Connect with us

ರಾಜಕೀಯ

ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ಕುರಿತ ವಾಸ್ತವ ನೆಲೆಯ ವಿಶ್ಲೇಷಣೆ

Published

on


ದೀರ್ಘಕಾಲಿಕ ರಾಜಕೀಯ ವಿದ್ಯಮಾನದ ಅನಾವರಣ

ಹಿಂದೂ ಬಹುಸಂಖ್ಯಾವಾದಕ್ಕೆ ರಾಜಕೀಯ ಭೂಮಿಕೆಯಾಗಿ ಉತ್ತರಪ್ರದೇಶ ಸಿದ್ಧ


  • ಮೂಲ : ಅಸೀಮ್‌ ಅಲಿ (ದ ಹಿಂದೂ 11 ಮಾರ್ಚ್‌ 22), ಅನುವಾದ : ನಾ ದಿವಾಕರ

ತ್ತರಪ್ರದೇಶ ಒಂದು ಹೊಸ ರಾಜಕೀಯ ಶಕೆಯನ್ನು ಪ್ರವೇಶಿಸಿದೆ. ಮೂರನೆ ಎರಡರಷ್ಟು ಬಹುಮತ ಪಡೆಯುವ ಮೂಲಕ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದು, ಕಳೆದ ಮೂರು ದಶಕಗಳಲ್ಲಿ ಮರಳಿ ಅಧಿಕಾರ ಪಡೆದ ಪ್ರಪ್ರಥಮ ಪಕ್ಷವಾಗಿ ಹೊರಹೊಮ್ಮಿದೆ. ತನ್ನ ಮುಸ್ಲಿಂ-ಯಾದವ ಮತಬ್ಯಾಂಕನ್ನು ದಾಟಿ ತನ್ನದೇ ಆದ ಮತದಾರ ವಲಯವನ್ನು ಸೃಷ್ಟಿಸಿಕೊಳ್ಳುವ ಸಮಾಜವಾದಿ ಪಕ್ಷದ ಪ್ರಯತ್ನ ವಿಫಲವಾಗಿದೆ. ಕಾಂಗ್ರೆಸ್ ಮತ್ತು ಬಹುಜನ ಸಮಾಜ ಪಕ್ಷ ಸಂಪೂರ್ಣ ಅವನತಿಯತ್ತ ಸಾಗಿವೆ.

ಪ್ರಧಾನ ನಿರೂಪಣೆಯ ಜನಾದೇಶ

ಬಿಜೆಪಿ ಗಳಿಸಿರುವ ಸ್ಥಾನಗಳ ಸಂಖ್ಯೆ ನಿರೀಕ್ಷೆಯನ್ನು ಮೀರಿದ್ದರೂ ಪಕ್ಷದ ಗೆಲುವು ಅನಿರೀಕ್ಷಿತವೇನೂ ಆಗಿರಲಿಲ್ಲ. ಯಾವುದೇ ಅಲೆಯ ಪ್ರಭಾವ ಇಲ್ಲದೆಯೇ ಈ ಚುನಾವಣೆಗಳು ನಡೆದಿದ್ದವು. ಮಾಧ್ಯಮಗಳ ಚುನಾವಣಾ ವರದಿಗಳಲ್ಲೂ ಸಹ ಆಡಳಿತ ವಿರೋಧಿ ಧೋರಣೆಯಾಗಲೀ, ಸರ್ಕಾರದ ಪರವಾದ ಧೋರಣೆಯಾಗಲೀ ಕಂಡುಬಂದಿರಲಿಲ್ಲ. ಆದರೂ ಬಿಜೆಪಿ ಸಾಧಿಸಿರುವ ಅಭೂತಪೂರ್ವ ಗೆಲುವಿಗೆ ಕಾರಣಗಳೇನು ಎನ್ನುವುದು ಚರ್ಚೆಗೊಳಗಾಗಬೇಕಿದೆ.

ಯಾವುದೇ ರಾಜಕೀಯ ಜನಾದೇಶವನ್ನು ಆಳಕ್ಕಿಳಿದು ವಿಸಂಕೇತಿಸುವುದು ಸಂಕೀರ್ಣವಾದ ಕೆಲಸ. ಒಂದು ಕೆಲವು ರಾಜಕೀಯ ತಜ್ಞರು ಈ ಚುನಾವಣೆಗಳ ಫಲಿತಾಂಶವನ್ನು ಯೋಗಿ ಆದಿತ್ಯನಾಥ್‌ ಆಳ್ವಿಕೆಯ ಸಾಧನೆಗಳ ಫಲ ಎಂದೇ ವ್ಯಾಖ್ಯಾನಿಸಿದ್ದಾರೆ. ಜನಕಲ್ಯಾಣ ಯೋಜನೆಗಳ ಅನುಷ್ಟಾನ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಿರುವುದೇ ಕಾರಣ ಎಂದೂ ಹೇಳಲಾಗುತ್ತದೆ.

ಇನ್ನು ಕೆಲವು ವಿಶ್ಲೇಷಕರು, ಬಿಜೆಪಿಯ ಸಂಘಟನಾತ್ಮಕ ರಚನೆ ಮತ್ತು ಮಾಧ್ಯಮಗಳ ನಿರ್ವಹಣೆಯೇ ಈ ಗೆಲುವಿಗೆ ಕಾರಣ ಎಂದು ಅಭಿಪ್ರಾಯಪಡುತ್ತಾರೆ. ಈ ಎರಡೂ ಅಭಿಪ್ರಾಯಗಳಲ್ಲಿ ಸತ್ಯಾಂಶವಿದೆ. ಆದರೂ ಈ ವಿಶ್ಲೇಷಣೆಗಳಲ್ಲಿ , ಉತ್ತರಪ್ರದೇಶದ ಜನಾದೇಶದ ಹಿಂದಿರುವ ಸೈದ್ಧಾಂತಿಕ ಶಕ್ತಿಯನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ. ಈ ಸೈದ್ಧಾಂತಿಕ ಶಕ್ತಿಯೇ ಹಿಂದೂ ಬಹುಸಂಖ್ಯಾವಾದ. ಹಿಂದೂ ಬಹುಸಂಖ್ಯಾವಾದವೇ ಬಿಜೆಪಿಯ ಚುನಾವಣಾ ಪ್ರಚಾರದ ಪ್ರಧಾನ ನಿರೂಪಣೆ ಎಂದು ಹೇಳಬಹುದು. ಉಳಿದೆಲ್ಲಾ ನಿರೂಪಣೆಗಳೂ ಸಹ ಈ ಪ್ರಧಾನ ನಿರೂಪಣೆಗೆ ಪೂರಕವಾಗಿಯೇ ಕಂಡುಬರುತ್ತದೆ.

ಕಳೆದ ಒಂದು ದಶಕದ ಅವಧಿಯಲ್ಲಿ ಬಿಜೆಪಿ ಕ್ರೋಢೀಕರಿಸಿದ್ದ, ಧೃವೀಕರಿಸಿದ್ದ ಹಿಂದೂ ಮತದಾರರ ಸಾಮಾಜಿಕ ಮೈತ್ರಿಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವುದು ಬಿಜೆಪಿಯ ಪಾಲಿಗೆ ಸವಾಲಿನ ಪ್ರಶ್ನೆಯಾಗಿತ್ತು. ಮೇಲ್ಜಾತಿ ಸಮುದಾಯಗಳು, ಯಾದವರನ್ನು ಹೊರತುಪಡಿಸಿದ ಹಿಂದುಳಿದ ಜಾತಿಗಳು, ಜಾಟವರನ್ನು ಹೊರತುಪಡಿಸಿದ ದಲಿತ ಸಮುದಾಯ ಈ ಮೈತ್ರಿಕೂಟದಲ್ಲಿ ಪ್ರಮುಖವಾಗಿದ್ದವು.

ಹಿಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ ಉಂಟುಮಾಡಿದ್ದ ಅನೇಕ ರೀತಿಯ ಸಾರ್ವಜನಿಕರ ಅಸಮಾಧಾನಗಳು ಹೊಗೆಯಾಡುತ್ತಿದ್ದುದು ಪಕ್ಷಕ್ಕೆ ಪ್ರಮುಖ ಸವಾಲಾಗಿತ್ತು. ಇವುಗಳಲ್ಲಿ ಪ್ರಧಾನವಾಗಿ ನಿರುದ್ಯೋಗದ ಬವಣೆ, ಬೆಲೆ ಏರಿಕೆ, ಸ್ಥಗಿತಗೊಂಡಿದ್ದ ಆದಾಯದ ಮೂಲಗಳು, ಗ್ರಾಮೀಣ ಬಿಕ್ಕಟ್ಟು, ಕೋವಿದ್‌ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಉಂಟಾಗಿದ್ದ ಹಲವು ದುರಂತಗಳು, ಲಾಕ್‌ ಡೌನ್‌ ದುಷ್ಪರಿಣಾಮಗಳು ಯೋಗಿ ಸರ್ಕಾರದ ಸುಗಮ ಹಾದಿಗೆ ಅಡ್ಡಿಯಾಗುವ ಸಾಧ್ಯತೆಗಳಿದ್ದವು.

ಸರ್ಕಾರದ ಈ ಎಲ್ಲ ವೈಫಲ್ಯಗಳನ್ನೂ ಮೀರಿ ಯೋಗಿ ಸರ್ಕಾರದ ಉಚಿತ ಪಡಿತರ ನೀಡುವ ಯೋಜನೆ ಫಲಕಾರಿಯಾಗಿದೆ ಎಂದು ಹೇಳುವುದು ಬಹುಶಃ ಭೋಳೆತನದ ಮಾತಾಗುತ್ತದೆ. ಉಚಿತವಾಗಿ ನೀಡಲಾಗುವ ಆಹಾರ ಧಾನ್ಯಗಳನ್ನು ಒದಗಿಸುವ ಪದ್ಧತಿಗೆ ಭಾರತದ ಮತದಾರರು ಕಳೆದ ಐವತ್ತು ವರ್ಷಗಳಿಂದಲೂ ಒಗ್ಗಿಹೋಗಿರುವುದರಿಂದ, 21ನೆಯ ಶತಮಾನದ ಮೂರನೆಯ ದಶಕದಲ್ಲಿ ಮತದಾರರು ಈ ಯೋಜನೆಗಳಿಂದ ಭ್ರಮಾಧೀನರಾಗುತ್ತಾರೆ ಎಂದು ನಂಬುವುದು ಕಷ್ಟವಾದೀತು.

ಜನಕಲ್ಯಾಣಯೋಜನೆಯನ್ನೂ ಮೀರಿದ ಸಂಗತಿ

ಅನೇಕ ಜನಪರ ಕಲ್ಯಾಣ ಯೋಜನೆಗಳಡಿ ನೇರ ನಗದು ಪಾವತಿ ಮಾಡುವ ಪದ್ಧತಿ, ಉದಾಹರಣೆಗೆ ರೈತರ ಆದಾಯ ಬೆಂಬಲ, ಶೌಚಾಲಯ ನಿರ್ಮಾಣ, ವಸತಿ ಯೋಜನೆ, ಶಾಲಾ ಬ್ಯಾಗುಗಳು ಇತ್ಯಾದಿ,, ಒಂದು ಪ್ರಬಲ ಅಸ್ತ್ರವಾಗಿಯೇ ಕಾಣುತ್ತದೆ. ಆದರೆ ಚುನಾವಣೆಯ ಮತದಾನದ ಏರುಪೇರುಗಳನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಇಲ್ಲಿಯೂ ಸಹ ವಿಶ್ಲೇಷಕರು ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಾಗುತ್ತದೆ.

ಏಕೆಂದರೆ ಇತ್ತೀಚೆಗೆ ನಡೆದ ಹರಿಯಾಣ, ಮಹಾರಾಷ್ಟ್ರ ಮತ್ತ್ ಜಾರ್ಖಂಡ್‌ ಚುನಾವಣೆಗಳಲ್ಲಿ ಈ ಕಲ್ಯಾಣ ಯೋಜನೆಗಳ ನೇರ ನಗದು ಪಾವತಿ ಬಿಜೆಪಿಯನ್ನು ಅಧಿಕಾರಕ್ಕೆ ತರಲಿಲ್ಲ. ಅಲ್ಲಿ ಬಿಜೆಪಿ ಮತದಾರರ ಅವಕೃಪೆಯನ್ನು ಎದುರಿಸಬೇಕಾಯಿತು. ಎರಡನೆಯದಾಗಿ, ಚುನಾವಣಾ ಸಮೀಕ್ಷೆಗಳಾಗಲೀ, ಮಾಧ್ಯಮಗಳ ವರದಿಗಳಾಗಲೀ ಈ ರೀತಿಯ ಬೃಹತ್‌ ಪ್ರಮಾಣದ ಜನಾದೇಶಕ್ಕೆ ಪೂರಕವಾದ ಜನೋತ್ಸಾಹವನ್ನು ಬಿಂಬಿಸಿರಲಿಲ್ಲ. ಚುನಾವಣೆಗಳಿಗೆ ಎರಡು ತಿಂಗಳ ಮುಂಚೆ ನಡೆಸಲಾದ ಸಮೀಕ್ಷೆಗಳಲ್ಲೂ ಸಹ ಸಾರ್ವಜನಿಕ ಅಭಿಪ್ರಾಯಗಳು ಅಸ್ಪಷ್ಟತೆಯಿಂದಲೇ ಕೂಡಿದ್ದವು.

ಸಮೀಕ್ಷೆಗೊಳಪಟ್ಟ ಮೂರನೆ ಎರಡರಷ್ಟು ಮತದಾರರು ಸರ್ಕಾರದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಕೆಲವೇ ಸಂಖ್ಯೆಯ ಜನ ಯೋಗಿ ಸರ್ಕಾರ ಮರಳಿ ಅಧಿಕಾರಕ್ಕೆ ಬರುವಂತೆ ಆಶಿಸಿದ್ದರು. ಹಾಗಾಗಿಯೇ ಇಲ್ಲಿ ಮತ್ತಾವುದೋ ಅಂಶ ಪ್ರಧಾನವಾಗಿರುವುದನ್ನು ಗುರುತಿಸಬೇಕಿದೆ. ಇಲ್ಲಿ ನಿರ್ಣಾಯಕವಾಗಿ ಕಾಣುವುದು ಹಿಂದುತ್ವ ಬಹುಸಂಖ್ಯಾವಾದ. ಈ ಬಹುಸಂಖ್ಯಾವಾದವೇ, ಯಾದವರು ಮತ್ತು ಜಾಟವರನ್ನು ಹೊರತುಪಡಿಸಿ, ಬಿಜೆಪಿ ಮತ್ತು ಹಿಂದೂ ಮತದಾರರ, ನಡುವೆ ಭಾವನಾತ್ಮಕವಾದ ಸೇತುವೆಯನ್ನು ನಿರ್ಮಿಸಿದೆ.

ಉತ್ತರ ಪ್ರದೇಶದ ಹಿಂದೂ ಮತದಾರರಲ್ಲಿ ಒಂದು ಸಮಾನ ಪ್ರಜ್ಞೆಯನ್ನು ಗುರುತಿಸಬಹುದು ಎಂದು ಯೋಗೇಂದ್ರ ಯಾದವ್‌ ತಮ್ಮ ಸಮೀಕ್ಷೆಯಲ್ಲಿ ಹೇಳಿದ್ದುದನ್ನು ಸ್ಮರಿಸಬಹುದು. ಈ ಸಮಾನ ಪ್ರಜ್ಞೆಯ ಮೂಲವನ್ನು ಯಾದವ್‌ ಅವರು ಹಿಂದೂ-ಮುಸ್ಲಿಂ ವಿಭಜನೆಯಲ್ಲಿ ಗುರುತಿಸುತ್ತಾರೆ. ಈ ಪ್ರಜ್ಞೆಯ ಪ್ರಭಾವದಿಂದಲೇ ಜನರು ತಮ್ಮ ಭೌತಿಕ ಸಂಕಷ್ಟಗಳನ್ನೂ ಬದಿಗೆ ಸರಿಸಿ , ರಾಜ್ಯ ಸರ್ಕಾರದ ದುರಾಡಳಿತವನ್ನೂ ಲೆಕ್ಕಿಸದೆ “ ತಮ್ಮವರ” ಪರ ವಹಿಸಿ ಮತ ಚಲಾಯಿಸಿದ್ದಾರೆ.

ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ಸಂಘರ್ಷ

ಉತ್ತರಪ್ರದೇಶ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ಏರ್ಪಟ್ಟಿದ್ದ ಸೈದ್ಧಾಂತಿಕ ಸಂಘರ್ಷ ಮೂಲತಃ ಯಾದವೇತರ ಹಿಂದುಳಿದ ವರ್ಗಗಳ ಮತದಾರರ ಸುತ್ತಲೂ ಹೆಣೆಯಲ್ಪಟ್ಟಿತ್ತು. ಉಳಿದ ಮತದಾರರಾದ ಮೇಲ್ಜಾತಿಗಳು, ಮುಸ್ಲಿಮರು, ಯಾದವರು ಮತ್ತು ಜಾಟರು ತಮ್ಮದೇ ಆದ ಪ್ರಭಾವಿ ವಲಯದಲ್ಲಿ ಗುರುತಿಸಿಕೊಂಡಿದ್ದರಿಂದ, ಹಿಂದುಳಿದ ವರ್ಗಗಳ ಮತದಾರರೇ ಚುನಾವಣೆಯಲ್ಲಿ ನಿರ್ಣಾಯಕರಾಗಿದ್ದರು.

ಕೊಂಚ ಮಟ್ಟಿಗೆ ಜಾಟವರನ್ನು ಹೊರತುಪಡಿಸಿದ ದಲಿತ ಮತದಾರರೂ ನಿರ್ಣಾಯಕರಾಗಿದ್ದರು. ಈ ಮತದಾರ ವಲಯವನ್ನೇ ಅಖಿಲೇಶ್‌ ಯಾದವ್‌ ಹೆಚ್ಚಾಗಿ ಅವಲಂಬಿಸಿದ್ದರು. ಹಕ್ಕು ಮತ್ತು ಸಮಾನ ಪ್ರಾತಿನಿಧ್ಯ ಈ ಎರಡು ಮಂಡಲ್‌ ರಾಜಕಾರಣದ ಮೂಲ ಧಾತುಗಳನ್ನು ಅವಲಂಬಿಸಿದ್ದ ಅಖಿಲೇಶ್‌ ಯಾದವ್‌ ಹಿಂದುಳಿದ ವರ್ಗಗಳ ಕ್ರಾಂತಿಯ ಭರವಸೆಯನ್ನೂ ನೀಡಿದ್ದರು.

ಆದರೆ ಸಮಾಜವಾದಿ ಪಕ್ಷದ ಮಂಡಲ್‌ ರಾಜಕಾರಣದ ಪ್ರಭಾವಕ್ಕೆ ಹಿಂದುಳಿದ ವರ್ಗಗಳ ಮತದಾರರು ಬಲಿಯಾಗದಂತೆ ಬಿಜೆಪಿ ತಡೆಗಟ್ಟಿದ್ದಾದರೂ ಹೇಗೆ ? ಅಥವಾ ಹಿಂದುಳಿದ ವರ್ಗಗಳ ಮತದಾರರು ತಮ್ಮ ಮಂಡಲ್‌ ರಾಜಕಾರಣಕ್ಕೂ ವಿಮುಖರಾಗಿ, ಹಿಂದೂ ರಾಜಕೀಯ ಅಸ್ಮಿತೆಯನ್ನು ಅಪ್ಪಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಹಿಂದೂ ಬಹುಸಂಖ್ಯಾವಾದ ಯಶಸ್ವಿಯಾದದ್ದಾದರೂ ಹೇಗೆ ? ಇಲ್ಲಿ ಎರಡು ಅಂಶಗಳನ್ನು ಪರಿಶೀಲಿಸಬೇಕಾಗುತ್ತದೆ.

ಮೊದಲನೆಯದಾಗಿ, ಹಿಂದುಳಿದ ವರ್ಗಗಳಲ್ಲಿ ಭೌತಿಕ ಸುರಕ್ಷತೆಯ ಭರವಸೆಯನ್ನು ಉಂಟುಮಾಡಿದ್ದು. ಬುಲ್ಡೋಜರ್‌ಗಳು ಮತ್ತು ಎನ್ಕೌಂಟರ್‌ಗಳ ಸಂಕೇತಗಳ ಮೂಲಕ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿದ್ದು. ಹಿಂದೂ ಪ್ರಭಾವಳಿಯಲ್ಲಿರುವ ಹಿಂದುಳಿದ ವರ್ಗಗಳಲ್ಲಿ ತಾವು ಯಾದವ್‌ ಮತ್ತು ಮುಸ್ಲಿಂ ಕ್ರಿಮಿನಲ್‌ಗಳಿಂದ ಸುರಕ್ಷಿತವಾಗಿದ್ದೇವೆ ಎಂಬ ಭಾವನೆ ಮೂಡಿಸಿದ್ದು.

ಕೋಮುವಾದಿ ಪೂರ್ವಗ್ರಹಗಳಿಗೆ ಸುರಕ್ಷತೆಯ ಹೊದಿಕೆಯನ್ನು ನೀಡುವ ಪ್ರಕ್ರಿಯೆ ಉತ್ತರಪ್ರದೇಶದಲ್ಲಿ ಪರಾಕಾಷ್ಠೆ ತಲುಪಿತ್ತು. ಮುಖ್ತಾರ್‌ ಅನ್ಸಾರಿ ಮತ್ತು ಅತೀಕ್‌ ಅಹಮದ್‌ ಅವರಂತಹ ಮುಸ್ಲಿಂ ಬಲಾಢ್ಯರನ್ನು ಮಾಫಿಯಾದೊಡನೆ ಬೆಸೆಯುವ ಪ್ರಕ್ರಿಯೆ ಒಂದೆಡೆಯಾದರೆ ಮತ್ತೊಂದೆಡೆ ಸಿಎಎ ವಿರೋಧಿ ಹೋರಾಟಗಾರರನ್ನು ದಂಗೆಕೋರರೊಂದಿಗೂ, ಲವ್‌ ಜಿಹಾದ್‌ ಆರೋಪಿಗಳು ಮತ್ತು ಗೋವು ಕಳ್ಳಸಾಗಾಣಿಕೆದಾರರನ್ನು ಸಮಾಜಘಾತುಕ ಶಕ್ತಿಗಳೊಂದಿಗೂ ಬೆಸೆಯುವುದರಲ್ಲಿ ಯೋಗಿ ಸರ್ಕಾರ ಯಶಸ್ವಿಯಾಗಿತ್ತು.

ಉದಾಹರಣೆಗೆ 2018-20ರ ಅವಧಿಯಲ್ಲಿ ಉತ್ತರಪ್ರದೇಶ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲ್ಪಟ್ಟಿರುವ ಮೂರನೆ ಒಂದರಷ್ಟು ಆರೋಪಿಗಳು ಗೋವು ಕಳ್ಳಸಾಗಾಣಿಕೆಯ ಆರೋಪವನ್ನೇ ಎದುರಿಸುತ್ತಿದ್ದಾರೆ. ಈ ರೀತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಎಂದರೆ ಸಮಾಜದ ಸುರಕ್ಷತೆಯ ದೃಷ್ಟಿಯಿಂದ ಮುಸ್ಲಿಮರೇ ಅಪಾಯಕಾರಿ ಎಂದು ಬಿಂಬಿಸುವುದರಲ್ಲಿ , ಹಾಗೆಯೇ ಈ ಅಪಾಯವನ್ನು ಮಟ್ಟಹಾಕುವ ನಿಟ್ಟಿನಲ್ಲೂ ಸರ್ಕಾರ ಸಕ್ರಿಯವಾಗಿದೆ ಎಂದು ಪ್ರದರ್ಶಿಸುವಲ್ಲಿ ಯೋಗಿ ಸರ್ಕಾರ ಯಶಸ್ವಿಯಾಗಿದೆ. ಮೇಲ್ನೋಟಕ್ಕೆ ಹಿಂದೂ ಮುಸ್ಲಿಂ ಘರ್ಷಣೆಯು ಕಾಣುತ್ತಿಲ್ಲ ಎಂದು ಹಲವು ಪತ್ರಿಕಾ ವರದಿಗಾರರು ವರದಿ ಮಾಡಿದ್ದರೂ, ಆಂತರಿಕವಾಗಿ ಮತದಾರರ ನಡುವೆ ಆಳವಾಗಿ ಬೇರೂರಿರುವ ಕೋಮು ಭಾವನೆಗಳನ್ನು ಅಲ್ಲಗಳೆಯಲಾಗುವುದಿಲ್ಲ.

ಆರ್ಥಿಕ ಸುಭದ್ರತೆ

ಇಲ್ಲಿ ಗಮನಿಸಬೇಕಾದ ಎರಡನೆಯ ಅಂಶವೆಂದರೆ, ಹಿಂದುಳಿದ ಜಾತಿಗಳಿಗೆ ಒಂದು ರೀತಿಯ ಆರ್ಥಿಕ ಸುರಕ್ಷತೆಯನ್ನು, ಯಾವುದೇ ಜಾತಿ ಅಸ್ಮಿತೆಗಳನ್ನು ಸೂಚಿಸದೆಯೇ ಒದಗಿಸಿರುವುದು. ಆರ್ಥಿಕ ಸುರಕ್ಷತೆಯನ್ನು ಒದಗಿಸುವ ತಂತ್ರಗಾರಿಕೆಯು ರಾಜಕೀಯವಾಗಿ ನಿರ್ಣಾಯಕವಾಗುವಷ್ಟೇ ಅದನ್ನು ಜನರಿಗೆ ತಲುಪಿಸುವ ವಿಧಾನಗಳೂ ನಿರ್ಣಾಯಕವಾಗುತ್ತವೆ.

ಉತ್ತರಪ್ರದೇಶದ ರಾಜಕಾರಣದಲ್ಲಿ ಮಂಡಲ್‌ ಮತ್ತು ದಲಿತ ರಾಜಕಾರಣವು ಹೆಚ್ಚು ಪ್ರಬಲವಾಗುತ್ತಿದ್ದರೂ ಮೂಲತಃ ಸಾರ್ವಜನಿಕ ಸವಲತ್ತುಗಳನ್ನು ಜನರಿಗೆ ತಲುಪುವಂತೆ ಮಾಡಲು ಜಾತಿ ಧೃವೀಕರಣವನ್ನು ಬಳಸಿಕೊಳ್ಳಲಾಗುತ್ತಿದೆ. ಬಿಜೆಪಿ ಸರ್ಕಾರ ಜಾರಿಗೊಳಿಸಿದ ಕಲ್ಯಾಣ ಯೋಜನೆಗಳು ಯೋಜನಾಬದ್ಧವಾಗಿದ್ದುದೇ ಅಲ್ಲದೆ ಸಾರ್ವತ್ರಿಕತೆಯನ್ನು ಪಡೆದುಕೊಂಡಿದ್ದವು.

ನೇರ ನಗದು ವರ್ಗಾವಣೆಯ ಮಾರ್ಗವನ್ನು ಅನುಸರಿಸುವ ಮೂಲಕ ಮಧ್ಯವರ್ತಿಗಳ ಕಾಟದಿಂದ ಫಲಾನುಭವಿಗಳು ಮುಕ್ತರಾಗಿದ್ದರು. ಇದು ಸಹಜವಾಗಿಯೇ ಜಾತಿ ಅಸ್ಮಿತೆಗಳ ರಾಜಕೀಯ ಲಕ್ಷಣಗಳನ್ನು ಶಿಥಿಲವಾಗಿಸುತ್ತದೆ. ಈ ರೀತಿಯ ಜನೋಪಯೋಗಿ ರಾಜಕಾರಣ ಹಿಂದೂ ಬಹುಸಂಖ್ಯಾವಾದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವುದರಿಂದ ದಲಿತರು ಮತ್ತು ಹಿಂದುಳಿದ ಜಾತಿಗಳು ಕ್ರಮೇಣ ರಾಜಕೀಯವಾಗಿ ಹಿಂದೂಗಳಾಗಿಯೇ ಗುರುತಿಸಿಕೊಳ್ಳುವಂತಾಗುತ್ತದೆ.

ಈ ಹಿಂದೂ ಬಹುಸಂಖ್ಯಾವಾದವನ್ನು ಸೋಲಿಸುವಲ್ಲಿ ಸಮಾಜವಾದಿ ಪಕ್ಷದ ಮಂಡಲ್‌ ತಂತ್ರಗಾರಿಕೆ ಏಕೆ ವಿಫಲವಾಯಿತು ಎಂದೂ ಯೋಚಿಸಬೇಕಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಒಂದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಂಡಲ್‌ ರಾಜಕಾರಣವನ್ನು ಪುನರುಜ್ಜೀವನಗೊಳಿಸುವುದು ಬೃಹತ್‌ ಸವಾಲಾಗಿ ಪರಿಣಮಿಸುತ್ತದೆ.

ಚುನಾವಣೆಗಳಿಗೂ ಮುನ್ನ ಸಮಾಜವಾದಿ ಪಕ್ಷವು ಬಿಜೆಪಿಯ ಪ್ರಮುಖ ಹಿಂದುಳಿದ ಜಾತಿಯ ಸ್ವಾಮಿ ಪ್ರಸಾದ್‌ ಮೌರ್ಯ ಮತ್ತು ದಾರಾ ಸಿಂಗ್‌ ಚೌಹಾಣ್‌ ಮುಂತಾದ ನಾಯಕರನ್ನು ತನ್ನೆಡೆಗೆ ಸೆಳೆಯಲು ಯಶಸ್ವಿಯಾಗಿತ್ತು. ಯೋಗಿ ಆಡಳಿತದಲ್ಲಿ ಹಿಂದುಳಿದ ಜಾತಿಗಳು ಅಸಮಧಾನವನ್ನು ಹೊಂದಿವೆ ಎಂದು ನಿರೂಪಿಸುವ ತಂತ್ರ ಇದಾಗಿತ್ತು, ತನ್ಮೂಲಕ ಹಿಂದುಳಿದ ಜಾತಿಗಳ ಹಕ್ಕೊತ್ತಾಯಗಳನ್ನೇ ಚುನಾವಣೆಯ ಕೇಂದ್ರ ವಸ್ತುವನ್ನಾಗಿಸಲು ಸಮಾಜವಾದಿ ಪಕ್ಷ ಪ್ರಯತ್ನಿಸಿತ್ತು.

ಆದರೆ ಈ ಬಹುತೇಕ ನಾಯಕರು ತಮ್ಮ ಸಮುದಾಯದ ಮೇಲೆ ಹೆಚ್ಚಿನ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಈ ನಾಯಕರ ಅವಕಾಶವಾದಿತನ ಮತ್ತು ವ್ಯಾವಹಾರಿಕ ಧೋರಣೆಯ ಪರಿಣಾಮ, ಸೈದ್ಧಾಂತಿಕ ನೆಲೆಗಳು ಲೆಕ್ಕಕ್ಕೆ ಬರದಂತಾಯಿತು. ಸಮಾಜವಾದಿ ಪಕ್ಷದ ಈ ಪ್ರಯತ್ನಗಳು ಬಹಳ ತಡವಾಗಿ ನಡೆಯಿತು ಎನ್ನುವುದನ್ನೂ ಗಮನಿಸಬೇಕು.

ಒಂದು ಪರ್ಯಾಯದ ರಚನೆಯತ್ತ

ಮಂಡಲ್‌ ರಾಜಕಾರಣವನ್ನು ಪುನಶ್ಚೇತನಗೊಳಿಸಿ, ಪುನರುಜ್ಜೀವನಗೊಳಿಸುವುದೆಂದರೆ ಅದಕ್ಕೆ ದೀರ್ಘ ಕಾಲಿಕ ಸಂಘಟನಾತ್ಮಕ ಹಾಗೂ ಸೈದ್ಧಾಂತಿಕ ಪುನರ್‌ ನಿರ್ಮಾಣದ ಅವಶ್ಯಕತೆ ಇದೆ. ಈ ಮಾರ್ಗದಲ್ಲೇ ಹಿಂದುತ್ವದ ನಮ್ಯ ಸ್ವರೂಪವನ್ನು ಎದುರಿಸಲು ಸಾಧ್ಯವಾದೀತು.

ಬಿಜೆಪಿ ತನ್ನ ಹಿಂದೂ ಬಹುಸಂಖ್ಯಾವಾದದ ಪ್ರಚಾರವನ್ನು ವರ್ಷದುದ್ದಕ್ಕೂ ನಡೆಸುತ್ತಿರುತ್ತದೆ. ಪ್ರತಿ ವರ್ಷವೂ ನವೀಕರಿಸುತ್ತಿರುತ್ತದೆ. ಇದಕ್ಕೆ ಪೂರಕವಾದ ಸಂಘಟನಾತ್ಮಕ ಶಕ್ತಿಯೊಂದಿಗೇ ಸ್ನೇಹಪರ ಮಾಧ್ಯಮಗಳೂ ಸಹ ಇರುತ್ತವೆ. ಕೇವಲ ಮೂರು ತಿಂಗಳ ಕಾಲ ಬದುಕುಳಿಯುವ ಯಾವುದೇ ಪರ್ಯಾಯ ಸೈದ್ಧಾಂತಿಕ ನೆಲೆಗಳು ಈ ಸವಾಲನ್ನು ಎದುರಿಸಲು ಸಾಧ್ಯವಾಗುವುದಿಲ್ಲ.

ಯೋಗಿ ಆದಿತ್ಯನಾಥ್‌ ಕಳೆದ ಚುನಾವಣೆಗಳನ್ನು 80:20 ಅನುಪಾತದಲ್ಲಿ ಎದುರಿಸಿ ಗೆಲುವು ಸಾಧಿಸಿದ್ದಾರೆ. ಇದು ನೇರವಾಗಿಯೇ ಹಿಂದೂ:ಮುಸ್ಲಿಂ ರಾಜಕಾರಣವನ್ನು ಪ್ರತಿನಿಧಿಸುತ್ತದೆ. ಹಿಂದಿರುಗಿ ನೋಡಿದಾಗ ಈ ತಾತ್ವಿಕ ಚೌಕಟ್ಟು ವಾಸ್ತವ ಎನ್ನುವುದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ಮುಸಲ್ಮಾನರು ಎಂದಿನಂತೆ ಸಮಾಜವಾದಿ ಪಕ್ಷದ ಬೆನ್ನೆಲುಬಾಗಿದ್ದರು.

ಆದರೆ ಬಿಜೆಪಿ ಬಹುಸಂಖ್ಯೆಯ ಹಿಂದೂಗಳನ್ನು ತನ್ನೆಡೆಗೆ ಸೆಳೆದಿತ್ತು. ಕಳೆದ ಮೂರು ಚುನಾವಣೆಗಳಿಂದಲೂ ಬಿಜೆಪಿ ರಚಿಸುತ್ತಿರುವ ಹಿಂದೂ ರಾಜಕೀಯ ಬಹುಸಂಖ್ಯೆ ಈ ಚುನಾವಣೆಗಳ ಮೂಲಕ ದೀರ್ಘ ಕಾಲ ಉಳಿಯುವ ಒಂದು ವಿದ್ಯಮಾನವಾಗಿ ಗೋಚರಿಸಿದೆ. ಗುಜರಾತ್‌ನಂತೆಯೇ ಉತ್ತರಪ್ರದೇಶವೂ ಈಗ ಬಿಜೆಪಿ ಪ್ರಭಾವಕ್ಕೊಳಗಾದ ರಾಜ್ಯವಾಗಿದೆ. ಇಲ್ಲಿನ ರಾಜಕೀಯ ಸಾಮಾನ್ಯ ಪ್ರಜ್ಞೆಯಲ್ಲಿ ಹಿಂದೂ ಬಹುಸಂಖ್ಯಾವಾದ ಆಳವಾಗಿ ಬೇರೂರಿದೆ.

(ಲೇಖಕರು ರಾಜಕೀಯ ಸಂಶೋಧಕ ಹಾಗೂ ಅಂಕಣಕಾರ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ನವಿಲೇಹಾಳು ಗ್ರಾಮ ಪಂಚಾಯಿತಿಗೆ ಭೇಟಿ ; ಗ್ರಾಮಸಭೆ – ಗ್ರಾಮಾಭಿವೃದ್ಧಿಗೆ ಮನವಿ

Published

on

ಸುದ್ದಿದಿನ,ಚನ್ನಗಿರಿ: ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯು ಸೋಮೌಅರ ನವಿಲೇಹಾಳು ಗ್ರಾಮ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅವರನ್ನು ಭೇಟಿಯಾಗಿ ಗ್ರಾಮಸಭೆಯನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸುವಂತೆ ಮನವಿ ಪತ್ರ ಸಲ್ಲಿಸಲಾಯಿತು.

ಗ್ರಾಮಸಭೆ ಎಂಬುದು ಗ್ರಾಮಸ್ಥರ ಸಮಸ್ಯೆಗಳನ್ನು ನೇರವಾಗಿ ಚರ್ಚಿಸಿ, ಗ್ರಾಮದ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸುವ ಪ್ರಮುಖ ವೇದಿಕೆಯಾಗಿರುವುದರಿಂದ, ಗ್ರಾಮಸಭೆಯ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು PDO ಅವರಿಗೆ ಮನವಿ ಮಾಡಲಾಯಿತು.

ಅದರಂತೆ ಗ್ರಾಮಸಭೆಯ ದಿನಾಂಕ, ಸಮಯ ಹಾಗೂ ಸ್ಥಳದ ಮಾಹಿತಿಯನ್ನು ಟಾಂಟಾಂ/ಧ್ವನಿವರ್ಧಕದ ಮೂಲಕ ಗ್ರಾಮದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡುವುದರ ಜೊತೆಗೆ, ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಅರ್ಹ ಫಲಾನುಭವಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸಭೆಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸುವಂತೆ ತಿಳಿಸಲಾಯಿತು.

ಗ್ರಾಮದಲ್ಲಿಯೇ ಉದ್ಯೋಗ ಸೃಷ್ಟಿಗೆ ಒತ್ತು

ಇದೇ ಸಂದರ್ಭದಲ್ಲಿ ಮನರೇಗಾ (MGNREGA) ಯೋಜನೆಯಡಿ ಗ್ರಾಮದ ಅರ್ಹ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವಂತೆ ಮನವಿ ಮಾಡಲಾಯಿತು.

ಗ್ರಾಮಸ್ಥರು ಉದ್ಯೋಗಕ್ಕಾಗಿ ಅನಿವಾರ್ಯವಾಗಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗದಂತೆ, ಸರ್ಕಾರದ ಉದ್ಯೋಗ ಖಾತರಿ ಯೋಜನೆಯಡಿ ಲಭ್ಯವಿರುವ ಕೆಲಸಗಳನ್ನು ಸಮರ್ಪಕವಾಗಿ ಗುರುತಿಸಿ, ಅರ್ಹರಿಗೆ ನಿಯಮಾನುಸಾರ ಉದ್ಯೋಗ ಒದಗಿಸಬೇಕು ಎಂದು ತಿಳಿಸಲಾಯಿತು.

ಪ್ರಸ್ತುತ ಬತ್ತದ ನಾಟಿ ಕಾರ್ಯಕ್ಕೆ ಅಗತ್ಯವಿರುವ ನೀರಿನ ಸಮಸ್ಯೆಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೃಷಿ ಕೆಲಸಗಳು ಲಭ್ಯವಿಲ್ಲದ ಅವಧಿಯಲ್ಲಿ ಗ್ರಾಮಸ್ಥರಿಗೆ ಮನರೇಗಾ ಸೇರಿದಂತೆ ಇತರೆ ಸರ್ಕಾರಿ ಯೋಜನೆಗಳ ಮೂಲಕ ಉದ್ಯೋಗ ಒದಗಿಸಿ, ಗ್ರಾಮದಲ್ಲಿಯೇ ಆದಾಯದ ಅವಕಾಶಗಳನ್ನು ಸೃಷ್ಟಿಸುವುದು ಅಗತ್ಯವಾಗಿದೆ ಎಂದು ಮನವಿ ಮಾಡಲಾಯಿತು.

ಗ್ರಾಮದಲ್ಲಿಯೇ ಉದ್ಯೋಗ ದೊರೆತರೆ ಗ್ರಾಮಸ್ಥರ ಆರ್ಥಿಕ ಸ್ಥಿತಿ ಸುಧಾರಿಸುವುದರ ಜೊತೆಗೆ, ಗುಳೆ ಹೋಗುವುದನ್ನು ತಡೆಯಲು ಹಾಗೂ ಗ್ರಾಮದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು PDO ಅವರ ಗಮನಕ್ಕೆ ತರಲಾಯಿತು.

ಇತರೆ ಗ್ರಾಮಾಭಿವೃದ್ಧಿ ವಿಚಾರಗಳ ಚರ್ಚೆ

ಇದರ ಜೊತೆಗೆ ನವಿಲೇಹಾಳ ಗ್ರಾಮದ ವಿವಿಧ ಅಭಿವೃದ್ಧಿ ಸಮಸ್ಯೆಗಳು, ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು, ಉದ್ಯೋಗಾವಕಾಶಗಳು, ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು PDO ಅವರೊಂದಿಗೆ ಚರ್ಚಿಸಲಾಯಿತು.

ಗ್ರಾಮಸ್ಥರಿಗೆ ಸರ್ಕಾರದ ಯೋಜನೆಗಳ ಪ್ರಯೋಜನಗಳು ಸಮರ್ಪಕವಾಗಿ ತಲುಪುವಂತೆ ಪಾರದರ್ಶಕವಾಗಿ ಹಾಗೂ ನಿಯಮಾನುಸಾರ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಲಾಯಿತು.

ಗ್ರಾಮಸಭೆಯಲ್ಲಿ ಸಾರ್ವಜನಿಕರ ಹೆಚ್ಚಿನ ಭಾಗವಹಿಸುವಿಕೆ, ಸ್ಥಳೀಯ ಉದ್ಯೋಗ ಸೃಷ್ಟಿ ಹಾಗೂ ಗ್ರಾಮಾಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಮೂಲಕ ನವಿಲೇಹಾಳ ಗ್ರಾಮವನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.

“ಗ್ರಾಮದ ಅಭಿವೃದ್ಧಿ ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಒಗ್ಗೂಡಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಗ್ರ ಗ್ರಾಮಾಭಿವೃದ್ಧಿ ಸಾಧ್ಯ.”

ಗ್ರಾಮದ ಜನರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ನವಿಲೇಹಾಳ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ (ರಿ.) ನಿರಂತರವಾಗಿ ಜನಪರವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ದಾವಣಗೆರೆ ಜಿಲ್ಲಾಧ್ಯಕ್ಷರಾದ ಜಾಫರ್ ರವರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್

Published

on

ಸುದ್ದಿದಿನ,ದಾವಣಗೆರೆ: “ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾವು ಮುಖ್ಯಮಂತ್ರಿಯಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.

ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು, ನಾನು ಡಿ.ಕೆ ಶಿವಕುಮಾರ್‌ ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂದಿದ್ದಾರೆ.

ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

“ನಾನು ಮುಖ್ಯಮಂತ್ರಿ ಅಲ್ಲ. ಆದರೆ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಮುಖ್ಯಮಂತ್ರಿಯಂತೆ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ನನ್ನ ಮೊದಲ ಕರ್ತವ್ಯವಾಗಿದೆ. ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ,” ಎಂದು ಅವರು ಹೇಳಿದರು.

ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಇನ್ನೂ ಅನೇಕ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ ಎಂದರು.

“ಜನಪ್ರತಿನಿಧಿಯಾಗಿ ಚುನಾಯಿತರಾದ ಬಳಿಕ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ತರುವ ಪ್ರಯತ್ನ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆಗಳು, ರಸ್ತೆ ಅಭಿವೃದ್ಧಿ, ಶಾಲೆಗಳ ಮೂಲಸೌಕರ್ಯ ಸುಧಾರಣೆ ಸೇರಿದಂತೆ ಹಲವು ಕಾಮಗಾರಿಗಳಿಗೆ ವೇಗ ನೀಡಲಾಗಿದೆ,” ಎಂದು ಹೇಳಿದರು.

ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ನೀರಾವರಿ ಹಾಗೂ ರೈತರಿಗೆ ಅನುಕೂಲಕರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಸರ್ಕಾರದ ಅಭಿವೃದ್ಧಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಅರ್ಹ ವ್ಯಕ್ತಿ ಯೋಜನೆಯಿಂದ ವಂಚಿತರಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದರು.

ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಟೀಕೆಗಳು ಪ್ರಜಾಪ್ರಭುತ್ವದ ಭಾಗ. ಆದರೆ ಅಭಿವೃದ್ಧಿಯೇ ನಮ್ಮ ಉತ್ತರ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದೇ ನಮ್ಮ ಗುರಿಯಾಗಿದೆ,” ಎಂದರು.

ಕ್ಷೇತ್ರದ ಜನರು ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಸಂಪರ್ಕಿಸಬಹುದು. ಜನಸೇವೆಗಾಗಿ ತಮ್ಮ ಕಚೇರಿ ಸದಾ ತೆರೆದಿರುತ್ತದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ

Published

on

ಸುದ್ದಿದಿನ,ದಾವಣಗೆರೆ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ ಅವರಿಗೆ ಸಚಿವ ಸ್ಥಾನ ದೊರೆತಿರುವುದು ದಾವಣಗೆರೆ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆ. ಹಲವು ವರ್ಷಗಳಿಂದ ಪಕ್ಷದ ಸಂಘಟನೆಗೆ ಸಲ್ಲಿಸಿರುವ ಸೇವೆ, ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ ಆದ್ಯತೆ ಹಾಗೂ ಜನಸಾಮಾನ್ಯರೊಂದಿಗೆ ಹೊಂದಿರುವ ನಿಕಟ ಸಂಪರ್ಕವನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಚಿವರಾಗಿ ಆಯ್ಕೆಯಾದ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಮಾಯಕೊಂಡ ಕ್ಷೇತ್ರ ಸೇರಿದಂತೆ ದಾವಣಗೆರೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಭ್ರಮ ಮನೆಮಾಡಿತು. ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು. ಬಸವಂತಪ್ಪ ಅವರ ನಿವಾಸದ ಎದುರು ಬೆಳಗ್ಗಿನಿಂದಲೇ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಜಮಾಯಿಸಿ ಅಭಿನಂದನೆ ಸಲ್ಲಿಸಿದರು. ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೋರಿದರೆ, ಯುವಕರು ಘೋಷಣೆಗಳನ್ನು ಕೂಗಿ ಸಂಭ್ರಮಾಚರಣೆ ನಡೆಸಿದರು.

ಕೆ.ಎಸ್. ಬಸವಂತಪ್ಪ ಅವರು ಹಲವು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದು, ರೈತರ ಸಮಸ್ಯೆಗಳು, ಕುಡಿಯುವ ನೀರಿನ ಯೋಜನೆಗಳು, ಗ್ರಾಮೀಣ ರಸ್ತೆ ಅಭಿವೃದ್ಧಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ವಿಶೇಷ ಆದ್ಯತೆ ನೀಡುವ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿರುವ ಕಾರಣದಿಂದಲೇ ಅವರಿಗೆ ಸಚಿವ ಸ್ಥಾನ ದೊರೆತಿದೆ ಎಂಬ ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಮಾಯಕೊಂಡ ಕ್ಷೇತ್ರವು ಕೃಷಿ ಪ್ರಧಾನ ಪ್ರದೇಶವಾಗಿದ್ದು, ಇಲ್ಲಿ ನೀರಾವರಿ, ರಸ್ತೆ, ಶಿಕ್ಷಣ, ಕೈಗಾರಿಕಾ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯಂತಹ ಹಲವು ಸವಾಲುಗಳಿವೆ. ಸಚಿವ ಸ್ಥಾನ ದೊರೆತಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ವೇಗ ಸಿಗಲಿದೆ ಎಂಬ ನಿರೀಕ್ಷೆ ಜನರಲ್ಲಿ ಮೂಡಿದೆ. ವಿಶೇಷವಾಗಿ ರೈತರು, ಯುವಕರು ಹಾಗೂ ಮಹಿಳಾ ಸಂಘಟನೆಗಳು ಹೊಸ ಸಚಿವರಿಂದ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ನಿರೀಕ್ಷಿಸುತ್ತಿವೆ.

ಸಚಿವ ಸ್ಥಾನ ಘೋಷಣೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆ.ಎಸ್. ಬಸವಂತಪ್ಪ ಅವರು, “ಈ ಜವಾಬ್ದಾರಿ ನನಗೆ ದೊರೆತಿರುವುದು ವೈಯಕ್ತಿಕ ಗೌರವ ಮಾತ್ರವಲ್ಲ, ಮಾಯಕೊಂಡ ಕ್ಷೇತ್ರದ ಪ್ರತಿಯೊಬ್ಬ ಮತದಾರನಿಗೂ ಸಂದ ಗೌರವವಾಗಿದೆ. ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕರು ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಜನರ ನಿರೀಕ್ಷೆಗಳನ್ನು ಈಡೇರಿಸುವುದು ನನ್ನ ಮೊದಲ ಆದ್ಯತೆಯಾಗಿರುತ್ತದೆ” ಎಂದು ಹೇಳಿದರು.

ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಜೊತೆಗೆ, ದಾವಣಗೆರೆ ಜಿಲ್ಲೆಗೆ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ತರಲು ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ, ಶಾಲೆಗಳು ಮತ್ತು ಆಸ್ಪತ್ರೆಗಳ ಸೌಲಭ್ಯಗಳ ಸುಧಾರಣೆ, ಯುವಕರಿಗೆ ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮಗಳಿಗೆ ವಿಶೇಷ ಗಮನ ಹರಿಸಲಾಗುವುದು ಎಂದು ತಿಳಿಸಿದರು.

ಪಕ್ಷದ ಜಿಲ್ಲಾ ಮುಖಂಡರು ಮಾತನಾಡಿ, ಬಸವಂತಪ್ಪ ಅವರ ಸಚಿವ ಸ್ಥಾನದಿಂದ ಜಿಲ್ಲೆಗೆ ಹೆಚ್ಚಿನ ಅನುದಾನ ಮತ್ತು ಅಭಿವೃದ್ಧಿ ಯೋಜನೆಗಳು ಹರಿದು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆಡಳಿತಾತ್ಮಕ ಮಟ್ಟದಲ್ಲಿ ಜಿಲ್ಲೆಯ ವಿವಿಧ ಯೋಜನೆಗಳಿಗೆ ವೇಗ ಸಿಗಲಿದ್ದು, ಬಾಕಿ ಉಳಿದಿರುವ ಹಲವು ಕಾಮಗಾರಿಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.

ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸಹ ಸಚಿವರಿಗೆ ಅಭಿನಂದನೆ ಸಲ್ಲಿಸಿ, ಜಿಲ್ಲೆಯ ಬಹುಕಾಲದ ಬೇಡಿಕೆಗಳಾದ ನೀರಾವರಿ ಯೋಜನೆಗಳ ವಿಸ್ತರಣೆ, ಕೈಗಾರಿಕಾ ಹೂಡಿಕೆ, ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣ, ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಗ್ರಾಮೀಣ ರಸ್ತೆ ಸುಧಾರಣೆಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು.

ಸಾಮಾಜಿಕ ಜಾಲತಾಣಗಳಲ್ಲಿಯೂ ಬಸವಂತಪ್ಪ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು. ಸಾರ್ವಜನಿಕರು, ರಾಜಕೀಯ ಮುಖಂಡರು, ವಿವಿಧ ಸಂಘಟನೆಗಳು ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿ, ಸಚಿವರ ಹೊಸ ಜವಾಬ್ದಾರಿ ಯಶಸ್ವಿಯಾಗಲಿ ಎಂದು ಹಾರೈಸಿದರು.

ರಾಜಕೀಯ ವಿಶ್ಲೇಷಕರ ಅಭಿಪ್ರಾಯದಂತೆ, ರಾಜ್ಯ ಸಚಿವ ಸಂಪುಟದಲ್ಲಿ ಮಾಯಕೊಂಡ ಕ್ಷೇತ್ರಕ್ಕೆ ದೊರೆತಿರುವ ಈ ಪ್ರತಿನಿಧಿತ್ವವು ದಾವಣಗೆರೆ ಜಿಲ್ಲೆಯ ರಾಜಕೀಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಜೊತೆಗೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸಚಿವರ ಪಾತ್ರ ಮಹತ್ವದ್ದಾಗಿರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಾಯಕೊಂಡ ಕ್ಷೇತ್ರದ ಜನರು ಸಚಿವ ಸ್ಥಾನವನ್ನು ಕೇವಲ ರಾಜಕೀಯ ಸಾಧನೆಯಾಗಿ ನೋಡದೇ, ಅಭಿವೃದ್ಧಿಯ ಹೊಸ ಅಧ್ಯಾಯದ ಆರಂಭವಾಗಿ ಪರಿಗಣಿಸುತ್ತಿದ್ದಾರೆ. ಕುಡಿಯುವ ನೀರು, ರಸ್ತೆ, ಕೃಷಿ, ಶಿಕ್ಷಣ, ಆರೋಗ್ಯ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆಗಳು ಆಗಲಿವೆ ಎಂಬ ಆಶಾಭಾವನೆ ವ್ಯಕ್ತವಾಗಿದೆ.

ಕೆ.ಎಸ್. ಬಸವಂತಪ್ಪ ಅವರ ಸಚಿವ ಸ್ಥಾನವು ಮಾಯಕೊಂಡ ಕ್ಷೇತ್ರ ಹಾಗೂ ದಾವಣಗೆರೆ ಜಿಲ್ಲೆಗೆ ಹೊಸ ಅವಕಾಶಗಳನ್ನು ತೆರೆದಿದೆ. ಜನರ ವಿಶ್ವಾಸಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಸರ್ಕಾರ ಮತ್ತು ಜನರ ನಡುವೆ ಪರಿಣಾಮಕಾರಿ ಸೇತುವೆಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಎಲ್ಲ ವಲಯಗಳಲ್ಲೂ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಅವರ ಆಡಳಿತಾತ್ಮಕ ನಿರ್ಧಾರಗಳು ಹಾಗೂ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಜಿಲ್ಲೆಯ ಭವಿಷ್ಯದ ದಿಕ್ಕನ್ನು ನಿರ್ಧರಿಸಲಿವೆ ಎಂಬ ಅಭಿಪ್ರಾಯ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending