Connect with us

ದಿನದ ಸುದ್ದಿ

ಬಸವಕಂಪು ಪಸರಿಸಿದ ವಿ.ಸಿದ್ಧರಾಮಣ್ಣ ಶರಣರು

Published

on

ಫೋಟೋ : ವಿ. ಸಿದ್ದರಾಮಣ್ಣ

 

  • ಡಾ.ಗೀತಾ ಬಸವರಾಜು, ಉಪನ್ಯಾಸಕರು,
    ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ರ್ನಾಟಕದ ಇತಿಹಾಸದ ಪುಟಗಳಲ್ಲಿ 12ನೇ ಶತಮಾನ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿರುವಂತಹದ್ದು, ಸಮಾಜದಲ್ಲಿನ ಅಂಧಕಾರವನ್ನು ಕಿತ್ತೆಸೆಯಲು ಜನ್ಮತಾಳಿದ ಶರಣರು ಬಹು ದೊಡ್ಡದೊಂದು ಕ್ರಾಂತಿಯನ್ನು ಮಾಡಿದರು.

ಈ ಕ್ರಾಂತಿ ಕೇವಲ ಕರ್ನಾಟಕಕ್ಕೆ ಅಷ್ಟೆ ಮೀಸಲಾಗದೆ ಇಡೀ ವಿಶ್ವಕ್ಕೆ ಕಣ್ಣುಕೊಟ್ಟಿತು ಎಂದರೆ, ಅತಿಶಯೋಕ್ತಿಯಾಗಲಾರದು. ವಿಶ್ವಗುರು ಬಸವಣ್ಣನವರು ವಿಶ್ವಕಲ್ಯಾಣದ ಮಹಾಸಾಧನೆಯನ್ನು ನಿರ್ಮಿಸಿ ಇವನಾರವ ಇವನಾರವ ಎಂದೆನಿಸದೆ ಸಕಲರನ್ನು ಒಗ್ಗೂಡಿಸಿದ ವಿಭೂತಿ ಪುರುಷರು. ಸಕಲ ಜೀವರಾಶಿಗೆ ಒಳಿತಾಗುವ ಅನುಭವ ಮಂಟಪವನ್ನು ಕಟ್ಟಿ ಸಮಾಜದಲ್ಲಿದ್ದ ಜಾಡ್ಯವನ್ನು ದೂರಮಾಡಿ ಸಮಸಮಾಜವನ್ನು ನಿರ್ಮಿಸಿದರು.

900 ವರ್ಷಗಳ ಹಿಂದೆ ನಡೆದ ಈ ಕ್ರಾಂತಿಯ ಪರಿಣಾಮ 21ನೇ ಶತಮಾನದಲ್ಲಿಯೂ ಅಚ್ಚ ಹಸಿರಾಗಿ ಉಳಿದಿರುವುದು ವಿಶೇಷ. ಬಸವತತ್ವವನ್ನೇ ಹಾಸಿ ಬಸವತತ್ವವನ್ನೇ ಹೊದ್ದು ಬಸವತತ್ವವನ್ನೇ ಉಸಿರಾಗಿಸಿಕೊಂಡು, ಬಸವತತ್ವವನ್ನು ಮಂತ್ರವಾಗಿಸಿಕೊಂಡು ನಡೆದಾಡುವ ವಚನ ಭಂಡಾರವಾಗಿ ಕಂಗೊಳಿಸುತ್ತಿರುವವರು ಪೂಜ್ಯರಾದ ವಿ.ಸಿದ್ದರಾಮಣ್ಣ ಶರಣರು.

ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ 1922ಜನವರಿ 14 ರಂದು ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿಯಂದು ಜನಿಸಿದ ಶಿವರಾಮಣ್ಣನವರು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ತಂದೆಯವರಿಂದ ಕರ್ನಾಟಕ ಸಂಗೀತದ ಆಸಕ್ತಿ ಮೂಡಿಸಿಕೊಂಡರು. ಬಾಲ್ಯದಿಂದಲೇ ಉತ್ತಮ ವಿಚಾರಗಳನ್ನು ಒಳಗೊಂಡು ಒಳ್ಳೆಯ ನಡೆ-ನುಡಿಗಳನ್ನು ಅಳವಡಿಸಿಕೊಂಡು ಉತ್ತಮರ ಸಂಗದಲ್ಲಿಯೇ ಬೆಳೆದು ಮೆಟ್ಟಿಲು ಮೆಟ್ಟಿಲಾಗಿ ಮೇಲೇರಿ ಬಂದವರು.

ತಂದೆಯವರಿಂದ ಸಂಗೀತ, ನಾಟಕ ಕಲೆಯನ್ನು ಕಲಿತು ತಮ್ಮ ಪ್ರತಿಭೆಯಿಂದ ನಟರಾಗಿ, ನಾಟಕ ನಿರ್ದೇಶಕರಾಗಿ, ರಚನೆಕಾರರಾಗಿ, ಸಂಗೀತಗಾರರಾಗಿ ಬೆಳೆದು ಬಂದ ಇವರು ಪ್ರವಚನ ಪಿತಾಮಹರೆಂದೇ ಹೆಸರಾದ ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಪ್ರವಚನ ಧಾರೆಗೆ ಆಕರ್ಷಿತರಾಗಿ ಅವರಿಂದ ಇಷ್ಟಲಿಂಗ ದೀಕ್ಷೆ ಪಡೆದು ಬಸವತತ್ವ ಪ್ರಸಾರಕ್ಕೆ ಅಣಿಯಾಗಿ ವಿಶ್ವಕಲ್ಯಾಣದ ಸಿದ್ಧರಾಮಣ್ಣ ಶರಣ ಎಂಬ ನೂತನ ಅಭಿದಾನವನ್ನು ಪಡೆದರು.

ಕೇವಲ ಐದನೇ ತರಗತಿ ಕಲಿತಿರುವ ವಿ.ಸಿದ್ಧರಾಮಣ್ಣನವರು ಬಸವ ಗ್ರಂಥಭಂಡಾರವೇ ಆಗಿದ್ದಾರೆ. ಪದವೀಧರರಾಗಬಹುದು ಆದರೆ ಪ್ರತಿಭಾವಂತರಾಗುವುದು ತುಂಬಾ ಕಷ್ಟ. ಕುರಿತೋದದೆಯಂ ಕಾವ್ಯಪ್ರಯೋಗ ಪರಿಣಿತರ ಸಾಲಿಗೆ ಪೂಜ್ಯ ಶರಣರು ಸೇರುತ್ತಾರೆ. ಸಾವಿರಾರು ವಚನಗಳು ಇವರಿಗೆ ಕಂಠಪಾಠವಾಗಿವೆ.

ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ,
ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷೆ
ವಿಷಯಂಗಳಲ್ಲಿ ಉದಾಸೀನ, ಭಾವದಲ್ಲಿ ದಿಗಂಬರ,
ಜ್ಞಾನದಲ್ಲಿ ಪರಮಾನಂದ ನೆಲೆಗೊಂಡ ಬಳಿಕ
ಸೌರಾಷ್ಟ್ರ ಸೋಮೇಶ್ವರ ಲಿಂಗವು ಬೇರಿಲ್ಲ ಕಾಣಿರೋ

ಎಂಬ ಶರಣ ಆದಯ್ಯನವರ ವಚನದಂತೆ ಪರಿಶುದ್ಧ ಜೀವನವನ್ನು ನಡೆಸುತ್ತಿದ್ದಾರೆ. ಶುಭ್ರ ಶ್ವೇತಧಾರಿಯಾದ ಇವರ ಮುಖದಲ್ಲಿ ಬಸವ ಕಳೆಯಿದೆ. ಬಾಗಿದ ತಲೆ ಮುಗಿದ ಕೈಯ ಗುಣ ಪೂಜ್ಯರದ್ದು, 100ರ ತುಂಬು ಜೀವನದಲ್ಲಿ ಯುವಕರೇ ನಾಚುವಂತೆ ಕಂಚಿನ ಕಂಠದಲ್ಲಿ ವಚನ ಗಾಯನ ಮತ್ತು ವಚನ ವಿಶ್ಲೇಷಣೆಯನ್ನು ಪುಂಖಾನುಪುಂಖವಾಗಿ ಹೇಳುವ ಶೈಲಿ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ವಿಭೂತಿ ಪುರುಷರ ಮಧ್ಯೆ ದಿವ್ಯಜ್ಯೋತಿಯಂತೆ ಕಂಗೊಳಿಸುತ್ತಿರುವ ಪೂಜ್ಯರು ಬಸವ ಪ್ರಸಾದ ನಿಲಯದ ವಿದ್ಯಾರ್ಥಿನಿಯರ ಅಚ್ಚುಮೆಚ್ಚಿನ ತಾತನಾಗಿದ್ದಾರೆ. ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವ ಹೊಂದಿರುವ ಇವರು ದೈನಂದಿನ ಕಾರ್ಯಕ್ರಮಗಳನ್ನು ಚಾಚೂ ತಪ್ಪದೇ ನಡೆಸಿಕೊಂಡು ಬಂದಿದ್ದಾರೆ. ಸಮಯಕ್ಕೆ ಸರಿಯಾಗಿ ವಚನ ಪ್ರಾರ್ಥನೆ, ಶಿವಾನುಭವ ಚಿಂತನೆ, ಬಂದ ಭಕ್ತರಿಗೆ ಬಸವತತ್ವದ ಪರಿಕಲ್ಪನೆಯನ್ನು ವಿವರಿಸಿ ಮನ ಮುಟ್ಟುವಂತೆ ಹೇಳಿ ಅವರ ಹೃದಯವನ್ನು ಪರಿವರ್ತಿಸುವ ಹರಿಕಾರರಿವರು.

ಇವರು ಕೈ ಎತ್ತಿದರೆ ಕಾಯಕ, ಕಾಲಿಟ್ಟರೆ ಪಾವಿತ್ರ್ಯಂ ಸರಳ ಸಜ್ಜನಿಕೆಯ ಜೀವನಕ್ರಮವನ್ನು ಒಳಗೊಂಡು ಶಿವಶರಣರ ಜೀವನವನ್ನು ಆದರ್ಶವಾಗಿರಿಸಿಕೊಂಡು ನಿಂತ ನೀರಾಗಿ ನಿಲ್ಲದೆ ಚರಜಂಗಮರಾಗಿ ಸತ್ಯ ಶರಣರ ಪಥದಲ್ಲಿ ನಡೆ ನುಡಿಗಳನ್ನು ಒಗ್ಗೂಡಿಸಿಕೊಂಡು ಕರ್ನಾಟಕದಲ್ಲಷ್ಟೇ ಅಲ್ಲದೆ ಮಹಾರಾಷ್ಟç, ಆಂಧ್ರಪ್ರದೇಶ, ದೆಹಲಿ ಇಲ್ಲೆಲ್ಲ ಬಸವತತ್ವದ ಜ್ಞಾನಜ್ಯೋತಿಯ ಪ್ರಕಾಶದ ಬೆಳಗನ್ನು ಬಿಂಬಿಸಿದ್ದಾರೆ.

ಶರಣರ ಸಾಹಿತ್ಯ ಸೇವೆ

ಬಾಲ್ಯದಿಂದಲೆ ನಾಟಕ, ಕತೆ, ಕಾದಂಬರಿ, ಚರಿತ್ರೆ, ಕವಿತೆ, ಜಾನಪದ ಪದ್ಯಗಳನ್ನು ಓದುತ್ತಿದ್ದುದರಿಂದ ಅವರಲ್ಲಿ ಒಬ್ಬ ನಟ, ಸಂಗೀತ ಕಲಾವಿದ, ಸಾಹಿತಿ, ಕವಿ ಬೆಳೆದಿದ್ದನು. ಈ ಶರಣರು ಸುಮಾರು 20ಕ್ಕೂ ಹೆಚ್ಚು ನಾಟಕಗಳು, 11 ತಾತ್ವಿಕ ಗ್ರಂಥಗಳು, 2 ಕಾವ್ಯಗಳು, ಹಲವಾರು ಕವನಗಳು, ಹಾಗೂ ಆಧುನಿಕ ವಚನಗಳನ್ನು ಕನ್ನಡ ಸಾಹಿತ್ಯದ ಮಡಿಲಿಗೆ ನೀಡಿದ್ದಾರೆ.

ಅನುಭಾವ ದಾಸೋಹಕ್ಕಾಗಿ
ಅನ್ನದಾಸೋಹ ನಡೆಯಲಿ
ಅನ್ನ ದಾಸೋಹ ಹೊಟ್ಟೆಗಾದರೆ
ಅನುಭಾವ ದಾಸೋಹ ಆತ್ಮಕ್ಕೆ
ಕೇವಲ ಅನ್ನಕ್ಕಾಗಿ ಹಾತೊರೆಯುವುದು ಭವಿಯ ಲಕ್ಷಣ.
ಆತ್ಮದ ಹಸಿವಿಗಾಗಿ ಹಾತೊರೆಯುವುದು ಭಕ್ತನ ಲಕ್ಷಣ ನೋಡಾ ಲೋಕಗುರು ಬಸವ ಪ್ರಭುವೆ.

ಇಂತಹ ಸಾಕಷ್ಟು ಆಧುನಿಕ ವಚನಗಳನ್ನು ರಚಿಸಿದ್ದಾರೆ.

ಪೂಜ್ಯರಿಗೆ ಸಂದ ಪ್ರಶಸ್ತಿಗಳು

‘ಬಯಸಿ ಬಂದುದು ಅಂಗಭೋಗ, ಬಯಸದೆ ಬಂದುದು ಲಿಂಗ ಪ್ರಸಾದ’ ಎಂಬ ಗುರುಬಸವಣ್ಣನವರ ವಚನದಂತೆ ಪೂಜ್ಯರಿಗೆ ಶರಣ ಕಕ್ಕಯ್ಯ ಪ್ರಶಸ್ತಿ, ಬಸವಗುರು ಕಾರುಣ್ಯ ಪ್ರಶಸ್ತಿ, ಚೆನ್ನಬಸವ ಪ್ರಶಸ್ತಿ, ಬಸವತತ್ವ ಶ್ರೀ ಪ್ರಶಸ್ತಿ, ಬಸವಾನುಭಾವಿ ಗೌರವ ಪ್ರಶಸ್ತಿ, ಅನುಭವ ಮಂಟಪ ಪ್ರಶಸ್ತಿ ಗಣಾಚಾರ ಪ್ರಶಸ್ತಿಗಳು ದೊರಕಿವೆ.

ಅಲ್ಲದೆ ಇವರ ಜೀವನ ಸಾಧನೆ ಕುರಿತು ಸುಮಾರು 9 ಪುಸಕ್ತಗಳು, 70ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿರುವುದು. ಇವರ ವ್ಯಕ್ತಿತ್ವಕ್ಕಿಡಿದ ಕೈಗನ್ನಡಿಯಾಗಿದೆ.

ಕಲ್ಯಾಣ ನಾಡಿನ ಶರಣ ಸಮ್ಮೇಳನಗಳಲ್ಲೆಲ್ಲ ಪೂಜ್ಯ ವಿ ಸಿದ್ಧರಾಮಣ್ಣನವರ ರಚಿಸಿರುವ ಷಟ್‌ಸ್ಥಲ ಧ್ವಜಗೀತೆ, ಬಸವಗುರು ಮಂಗಲ ಪದಗಳು ಕೇಳಿ ಬರುತ್ತಿರುವುದು ವಿಶೇಷ. ಶರಣರದ್ದು ವೈಚಾರಿಕ ನಿಲುವು ಪ್ರಾಸಾದಿಕ ಗುಣ. ಅಷ್ಟಾವರಣ, ಪಂಚಾಚಾರಗಳ ತತ್ವ ನಿಷ್ಟರಾದ ಇವರು ಭಕ್ತರಿಗೆ ಶರಣಧರ್ಮದ ನಡವಳಿಕೆಗಳನ್ನು ಆಚಾರ ಸಹಿತ ತಿಳಿಸುತ್ತಾರೆ.

12ನೇ ಶತಮಾನದ ಬಸವೇಶ್ವರರ ತಾತ್ವಿಕಬದ್ಧತೆ ೨೧ನೇ ಶತಮಾನದ ಪೂಜ್ಯ ವಿ. ಸಿದ್ಧರಾಮಣ್ಣನವರ ಮುಖದಲ್ಲಿ ಕಂಗೊಳಿಸುತ್ತಿದೆ. ಅವರ ಮುಗ್ಧ ಮಗುವಿನ ಮಾತು ಮಾತೃಹೃದಯದ ಮಮತೆ ಶತೃಗಳನ್ನು ಮಿತ್ರರನ್ನಾಗಿಸುವ ಶಕ್ತಿಯುಳ್ಳದ್ದು.

ಅರಿವಿನ ವಚನಗಳ ಬೀಜವ ಬಿತ್ತಿ
ಆಚಾರದ ಭಕ್ತಿಜಲವನೆರೆದು
ಸಂಗೀತದ ಸುಳಿಗಾಳಿ ಬೀಸಿ
ಸಮತೆಯ ದವಸಧಾನ್ಯಂಗಳ ಬೆಳೆದು
ಬಸವತತ್ವದ ರಾಶಿಯ ಮಾಡಿ
ಲೋಕಕ್ಕೆ ಪ್ರಸಾದವನೆಡೆ ಮಾಡುತಿಹ
ವಿ.ಸಿದ್ಧರಾಮಣ್ಣಪ್ಪಗಳು ನಿಜರೈತರು ನೋಡಾ
ಎನ್ನಯ್ಯ ಬಚ್ಚಬರಿಯ ಬಸವನಲ್ಲಿ-
ಎಂಬ ಡಾ: ಕಲ್ಯಾಣಮ್ಮ ಲಂಗೋಟಿಯವರ ವಚನವು ಸಿದ್ಧರಾಮಣ್ಣ ಶರಣರ ಜೀವನಾದರ್ಶಗಳನ್ನು ತಿಳಿಸುತ್ತದೆ.

ಇಂತಹ ಪೂಜ್ಯರಿಗೆ ಇಂದು ನೂರು ವರ್ಷದ ಸಂಭ್ರಮ. ದಾವಣಗೆರೆ ಸರಸ್ವತಿ ನಗರದ ಬಸವಬಳಗದ ವತಿಯಿಂದ ಅವರಿಗೆ ಇಂದು ಗೌರವ ಸಮರ್ಪಣೆ ಸಲ್ಲಿಸಲಾಗುತ್ತದೆ.

ಹಣ್ಣು ಮಾಗಿ ಪಕ್ವವಾಗುವಂತೆ ಪೂಜ್ಯಶರಣರು ಜ್ಞಾನದಲ್ಲಿ ಮಾಗಿ ಸಮಾಜಕ್ಕೆ ವಚನದ ಸಿಹಿಯನ್ನು ಹಂಚುವ ಜ್ಞಾನವೃದ್ಧರಾಗಿ, ವಯೋವೃದ್ಧರಾಗಿ ಸಂತೃಪ್ತಿ, ಸತ್ಯನಿಷ್ಠೆ, ಸಮಾನತೆ ,ಸಮಚಿತ್ತತೆ ಕಾಯಕ-ದಾಸೋಹ ಮುಂತಾದವುಗಳನ್ನು ರೂಢಿಸಿಕೊಂಡಿರುವ ಪೂಜ್ಯರ ಬದುಕು ಇಂದಿನ ಯುವ ಸಮೂಹಕ್ಕೆ ದಾರಿದೀಪವಾಗಲಿ.

(ಲೇಖಕರು : ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ನವಿಲೇಹಾಳು ಗ್ರಾಮ ಪಂಚಾಯಿತಿಗೆ ಭೇಟಿ ; ಗ್ರಾಮಸಭೆ – ಗ್ರಾಮಾಭಿವೃದ್ಧಿಗೆ ಮನವಿ

Published

on

ಸುದ್ದಿದಿನ,ಚನ್ನಗಿರಿ: ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯು ಸೋಮೌಅರ ನವಿಲೇಹಾಳು ಗ್ರಾಮ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅವರನ್ನು ಭೇಟಿಯಾಗಿ ಗ್ರಾಮಸಭೆಯನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸುವಂತೆ ಮನವಿ ಪತ್ರ ಸಲ್ಲಿಸಲಾಯಿತು.

ಗ್ರಾಮಸಭೆ ಎಂಬುದು ಗ್ರಾಮಸ್ಥರ ಸಮಸ್ಯೆಗಳನ್ನು ನೇರವಾಗಿ ಚರ್ಚಿಸಿ, ಗ್ರಾಮದ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸುವ ಪ್ರಮುಖ ವೇದಿಕೆಯಾಗಿರುವುದರಿಂದ, ಗ್ರಾಮಸಭೆಯ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು PDO ಅವರಿಗೆ ಮನವಿ ಮಾಡಲಾಯಿತು.

ಅದರಂತೆ ಗ್ರಾಮಸಭೆಯ ದಿನಾಂಕ, ಸಮಯ ಹಾಗೂ ಸ್ಥಳದ ಮಾಹಿತಿಯನ್ನು ಟಾಂಟಾಂ/ಧ್ವನಿವರ್ಧಕದ ಮೂಲಕ ಗ್ರಾಮದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡುವುದರ ಜೊತೆಗೆ, ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಅರ್ಹ ಫಲಾನುಭವಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸಭೆಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸುವಂತೆ ತಿಳಿಸಲಾಯಿತು.

ಗ್ರಾಮದಲ್ಲಿಯೇ ಉದ್ಯೋಗ ಸೃಷ್ಟಿಗೆ ಒತ್ತು

ಇದೇ ಸಂದರ್ಭದಲ್ಲಿ ಮನರೇಗಾ (MGNREGA) ಯೋಜನೆಯಡಿ ಗ್ರಾಮದ ಅರ್ಹ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವಂತೆ ಮನವಿ ಮಾಡಲಾಯಿತು.

ಗ್ರಾಮಸ್ಥರು ಉದ್ಯೋಗಕ್ಕಾಗಿ ಅನಿವಾರ್ಯವಾಗಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗದಂತೆ, ಸರ್ಕಾರದ ಉದ್ಯೋಗ ಖಾತರಿ ಯೋಜನೆಯಡಿ ಲಭ್ಯವಿರುವ ಕೆಲಸಗಳನ್ನು ಸಮರ್ಪಕವಾಗಿ ಗುರುತಿಸಿ, ಅರ್ಹರಿಗೆ ನಿಯಮಾನುಸಾರ ಉದ್ಯೋಗ ಒದಗಿಸಬೇಕು ಎಂದು ತಿಳಿಸಲಾಯಿತು.

ಪ್ರಸ್ತುತ ಬತ್ತದ ನಾಟಿ ಕಾರ್ಯಕ್ಕೆ ಅಗತ್ಯವಿರುವ ನೀರಿನ ಸಮಸ್ಯೆಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೃಷಿ ಕೆಲಸಗಳು ಲಭ್ಯವಿಲ್ಲದ ಅವಧಿಯಲ್ಲಿ ಗ್ರಾಮಸ್ಥರಿಗೆ ಮನರೇಗಾ ಸೇರಿದಂತೆ ಇತರೆ ಸರ್ಕಾರಿ ಯೋಜನೆಗಳ ಮೂಲಕ ಉದ್ಯೋಗ ಒದಗಿಸಿ, ಗ್ರಾಮದಲ್ಲಿಯೇ ಆದಾಯದ ಅವಕಾಶಗಳನ್ನು ಸೃಷ್ಟಿಸುವುದು ಅಗತ್ಯವಾಗಿದೆ ಎಂದು ಮನವಿ ಮಾಡಲಾಯಿತು.

ಗ್ರಾಮದಲ್ಲಿಯೇ ಉದ್ಯೋಗ ದೊರೆತರೆ ಗ್ರಾಮಸ್ಥರ ಆರ್ಥಿಕ ಸ್ಥಿತಿ ಸುಧಾರಿಸುವುದರ ಜೊತೆಗೆ, ಗುಳೆ ಹೋಗುವುದನ್ನು ತಡೆಯಲು ಹಾಗೂ ಗ್ರಾಮದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು PDO ಅವರ ಗಮನಕ್ಕೆ ತರಲಾಯಿತು.

ಇತರೆ ಗ್ರಾಮಾಭಿವೃದ್ಧಿ ವಿಚಾರಗಳ ಚರ್ಚೆ

ಇದರ ಜೊತೆಗೆ ನವಿಲೇಹಾಳ ಗ್ರಾಮದ ವಿವಿಧ ಅಭಿವೃದ್ಧಿ ಸಮಸ್ಯೆಗಳು, ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು, ಉದ್ಯೋಗಾವಕಾಶಗಳು, ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು PDO ಅವರೊಂದಿಗೆ ಚರ್ಚಿಸಲಾಯಿತು.

ಗ್ರಾಮಸ್ಥರಿಗೆ ಸರ್ಕಾರದ ಯೋಜನೆಗಳ ಪ್ರಯೋಜನಗಳು ಸಮರ್ಪಕವಾಗಿ ತಲುಪುವಂತೆ ಪಾರದರ್ಶಕವಾಗಿ ಹಾಗೂ ನಿಯಮಾನುಸಾರ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಲಾಯಿತು.

ಗ್ರಾಮಸಭೆಯಲ್ಲಿ ಸಾರ್ವಜನಿಕರ ಹೆಚ್ಚಿನ ಭಾಗವಹಿಸುವಿಕೆ, ಸ್ಥಳೀಯ ಉದ್ಯೋಗ ಸೃಷ್ಟಿ ಹಾಗೂ ಗ್ರಾಮಾಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಮೂಲಕ ನವಿಲೇಹಾಳ ಗ್ರಾಮವನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.

“ಗ್ರಾಮದ ಅಭಿವೃದ್ಧಿ ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಒಗ್ಗೂಡಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಗ್ರ ಗ್ರಾಮಾಭಿವೃದ್ಧಿ ಸಾಧ್ಯ.”

ಗ್ರಾಮದ ಜನರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ನವಿಲೇಹಾಳ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ (ರಿ.) ನಿರಂತರವಾಗಿ ಜನಪರವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ದಾವಣಗೆರೆ ಜಿಲ್ಲಾಧ್ಯಕ್ಷರಾದ ಜಾಫರ್ ರವರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ಅಂತರಂಗ

ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು

Published

on

~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ

ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.

ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.

 

ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.

ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

Continue Reading

ದಿನದ ಸುದ್ದಿ

ನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್

Published

on

ಸುದ್ದಿದಿನ,ದಾವಣಗೆರೆ: “ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾವು ಮುಖ್ಯಮಂತ್ರಿಯಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.

ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು, ನಾನು ಡಿ.ಕೆ ಶಿವಕುಮಾರ್‌ ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂದಿದ್ದಾರೆ.

ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

“ನಾನು ಮುಖ್ಯಮಂತ್ರಿ ಅಲ್ಲ. ಆದರೆ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಮುಖ್ಯಮಂತ್ರಿಯಂತೆ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ನನ್ನ ಮೊದಲ ಕರ್ತವ್ಯವಾಗಿದೆ. ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ,” ಎಂದು ಅವರು ಹೇಳಿದರು.

ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಇನ್ನೂ ಅನೇಕ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ ಎಂದರು.

“ಜನಪ್ರತಿನಿಧಿಯಾಗಿ ಚುನಾಯಿತರಾದ ಬಳಿಕ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ತರುವ ಪ್ರಯತ್ನ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆಗಳು, ರಸ್ತೆ ಅಭಿವೃದ್ಧಿ, ಶಾಲೆಗಳ ಮೂಲಸೌಕರ್ಯ ಸುಧಾರಣೆ ಸೇರಿದಂತೆ ಹಲವು ಕಾಮಗಾರಿಗಳಿಗೆ ವೇಗ ನೀಡಲಾಗಿದೆ,” ಎಂದು ಹೇಳಿದರು.

ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ನೀರಾವರಿ ಹಾಗೂ ರೈತರಿಗೆ ಅನುಕೂಲಕರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಸರ್ಕಾರದ ಅಭಿವೃದ್ಧಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಅರ್ಹ ವ್ಯಕ್ತಿ ಯೋಜನೆಯಿಂದ ವಂಚಿತರಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದರು.

ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಟೀಕೆಗಳು ಪ್ರಜಾಪ್ರಭುತ್ವದ ಭಾಗ. ಆದರೆ ಅಭಿವೃದ್ಧಿಯೇ ನಮ್ಮ ಉತ್ತರ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದೇ ನಮ್ಮ ಗುರಿಯಾಗಿದೆ,” ಎಂದರು.

ಕ್ಷೇತ್ರದ ಜನರು ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಸಂಪರ್ಕಿಸಬಹುದು. ಜನಸೇವೆಗಾಗಿ ತಮ್ಮ ಕಚೇರಿ ಸದಾ ತೆರೆದಿರುತ್ತದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending