ದಿನದ ಸುದ್ದಿ
ಆತ್ಮೀಯ ಮುಸ್ಲಿಂ ಗೆಳೆಯರಿಗಾಗಿ, ಗೌರವಪೂರ್ವಕವಾಗಿ..!
- ವಿವೇಕಾನಂದ. ಹೆಚ್.ಕೆ.
ಹೌದು, ನಿಮಗೆ ತ್ರಿವಳಿ ತಲ್ಲಾಖ್ ವಿಷಯದಲ್ಲಿ, ಬಾಬರಿ ಮಸೀದಿ ವಿವಾದದ ತೀರ್ಪಿನ ವಿಷಯದಲ್ಲಿ, ಗೋ ಮಾಂಸ ನಿಷೇಧದ ವಿಚಾರದಲ್ಲಿ, ಸಿಎಎ – ಎನ್ ಆರ್ ಸಿ ತಿದ್ದುಪಡಿಯಲ್ಲಿ ಒಟ್ಟಾರೆಯಾಗಿ ಭಾರತದ ಈಗಿನ ಸರ್ಕಾರದ ಧೋರಣೆಯ ಬಗ್ಗೆ ಅಸಮಾಧಾನ ಇರಬಹುದು ಅಥವಾ ಇದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಅದರ ಬಗ್ಗೆ ದೇಶಾದ್ಯಂತ ಪ್ರತಿಭಟನೆಗಳು ಸಹ ಇತ್ತೀಚಿನ ವರೆಗೂ ನಡೆಯುತ್ತಿತ್ತು. ಅದು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂವಿಧಾನಾತ್ಮಕ ಹಕ್ಕು.
ಆದರೆ ಈ ನಡುವೆ ಅನಿರೀಕ್ಷಿತವಾಗಿ ಕೊರೋನಾ ವೈರಸ್ ಇಡೀ ದೇಶವನ್ನು ಆಕ್ರಮಿಸಿ ಜೀವ ಉಳಿಸಿಕೊಳ್ಳುವುದೇ ಒಂದು ದೊಡ್ಡ ಸಾಹಸವಾಗಿದೆ. ಜಾತಿ ಧರ್ಮ ಭಾಷೆ ಪಕ್ಷ ಪಂಥ ದೇವರು ಎಲ್ಲವೂ ಹಿನ್ನೆಲೆಗೆ ಸರಿದಿದೆ ಮತ್ತು ಸರಿಯಲೇಬೇಕು.
ಮಾಧ್ಯಮಗಳಲ್ಲಿ ಸ್ವಲ್ಪ ಪಕ್ಷಪಾತ, ದುಡುಕುತನ, ಅತಿರಂಜಿತ ವರದಿಗಳು ಇದೆ ಎಂದೇ ಭಾವಿಸಿದರೂ,ಇತರೆ ಧರ್ಮದ ಕೆಲವು ಕಾರ್ಯಕ್ರಮಗಳು ಸಹ ನಡೆದವು ಎಂಬುದು ನಿಜವಾದರೂ ಇಲ್ಲಿ ಯಾವುದೇ ನೆಪ ಹೇಳದೆ, ಯಾವುದೇ ಕಾರಣ ನೀಡದೆ ವೈದ್ಯಕೀಯ ಕ್ಷೇತ್ರದ ಸಲಹೆಯಂತೆ ಸರ್ಕಾರಗಳು ತೆಗೆದುಕೊಳ್ಳುವ ತೀರ್ಮಾನಗಳನ್ನು ಸಂಪೂರ್ಣ ಬೆಂಬಲಿಸುವ ಕರ್ತವ್ಯ ಮತ್ತು ಜವಾಬ್ದಾರಿ ಎಲ್ಲರಿಗೂ ಇದೆ.
ವಿರೋಧಿ ಗುಂಪಿನವರು ಒಂದಷ್ಟು ರಾಜಕೀಯ ಗೊಳಿಸುವುದು, ಪ್ರಚೋದಿಸುವುದು ಇದ್ದರೂ ಅದಕ್ಕೆ ಈಗ ಹೆಚ್ಚಿನ ಮಹತ್ವ ಕೊಡಬಾರದು. ಈ ದೇಶದ ಹಕ್ಕು ಮತ್ತು ಕರ್ತವ್ಯಗಳು ನಿಮಗೂ ಸಹ ಸಮ ಪ್ರಮಾಣದಲ್ಲಿ ಇದೆ. ಇದನ್ನು ಈಗ ಏಕೆ ಹೇಳಬೇಕಾಯಿತೆಂದರೆ ಮಸೀದಿಗಳಲ್ಲಿ ಈಗಲೂ ಸಾಮೂಹಿಕ ಪ್ರಾರ್ಥನೆಯ ವರದಿಗಳು ಅಲ್ಲಲ್ಲಿ ಕೇಳಿ ಬರುತ್ತಿರುವುದರಿಂದ.
ಇದು ಸಾವು ಬದುಕಿನ ಮತ್ತು ಹಸಿವು ಅಸ್ತಿತ್ವದ ಪ್ರಶ್ನೆ. ಇಡೀ ಭಾರತೀಯ ಜನ ಸಮುದಾಯ ಆತಂಕದಿಂದ ಇದ್ದು ಪ್ರತಿ ಕ್ಷಣವನ್ನೂ ತುಂಬಾ ಎಚ್ಚರಿಕೆಯಿಂದ ಗಮನಿಸುತ್ತಿದೆ. ಈಗ ಇಡುವ ಪ್ರತಿ ಹೆಜ್ಜೆಯೂ ಬಹಳಷ್ಟು ಚರ್ಚೆಗೆ ಗ್ರಾಸವಾಗುತ್ತದೆ ಮತ್ತು ಜನರ ಮನಸ್ಸಿನಲ್ಲಿ ಉಳಿಯುತ್ತದೆ.
ಈಗಾಗಲೇ ಮನಸ್ಸುಗಳು ಒಡೆದಿವೆ. ಎರಡೂ ಕಡೆ ಪ್ರಚೋದನಾತ್ಮಕ ಮಾತುಗಳು ಪರಿಸ್ಥಿತಿ ಕೈ ಮೀರುವಂತೆ ಮಾಡಿದೆ. ಧರ್ಮ, ರಾಜಕೀಯ ಮನೆಯೊಳಗೆ ಮನಸ್ಸುಗಳೊಳಗೆ ಬಂದಾಗಿದೆ. ಧರ್ಮಾಂಧತೆ ದೇಶವನ್ನು ಆಕ್ರಮಿಸಿಕೊಂಡಿದೆ. ಮೊದಲಿನಿಂದಲೂ ಇದ್ದ ಹಿಂದೂ ಮುಸ್ಲಿಂ ವೈಮನಸ್ಯ ಈಗ ಇನ್ನೂ ದೊಡ್ಡದಾಗಿದೆ.
ಮುಸ್ಲಿಂ ಭಾಂಧವರೆ ನಿಮ್ಮ ಆತ್ಮಾವಲೋಕನಕ್ಕಾಗಿ ಇತ್ತೀಚಿನ ಒಂದು ವರದಿ
38.40 ಲಕ್ಷ ಜನರ ಸಾವು. ಕೇವಲ 9 ವರ್ಷಗಳಲ್ಲಿ.2011 ರಿಂದ ಇಲ್ಲಿಯವರೆಗೆ.ಸಿರಿಯಾ ದೇಶದ ಆಂತರಿಕ ಯುದ್ಧದಿಂದಾಗಿ.ಗಂಡಸರೆಷ್ಟೋ, ಹೆಂಗಸರೆಷ್ಟೋ, ಮಕ್ಕಳೆಷ್ಟೋ,.ಯಾವ ಯಾವ ಭೀಕರ ರೀತಿಯಲ್ಲಿ ಯಾತನೆ ಅನುಭವಿಸಿ ಸತ್ತರೋ. ಬಹುತೇಕ ತಮ್ಮ ಅರ್ಧ ಆಯಸ್ಸನ್ನೂ ಮುಗಿಸದೇ ತೀರಿ ಹೋದರು.ಅವರನ್ನು ಅಲ್ಲಾ ಎಂಬ ದೇವರು ಸೃಷ್ಟಿಸಿದ್ದರು, ಇಸ್ಲಾಂ ಎಂಬ ಧರ್ಮ ಬೆಳೆಸಿತ್ತು, ಷಿಯಾ ಸುನ್ನಿ ಖುರ್ದ್ ಎಂಬ ಹೆಸರುಗಳು ವಿಭಜಿಸಿದ್ದವು ಎಂದು ನಂಬಲಾಗುತ್ತದೆ. ಆದರೆ ಯಾವುದೂ ಅವರ ರಕ್ಷಣೆಗೆ ಬರಲಿಲ್ಲ, ಕೇವಲ ಸುಮಾರು 1.80 ಕೋಟಿ ಜನಸಂಖ್ಯೆಯ ದೇಶದಲ್ಲಿ ಘರ್ಷಣೆಗೆ ಸತ್ತವರು 38.40 ಲಕ್ಷ ಜನರು.
ನನಗವರು ಮನುಷ್ಯರು ಮಾತ್ರ
ಸೃಷ್ಟಿಯಲ್ಲಿ ಗಂಡು ಹೆಣ್ಣಿನ ಮಿಲನದಿಂದ ಮತ್ತೊಂದು ಜೀವ ಜನ್ಮ ತಾಳುತ್ತದೆ.ಸಿರಿಯಾದಲ್ಲಿ ಮಗು ಜನಸಿದರೆ ಮುಸ್ಲಿಂ ಎನ್ನುತ್ತಾರೆ. ಇಂಗ್ಲೆಂಡ್ ನಲ್ಲಿ ಜನಸಿದರೆ ಕ್ರಿಶ್ಚಿಯನ್, ಇಸ್ರೇಲ್ ನಲ್ಲಿ ಯಹೂದಿ, ಜಪಾನ್ ನಲ್ಲಿ ಬೌದ್ದ, ಭಾರತದಲ್ಲಿ ಹಿಂದೂ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ .ಈ ವ್ಯತ್ಯಾಸಗಳೇ ಮಾನವ ಕುಲಕ್ಕೆ ಶಾಪವಾಗಿ ಪರಿಣಮಿಸಿದೆ.
ಹಿಂದೆ ಕ್ರಿಶ್ಚಿಯನ್ ಧರ್ಮದ ಯೂರೋಪಿಯನ್ ದೇಶಗಳಲ್ಲೂ ಇದಕ್ಕಿಂತ ಭಯಂಕರ ಮಾನವ ಹತ್ಯಾಕಾಂಡಗಳು ನಡೆದಿವೆ.ಫ್ರೆಂಚ್ ಕ್ರಾಂತಿಯ ರಕ್ತಪಾತ, ಎರಡು ಮಹಾಯುದ್ಧಗಳು, ಇಟಲಿ ದಂಗೆ, ಹಿಟ್ಲರನ ಸಾವಿನ ಶಿಬಿರಗಳು, ರಷ್ಯಾ ದೌರ್ಜನ್ಯ ಎಲ್ಲವೂ ಇತಿಹಾಸದಲ್ಲಿ ದಾಖಲಾಗಿದೆ.
ಹಾಗೆಯೇ ಹಿಂದೂ ಜೀವನಶೈಲಿಯ ಭಾರತದಲ್ಲೂ ಹಿಂಸೆಯ ಪ್ರಮಾಣ ಕಡಿಮೆ ಏನಿಲ್ಲ. ಕ್ರಿಸ್ತ ಪೂರ್ವದಲ್ಲೇ ಬುದ್ದ ಮಹಾವೀರರು ಅಹಿಂಸೆಯ ಬಗ್ಗೆ ಗಂಭೀರವಾಗಿ ಮಾತನಾಡಿದ್ದಾರೆ ಎಂದರೆ ಆಗಲೇ ಹಿಂಸೆಯ ಪ್ರಮಾಣ ಎಷ್ಟಿತ್ತು ಎಂದು ಊಹಿಸಬಹುದು.
ಕಾರಣಗಳು ಏನೇ ಇರಲಿ
ಈ ಕ್ಷಣದಲ್ಲಿ ಪಾಕಿಸ್ತಾನ, ಇರಾನ್, ಇರಾಕ್, ಸಿರಿಯಾ, ಆಪ್ಘನಿಸ್ತಾನ, ಯೆಮೆನ್, ಟರ್ಕಿ ಮುಂತಾದ ಇಸ್ಲಾಮಿಕ್ ದೇಶಗಳೇ ಹೆಚ್ಚು ಸಾವು ನೋವಿಗೆ, ಆಂತರಿಕ ಕಲಹಗಳಿಗೆ ತುತ್ತಾಗುತ್ತಿವೆ.
ಈಗ ಗಂಭೀರವಾಗಿ ಯೋಚಿಸುವ ಸಮಯ ಬಂದಿದೆ. ಎಲ್ಲಾ ಧರ್ಮಗಳ ಮೂಲ ಆಶಯ ಮೂಲೆಗುಂಪಾಗಿ ಕೇವಲ ಆಚರಣೆಗಳು ಮಾತ್ರ ಜಾರಿಯಲ್ಲಿವೆ. ಇದಕ್ಕೆ ಇಸ್ಲಾಂ ಸಹ ಹೊರತಲ್ಲ.
ಹೌದು, ಭಾರತೀಯ ಮುಸ್ಲಿಮರಲ್ಲಿ ಬಡತನ ಅಜ್ಞಾನ ಗಾಢ ಧಾರ್ಮಿಕ ನಂಬಿಕೆಗಳು ಮನೆ ಮಾಡಿವೆ. ಧರ್ಮ ಗುರುಗಳ ಮಾತಿಗೆ ಅತಿ ಹೆಚ್ಚಿನ ಮಹತ್ವ ನೀಡುತ್ತಾರೆ. ಪ್ರಚೋದನಕಾರಿಯಾಗಿ ಮಾತನಾಡುವ ಹಿಂದೂಗಳು ಸಹ ಇದನ್ನು ಗಮನಿಸಬೇಕು. ಆತಂಕದಿಂದ ಎಲ್ಲಾ ತಪ್ಪುಗಳನ್ನು ಒಂದು ಸಮುದಾಯದ ತಲೆಗೆ ಕಟ್ಟಬಾರದು. ಸಂಯಮ ಅಗತ್ಯ.
ವಿವೇಚನೆ ಅಗತ್ಯ. ಕರೋನ ಬಂದಿದೆ ಎಂಬ ಒಂದೇ ಕಾರಣದಿಂದ ದಿನ ಬೆಳಗಾಗುವುದರಲ್ಲಿ ಎಲ್ಲರಲ್ಲೂ ದಿಡೀರನೇ ಪ್ರಬುದ್ದತೆ ನಿರೀಕ್ಷಿಸಲಾಗುವುದಿಲ್ಲ. ಸಬ್ ಕಾ ಸಾಥ್ ಸಬ್ ವಿಕಾಸ್ ಕೇವಲ ಘೋಷಣೆಯಾಗಬಾರದು. ಅದು ನಡವಳಿಕೆಯಾಗಬೇಕು. ಮಾಧ್ಯಮಗಳಂತೆ ವಿವೇಚನಾರಹಿತವಾಗಿ ಕೂಗಾಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಗಳನ್ನು ಹರಡಬಾರದು. ಅದರಿಂದ ದೇಶಕ್ಕೆ ಅಪಾಯವೇ ಹೆಚ್ಚು.
ಎಲ್ಲಾ ಅಲ್ಪಸಂಖ್ಯಾತರಿಗೆ ಇರುವ ಅಭದ್ರತೆಯ ನಡುವೆಯೂ, ಮುಸ್ಲಿಂ ಸಮುದಾಯದಲ್ಲಿ ಪ್ರಗತಿಪರ ಚಿಂತನೆಗಳು ಸಮೂಹ ಪ್ರಜ್ಞೆಯಾಗಿ ಜಾಗೃತವಾಗಬೇಕು. ಧರ್ಮದ ಮೇಲಿನ ಅವಲಂಬಿನೆ ಕಡಿಮೆಯಾಗಬೇಕಿದೆ. ಅದಕ್ಕೆ ಹಿಂದೂಗಳು ಸಹ ಪ್ರೇರಣೆಯಾಗಬೇಕೆ ಹೊರತು ಪ್ರಚೋದಕರಾಗಬಾರದು. ಸುಮಾರು 18 ಕೋಟಿ ಜನಸಂಖ್ಯೆಯ ಒಂದು ಸಮುದಾಯವನ್ನು ಅಭದ್ರತೆಗೆ ತಳ್ಳಿ ದೇಶದ ಅಭಿವೃದ್ಧಿ ಶಾಂತಿ ಸಾಧ್ಯವೇ ಇಲ್ಲ.
ಎರಡೂ ಧರ್ಮಗಳಲ್ಲಿ ಕ್ರಿಯೆ ಪ್ರತಿಕ್ರಿಯೆಗಳು ಪ್ರಚೋದನಾತ್ಮಕವಾಗಿದ್ದು ಇದೇ ಕಾರಣದಿಂದ ಧೈರ್ಯವಾಗಿ ಮಾತನಾಡುವ ಖಂಡಿಸುವ ಸತ್ಯವನ್ನು ಬಯಲಿಗೆ ಎಳೆಯುವ ಜನರು ಕಡಿಮೆಯಾಗಿದ್ದಾರೆ. ಧರ್ಮ ಒಂದು ಸೂಕ್ಷ್ಮ ವಿಷಯ ಎಂಬ ನೆಪದಿಂದ ಮಾತನಾಡಲು ಹೆದರುತ್ತಾರೆ. ತಮ್ಮ ತಮ್ಮ ಧರ್ಮ ದೇವರು ಗ್ರಂಥಗಳಲ್ಲಿ ಅಡಗಿರುವವರನ್ನು ನಾಗರಿಕ ಪ್ರಜ್ಞೆಗೆ ಎಳೆದು ತರಬೇಕಿದೆ. ಇದು ತುಂಬಾ ಕಷ್ಟ. ಆದರೂ ಮನುಷ್ಯನ ಉಳಿವಿಗಾಗಿ ನಿಂತ ನೀರಾಗಿ ಕೊಳೆತು ನಾರುತ್ತಿರುವ ಧಾರ್ಮಿಕತೆಯನ್ನು ಬಯಲಿಗೆ ಎಳೆಯಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳು ಇನ್ನಷ್ಟು ಭಯಂಕರ ಸ್ಥಿತಿ ತಲುಪುತ್ತದೆ. ಬಲವೇ ನ್ಯಾಯ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
ಸುದ್ದಿದಿನ ಡೆಸ್ಕ್:ಹಲವಾರು ವರ್ಷಗಳ ಕಾಲ ಬಂಗಾಳಿ ಟೆಲಿವಿಷನ್ನಲ್ಲಿ ಕೆಲಸ ಮಾಡಿದ ನಂತರ ಮತ್ತು ನಂತರ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ವಿಸ್ತರಿಸಿದ ನಂತರ, ಅಭಿನೇತಾ ಸುಶೋಭನ್ ಸೋನು ರಾಯ್ ಅವರು ‘ಟೇಕ್ ಕೇರ್ ಭಾಲೋಬಾಸ’ ಚಿತ್ರದ ಮೂಲಕ ಬಂಗಾಳಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ‘ಜಾಯ್’ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ಇದು ಸ್ನೇಹ, ಸಂಬಂಧಗಳು ಮತ್ತು ಕಾಲಾನುಕ್ರಮದಲ್ಲಿ ವಿಕಸನಗೊಳ್ಳುವ ಭಾವನೆಗಳ ಸುತ್ತ ಕೇಂದ್ರೀಕೃತವಾಗಿರುವ ಕಥೆಯಲ್ಲಿನ ಒಬ್ಬ ಸ್ನೇಹಿತ.
ನಿರ್ದೇಶಕ ಪಿಜೂಷ್ ಸಾಹಾ ಅವರ ಮಾರ್ಗದರ್ಶನದಲ್ಲಿ ಸುಶೋಭನ್ ಅವರ ಅಭಿನಯ ಪ್ರಯಾಣವು ಪ್ರಾರಂಭವಾಯಿತು, ಅಲ್ಲಿ ಅವರು ಸುಮಾರು ಎರಡು ವರ್ಷಗಳ ಕಾಲ ಅಭಿನಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದರು. ನಿಯಮಿತ ಆಡಿಷನ್ಗಳ ನಂತರ, 2019 ರಲ್ಲಿ ಅವರು ಆಕಾಶ್ ಆಠ್ ಚಾನೆಲ್ನ ‘ಆನಂದಮಯೀ ಮಾ’ ಧಾರಾವಾಹಿಯ ಮೂಲಕ ತಮ್ಮ ಟೆಲಿವಿಷನ್ ಚೊಚ್ಚಲ ಪ್ರವೇಶವನ್ನು ಮಾಡಿದರು, ಇದನ್ನು ಮರಣೋತ್ತರ ನಿರ್ದೇಶಕ ದೇವಿದಾಸ್ ಭಟ್ಟಾಚಾರ್ಯ ನಿರ್ದೇಶಿಸಿದ್ದರು, ಅದರಲ್ಲಿ ಅವರು ವೈಷ್ಣವ ಭಕ್ತನ ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ಸ್ಟಾರ್ ಜಲ್ಸಾದ ‘ಮೋಹರ್’, ‘ಕೋರಾಪಾಖಿ’, ‘ತಿತ್ಲಿ’ ಮತ್ತು ‘ಖೇಲಾಘರ್’, ಜೊತೆಗೆ ಜೀ ಬಂಗ್ಲಾದ ‘ಜಮುನಾ ಢಾಕಿ’ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು, ಹೀಗೆ ಬಂಗಾಳಿ ಟೆಲಿವಿಷನ್ನಲ್ಲಿ ತಮ್ಮ ಕೆಲಸವನ್ನು ಮುಂದುವರೆಸಿದರು.
COVID-19 ಸಾಂಕ್ರಾಮಿಕ ಸಮಯದಲ್ಲಿ, ಅಭಿನಯದ ಕೆಲಸಗಳು ಸೀಮಿತವಾದಾಗ, ಸುಶೋಭನ್ ಮಾಡೆಲಿಂಗ್ಗೆ ತಿರುಗಿದರು. 2023 ರಿಂದ ಪ್ರಾರಂಭಿಸಿ, ಅವರು ಹಾಲಿಡೇ ಇನ್ ಹೋಟೆಲ್, ಡಾಬರ್, ಟೈಟಾನ್ ಐ+, ವೆಲಾಸಿಟಿ ಐವೇರ್, ಅಮೆಜಾನ್, ಸ್ಪೆನ್ಸರ್ಸ್, ಕ್ಯಾಂಪಸ್ ಶೂಸ್, ಬಿಗ್ ಬಜಾರ್, ಬಯೋಟಿಕ್ ಮತ್ತು ಫಿಯಾಮಾ ಡಿ ವಿಲ್ಸ್ ಸೇರಿದಂತೆ ಹಲವಾರು ಬ್ರಾಂಡ್ಗಳೊಂದಿಗೆ ಕೆಲಸ ಮಾಡಿದರು. 2025 ರಲ್ಲಿ, ಕೋಲ್ಕತ್ತಾದಲ್ಲಿ ನಡೆದ ‘ಎತ್ನಿಕ್ ಎಲಿಗನ್ಸ್ 2025’ ಸೌಂದರ್ಯ ಸ್ಪರ್ಧೆಯಲ್ಲಿ ಅವರು ಪ್ರಥಮ ರನ್ನರ್-ಅಪ್ ಆಗಿ ಆಯ್ಕೆಯಾದರು.
ಹೌರಾದಲ್ಲಿ ಜನಿಸಿ ಕೋಲ್ಕತ್ತಾದಲ್ಲಿ ಬೆಳೆದ ಸುಶೋಭನ್, ಸುಮಾರು ಮೂರೂವರೆ ವರ್ಷದ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ನಂತರ ತಾಯಿಯಿಂದ ಬೆಳೆಸಲ್ಪಟ್ಟರು. ಅವರು ಕೋಲ್ಕತ್ತಾದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು 2016 ರಲ್ಲಿ ದಮ್ ದಮ್ ಮೋತಿಜೀಲ್ ರವೀಂದ್ರ ಮಹಾವಿದ್ಯಾಲಯದಿಂದ ವಾಣಿಜ್ಯದಲ್ಲಿ ಬಿ.ಕಾಮ್ ಪದವಿಯನ್ನು ಪಡೆದರು. ಅಭಿನಯವನ್ನು ಮುಂದುವರಿಸುವ ಮೊದಲು, ಅವರು ಸುಮಾರು ಎರಡು ವರ್ಷಗಳ ಕಾಲ ಪಾಶ್ಚಾತ್ಯ ನೃತ್ಯದಲ್ಲಿ ತರಬೇತಿ ಪಡೆದರು ಮತ್ತು ರಂಗ ಪ್ರದರ್ಶನಗಳಲ್ಲಿ ಭಾಗವಹಿಸಿದರು.
‘ಟೇಕ್ ಕೇರ್ ಭಾಲೋಬಾಸ’ ಸುಶೋಭನ್ ಅವರ ಮೊದಲ ಬಂಗಾಳಿ ಫೀಚರ್ ಫಿಲ್ಮ್ನಲ್ಲಿ ಕಾಣಿಸಿಕೊಳ್ಳುವುದನ್ನು ಸೂಚಿಸುತ್ತದೆ. ಈ ಚಿತ್ರದಲ್ಲಿ, ಜಾಯ್ ಅವರು ಕೆಲವೊಮ್ಮೆ ಸಂಯಮದಿಂದಿರುವ, ಆದರೆ ಉಷ್ಣತೆ, ಸ್ನೇಹಪರತೆ ಮತ್ತು ಸಹಜತೆಯನ್ನು ಪ್ರದರ್ಶಿಸುವ ಪಾತ್ರವಾಗಿ ಚಿತ್ರಿಸಲಾಗಿದೆ, ಇದು ಸಂಬಂಧಗಳು ಮತ್ತು ದೈನಂದಿನ ಭಾವನೆಗಳ ಅನ್ವೇಷಣೆಗೆ ಕೊಡುಗೆ ನೀಡುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
ಸುದ್ದಿದಿನ, ಚಿತ್ರದುರ್ಗ: ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗಗಳಲ್ಲಿ 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆಗೆ ಬಿಡುಗಡೆಯಾಗಿರುವ ಅಂದಾಜು 7 ಕೋಟಿ ಅನುದಾನದಲ್ಲಿನ ಅವ್ಯವಹಾರವನ್ನು ತನಿಖೆಗೆ ಒಳಪಡಿಸುವಂತೆ ಲೋಕಾಯುಕ್ತಾಗೆ ದೂರು ನೀಡಲಾಗಿದೆ ಎಂದು ವಕೀಲ ಕೆ.ಎ.ಓಬಳಪ್ಪ ಅವರು ತಿಳಿಸಿದರು.
ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಒಟ್ಟು 4 ಹಂತದಲ್ಲಿ 7 ಕೋಟಿ ರೂಪಾಯಿಗಳನ್ನು ಚಿತ್ರದುರ್ಗ ಜಿಲ್ಲೆಯ 06 ತಾಲ್ಲೂಕುಗಳಿಗೆ ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ಮಾಹಿತಿ ತಿಳಿದಿದೆ ಎಂದರು.
ಚಿತ್ರದುರ್ಗ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 06 ತಾಲ್ಲೂಕುಗಳ ಉಪವಿಭಾಗಗಳಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ ಮಾಹಿತಿ ಕೋರಿದಾಗ, ಯಾವುದೇ ಉಪವಿಭಾಗಗಳ ಅಧಿಕಾರಿಗಳು ಸೂಕ್ತ ಮಾಹಿತಿ ನೀಡದ ಕಾರಣ ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರಿಗೆ ಅರ್ಜಿ ಸಲ್ಲಿಸಿ, ‘2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಚಳ್ಳಕೆರೆ, ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ಮೊಳಕಾಲ್ಮೂರು ತಾಲ್ಲೂಕುಗಳಿಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ’ ದೂರು ನೀಡಲಾಗಿತ್ತು ಎಂದರು.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರು ನಮ್ಮ ದೂರು ಅರ್ಜಿಯನ್ನು ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ವರ್ಗಾಹಿಸಿ, ಸೂಕ್ತ ಕ್ರಮವಹಿಸಿ ಕಛೇರಿಗೆ ವರದಿ ಸಲ್ಲಿಸಲು ಸೂಚಿಸಿರುತ್ತಾರೆ. ಅದರಂತೆ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರು ವಿಚಾರಣೆ ನಡೆಸಿ, ಅರ್ಜಿದಾರರಿಗೆ ಕಡತ ವೀಕ್ಷಣೆ ಮಾಡಲು ಅವಕಾಶ ನೀಡಿ, ದಾಖಲೆ ನೀಡುವಂತೆ ಆದೇಶ ಹೊರಡಿಸಿರುತ್ತಾರೆ ಎಂದು ತಿಳಿಸಿದರು.
ಕಾರ್ಯಪಾಲಕ ಅಭಿಯಂತರರ ಆದೇಶದಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ಇವರುಗಳು ವಿವಿಧ ದಿನಾಂಕಗಳAದು ಉಪವಿಭಾಗಗಳಿಗೆ ಆಹ್ವಾನಿಸಿ, ಕಡತ ಪರಿಶೀಲನೆ ಮಾಡಿಕೊಳ್ಳುವಂತೆ ತಿಳಿಸಿದ ಕಾರಣ ಉಪವಿಭಾಗಗಳ ಕಾರ್ಯಪಾಲಕ ಅಭಿಯಂತರರುಗಳು ನಿಗಧಿಪಡಿಸಿದ ದಿನಾಂಕದಂದು ಉಪವಿಭಾಗಗಳ ಕಛೇರಿಗೆ ಭೇಟಿ ನೀಡಿದಾಗ ಕಂಡುಬಂದ ಅಂಶಗಳೆಂದರೆ;
1. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಚಿತ್ರದುರ್ಗ ಇಲ್ಲಿ ಒಟ್ಟು 80 ಕಾಮಗಾರಿಗಳು ನಡೆದಿದ್ದು, ಇದರಲ್ಲಿ ಕೇವಲ 23 ಕಾಮಗಾರಿಗಳ (ಅಂದಾಜು ಮೊತ್ತ ರೂ. 37.88 ಲಕ್ಷ) ಕಡತಗಳನ್ನು ತೋರಿಸಿದ್ದು, ಉಳಿದ ಕಾಮಗಾರಿಯ ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬ ನಮ್ಮ ಕಡತ ಪರಿಶೀಲನೆ ಪತ್ರಕ್ಕೆ ದೃಢೀಕರಣ ನೀಡಿರುತ್ತಾರೆ.
2. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಚಳ್ಳಕೆರೆ ಇಲ್ಲಿ ಒಟ್ಟು 80 ಕಾಮಗಾರಿಗಳ ಕಡತಗಳಲ್ಲಿ 28 ಕಾಮಗಾರಿಗಳ ಕಡತಗಳನ್ನು ತೋರಿಸಿದ್ದು, ಉಳಿದ 52 ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬ ನಮ್ಮ ಪರಿಶೀಲನೆ ಪತ್ರಕ್ಕೆ ದೃಢೀಕರಣ ನೀಡಿರುತ್ತಾರೆ.
3. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಇಲ್ಲಿಗೆ ಭೇಟಿ ನೀಡಿದ ಸಮಯದಲ್ಲಿ ಈ ಕಛೇರಿಗಳಲ್ಲಿ ಯಾವುದೇ ಕಡತಗಳು ಲಭ್ಯವಿರುವುದಿಲ್ಲ. ಕಛೇರಿಯ ಸಿಬ್ಬಂದಿಗಳು ತುರ್ತು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬುದಾಗಿ ದೃಢೀಕರಣ ನೀಡಿರುತ್ತಾರೆ ಎಂದು ತಿಳಿಸಿದರು.
ಕಡತ ಪರಿಶೀಲನೆಯ ತರುವಾಯ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ದೂರು ನೀಡಿ, ನಾವು ಕೋರಿದ ಅಗತ್ಯ ದಾಖಲೆಗಳನ್ನು ಒದಗಿಸಿಕೊಡುವಂತೆ ಕೋರಲಾಗಿತ್ತು. ಆದರೆ ಕಾರ್ಯಪಾಲಕ ಅಭಿಯಂತರರು ಇವರು ಮಾಹಿತಿ ಕೊಡಿಸುವಲ್ಲಿ ಮತ್ತು ತನಿಖಾ ವರದಿ ನೀಡುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಹಾಲಿ ಕಾರ್ಯಪಾಲಕ ಅಭಿಯಂತರರಾದ ಅಮರ್‌ನಾಥ್ ಜೈನ್ ಅವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿರುತ್ತದೆ ಎಂದರು.
ಈ ಎಲ್ಲಾ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ 6 ಉಪವಿಭಾಗಗಳಲ್ಲಿ ಕಾರ್ಯನಿರ್ವಹಿಸಿರುವ 23 ಸಹಾಯಕ ಕಾರ್ಯಪಾಲಕ ಅಭಿಯಂತರರು, 13 ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಿರಿಯ ಅಭಿಯಂತರರು, ಅಂದಿನ ಕಾರ್ಯಪಾಲಕ ಅಭಿಯಂತರರಾದ ಬಸವನಗೌಡ ಪಾಟೀಲ್ ಹಾಗೂ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಹಿರಿಯ ವಕೀಲರಾದ ನಾಗರಾಜ ಪೂಜಾರ್, ಪತ್ರಕರ್ತ ಅಶೋಕ್, ಹನುಮಂತಪ್ಪ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅನುದಾನ ದುರುಪಯೋಗ | ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಅಶೋಕ್ ಡಿ.ಆರ್ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಮೈಸೂರು ಇವರಿಗೆ ರಾಜ್ಯಾದ್ಯಂತ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಬಿಡುಗಡೆಯಾದ ರೂ. 695 ಲಕ್ಷಗಳ ಅನುದಾನದ ಖರ್ಚು ವೆಚ್ಚವನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಯಾವುದೇ ತನಿಖಾ ವರದಿನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ನಿರ್ಲಕ್ಷö್ಯ ತೋರಿದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇಲ್ಲಿನ ನಿರ್ದೇಶಕರಾದ ಡಾ. ಅಶೋಕ್ ಡಿ.ಆರ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿನ ಬುಡಕಟ್ಟು ಸಮುದಾಯಗಳ ಪ್ರಗತಿಗೆ ಸಂಬAಧಿಸಿದAತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಸಲುವಾಗಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಮೈಸೂರು ಇವರಿಗೆ ರೂ. 695 ಲಕ್ಷ ರೂಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಿರುತ್ತದೆ. ಸದರಿ ಅನುದಾನದ ಖರ್ಚು-ವೆಚ್ಚದಲ್ಲಿ ಸಾಕಷ್ಟು ಅವ್ಯವಹಾರ ಹಾಗೂ ಅಕ್ರಮಗಳು ನಡೆದಿರುವ ಅಧಿಕೃತ ದಾಖಲೆಗಳನ್ನು ಲಗತ್ತಿಸಿ ಇಲಾಖಾ ತನಿಖೆ ನಡೆಸುವಂತೆ ನಿರ್ದೇಶಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇವರಿಗೆ ದಿನಾಂಕ: 27-04-2026 ರಂದು ದೂರು ನೀಡಲಾಗಿತ್ತು.
ಆದರೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಸಾರ್ವಜನಿಕ ಹಿತಾಸಕ್ತಿ ಕೇಂದ್ರಿತ ದೂರು ಅರ್ಜಿಗೆ ಸಂಬಂಧಿಸಿದಂತೆ ನಿರ್ದೇಶಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇವರು ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡಿರುವುದಿಲ್ಲ. ಆದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಡಾ. ಅಶೋಕ್ ಡಿ.ಆರ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


