ಬಹಿರಂಗ
ಅಂಬೇಡ್ಕರ್ ಬರೆಹಗಳು ಮತ್ತು ವೈಚಾರಿಕೆ ಪ್ರಜ್ಞೆ
ಭಾರತವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ನಾವು ಯಾರನ್ನು ಓದದಿದ್ದರೂ ನಡೆದೀತು ಆದರೆ ಅಂಬೇಡ್ಕರ್ ಅವರನ್ನು ಓದದಿದ್ದರೆ ನಡೆಯುವುದಿಲ್ಲ ಅನ್ನುವಷ್ಟರ ಮಟ್ಟಿಗೆ ಈ ದೇಶದ ಇತಿಹಾಸ, ಸಮಾಜ, ದೇವರು-ಧರ್ಮ, ರಾಜಕಾರಣ, ತತ್ವಶಾಸ್ತ್ರ, ಆರ್ಥಿಕತೆ, ಹೀಗೆ ಬಹುಮುಖ್ಯವಾದ ಎಲ್ಲ ಮಗ್ಗಲುಗಳನ್ನು ಆಳವಾಗಿ ಅಧ್ಯಯನಮಾಡಿ ಕರಾರುವಕ್ಕಾಗಿ ತಮ್ಮ ವಿಚಾರಗಳನ್ನು ಪ್ರಬುದ್ಧವಾಗಿ ಮಂಡಿಸಿದ ಅಂಬೇಡ್ಕರ್ ಅವರಂಥ ಮತ್ತೊಬ್ಬ ವಿದ್ವಾಂಸ ಬಹುಶಃ ಭಾರತದಲ್ಲಿ ನಮಗೆ ದೊರೆಯಲಾರನೇನೊ.
ಜಾತಿಯ ಕಾರಣಕ್ಕೆ ಎಲ್ಲ ಬಗೆಯ ಸಾಮಾಜಿಕ ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತನಾಗಿ, ಪಡಬಾರದ ಕಷ್ಟಗಳನ್ನೆಲ್ಲ ಪಟ್ಟು, ಎಲ್ಲ ಬಗೆಯ ದೌರ್ಜನ್ಯಗಳನ್ನು ಎದುರಿಸಿ ಬೆಳೆದ ದಲಿತ ಹುಡುಗನೊಬ್ಬ ಆ ಕಾಲದ ಎಲ್ಲ ಸೌಲಭ್ಯಗಳನ್ನು ಜಾತಿಯ ಕಾರಣದಿಂದಲೇ ಪಡೆಯುತ್ತಿದ್ದ ಯಾವೊಬ್ಬ ಸವರ್ಣಿಯನೂ ಬೆಳೆಯಲಾಗದಷ್ಟು ಎತ್ತರಕ್ಕೆ ಬೆಳೆದದ್ದು ಸಣ್ಣ ಸಂಗತಿಯೇನಲ್ಲ. ಆಧುನಿಕ ವಿದ್ಯಾಭ್ಯಾಸದ ಅತ್ಯುನ್ನತ ಪದವಿಗಳಾದ ಪಿಎಚ್.ಡಿ, ಡಿ.ಎಸ್ಸಿ.ಯಂಥವುಗಳನ್ನು ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ, ತಮ್ಮ ನಿಷ್ಠೆ, ಶ್ರದ್ಧೆ, ಪರಿಶ್ರಮಗಳಿಂದ ಕಷ್ಟಪಟ್ಟು, ಆಳವಾದ ಅಧ್ಯಯನ ಮತ್ತು ಮೊನಚು ವಿಶ್ಲೇಷಣೆಗಳಿಂದ ಗಳಿಸಿಕೊಂಡ ಅಪಾರವಾದ ಜ್ಞಾನವನ್ನು ಸಮಾಜೋದ್ಧಾರಕ್ಕಾಗಿ ಅವರಷ್ಟು ಬಳಸಿಕೊಂಡವರೂ ವಿರಳ. ಅಂಬೇಡ್ಕರ್ ಅವರ ವಿದ್ವತ್ತನ್ನು ಜಗತ್ತು ಇಂದು ಸರಿಯಾಗಿಯೇ ಗುರುತಿಸಿ ದೊಡ್ಡಮಟ್ಟದಲ್ಲಿ ಗೌರವಿಸುತ್ತಿದೆ. ಅವರ ಜನ್ಮದಿನವನ್ನು ವಿಶ್ವಸಂಸ್ಥೆ ‘ಜಾಗತಿಕ ಜ್ಞಾನದಿನ’ವನ್ನಾಗಿ ಘೋಷಿಸಿರುವುದು ಇದರ ಒಂದು ಉದಾಹರಣೆ ಮಾತ್ರ.
ಇಂತಹ ಮಹಾನ್ ಮೇಧಾವಿಗೆ ಭಾರತೀಯರಾದ ನಾವು ಏನು ಮಾಡಿದ್ದೇವೆ ಎಂಬುದನ್ನು ಕೇಳಿಕೊಂಡರೆ ಒಂದಿಷ್ಟು ನಾಚಿಕೆಯಾದೀತು. ಏಕೆಂದರೆ ಈಗಲೂ ಭಾರತದಲ್ಲಿ ಬಹುಪಾಲು ಜನರಿಗೆ ‘ಅಂಬೇಡ್ಕರ್’ ಅಂದ ತಕ್ಷಣಕ್ಕೆ ನೆನಪಿಗೆ ಬರುವುದು ಅವರ ‘ಜಾತಿ’ಯೇ ಹೊರತು ‘ಜ್ಣಾನ’ವಲ್ಲ! ಒಂದು ರಾಜ್ಯದ ಸೇನಾಕಾರ್ಯದರ್ಶಿ ಅಂತಹ ದೊಡ್ಡ ಹುದ್ದೆಯಲ್ಲಿದ್ದರೂ ದಲಿತನೆಂಬ ಕಾರಣಕ್ಕೆ ಅವರಿಗೆ ವಾಸಿಸಲು ಒಂದು ಬಾಡಿಗೆ ಮನೆ ನಮ್ಮ ದೇಶದಲ್ಲಿ ಸಿಗಲಿಲ್ಲ! ಅವರೇ ಬರೆದ ಸಂವಿಧಾನದ ಪ್ರಕಾರವೆ ನಡೆದ ಮೊದಲ ಚುನಾವಣೆಯಲ್ಲಿಯೇ ಅವರನ್ನು ಸೋಲಿಸಿದ ‘ಭವ್ಯಭಾರತ ನಮ್ಮದು!
ಅಂಬೇಡ್ಕರ್ ಅಂದರೆ ಏನು ಅವರ ವಿದ್ವತ್ತು ಯಾವ ಮಟ್ಟದ್ದು ಆಧುನಿಕ ಭಾರತದ ನಿರ್ಮಾಣದಲ್ಲಿ ಅವರ ಕೊಡುಗೆ ಏನು ಎಂಬುದು ಇಂದಿಗೂ ನಮ್ಮಲ್ಲಿ ಬಹುಜನಕ್ಕೆ ಗೊತ್ತಿಲ್ಲ. ಅವರನ್ನು ಸದಾ ತೆಗಳುವ ವರ್ಗವೊಂದುಕಡೆ ಇದ್ದರೆ ಅದಕ್ಕೆ ವಿರುದ್ಧವಾಗಿ ಅವರನ್ನು ಆರಾಧಿಸುವ ವರ್ಗವೊಂದು ಕಾಲದ ಅಗತ್ಯವಾಗಿ ಬೆಳೆದುಬಂತು. ಅವರನ್ನು ವಿರೋಧಿಸುವವರಿರಲಿ, ಆರಾಧಿಸುವವರಲ್ಲಿ ಕೂಡ ಬಹಳ ಜನ ಅಂಬೇಡ್ಕರ್ ಅವರನ್ನು ಸರಿಯಾಗಿ ಓದಿಕೊಳ್ಳಲಿಲ್ಲ ಎಂಬುದು ವಾಸ್ತವ ಸಂಗತಿ.
ಇದಕ್ಕೆ ಅವರ ಬರಹಗಳ ಅಲಭ್ಯತೆಯೂ ಒಂದು ದೊಡ್ಡ ಕಾರಣವಾಗಿತ್ತು. ಅಂಬೇಡ್ಕರ್ ತೀರಿಕೊಂಡ ಮೇಲೆ ಬಹಳಷ್ಟು ದೊಡ್ಡ ಲೇಖಕರ ಬೌದ್ಧಿಕ ಆಸ್ತಿಗಳಂತೆ ಅಂಬೇಡ್ಕರ್ ಅವರ ಬರೆಹಗಳು ಕೂಡ ಕುಟುಂಬದ ಆಸ್ತಿವಿವಾದಕ್ಕೆ ತುತ್ತಾದವು. ಈ ಕೊರತೆಯನ್ನು ನೀಗಿಸುವ ಪ್ರಯತ್ನವೊಂದು ಮೊಟ್ಟಮೊದಲು ಮೂವತ್ತು ವರ್ಷಗಳ ಹಿಂದೆ ಆರಂಭವಾಯಿತು. ಆದರೆ ಒಂದು ರಾಜ್ಯ ಸರ್ಕಾರದ ಸತತ ಮತ್ತು ಪ್ರಾಮಾಣಿಕ ಪ್ರಯತ್ನದ ಫಲವಾಗಿ ಕೊನೆಗೂ ಅಂಬೇಡ್ಕರ್ ಅವರ ಬಹುಮುಖ್ಯ ಬರಹಗಳು ಸಾರ್ವಜನಿಕರಿಗೆ ದೊರೆಯುವಂತಾಯಿತು.
ಅಂತಹ ಮಹತ್ವದ ಕೆಲಸವೊಂದನ್ನು ಸುಮಾರು ನಲವತ್ತೈದು ವರ್ಷಗಳ ಹಿಂದೆ ಮಾಡಿ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾದದ್ದು ಶರದ್ ಪವಾರ್ ನೇತೃತ್ವದ ಮಹಾರಾಷ್ಟ್ರ ಸರ್ಕಾರ.
ಬಹುತೇಕ ಇಂಗ್ಲಿಷ್ ಮತ್ತು ಮರಾಠಿಯಲ್ಲಿ ಅಲ್ಲಲ್ಲಿ ಬಿಡಿಬಿಡಿಯಾಗಿದ್ದ ಮತ್ತು ಅಳಿವಿನ ಅಂಚಿಗೆ ಸಾಗುತ್ತಿದ್ದ ಅವರ ಬರೆಹ ಮತ್ತು ಭಾಷಣಗಳನ್ನೆಲ್ಲ ಒಟ್ಟುಮಾಡಿ ಪ್ರಕಟಿಸುವ ಯೋಜನೆಯೊಂದನ್ನು1976ರಲ್ಲಿ ಶರದ್ ಪವಾರ್ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಹಮ್ಮಿಕೊಂಡು ಅದಕ್ಕೆ ಸಂಬಂಧಿಸಿದ ವಾರಸುದಾರರಿಂದ ಅನುಮತಿ ಪಡೆದುಕೊಂಡು ಕಾರ್ಯಪ್ರವೃತ್ತವಾದದ್ದು ಭಾರತೀಯ ವೈಚಾರಿಕ ಸಾಹಿತ್ಯದ ಚರಿತ್ರೆಯಲ್ಲಿ ಒಂದು ಮಹತ್ವದ ಹೆಜ್ಜೆ ಎನ್ನಬೇಕು.
ಈ ಸಮಿತಿಯ ಪ್ರಾಮಾಣಿಕ ಪರಿಶ್ರಮದಿಂದಾಗಿ 1979ರಲ್ಲಿ ಅಂಬೇಡ್ಕರ್ ಅವರ ಬರೆಹ-ಭಾಷಣಗಳ ಮೊದಲ ಸಂಪುಟ ಹೊರಬರುವ ಮೂಲಕ ಈ ಯೋಜನೆಗೆ ಚಾಲನೆ ಸಿಕ್ಕು 1982ಮತ್ತು 1987ರಲ್ಲಿ ಕ್ರಮವಾಗಿ ಎರಡನೇ ಮತ್ತು ಮೂರನೇ ಸಂಪುಟಗಳು ಯಾವುದೇ ಸಮಸ್ಯೆಗಳು ಇಲ್ಲದೆ ಬಿಡುಗಡೆಯಾದವಾದರೂ ೧೯೮೭ರಲ್ಲಿಯೇ ಬಿಡುಗಡೆಯಾದ ನಾಲ್ಕನೇ ಸಂಪುಟ ವಿವಾದದ ಬಿರುಗಾಳಿಯನ್ನೆಬ್ಬಿಸಿತು!
‘The Riddles of Hinduism’ (ಈಗ ‘ಹಿಂದೂ ಧರ್ಮದ ಒಗಟುಗಳು’ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಲಭ್ಯವಿರುವ) ಎಂಬ ಅವರ ಅತ್ಯಂತ ಮಹತ್ವದ ಪುಸ್ತಕವನ್ನು ಆ ಸಂಪುಟ ಒಳಗೊಂಡಿದ್ದು ಕೆಲವು ಸ್ವಯಂ ಘೋಷಿತ ಧಾರ್ಮಿಕ ನಾಯಕರು ಅನಗತ್ಯ ವಿವಾದವೆಬ್ಬಿಸಿದ್ದು ಈ ಗ್ರಂಥಗಳ ಹೊರಬರುವಿಕೆಗೆ ತಾತ್ಕಾಲಿಕ ತಡೆಯೊಡ್ಡಿತು. ಅಂಬೇಡ್ಕರ್ ಅವರ ಆ ಪುಸ್ತಕದಲ್ಲಿ ‘ಹಿಂದೂ ಧರ್ಮದ ಒಗಟುಗಳು’ ಎಂದು ಕರೆದು ಸಮಂಜಸ ವಿವರಣೆಗೆ ಆಹ್ವಾನ ನೀಡಲಾಗಿದ್ದ ಒಟ್ಟು ಇಪ್ಪತ್ನಾಲ್ಕು ಸವಾಲುಗಳಿದ್ದವು. ಇವುಗಳಲ್ಲಿ ಹದಿನೈದು ಒಗಟುಗಳು ಧಾರ್ಮಿಕ ವಿಷಯಕ್ಕೆ, ಐದು ಒಗಟುಗಳು ಸಾಮಾಜಿಕ ವಿಷಯಯಕ್ಕೆ ಸೇರಿದ್ದರೆ ಉಳಿದ ನಾಲ್ಕು ಒಗಟುಗಳು ರಾಜಕೀಯಕ್ಕೆ ಸಂಬಂಧಿಸಿದ್ದವು.
ಹಿಂದೂ ಧರ್ಮದ ಆಧಾರ ಗ್ರಂಥಗಳೆಂದು ಕರೆಯಲಾಗುವ, ವೇದಗಳು, ಉಪನ್ನಿಷತ್ತುಗಳು, ಪುರಾಣಗಳು, ಹಾಗೇ ಮನುವಿನ ಸಿದ್ಧಾಂತ ಇಂಥವುಗಳನ್ನು ಅಂಬೇಡ್ಕರ್ ಅವರು ಎಷ್ಟೊಂದು ಆಳವಾಗಿ ಅಧ್ಯಯನ ಮಾಡಿದ್ದರು ಎಂಬುದು ಅವರು ಸಿದ್ಧಪಡಿಸಿದ ಒಗಟುಗಳನ್ನು ನೋಡಿದರೆ ಯಾರಿಗಾದರೂ ಗೊತ್ತಾಗುತ್ತದೆ. ಅವರ ಒಗಟುಗಳನ್ನು ಬಿಡಿಸಬೇಕಾದರೆ ಅವರಿಗಿಂತ ಹೆಚ್ಚು ಅಲ್ಲದಿದ್ದರೂ ಅವರಷ್ಟಾದರೂ ಅವನ್ನು ಓದಿಕೊಳ್ಳಬೇಕಾಗುತ್ತದೆ.
ಆದರೆ ಅವರ ಸಂಖ್ಯೆ ಎಷ್ಟಿದೆ ನಮ್ಮಲ್ಲಿ? ಅವರು ಅಂದು ಕೇಳಿರುವ ಈ ಒಗಟುಗಳನ್ನು ಇದುವರೆಗೂ ಯಾವ ಮಹಾತ್ಮನಿಗೂ ಉತ್ತರಿಸಲು ಆಗಿಲ್ಲ! ಹೀಗಿರುವಾಗ ಆ ಕಾಲದಲ್ಲಿ ಅವರ ಸವಾಲುಗಳು ಕೆಲವರನ್ನು ಕೆರಳಿಸಿದ್ದರಲ್ಲಿ ಆಶ್ಚರ್ಯವಿರಲಾರದು! ಅಂಬೇಡ್ಕರ್ ಹೇಳುವುದನ್ನು ಒಪ್ಪಿಕೊಳ್ಳಲೂ ಅಗದೇ ಅವರ ವಾದವನ್ನು ಸಮಂಜಸ ಪ್ರತಿ ವಾದಗಳೊಂದಿಗೆ ಅಲ್ಲಗಳೆಯಲೂ ಆಗದೇ ಹೋದಾಗ ಅವರಿಗೆಲ್ಲ ಸಿಟ್ಟುಮಾಡಿಕೊಂಡು ವಿವಾದಮಾಡುವುದನ್ನು ಬಿಟ್ಟು ಇನ್ಯಾವ ಆಯ್ಕೆಗಳಿದ್ದವು?
ಆದರೆ ಒಳ್ಳೆಯ ಪುಸ್ತಕವೊಂದರ ಪ್ರಕಟಣೆ ಮತ್ತು ಪ್ರಚಾರವನ್ನು ಕೆಟ್ಟ ಉದ್ದೇಶದಿಂದ ತಡೆಯುವ ಪ್ರಯತ್ನಗಳು ಮೇಲ್ನೋಟಕ್ಕೆ ಯಶಸ್ವಿಯಾದಂತೆ ಕಂಡರೂ ಅಂತಿಮವಾಗಿ ಅವು ಕಾಣುವುದು ಸೋಲನ್ನೇ ಹೊರತು ಗೆಲುವನ್ನಲ್ಲ. ಇಲ್ಲಿಯೂ ಆದದ್ದು ಅದೇ. ಅಂಬೇಡ್ಕರ್ ಅವರ ಆಳವಾದ ಅಧ್ಯಯನ ತರ್ಕಬದ್ಧವಾದ ವಾದಗಳ ಎದುರು ಈ ಜೊಳ್ಳು ತರಲೆಗಳೆಲ್ಲ ತರಗೆಲೆಗಳಂತೆ ಹಾರಿಹೋಗಿ ಕೊನೆಗೂ ಆ ಸಂಪುಟವೂ ಸೇರಿದಂತೆ ಒಟ್ಟು ಹದಿನಾಲ್ಕು ಸಂಪುಟಗಳು ಹೊರಬಂದು ಅಂಬೇಡ್ಕರ್ ಅಂದರೆ ಏನು ಎಂಬುದು ಕೊನೆಗೂ ಜಗತ್ತಿಗೆ ಗೊತ್ತಾಗಿಬಿಟ್ಟಿತು!
ಮಹಾರಾಷ್ಟ್ರ ಸರ್ಕಾರ ಹೊರತಂದ ಅಂಬೇಡ್ಕರ್ ಅವರ ಈ ಸಮಗ್ರ ಸಾಹಿತ್ಯ ಪ್ರಕಟವಾದದ್ದು ಇಂಗ್ಲಿಷಿನಲ್ಲಿ. ಈ ‘ಇಂಗ್ಲಿಷ್ ಕಾಲುವೆ’ಯ ಮೂಲಕ ಅಂಬೇಡ್ಕರ್ ಸಾಹಿತ್ಯ ಜಗತ್ತಿನ ಎಲ್ಲಭಾಷೆಗಳ, ದೇಶಗಳ ಜನರನ್ನು ತಲುಪಲು ಸಾಧ್ಯವಾಯಿತು ಎಂಬುದು ಮಹತ್ವದ ಸಂಗತಿ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಅಷ್ಟಕ್ಕೆ ನಿಂತರೆ ಅದು ಸಾಕಾಗುತ್ತಿರಲಿಲ್ಲ. ಏಕೆಂದರೆ ಅದರೊಂದಿಗೆ ಇಂಗ್ಲಿಷ್ ಬಲ್ಲವರು ಮಾತ್ರ ಅವನ್ನು ಓದಬಹುದಾದ ಮಿತಿಯೊಂದು ನಿರ್ಮಾಣವಾಯಿತು. ಈ ಮಿತಿಯನ್ನು ಮೀರಬೇಕಾದ ಏಕೈಕ ದಾರಿಯೆಂದರೆ ಅವರ ಈ ಎಲ್ಲ ಬರೆಹ ಮತ್ತು ಭಾಷಣಗಳ ಸಂಪುಟಗಳನ್ನು ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸುವುದು. ಈ ಅವಶ್ಯಕತೆಯನ್ನು ಮೊಟ್ಟಮೊದಲು ಮನಗಂಡು ಕಾರ್ಯಪ್ರವೃತ್ತವಾದ ರಾಜ್ಯವೆಂದರೆ ಕರ್ನಾಟಕ ಎಂಬುದು ನಾವೆಲ್ಲ ಹೆಮ್ಮೆಪಡುವ ಸಂಗತಿ.
ಮಹಾರಾಷ್ಟ್ರ ಸರ್ಕಾರ ಈ ಸಂಪುಟ ತರುತ್ತಿರುವಾಗಲೇ, ಅದರಲ್ಲೂ ಈ ಯೋಜನೆಯ ನಾಲ್ಕನೇ ಸಂಪುಟ ವಿವಾದಕ್ಕೆ ಗುರಿಯಾದ ದಿನಗಳಲ್ಲಿಯೆ ಅಂದರೆ ೧೯೮೮ ರಲ್ಲಿಯೇ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ನೇತೃತ್ವದ ಕರ್ನಾಟಕ ಸರ್ಕಾರ ಅಂಬೇಡ್ಕರ್ ಅವರ ಬಹು ಪರಿಚಿತವಾದ ಹದಿನಾಲ್ಕು ಬಿಡಿ ಕೃತಿಗಳನ್ನು ಕನ್ನಡಕ್ಕೆ ತರಲು ಮಹತ್ವದ ನಿರ್ಣಯವೊಂದನ್ನು ಕೈಗೊಂಡಿತು. ಇದಕ್ಕಾಗಿ ಹಿರಿಯ ವಿದ್ವಾಂಸ ಡಾ.ಎ.ಎಂ. ರಾಜಶೇಖರಯ್ಯ, ಕವಿ ಡಾ.ಸಿದ್ಧಲಿಂಗಯ್ಯ ಮತ್ತು ಚಿಂತಕ ದೇವನೂರು ಮಹಾದೇವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರನ್ನೊಳಗೊಂಡ ನಾಲ್ಕುಜನರ ಸಮಿತಿಯೊಂದು ರಚನೆಯಾಯಿತು.
ಈ ಸಮಿತಿ ಮಾಡಿದ ಮಹತ್ವದ ಕೆಲಸವೆಂದರೆ ಅಂಬೇಡ್ಕರ್ ಅವರ ಸುಪರಿಚಿತವಾದ ಹದಿನಾಲ್ಕು ಬಿಡಿ ಕೃತಿಗಳನ್ನು ಮಾತ್ರ ಅನುವಾದ ಮಾಡದೇ ಮಹಾರಾಷ್ಟ್ರ ಸರ್ಕಾರದ ಯೋಜನೆಯಂತೆ ಪ್ರಕಟವಾಗುತ್ತಿರುವ ಎಲ್ಲ ಸಂಪುಟಗಳನ್ನೂ ಮಹಾರಾಷ್ಟ್ರ ಸರ್ಕಾರದ ಅನುಮತಿ ಪಡೆದುಕೊಂಡು ಭಾಷಾಂತರಿಸಬೇಕೆಂದು ನಿರ್ಣಯ ಮಾಡಿದ್ದು. ಈ ಸಮಿತಿಯ ನಿರ್ಣಯವನ್ನು ಗೌರವಿಸಿದ ಕರ್ನಾಟಕ ಸರ್ಕಾರ ಮಹಾರಾಷ್ಟ್ರ ಸರ್ಕಾರಕ್ಲೆ ಅನುಮತಿ ಕೋರಿ ಬರೆದ ಪತ್ರಕ್ಕೆ ಅಲ್ಲಿನ ಸರ್ಕಾರ ಧನಾತ್ಮಕವಾಗಿ ಸ್ಪಂದಿಸಿ ೧೯೮೯ರಲ್ಲಿ ಅನುಮತಿ ನೀಡಿದ್ದು ಕನ್ನಡದಲ್ಲಿ ಬಾಬಾಸಾಹೇಬರ ಕೃತಿಗಳು ವ್ಯವಸ್ಥಿತವಾಗಿ ಭಾಷಾಂತರವಾಗಿ ಬೆಳಕುಕಾಣಲು ಕಾರಣವಾಯಿತು ಎನ್ನಬೇಕು.
ಹೀಗೆ ಮೂವತ್ತು ವರ್ಷಗಳ ಹಿಂದೆ ಆರಂಭವಾದ ಈ ಅನುವಾದ ಕಾರ್ಯದಲ್ಲಿ ಕನ್ನಡದ ಅನೇಕ ವಿದ್ವಾಂಸರು ಭಾಗವಹಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸಿದರು. ಅಂಬೇಡ್ಕರ್ ಅವರ ಇಂಗ್ಲಿಷ್ ಭಾಷೆಯ ಪ್ರೌಢಿಮೆ, ಮತ್ತು ಕ್ಲಿಷ್ಟತೆಗಳನ್ನು ನಿವಾರಿಸಿಕೊಳ್ಳಲು, ಅನುವಾದಿತ ಕೃತಿಗಳ ಪರಿಶೀಲನೆಗಾಗಿ ಡಾ. ಆರ್. ಸಿ. ಹಿರೇಮಠ, ಡಾ. ದೇ. ಜವರೇಗೌಡ ಅವರಂಥ ಹಿರಿಯರ ನೆರವನ್ನೂ ಪಡೆಯಲಾಯಿತು. ಆರಂಭಿಕ ಹಂತದಲ್ಲಿ ಈ ಅನುವಾದಕರು, ಸಂಪಾದಕರು, ಪರೀಶೀಲಕರು ಮಾಡಿದ ಕಾರ್ಯ ನಿಜಕ್ಕೂ ಸ್ತುತ್ಯಾರ್ಹವಾದದ್ದು.
ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ಆರಂಭಿಸಿದ ಈ ಯೋಜನೆಗೆ ಮುಂದೆ ಬಂದ ಸರ್ಕಾರಗಳೂ ಸಕಾರಾತ್ಮಕ ಬೆಂಬಲ ನೀಡಿದ್ದರಿಂದ, ವೀರಪ್ಪ ಮೊಯಿಲಿ, ಎಚ್.ಡಿ.ದೇವೇಗೌಡ, ಜೆ.ಎಚ್. ಪಟೇಲ್, ಎಸ್.ಎಂ. ಕೃಷ್ಣ ಇವರುಗಳು ಮುಖ್ಯಮಂತ್ರಿಗಳಾಗಿದ್ದಾಗಿನ ಅವಧಿಯಲ್ಲಿ ಅಂಬೇಡ್ಕರ್ ಅವರ ಸಮಗ್ರ ಸಾಹಿತ್ಯದ ಬಹಳಷ್ಟು ಸಂಪುಟಗಳು ಹೊಸದಾಗಿ ಮತ್ತು ಮರುಮುದ್ರಣವಾಗಿ ಕಡಿಮೆ ಬೆಲೆಯಲ್ಲಿ ಹೊರಬಂದು ಕನ್ನಡ ಓದುಗರಿಗೆ ದೊರೆಯಲು ಸಾಧ್ಯವಾಯಿತು.
ಈ ಸಂಪುಟಗಳು ಕನ್ನಡ ಓದುಗರನ್ನು ವೈಚಾರಿಕವಾಗಿ ನಿರೀಕ್ಷಿತ ಮಟ್ಟದಲ್ಲಿ ಎತ್ತರಿಸುವಲ್ಲಿ ಸಫಲವಾದವೇ ಎಂಬುದು ಹೆಚ್ಚು ಚರ್ಚೆಯನ್ನು ನಿರೀಕ್ಷಿಸುವ ಅಂಶ. ಆದರೆ ಆ ಎಲ್ಲ ಸಂಪುಟಗಳು ಖರ್ಚಾದದ್ದು ನಿಜ. ಬಹಳಷ್ಟು ಸುಂದರವಾಗಿಯೂ ಪ್ರಕಟವಾಗಿದ್ದ ಬೃಹತ್ ಗಾತ್ರದ ಈ ಸಂಪುಟಗಳ ಬೆಲೆ ಅತ್ಯಂತ ಕಡಿಮೆ ಇದ್ದದ್ದರಿಂದ ಓದಲಾಗದವರೂ, ಓದಲೊಲ್ಲದವರೂ ‘ಮನೆಯಲ್ಲಿ ಇರಲಿ’ ಎಂಬ ಗೌರವದ ಭಾವನೆಯಿಂದ ಒಯ್ದದ್ದೂ ಇದೆ. ಇದರಿಂದಾಗಿ ನಿಜವಾದ ಓದುಗರಿಗೆ ಇವು ಸಿಗದಂತಾದದ್ದೂ ಇದೆ. ನಿಜವಾದ ಓದುಗರು ಈ ಸಂಪುಟಗಳ ಮರುಮುದ್ರಣಕ್ಕಾಗಿ ಒತ್ತಾಯ ತರುತ್ತಾ ಅವುಗಳನ್ನು ಪಡೆಯಲು ಜಾತಕ ಪಕ್ಷಿಗಳಂತೆ ಕಾದದ್ದಂತೂ ಸುಳ್ಳಲ್ಲ.
ಇಂತಹವರಿಗೆಲ್ಲ ಸಂತೋಷದ ಸಂಗತಿಯಾಗಿ ಕಳೆದ ಬಾರಿ ಸಿದ್ರಾಮಯ್ಯ ನೇತೃತ್ವದ ಸರ್ಕಾರ ಅಂಬೇಡ್ಕರ್ ಅವರ ಸಾಹಿತ್ಯವನ್ನು ಮರುಮುದ್ರಣ ಮಾಡಿ ಸುಲಭ ಬೆಲೆಗೆ ವಿತರಿಸುವ ನಿರ್ಣಯ ಕೈಗೊಂಡ ಫಲವಾಗಿ ಈ ಸಮಗ್ರ ಸಾಹಿತ್ಯದ ಇಪ್ಪತ್ತೆರಡು ಬೃಹತ್ ಸಂಪುಟಗಳು ಬಹಳ ಒಳ್ಳೆಯಗುಣಮಟ್ಟದ ಹಾಳೆಗಳಲ್ಲಿ ಮುದ್ರಣಗೊಂಡು ಅಷ್ಟೇ ಉತ್ತಮ ಬೈಂಡಿಂಗ್ ಒಂದಿಗೆ ಆಕರ್ಷಕವಾದ ಹೊಸ ವಿನ್ಯಾಸದಲ್ಲಿ ಹೊರಬಂದಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಇವುಗಳನ್ನು ಹೊರತರುವ ಕಾರ್ಯವನ್ನು ಮಾಡಿರುವ ‘ಕುವೆಂಪು ಭಾಷಾಭಾರತಿ’ ಯ ಕಾರ್ಯ ನಿಜಕ್ಕೂ ಅಭಿನಂದನೀಯ.
ಭಾರತದ ಬಹಳಷ್ಟು ಜನ ಇಂದು ಬುದ್ಧಿವಂತರಾಗುವುದಕ್ಕಿಂತ ಭಾವಜೀವಿಗಳಾಗುತ್ತಿದ್ದಾರೆ. ಅವರನ್ನು ಕೆಲವು ಆಳುವ ಉಡಾಳರು ದಾಳಗಳನ್ನಾಗಿ ಮಾಡಿಕೊಂಡು ಅಧಿಕಾರದ ಆಟವಾಡುತ್ತಿದ್ದಾರೆ. ದೇವರ ಧರ್ಮಗಳಂತಹ ಭಾವನಾತ್ಮಕ ವಿಷಯಗಳಲ್ಲಿ ಜನರನ್ನು ಉನ್ಮಾದಗೊಳಿಸುವ ಚಟುವಟಿಕೆಗಳು ತೀವ್ರಗೊಂಡು ನಮ್ಮಜನ ನಮ್ಮ ಸಮಾಜದ ಮೂಲಗುಣವಾದ `ಸಹನೆ’ಯನ್ನು ಕಳೆದುಕೊಳ್ಳುತ್ತಿದ್ದಾರೆ. ಭಾರತವನ್ನು ಭದ್ರವಾಗಿ ಕಟ್ಟಿರುವ ಬಹುಸಂಸ್ಕೃತಿಯ ಬಂಧನ ಸಡಿಲಗೊಳ್ಳುತ್ತಿದೆ. ವಿವಿಧ ಜನಸಮುದಾಯಗಳ ನಡುವಿನ ಸೌಹಾರ್ದತೆ ದಿನದಿನಕ್ಕೂ ಕಡಿಮೆಯಾಗುತ್ತಾ ಹೋಗುತ್ತಿದ್ದು ಪರಸ್ಪರರಲ್ಲಿ ಅಸಹನೆ, ಅಪನಂಬಿಕೆಗಳು ಬೆಳೆಯುತ್ತಿವೆ.
ಇವೆಲ್ಲ ಸಮಸ್ಯೆಗಳನ್ನು ಭಾರತ ಗಂಭೀರವಾಗಿ ಎದುರಿಸುತ್ತಿದ್ದರೂ ಅವೆಲ್ಲವನ್ನೂ ಮರೆಮಾಚಿ ದೇಶ ಬಲಿಷ್ಠಗೊಳ್ಳುತ್ತಿದೆಯೆಂದೂ, ಇಡೀ ಪ್ರಪಂಚಕ್ಕೆ ಬುದ್ಧಿಹೇಳುವ ಸ್ಥಾನಕ್ಕೆ ಭಾರತ ನಡೆಯುತ್ತಿದೆಯೆಂದೂ, ಜನರನ್ನು ಮರುಳುಗೊಳಿಸಲಾಗುತ್ತಿದೆ. ಇಂತಹ ಮೋಡಿಗೊಳಗಾಗುತ್ತಿರುವ ಜನರಲ್ಲಿ ಯುವಜನತೆಯೇ ಹೆಚ್ಚಿರುವುದು ಆತಂಕದ ಸಂಗತಿಯಾಗಿದೆ.
ಇಂತಹ ಹೊತ್ತಿನಲ್ಲಿ ಭಾರತದ ಜನಸಮೂದಾಯದ ಅದರಲ್ಲಿಯೂ ದೇಶದ ಭವಿಷ್ಯವನ್ನು ರೂಪಿಸಬೇಕಾದ ಯುವಜನತೆಯ ವೈಚಾರಿಕೆ ಶಕ್ತಿಯನ್ನು ಬೆಳೆಸುವುದು ಅತ್ಯಂತ ಅವಶ್ಯಕವಾಗಿದೆ. ಏಕೆಂದರೆ ಯಾರದೋ ತಾಳಕ್ಕೆ ಕುಣಿಯುವ ಗೊಂಬೆಗಳಾಗದೇ ಅವರು ಸ್ವತಂತ್ರ ಆಲೋಚನಾಶಕ್ತಿಯನ್ನು ರೂಪಿಸಿಕೊಂಡರೆ ಮಾತ್ರ ಈ ದೇಶಕ್ಕೆ ಭವಿಷ್ಯ. ಈ ಭವಿಷ್ಯ ರೂಪುಗೊಳ್ಳಬೇಕಾದರೆ ನಾವೆಲ್ಲ ಅಂಬೇಡ್ಕರ್ ಅವರ ಬರೆಹಗಳನ್ನು ಓದುವುದು ಮತ್ತು ನಮ್ಮ ಯುವಸಮುದಾಯಕ್ಕೆ ಓದಿಸುವುದು ಅವಶ್ಯ. ಏಕೆಂದರೆ ಈ ಲೇಖನದ ಆರಂಭದಲ್ಲಿಯೇ ಪ್ರಸ್ತಾಪಿಸಿದಂತೆ ಅಂಬೇಡ್ಕರ್ ಅವರನ್ನು ಓದುವುದು ಅಂದರೆ ಭಾರತವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಎಂದೇ ಅರ್ಥ.
–ಡಾ. ರಾಜೇಂದ್ರ ಬುರಡಿಕಟ್ಟಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್‌ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್ ಅಪಾರ್ಟ್‌ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.



