Connect with us

ದಿನದ ಸುದ್ದಿ

ಕೇಂದ್ರ ಬಜೆಟ್ | ಕೆಲವು ಕುತೂಹಲಕರ ಅಂಕಿಅಂಶಗಳು ಮತ್ತು ನಮ್ಮ ದೇಶದ ರಿಪೋರ್ಟ್ ಕಾರ್ಡ್..!

Published

on

  • ವಿವೇಕಾನಂದ. ಹೆಚ್. ಕೆ

ಇದು ಪಕ್ಷಾತೀವಾಗಿ ದೇಶದ ವಾಸ್ತವ ಪರಿಸ್ಥಿತಿ.
ಭಾರತ ಸರ್ಕಾರದ ಬಳಿ ಇರುವ ಚಿನ್ನದ ಸಂಗ್ರಹ ಸುಮಾರು 600 ಟನ್.ಅಮೆರಿಕ ಸರ್ಕಾರದ ಬಳಿ ಇರುವ ಚಿನ್ನದ ಸಂಗ್ರಹ ಸುಮಾರು 6000 ಟನ್.
ಭಾರತ ಇಲ್ಲಿಯವರೆಗೆ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಗೆದ್ದ ಒಟ್ಟು ಪದಕಗಳು ಸುಮಾರು 28.ಅಮೆರಿಕ ಗೆದ್ದ ಒಟ್ಟು ಪದಕಗಳು ಸುಮಾರು 2250.

ಭಾರತದ ಒಟ್ಟು ಬಜೆಟ್ ಗಾತ್ರ ಸುಮಾರು 30 ಲಕ್ಷ ಕೋಟಿ.ಅಮೆರಿಕದ ಬಜೆಟ್ ಗಾತ್ರ ಸುಮಾರು 375 ಲಕ್ಷ ಕೋಟಿ.ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ಚೀನಾದ ಬಜೆಟ್ ಸುಮಾರು 100 ಲಕ್ಷ ಕೋಟಿ.ಅಮೆರಿಕದ ರಕ್ಷಣಾ ಬಜೆಟ್ ಸುಮಾರು 150 ಲಕ್ಷ ಕೋಟಿ.ಭಾರತದ ರಕ್ಷಣಾ ಬಜೆಟ್ ಸುಮಾರು ‌6/8 ಲಕ್ಷ ಕೋಟಿ.

ಭಾರತದ ಜನಸಂಖ್ಯೆ ಸುಮಾರು 128 ಕೋಟಿ.
ಅಮೆರಿಕದ ಜನಸಂಖ್ಯೆ ಸುಮಾರು 32 ಕೋಟಿ.
ವಿಸ್ತೀರ್ಣದಲ್ಲಿಯೂ ಅಮೆರಿಕ ಭಾರತಕ್ಕಿಂತ ಬಹಳ ದೊಡ್ಡದಾಗಿದೆ.ತಲಾ ಆದಾಯದ ವ್ಯತ್ಯಾಸವಂತೂ ಅಜಗಜಾಂತರವಿದೆ.ಭಾರತದ ನಿಜವಾದ ಆದಾಯ 22 ಲಕ್ಷ ಕೋಟಿಗಳು ಮಾತ್ರ. ಉಳಿದ ‌8 ಲಕ್ಷ ಸಾಲ ಮತ್ತು ಇತರ ಮೂಲಗಳು.ಅಂದರೆ ನಮ್ಮ ಈಗಿನ ಸ್ಥಿತಿ ಮತ್ತು ಸಾಗಬೇಕಾದ ಹಾದಿಯ ಒಂದು ಕಲ್ಪನೆ ಮಾಡಿಕೊಳ್ಳಿ.

ಇಲ್ಲಿ ಇನ್ನೂ ಒಂದು ಮುಖ್ಯ ವಿಷಯವಿದೆ. ಅಮೆರಿಕ ಬಜೆಟ್ ನ ಬಹುಪಾಲು ಸದುಪಯೋಗವಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಭ್ರಷ್ಟಾಚಾರ ತುಂಬಾ ಇರುವುದರಿಂದ ಇರುವ ಹಣದ ಬಹುಪಾಲು ದುರುಪಯೋಗವಾಗುತ್ತದೆ ಅಥವಾ ವ್ಯರ್ಥವಾಗುತ್ತದೆ. ಇದು ಮತ್ತೊಂದು ಹೊಡೆತ.

ಬಜೆಟ್ ಗಳು ಮತ್ತು ನಮ್ಮ ದೇಶದ ಅಭಿವೃದ್ಧಿ

ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಸ್ವಾತಂತ್ರ್ಯ ನಂತರ ಇಲ್ಲಿಯವರೆಗೂ ಸುಮಾರು 70 ಕ್ಕಿಂತ ಹೆಚ್ಚು ವಾರ್ಷಿಕ ಬಜೆಟ್ ಗಳನ್ನು ಮಂಡಿಸಿವೆ. ಪಂಚವಾರ್ಷಿಕ ಯೋಜನೆಗಳು ಮತ್ತು ಅದನ್ನು ಮೇಲ್ವಿಚಾರಣೆ ಮಾಡುವ ನೀತಿ ಆಯೋಗ ಸಹ ಇದೆ. ಅಪಾರ ಪ್ರಮಾಣದ ಎಲ್ಲಾ ದರ್ಜೆಯ ಆಡಳಿತ ಯಂತ್ರ ಸಹ ಕೆಲಸ ಮಾಡುತ್ತಲೇ ಇದೆ.

ಯಾವ ಸರ್ಕಾರಗಳು ಸಹ ಸಾಮಾನ್ಯವಾಗಿ ಜನರಿಗೆ ತೊಂದರೆ ಕೊಡುವ ಅಥವಾ ಜನರನ್ನು ನಾಶ ಮಾಡುವ ಯೋಜನೆಗಳನ್ನು ರೂಪಿಸುವುದಿಲ್ಲ. ಬಹಳ ಜನರಿಗೆ ಒಳ್ಳೆಯದಾಗಲಿ ಎಂಬ ಆಶಯವನ್ನೇ ಹೊಂದಿರುತ್ತವೆ.

1950 ಮತ್ತು 2020 ರ ನಡುವೆ ಭಾರತದ ಅಭಿವೃದ್ಧಿ ಸುಮಾರಾಗಿ ಆಗಿದೆ. ವಿಶ್ವ ಸಮುದಾಯ ಕೂಡಾ ತಂತ್ರಜ್ಞಾನದ ಸಹಾಯದಿಂದ ಪ್ರಗತಿಯ ಪಥದಲ್ಲಿದೆ.

ಭಾರತದ ಮಟ್ಟಿಗೆ‌ ಅಭಿವೃದ್ಧಿ ಸಮಾನಾಂತರವಾಗಿಲ್ಲ ಮತ್ತು ಸಮಾಧಾನಕರವಾಗಿಲ್ಲ. ದೇಶದ ಶೇಕಡಾ 50% ಗೂ ಹೆಚ್ಚು ಜನ ತಾವು ಇಷ್ಟಪಟ್ಟ ದೈನಂದಿನ ಊಟ ಬಟ್ಟೆ ವಾಸ ಮಕ್ಕಳ ಯೋಗಕ್ಷೇಮ ಮತ್ತು ಸಾಧಾರಣ ಆರೋಗ್ಯ ವ್ಯವಸ್ಥೆ ಮಾಡಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ.

ಇದನ್ನು ನಾವು ಪಕ್ಷಾತೀತವಾಗಿ ಮತ್ತು ನಿಷ್ಪಕ್ಷಪಾತವಾಗಿ ಭಾರತದ ನಿಜವಾದ ಹಿತಾಸಕ್ತಿಯಿಂದ ನೋಡಬೇಕು. ಯಾವುದೋ ಪಕ್ಷದ ವಕ್ತಾರರಂತೆ ಒಬ್ಬರಿಗೊಬ್ಬರು ಆಪಾದನೆ ಮಾಡುತ್ತಾ ಕೆಸರೆರಚಾಟ ಮಾಡಿದರೆ ಸತ್ಯ ಮತ್ತು ವಾಸ್ತವ ಮರೆಯಾಗಿ ಕೇವಲ ಒಣ ಚರ್ಚೆ ಮತ್ತು ಅಂಕಿಅಂಶಗಳು ಮಹತ್ವ ಪಡೆಯುತ್ತವೆ.

ಸರ್ಕಾರ ಘೋಷಿಸುವ ಯಾವುದೇ ಯೋಜನೆಗಳು ಜಾರಿಯಾಗುವುದು ನಮ್ಮ ಸರ್ಕಾರಿ ಆಡಳಿತ ಯಂತ್ರದ ಮುಖಾಂತರ. ಅದು ಈಗಾಗಲೇ ಕಿಲುಬು ಹಿಡಿದಿದೆ. ಅದನ್ನು ಸರಿ ಮಾಡದೆ ಯಾವ ಯೋಜನೆ ಘೋಷಿಸಿದರು ಸಂಪೂರ್ಣ ಉಪಯೋಗ ಆಗುವುದಿಲ್ಲ. ಅದನ್ನು ಸರಿ ದಾರಿಗೆ ತರಲು ರಾಜಕಾರಣಿಗಳು ಹೆಚ್ಚಿನ ಮಹತ್ವ ನೀಡುತ್ತಿಲ್ಲ.

ಇಲ್ಲಿ ಇನ್ನೊಂದು ಆಶ್ಚರ್ಯಕರ ವಿಷಯವಿದೆ. ಆದಾಯ ತೆರಿಗೆ ವಿನಾಯಿತಿ, ವಸ್ತು ಮತ್ತು ಸೇವೆಗಳ ತೆರಿಗೆ ಹೆಚ್ಚಳ, ಸರ್ಕಾರಿ ನೌಕರರ ಸಂಬಳ ಹೆಚ್ಚಳ ಇನ್ನೂ ಮುಂತಾದ ಯೋಜನೆಗಳು ಚಾಚೂ ತಪ್ಪದೆ ಅಥವಾ ಅದಕ್ಕಿಂತ ಹೆಚ್ಚಾಗಿಯೇ ಸಂಪೂರ್ಣ ಜಾರಿಯಾಗುತ್ತದೆ. ಕಾರಣ ಈ ಯೋಜನೆಗಳು ಈಗಾಗಲೇ ವಿದ್ಯಾವಂತರಾಗಿರುವ ಮತ್ತು ವ್ಯವಸ್ಥೆಯ ಮೇಲೆ ನಿಯಂತ್ರಣ ಹೊಂದಿರುವ ಜನಗಳು ಇವುಗಳನ್ನು ಸ್ವತಃ ಅಥವಾ ಮಧ್ಯವರ್ತಿಗಳ ಮುಖಾಂತರ ಜಾರಿಯಾದ ಮಧ್ಯರಾತ್ರಿಯಿಂದಲೇ ಲಾಭ ಪಡೆದುಕೊಳ್ಳುತ್ತಾರೆ.

ಆದರೆ, ಇನ್ನೂ ಕೆಲವು ‌ಯೋಜನೆಗಳು ಇವೆ‌. ಉದಾಹರಣೆಗೆ ಗರೀಬೀ ಹಠವೋ, ನರೇಗಾ, ಆಹಾರ ಭದ್ರತೆ, ಬೇಟಿ ಬಚಾವೋ ಬೇಟಿ ಪಡಾವೋ , ಸ್ವಚ್ಛ ಭಾರತ್, ಆಯುಷ್ಮಾನ್ ಮುಂತಾದ ಯೋಜನೆಗಳು ಅದರ ನಿಜ ರೂಪದಲ್ಲಿ ಜನರಿಗೆ ತಲುಪುವುದು ತುಂಬಾ ಕಷ್ಟವಿದೆ.

ಜನರಲ್ಲಿ ಇರುವ ಅಜ್ಞಾನ ಬಡತನ ದಾಖಲೆ ಮತ್ತು ಮಾಹಿತಿಯ ಕೊರತೆ, ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ, ರಾಜಕಾರಣಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷತನ ಮತ್ತು ಸೋಮಾರಿತನ, ಅಸೂಯೆ ಮುಂತಾದ ಕಾರಣಗಳು ಇವುಗಳನ್ನು ಜಾರಿಯಾಗಲು ಬಿಡುವುದಿಲ್ಲ.

ಪಾರ್ಲಿಮೆಂಟ್ ಅಥವಾ ವಿಧಾನಸೌದದಲ್ಲಿ ಅಂಕಿಅಂಶಗಳ ಸರ್ಕಸ್ ಮಾಡುತ್ತಾ ಬಜೆಟ್ ಮಂಡಿಸುವುದು ಮತ್ತು ಅದರ ಪರ ವಿರೋಧದ ಚರ್ಚೆಗಳಿಗಿಂತ,ಅದರ ಅನುಷ್ಠಾನ ಮತ್ತು ವಾಸ್ತವ ಫಲಿತಾಂಶಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದರೆ ನಿಜವಾದ ಮತ್ತು ಸಮಾನವಾದ ಅಭಿವೃದ್ಧಿ ಸಾಧ್ಯ. ಇಲ್ಲದಿದ್ದರೆ ಪ್ರತಿ ಸರ್ಕಾರಗಳ ಪ್ರತಿ ಬಜೆಟ್ ಕೇವಲ ಸಾಂಕೇತಿಕ ಶಾಸ್ತ್ರವಾಗುತ್ತದೆ. ಚುನಾವಣಾ ರಾಜಕೀಯದ ನಾಟಕಗಳಾಗುತ್ತವೆ. ಇದು ಎಲ್ಲಾ ಪಕ್ಷಗಳ ಎಲ್ಲಾ ಸರ್ಕಾರಗಳಿಗೂ ಸಮನಾಗಿ ಅನ್ವಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ

Published

on

ಸುದ್ದಿದಿನ,ದಾವಣಗೆರೆ: ದೇಶದ ಪ್ರಮುಖ ಆರೋಗ್ಯ ವಿಮೆ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶುರನ್ಸ್ ಕಂಪನಿ ಲಿಮಿಟೆಡ್, ಕರ್ನಾಟಕದಲ್ಲಿ ಮಳೆಗಾಲದಲ್ಲಿ ಜನರನ್ನು ಕಾಡುವ ವಿವಿಧ ಬಗೆಯ ಕಾಯಿಲೆಗಳ ಚಿಕಿತ್ಸಾ ಸೌಲಭ್ಯವನ್ನು ವಿಸ್ತರಿಸಿದೆ.

ಈ ಉಪಕ್ರಮದ ಮೂಲಕ, ಪಾಲಿಸಿದಾರರಿಗೆ ‘ಟಾಕ್ ಟು ಸ್ಟಾರ್’ ಸೇವೆ ಹಾಗೂ ಮನೆ ಬಾಗಿಲಿನ ಆರೋಗ್ಯ ಸೇವೆ ಕಲ್ಪಿಸಿಕೊಡಲಾಗುತ್ತಿದೆ. ಇದರ ನೆರವಿನಿಂದ ಆರಂಭಿಕ ಹಂತದಲ್ಲೇ ಅಗತ್ಯ ವೈದ್ಯಕೀಯ ಸಲಹೆ ಮತ್ತು ಪರೀಕ್ಷೆಗಳ ನೆರವು ಒದಗಿಸಲಾಗುತ್ತಿದೆ. ಜೊತೆಗೆ, ಸಾರ್ವಜನಿಕರು ಸ್ಟಾರ್ ಹೆಲ್ತ್ ಕಸ್ಟಮರ್ ಆ್ಯಪ್ ಮೂಲಕ 24*7 ಉಚಿತ ವರ್ಚುವಲ್ ವೈದ್ಯರ ಸಮಾಲೋಚನೆ ಪಡೆಯುವ ಅವಕಾಶವನ್ನೂ ಕಲ್ಪಿಸಲಾಗಿದೆ ಎಂದು ಸ್ಟಾರ್ ಹೆಲ್ತ್ ಇನ್ಶುರನ್ಸ್ ಕರ್ನಾಟಕ ವಹಿವಾಟು ವಿಭಾಗದ ಮುಖ್ಯಸ್ಥ ಆದಿತ್ಯ ಓಂಪ್ರಕಾಶ್ ಬಿಯಾನಿ ಹೇಳಿದ್ದಾರೆ.

ಪಾಲಿಸಿದಾರರಿಗೆ ಅನಿಯಮಿತ ಟೆಲಿ ಸಮಾಲೋಚನೆಯಡಿ ಪಾಲಿಸಿ ಅವಧಿಯಲ್ಲಿ ಎಷ್ಟೇ ಬಾರಿ ಬೇಕಾದರೂ ದೂರವಾಣಿ ಅಥವಾ ಆನ್‍ಲೈನ್ ಮೂಲಕ ವೈದ್ಯರ ಸಲಹೆ ಪಡೆಯಬಹುದು. ಜ್ವರ ಅಥವಾ ಸೋಂಕಿನ ಆರಂಭಿಕ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯಕೀಯ ಸಲಹೆ ಪಡೆಯಲು ಇದು ನೆರವಾಗುತ್ತದೆ. ಸಾರ್ವಜನಿಕರಿಗೆ ಉಚಿತ ವರ್ಚುವಲ್ ವೈದ್ಯರ ಸಮಾಲೋಚನೆಯೂ ಇರುತ್ತದೆ.

ಅಂತೆಯೇ ಪಾಲಿಸಿದಾರರು ‘ಟಾಕ್ ಟು ಸ್ಟಾರ್’ ಸೇವೆಯಡಿ 7200 222 333 ಸಂಖ್ಯೆಗೆ ಕರೆ ಮಾಡಿ ಮಾರ್ಗದರ್ಶನ ಪಡೆಯಬಹುದು. ನಗದುರಹಿತ ಮನೆ ಬಾಗಿಲಿನ ಆರೋಗ್ಯ ಸೇವೆಯಡಿ ಅರ್ಹ ಪಾಲಿಸಿದಾರರಿಗೆ ಸ್ಟಾರ್ ಹೆಲ್ತ್ ಕ್ಯಾಷ್‍ಲೆಸ್- ಸೌಲಭ್ಯದ ಮೂಲಕ ಮನೆ ಬಾಗಿಲಿಗೇ ಆರೋಗ್ಯ ಸೇವೆ ಒದಗಿಸಲಾಗುತ್ತದೆ. ವೈದ್ಯರ ಸಲಹೆಯಂತೆ ನಸಿರ್ಂಗ್ ಸೇವೆ, ರಕ್ತ ಪರೀಕ್ಷೆ, ಆರೋಗ್ಯ ಮೇಲ್ವಿಚಾರಣೆ, ಐವಿ ಫ್ಲೂಯಿಡ್ಸ್ ಹಾಗೂ ಚುಚ್ಚುಮದ್ದು ಸೇರಿದಂತೆ ಅಗತ್ಯ ಚಿಕಿತ್ಸೆಗಳನ್ನು ಮನೆಯಲ್ಲೇ ನೀಡಲಾಗುತ್ತದೆ ಎಂದು ಪ್ರಕಟಣೆ ಹೇಳಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಶೇ. 56 ರಷ್ಟು ಗಣತಿ ನಮೂನೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಸ್.ಐ.ಆರ್.ಕುರಿತು ಮಾಹಿತಿ ನೀಡಲು ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲೆಯ ಎಲ್ಲಾ ಬಿಎಲ್‌ಒಗಳು ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಅರ್ಜಿಗಳನ್ನು ವಿತರಿಸಿ, ಸ್ವೀಕರಿಸುತ್ತಿದ್ದಾರೆ. ಶೇ. 91 ರಷ್ಟು ಜನರಿಗೆ ಫಾರಂ ಭರ್ತಿ ಮಾಡಲು ತಿಳಿಯದ ಕಾರಣ ಬಿಎಲ್‌ಒಗಳೇ ಸಾರ್ವಜನಿಕರಿಗೆ ಸಹಾಯ ಮಾಡುತ್ತಿದ್ದಾರೆ ಎಂದರು.

ಸಾರ್ವಜನಿಕರ ಅನುಕೂಲಕ್ಕಾಗಿ ದಾವಣಗೆರೆ ನಗರದಲ್ಲಿ 45 ಕೇಂದ್ರಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ತಾಲೂಕು ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಯಾವುದೇ ಅನುಮಾನಗಳಿದ್ದಲ್ಲಿ ಸಾರ್ವಜನಿಕರು ಬಿಎಲ್‌ಒಗಳನ್ನು ಅಥವಾ ಚುನಾವಣಾ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ನೋಡಲ್ ಅಧಿಕಾರಿಗಳು ಮತ್ತು ಸೂಪರ್‌ವೈಸರ್‌ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಸದ್ಯಕ್ಕೆ ಸಾರ್ವಜನಿಕರಿಂದ ಯಾವುದೇ ದಾಖಲೆಗಳನ್ನು ಸಂಗ್ರಹಿಸುತ್ತಿಲ್ಲ. ಆಗಸ್ಟ್ 7 ರ ನಂತರ ಯಾರು ಯಾವ ದಾಖಲೆಗಳನ್ನು ನೀಡಬೇಕು ಎಂಬುದನ್ನು ಸ್ಪಷ್ಟಪಡಿಸಲಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.

ವಿವಿಧ ತಾಂತ್ರಿಕ ಹಾಗೂ ನೈಜ ಕಾರಣಗಳಿಂದಾಗಿ ಒಟ್ಟು 17,499 ಮತದಾರರ ಗಣತಿ ನಮೂನೆಗಳು ವಾಪಸ್ ಬಂದಿಲ್ಲ. ಇದರಲ್ಲಿ ಪ್ರಮುಖವಾಗಿ 7,487 ಮರಣ ಪ್ರಕರಣಗಳು , 263 ವಿಳಾಸ ಪತ್ತೆಯಾಗದವರು , 6,677 ಶಾಶ್ವತವಾಗಿ ಸ್ಥಳಾಂತರಗೊಂಡವರು , 2,994 ದ್ವಿಪ್ರತಿ ದಾಖಲಾತಿ (Double Entry) ಹಾಗೂ 78 ಇತರೆ ಕಾರಣ ಎಂದು ತಿಳಿಸಿದರು.

1,200 ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ಗುರುತಿಸಿ, ಅಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮತದಾರರ ಪರಿಷ್ಕರಣೆಯ ಕಾರ್ಯವಿಧಾನದ ಕುರಿತು ವಿವಿಧ ರಾಜಕೀಯ ಪಕ್ಷಗಳೊಂದಿಗೆ ನಡೆದ ಸಭೆ ಯಲ್ಲಿ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸುವ ಕುರಿತು ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಜುಲೈ 29ರ ವರೆಗೆ ಮಾತ್ರ ಕಾಲಾವಕಾಶ ಇರುವುದರಿಂದ ಬಿಎಲ್‌ಒಗಳು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರು ಅವರೊಂದಿಗೆ ಶಾಂತಿಯುತವಾಗಿ ವರ್ತಿಸಿ, ಸೂಕ್ತ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಒಂದು ವೇಳೆ ದ್ವಿಪ್ರತಿ (Double Entry) ಸೇರಿದಂತೆ ಯಾವುದೇ ತಪ್ಪು ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ನೀಡಿದಲ್ಲಿ, ಅಂತವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್‌, ಮಹಾನಗರ ಪಾಲಿಕೆ ಆಯುಕ್ತ ಡಾ.ಮಹಾಂತೇಶ್‌ ಚುನಾವಣಾ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ಗೌಡ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ: ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ವಿಭಾಗ-2ರ ವ್ಯಾಪ್ತಿಗೆ 2023-24 ರಿಂದ 2025-26 ರವರೆಗೆ ಸ್ಥಳೀಯ ಶಾಸಕರ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ಅನುದಾನಗಳ ಖರ್ಚು-ವೆಚ್ಚವನ್ನು ಇಲಾಖಾ ತನಿಖೆ ನಡೆಸುವಂತೆ ದೂರು ನೀಡಿ 5 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷö್ಯ ತೋರಿದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್ ಗೌಡ ಎಂ.ಬಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತಾಗೆ ದೂರು ಸಲ್ಲಿಸಿದ್ದಾರೆ.

ದಾವಣಗೆರೆ ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ವಿಭಾಗ-2 ರ ವ್ಯಾಪ್ತಿಗೆ ಒಳಪಡುವ ಮಾಯಕೊಂಡ, ಹೊನ್ನಾಳಿ, ಚನ್ನಗಿರಿ ಉಪ ವಿಭಾಗಗಳು ಹಾಗೂ ವಿಭಾಗ-2ರ ಕಛೇರಿಯ ವ್ಯಾಪ್ತಿಗೆ 2023-24 ರಿಂದ 2025-26ನೇ ಸಾಲಿನ ಅವಧಿಯಲ್ಲಿ ಬಿಡುಗಡೆಯಾಗಿರುವ ಸ್ಥಳೀಯ ಶಾಸಕರ ಅನುದಾನದಲ್ಲಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಹಣವನ್ನು ಇಲಾಖೆಯ ವಾಹನಗಳ ಇಂಧನ ವೆಚ್ಚಕ್ಕೆಂದು ನಿಯಮಬಾಹಿರವಾಗಿ ದುರ್ಬಳಕೆ ಮಾಡಿಕೊಂಡಿರುವುದು ಮಾತ್ರವಲ್ಲದೆ, ಬಹುತೇಕ ಕಡೆಗಳಲ್ಲಿ ಯಾವುದೇ ಕಾಮಗಾರಿ ನಡೆಸದೆ ನಕಲಿ ಕಡತ ಸೃಷ್ಟಿಸಿ ಸ್ಥಳೀಯ ಶಾಸಕರ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ವಿಷಯವು ಅಧಿಕೃತ ಮೂಲಗಳಿಂದ ತಿಳಿದು ಬಂದ ಕಾರಣ ಮಾಹಿತಿಹಕ್ಕು ಅಡಿಯಲ್ಲಿ ಹಲವಾರು ಭಾರಿ ಅರ್ಜಿ ಸಲ್ಲಿಸಿ, ಮಾಹಿತಿ ಕೋರಿದಾಗಲೂ ನಿಯಮಬಾಹಿರವಾಗಿ ಹಿಂಬರಹ ನೀಡುತ್ತ ಬಂದಿರುತ್ತಾರೆ.

ಆದ ಕಾರಣ ದಾವಣಗೆರೆ ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ವಿಭಾಗ-2ರ ವ್ಯಾಪ್ತಿಗೆ 2023-24 ರಿಂದ 2025-26 ರವರೆಗೆ ಸ್ಥಳೀಯ ಶಾಸಕರ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ಅನುದಾನಗಳ ಖರ್ಚು-ವೆಚ್ಚವನ್ನು ಇಲಾಖಾ ತನಿಖೆಗೆ ಒಳಪಡಿಸಿ, ಕೈಗೊಂಡ ಕ್ರಮದ ವರದಿಯನ್ನು ನೀಡುವಂತೆ ವ್ಯವಸ್ಥಾಪಕ ನಿರ್ದೇಶಕರು, ಕೆ.ಆರ್.ಐ.ಡಿ.ಎಲ್, ಬೆಂಗಳೂರು ಇವರಿಗೆ ದಿನಾಂಕ: 06-02-2026 ರಂದು ದೂರು ನೀಡಲಾಗಿತ್ತು. ಆದರೆ ದೂರು ನೀಡಿ 2 ತಿಂಗಳು ಕಳೆದರೂ ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ದಿನಾಂಕ: 21-04-2026 ರಂದು ಜ್ಞಾಪನ ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ 2 ತಿಂಗಳು ಕಳೆದರೂ ಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್‌ಗೌಡ ಎಂ.ಬಿ ಇವರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.

ಆದ ಕಾರಣ ನಿರ್ಲಕ್ಷö್ಯ ತೋರಿದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್‌ಗೌಡ ಎಂ.ಬಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತ ಕಾಯ್ದೆಯ ಅನುಸಾರ ಪ್ರಕರಣ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ಸಲ್ಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending