ದಿನದ ಸುದ್ದಿ
ಹನಿಗವಿತೆಗಳ ಸರದಾರ – ಜರಗನಹಳ್ಳಿ ಶಿವಶಂಕರ್
- ಕೆ.ರಾಘವೇಂದ್ರ ನಾಯರಿ, ದಾವಣಗೆರೆ
ನಾಡಿನ ಹಿರಿಯ ಸಾಹಿತಿಗಳಾದ ಜರಗನಹಳ್ಳಿ ಶಿವಶಂಕರ್ ಅವರ ನಿಧನ ಸಂದರ್ಭದಲ್ಲಿ ಅವರಿಗೆ ಅಕ್ಷರ ನಮನ
ಕನ್ನಡದ ನಾಡಿನ ಹಿರಿಯ ಕವಿ, ಚಿಂತಕ, ಖ್ಯಾತ ಹನಿಗವನ ರಚನೆಗಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜರಗನಹಳ್ಳಿ ಶಿವಶಂಕರ್ 05-05-2021 ರಂದು ನಿಧನರಾಗಿರುವುದು ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕೊರೋನಾ ಇನ್ನೊಬ್ಬ ಪ್ರತಿಭಾವಂತ ಸಾಹಿತಿಯ ಬಲಿ ಪಡೆದಿರುವುದು ಅತ್ಯಂತ ವಿಷಾದನೀಯ.
ನಾಡು ಕಂಡ ಅಪ್ರತಿಮ ಬಹುಮುಖ ಪ್ರತಿಭೆಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ. ಅವರ ಖ್ಯಾತ ಹನಿಗವನವಾದ “ಬಾಳಿಕೆ” ಯಲ್ಲಿ ಅವರು ಬರೆದಿರುವಂತೆ…
ಹತ್ತಾರು ವರುಷ
ನೆರಳಾಗಿ ನಿಂತ ಮರ
ತೊಲೆಯಾಗಿ ಉಳಿಯಿತು
ನೂರಾರು ವರುಷ
ನೂರು ವರುಷ
ಆಳಿದ ಅರಸ
ಹೆಣವಾಗಿ ಉಳಿಯಲಿಲ್ಲ
ಮೂರು ದಿವಸ... !
ಎಂಥಹ ಅದ್ಭುತವಾದ ಹನಿಗವನವಿದು. ಮನುಷ್ಯನ ಜೀವನದ ಸಾರ್ಥಕ್ಯದ ಕುರಿತಾಗಿ ನೇರವಾಗಿ ಬಾಣ ಹೊಡೆದು ಸಮಾಜವನ್ನು ಚಿಂತನೆಗೆ ದೂಡಿದ ಕವನವಿದು. ಮನುಷ್ಯನ ಕಳೇಬರ ಮೂರು ದಿವಸವೂ ಉಳಿಯುವುದಿಲ್ಲ. ಆದರೆ ಮರಗಿಡಗಳು ತಮ್ಮ ಅಳಿವಿನ ನಂತರವೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಮೂಲಕ ಮಾನವ ಸಂಕುಲಕ್ಕೆ ಸಹಕಾರಿಯಾಗಿರುತ್ತವೆ.
ಹಾಗೆಯೇ ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಮಾಡಿರುವ ಸಾಧನೆ, ಒಳ್ಳೆಯ ಕೆಲಸಗಳೇ ಆತನ ಹೆಸರನ್ನು ಅಜರಾಮರವಾಗುವಂತೆ ಮಾಡಬಲ್ಲದು ಎನ್ನುವುದು ಈ ಕವಿತೆಯ ಮೂಲಕವಾಗಿ ಕವಿಯ ಆಶಯವಾಗಿದೆ. ಈ ನಿಟ್ಟಿನಲ್ಲಿ ಜರಗನಹಳ್ಳಿಯವರು ತನ್ನದೇ ಹನಿಗವನದ ಆಶಯಕ್ಕೆ ತಕ್ಕಂತೆಯೇ ತನ್ನ ಜೀವನವನ್ನು ರೂಪಿಸಿಕೊಂಡವರು. ಅವರು ಬರೆದಿರುವ ಅಸಂಖ್ಯಾತ ಹನಿಗವನಗಳು, ಕವಿತೆಗಳು, ಬರಹಗಳು ಮತ್ತು ಅವರ ಕನ್ನಡದ ಸೇವೆ ಅವರ ಹೆಸರನ್ನು ಅಜರಾಮರವಾಗಿ ಜನರ ಮಧ್ಯೆ ಇಡುವುದರಲ್ಲಿ ಸಂಶಯವಿಲ್ಲ.
ಖ್ಯಾತ ಹನಿಗವನ ರಚನೆಕಾರರಾಗಿದ್ದ ಅವರ ಹನಿಗವನಗಳು ಅತ್ಯಂತ ಜನಪ್ರಿಯವಾಗಿದ್ದವು. ನಾನೂ ಸಹ ಎಷ್ಟೋ ಸಮಾರಂಭಗಳಲ್ಲಿ ಭಾಷಣ ಮಾಡುವಾಗ, ನಿರೂಪಣೆ ಮಾಡುವ ಸಂದರ್ಭಗಳಲ್ಲಿ ಅವರ ಹೆಸರನ್ನು ಮತ್ತು ಅವರ ಹನಿಗವನಗಳನ್ನು ಯಾವಾಗಲೂ ಬಳಸಿಕೊಳ್ಳುತ್ತಿದ್ದೆ. ಅಷ್ಟರ ಮಟ್ಟಿಗೆ ಅವುಗಳು ವೈಯಕ್ತಿಕವಾಗಿ ನನ್ನನ್ನು ತುಂಬಾ ಆಕರ್ಷಿಸಿದ್ದವು ಎಂದರೂ ತಪ್ಪಿಲ್ಲ.
ಅವರ ಹನಿಗವನಗಳಲ್ಲಿನ ವ್ಯಂಗ್ಯ, ವಿಡಂಬನೆ, ವಿನೋದ, ದಿಟ್ಟತನ, ವೈಚಾರಿಕತೆಯ ಜೊತೆಗೆ ಸಾಮಾಜಿಕ ಕಳಕಳಿಯನ್ನೂ ಸ್ಪಷ್ಟವಾಗಿ ಪ್ರತಿಬಿಂಬಿಸುತ್ತಿದ್ದವು. ಅವರನ್ನು ಅವರ ಹನಿಗವನಗಳ ಮೂಲಕ ನನಗೆ ಪರಿಚಯ ಮಾಡಿದವರು ಕೆನರಾಬ್ಯಾಂಕಿನ ವಿಶ್ರಾಂತ ವಿಭಾಗೀಯ ಪ್ರಬಂಧಕರು ಹಾಗೂ ಹಿರಿಯ ಸಾಹಿತಿಗಳಾದ ಎನ್.ಟಿ.ಎರ್ರಿಸ್ವಾಮಿಯವರು.
ಕೆನರಾ ಬ್ಯಾಂಕಿನಲ್ಲಿ 28 ವರ್ಷಗಳ ಕಾಲ ಅಧಿಕಾರಿಯಾಗಿ ಸೇವೆ ಮಾಡಿದ್ದ ಜರಗನಗಳ್ಳಿ ಶಿವಶಂಕರ್ ಅವರು ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ (2004-2008 ರ ಅವಧಿಯಲ್ಲಿ) ಕಾರ್ಯ ನಿರ್ವಹಿಸಿ ಕನ್ನಡ ನಾಡು ನುಡಿಗಳ ಕೈಂಕರ್ಯವನ್ನು ಪ್ರಾಮಾಣಿಕವಾಗಿ ಮತ್ತು ಬಲು ಪರಿಣಾಮಾಕಾರಿಯಾಗಿ ನಿರ್ವಹಿಸಿದ್ದರು.
ಕನ್ನಡಪರ ಹೋರಾಟಗಳಲ್ಲಿಯೂ ಸದಾ ಮುಂಚೂಣಿಯಲ್ಲಿದ್ದವರು ಜರಗನಹಳ್ಳಿ ಶಿವಶಂಕರ್ ಅವರು. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಕಾಸರಗೋಡಿನಲ್ಲಿ ನಡೆದ ಅಖಿಲ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ, ಕೋಲಾರ ಜಿಲ್ಲಾ ದ್ವಿತೀಯ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ, ಆಕಾಶವಾಣಿ, ದೂರದರ್ಶನ, ವಿಶ್ವವಿದ್ಯಾನಿಲಯ, ಅಕಾಡೆಮಿ, ದಸರಾ ಕವಿಗೋಷ್ಠಿಗಳ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಅಧ್ಯಕ್ಷ ಹಾಗೂ ಪ್ರತಿನಿಧಿಯಾಗಿ ಭಾಗಿಯಾಗಿ ಕಾರ್ಯನಿರ್ವಹಿಸಿದ ಅನುಭವ ಅವರದು.
ಕನ್ನಡದ ಹಲವಾರು ಪ್ರಮುಖ ದಿನಪತ್ರಿಕೆಗಳಲ್ಲಿ ಇವರ ಹನಿಗವಿತೆಗಳು, ಲೇಖನಗಳು ಸುಮಾರು 4 ದಶಕಗಳ ಕಾಲ ಪ್ರಕಟಗೊಂಡಿವೆ. ಅವರ ಕೃತಿಗಳಾದ “ಶುಭಾಂಗಿ” (ಕವಿತೆ – 1985 ರಲ್ಲಿ), “ಜೊತೆಯಾದವರು” (ಕವನ ವಿಮರ್ಶೆ – 1987 ರಲ್ಲಿ), “ಬುಗ್ಗೆ” (ಹನಿಗವಿತೆ – 1991 ರಲ್ಲಿ), “ಮಳೆ” (ಹನಿಗವಿತೆ – 2000 ರಲ್ಲಿ), “ಎರೆಹುಳು” (ಕವಿತೆ – 2001 ರಲ್ಲಿ), “ಆಲಿಕಲ್ಲು” (ಹನಿಗವಿತೆ), “ಮರಗಳು” (ಹನಿಗವಿತೆ – 1998 ರಲ್ಲಿ), “ಝರಿ” (ಹನಿಗವಿತೆ – 2002 ರಲ್ಲಿ), “ಭಾವ-ಬದುಕು” (ಅಂಕಣ ಬರಹಗಳು – ತರಂಗ), “ದೇವರ ನೆರಳು” (ದೇವರ ಕವಿತೆಗಳು – 2004 ರಲ್ಲಿ), “ನೆನಪಿನ ನೆಂಟರು” (ಅಂಕಣ ಬರಹಗಳು – ವಿಜಯ ಕರ್ನಾಟಕ 2007 ರಲ್ಲಿ), “ತುಂತುರು” (ಅಭಿನಂದನಾ ಗ್ರಂಥ – 2009 ರಲ್ಲಿ), “ಹೊಳೆ” (ಹನಿಗವಿತೆ – 2011 ರಲ್ಲಿ), “ಜಾತಕ” (ಅಂಕಣ ಬರಹಗಳು – ಕರ್ಮವೀರ 2011 ರಲ್ಲಿ) ಜನಮಾನಸದಲ್ಲಿ ಅತ್ಯಂತ ಜನಪ್ರಿಯವಾಗಿದ್ದವು. ಅವರ ಹನಿಗವನಗಳು ಈಗಲೂ ಸಾವಿರಾರು ಜನರ ಬಾಯಲ್ಲಿ ಹರಿದಾಡುತ್ತಿವೆ.
ಅವರ ಪ್ರಸಿದ್ಧ ಹನಿಗವಿತೆಗಳು
1. ಅಂತರ
=========
ಏರಿದರೆ
ಮಂಚ, ಗದ್ದುಗೆ, ಸಿಂಹಾಸನ
ಹೆಚ್ಚೆಂದರೆ
ಎರಡು ಮೂರಡಿ ಮೇಲೆ
ಜಾರಿದರೆ
ಗೋರಿ, ಸಮಾಧಿ, ಬೃಂದಾವನ
ಹೆಚ್ಚೆಂದರೆ
ಎರಡು ಮೂರಡಿ ಕೆಳಗೆ !
2. ದೇಹ
=======
ಈ ದೇಹ
ಹುಟ್ಟಿಗೆ ಮೊದಲು
ಕಣ್ಣಿಗೆ ಕಾಣದ
ಒಂದು ಕಣ
ಸತ್ತ ಮೇಲೆ
ಒಂದು ದಿನವೂ
ಉಳಿಯದ ಹೆಣ
ಬದುಕಿರುವಾಗ
ಬ್ರಹ್ಮಾಂಡವನ್ನೇ
ಬಯಸುವ ಗುಣ !
3. ಮಾತೃಛಾಯ
============
ತೊನೆಯದಿದ್ದರೂ
ಹಣ್ಣು ಕಾಯಿ ಹೂಗಳನ್ನು
ಬಿದಿರು
ತೊಟ್ಟಿಲಾಗಿ ತೂಗುವುದು
ಮಕ್ಕಳನ್ನು
ಬುಟ್ಟಿಯಾಗಿ ಹೊರುವುದು
ಹಣ್ಣು ಕಾಯಿ ಹೂಗಳನ್ನು !
4. ಹಣತೆ
=======
ಕುಂಬಾರರು ಮಾಡಿದ ಹಣತೆಗೆ
ಗಾಣಿಗರ ಎಣ್ಣೆಯ ತುಂಬಿ
ಒಕ್ಕಲಿಗರು ಬೆಳೆದ ಹತ್ತಿಯ ಹೊಸೆದು
ಬತ್ತಿಯ ಮಾಡಿ ದೀಪವ ಹಚ್ಚಿದರೆ
ಹಲವು ಜಾತಿಗಳು ಕೂಡಿ
ಕುಲಗೆಟ್ಟ ಬೆಳಕು ನೋಡ !
5. ಆಕಾರ
=======
ದೊಡ್ಡ ಆನೆ ಒಂಟೆಯಲ್ಲಿಲ್ಲದ ವಿಷ
ಸಣ್ಣ ಹಾವು ಚೇಳಿನೊಳಗೆ ಬಂತು
ಉದ್ದ ತಾಳೆ ತೆಂಗಿಗಿಲ್ಲದ ಖಾರ
ಗಿಡ್ಡ ಮಣಸಿನ ಗಿಡದೊಳಗೆ ಬಂತು
ಬೆಟ್ಟಕ್ಕೆ ಸಲ್ಲದ ಭಯ ಭೀತಿ
ಅದರ ಸಣ್ಣ ಕವಣೆ ಕಲ್ಲಿಗೆ ಬಂತು !
6. ವಿಪರ್ಯಾಸ
============
ಒಳಗೆ ಬೇಕು ಅನ್ನ
ಹೊರಗೆ ಬೇಕು ಚಿನ್ನ
ಏನು ಇದರ ಮರ್ಮ
ಹೊರಗೆ ಕಿಸಿವ ಹಲ್ಲು
ಒಳಗೆ ಮಸೆವ ಕಲ್ಲು
ಇದು ಯಾವ ಧರ್ಮ
ತಾನೆ ಬೆಳೆದ ಅತ್ತಿಹಣ್ಣ
ನೋಡಿ
ನಾಚಿ ಕುಳಿತ ಬ್ರಹ್ಮ !
ಅವರ ಕವಿತೆಗಳ ಹಿಂದೆ ಭಾಷೆಯನ್ನು ಮತ್ತು ಭಾವನೆಗಳನ್ನು ಆಳವಾಗಿ ಗ್ರಹಿಸುವ ಪ್ರಯತ್ನವಿರುತಿತ್ತು. ಮಾನವೀಯ ಸಂಬಂಧಗಳ ನಡುವಿನ ಮಾನವನ ವಕ್ರ ನಡತೆಗಳ ವ್ಯಂಗ ಚಿತ್ರವನ್ನು ಅತ್ಯಂತ ಸ್ಪಷ್ಟವಾಗಿ ಅಭಿವ್ಯಕ್ತಿಸುತ್ತಿದ್ದರು. ಅವರ ಹನಿಗವನಗಳಲ್ಲಿ ಅವರದೇ ಆದ ದೃಷ್ಟಿಕೋನ, ಮೊನಚಾದ ವೈಚಾರಿಕತೆ, ಚುಚ್ಚುವಂತಹ ವಿಡಂಬನೆ, ಸರಳವಾದ ಭಾಷೆ, ಶುದ್ಧವಾದ ಜಾತ್ಯಾತೀತ ಭಾವನೆ, ಮೊನಚು, ಆಶ್ಚರ್ಯ, ಅನುಕಂಪಗಳನ್ನು ಹೇರಳವಾಗಿ ಕಾಣಬಹುದಾಗಿತ್ತು.
ಒಟ್ಟಿನಲ್ಲಿ ಅವರ ಕೃತಿಗಳು ಪ್ರೀತಿಸಲು ಆತ್ಮೀಯವಾಗಿ ಅನುಭವಿಸಲು ಯೋಗ್ಯವಾಗಿವೆ. ಇವರ ಹನಿಗವನಗಳು ತುಮಕೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರ ಹನಿಗವನಗಳ ಸಂಕಲನ “ಝರಿ” ಉರ್ದು, ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಗುಜರಾತಿ ಭಾಷೆಗಳಿಗೂ ಅನುವಾದಗೊಂಡಿದೆ.
ಜರಗನಹಳ್ಳಿ ಶಿವಶಂಕರ್ ಅವರಿಗೆ ಕರ್ನಾಟಕ ಸರಕಾರದಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2005), ದಿನಕರ ದೇಸಾಯಿ ಸಾಹಿತ್ಯ ಪ್ರಶಸ್ತಿ (2006) ಸೇರಿದಂತೆ ಚುಟುಕು ರತ್ನ, ಗೊರೂರು ಸಾಹಿತ್ಯ ಪ್ರಶಸ್ತಿ, ಬೆಂಗಳೂರು ಮಹಾನಗರ ಪಾಲಿಕೆಯಿಂದ ಕೆಂಪೇಗೌಡ ಪ್ರಶಸ್ತಿ, ಸಾಹಿತ್ಯ ಸೇತು ಪ್ರಶಸ್ತಿ, ದುಬೈ ಧ್ವನಿ ಪ್ರತಿಷ್ಠಾನದ ಧ್ವನಿ ಪುರಸ್ಕಾರ, ಸುವರ್ಣ ಕರ್ನಾಟಕ ಭೂಷಣ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿವೆ. 2004, 2008 ಮತ್ತು 2010 ರಲ್ಲಿ ದುಬೈ ಹಾಗೂ ಶಾರ್ಜಾ ದೇಶಗಳಿಗೆ ಪ್ರವಾಸ ಮಾಡಿ ಉಪನ್ಯಾಸ ನೀಡಿದ ಅನುಭವವೂ ಅವರಿಗಿತ್ತು.
ಇಂತಹ ಕನ್ನಡದ ಮೇರು ಪ್ರತಿಭೆ ಕೊರೋನಾದಿಂದಾಗಿ ನಮ್ಮನ್ನು ಅಗಲಿರುವುದು ಎಲ್ಲ ಕನ್ನಡ ಅಭಿಮಾನಿಗಳಿಗೆ ಅತೀವ ದುಃಖವಾಗಿದೆ. ಅವರ ನೆನಪು ಹಾಗೂ ಹೆಸರು ನಮ್ಮ ಹೃದಯಂಗಳದಲ್ಲಿ ಅಜರಾಮರವಾಗಿ ಉಳಿಯಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಹಳೆ ಪಿಂಚಣಿ ಪದ್ಧತಿ ಮರುಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ನಿರ್ಣಯ
ಸುದ್ದಿದಿನಡೆಸ್ಕ್:ಹಳೆ ಪಿಂಚಣಿ ಪದ್ಧತಿ ಮರು ಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ವಿವಿಧ ಹಂತಗಳಲ್ಲಿ ಹೋರಾಟ ಸೇರಿದಂತೆ ಇನ್ನಿತರೆ ನಿರ್ಣಯಗಳಿಗೆ ಬೆಂಬಲ ಸೂಚಿಸಲು ದಾವಣಗೆರೆಯಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆ ನಿರ್ಧರಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗದು ರಹಿತ ಚಿಕಿತ್ಸೆ ಯೋಜನೆಯ ತ್ವರಿತ ಜಾರಿಗೆ ಒತ್ತಾಯಿಸುವುದು, 2026ಕ್ಕೆ ಕೇಂದ್ರ ಸರ್ಕಾರದ ಮಾದರಿ ವೇತನಕ್ಕಾಗಿ ಹೋರಾಟ ರೂಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಿ ಆಂಡ್ ಆರ್ ನಿಯಮಕ್ಕೆ ತಿದ್ದುಪಡಿ ತರುವಂತೆ ಆಗ್ರಹಿಸಿ, ನಡೆಸಲಾಗುವ ಹೋರಾಟವನ್ನು ಬೆಂಬಲಿಸುವುದು, ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್‌ಗಳಿಗೆ ಶೀಘ್ರವೇ ಹಣ ಬಿಡುಗಡೆ ಮಾಡಿಸುವ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಸಿ.ಎಸ್.ಷಡಕ್ಷರಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಬೈಲಹೊಂಗಲದಲ್ಲಿ ಚಾಲನೆ
ಸುದ್ದಿದಿನಡೆಸ್ಕ್:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2025ಕ್ಕೆ ಇಂದು ಮುಂಜಾನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿಯಲ್ಲಿ ಅದ್ದೂರಿ ಚಾಲನೆ ನೀಡಲಾಯಿತು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ಉತ್ಸವವು ಪ್ರತಿವರ್ಷದಂತೆ ಸಾಂಪ್ರದಾಯಿಕವಾಗಿ ಆರಂಭಗೊಂಡಿದೆ. ಸಂಗೊಳ್ಳಿಯ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪ್ರಾತಃಕಾಲದ ಪೂಜೆ ಸಲ್ಲಿಸಲಾಯಿತು.
ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಜ್ಯೋತಿಯನ್ನು ಸ್ವಾಗತಿಸಿದರು. ಉಪ ವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ, ಸಂಗೊಳ್ಳಿ ರಾಯಣ್ಣ ಸ್ಮಾರಕ ಭವನದ ಆವರಣದಲ್ಲಿ ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು. ಬಳಿಕ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಜಾನಪದ ಕಲಾವಾಹಿನಿಗೆ ಚಾಲನೆ ನೀಡಿದರು.
ಪೂರ್ಣ ಕುಂಭ ಹೊತ್ತ ಮಹಿಳೆಯರು, ಪೂಜಾ ಕುಣಿತ, ನಂದಿಕೋಲು, ವೀರಗಾಸೆ, ಡೊಳ್ಳು, ಬೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಉತ್ಸವಕ್ಕೆ ಮೆರುಗು ತಂದಿತು. ಸಂಗೊಳ್ಳಿ ರಾಯಣ್ಣ ಸ್ಮಾರಕದ ಬಳಿಯಿಂದ ಆರಂಭಗೊಂಡ ಕಲಾವಾಹಿನಿಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಇಂದು ಸಂಜೆ 8 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉತ್ಸವದ ಅಧಿಕೃತ ಉದ್ಘಾಟನೆ ನೆರವೇರಿಸಲಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ನಾಳೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ವೀರರ ಸ್ಮರಣಾರ್ಥ ದೀಪೋತ್ಸವ, ರಾಯಣ್ಣನ ಕುರಿತಾದ ವಿಚಾರ ಸಂಕಿರಣ, ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಸೇರಿದಂತೆ ಇತರೆ ಸ್ಪರ್ಧೆಗಳು ನಡೆಯಲಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ನಾಳೆಯಿಂದ ಜಗಳೂರಿನಲ್ಲಿ ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನ
ಸುದ್ದಿದಿನ,ದಾವಣಗೆರೆ:ಜಗಳೂರು ಪಟ್ಟಣದಲ್ಲಿ ಜನವರಿ 11 ಮತ್ತು 12 ರಂದು ಜಗಳೂರು ಪಟ್ಟಣದ ಬಯಲು ರಂಗಮಂದಿರದಲ್ಲಿ ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಜನವರಿ 11 ರಂದು ಬೆಳಿಗ್ಗೆ 8 ಗಂಟೆಗೆ ಅಪರ ಜಿಲ್ಲಾಧಿಕಾರಿ ಪಿ ಎನ್ ಲೋಕೇಶ್ ರಾಷ್ಟ್ರ ಧ್ವಜಾರೋಹಣ ನೆರೆವೇರಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪ ಪರಿಷತ್ತಿನ ಧ್ವಜಾರೋಹಣ ನೆರೆವೇರಿಸುವರು.ಜಗಳೂರು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ನಾಡ ಧ್ವಜಾರೋಹಣ ನೆರೆವೇರಿಸುವರು. ನವಚೇತನ ಶಾಲೆಯ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ, ನಾಡಗೀತೆ ಹಾಡುವರು.
ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ತಾಯಿ ಭುವನೇಶ್ವರಿ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡುವರು.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷರಾದ ಲೋಕಮ್ಮ ಜೆ ಸಿ ಓಬಣ್ಣ, ಡಿ.ಡಿ.ಪಿ.ಯು ಕರಿಸಿದ್ದಪ್ಪ ಎಸ್.ಜಿ, ಡಿ.ಡಿ.ಪಿ.ಐ ಕೋಟ್ರೇಶ್.ಜಿ, ಜಗಳೂರು ವೃತ್ತ ನಿರೀಕ್ಷಕರು ಶ್ರೀನಿವಾಸರಾವ್, ತಾಲ್ಲೂಕು ಪಂಚಾಯಿತಿ, ಸಿ.ಇ.ಓ ಕೆಂಚಪ್ಪ, ಜಗಳೂರು ಬಿ.ಇ.ಓ ಹಾಲಮೂರ್ತಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಬೀರೇಂದ್ರ ಕುಮಾರ್ ಭಾಗವಹಿಸುವರು. ಮೆರವಣಿಗೆ ತಾಲೂಕು ಕಚೇರಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಬಯಲು ರಂಗಮಂದಿರವರೆಗೆ ತಾಯಿ ಭುವನೇಶ್ವರಿ ಮೆರವಣಿಗೆ ನಡೆಯುತ್ತದೆ.
ಡೊಳ್ಳು ಕುಣಿತ,ಹಗಲುವೇಷ, ಬೊಂಬೆ ಮೇಳ, ಉರುಮೆ, ತಪ್ಪಡಿ, ಕಹಳೆ, ವೀರಗಾಸೆ, ಕರಡಿ ಮಜಲು, ನಂದಿಧ್ವಜ, ಭಜನೆ, ಕೋಲಾಟ, ಎತ್ತಿನಗಾಡಿಗಳ ಮೆರವಣಿಗೆ, ಮಹಿಳೆಯರಿಂದ ಪೂರ್ಣಕುಂಭ, ಇಲಾಖೆಗಳ ಸ್ತಬ್ಧ ಚಿತ್ರಗಳು ಇತ್ಯಾದಿ.
ಬೆಳಿಗ್ಗೆ 11 ಗಂಟೆಗೆ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸಾಹಿತಿಗಳಾದ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸುವರು. ಜಗಳೂರು ಶಾಸಕರಾದ ಬಿ.ದೇವೆಂದ್ರಪ್ಪ ಅಧ್ಯಕ್ಷತೆ ವಹಿಸುವರು.
ಸಂಸ್ಕøತಿ ಚಿಂತಕರು ಸಾಹಿತಿಗಳಾದ ಡಾ.ಎ.ಬಿ.ರಾಮಚಂದ್ರಪ್ಪ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ವಾಮದೇವಪ್ಪ ಆಶಯ ನುಡಿಗಳಾನ್ನಾಡುವರು. ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಮಹಲಿಂಗರಂಗ ವೇದಿಕೆಯನ್ನು ಉದ್ಘಾಟಿಸುವರು. ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಚಿನ್ನಹಗರಿಯ ನುಡಿ ತೇರು ಸ್ಮರಣ ಸಂಚಿಕೆಯ ಲೋಕಾರ್ಪಣೆ ಮಾಡುವರು. ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಜೆ.ಎಂ ಇಮಾಮ್ ಮಹಾದ್ವಾರವನ್ನು ಉದ್ಘಾಟಿಸುವರು.
ಕ.ಸಾ.ಪ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ವಿದ್ಯಾರತ್ನ ಡಾ.ಟಿ.ತಿಪ್ಪೇಸ್ವಾಮಿ ಸಭಾಂಗಣವನ್ನು ಉದ್ಘಾಟಿಸುವರು. ನಿಕಟ ಪೂರ್ವ ಸಮ್ಮೇಳಧ್ಯಕ್ಷರಾದ ಪ್ರೊ.ಸಿ.ವಿ ಪಾಟೀಲ್ ಕನ್ನಡ ಧ್ವಜ ಹಸ್ತಾಂತರ ಮಾಡುವರು. ಜಗಳೂರು ಕ್ಷೇತ್ರದ ಮಾಜಿ ಶಾಸಕರಾದ ಟಿ.ಗುರುಸಿದ್ದನಗೌಡ, ಎಸ್.ವಿ ರಾಮಚಂದ್ರಪ್ಫ, ಹೆಚ್.ಪಿ.ರಾಜೇಶ್ ಕೃತಿಗಳ ಲೋಕಾರ್ಪಣೆ ಮಾಡುವರು.
ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಪ್ರೊ.ಎಸ್.ಬಿ ರಂಗನಾಥ್ ಪುಸ್ತಕ ಮಳಿಗೆ ಉದ್ಘಾಟಿಸುವರು. ಜಗಳೂರು ಪಟ್ಟಣದ ಅಧ್ಯಕ್ಷರಾದ ಕೆ.ಎಸ್ ನವೀನ್ ಕುಮಾರ್ ಡಾ.ಎಂ.ಜಿ.ಈಶ್ವರಪ್ಪ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಹೊನ್ನಾಳಿ ಶಾಸಕರಾದ ಡಿ.ಜಿ.ಶಾಂತನಗೌಡ, ಹರಿಹರ ಶಾಸಕರಾಧ ಬಿ.ಪಿ ಹರೀಶ್, ಚನ್ನಗಿರಿ ಶಾಸಕರಾದ ಬಸವರಾಜ ವಿ. ಶಿವಗಂಗ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಅಸಗೋಡು ಜಯಸಿಂಹ, ತಾಂಡ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎನ್ ಜಯದೇವ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್ ನವೀನ್, ನಾ.ರವಿಕುಮಾರ, ಡಿ.ಟಿ.ಶ್ರೀನಿವಾಸ್, ಡಾ.ಚಿದಾನಂದ ಎಂ.ಗೌಡ, ಜಿ.ಸ.ನೌ ಸಂಘದ ಅಧ್ಯಕ್ಷರಾದ ವೀರೇಶ್ ಎಸ್ ಒಡೇನಪುರ, ಜಿಲ್ಲಾ ವರದಿಗಾರರ ಕೂಟ ನಾಗರಾಜ್.ಎಸ್ ಬಡದಾಳ್, ಯುವ ಮುಖಂಡರಾದ ಕೆ.ಪಿ ಪಾಲಯ್ಯ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಮಂಜುನಾಥ ಕುರ್ಕಿ, ತಾ.ಸ.ನೌ ಸಂಘದ ಎ.ಎಲ್ ತಿಪ್ಪೇಸ್ವಾಮಿ, ಕಾರ್ಯಕಾರಿ ಸಮಿಯಿಯ ಅಧ್ಯಕ್ಷರಾದ ಜಿ.ರುದ್ರಯ್ಯ, ಪ್ರಗತಿಪರ ಕೃಷಿಕರು ಕಲ್ಲೇರುದ್ರೇಶ್ ಪಾಲ್ಗೋಳ್ಳುವರು.
ಮಧ್ಯಾಹ್ನ 2 ಗಂಟೆಗೆ ಗೋಷ್ಠಿ-1ರಲ್ಲಿ. ಸಾಹಿತ್ಯ ಮತ್ತು ಸಾಮಾಜಿಕ ನೆಲೆಗಳು, ಮಧ್ಯಾಹ್ನ 3:45 ಕ್ಕೆ ಗೋಷ್ಠಿ -2ರಲ್ಲಿ ಸೌಹಾರ್ದತೆ- ಸಮಾನತೆ-ಸಾಮಾಜಿಕ ನ್ಯಾಯ, ಗೋಷ್ಠಿ-3ರಲ್ಲಿ ಸಂಜೆ 5.30ಕ್ಕೆ ದಾವಣಗೆರೆ ಜಿಲ್ಲೆಯ ಐತಿಹಾಸಿಕ ನೆಲೆಗಳು, ಗೋಷ್ಠಿಗಳು ನಡೆಸಲಾಗುವುದು.
ಸಂಜೆ 6:15 ಗಂಟೆಗೆ ಜಗಳೂರು ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ ಕಾರ್ಯಕ್ರಮ ಇರುತ್ತದೆ. ನಂತರ ಡಾ. ಶುಭಾ ಮರವಂತೆ, ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಹಾಸ್ಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243