Connect with us

ಬಹಿರಂಗ

ಪರಿಸರ ಪ್ರಜ್ಞೆಯ ಕೊರತೆಯ ನಡುವೆಯೇ ಮತ್ತೊಂದು ದಿನ..!

Published

on

  • ನಾ ದಿವಾಕರ

ನಮ್ಮ ಸುತ್ತಲಿನ ವಾತಾವರಣವನ್ನೂ ಮೀರಿದ ವಿಶಾಲ ಪ್ರಪಂಚದ ಅರಿವು ಅತ್ಯವಶ್ಯ.


ಮಾನವ ಸಮಾಜಕ್ಕೆ ಸಂಬಂಧಪಟ್ಟ ಎಲ್ಲ ಚಟುವಟಿಕೆಗಳಿಗೂ ಒಂದು ದಿನಾಚರಣೆ ಇರುವುದು ಆಧುನಿಕ ಜಗತ್ತಿನ ವೈಶಿಷ್ಟ್ಯ. ಮನುಜ ಸಂಬಂಧಗಳು, ಸಾಮಾಜಿಕ ವಿದ್ಯಮಾನಗಳು, ಚಾರಿತ್ರಿಕ ದಿನಗಳು ವಾರ್ಷಿಕ ದಿನಾಚರಣೆಗಳ ರೂಪದಲ್ಲಿ ಸಾರ್ವಜನಿಕ ಜನಸಾಮಾನ್ಯರ ನಡುವೆ ಇತಿಹಾಸದ ಪ್ರಜ್ಞೆಯನ್ನು ಜಾಗೃತಗೊಳಿಸಿ, ವರ್ತಮಾನದ ಅರಿವನ್ನು ವಿಸ್ತರಿಸಲು ನೆರವಾಗುತ್ತವೆ.

ಮೂಲತಃ ಪಾಶ್ಚಿಮಾತ್ಯ ರಾಷ್ಟ್ರಗಳಿಂದಲೇ ಮೂಡಿಬಂದ ಈ ಆಚರಣೆಗಳು ಆಧುನಿಕ ಯುಗದಲ್ಲಿ, ಜಾಗತೀಕರಣಗೊಂಡ ಅರ್ಥವ್ಯವಸ್ಥೆಯಲ್ಲಿ ಮಾರುಕಟ್ಟೆ ಸಂಬಂಧಿತವಾಗಿಯೇ ಉಳಿದುಬಿಡುತ್ತವೆ. ಒಂದು ವಿಶಿಷ್ಟ, ನಿರ್ದಿಷ್ಟ ದಿನವನ್ನು ಏತಕ್ಕಾಗಿ ಆಚರಿಸಲಾಗುತ್ತದೆ , ಈ ಆಚರಣೆಯ ಮೂಲಕ ಏನನ್ನು ಸಾಧಿಸಲು ಹೊರಟಿದ್ದೇವೆ ಎಂಬ ಸಾಮಾನ್ಯ ಅರಿವೂ ಇಲ್ಲದೆ ಯಾಂತ್ರಿಕವಾಗಿ ಆಚರಿಸಲಾಗುವ ಹಲವು ದಿನಗಳನ್ನು ಕಾಣುತ್ತಲೇ ಬಂದಿದ್ದೇವೆ. ನಾಗರಿಕ ಪ್ರಜ್ಞೆ, ಸಾಮಾಜಿಕ ಕಳಕಳಿ ಮತ್ತು ಮಾನವ ಸಮಾಜದ ಉನ್ನತಿಗಾಗಿ ಸಾಮಾನ್ಯ ಜನರ ನಡುವೆ ಜಾಗೃತ ಪ್ರಜ್ಞೆಯನ್ನು ಮೂಡಿಸುವ ನಿಟ್ಟಿನಲ್ಲಿ ಈ ದಿನಾಚರಣೆಗಳು ಸಾಗಬೇಕಾಗುತ್ತವೆ. ಇಂತಹ ಆಚರಣೆಗಳಲ್ಲೊಂದು ಇಂದು ಆಚರಿಸಲಾಗುತ್ತಿರುವ ವಿಶ್ವ ಪರಿಸರ ದಿನ.

ಭಾರತದ ಸಂದರ್ಭದಲ್ಲಿ ನೋಡಿದಾಗ ಸಾಮಾನ್ಯ ಪರಿಸರ ಪ್ರಜ್ಞೆಯೇ ಇಲ್ಲದಂತಹ ಒಂದು ಬೃಹತ್‌ ಜನಸಮೂಹ ನಮ್ಮ ನಡುವೆ ಇದೆ. ಪರಿಸರ ಎಂದ ಕೂಡಲೇ ಸಾಮಾನ್ಯ ಗ್ರಹಿಕೆಯು ಕಾಡು ಮೇಡು, ಬೆಟ್ಟ ಗುಡ್ಡ, ಜಲಮೂಲಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳತ್ತ ಹೊರಳುತ್ತದೆ. ಜೀವ ವೈವಿಧ್ಯತೆಯನ್ನು ಕಾಪಾಡಲು ಬೇಕಾದ ಹಸಿರು ವಲಯ ಇದರಲ್ಲಿ ಪ್ರಧಾನವಾಗಿ ಬಿಂಬಿತವಾಗುತ್ತದೆ. ಭಾರತದ ಅರಣ್ಯ ಇಲಾಖೆ ತನ್ನ 2021ರ ವರದಿಯನ್ನು ಬಿಡುಗಡೆ ಮಾಡಿದ್ದು 2019 ರಿಂದ 21ರ ಅವಧಿಯಲ್ಲಿ ಭಾರತದ ಒಟ್ಟು ಅರಣ್ಯ ಪ್ರದೇಶದಲ್ಲಿ 1540 ಚದರ ಕಿಲೋಮೀಟರ್‌ ಹೆಚ್ಚಳ ಕಂಡುಬಂದಿದೆ. 2021ರ ಭಾರತೀಯ ಅರಣ್ಯ ವರದಿಯ ಅನುಸಾರ ದೇಶದ ಒಟ್ಟು ಅರಣ್ಯ ಪ್ರದೇಶದ ವ್ಯಾಪ್ತಿ 7,13,789 ಚದರ ಕಿಲೋಮೀಟರ್‌ ಇದ್ದು, ಓಟ್ಟು ಭೌಗೋಳಿಕ ಪ್ರದೇಶದ ಶೇ 21.71ರಷ್ಟಿದೆ. 2019ರಲ್ಲಿ ಇದು ಶೇ 21.67ರಷ್ಟಿತ್ತು.

ಈ ವರದಿಯ ಅನುಸಾರ ಭಾರತದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು ಅರಣ್ಯಪ್ರದೇಶದ ವ್ಯಾಪ್ತಿ ಹೆಚ್ಚಾಗಿರುವುದು ಕಂಡುಬರುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಈ ದತ್ತಾಂಶಗಳಲ್ಲಿ ಕೆಲವು ತಾಂತ್ರಿಕ ತಕರಾರುಗಳನ್ನೂ ಗುರುತಿಸಲು ಸಾಧ್ಯ. ಹೆಚ್ಚಳವಾಗಿರುವ ಅರಣ್ಯ ಪ್ರದೇಶದ ವ್ಯಾಪ್ತಿಗೆ ಮೂಲಕ ಕಾರಣ, ರಿಮೋಟ್‌ ಸೆನ್ಸಿಂಗ್‌ ಮೂಲಕ ಮಾಡಲಾಗುವ ಈ ಸಮೀಕ್ಷೆಯಲ್ಲಿ ಮುಕ್ತ ಅರಣ್ಯಗಳನ್ನೂ ಒಳಗೊಳ್ಳಲಾಗಿದೆ. ಮುಕ್ತ ಅರಣ್ಯಗಳೆಂದರೆ ವಾಣಿಜ್ಯ ಪ್ಲಾಂಟೇಷನ್‌ಗಳನ್ನೂ ಸೇರಿಸಿಕೊಳ್ಳಲಾಗುತ್ತದೆ. ದಟ್ಟಾರಣ್ಯ ಪ್ರದೇಶಗಳನ್ನಷ್ಟೇ ಪರಿಗಣಿಸಿದಾಗ 2019-21ರ ಅವಧಿಯಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿ ಕಡಿಮೆಯಾಗಿರುವುದು ಕಂಡುಬರುತ್ತದೆ.

ಈ ವರದಿಯೊಂದಿಗೇ ಬಿಡುಗಡೆಯಾಗಿರುವ ಮಾಂಗಬೇ-ಇಂಡಿಯಾ ಸಮೀಕ್ಷೆಯ ಅನುಸಾರ 2009-19ರ ಒಂದು ದಶಕದ ಅವಧಿಯಲ್ಲಿ ಭಾರತದ ಈಶಾನ್ಯ ಪ್ರದೇಶದಲ್ಲಿ 3199 ಚದರ ಕಿಲೋಮೀಟರ್‌ ಅರಣ್ಯಪ್ರದೇಶ ಮರೆಯಾಗಿದೆ. ಇದು ಅತಂಕಕಾರಿ ವಿಚಾರವಾಗಿದೆ. ಏಕೆಂದರೆ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್‌, ಸಿಕ್ಕಿಂ ಮತ್ತು ತ್ರಿಪುರಾ ಈ ರಾಜ್ಯಗಳನ್ನೊಳಗೊಳ್ಳುವ ಈಶಾನ್ಯ ಭಾರತ, ಜಗತ್ತಿನ 17 ಅತಿದೊಡ್ಡ ಜೀವವೈವಿಧ್ಯ ಉಷ್ಣ ಪ್ರದೇಶವಾಗಿದೆ. ಭಾರತದ ಒಟ್ಟು ಶೇ 7.98 ಭೌಗೋಳಿಕ ಪ್ರದೇಶವನ್ನು ಹೊಂದಿರುವ ಈಶಾನ್ಯ ಭಾರತ ಒಟ್ಟು ಶೇ 25ರಷ್ಟು ಅರಣ್ಯಪ್ರದೇಶವನ್ನು ಹೊಂದಿದೆ.

ಈ ಪ್ರದೇಶದಲ್ಲೇ ಅರಣ್ಯ ವಲಯ ಕ್ಷೀಣಿಸುತ್ತಿರುವುದು ಚಿಂತೆಗೀಡುಮಾಡುವ ವಿಚಾರವಾಗಿದ್ದು ಇದಕ್ಕೆ ಮೂಲ ಕಾರಣ ಅಭಿವೃದ್ಧಿ ಯೋಜನೆಗಳೇ ಆಗಿವೆ. ಬಂಡವಾಳಶಾಹಿ ಆರ್ಥಿಕತೆಯಲ್ಲಿ ಅರಣ್ಯ ಮತ್ತು ಜಲಸಂಪನ್ಮೂಲಗಳನ್ನೂ ಸೇರಿದಂತೆ ಎಲ್ಲ ನೈಸರ್ಗಿಕ ಸಂಪನ್ಮೂಲಗಳನ್ನೂ ಮಾರುಕಟ್ಟೆಯ ಉತ್ಪಾದನೆಯ ಮೂಲಗಳೆಂದೇ ಪರಿಗಣಿಸುವುದರಿಂದ, ನಿಸರ್ಗ ಶೋಷಣೆ ಅವ್ಯಾಹತವಾಗಿ ನಡೆಯುತ್ತಲೇ ಇರುತ್ತದೆ. ಕಳೆದ ಮೂರು ದಶಕಗಳಲ್ಲಿ ಭಾರತದಲ್ಲಿ 29 ಸಾವಿರ ಚದರ ಕಿಲೋಮೀಟರ್‌ ಅರಣ್ಯ ಪ್ರದೇಶಗಳು ಅಭಿವೃದ್ಧಿ ಯೋಜನೆಗಳಿಗೆ ಬಲಿಯಾಗಿವೆ.

ಇದರ ಪೈಕಿ 23 ಸಾವಿರ ಚದರ ಕಿಲೋಮೀಟರ್‌ ಕೈಗಾರಿಕಾ ಯೋಜನೆಗಳಿಗೇ ಬಲಿಯಾಗಿದೆ. ಮಧ್ಯಪ್ರದೇಶವೊಂದರಲ್ಲೇ ಈ ಅವಧಿಯಲ್ಲಿ 14 ಸಾವಿರ ಚದರ ಕಿಲೋಮೀಟರ್‌ ಅರಣ್ಯ ಪ್ರದೇಶವನ್ನು ಗಣಿಗಾರಿಕೆ, ರಕ್ಷಣಾ ಯೋಜನೆಗಳು ಮತ್ತು ಜಲವಿದ್ಯುತ್‌ ಉತ್ಪಾದನೆಗಾಗಿ ನೀಡಲಾಗಿದೆ. ಸ್ವತಂತ್ರ ಅಧ್ಯಯನಗಳ ಪ್ರಕಾರ ಪಶ್ಚಿಮ ಘಟ್ಟಗಳ ನಾಲ್ಕೂ ವಲಯಗಳಲ್ಲಿ ಅರಣ್ಯ ಸಂಪತ್ತು ಕ್ಷೀಣಿಸುತ್ತಿದ್ದು ಉತ್ತರದಲ್ಲಿ ಶೇ 2.84, ಕೇಂದ್ರದಲ್ಲಿ ಶೇ 4.38 ಮತ್ತು ದಕ್ಷಿಣದಲ್ಲಿ ಶೇ 5.77ರಷ್ಟು ಅರಣ್ಯ ವಲಯ ಅಭಿವೃದ್ಧಿ ಯೋಜನೆಗಳ ಪಾಲಾಗಿದೆ. ಕೇಂದ್ರ ಸರ್ಕಾರದ ಬದಲಾದ ನೀತಿಗಳ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ 25 ಸಾವಿರ ಹೆಕ್ಟೇರ್‌ ಅಂದರೆ 250 ಚದರ ಕಿಲೋಮೀಟರ್‌ ಅರಣ್ಯ ಪ್ರದೇಶವನ್ನು ಅರಣ್ಯೇತರ ಚಟುವಟಿಕೆಗಳಿಗಾಗಿ ಒದಗಿಸಲಾಗುತ್ತದೆ. ಇವುಗಳಲ್ಲಿ ಮುಖ್ಯವಾಗಿ ಗಣಿಗಾರಿಕೆ, ರಕ್ಷಣಾ ಯೋಜನೆಗಳು, ಅಣೆಕಟ್ಟುಗಳು, ವಿದ್ಯುತ್‌ ಉತ್ಪಾದನೆ, ಕೈಗಾರಿಕೆ ಮತ್ತು ರಸ್ತೆ ಅಭಿವೃದ್ಧಿಯನ್ನು ಗುರುತಿಸಬಹುದು.

2019ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಕೇಂದ್ರ ಪರಿಸರ ಸಚಿವಾಲಯವು ಛತ್ತಿಸ್‌ಘಡದ ದಟ್ಟ ಹಸದೇವ್‌ ಅರಂಡ್‌ ಅರಣ್ಯ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಅನುಮತಿ ನೀಡಿ ಪರಿಸರ ನಿರಪೇಕ್ಷಣೆಯನ್ನು ನೀಡಿತ್ತು. ಈ ಪ್ರದೇಶದ 1 ಲಕ್ಷ 70 ಸಾವಿರ ಹೆಕ್ಟೇರ್‌ ದಟ್ಟಾರಣ್ಯವನ್ನು ಕಲ್ಲಿದ್ದಲು ಗಣಿಗಾರಿಕೆಗಾಗಿ ನೀಡಲಾಗಿತ್ತು. 30 ಕಲ್ಲಿದ್ದಲು ನಿಕ್ಷೇಪಗಳಿರುವ ಈ ಪ್ರದೇಶದಲ್ಲಿ ರಾಜಸ್ಥಾನ ವಿದ್ಯುತ್‌ ಉತ್ಪಾದನ್‌ ನಿಗಮ್‌ ನಿಗಮವು ವಿದ್ಯುತ್‌ ಉತ್ಪಾದನೆ ಮಾಡಲಿದ್ದು, ಇದರ ನಿರ್ವಹಣೆಯನ್ನು ಅದಾನಿ ಒಡೆತನದ ರಾಜಸ್ಥಾನ ಕೊಲೀರೀಸ್‌ ಲಿಮಿಟೆಡ್‌ಗೆ ನೀಡಲಾಗಿದೆ. ಈಗಾಗಲೇ 841 ಹೆಕ್ಟೇರ್‌ ದಟ್ಟಾರಣ್ಯ ಪ್ರದೇಶವನ್ನು ಈ ಕಂಪನಿಗೆ ಗುತ್ತಿಗೆಯ ಆಧಾರದಲ್ಲಿ ನೀಡಲಾಗಿದೆ.

ಕಳೆದ ಅಕ್ಟೋಬರ್‌ ಮಾಹೆಯಲ್ಲಿ ಛತ್ತೀಸ್ಘಡದ ಹಲವು ಸಂಘಟನೆಗಳು ಈ ಯೋಜನೆಗಳನ್ನು ವಿರೋಧಿ, ಅರಣ್ಯ ಒತ್ತುವರಿಯನ್ನು ತಡೆಗಟ್ಟುವ ಆಗ್ರಹದೊಂದಿಗೆ 300 ಕಿಲೋಮೀಟರ್‌ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದವು. ರಾಯ್‌ಪುರ ವಲಯದ 350ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ಅಕ್ರಮ ಭೂ ಒತ್ತುವರಿಯ ವಿರುದ್ಧ ಈ ಹೋರಾಟದಲ್ಲಿ ಭಾಗವಹಿಸಿದ್ದವು. ಆದಾಗ್ಯೂ ಈ ವರ್ಷದ ಮಾರ್ಚ್‌ ಮಾಹೆಯಲ್ಲಿ ರಾಜ್ಯ ಸರ್ಕಾರವು ಪಾರ್ಸಾ ಕಲ್ಲಿದ್ದಲು ನಿಕ್ಷೇಪದ ಕಾರ್ಯಾಚರಣೆಗಾಗಿ 1136 ಹೆಕ್ಟೇರ್‌ ಭೂಮಿಯನ್ನು ಗಣಿಗಾರಿಕೆಗೆ ಬಳಸಿಕೊಳ್ಳಲು ನಿರಪೇಕ್ಷಣ ಪತ್ರವನ್ನು ನೀಡಿದೆ.

ಆಳುವ ವರ್ಗಗಳ ಈ ದ್ವಂದ್ವ ನೀತಿಗಳ ನಡುವೆಯೇ ಭಾರತ ಇಂದು ಹೆಚ್ಚಿನ ಉಷ್ಣಾಂಶದ ಅಪಾಯವನ್ನು ಎದುರಿಸುತ್ತಿದೆ. 2030ರ ವೇಳೆಗೆ ದೇಶದ ಒಟ್ಟು ಭೂ ಪ್ರದೇಶದ ಶೇ 30ರಷ್ಟನ್ನು ಅರಣ್ಯವಲಯವನ್ನಾಗಿ ಮಾಡುವ ಸರ್ಕಾರದ ಧ್ಯೇಯ ಸಾಕಾರಗೊಳ್ಳುವುದು ಬಹುಶಃ ಅಂಕಿಅಂಶಗಳಲ್ಲಿ ಮಾತ್ರವೇ ಸಾಧ್ಯ ಎನಿಸುತ್ತದೆ. ಅಥವಾ ಕಾಫಿ, ಚಹಾ, ತೆಂಗು ಮುಂತಾದ ಅರಣ್ಯೇತರ ಉತ್ಪನ್ನಗಳ ಪ್ಲಾಂಟೇಷನ್‌ಗಳನ್ನು ಒಳಗೊಳ್ಳುವ ಮೂಲಕ ಒಟ್ಟಾರೆ ಅರಣ್ಯ ಪ್ರದೇಶದ ಹೆಚ್ಚಳವನ್ನು ಬಿಂಬಿಸಬಹುದು. ಆದರೆ ಅರಣ್ಯವನ್ನೇ ನಂಬಿ ಬದುಕುವ ಸಾವಿರಾರು ಜೀವ ಪ್ರಬೇಧಗಳು ಮತ್ತು ಅರಣ್ಯ ಬದುಕನ್ನೇ ಆಶ್ರಯಿಸುವ ಲಕ್ಷಾಂತರ ಆದಿವಾಸಿ ಕುಟುಂಬಗಳ ಜೀವನೋಪಾಯಕ್ಕೆ ಅಂಕಿಅಂಶಗಳು ನೆರವಾಗುವುದಿಲ್ಲ. ದಿನದಿಂದ ದಿನಕ್ಕೆ ತಮ್ಮ ಮೂಲ ನೆಲೆಯನ್ನು ಕಳೆದುಕೊಳ್ಳುತ್ತಿರುವ ಆದಿವಾಸಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಈ ಆತಂಕಗಳ ನಡುವೆಯೇ ನಾವು ಮತ್ತೊಂದು ಪರಿಸರ ದಿನವನ್ನು ಆಚರಿಸುತ್ತಿದ್ದೇವೆ. ಪರಿಸರ ಮಾಲಿನ್ಯ ಎಂದರೆ ಕೇವಲ ಕಾರ್ಖಾನೆಯಿಂದ ಹೊರಸೂಸಲಾಗುವ ಇಂಗಾಲ ಅಥವಾ ಕೈಗಾರಿಕಾ ತ್ಯಾಜ್ಯಗಳು ಮಾತ್ರವೇ ಅಲ್ಲ. ಅಥವಾ ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಸಮೀಕರಣಕ್ಕೊಳಗಾಗಿರುವ ಶಬ್ದಮಾಲಿನ್ಯದ ಮಾದರಿಗಳೂ ಅಲ್ಲ. ನಾವು ಬದುಕುತ್ತಿರುವ ಸಮಾಜದಲ್ಲಿ ನಿತ್ಯ ಕಾಣುತ್ತಿರುವ ಪರಿಸರ ಮಾಲಿನ್ಯ ಮತ್ತು ಜಲಮಾಲಿನ್ಯದ ಕಾರಣಗಳನ್ನು ಶೋಧಿಸುವುದರಲಿ, ಗುರುತಿಸಲೂ ಆಧುನಿಕ ನಾಗರಿಕತೆ ವಿಫಲವಾಗುತ್ತಿದೆ. ಬೃಹತ್‌ ಬೆಟ್ಟಗಳು, ಬೃಹದಾಕಾರದ ಬಂಡೆಗಳು ನಗರ ಸಂಸ್ಕೃತಿಯ ಗ್ರಾನೈಟ್‌ ಸಂಸ್ಕೃತಿಯ ಬಲಿಪಶುಗಳಾಗುತ್ತಿವೆ. ಕರಗುತ್ತಿರುವ ಈ ಬೆಟ್ಟಗಳು ಭವಿಷ್ಯದಲ್ಲಿ ಭೌಗೋಳಿಕ ಅಸಮತೋಲನ ಉಂಟುಮಾಡುವ ಅಪಾಯ ಒಂದೆಡೆಯಾದರೆ, ವರ್ತಮಾನದಲ್ಲೇ ಕಲ್ಲಿದ್ದಲು ಗಣಿಗಳ ಕುಸಿತ, ಕಲ್ಲುಗಣಿಗಳ ಸ್ಫೋಟ ಮತ್ತು ಬಂಡೆಗಳ ಕುಸಿತದಿಂದ ಸಾವಿರಾರು ಶ್ರಮಜೀವಿಗಳ ಜೀವ ಹರಣವಾಗುತ್ತಿದೆ.

ಜಲಸಂಪನ್ಮೂಲಗಳನ್ನು ರಕ್ಷಿಸುವ ಯಾವುದೇ ವೈಜ್ಞಾನಿಕ ಆಡಳಿತ ನೀತಿಯನ್ನು ಜಾರಿಗೊಳಿಸದ ಸರ್ಕಾರಗಳು ನದಿಗಳು ತುಂಬಿ ಹರಿದಾಗ ಬಾಗಿನ ಅರ್ಪಿಸಲು ತೋರುವಷ್ಟು ಆಸ್ಥೆ ಆ ನದಿ ನೀರಿನ ರಕ್ಷಣೆಯ ಬಗ್ಗೆ ತೋರುವುದಿಲ್ಲ. ಪೂಜನೀಯವಾಗಿ ಕಾಣಲಾಗುವ ಜಲಮೂಲಗಳನ್ನು, ನದಿಗಳನ್ನು ಮಾರುಕಟ್ಟೆ ಬಳಕೆಯ ವಸ್ತುಗಳಂತೆ ಪೋಲು ಮಾಡುತ್ತಿರುವುದನ್ನು ಮತ್ತು ನಗರಗಳ ಐಷಾರಮಿ ಬದುಕಿನ ಕಚ್ಚಾವಸ್ತುಗಳಂತೆ ಬಳಸುತ್ತಿರುವುದನ್ನು ಸದ್ದು ಮಾಡದೆ ಗಮನಿಸುತ್ತಲೇ ಇದ್ದೇವೆ.

ಮೈಸೂರಿನ ಪ್ರತಿಷ್ಠಿತ ಚಾಮುಂಡಿ ಬೆಟ್ಟವೂ ಈ ಆಧುನಿಕತೆ, ಧಾರ್ಮಿಕತೆ ಮತ್ತು ಪ್ರವಾಸೋದ್ಯಮದ ವಾಣಿಜ್ಯ ಹಿತಾಸಕ್ತಿಗಳಿಗೆ ಬಲಿಯಾಗುತ್ತಿದ್ದು, ರೋಪ್‌ವೇ ನಿರ್ಮಿಸುವ ಮೂಲಕ ಅಲ್ಲಿನ ಜೈವವೈವಿಧ್ಯತೆಗೆ ಸಂಚಕಾರ ತರಲು ಎಲ್ಲ ಸಿದ್ಧತೆಗಳೂ ನಡೆದಿವೆ. ಕಲ್ಲಿದ್ದಲು ಗಣಿಗಾರಿಕೆಯಾಗಲೀ, ಅಣು ವಿದ್ಯುತ್‌ ಉತ್ಪಾದನೆಯಾಗಲೀ ಅಥವಾ ಬೃಹತ್‌ ಅಣೆಕಟ್ಟುಗಳೇ ಆಗಲಿ, ಅರಣ್ಯ ಸಂಪತ್ತಿನ ಸಮಾಧಿಯ ಮೇಲೆ ನಿರ್ಮಿತವಾಗುವ ಈ ಮಾರುಕಟ್ಟೆ ಸಾಮ್ರಾಜ್ಯಗಳನ್ನು ವಿರೋಧಿಸುವುದೂ ಸಹ “ ದೇಶದ್ರೋಹ ” ಅಥವಾ “ ಅಭಿವೃದ್ಧಿ ವಿರೋಧ ” ಎಂಬ ಹಣೆಪಟ್ಟಿಯನ್ನು ಹೊತ್ತು ಹೋರಾಟ ನಡೆಸಬೇಕಿದೆ.

ನಗರೀಕರಣ ಹೆಚ್ಚಾದಂತೆಲ್ಲಾ ಜನದಟ್ಟಣೆ ಮತ್ತು ವಾಹನದಟ್ಟಣೆಯೂ ಹೆಚ್ಚಾಗುತ್ತಿದ್ದು, ಆಧುನಿಕ ನಾಗರಿಕತೆಯಲ್ಲಿ ಈ ದಟ್ಟಣೆಯಿಂದುಂಟಾಗುವ ಪರಿಸರ ಮಾಲಿನ್ಯದ ಪರಿಜ್ಞಾನವೇ ಇಲ್ಲದಂತಾಗುತ್ತಿದೆ. ವಾಹನಗಳು ಉಗುಳುವ ಹೊಗೆ, ದಿನಕ್ಕೆ 20 ಗಂಟೆಗಳ ಕಾಲವಾದರೂ ವಾಹನಗಳಿಂದ ಉಂಟಾಗುವ ಶಬ್ದ ಮಾಲಿನ್ಯ, ನಗರೀಕೃತ ಜೀವನದಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಮತ್ತೊಬ್ಬರ ಹೊಣೆಯನ್ನಾಗಿ ಮಾಡಿರುವ ಆಧುನಿಕ ಮಾನವ ಸಮಾಜದ ಬೇಜವಾಬ್ದಾರಿ ನಡವಳಿಕೆ ಇವೆಲ್ಲವೂ ನಮ್ಮ ಸುತ್ತಲಿನ ಪರಿಸರವನ್ನೇ ಗೊಬ್ಬರದ ಗುಂಡಿಗಳನ್ನಾಗಿ ಮಾಡುತ್ತಿದೆ.

ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ತ್ಯಾಜ್ಯ ಸಂಗ್ರಹಣೆ, ಶೇಖರಣೆ, ಸಂಸ್ಕರಣೆ ಮತ್ತು ವಿಲೇವಾರಿಗೆ ಅಗತ್ಯ ಕ್ರಮಗಳನ್ನು ಕೈಗೊಂಡು ಕೋಟ್ಯಂತರ ರೂಗಳನ್ನು ಖರ್ಚು ಮಾಡಲಾಗುತ್ತಿದೆ. ಆದರೂ ರಸ್ತೆಬದಿಯ ಕಸದ ರಾಶಿ ಇಲ್ಲದ ಬಡಾವಣೆಗಳನ್ನು ಎಲ್ಲೆಂದರಲ್ಲಿ ಕಾಣಬಹುದಾಗಿದೆ. ಗಂಗಾನದಿಯ ಮಾಲಿನ್ಯದ ಬಗ್ಗೆ ಸದಾ ಪರಿತಪಿಸುತ್ತಾ ಭಾವುಕವಾಗುವ ಮಧ್ಯಮ ವರ್ಗದ ಮನಸುಗಳು ತಮ್ಮ ರಸ್ತೆಯಲ್ಲೇ ಇಕ್ಕೆಲಗಳಲ್ಲಿರುವ ಕಸದ ರಾಶಿಯನ್ನು ಕಂಡೂ ಕಾಣದಂತೆ ಇರುತ್ತವೆ. ಈ ಕಸದ ರಾಶಿಯೇ ಬೀಡಾಡಿ ದನಗಳಿಗೆ ಭೂರಿಭೋಜನದ ಕೇಂದ್ರಗಳೂ ಆಗಿರುತ್ತವೆ.

ಅಂದರೆ, ಸಾರ್ವಜನಿಕ ಪರಿಕಲ್ಪನೆಯಲ್ಲಿ “ ಪರಿಸರ ” ಒಂದು ಅಮೂರ್ತ ಪ್ರಜ್ಞೆಯಾಗಿ ಮಾತ್ರ ಕಂಡುಬರುತ್ತಿದೆ. ಅಥವಾ ಅತೀತತೆಯ ನೆಲೆಯಲ್ಲಿ, ಭಾವನಾತ್ಮಕತೆಯ ನೆಲೆಯಲ್ಲಿ ಮಾತ್ರವೇ ಕಂಡುಬರುತ್ತಿದೆ. ಹಾಗಾಗಿಯೇ ನದಿ ಸ್ವಚ್ಚತೆಯ ಬಗ್ಗೆ ಉಪನ್ಯಾಸಗಳನ್ನು ನೀಡುವವರೂ ಸಹ, ನದಿ ತೀರಗಳಲ್ಲಿ ನಡೆಯುವ ಧಾರ್ಮಿಕ ಚಟುವಟಿಕೆಗಳನ್ನಾಗಲೀ, ಅದರಿಂದ ಉಂಟಾಗುವ ಮಾಲಿನ್ಯವನ್ನಾಗಲೀ ಗಂಭೀರವಾಗಿ ಪರಿಗಣಿಸುವುದೇ ಇಲ್ಲ.

ಮೈಸೂರಿನ ಸುತ್ತಲಿನ ಕಾವೇರಿ, ಕಪಿಲೆ, ಕಬಿನಿ ನದಿಯ ತೀರಗಳಲ್ಲಿ ನಡೆಯುವ ಚಟುವಟಿಕೆಗಳನ್ನು ನಿರ್ಬಂಧಿಸುವುದು ಪರಿಸರ ಪ್ರಜ್ಞೆಯ ಒಂದು ಭಾಗವಾದಾಗ ಮಾತ್ರವೇ ನಮ್ಮ ಜಲಮಾಲಿನ್ಯ ಕುರಿತ ಪ್ರಲಾಪಗಳಿಗೆ ಅರ್ಥ ಮೂಡಲು ಸಾಧ್ಯ. ಇಲ್ಲಿ ಧಾರ್ಮಿಕ ನಂಬಿಕೆಗಳ ಪ್ರಶ್ನೆ ಎದುರಾಗುವುದಾದರೂ, ನದಿ ನೀರನ್ನು ಮಲಿನಗೊಳಿಸದೆಯೇ ಈ ವಿಧಿವಿಧಾನಗಳನ್ನು ಆಚರಿಸಬಹುದಾದ ಮಾರ್ಗಗಳನ್ನೂ ಕಂಡುಕೊಳ್ಳಬೇಕಿದೆ. ಜನಸಾಮಾನ್ಯರ ಶ್ರದ್ಧಾಭಕ್ತಿಗಳಿಗೆ ಭಂಗ ಉಂಟುಮಾಡದೆಯೇ ಈ ನದಿಗಳ ಮತ್ತು ಬೆಟ್ಟಗುಡ್ಡಗಳ ನೈಸರ್ಗಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಶಾಲ ಮನೋಭಾವವನ್ನು ಆಧುನಿಕ ಸಮಾಜ ರೂಢಿಸಿಕೊಳ್ಳಬೇಕಿದೆ.

ಇದಕ್ಕೆ ಅಡ್ಡಿಯಾಗಬಹುದಾದ ಮಾರುಕಟ್ಟೆ, ವಾಣಿಜ್ಯ ಮತ್ತು ಪ್ರವಾಸೋದ್ಯಮದ ಹಿತಾಸಕ್ತಿಗಳಿಗೆ ಎಲ್ಲ ನೈಸರ್ಗಿಕ ಸಂಪನ್ಮೂಲಗಳೂ ಬಂಡವಾಳದ ಮೂಲಗಳಾಗಿಯೇ ಕಾಣುವುದರಿಂದ, ಆಡಳಿತ ನೀತಿಯನ್ನು ರೂಪಿಸುವ ಸರ್ಕಾರಗಳು ತಮ್ಮ ನಿಸರ್ಗ ಪ್ರಜ್ಞೆ ಮತ್ತು ಪರಿಸರ ಪ್ರಜ್ಞೆಯನ್ನು ಮತ್ತಷ್ಟು ಸೂಕ್ಷ್ಮಗೊಳಿಸಬೇಕಿದೆ. ಬಂಡವಾಳಶಾಹಿ ಅಭಿವೃದ್ಧಿಯ ಮಾದರಿಗಳು ನಿಸರ್ಗವನ್ನು ಶೋಷಣೆಗೊಳಪಡಿಸುವುದೇ ಅಲ್ಲದೆ ಪರಿಸರ ಅಸಮತೋಲನವನ್ನು ಹೇಗೆ ಸೃಷ್ಟಿಸುತ್ತದೆ ಎನ್ನಲು ಕೇದಾರನಾಥದಲ್ಲಿ ನಡೆಯುತ್ತಿರುವ ಭೂಕುಸಿತಗಳು, ಎರಡು ವರ್ಷದ ಹಿಂದೆ ಕರ್ನಾಟಕದ ಕೊಡಗಿನಲ್ಲಿ ಸಂಭವಿಸಿದ ಅನಾಹುತಗಳು ಕೇವಲ ನಿದರ್ಶನಗಳಷ್ಟೇ. ಆಧುನಿಕ ನಗರೀಕರಣ ಪ್ರಕ್ರಿಯೆಗೆ ಬಲಿಯಾಗುತ್ತಿರುವ ನದಿ ತೀರಗಳು ಮರಳು ಗಣಿಗಾರಿಕೆಯಿಂದ ಒಡಲು ಬರಿದುಮಾಡಿಕೊಳ್ಳುತ್ತಿರುವಂತೆಯೇ, ನಿಸರ್ಗ ಸಮತೋಲನ ಕಾಪಾಡುವ ಬೆಟ್ಟಗುಡ್ಡಗಳು ನಿರ್ಮಾಣ ಕಾಮಗಾರಿಗಳಿಗೆ ಜಲ್ಲಿ, ಕಲ್ಲು, ಎಮ್‌ಸ್ಯಾಂಡ್‌ ಪೂರೈಸುವ ಸಲುವಾಗಿ ಬರಿದಾಗುತ್ತಿವೆ.

ಮೈಸೂರಿನಲ್ಲೇ ಇರುವ ತ್ಯಾಜ್ಯ ವಿಲೇವಾರಿ ಘಟಕವನ್ನು “ ಸೂಯೆಜ್‌ ಫಾರ್ಮ್‌ ” ಎಂದು ಮುದ್ದಾಗಿ ಕರೆಯಲಾಗುತ್ತದೆ. ವಾಸ್ತವದಲ್ಲಿ ಅದು “ ಸೆವೇಜ್‌ ಫಾರ್ಮ್‌ ” ಅಂದರೆ ಇಡೀ ನಗರದ ತ್ಯಾಜ್ಯವನ್ನು ಸಂಗ್ರಹಿಸುವ ಬೃಹತ್‌ ಕಸದ ಬೆಟ್ಟಗಳನ್ನು ಹೊಂದಿರುವ ಒಂದು ತಾಣ. ಈ ತಾಣದ ಸುತ್ತಲಿನ ಜನತೆ ಎದುರಿಸುತ್ತಿರುವ ಆರೋಗ್ಯದ ಸಮಸ್ಯೆಗಳು ಮೈಸೂರು ಮಹಾನಗರ ಪಾಲಿಕೆಯನ್ನಾಗಲೀ, ಅದೇ ವಲಯದಲ್ಲಿ ವಾಸಿಸುವ ಜನಪ್ರತಿನಿಧಿಗಳಿಗಾಗಲೀ ಸಮಸ್ಯೆ ಎನಿಸುತ್ತಲೇ ಇಲ್ಲ.

ಆದರೂ ಅಲ್ಲಿನ ನಿವಾಸಿಗಳು ತಮ್ಮ ಜೀವನ ನಿರ್ವಹಣೆಗಾಗಿ ಆರೋಗ್ಯ ಕಾಪಾಡಿಕೊಂಡು, ಹಲವು ಅನಾರೋಗ್ಯಗಳೊಂದಿಗೇ ಬದುಕುತ್ತಿದ್ದಾರೆ. ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಅನಾರೋಗ್ಯವನ್ನು ತಪ್ಪಿಸುವ ಯಾವುದೇ ಯೋಜನೆ ಇರುವುದಿಲ್ಲ ಬದಲಾಗಿ ತಲೆದೋರುವ ಅನಾರೋಗ್ಯಗಳ ನಿವಾರಣೆಗೆ “ ಕಲ್ಯಾಣ ಯೋಜನೆಗಳನ್ನು ” ರೂಪಿಸಲಾಗುತ್ತದೆ. ಯಶಸ್ವಿನಿ, ಜನೌಷಧಿ, ಆಯುಷ್ಮಾನ್‌ ಇತ್ಯಾದಿ. ಇದು ಬಂಡವಾಳ ವ್ಯವಸ್ಥೆಯ ದ್ವಂದ್ವಗಳಲ್ಲಿ ಅತ್ಯಂತ ಪ್ರಧಾನವಾದುದು.

ಈ ಕಾಳಜಿ, ಕಳಕಳಿ ಮತ್ತು ದ್ವಂದ್ವಗಳ ನಡುವೆಯೇ ನಾವು ಮತ್ತೊಂದು ಪರಿಸರ ದಿನವನ್ನು ಆಚರಿಸುತ್ತಿದ್ದೇವೆ. ಕಸ ಆಯಲು ಬರುವವರು ಕೈಗವುಸುಗಳಿಲ್ಲದ, ಮುಖಗವುಸುಗಳಿಲ್ಲದೆ, ಸೂಕ್ತ ವೇತನ ಸೌಲಭ್ಯಗಳೂ ಇಲ್ಲದೆ ತಮ್ಮ ಜೀವವನ್ನೇ ಪಣಕಟ್ಟಿಟ್ಟು ಮನೆಮನೆಗೆ ಬರುತ್ತಿರುತ್ತಾರೆ. ಆದರೂ ರಸ್ತೆಯ ಇಕ್ಕೆಲಗಳಲ್ಲಿ ತಾಜ್ಯದ ರಾಶಿ ರಾರಾಜಿಸುತ್ತಿರುತ್ತದೆ. ಮತಯಾಚನೆಗೆ ಬರುವ ಜನಪ್ರತಿನಿಧಿಗಳು ಮೂಗಿನೊಂದಿಗೆ ಒಳಗಣ್ಣನ್ನೂ ಮುಚ್ಚಿಕೊಂಡು ಹಾದು ಹೋಗಿಬಿಡುತ್ತಾರೆ.

ಬೀಡಾಡಿ ದನಗಳು ಈ ಕಸದ ರಾಶಿಗಳಲ್ಲಿ ಬಾಯಾಡಿಸಿ ಮತ್ತಷ್ಟು ಹರಡಿಬಿಡುತ್ತವೆ. ಸುತ್ತ ವಾಸಿಸುವ ನಾಗರಿಕರು, ಗಂಗೆಯ ಪಾವಿತ್ರ್ಯತೆ, ಹಿಮಾಲಯದ ಭವ್ಯತೆಯ ಭ್ರಮೆಯಲ್ಲಿ ತೇಲಾಡುತ್ತಾ ಸ್ವಚ್ಚ ಭಾರತದ ಫಲಾನುಭವಿಗಳಾಗಿ ತಮ್ಮ ಬದುಕು ಸವೆಸುತ್ತಾ ಸಾಗುತ್ತಾರೆ. ಪರಿಸರ ಮಾಲಿನ್ಯ ಬಾಧಿಸಬೇಕಿರುವುದು ಈ ಜನತೆಯನ್ನು, ಜಾಗೃತಿ ಮೂಡಿಸಬೇಕಿರುವುದು ಈ ಜನತೆಯ ನಡುವೆ, ಸಾರ್ವಜನಿಕ ವೇದಿಕೆ ಅಥವಾ ವಿಚಾರ ಸಂಕಿರಣಗಳಲ್ಲಿ ಅಲ್ಲ. ಈ ಸುಡುವಾಸ್ತವವನ್ನು ಅರ್ಥಮಾಡಿಕೊಂಡರೆ ಪರಿಸರ ದಿನಾಚರಣೆಯೂ ಸಾರ್ಥಕವಾದೀತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ‌ಪ್ರಕಟ

Published

on

ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.

‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ

ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ  ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ  ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ

Published

on

mysuru-dasara-elephants-srikanta-5790-kg-ekalavya-elephant-weight
Mysuru Dasara Elephants: 5,790 ಕೆಜಿ ತೂಕದ ಶ್ರೀಕಂಠ ನಂಬರ್ 1; ಗಜಪಡೆಯ ಆನೆಗಳ ತೂಕ ಎಷ್ಟು?

ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.

ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.

ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ

  • ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಮೊದಲ ಸ್ಥಾನ
  • ಏಕಲವ್ಯ 5,600 ಕೆಜಿ ತೂಕದೊಂದಿಗೆ ಎರಡನೇ ಸ್ಥಾನ
  • ಮೊದಲ ಹಂತದಲ್ಲಿ ಒಟ್ಟು 9 ಆನೆಗಳಿಗೆ ತೂಕ ಪರೀಕ್ಷೆ
  • ಆನೆಗಳ ತೂಕದ ಆಧಾರದ ಮೇಲೆ ಆಹಾರ ಮತ್ತು ತಾಲೀಮು ನಿರ್ಧಾರ
  • ಅಂತಿಮ ತಾಲೀಮಿನ ಬಳಿಕವೇ ಚಿನ್ನದ ಅಂಬಾರಿ ಆನೆ ಆಯ್ಕೆ

http://Visit : www.suddidina.com

ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ

ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.

9 ಆನೆಗಳ ತೂಕದ ಆಧಾರದಲ್ಲೇ ಆಹಾರ

ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.

ಅಂಬಾರಿ ಆನೆ ಯಾರು? ಕುತೂಹಲ

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.

ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್‌ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.

ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ

ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್‌ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”

                                                   – ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್‌ 

ದಸರಾ ಗಜಪಡೆಯ ತೂಕದ ವಿವರ

  • ಶ್ರೀಕಂಠ: 5,790 ಕೆಜಿ
  • ಏಕಲವ್ಯ: 5,600 ಕೆಜಿ
  • ಧನಂಜಯ: 5,530 ಕೆಜಿ
  • ಮಹೇಂದ್ರ: 5,490 ಕೆಜಿ
  • ಪ್ರಶಾಂತ: 5,205 ಕೆಜಿ
  • ಗೋಪಿ: 5,170 ಕೆಜಿ
  • ಶ್ರೀರಾಮ: 4,820 ಕೆಜಿ
  • ಲಕ್ಷ್ಮೀ: 3,990 ಕೆಜಿ
  • ಕಾವೇರಿ: 3,075 ಕೆಜಿ
Continue Reading

ದಿನದ ಸುದ್ದಿ

ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!

Published

on

bengaluru-koodlugate-snn-raj-eternia-18-floor-building-demolition
ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ

ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ


ಸುದ್ದಿದಿನ,ಬೆಂಗಳೂರು:
ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ಎಸ್ಟೇಟ್‌ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್‌ ರಾಜ್‌ ಕಾರ್ಪ್‌ ಸಂಸ್ಥೆಯು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್‌ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.

₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ

ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ

ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್‌ ಅಪಾರ್ಟ್‌ಮೆಂಟ್‌ ನಿರ್ದೇಶಕ ಅನೂಜ್‌ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.

ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಾಣ

ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್‌ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.

ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

Continue Reading

Trending