ಬಹಿರಂಗ
ಸಮನ್ವಯ ದೃಷ್ಟಿ ಇಲ್ಲದ ಪಠ್ಯಕ್ರಮ ಅಪಾಯಕಾರಿ
- ನಾ ದಿವಾಕರ
ಆರೋಗ್ಯಕರ ಹಾಗೂ ಸೌಹಾರ್ದಯುತ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಒಂದು ಸುರಕ್ಷಿತ ಮತ್ತು ಸಮನ್ವಯದ ವೇದಿಕೆ. ಯಾವುದೇ ದೇಶದ ಪ್ರಗತಿಯನ್ನು ಅಳೆಯವಾಗ ಶೈಕ್ಷಣಿಕ ಪ್ರಗತಿಯನ್ನೂ ಒಂದು ಅಳತೆಗೋಲಿನಂತೆ ಬಳಸಲಾಗುವುದು ಸ್ವಾಭಾವಿಕ ಹಾಗೂ ಸಾರ್ವತ್ರಿಕ ಲಕ್ಷಣ.
ಏಕೆಂದರೆ ಭವಿಷ್ಯದ ಯುವ ಪೀಳಿಗೆಗೆ ಒಂದು ನಿರ್ದಿಷ್ಟ ಮಾರ್ಗ ತೋರುವ ನಿಟ್ಟಿನಲ್ಲಿ ಶಿಕ್ಷಣದ ಭೂಮಿಕೆ ಮಹತ್ತರ ಪಾತ್ರ ವಹಿಸುತ್ತದೆ. ಪ್ರಾಥಮಿಕ ಹಂತದಿಂದ ಮಾಧ್ಯಮಿಕ ಹಂತಕ್ಕೆ ಕಾಲಿಡುವ ಅಂದರೆ ಪ್ರೌಢಶಾಲಾ ಹಂತಕ್ಕೆ ಪ್ರವೇಶಿಸುವ ಮಕ್ಕಳ ವಿದ್ಯಾರ್ಜನೆಯು ಮುಂದಿನ ಹಲವು ಪೀಳಿಗೆಗಳ ಭವಿಷ್ಯದ ಬೌದ್ಧಿಕ ಬುನಾದಿಯೂ ಆಗುತ್ತದೆ. ಹಾಗಾಗಿಯೇ ಆಧುನಿಕ ನಾಗರಿಕ ಪ್ರಪಂಚದಲ್ಲಿ ಶೈಕ್ಷಣಿಕ ವಲಯಗಳಲ್ಲಿ ಆಯಾ ಸಮಾಜಗಳ ಸಾಮಾಜಿಕ, ಸಾಂಸ್ಕೃತಿಕ ಮತ್ತು ಪಾರಂಪರಿಕ ಜ್ಞಾನಶಾಖೆಗಳನ್ನು ಮರುವಿಮರ್ಶೆಗೊಳಪಡಿಸುವ ಮೂಲಕ ಶಾಲಾ ಮಕ್ಕಳ ಪಠ್ಯ ಕ್ರಮದಲ್ಲಿ ಕಾಲದಿಂದ ಕಾಲಕ್ಕೆ ಪರಿಷ್ಕರಣೆ ಮಾಡಲಾಗುತ್ತದೆ.
ಕರ್ನಾಟಕದ ಸಂದರ್ಭದಲ್ಲೂ ಈ ಪರಿಷ್ಕರಣೆ ನಡೆಯುತ್ತಲೇ ಬಂದಿದೆ. ಈ ಪರಿಷ್ಕರಣೆ ಯಾವ ದಿಕ್ಕಿನಲ್ಲಿರಬೇಕು ಎಂಬ ಪ್ರಶ್ನೆ ಎದುರಾದಾಗ ನಾವು ಕ್ರಮಿಸಿ ಬಂದ, ಕ್ರಮಿಸಬೇಕಾದ ಮತ್ತು ಕ್ರಮಿಸಬಹುದಾದ ಹಾದಿಯನ್ನೂ ಪ್ರಧಾನವಾಗಿ ಪರಿಗಣಿಸಬೇಕಾಗುತ್ತದೆ. ಕರ್ನಾಟಕ ಸರ್ಕಾರ ಈಗ 8, 9 ಮತ್ತು 10ನೆ ತರಗತಿಯ ಪಠ್ಯಗಳಲ್ಲಿ ಹಲವು ಬದಲಾವಣೆಗಳನ್ನು ಜಾರಿಗೊಳಿಸಲು ಮುಂದಾಗಿದ್ದು ಇದು ವಿವಾದಕ್ಕೂ ಕಾರಣವಾಗಿದೆ.
ಆಡಳಿತಾರೂಢ ಪಕ್ಷ ತನ್ನ ರಾಜಕೀಯ ಬೆಳವಣಿಗೆಗಾಗಿ ಅನುಸರಿಸುವ ಒಂದು ಸಿದ್ಧಾಂತ ಶಿಕ್ಷಣ ವ್ಯವಸ್ಥೆಯ ಸರಕಾಗುವುದು ಸದಾ ಅಪಾಯಕಾರಿಯಾಗೇ ಕಾಣುತ್ತದೆ. ಪ್ರಸಕ್ತ ವಿವಾದದಲ್ಲಿ ಪಠ್ಯ ಪರಿಷ್ಕರಣ ಸಮಿತಿ ಶಿಫಾರಸು ಮಾಡಿರುವ ಕೆಲವು ಬದಲಾವಣೆಗಳು ಈ ದಿಕ್ಕಿನಲ್ಲೇ ಸಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಈಗ ತೆಗೆದುಹಾಕಲಾಗಿರುವ ಪಠ್ಯಗಳು ಯಾವುದೋ ಒಂದು ಸಿದ್ಧಾಂತವನ್ನು ಪೋಷಿಸುವಂತಿದ್ದು ಎಂದು ಭಾವಿಸುವುದೇ ಅಪ್ರಬುದ್ಧತೆ ಎನಿಸಿಕೊಳ್ಳುತ್ತದೆ. ಕಾರಣ ಭಾರತದ ಬಹುತ್ವ ಸಂಸ್ಕೃತಿಯನ್ನು ಪೋಷಿಸುವ ನಿಟ್ಟಿನಲ್ಲಿ ಮೂಡಿಬರುವ ಯಾವುದೇ ಸಾಹಿತ್ಯ ರಚನೆಯೂ ಸಹ ಸಮಕಾಲೀನ ಸಂದರ್ಭದಲ್ಲಿ ಅಪ್ರಸ್ತುತವಾಗುವುದಿಲ್ಲ.
ಆಧುನಿಕ ಭಾರತ ನಿರ್ಮಾಣವಾಗಿರುವುದು ಅನೇಕ ದಾರ್ಶನಿಕ ಚಿಂತಕರ ಬೌದ್ಧಿಕ ಆಲೋಚನೆಗಳ ಬುನಾದಿಯ ಮೇಲೆ. ಭಾರತೀಯ ಸಮಾಜವನ್ನು ಶತಮಾನಗಳಿಂದ ಕಾಡುತ್ತಲಿದ್ದ ಜಾತಿ ವ್ಯವಸ್ಥೆಯ ದೌರ್ಜನ್ಯ, ತಾರತಮ್ಯ ಮತ್ತು ಅಸ್ಪೃಶ್ಯತೆಯಂತಹ ಹೀನ ಆಚರಣೆಗಳಿಂದ ವಿಮೋಚನೆ ಪಡೆಯುವ ನಿಟ್ಟಿನಲ್ಲಿ ಬುದ್ಧ, ಬಸವಣ್ಣ ಮುಂತಾದವರ ಮಹನೀಯರ ಚಿಂತನೆಗಳನ್ನೇ ವಿಸ್ತರಿಸಿ ಫುಲೆ, ಅಂಬೇಡ್ಕರ್ ಮುಂತಾದವರು ರೂಪಿಸಿದ ಹೊಸ ಆಲೋಚನೆಗಳ ಫಲವಾಗಿಯೇ ಭಾರತ ತನ್ನ ಬಹುತ್ವ ಸಂಸ್ಕೃತಿಯನ್ನು, ಸಮನ್ವಯತೆಯನ್ನು ಉಳಿಸಿಕೊಳ್ಳಲು ಮತ್ತು ಸಾಮಾಜಿಕ ನ್ಯಾಯವನ್ನು ಸಾಧಿಸಲು ಸಾಧ್ಯವಾಗಿದೆ.
ಈ ದೇಶದ ಪರಂಪರೆಯಲ್ಲಿ ಆಳವಾಗಿ ಬೇರೂರಿದ್ದ ಸ್ತ್ರೀ ಶೋಷಣೆಯ ತಾತ್ವಿಕ ಚಿಂತನೆಗಳು, ಮಹಿಳೆಯರನ್ನು ಸದಾ ದಾಸ್ಯದಲ್ಲಿಡುವಂತಹ ಸಂಹಿತೆಗಳು ಮತ್ತು ಈ ತಾತ್ವಿಕ ನೆಲೆಗಳು ಪೋಷಿಸಿದಂತಹ ಪಿತೃ ಪ್ರಧಾನ ವ್ಯವಸ್ಥೆ ಇಂದಿಗೂ ಸಹ ನಮ್ಮ ಸಮಾಜದಲ್ಲಿ ಪಾರಮ್ಯ ಸಾಧಿಸಿದೆ. ಈ ಬೆಳವಣಿಗೆಗೆ ಪೂರಕವಾಗಿದ್ದ ಸೈದ್ಧಾಂತಿಕ ನೆಲೆಗಳನ್ನು ಭೇದಿಸಿ, ಮಹಿಳಾ ಸಮಾನತೆ ಮತ್ತು ಸಾಮಾಜಿಕ ಸಮನ್ವಯವನ್ನು ಸಾಧಿಸುವ ನಿಟ್ಟಿನಲ್ಲಿ ಅನೇಕಾನೇಕ ಸಾಮಾಜಿಕ-ಸಾಂಸ್ಕೃತಿಕ ಚಿಂತಕರು ತಮ್ಮದೇ ಆದ ಕೊಡುಗೆ ಸಲ್ಲಿಸಿದ್ದಾರೆ.
ಇಂದು ಈ ನೆಲೆಗಳನ್ನು ಕಾಪಾಡಿಕೊಳ್ಳಬೇಕಾದ ಗುರುತರ ಹೊಣೆಗಾರಿಕೆ ವರ್ತಮಾನದ ಸಮಾಜದ ಮೇಲಿದೆ. ಬದಲಾಗುತ್ತಿರುವ ಪ್ರಪಂಚದಲ್ಲಿ ಆಧುನಿಕ ತಂತ್ರಜ್ಞಾನ ಸಮಾಜದೊಳಗಿನ ಮಾನವೀಯ ಮೌಲ್ಯಗಳನ್ನೂ ಮಾರುಕಟ್ಟೆಯ ಸರಕಿನಂತೆ ವಿನಿಮಯಕ್ಕೊಳಪಡಿಸುತ್ತಿರುವಾಗ, ಯುವ ಪೀಳಿಗೆಗೆ ಈ ದೇಶ ಚಾರಿತ್ರಿಕ ಸಂದರ್ಭಗಳಲ್ಲಿ ಕಂಡಿರುವಂತಹ ಸಾಂಸ್ಕೃತಿಕ ಕ್ರೌರ್ಯ, ದೌರ್ಜನ್ಯ ಮತ್ತು ಅಸ್ಪೃಶ್ಯತೆಯಂತಮ ಅಮಾನುಷ ಕಾಲಘಟ್ಟಗಳನ್ನು ಪರಿಚಯಿಸುವ ಹೊಣೆ ನಮ್ಮ ಮೇಲಿದೆ.
ಇದರೊಟ್ಟಿಗೇ ಈ ಒಂದು ಸಾಮಾಜಿಕ ಚೌಕಟ್ಟುಗಳನ್ನು ಭೇದಿಸಿ, ಮಾನವ ಸಮಾಜದ ವಿಮೋಚನೆಗೆ ಶ್ರಮಿಸಿ ಸಹಬಾಳ್ವೆ, ಸೋದರತ್ವ, ಸಮನ್ವಯ ಮತ್ತು ಸೌಹಾರ್ದತೆಯ ನೆಲೆಗಳನ್ನು ವಿಸ್ತರಿಸಿದ ಚಿಂತಕರನ್ನು ಪರಿಚಯಿಸುವ ಹೊಣೆಯೂ ನಮ್ಮ ಮೇಲಿದೆ. ಈ ಹೊರೆಯನ್ನು ಇಳಿಸಿಕೊಳ್ಳಬೇಕಾದರೆ, ಯುವ ಪೀಳಿಗೆಯನ್ನು ಭವಿಷ್ಯ ಸಮಾಜಕ್ಕಾಗಿ ಬೌದ್ಧಿಕವಾಗಿ ಸಿದ್ಧಪಡಿಸುವ ಶಿಕ್ಷಣ ವ್ಯವಸ್ಥೆಯೂ ಅತ್ಯವಶ್ಯ.
ಶಿಕ್ಷಣದಲ್ಲಿ ಅಳವಡಿಸಲಾಗುವ ಪಠ್ಯಕ್ರಮಗಳು ಈ ದಿಕ್ಕಿನಲ್ಲಿದ್ದರೆ ಯಾವುದೇ ಸೈದ್ಧಾಂತಿಕ ಹಂಗು ಇಲ್ಲದೆಯೇ ಸಾಮಾಜಿಕ ಸ್ವಾಸ್ಥ್ಯವನ್ನು ಸಾಧಿಸಲು ಸಾಧ್ಯ. ಆದರೆ ಪ್ರಸ್ತುತ ವಿವಾದಕ್ಕೀಡಾಗಿರುವ ನೂತನ ಪಠ್ಯಕ್ರಮದ ಕೆಲವು ಪಾಠಗಳು ವಿರುದ್ಧ ದಿಕ್ಕಿನಲ್ಲಿವೆ. ಪಾರಂಪರಿಕ ಜ್ಞಾನ ಪಡೆದುಕೊಳ್ಳುವುದಕ್ಕೂ ಪರಂಪರೆಯೊಳಗಿನ ಅವೈಜ್ಞಾನಿಕ ಅಥವಾ ಜೀವ ವಿರೋಧಿ ಚಿಂತನೆಗಳನ್ನು ವೈಭವೀಕರಿಸುವುದಕ್ಕೂ ಅಪಾರ ಅಂತರವಿದೆ. ಮಹಿಳಾ ಸಮಾನತೆ ಮತ್ತು ಸಬಲೀಕರಣದ ಧ್ವನಿಗಳು ಇನ್ನೂ ಗಟ್ಟಿಯಾಗಬೇಕಾದ ಸಂದರ್ಭದಲ್ಲಿ ಪುರುಷ ಪ್ರಾಧಾನ್ಯತೆಯನ್ನು ಪೋಷಿಸುವ ಪಠ್ಯಗಳನ್ನು ಅಳವಡಿಸುವುದರಿಂದ ವಿಕಸನ ಹೊಂದಬೇಕಾದ ಯುವ ಮನಸುಗಳು ಸಾಂಸ್ಕೃತಿಕವಾಗಿ ಹಿಂದಕ್ಕೆ ಚಲಿಸಿಬಿಡುತ್ತವೆ. ಈ ಎಚ್ಚರ ಪಠ್ಯ ಕ್ರಮ ಪರಿಷ್ಕರಣ ಸಮಿತಿಯಲ್ಲಿ ಇರಬೇಕಾಗುತ್ತದೆ.
ಮೇಲಾಗಿ ಏಳು ಕೋಟಿ ಜನಸಂಖ್ಯೆ ಇರುವ ಮತ್ತು ಒಂದು ಶ್ರೀಮಂತ ಪರಂಪರೆಯ ಭಾಷೆಯನ್ನು ಹೊಂದಿರುವ ರಾಜ್ಯದಲ್ಲಿ ಭಾಷಾ ಪಠ್ಯಗಳನ್ನು ರಚಿಸಲು ಹಾಗೂ ಪರಿಷ್ಕರಿಸಲು ಆಳವಾದ ಅಧ್ಯಯನ ಮತ್ತು ಚಾರಿತ್ರಿಕ ಜ್ಞಾನ ಇರಬೇಕಾಗುತ್ತದೆ. ಶಿಕ್ಷಣವನ್ನು ಮಕ್ಕಳನ್ನು ಮುಂದಕ್ಕೆ ದಾಟಿಸುವ ಸೇತುವೆ ಎಂದು ಭಾವಿಸದೆ ಅವರ ಭವಿಷ್ಯವನ್ನು ನಿರ್ಮಿಸುವ ಸುಭದ್ರ ಬುನಾದಿ ಎಂದು ಪರಿಗಣಿಸುವ ಆಲೋಚನೆ ಇರಬೇಕಾಗುತ್ತದೆ. ಈ ಭವಿಷ್ಯದ ಹಾದಿಯಲ್ಲಿ ಪ್ರಾಚೀನ ಚಿಂತನೆಗಳ ಸಸಿಗಳನ್ನು ನೆಟ್ಟರೆ ಬೌದ್ಧಿಕವಾಗಿ ಸಮಾಜದ ಹಿಮ್ಮುಖ ಚಲನೆಗೆ ಮತ್ತಷ್ಟು ಪುಷ್ಟಿ ನೀಡಿದಂತಾಗುತ್ತದೆ. ಹಾಗಾಗಿಯೇ ಒಬ್ಬ ಪರಿಣತ ಶಿಕ್ಷಣ ತಜ್ಞರೇ ಪಠ್ಯಕ್ರಮ ಪರಿಷ್ಕರಣೆಯನ್ನು ನೆರವೇರಿಸಬೇಕಾಗುತ್ತದೆ. ಇದು ಆಗಿಲ್ಲದಿರುವುದರಿಂದಲೇ ಪ್ರಸ್ತುತ ಪರಿಷ್ಕರಣೆಗಳು ರಾಜಕೀಯ ಸಿದ್ಧಾಂತಗಳನ್ನು ಹೇರುವ ಒಂದು ಪ್ರಯತ್ನವಾಗಿ ಮಾತ್ರ ಕಾಣುತ್ತಿದೆ. ಈ ಸೂಕ್ಷ್ಮವನ್ನು ಶಿಕ್ಷಣ ಸಚಿವರಾದರೂ ಅರಿತಿರಬೇಕು.
ಕರ್ನಾಟಕದಲ್ಲಿ ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಬಲ್ಲ ಚಿಂತಕರು ಅನೇಕರಿದ್ದಾರೆ. ಎಡ-ಬಲದ ಹಂಗಿಲ್ಲದಂತಹ ಒಂದು ಸಮನ್ವಯದ ಪಠ್ಯಕ್ರಮವನ್ನು ರೂಪಿಸುವ ಬೌದ್ಧಿಕ ಸಂಪತ್ತು ನಮ್ಮ ನಡುವೆ ಜೀವಂತವಾಗಿದೆ. ಸಾಮಾಜಿಕ ನ್ಯಾಯ, ಸೋದರತ್ವ ಮತ್ತು ಬಹುಸಾಂಸ್ಕೃತಿಕ ನೆಲೆಗಳ ಸಮನ್ವಯತೆಯನ್ನು ಸಾಧಿಸುವ ನಿಟ್ಟಿನಲ್ಲಿ ಈ ಬೌದ್ಧಿಕ ನೆಲೆಗಳೇ ದಾರಿದೀಪವಾಗಬಲ್ಲವು. ಪೂರ್ವಗ್ರಹಗಳಿಲ್ಲದೆ, ರಾಜಕೀಯ ಸಿದ್ಧಾಂತಗಳ ಅಹಮಿಕೆಗೆ ಬಲಿಯಾಗದೆ ಯುವ ಪೀಳಿಗೆಯ ಉಜ್ವಲ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ನೀತಿಯನ್ನು ರೂಪಿಸುವ ಇಚ್ಚಾಶಕ್ತಿ ಸರ್ಕಾರದಲ್ಲಿ ಇರಬೇಕಿತ್ತು. ಇದು ಇಲ್ಲದಿರುವುದೇ ಪ್ರಸ್ತುತ ವಿವಾದಕ್ಕೂ ಕಾರಣವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್‌ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್ ಅಪಾರ್ಟ್‌ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.



