Connect with us

ಲೋಕಾರೂಢಿ

ಸಮರ್ಥ ನಾಯಕತ್ವಕ್ಕಾಗಿ ಜವಾಬ್ದಾರಿ ನಿರ್ವಹಣೆ

Published

on

ಕೇಂದ್ರ ಸರ್ಕಾರದ ಸಾಧನೆ ಶೂನ್ಯ” ಎಂದು ಬೊಬ್ಬಿರಿಯುವವರ ಮಾತುಗಳಿಗೆ ನನ್ನ ಸಹಮತವಿಲ್ಲ. ಸಾಧನೆಯನ್ನು ಅಭಿವೃದ್ಧಿ ಎಂದು ಬಣ್ಣಿಸಬಹುದಾದರೆ ಖಂಡಿತವಾಗಿಯೂ ಹಲವಾರು ಅಭಿವೃದ್ಧಿ ಕಾರ್ಯಗಳು ಕಳೆದ ಐದು ವರ್ಷಗಳಲ್ಲಿ ಆಗಿದೆ. ಅದೇ ರೀತಿ ಈ ಹಿಂದಿನ ಸರ್ಕಾರ ಸಾಧನೆಗಳನ್ನು ಮಾಡಿಲ್ಲವಾ? ಅದಕ್ಕೂ ಮೇಲಿನದೇ ಉತ್ತರ ನನ್ನದು.

ಅಭಿವೃದ್ಧಿಗಳಾಗುವುದು ಇದ್ದಕ್ಕಿದ್ದಂತೆ ಅಲ್ಲ, ಹಿಂದಿನ ಸರ್ಕಾರಗಳೂ ಒಂದಷ್ಟು ಪ್ರಯತ್ನ ಮಾಡಿದ್ದನ್ನು ಮುಂದುವರೆಸಿ ಈಗಿನ ಸರ್ಕಾರ ಅದಕ್ಕೊಂದು ರೂಪು ಕೊಟ್ಟಿರುತ್ತದೆ. ಪ್ರತಿಯೊಂದು ಸರ್ಕಾರದ ಕೆಲಸ ದೇಶದ ಸಮಗ್ರ ಕಟ್ಟುವಿಕೆ. ಅದರಲ್ಲಿ ನಿಷ್ಕ್ರಿಯವಾಗಿದ್ದ ಸರ್ಕಾರಗಳು ಯಾವುದೂ ಇಲ್ಲ.

ಮೇಲಿನ ವಿಷಯವನ್ನು ಪಕ್ಕಕ್ಕಿಟ್ಟು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವುದಾದರೆ, ಪ್ರತಿಯೊಂದು ಲೋಕಸಭಾ ಕ್ಷೇತ್ರಗಳ ಜನಪ್ರತಿನಿಧಿಯಾಗಿ ಆಯ್ಕೆಯಾಗುವ ವ್ಯಕ್ತಿಯು ಆಯಾ ಪ್ರದೇಶದ ಜನರ ಆಶೋತ್ತರಗಳಿಗೆ, ಸಮಸ್ಯೆಗಳಿಗೆ ಧನಿಯಾಗಬೇಕಾದವನು. ಚುನಾವಣೆ ಎದುರಿಸುವ ಪೂರ್ವದಲ್ಲಿ ತನ್ನ ಕನಸುಗಳೇನು, ಪ್ರದೇಶದ ಅಭಿವೃದ್ಧಿಗೆ ತನ್ನ ಚಿಂತನೆಗಳೇನು, ಇಲ್ಲಿಂದ ಪ್ರಮುಖವಾಗಿ ಹೊರಡಿಸಬೇಕಾದ ಧ್ವನಿಯೇನು ಎಂಬೆಲ್ಲ ಮಾಹಿತಿಗಳನ್ನು ಜನರೆದುರು ತೆರೆದಿಡಬೇಕು.

ಅದನ್ನು ಹೊರತುಪಡಿಸಿ, ತನ್ನ ಮುಖಂಡರ-ನಾಯಕರ ಹೆಸರನ್ನು ಹೇಳಿ, ರಾಷ್ಟ್ರೀಯ ಮಟ್ಟದ ಸಾಧನೆಗಳನ್ನು ಬಿಂಬಿಸಿ ತನಗೆ ಮತ ನೀಡಿ ಎಂದು ಕೇಳುವುದಿದೆಯಲ್ಲ, ಅದು ತನ್ನಲ್ಲಿರುವ ಜೊಳ್ಳನ್ನು ತಾನೇ ತೆರೆದಿಟ್ಟಂತೆ. ಬಿಜೆಪಿಯವರಾದರೆ ಮೋದಿಯ ಹೆಸರನ್ನು ಹೇಳುತ್ತಾ, ಕಾಂಗ್ರೆಸ್‍ನವರಾದರೆ ರಾಹುಲ್ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಎಂದು ಬಡಬಡಿಸುತ್ತಾ, ಇನ್ಯಾವುದೋ ಪಕ್ಷದವರಾದರೆ ಕೇಂದ್ರದಲ್ಲಿರುವವರನ್ನು ಸೋಲಿಸಬೇಕೆಂದು ಹೇಳುತ್ತಾ ಮತಯಾಚನೆ ಮಾಡುವುದು ನಿಜಕ್ಕೂ ಬಾಲಿಶ. ಅದರಲ್ಲೂ ಎದುರಾಳಿಯನ್ನು ಹೀನಾಮಾನವಾಗಿ ಬಯ್ಯುತ್ತಾ, ತಮ್ಮ ಕೊಳಕು ನಾಲಿಗೆಯನ್ನು ಚಾಚುವ ಅಭ್ಯರ್ಥಿಗಳು ತಮ್ಮ ‘ನಾಯಕತ್ವ’ದ ಗುಣವನ್ನು ಹರಾಜಿಗಿಟ್ಟುಬಿಡುತ್ತಾರೆ.

ನಾಳೆಯ ದಿವಸ ಕೇಂದ್ರಕ್ಕೆ ಸ್ಥಳೀಯ ಸಮಸ್ಯೆಗಳು ಅರಿವಾಗಬೇಕಾದಲ್ಲಿ ಅದನ್ನು ಸಮರ್ಥವಾಗಿ ತಲುಪಿಸಬೇಕಾದದ್ದು ಸಂಸದರ ಕೆಲಸ. ಆದರೆ ಸಂಸದರಿಗೇ ಸ್ಥಳೀಯ ಸಮಸ್ಯೆಗಳ ಬಗ್ಗೆ ಯೋಚನೆ ಇಲ್ಲವೆಂದಾದಲ್ಲಿ ಇನ್ನೆಲ್ಲಿಯ ಮಾತು? ರಾಷ್ಟ್ರೀಯ ನಾಯಕರ ಹೆಸರನ್ನು ಹೇಳಿ ಆರಿಸಿ ಬಂದಮೇಲೆ ಅಷ್ಟರ ಮಟ್ಟಿಗೆ ಅಧಿಕಾರ ವಹಿಸಿಕೊಂಡ ನೆಮ್ಮದಿ ಜನಪ್ರತಿನಿಧಿಗಳನ್ನು ನಿರಾಳ ಮಾಡಿಬಿಡುತ್ತದೆ. ಇನ್ನೈದು ವರ್ಷ ಹಾಗೇ ಹೀಗೇ ತಳ್ಳಿದಲ್ಲಿ ಮತ್ತೆ ಚುನಾವಣೆಗೆ ಸಿದ್ಧರಾದರಾಯಿತು.

ಮತದಾರರು ಮಾಡುವ ತಪ್ಪು ಇದು. ಕೇವಲ ಪಕ್ಷದ ಬೆಂಬಲಕ್ಕೋಸ್ಕರವೋ ಅಥವಾ ರಾಷ್ಟ್ರೀಯ ನಾಯಕರೊಬ್ಬರಿಗೋಸ್ಕರವೋ ಸ್ಥಳೀಯ ಪ್ರತಿನಿಧಿಗಳನ್ನು ಪ್ರಶ್ನೆ ಮಾಡುವುದನ್ನು ನಿರ್ಲಕ್ಷಿಸಿಬಿಡುತ್ತಾರೆ. ಮತಯಾಚನೆಗೆ ಬಂದವರಲ್ಲಿ “ನಿಮ್ಮ ಯೋಚನೆಗಳೇನು?” ಎಂದು ಕೇಳುವುದನ್ನು ಮರೆತುಬಿಡುತ್ತಾರೆ. ಈ ತಪ್ಪು ಮುಂದಿನ ಐದು ವರ್ಷಗಳವರೆಗೆ ಮತದಾರರ ಗೊಣಗುವಿಕೆಗೆ ಕಾರಣವಾಗುತ್ತದೆ. ಕೇಂದ್ರದಲ್ಲಿ ಯಾವುದೇ ಒಂದು ಪಕ್ಷ ಬಹುಮತದಿಂದ ಆಯ್ಕೆಯಾಗುವುದು ಎಷ್ಟು ಮುಖ್ಯವೋ, ಅದೇ ರೀತಿ ಸ್ಥಳೀಯ ನಾಯಕರೂ ಸಮರ್ಥರಾಗಿರುವುದು ಕೂಡ ಅಷ್ಟೇ ಮುಖ್ಯ. ನಾಳೆಯ ದಿನ ಸಮಸ್ಯೆಗಳನ್ನು ಮತದಾರ ಹೇಳಿಕೊಳ್ಳಬೇಕಾಗಿರುವುದು ಸ್ಥಳೀಯ ಸಂಸದರಲ್ಲಿ. ಮತದಾನ ನಮ್ಮ ಕರ್ತವ್ಯ, ಕರ್ತವ್ಯ ಲೋಪವಾಗದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬ ಮತದಾರರ ಜವಾಬ್ದಾರಿ. ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಸಮರ್ಥ ನಾಯಕತ್ವವನ್ನು ಪಡೆಯುವುದು ನಮ್ಮೆಲ್ಲರ ಹಕ್ಕು.

ಕಿರಣ್ ಭೈರುಂಬೆ

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಬರಹಗಾರ ಕಿರಣ್ ಭೈರುಂಬೆ ಇವರ ಊರು ಶಿರಸಿ ಬಳಿ ಭೈರುಂಬೆ. ಓದಿದ್ದು ತಾಂತ್ರಿಕ ಶಿಕ್ಷಣ. ವೃತ್ತಿಯಲ್ಲಿ ಪತ್ರಕರ್ತ. ಈ ಹಿಂದೆ ಟಿವಿಚಾನೆಲ್ ಗಳಾದ ಜನಶ್ರೀ, ಸುವರ್ಣ, ರಾಜ್ ನ್ಯೂಸ್, ರಾಜ್ ಮ್ಯೂಸಿಕ್ ನಲ್ಲಿ ಕೆಲಸ ಮಾಡಿದ ಅನುಭವ. ಆನಂತರ ಬಾಲ್ಕನಿ.ಕಾಂ ಚೀಫ್ ಎಡಿಟರ್ ಆಗಿ ಹಾಗೂ ಲೈಫ್ 360 ಮ್ಯಾಗಜೀನ್ ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಇವರು. ಪ್ರಸ್ತುತ ಶಿರಸಿ ಯಲ್ಲಿ ವಿದ್ಯುತ್ ಗುತ್ತಿದಾರರಾಗಿ ಕಾಯಕದಲ್ಲಿ ತೊಡಗಿದ್ದಾರೆ. ಮೊಬೈಲ್: 9482133340 ಇಮೇಲ್ : kiranbhat23@gmail.com

ಅಂಕಣ

ಸಿದ್ಧಾಂತ ಮತ್ತು ಪತ್ರಿಕೋದ್ಯಮ

Published

on

  • ಹರ್ಷಕುಮಾರ್‌ ಕುಗ್ವೆ, ಪತ್ರಕರ್ತ ಮತ್ತು ಆಕ್ಟಿವಿಸ್ಟ್

ಇದು ಸುಮಾರು 2002-03ರ ಸಂದರ್ಭ. ಶಿವಮೊಗ್ಗದಲ್ಲಿ ನಾವು ಹೋರಾಟಗಳಲ್ಲಿ ಸಕ್ರಿಯವಾಗಿದ್ದ ಕಾಲ. ಒಬ್ಬ ಪತ್ರಕರ್ತ ಮಿತ್ರರೊಂದಿಗೆ ಹೀಗೇ ಚರ್ಚೆ ನಡೆಯುತ್ತಿತ್ತು. ಅವರು ಪತ್ರಿಕೋದ್ಯಮದ ನ್ಯೂಟ್ರಾಲಿಟಿ ಕುರಿತು ಮಾತಾಡುತ್ತಾ, ʼನಾವು ಪತ್ರಕರ್ತರು ನಿಮ್ಮ ರೀತಿ ಯೋಚನೆ ಮಾಡೋದಕ್ಕೆ ಆಗಲ್ಲ. ನಾವು ಯಾವತ್ತೂ ಯಾವುದೇ ಸಿದ್ಧಾಂತಕ್ಕೆ ವಾಲಿಕೊಳ್ಳದೇ ತಟಸ್ಥತೆ ಕಾಪಾಡಬೇಕಾಗುತ್ತದೆʼ ಎಂದು ಹೇಳಿದರು. ʼಅವರ ಜೊತೆ ನಾನು ವಾದಿಸಿದೆ.

ಸರ್, ಸುಳ್ಳನ್ನೇ ಬಂಡವಾಳ ಮಾಡಿಕೊಂಡ ಸಿದ್ಧಾಂತಗಳು ರಾರಾಜಿಸುವಾಗ ಸತ್ಯವನ್ನು ಹುಡುಕಲು ಸಹ ಸಿದ್ಧಾಂತದ ಸಹಾಯ ಬೇಕಾಗುತ್ತದೆ. ಯಾವ ವ್ಯಕ್ತಿಯೂ ಸಿದ್ಧಾಂತದ ಹೊರಗಾಗಿ ಇರಲು ಸಾಧ್ಯವಿಲ್ಲ. ನನಗೆ ಸಿದ್ದಾಂತವೇ ಇಲ್ಲ ಎನ್ನುವ ವ್ಯಕ್ತಿಯನ್ನು ಕೂಡಾ ಅವನಿಗೆ ತಿಳಿದೋ ತಿಳಿಯದೆಯೋ ಒಂದಲ್ಲಾ ಒಂದು ಸಿದ್ದಾಂತ ಇಲ್ಲವೇ ಹಲವು ಸಿದ್ಧಾಂತಗಳು ನಿರ್ದೇಶಿಸುತ್ತಿರುತ್ತವಲ್ಲ.. ʼ ಎಂದ ನನ್ನ ಮಾತಿಗೆ ನಮಗೆ ಪತ್ರಕರ್ತರಿಗೆ ಹಾಗೆ ಯೋಚಿಸಲು ಬರುವುದಿಲ್ಲ. ನೀವು ಎಡ ಪಂಥ ಅಂತೀರಿ, ಅವರು ಬಲಪಂಥ ಅಂತಾರೆ, ನಾವು ಇವೆರಡರ ನಡುವೆ ಸತ್ಯ ಹುಡುಕ್ತೀವಿʼ ಎಂದೆಲ್ಲಾ ಹೇಳಿದರು. ಕೊನೆಗೆ ಯಾರೂ ರಾಜಿಯಾಗಲಿಲ್ಲ.

ಇದಾಗಿ ಹದಿನೈದು ವರ್ಷಗಳ ನಂತರ, 2019ರಲ್ಲಿ ಅದೇ ಪತ್ರಕರ್ತ ಸ್ನೇಹಿತರು ನಮ್ಮ ಜೊತೆ ಕೆಲಸ ಮಾಡುತ್ತಿದ್ದರು. ಅವರು ನರೇಂದ್ರ ಮೋದಿ ಸರ್ಕಾರದ ಆರ್ಥಿಕ ವಂಚನೆಗಳನ್ನು ಅದ್ಭುತ ರೀತಿಯಲ್ಲಿ ಅಂಕಿಅಂಶಗಳ ಸಮೇತ ಬಯಲು ಮಾಡುತ್ತಿದ್ದುದು ಕಂಡು ನನಗೆ ಅಚ್ಚರಿ ಮತ್ತು ಸಂತೋಷವಾಗಿತ್ತು. ಅಂದು ಅವರು ನಿಜಕ್ಕೂ ಸತ್ಯದ ಪರವಾಗಿದ್ದರು. ಆದರೆ ಅವರ ಬರೆಹಗಳನ್ನು ಯಾರಾದರೂ ಬಲಪಂಥೀಯರು ಓದಿದರೆ ಅವರಿಗೆ ಖಂಡಿತಾ ಇವರು ʼಎಡಪಂಥೀಯ ಸಿದ್ಧಾಂತಿʼ, ʼನಗರ ನಕ್ಸಲ್ʼ ಎಂದೆಲ್ಲಾ ಸುಲಭವಾಗಿ ಹಣೆಪಟ್ಟಿ ಕಟ್ಟಬಹುದಿತ್ತು. ಆದರೆ ಆ ಪತ್ರಕರ್ತ ಸ್ನೇಹಿತರು ನಿಜಕ್ಕೂ ಈ ದೇಶದ ಭವಿಷ್ಯದ ಬಗ್ಗೆ ತುಂಬಾ ಆತಂಕಗೊಂಡು, ಕಾಳಜಿಯಿಂದ ಕೆಲಸ ಮಾಡುತ್ತಿದ್ದರು. ಕೊನೆಗೆ ಅವರಿಗೂ ಸಹ ಅವರು ಹಿಂದೆ ಹೇಳಿದ್ದ ರೀತಿಯಲ್ಲಿ ತಟಸ್ಥವಾಗಿ ಪತ್ರಿಕೋದ್ಯಮ ನಡೆಸುವುದು ಸಾಧ್ಯವಿಲ್ಲ ಎಂಬ ಅರಿವಾಗಿರಬಹುದು ಎಂದುಕೊಂಡೆ. ಹೌದು ಪತ್ರಕತ್ರರಾದವರು ಮಾಡಲು ಇರುವ ಬಹಳ ಕೆಲಸಗಳ ನಡುವೆಯೂ ಅವರು ಅದ್ಯತೆಯನ್ನು ಗುರುತಿಸಿಕೊಂಡಿದ್ದರು.

ಪತ್ರಿಕೋದ್ಯಮದ ಬಗ್ಗೆ ಮಾತಾಡುವಾಗ ನಾವು ಒಂದು ಪ್ರಾಥಮಿಕ ಸಂಗತಿಯನ್ನು ತಿಳಿದುಕೊಳ್ಳಬೇಕು. ನಮ್ಮ ದೇಶದಲ್ಲಿ ಪತ್ರಿಕೋದ್ಯಮ ಆರಂಭವಾದ ಸಂದರ್ಭದಲ್ಲಿ ಯಾವೆಲ್ಲಾ ಭಾರತೀಯರು ಪತ್ರಿಕೆಗಳನ್ನು ಹೊರತರುತ್ತಿದ್ದರೋ ಅವರೆಲ್ಲರೂ ಕಟು ಸಿದ್ಧಾಂತಿಗಳಾಗಿದ್ದರು. ಸಾಮ್ರಾಜ್ಯವಾದದ ವಿರುದ್ಧದ ಸಿದ್ದಾಂತ ಅವರೆಲ್ಲರನ್ನು ಮುನ್ನಡೆಸುತ್ತಿತ್ತು. ಬಹುತೇಕ ಅವರೆಲ್ಲರೂ ಸ್ವಾತಂತ್ರ್ಯ ಹೋರಾಟಗಾರರು ಇಲ್ಲವೇ ಸ್ವಾಭಿಮಾನ ಚಳವಳಿಯ ಹೋರಾಟಗಾರರು, ನಾಯಕರು ಆಗಿದ್ದರು. ಅಂತಹ ಸ್ಪಷ್ಟ ಸೈದ್ಧಾಂತಿಕ ಬುನಾದಿಯಿಟ್ಟುಕೊಂಡು ಅವರೆಲ್ಲಾ ಬ್ರಿಟಿಷರ ವಿರುದ್ಧ ಪತ್ರಿಕೋದ್ಯಮ ನಡೆಸದಿದ್ದರೆ ಈ ದೇಶದ ಪತ್ರಿಕೋದ್ಯಮದ ಇತಿಹಾಸ ಅತ್ಯಂತ ಟೊಳ್ಳಾದ, ಬೂಸಾ ಇತಿಹಾಸವಾಗುತ್ತಿತ್ತು.

ಕೆಲ ಬ್ರಿಟಿಷ್ ಪತ್ರಕರ್ತರು ಹೇಗೆ ಬ್ರಿಟಿಷ್ ಅಧಿಕಾರಿಗಳ ಬೆಡ್ ರೂಮ್ ಸ್ಟೋರಿಗಳನ್ನು ಚಪ್ಪರಿಸಿಕೊಂಡು ಅದನ್ನೇ ಪತ್ರಿಕೋದ್ಯಮ ಎಂದು ಬೀಗುತ್ತಿದ್ದರೋ ಅಷ್ಟರಲ್ಲೇ ಭಾರತೀಯ ಪತ್ರಿಕೋದ್ಯಮ ಉಳಿದುಬಿಡುತ್ತಿತ್ತು. ಆದರೆ ಹೀಗೆ ಆಗಲು ಬಿಡದೇ ಉದಾತ್ತ ಧ್ಯೇಯಗಳ ಮೂಲಕ ದೇಶದ ಪತ್ರಿಕೋದ್ಯಮ ಬೆಳೆಸಿದ 19ನೆಯ ಶತಮಾನದ ಅಂತಹ ಧೀಮಂತ ಪತ್ರಕರ್ತರು ಹಲವರು. ಸುರೇಂದ್ರ ನಾಥ್ ಬ್ಯಾನರ್ಜಿ (ಬೆಂಗಾಲಿ ಪತ್ರಿಕೆ- 1879) ಪತ್ರಕರ್ತರಾಗಿ ಕೆಲಸ ಮಾಡುತ್ತಲೇ ಸತ್ಯ ಹೇಳಿದ ಕಾರಣಕ್ಕೆ ಬ್ರಿಟಿಷ್ ಸರ್ಕಾರ ಅವರನ್ನು ವರ್ನಾಕ್ಯುಲರ್ ಪ್ರೆಸ್ ಕಾಯ್ದೆಯ ಅಡಿ ಜೈಲಿಗಟ್ಟಿತ್ತು. ಸಂವಾದ ಕೌಮುದಿ ಎಂಬ ಪತ್ರಿಕೆ ನಡೆಸುತ್ತಿದ್ದ ರಾಜಾರಾಮ ಮೋಹನ್ ರಾಯ್ ಒಬ್ಬ ಸ್ಪಷ್ಟ ವಿಚಾರವಾದಿಯಾಗಿದ್ದರು.

ಅವರು ಈ ದೇಶದ ಅನಿಷ್ಟಗಳ ಕುರಿತೇ ತಮ್ಮ ಪತ್ರಿಕೆಯಲ್ಲಿ ಬರೆಯುತ್ತಾ ಹೋದರು. ಇದೇ ಕೆಲಸವನ್ನು ಮಹಾರಾಷ್ಟ್ರದಲ್ಲಿ ಮರಾಠಿ ಪತ್ರಿಕೆ ಆರಂಭಿಸಿದ ಜಂಬೇಕರ್ ಮಾಡಿದರು, ಅವರು ತಮ್ಮ ದರ್ಪಣ್ ಪತ್ರಿಕೆಯ ಮೂಲಕ ಸಾಮಾಜಿಕ ಅನಿಷ್ಟಗಳು ಕುರಿತು ಜಾಗೃತಿ ಮೂಡಿಸಿದರು- ಇವರನ್ನು ಮರಾಠಿ ಪತ್ರಿಕೋದ್ಯಮದ ಪಿತಾಮಹ ಎಂದು ಕರೆಯಲಾಗುತ್ತದೆ. ಬಂಗಾಳದಲ್ಲಿ ಹರೀಶ್ಚಂದ್ರ ರಾಯ್ ಎಂಬುವವರು ಬಂಗದರ್ಶನ್ ಎಂಬ ಪತ್ರಿಕೆ ತಂದರು; ಗುಜರಾತಿಯಲ್ಲಿ ʼಬಾಂಬೆ ಸಮಾಚಾರ್ʼ ಪತ್ರಿಕೆ ಆರಂಭಿಸಿದ ಫರ್ದುನ್ಜಿ ಮರ್ಜ್ ಬಾನ್ ಎಂಬುವವರು ಸಹ ಪತ್ರಿಕೆಯ ಮೂಲಕ ಸಮಾಜ ಸುಧಾರಣೆಗೆ ಒತ್ತು ಕೊಟ್ಟರು. ಇನ್ನು ಸ್ವಾತಂತ್ರ್ಯ ಹೋರಾಟಗಾರರಲ್ಲಿ ಬಾಲಗಂಗಾಧರ ತಿಲಕ್ ಕೇಸರಿ ಮತ್ತು ಮರಾಟಾ ಪತ್ರಿಕೆ ಹೊರಡಿಸುತ್ತಿದ್ದರು, ಗಾಂದೀಜಿಯವರು ಆಫ್ರಿಕಾದಲ್ಲಿದ್ದಾಗಲೇ ಇಂಡಿಯನ್ ಒಪಿನಿಯನ್ ಪತ್ರಿಕೆ ನಡೆಸುತ್ತಿದ್ದರೆ, ಭಾರತಕ್ಕೆ ಬಂದ ಮೇಲೆ ಯಂಗ್ ಇಂಡಿಯಾ ಮತ್ತು ಹರಿಜನ್ ಎಂಬ ಪತ್ರಿಕೆಗಳನ್ನು ಹೊರತಂದರು,

ಸುಭಾಷ್ ಚಂದ್ರ ಬೋಸ್ ಅವರು ಸ್ವರಾಜ್ ಪತ್ರಿಕೆಯ ಸಂಪಾದಕರಾಗಿದ್ದರು, ಲಾಲಾ ಲಜಪತ್ ರಾಯ್ ಅವರು ದ ಟ್ರಿಬ್ಯೂನ್ ಎಂಬ ಇಂಗ್ಲಿಷ್ ಪತ್ರಿಕೆ ತಂದರು, ಜೊತೆಗೆ ವಂದೆ ಮಾತರಂ ಎಂಬ ಉರ್ದು ಪತ್ರಿಕೆಯನ್ನೂ ಪ್ರಕಟಿಸುತ್ತಿದ್ದರು- ಇವುಗಳ ಮೂಲಕ ಸ್ವದೇಶಿ ಚಿಂತನೆಯನ್ನು ಅಥವಾ ಸಿದ್ಧಾಂತವನ್ನು ಪ್ರಚುರಪಡಿಸಿದರು, ಹೋಂರೂಲ್ ಚಳವಳಿಯ ಮುಂದಾಳು ಅನಿಬೆಸೆಂಟ್ ಅವರು ನ್ಯೂ ಇಂಡಿಯಾ ಪತ್ರಿಕೆ ತಂದರು, ಇನ್ನು ಮದನ್ ಮೋಹನ್ ಮಾಳವೀಯ ಅವರು ಮೋತಿಲಾಲ್ ನೆಹರೂ ಜೊತೆ ಸೇರಿಕೊಂಡು ದ ಲೀಡರ್ ಎಂಬ ಪತ್ರಿಕೆ ತಂದರೆ, ನಂತರ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯನ್ನೂ ಪುನರುಜ್ಜೀವಗೊಳಿಸಿದರು. ಇನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ʼಅಸ್ಪೃಶ್ಯರಿಗೆ ಈ ದೇಶದಲ್ಲಿ ಪತ್ರಿಕೆಯಿಲ್ಲʼ ಎಂದು ಘೋಷಿಸಿ ಮೊದಲಿಗೆ ಶಾಹು ಮಹಾರಾಜರ ಬೆಂಬಲದಿಂದ ಮೂಕನಾಯಕ ಪತ್ರಿಕೆ (1920) ತಂದರು; ನಂತರ ಬಹಿಷ್ಕೃತ ಭಾರತ (1927), ನಂತರ ಸಮತಾ (1928), ನಂತರ ಜನತಾ (1930) ಹಾಗೂ ಪ್ರಬುದ್ಧ ಭಾರತ (1956) ಪತ್ರಿಕೆಗಳನ್ನು ಹೊರಡಿಸಿ ನಿರಂತರವಾಗಿ ಅವುಗಳಲ್ಲಿ ಬರೆಯುತ್ತಾ ತಾವೊಬ್ಬ ಧೀಮಂತ ಪತ್ರಕರ್ತ ಎಂಬುದನ್ನೂ ನಿರೂಪಿಸಿದ್ದರು.

ಇವರನ್ನೆಲ್ಲಾ ಹೊರಗಿಟ್ಟು ಕೇವಲ ಬ್ರಿಟಿಷರು ತಂದ ಬೆಂಗಾಲ್ ಗೆಜೆಟ್ ನಂತವುಗಳನ್ನು ಮಾತ್ರವೇ ಭಾರತದ ಪತ್ರಿಕೋದ್ಯಮದ ಇತಿಹಾಸ ಎಂದು ಹೇಳಲು ಬರುತ್ತದೆಯೇ? ಈ ದೇಶದ ಪತ್ರಿಕೋದ್ಯಮದ ಇತಿಹಾಸದ ಸೈದ್ಧಾಂತಿಕ ಅಡಿಪಾಯ ಅತ್ಯಂತ ಭದ್ರವಾಗಿತ್ತು ಎಂಬುದಕ್ಕೆ ಇವೆಲ್ಲಾ ಸಾಕ್ಷಿಯಲ್ಲವೆ? ಅಲ್ಲಿ ಎಡಬಿಡಂಗಿತನಕ್ಕೆ, ಸೊ ಕಾಲ್ಡ್ ತಟಸ್ಥತೆಗೆ ಯಾವುದೇ ಅವಕಾಶವಿರಲಿಲ್ಲ. ಈ ದೇಶವನ್ನು ಕಾಡುತ್ತಿದ್ದ ಸಾಮ್ರಾಜ್ಯಶಾಹಿ ಮತ್ತು ಬ್ರಾಹ್ಮಣಶಾಹಿ ಶಕ್ತಿಗಳನ್ನು ನೇರವಾಗಿ ಎದುರಿಸಿಯೇ ಭಾರತದ ಪತ್ರಿಕೋದ್ಯಮ ನಡೆದುಕೊಂಡುಬಂದಿದೆ ಎಂಬುದಕ್ಕೆ ಮೇಲಿನ ಉದಾಹರಣೆಗಳೇ ಸಾಕ್ಷಿ.

ಸ್ವಾತಂತ್ರ್ಯಾನಂತರದಲ್ಲಿ, ನಮ್ಮ ಕರ್ನಾಟಕದಲ್ಲೇ ನಾವು ಯಾರನ್ನೆಲ್ಲಾ ಇಂದು ಧೀಮಂತ ಪತ್ರಕರ್ತರೆಂದು ಪರಿಗಣಿಸಿದ್ದೇವೆಯೋ, ಯಾರನ್ನೆಲ್ಲಾ ಆದರ್ಶ ಎಂದು ನೋಡುತ್ತೇವೆಯೋ ಅವರೆಲ್ಲರೂ ಅತ್ಯಂತ ಸ್ಪಷ್ಟ ಮತ್ತು ದೃಢವಾದ ಸಿದ್ಧಾಂತಿಗಳೇ ಆಗಿದ್ದರು ಎಂಬುದನ್ನು ಮರೆಯಬಾರದು. ಕರ್ನಾಟಕದ ಪತ್ರಿಕೋದ್ಯಮಕ್ಕೇ ಹೊಸ ಮೆರಗು ತಂದು ಸಂಚಲನ ಮೂಡಿಸಿದ ಪಿ. ಲಂಕೇಶ್ ಅವರು ಕಡಿಮೆ ಸಿದ್ಧಾಂತಿಯೇ? ಸ್ಪಷ್ಟ ಸೈದ್ಧಾಂತಿಕ ತಳಹದಿಯ ಪತ್ರಿಕೋದ್ಯಮವೇ ಅವರ ಆಕ್ಟಿವಿಸಂ ಆಗಿತ್ತು ಮಾತ್ರವಲ್ಲ ಪತ್ರಿಕೋದ್ಯಮದ ಮೂಲಕ ಸಾಮಾಜಿಕ ರಾಜಕೀಯ ಬದಲಾವಣೆಯನ್ನೂ ಮಾಡಲು ಸಾಧ್ಯ ಎಂದು ಪಿ ಲಂಕೇಶ್ ಒಂದು ಮಾದರಿಯನ್ನೇ ಸೃಷ್ಟಿಸಿದರು. ಅದು ಸಾಧ್ಯವಾಗಿದ್ದೇ ಅವರ ಕಟಿಬದ್ಧ ಸೈದ್ಧಾಂತಿಕ ನಿಲುವಿನಿಂದ.

ನಾಡು ಕಂಡ ಮತ್ತೊಬ್ಬ ಧೀಮಂತ ಪತ್ರಕರ್ತ ವಡ್ಡರ್ಸೆ ರಘುರಾಮ್ ಶೆಟ್ಟಿ ಕೂಡಾ ಗಟ್ಟಿ ತಾತ್ವಿಕ ನಿಲುವುಗಳ ಮೂಲಕ ನಾಡಿನ ಜನರನ್ನು ತಲುಪಿದರು. ಇನ್ನು 70-80ರ ದಶಕಗಳಲ್ಲಿ ಭಾರತೀಯ ಪತ್ರಿಕೋದ್ಯಮದ ಧೀಮಂತ ಪರಂಪರೆಯಲ್ಲಿ ಸಾಗಿದ ಹಲವಾರು ಕನ್ನಡ ಪತ್ರಿಕೆಗಳಿದ್ದವು- ಸುದ್ದಿ ಸಂಗಾತಿ, ಶೂದ್ರ, ಪಂಚಮ, ಸಮುದಾಯ, ಸಂಕ್ರಮಣ ಮುಂತಾದ ನಿಯತಕಾಲಿಕೆಗಳು ಕನ್ನಡಿಗರ ಅರಿವಿನ ವಿಸ್ತರಣೆಯಲ್ಲಿ ಕಡಿಮೆ ಕೆಲಸ ಮಾಡಿವೆಯೇ? ಹಾಗಾದರೆ ಇವೆಲ್ಲವೂ ಖಚಿತ ಸೈದ್ದಾಂತಿಕತೆಯಿಂದಲೇ ನಡೆಯಲಿಲ್ಲವೇ?

ಇನ್ನು ಕಳೆದ ಕೆಲವು ದಶಕಗಳಲ್ಲಿ, ಅಗ್ನಿ, ಹಾಯ್ ಬೆಂಗಳೂರು, ಗೌರಿ ಲಂಕೇಶ್ ವಾರಪತ್ರಿಗಳೂ ತಮ್ಮ ಛಾಪು ಮೂಡಿಸಿದವು. ಪಿ ಲಂಕೇಶರ ಸ್ಪೂರ್ತಿಯಲ್ಲೇ ದೊಡ್ಡ ದೊಡ್ಡ ಭ್ರಷ್ಟಾಚಾರ ಪ್ರಕರಣಗಳನ್ನು ಅನಾವರಣಗೊಳಿಸಿದವು. ಇದ್ದುದರಲ್ಲಿ ರವಿ ಬೆಳಗರೆ ಎಡಬಿಡಂಗಿಯಾಗಿ ಕ್ರೈಂ, ಸೆಕ್ಸ್ ಗಳನ್ನ ಅಸ್ತ್ರವಾಗಿಸಿಕೊಂಡು ಟ್ಯಾಬ್ಲಾಯ್ಡ್ ಪತ್ರಿಕೋದ್ಯಮವನ್ನು ಹಳ್ಳ ಹಿಡಿಸಿದರೂ ಹಾಯ್ ಬೆಂಗಳೂರು ಸಹ ಅನೇಕ ಬ್ರಷ್ಟಾಚಾರ ಹಗರಣಗಳನ್ನು ಬಯಲು ಮಾಡಿದ್ದು ಸತ್ಯ.

ಯಾವನ್ನು ನಾವು ದಿನಪತ್ರಿಕೆಗಳು ಅಥವಾ ವೃತ್ತ ಪತ್ರಿಕೆಗಳು ಎನ್ನುತ್ತೇವೆಯೋ ಇವುಗಳ ಆದ್ಯತೆ ದಿನನಿತ್ಯದ ಸುದ್ದಿಗಳನ್ನು ಜನರಿಗೆ ತಲುಪುವುದು ಮಾತ್ರವಾಗಿದ್ದ ಕಾರಣ ಬಹಳ ಪತ್ರಿಕೆಗಳಲ್ಲಿ ಸೈದ್ಧಾಂತಿಕತೆ ದೊಡ್ಡ ವಿಷಯವಾಗಲಿಲ್ಲ. ಆದರೆ ಅಂತಹ ಕಡೆಗಳಲ್ಲಿ ಸಹ ದೊಡ್ಡ ದೊಡ್ಡ ಸಿದ್ಧಾಂತಿಗಳು ಹತ್ತಾರು ವರ್ಷಗಳ ಕಾಲ ಕೆಲಸ ಮಾಡಿದ್ದರು ಮತ್ತು ತಮ್ಮ ಖಚಿತ ಅಭಿಪ್ರಾಯಗಳನ್ನು ಆ ವೇದಿಕೆಗಳ ಮೂಲಕ ಜನರಿಗೆ ತಲುಪಿಸುತ್ತಾ ಬಂದಿದ್ದರೆಂಬುದನ್ನು ನಾವು ಮರೆಯಕೂಡದು.

ಈಗ ಹೇಳಿ, ನಮ್ಮ ಪತ್ರಿಕೋದ್ಯಮಕ್ಕೆ ಸಿದ್ಧಾಂತ ಬೇಡವೆ, ಪತ್ರಕರ್ತರಾಗಿರುವವರು ಸೈದ್ಧಾಂತಿಕ ಸ್ಪಷ್ಟತೆ ಹೊಂದಿರಬಾರದೆ? ಆಕ್ಟಿವಿಸ್ಟುಗಳು ಪತ್ರಕರ್ತರಾಗುವುದು ಅಪರಾಧವೆ? ಪತ್ರಿಕೋದ್ಯಮ ಆಕ್ಟಿವಿಸಂಗೆ ಪೂರಕವಾಗಿರಬಾರದೆ? ಇಂದು ಬ್ರಾಹ್ಮಣ್ಯದ ದಿಗ್ವಿಜಯ ಮತ್ತೊಮ್ಮೆ ನಿಜವಾಗುವ ಕರಾಳ ಛಾಯೆ ಇಡೀ ದೇಶವನ್ನು ಆವರಿಸಿಕೊಂಡಿರುವಾಗ, ಬಾಬಾಸಾಹೇಬರು ಎಚ್ಚರಿಸಿದ್ದ ಆ ʼಪ್ರತಿಕ್ರಾಂತಿʼ ತನ್ನ ಕಬಂಧಬಾಹುಗಳನ್ನು ಚಾಚಿಕೊಂಡ ಎಲ್ಲವನ್ನೂ ನೊಣೆಯುತ್ತಿರುವಾಗ, ಅಪರಾಧವೇ ಅಧಿಕಾರವಾಗಿ ದೇಶದ ಪ್ರಮುಖ ಸಂಸ್ಥೆಗಳೆಲ್ಲವನ್ನೂ ನುಂಗಿ ನೀರುಕುಡಿದು ತಮ್ಮ ಅಂಕೆಯಲ್ಲಿ ತಂದುಕೊಂಡು ಇಡೀ ದೇಶದ ಜನರಿಗೆ ಕರಾಳತೆ ದರ್ಶನ ಮಾಡುತ್ತಾ ಭ್ರಷ್ಟಾಚಾರದ ವ್ಯಾಖ್ಯಾನವನ್ನೇ ತಿರುಗುಮರುಗು ಮಾಡುತ್ತಿರುವಾಗ ಸೊ ಕಾಲ್ಡ್ ತಟಸ್ಥತೆಯ ಬದನೇಕಾಯಿಯನ್ನು ನೆಚ್ಚಿಕೊಳ್ಳದೇ ನಿರ್ಧಾರಿತ ಜನಾಂದೋಲನಗಳಿಗೆ ಪೂರಕವಾಗಿ ಪತ್ರಿಕೋದ್ಯಮ ಮತ್ತು ಪತ್ರಕರ್ತರಾದವರು ಜೊತೆಗೂಡುವುದು ಬೇಡವೇ?

‘ಬೇಡ’ ಎಂಬ ಅಭಿಪ್ರಾಯ ನಿಮ್ಮದಾಗಿದ್ದರೆ ನಿಮ್ಮ ಬಳಿ ಹೇಳಲು ನನಗೆ ಏನೂ ಉಳಿದಿಲ್ಲ. ನೀವು ನಿಮ್ಮದೇ ಸುಖಾಸನದಲ್ಲಿ ನೆಮ್ಮದಿಯಾಗಿ ಪವಡಿಸಬಹುದು, ನನಗೇನೂ ಅಭ್ಯಂತರವಿಲ್ಲ. (ಬರಹ- ಹರ್ಷಕುಮಾರ್‌ ಕುಗ್ವೆ, ಪತ್ರಕರ್ತ ಮತ್ತು ಆಕ್ಟಿವಿಸ್ಟ್)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

‘ಝೀ ವಾಹಿನಿ’ಯಲ್ಲಿ ಅಂತರ್‌ ಕಲಹ ಮತ್ತೊಂದು ಕೂಗುಮಾರಿ ವಾಹಿನಿಗೆ ಹಾದಿ..!

Published

on

ವಿದ್ಯುನ್ಮಾನ ಸುದ್ಧಿಮಾಧ್ಯಮಗಳಿಗೆ ಕಾರ್ಪೋರೇಟ್‌ ಮಾರುಕಟ್ಟೆಯೇ ಸರ್ವಸ್ವ

  • ನಾ ದಿವಾಕರ

ಕಳೆದ ಎರಡು ದಶಕಗಳಲ್ಲಿ ಕಾರ್ಪೋರೇಟ್‌ ಸ್ನೇಹಿ ಬಂಡವಾಳ ವ್ಯವಸ್ಥೆಯ ಒಂದು ಭಾಗವಾಗಿಯೇ ತನ್ನ ಅಸ್ತಿತ್ವವನ್ನು ಕಂಡುಕೊಂಡಿರುವ ಭಾರತದ ಮಾಧ್ಯಮ ಜಗತ್ತಿನಲ್ಲಿ ಯಾವುದೇ ವ್ಯತ್ಯಯ ಸಂಭವಿಸಿದರೂ ಅದರ ಹಿಂದೆ ಮಾರುಕಟ್ಟೆಯ ಕಾರಣಗಳಿರುವಂತೆಯೇ ರಾಜಕೀಯ ಕಾರಣಗಳೂ ಇರುತ್ತವೆ.

ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾವಲುಕಾಯುವಂತಿರಬೇಕಾದ ಮಾಧ್ಯಮಗಳು ಆಳುವ ವರ್ಗಗಳ ವಂದಿಮಾಗಧರಾಗಿರುವುದೇ ಅಲ್ಲದೆ ವ್ಯವಸ್ಥೆಯ ಒಂದು ಭಾಗವೇ ಆಗಿಹೋಗಿರುವುದರಿಂದ, ಮಾಧ್ಯಮ ಲೋಕದಲ್ಲಿ ನಡೆಯುವ ಯಾವುದೇ ಬದಲಾವಣೆಗಳನ್ನು ಸೂಕ್ಷ್ಮವಾಗಿಯೇ ಗಮನಿಸಬೇಕಾಗುತ್ತದೆ. ಕಳೆದ ಎಂಟು ವರ್ಷಗಳಲ್ಲಿ ತಮ್ಮ ಸ್ವಾಯತ್ತತೆ, ಸ್ವಂತಿಕೆ ಮತ್ತು ಸ್ವಾತಂತ್ರ್ಯವನ್ನು ಸ್ವತಃ ತಾವೇ ಕಳೆದುಕೊಂಡು, ಮಾರುಕಟ್ಟೆಯ ಬಂಡವಾಳ ಮತ್ತು ಆಳುವ ವ್ಯವಸ್ಥೆಯ ಬೇಕುಬೇಡಗಳನ್ನು ಅವಲಂಬಿಸಿರುವ ಭಾರತದ ಮಾಧ್ಯಮ ಲೋಕ, ವಿಶೇಷವಾಗಿ ವಿದ್ಯುನ್ಮಾನ ಸುದ್ದಿಮನೆಗಳ ಲೋಕ ಈ ಜಟಿಲತೆಯ ನಡುವೆಯೇ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಬೇಕಿದೆ.

ಕೇವಲ ಒಂದೆರಡು ದಶಕಗಳ ಹಿಂದೆ ಸಾರ್ವಜನಿಕರ ದೃಷ್ಟಿಯಲ್ಲಿ ವ್ಯವಸ್ಥೆಯ ಓರೆಕೋರೆಗಳನ್ನು ಎತ್ತಿತೋರುವ ಮತ್ತು ನೊಂದ ಜನತೆಯನ್ನು ಕೊಂಚಮಟ್ಟಿಗಾದರೂ ಪ್ರತಿನಿಧಿಸುವ ವಾಹಿನಿಗಳಾಗಿದ್ದ ಮಾಧ್ಯಮ ಇಂದು ಬಹುತೇಕವಾಗಿ, ವ್ಯವಸ್ಥೆಯ ಸಮರ್ಥನೆಯ ವೇದಿಕೆಗಳಾಗಿ ಬದಲಾಗಿವೆ. ಮುದ್ರಣ ಮಾಧ್ಯಮಗಳು ಕಾರ್ಪೋರೇಟ್‌ ಬಂಡವಾಳ ವ್ಯವಸ್ಥೆಯ ಜಾಹೀರಾತು ಆಮಿಷಗಳಿಗೆ ಬಲಿಯಾಗಿದ್ದರೆ, ವಿದ್ಯುನ್ಮಾನ ಮಾಧ್ಯಮಗಳು ಮಾರುಕಟ್ಟೆ ಆಧಾರಿತ ಟಿಆರ್‌ಪಿ ರೇಟಿಂಗ್‌ಗಳಿಗಾಗಿ ತಮ್ಮ ಸ್ವಂತಿಕೆಯನ್ನೂ ಕಳೆದುಕೊಂಡು ಬೆತ್ತಲಾಗುತ್ತಿವೆ.

ವಿದ್ಯುನ್ಮಾನ ಸುದ್ದಿಮನೆಗಳು ಸೃಷ್ಟಿಸಿರುವ ಕೂಗುಮಾರಿ ಸಂಸ್ಕೃತಿ ಎಲ್ಲ ಭಾಷೆಗಳಿಗೂ ವ್ಯಾಪಿಸುತ್ತಿದ್ದು, ತಮ್ಮ ಮಾರುಕಟ್ಟೆ ರೇಟಿಂಗ್‌ ಹೆಚ್ಚಿಸಿಕೊಳ್ಳುವ ಪೈಪೋಟಿಯಲ್ಲಿ ಸುಳ್ಳು ಸುದ್ದಿಗಳನ್ನು ವೈಭವೀಕರಿಸುವ ಮತ್ತು ಸತ್ಯವನ್ನು ಮರೆಮಾಚುವ ಒಂದು ವ್ಯವಸ್ಥಿತ ದಂಧೆಗೆ ಮಾಧ್ಯಮ ಲೋಕ ಅವಕಾಶಗಳನ್ನು ಕಲ್ಪಿಸಿದೆ. ಕಾಂಗ್ರೆಸ್‌ ನಾಯಕರ ರಾಹುಲ್‌ ಗಾಂಧಿ ಕೇರಳದ ವಯನಾಡಿನಲ್ಲಿ ನೀಡಿದ ಹೇಳಿಕೆಯ ಬಗ್ಗೆ ಝೀ ಸುದ್ದಿವಾಹಿನಿ ಕ್ಷಮೆ ಯಾಚಿಸಿರುವುದು, ಟೈಂಸ್‌ನೌ ವಾಹಿನಿಯ ನಾವಿಕಾ ಕುಮಾರ್‌ ನೂಪುರ್‌ ಶರ್ಮ ವಿವಾದದ ಕೇಂದ್ರಬಿಂದುವಾಗಿರುವುದು, ಕನ್ನಡದ ಪಬ್ಲಿಕ್‌ ಟಿವಿಯಲ್ಲಿ ಪ್ರಚೋದನಕಾರಿ ಹೇಳಿಕೆಗಳಿಗೆ ಅವಕಾಶ ಮಾಡಿಕೊಟ್ಟು ನಂತರ ಕ್ಷಮೆ ಕೋರಿರುವುದು ಇವೆಲ್ಲವೂ ಮಾಧ್ಯಮ ಲೋಕದ ಅವನತಿಯ ಸಂಕೇತಗಳೇ ಆಗಿವೆ.

ಈ ಅವನತಿಯ ಹಾದಿಯಲ್ಲೇ ದೇಶದ ಪ್ರತಿಷ್ಠಿತ ಸುದ್ದಿಮನೆಯ ನಿರೂಪಕರೊಬ್ಬರ ನಿರ್ಗಮನ ಸುದ್ದಿಯಲ್ಲಿದೆ. ಇಂದು ಯಾವುದೇ ವಿದ್ಯುನ್ಮಾನ ಸುದ್ದಿಮನೆಯನ್ನು ಗಮನಿಸಿದರೂ, ಅದು ಒಬ್ಬ ನಿರೂಪಕನ ಮೂಲಕವೇ ಗುರುತಿಸಿಕೊಂಡಿರುತ್ತದೆ. ಈ ನಿರೂಪಕರು ಬಹುಪಾಲು ಸಂದರ್ಭಗಳಲ್ಲಿ ಕೂಗುಮಾರಿ ಸಂಸ್ಕೃತಿಯ ಪರಿಚಾರಕರಾಗಿಯೇ ಇರುತ್ತಾರೆ. ಒಂದೆರಡು ವಾಹಿನಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಇಂತಹ ಕೂಗುಮಾರಿ ನಿರೂಪಕರಿಂದಲೇ ತಮ್ಮ ಟಿಆರ್‌ಪಿ ರೇಟಿಂಗ್‌ ಹೆಚ್ಚಿಕೊಳ್ಳುತ್ತವೆ.

ಕನ್ನಡದ ಮಾಧ್ಯಮ ಲೋಕದಲ್ಲಿ ಎಲ್ಲವೂ ಇದೇ ಮಾದರಿಯನ್ನು ಅನುಸರಿಸುತ್ತಿವೆ. ಹಿಂದಿ ವಾಹಿನಿಗಳ ಪೈಕಿ ಕೆಲವು ಈ ಸಂಸ್ಕೃತಿಗೆ ಹೊರತಾಗಿವೆ. ಇಂತಹ ಕೂಗುಮಾರಿ ಸಂಸ್ಕೃತಿಯ ಪರಿಚಾರಕರಲ್ಲೊಬ್ಬರಾದ ಸುಧೀರ್‌ ಚೌಧರಿ ಝೀ ನ್ಯೂಸ್‌ ವಾಹಿನಿಯಿಂದ ನಿರ್ಗಮಿಸಿದ್ದಾರೆ. ಮಾರುಕಟ್ಟೆಯಲ್ಲೂ ಅತ್ಯಂತ ಜನಪ್ರಿಯ ನಿರೂಪಕರಲ್ಲಿ ಒಬ್ಬರಾಗಿ ಖ್ಯಾತಿ ಗಳಿಸಿರುವ ಸುಧೀರ್‌ ಚೌಧರಿಯ ನಿರ್ಗಮನಕ್ಕೆ ತಾತ್ವಿಕ ಅಥವಾ ಸೈದ್ಧಾಂತಿಕ ಕಾರಣಗಳಿಗಿಂತಲೂ ವ್ಯಕ್ತಿಗತ, ವಾಣಿಜ್ಯಾಸಕ್ತಿಗಳೇ ಪ್ರಧಾನವಾಗಿರುವುದು ಸ್ಪಷ್ಟವಾಗಿದೆ.

ಝೀ ನ್ಯೂಸ್‌ ಇಂದಿಗೂ ಭಾರತದಲ್ಲಿ ಪ್ರಥಮ ಶ್ರೇಣಿಯಲ್ಲಿರುವ ಒಂದು ಸುದ್ದಿಮನೆ. ಭಾರತವು ಮಾರುಕಟ್ಟೆ ಅರ್ಥವ್ಯವಸ್ಥೆಗೆ ತೆರೆದುಕೊಂಡು, ಮಾಧ್ಯಮ ಲೋಕವೂ ಸಹ ಬದಲಾದ ಸನ್ನಿವೇಶಕ್ಕೆ ತಕ್ಕಂತೆ ತನ್ನದೇ ಆದ ಮಾರುಕಟ್ಟೆ ತಂತ್ರಗಳನ್ನು ಅನುಸರಿಸಲಾರಂಭಿಸಿದಾಗ, 1990ರಲ್ಲೇ ಈ ನಿಟ್ಟಿನಲ್ಲಿ ಪ್ರಥಮ ಹೆಜ್ಜೆ ಇಟ್ಟವರು ಝೀ ನ್ಯೂಸ್‌ನ ಮಾಲೀಕರಾದ ಸುಭಾಷ್‌ ಚಂದ್ರ. ಮಾಜಿ ರಾಜ್ಯಸಭಾ ಸದಸ್ಯರೂ ಆಗಿರುವ ಸುಭಾಷ್‌ ಚಂದ್ರ ಭಾರತದ ವಿದ್ಯುನ್ಮಾನ ಮಾಧ್ಯ ಲೋಕಕ್ಕೆ ಮಾರುಕಟ್ಟೆ ಸ್ಪರ್ಶ ನೀಡಿದ್ದೇ ಅಲ್ಲದೆ, ಪಶ್ದಿಮ ರಾಷ್ಟ್ರಗಳ ಮಾಧ್ಯಮ ವಲಯಕ್ಕೆ ಸರಿಸಮಾನವಾದ ಒಂದು ಆಧುನಿಕ ಸ್ವರೂಪವನ್ನು ನೀಡುವುದರಲ್ಲೂ ಯಶಸ್ವಿಯಾಗಿದ್ದಾರೆ.

ಇಂದು ಭಾರತದಲ್ಲಿ ನೂರಾರು ಟಿವಿ ವಾಹಿನಿಗಳಿದ್ದರೂ, ಇವೆಲ್ಲದರ ಜನಕ ಎಂದರೆ ಝೀ ಟೀವಿ ವಾಹಿನಿ ಎಂದು ನಿಸ್ಸಂಶಯವಾಗಿ ಹೇಳಬಹುದು. ಈ ವಾಹಿನಿಯಿಂದಲೇ ಕವಲೊಡೆದ ಹಲವಾರು ವಾಹಿನಿಗಳು ಇಂದು ನಮ್ಮ ನಡುವೆ ಇದೆ, ಹಾಗೆಯೇ ಝೀ ವಾಹಿನಿಯಿಂದಲೇ ತಮ್ಮ ವೃತ್ತಿ ಬದುಕು ಆರಂಭಿಸಿದ ಅನೇಕ ಪತ್ರಕರ್ತರು, ನಿರೂಪಕರು ಇಂದು ವಿವಿಧ ವಾಹಿನಿಗಳಲ್ಲಿ ತಮ್ಮ ನೆಲೆ ಕಂಡುಕೊಂಡಿದ್ದಾರೆ.

ವಿದ್ಯುನ್ಮಾನ ಮಾಧ್ಯಮದ ಪತ್ರಿಕೋದ್ಯೋಗಿಗಳ ಪೈಕಿ ಮೊದಲ ಪೀಳಿಗೆಯವರೆಂದೇ ಗುರುತಿಸಲ್ಪಟ್ಟಿರುವ ಸುಧೀರ್‌ ಚೌಧರಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದೇ ಝೀ ನ್ಯೂಸ್‌ ವಾಹಿನಿಯ ಮೂಲಕ. 24 ಗಂಟೆಗಳ ಸುದ್ದಿ ಪ್ರಸರಣ ಜನಪ್ರಿಯವಾಗುವುದರ ಹಿಂದೆ ಸುಧೀಂದ್ರ ಚೌಧರಿ ಅವರ ಕೊಡುಗೆಯೂ ಇದೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. 2001ರಲ್ಲಿ ಭಾರತೀಯ ಸಂಸತ್‌ ಭವನದ ಮೇಲೆ ಭಯೋತ್ಪಾದಕ ದಾಳಿ ನಡೆದ ನಂತರ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್‌ ಮುಷರಫ್‌ ನಡುವೆ ನಡೆದ ಮಾತುಕತೆಗಳ ಸಂದರ್ಭದಲ್ಲಿ ಈ ಸಭೆಯ ಕಲಾಪಗಳನ್ನು ವರದಿಮಾಡಲು ನಿಯೋಜಿಸಲಾಗಿದ್ದ ತಂಡದಲ್ಲಿ ಸುಧೀರ್‌ ಚೌಧರಿ ಪ್ರಮುಖರಾಗಿದ್ದರು.

2003ರಲ್ಲಿ ಝೀ ನ್ಯೂಸ್‌ ವಾಹಿನಿಯನ್ನು ತೊರೆದು ಸಹಾರ ಸಮಯ್‌ ವಾಹಿನಿಯನ್ನು ಆರಂಭಿಸುವುದಕ್ಕೆ ಒತ್ತಾಸೆಯಾಗಿ ನಿಂತಿದ್ದರು. ಸಹಾರ ಉದ್ಯಮ ಸಮೂಹದ ಈ ಹಿಂದಿ ವಾಹಿನಿ ಹೆಚ್ಚು ಕಾಲ ಊರ್ಜಿತವಾಗಲಿಲ್ಲ. ನಂತರ ಸುಧೀರ್‌ ಇಂಡಿಯಾ ಟಿವಿ ವಾಹಿನಿಯಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದರು. 2012ರಲ್ಲಿ ಪುನಃ ತಮ್ಮ ತವರಿಗೆ, ಝೀ ನ್ಯೂಸ್‌ ವಾಹಿನಿಗೆ ಬಂದು ಸೇರಿಕೊಂಡಿದ್ದು, ನಿತ್ಯ ಸುದ್ದಿ ಮತ್ತು ವಿಶ್ಲೇಷಣೆಯ ವಿಭಾಗದಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ತಮ್ಮದೇ ಆದ ಸ್ವಂತ ವಾಹಿನಿಯನ್ನು ಆರಂಭಿಸುವ ಇಚ್ಚೆಯೊಂದಿಗೆ ನಿರ್ಗಮಿಸಿದ್ದಾರೆ.

ನಾ ದಿವಾಕರ, ಲೇಖಕರು

ಸುಧೀರ್‌ ಚೌಧರಿ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಏಳುಬೀಳುಗಳನ್ನೂ ಎದುರಿಸಿದ್ದಾರೆ. ವಾಣಿಜ್ಯೋದ್ಯಮಿ ನವೀನ್‌ ಜಿಂದಾಲ್ ಅವರಿಂದ ಹಣವಸೂಲಿ ಮಾಡುವ ಆರೋಪಕ್ಕೆ ಸಿಲುಕಿದ್ದ ಚೌಧರಿ 2012ರಲ್ಲಿ ಬಂಧನಕ್ಕೊಳಗಾಗಿದ್ದರು. ಈ ಸಂಬಂಧ ಸುದ್ದಿ ಪ್ರಸರಣ ಸಂಪಾದಕರ ಸಂಘದ ಖಜಾಂಚಿಯೂ ಆಗಿದ್ದ ಸುಧೀರ್‌ ಅವರನ್ನು ಸಂಘದಿಂದ ಉಚ್ಚಾಟಿಸಲಾಗಿತ್ತು. 2018ರಲ್ಲಿ ಪರಸ್ಪರ ರಾಜಿ ಸೂತ್ರದ ಮೂಲಕ ಈ ವಿವಾದ ಬಗೆಹರಿದಿತ್ತು.

ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೋಯಿತ್ರಾ ಅವರು ತಮ್ಮ ಭಾಷಣವೊಂದರಲ್ಲಿ ಟ್ರೂಮನ್‌ ಲಾಂಗ್‌ಮನ್‌ ಅವರಿಂದ ಕೃತಿಚೌರ್ಯ ಮಾಡಿದ್ದಾರೆ ಎಂದು ಆರೋಪಿಸಿ ಸುಧೀರ್‌ ಚೌಧರಿ ಮೊಯಿತ್ರಾ ಅವರಿಂದ ಮಾನನಷ್ಟ ಮೊಕದ್ದಮೆ ಎದುರಿಸಬೇಕಾಯಿತು. ನಂತರ ಸ್ವತಃ ಲಾಂಗ್‌ಮನ್‌ ಅವರೇ ಈ ಆರೋಪವನ್ನು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಝೀ ನ್ಯೂಸ್‌ ಕ್ಷಮಾಪಣೆ ಕೇಳಬೇಕಾಯಿತು. ಕೋವಿದ್‌ 19 ಸಂದರ್ಭದಲ್ಲಿ ಕೋಮು ಪ್ರಚೋದಕ ಸುದ್ದಿಗಾಗಿಯೇ ಸುಧೀರ್‌ ಇಸ್ಲಾಂ ಭೀತಿ ಸೃಷ್ಟಿಸುವ ಆರೋಪಕ್ಕೆ ಗುರಿಯಾಗಿದ್ದರು. ಈ ಆರೋಪಗಳ ಹೊರತಾಗಿಯೂ ಸುಧೀರ್‌ ಒಬ್ಬ ನಿರೂಪಕರಾಗಿ ಝೀ ಸುದ್ದಿವಾಹಿನಿಯನ್ನು ಮಾರುಕಟ್ಟೆಯಲ್ಲಿ ಒಂದು ಪ್ರಬಲ ದನಿಯಾಗಿ ಕಾಪಾಡಿಕೊಂಡು ಬಂದಿದ್ದು ವಾಸ್ತವ.

ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ ಬಲಪಂಥೀಯ ರಾಜಕಾರಣ ಬಲವಾಗುತ್ತಿರುವ ಹಿನ್ನೆಲೆಯಲ್ಲಿ ಆಡಳಿತ ವ್ಯವಸ್ಥೆಯ ಪರವಾಗಿಯೇ ತಮ್ಮ ಸುದ್ದಿ ನಿರೂಪಣೆಯನ್ನು ನಿರ್ವಹಿಸುವ ಮೂಲಕ ಸುಧೀರ್‌ ಚೌಧರಿ ಜನಪ್ರಿಯತೆಯನ್ನೂ ಗಳಿಸಿದ್ದಾರೆ. ಕೇಂದ್ರ ಸರ್ಕಾರದ ನೀತಿಗಳನ್ನು ಬಲವಾಗಿ ಸಮರ್ಥನೆ ಮಾಡಿಕೊಳ್ಳುವುದೇ ಅಲ್ಲದೆ, ತಮ್ಮ ಸುದ್ದಿ ನಿರೂಪಣೆಯ ಮೂಲಕ ಮತ್ತು ಝೀ ವಾಹಿನಿಯಲ್ಲಿ ಏರ್ಪಡಿಸುವ ಚರ್ಚೆಗಳ ಮೂಲಕ ಸರ್ಕಾರದ ನೀತಿಗಳನ್ನು ಸಾರ್ವಜನಿಕ ವಲಯದಲ್ಲಿ ಜನಪ್ರಿಯಗೊಳಿಸುವ ಮೂಲಕ ಸುಧೀರ್‌ ಚೌಧರಿ ವ್ಯವಸ್ಥೆಯ ಪರವಾದ ಒಂದು ದನಿಯಾಗಿ ಕಂಡುಬಂದಿದ್ದಾರೆ.

ಬಹುಶಃ ಈ ಹಿನ್ನೆಲೆಯಲ್ಲೇ ತಮ್ಮದೇ ಆದ ಸ್ವಂತ ವಾಹಿನಿಯನ್ನು ಆರಂಭಿಸುವ ಇಚ್ಚೆಯೊಂದಿಗೆ ಸುಧೀರ್‌ ಚೌಧರಿ ಝೀ ವಾಹಿನಿಯಿಂದ ನಿರ್ಗಮಿಸಿದ್ದಾರೆ. ಆಂತರಿಕವಾಗಿ ಝೀ ಸಮೂಹದ ಮಾಲೀಕ ಸುಭಾಷ್‌ ಚಂದ್ರ ಅವರು ಇತ್ತೀಚಿನ ದಿನಗಳಲ್ಲಿ ಸುಧೀರ್‌ ಚೌಧರಿಯನ್ನು ಮೂಲೆಗುಂಪು ಮಾಡಲು ಯತ್ನಿಸುತ್ತಿದ್ದರು ಎಂಬ ಆರೋಪವೂ ಕೇಳಿಬರುತ್ತಿದೆ. 2021ರಲ್ಲಿ ಎಬಿಪಿ ನ್ಯೂಸ್‌ ವಾಹಿನಿಯಿಂದ ಬಂದು, ಝೀ ನ್ಯೂಸ್‌ನ ಕಂಟೆಂಟ್‌ ಅಧಿಕಾರಿ ಮತ್ತು ಸಂಪಾದಕರಾಗಿ ನಿಯೋಜಿತರಾದ ರಜನೀಶ್‌ ಅಹುಜಾ ಮತ್ತು ಸುಧೀರ್‌ ಚೌಧರಿ ನಡುವೆ ಇದ್ದ ಅಧಿಕಾರ ಸಂಘರ್ಷವೂ ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.

ಇತ್ತೀಚಿನ ರಾಜ್ಯಸಭಾ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸುಭಾಷ್‌ ಚಂದ್ರ ಸೋಲು ಅನುಭವಿಸಿದ ನಂತರ, ಝೀ ನ್ಯೂಸ್‌ ಕೆಲವು ಸಂದರ್ಭಗಳಲ್ಲಿ ತಟಸ್ಥ ನೀತಿಯನ್ನೂ ಅನುಸರಿಸಲಾರಂಭಿಸಿತ್ತು. ಅಸ್ಸಾಂ ಕುರಿತು ಪ್ರಸಾರವಾದ ಒಂದು ಷೋನಲ್ಲಿ ಇದು ಸ್ಪಷ್ಟವಾಗಿದ್ದು, ಈ ಬೆಳವಣಿಗೆಗಳಿಗೆ ಸುಧೀರ್‌ ಚೌಧರಿ ಸಮ್ಮತಿ ಇರಲಿಲ್ಲ ಎಂದೂ ಹೇಳಲಾಗುತ್ತಿದೆ. ಮಾಧ್ಯಮ ಮಾರುಕಟ್ಟೆಯಲ್ಲಿ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡಿರುವ ಸುಧೀರ್‌ ಚೌಧರಿ ಝೀ ವಾಹಿನಿಯ ಇತ್ತೀಚಿನ ತಟಸ್ಥ ನೀತಿಯಿಂದ ಅಸಮಾಧಾನಗೊಂಡಿದ್ದರೆಂದೂ ಹೇಳಲಾಗುತ್ತಿದೆ.

ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಸ್ಪರ್ಧಿಸಿ, ಸೋಲು ಅನುಭವಿಸಿದ ನಂತರ ಝೀ ನ್ಯೂಸ್‌ ಮಾಲೀಕ ಸುಭಾಷ್‌ ಚಂದ್ರ ತಮ್ಮ ಸಂಸ್ಥೆಯ ಕೆಲವು ಸಿಬ್ಬಂದಿಯ ವಿರುದ್ಧ ಅಸಮಾಧಾನಗೊಂಡಿದ್ದು, ಇದರ ಪರಿಣಾಮವೇ ಸುಧೀರ್‌ ಚೌಧರಿ ಸಹ ನಿರ್ಗಮಿಸಿದ್ದಾರೆ ಎಂದು ನ್ಯೂಸ್‌ ಲಾಂಡ್ರಿ ಸುದ್ದಿವಾಹಿನಿ ಹೇಳಿದೆ. ಇದೇ ಸಂದರ್ಭದಲ್ಲಿ ಸುಧೀರ್‌ ಚೌಧರಿ ಬಹುಮಟ್ಟಿಗೆ ಝೀ ನ್ಯೂಸ್‌ ವಾಹಿನಿಯ ಮುಖವಾಣಿಯಂತಾಗಿದ್ದುದು ಸುಭಾಷ್‌ ಚಂದ್ರ ಅವರ ಅಸಹನೆಗೆ ಕಾರಣವಾಗಿರಬಹುದು.

ಈ ಆಂತರಿಕ ಬಿಕ್ಕಟ್ಟುಗಳ ಹೊರತಾಗಿಯೂ, ಭಾರತದ ಪ್ರಸ್ತುತ ಸಂದರ್ಭದಲ್ಲಿ ಆಡಳಿತಾರೂಢ ಪಕ್ಷಗಳಿಗೆ ಮತ್ತು ಕಾರ್ಪೋರೇಟ್‌ ಮಾರುಕಟ್ಟೆಗೆ ತನ್ನದೇ ಆದ ಮಾಧ್ಯಮ ಮುಖವಾಣಿಗಳ ಅವಶ್ಯಕತೆ ಹೆಚ್ಚಾಗಿದೆ. ಸರ್ಕಾರದ ಪರ ವಕಾಲತ್ತು ವಹಿಸುವ ಮತ್ತು ಸರ್ಕಾರದ ನೀತಿಗಳನ್ನು ಸಮರ್ಥಿಸುತ್ತಲೇ ಸಾರ್ವಜನಿಕರ ನಡುವೆ ಒಂದು ಸಕಾರಾತ್ಮಕ ಅಭಿಪ್ರಾಯವನ್ನು ಮೂಡಿಸುವ ನಿಟ್ಟಿನಲ್ಲಿ ಮಾಧ್ಯಮಗಳು, ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿರುವುದು ಗುಟ್ಟಿನ ಮಾತೇನಲ್ಲ. ಪ್ರಜಾತಂತ್ರ ವ್ಯವಸ್ಥೆಯ ಒಂದು ಪ್ರಮುಖ ಅಂಗವಾಗಿ ಸಾರ್ವಜನಿಕರ ನಡುವೆ ಸದಾ ಜಾಗೃತಾವಸ್ಥೆಯಲ್ಲಿರುವ ಒಂದು ಸಂಸ್ಥೆಯಾಗಿ ಮಾಧ್ಯಮವೂ ಮುಖ್ಯವಾಗುತ್ತದೆ.

ಆಡಳಿತಾರೂಢ ಪಕ್ಷಗಳು ಈ ಮಾಧ್ಯಮಗಳ ಮೂಲಕ, ವಾಹಿನಿಗಳ ಮೂಲಕ ತಮ್ಮದೇ ಆದ ಪ್ರಭಾವಿ ವಲಯವನ್ನು ಸೃಷ್ಟಿಸಿಕೊಳ್ಳಲು ಸದಾ ಹಾತೊರೆಯುತ್ತಿರುತ್ತವೆ. ಮುದ್ರಣ ಮಾಧ್ಯಮಗಳೇ ಪ್ರಧಾನವಾಗಿದ್ದ ಸಂದರ್ಭದಲ್ಲೂ ಇದನ್ನು ಕಾಣಬಹುದಿತ್ತು. ವಿದ್ಯುನ್ಮಾನ ಮಾಧ್ಯಮಗಳು ದೇಶದ ಮೂಲೆ ಮೂಲೆಗೂ, ಕಟ್ಟಕಡೆಯ ವ್ಯಕ್ತಿಯವರೆಗೂ ತಲುಪುವ ಸಾಮರ್ಥ್ಯ ಹೊಂದಿರುವುದರಿಂದ ಆಡಳಿತಾರೂಢ ಪಕ್ಷಗಳು, ಮಾಧ್ಯಮಗಳನ್ನು ತಮ್ಮ ಆಡಳಿತ ನೀತಿಗಳ ವಾಹಕಗಳಾಗಿ ಬಳಸಿಕೊಳ್ಳುತ್ತವೆ. ಹಿಂದಿನ ಕಾಂಗ್ರೆಸ್‌ ಸರ್ಕಾರಗಳೂ ಇದನ್ನು ಮಾಡುತ್ತಲೇ ಬಂದಿವೆ. ಬಿಜೆಪಿ ಸರ್ಕಾರ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿದೆ.

ಇದರೊಟ್ಟಿಗೇ ನವ ಉದಾರವಾದ ಮತ್ತು ಜಾಗತೀಕರಣದ ಆರ್ಥಿಕ ನೀತಿಗಳು ದೇಶದಲ್ಲಿ ಸೃಷ್ಟಿಸುತ್ತಿರುವ ಜನಾಕ್ರೋಶ ಮತ್ತು ಜನಸಾಮಾನ್ಯರ ನಡುವೆ ಸೃಷ್ಟಿಯಾಗುತ್ತಿರುವ ಹತಾಶೆಯನ್ನು ನಿವಾರಿಸುವ ನಿಟ್ಟಿನಲ್ಲಿ, ಆಡಳಿತ ನೀತಿಗಳ ಪರವಾದ ಸಾರ್ವಜನಿಕ ಅಭಿಪ್ರಾಯವನ್ನು ಉತ್ಪಾದಿಸುವಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಪ್ರಧಾನ ಪಾತ್ರ ವಹಿಸುತ್ತವೆ. ಟಿವಿ ವಾಹಿನಿಗಳಲ್ಲಿ ನಡೆಯುವ ಏಕಮುಖಿ ಚರ್ಚೆಗಳು ಈ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಂಡುಬರುತ್ತವೆ. ಹಾಗಾಗಿ ಮಾರುಕಟ್ಟೆ ವ್ಯವಸ್ಥೆ ಮತ್ತು ಕಾರ್ಪೋರೇಟ್‌ ಔದ್ಯಮಿಕ ಹಿತಾಸಕ್ತಿಗಳಿಗೆ ವಿದ್ಯುನ್ಮಾನ ಮಾಧ್ಯಮಗಳು ಒಂದು ಪ್ರಬಲ ವೇದಿಕೆಗಳೂ ಆಗುತ್ತವೆ. ಡಿಜಿಟಲ್‌ ಯುಗದಲ್ಲಿ ದೇಶದ ಅರ್ಥವ್ಯವಸ್ಥೆ ಹೆಚ್ಚು ಹೆಚ್ಚು ಕಾರ್ಪೋರೇಟ್‌ ಮಾರುಕಟ್ಟೆ ಕೇಂದ್ರಿತವಾಗುತ್ತಿರುವುದರಿಂದ ಆಳುವ ವರ್ಗಗಳಿಗೂ ಈ ವೇದಿಕೆಗಳು ಅಪ್ಯಾಯಮಾನವಾಗಿ ಕಾಣುತ್ತವೆ.

ಸುಧೀರ್‌ ಚೌಧರಿ ಬಹುಶಃ ಇಂತಹುದೇ ಒಂದು ಹೊಸ ವೇದಿಕೆಯನ್ನು ದೇಶದ ಜನತೆಗೆ ಸಮರ್ಪಿಸಲಿದ್ದಾರೆ. ವಸ್ತುನಿಷ್ಠ ವರದಿಗಾರಿಕೆ , ಜನಪರ ದನಿಯನ್ನು ಬಿಂಬಿಸುವ ಧೋರಣೆ ಮತ್ತು ಜನಸಮುದಾಯಗಳ ನಿತ್ಯ ಬದುಕಿನ ಬವಣೆಗಳನ್ನು ಬಿಂಬಿಸುವ ಜನೋಪಯೋಗಿ ವಿಧಾನಗಳಿಗಿಂತಲೂ ಮಿಗಿಲಾಗಿ, ಆಳುವ ವರ್ಗಗಳ ಆಡಳಿತ ನೀತಿಗಳನ್ನು ಜನರ ನಡುವೆ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಈ ವಾಹಿನಿಗಳು ಕಾರ್ಯನಿರ್ವಹಿಸುತ್ತವೆ. ತಮ್ಮ ಕೂಗುಮಾರಿ ಧೋರಣೆಗೆ ಖ್ಯಾತಿ ಪಡೆದಿರುವ ಸುಧೀರ್‌ ಚೌಧರಿ ಬಹುಶಃ ತಮ್ಮ ಭವಿಷ್ಯದ ಯೋಜನೆಯಲ್ಲಿ ಯಶಸ್ಸುಗಳಿಸಲೂ ಇದೇ ಧೋರಣೆ ನೆರವಾಗುತ್ತದೆ.

ಕಾರ್ಪೋರೇಟ್‌ ಬಂಡವಾಳ ಸ್ನೇಹಿ ಸರ್ಕಾರ ಮತ್ತು ಮಾರುಕಟ್ಟೆ ಸ್ನೇಹಿ ಮಾಧ್ಯಮ ಜಂಟಿಯಾಗಿ ನವ ಉದಾರವಾದವನ್ನು ತಳಮಟ್ಟದವರೆಗೂ ಪರಿಣಾಮಕಾರಿಯಾಗಿ ವಿಸ್ತರಿಸಲು ನೆರವಾಗುವುದನ್ನು ಈ ಸಂದರ್ಭದಲ್ಲಿ ಗಮನಿಸಬೇಕಾಗುತ್ತದೆ. ಬಹುಶಃ ಸುಧೀರ್‌ ಚೌಧರಿ ಆರಂಭಿಸಲಿರುವ ಹೊಸ ವಾಹಿನಿ ಈ ಸಾಲಿಗೆ ಸೇರ್ಪಡೆಯಾಗಲಿರುವ ಮತ್ತೊಂದು ವೇದಿಕೆಯಾಗಲಿದೆ. ಸುಧೀರ್‌ ಚೌಧರಿ ಸ್ವತಃ ಕಾರ್ಪೋರೇಟ್‌ ರೂಪದಲ್ಲಿ ಹೊರಹೊಮ್ಮಲಿದ್ದಾರೋ ಅಥವಾ ಮತ್ತೊಂದು ಉದ್ದಿಮೆಯ ಭಾಗವಾಗಿ ತಮ್ಮ ವಾಹಿನಿಯ ಸಾರಥ್ಯ ವಹಿಸುವರೋ ಕಾದುನೋಡಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ನಡುಪಂಥ’ ಎನ್ನುವ ಗುಳ್ಳೇನರಿ ಸಿದ್ದಾಂತ | ಭಾಗ – 1

Published

on

  • ಲೋಕೇಶ್ ಪೂಜಾರಿ, ಬೆಂಗಳೂರು

ಸ್ವಾರ್ಥಸಾಧನೆಯನ್ನು ಚೊಕ್ಕವಾಗಿ ಮಾಡಿ,ಮಾನವೀಯ ಮೌಲ್ಯಗಳನ್ನು ಅಡಿಗೆ ಹಾಕುವವರು ನಡುಪಂಥೀಯರು. ಅವರು ದೋಣಿಯ ನಡುವಲ್ಲಿ ಕೂತಿರುತ್ತಾರೆ.ಎತ್ತ ವಾಲಿದರೂ ಜಾರಿಬೀಳುವುದಿಲ್ಲ.

ಅವರನ್ನು ಗುರುತಿಸುವುದು ಸುಲಭ. ಅವರು ಮಹಾತ್ಮ ಗಾಂಧಿಯವರ ಪೋಟೋ ಹಾಕಿಕೊಂಡು,ಗೋಡ್ಸೆಯನ್ನೂ ಸಮರ್ಥಿಸುತ್ತಾರೆ.ಹಾಗೇ ಮುಂದುವರೆದು ಒಂದು ದಿನ ಕಾಡುಗಳ್ಳ ವೀರಪ್ಪನ್ ನನ್ನು ವಾಲ್ಮೀಕಿಗೂ ಹೋಲಿಸಬಹುದು. ಅದರಿಂದ ಅವರಿಗೆ ಲಾಭ ಇರಬೇಕು ಅಷ್ಟೇ .

ಒಬ್ಬ ಬರೆಯುವ ಬರಹಗಳು ಯುವಜನರಿಗೆ ತಪ್ಪು ಸಂದೇಶ ಕೊಡುತ್ತವೆ ಎಂದು ಯಾರಾದರೂ ಹೇಳಿದಾಗ.. ,ನಾನು ಬರೆಯುವುದು ಸಮಾಜ ಪರಿವರ್ತನೆ ಗೆ ಅಲ್ಲ ಎನ್ನುವಂತಹ ಭೈರಪ್ಪ ಪ್ರೇರಿತ ಉತ್ತರ ಕೊಡುವವರು ಬಹಳ ಜನ ಇದ್ದಾರೆ .
ನಮ್ಮ ಬರವಣಿಗೆಯಿಂದ ಹುಡುಗರು ಹಾಳಾದರೆ ಅದು ಸಮಾಜದ ತಪ್ಪು ಅಥವಾ ರಾಜಕೀಯ ದ ತಪ್ಪು ಎಂದು ತಿಪ್ಪೆ ಸಾರಿಸುವ ಅಂತವರ ಬಳಿ ವಾದ ಮಾಡುವುದು ಕಷ್ಟ.

ಓದು ಮತ್ತು ವಯಸ್ಸಿಗೆ ಬಹಳ ಸಂಬಂಧ ಇದೆ.
ಎಳವೆಯಲ್ಲಿ ಇಷ್ಟ ಪಟ್ಟು ಚಂದಮಾಮ ಓದುತ್ತಿದ್ದವರು ಹೈಸ್ಕೂಲ್ ಸೇರಿದ ಬಳಿಕ ಯೆಂಡಮೂರಿ ವೀರೇಂದ್ರನಾಥರ ಪುಸ್ತಕ ಓದುತ್ತಾರೆ. ಅವರು ಎಷ್ಟು ಯೆಂಡಮೂರಿಯ ಬರಹಗಳನ್ನು ಇಷ್ಟ ಪಡುತ್ತಾರೆಂದರೆ ,ಪ್ರತೀ ಕಾದಂಬರಿನೂ ಹುಡುಕಿ ಹುಡುಕಿ ಓದುತ್ತಾರೆ.
ಆದರೆ‌ ಆ ಸೆಳೆತ ಪಿಯುಸಿ ಮುಗಿದು ಡಿಗ್ರಿ ಓದುವ ತನಕ ಮಾತ್ರ .

ಹದಿನಾರರಿಂದ ಇಪ್ಪತ್ತರ ವಯಸ್ಸಿನ ಹೆಚ್ಚಿನವರು ಯೆಂಡಮೂರಿಯ ಬರಹಗಳನ್ನು ಇಷ್ಟ ಪಡುತ್ತಾರೆ. ಬಳಿಕ ಅವರಿಗೆ ತೇಜಸ್ವಿ ,ಕಾರಂತ ,ಬೈರಪ್ಪ ಇಷ್ಟವಾಗಲು ಶುರುವಾಗುತ್ತದೆ. ತಮ್ಮ ಆಯುಷ್ಯದಲ್ಲಿ ಬಹು ಭಾಗ ಇನ್ನೂ ಕಳೆಯಬೇಕಾಗಿರುವ ಯುವ ಜನರ ಓದುವ ರುಚಿ ಮತ್ತು ಬಹುಭಾಗದ ಆಯುಷ್ಯ ಕಳೆದು ಕೊಂಡು ಜೀವನಾನುಭವ ಪಡೆದು ಕೊಂಡಿರುವವರ ಓದುವ ರುಚಿ ಬೇರೆ ಬೇರೆ ಇರುತ್ತದೆ.

ಹದಿ ಹರೆಯದ ಮನಸ್ಸಿಗೆ ತಿರುಚಿದ ಇತಿಹಾಸ ಓದಲು ಕೊಡಬಾರದು‌. ಪ್ರತಿಯೊಂದಕ್ಕೂ ಪುರಾಣದ ಉದಾಹರಣೆ ಕೊಡಬಾರದು. ಬಹಳಷ್ಟು ನಾಗರೀಕತೆಗಳ ಹುಟ್ಟನ್ನು ಕಂಡ ಸನಾತನ ಭಾರತದಲ್ಲಿ ಲೆಕ್ಕವಿಲ್ಲದಷ್ಟು ಪುರಾಣಕತೆಗಳಿವೆ.

ಪತಿಯೊಂದಕ್ಕೂ ಪುರಾಣಕತೆಗಳನ್ನು ಉದಾಹರಣೆ ಕೊಡಬಹುದು. ” ಕಣ್ಣಾ ಮುಚ್ಚೇ , ಕಾಡೇ ಗೂಡೇ… ಉದ್ದಿನ ಮೂಟೆ ಉರುಳೇ ಹೋಯ್ತು'” ಅನ್ನುವುದನ್ನೂ ರಾಮಾಯಣ ಕ್ಕೆ ಲಿಂಕ್ ಮಾಡಿ,
ಧಶರಥ ಕಣ್ಣುಮುಚ್ಚಲಾಗಿ ,ರಾಮನಿಗೆ ಕಾಡೇ ಮನೆಯಾಗಿ ,ಉದ್ದಿನ ಮೂಟೆಯಂತಹಾ ರಾವಣ ಉರುಳೇ ಹೋದ ” ಎಂದು ಬರೆದು ಬಿಡಬಹುದು.

ಆದರೆ ಅದು ವಿತಂಡವಾದ ಅನ್ನಿಸಿಕೊಳ್ಳುತ್ತದೆಯೇ ಹೊರತು ವಾದ ಅಲ್ಲ. ಹಾಗೆ ವಾದ ಮಾಡುವವರು ತಾವು ತುಂಬಾ ಓದಿದ್ದೇವೆ. ತಾವು ಇತಿಹಾಸ ಶಾಸ್ತ್ರ ಜ್ಞರು ಮನಃಶಾಸ್ತ್ರರು ಎಂದೆಲ್ಲಾ ಇಷ್ಟುದ್ದ ಹೇಳಿಕೊಳ್ಳುತ್ತಾರೆ. ಓದಿದವರೆಲ್ಲಾ ಮಹಾ ಮಾನವತಾವಾದಿಗಳಾಗಿರುತ್ತಾರೆ ಎಂದು ಕೊಳ್ಳುವುದೂ ತಪ್ಪು. ಒಸಾಮಾ ಬಿನ್ ಲಾದೆನ್ ಕೂಡಾ ತುಂಬಾ ಓದಿದ್ದ ಇಂಜಿನಿಯರ್ ಆಗಿದ್ದ.

ಒಂದು ಕಡೆ ಮಹಾತ್ಮಾ ಗಾಂಧಿ ಬಗ್ಗೆ ಬರೆಯುತ್ತಾ ,ಇನ್ನೊಂದು ಕಡೆ ಗೋಡ್ಸೆಯನ್ನು ದಾರಿತಪ್ಪಿದ ದೇಶಭಕ್ತ ಎಂದು ಬಲವಾಗಿ ಬಿಂಬಿಸುವವರು ಸಮಾಜಕ್ಕೆ ಯಾವ ಸಂದೇಶ ನೀಡುತ್ತಾರೆ? ಗೋಡ್ಸೆಗೆ ಗಾಂಧಿ ನ ಕೊಲ್ಲಲು ಕಾರಣ ಇತ್ತು . ಹಾಗೆಯೇ ಗೌರಿ ಲಂಕೇಶ್ ,ಪನ್ಸಾರೆ ,ಕಲಬುರ್ಗಿ ಹಂತಕರಿಗೂ ಕಾರಣ ಇತ್ತು.

ಇಂತಹದೇ ಕಾರಣ ಇತ್ತು ಎಂದು ಸಮರ್ಥನೆ ಇಳಿಯುವವರು, ಅಂತಹಾ ಸಮರ್ಥನೆಗಳನ್ನು ಮನಸ್ಸಿಗೆ ತುಂಬಿಕೊಂಡು ಕೊಲೆಗಾರರಾಗುವ ಸಮೂಹವನ್ನೂ ಹುಟ್ಟುಹಾಕುತ್ತಿದ್ದೇವೆ ಎಂದು ಯಾಕೆ ಯೋಚಿಸುತ್ತಿಲ್ಲ. ಅವರ ಯೋಚನೆ ನಡುಪಂಥೀಯ ಇರಬಹುದು ,ಆದರೆ ಅವರುಗಳು ಸೈತಾನಿಯೇ ಹೊರತು ಸನಾತನಿ ಖಂಡಿತಾ ಅಲ್ಲ.

ಬಹಳಷ್ಟು ಜನರ ಪ್ರೊಪೈಲ್ ನಲ್ಲಿ ಗಾಂಧಿ ಪೋಟೋ ಇರುತ್ತದೆ. ಆ ತರಹ ಇಟ್ಟುಕೊಂಡವರಲ್ಲಿ ಎರಡು ವಿಧ,
ಒಂದೇ ಅವರು ಪಕ್ಕಾಗಾಂಧಿವಾದಿಯಾಗಿರುತ್ತಾರೆ .
ಅಥವಾ ಅವರ ಮನಸ್ಸು ತುಂಬಾ ಗೋಡ್ಸೆ ತುಂಬಿರುತ್ತಾನೆ.

ನಮ್ಮೂರಿನ ಕೆಲವರು ಬಿಲ್ಲವ ರಾಜಕಾರಣಿ ಅಥವಾ ಮುಖಂಡನ ಬಗ್ಗೆ ಸಿಕ್ಕಾಪಟ್ಟೆ ತಕರಾರು ಮಾಡಿ ಪೋಸ್ಟ್ ಹಾಕಿದ ಬಳಿಕ ಶ್ರೀ ನಾರಾಯಣ ಗುರುಗಳ ಪೋಟೋ ಪ್ರೊಫೈಲ್ ಗೆ ಹಾಕಿಕೊಳ್ಳುತ್ತಾರೆ. ಶ್ರೀ ನಾರಾಯಣ ಗುರುಗಳು ಒಂದು ಜಾತಿಯ ಗುರು ಅಲ್ಲ ,ಅವರು ವಿಶ್ವಗುರು ಅಂತಾ ಅವರಿಗೂ ಗೊತ್ತು. ಅದರೂ ಯಾವುದೋ ಒಂದು social chemistry ಚೆನ್ನಾಗಿ ಕೆಲಸ ಮಾಡುತ್ತದೆ ಎಂಬುದು ಅವರ ನರಿಬುದ್ದಿಗೆ ಚೆನ್ನಾಗಿ ಹೊಳೆದಿರುತ್ತದೆ.ಕಾಣದ ಕೈಗಳ ಪ್ರತಿರೋದವನ್ನು ಕಡಿಮೆ ಮಾಡುವ ನರಿಬುದ್ದಿ ಅದು.

ಎಷ್ಟೋ ಜನ ಮೀಸಲಾತಿಯನ್ನು ವಿರೋಧಿಸುವುದರಿಂದ ಹಿಡಿದು ಜಾತಿವಾದವನ್ನು ಪುರಸ್ಕರಿಸುವಷ್ಟು ಮನುವಾದೀ ಮನಸ್ಸು ಹೊಂದಿರುವವರೂ ಅಂಬೇಡ್ಕರ್ ರಂತಹಾ ಮಾನವತಾವಾದಿಯ ಪೋಟೋ ಹಾಕಿಕೊಂಡಿರುತ್ತಾರೆ.

ಯಾರ ಪ್ರೊಫೈಲ್ ನಲ್ಲಿ ಯಾವ ಪೋಟೋ ಇರುತ್ತದೆ ಎನ್ನುವುದರಿಂದ ಅವರ ಸ್ವಭಾವ ಗುಣಲಕ್ಷಣಗಳನ್ನು ಅರಿಯಲು ಸಾದ್ಯವಿಲ್ಲ. ನಡುಪಂಥೀಯ ಗುಳ್ಳೆನರಿಗಳ ಬಗ್ಗೆ ದಿನಕ್ಕೊಂದು ಪೋಸ್ಟ್ ಹಾಕಿದರೂ ವರ್ಷ ಕಳೆದರೂ ಮುಗಿಯದಷ್ಟು ಇದೆ. ಆದರೂ ನೂರು ಎಪಿಸೋಡ್ ಗಳ ಒಳಗೇ ಮುಗಿಸಲು ನೋಡುತ್ತೇನೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ12 minutes ago

ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿ ವಾಸವಿದ್ದರೆ ಮಾಹಿತಿ ಕೊಡಿ

ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆ ವ್ಯಾಪ್ತಿಯಲ್ಲಿನ ಬೀದಿ ನಾಯಿಗಳ ಉಪಟಳ ತಡೆಯಲು ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಆಸ್ಪತೆಗಳು, ಕ್ರೀಡಾ ಸಂಕೀರ್ಣ, ಬಸ್ ನಿಲ್ದಾಣ,...

ದಿನದ ಸುದ್ದಿ7 hours ago

ದಾವಣಗೆರೆ | ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರೇಣುಕಾ ದೇವಿ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖರೀದಿಸಿದ ಸಾಮಾಗ್ರಿಗಳ ಬಿಲ್ಲಿನ ದಿನಾಂಕಕ್ಕೂ ಹಾಗೂ ದಾಸ್ತಾನು ವಹಿಯಲ್ಲಿ ನಮೂದಾಗಿರುವ ದಿನಾಂಕಕ್ಕೂ ಇರುವ ವ್ಯತ್ಯಾಸಕ್ಕೆ ಸ್ಪಷ್ಟನೆ ಕೋರಿ...

ದಿನದ ಸುದ್ದಿ2 days ago

ಏಕಲವ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:2024 ನೇ ಸಾಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿರುವ ರಾಜ್ಯದ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ....

ದಿನದ ಸುದ್ದಿ2 days ago

ಕರ್ತವ್ಯ ಲೋಪ | ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ಕೆ ವಿರುದ್ಧ ಲೋಕಾಯುಕ್ತಕ್ಕೆ ದೂರು

ಸುದ್ದಿದಿನ,ದಾವಣಗೆರೆ:ದಾವಣಗೆರೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ (ಕ್ರ್ಸ್ರೈಸ್)ಗಳಲ್ಲಿನ ಪ್ರಾಂಶುಪಾಲರು ವಸತಿ ಶಾಲೆಗಳ ಆವರಣದಲ್ಲಿರುವ ವಸತಿ ಗೃಹಗಳಲ್ಲಿ ವಾಸ್ತವ್ಯ ಇರುವ ಬಗ್ಗೆ...

ದಿನದ ಸುದ್ದಿ2 days ago

ಚನ್ನಗಿರಿ | ಕೆ ಹೊಸಳ್ಳಿ ಗ್ರಾಮದ ಶಾಲೆ ಎದುರೇ ಕೆರೆ ; ಸಾವಿನ ಸನಿಹ ಮಕ್ಕಳ‌ ಕಲಿಕೆ : ಕಾಂಪೌಂಡ್ ನಿರ್ಮಿಸಲು ಗ್ರಾಮಸ್ಥರ ಮನವಿಗೆ ಕಿವಿಗೊಡದ ಅಧಿಕಾರಿಗಳು

ಸುದ್ದಿದಿನ,ಚನ್ನಗಿರಿ:ತಾಲೂಕಿನ ಕೆ ಹೊಸಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತಡೆಗೋಡೆ (ಕಾಂಪೌಂಡ್) ಕಾಣದೇ ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಪ್ರತಿ ದಿನವೂ ಅಪಾಯದ ನಡುವೆಯೇ ತಮ್ಮ ಜೀವವನ್ನು...

ದಿನದ ಸುದ್ದಿ4 days ago

ಗಿರೀಶ್ ಕುಮಾರ್.ಜಿ ಅವರಿಗೆ ಪಿಎಚ್.ಡಿ ಪದವಿ

ಬಳ್ಳಾರಿ/ ವಿಜಯನಗರ:ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ನಂಬರ್ 1. ಇಟಿಗಿ ಗ್ರಾಮದ, ಪ್ರಸ್ತುತ ಬಳ್ಳಾರಿ ನಗರದ ಕಪ್ಪಗಲ್ಲು ರಸ್ತೆಯ ಕೋಟೇಶ್ ಲೇಔಟ್ ನಿವಾಸಿಗಳಾದ ನಿವೃತ್ತ ಪೊಲೀಸ್ ಸಬ್...

ದಿನದ ಸುದ್ದಿ4 days ago

ಕರ್ತವ್ಯ ಲೋಪ | ಆಯುಕ್ತೆ ಮಂಜುಶ್ರೀ, ಜಂಟಿ ನಿರ್ದೇಶಕಿ ಕೆ.ಆರ್.ಕವಿತಾ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ:ದಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಇಲ್ಲಿ ನಡೆದಿರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ತಕರಾರು ಅರ್ಜಿ ಸಲ್ಲಿಸಿ 5 ತಿಂಗಳಾದರೂ...

ದಿನದ ಸುದ್ದಿ4 days ago

ನರೇಗಾ ಕಾರ್ಮಿಕ ಕೆಲಸದ ಸ್ಥಳದಲ್ಲಿ ನಿಧನ : ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ

ಸುದ್ದಿದಿನ,ದಾವಣಗೆರೆ:ನವೆಂಬರ್ 10 ರ ಬೆಳಿಗ್ಗೆ 10 ಗಂಟೆ ಸುಮಾರಿಗೆ, ಹೊನ್ನಾಳಿ ತಾಲ್ಲೂಕು ಹಿರೇಗೋಣಿಗೆರೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಇರುವ ಸರ್ವೆ ನಂ 67ರಲ್ಲಿ ಮಹಾತ್ಮ ಗಾಂಧಿ ನರೇಗಾ...

ದಿನದ ಸುದ್ದಿ4 days ago

ಇದೇ 15 ರಂದು ನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

ಸುದ್ದಿದಿನ,ದಾವಣಗೆರೆ:ಜಿಲ್ಲೆಯಾದ್ಯಂತ ನರೇಗಾ ಕಾರ್ಮಿಕರ ಆರೋಗ್ಯದ ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ...

ದಿನದ ಸುದ್ದಿ4 days ago

ದಾವಣಗೆರೆ | ಇಂದಿನಿಂದ ಅಗ್ನಿವೀರ್ ನೇಮಕಾತಿ ರ‍್ಯಾಲಿ

ಸುದ್ದಿದಿನ,ದಾವಣಗೆರೆ: ಅಗ್ನಿಪಥ್ ಯೋಜನೆಯಡಿ ನವಂಬರ್ 13 ರಿಂದ 19 ರವರೆಗೆ ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿವೀರ್ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗಿದೆ. ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು...

Trending