ಭಾವ ಭೈರಾಗಿ
ಕವಿತೆ | ವಿರಹ ಲೇಖನ

- ಪಂಜಾಬಿ ಮೂಲ : ಭಾಯಿ ವೀರ್ ಸಿಂಘ್, ಕನ್ನಡಕ್ಕೆ : ಎಸ್.ಮಾಲತಿ
ಓ ಜ್ಯೋತಿಷಿ ಜಾತಕವನ್ನು ನೋಡು
ನನ್ನ ಭಾಗ್ಯದಲ್ಲಿ ಎಷ್ಟು ವಿರಹವಿದೆ ನೋಡು.
ಓ ಜ್ಯೋತಿಷಿ ನೀನು ಕಣಿ ಹೇಳು
ನನ್ನ ಪ್ರಿಯ ಮನೆಗೆ ಬರುವುದು ಯಾವಾಗ
ಓ ಜೋಗಿ ದುಃಖವಿಲ್ಲದವನ ಬಗ್ಗೆ ಹೇಳು
ವಿರಹದ ದುಃಖ ಕಳೆಯುವುದು ಎಂದು.
ನನ್ನ ಪ್ರಿಯತಮನ ಪ್ರೇಮ ಫಕೀರನೇ
ನನ್ನ ವಿರಹ ರೇಖೆಯನ್ನು ಅಳಿಸಿಹಾಕು.
ಸಂತನೇ, ನನ್ನ ವಿರಹದ ಲೇಖನ ಅಳಿಸಿ ಹೋಗುವ ಹಾಗೆ ನೀನೊಂದು ಹೊಡೆತವನ್ನು ಹೊಡೆ.
ಹೃದಯದ ವೇದನೆಯನ್ನು ಯಾರೂ ಕೇಳುವುದಿಲ್ಲ
ಯಾರೂ ಕರೆಯುವುದಿಲ್ಲ. ಪ್ರೀತಿಸುವುದಿಲ್ಲ
ಮನಸ್ಸನ್ನು ರಮಿಸಿ ಬಳಲಿದ್ದೇನೆ
ಬದುಕಿದ್ದೇನೆ ಬರೀ ಆಸೆ ಹೊತ್ತು
ನಿನ್ನ ಸುಖ ಸಂದೇಶಕ್ಕಾಗಿ ಕಾಯುತ್ತ
ನಿನ್ನ ದರ್ಶನದ ಪ್ರತೀಕ್ಷೆಯಲ್ಲೇ ಕುಳಿತಿದ್ದೇನೆ.
ನಿರೀಕ್ಷೆಯಲ್ಲಿಯೇ ವಯಸ್ಸು ಕಳೆಯುತ್ತಿದೆ
ಈಗ ನಿರೀಕ್ಷೆಯ ಸಾಮರ್ಥ್ಯ ಸ್ವಲ್ಪವೂ ಉಳಿದಿಲ್ಲ
ನೀನಾಗಿಯೇ ಬಂದುಬಿಡು ಪ್ರಿಯತಮನೇ
ಪ್ರೀತಿಸುವುದರಲ್ಲಿ ಹೊತ್ತು ಮಾಡಬೇಡ.
ನಿನ್ನಲ್ಲಿ ನಿವೇದಿಸುತ್ತಿದ್ದೇನೆ, ನಾ ನಿನ್ನ ದಾಸಿ
ಕೊನೆವರೆಗೆ ನಿನ್ನನ್ನೇ ಅನುಸರಿಸುವವಳು ನಾನು.
(ಈ ‘ ವಿರಹ ಲೇಖನ’ ಕವಿತೆಯನ್ನು ‘ ನನ್ನ ಪ್ರಿಯತಮನೇ ಬಾಳು‘, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಪಂಜಾಬಿ ಕವಿತೆಗಳು ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಅವಳೀಗ ಕಾಯುವುದಿಲ್ಲ

- ಶಮೀಮ ಕುತ್ತಾರ್, ಮಂಗಳೂರು
ಬೆಳಕು ಬರಲೆಂದು
ಕಿಟಕಿಯನ್ನೊಂಚೂರು
ಸರಿಸಹೊರಟಿದ್ದಳು…
ಒಳಗಿನಿಂದಲೇ ಸರಪಳಿಗಳು
ಕೈಗಳ ಬಿಗಿದಾಗ
ಬೆಳಕಿಗಿಂತ ಬಿಡುಗಡೆಯೇ
ಸಾಕೆನಿಸಿತ್ತು.
ಬಯಕೆಗಳು ಶಾಪವಾದಾಗ
ಇರವನ್ನೂ ಮರೆಯಬೇಕವಳು
ಓದಿ ಮುಗಿಸಲಾಗದ
ಇತಿಹಾಸದ ಮೌನಗಳಲ್ಲಿ
ಅಹಲ್ಯೆ ಕಲ್ಲಾದಂತೆ.
ಬಲದ ಬಲೆಯಾಗಿ
ಬಗಲಲ್ಲಿ ಬೀಳುವಾಗ
ಮೋಹ ಮರೆತ ದ್ರೌಪದಿ
ಐವರ ಮಡದಿಯಾದಂತೆ.
ನೆನಪುಗಳ ವಿಲೇವಾರಿಯಲ್ಲಿ
ನೋವಿನ ಲೆಕ್ಕ ಕೇಳುವ
ಬದುಕ ವಹಿವಾಟುಗಳಲ್ಲಿ
ಅವಳಿಗಷ್ಟೇ ದಕ್ಕುವ ಉತ್ತರಗಳು.
ಹೆಣ್ಣು ಕ್ರಾಂತಿಯಾಗಲು
ಕಾರಣಗಳನ್ನು ಕಾಲವೇ ಸೃಷ್ಟಿಸಿತು..
ಯಾವ ದಿಕ್ಕಿನಿಂದ ಬೀಸಿದರೂ
ವಿಳಾಸದ ಹಂಗಿಲ್ಲದ ಗಾಳಿಯಂತೆ.
ಮುಹಬ್ಬತಿನಲ್ಲಿ ಮುಳುಗಿಸುವ
ಅವಳೊಲುಮೆಯ ಟಪಾಲನ್ನು
ಜತನದಿಂದ ಕಾಯಬೇಕಿತ್ತು
ಲೋಕ,
ಅರುಂಧತಿ ನಕ್ಷತ್ರದಂತೆ..
ಆದರೆ ಲೋಕದ ಕಣ್ಣಿಗೆ
ಅವಳು ಹೆಣ್ಣು…
ಹಾಗಾಗಿ ಈಗೀಗ ಅವಳು
ಇದ್ಯಾವುದನ್ನೂ ಕಾಯುವುದಿಲ್ಲ..
ಎದೆಗೆ ಬಿದ್ದ ಸಾವಿತ್ರಿಯ ಅಕ್ಷರಗಳು
ಕಾಲಾಂತದಲ್ಲಿ ಅವಳ
ಯೋಚನೆಗೆ ಉಸಿರಾದರೆ,
ಕಾಲ ಕಳೆದು ಕೂಡಿಸಿದ
ಅವಳ ಮಾತು-ಮೌನಗಳು
ಕಾಲಾತೀತವಾಗಿ ಬೆಳೆದು
ಕಿಟಕಿಯಲ್ಲಿ ಹುಡುಕಿದ ಬೆಳಕಿಗೆ
ಹೆಬ್ಬಾಗಿಲು ತೆರೆದುಕೊಂಡಿತು…(ಕವಯಿತ್ರಿ- ಶಮೀಮ ಕುತ್ತಾರ್
ಮಂಗಳೂರು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಇಷ್ಟಂತೂ ಹೇಳಬಲ್ಲೆ..!

- ರಂಗಮ್ಮ ಹೊದೇಕಲ್, ತುಮಕೂರು
ನಾವು
ಗುಡಿಸಲಿನಲ್ಲಿ ಹುಟ್ಟಿ
ಅವ್ವನೆದೆಯ ಹಾಲು ಕುಡಿದು
ಗೋಣಿತಾಟಿನ ಮೇಲೆ ಮಲಗಿ
ನಕ್ಷತ್ರ ಎಣಿಸಿದವರು!
ಚೀಕಲು ರಾಗಿಯ ಅಂಬಲಿ ಕುಡಿದು
ತಂಗಳು ಹಿಟ್ಟಿಗೆ ಉಪ್ಪು ಸವರಿ
ಹಸಿವ ನೀಗಿಸಿಕೊಂಡವರು
ದಾಹಕ್ಕೆ ಕಣ್ಣೀರನ್ನೇ ಕುಡಿದವರು!
ದಾಸಯ್ಯನಂತಹ ಅಪ್ಪ
ಭೂಮ್ತಾಯಿಯಂತಹ ಅವ್ವ
ಎದೆಗಿಳಿಸಿದ್ದು
ಅಕ್ಷರ ಮತ್ತು ಅಂತಃಕರಣ!
ಯಾರು ಯಾರೋ ಕೊಟ್ಟ
ಹರಿದ ಚೀಲ,ಮುರುಕು ಸ್ಲೇಟು
ತುಂಡು ಬಳಪ,ಬಳಸಿ ಎಸೆದ ಬಟ್ಟೆ
ನಮ್ಮ ಪ್ರಿಯವಾದ ಆಸ್ತಿಗಳು!
ಬುಡ್ಡಿದೀಪದ ಬೆಳಕಿನಲ್ಲಿ
ಅಕ್ಷರಗಳ ಜೊತೆ ಆಡಿದ ನಾವು
ಯಾರದೋ ಸಂಭ್ರಮದಲ್ಲಿ
ಉಳಿದ ಅನ್ನಕ್ಕೆ ಕಾದಿದ್ದು
ಇನ್ನೂ ಹಸಿಯಾಗಿದೆ!
ಯಾರದೋ ಜಮೀನಿಗೆ
ಬೆವರು ಬಸಿದ
ಅಪ್ಪ ಅವ್ವ
ಅರ್ಧ ಉಂಡು ಕಣ್ಣೀರಾದದ್ದೂ
ನೆನಪಿದೆ!
ಅಂದೂ ನಾವು
ಶಾಪವಾಗಲಿಲ್ಲ
ಕೇಡನ್ನೂ ಹಾಡಲಿಲ್ಲ!
ಉಪ್ಪಿಟ್ಟಿನಿಂದ ಅನ್ನಕ್ಕೆ ಬದಲಾದ
ಈ ಯುಗದಲ್ಲಿಯೂ
ನೀವು ನಿಮಗೆ ಪರಂಪರೆಯಿಂದ ಬಂದಿರುವ ಆಸ್ತಿ,ಅಂತಸ್ತು
ಸೇವಕರು…ಇತ್ಯಾದಿತ್ಯಾದಿಗಳನ್ನು
ಪ್ರದರ್ಶಿಸುತ್ತಲೇ ಇದ್ದೀರಿ!
ಸಹ್ಯವಾಗದ ಅಸ್ತ್ರಗಳನ್ನೇ
ನೀವು ಮಸೆಯುವಾಗ
ನಿಮ್ಮ ಅಜ್ಞಾನಕ್ಕೂ ನಮ್ಮ ಅನುಕಂಪವಿದೆ!
ನಾವು ಈ ನೆಲದ ಮಕ್ಕಳು
ಬೆಂಕಿಯೂ.ಬೆಳಕೂ ಆಗಬಲ್ಲ ಕಿಡಿಗಳು
ಭದ್ರ ಬೇರೂರಿ ಆಕಾಶಕ್ಕೆ ಚಿಮ್ಮಿ
ನಿಮ್ಮ ಕಣ್ಣಲ್ಲೂ ಮತಾಪು ಹೊತ್ತಿಸಬಲ್ಲವರು!! (ರಂಗಮ್ಮ ಹೊದೇಕಲ್, ತುಮಕೂರು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಚಳಿಗಾಲದ ಎರಡು ಜೀವರಸಗಳು

- ಜಿ. ದೇವೂ ಮಾಕೊಂಡ
ನಮ್ಮಿಬ್ಬರ ಸಂಗಮಕ್ಕೆ ಈ ಚಳಿಗಾಲ
ಎಷ್ಟೊಂದು ನಿಶಬ್ದವಾಗಿ ಕರೆಯುತ್ತಿದೆ
ಒಂದು ಕಡೆ ಕಾಫಿಯ ಸ್ವಾಗತ
ಮತ್ತೊಂದು ಕಡೆ ಮುತ್ತಿನ ಸೆಳೆತ.
ಯಾವುದು ಆರಿಸಿಕೊಳ್ಳಲಿ
ಈ ನಿಶಬ್ಧ ಚಳಿಯಲಿ?
ಕಾಫಿಯ ಇಚ್ಚೆಯನ್ನೊ?
ಮುತ್ತಿನ ಬಿಸಿಯನ್ನೊ?
ಇಷ್ಟೊಂದು ಚಡಪಡಿಕೆಯಿರಬಾರದು
ಇಚ್ಚೆಯ ಸಂಚಯನಗಳಲ್ಲಿ!
ನಮ್ಮ ಆರಂಭದ ಭೇಟಿಗೆ,
ಒಂದರ ನೆನಪಿಗೆ ಇನ್ನೊಂದು
ಸುಂಕವಾಗಲಿ
‘ಬೈ ವನ್ ಗೆಟ್ ವನ್ ಫ್ರಿ’
ಚಳಿಗಾಲದ ಜಾಹಿರಾತು ಆಫರ್.
ಕೊನೆಗೊಂದು ದಿನ ಕುರುಹುಗಳಂತೆ ನೆನಪಿಸಿಕೊಳ್ಳೊಣ
ಇದು ಆರಂಭವೊ ಅಥವ
ಅಂತ್ಯವಾಗುವುದೊ?
ಯಾರಿಗ್ಗೊತ್ತು?
ಈ ಕಾಫಿ
ಈ ಮುತ್ತು
ಯುದ್ದೋನ್ಮಾದದ ಸಂಕೇತಗಳಾ?
ಅಥವ
ಕೊನೆಯ ಯುದ್ದದ
ಕರಾರುಗಳಾ?
ನೆನಪಿಗೆ ಒಂದೊಂದು ಸೆಲ್ಫಿ ಇರಲಿ
ಜೊತೆಗೊಂದಿಷ್ಟು ಭಿನ್ನ ನಗುವಿರಲಿ.. (ಕವಿ: ಜಿ.ದೇವೂ ಮಾಕೊಂಡ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಸುದ್ದಿದಿನ.ಕಾಂ ಫಲಶೃತಿ | ಕಬ್ಬಿಣ ಬಿಸಾಡಿ ಓಡಿ ಹೋದ ಶಾಸಕರ ಆಪ್ತರು ; ಗೇಟ್ ಗೆ ಡಿಕ್ಕಿ, ಕ್ಯಾಮರಾಗಳಲ್ಲಿ ಸೆರೆ
-
ದಿನದ ಸುದ್ದಿ6 days ago
ವಕ್ಫ್ ತಿದ್ದುಪಡಿ ಕಾಯ್ದೆ- 2025 | ಇಂದು ಸುಪ್ರೀಂ ವಿಚಾರಣೆ
-
ರಾಜಕೀಯ4 days ago
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಿ : ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಎಚ್ಚರಿಕೆ
-
ದಿನದ ಸುದ್ದಿ5 days ago
ಅಂಬೇಡ್ಕರ್ ಸ್ಮರಣೆಯಿಂದ ದೇಶ ಪ್ರಗತಿಪರವಾಗಲು ಸಾಧ್ಯ : ಸಹಾಯಕ ಪ್ರಾಧ್ಯಾಪಕ ಷಣ್ಮುಖಪ್ಪ ಕೆ.ಎಚ್
-
ದಿನದ ಸುದ್ದಿ6 days ago
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಆರು ಮಂದಿ ಬಂಧನ
-
ದಿನದ ಸುದ್ದಿ4 days ago
ದಾವಣಗೆರೆ | ಮೊಬೈಲ್ ಕ್ಯಾಟೀನ್ ; ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ದಾವಣಗೆರೆ | ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಆಹ್ವಾನ