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಡಾ. ಪ್ರೀತಿ ಅವರಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲೆಂದು ಶುಭ ಹಾರೈಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
ಸುದ್ದಿದಿನ ಡೆಸ್ಕ್:ಹಲವಾರು ವರ್ಷಗಳ ಕಾಲ ಬಂಗಾಳಿ ಟೆಲಿವಿಷನ್ನಲ್ಲಿ ಕೆಲಸ ಮಾಡಿದ ನಂತರ ಮತ್ತು ನಂತರ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ವಿಸ್ತರಿಸಿದ ನಂತರ, ಅಭಿನೇತಾ ಸುಶೋಭನ್ ಸೋನು ರಾಯ್ ಅವರು ‘ಟೇಕ್ ಕೇರ್ ಭಾಲೋಬಾಸ’ ಚಿತ್ರದ ಮೂಲಕ ಬಂಗಾಳಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ‘ಜಾಯ್’ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ಇದು ಸ್ನೇಹ, ಸಂಬಂಧಗಳು ಮತ್ತು ಕಾಲಾನುಕ್ರಮದಲ್ಲಿ ವಿಕಸನಗೊಳ್ಳುವ ಭಾವನೆಗಳ ಸುತ್ತ ಕೇಂದ್ರೀಕೃತವಾಗಿರುವ ಕಥೆಯಲ್ಲಿನ ಒಬ್ಬ ಸ್ನೇಹಿತ.
ನಿರ್ದೇಶಕ ಪಿಜೂಷ್ ಸಾಹಾ ಅವರ ಮಾರ್ಗದರ್ಶನದಲ್ಲಿ ಸುಶೋಭನ್ ಅವರ ಅಭಿನಯ ಪ್ರಯಾಣವು ಪ್ರಾರಂಭವಾಯಿತು, ಅಲ್ಲಿ ಅವರು ಸುಮಾರು ಎರಡು ವರ್ಷಗಳ ಕಾಲ ಅಭಿನಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದರು. ನಿಯಮಿತ ಆಡಿಷನ್ಗಳ ನಂತರ, 2019 ರಲ್ಲಿ ಅವರು ಆಕಾಶ್ ಆಠ್ ಚಾನೆಲ್ನ ‘ಆನಂದಮಯೀ ಮಾ’ ಧಾರಾವಾಹಿಯ ಮೂಲಕ ತಮ್ಮ ಟೆಲಿವಿಷನ್ ಚೊಚ್ಚಲ ಪ್ರವೇಶವನ್ನು ಮಾಡಿದರು, ಇದನ್ನು ಮರಣೋತ್ತರ ನಿರ್ದೇಶಕ ದೇವಿದಾಸ್ ಭಟ್ಟಾಚಾರ್ಯ ನಿರ್ದೇಶಿಸಿದ್ದರು, ಅದರಲ್ಲಿ ಅವರು ವೈಷ್ಣವ ಭಕ್ತನ ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ಸ್ಟಾರ್ ಜಲ್ಸಾದ ‘ಮೋಹರ್’, ‘ಕೋರಾಪಾಖಿ’, ‘ತಿತ್ಲಿ’ ಮತ್ತು ‘ಖೇಲಾಘರ್’, ಜೊತೆಗೆ ಜೀ ಬಂಗ್ಲಾದ ‘ಜಮುನಾ ಢಾಕಿ’ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು, ಹೀಗೆ ಬಂಗಾಳಿ ಟೆಲಿವಿಷನ್ನಲ್ಲಿ ತಮ್ಮ ಕೆಲಸವನ್ನು ಮುಂದುವರೆಸಿದರು.
COVID-19 ಸಾಂಕ್ರಾಮಿಕ ಸಮಯದಲ್ಲಿ, ಅಭಿನಯದ ಕೆಲಸಗಳು ಸೀಮಿತವಾದಾಗ, ಸುಶೋಭನ್ ಮಾಡೆಲಿಂಗ್ಗೆ ತಿರುಗಿದರು. 2023 ರಿಂದ ಪ್ರಾರಂಭಿಸಿ, ಅವರು ಹಾಲಿಡೇ ಇನ್ ಹೋಟೆಲ್, ಡಾಬರ್, ಟೈಟಾನ್ ಐ+, ವೆಲಾಸಿಟಿ ಐವೇರ್, ಅಮೆಜಾನ್, ಸ್ಪೆನ್ಸರ್ಸ್, ಕ್ಯಾಂಪಸ್ ಶೂಸ್, ಬಿಗ್ ಬಜಾರ್, ಬಯೋಟಿಕ್ ಮತ್ತು ಫಿಯಾಮಾ ಡಿ ವಿಲ್ಸ್ ಸೇರಿದಂತೆ ಹಲವಾರು ಬ್ರಾಂಡ್ಗಳೊಂದಿಗೆ ಕೆಲಸ ಮಾಡಿದರು. 2025 ರಲ್ಲಿ, ಕೋಲ್ಕತ್ತಾದಲ್ಲಿ ನಡೆದ ‘ಎತ್ನಿಕ್ ಎಲಿಗನ್ಸ್ 2025’ ಸೌಂದರ್ಯ ಸ್ಪರ್ಧೆಯಲ್ಲಿ ಅವರು ಪ್ರಥಮ ರನ್ನರ್-ಅಪ್ ಆಗಿ ಆಯ್ಕೆಯಾದರು.
ಹೌರಾದಲ್ಲಿ ಜನಿಸಿ ಕೋಲ್ಕತ್ತಾದಲ್ಲಿ ಬೆಳೆದ ಸುಶೋಭನ್, ಸುಮಾರು ಮೂರೂವರೆ ವರ್ಷದ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ನಂತರ ತಾಯಿಯಿಂದ ಬೆಳೆಸಲ್ಪಟ್ಟರು. ಅವರು ಕೋಲ್ಕತ್ತಾದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು 2016 ರಲ್ಲಿ ದಮ್ ದಮ್ ಮೋತಿಜೀಲ್ ರವೀಂದ್ರ ಮಹಾವಿದ್ಯಾಲಯದಿಂದ ವಾಣಿಜ್ಯದಲ್ಲಿ ಬಿ.ಕಾಮ್ ಪದವಿಯನ್ನು ಪಡೆದರು. ಅಭಿನಯವನ್ನು ಮುಂದುವರಿಸುವ ಮೊದಲು, ಅವರು ಸುಮಾರು ಎರಡು ವರ್ಷಗಳ ಕಾಲ ಪಾಶ್ಚಾತ್ಯ ನೃತ್ಯದಲ್ಲಿ ತರಬೇತಿ ಪಡೆದರು ಮತ್ತು ರಂಗ ಪ್ರದರ್ಶನಗಳಲ್ಲಿ ಭಾಗವಹಿಸಿದರು.
‘ಟೇಕ್ ಕೇರ್ ಭಾಲೋಬಾಸ’ ಸುಶೋಭನ್ ಅವರ ಮೊದಲ ಬಂಗಾಳಿ ಫೀಚರ್ ಫಿಲ್ಮ್ನಲ್ಲಿ ಕಾಣಿಸಿಕೊಳ್ಳುವುದನ್ನು ಸೂಚಿಸುತ್ತದೆ. ಈ ಚಿತ್ರದಲ್ಲಿ, ಜಾಯ್ ಅವರು ಕೆಲವೊಮ್ಮೆ ಸಂಯಮದಿಂದಿರುವ, ಆದರೆ ಉಷ್ಣತೆ, ಸ್ನೇಹಪರತೆ ಮತ್ತು ಸಹಜತೆಯನ್ನು ಪ್ರದರ್ಶಿಸುವ ಪಾತ್ರವಾಗಿ ಚಿತ್ರಿಸಲಾಗಿದೆ, ಇದು ಸಂಬಂಧಗಳು ಮತ್ತು ದೈನಂದಿನ ಭಾವನೆಗಳ ಅನ್ವೇಷಣೆಗೆ ಕೊಡುಗೆ ನೀಡುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
ಸುದ್ದಿದಿನ, ಚಿತ್ರದುರ್ಗ: ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗಗಳಲ್ಲಿ 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆಗೆ ಬಿಡುಗಡೆಯಾಗಿರುವ ಅಂದಾಜು 7 ಕೋಟಿ ಅನುದಾನದಲ್ಲಿನ ಅವ್ಯವಹಾರವನ್ನು ತನಿಖೆಗೆ ಒಳಪಡಿಸುವಂತೆ ಲೋಕಾಯುಕ್ತಾಗೆ ದೂರು ನೀಡಲಾಗಿದೆ ಎಂದು ವಕೀಲ ಕೆ.ಎ.ಓಬಳಪ್ಪ ಅವರು ತಿಳಿಸಿದರು.
ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಒಟ್ಟು 4 ಹಂತದಲ್ಲಿ 7 ಕೋಟಿ ರೂಪಾಯಿಗಳನ್ನು ಚಿತ್ರದುರ್ಗ ಜಿಲ್ಲೆಯ 06 ತಾಲ್ಲೂಕುಗಳಿಗೆ ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ಮಾಹಿತಿ ತಿಳಿದಿದೆ ಎಂದರು.
ಚಿತ್ರದುರ್ಗ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 06 ತಾಲ್ಲೂಕುಗಳ ಉಪವಿಭಾಗಗಳಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ ಮಾಹಿತಿ ಕೋರಿದಾಗ, ಯಾವುದೇ ಉಪವಿಭಾಗಗಳ ಅಧಿಕಾರಿಗಳು ಸೂಕ್ತ ಮಾಹಿತಿ ನೀಡದ ಕಾರಣ ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರಿಗೆ ಅರ್ಜಿ ಸಲ್ಲಿಸಿ, ‘2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಚಳ್ಳಕೆರೆ, ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ಮೊಳಕಾಲ್ಮೂರು ತಾಲ್ಲೂಕುಗಳಿಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ’ ದೂರು ನೀಡಲಾಗಿತ್ತು ಎಂದರು.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರು ನಮ್ಮ ದೂರು ಅರ್ಜಿಯನ್ನು ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ವರ್ಗಾಹಿಸಿ, ಸೂಕ್ತ ಕ್ರಮವಹಿಸಿ ಕಛೇರಿಗೆ ವರದಿ ಸಲ್ಲಿಸಲು ಸೂಚಿಸಿರುತ್ತಾರೆ. ಅದರಂತೆ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರು ವಿಚಾರಣೆ ನಡೆಸಿ, ಅರ್ಜಿದಾರರಿಗೆ ಕಡತ ವೀಕ್ಷಣೆ ಮಾಡಲು ಅವಕಾಶ ನೀಡಿ, ದಾಖಲೆ ನೀಡುವಂತೆ ಆದೇಶ ಹೊರಡಿಸಿರುತ್ತಾರೆ ಎಂದು ತಿಳಿಸಿದರು.
ಕಾರ್ಯಪಾಲಕ ಅಭಿಯಂತರರ ಆದೇಶದಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ಇವರುಗಳು ವಿವಿಧ ದಿನಾಂಕಗಳAದು ಉಪವಿಭಾಗಗಳಿಗೆ ಆಹ್ವಾನಿಸಿ, ಕಡತ ಪರಿಶೀಲನೆ ಮಾಡಿಕೊಳ್ಳುವಂತೆ ತಿಳಿಸಿದ ಕಾರಣ ಉಪವಿಭಾಗಗಳ ಕಾರ್ಯಪಾಲಕ ಅಭಿಯಂತರರುಗಳು ನಿಗಧಿಪಡಿಸಿದ ದಿನಾಂಕದಂದು ಉಪವಿಭಾಗಗಳ ಕಛೇರಿಗೆ ಭೇಟಿ ನೀಡಿದಾಗ ಕಂಡುಬಂದ ಅಂಶಗಳೆಂದರೆ;
1. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಚಿತ್ರದುರ್ಗ ಇಲ್ಲಿ ಒಟ್ಟು 80 ಕಾಮಗಾರಿಗಳು ನಡೆದಿದ್ದು, ಇದರಲ್ಲಿ ಕೇವಲ 23 ಕಾಮಗಾರಿಗಳ (ಅಂದಾಜು ಮೊತ್ತ ರೂ. 37.88 ಲಕ್ಷ) ಕಡತಗಳನ್ನು ತೋರಿಸಿದ್ದು, ಉಳಿದ ಕಾಮಗಾರಿಯ ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬ ನಮ್ಮ ಕಡತ ಪರಿಶೀಲನೆ ಪತ್ರಕ್ಕೆ ದೃಢೀಕರಣ ನೀಡಿರುತ್ತಾರೆ.
2. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಚಳ್ಳಕೆರೆ ಇಲ್ಲಿ ಒಟ್ಟು 80 ಕಾಮಗಾರಿಗಳ ಕಡತಗಳಲ್ಲಿ 28 ಕಾಮಗಾರಿಗಳ ಕಡತಗಳನ್ನು ತೋರಿಸಿದ್ದು, ಉಳಿದ 52 ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬ ನಮ್ಮ ಪರಿಶೀಲನೆ ಪತ್ರಕ್ಕೆ ದೃಢೀಕರಣ ನೀಡಿರುತ್ತಾರೆ.
3. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಇಲ್ಲಿಗೆ ಭೇಟಿ ನೀಡಿದ ಸಮಯದಲ್ಲಿ ಈ ಕಛೇರಿಗಳಲ್ಲಿ ಯಾವುದೇ ಕಡತಗಳು ಲಭ್ಯವಿರುವುದಿಲ್ಲ. ಕಛೇರಿಯ ಸಿಬ್ಬಂದಿಗಳು ತುರ್ತು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬುದಾಗಿ ದೃಢೀಕರಣ ನೀಡಿರುತ್ತಾರೆ ಎಂದು ತಿಳಿಸಿದರು.
ಕಡತ ಪರಿಶೀಲನೆಯ ತರುವಾಯ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ದೂರು ನೀಡಿ, ನಾವು ಕೋರಿದ ಅಗತ್ಯ ದಾಖಲೆಗಳನ್ನು ಒದಗಿಸಿಕೊಡುವಂತೆ ಕೋರಲಾಗಿತ್ತು. ಆದರೆ ಕಾರ್ಯಪಾಲಕ ಅಭಿಯಂತರರು ಇವರು ಮಾಹಿತಿ ಕೊಡಿಸುವಲ್ಲಿ ಮತ್ತು ತನಿಖಾ ವರದಿ ನೀಡುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಹಾಲಿ ಕಾರ್ಯಪಾಲಕ ಅಭಿಯಂತರರಾದ ಅಮರ್ನಾಥ್ ಜೈನ್ ಅವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿರುತ್ತದೆ ಎಂದರು.
ಈ ಎಲ್ಲಾ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ 6 ಉಪವಿಭಾಗಗಳಲ್ಲಿ ಕಾರ್ಯನಿರ್ವಹಿಸಿರುವ 23 ಸಹಾಯಕ ಕಾರ್ಯಪಾಲಕ ಅಭಿಯಂತರರು, 13 ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಿರಿಯ ಅಭಿಯಂತರರು, ಅಂದಿನ ಕಾರ್ಯಪಾಲಕ ಅಭಿಯಂತರರಾದ ಬಸವನಗೌಡ ಪಾಟೀಲ್ ಹಾಗೂ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಹಿರಿಯ ವಕೀಲರಾದ ನಾಗರಾಜ ಪೂಜಾರ್, ಪತ್ರಕರ್ತ ಅಶೋಕ್, ಹನುಮಂತಪ್ಪ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಅನುದಾನ ದುರುಪಯೋಗ | ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಅಶೋಕ್ ಡಿ.ಆರ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
-
ದಿನದ ಸುದ್ದಿ4 days agoಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
-
ದಿನದ ಸುದ್ದಿ3 days agoಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್



