Connect with us

ಲೋಕಾರೂಢಿ

ಪ್ರಕಾಶ್ ರೈ ಯಾಕೆ ಗೆಲ್ಲಬೇಕೆಂದರೆ…!

Published

on

ಇಂದು  ಪ್ರಕಾಶ ರೈ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಅವರು ಗೆಲ್ಲಲಿ ಎಂಬ ಆಸೆ. ಏಕೆಂದರೆ:

  1. ರಾಷ್ಟ್ರೀಯ ರಾಜಕೀಯ ಪಕ್ಷಗಳು ಈವತ್ತಿನ ಜಾಗತೀಕರಣಗೊಂಡ ಹಳ್ಳಿ-ಪಟ್ಟಣಗಳ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಮತ್ತು ತಮ್ಮ ಈ ವೈಫಲ್ಯವನ್ನು ಮುಚ್ಚಿಕೊಳ್ಳಲು, ರಾಷ್ಟ್ರರಾಜಕಾರಣದತ್ತ ಬೊಟ್ಟುಮಾಡಿ, ನಿಜ ಸಮಸ್ಯೆಗಳನ್ನು ಮರೆಮಾಚುತ್ತಿವೆ.
  2. ರಾಷ್ಟ್ರ ರಾಜಕಾರಣದ ಬ್ರಾಡ್ ಪಿಕ್ಚರ್ ತೋರಿಸುತ್ತಾ ಸ್ಥಳೀಯ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿ ತಮ್ಮದೇ ಅಭ್ಯರ್ಥಿಗಳನ್ನು ಹೇರುವುದು ಪ್ರಜಾತಂತ್ರದಲ್ಲಿ ಜನಪ್ರತಿನಿಧಿಗಳ ಆಯ್ಕೆಗೆ ಬಗೆಯುವ ದ್ರೋಹ. ಜನರದಲ್ಲದ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನತೆಗೆ ನ್ಯಾಯ ಒದಗಿಸಲಾರರು.
  3. ದೇಶದ ಎರಡೂ ಪ್ರಮುಖ ರಾಷ್ಟ್ರೀಯ ಪಕ್ಷಗಳು ಪಕ್ಷೇತರರು ತಮ್ಮಲ್ಲಿ ಒಬ್ಬರ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತಾರೆ ಎಂದು ಪರಿಗಣಿಸುವುದು ಸಹಜ, ಆದರೆ ತಾತ್ಕಾಲಿಕ. ಇದಕ್ಕೆ ಒಳ್ಳೆಯ ಉದಾಹರಣೆ ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ಯಶಸ್ಸು. ಪ್ರಜಾತಂತ್ರದಲ್ಲಿ ಇದೊಂದು ಸಹಜ ಬೆಳವಣಿಗೆಯೇ ಹೊರತು ಅಪಸವ್ಯ ಅಲ್ಲ.
  4. ರಾಷ್ಟ್ರೀಯ ಪಕ್ಷಗಳು ಪ್ರತೀ ರಾಜ್ಯದಲ್ಲಿ ಇಂತಹ ಕೆಲವು ಸೀಟುಗಳಲ್ಲಾದರೂ ಇಂತಹದೊಂದು ಔದಾರ್ಯ ತೋರಬೇಕು. ಕರ್ನಾಟಕದಲ್ಲಿ ಪ್ರಕಾಶ್ ರೈ ( Prakash Raj(ಬೆಂಗಳೂರು ಸೆಂಟ್ರಲ್), ದ್ವಾರಕಾನಾಥ ಚೊಕ್ಕ (Dwarakanath Chokka) (ಚಿಕ್ಕಬಳ್ಳಾಪುರ) ನನ್ನ ಪ್ರಕಾರ ಈ ರೀತಿಯ ಔದಾರ್ಯ ಅಗತ್ಯ ಇರುವ ಸೀಟುಗಳು.
  5. ದೀರ್ಘಕಾಲಿಕವಾಗಿ ಪ್ರಜಾತಂತ್ರ ಜೀವಂತ ಉಳಿಯಲು ಇಂತಹ ಕೆಲವು ಸೀಟುಗಳು ಆರಿಸಿಬರಬೇಕು ಮತ್ತು ಅದರಿಂದ ಸ್ಪೂರ್ತಿ ಪಡೆದು ಹೊಸ ನಾಯಕತ್ವಗಳು ನೆಲದಿಂದ ಚಿಗುರುವಂತಾಗಬೇಕು. ನಾಯಕತ್ವ ಆಕಾಶದಿಂದ ಉದುರುವುದು ನಿಲ್ಲಬೇಕು.

ರಾಜಾರಾಮ್ ತಲ್ಲೂರ್

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

‘ನಡುಪಂಥ’ ಎನ್ನುವ ಗುಳ್ಳೇನರಿ ಸಿದ್ದಾಂತ | ಭಾಗ – 1

Published

on

  • ಲೋಕೇಶ್ ಪೂಜಾರಿ, ಬೆಂಗಳೂರು

ಸ್ವಾರ್ಥಸಾಧನೆಯನ್ನು ಚೊಕ್ಕವಾಗಿ ಮಾಡಿ,ಮಾನವೀಯ ಮೌಲ್ಯಗಳನ್ನು ಅಡಿಗೆ ಹಾಕುವವರು ನಡುಪಂಥೀಯರು. ಅವರು ದೋಣಿಯ ನಡುವಲ್ಲಿ ಕೂತಿರುತ್ತಾರೆ.ಎತ್ತ ವಾಲಿದರೂ ಜಾರಿಬೀಳುವುದಿಲ್ಲ.

ಅವರನ್ನು ಗುರುತಿಸುವುದು ಸುಲಭ. ಅವರು ಮಹಾತ್ಮ ಗಾಂಧಿಯವರ ಪೋಟೋ ಹಾಕಿಕೊಂಡು,ಗೋಡ್ಸೆಯನ್ನೂ ಸಮರ್ಥಿಸುತ್ತಾರೆ.ಹಾಗೇ ಮುಂದುವರೆದು ಒಂದು ದಿನ ಕಾಡುಗಳ್ಳ ವೀರಪ್ಪನ್ ನನ್ನು ವಾಲ್ಮೀಕಿಗೂ ಹೋಲಿಸಬಹುದು. ಅದರಿಂದ ಅವರಿಗೆ ಲಾಭ ಇರಬೇಕು ಅಷ್ಟೇ .

ಒಬ್ಬ ಬರೆಯುವ ಬರಹಗಳು ಯುವಜನರಿಗೆ ತಪ್ಪು ಸಂದೇಶ ಕೊಡುತ್ತವೆ ಎಂದು ಯಾರಾದರೂ ಹೇಳಿದಾಗ.. ,ನಾನು ಬರೆಯುವುದು ಸಮಾಜ ಪರಿವರ್ತನೆ ಗೆ ಅಲ್ಲ ಎನ್ನುವಂತಹ ಭೈರಪ್ಪ ಪ್ರೇರಿತ ಉತ್ತರ ಕೊಡುವವರು ಬಹಳ ಜನ ಇದ್ದಾರೆ .
ನಮ್ಮ ಬರವಣಿಗೆಯಿಂದ ಹುಡುಗರು ಹಾಳಾದರೆ ಅದು ಸಮಾಜದ ತಪ್ಪು ಅಥವಾ ರಾಜಕೀಯ ದ ತಪ್ಪು ಎಂದು ತಿಪ್ಪೆ ಸಾರಿಸುವ ಅಂತವರ ಬಳಿ ವಾದ ಮಾಡುವುದು ಕಷ್ಟ.

ಓದು ಮತ್ತು ವಯಸ್ಸಿಗೆ ಬಹಳ ಸಂಬಂಧ ಇದೆ.
ಎಳವೆಯಲ್ಲಿ ಇಷ್ಟ ಪಟ್ಟು ಚಂದಮಾಮ ಓದುತ್ತಿದ್ದವರು ಹೈಸ್ಕೂಲ್ ಸೇರಿದ ಬಳಿಕ ಯೆಂಡಮೂರಿ ವೀರೇಂದ್ರನಾಥರ ಪುಸ್ತಕ ಓದುತ್ತಾರೆ. ಅವರು ಎಷ್ಟು ಯೆಂಡಮೂರಿಯ ಬರಹಗಳನ್ನು ಇಷ್ಟ ಪಡುತ್ತಾರೆಂದರೆ ,ಪ್ರತೀ ಕಾದಂಬರಿನೂ ಹುಡುಕಿ ಹುಡುಕಿ ಓದುತ್ತಾರೆ.
ಆದರೆ‌ ಆ ಸೆಳೆತ ಪಿಯುಸಿ ಮುಗಿದು ಡಿಗ್ರಿ ಓದುವ ತನಕ ಮಾತ್ರ .

ಹದಿನಾರರಿಂದ ಇಪ್ಪತ್ತರ ವಯಸ್ಸಿನ ಹೆಚ್ಚಿನವರು ಯೆಂಡಮೂರಿಯ ಬರಹಗಳನ್ನು ಇಷ್ಟ ಪಡುತ್ತಾರೆ. ಬಳಿಕ ಅವರಿಗೆ ತೇಜಸ್ವಿ ,ಕಾರಂತ ,ಬೈರಪ್ಪ ಇಷ್ಟವಾಗಲು ಶುರುವಾಗುತ್ತದೆ. ತಮ್ಮ ಆಯುಷ್ಯದಲ್ಲಿ ಬಹು ಭಾಗ ಇನ್ನೂ ಕಳೆಯಬೇಕಾಗಿರುವ ಯುವ ಜನರ ಓದುವ ರುಚಿ ಮತ್ತು ಬಹುಭಾಗದ ಆಯುಷ್ಯ ಕಳೆದು ಕೊಂಡು ಜೀವನಾನುಭವ ಪಡೆದು ಕೊಂಡಿರುವವರ ಓದುವ ರುಚಿ ಬೇರೆ ಬೇರೆ ಇರುತ್ತದೆ.

ಹದಿ ಹರೆಯದ ಮನಸ್ಸಿಗೆ ತಿರುಚಿದ ಇತಿಹಾಸ ಓದಲು ಕೊಡಬಾರದು‌. ಪ್ರತಿಯೊಂದಕ್ಕೂ ಪುರಾಣದ ಉದಾಹರಣೆ ಕೊಡಬಾರದು. ಬಹಳಷ್ಟು ನಾಗರೀಕತೆಗಳ ಹುಟ್ಟನ್ನು ಕಂಡ ಸನಾತನ ಭಾರತದಲ್ಲಿ ಲೆಕ್ಕವಿಲ್ಲದಷ್ಟು ಪುರಾಣಕತೆಗಳಿವೆ.

ಪತಿಯೊಂದಕ್ಕೂ ಪುರಾಣಕತೆಗಳನ್ನು ಉದಾಹರಣೆ ಕೊಡಬಹುದು. ” ಕಣ್ಣಾ ಮುಚ್ಚೇ , ಕಾಡೇ ಗೂಡೇ… ಉದ್ದಿನ ಮೂಟೆ ಉರುಳೇ ಹೋಯ್ತು'” ಅನ್ನುವುದನ್ನೂ ರಾಮಾಯಣ ಕ್ಕೆ ಲಿಂಕ್ ಮಾಡಿ,
ಧಶರಥ ಕಣ್ಣುಮುಚ್ಚಲಾಗಿ ,ರಾಮನಿಗೆ ಕಾಡೇ ಮನೆಯಾಗಿ ,ಉದ್ದಿನ ಮೂಟೆಯಂತಹಾ ರಾವಣ ಉರುಳೇ ಹೋದ ” ಎಂದು ಬರೆದು ಬಿಡಬಹುದು.

ಆದರೆ ಅದು ವಿತಂಡವಾದ ಅನ್ನಿಸಿಕೊಳ್ಳುತ್ತದೆಯೇ ಹೊರತು ವಾದ ಅಲ್ಲ. ಹಾಗೆ ವಾದ ಮಾಡುವವರು ತಾವು ತುಂಬಾ ಓದಿದ್ದೇವೆ. ತಾವು ಇತಿಹಾಸ ಶಾಸ್ತ್ರ ಜ್ಞರು ಮನಃಶಾಸ್ತ್ರರು ಎಂದೆಲ್ಲಾ ಇಷ್ಟುದ್ದ ಹೇಳಿಕೊಳ್ಳುತ್ತಾರೆ. ಓದಿದವರೆಲ್ಲಾ ಮಹಾ ಮಾನವತಾವಾದಿಗಳಾಗಿರುತ್ತಾರೆ ಎಂದು ಕೊಳ್ಳುವುದೂ ತಪ್ಪು. ಒಸಾಮಾ ಬಿನ್ ಲಾದೆನ್ ಕೂಡಾ ತುಂಬಾ ಓದಿದ್ದ ಇಂಜಿನಿಯರ್ ಆಗಿದ್ದ.

ಒಂದು ಕಡೆ ಮಹಾತ್ಮಾ ಗಾಂಧಿ ಬಗ್ಗೆ ಬರೆಯುತ್ತಾ ,ಇನ್ನೊಂದು ಕಡೆ ಗೋಡ್ಸೆಯನ್ನು ದಾರಿತಪ್ಪಿದ ದೇಶಭಕ್ತ ಎಂದು ಬಲವಾಗಿ ಬಿಂಬಿಸುವವರು ಸಮಾಜಕ್ಕೆ ಯಾವ ಸಂದೇಶ ನೀಡುತ್ತಾರೆ? ಗೋಡ್ಸೆಗೆ ಗಾಂಧಿ ನ ಕೊಲ್ಲಲು ಕಾರಣ ಇತ್ತು . ಹಾಗೆಯೇ ಗೌರಿ ಲಂಕೇಶ್ ,ಪನ್ಸಾರೆ ,ಕಲಬುರ್ಗಿ ಹಂತಕರಿಗೂ ಕಾರಣ ಇತ್ತು.

ಇಂತಹದೇ ಕಾರಣ ಇತ್ತು ಎಂದು ಸಮರ್ಥನೆ ಇಳಿಯುವವರು, ಅಂತಹಾ ಸಮರ್ಥನೆಗಳನ್ನು ಮನಸ್ಸಿಗೆ ತುಂಬಿಕೊಂಡು ಕೊಲೆಗಾರರಾಗುವ ಸಮೂಹವನ್ನೂ ಹುಟ್ಟುಹಾಕುತ್ತಿದ್ದೇವೆ ಎಂದು ಯಾಕೆ ಯೋಚಿಸುತ್ತಿಲ್ಲ. ಅವರ ಯೋಚನೆ ನಡುಪಂಥೀಯ ಇರಬಹುದು ,ಆದರೆ ಅವರುಗಳು ಸೈತಾನಿಯೇ ಹೊರತು ಸನಾತನಿ ಖಂಡಿತಾ ಅಲ್ಲ.

ಬಹಳಷ್ಟು ಜನರ ಪ್ರೊಪೈಲ್ ನಲ್ಲಿ ಗಾಂಧಿ ಪೋಟೋ ಇರುತ್ತದೆ. ಆ ತರಹ ಇಟ್ಟುಕೊಂಡವರಲ್ಲಿ ಎರಡು ವಿಧ,
ಒಂದೇ ಅವರು ಪಕ್ಕಾಗಾಂಧಿವಾದಿಯಾಗಿರುತ್ತಾರೆ .
ಅಥವಾ ಅವರ ಮನಸ್ಸು ತುಂಬಾ ಗೋಡ್ಸೆ ತುಂಬಿರುತ್ತಾನೆ.

ನಮ್ಮೂರಿನ ಕೆಲವರು ಬಿಲ್ಲವ ರಾಜಕಾರಣಿ ಅಥವಾ ಮುಖಂಡನ ಬಗ್ಗೆ ಸಿಕ್ಕಾಪಟ್ಟೆ ತಕರಾರು ಮಾಡಿ ಪೋಸ್ಟ್ ಹಾಕಿದ ಬಳಿಕ ಶ್ರೀ ನಾರಾಯಣ ಗುರುಗಳ ಪೋಟೋ ಪ್ರೊಫೈಲ್ ಗೆ ಹಾಕಿಕೊಳ್ಳುತ್ತಾರೆ. ಶ್ರೀ ನಾರಾಯಣ ಗುರುಗಳು ಒಂದು ಜಾತಿಯ ಗುರು ಅಲ್ಲ ,ಅವರು ವಿಶ್ವಗುರು ಅಂತಾ ಅವರಿಗೂ ಗೊತ್ತು. ಅದರೂ ಯಾವುದೋ ಒಂದು social chemistry ಚೆನ್ನಾಗಿ ಕೆಲಸ ಮಾಡುತ್ತದೆ ಎಂಬುದು ಅವರ ನರಿಬುದ್ದಿಗೆ ಚೆನ್ನಾಗಿ ಹೊಳೆದಿರುತ್ತದೆ.ಕಾಣದ ಕೈಗಳ ಪ್ರತಿರೋದವನ್ನು ಕಡಿಮೆ ಮಾಡುವ ನರಿಬುದ್ದಿ ಅದು.

ಎಷ್ಟೋ ಜನ ಮೀಸಲಾತಿಯನ್ನು ವಿರೋಧಿಸುವುದರಿಂದ ಹಿಡಿದು ಜಾತಿವಾದವನ್ನು ಪುರಸ್ಕರಿಸುವಷ್ಟು ಮನುವಾದೀ ಮನಸ್ಸು ಹೊಂದಿರುವವರೂ ಅಂಬೇಡ್ಕರ್ ರಂತಹಾ ಮಾನವತಾವಾದಿಯ ಪೋಟೋ ಹಾಕಿಕೊಂಡಿರುತ್ತಾರೆ.

ಯಾರ ಪ್ರೊಫೈಲ್ ನಲ್ಲಿ ಯಾವ ಪೋಟೋ ಇರುತ್ತದೆ ಎನ್ನುವುದರಿಂದ ಅವರ ಸ್ವಭಾವ ಗುಣಲಕ್ಷಣಗಳನ್ನು ಅರಿಯಲು ಸಾದ್ಯವಿಲ್ಲ. ನಡುಪಂಥೀಯ ಗುಳ್ಳೆನರಿಗಳ ಬಗ್ಗೆ ದಿನಕ್ಕೊಂದು ಪೋಸ್ಟ್ ಹಾಕಿದರೂ ವರ್ಷ ಕಳೆದರೂ ಮುಗಿಯದಷ್ಟು ಇದೆ. ಆದರೂ ನೂರು ಎಪಿಸೋಡ್ ಗಳ ಒಳಗೇ ಮುಗಿಸಲು ನೋಡುತ್ತೇನೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನನ್ನ ಹೆಸರಿನ ಪಜೀತಿ..! ನನ್ನ ಹೆಸರು ಹೇಗೆ ಬಂತು..?

Published

on

  • ಪರಶುರಾಮ್. ಎ

ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಒಂದು ಹೆಸರು ಇದ್ದೇ ಇರುತ್ತದೆ ಇರಲೇ ಬೇಕು ಸಹ. ಆ ವ್ಯಕ್ತಿ ಹೆಸರಿಗೂ ಇತಿಹಾಸದ ನಂಟು ಅಥವಾ ಒಂದು ಕತೆ ಇದ್ದೆ ಇರುತ್ತದೆ. ‌ಅವುಗಳನ್ನ ಕೆದಕಿ ನೋಡಿದಾಗ ಆ ಕತೆಗಳು ನೆನಪುಗಳಾಗಿ ಮೇಲೆದ್ದು ಕಾಣಿಸಿಕೊಳ್ಳುತ್ತದೆ.

ಈಗೀಗ ಜನ ಸಮಾಜದಲ್ಲಿ ಹೆಸರು ಮಾಡಲು ಏನೇನೂ ಸರ್ಕಸ್ ಮಾಡ್ತಾರಂತ ನಿಮಗೆ ಗೊತ್ತೇ ಇದೆ. ರಾಜಕೀಯ. ಸಿನಿಮಾ. ರೌಡಿಸಂ. ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌, ಡಬ್ ಸ್ಮಾಷ್. ಟಿಕ್ ಟಾಕ್ ನಲ್ಲಿ ಹುಚ್ಚರಾಗಿ ಹೆಸರು ಗಳಿಸಲು ನಾನಾ ತರದ ಸರ್ಕಸ್ ನಡಿತಾನೇ ಇದೆ. ಅವರ ಹೆಸರುಗಳು ಸಹ ವಿಚಿತ್ರ ವಿಚಿತ್ರವಾಗಿ ಇರ್ತವೆ!!! ಈ ವಿಚಿತ್ರ ಹೆಸರುಗಳ‌ ಖಯಾಲಿ ಸಿನೆಮಾ, ರೌಡಿಸಂ ಕ್ಷೇತ್ರದಲ್ಲಿ ಹೆಚ್ಚು.

ಹೆಸರಿನಲ್ಲಿ ಏನಿದೆ ಬಿಡ್ರೀ ಮಹತ್ವ?? ಅನ್ನುವವರಿಗೆ ಅವರ ಹೆಸರು ಒಮ್ಮೆ ಹಾಳಾದಗಲೇ ಅದರ ನೋವು ಗೊತ್ತಾಗುವುದು ಹೆಸರಿನ ಮಹತ್ವ!! ಅಂದಾಗೆ ನಾನು ನನ್ನ ಹೆಸರು ಹುಟ್ಟಿನ ಬಗ್ಗೆ ಹೇಳ್ತಿನಿ ಆಮೇಲೆ ಆ ಹೆಸರಿನಿಂದ ನನಗಾದ ಪಜೀತಿಗಳೆಷ್ಟು ಅಂತ ಹೇಳ್ತಿನಿ. ನಾನು ಹುಟ್ಟಿದಾಗ ನನಗೆ ನಾಮಕರಣ ಮಾಡಲು ಹೆಸರಿಡಲು ವಾಡಿಕೆಯಂತೆ ಜ್ಯೋತಿಷ್ಯ ಕೇಳಿದಾಗ ನನಗೆ ಡ,ಡು,ಡೆ ಎಂಬ ಪದಗಳು ಬಂದವಂತೆ.

ಹೋಗಿ ಹೋಗಿ ಎಂತ ಪದಗಳು ಬಂದಿವೇ ನೋಡ್ರೀ!! ಈ ಡ,ಡು,ಡೆ ಎಂಬ ಪದಗಳಿಂದ ಯಾವ ಹೆಸರು ತಾನೇ ಕನ್ನಡದಲ್ಲಿ ಆಗಲಿ ಯಾವ ಭಾಷೆಯಲ್ಲಿ ಆಗಲಿ ಬರೊದಕ್ಕೆ ಸಾಧ್ಯ?? (ಈಗಲೂ ಈ ಅಕ್ಷರದಿಂದ ನಿಮಗೆ ಏನಾದರೂ ಹೆಸರು ಗೊತ್ತಾದರೆ ಹೇಳಿ ನನ್ನ ಹೆಸರೇ ಬದಲಾಯಿಸಿಕೊಳ್ತಿನಿ.) ಹೆಸರಿ‌ನ ಮೊದಲ ಅಕ್ಷರ ಹೇಳಿದ ಜ್ಯೋತಿಷಿ ಬಳಿ ಯಾವುದೇ ಉತ್ತರ ಸಿಗದೆ ಕಂಗಾಲಾಗಿ ನಮ್ಮ ಅಜ್ಜಿ ತಾತ ಮತ್ತು ಅಪ್ಪ ಅಮ್ಮ ಅಪ್ಪ ಆಕಾಶ ತಲೆ ಮೇಲೆ ಬಿದ್ದಂಗಾಗಿ ಏನಿದು ಹುಟ್ಟಿರೊ ಮಗುವಿಗೆ ಈ ರೀತಿಯಲ್ಲಿ ಅಕ್ಷರಗಳು ಬಂದಿದಾವಲ್ಲಂತ ಯೋಚಿಸಿ ಕುಳಿತರಂತೆ.!

ಹೀಗೆ ಯೋಚಿಸಿದಾಗ ಅವರಿಗೆ ಒಂದು ಜ್ಞಾನೋದಯ ಅಗಿ ಹೇಗಿದ್ದರೂ ನಮ್ಮ ಮನೆಯ ದೇವರು ಸವದತ್ತಿ ಯಲ್ಲಮ್ಮ ಈಗ ಹುಟ್ಟಿದ ಗಂಡು ಮಗುವಿಗೆ ಆಕೆಯ ಮಗನಾದ ಪರಶುರಾಮ ಎಂಬ ಹೆಸರನ್ನೇ ಇಟ್ಟು ಇನ್ನೂ ಮಿಕ್ಕಿದ್ದ ಪಾಪ ಪುಣ್ಯ ಎಲ್ಲಾ ಯಲ್ಲಮ್ಮನ ಮೇಲೆ ಹಾಕಿ ಪರಶುರಾಮ ಎಂಬ ಹೆಸರಿನಲ್ಲಿ ನನಗೆ ನಾಮಕರಣ ಮಾಡಿದರು. ಇವತ್ತಿಗೂ ನಮ್ಮ ಹಳ್ಳಿಯಲ್ಲಿನ ನಮ್ಮ ಸಂಬಂಧಿ ಚಂದ್ರಣ್ಣ ಎಂಬುವವರು ನನಗೆ ಈ ಕತೆ ಹೇಳಿ ನನ್ನ ಹೀಗೆ ಡ,ಡು,ಡೆ ಎಂದೇ ಸಂಬೋಧಿಸಿ ಕರೆಯುತ್ತಾರೆ.

ಅವರಿಗೆ ನನ್ನ ಹೆಸರೇ ತಮಾಷೆಯ ವಸ್ತು. ನಾನು ಹುಟ್ಟಿದಾಗಲೇ ಬ್ರಾಹ್ಮಣರ ಬಳಿಯಿಂದ ಹೆಸರನ್ನು ಪಡೆಯದೆ ಹುಟ್ಟಿನಿಂದಲೇ ನಾನು ಬ್ರಾಹ್ಮಣತ್ವದ ವಿರೋಧಿಯಾಗಿದ್ದೆ, ಹೋರಾಡಿದ್ದೆ ಎಂದು ಈಗ ಒಮ್ಮೊಮ್ಮೆ ಹಲವು ಸಲ ಮನದಲ್ಲಿ ಯೋಚಿಸಿ ನಗು ಬರುತ್ತದೆ. ನನ್ನ ಅಮ್ಮ ಈ ಸಂಗತಿಯನ್ನು ಅದೆಷ್ಟೋ ಸಲ ಹೇಳಿ ನಗ್ತಾಳೆ. ನೀನು ನನಗೆ ಹುಟ್ಟಿದಾಗ ನಿನಗೆ ಒಂದು ಸರಿಯಾದ ಹೆಸರು ಬರಲಿಲ್ಲ ಗೊತ್ತ ನಿನಗೆ ಅಂತ ಕೇಳಿ.

ಹೇಗೋ ನನಗೂ ಒಂದು ಹೆಸರು ಬಂತು ಅಂದುಕೊಂಡಾಗ, ನಾನು ಚಿಕ್ಕವಯಸ್ಸಿನಲ್ಲಿದ್ದಾಗ ನಮ್ಮ ಸಂಬಂಧಿಕರು ನನ್ನ ಪರ್ಶಿ, ಪರ್ಸೀ ಅಂದು ನನ್ನ ಹೆಸರೇ ಹಾಳು ಮಾಡಿದ್ದರು. ಪರಶುರಾಮ ಎಂಬ ಸುಂದರ ಹೆಸರನ್ನು ಹೀಗೆ ಹಾಳು ಮಾಡಿದಾಗ ಯಾರಿಗೆ ತಾನೇ ಕೋಪ ಬರಲ್ಲ ಹೇಳಿ?? ಬೆಳೆದು ದೊಡ್ಡವನಾದರೂ ಇನ್ನೂ ಅದೆಷ್ಟು ಸಂಬಂಧಿಕರು ನನ್ನ ಪರ್ಸಿ ಪರ್ಸಿ ಅಂತಾನೆ ಕರೆತಾರೆ ಇದಂತು ನನಗೆ ಅಳುನೇ ತರ್ಸುತ್ತೆ.

ಇನ್ನೂ ನಾನು ಪ್ರಾಥಮಿಕ ಶಾಲೆಯಲ್ಲಿ ವಿದ್ಯೆ ತಲೆಗೆ ಹತ್ತದೆ ಇದ್ದಾಗ ನನಗೆ rr ಎಂಬ ಟೀಚರ್ ಒಬ್ಬರು ಪರಶುರಾಮ ಎಂಬ ನನ್ನ ಹೆಸರನ್ನ ಸಿದ್ದರಾಮ ಎಂದು ರೇಗಿಸುತ್ತಿದ್ದರು ಅದು ತರಗತಿಯ ನನ್ನ ಎಲ್ಲಾ ಸ್ನೇಹಿತರ ಮುಂದೆ. ನನಗೆ ಎಷ್ಟು ಕೋಪ ಮುಜುಗರ ಬರಬೇಡ?? ಆಗ ನನಗೆ ಕೇವಲ ಏಳು ಅಥವಾ ಎಂಟು ವರ್ಷ. ಇನ್ನೂ ನಾನು ಐದನೇ ತರಗತಿಯ ಓದುವಾಗ ನಮಗೆ ಇಂಗ್ಲೀಷ್ ಭಾಷೆ ಪರಿಚಯಿಸಿದರು, ನೇತ್ರಾವತಿ ಟೀಚರ್ ಸಹ ನನ್ನ ಹೆಸರನ್ನು ಇಂಗ್ಲಿಷ್ ಓದಲು ಬಾರದೆ ಇದ್ದದ್ದಕ್ಕೆ ಮತ್ತದೇ ಸಿದ್ದರಾಮ ಎಂದು ಒತ್ತಿ ಒತ್ತಿ ಕರೆಯುತ್ತಿದ್ದರು. ‌

ಆಗಲಂತು ನನ್ನ ಮನಸ್ಸು ನನ್ನ ಈ ಹೆಸರಿನ ಬಗೆಗೆ ತೀವ್ರ ಜಿಗುಪ್ಸೆ ತರಿಸಿತ್ತು.
ಇನ್ನೂ ಏಳನೇ ತರಗತಿಯಲ್ಲಿ ಪರಶುರಾಮ್ ಎಂಬ ನನ್ನೊಂದಿಗೆ ಪುರುಷೋತ್ತಮ ಎಂಬ ಎರಡು ಸ್ನೇಹಿತರು ಬೇರೆ ಒಂದೇ ತರಗತಿಯಲ್ಲಿ ಇದ್ದೆವು. ಆಗಲಂತು ತರಗತಿಗೆ ಬಂದ ಟೀಚರ್ ಗಳು ಅದೆಷ್ಟೋ ಬಾರಿ ಪುರುಷೋತ್ತಮನ ಪರಶುರಾಮ ಎಂದು ಪರಶುರಾಮನ ಪುರುಷೋತ್ತಮ ಎಂದು ಕರೆದು ಗೊಂದಲಕ್ಕೆ ಸಿಕ್ಕಿಸಿದರೊ ಗೊತ್ತಿಲ್ಲ. ಇದು ಒಂದು ವರ್ಷಗಳ ಕಾಲ ಹೀಗೆ ನಡೆಯಿತು.

ಇನ್ನೂ ಹೈಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ ಈ ಹೆಸರು ಮತ್ತದೆ ಯಥಾವತ್ ಜಿಗುಪ್ಸೆ ತರಿಸಿ ನನ್ನ ಹೆಸರೇ ನಾನು ಕಳಚುವಂತೆ ಯೋಚಿಸಲು ತಲೆನೋವು ತಂದಿತ್ತು. ಕಾರಣ ಸ್ನೇಹಿತರು ನನ್ನ ರೇಗಿಸಲು ನನ್ನ ಹೆಸರನ್ನೇ ಅಸ್ತ್ರವನ್ನಾಗಿ ಬಳಸಿ ಪರ್ಸು ಪರ್ಸು(purse) ಅನ್ನೊರು. ಆಗಲಂತು ನನಗೆ ಕೆಟ್ಟ ಕೋಪ ಬರೊದು ನಿಜವಾಗಿಯೂ ನನ್ನ ಹೆಸರಿಗೆ ತಕ್ಕಂತೆ ಪರಶುರಾಮನಾಗಿ ಹೊಡೆಯಲ ಎಂದು ಆದರೆ ಏನು ಮಾಡೊದು ಎಲ್ಲಾ ಸ್ನೇಹಿತರೆ ಅಂತ ನನಗೆ ನಾನೇ ಸಮಾದಾನವಾಗಿ ತಗೊಂಡು ನಾನು ಅವರೊಂದಿಗೆ ನಗ್ತ ಸುಮ್ಮನೆ ಆಗ್ತಿದ್ದೆ. ಹಿರಿಯರು ಮತ್ತು ಅನಕ್ಷರಸ್ಥರ ಬಾಯಲ್ಲಿ ನನ್ನ ಹೆಸರು ಹೀಗೆ ಹಾಳದದ್ದು ಉಂಟು ಆದರೆ ಅಕ್ಷರಸ್ಥರ ಬಾಯಲ್ಲಿ ಹೆಸರು ಹಾಳಾದಾಗ ಆಗುವ ನೋವು ಹೇಳಲಾಗದಷ್ಟು ಇತ್ತು.

ಇನ್ನೂ ನಾನು ಡಿ,ಎಡ್ ಓದುವಾಗಲಂತೂ ವಿಜ್ಞಾನದ ಸರ್ ಗುರುಮೂರ್ತಿಯವರಂತು ಪ್ರತಿ ಭಾರಿ ನನ್ನ ಪರಶಿವನಾಗಿ ಮಾಡಿದ್ದರು. ಪರಶಿವ ಎಂದರೆ ಶಿವನಾಗಿ ಅಲ್ಲ. ಪರಶುರಾಮನ ಹೆಸರನ್ನು ಅವರು ಗೊಂದಲದಲ್ಲಿ ಪರಶಿವ ಎಂದೇ ಕರೆಯುತ್ತಿದ್ದರು ಅದಕ್ಕೆ ಕಾರಣ ಎರಡು ವರ್ಷಗಳ ಹಿಂದಿನ ಡಿ,ಎಡ್ ಬ್ಯಾಚಿನಲ್ಲಿ ಪರಶಿವ ಎಂಬ ಹೆಸರಿನ ವಿದ್ಯಾರ್ಥಿ ಹುಡುಗನೊಬ್ಬ ಇದ್ದನಂತೆ ಅದರಿಂದಾಗಿ ನನ್ನ ಹೆಸರು ಹೀಗೆ ಬದಲಾಗಿತ್ತು.

ಡಿ.ಎಡ್ ಮಾಡಿದ ಎರಡು ವರ್ಷಗಳ ಕಾಲ ನನ್ನ ಅವರು ಕರೆದದ್ದು ಪರಶಿವನೆಂದೆ. ನನಗೂ ನನ್ನ ಹೆಸರು ಸರ್ ಗೆ ಹೇಳಿ ಹೇಳಿ ಸಾಕಾಗಿ ಸರಿ ಇನ್ನೂ ಮುಂದೆ ಸರ್ ಕೂಗುವ ಈ ಹೆಸರಿಗೆ ಪ್ರತಿಕ್ರಿಯಿಸಲು ನಾನೇ ಬದಲಾಗಿ ಅವರು ಪರಶಿವ ಎಂದಾಗಲೆಲ್ಲ ಓಗುಟ್ಟುತ್ತಿದ್ದೆ.

ಆದರೂ ಅವರು ಕೊನೆಯ ವರೆಗೆ ನನ್ನ ಹೆಸರು ಜ್ಞಾಪಕ ಶಕ್ತಿಯಲ್ಲಿ ಉಳಿಸಿಕೊಂಡಿದ್ದು ಪರಶಿವನಾಗಿಯೇ ಹೊರತು ಪರಶುರಾಮನಾಗಿ ಅಲ್ಲ!! ಇವತ್ತಿಗೂ ಆಗಾಗ ಕಾಲೇಜ್ ಕಡೆ ಹೋದಾಗ ಎದುರಾದರೆ ಏನಯ್ಯ ಪರಶಿವ ಅಂತಾರೆ. ಗುರುಗಳ ಆ ಮಾತಿಗೆ ಉತ್ತರಿಸಲೊ ಕೋಪಗೊಳ್ಳಲೊ ಅಥವಾ ಅವರ ಬಾಯಲ್ಲಿ ನನ್ನ ಬದಲಾದ ಹೆಸರಿಗೆ ಮುಜುಗರ ಪಡಲೊ ತಿಳಿಯದೆ ಕಂಗಲಾಗ್ತಿನಿ..

ಅಂದ ಹಾಗೆ ನಿಮಗೆ ನನ್ನ ಹೆಸರು ಸರಿಯಾಗಿ ಏನಂತ ಗೊತ್ತಾಯ್ತ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಹೃದ್ರೋಗದ ಹಟಾತ್ ಸಾವುಗಳ ಬಗ್ಗೆ ನಾಗೇಶ್ ಹೆಗಡೆ ಬರಹ : ಕೋವಿಡ್ ಬದಿಗಿಟ್ಟು CVD ನೋಡೋಣವೆ..?

Published

on

(ಕೋವಿಡ್‌-19ರಿಂದಾಗಿ ಇದುವರೆಗೆ ನಮ್ಮ ದೇಶದಲ್ಲಿ 1,23,456 ಜನ ಸತ್ತಿದ್ದಾರೆ ಅಂದುಕೊಳ್ಳಿ. ಇದೇ 100 ದಿನಗಳ ಅವಧಿಯಲ್ಲಿ CVD ಕಾಯಿಲೆಯಿಂದ ಭಾರತದಲ್ಲಿ ಅಂದಾಜು ಆರು ಲಕ್ಷ ಜನ ಸತ್ತಿದ್ದಾರೆ. ಸುದ್ದಿ ಮಾಧ್ಯಮಗಳಲ್ಲಿ ಅದರ ಸದ್ದೇ ಇಲ್ಲ.)

CVD ಅಂದರೆ ಕಾರ್ಡಿಯೊ ವಾಸ್ಕುಲರ್ ಡಿಸೀಸ್. ಅಂದರೆ ಹೃದ್ರೋಗ. ಈ ಕಾಯಿಲೆಯಿಂದ ಪ್ರತಿ ದಿನ ನಮ್ಮಲ್ಲಿ ಸರಾಸರಿ ಆರು ಸಾವಿರ ಜನರು ಸಾಯುತ್ತಾರೆ.

ಕಳೆದ ಹತ್ತು ವರ್ಷಗಳಿಂದ ಸಿವಿಡಿ ಸಾವಿನ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ. ಸ್ಟೆಂಟ್ ತಯಾರಿಸುವವರ ವೆಬ್ ಸೈಟ್‌ಗಳನ್ನು ನೋಡಿದರೆ ಹೃದ್ರೋಗಿಗಳ ಸಂಖ್ಯೆ ಹತ್ತು ಪಟ್ಟು ಏರಲಿದೆ ಎಂದು ಖುಷಿಯಿಂದೆಂಬಂತೆ ಸಾರುತ್ತಾರೆ.

ಹೃದ್ರೋಗಗಳ ಹೆಚ್ಚಳಕ್ಕೆ ಮುಖ್ಯ ಕಾರಣ ಏನೆಂದರೆ ಕಳಪೆ ಖಾದ್ಯತೈಲ, ವ್ಯಾಯಾಮವಿಲ್ಲದ ದಿನಚರಿ, ಮತ್ತು ಆತಂಕ. ಈ ಮೂರು ಹೆಚ್ಚಾದಾಗ ಬರುವ ಬೊಜ್ಜು, ಬಿಪಿ, ಕೊಲೆಸ್ಟೆರಾಲ್ ಶೇಖರಣೆ, ಲಿವರ್ನಲ್ಲಿ ಉತ್ಪನ್ನವಾಗುವ LP(a) ಎಂಬ ಕೊಬ್ಬು ಇವೆಲ್ಲ ಸೇರಿ ರಕ್ತನಾಳಗಳಲ್ಲಿ ಗಂಟುಮೂಟೆ ಇಡುತ್ತವೆ. ಬ್ಯಾಂಕಿನಲ್ಲಿ ಡಿಪಾಸಿಟ್ ಇಟ್ಟ ಹಾಗೆ. ಹೃದಯ ಪಾಪ, ಏದುಸಿರು ಬಿಡುತ್ತ ರಕ್ತವನ್ನು ಪಂಪ್ ಮಾಡಿ ಮಾಡಿ ಹೈರಾಣಾಗುತ್ತದೆ. ಈ ಮೂರರ ಜೊತೆಗೆ ತಂಬಾಕು ಸೇವನೆ ಇದ್ದರೆ ಅದೂ ಹೃದಯ ಬಡಿತವನ್ನು ಹೆಚ್ಚಿಸುತ್ತ ಇನ್ನಷ್ಟು ಕಷ್ಟ ಕೊಡುತ್ತಿರುತ್ತದೆ.

ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಇವೆಲ್ಲವುಗಳ ಬಳಕೆ ಹೆಚ್ಚಾಗಿದೆ. ಮನೆಯಲ್ಲಿ ಕೂತು ಮಾಡಿದ್ದೆಲ್ಲ ಇದೇ ತಾನೆ? (ಸಿಗರೇಟು ಪೂರೈಕೆ ಮಾಡಲೆಂದು 60 ಲಕ್ಷ ಲಂಚ ಪಡೆವರದ್ದೂ ಇದೇ ಗತಿ). ಲಾಕ್‌ಡೌನ್ ಮುಗಿದ ನಂತರ ಇವೆಲ್ಲ ಇನ್ನೂ ಹೆಚ್ಚಾಗಿದೆ. ರಸ್ತೆಗಳಲ್ಲಿ ಪಕೋಡಾ ಮಾರುವವರಿಗೆ ಗಿರಾಕಿಗಳು ಹೆಚ್ಚಾಗಿದ್ದಾರೆ. ಬೇಕರಿಗಳಲ್ಲಿ ಮೊದಲಿಗಿಂತ ಜಾಸ್ತಿ ನೂಕು ನುಗ್ಗಲು.

ತಿಂಡಿ-ಊಟಗಳಲ್ಲಿ ಟ್ರಾನ್ಸ್‌ ಫ್ಯಾಟ್ (ಕಳಪೆ ತೈಲ) ಬಳಕೆ ಜಾಸ್ತಿ ಇದ್ದರೆ ಹೃದಯಕ್ಕೆ ಡಬಲ್ ಟ್ರಬಲ್ ಎನ್ನುತ್ತಾರೆ ತಜ್ಞರು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ವರ್ಷ ಐದು ಲಕ್ಷ ಜನರು ಇದರಿಂದಾಗಿಯೇ ಸಾಯುತ್ತಿದ್ದಾರೆ. ಇನ್ನು ಎರಡು ವರ್ಷಗಳಲ್ಲಿ ಎಲ್ಲ ದೇಶಗಳೂ ಇದನ್ನು ನಿಷೇಧಿಸಬೇಕೆಂದು ಕರೆ ಕೊಟ್ಟಿದೆ. ಬಹಳಷ್ಟು ದೇಶಗಳು (ಕೆನಡಾ, ಬ್ರಿಟನ್, ಸಿಂಗಪೂರ್, ಸ್ವೀಡನ್, ಯುಎಸ್, ಸಿಂಗಪೂರ್ ಇತ್ಯಾದಿ) ಆಗಲೇ ಇದರ ಬಳಕೆಯ ಮೇಲೆ ಕಟ್ಟುನಿಟ್ಟಿನ ನಿಬಂಧನೆಗಳನ್ನು ಹಾಕಿವೆ.

ನಮ್ಮಲ್ಲಿ ಅಂಥ ನಿಬಂಧನೆ ಜಾರಿಗೆ ಬರುವುದೇ ಕಷ್ಟ. ಬಳಸಿದ ಎಣ್ಣೆಯನ್ನೇ ಮತ್ತೆ ಮತ್ತೆ ಬಳಸಬೇಡಿ ಎಂದು ರಸ್ತೆ ಪಕ್ಕದಲ್ಲಿ ಪಕೋಡಾ ಕರಿದು ಮಾರುವವನ ಮೇಲೆ ಎಂಥ ನಿಬಂಧನೆ ಜಾರಿಗೆ ಬಂದೀತು? ಬೇಕರಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅವುಗಳ ಪಕ್ಕದಲ್ಲೇ ಔಷಧ ಅಂಗಡಿಗಳೂ ಹೆಚ್ಚುತ್ತಿವೆ. ಗೋಭಿ ಮಂಚೂರಿಗೆ ಬೇಡಿಕೆಯೂ ಹೆಚ್ಚುತ್ತಿದೆ.

ಬೇರೆ ದೇಶಗಳಲ್ಲಿ ನಿರ್ಬಂಧಿಸಲಾದ 57 ಬಗೆಯ ಕೀಟನಾಶಕ ವಿಷಗಳು ನಮ್ಮಲ್ಲಿ ಸಲೀಸಾಗಿ ಮಾರಾಟವಾಗುತ್ತವೆ. ಹೂಕೋಸು (ಗೋಭಿ) ಬೆಳೆಯಲು ಭಾರೀ ವಿಷದ ಸಿಂಪಡನೆ ಆಗಲೇಬೇಕು. ಅತ್ತ ಬೆಳೆದವನಿಗೂ ವಿಷ ಸಿಂಚನ, ಇತ್ತ ಬಳಸುವವನಿಗೂ ಕಂಟಕ. ಚಿಕ್ಕವರು, ದೊಡ್ಡವರು, ನಗರದವರು, ಹಳ್ಳಿಯವರು ಅವರಿವರೆನ್ನದೆ ಯಾರನ್ನು ಬೇಕಾದರೂ ಬಲಿತೆಗೆದುಕೊಳ್ಳುತ್ತದೆ ಈ ಕೊರೊನರಿ ಹಾರ್ಟ್ ಡಿಸೀಸ್.

ಇದಕ್ಕೂ ಕೊರೊನಾ ಸಂಬಂಧ ಇದೆ. ದೇಹಕ್ಕೆ ಶುದ್ಧರಕ್ತವನ್ನು ಪೂರೈಸುವ ರಕ್ತನಾಳಗಳು ಹೃದಯವನ್ನು ಕಿರೀಟದಂತೆ ಸುತ್ತಿಕೊಂಡಿದ್ದರಿಂದ ಇದಕ್ಕೆ ಕೊರೊನರಿ ಆರ್ಟರಿ ಎನ್ನುತ್ತಾರೆ. ಕೊರೊನಾ ಕುರಿತು ಗಾಬರಿ ಹುಟ್ಟಿಸುವ ಅಂಕಿಸಂಖ್ಯೆಗಳನ್ನೂ ಗ್ರಾಫಿಕ್‌ಗಳನ್ನೂ ತೋರಿಸುತ್ತ ಭಯಾನಕ ದೃಶ್ಯಗಳನ್ನು ಬಿತ್ತರಿಸುವವರು ಸದ್ಯಕ್ಕೇನೊ ದೇಶದ ಗಮನವನ್ನು ಗಡಿಯ ಕಡೆ ಸೆಳೆಯುತ್ತಿದ್ದಾರೆ. ರಸ್ತೆ ಪಕ್ಕ ಗೋಭೀ ಮಂಚೂರಿ ತಿನ್ನುತ್ತ ನಾವೆಲ್ಲ ಚೀನೀ ವಸ್ತುಗಳನ್ನು ನಿಷೇಧಿಸುವ ಚರ್ಚೆಯಲ್ಲಿ ತೊಡಗಿದ್ದೇವೆ. ಚಾನೆಲ್‌ಗಳ ಕೆಲವರು ರಕ್ತ ಹೆಪ್ಪುಗಟ್ಟುವಂಥ ಗ್ರಾಫಿಕ್‌ಗಳನ್ನು ಹಾಕುತ್ತಿದ್ದಾರೆ.

ಯಾಕೆ ಯಾರೂ ಖಾದ್ಯ ತೈಲಗಳ ಗುಣಮಟ್ಟದ ಬಗ್ಗೆ, ಆಹಾರದಲ್ಲಿರುವ ವಿಷಗಳ ಬಗ್ಗೆ ಜಾಗೃತಿ ಮೂಡಿಸುತ್ತಿಲ್ಲ? ದಿನಕ್ಕೆ ಆರೇಳು ಸಾವಿರ ಸಾವಾಗುತ್ತಿದ್ದರೂ ಯಾರೂ ಯಾಕೆ ಹೃದ್ರೋಗವನ್ನು ತಡೆಗಟ್ಟಬಲ್ಲ ಸರಳ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸುತ್ತಿಲ್ಲ? ಯಾಕೆ ಫೋನ್ ನಲ್ಲಿ ಎಚ್ಚರಿಕೆಯ ಮಾತುಗಳು ಬರುತ್ತಿಲ್ಲ?

ಯಾಕೆಂದರೆ CVDಯನ್ನು ತಡೆಗಟ್ಟುವಲ್ಲಿ ಮತ್ತು ಎಕ್ಸ್-ರೇ, ಇಸಿಜಿ, ಆಂಜಿಯೊಗ್ರಾಮ್, ಕೊರೊನರಿ ಬೈಪಾಸ್‌ ಅಥವಾ ಸ್ಟೆಂಟ್ ಬಳಕೆಯನ್ನು ಕಡಿಮೆ ಮಾಡುವಲ್ಲಿ ಯಾವ ಲಾಭವೂ ಇಲ್ಲ. ಅದಕ್ಕೇ ಸಿವಿಡಿಗೆ ಯಾರೂ ಕ್ಯಾರೇ ಅನ್ನುವವರಿಲ್ಲ. ಬದಲಿಗೆ ಕೊರೊನಾ ಮಾರಿಯ ಬಗ್ಗೆ ಬ್ರೆಕಿಂಗ್ ನ್ಯೂಸ್ ಕೊಟ್ಟು ಕೊಟ್ಟು ಹೃದಯ ಬಡಿತವನ್ನು ಹೆಚ್ಚಿಸುವ ಯತ್ನಗಳೇ ಎದ್ದು ಕಾಣುತ್ತಿವೆ. ಒಂದು ದಿನ ಈ ಸುದ್ದಿಯೂ ನೇಪಥ್ಯಕ್ಕೆ ಸೇರುತ್ತದೆ.

ನೋಡುತ್ತಿರಿ, ಇಂದು ಸಿವಿಡಿಗೆ ಬಂದ ಸ್ಥಿತಿಯೇ ಮುಂದೆ ಕೋವಿಡ್‌-19ಕ್ಕೂ ಬರಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ನಿತ್ಯ ಭವಿಷ್ಯ52 mins ago

ಈ ರಾಶಿಯವರಿಗೆ ನಿಶ್ಚಿತಾರ್ಥ, ಮದುವೆ ಅತಂತ್ರ ಸ್ಥಿತಿ ! ಭಾನುವಾರ ರಾಶಿ ಭವಿಷ್ಯ-ಮೇ-9,2021

ಸೂರ್ಯೋದಯ: 05:54 am, ಸೂರ್ಯಾಸ್: 06:34 pm ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಚೈತ್ರ ಮಾಸ ವಸಂತ ಋತು ಉತ್ತರಾಯಣ,...

ದಿನದ ಸುದ್ದಿ11 hours ago

ಕಾಂ. ಹೆಚ್.ಕೆ.ರಾಮಚಂದ್ರಪ್ಪ ನಿಧನ : ಗಣ್ಯರ ಸಂತಾಪ

ಸುದ್ದಿದಿನ,ದಾವಣಗೆರೆ: ನಗರದ ಹಿರಿಯ ಕಾರ್ಮಿಕ ಮುಖಂಡ ಕಾಂ.ಹೆಚ್.ಕೆ.ರಾಮಚಂದ್ರಪ್ಪನವರ ನಿಧನಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ...

ದಿನದ ಸುದ್ದಿ23 hours ago

ಕಲ್ಪವೃಕ್ಷವೆಂದರೆ..!?

ಕೆ.ಶ್ರೀಧರ್ (ಕೆ.ಸಿರಿ), ಯುವ ಸಾಹಿತಿಗಳು, ಚಾಮರಾಜನಗರ ಕಲ್ಪವೃಕ್ಷವೆಂದರೆ ಬೇಡಿದ್ದನ್ನು ನೀಡುವ ಸ್ವರ್ಗ ಲೋಕದ ಮರ ಹೌದು ತೆಂಗಿನಮರವು ಕೂಡ ಮನುಷ್ಯನ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಉಪಯುಕ್ತವಾಗುವ...

ದಿನದ ಸುದ್ದಿ23 hours ago

ಕರ್ನಾಟಕ | ಶುಕ್ರವಾರ 592 ಮಂದಿ ಕೊರೋನಾದಿಂದ ಸಾವು, 50ಸಾವಿರ ಹೊಸ ಪ್ರಕರಣಗಳು ದಾಖಲು

ಸುದ್ದಿದಿನ, ಬೆಂಗಳೂರು : ಕರ್ನಾಟಕದಲ್ಲಿ ಶುಕ್ರವಾರ ಕೊರೋನಾದಿಂದ 592 ಮಂದಿ ಸಾವನ್ನಪ್ಪಿದ್ದು, 50 ಸಾವಿರ ಹೊಸ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 346 ಸಾವುಗಳು ಮತ್ತು 21,000 ಕ್ಕೂ...

ದಿನದ ಸುದ್ದಿ24 hours ago

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 4,187 ಮಂದಿ ಕೊರೋನಾದಿಂದ ಸಾವು

ಸುದ್ದಿದಿನ, ನವದೆಹಲಿ : ಶುಕ್ರವಾರ 4,01,078 ಹೊಸ ಕರೋನವೈರಸ್ ಪಾಸಿಟಿವ್ ಪ್ರಕರಣಗಳು ಒಂದು ದಿನದಲ್ಲಿ ವರದಿಯಾಗಿದೆ, ಭಾರತದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳು 2,18,92,676 ಕ್ಕೆ ಏರಿದೆ,...

ನಿತ್ಯ ಭವಿಷ್ಯ1 day ago

ಜ್ಯೋತಿಷ್ಯಶಾಸ್ತ್ರ ಅಥವಾ ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು?ಕಂಕಣಬಲ ಕೂಡಿ ಬರಲು ಏನು ಮಾಡಬೇಕು?

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ...

ನಿತ್ಯ ಭವಿಷ್ಯ1 day ago

ಸರ್ಕಾರಿ ಉದ್ಯೋಗ ಪ್ರಯತ್ನಿಸಿದವರಿಗೆ ಸಿಹಿ ಸುದ್ದಿ! ಚಿರಾಸ್ತಿ ಪಡೆಯುವ ಭಾಗ್ಯ! ಶನಿವಾರ ರಾಶಿ ಭವಿಷ್ಯ-ಮೇ-8,2021

ಸೂರ್ಯೋದಯ: 05:55 AM, ಸೂರ್ಯಸ್ತ: 06:34 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಚೈತ್ರ ಮಾಸ, ವಸಂತ ಋತು, ಉತ್ತರಾಯಣ,...

ಲೈಫ್ ಸ್ಟೈಲ್1 day ago

ನಿಮ್ಮ ಮಗುವಿಗೆ ಅನುವಂಶಿಕ ದೋಷಗಳಿವೆಯೇ..,? ತಿಳಿಯುವುದು ಹೇಗೆ..?

  ಡಾ.ಪ್ರಚಿ ಭೋಸಲೆ ನರೇಂದ್ರ, ಎಂಬಿಬಿಎಸ್, ಡಿಸಿಎಚ್ ಮತ್ತು ಅಭಿವೃದ್ಧಿ ಪೇಡಿಯಾಟ್ರಿಕ್ಸ್, ಸಲಹೆಗಾರರು ನಿಯೋನಾಟಾಲಜಿ ಮತ್ತು ಪೇಡಿಯಾಟ್ರಿಕ್ಸ್ ಅಪೊಲೊ ತೊಟ್ಟಿಲು ಮತ್ತು ಮಕ್ಕಳ ಆಸ್ಪತ್ರೆ – ಬೆಂಗಳೂರು...

ಅಂತರಂಗ1 day ago

ನುಡಿ ನಮನ | ಡಾ. ವಿಠಲ ಭಂಡಾರಿ, ಕ್ಷಮಿಸಿ ಸರ್

ಡಾ. ಗಿರೀಶ್ ಮೂಗ್ತಿಹಳ್ಳಿ, ಚಿಕ್ಕಮಗಳೂರು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸಂಶೋಧನೆ ಮಾಡುವಾಗ ಡಾ. ಆನಂದ ಪಾಟೀಲ ಅವರ ಸಲಹೆಯಂತೆ ‘ಪ್ರೀತಿಯ ಕಾಳು’ ಪುಸ್ತಕ ಬೇಕಿತ್ತು. ಈ ಪುಸ್ತಕ...

ದಿನದ ಸುದ್ದಿ1 day ago

ಆನ್ ಲೈನ್ ಶಿಕ್ಷಣದಲ್ಲಿ ಕರ್ನಾಟಕದ ಮಹಿಳೆಯರೆ ಅಗ್ರಗಣ್ಯರು

ಕರ್ನಾಟಕದಲ್ಲಿ ಹೆಚ್ಚು ಉನ್ನತ ವಿದ್ಯಾವಂತ ವೃತ್ತಿಪರ ಮಹಿಳಾ ತರಬೇತುದಾರರು -ರೋಹಿತ್ ಜೈನ್, ಬೆಂಗಳೂರು ಕರ್ನಾಟಕದ ಉನ್ನತ ವಿದ್ಯಾವಂತ ಮಹಿಳಾ ವೃತ್ತಿಪರರು ಹೆಚ್ಚು ಯಶಸ್ವಿ ತರಬೇತುದಾರರನ್ನು ನೀಡುತ್ತಿದ್ದಾರೆ ಶಿಕ್ಷಣ...

Trending