ಬಹಿರಂಗ
ಎಡಗೈ-ಬಲಗೈ, ಸ್ಪೃಶ್ಯ-ಅಸ್ಪೃಶ್ಯ ತಾರತಮ್ಯ..!
ಭಾರತದ ಜಾತಿ ವ್ಯವಸ್ಥೆ ಸೃಷ್ಟಿಸಿರುವ ಅಮಾನವೀಯ ಅಸ್ಪೃಶ್ಯತೆಯಲ್ಲಿ ಹೊಲೆಯ ಮತ್ತು ಮಾದಿಗ ಸಮುದಾಯಗಳು ಸಮಾನ ದುಃಖಿಗಳು. ಇಂದಿಗೂ ಶೂದ್ರ ಮತ್ತು ಹಿಂದೂ ಮೇಲ್ಜಾತಿಗಳು ಈ ಎರಡು ಸಮುದಾಯಗಳಿಗೆ ಸೇರಿದ ಜನರನ್ನು ಮನುಷ್ಯರೆಂದು ಪರಿಗಣಿಸುವುದಿಲ್ಲ. ಪಶ್ಚಿಮದ ದೇಶಗಳಲ್ಲಿ ಜನಾಂಗೀಯ ಬೇಧಕ್ಕೆ ಕಪ್ಪು ಜನರು ಹೇಗೆ ಗುರಿಯಾಗುತ್ತಿದ್ದಾರೆಯೋ ಅದೇ ರೀತಿ ನಮ್ಮಲ್ಲಿ ದಲಿತ ಜಾತಿಗಳಿಗೆ ಸೇರಿದ ಜನರು ದಿನ ನಿತ್ಯ ನಾನಾ ರೀತಿಯಲ್ಲಿ ಗುರಿಯಾಗುತ್ತಿದ್ದಾರೆ.
ಆದರೆ ಕೆಲವು ಸಂದರ್ಭಗಳಲ್ಲಿ ಈ ಎರಡು ದಲಿತ ಸಮುದಾಯಗಳು ಪರಸ್ಪರ ಸಂಘರ್ಷ ನಡೆಸುತ್ತವೆ. ಬ್ರಾಹ್ಮಣೀಯ ಜಾತಿ ವ್ಯವಸ್ಥೆಯ ಸಮರ್ಥನೆಗಾಗಿ ಕೆಲವರು ಈ ಸಮುದಾಯಗಳ ಸಂಘರ್ಷವನ್ನು ಉದಾಹರಣೆ ನೀಡುವುದೂ ಇದೆ. “ಬರೀ ಬ್ರಾಹ್ಮಣರು ತಾರತಮ್ಯ ಮಾಡುವುದಲ್ಲ, ಹೊಲೆಯರು ಮಾದಿಗರೂ ಸಹ ಕಿತ್ತಾಡುತ್ತಾರೆ ನೋಡಿ, ಜಾತಿ ತಾರತಮ್ಯ ಬಹಳ ಬಲವಾಗಿ ದಲಿತರಲ್ಲಿಯೇ ಇದೆ” ಎಂದು ಅವರು ವಾದಿಸುತ್ತಾರೆ.
ಮೊನ್ನೆ ಮೈಸೂರಿನಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಷಯದ ಕುರಿತು ಮಾಜಿ ಸಚಿವ, ದಲಿತ ಮುಖಂಡ ಶ್ರೀನಿವಾಸ ಪ್ರಸಾದ್ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಈ ಎಡಗೈ-ಬಲಗೈ ಸಮುದಾಯಗಳಿಗೆ ಸೇರಿದ ಕೆಲವರು ಪರಸ್ಪರ ಕಿತ್ತಾಡುತ್ತಿದ್ದಾರೆ. ಇದನ್ನು ವಿವೇಕ ಕಳೆದುಕೊಂಡ ನಡೆ ಎನ್ನದೇ ವಿಧಿಯಿಲ್ಲ. ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣದ ಕುರಿತು ನ್ಯಾಯಮೂರ್ತಿ ಸದಾಶಿವ ವರದಿಯನ್ನು ಬಹಿರಂಗಪಡಿಸಿ, ಅದರ ಕುರಿತು ಮುಕ್ತ ಚರ್ಚೆಗೆ ಅವಕಾಶವಾಗಿ ಸರ್ಕಾರವು ಸೂಕ್ತ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಎಡಗೈ ಬಲಗೈ ದಲಿತರು, ದಲಿತೇತರರು ಎಲ್ಲರೂ ಸಮಾಜದ ಹಿತದೃಷ್ಟಿಯಿಂದ ಸರ್ಕಾರವನ್ನು ಒತ್ತಾಯಿಸಬೇಕಾಗಿದೆ. ಇದು ಕೇವಲ ಪರಿಶಿಷ್ಟ ಜಾತಿಯ ಸಮಸ್ಯೆ ಅಲ್ಲ. ಇದು ಇಡೀ ಸಮಾಜಕ್ಕೆ ಸಂಬಂಧಿಸಿದ ಒಂದು ಸಮಸ್ಯೆ ಆಗಿರುವುದರಿಂದ ಈ ಬಗ್ಗೆ ಎಲ್ಲಾ ಪ್ರಜ್ಞಾವಂತರೂ ಆಲೋಚಿಸಬೇಕಾಗಿದೆ.
ಇಲ್ಲಿ ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕಿರುವ ಒಂದು ವಿಷಯವೆಂದರೆ ದಲಿತ ಸಮುದಾಯ ಎಡಗೈ ಬಲಗೈ ಎಂದು ವಿಭಜನೆಗೊಂಡಿದ್ದು ಯಾಕೆ ಎಂದು. ‘ಅವರವರೇ ಕಚ್ಚಾಡುತ್ತಾರೆ’ ಎಂದು ದೂರದಲ್ಲಿ ನಿಂತು ಬೊಟ್ಟು ಮಾಡುವ ಸಮಾಜದ ಪಾತ್ರ ಇದರಲ್ಲಿ ಇಲ್ಲವೇ? ಖಂಡಿತಾ ಇದೆ. ವಾಸ್ತವದಲ್ಲಿ ಹೊಲೆಯರು ಮತ್ತು ಮಾದಿಗರು ಎಡಗೈ ಮತ್ತು ಬಲಗೈ ಎಂದು ವಿಂಗಡಣೆಯಾದ್ದು ಆ ಜಾತಿಗಳ ಸ್ವಂತ ಇಚ್ಛೆಯಿಂದ ಆಗಿರಲಿಲ್ಲ. ಈ ಎಡಗೈ-ಬಲಗೈ ಜಾತಿ ವಿಭಜನೆಗೆ ದೊಡ್ಡ ಇತಿಹಾಸವೇ ಇದೆ. ಇದು ಕೇವಲ ಕರ್ನಾಟಕದಲ್ಲಿ ನಡೆದ ವಿದ್ಯಮಾನವಲ್ಲ ಹಾಗೂ ಕೇವಲ ಹೊಲೆಯ- ಮಾದಿಗರಿಗೆ ಮಾತ್ರ ಸಂಬಂಧಿಸಿದ ವಿದ್ಯಮಾನವೂ ಆಗಿರಲಿಲ್ಲ. ಚರಿತ್ರೆಯ ಗತಿಯಲ್ಲಿ ಇಡೀ ದಕ್ಷಿಣ ಭಾರತದಲ್ಲಿ ಸಂಭವಿಸಿದ ಜಾತಿ ವಿಂಗಡಣೆ ಇದಾಗಿತ್ತು. ಈ ವಿಂಗಡಣೆ ಮೂಲದಲ್ಲಿ ಯಾವಾಗ ಮತ್ತು ಹೇಗಾಯಿತು, ಏಕಾಯಿತು ಎಂಬ ಬಗ್ಗೆ ಖಚಿತ ಆಧಾರಗಳು ಸಿಕ್ಕಿಲ್ಲವಾದರೂ 11ನೇ ಶತಮಾನದಲ್ಲಿ ದಕ್ಷಿಣ ಭಾರತ ಆಳುತ್ತಿದ್ದ ಚೋಳರ ಕಾಲದಿಂದಲೂ ಎಡಗೈ-ಬಲಗೈ ವಿಭಜನೆಯ ಕುರಿತು ದಾಖಲೆಗಳು ಲಭ್ಯ ಇವೆ.
ಒಂದು ಅಧ್ಯಯನದ ಪ್ರಕಾರ ಕೃಷಿ ಆಧಾರಿತ ಜಾತಿಗಳು ಬಲಗೈ ಸಮೂಹದಲ್ಲಿಯೂ ಕರಕುಶಲ ಕರ್ಮಿ- ವ್ಯಾಪಾರಿ ಸಮುದಾಯಗಳು ಎಡಗೈ ಸಮೂಹದಲ್ಲಿಯೂ ಇದ್ದವು. ಇವುಗಳಿಗೆ ಕರ್ನಾಟಕದಲ್ಲಿ ಪಣಕಟ್ಟುಗಳು ಎಂದು ಕರೆಯಲಾಗುತ್ತಿತ್ತು. ಮೈಸೂರು ಗೆಝೆಟಿಯರ್ನಲ್ಲಿ ದಾಖಲಾಗಿರುವ ಪ್ರಕಾರ ಬಲಗೈ ಪಣಕಟ್ಟಿನಲ್ಲಿ 18 ಜಾತಿಗಳಿದ್ದು ಬಣಜಿಗ, ಒಕ್ಕಲಿಗ, ಗಾಣಿಗ, ಕುರುಬ ಮುಂತಾದ ಜಾತಿಗಳಿದ್ದವು. ಹಾಗೆಯೇ ಪಾಂಚಾಳ/ವಿಶ್ವಕರ್ಮ, ಅಕ್ಕಸಾಲಿಗ, ದೇವಾಂಗ, ಬೇಡ ಮೊದಲಾದ 14 ಜಾತಿಗಳು ಎಡಗೈ ಪಣಕಟ್ಟಿನಲ್ಲಿದ್ದವು. ಈ ಜಾತಿಗಳ ಉಪಜಾತಿಗಳೆಲ್ಲ ಸೇರಿ 98 ಜಾತಿಗಳಿದ್ದವು ಎನ್ನಲಾಗುತ್ತದೆ. ಪ್ರಮುಖ ವ್ಯಾಪಾರಿ ಸಮುದಾಯವಾಗಿದ್ದ ಜೈನ ಸಮುದಾಯ 13ನೇ ಶತಮಾನದವರೆಗೂ ಬಲಗೈ ಭಾಗವಾಗಿದ್ದು ನಂತರ ವಿಜಯನಗರದ ಅರಸರ ಕಾಲದಲ್ಲಿ ಎಡಗೈಗೆ ವರ್ಗಾವಣೆಯಾಯಿತು. ಈ ಪಣಕಟ್ಟುಗಳ ಇತಿಹಾಸ ನೋಡಿದರೆ ಮೊದಲಿನಿಂದಲೂ ಎರಡೂ ಪಣಕಟ್ಟುಗಳು ಪ್ರತ್ಯೇಕ ಚಿನ್ಹೆಗಳು, ಪ್ರತ್ಯೇಕ ನಡಾವಳಿ, ಸಂಪ್ರದಾಯಗಳನ್ನು ಅಳವಡಿಸಿಕೊಂಡಿವೆ. ಪರಸ್ಪರ ಪಣಕಟ್ಟುಗಳ ನಡುವೆ ತೀವ್ರತರದ ಸಂಘರ್ಷಗಳು ನಡೆದಿವೆ. 19ನೆಯ ಶತಮಾನದಲ್ಲಿ ಈ ಸಂಘರ್ಷಗಳು ನಡೆದಾಗ ಬ್ರಿಟಿಷರು ಹಳ್ಳಿಗಳನ್ನೇ ಎರಡು ಗುಂಪುಗಳಿಗೆ ವಿಭಜನೆ ಮಾಡಿದ್ದೂ ಇದೆ.
ಈ ಎಡಗೈ-ಬಲಗೈ ಪಣಕಟ್ಟುಗಳು ನಮ್ಮ ಸಮಾಜದ ಜಾತಿ ವ್ಯವಸ್ಥೆಯ ತಳಹದಿಯ ಮೇಲೆ ರೂಪುಗೊಂಡಿದ್ದ ವೃತ್ತಿ ಆಧಾರಿತ ವಿಭಜಿತ ಕೂಟಗಳಾಗಿದ್ದವು. ಈ ವಿಭಜನೆಯಲ್ಲಿ “ಅಸ್ಪೃಶ್ಯ ಸಮುದಾಯಗಳು” ಎಂದು ಪರಿಗಣಿಸಲಾಗಿದ್ದ ಹೊಲೆಯ ಸಮುದಾಯ ಬಲಗೈ ಪಣಕಟ್ಟಿನ ಅತ್ಯಂತ ಕೆಳಸ್ತರದಲ್ಲಿಯೂ ಮಾದಿಗ ಸಮುದಾಯ ಎಡಗೈ ಪಣಕಟ್ಟಿನ ಅತ್ಯಂತ ಕೆಳಸ್ತರದಲ್ಲಿಯೂ ಇಡಲ್ಪಟ್ಟಿದ್ದವು. ಮುಖ್ಯವಾಗಿ ಇಡೀ ಪಣಕಟ್ಟಿನ ನಿರ್ದೇಶನ ಮುಂದುವರಿದ ಜಾತಿಗಳಿಂದಲೇ ನಡೆಯುತ್ತಿತ್ತು. ಹೊಲೆಯ ಸಮುದಾಯಕ್ಕೆ ಬಲಗೈ ಪಣಕಟ್ಟಿನ ರಕ್ಷಣೆಯ ಹೊಣೆಯನ್ನೂ ಮಾದಿಗ ಸಮುದಾಯಕ್ಕೆ ಎಡಗೈ ಪಣಕಟ್ಟಿನ ರಕ್ಷಣೆಯ ಹೊಣೆಯನ್ನೂ ಹೊರಿಸಲಾಗಿತ್ತು. ಎರಡೂ ಪಣಕಟ್ಟುಗಳ ನಡುವೆ ಸಂಘರ್ಷ ಎದುರಾದರೆ ಹೊಡೆದಾಟ ಮಾತ್ರ ಹೊಲೆಯ ಮಾದಿಗರ ನಡುವೆ ನಡೆಯುತ್ತಿತ್ತು. ಇವೆರಡೂ ಜಾತಿಗಳ ನಡುವೆ ದ್ವೇಷವನ್ನು ಶಾಶ್ವತಗೊಳಿಸಲು ಹೊಲೆಯನ ಪತ್ನಿಯಾದವಳು ಎಡಗೈ ಗುಂಪಿನಲ್ಲಿಯೂ ಮಾದಿಗನ ಪತ್ನಿಯಾದವಳು ಬಲಗೈ ಗುಂಪಿನಲ್ಲಿಯೂ ಸೇರಿಸಲಾಗಿದ್ದ ಬಗ್ಗೆ ಸಿಂದ್ ಮಾದಿಗರ ಸಂಸ್ಕೃತಿ ಕೃತಿಯಲ್ಲಿ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದ್ದಾರೆ.
ಈ ಪಣಕಟ್ಟುಗಳ ಭಾಗವಾಗಿ ಬ್ರಾಹ್ಮಣ ಜಾತಿ ಇರಲಿಲ್ಲ. ಆದರೆ ಬಹುತೇಕ ರಾಜಮನೆತನಗಳನ್ನು ಬ್ರಾಹ್ಮಣ ಪುರೋಹಿತರೇ ನಿಯಂತ್ರಿಸುತ್ತಿದ್ದುದರಿಂದ ಈ ಪಣಕಟ್ಟುಗಳ ನಡಾವಳಿಗಳನ್ನು ಬ್ರಾಹ್ಮಣರು ಪರೋಕ್ಷವಾಗಿ ನಿಯಂತ್ರಿಸುತ್ತಿದ್ದುದಾಗಿ ಕಂಡು ಬರುತ್ತದೆ.
ರಾಜಶಾಹಿ ವ್ಯವಸ್ಥೆಯ ಅವಸಾನದೊಂದಿಗೆ 20ನೆ ಶತಮಾನದಲ್ಲಿ ಸೊ ಕಾಲ್ಡ್ ಮೇಲ್ಜಾತಿಗಳ ನಡುವೆ ಪಣಕಟ್ಟು ಬೇಧ ಕೊನೆಗೊಂಡಿತು. ಆದರೆ ಶತಮಾನಗಳವರೆಗೆ ಈ ಪಣಕಟ್ಟುಗಳ ಭಾಗವಾಗಿ ಕಾಲಾಳುಗಳಾಗಿ ಪರಸ್ಪರ ಹೊಡೆದಾಡಿಕೊಂಡು ಬಂದಿದ್ದ ಹೊಲೆಯ-ಮಾದಿಗ ಸಮುದಾಯಗಳು ಶಾಶ್ವತ ದ್ವೇಶ ಸಾಧಿಸುವಂತಾಯಿತು.
ಹೀಗಾಗಿ ನಾವಿಂದು ಕಾಣುತ್ತಿರುವ ಹೊಲೆಯ-ಮಾದಿಗರ ನಡುವಿನ ಎಡಗೈ-ಬಲಗೈ ದ್ವೇಷ ಆ ಜಾತಿಗಳೇ ಸೃಷ್ಟಿಸಿಕೊಂಡಿರುವುದಲ್ಲ. ಸಮಾಜದ ಗತಿಯಲ್ಲಿ ಆ ಜಾತಿಗಳ ಮೇಲೆ ಒಂದರ್ಥದಲ್ಲಿ ಹೇರಲಾದ ದ್ವೇಶ ಇದು.
ಇಂದು ನಾವು ಬಾಬಾಸಾಹೇಬ್ ಅಂಬೇಡ್ಕರ್ ಜಾತಿ ತಾರತಮ್ಯ ಅಳಿಯಬೇಕು ಎಂದು ಬಯಸಿ ಬದುಕಿನುದ್ದಕ್ಕೂ ಪಡಬಾರದ ಪಾಡು ಪಟ್ಟು ನಡೆಸಿದ ಹೋರಾಟ, ಸಾಂವಿಧಾನಿಕ ಪ್ರಯತ್ನಗಳು, ಸಮತೆಯ ಬದುಕಿಗೆ ದಾರಿದೀಪವಾಗುವ ಅವರ ಚಿಂತನೆಗಳ ಬೆಳಕಿನಿಂದ ಒಂದಷ್ಟು ಪಡೆದುಕೊಂಡಿದ್ದೇವೆ. ದಲಿತರು ಮಾತ್ರವಲ್ಲ ಇಡೀ ಬಾಬಾಸಾಹೇಬರ ಜೀವನ ಹೋರಾಟದಿಂದ ಪ್ರಯೋಜನ ದೇಶವೇ ಪಡೆದುಕೊಂಡಿದೆ. ಸಮಾನತೆ ಆಶಯ ಹೊಂದಿರುವ ಸಂವಿಧಾನದ ಮೂಲಕ ಭಾರತೀಯರು ಬದುಕು ರೂಪಿಸಿಕೊಳ್ಳುತ್ತಿದ್ದೇವೆ.
ಹೀಗಿರುವಾಗ ಅಸಮಾನತೆಯ ಸಮಾಜದಲ್ಲಿ ಸೃಷ್ಟಿಯಾದ ಈ ಎಡಗೈ-ಬಲಗೈ, ಸ್ಪೃಶ್ಯ-ಅಸ್ಪೃಶ್ಯ ತಾರತಮ್ಯಗಳನ್ನು ಪ್ರಜ್ಞಾಪೂರ್ವಕ ಪ್ರಯತ್ನಗಳ ಮೂಲಕ ನಿವಾರಿಸಿಕೊಳ್ಳಬೇಕಿದೆ. ಇದಾಗಬೇಕೆಂದರೆ ಮೊದಲು ಎಡಗೈ-ಬಲಗೈ, ಸ್ಪೃಶ್ಯ-ಅಸ್ಪೃಶ್ಯ ತಾರತಮ್ಯಗಳು ಇವೆ ಹಾಗೂ ಬಲಗೈನಿಂದ ಎಡಗೈನವರೂ, ಸ್ಪೃಶ್ಯ ಜಾತಿಗಳಿಂದ ಅಸ್ಪೃಶ್ಯ ಜಾತಿಗಳು ತಾರತಮ್ಯಕ್ಕೆ ಒಳಗಾಗಿದ್ದಾರೆ ಎಂಬ ವಾಸ್ತವ ಸತ್ಯವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ನಂತರ ಇದನ್ನು ಪರಿಹರಿಸಲು ಸದಾಶಿವ ವರದಿ ಯೋಗ್ಯವೇ ಎಂದು ಯೋಚಿಸಬಹುದು.
–ಹರ್ಷ ಕುಮಾರ್ ಕುಗ್ವೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್‌ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್ ಅಪಾರ್ಟ್‌ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

-
ದಿನದ ಸುದ್ದಿ2 days agoಬರ ನಿರ್ವಹಣೆಗೆ ಸಚಿವ ಸಂಪುಟ ಉಪಸಮಿತಿ ಸಭೆ – ದಾವಣಗೆರೆಯಲ್ಲಿ ಕುಡಿಯುವ ನೀರು, ಮೇವು ಕೊರತೆ ಬಗ್ಗೆ ಸಚಿವ ಮಲ್ಲಿಕಾರ್ಜುನ್ ಪ್ರಸ್ತಾಪ
-
ದಿನದ ಸುದ್ದಿ1 day agoಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು
-
ದಿನದ ಸುದ್ದಿ1 day agoರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!
-
ದಿನದ ಸುದ್ದಿ2 days agoಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!
-
ದಿನದ ಸುದ್ದಿ2 days ago5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
-
ದಿನದ ಸುದ್ದಿ2 days agoಭದ್ರೆ ಆಗಮನದಿಂದ ರೈತರಲ್ಲಿ ಹೊಸ ಭರವಸೆ – ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ
-
ದಿನದ ಸುದ್ದಿ2 days agoವಿಶೇಷ ಚೇತನ ಮಕ್ಕಳು ದೇವರ ಮಕ್ಕಳು – ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್
-
ದಿನದ ಸುದ್ದಿ1 day agoಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!


