Connect with us

ದಿನದ ಸುದ್ದಿ

ಅರ್ಹತೆಗೆ ಅವಕಾಶ ಕೊಡಿ

Published

on

  • ಸಂಗಮೇಶ ಎನ್ ಜವಾದಿ

ವ್ಯಕ್ತಿಯೊಬ್ಬ ಒಂದು ಹುದ್ದೆ ಪಡೆಯಲು ಅರ್ಹತೆ ಸಾಕಾ ಅಥವಾ ಜಾತಿ,ಧರ್ಮ,ಹಣ ಹಾಗೂ ಶಿಫಾರಸ್ಸು ಬೇಕಾ ? ಎನ್ನುವ ಮಾತುಗಳು ಎಲ್ಲಡೇ ಈಗ ಕೇಳಿ ಬರುತ್ತಿವೆ ಅಲ್ಲವೇ ? ಹಾಗಾದರೆ ಅರ್ಹತೆ ಒಂದು ಇದ್ದರೆ ಸಾಕೇ ? ಎನ್ನುವ ಕೆಲ ಮಾತುಗಳು ತಮ್ಮ ಮುಂದೆ ಹಂಚಿಕೊಳ್ಳಲು ಪ್ರಮಾಣಿಕವಾಗಿ ಪ್ರಯತ್ನ ಮಾಡಿರುವೆ.

ಯಾವುದೇ ಒಂದು ಪಕ್ಷದ ಅಥವಾ ಸಮಾಜಿಕ ಸಂಘಟನೆಗಳ ಜವಾಬ್ದಾರಿ ಪಡೆಯುವ ಕುರಿತು ಮತ್ತು ವಿವಿಧ ಸಮಾಜ ಮುಖಿ ಸೇವೆಗಳ ಜವಾಬ್ದಾರಿಗಳ ಸ್ಥಾನಕ್ಕೆ ಸಧ್ಯ ನಡೆಯುತ್ತಿರುವ ಸ್ಪರ್ಧೆಯನ್ನು ಗಮನಿಸಿದರೆ ಈ ಪ್ರಶ್ನೆಗಳು ಮತ್ತೆ ಮತ್ತೆ ನಮ್ಮ ಕಣ್ಮುಂದೆ ಬರುತ್ತಿವೆ.ಹಾಗಾದರೆ ಅರ್ಹತೆ ಇದ್ದರು ಕೂಡಾ ಪ್ರಮುಖ ಸ್ಥಾನಕ್ಕೆ ಅದೊಂದೇ ಸಾಲದೇನೋ ಎಂದು ಜಾತಿಯ ಜೊತೆಗೆ ದೊಡ್ಡವರ ಶಿಫಾರಸ್ಸು ಸಹ ಸೇರಿಸಿಕೊಳ್ಳಲು ಪ್ರಯತ್ನಿಸಬೇಕಾದ ಸಂದರ್ಭವೊಂದು ಈಗ ಉಂಟಾಗಿದೆ ಎನ್ನಬಹುದು.

ಇಂತಹ ಸಮಸ್ಯೆಗಳು ಎದುರಿಸುತ್ತಿರುವವರು ಕೆಲವರು(ಬೆರಳಣಿಕೆಯಷ್ಟು) ಮಾತ್ರ ಎಂದೇ ಹೇಳಬೇಕು, ಆದಕಾರಣ ಇಂದಿನ ದಿನಗಳಲ್ಲಿ ನಿಸ್ವಾರ್ಥ ಸೇವೆಗೆ ಸಂದಿಗ್ಧತೆಯ ಸಮಯದ ಕಾಲವಿದು ಎಂದೇ ಹೇಳಬೇಕಾಗುತ್ತದೆ.

ಹೀಗಾಗಿ ಶಿಫಾರಸ್ಸು ಇಲ್ಲದೇ ಹೋರಾಟದ ನೆಲೆಯಿಂದ ಮುಂಚೂಣಿಗೆ ಬಂದವರಿಗೆ ಸಧ್ಯದ ದಿನಮಾನಗಳಲ್ಲಿ ಗೌರವ, ಬೆಲೆ ಇಲ್ಲ ಎನ್ನುವ ಸತ್ಯ ಸಂಗತಿಯ ಮಾತುಗಳು ಈಗ ಎಲ್ಲಾ ಕಡೆ ಕೇಳಿ ಬರುತ್ತಿವೆಯಾದರೂ ರಾಜಕೀಯದಲ್ಲಿ ಇದೊಂದೇ ಸಾಲದು, ಜಾತಿಯ ಬಲದ ಜೊತೆಗೆ ಹಣವೂ ಬೇಕೇ ಬೇಕೆಂಬುವುದು ಸುಳ್ಳಲ್ಲ , ಹಾಗಾಗಿ ಈ ಎಲ್ಲಾ ಸಂಗತಿಗಳನ್ನು ಸೊಕ್ಷ್ಮವಾಗಿ ಗಮನಿಸಿದರೆ ಬಡವರಿಗೆ, ನಿಷ್ಠಾವಂತ ಕಾರ್ಯಕರ್ತರಿಗೆ ಇಂದಿನ ದಿನಗಳಲ್ಲಿ ನ್ಯಾಯ ಮತ್ತು ಅಧಿಕಾರ ಸೀಗುವುದು ಕಷ್ಟ ಅನಿಸುತ್ತದೆ.

ವ್ಯಕ್ತಿಯ ಅರ್ಹತೆಯನ್ನಷ್ಟೇ ಪರಿಗಣಿಸಿ ಹುದ್ದೆಗಳನ್ನು ನೀಡುವಂತಿದ್ದರೆ, ಇತರ ಯಾವ ಅರ್ಹತೆಗಳೂ ಮುಖ್ಯವಾಗುವುದಿಲ್ಲ. ಆದರೆ, ರಾಜಕೀಯದಲ್ಲಿ ಅರ್ಹತೆಗೆ ಇರೋದು ಕೊನೆಯ ಸ್ಥಾನ. ವ್ಯಕ್ತಿಯ ಜಾತಿ, ವರಿಷ್ಠರೊಂದಿಗಿನ ಸಂಬಂಧ, ಹಣ ಮುಂತಾದವು ಮೊದಲ ಸ್ಥಾನದಲ್ಲಿ ಬರುತ್ತವೆ. ಹೀಗಾಗಿ ಬಹುತೇಕ ಅರ್ಹರು ಉನ್ನತ ಹುದ್ದೆಗಳಿಗೆ ಅರ್ಹರಾಗುವುದೇ ಇಲ್ಲ. ಆ ಅಪಾಯ ಈಗ ಅರ್ಹತೆ ಇದ್ದವರಿಗೆ ಎದುರಾಗಿದೆ ಅಲ್ಲವೇ ? ಏನೋ ಮಾಡುವುದು ಹೇಳಿ ಬಂಧುಗಳೆ !.

ಹಾಗೆ ನೋಡಿದರೆ, ಸಮಾಜ ಮುಖಿ ಸೇವೆಗಳ ಜವಾಬ್ದಾರಿ ಹೊರಲು ಎಲ್ಲರಿಗಿಂತ ಹೆಚ್ಚು ಅರ್ಹ ನಿಸ್ವಾರ್ಥ ಸೇವೆಯ, ಮನೋಭಾವ – ಮನೋಧರ್ಮದ ವ್ಯಕ್ತಿ ಎನ್ನುವುದು ಸತ್ಯ ಹೌದು ಅಲ್ಲವೇ. ಯಾವುದೇ ಗಾಡ್ ಫಾದರ್ ನೆರವಿಲ್ಲದೇ, ಕೇವಲ ಹೋರಾಟದ ನೆಲೆಗಟ್ಟಿನಿಂದಲೇ ರಾಜಕೀಯ ಹಾಗೂ ಸಮಾಜಿಕ ಕ್ಷೇತ್ರದ ಮೊಗಸಾಲೆಯನ್ನು ಪ್ರವೇಶಿಸಿ ನಾಡಿನ ಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವ ಪ್ರತಿಭೆಗಳನ್ನು ಗುರುತಿಸದೇ ಹೋದರೆ ಹೇಗೆ ?.

ಇವೆಲ್ಲಾ ಕಾರಣಗಳನ್ನು ಕಂಡರೆ
ಇಂದಿನ ಸ್ವಾರ್ಥ ಹೀನ ಪರಿಸ್ಥಿತಿ ನೋಡಿ ನಮಗೆ ಕನಿಕರ ಉಂಟಾಗುತ್ತಿದೆ ಮತ್ತು ಅರ್ಹತೆ ಇದ್ದರು ಹೋರಾಟ ನಡೆಸುವ ಅನಿವಾರ್ಯ ಪರಿಸ್ಥಿತಿ ಸಧ್ಯ
ಜೋರಾಗಿ ಕಂಡು ಬರುತ್ತಿರುವುದೇ ಅತ್ಯಂತ ಖೇದಕರ ವಿಷಯವಾಗಿದೆ. ಹಾಗಾಗಿ ಮೌಲ್ಯಾಧಾರಿತ ಸೈದ್ಧಾಂತಿಕ ನಿಲುವಿಗೆ ಬದ್ಧರಾಗುವ ಮೂಲಕ ಸೇವೆಯಲ್ಲಿ ಗುರುತಿಸಿಕೊಂಡವರು.

ದೇಶ/ಕನ್ನಡ ಪರ ನಿಲುವನ್ನು ನಿರ್ಭಿಡೆಯಿಂದ ಪ್ರಕಟಿಸುತ್ತ ಬಂದಂಥವರು. ಇನ್ನೂ ಚಿಕ್ಕ ವಯಸ್ಸು, ದೊಡ್ಡ ಉತ್ಸಾಹ ಇರುವ ಸೇವಕರು, ವಿವಿಧ ಸಂಘಟನೆಗಳ ಸಕ್ರಿಯ ಕಾರ್ಯಕರ್ತರ ಪಡೆಯನ್ನು ಹೊಂದುವ ಮೂಲಕ ನಿಸ್ವಾರ್ಥ ಸೇವೆಯಲ್ಲಿ ಮೂಂಚುಣಿಯಲ್ಲಿ ಇದ್ದವರು. ಸರ್ವ ಜನಾಂಗದ ಜನರ ಮೆಚ್ಚುಗೆಗೆ ಪಾತ್ರವಾಗಿರುವ ಹಾಗೂ ಸಂಘಟನೆಯನ್ನು ಬಲಪಡಿಸುವ ಉತ್ಸಾಹ, ಸಾಮರ್ಥ್ಯ ಹೊಂದಿರುವ ಕೆಚ್ಚೆದೆಯ ಪ್ರತಿಭೆಗಳು. ಅವರ ಸೇವೆಯ ನಿಷ್ಠೆಗೆ ಕೊರತೆಯಿಲ್ಲ ಜೊತೆಗೆ ಯಾವುದೇ ವಿವಾದಗಳಲ್ಲಿಯೂ ಸಿಲುಕದೇ ಇರುವ ಹೋರಾಟಗಾರರು‌ ಇವರಾಗಿದ್ದಾರೆ ಎನ್ನುವುದು ಮರೆಯಬೇಡಿ.

ಆದ್ದರಿಂದ ಪ್ರಮುಖ ಜವಾಬ್ದಾರಿ ಪಡೆಯಲು ಇದಕ್ಕಿಂತ ಹೆಚ್ಚಿನ ಅರ್ಹತೆಗಳು ಬೇಕಾ? ನಾಯಕನಾಗಬಲ್ಲವರಲ್ಲಿ ಇರುವಂತಹ ಸೂಕ್ಷ್ಮಪ್ರಜ್ಞೆ ಇವರಲ್ಲಿ ಪ್ರಮುಖವಾಗಿ ಎದ್ದು ಕಾಣುತ್ತಿದೆಯಲ್ಲಾ. ಸದಾ ಚುರುಕಾಗಿ ಓಡಾಡುತ್ತ, ಜನಪರ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಾ, ಸದಾ ಸಮಾಜ ಸೇವೆಯಲ್ಲಿ ತೋಡಗಿಸಿಕೊಂಡು, ನೂರಾರು ಹೋರಾಟಗಳು ಮಾಡುವ ಮೂಲಕ ನಾಡಿನಲ್ಲಿ ಮನೆಮಾತಾಗಿರುವವರನ್ನು ಗುರುತಿಸಿ ಜವಾಬ್ದಾರಿ ನೀಡುವುದು ಶ್ರೇಷ್ಠವಲ್ಲವೇ ಹಾಗೂ ಜೊತೆ ಜೊತೆಗೆ
ನಾಡು ಮತ್ತು ನುಡಿಗೆ ಸಂಬಂಧಿಸಿದ, ಇನ್ನಿತರ ಹಲವಾರು ಪ್ರಮುಖ ವಿಷಯಗಳ ಕುರಿತು ವ್ಯಾಪಕ ಹೋರಾಟಗಳನ್ನೂ ಮಾಡಿದವರಿಗೆ ಒಂದೊಳ್ಳೆಯ ಅವಕಾಶ ನೀಡುವುದು ಅತ್ಯುತ್ತಮ ವಲ್ಲವೇ!.

ಇಂತಹವರಿಗೆ ಜವಾಬ್ದಾರಿ ಕೊಡದೇ ಹೋದರೆ ಮತ್ಯಾರಿಗೆ ಜವಾಬ್ದಾರಿ ನೀಡುತ್ತಾರೆ.ಅರ್ಹತೆಯೊಂದೇ ಹುದ್ದೆಗೆ ಮಾನದಂಡವಾಗಬೇಕೆಂಬ ಛಲ ನಮ್ಮದು.ಅಂದಗಾಲೇ ಈ ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗಲು ಶಕ್ತವಾಗುತ್ತದೆ. ಆದಕಾರಣ ಅಧಿಕಾರಸ್ಥ ಪಕ್ಷದಲ್ಲಿ ಸಾಕಷ್ಟು ಪ್ರಮುಖ ಹುದ್ದೆಗಳಿರುತ್ತವೆ. ಆ ಪೈಕಿ ಕೆಲವನ್ನಾದರೂ ಅರ್ಹತೆ ಆಧರಿಸಿ ನೀಡುವಂತಾಗಬೇಕು. ಮುಖ್ಯವಾಗಿ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು ಹಾಗೂ ಉತ್ಸಾಹಿಗಳಿಗೆ ಅಂತಹ ಹುದ್ದೆಗಳನ್ನು ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು.

ಅದರಿಂದ ಪಕ್ಷಕ್ಕೂ/ಸಮಾಜಕ್ಕೂ/ಸಂಘಟನೆಗೂ ಅನುಕೂಲ ವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.ಸೊಕ್ತ ಅರ್ಹ ಅಭ್ಯರ್ಥಿಗಳನ್ನು ,ಹಿರಿಯರು ಗುರುತಿಸಿ ಗೌರವಿಸುವ ಕೆಲಸ ಶೀಘ್ರವಾಗಿ ಮಾಡುವ ಮೂಲಕ ಇಂತಹ ವ್ಯಕ್ತಿಯನ್ನು ಪ್ರೋತ್ಸಾಹಿಸಿ ಬೆಳೆಸಿದರೆ, ಅದರಿಂದ ಸಮಾಜ ಮತ್ತು ನಾಡಿಗೆ ಹೆಚ್ಚು ಅನುಕೂಲವಾಗುತ್ತದೆ. ಆ ವಿವೇಚನೆಯನ್ನು ಸಂಬಂಧ ಪಟ್ಟ ಹಿರಿಯರು ತೋರುವ ಮೂಲಕ ಯುವ ಪ್ರತಿಭೆಗಳಿಗೆ ಅವಕಾಶ ನೀಡಬೇಕು.

ಪ್ರಮುಖ ಜವಾಬ್ದಾರಿಗಳನ್ನು ಉತ್ತಮರಿಗೆ ನೀಡಿದರೆ, ಸ್ಥಗಿತಗೊಂಡಂತಿರುವ ಇತರ ಚಟುವಟಿಕೆಗಳು ಮತ್ತೆ ಚುರುಕಾಗಲು ಅವಕಾಶವಾಗುತ್ತದೆ.ಹೀಗಾಗಿ ಅರ್ಹತೆ ಪರಿಗಣಿಸಿ ಪ್ರಮುಖ ಸ್ಥಾನ ನೀಡುವುದು ಹಿರಿಯರಿಗೆ ಬಿಟ್ಟಿರುವ ವಿಚಾರ.

ಏಕೆಂದರೆ, ಅರ್ಹ ವ್ಯಕ್ತಿ ಯಾವ ಪಕ್ಷದಲ್ಲಿದ್ದರೂ ಉತ್ತಮ ಕೆಲಸವನ್ನೇ ಮಾಡುತ್ತಾರೆ. ಅಭಿವೃದ್ಧಿ ಮೂಲಕ ಹೊಸ ಸಂಚಲನೆಯೊಂದು ರಾಜ್ಯದಲ್ಲಿ ಸೃಷ್ಟಿಸುತ್ತಾರೆ ಎಂಬ ಬಲವಾದ ಭಾವನೆ ನಮ್ಮದು. ಆ ದಿಸೆಯಲ್ಲಿ ಸಂಬಂಧ ಪಟ್ಟ ಮಹನೀಯರು ಅನ್ಯತಾ ಭಾವಿಸದೇ, ಮುಕ್ತ ಮನಸ್ಸಿನಿಂದ ಯೋಚನೆ ಮಾಡಲಿ,ಮಾಡುವ ಮೂಲಕ ಪ್ರತಿಭೆಗಳಿಗೆ ಅವಕಾಶ ಕೊಡಲಿ ಎನ್ನುವ ಆಶಾವಾದ ನಮ್ಮದಾಗಿದೆ.

ಅರ್ಹತೆ ಎಂದರೆ (ನನ್ನ ದೃಷ್ಟಿಯಲ್ಲಿ)

ನಿಸ್ವಾರ್ಥ ಸೇವೆಯ ಅರ್ಹತೆಗಳ ಜೊತೆಗೆ ಅಭ್ಯರ್ಥಿಗಳು ಕೆಲವು ವಿಶೇಷ ಅರ್ಹತೆಗಳನ್ನು ಪಡೆದಿರಬೇಕು. ಮೊದಲನೆಯದು ವಿದ್ಯಾ ಅರ್ಹತೆ. ಈ ಅರ್ಹತೆ ಅಭ್ಯರ್ಥಿಯ ಶಿಕ್ಷಣಕ್ಕೆ ಸಂಬಂಧಿಸಿದುದು. ಪ್ರತಿಯೊಬ್ಬ ಅಭ್ಯರ್ಥಿಯೂ ನಿಯಮಿತ ವಿದ್ಯಾ ವ್ಯಾಸಂಗ ಮಾಡಿರಬೇಕು.

ಎರಡನೆಯದು ವೈಯಕ್ತಿಕ ಗುಣಗಳು, ಪ್ರಾಮಾಣಿಕತೆ, ನಿಷ್ಕಾಪಟ್ಯ, ನೈಪುಣ್ಯ, ಧೈರ್ಯ ಮತ್ತು ಸಂಘಟನಾ ಸಾಮರ್ಥ್ಯ ಹೊಂದುವುದು ಅತಿ ಅವಶ್ಯ. ಇವುಗಳನ್ನು ಕಂಡು ಹಿಡಿಯುವುದಕ್ಕೋಸ್ಕರ ಸಾಮೂಹಿಕ ಪರೀಕ್ಷೆ, ಮನಶಾಸ್ತ್ರೀಯ ಸಂಬಂಧ ಪರೀಕ್ಷೆ ಮುಂತಾದುವುಗಳನ್ನು ನಡೆಸುವುದು ಅವಶ್ಯಕತೆ ವಿದೆ.

ಮೂರನೆಯದು ಅನುಭವ ಮತ್ತು ಪ್ರಾಮಾಣಿಕತೆ ಇದರ ಪ್ರಕಾರ ಅಭ್ಯರ್ಥಿಗಳು ಕೆಲವು ಸಂದರ್ಭಗಳಲ್ಲಿ ಆ ಕೆಲಸದಲ್ಲಿ ಸಾಕಷ್ಟು ಪುರ್ವಾನುಭವ ಹೊಂದಿರಬೇಕು. ಇವುಗಳ ಜೊತೆಗೆ ವಿಶೇಷ ಸಮಾಜಿಕ ಜ್ಞಾನವೂ ಒಂದು ಹೆಚ್ಚಿನ ಅರ್ಹತೆಯಾಗಿ ಪರಿಗಣಿಸಲ್ಪಟ್ಟಿದೆ ಎನ್ನುವುದು ಅಲ್ಲಗಳೆಯುವಂತಿಲ್ಲ.

ಜೊತೆಗೆ ಇಂದು ಆಡಳಿತಾಂಗದಲ್ಲಿ ಹೆಚ್ಚು ಹೆಚ್ಚಾಗಿ ವೈಶಿಷ್ಟ್ಯ ನಿಸ್ವಾರ್ಥ ಸೇವಾ ಅನುಭವ ಹೊಂದುವುದು ಸೇರಿ ಆಡಳಿತ ಹಾಗೂ ಸಂಘಟನೆಯನ್ನು ಯಶಸ್ವಿ ದಿಕ್ಕಿನಲ್ಲಿ ಮುನ್ನಡೆಸಲು ವಿಶೇಷ ಜ್ಞಾನವನ್ನು ಪಡೆದಿರಲೇಬೇಕಾಗುತ್ತದೆ. ಆಡಳಿತದ ಯಾವುದೇ ಒಂದು ಹುದ್ದೆಗೆ ಹಲವಾರು ಅಭ್ಯರ್ಥಿಗಳು ಇರುತ್ತಾರೆ. ಅವರಲ್ಲಿ ಹೆಚ್ಚಿನ ಅರ್ಹತೆಗಳು ಆ ಹುದ್ದೆಯ ಆವಶ್ಯಕತೆಗಳಿಗೆ ಅನುಗುಣವಾಗಿ ಯಾರಿಗೆ ಇವೆಯೋ ಅವರು ನೇಮಕಗೊಳ್ಳಬೇಕಾದುದು ಸರಿಯಾದ ಕ್ರಮ.

ಇದರಿಂದ ಆಡಳಿತ ವ್ಯವಸ್ಥೆ ಸುಸೂತ್ರವಾಗಿ ನಡೆಯುತ್ತದೆ. ಸರ್ಕಾರದಲ್ಲಿ ಅಥವಾ ಸಂಘ – ಸಂಸ್ಥೆಯಲ್ಲಿ ಯಾವುದೇ ಒಂದು ಸ್ಥಾನ ಖಾಲಿಯಾದಾಗ ಅದಕ್ಕೆ ಕೆಲವು ಅರ್ಹತೆಗಳನ್ನು ಗೊತ್ತು ಮಾಡಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಪಡೆಯುವ ಮೂಲಕ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡು ಬರುವ ವ್ಯವಸ್ಥೆ ಆಗಬೇಕಾಗಿದೆ ಎನ್ನುವುದು ಸುಳ್ಳಲ್ಲ ಹಾಗಾದಾಗ ಮಾತ್ರ ಆ ಹುದ್ದೆಗೆ ಗೌರವ ಸೀಗುತ್ತದೆ.

ಕೊನೆಯ ಮಾತು

ಪ್ರಮಾಣಿಕವಾಗಿ – ನಿಷ್ಠಾವಂತರಾಗಿ ದುಡಿಯುವ ಯೋಗ್ಯ ವ್ಯಕ್ತಿಗಳನ್ನು ಗುರುತಿಸಿ ಜವಾಬ್ದಾರಿ ನೀಡುವುದು ಇಂದಿನ ದಿನಗಳಲ್ಲಿ ಅವಶ್ಯಕತೆ ಇದೆ. ಇದರಿಂದ ಸಮಾಜ ಮತ್ತು ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಸಹಕಾರಿ ಆಗುತ್ತದೆ. ಇದಲ್ಲದೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆ ಸರ್ವರಲ್ಲಿಯೊ ಮೂಡುವ ಮೂಲಕ ಭವ್ಯ ಭಾರತದ ಉನ್ನತಿಗೆ ಸಾಕ್ಷಿಯಾಗಲಿದೆ.

(-ಸಂಗಮೇಶ ಎನ್ ಜವಾದಿ
ಕೊಡಂಬಲ.ಬೀದರ ಜಿಲ್ಲೆ.
9663809340)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್‍ ಆಹ್ವಾನ

Published

on

ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್‍ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್‍ ಸಂಜೀವ್‍ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.

ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್‍ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.

ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್‍, ಸೋಷಿಯಲ್‍ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಜೊತೆಗೆ ಒಂದು ಮೊಬೈಲ್‍ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್‍ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು

Published

on

ಸುದ್ದಿದಿನ,ರಾಯಚೂರು: ಕಟ್ಟಡದ ಮೇಲ್ಛಾವಣಿಯ ಸಜ್ಜಾ ಏಕಾಏಕಿ ಕುಸಿದು ಬಿದ್ದು ಮೂವರು ಯುವಕರು ಮೃತಪಟ್ಟ ದುರ್ಘಟನೆ ಭಾನುವಾರ ಜಿಲ್ಲೆಯ ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಸಂಭವಿಸಿದೆ.

ಮೃತರನ್ನು ದೇವದುರ್ಗ ತಾಲೂಕಿನ ಸಮುದ್ರ ಗ್ರಾಮದ ರವಿಚಂದ್ರ (35), ಕ್ಯಾದಿಗೆರಾ ಗ್ರಾಮದ ನಾಗರಾಜ್ (30) ಹಾಗೂ ಕೊತ್ತಿಗುಡ್ಡದ ಅರ್ಜುನ್ (21) ಎಂದು ಗುರುತಿಸಲಾಗಿದೆ.

ಕಟ್ಟಡದ ಅವಶೇಷಗಳಡಿ ಸಿಲುಕಿ ರವಿಚಂದ್ರ ಹಾಗೂ ನಾಗರಾಜ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅರ್ಜುನ್‌ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿಯ ಪ್ರಕಾರ, ಯುವಕರು ತಾವೇ ನಿರ್ಮಿಸಿದ್ದ ‘ಅಂತ್ಯವಾಯ್ತು’ ಎಂಬ ಕಿರುಚಿತ್ರದ ಪೋಸ್ಟರ್ ಅಂಟಿಸಲು ಕಟ್ಟಡದ ಬಳಿ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.

ಕಟ್ಟಡದ ಮೇಲ್ಛಾವಣಿಯ ಒಂದು ಭಾಗವು, ಅದಕ್ಕೆ ಜೋಡಣೆಯಾಗಿದ್ದ ಕಬ್ಬಿಣದ ಮೆಟ್ಟಿಲುಗಳ ಸಹಿತ ಕುಸಿದು ಬಿದ್ದಿದೆ. ಘಟನೆಯಲ್ಲಿ ಉಮೇಶ್, ಪ್ರಭು ಹಾಗೂ ಅಭಿಷೇಕ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಘಟನಾ ಸ್ಥಳಕ್ಕೆ ದೇವದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯ ನಂತರ ನಿಖರ ಕಾರಣ ತಿಳಿಯಲಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ದೇವದುರ್ಗ ಶಾಸಕಿ ಕರೆಮ್ಮ ನಾಯಕ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪಲ್ಸ್ ಪೋಲಿಯೋದಿಂದ ಯಾವುದೇ ಮಗು ವಂಚಿತವಾಗದಂತೆ ಕ್ರಮವಹಿಸಿ: ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್

Published

on

ಜಿಲ್ಲೆಯಲ್ಲಿ 1.37 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ: ಡಿಎಚ್ಒ ಡಾ. ಷಣ್ಮುಖಪ್ಪ

ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಪಲ್ಸ್ ಪೋಲಿಯೋ ವಿಶೇಷ ಅಭಿಯಾನದಲ್ಲಿ ಯಾವುದೇ ಒಂದು ಮಗುವೂ ಸಹ ಲಸಿಕೆಯಿಂದ ವಂಚಿತವಾಗದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಅವರು ಸೂಚಿಸಿದರು.

ಅವರು ಭಾನುವಾರ ಪಾಷನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಬ್ದುಲ್ ರೆಹಮಾನ್ ಎಂಬ 4 ತಿಂಗಳ ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶ ಸೇರಿದಂತೆ ಎಲ್ಲಾ ಭಾಗಗಳ ಅರ್ಹ ಮಕ್ಕಳಿಗೂ ಲಸಿಕೆ ತಲುಪಬೇಕು. ಆರೋಗ್ಯ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ ಎಸ್. ಅವರು ಮಾತನಾಡಿ, ಜಿಲ್ಲೆಯನ್ನು ಸಂಪೂರ್ಣ ಪೋಲಿಯೋ ಮುಕ್ತವಾಗಿಸಲು ಆರೋಗ್ಯ ಇಲಾಖೆ ಪಣತೊಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 18,28,153 ಜನಸಂಖ್ಯೆಯಿದ್ದು, 3,79,338 ಮನೆಗಳಿವೆ. ಇವುಗಳಲ್ಲಿ ಗುರುತಿಸಲಾಗಿರುವ 5 ವರ್ಷದ ಒಳಗಿನ 1,37,339 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ವಿವರ ನೀಡಿದರು.

ಇದಕ್ಕಾಗಿ ಜಿಲ್ಲಾದ್ಯಂತ 1,090 ಲಸಿಕಾ ಬೂತ್ಗಳನ್ನು ಸ್ಥಾಪಿಸಲಾಗಿದೆ. ಬೂತ್ಗಳಲ್ಲಿ ಲಸಿಕೆ ಹಾಕುವುದರ ಜೊತೆಗೆ, ಜೂನ್ 29 ರಿಂದ ಜುಲೈ 1 ರವರೆಗೆ ಒಟ್ಟು 3 ದಿನಗಳ ಕಾಲ ಜಿಲ್ಲೆಯ ಎಲ್ಲಾ ಮನೆ-ಮನೆಗೆ ತೆರಳಿ 5 ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗುವುದು. ಈ ಕಾರ್ಯಕ್ರಮವನ್ನು 2 ಹಂತಗಳಲ್ಲಿ 3 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಲಸಿಕಾ ಅಭಿಯಾನದ ಯಶಸ್ಸಿಗಾಗಿ ಮನೆ-ಮನೆ ಭೇಟಿ ತಂಡ, ಟ್ರಾನ್ಸಿಸ್ಟ್ (ಸಾರಿಗೆ ನಿಲ್ದಾಣಗಳ ತಂಡ) ಮತ್ತು ಸಂಚಾರಿ (ಮೊಬೈಲ್) ತಂಡ ಹೀಗೆ ಮೂರು ಪ್ರಮುಖ ವಿಭಾಗಗಳ ತಂಡಗಳನ್ನು ರಚಿಸಲಾಗಿದೆ. ನಿಯೋಜಿತ ಸಿಬ್ಬಂದಿ ಹಾಗೂ ಮೇಲ್ವಿಚಾರಕರು ಸಕ್ರಿಯವಾಗಿ ಕಾರ್ಯನಿರ್ವಹಿಸಲಿದ್ದು, ವಲಸೆ ಕಾರ್ಮಿಕರ ಮಕ್ಕಳು, ಹರವಿಗಿ ಹೋಗುವ ಕುಟುಂಬಗಳ ಮಕ್ಕಳು ಸೇರಿದಂತೆ ಒಂದೂ ಮಗುವು ಲಸಿಕೆಯಿಂದ ವಂಚಿತವಾಗದಂತೆ ಕಟ್ಟುನಿಟ್ಟಿನ ನಿಗಾ ಇಡಲಾಗುವುದು ಎಂದು ತಿಳಿಸಿದರು.

ಡಾ. ರೇಣುಕಾರಾಧ್ಯ ಆರ್.ಸಿ.ಹೆಚ್.ಒ ಅವರು ಮಾತನಾಡಿ, ಭಾರತವನ್ನು ಪೋಲಿಯೋ ಮುಕ್ತ ದೇಶವನ್ನಾಗಿಸಲಾಗಿದೆ ಆದರೆ ಪ್ರಸ್ತುತ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ 5 ಪೋಲಿಯೋ ಪ್ರಕರಣಗಳು ಪತ್ತೆಯಾಗಿವೆ. ಅಲ್ಲಿನ ನಾಗರಿಕರು ಭಾರತಕ್ಕೆ ಬಂದು ಹೋಗುವ ಸಾಧ್ಯತೆ ಇರುವುದರಿಂದ, ವೈರಸ್ ಮತ್ತೆ ಇಲ್ಲಿ ಹರಡಬಾರದು ಎಂಬ ಮುಂದಾಲೋಚನೆಯಿಂದ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ದೇಶಾದ್ಯಂತ ಈ ಪಲ್ಸ್ ಪೋಲಿಯೋ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪಲ್ಸ್ ಪೋಲಿಯೋ ನೊಡೆಲ್ ಅಧಿಕಾರಿ ಡಾ.ಚಂದ್ರಶೇಖರ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending