ದಿನದ ಸುದ್ದಿ
ಜೋ ಬೈಡೆನ್ ಗೆಲುವು : ಅಮೆರಿಕದ ಆತ್ಮಕ್ಕಾಗಿ ನಡೆದ ಚಾರಿತ್ರಿಕ ಹೋರಾಟ
- ರವಿ ಕೃಷ್ಣಾರೆಡ್ಡಿ
ನಾನು ಸುಮಾರು ಹತ್ತು ವರ್ಷ ಅಮೆರಿಕದಲ್ಲಿ ಬೇರೆಬೇರೆ ರಾಜ್ಯಗಳಲ್ಲಿ ಇದ್ದೆ; 3 ತಿಂಗಳು ಇಲಿನಾಯ್ ರಾಜ್ಯದ ಶಿಕಾಗೋ, ಸುಮಾರು ಒಂದು ವರ್ಷ ಕಾಲ ಮಿನಿಯಾಪೊಲಿಸ್ ಪಕ್ಕದ ಆದರೆ ವಿಸ್ಕಾನ್ಸಿನ್ ರಾಜ್ಯಕ್ಕೆ ಸೇರಿದ ಹಡ್ಸನ್, ಮತ್ತು 8-9 ವರ್ಷಗಳ ಕಾಲ ಕ್ಯಾಲಿಫೋರ್ನಿಯಾದ ಬೇ ಏರಿಯಾ. ಹಡ್ಸನ್’ನಲ್ಲಿ ಇದ್ದಾಗ ಆರೇಳು ತಿಂಗಳ ಕಾಲ ಮಾರ್ಮನ್ ಮತಾಚರಣೆಯ ಸಹೋದ್ಯೋಗಿಯ ಮನೆಯಲ್ಲಿ, ಆತನ ಕುಟುಂಬದ ಪೇಯಿಂಗ್ ಗೆಸ್ಟ್ ಆಗಿ ವಾಸವಿದ್ದೆ. ಅಮೆರಿಕದ ಉದ್ದಗಲಕ್ಕೆ ಅಲ್ಲದಿದ್ದರೂ ಹತ್ತುಹದಿನೈದು ರಾಜ್ಯಗಳಲ್ಲಿ ಹತ್ತಾರು ಸಾವಿರ ಮೈಲು ಪ್ರವಾಸ ಮಾಡಿದ್ದೆ ಮತ್ತು ವಿವಿಧ ಹಿನ್ನೆಲೆಯ ಜನರೊಂದಿಗೆ ಸಂವಾದಿಸಿದ್ದೆ.
ಅಮೆರಿಕದ ನನ್ನ ಇಂತಹ ಅನುಭವದ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಡೊನಾಲ್ಡ್ ಟ್ರಂಪ್ ಅಂತಹ ವ್ಯಕ್ತಿ ಅಲ್ಲಿಯ ರಾಷ್ಟ್ರಾಧ್ಯಕ್ಷನಾಗಿ ಚುನಾಯಿತನಾದಾಗ ನನಗೆ ನಿಜಕ್ಕೂ ಆಶ್ಚರ್ಯ ಮತ್ತು ಗಾಬರಿ ಆಗಿತ್ತು. ತಮ್ಮ ವೈಯಕ್ತಿಕ ಜೀವನದಲ್ಲಿ ಅಮೆರಿಕನ್ನರು ಹೇಗೇ ಇರಲಿ, ಅವರು ತಮ್ಮ ರಾಜಕಾರಣಿಗಳಿಂದ ಮಾತ್ರ ವಿನಯ, ಪ್ರಾಮಾಣಿಕತೆ ಮತ್ತು ಶೀಲವನ್ನು ಹಾಗೂ ಉನ್ನತ ಸ್ಥಾನಗಳ ನಾಯಕರಿಂದ ದಕ್ಷತೆ ಮತ್ತು ದೊಡ್ಡತನವನ್ನು ನಿರೀಕ್ಷಿಸುತ್ತಾರೆ.
ಚುನಾವಣಾ ಪ್ರಚಾರ ಸಮಯದ ಪರಸ್ಪರ ವಿರೋಧ, ನಿಂದನೆ, ಆರೋಪಗಳು ಏನೇ ಇದ್ದರೂ ಫಲಿತಾಂಶದ ನಂತರ ಘನತೆಯಿಂದ ನಡೆದುಕೊಳ್ಳುತ್ತಾರೆ. ಎರಡನೇ ಜಾರ್ಜ್ ಬುಷ್ ಅಮೆರಿಕದ ಅಧ್ಯಕ್ಷರಾದಾಗಲೂ ಆತನ ವಿಚಾರದಲ್ಲಿ ಜನರಿಗೆ ಕೆಲವೊಂದು ಆತಂಕಗಳಿದ್ದವು. ಆದರೆ ಕಾಲಾಂತರದಲ್ಲಿ ಅವರೂ ತನ್ನ ಸ್ಥಾನದ ಮಹತ್ವವನ್ನು ಅರಿತು ಜವಾಬ್ದಾರಿಯಿಂದ ವರ್ತಿಸಿದರು. ಆತನ ಹೆಂಡತಿ ಲಾರಾ ಬುಷ್”ರದೂ ಬಹಳ ಸಂಯಮ, ವಿನಯ ಮತ್ತು ಘನತೆಯ ವ್ಯಕ್ತಿತ್ವ.
ಆದರೆ ಇದೆಲ್ಲ ಡೊನಾಲ್ಡ್ ಟ್ರಂಪ್ ವಿಚಾರದಲ್ಲಿ ಬದಲಾಗಿತ್ತು. ಈ ವ್ಯಕ್ತಿಯ ದುರಹಂಕಾರ, ಸುಳ್ಳು ಹೇಳುವುದು, ವಿವೇಚನೆಯಿಲ್ಲದೆ ಮಾಡುವ ಅಧಿಕಾರಮದದ ಮಾತಿನ ದಾಳಿ (ಗೂಳಿಪ್ರವೃತ್ತಿ / Bullying), ರಾತ್ರಿ ಹಗಲುಗಳ ಪರಿವೆ ಇಲ್ಲದೆ ಮನಸ್ಸಿಗೆ ಬಂದದ್ದನ್ನು ಟ್ವೀಟ್ ಮಾಡುವುದು; ಇಂತಹ ಹಲವು ಪ್ರವೃತ್ತಿಗಳು ಅಧ್ಯಕ್ಷನಾದ ಮೇಲೂ ಮುಂದುವರೆದಿತ್ತು. ಇವರ ಅಧ್ಯಕ್ಷಾವಧಿಯಲ್ಲಿ ಅಮೆರಿಕದಲ್ಲಿ ಆರ್ಥಿಕ ಮತ್ತು ಔದ್ಯೋಗಿಕ ಅವಕಾಶಗಳು ಹೆಚ್ಚಿದವು ಎನ್ನುವುದನ್ನು ಬಿಟ್ಟರೆ ಮಿಕ್ಕ ಬಹುತೇಕ ವಿಷಯಗಳಲ್ಲಿ ಅಮೆರಿಕ ತನ್ನ ಗೌರವಯುತ ಸ್ಥಾನವನ್ನು ಕಳೆದುಕೊಂಡಿತು ಮತ್ತು ಆಂತರಿಕವಾಗಿ ನೆಮ್ಮದಿ ಕದಡಿತು.
ಬಣ್ಣಶ್ರೇಷ್ಟತೆಯ ಮದ, ಅಲ್ಪಸಂಖ್ಯಾತರೆಡೆಗಿನ ತಿರಸ್ಕಾರ, ಜನಾಂಗೀಯ ಭೇದ, ವಿರೋಧಿಗಳನ್ನು ಕ್ಷುಲ್ಲಕವಾಗಿ ಕಾಣುವುದು, ಸುಳ್ಳುಸುದ್ದಿ ಮತ್ತು ಅಸತ್ಯ ಪಿತೂರಿಕಥನಗಳನ್ನು ಎಗ್ಗುಸಿಗ್ಗಿಲ್ಲದೆ ಹರಡುವುದು; ಹೀಗೆ ಹಲವು ವಿಚಾರಗಳಲ್ಲಿ ಅಮೆರಿಕದ ಸಾರ್ವಜನಿಕ ಜೀವನದ ಇತ್ತೀಚಿನ ದಶಕಗಳಲ್ಲಿ ಊಹಿಸಲಾಗದ್ದನ್ನು ಕಳೆದ ನಾಲ್ಕು ವರ್ಷಗಳಲ್ಲಿ ಅಮೆರಿಕ ಮತ್ತು ಜಗತ್ತು ಕಂಡಿತು.
ಇಂತಹ ಬದಲಾದ ಸ್ಥಿತಿಗೆ ಅಲ್ಲಿಯ Fox News ಅಂತಹ ಮಾಧ್ಯಮಗಳ ಅತಿರೇಕವೂ ಕಾಣಿಕೆ ನೀಡಿತು. ಹಾಗೆಯೇ ಅಂತಹ ಅತಿರೇಕಕ್ಕೆ ವಿರೋಧವಾಗಿ ಇನ್ನೊಂದು ಬದಿಯ ಮಾಧ್ಯಮಗಳಿಂದ ಮತ್ತು ಜನರಿಂದ ಅಮೆರಿಕದ ಆತ್ಮಕ್ಕಾಗಿಯ ಹೋರಾಟವೂ ಚಾರಿತ್ರಿಕ ಮತ್ತು ಅನುಕರಣೀಯ. ಡೊನಾಲ್ಡ್ ಟ್ರಂಪ್’ರ ಸಾಕ್ಷ್ಯಾಧಾರಗಳಿಲ್ಲದ ಆರೋಪ ಮತ್ತು ಸುಳ್ಳುಗಳನ್ನು ಟ್ವಿಟರ್ ಇತ್ತೀಚಿನ ದಿನಗಳಲ್ಲಿ Fact Check ಮಾಡಿ ಯಾವುದೇ ಮುಲಾಜಿಲ್ಲದೆ ತನ್ನ ಬಳಕೆದಾರರನ್ನು ಎಚ್ಚರಿಸಿತು.
ಮೂರ್ನಾಲ್ಕು ದಿನಗಳ ಹಿಂದೆ ಡೊನಾಲ್ಡ್ ಟ್ರಂಪ್ ಶ್ವೇತಭವನದಿಂದಲೇ ಚುನಾವಣಾ ಫಲಿತಾಂಶದ ಕುರಿತು ಪತ್ರಿಕಾಹೇಳಿಕೆ ನೀಡುತ್ತಿದ್ದಾಗ, ಅದರಲ್ಲಿ ಮಿಥ್ಯಾರೋಪಗಳು ಮತ್ತು ಅಸತ್ಯದ ಅಂಶಗಳು ಕಂಡು ಬರುತ್ತಿದ್ದಂತೆ ಅಮೆರಿಕದ NBC ಮತ್ತು ABC News ಮಾಧ್ಯಮ ಸಂಸ್ಥೆಗಳು ಆ ಕಾರ್ಯಕ್ರಮದ ನೇರ ಪ್ರಸಾರವನ್ನು ಒಂದೆರಡು ನಿಮಿಷಗಳಲ್ಲಿಯೇ ರದ್ದು ಮಾಡಿದವು. ವ್ಯಾವಹಾರಿಕ ಹಿತಾಸಕ್ತಿಗಳಿರುವ ಸಂಸ್ಥೆಗಳೂ ಸಹ ಸತ್ಯ ಮತ್ತು ಸ್ವಾತಂತ್ರ್ಯಕ್ಕಾಗಿ ಕೆಚ್ಚು ಮತ್ತು ಸ್ಥೈರ್ಯದಿಂದ ಬಡಿದಾಡುವ ಈ ಪರಿ ಭಾರತದ ಇಂದಿನ ಸಂದರ್ಭದಲ್ಲಿ ಊಹೆಗೂ ನಿಲುಕದ ವಿಚಾರ.
ಆದರೆ ಇದೇ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಈಗಲೂ ಅಮೆರಿಕದಲ್ಲಿ ಜನಪ್ರಿಯ ಎನ್ನುವುದನ್ನು ನಾವು ಮರೆಯಬಾರದು. ಆ ಮಟ್ಟಿಗೆ ಅಮೆರಿಕ ಎರಡು ವೈರುಧ್ಯಗಳಲ್ಲಿ ಧ್ರುವೀಕೃತಗೊಂಡಿದೆ. (7.4 ಕೋಟಿ ಜನ ಜೋ ಬೈಡೆನ್’ರನ್ನು ಬೆಂಬಲಿಸಿದ್ದರೆ, 7+ ಕೋಟಿ ಜನ ಟ್ರಂಪ್’ರನ್ನು ಬೆಂಬಲಿಸಿದ್ದಾರೆ.) ಕಳೆದ ನಾಲ್ಕು ವರ್ಷಗಳಲ್ಲಿ ಅಲ್ಲಿಯ ಸ್ಥಳೀಯರಿಗೆ ಹೆಚ್ಚಿದ ಉದ್ಯೋಗಾವಕಾಶಗಳು ಮತ್ತು ಆರ್ಥಿಕ ಭದ್ರತೆ ಹಾಗೂ ಸಮಾಜವಾದ/ಕಮ್ಯುನಿಸಂ ಬಗೆಗಿನ ಭಯ ಅಲ್ಲಿಯ ಇತ್ತೀಚಿನ ವಲಸಿಗ ಮತ್ತು ಅಲ್ಪಸಂಖ್ಯಾತ ಲ್ಯಾಟಿನೋ ಸಮುದಾಯವನ್ನು ಟ್ರಂಪ್ ಬೆಂಬಲಿಗರನ್ನಾಗಿ ಪರಿವರ್ತಿಸಿದೆ. ಮುಂದಿನ ದಿನಗಳಲ್ಲಿ ಅಲ್ಲಿಯ ರಿಪಬ್ಲಿಕನ್ ಪಕ್ಷ ಬೇರೆಯೇ ರೀತಿ ರೂಪಾಂತರವಾಗಲಿದೆ. ಈ ಬೆಳವಣಿಗೆಯಲ್ಲಿ ಅವಕಾಶ ಮತ್ತು ಅಪಾಯಗಳು ಸಮಾನವಾಗಿ ಕಾಣಿಸುತ್ತಿವೆ.
ಜೋ ಬೈಡೆನ್ ಕುರಿತು ನಾನು ಹಲವು ಸಂದರ್ಭಗಳಲ್ಲಿ ಮಾತನಾಡಿದ್ದೇನೆ ಮತ್ತು ಬರೆದಿದ್ದೇನೆ. ಈ ವ್ಯಕ್ತಿಯ ಕುರಿತು ನನಗೆ ಗೌರವವಿದೆ. ಹಾಗೆಯೇ ಕಮಲಾ ಹ್ಯಾರಿಸ್ ಅಪಾರ ಆತ್ಮವಿಶ್ವಾಸದ ಹಾಗೂ ನಿಷ್ಠುರತೆಯ ವ್ಯಕ್ತಿ ಮತ್ತು ಅಮೆರಿಕದ ಮುಂದಿನ ವರ್ಷಗಳ/ದಶಕದ ಪ್ರಬಲ ಶಕ್ತಿ. ಭಾರತಕ್ಕೆ ಈಗ ಅವಕಾಶವೂ ಇದೆ, ಎಚ್ಚರಿಕೆಯೂ ಇದೆ. “ಅಬ್ ಕಿ ಬಾರ್ ಟ್ರಂಪ್ ಸರ್ಕಾರ್” ಎಂದು ತಮ್ಮ ವ್ಯಾಪ್ತಿಯನ್ನು ಮೀರಿ ಅಮೆರಿಕದ ನೆಲದಲ್ಲಿ ಅವಿವೇಕದಿಂದ ನುಡಿದ ನಮ್ಮ ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ನಾಯಕರುಗಳು ಮುಂದಕ್ಕೆ ಹೇಗೆ ವರ್ತಿಸುತ್ತಾರೆ ಎನ್ನುವುದರ ಮೇಲೆ ಪರಸ್ಪರ ಸಂಬಂಧಗಳು ನಿಂತಿವೆ.
ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್‌ರಿಗೆ ಶುಭಾಶಯಗಳು. ಇವರ ಮುಂದಿರುವ ಅತಿದೊಡ್ಡ ಸವಾಲು ಜಾಗತಿಕ ತಾಪಮಾನ ಏರಿಕೆಯನ್ನು ನಿಯಂತ್ರಿಸುವುದು ಮತ್ತು ಆ ವಿಚಾರದಲ್ಲಿ ವಿಶ್ವಕ್ಕೆ ನಾಯಕತ್ವ ನೀಡುವುದು. ಅವರ ಯಶಸ್ಸಿನ ಮೇಲೆ ಜಗತ್ತಿನ ಯಶಸ್ಸು ಮತ್ತು ಭವಿಷ್ಯ ನಿಂತಿದೆ ಎಂದರೆ ಸದ್ಯಕ್ಕೆ ಅದು ಅತಿಶಯೋಕ್ತಿ ಅಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.
ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.
ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ
ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್, ಚೇತನ್ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.
ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.
ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.
ಹೌದು! 2023ರ ಆಗಸ್ಟ್‌ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್‌ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.
http://Visit : www.suddidina.com
ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ:
ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್‌ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.
ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್‌ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.
ಕುಟುಂಬದ ಬಜೆಟ್‌ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:
ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.
ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.




