ರಾಜಕೀಯ
ಅಹಿಂಸೆ : ಎಂದಿಗೂ ಬತ್ತದ ನದಿಯ ನಿನಾದ
ಸಂಘರ್ಷವನ್ನು ಸ್ಥಾಯಿಯಾಗಿಸಿ ಪ್ರಯೋಜನ ಪಡೆದುಕೊಳ್ಳುವ ಪ್ರಯತ್ನಗಳು ನಿರಂತರವಾಗಿ ಯಶಸ್ಸು ಕಾಣುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಅಹಿಂಸೆಯ ಮೌಲ್ಯದ ಆಧಾರದಲ್ಲಿ ಪರ್ಯಾಯ ರಾಜಕಾರಣ ರಾಷ್ಟ್ರದಾದ್ಯಂತ ರೂಪುಗೊಳ್ಳಬೇಕಾದ ಅನಿವಾರ್ಯತೆಯನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಕಾಡಿಸಿಕೊಳ್ಳಬೇಕಿದೆ. ದೇಶವೊಂದು ಇನ್ನೊಂದು ರಾಷ್ಟ್ರದ ಕುರಿತು ಸಿಟ್ಟಿಗೇಳುವಿಕೆ ಜಾಗತಿಕ ಮಟ್ಟದ ಸಂಘರ್ಷವನ್ನು ಸಂಕೇತಿಸಿದರೆ, ಜನರ ನಡುವೆಯೇ ನಡೆಯುವ ಜಗಳಗಳು ಆಂತರಿಕ ವ್ಯಗ್ರತೆಗೆ ಸಾಕ್ಷಿಯಾಗುತ್ತವೆ. ವಿವಿಧ ಸ್ತರಗಳಲ್ಲಿ ವ್ಯಗ್ರತೆಯು ವ್ಯಕ್ತಿಯೊಳಗೆ ಮೇಳೈಸಿಕೊಳ್ಳುತ್ತದೆ. ಅದು ವಿವಿಧ ವರ್ತನೆಗಳಲ್ಲಿ ವ್ಯಕ್ತವಾಗುತ್ತದೆ. ಆ ವರ್ತನೆಗಳು ಉಂಟುಮಾಡುವ ಪರಿಣಾಮಗಳು ವ್ಯಕ್ತಿಗತ ಹಾಗೂ ಸಾಮೂಹಿಕ ಸಂಘರ್ಷಗಳ ರೂಪದಲ್ಲಿ ಕಂಡುಬರುತ್ತವೆ. ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಅಧಿಕಾರ ಕೇಂದ್ರಗಳು ಈ ರೂಪಗಳನ್ನು ತಮ್ಮ ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಅತ್ಯಂತ ಚಾಣಾಕ್ಷಯುತವಾಗಿ ಬಳಸಿಕೊಳ್ಳುತ್ತವೆ. ದೇಶ, ಧರ್ಮ ಮತ್ತು ಜಾತಿಯ ಅಸ್ಮಿತೆಯ ಪ್ರಶ್ನೆಗಳನ್ನು ಮುನ್ನೆಲೆಗೆ ತಂದು ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ರಾಜಕಾರಣ ಅತ್ಯಂತ ಯಶಸ್ವಿಯಾಗಿ ನಿಭಾಯಿಸಲ್ಪಡುತ್ತದೆ.
ಪ್ರಜಾಪ್ರಭುತ್ವವಾದಿ ಆಡಳಿತ ವಿನ್ಯಾಸಗೊಳಿಸಗೊಳಿಸಿಕೊಂಡಿರುವ ಅಭಿವೃದ್ಧಿ ಮತ್ತು ಅದಕ್ಕೆ ಸಂಬಂಧಿಸಿದ ಪರಿಕಲ್ಪನೆಗಳು ಅಂಥ ರಾಜಕಾರಣಕ್ಕೆ ಪೂರಕವಾಗಿರುವಂತೆಯೇ ಪಾತ್ರವನ್ನು ನಿರ್ವಹಿಸುತ್ತಿವೆ. ಟೊಳ್ಳುತನದ ಸಂಗತಿಗಳೊಂದಿಗೆ ಅಭಿವೃದ್ದಿಯನ್ನು ವ್ಯಾಖ್ಯಾನಿಸುವ ಪ್ರವೃತ್ತಿಯನ್ನು ಸಾರ್ವತ್ರಿಕಗೊಳಿಸುವ ಈ ಅಭಿವೃದ್ಧಿಯು ಅದಕ್ಕೆ ಸಹಕಾರಿಯಾಗಿರುತ್ತದೆ. ಪ್ರಶ್ನಿಸುವ ಬದಲಾಗಿ ಆ ಸಂಕುಚಿತ ರಾಜಕಾರಣವು ಅಧಿಕಾರ ಮತ್ತು ಪ್ರಭಾವವನ್ನು ಸ್ಥಿರವಾಗಿರಿಸಿಕೊಂಡು ಬಹುದೊಡ್ಡ ಸಾಮಾಜಿಕ ಪಲ್ಲಟದ ಸಾಧ್ಯತೆಗಳನ್ನು ಒಡೆಯುವುದರ ಕಡೆಗೆ ನಡೆದುಬಿಡುತ್ತದೆ. ಅಡ್ಡ ಎದುರಾಗುವವರನ್ನು ತಮ್ಮ ಪ್ರಭಾವೀ ಪ್ರಾಬಲ್ಯದ ಬಲದೊಂದಿಗೆ ಹತ್ತಿಕ್ಕಿಬಿಡುತ್ತದೆ. ಅಧಿಕಾರ ಕೇಂದ್ರಗಳ ಮೂಲಕ ದಾಟಿಕೊಂಡ ಶಿಕ್ಷಣವು ವ್ಯಕ್ತಿಗತ ಪ್ರಯೋಜನವಾದಿ ಯೋಚನೆಗಳನ್ನೇ ಬಿತ್ತುವುದರ ಕಡೆಗೆ ಆಸಕ್ತಿ ವಹಿಸುವುದರಿಂದ ಶಿಕ್ಷಿತ-ಸುಶಿಕ್ಷಿತ ವಲಯವೂ ಅನಕ್ಷರಸ್ತ ಸಮುದಾಯಗಳಲ್ಲಿರುವ ಮೌಢ್ಯವನ್ನೇ ಅಂತರ್ಗತ ಗುಣಲಕ್ಷಣವಾಗಿಸಿಕೊಳ್ಳುತ್ತದೆ. ಅದನ್ನು ಜನರೊಳಗೂ ವ್ಯಾಪಕವಾಗಿಸಲು ಪ್ರಯತ್ನಿಸುತ್ತದೆ. ಹೀಗಾದಾಗ ಹೊಸ ಪೀಳಿಗೆಯು ಅದರ ರಹಸ್ಯ ಕಾರ್ಯಸೂಚಿಯ ಭಾಗವಾಗಿರುವ ಅಪಮೌಲ್ಯೀಕೃತ ಅಂಶಗಳು ರೂಪಿಸುವ ಚೌಕಟ್ಟುಗಳಲ್ಲಿ ಬಂಧಿಯಾಗಿ ಯೋಚಿಸಲಾರಂಭಿಸುತ್ತದೆ.
ಸಾರ್ವಕಾಲಿಕ ಮೌಲಿಕ ರಾಜಕೀಯ ಆಂದೋಲನದ ಹೊಳಹುಗಳು
ಈ ಹಂತದಲ್ಲಿಯೇ ಸಂಘರ್ಷದ ಪರ ನಿಲ್ಲುವ ದೃಷ್ಟಿಕೋನಗಳನ್ನೇ ಮುಖ್ಯವಾಗಿಸಿಕೊಳ್ಳುತ್ತದೆ. ಅಹಿಂಸೆಯ ಮೌಲ್ಯದ ಸಕಾರಾತ್ಮಕತೆಯು ಹಿಂಸೆಯ ಪರವಾದ ವಿತಂಡವಾದಿ ಆಲೋಚನೆಗಳ ಭರಾಟೆಯಲ್ಲಿ ಹಿನ್ನೆಲೆಗೆ ಸರಿಯುತ್ತದೆ. ಇಂಥ ಸಂದರ್ಭದಲ್ಲಿ ಅಹಿಂಸಾತ್ಮಕ ಮನೋಧರ್ಮವನ್ನು ಮುನ್ನೆಲೆಗೆ ತಂದು ಅಧಿಕೃತಗೊಳಿಸುವ ಅಪ್ಪಟ ಪ್ರಯೋಗಶೀಲ ರಾಜಕಾರಣ ಮೊಳಕೆಯೊಡೆಯಬೇಕು. ಹಾಗಾಗುತ್ತಿಲ್ಲ. ಹಾಗಾಗುವುದಕ್ಕೆ ಸಾಮಾಜಿಕ, ರಾಜಕೀಯ, ಧಾರ್ಮಿಕ ಕೇಂದ್ರಗಳ ಮುಂಚೂಣಿ ಮುಖಂಡತ್ವ ಬಿಡುತ್ತಿಲ್ಲ. ತಾವು ಸಮಸ್ಯೆ ಎಂದು ಪರಿಭಾವಿಸಿಕೊಂಡಿರುವ ಜಟಿಲತೆಗೆ ಪ್ರಾಮಾಣಿಕವಾಗಿ ಪರಿಹಾರ ಹುಡುಕಿಕೊಳ್ಳುವ ಪ್ರಯತ್ನಗಳನ್ನೂ ನಡೆಸುತ್ತಿಲ್ಲ. ಅಂಥ ಪ್ರಾಮಾಣಿಕ ಹೆಜ್ಜೆಗಳು ಅಹಿಂಸೆಯ ಪರವಾದ ಅಲೆಯನ್ನು ಸೃಷ್ಟಿಸುವ ಸಾರ್ವಕಾಲಿಕ ಮೌಲಿಕ ರಾಜಕೀಯ ಆಂದೋಲನದ ಹೊಳಹುಗಳನ್ನು ಹೊಳೆಸುತ್ತವೆ. ಇದರ ಬದಲಾಗಿ ಮತ್ತೆ ಜಾತಿನಿಷ್ಠ ಮಿತಿಗಳನ್ನು ವಿಸ್ತರಿಸುವ, ಧರ್ಮದೊಳಗೆ ಇಲ್ಲದೇ ಇರುವ ಸಂಗತಿಗಳನ್ನು ಇತಿಹಾಸದೊಂದಿಗೆ ತಳುಕುಹಾಕುವ ಮತ್ತು ಅಂಥ ಸಂಕುಚಿತ ಪಠ್ಯಗಳ ಆಧಾರದಲ್ಲಿಯೇ ಅಧಿಕಾರ ರಾಜಕಾರಣವನ್ನು ಬದುಕಿಸಿಬಿಡುವ ಹುನ್ನಾರಗಳನ್ನು ಹೊಳೆಸಿಕೊಳ್ಳುವುದರ ಕಡೆಗೇ ಅತ್ಯುತ್ಸಾಹ ವ್ಯಕ್ತವಾಗುತ್ತಿದೆ. ಒಳ್ಳೆಯದನ್ನು ಹೇಳಿದರೆ ಸುಲಭಕ್ಕೆ ಒಪ್ಪಿಕೊಳ್ಳದ ಹಠಮಾರಿತನ ಅದರದ್ದು. ಗಾಂಧಿ ಜೀವಂತಗೊಳಿಸಿದ ಅಹಿಂಸೆಯ ಮಾದರಿಯ ಬಗ್ಗೆ ಪ್ರಸ್ತಾಪಿಸಿದರೆ ಅದು ದಿಢೀರನೆ ಅವಿವೇಕತನದ ಅತಿರೇಕವನ್ನು ಪ್ರದರ್ಶಿಸಿಬಿಡುತ್ತದೆ. ‘ಗಾಂಧಿ ಏನಿದ್ದರೂ ಆ ಕಾಲಕ್ಕೆ, ಈಗಲ್ಲ’ ಎಂದು ಉಡಾಫೆಯ ಮನೋಭಾವವನ್ನು ತೂರಿಬಿಡುತ್ತದೆ.
ಗಾಂಧಿಯ ವ್ಯಕ್ತಿತ್ವದೊಂದಿಗೇ ಬೆರೆತುಹೋಗಿದ್ದ ಅಹಿಂಸೆಯ ಮೌಲ್ಯವು ವರ್ತಮಾನದಲ್ಲಷ್ಟೇ ಅಲ್ಲ, ಭವಿಷ್ಯದ ಜಗತ್ತಿನ ಎಲ್ಲ ಬಗೆಯ ಸಂಘರ್ಷಗಳನ್ನು ಕೊನೆಗಾಣಿಸುವ ಪ್ರಾಕೃತಿಕ ದಿವ್ಯೌಷಧ ಎಂಬುದನ್ನು ಮನಗಾಣಲೇಬೇಕು. ಗಾಂಧಿಯನ್ನು ಅರ್ಥೈಸಿಕೊಳ್ಳದ ಮನಸ್ಸುಗಳು ಈ ಕ್ಷಣಕ್ಕೆ ತಮ್ಮ ಮೂಗಿನ ನೇರಕ್ಕೆ ತೀರ್ಮಾನವನ್ನು ಕೈಗೊಂಡುಬಿಡುತ್ತವೆ. ಸಂಪೂರ್ಣ ತಿಳುವಳಿಕೆ ಇಲ್ಲದೇ ರೂಪುಗೊಳ್ಳುವ ಅಂಥ ವ್ಯಕ್ತಿಗತ ನಿಲುವುಗಳು ಸಮೂಹಕ್ಕೂ ದಾಟಿಕೊಳ್ಳುತ್ತವೆ. ಗಾಂಧಿ ಮತ್ತು ಅವರು ಪ್ರತಿಪಾದಿಸಿದ ಅಹಿಂಸಾವಾದ ಅಪ್ರಸ್ತುತ ಎಂದು ಹೇಳುವ ಕಾಲಕ್ಕೆ ಅಹಿಂಸೆಯ ತಾತ್ವಿಕತೆಯೊಂದಿಗಿನ ಗಾಂಧಿ ವ್ಯಕ್ತಿತ್ವವನ್ನು ಸಮಗ್ರವಾಗಿ ತಿಳಿದುಕೊಳ್ಳುವ ಪ್ರಯತ್ನಗಳನ್ನೇ ನಡೆಸುವುದಿಲ್ಲ. ಆ ತಾತ್ವಿಕ ಆದರ್ಶವನ್ನು ವರ್ತಮಾನದ ಸ್ಥಿತಿಗತಿಗಳಿಗೆ ತಕ್ಕಂತೆ ಅನ್ವಯಿಸಿಕೊಳ್ಳುವ ನಮ್ಯತೆಯ ಹೆಜ್ಜೆಗಳನ್ನೇ ಅನುಸರಿಸದೇ ಸಾರಾಸಗಟಾಗಿ ತಿರಸ್ಕಾರದ ಭಾವನೆಗಳು ನೆಲೆಗೊಂಡರೆ ಪ್ರಯೋಜನವಿಲ್ಲ.
ಅಹಿಂಸೆ : ಫಿಫ್ಟಿ-ಫಿಪ್ಟಿ ಲೆಕ್ಕಾಚಾರದ ನೆಲೆಗಟ್ಟಿನ ಪರಿಭಾಷೆ..?
ಈಗಿನ ರಾಜಕೀಯ ಹೇಳಿಕೆಗಳು ಇಂಥ ತಿರಸ್ಕಾರದ ಭಾವನೆಗಳ ಆಧಾರದಲ್ಲಿಯೇ ರೂಪುಗೊಳ್ಳುತ್ತಿವೆ. ಅವುಗಳು ಜನರ ಅಭಿಪ್ರಾಯಗಳನ್ನೂ ನಿಯಂತ್ರಿಸುತ್ತಿವೆ. ಗಾಂಧಿ ಮತ್ತು ಅಹಿಂಸಾ ತಾತ್ವಿಕತೆಯ ಬಗ್ಗೆ ಹೊಸ ಪೀಳಿಗೆಯು ಅರ್ಧಂಬರ್ಧ ತಿಳಿದುಕೊಂಡ ಸಂದರ್ಭದಲ್ಲಿ ಪ್ರಬಲ ಕೇಂದ್ರಗಳು ಹಿಂಸೆಯೊಂದಿಗಿನ ಕಾರ್ಯತಂತ್ರಗಳನ್ನು ಪ್ರಯೋಗಿಸಿ ಯಶಸ್ಸು ಕಂಡುಕೊಳ್ಳುತ್ತವೆ. ಈ ಕಾರ್ಯತಂತ್ರಗಳನ್ನು ಅಧಿಕಾರ ಕೇಂದ್ರಗಳು ಸಂಘಟನೆಗಳ ನೆರವಿನೊಂದಿಗೆ ಪ್ರಯೋಗಿಸುತ್ತವೆ. ಈಗಾಗಲೇ ಆಗಿಹೋದ ಇತಿಹಾಸ, ಗಾಂಧಿಯೂ ಸೇರಿದಂತೆ ವಿವಿಧ ದಾರ್ಶನಿಕರ ಕುರಿತಾದ ಸಮಗ್ರ ವಿವರಗಳು ಮತ್ತು ತಾತ್ವಿಕತೆಯ ಶಕ್ತಿಯ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಂಡಿರದ ಜನಸಮೂಹದ ಅಜ್ಞಾನವನ್ನು ತಮ್ಮ ರಹಸ್ಯ ಕಾರ್ಯಸೂಚಿಗಳ ಯಶಸ್ವಿಗೆ ಪೂರಕವಾಗಿ ಬಳಸಿಕೊಳ್ಳುತ್ತವೆ. ಇಂದು ಬಹುತೇಕ ಯುವಕರು ಹಿಂಸೆ ಮತ್ತು ಅಹಿಂಸೆಯನ್ನು ಫಿಫ್ಟಿ-ಫಿಪ್ಟಿ ಲೆಕ್ಕಾಚಾರದ ನೆಲೆಗಟ್ಟಿನ ಪರಿಭಾಷೆಯಲ್ಲಿ ಚರ್ಚೆಗೊಳಪಡಿಸುತ್ತಿದ್ದಾರೆ. ಇದರರ್ಥ ಐವತ್ತು ಪರ್ಸೆಂಟ್ ಹಿಂಸೆ, ಐವತ್ತು ಪರ್ಸೆಂಟ್ ಅಹಿಂಸೆ ಇರಬೇಕು, ಅಂದಾಗಲೇ ಬ್ಯಾಲೆನ್ಸ್ ಆಗುತ್ತದೆ ಎಂಬ ಸಂಕುಚಿತತೆಯ ವಾದಗಳನ್ನು ಮುಂದಿಡುತ್ತಿದ್ದಾರೆ. ಹಿಂಸಿಸುವ ಪ್ರಾಬಲ್ಯ ನಮ್ಮ ಜೊತೆಗಿದ್ದರೆ ಉಳಿದವರು ಭಯಪಡುತ್ತಾರೆ ಎಂದು ಹಿರಿಯರ ಮುಂದೆ ಅಪ್ರಬುದ್ಧ ಮಾತುಗಳನ್ನಾಡುತ್ತಿದ್ದಾರೆ. ಅವರೊಂದಿಗೆ ಚರ್ಚಿಸುವ ಉತ್ಸಾಹದಲ್ಲಿ ಗಾಂಧಿ ವ್ಯಕ್ತಿತ್ವ, ಅವರು ಪ್ರತಿಪಾದಿಸಿದ ಅಹಿಂಸಾ ಮೌಲ್ಯ, ಭಾರತದ ಸ್ವಾತಂತ್ರ್ಯದ ಹೋರಾಟದಲ್ಲಿ ಅದು ನಿರ್ವಹಿಸಿದ ಮೌಲಿಕ ಪಾತ್ರ, ವರ್ತಮಾನದಲ್ಲಿ ಅದು ಅನ್ವಯಗೊಳ್ಳಬೇಕಾದ ಅವಶ್ಯಕತೆಗಳ ಬಗ್ಗೆ ಮಾತನಾಡಿದರೆ ಆ ಅಂಶಗಳನ್ನು ಆ ಕ್ಷಣಕ್ಕೆ ಸಂಕುಚಿತವಾಗಿ ಅರ್ಥೈಸಿಕೊಂಡು ಅಪ್ರಸ್ತುತವೆನ್ನಿಸುವ, ಅವಿವೇಕತನದ ವಾದವನ್ನು ಮುಂದಿಡುತ್ತಿದ್ದಾರೆ. ಮುಖ್ಯವಾಹಿನಿಯ ಮಾಧ್ಯಮಗಳ ಒಳಗೂ ಇಂಥ ವಾದಗಳನ್ನು ನೆಚ್ಚಿಕೊಂಡವರು ಇರುವುದರಿಂದ ಗಾಂಧಿ ಕುರಿತಾದ ಸಮಗ್ರ ಅರ್ಥೈಸಿಕೊಳ್ಳುವಿಕೆಯ ಜವಾಬ್ದಾರಿಯುತ ನಡೆಗಳು ಹಿನ್ನಡೆ ಅನುಭವಿಸುವಂಥ ಸ್ಥಿತಿ ನಿರ್ಮಾಣವಾಗಿದೆ.
ಅಹಿಂಸೆಯ ಸಾರ್ವಕಾಲಿಕತೆಯ ನಿದರ್ಶನಗಳು
ಇತಿಹಾಸದ ಪುಟಗಳಲ್ಲಿ ಅಹಿಂಸೆಯ ಸಾರ್ವಕಾಲಿಕತೆಯ ಶ್ರೇಷ್ಠ ನಿದರ್ಶನಗಳು ದಾಖಲಾಗಿವೆ. ಅವುಗಳು ವರ್ತಮಾನದ ಪೀಳಿಗೆಯ ಪ್ರಜ್ಞೆಯ ಅಂತಸತ್ವವನ್ನು ಮತ್ತಷ್ಟು ಪ್ರಖರಗೊಳಿಸುವ ರೀತಿಯಲ್ಲಿ ಮೇಳೈಸಿಕೊಳ್ಳಬೇಕು. ಆದರೆ, ಮೌಲಿಕ ಆದರ್ಶ ಹೆಜ್ಜೆಗಳು ಮತ್ತು ಅವುಗಳೊಂದಿಗಿನ ಇತಿಹಾಸದ ಅರಿವು ತಂದುಕೊಳ್ಳುವ ಯಾವುದೇ ಪ್ರಯತ್ನಗಳಲ್ಲಿ ತೊಡಗಿಕೊಳ್ಳದೇ ಅಗ್ರೆಸ್ಸಿವ್ ನಡವಳಿಕೆಗಳನ್ನೇ ಬಂಡವಾಳವಾಗಿಸಿಕೊಳ್ಳುತ್ತಿರುವ ಯುವ ಸಮೂಹವು ಪ್ರಬಲ ಶಕ್ತಿಗಳು ಸಾಕಿಕೊಳ್ಳುವ ರಾಜಕೀಯ ಪಕ್ಷಗಳ
ಕಾರ್ಯಕರ್ತರಾಗುವುದಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡಿದೆ. ಹಿಂದಿನದ್ದನ್ನು ಅರಿತುಕೊಳ್ಳುವ ಸಂಯಮ, ಯಾರು ಯಾರನ್ನು ದಾರಿ ತಪ್ಪಿಸಿ ತಮ್ಮ ಶಕ್ತಿ ಸಂಪನ್ಮೂಲವನ್ನು ಯಾವ ಬಗೆಯ ಸಂಘರ್ಷಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದರ ಕುರಿತಾದ ಸ್ಪಷ್ಟ ತಿಳುವಳಿಕೆ, ಆ ಮೂಲಕ ಅಹಿಂಸೆಯೊಂದಿಗಿನ ಗಾಂಧಿವಾದವನ್ನು ಮುನ್ನೆಲೆಗೆ ತರುವಂಥ ಆದರ್ಶಯುತ ಹೆಜ್ಜೆಗಳೊಂದಿಗೆ ಗುರುತಿಸಿಕೊಳ್ಳಬಹುದಾದ ಅವಕಾಶವನ್ನೇ ಬಿಟ್ಟುಕೊಟ್ಟಿದೆ. ಈ ಕಾರಣಕ್ಕಾಗಿಯೇ ಯಾವುದು ಸರಿ, ಯಾವುದು ತಪ್ಪು ಎಂಬ ವಿವೇಚನೆಯ ಬದಲು ಅಧಿಕಾರ ಸಂರಚನೆಯ ಕೇಂದ್ರಗಳನ್ನು ಬಲಪಡಿಸಿ ತಮ್ಮ ತಾತ್ಪೂರ್ತಿಕ ಆಸೆಗಳನ್ನು ಅವರು ಈಡೇರಿಸಿಕೊಳ್ಳುತ್ತಿದ್ದಾರೆ. ಬೈಕ್ ಕೊಳ್ಳಬೇಕು, ಕಾರ್ ಜೊತೆಗಿರಿಸಿಕೊಂಡು ಪ್ರತಿಷ್ಠೆ ಮೆರೆಯಬೇಕು, ಸುಸಜ್ಜಿತ ಮನೆ ಹೊಂದಬೇಕು, ಐಷಾರಾಮಿ ಬದುಕು ತಮ್ಮದಾಗಿಸಿಕೊಳ್ಳಬೇಕು – ಇಂಥವೇ ತಾತ್ಪೂರ್ತಿಕ ಆಸೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ಕಾರ್ಯಕರ್ತರಿಗೆ ಹಂತಹಂತವಾಗಿ ರಾಜಕೀಯ ಪಕ್ಷಗಳು ನೆರವಾಗುತ್ತವೆ. ಅಧಿಕಾರದ ಗಮ್ಯ ತಲುಪಿಕೊಳ್ಳಲು ಇವು ಸಂಘರ್ಷ ಸೃಷ್ಟಿಗೆ ಇಂಥ ಯುವ ಸಮೂಹವನ್ನೇ ಬಳಸಿಕೊಳ್ಳುತ್ತವೆ. ಆಗ ಹಿಂಸೆಯೇ ವ್ಯಾಪಕವಾಗುತ್ತದೆ. ಅಹಿಂಸೆಯ ತಾರ್ಕಿಕವಾದವನ್ನೇ ಅಲ್ಲಗಳೆಯುವಂಥ ವಾತಾವರಣವನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗುತ್ತದೆ.
ಸಾಂಪ್ರದಾಯಿಕ ಸಂಕುಚಿತ ಮೂಲಭೂತವಾದಿ ಅಣೆಕಟ್ಟುಗಳು
ನಾವು ಎಷ್ಟೇ ಕೃತಿಗಳನ್ನು ಓದಿಕೊಂಡರೂ, ತಜ್ಞರ ಬರಹಗಳನ್ನು ಗೊತ್ತುಮಾಡಿಕೊಂಡರೂ ಗಾಂಧೀಜಿಯವರ ಅಹಿಂಸೆಯ ತಾತ್ವಿಕ ದಾರ್ಶನಿಕ ನದಿಯ ಜೀವಜಲದ ಬೊಗಸೆಯಷ್ಟು ಹನಿಗಳನ್ನಷ್ಟೇ ದಕ್ಕಿಸಿಕೊಂಡಿರುತ್ತೇವೆ. ಅದರ ಜೀವಂತಿಕೆಯ ಸಮಗ್ರ ಅಮೃತಧಾರೆಯನ್ನು ನಮ್ಮೊಳಗಿಳಿಸಿಕೊಳ್ಳುವ ನಿರಂತರ ಪ್ರಯತ್ನಗಳ ಮೂಲಕವೇ ಆ ತಾತ್ವಿಕತೆಯ ಹೊಳೆಯು ಮನುಷ್ಯಸಮೂಹದೊಳಗೆ ನೆಲೆಗೊಳ್ಳುತ್ತಾ ತನ್ನ ನಡಿಗೆಯನ್ನು ಮೂಡಿಸುತ್ತಾ ಸಾಗುತ್ತದೆ. ಅದು ಸಾಗಿದಲ್ಲೆಲ್ಲಾ ಮನುಷ್ಯತ್ವ ಮತ್ತು ಜೀವಪರ ನಿಲುವುಗಳ ಫಲವತ್ತತೆಯು ವ್ಯಾಪಕವಾಗುತ್ತಿರುತ್ತದೆ. ಆದರೆ, ಇಂಥ ತಾತ್ವಿಕ ನದಿಯ ಹರಿವನ್ನು ಅರ್ಧಕ್ಕೆ ತಡೆಗಟ್ಟಿ ಸಾಂಪ್ರದಾಯಿಕ ಸಂಕುಚಿತ ಮೂಲಭೂತವಾದಿ ಅಣೆಕಟ್ಟುಗಳನ್ನು ಕಟ್ಟಲಾಗುತ್ತಿದೆ. ಈ ಅಣೆಕಟ್ಟುಗಳೇ ಸುಖ, ಶಾಂತಿ, ನೆಮ್ಮದಿಯೊಂದಿಗಿನ ಅಭ್ಯುದಯದ ಬೆಳೆ ಬೆಳೆಯುವುದಕ್ಕೆ ಸಹಕಾರಿಯಾಗುತ್ತವೆ ಎಂಬ ತಪ್ಪುಕಲ್ಪನೆಯನ್ನೇ ಬಿತ್ತಿ ನಂಬಿಸಲಾಗುತ್ತಿದೆ. ಇಂಥ ಸಂಕೀರ್ಣತೆಯ ಮಧ್ಯೆ ಅಹಿಂಸೆಯ ಜೀವನದಿ ಬತ್ತದಂತೆ, ಅದು ಕಾಲದಿಂದ ಕಾಲಕ್ಕೆ ಅತ್ಯಂತ ಎಚ್ಚರದೊಂದಿಗೆ ದಾಟಿಕೊಳ್ಳುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನಿರ್ವಹಿಸುವ ಹೊಸದೊಂದು ಪರ್ಯಾಯ ರಾಜಕಾರಣದ ಮಾದರಿ ರೂಪುಗೊಳ್ಳಬೇಕಾಗಿದೆ. ಅದಕ್ಕಿಂತ ಮುಂಚೆ ಅಹಿಂಸೆಯ ತಾತ್ವಿಕ ನದಿಯ ಹರಿವು ನಿಲ್ಲಿಸುತ್ತಿರುವ ಶಕ್ತಿಗಳನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳಬೇಕಾಗಿದೆ. ಆ ಶಕ್ತಿಗಳು ಈ ನದಿಯನ್ನು ಬತ್ತಿಸುವ ಪ್ರಯತ್ನದಲ್ಲಿ ತೊಡಗಿವೆ. ಅದರ ಚಲನೆಯ ಹರಿವಿನೊಳಗೆ ರಕ್ತಪಾತ ನಡೆಸಿ ಭಯ ಹುಟ್ಟಿಸಿ ತಾವು ಪ್ರಬಲರಾಗುವ ಸ್ವಹಿತಾಸಕ್ತಿಗಳನ್ನು ಕಾಯ್ದುಕೊಳ್ಳುತ್ತಿವೆ. ಜನರನ್ನು ಮರಳು ಮಾಡುವ ಮರಳುಗಾರಿಕೆಯನ್ನು ಇದೇ ಆವರಣದಲ್ಲಿಯೇ ಅತ್ಯಂತ ಚಾಣಾಕ್ಷತನದಿಂದ ನಿರ್ವಹಿಸುತ್ತಿವೆ. ಇದಕ್ಕೆ ಪರ್ಯಾಯವಾಗಿ ಅಪ್ಪಟ ಸಾತ್ವಿಕತೆಯೊಂದಿಗಿನ ರಾಜಕಾರಣ ರೂಪುಗೊಳ್ಳಬೇಕು. ಅಹಿಂಸೆಯು ಸಾರ್ವಕಾಲಿಕ ಸತ್ಯ. ಹಾಗಾಗಿಯೇ ಎಲ್ಲ ಕಾಲದ ಕೊಳಕುಗಳೊಂದಿಗೆ ಎದುರುಗೊಳ್ಳುತ್ತಲೇ ಅದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ. ಅದು ಎಂದಿಗೂ ಬತ್ತದ ನದಿಯ ನಿನಾದದ ಹಾಗೆ. ಪ್ರಾಕೃತಿಕ ವಿಕೋಪಗಳಾದಾಗ ಅದರ ನಡಿಗೆಗೆ ಅಡ್ಡಿ-ಆತಂಕಗಳು ಎದುರಾಗುವ ಹಾಗೆ ಇದೀಗ ಪ್ರಬಲ ಶಕ್ತಿಗಳ ಉದ್ದೇಶಪೂರ್ವಕ ನಕಾರಾತ್ಮಕತೆಯ ಕಾರಣಕ್ಕಾಗಿ ಹಿಂಸೆಯೇ ಸರಿಯಾದದ್ದು ಎಂಬ ಸಂಕುಚಿತ ಅಭಿಪ್ರಾಯ ಮುನ್ನೆಲೆಗೆ ಬಂದಿದೆ. ಇದನ್ನು ಅಲ್ಲಗಳೆದು ಅಹಿಂಸೆಯೇ ನಿರ್ಣಾಯಕ, ಅದರ ಆಧಾರದಲ್ಲಿಯೇ ನವಭಾರತದ ನಿರ್ಮಾಣ ಎಂಬ ದೃಢಸಂಕಲ್ಪದೊಂದಿಗಿನ ಸನ್ಮತಿಯ ರಾಜಕಾರಣ ಶುರುವಾಗಬೇಕಿದೆ. ಅಹಿಂಸೆಯ ನಿನಾದದ ಮಾಧುರ್ಯದ ಮಾದರಿ ಜಗತ್ತನ್ನು ಸ್ವಚ್ಛಗೊಳಿಸಬೇಕಿದೆ.
-ಡಾ.ಎನ್.ಕೆ.ಪದ್ಮನಾಭ
ಕ್ರೀಡೆ
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ತುಮಕೂರು:ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ತುಮಕೂರಿನಲ್ಲಿ ಒಟ್ಟು 50 ಎಕರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನೀಡಲಾಗಿದ್ದು ಇದು ಜಿಲ್ಲೆಯ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತುಮಕೂರಿನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಆದಷ್ಟು ಶೀಘ್ರವೇ ಕ್ರೀಡಾಂಗಣ ನಿರ್ಮಾಣ ಮುಗಿಸಿ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಪೂರೈಸಲಾಗುವುದು ಎಂದು ಹೇಳಿದ್ದಾರೆ. ಮೈಸೂರಿನಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ಕ್ರಿಕೆಟ್ ಸಂಸ್ಥೆ ಬೇಡಿಕೆ ಮುಂದಿಟ್ಟಿದ್ದು ಮೈಸೂರಿನಲ್ಲೂ ಜಾಗ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಚೆನ್ನೈ-ಮುಂಬೈ ಇಂಡಸ್ಟ್ರೀಯಲ್ ಕಾರಿಡಾರ್ ಗಾಗಿ ಆರು ಹಂತದಲ್ಲಿ 20 ಸಾವಿರ ಎಕರೆ ಸ್ವಾಧೀನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವಸಂತನರಸಾಪುರದಲ್ಲಿ ಏಷ್ಯಾದಲ್ಲಿಯೇ ಅತಿ ದೊಡ್ಡ ಟೌನ್ ಶಿಪ್ ಪ್ರಾರಂಭವಾಗಿದೆ ಎಂದು ತಿಳಿಸಿದ ಅವರು, ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಕೈಗಾರಿಕೆಗಳಿಗೆ ಮನವಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಹಿವಾಟುಗಳಲ್ಲಿ ಅಮೆರಿಕ ಡಾಲರ್ ಬದಲಾಯಿಸದಂತೆ ಬ್ರಿಕ್ಸ್ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯ
ಸುದ್ದಿದಿನಡೆಸ್ಕ್:ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಹೊಸ ಕರೆನ್ಸಿಯನ್ನು ಪರಿಚಯಿಸುವುದಾಗಲಿ ಅಥವಾ ವಹಿವಾಟುಗಳಲ್ಲಿ ಅಮೆರಿಕ ಡಾಲರ್ ಅನ್ನು ಬದಲಿಸಿ ಬೇರೆ ಕರೆನ್ಸಿಗಳನ್ನು ಬೆಂಬಲಿಸುವ ಕೆಲಸ ಮಾಡದಿರಲು ಬದ್ಧವಾಗಿರಬೇಕು, ಇಲ್ಲವಾದಲ್ಲಿ, 100 ಪ್ರತಿಶತ ಸುಂಕಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ್ದಾರೆ.
ಸಾಮಾಜಿಕ ಮಾಧ್ಯಮದ ಪೋಸ್ಟ್ನಲ್ಲಿ ಅವರು, ಈ ದೇಶಗಳು ಯುಎಸ್ ಡಾಲರ್ ಅನ್ನು ಬದಲಿಸುವ ಕೆಲಸ ಮಾಡುವುದಿಲ್ಲ ಎಂಬ ಬದ್ಧತೆಯ ಅಗತ್ಯವಿದೆ. ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಬ್ರಿಕ್ಸ್ ಅಮೆರಿಕಾ ಡಾಲರ್ ಅನ್ನು ಬದಲಿಸುವ ಯಾವುದೇ ಅವಕಾಶವಿಲ್ಲ, ಮತ್ತು ಇದನ್ನು ಪ್ರಯತ್ನಿಸುವ ಯಾವುದೇ ದೇಶ ಅಮೆರಿಕದೊಂದಿಗಿನ ಸಂಬಂಧಗಳಿಗೆ ವಿದಾಯ ಹೇಳಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದು ವಿಶ್ವ ಏಡ್ಸ್ ದಿನ; ಎಚ್ಐವಿ ಚಿಕಿತ್ಸೆ – ನಿರ್ಮೂಲನೆ ಕುರಿತು ಜಾಗೃತಿ ಅಭಿಯಾನ
ಸುದ್ದಿದಿನಡೆಸ್ಕ್:ಅಕ್ವೈರ್ಡ್ ಇಮ್ಯುನೊ ಡೆಫಿಷಿಯನ್ಸಿ ಸಿಂಡ್ರೋಮ್-ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತಿದೆ.
ಎಚ್ಐವಿ ವಿರುದ್ಧದ ಹೋರಾಟದಲ್ಲಿ ಜನರು ಒಂದಾಗಲು ಮತ್ತು ಎಚ್ಐವಿ ಯೊಂದಿಗೆ ಬದುಕು ಸಾಗಿಸುತ್ತಿರುವವರಿಗೆ ಬೆಂಬಲ ಸೂಚಿಸಲು ಈ ದಿನವು ಅವಕಾಶವನ್ನು ಒದಗಿಸುತ್ತದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆಪಿ ನಡ್ಡಾ ಅವರು ಮಧ್ಯಪ್ರದೇಶದ ಇಂದೋರ್ನಲ್ಲಿಂದು ವಿಶ್ವ ಏಡ್ಸ್ ದಿನ 2024 ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ವರ್ಷದ ವಿಶ್ವ ಏಡ್ಸ್ ದಿನ, ಏಡ್ಸ್ ಕುರಿತು ಜಾಗೃತಿ ಮೂಡಿಸುವುದು, ಚಿಕಿತ್ಸಾ ವಿಧಾನಗಳನ್ನು ಉತ್ತೇಜಿಸುವುದು ಮತ್ತು ಎಚ್ಐವಿ-ಏಡ್ಸ್ ನಿಂದ ಪೀಡಿತರ ವಿರುದ್ಧದ ತಾರತಮ್ಯವನ್ನು ತೊಡೆದುಹಾಕುವುದರ ಮೇಲೆ ಕೇಂದ್ರೀಕರಿಸುತ್ತದೆ. ’ಸರಿಯಾದ ಮಾರ್ಗವನ್ನು ತೆಗೆದುಕೊಳ್ಳಿ’ ಎಂಬುದು 2024 ರ ಘೋಷವಾಕ್ಯವಾಗಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಎನ್ಎಸಿಓ, 1992 ರಿಂದ ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸುತ್ತಿದೆ. ಈ ಆಚರಣೆಗಳು 2030 ರ ವೇಳೆಗೆ ಏಡ್ಸ್ಅನ್ನು ನಿರ್ಮೂಲನೆಗೊಳಿಸುವ ಜಾಗತಿಕ ಗುರಿಯನ್ನು ಅನುಸರಿಸುತ್ತವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ವಹಿವಾಟುಗಳಲ್ಲಿ ಅಮೆರಿಕ ಡಾಲರ್ ಬದಲಾಯಿಸದಂತೆ ಬ್ರಿಕ್ಸ್ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯ
-
ದಿನದ ಸುದ್ದಿ7 days ago
ಇಂದು ವಿಶ್ವ ಏಡ್ಸ್ ದಿನ; ಎಚ್ಐವಿ ಚಿಕಿತ್ಸೆ – ನಿರ್ಮೂಲನೆ ಕುರಿತು ಜಾಗೃತಿ ಅಭಿಯಾನ
-
ಕ್ರೀಡೆ5 days ago
ದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ರಾಘವೇಂದ್ರ ಎನ್ ಬಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
-
ದಿನದ ಸುದ್ದಿ3 days ago
ಚನ್ನಗಿರಿ |ಶ್ರೀ ಶಿವಲಿಂಗೇಶ್ವರ ಸ್ವಾಮಿ ಪ್ರಥಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ
-
ಕ್ರೀಡೆ5 days ago
ಅದ್ವಿತೀಯ 2024ರಲ್ಲಿ ಜಿಎಂಐಟಿ ಕಾಲೇಜಿನ ಸಿಎಸ್ಇ ವಿದ್ಯಾರ್ಥಿಗಳ ಪೋಸ್ಟರ್ ಪ್ರಸ್ತುತಿಯಲ್ಲಿ ತೃತೀಯ ಸ್ಥಾನ
-
ದಿನದ ಸುದ್ದಿ6 days ago
ಫೆಂಗಲ್ ಚಂಡಮಾರುತ | ರಾಜ್ಯದ ವಿವಿಧೆಡೆ ಮಳೆ ; ಕೆಲವು ಜಿಲ್ಲೆಯಲ್ಲಿ ರಜೆ ಘೋಷಣೆ
-
ಕ್ರೀಡೆ5 days ago
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ3 days ago
ವಿಶಾಖಪಟ್ಟಣಂನಲ್ಲಿ ಆಲ್ ಇಂಡಿಯ ಕ್ರೀಡಾಕೂಟಕ್ಕೆ ಪೇದೆ ಕೆ.ಆರ್.ಹುಲಿರಾಜ ಆಯ್ಕೆ