ಅಂಕಣ
ಅನ್ನಕ್ಕೆ ಯಾವ ಧರ್ಮ..? ಮತ್ತು ಇತರೆ ಕವಿತೆಗಳು

~ವಿಜಯ್ ನವಿಲೇಹಾಳು
ನನ್ನ ಮನವ, ಹಸಿದ ತೋಳಗಳಂತೆ ಕಿತ್ತು ತಿಂದು ಅದೆಷ್ಟೋ ದಿನಗಳಿಂದ ಎದೆನಡುಗಿಸುತ್ತ ರಣಕೇಕೆ ಹಾಕುತ್ತಿರುವ ನೋವಿನ ಪದಗಳನು ಜೋಡಿಸುತ್ತಿರುವೆ ಅಷ್ಟೇ
ಮಾರಮ್ಮನ ಜಾತ್ರೆಯ ಪ್ರಸಾದ,
ಮೊಹರಮ್ ನ ಚೋಂಗಿ ಕೂಡಿ ಉಂಡು
ಅಡುಗೆ ರುಚಿಯೂ; ಮಾಯಾ ದೀವಿಗೆಯನು
ತಿಕ್ಕಿದಾಗ ಬರುವ ಜೀನಿಯಂತೆ ಅದ್ಭುತ ವಾಗಿತ್ತು
ಪಂಕ್ತಿಯಲ್ಲಿ ಹಿಂದುವೋ, ಮುಸಲ್ಮಾನನೋ, ಕ್ರಿಶ್ಚಿಯನ್ನನೋ, ಯಾರಾದರೇನು? ಅನ್ನಕ್ಕೆ ಯಾವ ಧರ್ಮ ?
ಈಗ ಅಲ್ಲೆಲ್ಲೊ ಯಾರೋ ಕೆಲವರು ಜಾತಿ ಧರ್ಮದ ವಿಷವನು ಹನಿ ಹನಿ ಉಣಬಡಿಸಿ ಊರಿಗೂರಿಗೆ ದ್ವೇಷದ ನಶೆಯೇರಿಸಿದ್ದಾರೆ
ಈಗೀಗ ಅವರ ಹಸಿವು ನೀಗುತ್ತಿರುವುದು ಕ್ರೌರ್ಯದ ಕತ್ತಿಯಿಂದ ಜಿನಿಗುತ್ತಿರುವ ರಕ್ತದಿಂದ
ನಾನೆಂದು ಕವಿತೆ ಬರೆದವನಲ್ಲ ಎದೆಯೊಳಗಿನ ನೋವಿನ ಪದಗಳನು ಜೋಡಿಸುತ್ತಿರುವೆ ಅಷ್ಟೇ.
ಇತರೆ ಕವಿತೆಗಳು
೧..
ಅವಳ ಮಾತುಗಳು ಅಲ್ಪ ಪ್ರಾಣಗಳಂತೆ
ಕಿವಿಗಳಿಗೆ ನಾಟುತ್ತವೆ
ಅವಳ ಮೌನ ಮಹಾ ಪ್ರಾಣಗಳಂತೆ
ಸೀದ ಹೃದಯಕ್ಕೆ ಅಪ್ಪಳಿಸುತ್ತವೆ
ಅವಳ ಮಾತು ಮತ್ತು ಮೌನದ ಕೊನೆಯಲಿ
ನಾನು ಅನುನಾಸಿಕದಂತೆ.
೨..
ಮಡಿವಂತಿಕೆಯೇ ಶ್ರೇಷ್ಟ ಮೈಲಿಗೆಯು ಅನಿಷ್ಟ ಅಂದುಕೊಂಡಿದ್ದರೆ ಊರಾಚೆಗಿನ ಕಲ್ಲು ಬಂಡೆ ವಿಗ್ರಹವಾಗುತ್ತಿರಲಿಲ್ಲ.
೩..
ಅವಳು ಅಣು ಅಣುವಾಗಿ ಹೃದಯದ
ಆಳವನು ಸೇರಿಕೊಂಡು ಬೇರು ಬಿಟ್ಟಳು
ಅವಳ ಒಲವಿನ ಆಕ್ರಮಣಕೆ
ನಾ ಮರುಮಾತುಗಳಾಡದೆ ಹೆಪ್ಪುಗಟ್ಟಿದೆ. (ಕವಿ:ವಿಜಯ್ ನವಿಲೇಹಾಳು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಮೌನಾಮೃತ

~ ತಾರಾ ಸಂತೋಷ್ ಮೇರವಾಡೆ (ಕಾವ್ಯಾಗ್ನಿ), ಗಂಗಾವತಿ
ಅದೆಷ್ಟೋ ಬಗೆಹರಿಯದ
ಸಮಸ್ಯೆಗಳಿಗೆ
ಮೌನಾಮೃತವ
ಸಿಂಪಡಿಸಿ ಸುಮ್ಮನಾಗಿಬಿಡು.
ಅರ್ಥವಿರದ
ವ್ಯರ್ಥ ವಾಗ್ವಾದಗಳಿಗೆ
ಮೌನದ ಪೂರ್ಣವಿರಾಮವನಿಟ್ಟು
ಹೊರಟುಬಿಡು.
ಮಾತಾಡಿ
ಕಿರುಚಾಡಿ
ರಮಟರಾಡಿ ಮಾಡುವ ಬದಲು
ಒಂದರೆಗಳಿಗೆ
ಮೌನದ ಮೊರೆಹೋಗಿ ನೋಡು.
ಅದೆಷ್ಟೋ ಮುಗಿಯದ
ಮನದ ತೊಳಲಾಟಗಳಿಗೆ
ಮೌನವೆಂಬ ಉತ್ತರವುಂಟು
ಅದನ್ನಪ್ಪಿ ಮನಕ್ಕೊಂದಿಷ್ಟು
ಶಾಂತಿಯ ನೀಡಿ ನಕ್ಕುಬಿಡು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಅವ ಸುಡುತ್ತಾನೆ

~ ಶೃತಿ ಮಧುಸೂದನ (ರುದ್ರಾಗ್ನಿ)
ಅವ ಸುಡುತ್ತಾನೆ…
ಅವ ಸಂಪ್ರದಾದಯವ
ಸೆರಗ ನನಗುಡಿಸಿ
ನಗುತ್ತಾನೆ…
ಅವ ಅತ್ತಿಂದತ್ತ
ಅಲೆದಾಡುವ
ಮುಂಗುರುಳ
ಮುದ್ದಿಸಿ ಮಡಿ
ಮಡಿಕೆಯ ನಿವಾಳಿಸಿ
ನಿಟ್ಟುಸಿರ ಬಿಟ್ಟ
ಬಸವನಂತೆ…
ನೆತ್ತಿ ಮೇಲಣ
ಮದ್ದೇರಿ ಮೆರೆವ
ಮುದ್ದಣನ
ಕರಿಯಂತೆ…
ಕಣ್ಣು ಕುಕ್ಕುವ
ಕೊರತೆಗಳ
ಬದಿಗಿಟ್ಟು
ಬೈತಲೆಯ
ಬಿಂದಿಯ
ಬೆವರೊಳಗಣ
ಕಾವ್ಯ ಕುಂಕುಮದಂತೆ…
ಅವ… ಅವ ಕವಿ
ಎಂಬುವ ಕಾಡಿಗೆಗೆ
ತನ್ನ ಕಪ್ಪೆಂದುಕೊಂಡು
ನನ್ನಿಂದ ದೂರ ಸರಿದವ…
ಹಾಲ್ಬೆಳಕ
ಹಠವಾದಿ
ಹೆಣ್ಣಿನ ಮುಂದೆ
ಹಮ್ಮು ಬಿಟ್ಟು
ಹಿಂದಿರುಗುವ
ಇರಾದೆ ಇಲ್ಲದೇ
ನಡೆದು ಹೋದವ…
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಚಿತ್ರ ವಿಮರ್ಶೆ | ಸೂಲಗಿತ್ತಿ ತಾಯವ್ವ

~ಡಾ. ಪುಷ್ಪಲತ ಸಿ ಭದ್ರಾವತಿ
ಚಿತ್ರ – ತಾಯವ್ವ ,ನಿರ್ಮಾಣ – ಅಮರ ಫಿಲಂಸ್, ನಿರ್ದೇಶನ- ಸಾತ್ವಿಕ ಪವನ ಕುಮಾರ್,ತಾರಾಗಣ – ಗೀತಪ್ರಿಯ. ಬೇಬಿ ಯಶಿಕಾ, ಮತ್ತಿತರರು
ನಾವು ಎಷ್ಟೇ ಆಧುನಿಕತೆ, ಸಮಾನತೆ, ಸ್ವಾತಂತ್ರ್ಯ ಎಂದು ಹೆಣ್ಣು ಮಾತನಾಡಿದರೂ, ಈ ಸಮಾಜದ ಸಂಕೋಲೆಯಲ್ಲಿ ಇವತ್ತಿಗೂ ನಾವು ಕಂಡು ಕಾಣದಂತೆ ಬಂಧಿಯಾಗಿದ್ದೇವೆ. ಈ ಪುರುಷ ನಿರ್ಮಿತ ಸಮಾಜದಲ್ಲಿ ಹೆಣ್ಣನ್ನು ತನ್ನ ಸಂಕೂಲೆಯಲ್ಲಿಯೇ ಬಂಧಿಸಿಟ್ಟಿರುವನು. ಅದೊಂದು ಸ್ವೇಚ್ಛಾಚಾರದ, ಸಮಾನತೆಯ, ಹೆಸರಿನ ಮುಖವಾಡ ತೊಟ್ಟಿದೆ ಅಷ್ಟೇ. ಈ ಮುಖವಾಡಗಳ ನಡುವಿನ ಪುರುಷ ನಿಯಂತ್ರಿತ ಬದುಕಿನಲ್ಲಿ ಹೋರಾಟವೆಂಬುದು ಹೆಣ್ಣಿಗೆ ನಿತ್ಯವಾಗಿದೆ.
ಸ್ತ್ರೀ ಅವಳು ಪ್ರಕೃತಿ, ಪ್ರಕೃತಿ ಇಲ್ಲವಾದರೆ ಇನ್ನೂ ನಾವೆಲ್ಲ ತೃಣಮೂಲ. ಇಂತಹ ಸತ್ಯ ಅರಿವಿದ್ದರೂ ನಾವು ಪದೇ ಪದೇ ಈ ಪ್ರಕೃತಿಯನ್ನು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಹಾಗೆಯೇ ಪ್ರಕೃತಿಯ ಇನ್ನೊಂದು ರೂಪವಾದ ‘ಹೆಣ್ಣನ್ನು’ ನಾವು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಇದರ ಪರಿಣಾಮವಾಗಿಯೇ ಹೆಣ್ಣಿನ ಸರಾಸರಿ ಗಂಡಿಗಿಂತ ಗಣನೀಯವಾಗಿ ಕಡಿಮೆಯಾಗುತ್ತಿರುವುದು. ” ಹೆಣ್ಣು ಭ್ರೂಣಹತ್ಯೆ” ಎಂಬುದು ಸಮಾಜದ ಅದು ಹಾಗೂ ವಿಶ್ವಕ್ಕೂ ಮಾರಕ. ಇಂತಹ ಒಂದು ವಿಷಯ ವಸ್ತುವನ್ನು ಕೇಂದ್ರಿಕರಿಸಿಕೊಂಡು ಸಮಾಜಕ್ಕೆ ಜಾಗೃತಿ ಮೂಡಿಸುವ ಸಲುವಾಗಿ, ಎಚ್ಚರಿಕೆಯ ಕರೆಘಂಟೆಯೆಂಬಂತೆ “ತಾಯವ್ವ” ಸಿನಿಮಾ ಕರ್ನಾಟಕದಾದ್ಯಂತ ಬಿಡುಗಡೆಗೊಂಡಿದೆ.
ಕಳೆದ ವರ್ಷಗಳಲ್ಲಿಯೇ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಹಿಂದೆ ಸುಮಾರು 500ಕ್ಕೂ ಹೆಚ್ಚಿನ ಭ್ರೂಣಗಳು ಸಿಕ್ಕವು. ವಿಚಾರ ಪ್ರಚಾರವೂ ಆಯಿತು. ಆದರೆ ಕೇವಲ ಸುದ್ದಿಯಾಗಿ ಕಣ್ಮರೆಯಾಗುತ್ತವೆ. ಇಂದಿನ ಸಮಾಜಕ್ಕೆ ಇಂತಹ ಸೂಕ್ಷ್ಮ ವಿಷಯಗಳನ್ನು ಮುನ್ನೆಲೆಗೆ ತಂದು ಯುವಕರಿಗೆ ಹಾಗೂ ಸಮಾಜಕ್ಕೆ ಜಾಗೃತಿಮೂಡಿಸಬೇಕಾಗಿದೆ. ಇಂತಹ ಕಾರ್ಯದಲ್ಲಿ
” ತಾಯವ್ವ” ಸಿನಿಮಾ ಗೆದ್ದಿದೆ ಎಂದರೆ ಅತಿಶಯೋಕ್ತಿಯೆನಲ್ಲಾ. ಈ ಗೆಲುವು ಚಿತ್ರದ ನಾಯಕಿ ” ಗೀತ ಪ್ರಿಯಾ” ಅವರ ಶ್ರಮ, ಹಾಗೂ ಅವರ ಪೂರ್ಣ ಪ್ರಮಾಣದ ಪಾತ್ರದ ತಲ್ಲೀನತೆಯು ಸಿನಿಮಾದುದ್ದಕ್ಕೂ ಕಾಣುತ್ತದೆ.
ಮೂಲತಃ ” ಗೀತ ಪ್ರಿಯಾ” ಅವರು ಕಳೆದ 35 ವರ್ಷಗಳ ಅಧಿಕವಾಗಿ ತಮ್ಮನ್ನು ತಾವು ಶೈಕ್ಷಣಿಕ ರಂಗದಲ್ಲಿ ತೊಡಗಿಸಿಕೊಂಡು ವಿಧ್ಯಾಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿದ್ದಾರೆ. ಇವರ ತಾಯಿ ನೆರಳಲ್ಲಿ ಹುಟ್ಟಿದ ಮಗುವೇ ” ಕೃಪಾನಿಧಿ ಗ್ರೂಪ್ ಸಂಸ್ಥೆ”. ಸದಾ ಮಿಡಿವ ತಾಯಿ ಹೃದಯ ಇವರದ್ದಾಗಿದ್ದರಿಂದಲೇ ತಮ್ಮ ಪ್ರಥಮ ಚಿತ್ರದಲ್ಲಿಯೇ ಗಂಭೀರ ವಿಷಯ ವಸ್ತುವಿನ ಆಯ್ಕೆ, ಗಂಭೀರವಾದ ಅಭಿನಯ, ಸಮಾಜಮುಖಿ ಕಾಳಜಿಯಿರುವುದರಿಂದಲೇ ಇದರೆಲ್ಲರ ಫಲಿತಗಳೆಂಬಂತೆೇ “ತಾಯವ್ವ” ರೂಪುಗೊಂಡಿದೆ.
ಸಿನಿಮಾ ಕಲಾಪ್ರಿಯರಿಗೆ ಒಂದೊಳ್ಳೆ ಸುಗ್ಗಿ, ಕುಟುಂಬದ ಸಮೇತ ಸಿನಿಮಾ ವೀಕ್ಷಿಸಬಹುದು. ಗೀತ ಪ್ರಿಯಾ ಅವರು ಈ ಸಿನಿಮಾದಲ್ಲಿ ಅಭಿನಯಿಸಿ, ಹಾಗೂ ಸಂಗೀತಕ್ಕೆ ತಮ್ಮ ಧ್ವನಿಯನ್ನು ನೀಡಿರುವುದು ಇನ್ನೂ ವಿಶೇಷ. ಬೇಬಿ ಯಶೀಕಾ ಮುಂದಿನ ಭವಿಷ್ಯ ಇನ್ನಷ್ಟು ಸಿನಿಮಾರಂಗದಲ್ಲಿ ಉಜ್ವಲವಾಗಿರಲಿ. ನಿರ್ದೇಶಕರ ಪ್ರಯತ್ನ. ಚಿತ್ರಕಥೆಯ ಹಿಡಿತ ಹಾಗೂ ಎಲ್ಲೂ ಸಡಿಲವಿರದೇ ಸಾಗಿರುವುದು ನಮ್ಮ ಕನ್ನಡ ಚಿತ್ರರಂಗಕ್ಕೆ ಪ್ರಸ್ತುತ ಕೊಡುಗೆಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
