Connect with us

ದಿನದ ಸುದ್ದಿ

ತೊಗೋಳಿ, ಇವನದೊಂದು ನೆನಪು ಬರೆಯುವ ಸರದಿ ಬಂದಿದೆ

Published

on

  • ಕೇಸರಿ ಹರವೂ

ಕೃಷ್ಣ ನಾಡಿಗ ನನಗಿಂತ ಎಂಟೊಭತ್ತು ವರ್ಷಕ್ಕೆ ದೊಡ್ಡವ. ಆದರೂ ‘ಹೋಗೋಲೋ, ಬಾರೋಲೋ’ ಗೆಳೆಯರಾಗಿದ್ವಿ. ನಾನು ಇವನನ್ನು ಮೊದಲು ಕಂಡಿದ್ದು 1983ರಲ್ಲಿ. ಆಗತಾನೇ ಕಾಲೇಜು ಮುಗಿಸಿ, ಕಲಾಕ್ಷೇತ್ರದಲ್ಲೂ ಒಂದಷ್ಟು ಮೊಳೆ ಹೊಡೆದು ಚಿತ್ರನಿರ್ದೇಶನವನ್ನು ಪ್ರಾತ್ಯಕ್ಷಿಕವಾಗಿ ಕಲಿಯುವ ದೆಸೆಯಿಂದ ಗಾಂಧೀನಗರ ಅಲೆಯುತ್ತಿದ್ದೆ. ಹಾಗೊಮ್ಮೆ ಆನಂದರಾವ್ ವೃತ್ತದ ಸಂಗೀತಾ ಹೋಟೆಲಿನ ರೂಮೊಂದರಲ್ಲಿ ನಿರ್ದೇಶಕ ಕೆ.ವಿ. ಜಯರಾಂ ತಮ್ಮ ಮುಂದಿನ ಚಿತ್ರಕ್ಕೆ ತಯಾರಿ ನಡೆಸಿದ್ದರು. ಅಲ್ಲಿ ನಾಡಿಗ ಪ್ರೊಡಕ್ಷನ್ ಮ್ಯಾನೇಜರ್.

ಜಯರಾಂ ‘ತಮ್ಮಲ್ಲಿ ಈಗಾಗಲೇ ನಾಲ್ಕು ಜನ ಸಹಾಯಕರಿದ್ದಾರೆ, ಮುಂದಿನ ಚಿತ್ರದಲ್ಲಿ ನೋಡೋಣ’ ಎಂದು ಹೇಳಿದ್ದರು. ಸರಿ, ಎಂದು ನಾನು ಹೊರಗೆ ಕಾರಿಡಾರಿನಲ್ಲಿ ನಡೆಯುತ್ತಿದ್ದಾಗ ಒಳಗೆ ಕುಳಿತಿದ್ದ ನಾಡಿಗ ಅದೇ ರೂಮಿಂದ ಹೊರಬಂದು ‘ಲೇ, ತಡಿಯೋ’ ಎನ್ನುತ್ತಾ ನನ್ನನ್ನು ಸೇರಿಕೊಂಡ.

‘ಈತ ಪರಿಚಯವೇ ಇಲ್ಲ, ಈಗಲೇ ಏಕವಚನವೇ? ಇದೆಂಥಾ ಚಿತ್ರರಂಗವಯ್ಯಾ!’ ಎಂದು ನನ್ನ ಈಗೋನೋ, ಸ್ವಾಭಿಮಾನವೋ ಕೆಣಕಿತ್ತು. ಹತ್ತಿರ ಬಂದವನೇ ಹಠಾತ್ತನೆ ನನ್ನ ಹೆಗಲ ಮೇಲೆ ಕೈಹಾಕಿ ‘ಬಾ, ಕೆಳಗಡೆ ಕಾಫಿ ಕುಡಿಯೋಣ’ ಎಂದು ನನ್ನನ್ನು ಎಳೆದುಕೊಂಡು ನಡೆಯತೊಡಗಿದ. ನನ್ನ ಮುಖಭಾವದಿಂದ ಅವನಿಗೆ ನನ್ನೊಳಗೆ ಏನೇನೆಲ್ಲಾ ನಡೆದಿದೆ ಎಂದು ಸ್ಪಷ್ಟವಾಗಿ ತಿಳಿದಿತ್ತೆಂದು ಕಾಣುತ್ತದೆ.

ಕಾಫಿ ಕುಡಿಯುವಾಗ ಹೇಳಿದ, ‘ಹಂಗೆ ಮಾತಾಡಿಸಿದ್ದು ನಿನಗೆ ಗುರ್ ಅಂದಿರಬೇಕು, ಅಲ್ವಾ? ನಾನು ನೀನೂ ಇದೇ ಚಿತ್ರರಂಗದಲ್ಲಿ ಕೆಲವು ದಶಕಗಳ ಕಾಲ ಒಳ್ಳೇ ಗೆಳೆಯರಾಗಿ ಜೊತೆಗಿರ್ತೀವಿ ಕಣೋ, ತುಂಬಾ ಜನರ ಜೊತೆ ಹಂಗನಿಸಲ್ಲ, ಅದಿಕ್ಕೆ ಹಂಗನ್ದೇ…” ಎಂದು ಅಜ್ಜಂಪುರದ ಜವಾರೀ ಬ್ರಾಹ್ಮಣ ಭಾಷೆಯಲ್ಲಿ, ದೊಡ್ಡ ಗಂಟಲಿನಲ್ಲಿ ಗಹಗಹಿಸಿದ್ದ. ಸಿಗರೇಟು ಸೇದುವಾಗ ನಾನೂ ಅವನನ್ನು ಆಗಿನಿಂದಲೇ ಏಕವಚನದಲ್ಲೇ ಕರೆಯುವಂತೆ ಮಾಡಿದ್ದ.
ಅನಂತರದ ಹತ್ತಾರು ವರ್ಷ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದೆವಾದರೂ ಒಂದೇ ಚಿತ್ರದಲ್ಲಿ ಕೆಲಸ ಮಾಡಲೇ ಇಲ್ಲ.

ಮಾತಿಗೆ ಸಿಕ್ಕಾಗಲೆಲ್ಲಾ ‘ನಿನ್ನ ಅಂತಃಶಕ್ತಿ ನಿನಗೇ ಗೊತ್ತಿಲ್ಲ ಕಣೋ’ ಎಂದು ಹೇಳುತ್ತಲೇ ಇರುತ್ತಿದ್ದ. ‘ಯಾರಿಗೂ ಗೊತ್ತಿರಲ್ಲ ಬಿಡೋ, ನಿನಗೆ ನಿನ್ನ ಶಕ್ತಿ ಗೊತ್ತಿದೆಯಾ?’ ಎನ್ನುತ್ತಿದ್ದೆ ನಾನು. ಇನ್ನೂ ಕೆಲವೊಮ್ಮೆ ‘ನನಗೆ ಚೆನ್ನಾಗಿ ಗೊತ್ತಿದೆ, ಬೇರೇಯವರಿಗೆ ಅದನ್ನು ಅರಗಿಸಿಕೊಳ್ಳೋ ವೈಶಾಲ್ಯ ಇಲ್ಲ’ ಎನ್ನುತ್ತಿದ್ದೆ. ‘ಬಡ್ಡೀಮಗನೇ, ಅದಿಕ್ಕೇ ನೀನು ನೀನೇ…’ ಎನ್ನುತ್ತಿದ್ದ. ಹೊಗಳಿಕೆ ಮಾತುಗಳು ಅವನಿಂದ ಹೊರಕ್ಕೆ ಸಹಜವಾಗಿ ಹರಿಯುತ್ತಿದ್ದವು. ನನಗೆ ಬಹಳ ಕಷ್ಟ.
ಕೆಲವು ಬಾರಿ ‘ಮನೇಲಿ ನನ್ನ ಹೆಂಡತಿ ಅಡಿಗೆಮನೆ ಡಬ್ಬೀನೆಲ್ಲಾ ನೀಟಾಗಿ ತೊಳೆದು ಹೊರಗೆ ಬಿಸಿಲಿಗೆ ಒಣ ಹಾಕಿದಾಳೆ’ ಎನ್ನುತ್ತಿದ್ದ. ಚಿತ್ರರಂಗದ ಕೆಲವರು ‘ಇದು ಇವನ ಮಾಮೂಲಿ ಡೈಲಾಗು’ ಎಂದು ಹಿಂದೆ ಆಡಿಕೊಳ್ಳುತ್ತಿದ್ದರು ಕೂಡಾ.

ಆದರೆ ಅವರ ಪರಿಸ್ಥಿತಿಯೂ ಇವನಿಗಿಂತ ಒಂದಿಂಚೂ ಉತ್ತಮವಾಗಿರಲಿಲ್ಲ. ಹೇಳಿಕೊಳ್ಳಲು ಅವರಿಗೆ ಸಂಕೋಚವಿತ್ತೋ ಏನೋ!
ಕೆಲವು ವರ್ಷ್ಗಳ ನಂತರ ಅದ್ಯಾವಾಗಲೋ ಅವನು ಮ್ಯಾನೇಜರ್ ಕೆಲಸ ಬಿಟ್ಟು ಸ್ಕ್ರಿಪ್ಟ್ ರೈಟರ್ ಆಗಿದ್ದ. ಅವನು ಬರೆದ ಅನೇಕ ಸ್ಕ್ರಿಪ್ಟುಗಳು ಆ ಚಿತ್ರದ ನಿರ್ದೇಶಕನ ಹೆಸರಲ್ಲಿ ಟೈಟಲ್ ಕಾರ್ಡಿನಲ್ಲಿ ಇರುತ್ತಿದ್ದವು. ಅದೇ ಕಾಲದಲ್ಲಿ ಮಗಳ ಮದುವೆಯನ್ನು ಬಹಳ ಕಷ್ಟಪಟ್ಟು ಸರಳವಾಗಿ, ಆದರೆ ಸಾಂಪ್ರದಾಯಿಕವಾಗಿ ಮಾಡಿದ್ದ. ನನಗೂ ಆಹ್ವಾನಿಸಿದ್ದ. ನನಗೆ ಕೂಡಾ ಆಗ ಆರ್ಥಿಕವಾಗಿ ಅನನುಕೂಲ ಇದ್ದಿದ್ದು, ಬೇಕೆಂದೇ ಮದುವೆಗೆ ಹೋಗಿರಲಿಲ್ಲ.

ಫೇಸ್ಬುಕ್ಕಿನಲ್ಲಿ ನಾನು ಬಲಪಂಥೀಯತೆಯ ಬಗ್ಗೆ ಅಸಹನೆಯಿಂದ ಬರೆಯುತ್ತಿದ್ದಾಗಲೆಲ್ಲಾ ಅವನಿಗೆ ನನ್ನ ಮೇಲೆ ಸಿಟ್ಟು ಬರುತ್ತಿತ್ತೇನೋ! ಅಮೇಲಾಮೇಲೆ ಅವನು ಬಹುಶಃ ನನ್ನ ಪೋಸ್ಟುಗಳನ್ನು ನೋಡುವುದನ್ನೇ ಬಿಟ್ಟಿದ್ದನೇನೋ. ಆ ನಂತರ ನಾವು ಭೇಟಿ ಮಾಡಿದ್ದು ಬಹಳ ಕಡಿಮೆ. ಆಗಾಗ ಫೋನು ಮಾಡುತ್ತಿದ್ದವನು ಅದನ್ನೂ ಬಿಟ್ಟಿದ್ದ. ಬಿಡುವಿಲ್ಲವೆಂದೋ, ಅಥವಾ ಮೇಲಿನ ಕಾರಣಕ್ಕೋ ಗೊತ್ತಿಲ್ಲ.

ಆಮೇಲೆ ಮತ್ಯಾವಾಗಲೋ ಟಿವಿ ಧಾರಾವಾಹಿಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದ್ದ. ಬಹುಶಃ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ (ರವೀ) ಅವರು ತೀರಿಕೊಂಡ ನಂತರ ಅವರ ಜಾಗವನ್ನು ಸೀರಿಯಲ್ಲಿನವರು ಇವನ ಮೂಲಕ ತುಂಬಿಕೊಂಡಿದ್ದರೆಂದು ಅನಿಸುತ್ತದೆ. ಒಟ್ಟಲ್ಲಿ ಅವನ ಕೊನೆಯ ವರ್ಷಗಳಲ್ಲಿ ಸ್ವಲ್ಪ ಆರ್ಥಿಕವಾಗಿ ನೆಮ್ಮದಿಯಿಂದ ಇದ್ದನೇನೋ!
ಚಿತ್ರರಂಗಕ್ಕೆ ಬರುವಾಗ ಯಾರು ಯಾರು ತಮ್ಮ ಇಡೀ ಓದು, ಅನುಭವ, ಕಾಣ್ಕೆ ಮತ್ತು ಮಹತ್ವಾಕಾಂಕ್ಷೆ ಇಟ್ಟುಕೊಂಡು ಬರುತ್ತಾರೋ ಅಂಥವರನ್ನು ತನ್ನ ಜಿಗುಟಿಗೆ, ಜಿಡ್ಡಿಗೆ ಒಗ್ಗಿಸಿಕೊಂಡುಬಿಡುತ್ತೆ. ಬಂದಾದ ಮೇಲೆ ಅನಿವಾರ್ಯವಾಗಿ ಕೆಲವರು ಒಗ್ಗಿಯೂ ಬಿಡುತ್ತಾರೆ.

ಅಲ್ಲೋ ಅಥವಾ ಟಿವಿ ಮಾಧ್ಯಮದಲ್ಲೋ ಹಣ ಸಿಕ್ಕುವ ಕಸುಬನ್ನು ‘ಅವರಿಗೇನು ಬೇಕೋ ಅದನ್ನು ಕೊಡುತ್ತೇನೆ’ ಎಂದು ಬದುಕಿ ಹೀಗೆ ಕೊನೆಯಾಗುತ್ತಾರೆ. ಇಂತಹ ನೂರು ನಟನಟಿಯರು, ತಂತ್ರಜ್ಞರು, ಕಲಾವಿದರನ್ನು ನಾನು ತೋರಿಸುತ್ತೇನೆ ಬೇಕಾದರೆ. ನನ್ನಂತೆ ಕೆಲವೇ ಕೆಲವರು ಸೆಡ್ಡು ಹೊಡೆಯುತ್ತೇವೆ. ಹೊರಗೆ ಬರುತ್ತೇವೆ. ಪರ್ಯಾಯ ಕಟ್ಟುವ ಆಲೋಚನೆ ಮಾಡುತ್ತೇವೆ. ಸೋಲೋ ಗೆಲುವೋ ಮುಖ್ಯವಲ್ಲ, ಪ್ರಯತ್ನ ಮುಖ್ಯ ಎನ್ನುತ್ತೇವೆ. ನಾಡಿಗನಲ್ಲೂ ಆ ಶಕ್ತಿಯಿತ್ತು. ಆದರೆ ಅವನ ಬದುಕಿನ ಅನಿವಾರ್ಯಕ್ಕೋ, ಸಂಪ್ರದಾಯಸ್ಥ ಮನಸ್ಥಿತಿಗೋ ಅವನಲ್ಲಿ ಅದು ಸಾಧ್ಯವಾಗಲಿಲ್ಲ.
ಹೋಗೋ ಗೆಳೆಯಾ, ನಿನ್ನ ನೆನಪು ಸದಾ ಇರುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ

Published

on

ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.

ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್.‌ ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್‌. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.

ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.

ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.

ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ

Published

on

ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್‌ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್‌ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್‌ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್‌ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್‌, ಚೇತನ್‌ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.

ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್‌ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್‌ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್‌ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.

ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending