ರಾಜಕೀಯ
ಸಾವು ನೋವಿಗೆ ಮಿಡಿಯದ ಹಂತಕ ವ್ಯವಸ್ಥೆ
- ನಾ ದಿವಾಕರ
ಭಾರತದ ರಾಜಕಾರಣ ತನ್ನ ಮಾನವೀಯ ಸ್ಪರ್ಶವನ್ನು ಕಳೆದುಕೊಂಡಿದೆ. ಅಧಿಕಾರ ರಾಜಕಾರಣದ ಮೆಟ್ಟಿಲುಗಳು ದುಬಾರಿಯಾಗುತ್ತಿರುವಂತೆಲ್ಲ ಮನುಜ ಜೀವದ ಮೌಲ್ಯ ಅಗ್ಗವಾಗುತ್ತಿದೆ. ಜನಸಾಮಾನ್ಯರ ಸಾವು ನೋವುಗಳು, ಸಂಕಷ್ಟಗಳು, ಹತಾಶೆ ಆತಂಕಗಳು ಆಳುವವರ ಪಾಲಿಗೆ ಕೇವಲ ಒಂದು ಸುದ್ದಿಯಾಗಿ ಕಾಣುತ್ತಿದೆ, ಅಥವಾ ಚುನಾವಣಾ ರಾಜಕಾರಣದ ಮಾರುಕಟ್ಟೆ ಸರಕುಗಳಂತೆ ಕಾಣುತ್ತಿವೆ. ಕಳೆದ ಒಂದು ವರ್ಷದಲ್ಲಿ ಕೋವಿದ್ ಸೋಂಕಿನಿಂದಲೇ ಭಾರತ ಎರಡು ಲಕ್ಷಕ್ಕೂ ಹೆಚ್ಚು ನಾಗರಿಕರನ್ನು ಕಳೆದುಕೊಂಡಿದೆ. ಭಾರತದಂತಹ ಸಂಕೀರ್ಣ ಸಮಾಜದಲ್ಲಿ 2 ಲಕ್ಷ ಜನರ ಸಾವು ಹತ್ತು ಲಕ್ಷ ಜನರ ಬದುಕಿಗೆ ನಿರ್ಣಾಯಕವಾಗುತ್ತದೆ. ಈ ಕನಿಷ್ಟ ಪ್ರಜ್ಞೆ ನಮ್ಮ ಈಗಿನ ರಾಜಕೀಯ ನಾಯಕರುಗಳಿಗೆ ಇಲ್ಲ ಎಂದು ಹೇಳಬೇಕಿಲ್ಲ.
ಆದರೂ ಕೊರೋನಾ ಮತ್ತೊಮ್ಮೆ ಜನಸಾಮಾನ್ಯರ ನಿತ್ಯ ಬದುಕಿನಲ್ಲಿ ಹತಾಶೆಯನ್ನುಂಟುಮಾಡಿದೆ. ಮಧ್ಯಮ, ಮೇಲ್ ಮಧ್ಯಮ ವರ್ಗಗಳಲ್ಲಿಯೇ ಈ ಸನ್ನಿವೇಶ ಹತಾಶ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ. ಏಕೆ ಹೀಗೆ ಸಾಯುತ್ತಿದ್ದಾರೆ ? ಎಂಬ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ನಿಜ, ಸಾವಿಗೆ ಕಾರಣಗಳಿವೆ. ಕೋವಿದ್ ಸಂದರ್ಭದಲ್ಲಿ ಇತರ ದೈಹಿಕ ನ್ಯೂನತೆಗಳನ್ನು ಹೊಂದಿರುವವರು ಸುಲಭ ತುತ್ತಾಗುತ್ತಾರೆ. ನಿತ್ಯ ಬದುಕಿನ ಅನಿವಾರ್ಯತೆಗಳು ಅಸಂಖ್ಯಾತ ಜನರನ್ನು ಸಾವಿನ ದವಡೆಗೆ ದೂಡುತ್ತಿರುವುದನ್ನು ನೋಡುತ್ತಲೇ, ಸಂತಾಪ, ಶ್ರದ್ಧಾಂಜಲಿ ಮತ್ತು ಕಂಬನಿಗಳ ನಡುವೆ ಮತ್ತೊಂದು ಸಾವಿನ ಸುದ್ದಿಯ ನಿರೀಕ್ಷೆಯಲ್ಲಿ ದಿನ ಕಳೆಯುವಂತಾಗಿದೆ.
137 ಕೋಟಿ ಜನರ ಪೈಕಿ ಕೇವಲ ಎರಡು ಲಕ್ಷ ಜನರು ಸತ್ತಿದ್ದಾರೆ. ನಗಣ್ಯ ಅಲ್ಲವೇ ? ಕರ್ನಾಟಕದ ಆರೋಗ್ಯ ಸಚಿವರು ಹೌದೆನ್ನುತ್ತಾರೆ. ಚಾಮರಾಜನಗರದಲ್ಲಿ 24 ಅಮಾಯಕ ಜೀವಗಳು ಆಮ್ಲಜನಕ ಇಲ್ಲದೆ ಅಸುನೀಗಿದಾಗ, ಕೇವಲ ಮೂರೇ ಜನ ಎಂದು ಎಣಿಸಿ ಹೇಳುವವರನ್ನು ನಾವು ಆರೋಗ್ಯ ಮಂತ್ರಿ ಎಂದು ಗೌರವಿಸುತ್ತಿದ್ದೇವೆ. ಹೆಣಗಳ ಎಣಿಕೆ ನಮ್ಮ ರಾಜಕೀಯ ಜೀವನದಲ್ಲಿ ಒಂದು ಸಂಸ್ಕೃತಿಯಾಗಿಯೇ ನೆಲೆಸಿಬಿಟ್ಟಿದೆ. ಹಣ ಎಣಿಸಿ ಮತ ಗಳಿಸುವುದು, ಮತ ಎಣಿಸಿ ಅಧಿಕಾರ ಗಳಿಸುವುದು, ಹೆಣ ಎಣಿಸಿ ಅಧಿಕಾರ ಉಳಿಸಿಕೊಳ್ಳುವುದು ಇದು ನವ ಭಾರತದ ಆಡಳಿತ ಸಂಹಿತೆಯಾಗಿರುವುದನ್ನು ವಿಷಾದದಿಂದಲೇ ಒಪ್ಪಿಕೊಳ್ಳಬೇಕಿದೆ.
ವಿಜಯೋತ್ಸವದ ಗುಂಗಿನಲ್ಲಿ ಜೀವ ಹರಣ ಮಾಡುವ ಒಂದು ವಿಕೃತ ಸಂಸ್ಕೃತಿಯನ್ನೂ ನಾವೇ ಬೆಳೆಸಿಕೊಂಡುಬಂದಿದ್ದೇವೆ. ಪಶ್ಚಿಮಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್ ಈಗಾಗಲೇ ಒಂದು ಪ್ರಾತ್ಯಕ್ಷಿಕೆಯನ್ನು ನಮ್ಮ ಮುಂದಿಟ್ಟಿದೆ. ಸೋಲಿನ ಹತಾಶೆಯೂ ಜೀವ ನಾಶಕ್ಕೆ ಕಾರಣವಾಗುವುದನ್ನೂ ನೋಡಿದ್ದೇವೆ. ಈ ಘಟನೆಗಳು ನಮ್ಮ ಪ್ರಜ್ಞೆಯನ್ನು ಕಲಕುವುದಿಲ್ಲ, ತಾತ್ವಿಕ ನೆಲೆಯಲ್ಲಿ ಅಪರಾಧಿಗಳ ಶೋಧಕ್ಕೆ ಪ್ರೇರೇಪಿಸುತ್ತವೆ. ಏಕೆ ಹೀಗಾಗುತ್ತಿದೆ ಎಂಬ ಜಿಜ್ಞಾಸೆ ನಮ್ಮನ್ನು ಮತ್ತಷ್ಟು ಚಿಂತನೆಗೆ ದೂಡುವುದಿಲ್ಲ. ಬದಲಾಗಿ ರಾಜಕೀಯ/ಸೈದ್ಧಾಂತಿಕ ಗೋಡೆಗಳ ಹಿಂದೆ ನಿಂತು ಹೆಣಗಳಲ್ಲಿ ಅಧಿಕಾರದ ಮೆಟ್ಟಿಲುಗಳನ್ನು ಕಾಣತೊಡಗುತ್ತೇವೆ. ಹಾಗಾಗಿಯೇ ಸಾವಿರಾರು ಸಾವುಗಳನ್ನು ಸಂಭ್ರಮಿಸುವ ಮನಸುಗಳೂ ಏಳೆಂಟು ಜೀವಗಳಿಗೆ ಲೆಕ್ಕ ಕೇಳಲು ಮುಂದಾಗುತ್ತವೆ.
ಇದನ್ನೂ ಓದಿ |ರಾಜ್ಯದಲ್ಲಿ ಮೇ 10 ರಿಂದ ಸಂಪೂರ್ಣ ಲಾಕ್ ಡೌನ್ ಘೋಷಣೆ
ಇಲ್ಲಿ ನಮಗೆ ಜಾರ್ಜ್ ಫ್ಲಾಯ್ಡ್ ಮತ್ತೆ ನೆನಪಾಗುತ್ತಾನೆ. #ನನಗೆಉಸಿರಾಡಲಾಗುತ್ತಿಲ್ಲ ಎನ್ನುವ ಆ ಹತಾಶೆಯ ಧ್ವನಿ ಭಾರತದ ಉದ್ದಗಲಕ್ಕೂ ಧ್ವನಿಸುತ್ತಲೇ ಇದೆ. ಇಲ್ಲಿ ಜನಸಾಮಾನ್ಯರ ಕತ್ತು ಹಿಸುಕುತ್ತಿರುವುದು ಪೊಲೀಸರಲ್ಲ, ಒಂದು ವೈರಾಣು. ಉಸಿರಾಡುವ ಗಾಳಿ ಒದಗಿಸುವ ಹೊಣೆ ಆಡಳಿತ ನಿರ್ವಹಣೆ ಮಾಡುವ ಸರ್ಕಾರದ್ದು. ಎಷ್ಟು ಸುಂದರ ಶ್ರೇಣೀಕೃತ ಅಧಿಕಾರದ ಮೆಟ್ಟಿಲುಗಳನ್ನು ನಾವು ಸೃಷ್ಟಿಸಿಕೊಂಡಿದ್ದೇವೆ. ಮಂಡಲ ಪಂಚಾಯತಿಯಿಂದ ಸಂಸತ್ತಿನವರೆಗೆ. ಈ ಮೆಟ್ಟಲುಗಳ ಮೇಲೆ ನಡೆದಾಡುವ ಸಾಲಂಕೃತ ಪ್ರತಿನಿಧಿಗಳಿಗೆ ಮನುಜ ಪ್ರಜ್ಞೆ ಇದ್ದಿದ್ದರೆ ಬಹುಶಃ ಭಾರತ ಸಾವಿನ ಕೂಪ ಆಗುತ್ತಿರಲಿಲ್ಲ. ನಮ್ಮ ದೂಷಣೆಗೆ, ನಿಂದನೆಗೆ ಈಗ ಚೀನಾ, ಜಮಾತ್, ತಬ್ಲೀಗಿಗಳು ನಿಲುಕುವುದಿಲ್ಲ. ಅದು ಮುಗಿದ ಅಧ್ಯಾಯ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೋನಾ ನಿಭಾಯಿಸಲು ಸಿದ್ಧತೆ ನಡೆಸುತ್ತಿರುವುದನ್ನು ನೋಡಿದರೆ ನಮ್ಮ ದೇಶಕ್ಕೆ ಕೋವಿದ್ 19 ಈ ವರ್ಷವೇ ಪ್ರವೇಶಿಸಿದೆ ಎಂದು ಭಾಸವಾಗುತ್ತದೆ. ಆರು ತಿಂಗಳ ಕಾಲ ಮೈಮರೆತು ನಿದ್ರಿಸಿದ ಆಡಳಿತ ವ್ಯವಸ್ಥೆ ಈ ಒಮ್ಮೆಲೆ ಪುಟಿದೆದ್ದು ನಿಲ್ಲಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ನಮ್ಮ ದೇಶದ ಆರೋಗ್ಯ ವ್ಯವಸ್ಥೆಗೆ ಸುಭದ್ರ ಬುನಾದಿ ಇಲ್ಲ. ಸಾಂದರ್ಭಿಕ, ಸಮಯೋಚಿತ ಕ್ರಮಗಳನ್ನು ಕೈಗೊಳ್ಳುವುದನ್ನು ನಿರ್ವಹಣೆ ಎನ್ನುವುದಿಲ್ಲ, ಮೇಲ್ವಿಚಾರಣೆ ಎನ್ನುತ್ತಾರೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಮ್ಮ ಸರ್ಕಾರಗಳು ಮಾಡುತ್ತಿರುವುದು ಮೇಲ್ವಿಚಾರಣೆ ಮಾತ್ರ.
ಹಾಗಾಗಿಯೇ ಈಗ ದೇಶಾದ್ಯಂತ ಹಾಹಾಕಾರ ಎದ್ದಿದೆ. ಆಸ್ಪತ್ರೆಯ ಸೌಲಭ್ಯಗಳಿಲ್ಲ, ಹಾಸಿಗೆಗಳು ದೊರೆಯುತ್ತಿಲ್ಲ, ಆಕ್ಸಿಜನ್ ಪೂರೈಕೆಯಾಗುತ್ತಿಲ್ಲ, ವೆಂಟಿಲೇಟರ್ ಕೊರತೆ ಇದೆ, ರೆಮಿಡಿಸಿವಿರ್‍ನಂತಹ ಔಷಧಿಗಳಿಗೂ ಕೊರತೆ ಇದೆ. ಆದರೆ ಎಲ್ಲವೂ ಕಾಳಸಂತೆಯಲ್ಲಿ ದೊರೆಯುತ್ತಿದೆ. ಇಂತಹ ವಿಷಮ ಸನ್ನಿವೇಶದಲ್ಲೂ ಕರಾಳದಂಧೆಯೇ ಎಂದು ಹುಬ್ಬೇರಿಸುವುದು ಸಹಜ. ಅಚ್ಚರಿ ಬೇಕಿಲ್ಲ ಏಕೆಂದರೆ, ಇದು ಮಾರುಕಟ್ಟೆ ಪ್ರಪಂಚ. ಹೆಣವೂ ಬಿಕರಿಯಾಗುವ ಕರಾಳ ಮಾರುಕಟ್ಟೆಯಲ್ಲಿ ನಾವು ಮೌಲ್ಯಯುತ ಆಡಳಿತದ ನಿರೀಕ್ಷೆಯಲ್ಲಿದ್ದೇವೆ. ಕಾಳಸಂತೆ ವ್ಯಾಪಾರದ ಮೂಲ ಇರುವುದೇ ಸರಬರಾಜಿನ ಕೊರತೆಯಲ್ಲಿ, ಉತ್ಪಾದನೆಯ ಕೊರತೆಯಲ್ಲಿ ಅಲ್ಲ. ಈ ಸರಬರಾಜು ಅನಿರ್ಬಂಧಿತವಾಗಿ, ಶಿಸ್ತುಬದ್ಧತೆಯಿಂದ, ಕಾನೂನುರೀತ್ಯಾ ಚಾಲ್ತಿಯಲ್ಲಿರಬೇಕೆಂದರೆ ಇದನ್ನು ನಿರ್ವಹಿಸಲು ಒಂದು ಜವಾಬ್ದಾರಿಯುತ ಸರ್ಕಾರ ಅಗತ್ಯ.
ನಮ್ಮ ಕೊರತೆ ಇರುವುದೇ ಇಲ್ಲಿ. ಕಳೆದ ಎರಡು ದಶಕಗಳಲ್ಲಿ ನಾವು ಶಾಸನಸಭೆಗಳಿಗೆ ಆಯ್ಕೆ ಮಾಡುತ್ತಿರುವುದು ವ್ಯಾಪಾರಿಗಳನ್ನೇ ಹೊರತು, ನುರಿತ ಪ್ರಜ್ಞಾವಂತ ರಾಜಕಾರಣಿಗಳನ್ನು ಅಲ್ಲ. ಸಾಮಾಜಿಕ ಜನಾಂದೋಲನಗಳು, ಜನಪರ ಚಳುವಳಿಗಳು, ಕಾರ್ಮಿಕ ಹೋರಾಟಗಳ ಮಧ್ಯದಿಂದ ಮುನ್ನೆಲೆಗೆ ಬಂದಿರುವವರು ಮತ್ತು ಬೌದ್ಧಿಕವಾಗಿ ಪ್ರಬುದ್ಧತೆ ಹೊಂದಿರುವ ವ್ಯಕ್ತಿಗಳು ಅಧಿಕಾರ ರಾಜಕಾರಣದ ಚೌಕಟ್ಟಿನಿಂದಲೇ ಹೊರಗಿದ್ದಾರೆ.
ಒಂದು ವೇಳೆ ಒಳಗಿದ್ದರೂ ಬಹಿಷ್ಕೃತರಾಗಿ, ನಿರ್ಲಕ್ಷಿತರಾಗಿ ಅಧಿಕಾರ ಕೇಂದ್ರಗಳಿಂದ ದೂರವೇ ಇರುತ್ತಾರೆ. ಸೂಕ್ಷ್ಮ ಸಂವೇದನೆಯ ಅರ್ಥವನ್ನಾದರೂ ಅರಿತಿರುವ ಇಂಥವರ ಸ್ಥಾನವನ್ನು ಗುತ್ತಿಗೆದಾರರು, ಗಣಿ ಉದ್ಯಮಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ದಂಗೆಕೋರರು, ಮಾಫಿಯಾಗಳು, ಕ್ರಿಮಿನಲ್ ಹಿನ್ನೆಲೆಯುಳ್ಳವರು ಆಕ್ರಮಿಸಿಕೊಳ್ಳುತ್ತಿದ್ದಾರೆ.
ಅಧಿಕಾರ ಸ್ಥಾನಗಳನ್ನು ಆಕ್ರಮಿಸಿಕೊಳ್ಳುವವರು ಇಂತಹ ಜನಪ್ರತಿನಿಧಿಗಳಿಗೆ ಬದ್ಧರಾಗಿರುತ್ತಾರೆ ಅಥವಾ ಕೆಲವೊಮ್ಮೆ ಇದೇ ಹಿನ್ನೆಲೆ ಇರುವವರೂ ಆಗಿರುತ್ತಾರೆ. ಸುಸ್ಥಿರ ಸರ್ಕಾರ ಎನ್ನುವ ಕಲ್ಪನೆ ಈ ಸ್ವಾರ್ಥ ರಾಜಕಾರಣವನ್ನು ಸಂರಕ್ಷಿಸುವ ಒಂದು ಪ್ರಜಾಸತ್ತಾತ್ಮಕ ವಿಧಾನ ಎಂದಷ್ಟೇ ಹೇಳಬಹುದು. ಆದ್ದರಿಂದಲೇ ಎಂತಹ ಪ್ರಮಾದವೇ ನಡೆದರೂ, ನೂರಾರು ಜನರ ಸಾವು ಸಂಭವಿಸಿದರೂ ಸಚಿವರೊಬ್ಬರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ದೃಶ್ಯವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಈ ರಾಜಕೀಯ ನಾಯಕರುಗಳಿಗೆ ತಮ್ಮ ಸ್ವಹಿತಾಸಕ್ತಿ ಮತ್ತು ತಾವು ನಂಬಿರುವ ಪಕ್ಷದ ಅಧಿಕಾರಾಸಕ್ತಿ ಎರಡೇ ಮುಖ್ಯವಾಗುತ್ತದೆ. ಜನರ ಸಾವು ನೋವುಗಳು ನಗಣ್ಯ ಎನಿಸಿಬಿಡುತ್ತವೆ.
ಇದನ್ನು ಚಾಮರಾಜನಗರದಲ್ಲಿ ಸಂಭವಿಸಿದ 24 ಸಾವುಗಳ ಹಿನ್ನೆಲೆಯಲ್ಲೇ ಗಮನಿಸಬಹುದು. ಸಂಸದ ತೇಜಸ್ವಿ ಸೂರ್ಯ ತಮ್ಮ ರಹಸ್ಯ ಕಾರ್ಯಾಚರಣೆಯ ಮೂಲಕ ಬಯಲಿಗೆಳೆದಿರುವ ಬೆಡ್ ಬ್ಲಾಕಿಂಗ್ ಹಗರಣದಲ್ಲೂ ಗಮನಿಸಬಹುದು. ಈ ಅವಘಡಗಳಿಗೆ ಯಾರು ಕಾರಣ ? ಎರಡೂ ಪ್ರಕರಣಗಳಲ್ಲಿ ಯಾವುದೋ ಅಗೋಚರ ಮಾಫಿಯಾ ಕೈವಾಡವಿರುತ್ತದೆ. ಉನ್ನತ ಮಟ್ಟದ ಅಧಿಕಾರಿಗಳಿಂದ ವಿಧಾನಸೌಧದವರೆಗೆ ಈ ಮಾಫಿಯಾದ ಬಾಹುಗಳು ಚಾಚಿರುತ್ತವೆ. ಬಿಬಿಎಂಪಿ ಹಗರಣದ ಹಿಂದೆ ಅಲ್ಲಿ ಗುತ್ತಿಗೆ ಕೆಲಸ ಮಾಡುವ ಕೆಳಮಟ್ಟದ ಅಧಿಕಾರಿಗಳೋ ಅಥವಾ ಗುತ್ತಿಗೆ ನೌಕರರೋ ಕಾರಣವಾಗಿರುವುದಿಲ್ಲ. ಇವರು ನಿಮಿತ್ತ ಮಾತ್ರ. ಬಿಬಿಎಂಪಿ ಉಸ್ತುವಾರಿ ಸಚಿವರ ಗಮನಕ್ಕೆ ಬಾರದೆ ಇಷ್ಟೆಲ್ಲಾ ನಡೆದಿರುತ್ತದೆ ಎಂದು ನಂಬಲು ಆಧಾರಗಳೂ ಇಲ್ಲ.
ಇಲ್ಲಿ ನಾವು ಗಮನಿಸಬೇಕಿರುವ ಒಂದು ಸಂಗತಿ ಇದೆ. ಮಂಡಲ್ ಪಂಚಾಯತ್ ಹಂತದಿಂದ ದೆಹಲಿಯವರೆಗೆ ಪ್ರತಿಯೊಂದು ಹಂತದಲ್ಲೂ ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿ ಇರುತ್ತಾನೆ. ಈ ಪ್ರತಿನಿಧಿಗೆ ತನ್ನ ಸುತ್ತಲಿನ ಆಡಳಿತದ ಮೇಲ್ವಿಚಾರಣೆ ನಡೆಸುವ ಅಧಿಕಾರ ಮತ್ತು ನೈತಿಕ ಹೊಣೆ ಇರುತ್ತದೆ. ಕನಿಷ್ಟ ತನ್ನ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿ ಏನು ನಡೆಯುತ್ತಿದೆ ಎಂದು ಅರಿತಿರಬೇಕಾದ್ದು ಈ ಪ್ರತಿನಿಧಿಯ ಸಾಂವಿಧಾನಿಕ ಕರ್ತವ್ಯವಲ್ಲವೇ ? ಆಡಳಿತ ನಿರ್ವಹಣೆಯಲ್ಲಿ ಉಂಟಾಗುವ ಪ್ರತಿಯೊಂದು ಲೋಪವನ್ನೂ ಗಮನಿಸಿ ಸರಿಪಡಿಸಲು ಒಬ್ಬ ಸಚಿವ ಇರುತ್ತಾನೆ. ನಡುವೆ ಸು(ಉ)ಸ್ತುವಾರಿ ಸಚಿವರೂ ಇರುತ್ತಾರೆ. ಸಚಿವರನ್ನು ಗಮನಿಸಲು ಮುಖ್ಯಮಂತ್ರಿಯ ಕುರ್ಚಿ ಇರುತ್ತದೆ. ಈ ಸರಪಳಿಯ ಒಂದು ಕೊಂಡಿ ಸಡಿಲವಾದರೂ ಅವಘಡಗಳು ಸಂಭವಿಸುತ್ತವೆ. ಆದರೆ ಹೊಣೆ ಯಾರದು ?
ಇಲ್ಲಿ ಅಧಿಕಾರ ರಾಜಕಾರಣದ ತೋಳ್ಬಲ ಮುನ್ನೆಲೆಗೆ ಬರುತ್ತದೆ. ಚಾಮರಾಜನಗರದ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಸತ್ತಿದ್ದು ಮೂರೇ ಜನ ಎಂದು ರಾಜ್ಯ ಆರೋಗ್ಯ ಸಚಿವರು ಹೇಳುತ್ತಾರೆ. ಅಂದರೆ ಉಳಿದವರೇನು ಆತ್ಮಹತ್ಯೆ ಮಾಡಿಕೊಂಡರೇ ? ಮೂರೇ ಜನ ಸತ್ತರು ಎಂದರೆ ಆ ಮೂರು ಜೀವಗಳಿಗೆ ಮೌಲ್ಯ ಇಲ್ಲವೇ ? ಇಂತಹ ದಾರುಣ ಸಾವು ಸಂಭವಿಸಿದರೂ, ಇಷ್ಟೆಲ್ಲಾ ಅನಾಹುತವಾದರೂ ಕೊಂಚವೂ ಪಾಪಪ್ರಜ್ಞೆ ಇಲ್ಲದೆ ತಮ್ಮ ಸ್ಥಾನಭದ್ರತೆಗಾಗಿ ಅನ್ಯ ಮಾರ್ಗಗಳನ್ನು ಹುಡುಕುತ್ತಾ ಹೋಗುವಂತಹ ಪ್ರತಿನಿಧಿಗಳನ್ನು ನಾವು ಆಯ್ಕೆ ಮಾಡಿದ್ದೇವೆ. ಇವರೇಕೆ ಹೀಗೆ ? ಏಕೆಂದರೆ ಇವರು ಮೂಲತಃ ವ್ಯಾಪಾರಿಗಳು. ಗುತ್ತಿಗೆದಾರರು. ಸಾವು, ನೋವು, ನಷ್ಟ, ಸಂಕಷ್ಟ ಎಲ್ಲವೂ ವ್ಯಾಪಾರದ ಒಂದು ಭಾಗ. ಅಷ್ಟೇ ಅಲ್ಲವೇ ?
ಭೂಪಾಲ್ ಅನಿಲ ದುರಂತದಿಂದ ವಿಶಾಖಪಟ್ಟಣಂ ದುರಂತದವರೆಗೆ, ಇತ್ತೀಚೆಗೆ ಕರ್ನಾಟಕದಲ್ಲೇ ನಡೆದ ಗಣಿ ಸ್ಪೋಟದವರೆಗೆ ಪ್ರಾಣ ಕಳೆದುಕೊಂಡ ಅಮಾಯಕ ಕಾರ್ಮಿಕರಿಗೆ ಪರಿಹಾರದ ಚೆಕ್ ಹೊರತುಪಡಿಸಿ ಮತ್ತಾವ ಪರಿಹಾರ ದೊರೆತಿದೆ ? ಈಗ ಕೊರೋನಾ ಪೀಡಿತರೂ ಇವರ ಸಾಲಿಗೇ ಸೇರುತ್ತಾರೆ. ಕೊರೋನಾ ಸೋಂಕು ಹೆಚ್ಚಾಗುತ್ತಿದೆ ಎಂದು ತಿಳಿದಿದ್ದರೂ ಚುನಾವಣಾ ಸಭೆಗಳನ್ನು ನಡೆಸಿ, ಲಕ್ಷಾಂತರ ಜನರು ಸೇರುವಂತೆ ಮಾಡಿದ ರಾಜಕೀಯ ಪಕ್ಷಗಳು ಹೊಣೆ ಹೊರುವುದಿಲ್ಲ. ಭಾರತ ಕೋವಿದ್ ವಿರುದ್ಧ ಗೆದ್ದಿದೆ ಎಂದು ಆತ್ಮರತಿಯಿಂದ ಬೀಗಿದ ಪ್ರಧಾನಮಂತ್ರಿ ಇಂದಿನ ಪರಿಸ್ಥಿತಿಗೆ ನೈತಿಕ ಹೊಣೆ ಹೊರುವುದಿಲ್ಲ. ಕುಂಭಮೇಳ ನಡೆಸಿದ ಉತ್ತರಖಾಂಡ ಸರ್ಕಾರ ಹೊಣೆ ಹೊರುವುದಿಲ್ಲ. ಏಕೆಂದರೆ ಬಲಿಯಾಗುತ್ತಿರುವ ಮತದಾರರು, ಮತ್ತೊಂದು ಮತದಾನದ ವೇಳೆಗೆ ಇವೆಲ್ಲವನ್ನೂ ಮರೆತಿರುತ್ತಾರೆ.
ಇಂದು ಭಾರತ ಕೋವಿದ್ 19 ಹಿನ್ನೆಲೆಯಲ್ಲಿ ಎದುರಿಸುತ್ತಿರುವ ಮೂಲ ಸಮಸ್ಯೆಗಳೆಂದರೆ, ಆಮ್ಲಜನಕ ಪೂರೈಕೆ, ಆಕ್ಸಿಜನ್ ಇರುವ ಹಾಸಿಗೆಯ ಕೊರತೆ, ಸೋಂಕಿತರಿಗೆ ಆಸ್ಪತ್ರೆಗಳ ಕೊರತೆ, ಕೆಲವೆಡೆ ರೆಮಿಡಿಸಿವರ್ ನಂತಹ ಶಮನಕಾರಿ ಔಷಧಿಯ ಕೊರತೆ , ವೆಂಟಿಲೇಟರ್ ಕೊರತೆ. ಈ ಕೊರತೆಗಳು ಸೃಷ್ಟಿಯಾಗಲು ಕಾರಣವೇನು ? ಕೇಂದ್ರ ಸರ್ಕಾರ ಭಾರತ ಕೋವಿದ್ ಮುಕ್ತವಾಗಿದೆ ಎಂಬ ಆತ್ಮರತಿಯಲ್ಲಿ ಮುಳುಗಿಹೋಗಿದ್ದುದು. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿಯೂ ಇದೇ ಸ್ವಪ್ರಶಂಸೆಯ ಮಾತುಗಳನ್ನು ದಾಖಲಿಸಲಾಗಿದೆ. ಈ ಎಲ್ಲ ಕೊರತೆಗಳು ಕಳೆದ ಬಾರಿಯ ಕೋವಿದ್ ಸಂದರ್ಭದಲ್ಲೂ ತಲೆದೋರಿದ್ದವು ಎಂದ ಮೇಲೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬಹುದಿತ್ತಲ್ಲವೇ ? ಈ ಲೋಪಕ್ಕೆ ಯಾರು ಹೊಣೆ. ನಮ್ಮ ಜನಪ್ರತಿನಿಧಿಗಳಿಗೆ ನೈತಿಕತೆ ಇದ್ದರೆ ಪ್ರಧಾನಿಯಿಂದ ಮಂಡಲ ಪಂಚಾಯತಿ ಸದಸ್ಯನವರೆಗೂ ಈ ಹೊಣೆ ಹೊರಬೇಕಾಗುತ್ತದೆ.
ಪ್ರಜಾತಂತ್ರ ವ್ಯವಸ್ಥೆ ಇದನ್ನೇ ಬಯಸುತ್ತದೆ. ಆದರೆ ನಾವು ಪ್ರಜಾತಂತ್ರವನ್ನು ಮತಪೆಟ್ಟಿಗೆಯಿಂದ ಹೊರತೆಗೆದೇ ಇಲ್ಲ. ಪ್ರಜಾತಂತ್ರದ ಸಾಂವಿಧಾನಿಕ ಮೌಲ್ಯಗಳ ಪರಿವೆಯೇ ಇಲ್ಲದ ಉದ್ಯಮಿಗಳನ್ನು ನಾವೇ ಆಯ್ಕೆ ಮಾಡಿದ್ದೇವೆ. ಊಳಿಗಮಾನ್ಯ ಧೋರಣೆಯಿಂದ ಇಂದಿಗೂ ಹೊರಬರದ ಈ ಔದ್ಯಮಿಕ ಹಿತಾಸಕ್ತಿಗಳಿಗೆ ಪ್ರಜೆಗಳ ಅಮೂಲ್ಯ ಜೀವಗಳೂ ಮಾರುಕಟ್ಟೆ ಸರಕುಗಳಂತೆಯೇ ಕಾಣುತ್ತವೆ. ಅನಿಲ ಸೋರಿಕೆಯೋ, ಬಾಂಬ್ ಸ್ಫೋಟವೋ, ರೈಲು ಅಪಘಾತವೋ, ಕೋಮು ದಂಗೆಯೋ, ಹತ್ಯಾಕಾಂಡವೋ, ಭಯೋತ್ಪಾದನೆಯೋ ಜೀವ ಕಳೆದುಕೊಳ್ಳುವ ದೇಹಗಳು ಹೆಣಗಳ ಎಣಿಕೆಯ ನಂತರ ನಗಣ್ಯವಾಗಿಬಿಡುತ್ತದೆ. ಚಾಮರಾಜನಗರದ 24 ಶವಗಳಿಗೂ, ದೇಶಾದ್ಯಂತ ನಿತ್ಯ ಆಮ್ಲಜನಕ ಇಲ್ಲದೆ ಸಾಯುತ್ತಿರುವವರಿಗೂ ವ್ಯತ್ಯಾಸವೇನಾದರೂ ಇದ್ದರೆ ಅದು ಭೌಗೋಳಿಕ ಅಂತರವಷ್ಟೇ.
ಕೊರೋನಾ ನಮ್ಮನ್ನು ಕೊಲ್ಲುತ್ತಿಲ್ಲ. ಸುದ್ದಿಮನೆಗಳಲ್ಲಿ ಹೇಳುವಂತೆ ಅದು ಮಹಾಮಾರಿಯೂ ಅಲ್ಲ, ಹೆಮ್ಮಾರಿಯೂ ಅಲ್ಲ, ರಣಚಂಡಿಯೂ ಅಲ್ಲ. ಈ ವೈರಾಣುವನ್ನು ಎದುರಿಸಲು ಅಗತ್ಯವಾಗಿದ್ದ ಆರೋಗ್ಯ ವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ನಮ್ಮ “ರಣಕಲಿಗಳು ” ವಿಫಲವಾಗಿರುವುದು ಈ ಸಾವುಗಳಿಗೆ ಕಾರಣ. ಮತ್ತೆ ಫ್ಲಾಯ್ಡ್ ನೆನಪಾಗುತ್ತಾನೆ. #ನನಗೆಉಸಿರಾಡಲಾಗುತ್ತಿಲ್ಲ ಎನ್ನುವ ನೋವಿನ ಧ್ವನಿಗಳು ನಮ್ಮ ನಡುವೆ ಕೇಳಿಬರುತ್ತಲೇ ಇದೆ. ಸರ್ಕಾರಗಳು ಕೋವಿದ್ ವಿರುದ್ಧ ಹೋರಾಡಲಿ. ನಾವು ಹೋರಾಡಬೇಕಿರುವುದು ಈ ಹಂತಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತಿರುವ ಹೊಣೆಗೇಡಿ ರಾಜಕೀಯ ಶಕ್ತಿಗಳ ವಿರುದ್ಧ. ಇಲ್ಲವಾದಲ್ಲಿ ಫ್ಲಾಯ್ಡ್‍ಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ. #ನನಗೆಉಸಿರಾಡಲಾಗುತ್ತಿಲ್ಲ ಈ ನೋವಿನ ಧ್ವನಿ ಸಾರ್ವತ್ರಿಕವಾಗಿಬಿಡುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ
ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಶೇ. 56 ರಷ್ಟು ಗಣತಿ ನಮೂನೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಸ್.ಐ.ಆರ್.ಕುರಿತು ಮಾಹಿತಿ ನೀಡಲು ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ಬಿಎಲ್‌ಒಗಳು ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಅರ್ಜಿಗಳನ್ನು ವಿತರಿಸಿ, ಸ್ವೀಕರಿಸುತ್ತಿದ್ದಾರೆ. ಶೇ. 91 ರಷ್ಟು ಜನರಿಗೆ ಫಾರಂ ಭರ್ತಿ ಮಾಡಲು ತಿಳಿಯದ ಕಾರಣ ಬಿಎಲ್‌ಒಗಳೇ ಸಾರ್ವಜನಿಕರಿಗೆ ಸಹಾಯ ಮಾಡುತ್ತಿದ್ದಾರೆ ಎಂದರು.
ಸಾರ್ವಜನಿಕರ ಅನುಕೂಲಕ್ಕಾಗಿ ದಾವಣಗೆರೆ ನಗರದಲ್ಲಿ 45 ಕೇಂದ್ರಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ತಾಲೂಕು ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಯಾವುದೇ ಅನುಮಾನಗಳಿದ್ದಲ್ಲಿ ಸಾರ್ವಜನಿಕರು ಬಿಎಲ್‌ಒಗಳನ್ನು ಅಥವಾ ಚುನಾವಣಾ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ನೋಡಲ್ ಅಧಿಕಾರಿಗಳು ಮತ್ತು ಸೂಪರ್‌ವೈಸರ್‌ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಸದ್ಯಕ್ಕೆ ಸಾರ್ವಜನಿಕರಿಂದ ಯಾವುದೇ ದಾಖಲೆಗಳನ್ನು ಸಂಗ್ರಹಿಸುತ್ತಿಲ್ಲ. ಆಗಸ್ಟ್ 7 ರ ನಂತರ ಯಾರು ಯಾವ ದಾಖಲೆಗಳನ್ನು ನೀಡಬೇಕು ಎಂಬುದನ್ನು ಸ್ಪಷ್ಟಪಡಿಸಲಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.
ವಿವಿಧ ತಾಂತ್ರಿಕ ಹಾಗೂ ನೈಜ ಕಾರಣಗಳಿಂದಾಗಿ ಒಟ್ಟು 17,499 ಮತದಾರರ ಗಣತಿ ನಮೂನೆಗಳು ವಾಪಸ್ ಬಂದಿಲ್ಲ. ಇದರಲ್ಲಿ ಪ್ರಮುಖವಾಗಿ 7,487 ಮರಣ ಪ್ರಕರಣಗಳು , 263 ವಿಳಾಸ ಪತ್ತೆಯಾಗದವರು , 6,677 ಶಾಶ್ವತವಾಗಿ ಸ್ಥಳಾಂತರಗೊಂಡವರು , 2,994 ದ್ವಿಪ್ರತಿ ದಾಖಲಾತಿ (Double Entry) ಹಾಗೂ 78 ಇತರೆ ಕಾರಣ ಎಂದು ತಿಳಿಸಿದರು.
1,200 ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ಗುರುತಿಸಿ, ಅಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮತದಾರರ ಪರಿಷ್ಕರಣೆಯ ಕಾರ್ಯವಿಧಾನದ ಕುರಿತು ವಿವಿಧ ರಾಜಕೀಯ ಪಕ್ಷಗಳೊಂದಿಗೆ ನಡೆದ ಸಭೆ ಯಲ್ಲಿ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸುವ ಕುರಿತು ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಜುಲೈ 29ರ ವರೆಗೆ ಮಾತ್ರ ಕಾಲಾವಕಾಶ ಇರುವುದರಿಂದ ಬಿಎಲ್‌ಒಗಳು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರು ಅವರೊಂದಿಗೆ ಶಾಂತಿಯುತವಾಗಿ ವರ್ತಿಸಿ, ಸೂಕ್ತ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಒಂದು ವೇಳೆ ದ್ವಿಪ್ರತಿ (Double Entry) ಸೇರಿದಂತೆ ಯಾವುದೇ ತಪ್ಪು ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ನೀಡಿದಲ್ಲಿ, ಅಂತವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಡಾ.ಮಹಾಂತೇಶ್ ಚುನಾವಣಾ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ಗೌಡ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ವಿಭಾಗ-2ರ ವ್ಯಾಪ್ತಿಗೆ 2023-24 ರಿಂದ 2025-26 ರವರೆಗೆ ಸ್ಥಳೀಯ ಶಾಸಕರ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ಅನುದಾನಗಳ ಖರ್ಚು-ವೆಚ್ಚವನ್ನು ಇಲಾಖಾ ತನಿಖೆ ನಡೆಸುವಂತೆ ದೂರು ನೀಡಿ 5 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷö್ಯ ತೋರಿದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್ ಗೌಡ ಎಂ.ಬಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತಾಗೆ ದೂರು ಸಲ್ಲಿಸಿದ್ದಾರೆ.
ದಾವಣಗೆರೆ ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ವಿಭಾಗ-2 ರ ವ್ಯಾಪ್ತಿಗೆ ಒಳಪಡುವ ಮಾಯಕೊಂಡ, ಹೊನ್ನಾಳಿ, ಚನ್ನಗಿರಿ ಉಪ ವಿಭಾಗಗಳು ಹಾಗೂ ವಿಭಾಗ-2ರ ಕಛೇರಿಯ ವ್ಯಾಪ್ತಿಗೆ 2023-24 ರಿಂದ 2025-26ನೇ ಸಾಲಿನ ಅವಧಿಯಲ್ಲಿ ಬಿಡುಗಡೆಯಾಗಿರುವ ಸ್ಥಳೀಯ ಶಾಸಕರ ಅನುದಾನದಲ್ಲಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಹಣವನ್ನು ಇಲಾಖೆಯ ವಾಹನಗಳ ಇಂಧನ ವೆಚ್ಚಕ್ಕೆಂದು ನಿಯಮಬಾಹಿರವಾಗಿ ದುರ್ಬಳಕೆ ಮಾಡಿಕೊಂಡಿರುವುದು ಮಾತ್ರವಲ್ಲದೆ, ಬಹುತೇಕ ಕಡೆಗಳಲ್ಲಿ ಯಾವುದೇ ಕಾಮಗಾರಿ ನಡೆಸದೆ ನಕಲಿ ಕಡತ ಸೃಷ್ಟಿಸಿ ಸ್ಥಳೀಯ ಶಾಸಕರ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ವಿಷಯವು ಅಧಿಕೃತ ಮೂಲಗಳಿಂದ ತಿಳಿದು ಬಂದ ಕಾರಣ ಮಾಹಿತಿಹಕ್ಕು ಅಡಿಯಲ್ಲಿ ಹಲವಾರು ಭಾರಿ ಅರ್ಜಿ ಸಲ್ಲಿಸಿ, ಮಾಹಿತಿ ಕೋರಿದಾಗಲೂ ನಿಯಮಬಾಹಿರವಾಗಿ ಹಿಂಬರಹ ನೀಡುತ್ತ ಬಂದಿರುತ್ತಾರೆ.
ಆದ ಕಾರಣ ದಾವಣಗೆರೆ ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ವಿಭಾಗ-2ರ ವ್ಯಾಪ್ತಿಗೆ 2023-24 ರಿಂದ 2025-26 ರವರೆಗೆ ಸ್ಥಳೀಯ ಶಾಸಕರ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ಅನುದಾನಗಳ ಖರ್ಚು-ವೆಚ್ಚವನ್ನು ಇಲಾಖಾ ತನಿಖೆಗೆ ಒಳಪಡಿಸಿ, ಕೈಗೊಂಡ ಕ್ರಮದ ವರದಿಯನ್ನು ನೀಡುವಂತೆ ವ್ಯವಸ್ಥಾಪಕ ನಿರ್ದೇಶಕರು, ಕೆ.ಆರ್.ಐ.ಡಿ.ಎಲ್, ಬೆಂಗಳೂರು ಇವರಿಗೆ ದಿನಾಂಕ: 06-02-2026 ರಂದು ದೂರು ನೀಡಲಾಗಿತ್ತು. ಆದರೆ ದೂರು ನೀಡಿ 2 ತಿಂಗಳು ಕಳೆದರೂ ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ದಿನಾಂಕ: 21-04-2026 ರಂದು ಜ್ಞಾಪನ ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ 2 ತಿಂಗಳು ಕಳೆದರೂ ಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್‌ಗೌಡ ಎಂ.ಬಿ ಇವರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಆದ ಕಾರಣ ನಿರ್ಲಕ್ಷö್ಯ ತೋರಿದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್‌ಗೌಡ ಎಂ.ಬಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತ ಕಾಯ್ದೆಯ ಅನುಸಾರ ಪ್ರಕರಣ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ಸಲ್ಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ
ಸುದ್ದಿದಿನ,ಚಿತ್ರದುರ್ಗ:ಮಾಜಿ ರಾಜ್ಯಸಭಾ ಸದಸ್ಯರು ಹೆಚ್ ಹನುಮಂತಪ್ಪನವರು (95ವರ್ಷ) ವಯೋಸಹಜ ಅನಾರೋಗ್ಯದಿಂದ ದೈವಧೀನರಾಗಿದ್ದಾರೆ ಎಂದು ಪುತ್ರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೆಚ್ ಮೋಹನ್ ಅವರು ತಿಳಿಸಿದ್ದಾರೆ.
ಅಂತ್ಯಕ್ರಿಯೆಯನ್ನು ನಾಳೆ (ಸೋಮವಾರ) ಮಧ್ಯಾಹ್ನ 4:00 ಗಂಟೆಗೆ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆ ಮುಕ್ತಿದಾಮದಲ್ಲಿ ನೆರವೇರಿಸಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ
-
ಅಂಕಣ5 days agoಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
-
ದಿನದ ಸುದ್ದಿ4 days agoಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ
-
ದಿನದ ಸುದ್ದಿ3 days agoಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ಗೌಡ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ
-
ದಿನದ ಸುದ್ದಿ8 hours agoಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ

