ದಿನದ ಸುದ್ದಿ
ಅಧ್ಯಕ್ಷ ಯಾರಾದರೇನ್ ಯುದ್ಧ ಸಂಸ್ಕೃತಿ ‘ಬಿಡೆನ್’..!
- ನಾ ದಿವಾಕರ
ಹಣಕಾಸು ಬಂಡವಾಳ ವ್ಯವಸ್ಥೆ ಮತ್ತು ನವ ಉದಾರವಾದದ ಪ್ರಪಂಚದಲ್ಲಿ ಪ್ರಜಾತಾಂತ್ರಿಕ ಚುನಾವಣೆಗಳು ಹೆಚ್ಚಿನ ಪ್ರಾಶಸ್ತ್ಯ, ಪ್ರಾಮುಖ್ಯತೆ ಪಡೆಯುತ್ತವೆ. ಸರ್ವಾಧಿಕಾರಿ ಆಡಳಿತ ಇರುವ ದೇಶಗಳಲ್ಲಿ ಈ ಪ್ರಶ್ನೆ ಉದ್ಭವಿಸುವುದಿಲ್ಲ.
ಆದರೆ ಪ್ರಜಾತಂತ್ರವನ್ನು ಒಪ್ಪಿಕೊಂಡಿರುವ ದೇಶಗಳಲ್ಲಿ ಚುನಾಯಿತವಾಗುವ ಸರ್ಕಾರಗಳು ಜಾಗತಿಕ ಬಂಡವಾಳ ಮತ್ತು ಮಾರುಕಟ್ಟೆಗೆ ಹೇಗೆ ಸ್ಪಂದಿಸುತ್ತವೆ ಎನ್ನುವ ಆತಂಕ ಭಾರತವನ್ನೂ ಸೇರಿದಂತೆ ಎಲ್ಲ ದೇಶಗಳಲ್ಲೂ ಕಂಡುಬರುತ್ತದೆ. ಕಾರಣ ಸ್ಪಷ್ಟ, ಸರ್ಕಾರ ಯಾವುದೇ ಜನವಿರೋಧಿ-ಬಂಡವಾಳಶಾಹಿ ಆರ್ಥಿಕ ನೀತಿಯನ್ನು ಜಾರಿಗೊಳಿಸಿದರೂ ಅದಕ್ಕೆ ಜನಮನ್ನಣೆ ಇದೆ ಎನ್ನುವ ಭ್ರಮೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇರುತ್ತದೆ. ಇಂದು ನವಂಬರ್ 8- ಅಮಾನ್ಯೀಕರಣದ ಕರಾಳ ಕ್ಷಣಗಳನ್ನು ನೆನೆಯುವ ದಿನ, 2016ರ ಈ ದಿನವೂ ಸಹ “ಜನಮನ್ನಣೆ”ಯ ನೆಲೆಯಲ್ಲೇ ಸ್ವೀಕೃತವಾಗಿದ್ದನ್ನು ಸ್ಮರಿಸಬಹುದು.
ಈಗ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಗಿದಿದೆ. ಅಮೆರಿಕದ ಜನತೆ ರಿಪಬ್ಲಿಕನ್ ಟ್ರಂಪ್ ಅವರನ್ನು ತಿರಸ್ಕರಿಸಿ ಡೆಮಾಕ್ರಟ್ ಬಿಡನ್ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಇಬ್ಬರು ನಾಯಕರ ನಡುವಿನ ಸ್ಪರ್ಧೆ ಅಮೆರಿಕದ ಜನತೆಯಲ್ಲಿ ಸೃಷ್ಟಿಸಿದ್ದಷ್ಟೇ ಆತಂಕ ಮತ್ತು ಕುತೂಹಲವನ್ನು ಭಾರತದ ಜನತೆಯಲ್ಲೂ ಸೃಷ್ಟಿಸಿತ್ತು. ಈ ಕುತೂಹಲಕ್ಕೆ ಎರಡು ಆಯಾಮಗಳಿವೆ.
ಭಾರತವನ್ನು ಆಳುತ್ತಿರುವ ಬಲಪಂಥೀಯರಿಗೆ, ಆಡಳಿತವನ್ನು ನಿಯಂತ್ರಿಸುತ್ತಿರುವ ಹಿಂದುತ್ವವಾದಿ-ಸಂಘಪರಿವಾರದವರಿಗೆ ಟ್ರಂಪ್ ಫ್ಯಾಸಿಸ್ಟ್ ಶಕ್ತಿಯ ಸಂಕೇತವಾಗಿ ಕಾಣುತ್ತಿದ್ದುದು ಸ್ಪಷ್ಟ. ಬಲಪಂಥೀಯವಾದ-ಮತಾಂಧತೆ-ಫ್ಯಾಸಿಸಂ ಮತ್ತು ನವ ಉದಾರವಾದ ಇವುಗಳ ಸಮ್ಮಿಲನ ಇಡೀ ವಿಶ್ವದ ಪ್ರಭುತ್ವ ನೆಲೆಗಳನ್ನು ಗಟ್ಟಿಗೊಳಿಸುತ್ತಿರುವ ಸಂದರ್ಭದಲ್ಲಿ ಟ್ರಂಪ್‍ನಂತಹ ದೊಡ್ಡಣ್ಣಗಳು ಸ್ವೀಕಾರಾರ್ಹರಾಗುತ್ತಾರೆ.
ಆದರೆ ಅಮೆರಿಕದ ಜನತೆ ಈ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಡೆಮಾಕ್ರಟ್ ಪಕ್ಷದ ಜೋ ಬಿಡೆನ್ ಅವರನ್ನು ಆಯ್ಕೆ ಮಾಡಿದ್ದಾರೆ. ಬಿಡೆನ್ ಆಯ್ಕೆಯಿಂದ ಅಮೆರಿಕದ ಆಂತರಿಕ ಆಡಳಿತ ವ್ಯವಸ್ಥೆಯಲ್ಲಿ ಕೊಂಚ ಬದಲಾವಣೆಗಳನ್ನು ಕಾಣಬಹುದು. ಟ್ರಂಪ್ ಸೋತಿದ್ದರೂ ಆಡಳಿತ ನೀತಿಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಾಶಸ್ತ್ಯ ಪಡೆಯುವ ಸೆನೇಟ್‍ಗಳಲ್ಲಿ ರಿಪಬ್ಲಿಕನ್ ಪಕ್ಷ ಈಗಲೂ ಬಲಿಷ್ಟವಾಗಿದೆ. ಭಾರತದಲ್ಲಿನ ಒಂದು ವರ್ಗದ ಜನತೆಗೆ ಬಿಡೆನ್ ಸ್ವೀಕಾರಾರ್ಹವಾಗುತ್ತಾರೆ.
ಇದಕ್ಕೆ ಕಾರಣ ಬಿಡೆನ್ ಆಯ್ಕೆಯಿಂದ ಯಾವುದೇ ಮಹತ್ತರ ಬದಲಾವಣೆಯಾಗುತ್ತದೆ, ಭಾರತಕ್ಕೆ ಒಳಿತಾಗುತ್ತದೆ ಎನ್ನುವುದಲ್ಲ. ಟ್ರಂಪ್‍ನ ಮಹಿಳಾ ವಿರೋಧಿ, ಇಸ್ಲಾಂ ವಿರೋಧಿ, ಜನಾಂಗೀಯ ದ್ವೇಷ ಧೋರಣೆಗಳು ಕೊನೆಗೊಳ್ಳಬಹುದು ಎನ್ನುವ ಒಂದು ನಂಬಿಕೆಯಷ್ಟೆ. ಈ ನಿರೀಕ್ಷೆಗಳು ಕೊಂಚಮಟ್ಟಿಗೆ ಸಹಜ ಎನಿಸಿದರೂ, ಕಳೆದ ಐದು ದಶಕಗಳ ಅಮೆರಿಕದ ರಾಜಕಾರಣವನ್ನು ಗಮನಿಸಿದರೆ ಇದು ಹುಸಿ ನಿರೀಕ್ಷೆಯಾಗುವ ಸಾಧ್ಯತೆಗಳೇ ಹೆಚ್ಚು.
ಏಕೆಂದರೆ ಅಮೆರಿಕ ಸೃಷ್ಟಿಸಿರುವ ಇಸ್ಲಾಮಿಕ್ ಭಯೋತ್ಪಾದನೆ ಎಂಬ ಪೆಡಂಭೂತ ಒಂದು ಪಕ್ಷದ ಸೃಷ್ಟಿಯಲ್ಲ , ಇದು ಸಾಮ್ರಾಜ್ಯಶಾಹಿ ವ್ಯವಸ್ಥೆ ತನ್ನ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳಲು ಸೃಷ್ಟಿಸಿರುವ ಒಂದು ವಿದ್ಯಮಾನ. ಅದಕ್ಕೆ ಬಲಿಯಾಗಿರುವುದು ಇತರ ರಾಷ್ಟ್ರಗಳೇ ಹೊರತು ಅಮೆರಿಕ ಅಲ್ಲ. 9/11ರ ಒಂದು ಸಂದರ್ಭವನ್ನು ಬಿಟ್ಟರೆ ಅಮೆರಿಕ ಭಯೋತ್ಪಾದಕ ದಾಳಿಗಳಿಗೆ ತುತ್ತಾಗಿಲ್ಲ. ಆದರೆ ಅಮೆರಿಕದ ಸಾಮ್ರಾಜ್ಯಶಾಹಿ ದಾಹಕ್ಕೆ ಭಯೋತ್ಪಾದನೆ ಒಂದು ಪ್ರಬಲ ಅಸ್ತ್ರವಾಗಿ ಇತರ ರಾಷ್ಟ್ರಗಳ ಅಸಂಖ್ಯಾತ ಜನರ ಜೀವಹರಣ ಮಾಡಿದೆ. ಮತ್ತೊಂದೆಡೆ ಅಮೆರಿಕದ ಕಪ್ಪು ಜನಾಂಗದ ಜನರ ಮೇಲಿನ ದೌರ್ಜನ್ಯಗಳೂ ಸಹ ಯಾವುದೋ ಒಂದು ರೀತಿಯಲ್ಲಿ ನಡೆಯುತ್ತಲೇ ಇದೆ.
ಇತ್ತೀಚಿನ ಫ್ಲಾಯ್ಡ್ ಘಟನೆಯ ನಂತರ ನಡೆದ ಬ್ಲಾಕ್ ಲೈಫ್ ಮ್ಯಾಟರ್ಸ್ ಆಂದೋಲನ ಟ್ರಂಪ್ ಅವರ ಸೋಲಿಗೆ ಎಷ್ಟರ ಮಟ್ಟಿಗೆ ಕಾರಣವಾಗಿದೆ ಎಂದು ಸ್ಪಷ್ಟವಾಗಿಲ್ಲ. ಮಹಿಳೆಯರ ಬಗ್ಗೆ ತುಚ್ಚವಾಗಿ ಮಾತನಾಡಿ ಮಹಿಳಾ ಆಂದೋಲನಗಳ ಕೆಂಗಣ್ಣಿಗೆ ಗುರಿಯಾಗಿದ್ದ ಟ್ರಂಪ್‍ಗೆ ಅನೇಕ ರಾಜ್ಯಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿದ್ದಾರೆ.
ಕಪ್ಪು ಜನಾಂಗದವರೂ ಸಹ ಹೆಚ್ಚಿನ ಬೆಂಬಲ ನೀಡಿದ್ದಾರೆ. ಆದಾಗ್ಯೂ ಟ್ರಂಪ್ ಈ ಬಾರಿ ನಿರೀಕ್ಷೆಗೂ ಮೀರಿ ಸೋಲನುಭವಿಸಿದ್ದರೆ ಅದಕ್ಕೆ ಕಾರಣ ಅವರ ದ್ವೇಷ ರಾಜಕಾರಣ, ಬಿಳಿಯರ ಶ್ರೇಷ್ಠತೆ ಮತ್ತು ಪಾರಮ್ಯವನ್ನು ಮೆರೆಯುವ ಅಹಮಿಕೆ, ಇಸ್ಲಾಂ ವಿರೋಧಿ ಧೋರಣೆ ಮತ್ತು ಗೊಂದಲಯ ವಿದೇಶಾಂಗ ನೀತಿ. ಕೊರೋನಾ ನಿಯಂತ್ರಣದಲ್ಲಿ ವಿಫಲವಾಗಿರುವುದೂ ಒಂದು ಕಾರಣ ಎನ್ನಲಾಗುತ್ತಿದೆ.
ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಅಮೆರಿಕ ಹೆಚ್ಚಿನ ಯುದ್ಧಗಳಲ್ಲಿ ತೊಡಗಿಲ್ಲ ಎನ್ನುವ ಪ್ರಶಂಸೆಯ ಮಾತುಗಳು ಸಹ ಕೇಳಿಬರುತ್ತಿವೆ. ಭಾರತದಲ್ಲೂ ಕೆಲವು ವಿಶ್ಲೇಷಕರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ 2017ರ ಜನವರಿಯಲ್ಲಿ ಅಧಿಕಾರಕ್ಕೆ ಬರುವ ಮುನ್ನ ಮಧ್ಯಪ್ರಾಚ್ಯ ದೇಶಗಳಿಂದ ಸೇನೆಯನ್ನು ಹಿಂಪಡೆಯುವ ಆಶ್ವಾಸನೆ ನೀಡಿದ್ದ ಟ್ರಂಪ್ ಸಿರಿಯಾ ಮೇಲೆ 52 ಬಾರಿ ಕ್ಷಿಪಣಿ ದಾಳಿ ನಡೆಸಿದ್ದಾರೆ. ವೆನೆಜುವೆಲಾದಲ್ಲಿ ಕ್ಷಿಪ್ರ ಕ್ರಾಂತಿಗೆ ಪ್ರಯತ್ನಿಸಿ ವಿಫಲವಾಗಿದ್ದಾರೆ.
ಆಫ್ಘಾನಿಸ್ಥಾನದಲ್ಲಿ ಅಮೆರಿಕದ ಡ್ರೋನ್ ದಾಳಿಗಳಿಂದ ನೂರಾರು ಸಾವುಗಳು ಸಂಭವಿಸಿವೆ. ದೊಡ್ಡ ಪ್ರಮಾಣದ ಯುದ್ಧಗಳು ಸಂಭವಿಸದಿರುವುದಕ್ಕೆ ಬಂಡವಾಳ ವ್ಯವಸ್ಥೆ ಎದುರಿಸುತ್ತಿರುವ ಮಾರುಕಟ್ಟೆ ಬಿಕ್ಕಟ್ಟುಗಳು ಕಾರಣ ಎನ್ನುವುದನ್ನೂ ಗಮನಿಸಬೇಕು. ಯುದ್ಧಗಳು ಬಂಡವಾಳ ಮತ್ತು ಭೌಗೋಳಿಕ ವಿಸ್ತರಣೆಯ ಒಂದು ಸಾಧನವಾಗಿರುವುದರಿಂದ ಅವಶ್ಯಕತೆ ಇದ್ದಾಗ ಮಾತ್ರವೇ ಸಂಭವಿಸುತ್ತದೆ. ಇದಕ್ಕೆ ಚೀನಾ ಸಹ ಹೊರತಲ್ಲ, ಭಾರತವೂ ಹೊರತಲ್ಲ.
ಹಾಗೆಂದ ಮಾತ್ರಕ್ಕೆ ಟ್ರಂಪ್ ಶಾಂತಿಪ್ರಿಯರೇನೂ ಆಗಿರಲಿಲ್ಲ. ಚೀನಾದೊಡನೆ ನಿರಂತರ ಸಂಘರ್ಷದಲ್ಲಿದ್ದ ಟ್ರಂಪ್ ಸರ್ಕಾರಕ್ಕೆ ಯುದ್ಧದ ಸನ್ನಿವೇಶ ಸೃಷ್ಟಿಸುವಷ್ಟು ಆರ್ಥಿಕ ಸ್ಥಿರತೆ ಇರಲಿಲ್ಲ. ಆದರೆ ಯಾವುದೇ ಸಂದರ್ಭದಲ್ಲಿ ಯುದ್ಧ ಸಂಭವಿಸಿದರೂ ನಿರ್ವಹಿಸುವ ನಿಟ್ಟಿನಲ್ಲಿ ಅಮೆರಿಕದ ಸೇನಾ ವಲಯ ಸಿದ್ಧತೆ ನಡೆಸಿಯೇ ಇತ್ತು.
ಈ ಅಸಹಾಯಕತೆಯಿಂದಲೇ ಟ್ರಂಪ್ ಆಡಳಿತ ಉತ್ತರ ಕೊರಿಯಾ ಮತ್ತು ಇರಾನ್ ನೊಡನೆ ಸ್ನೇಹ ಹಸ್ತ ಚಾಚುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಿತ್ತು. ಆದರೆ ಪ್ಯಾಲೆಸ್ಟೈನ್ ನಲ್ಲಿ ಇಸ್ರೇಲಿನ ಫ್ಯಾಸಿಸ್ಟ್ ಆಕ್ರಮಣಗಳಿಗೆ ಅಮೆರಿಕದ ನೀತಿ ಬದಲಾಗಿರಲಿಲ್ಲ. ಇದು ಸಾಧ್ಯವಾಗುವುದೂ ಇಲ್ಲ. ಏಕೆಂದರೆ ಕಳೆದ 70 ವರ್ಷಗಳಿಂದಲೂ ಅಮೆರಿಕದ ವಿದೇಶಾಂಗ ನೀತಿಯ ಕೆಲವು ಅಂಶಗಳು ಸಾಮ್ರಾಜ್ಯಶಾಹಿಯ ಚೌಕಟ್ಟಿನಿಂದ ಹೊರಬರಲು ಸಾಧ್ಯವಾಗಿಲ್ಲ.
ವಿಶ್ವದ ಸಮುದಾಯಗಳ ದೃಷ್ಟಿಯಲ್ಲಿ ಅಮೆರಿಕದಲ್ಲಿ ಸರ್ಕಾರಗಳು ಬದಲಾಗುವುದೆಂದರೆ ಹೆಚ್ಚಿನ ಆತಂಕ ಮೂಡಿಸುತ್ತವೆ. ಮತ್ತಾವ ದೇಶದ ಮೇಲೆ ಯುದ್ಧ ಸಾರಲಾಗುತ್ತದೆ, ಮತ್ತಾವ ದೇಶದಲ್ಲಿ ಭಯೋತ್ಪಾದನೆಯನ್ನು ಮಟ್ಟಹಾಕಲು ಸೇನೆಯನ್ನು ನಿಯೋಜಿಸಲಾಗುತ್ತದೆ, ಪ್ರಜಾತಂತ್ರ ಸ್ಥಾಪಿಸಲು ಮತ್ತು ವಿಶ್ವಶಾಂತಿಗಾಗಿ ಮತ್ತಾವ ಸಣ್ಣ ರಾಷ್ಟ್ರದ ಮೇಲೆ ಮಾರಣಾಂತಿಕ ಆಕ್ರಮಣ ನಡೆಸಲಾಗುತ್ತದೆ, ಹೀಗೆ ಹಲವು ಅನುಮಾನಗಳು ವಿಶ್ವ ಸಮುದಾಯವನ್ನು ಕಾಡುತ್ತಲೇ ಇರುತ್ತದೆ. ಇಲ್ಲಿ ಅಮೆರಿಕದ ರಿಪಬ್ಲಿಕನ್ ಮತ್ತು ಡೆಮಾಕ್ರಟ್ ಪಕ್ಷಗಳ ನಡುವೆ ವ್ಯತ್ಯಾಸವನ್ನೇನೂ ಕಾಣಲಾಗುವುದಿಲ್ಲ.
ವಿಶ್ವ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಬರಾಕ್ ಒಬಾಮ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಮೆರಿಕ ಅತಿ ಹೆಚ್ಚು ಬಾಂಬ್ ದಾಳಿಗಳನ್ನು ನಡೆಸಿದ್ದುದನ್ನು ಸ್ಮರಿಸಬಹುದು. ಜಾರ್ಜ್ ಬುಷ್ ಅವರಿಗಿಂತಲೂ ಹೆಚ್ಚಿನ ಬಾಂಬ್ ದಾಳಿ ನಡೆಸಿರುವ ಕುಖ್ಯಾತಿ ಒಬಾಮಾ ಅವರಿಗೆ ಸಲ್ಲುತ್ತದೆ. ಡ್ರೋನ್‍ಗಳ ಮೂಲಕ ಸಣ್ಣಪುಟ್ಟ ರಾಷ್ಟ್ರಗಳ ಮೇಲೆ ದಾಳಿ ನಡೆಸುವ ಆಧುನಿಕ ಯುದ್ಧಪರಂಪರೆಗೆ ಒಬಾಮಾ ನಾಂದಿ ಹಾಡಿದ್ದರು. ಒಬಾಮಾ ಅವರ ಎರಡು ಅಧಿಕಾರಾವಧಿಯಲ್ಲಿ ಪಾಕಿಸ್ತಾನ, ಸೊಮಾಲಿಯಾ, ಯೆಮನ್ ಮುಂತಾದ ದೇಶಗಳ ಮೇಲೆ 563 ವೈಮಾನಿಕ ದಾಳಿ ನಡೆದಿದ್ದವು. ಈ ದೇಶಗಳಲ್ಲಿ ಕನಿಷ್ಟ 300 ರಿಂದ 800 ನಾಗರಿಕರು ಈ ದಾಳಿಗೆ ಬಲಿಯಾಗಿದ್ದರು.
ಆಫ್ಘಾನಿಸ್ತಾನ ಮತ್ತು ಇರಾಕ್‍ನಲ್ಲಿ ಅಮೆರಿಕದ ಪಡೆಗಳ ಸಂಖ್ಯೆಯನ್ನು ಒಬಾಮಾ ಕಡಿಮೆ ಮಾಡಿದರೂ ವಿಶ್ವದಾದ್ಯಂತ ನಡೆಸಿದ ವೈಮಾನಿಕ ದಾಳಿ, ಡ್ರೋನ್ ದಾಳಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದುದೂ ಸತ್ಯ. 2016ರಲ್ಲಿ ಅಮೆರಿಕದ ವಿಶೇಷ ಸೇನಾ ಕಾರ್ಯಪಡೆಗಳು ವಿಶ್ವದ ಶೇ 70 ರಷ್ಟು, ಅಂದರೆ 138 ರಾಷ್ಟ್ರಗಳಲ್ಲಿ ನೆಲೆ ಮಾಡಿದ್ದವು. 2016ರಲ್ಲೇ, ತಮ್ಮ ಅಧಿಕಾರದ ಕೊನೆಯ ವರ್ಷದಲ್ಲಿ, ಒಬಾಮಾ ಆಡಳಿತ 26171 ವೈಮಾನಿಕ ಬಾಂಬ್ ದಾಳಿ ನಡೆಸಿತ್ತು ಎಂದು ಅಲ್ಲಿನ ರಕ್ಷಣಾ ವಲಯದ ದಾಖಲೆಗಳು ಹೇಳುತ್ತವೆ. ಸಿರಿಯಾ ಮತ್ತು ಇರಾಕ್ ಈ ಬಾಂಬ್ ದಾಳಿಗೆ ಹೆಚ್ಚಾಗಿ ತುತ್ತಾದರೂ, ಆಫ್ಘಾನಿಸ್ತಾನ, ಲಿಬ್ಯಾ, ಯೆಮನ್, ಸೊಮಾಲಿಯಾ ಮತ್ತು ಪಾಕಿಸ್ತಾನದ ಜನತೆಯೂ ಇದರ ದುಷ್ಪರಿಣಾಮಗಳನ್ನು ಎದುರಿಸಬೇಕಾಯಿತು.
ಈ ಚಾರಿತ್ರಿಕ ಹಿನ್ನೆಲೆಯಲ್ಲಿ ನೋಡಿದಾಗ ಅಮೆರಿಕದ ಚುನಾವಣಾ ಫಲಿತಾಂಶಗಳು ನಮ್ಮೊಳಗೆ ಉಂಟುಮಾಡುವ ಉತ್ಸಾಹ ಮತ್ತು ಕುತೂಹಲ ಉತ್ಪ್ರೇಕ್ಷೆಯಿಂದ ಕೂಡಿರಬೇಕಿಲ್ಲ ಎನಿಸುತ್ತದೆ. ಆಂತರಿಕವಾಗಿ ಅಮೆರಿಕದ ಹೊಸ ಸರ್ಕಾರದ ನೀತಿಗಳು ಬದಲಾಗುತ್ತವೆ. ಕಪ್ಪು ಜನಾಂಗದ ಜನತೆ ಡೆಮಾಕ್ರಟ್ ಆಡಳಿತದಲ್ಲಿ ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಂಡುಕೊಳ್ಳಬಹುದು.
ಟ್ರಂಪ್ ಅನುಸರಿಸಲು ಯೋಚಿಸಿದ್ದ “ ಅಮೆರಿಕ ಅಮೆರಿಕದ ಪ್ರಜೆಗಳಿಗಾಗಿ ” ಎನ್ನುವ ಧೋರಣೆ ಬದಲಾಗಬಹುದು. ವಿಶ್ವ ವಾಣಿಜ್ಯ ಸಂಸ್ಥೆಯ ನವ ಉದಾರವಾದ ಮತ್ತು ಜಾಗತೀಕರಣ ನೀತಿಗಳಿಗೆ ಬಿಡೆನ್ ಬದ್ಧತೆ ತೋರಬಹುದು. ಟ್ರಂಪ್ ಆಡಳಿತದಲ್ಲಿ ಅನುಸರಿಸಲಾಗಿದ್ದ ಮುಸ್ಲಿಂ ವಿರೋಧಿ ನೀತಿಗಳು, ಇಸ್ಲಾಂ ಭೀತಿ ಸೃಷ್ಟಿಸುವ ನೀತಿಗಳು ಬದಲಾಗಬಹುದು.
ಆದರೆ ಜಾಗತಿಕ ರಾಜಕಾರಣದಲ್ಲಿ ಇದಾವುದೂ ಪ್ರಭಾವ ಬೀರುವುದಿಲ್ಲ. ವಿಶ್ವದಾದ್ಯಂತ ಜನಸಾಮಾನ್ಯರಲ್ಲಿ , ಶ್ರಮಜೀವಿಗಳಲ್ಲಿ, ಶೋಷಿತರಲ್ಲಿ ಮತ್ತು ಸಾಮ್ರಾಜ್ಯಶಾಹಿಗಳ ದಾಳಿಗೆ ತುತ್ತಾದ ಸಣ್ಣಪುಟ್ಟ ರಾಷ್ಟ್ರಗಳಲ್ಲಿ ಇರುವ ಪ್ರಗತಿಪರ, ಫ್ಯಾಸಿಸ್ಟ್ ವಿರೋಧಿ ಮತ್ತು ಪ್ರಜಾತಂತ್ರವಾದಿಗಳು ಗಮನಿಸಬೇಕಾದ ಅಂಶವೆಂದರೆ ಅಮೆರಿಕದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಅಲ್ಲಿನ ಸಾಮ್ರಾಜ್ಯಶಾಹಿ ನೀತಿಗಳು ಬದಲಾಗುವುದಿಲ್ಲ, ವಿಸ್ತರಣಾವಾದ ಮತ್ತು ಸಂಪತ್ತಿನ ಮೇಲಿನ ನಿಯಂತ್ರಣದ ಹಪಹಪಿ ಕಡಿಮೆಯಾಗುವುದಿಲ್ಲ. ಅಮೆರಿಕ ವಿಶ್ವಶಾಂತಿಗಾಗಿ ಶ್ರಮಿಸುವ ಉದಾತ್ತ ಮಾತುಗಳನ್ನು ಆಡುತ್ತಲೇ ವಿಶ್ವದಾದ್ಯಂತ ಶಾಂತಿಯನ್ನು ಕದಡುವ ಯುದ್ಧಪರಂಪರೆಯನ್ನು ಪೋಷಿಸುತ್ತಲೇ ಬಂದಿದೆ.
ಇನ್ನು ಮುಂದೆಯೂ ಪೋಷಿಸುತ್ತಲೇ ಇರುತ್ತದೆ. ಆಂತರಿಕವಾಗಿ ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗಳಿಗೆ ಅನುಗುಣವಾಗಿ ಆಡಳಿತ ನಿಭಾಯಿಸುವ ಅಲ್ಲಿನ ಆಳುವ ವರ್ಗಗಳು ಬಾಹ್ಯ ಜಗತ್ತಿನಲ್ಲಿ ಅಮೆರಿಕದ ಬಂಡವಾಳಿಗರಿಗೆ ನೆಲೆ ಕಂಡುಕೊಳ್ಳಲು ಐಎಂಎಫ್, ವಿಶ್ವ ವಾಣಿಜ್ಯ ಸಂಸ್ಥೆ ಮುಂತಾದ ಆರ್ಥಿಕ ಅಸ್ತ್ರಗಳನ್ನು ಬಳಸುತ್ತಲೇ, ತೈಲ ಸಂಪತ್ತು, ಖನಿಜ ಸಂಪತ್ತು ಮತ್ತು ಅಗ್ಗದ ಶ್ರಮದ ಮೇಲೆ ತನ್ನ ಅಧಿಪತ್ಯ ಸಾಧಿಸಲು ತನ್ನ ಸೇನೆಯನ್ನೂ ಸಮರ್ಥವಾಗಿ ಬಳಸುತ್ತದೆ. ತಾಲಿಬಾನ್ ನಿಂದ ಐಸಿಸ್ ವರೆಗಿನ ಬೆಳವಣಿಗೆಗಳಿಗೆ ಈ ವಿಸ್ತರಣಾವಾದವೇ ಮೂಲ ಕಾರಣ ಎನ್ನುವುದನ್ನೂ ಗಮನಿಸಬೇಕಿದೆ.
ಹಣಕಾಸು ಬಂಡವಾಳ ಮತ್ತು ಬಂಡವಾಳಶಾಹಿ ವ್ಯವಸ್ಥೆ ಎದುರಿಸುತ್ತಿರುವ ಪ್ರಸ್ತುತ ಬಿಕ್ಕಟ್ಟಿನಿಂದ ಹೊರಬರಲು ಸಾಮ್ರಾಜ್ಯಶಾಹಿ ದೇಶಗಳು ಭಾರತವನ್ನೂ ಸೇರಿದಂತೆ ಹಲವು ರಾಷ್ಟ್ರಗಳನ್ನು ಚಿಮ್ಮು ಹಲಗೆಯಂತೆ ಬಳಸಿಕೊಳ್ಳುತ್ತವೆ. ಭಾರತದಲ್ಲೂ ಆಡಳಿತ ವ್ಯವಸ್ಥೆಯ ಮೇಲೆ ಬಹುಮಟ್ಟಿಗೆ ನಿಯಂತ್ರಣ ಸಾಧಿಸಿರುವ ಕಾರ್ಪೋರೇಟ್ ಹಿತಾಸಕ್ತಿಗಳು ಇದನ್ನು ಸ್ವಾಗತಿಸುತ್ತವೆ. ಅಮೆರಿಕ ವಿಶ್ವಶಾಂತಿಯ ಮಂತ್ರ ಜಪಿಸಿದರೆ ಭಾರತದ ಆಳುವ ವರ್ಗಗಳು ದೇಶಭಕ್ತಿಯ ಮಂತ್ರ ಜಪಿಸುತ್ತವೆ. ಎರಡೂ ಮಂತ್ರಗಳ ಮೂಲ ಇರುವುದು ಶ್ರಮಜೀವಿಗಳ ಶೋಷಣೆಯಲ್ಲಿ ಮತ್ತು ಸಂಪನ್ಮೂಲಗಳ ಲೂಟಿಯಲ್ಲಿ. ಈ ನಡುವೆ ಯುದ್ಧ ಸಂಭವಿಸಿದರೂ ಅದು ನಿಮಿತ್ತ ಮಾತ್ರ.
(ಕೆಲವು ಮಾಹಿತಿಗಳ ಆಕರ- ಪೀಪಲ್ಸ್ ರಿವ್ಯೂ ಮತ್ತಿತರ ಪತ್ರಿಕೆಗಳು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.
ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.
ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ
ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್, ಚೇತನ್ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.
ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.
ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.
ಹೌದು! 2023ರ ಆಗಸ್ಟ್‌ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್‌ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.
http://Visit : www.suddidina.com
ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ:
ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್‌ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.
ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್‌ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.
ಕುಟುಂಬದ ಬಜೆಟ್‌ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:
ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.
ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.




