ರಾಜಕೀಯ
13 ಶಾಸಕರು ರಾಜೀನಾಮೆ ನೀಡಿದರೆ ಬಿಜೆಪಿ ಸರ್ಕಾರ ರಚಿಸೋದು ಖಚಿತ..!?
ಸುದ್ದಿದಿನ,ಬೆಂಗಳೂರು :ಇದು ರಾಜ್ಯ ರಾಜಕಾರಣದ ಸ್ಫೋಟಕ ಸುದ್ದಿ. ದೋಸ್ತಿ ಸರ್ಕಾರ ಉರುಳೋಕೆ ಶುರುವಾಗಿದೆ ಕೌಂಟ್ಡೌನ್. ಕಾಂಗ್ರೆಸ್ ಶಾಸಕರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಬಿಜೆಪಿ ಮಾಸ್ಟರ್ ಪ್ಲಾನ್ ನಡೆಸಿದ್ದು, ಸಮ್ಮಿಶ್ರ ಸರ್ಕಾರ ಕೆಡವಲು ನಿನ್ನೆ ರಾತ್ರಿಯೇ ಮುಂಬೈನಲ್ಲಿ ಮೀಟಿಂಗ್ ನಡೆದಿದೆ.
ಶ್ರೀರಾಮುಲು ಜತೆ ಕಾಂಗ್ರೆಸ್ ಅತೃಪ್ತ ಶಾಸಕರ ಮಾತುಕತೆ ಆಗಿದ್ದು, ಮುಂಬೈನ ರಿನೈಸ್ಸೆನ್ಸ್ ಹೋಟೆಲ್ನಲ್ಲಿ ಫೈನಲ್ ಹಂತ ತಲುಪಿದೆ ಬಿಜೆಪಿ ಆಪರೇಷನ್. ಈ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಕೊನೆ ಹಂತದ ಡಿಮ್ಯಾಂಡ್ ಇಟ್ಟಿದ್ದಾರೆ. ಕಾಂಗ್ರೆಸ್ ನ ಅತೃಪ್ತ ಶಾಸಕರು. ಕಾಂಗ್ರೆಸ್ ಶಾಸಕರ ಬೇಡಿಕೆಗೆ ಬಹುತೇಕ ಸಮ್ಮತಿ ಕೊಟ್ಟ ಬಿಜೆಪಿ, ಇಂದು ಸಂಜೆಯೊಳಗೆ ಆ 13 ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ.
ನಂಬರ್ ಗೇಮ್ ತಲುಪುವ ಹಂತದಲ್ಲಿ ಬಿಜೆಪಿ ಪಡೆಯಿದ್ದು, 13 ಜನ ಅತೃಪ್ತ ಶಾಸಕರು ರಾಜೀನಾಮೆ ಕೊಟ್ರೆ ದೋಸ್ತಿ ಸರ್ಕಾರ ಖತಂ ಆಗುದು ಗ್ಯಾರಂಟಿ ಅಂತಿದಾರೆ ಬಿಜೆಪಿ ಮಂದಿ. ಈಗಾಗಲೇ ಬಿಜೆಪಿ ಕಡೆ ವಾಲಿರುವ ಇಬ್ಬರು ಪಕ್ಷೇತರ ಶಾಸಕರು, 120 ಶಾಸಕರ ಮೈತ್ರಿಯಿಂದ ಇಬ್ಬರು ಹೋದರೆ ಆಗ 118 ಆಗಲಿದೆ. 13 ಶಾಸಕರು ಕಾಂಗ್ರೆಸ್ ತೊರೆದರೆ ಆಡಳಿತ ಪಕ್ಷ 105ಕ್ಕೆ ಕುಸಿಯಲಿದೆ.
224ರಲ್ಲಿ 13 ಶಾಸಕರು ರಾಜೀನಾಮೆ ನೀಡಿದರೆ ಮ್ಯಾಜಿಕ್ ಸಂಖ್ಯೆ 106 ಆಗಲಿದ್ದು, 104 ಸದಸ್ಯರು ಹೊಂದಿರುವ ಬಿಜೆಪಿಗೆ ಇಬ್ಬರು ಸೇರಿದರೆ ಸದಸ್ಯ ಬಲ 106 ಆಗಲಿದೆ. 13 ಶಾಸಕರು ರಾಜೀನಾಮೆ ನೀಡಿದರೆ ಬಿಜೆಪಿ ಸರ್ಕಾರ ರಚಿಸೋದು ಖಚಿತವಾಗಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಆಯುರ್ವೇದ ಆರೋಗ್ಯಕರ ಜೀವನ ಶೈಲಿ
ಸುದ್ದಿದಿನ,ದಾವಣಗೆರೆ:ಭಾರತದ ವೈದ್ಯಕೀಯ ಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಸಮೃದ್ಧವಾದುದಾಗಿದೆ. ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ವಿಜ್ಞಾನವಲ್ಲ, ಅದೊಂದು ಆರೋಗ್ಯಕರ ಜೀವನ ಶೈಲಿಯಾಗಿದೆ ಎಂದು ಘನವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.
ಅವರು ಶನಿವಾರ ತಪೋವನ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಸಂಸ್ಥೆಯು ಏರ್ಪಡಿಸಿದ್ದ ದ್ವಿತೀಯ ಘಟಿಕೋತ್ಸವ ಸಮಾರಂಭವನ್ನು ಉದ್ಪಾಟಿಸಿ ಮಾತನಾಡಿದರು.
ಈಗಿನ ದಿನಮಾನಗಳಲ್ಲಿ ಇಡೀ ಜಗತ್ತು ಮಾನಸಿಕ ಒತ್ತಡ ಹಾಗೂ ಪರಿಸರ ಸವಾಲುಗಳನ್ನು ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಪದ್ಧತಿಗಳ ಪ್ರಸ್ತುತತೆ ಹಾಗೂ ಮಹತ್ವ ಮತ್ತಷ್ಟು ಹೆಚ್ಚಾಗಿದೆ, ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು.
ಭಾರತದ ವೈದ್ಯಕೀಯ ಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಸಮೃದ್ಧವಾದುದಾಗಿದೆ. ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ವಿಜ್ಞಾನವಲ್ಲ, ಅದೊಂದು ಆರೋಗ್ಯಕರ ಜೀವನ ಶೈಲಿಯಾಗಿದೆ. ಜಗತ್ತು ಮಾನಸಿಕ ಒತ್ತಡ ಹಾಗೂ ಪರಿಸರ ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಪದ್ಧತಿಗಳ ಪ್ರಸ್ತುತತೆ ಹಾಗೂ ಮಹತ್ವ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ಆರೋಗ್ಯ ಸೇವೆಗಳು ಇಂದಿನ ವೈದ್ಯಕೀಯ ಕ್ಷೇತ್ರದ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸುತ್ತಿವೆ. ಇಂತಹ ತಾಂತ್ರಿಕ ಕ್ರಾಂತಿಯ ಯುಗದಲ್ಲಿ ಪದವಿ ಪಡೆದು ಹೊರಬರುತ್ತಿರುವ ನೂತನ ವೈದ್ಯರು ಕೇವಲ ಸಾಂಪ್ರದಾಯಿಕ ವೈದ್ಯಕೀಯ ಜ್ಞಾನಕ್ಕೆ ಸೀಮಿತವಾಗದೆ, ಆಧುನಿಕ ವಿಜ್ಞಾನದ ನೂತನ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಉಭಯ ಕ್ಷೇತ್ರಗಳ ನಡುವೆ ಬಲವಾದ ಸೇತುವೆಯಾಗಿ ಕೆಲಸ ಮಾಡಬೇಕಾದ ತುರ್ತು ಅಗತ್ಯವಿದೆ ಎಂದರು.
ಕೃತಕ ಬುದ್ಧಿಮತ್ತೆಯು ರೋಗನಿರ್ಣಯವನ್ನು ಹೆಚ್ಚು ನಿಖರ ಹಾಗೂ ವೇಗವಾಗಿಸಲು ನೆರವಾದರೆ, ಡಿಜಿಟಲ್ ಆರೋಗ್ಯ ಸೇವೆಗಳು ದೂರದ ಊರುಗಳಿಗೂ ಚಿಕಿತ್ಸೆಯನ್ನು ತಲುಪಿಸಲು ಸಹಕಾರಿಯಾಗಿವೆ. ಆದ್ದರಿಂದ, ಹೊಸ ತಲೆಮಾರಿನ ವೈದ್ಯರು ಕೇವಲ ದಿನನಿತ್ಯದ ಕ್ಲಿನಿಕ್ ಅಥವಾ ಆಸ್ಪತ್ರೆಯ ಚಿಕಿತ್ಸೆಗೆ ಸೀಮಿತವಾಗದೆ, ತಂತ್ರಜ್ಞಾನದ ದತ್ತಾಂಶಗಳನ್ನು ಬಳಸಿಕೊಂಡು ಹೊಸ ರೋಗಗಳಿಗೆ ಪರಿಹಾರ ಕಂಡುಕೊಳ್ಳುವ ಉತ್ತಮ ಸಂಶೋಧಕರಾಗಬೇಕು. ಇದರೊಂದಿಗೆ, ಸಮಾಜದಲ್ಲಿ ತಂತ್ರಜ್ಞಾನ ಮತ್ತು ಆರೋಗ್ಯದ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರಾಗಿಸಿ, ಮಾನವೀಯ ಕಾಳಜಿಯೊಂದಿಗೆ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ನೈಜ ಮಾರ್ಗದರ್ಶಕರಾಗಿ ಹೊರಹೊಮ್ಮಬೇಕಿದೆ ಎಂದು ತಿಳಿಸಿದರು.
ವೈದ್ಯಕೀಯ ಸೇವೆಯು ಅತ್ಯಂತ ಪವಿತ್ರವಾದ ಮಾನವೀಯ ಸೇವೆಯಾಗಿದೆ. ರೋಗಿಗಳಿಗೆ ಔಷಧಿಗಿಂತ ಮುಂಚಿತವಾಗಿ ವೈದ್ಯರ ಪ್ರೀತಿಯ ನುಡಿಗಳು ಹಾಗೂ ಸಕಾರಾತ್ಮಕ ನಡವಳಿಕೆಯ ಅಗತ್ಯವಿರುತ್ತದೆ. ಆದ್ದರಿಂದ ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಬೇಕು. ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯವು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಗುಜರಾತ್‌ನ ಜಾಮ್‌ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಗ್ಲೋಬಲ್ ಟ್ರೆಡಿಷನಲ್ ಮೆಡಿಸಿನ್ ಸೆಂಟರ್’ ಸ್ಥಾಪಿಸುತ್ತಿದೆ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯರಾದ ಶ್ರೀ ನಾರಾಯಣಸಾ ಭಾಂಡಗೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ಡೀನ್ ಡಾ: ಶ್ರೀನಿವಾಸ್ ಬನ್ನಿಗೊಳ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಎಸ್.ವಿ.ಹಲಸೆ, ತಪೋವನ ಸಂಸ್ಥೆಯ ಅಧ್ಯಕ್ಷ ಡಾ. ಶಶಿಕುಮಾರ್ ವಿ.ಎಂ, ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಅಶ್ವಿನಿ ಕೆ.ಆರ್., ಡಾ.ಸುಮನ ಭಟ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಹೊಳಲ್ಕೆರೆ | ಸ್ಪೀಚ್ ಸಂಸ್ಥೆ ಸಂಸ್ಥಾಪಕ ಹೆಚ್.ರಾಮಚಂದ್ರಪ್ಪ ನಿಧನ ; ಇಂದು ಅಂತ್ಯಕ್ರಿಯೆ
ಸುದ್ದಿದಿನ,ಚಿತ್ರದುರ್ಗ:ಜಿಲ್ಲೆಯ ಬ್ಯಾಂಕ್ ಕಾಲೋನಿಯ ಸ್ಪೀಚ್ ಸಂಸ್ಥೆಯ ಸಂಸ್ಥಾಪಕರು ಹಾಗೂ ಎರಡು ಅವಧಿಗೆ ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಹೆಚ್.ರಾಮಚಂದ್ರಪ್ಪ (59 ವರ್ಷ) ಶನಿವಾರ ಬೆಳಗ್ಗೆ 10:35 ಕ್ಕೆ ಅನಾರೋಗ್ಯದಿಂದ ನಿಧನರಾದರು.
ಮೃತರು ಪತ್ನಿ, ಸಹೋದರ, ಸಹೋದರಿಯರು ಸೇರಿದಂತೆ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಇವರ ಅಂತ್ಯ ಕ್ರಿಯೆಯನ್ನು ಹೊಳಲ್ಕೆರೆ ಸಮೀಪದ ನೆಹರು ಕಾಲೋನಿಯ ಜಮೀನಿನಲ್ಲಿ ಇಂದು (ಭಾನುವಾರ, ಜೂನ್ 07 ರಂದು ಮಧ್ಯಾಹ್ನ 2 ಗಂಟೆಗೆ) ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಸಂಪರ್ಕ ಮೊಬೈಲ್ ಸಂಖ್ಯೆ : 9740114246
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಆಶ್ರಯ ಯೋಜನೆ – ಆವಧಿ ವಿಸ್ತರಣೆ
ಸುದ್ದಿದಿನ,ದಾವಣಗೆರೆ : 2025-26 ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ (ನಗರ) 2.0 ಯೋಜನೆಯಡಿ ನಿವೇಶನ ಮತ್ತು ವಸತಿ ರಹಿತ ಫಲಾನುಭವಿಗಳ ಅರ್ಜಿಗಳನ್ನು ಸಲ್ಲಿಸಲು ಜೂನ್ 30 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.
ದಾವಣಗೆರೆ ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿನ ಅರ್ಹ ನಿವೇಶನ ಹಾಗೂ ವಸತಿ ರಹಿತ ಅಂಗವಿಕಲರು, ಹಿರಿಯ ನಾಗರಿಕರು, ಒಂಟಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಹಿಂದುಳಿದ, ಅಲ್ಪಸಂಖ್ಯಾತ ವರ್ಗದವರು, ತೃತೀಯ ಲಿಂಗಿಗಳು, ಸ್ವಚ್ಛತಾ ಕಾರ್ಮಿಕರು, PM SVanidhi (ಪಿ ಎಂ -ಸ್ವ ನಿಧಿ )ಯೋಜನೆಯಡಿ ಗುರುತಿಸಲ್ಪಟ್ಟ ಬೀದಿ ವ್ಯಾಪಾರಿಗಳು ಮತ್ತು ಪ್ರಧಾನ ಮಂತ್ರಿ ವಿಶ್ವ ಕರ್ಮ ಯೋಜನೆಯಡಿ ಗುರುತಿಸಿದ ಕುಶಲ ಕರ್ಮಿಗಳು, ಅಂಗನವಾಡಿ ಕಾರ್ಯಕರ್ತರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ವಲಸೆ ಬಂದ ಕುಟುಂಬದವರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಗಳನ್ನು http://pmayurban.gov.in ಆನ್ಲೈನ್ ವೆಬ್ ಸೈಟ್ ನಲ್ಲಿ ಸಲ್ಲಿಸಬಹುದು ಅಥವಾ ಖುದ್ದಾಗಿ ಮಹಾನಗರ ಪಾಲಿಕೆಯ ಆಶ್ರಯ ಶಾಖೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು ಎಂದು ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಾದ ಡಾ.ಮಹಾಂತೇಶ್ ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


