Connect with us

ಬಹಿರಂಗ

ಸಿಕ್ಕುಗಳಲ್ಲಿ ಶಾಲಾ ಉಡುಪು

Published

on

ಸಾಂದರ್ಭಿಕ ಚಿತ್ರ

ಶಿಕ್ಷಣ ತಜ್ಞರ ಸ್ವಾಯತ್ತತೆಯನ್ನು ಕಸಿಯುವ ಸಾಧನವಾಗಿ ರಾಜಕೀಯ ಅಸ್ತ್ರವಾಗಿ ಶಾಲಾಸಮವಸ್ತ್ರ

  • ಮೂಲ : ಪ್ರೊ.ಕೃಷ್ಣ ಕುಮಾರ್‌, ಅನುವಾದ : ನಾ ದಿವಾಕರ

ಶಾಲಾ ಸಮವಸ್ತ್ರವೂ ಕಲಿಕೆಯ ಪ್ರಕ್ರಿಯೆಯಲ್ಲಿ ಒಂದು ಭಾಗವಾಗುತ್ತದೆ ಎಂದು ಇತಿಹಾಸದಲ್ಲಿ ಎಲ್ಲಿಯೂ ಕೇಳಿರಲಿಕ್ಕೆ ಸಾಧ್ಯವಿಲ್ಲ. ಆದರೂ ಇಂದಿನ ದಿನಗಳಲ್ಲಿಲ ಸಮವಸ್ತ್ರ ಇಲ್ಲದ ಶಾಲೆಯನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಜನರು ಶಾಲೆಯ ಬಗ್ಗೆ ಯೋಚಿಸುವಾಗ, ತಮ್ಮದೇ ಶಾಲೆಯಾಗಿದ್ದರೂ ಸಹ, ತಮ್ಮ ಮಕ್ಕಳನ್ನು ಇತರ ಶಾಲಾ ಮಕ್ಕಳಿಂದ ಭಿನ್ನವಾಗಿ ನೋಡುವಾಗ ಸಮವಸ್ತ್ರದ ಮೂಲಕವೇ ನೋಡುತ್ತಾರೆ.

ವಿಶೇಷವಾಗಿ ಹಬ್ಬದ ದಿನಗಳಲ್ಲಿ ಉತ್ಸವಗಳು ನಗರದ ಎಲ್ಲ ಶಾಲೆಯ ಮಕ್ಕಳನ್ನೂ ಒಟ್ಟಿಗೆ ಸೇರಿಸುವಾಗ ಪೋಷಕರು ತಮ್ಮ ಮಕ್ಕಳು ವಿಶಿಷ್ಟವಾದ ಸಮವಸ್ತ್ರದ ಪೋಷಾಕಿನಲ್ಲಿ ಮೆರೆಯುವುದನ್ನು ನೋಡಲು ಇಷ್ಟಪಡುತ್ತಾರೆ. ಈ ರೀತಿಯ ಸಾರ್ವಜನಿಕ ಪ್ರದರ್ಶನಗಳ ಬಗ್ಗೆ ಸಾರ್ವಜನಿಕರಲ್ಲಿ ಕಾಣಬಹುದಾದ ಒಂದು ವ್ಯಾಮೋಹ ಮತ್ತು ಶಾಲಾ ಸಮವಸ್ತ್ರದ ಇತಿಹಾಸ ಇವೆರಡೂ ಸಹ ಶಾಲಾ ಸಮವಸ್ತ್ರವು ವಹಿಸುವ ಮುಖ್ಯ ಪಾತ್ರವನ್ನು ಸೂಚಿಸುತ್ತದೆ.

ಇದು ಯುವಪೀಳಿಗೆಯನ್ನು ಶಿಸ್ತಿಗೊಳಪಡಿಸುವ ಒಂದು ವಿಧಾನವಾಗಿ ಕಾಣುತ್ತದೆ. ಒಂದೇ ರೀತಿಯ ವಸ್ತ್ರ ಧರಿಸುವ ಶಾಲಾ ಮಕ್ಕಳು ಶಾಲಾ ಶಿಕ್ಷಣದ ಎರಡು ಆದ್ಯರೂಪದ ರೂಪಕಗಳ ಪ್ರತೀಕವಾಗಿ ಕಾಣುತ್ತಾರೆ. ವಿಭಿನ್ನ ಹೂಗಳನ್ನರಳಿಸುವ ಹೂದೋಟ ಒಂದಾದರೆ ಮತ್ತೊಂದು ಒಟ್ಟಿಗೆ ಚಲಿಸುತ್ತಿರುವ ಸೈನಿಕರ ಪಡೆ.

ಇತಿಹಾಸ ಮತ್ತು ಸಾಮಾಜಿಕ ಪರಿಣಾಮ

ಶಾಲೆಗಳಲ್ಲಿ ಸಮವಸ್ತ್ರ ಧರಿಸುವುದನ್ನು ಕಡ್ಡಾಯ ಮಾಡಲಾಗಿರುವ ದೇಶಗಳು ಮತ್ತು ಕಡ್ಡಾಯ ಇಲ್ಲದ ದೇಶಗಳನ್ನು ಪ್ರತ್ಯೇಕಿಸಿ ನೋಡಿದಾಗ, ಇತಿಹಾಸ ತಂತಾನೇ ತೆರೆದುಕೊಳ್ಳುತ್ತದೆ. ವಿವಿಧ ರೀತಿಯ ವಸಾಹತು ಆಳ್ವಿಕೆಗೊಳಪಟ್ಟ ದೇಶಗಳಲ್ಲಿ ಉಗಮಿಸಿದ ಶಿಕ್ಷಣ ವ್ಯವಸ್ಥೆಯಲ್ಲಿ ಶಾಲಾ ಸಮವಸ್ತ್ರ ಕಡ್ಡಾಯವಾಗಿ ಜಾರಿಗೊಳಿಸಿರುವುದರ ಬಗ್ಗೆ ಒಲವು ತೋರುವುದನ್ನು ಗಮನಿಸಬಹುದು. ಅದರಲ್ಲಿ ಭಾರತವೂ ಒಂದು.

ನಮ್ಮ ಹಳೆಯ ನೆನಪುಗಳನ್ನು ಕೆದಕಿ, ಹಳೆಯ ಕಾಲದ ಫೋಟೋಗಳನ್ನು ಒಮ್ಮೆ ಅವಲೋಕಿಸಿದರೆ, ಶಾಲಾ ಸಮವಸ್ತ್ರದ ಆಲೋಚನೆಯು ನಗರೀಕರಣ, ಶ್ರೀಮಂತಿಕೆ ಮತ್ತು ಖಾಸಗೀಕರಣದ ಒಂದು ಭಾಗವಾಗಿಯೇ ಕಾಣುತ್ತದೆ. ಸ್ವಾತಂತ್ರ್ಯಾನಂತರದ ಭಾರತದಲ್ಲೂ ಸಹ ಗ್ರಾಮೀಣ ಮತ್ತು ಸಣ್ಣ ಪುಟ್ಟ ಊರುಗಳಲ್ಲಿನ ಶಾಲೆಗಳಲ್ಲಿ ಪ್ರತಿನಿತ್ಯ ಸಮವಸ್ತ್ರವನ್ನು ವಿಧಿಸಿರುವುದನ್ನು ಕಾಣಲಾಗುವುದಿಲ್ಲ. ವಾರದ ಕೆಲವು ದಿನಗಳು ಅಥವಾ ವಿಶೇಷ ದಿನಗಳಂದು ಮಾತ್ರವೇ ಸಮವಸ್ತ್ರ ಧರಿಸಲಾಗುತ್ತಿತ್ತು.

ಕ್ರಮೇಣ ವಿವಿಧ ರೀತಿಯ ಖಾಸಗಿ ಶಾಲೆಗಳು ಆರಂಭವಾದಂತೆಲ್ಲಾ ನಿಗದಿತ ಸಮವಸ್ತ್ರ ಧರಿಸುವುದನ್ನು ಕಡ್ಡಾಯಗೊಳಿಸಲಾರಂಭಿಸಿದವು. ವಿವಿಧ ಶಾಲೆಗಳ ಮಕ್ಕಳಿಗೆ ಸಮವಸ್ತ್ರಗಳನ್ನು ಪೂರೈಸುವುದು ಸ್ಥಳೀಯ ಜವಳಿ ವರ್ತಕರಿಗೆ, ದರ್ಜಿಗಳಿಗೆ ಮತ್ತು ಶೂ ಮಾರಾಟ ಮಳಿಗೆಗಳಿಗೆ ಉತ್ತಮ ವ್ಯಾಪಾರದ ಅವಕಾಶಗಳನ್ನೂ ಕಲ್ಪಿಸಿತ್ತು. ಸ್ಪರ್ಧಾತ್ಮಕ ಬೆಲೆಗಳನ್ನು ವಿಧಿಸುವ ಬದಲಾಗಿ ಸಮವಸ್ತ್ರದ ವ್ಯಾಪಾರವು ಸ್ಥಳೀಯ ಏಕಸ್ವಾಮ್ಯಕ್ಕೆ ದಾರಿಮಾಡಿಕೊಟ್ಟಿತ್ತು. ಅನೇಕ ಸಂದರ್ಭಗಳಲ್ಲಿ ಶಾಲೆಗಳೂ ಇದರಲ್ಲಿ ಭಾಗಿಯಾಗಲು ಒಪ್ಪಿ, ನಿರ್ದಿಷ್ಟ ವರ್ತಕರ ಬಳಿಯೇ ವ್ಯವಹರಿಸುವಂತೆ ಪೋಷಕರ ಮೇಲೆ ಒತ್ತಡ ಹೇರತೊಡಗಿದವು.

ಆದೇಶ ಆಧಾರಿತ ವ್ಯವಸ್ಥೆ

ಈ ಸಂಕ್ಷಿಪ್ತವಾದ, ಸಾಮಾನ್ಯೀಕರಿಸಲ್ಪಟ್ಟ ಸಾಮಾಜಿಕ ಚರಿತ್ರೆ ಇಂದು ಕರ್ನಾಟಕದಲ್ಲಿರುವ ಪರಿಸ್ಥಿತಿಗೆ ಅಷ್ಟೇನೂ ಪ್ರಸ್ತುತ ಎನಿಸಲಾರದು. ನಿರ್ದೇಶನಾಲಯದ ಆದೇಶ ಮತ್ತು ನ್ಯಾಯಾಲಯದ ತೀರ್ಪು ಇವೆರಡರ ನಡುವೆ ಸಿಲುಕಿ ಕೆಲವೇ ವಾರಗಳ ಅವಧಿಯಲ್ಲಿ ಸಂಪೂರ್ಣ ಸಮವಸ್ತ್ರ ನೀತಿಯನ್ನೇ ಜಾರಿಗೊಳಿಸಲಾಗಿದೆ.

ಈಗ ಸರ್ಕಾರದ ಈ ನಿಯಮವು ಶಾಲಾ ಕೊಠಡಿಯಷ್ಟೇ ಅಲ್ಲದೆ ಪರೀಕ್ಷಾ ಕೊಠಡಿಯನ್ನೂ ತನ್ನ ವ್ಯಾಪ್ತಿಗೊಳಪಡಿಸಿದೆ. ಕೇಂದ್ರೀಯ ವಿದ್ಯಾಲಯಗಳು ಯಾವುದೇ ರಾಜ್ಯ ಸರ್ಕಾರಗಳ ಆದೇಶಗಳಿಗೆ ಒಳಪಡುವುದಿಲ್ಲವಾದರೂ ಕರ್ನಾಟಕದಲ್ಲಿರುವ ಈ ಶಾಲೆಗಳೂ ಸಹ ಸರ್ಕಾರದ ನಿಯಮವನ್ನು ಪಾಲಿಸಿವೆ. ಪ್ರಸ್ತುತ ಸನ್ನಿವೇಶದಲ್ಲಿ ಈ ಶಾಲೆಗಳ ನಿಲುವನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ.

ಹೀಗೆ, ಭಾರತದ ಅತಿ ಹೆಚ್ಚು ಸಾಕ್ಷರತೆ ಹೊಂದಿದ, ಸಂಪದ್ಭರಿತ ರಾಜ್ಯ, ಜ್ಞಾನ ಆರ್ಥಿಕತೆಯಲ್ಲಿನ ತನ್ನ ಪ್ರಗತಿಗೆ ವಿಶ್ವ ಖ್ಯಾತಿಯನ್ನು ಗಳಿಸಿರುವ ಒಂದು ರಾಜ್ಯ ಇಂದು ಶೈಕ್ಷಣಿಕ ಸಾಂಪ್ರದಾಯಿಕತೆ ಮತ್ತು ನಿಯಂತ್ರಣದ ಅಗ್ನಿಪರೀಕ್ಷೆಗೆ ಒಳಗಾಗಿದೆ. ಶಾಲಾ ಸಮವಸ್ತ್ರ ಒಂದು ಹೊಸ ರಾಜಕೀಯ ಅಸ್ತ್ರವಾಗಿ ರೂಪಾಂತರ ಹೊಂದಿದೆ.

ತನ್ಮೂಲಕ ಪ್ರಾಂಶುಪಾಲರು ಮತ್ತು ಶಿಕ್ಷಕರು ಈಗ ಹೊಂದಿರುವಂತಹ ಸೀಮಿತವಾದ ಸ್ವಾಯತ್ತತೆಯನ್ನು ಮತ್ತಷ್ಟು ಕಡಿತಗೊಳಿಸಿದೆ. ಶಾಲಾ ಸಮವಸ್ತ್ರದ ವಿಚಾರದಲ್ಲಿನ ರಾಜಕಾರಣವು ಎಷ್ಟರ ಮಟ್ಟಿಗೆ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಸಮಾಜ ವಿಜ್ಞಾನದ ಅಧ್ಯಯನಕ್ಕೆ ಸೂಕ್ತವಾದ ವಿಷಯವಾಗಿದೆ. ಶಾಲಾ ಸಮವಸ್ತ್ರ ಅದರ ಇತಿಹಾಸ ಮತ್ತು ಅದರ ಬಗ್ಗೆ ಇರುವ ವ್ಯಾಮೋಹ ಇವುಗಳ ವ್ಯವಸ್ಥಿತ ಅಧ್ಯಯನ ಅತ್ಯವಶ್ಯವಾಗಿದೆ.

ಆಸಕ್ತಿದಾಯಕ ಸಂಗತಿ ಎಂದರೆ 1960ರ ಪ್ರಮುಖ ಶೈಕ್ಷಣಿಕ ಸುಧಾರಣಾ ಕ್ರಮಗಳನ್ನು ಕಡೆಗಣಿಸಿ ಮುಂದುವರೆದ ಒಂದು ರಾಜ್ಯದಲ್ಲಿ ಮಾಧ್ಯಮಿಕ ಶಿಕ್ಷಣ ವಲಯದಲ್ಲಿ ಸಮವಸ್ತ್ರ ವಿವಾದದ ವಿಚಾರವಾಗಿದೆ. ಇಂದು ಪಿಯುಸಿ ಅಥವಾ ಜೂನಿಯರ್‌ ಕಾಲೇಜುಗಳು ಕೆಲವೇ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿವೆ. ದೇಶದ ಇತರ ರಾಜ್ಯಗಳಲ್ಲಿ ಕೊಥಾರಿ ಆಯೋಗದ ಶಿಫಾರಸಿನ ಅನುಸಾರ 10+2 ಶಿಕ್ಷಣ ವ್ಯವಸ್ಥೆಯೇ ಜಾರಿಯಲ್ಲಿದೆ. ಇದರಿಂದ ಶೈಕ್ಷಣಿಕ ವಲಯದ ಆಡಳಿತ ನಿರ್ವಹಣೆಯ ಪುನರ್‌ ಸಂಘಟನೆಯೂ ಸಾಧ್ಯವಾಗಿದೆ. ಈ ಶಾಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಮತ್ತು ಶಿಕ್ಷಕರಿಗೆ ಹೆಚ್ಚಿನ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ ನೀಡಿ ಸಂಸ್ಥೆಗಳ ನಿರ್ವಹಣಾ ನಿಯಮಗಳನ್ನು ರೂಪಿಸಲು ಅವಕಾಶ ನೀಡಿದ್ದಲ್ಲಿ ಈ ಪದ್ಧತಿಯ ಸಂಪೂರ್ಣ ಉಪಯುಕ್ತತತೆಯನ್ನು ಸಾಕಾರಗೊಳಿಸಬಹುದಿತ್ತು.

ಮತ್ತೊಂದೆಡೆ ಶಾಲೆಗಳ ದೈನಂದಿನ ಚಟುವಟಿಕೆಗಳಲ್ಲಿ ಸಮುದಾಯಕ್ಕೆ ಭಾಗವಹಿಸುವ ಅವಕಾಶವನ್ನು ನೀಡಲೂ ಸಾಧ್ಯವಾಗುತ್ತಿತ್ತು. ಕೊಥಾರಿ ಆಯೋಗದ ಸದಸ್ಯ ಕಾರ್ಯದರ್ಶಿ ಜೆ ಪಿ ನಾಯಕ್ ಅವರ ಸಲಹೆಯ ಮೇರೆಗೆ ರೂಪಿಸಲಾಗಿದ್ದ ಆಯೋಗದ ಮುನ್ನೋಟವನ್ನು ಪರಿಪೂರ್ಣವಾಗಿ ಸಾಕಾರಗೊಳಿಸಿದ್ದಲ್ಲಿ ಅಧಿಕಾರಶಾಹಿಯ ನಿಯಂತ್ರಣ ಕಡಿಮೆಯಾಗುತ್ತಿತ್ತು ಹಾಗೂ ಇದರಿಂದ ಶಾಲೆಗಳ ಸ್ವಾಯತ್ತತೆಯೂ ಹೆಚ್ಚಾಗುತ್ತಿತ್ತು.

ಇದರಿಂದ ಶಾಲೆಗಳೇ ಬೌದ್ಧಿಕ ಸಂಪನ್ಮೂಲವಾಗುವಂತಹ ಒಂದು ಭಿನ್ನ ರೀತಿಯ ರಾಜಕಾರಣ ಸೃಷ್ಟಿಯಾಗುವ ಸಾಧ್ಯತೆಗಳಿದ್ದವು. ಇಂತಹ ಒಂದು ಪರ್ಯಾಯ ಪ್ರಜಾಸತ್ತಾತ್ಮಕ ರಾಜಕಾರಣಕ್ಕೆ ಕರ್ನಾಟಕ ಸಾಮಾಜಿಕ ನೆಲೆಯಲ್ಲಿ ಒಂದು ಪ್ರಶಸ್ತ ಭೂಮಿಕೆಯಾಗಬಹುದಿತ್ತು. ಏಕೆಂದರೆ ವಿಕೇಂದ್ರೀಕರಣನ ಆಡಳಿತ ವ್ಯವಸ್ಥೆಯಲ್ಲಿ ಕರ್ನಾಟಕ ತನ್ನದೇ ಆದ ಪರಂಪರೆಯನ್ನೂ ಹೊಂದಿದೆ.

ಆದರೆ ಇತಿಹಾಸ ಬೇರೆ ರೀತಿಯ ತಿರುವು ಪಡೆದುಕೊಂಡಿತು. ಕರ್ನಾಟಕದಲ್ಲಿ ಒಬ್ಬ ಶಿಕ್ಷಕ ಅಥವಾ ಜೂನಿಯರ್‌ ಕಾಲೇಜಿನ ಪ್ರಾಂಶುಪಾಲರು ಒಂದು ಸಮವಸ್ತ್ರದ ಕಾರಣಕ್ಕಾಗಿ ವಿದ್ಯಾರ್ಥಿಯನ್ನು ಪರೀಕ್ಷಾ ಕೊಠಡಿಗೆ ಪ್ರವೇಶಿಸದಂತೆ ತಡೆಹಿಡಿಯುವ ದೃಶ್ಯ ಒಂದು ನಿರ್ದಯಿ ಕ್ರಿಯೆಯ ಸಂಕೇತವಾಗಿ ಬಹಳ ವರ್ಷಗಳ ಕಾಲ ಕಾಡಲಿದೆ. ಬಹುಶಃ ವಿದ್ಯಾರ್ಥಿಯ ಅವಸ್ಥೆ ಬೋಧಕರ ಶಿಕ್ಷಣ ಕಾಲೇಜುಗಳಲ್ಲಿ ಚರ್ಚೆಗೊಳಪಡಬೇಕಾದ ವಿಚಾರವೂ ಆಗಬೇಕಿದೆ.

ಇಲ್ಲಿ ಉದ್ಭವಿಸಬಹುದಾದ ಪ್ರಶ್ನೆ ಎಂದರೆ : “ ಆ ಶಿಕ್ಷಕಿ ಅಥವಾ ಪ್ರಾಂಶುಪಾಲೆ ಆದೇಶವನ್ನು ಪಾಲಿಸುವ ದೃಷ್ಟಿಯಿಂದ ಸ್ವ ಪ್ರೇರಣೆಯಿಂದ ಆ ವಿದ್ಯಾರ್ಥಿಯ ಬಗ್ಗೆ ಅಷ್ಟು ನಿಷ್ಕಾರುಣ್ಯವಾಗಿ ವರ್ತಿಸಿದರೇ ?” ಈ ನಿಟ್ಟಿನಲ್ಲಿ ಒಂದು ಆಡಳಿತಾತ್ಮಕ ಪ್ರಶ್ನೆಯೂ ಉದ್ಭವಿಸುತ್ತದೆ. ʼ ನಿಗದಿತ ಸಮವಸ್ತ್ರ ಧಾರಣೆಯ ಬಗ್ಗೆ ಶಿಕ್ಷಣ ನಿರ್ದೇಶನಾಲಯದ ಆದೇಶವು ಪರೀಕ್ಷಾ ಕೊಠಡಿಗೆ ಅನ್ವಯಿಸುವುದೇ ? ʼ. ತಾತ್ವಿಕವಾಗಿ ಅನ್ವಯಿಸುತ್ತದೆ.

ಅದರೆ ಇದು ಶಾಲಾ ಸಮವಸ್ತ್ರದ ಪಾತ್ರವನ್ನು ಮತ್ತಷ್ಟು ವಿಸ್ತರಿಸಿ ಸಾಮೂಹಿಕ ಸಾಂಸ್ಥಿಕ ಅಸ್ಮಿತೆಯನ್ನು ಕಲ್ಪಿಸುವತ್ತ ಸಾಗುತ್ತದೆ. ಈ ಅಸ್ಮಿತೆಯ ವ್ಯಾಪ್ತಿಯಲ್ಲಿ ಪರೀಕ್ಷಾ ಕೊಠಡಿಯನ್ನೂ ಒಳಗೊಳ್ಳುವುದೇ ಆದರೆ ವಿದ್ಯಾರ್ಥಿಗಳಿಗೆ ಹಾಲ್‌ ಟಿಕೆಟ್‌ ಅಥವಾ ಪ್ರವೇಶಾನುಮತಿ ಪತ್ರ ಏಕೆ ಬೇಕು ? ಅವರ ವೈಯಕ್ತಿಕ ಅಸ್ಮಿತೆಯನ್ನು ಗುರುತಿಸಲೆಂದೇ ? ಈ ವಿಚಾರದಲ್ಲಿ ಕಾನೂನು ವಲಯದಲ್ಲಿ ನಡೆಯುವ ವಾದಗಳು ಕಲಿಕಾರ್ಥಿಗಳ ಮತ್ತು ಪರೀಕ್ಷಾರ್ಥಿಗಳ ಬದುಕಿನ ಈ ಅಂಶದ ಬಗ್ಗೆಯೂ ಇರುತ್ತದೆ ಎಂದು ಅಪೇಕ್ಷಿಸೋಣ.

ಪ್ರಮುಖ ವ್ಯತ್ಯಾಸ

ಈ ಸಂದರ್ಭದಲ್ಲೂ ಸಹ ಒಂದು ಪ್ರಮುಖವಾದ ವ್ಯತ್ಯಾಸವನ್ನು ಗುರುತಿಸುವುದು ಉಚಿತ. ಸಮವಸ್ತ್ರಕ್ಕೂ ವಸ್ತ್ರ ಸಂಹಿತೆಗೂ ವ್ಯತ್ಯಾಸವಿದೆ. ವಸ್ತ್ರ ಸಂಹಿತೆಗಿಂತಲೂ ಸಮವಸ್ತ್ರಧಾರಣೆ ಹೆಚ್ಚು ಆದೇಶಾತ್ಮಕವಾಗಿರುತ್ತದೆ. ವಸ್ತ್ರ ಸಂಹಿತೆಯನ್ನು ವಿಧಿಸುವಾಗ ಮಕ್ಕಳು ಮತ್ತು ಪೋಷಕರು ಅವರ ಅಂತಸ್ತು ಮತ್ತು ಶ್ರೀಮಂತಿಕೆಗೆ ಅನುಗುಣವಾಗಿ ಉಡುಪು ಧರಿಸಲು ಸಾಧ್ಯವಾಗದಿರಬಹುದು. ಆದರೆ ಸಮವಸ್ತ್ರ ವಿಧಿಸಿದಾಗ, ಕೇವಲ ಉಡುಪಿನ ಬಣ್ಣ ಮಾತ್ರವೇ ಅಲ್ಲದೆ ಅದರ ವಿನ್ಯಾಸ ಮತ್ತು ಮಾದರಿಯೂ ಸಹ ನಿರ್ದಿಷ್ಟ ಶೈಲಿಯಲ್ಲೇ ಇರಬೇಕಾಗುತ್ತದೆ.

ಹಿಂದಿನ ಕಾಲದಲ್ಲಿ ಕೇವಲ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿವುದು ಸಾಕೆನಿಸುತ್ತಿತ್ತು ಆದರೆ ಇಂದು ಸಮವಸ್ತ್ರ ಹೀಗೇ ಇರಬೇಕೆಂಬ ಷರತ್ತು ವಿಧಿಸುವ ಸನ್ನಿವೇಶವನ್ನು ಕಾಣುತ್ತಿದ್ದೇವೆ. ವಿಶಿಷ್ಟ ಸಾಮಾಜಿಕ ಲಕ್ಷಣಗಳು ಕಣ್ಣಿಗೆ ಕಾಣುವಂತಹ ಬಳಕೆಯ ಹವ್ಯಾಸವನ್ನು ಪ್ರಚೋದಿಸುತ್ತದೆ. ಭೋಜನ ಕೂಟಗಳು ಶಾಲೆಗಳಷ್ಟೇ ಪರಿಣಾಮಕಾರಿಯಾಗಿ ಈ ಉದ್ದೇಶವನ್ನು ಈಡೇರಿಸುತ್ತವೆ. ಅಸಮಾನತೆಯು ಸರ್ವವ್ಯಾಪಿಯಾಗಿರುವ ಒಂದು ಸಮಾಜದಲ್ಲಿ ಸಮಾನತೆಯನ್ನು ಬಿಂಬಿಸುವ ಒಂದು ಸೂಚನೆಯಾಗಿ ಸಮವಸ್ತ್ರ ಕಾಣುತ್ತದೆ.

ಆದರೆ ಶಿಕ್ಷಣ ಎನ್ನುವುದು ಸಮಾಜದ ಎಲ್ಲ ವರ್ಗಗಳ ಮತ್ತು ಎಲ್ಲ ಸ್ತರಗಳ ಜನರಿಗೆ ಸಮಾನ ಅವಕಾಶಗಳನ್ನು ಪ್ರೋತ್ಸಾಹಿಸುವ ಒಂದು ಕ್ಷೇತ್ರವಾಗಿರಬೇಕೆಂದು ಅಪೇಕ್ಷಿಸಲಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣವು ನೀಡಬಹುದಾದ ಬಹುಮುಖ್ಯವಾದ ಕೊಡುಗೆ ಎಂದರೆ ಸಾರ್ವಜನಿಕ ಚರ್ಚೆಯ ವ್ಯಾಪ್ತಿಯನ್ನು ಹೆಚ್ಚಿಸುವುದು , ತನ್ಮೂಲಕ ವಿಶೇಷವಾಗಿ ಶಿಕ್ಷಕರನ್ನು ಒಳಗೊಂಡಂತೆ ಎಲ್ಲ ಭಾಗಿದಾರರಿಗೂ ಭಾಗವಹಿಸಲು ಅವಕಾಶ ಮಾಡಿಕೊಡುವುದು. ವಿಭಿನ್ನ ಹಿನ್ನೆಲೆಯನ್ನು ಹೊಂದಿರುವ ವಿದ್ಯಾರ್ಥಿಗಳೊಡನೆ ಶಿಕ್ಷಕರು ನಿಕಟ ಸಂಪರ್ಕ ಹೊಂದಿರುತ್ತಾರೆ. ಆದುದರಿಂದ ಎಲ್ಲ ಮಕ್ಕಳಿಗೂ ಶಾಲಾ ಕೊಠಡಿಯು ಹೆಚ್ಚು ಹಿತಕರವಾಗಿರುವಂತೆ ಮಾಡುವುದರ ಬಗ್ಗೆ ಸೂಕ್ಷ್ಮ ಗ್ರಹಿಕೆ ಹೊಂದಿರುತ್ತಾರೆ.

ಈ ಸಾಮೂಹಿಕ ಇರುವಿಕೆಯ ಸ್ಥಿತಿಯ ಹಿಂದಿರುವ ಸಮಸ್ಯೆಗಳನ್ನು ಶ್ರೀ ಅರಬಿಂದೋ ವಿಶ್ಲೇಷಿಸಿರುವಂತೆ ಬಹುಶಃ ಯಾವುದೇ ಆಧುನಿಕ ತತ್ವಶಾಸ್ತ್ರಜ್ಞರು ವಿಶ್ಲೇಷಿಸಿಲ್ಲ. ತಮ್ಮ” ದ ಐಡಿಯಲ್‌ ಆಫ್‌ ಹ್ಯೂಮನ್‌ ಯೂನಿಟಿ ” ಪ್ರಬಂಧದಲ್ಲಿ ಅವರು ಪ್ರಕೃತಿಯ ವೈವಿಧ್ಯತೆಯ ನೆಲೆಯಲ್ಲೇ ಹೇಗೆ ಏಕರೂಪತೆ ಎನ್ನುವುದು ನಮ್ಮನ್ನು ಉತ್ತೇಜಿಸಿದರೂ, ಪರಸ್ಪರ ಸಂಬಂಧಗಳ ಅಥವಾ ಏಕತೆಯ ಪ್ರಜ್ಞೆಯನ್ನು ಮೂಡಿಸುವುದಿಲ್ಲ ಎನ್ನುವುದನ್ನು ವಿವರಿಸುತ್ತಾರೆ.

ಅವರು ತಮ್ಮ ವಿಶ್ಲೇಷಣೆಯನ್ನು ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವಿಚಾರಗಳಿಗೂ ವಿಶ್ಲೇಷಿಸುತ್ತಾ ಅಂತರರಾಷ್ಟ್ರೀಯ ಸಂಬಂಧಗಳಿಗೂ ಅನ್ವಯಿಸುತ್ತಾರೆ. ನಮ್ಮ ವರ್ತಮಾನದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಉಂಟಾಗಿರುವ ಕ್ಷೋಭೆಯನ್ನು ಶಿಕ್ಷಣದ ಪಾತ್ರ ಮತ್ತು ಶಿಕ್ಷಣವು ಒಂದು ವ್ಯವಸ್ಥೆಯಾಗಿ ನಿರ್ವಹಿಸಬಹುದಾದ ಪಾತ್ರದ ಹಿನ್ನೆಲೆಯಲ್ಲಿ ವಿಶ್ಲೇಷಿಸಬೇಕಿದೆ. ಸಮವಸ್ತ್ರ ಎಂಬ ಪದವೇ ಸೂಚಿಸುವಂತೆ, ಸಮಾನ ಉಡುಪು ಎಲ್ಲ ತಾರತಮ್ಯ, ವ್ಯತ್ಯಯಗಳನ್ನೂ ದಾಟಲಾಗಿದೆ ಎಂಬ ಸಂದೇಶವನ್ನು ರವಾನಿಸುತ್ತದೆ.

ಕರ್ನಾಟಕದಲ್ಲಿ ಇದು ಸಾಧ್ಯವಾಗಿದ್ದ ಪಕ್ಷದಲ್ಲಿ, ಇದನ್ನು ಪರಿಪಾಲಿಸಲು ನಿರ್ದೇಶನಾಲಯವು ಆದೇಶ ಹೊರಡಿಸುವ ಅವಶ್ಯಕತೆ ಇರಲಿಲ್ಲ. ವಸಾಹತು ಅವಧಿಯಲ್ಲಿ ರಚಿಸಲ್ಪಟ್ಟ ಈ ಸಂಸ್ಥೆಯು ತನ್ನ ಅಧಿಕಾರಶಾಹಿ ಧೋರಣೆಯನ್ನು ಅರ್ಥಮಾಡಿಕೊಳ್ಳಲು, ಜೆ ಪಿ ನಾಯಕ್‌ ಅವರು ನನಗೆ ಹೇಳಿದ ಒಂದು ಪ್ರಸಂಗ ನೆರವಾಗಬಹುದು.

ಶಾಲಾ ಕೊಠಡಿಯ ಬೋಧನೆಯನ್ನು ರೂಢಮಾದರಿಯನ್ನಾಗಿ ಮಾಡದಿರುವಂತೆ ಮತ್ತು ಹೆಚ್ಚು ಜೀವಂತಿಕೆಯಿಂದ ಕೂಡಿದ ಮಕ್ಕಳ ಕೇಂದ್ರಿತವಾಗಿ ಮಾಡುವಂತೆ, ಕೊಥಾರಿ ಆಯೋಗವು ಹಲವು ಸಲಹೆಗಳನ್ನು ನೀಡಿತ್ತು. ಕೊಥಾರಿ ಆಯೋಗದ ವರದಿಯು ಅಧಿಕೃತವಾಗಿ ಅನುಮೋದನೆ ಪಡೆದ ಕೂಡಲೇ ಮಹಾರಾಷ್ಟ್ರದ ಶಿಕ್ಷಣ ನಿರ್ದೇಶನಾಲಯವು ಒಂದು ಅರೆ ಸರ್ಕಾರಿ ಆದೇಶ ಹೊರಡಿಸಿ , ಮೇಲಧಿಕಾರಿಗಳ ಆದೇಶದ ಮೇರೆಗೆ ಎಲ್ಲ ಶಾಲೆಗಳಲ್ಲೂ ಬೋಧನೆಯು ಮಕ್ಕಳ ಕೇಂದ್ರಿತವಾಗಿರತಕ್ಕದ್ದು ಎಂದು ಆಜ್ಞೆ ಹೊರಡಿಸಿತ್ತು !

(The School dress in cross hairs : ದ ಹಿಂದೂ 6-ಮೇ-2022) ( ಪ್ರೊ ಕೃಷ್ಣಕುಮಾರ್‌, ಎನ್‌ಸಿಇಆರ್‌ಟಿ ಮಾಜಿ ನಿರ್ದೇಶಕರು ಮತ್ತು ಸ್ಮಾಲರ್‌ ಸಿಟಿಜನ್ಸ್‌ ಕೃತಿಯ ಲೇಖಕರು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ

Published

on

~ಯೋಗೇಶ್ ಮಾಸ್ಟರ್, ಚಿಂತಕರು

ಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.

ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!

ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!

ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.

ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.

ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.

ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!

ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದಿಮಾಗಿ ನಕ್ಸಲ್-ನಗರ ನಕ್ಸಲ್

Published

on

~ರಹಮತ್ ತರೀಕೆರೆ, ಚಿಂತಕರು

ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.

ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.

ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.

ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.

ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.

ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರ‍ಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.

ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.

ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.

ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending