ನೆಲದನಿ
ರಂಗ ದಾಸೋಹಿ ಪ್ರಭು ಗುರಪ್ಪನವರ : ಬದುಕು ಮತ್ತು ಹೋರಾಟದ ನಡುವೆ

ಮಾನವನ ಉಗಮದೊಂದಿಗೆ ರಂಗಭೂಮಿಯ ನಂಟು ನಿರಂತರವಾಗಿ ನಡೆದುಕೊಂಡು ಬಂದಿದೆ. ಮಾನವನ ವಿಕಾಸವಾದಂತೆ ರಂಗಭೂಮಿಯೂ ಆಯಾ ಕಾಲಕ್ಕೆ ತಕ್ಕಂತೆ ತನ್ನ ಗುಣ ಮತ್ತು ಸ್ವರೂಪಗಳಲ್ಲಿ ಬದಲಾವಣೆಯನ್ನು ಪಡೆದುಕೊಂಡು ಸಾಗಿದೆ. ನಮಗೆ ರಂಗಭೂಮಿ ಎಂದ ತಕ್ಷಣ ನಾಟಕ, ಅಭಿನಯ ಮುಂತಾದ ಸನ್ನಿವೇಶಗಳು ಎದುರಾಗುತ್ತವೆ. ಆದರೆ ತೆರೆಮರೆಯಲ್ಲಿ ನಿಂತು ರಂಗಭೂಮಿಯನ್ನು ಕಟ್ಟಿ ಬೆಳೆಸಿದ ಬಹುತೇಕ ಸಾಧಕರು ಎಲೆ ಮರೆಯಂತಾಗುತ್ತಾರೆ. ಇಂತಹ ರಂಗಭೂಮಿ ತಪಸ್ವಿ ಹಾಗೂ ಹೋರಾಟಗಾರರಲ್ಲಿ ಶೇಷಗಿರಿಯ ಪ್ರಭು ಗುರಪ್ಪನವರು ಒಬ್ಬರಾಗಿದ್ದಾರೆ.
ಹಾವೇರಿ ಜಿಲ್ಲೆ. ಹಾನಗಲ್ ತಾಲ್ಲೂಕಿನ ಶೇಷಗಿರಿ ಎಂಬ ಪುಟ್ಟ ಗ್ರಾಮದಲ್ಲಿ ಶ್ರೀ ಸಿದ್ಧಪ್ಪ ಗುರಪ್ಪನವರ ಹಾಗೂ ಶ್ರೀಮತಿ ಅನಸಮ್ಮ ಗುರಪ್ಪನವರ ಪುತ್ರನಾಗಿ ಜನಿಸಿದ ಪ್ರಭು ಗುರಪ್ಪನವರ ಅವರು ಪಿ.ಯು.ಸಿ ವರೆಗೆ ಶಿಕ್ಷಣವನ್ನು ಪಡೆದು, ನಂತರದ ದಿನಗಳಲ್ಲಿ ಸ್ವಗ್ರಾಮದಲಿ ಪೋಸ್ಟ್ ಮಾಸ್ತರ್ ವೃತ್ತಿಯನ್ನು ಕೈಗೊಂಡರು. ಈ ವೃತ್ತಿಯ ಜೊತೆ ಜೊತೆಯಲ್ಲಿಯೇ ಸಾಮಾಜಿಕ ಜಾಗೃತಿ, ಹೋರಾಟ ಹಾಗೂ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದರು. ಇವರಿಗೆ ರಂಗಭೂಮಿಯ ನಂಟು ಬಾಲ್ಯದ ದಿನಗಳಿಂದಲೂ ಪ್ರಭಾವ ಬೀರಿತ್ತು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿಯೇ ಕೆಲವು ನಾಟಕಗಳಲ್ಲಿ ಅಭಿನಯಿಸುವ ಮೂಲಕವಾಗಿ ಅಭಿನಯ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಹೀಗಾಗಿ ಇದು ಮುಂದಿನ ದಿನಗಳಲ್ಲಿ ಇವರನ್ನು ರಂಗಭೂಮಿಯತ್ತ ಮುನ್ನಡೆಸಲು ಪ್ರಚೋದಕ ಶಕ್ತಿಯಾಗಿ ಕಾರ್ಯನಿರ್ವಹಿಸಿತು. ಸಾಮಾಜಿಕ ಅರಿವು ಮೂಡಿಸುವಂತಹ ಬೀದಿ ನಾಟಕಗಳು ಹಾಗೂ ಸಾಮಾಜಿಕ ನಾಟಕಗಳು ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದವು. ಇದರ ಪರಿಣಾಮವಾಗಿ ವೀರಭದ್ರಪ್ಪ ಬಡಿಗೇರ್ ಎಂಬ ನಾಟಕ ಮಾಸ್ತರರ ಒತ್ತಾಸೆಯಿಂದ ಪ್ರಥಮ ಬಾರಿಗೆ ‘ದೀಪಾವಳಿ’ ಎಂಬ ನಾಟಕದಲ್ಲಿ ಪ್ರದರ್ಶನ ನೀಡಿ ಜನ ಮೆಚ್ಚುಗೆಯನ್ನು ಗಳಿಸಿದರು. ಹೀಗೆ ಪ್ರಾರಂಭವಾದ ಇವರ ನಾಟಕ ಯಾತ್ರೆಯು ಹಲವಾರು ನಾಟಕ ಪ್ರಕಾರಗಳಲ್ಲಿ ಇವರನ್ನು ತಲ್ಲಿನಗೊಳಿಸಿತು.
ಶ್ರೀಯುತ ಪ್ರಭು ಗುರಪ್ಪನವರು ನಾಟಕ ಪ್ರಕಾರವನ್ನು ಕೇವಲ ಹವ್ಯಾಸ ಹಾಗೂ ಮನರಂಜನೆಯ ಮಾಧ್ಯಮವಾಗಿ ಸ್ವೀಕರಿಸಲಿಲ್ಲ. ಆ ಮೂಲಕ ಸಾಮಾಜಿಕ ಜಾಗೃತಿ ಹಾಗೂ ಸಾಮಾನ್ಯ ಜನತೆಗೆ ಅರಿವು ಮೂಡಿಸುವ ಮಾಧ್ಯಮವಾಗಿ ಗುರುತಿಸಿಕೊಂಡರು. ತಮ್ಮ ವಿದ್ಯಾಭ್ಯಾಸ ಮುಗಿಸಿ ಸ್ವಗ್ರಾಮಕ್ಕೆ ಮರಳಿದ ತರುವಾಯ 1983 ರಲ್ಲಿ ಪೋಸ್ಟ್ ಮಾಸ್ತರ್ ಹುದ್ಧೆಗೆ ಸೇರಿಕೊಂಡರು. ಇಲ್ಲಿಂದ ಆರಂಭವಾದ ಇವರ ಸೇವೆಯು, ಸಾಮಾಜಿಕ ಸೇವೆಯ ಜೊತೆ ಜೊತೆಯಲ್ಲಿಯೇ ನಾಟಕದ ಯಾತ್ರೆಯು ಆರಂಭವಾಯಿತು. ತಮ್ಮ ಗ್ರಾಮದ ಕೆಲವರ ಹಿತಾಸಕ್ತಿಗೆ ಬಲಿಯಾಗಿ ಸಾಮಾನ್ಯ ಜನತೆಯು ಹಲವಾರು ಶೋಷಣೆಗೆ ಒಳಗಾಗಿದ್ದರು. ಹಾಗೆಯೇ ಇಲ್ಲಿನ ಬಸವೇಶ್ವರ ದೇವಾಲಯದ ಜಾತ್ರೆಯು ಸ್ಥಗಿತಗೊಂಡಿತ್ತು. ಪ್ರಥಮ ಭಾರಿಗೆ ಈ ಗ್ರಾಮದ ಯುವಜನತೆಯನ್ನು ಒಟ್ಟುಗೂಡಿಸಿ ಜಾತ್ರೆಗೆ ಚಾಲನೆ ನೀಡಿದರು. ಆ ಮೂಲಕವಾಗಿ ಗ್ರಾಮದ ಜನತೆಯಲ್ಲಿ ಐಕ್ಯತೆ ಹಾಗೂ ಹೋರಾಟದ ಕೆಚ್ಚು ಮೂಡಿಸಿದರು. ತಮ್ಮ ಗ್ರಾಮದಲ್ಲಿ ಮೊದಲ ಭಾರಿಗೆ ಗಣೇಶ ಚೌತಿಯನ್ನು ಕೂರಿಸುವ ಮೂಲಕ ಯುವಜನತೆಯ ಸಹಕಾರದಿಂದ ಗ್ರಾಮದ ರಸ್ತೆ ನಿರ್ಮಾಣ, ಗಿಡ ನೆಡುವುದು ಇತ್ಯಾದಿ ಜನಪರ ಯೋಜನೆಗಳನ್ನು ಕೈಗೊಂಡರು. ನಂತರ 1986 ರಲ್ಲಿ ‘ಗಜಾನನ ಯುವಕ ಮಂಡಳ’ವನ್ನು ಸ್ಥಾಪಿಸುವ ಮೂಲಕವಾಗಿ ಮತ್ತಷ್ಟು ಜನಪರ ಯೋಜನೆಗಳನ್ನು ಕೈಗೊಂಡು ಜನತೆಯ ಮೂಲಭೂತ ಸೌಕರ್ಯಗಳಿಗೆ ಅಗತ್ಯವಾದ ಶಾಲೆ, ದವಾಖಾನೆ, ಬ್ಯಾಂಕ್ಗಳನ್ನು ತೆರೆಯುವತ್ತ ತಮ್ಮ ಹೋರಾಟವನ್ನು ಮುಂದುವರೆಸಿ ಯಶಸ್ವಿಯಾದರು. ಇದರ ಜೊತೆಯಲ್ಲಿ ಬಡ ಜನತೆಗೆ ಅಗತ್ಯವಾದ ಸಾಲ ಸೌಲಭ್ಯ, ನಿರಾವರಿ ಯೋಜನೆಗಳನ್ನು ಅನುಷ್ಟಾನಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಹೀಗೆ ಸಾಮಾಜಿಕ ಹೋರಾಟಗಳ ಜೊತೆಯಲ್ಲಿ ತಮ್ಮ ಕನಸಿನ ಕೂಸಾದ ರಂಗಭೂಮಿಗೆ ಶಾಶ್ವತವಾದ ವೇದಿಕೆಯನ್ನು ನಿರ್ಮಿಸುವಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ.
ಗಜಾನನ ಯುವಕ ಮಂಡಳದ ಅಡಿಯಲ್ಲಿ ಹಲವಾರು ಯುವಜನ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಸ್ಪರ್ಧಿಸಿ ಹಲವಾರು ಭಾರಿ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗೆಯೇ ಈ ಮಂಡಳದ ಸಹಕಾರದಲ್ಲಿ ಶಾಲಾ ಮಕ್ಕಳಿಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕವಾಗಿ ಮಕ್ಕಳಲ್ಲಿ ಅಂತರ್ಗತವಾಗಿರುವ ಕಲೆಯನ್ನು ಗುರುತಿಸುವಂತಹ ಹಲವಾರು ಕಾರ್ಯಕ್ರಮಗಳನ್ನು ನೆರವೇರಿಸಿಕೊಂಡು ಬಂದಿದ್ದಾರೆ. 1990 ರಿಂದ ಹೆಸರಾಂತ ಸಾಹಿತಿಗಳು, ಚಿಂತಕರು ಆದ ಸತೀಶ್ ಕುಲಕರ್ಣಿಯವರ ಸಹಕಾರ ಪಡೆದು ಹಲವಾರು ವಿಶಿಷ್ಟ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುತ್ತಾರೆ. ಶ್ರೀಯುತ ಪ್ರಭು ಗುರಪ್ಪನವರು ತಮ್ಮ ರಂಗಭೂಮಿಯ ವ್ಯಾಮೋಹದ ಫಲವಾಗಿ 1992 ರಲ್ಲಿ ‘ನಿನಾಸಂ’ ರಂಗ ಶಿಬಿರದಲ್ಲಿ ಪಾಲ್ಗೊಂಡು, ಅಲ್ಲಿ ಪ್ರದರ್ಶನಗೊಂಡ ‘ತಲೆದಂಡ’ ಮತ್ತು ‘ಸಂಗ್ಯಾಬಾಳ್ಯಾ’ ನಾಟಕಗಳಿಂದ ಪ್ರಭಾವಿತರಾಗಿ ನಾವು ಕೂಡ ಇದೆ ತರಹದ ನಾಟಕಗಳನ್ನು ಪ್ರದರ್ಶಿಸಬೇಕು ಎಂಬ ಹಠವೊತ್ತು ಬಂದರು. ಹಾಗೆಯೇ ಇದಕ್ಕೆ ಪೂರಕವಾದ ಕಲಾಕ್ಷೇತ್ರವನ್ನು ನಿರ್ಮಿಸಬೇಕೆಂಬ ಮಹಾದಾಸೆಯನ್ನು ಹೊತ್ತು ಬಂದರು. ಇವರಲ್ಲಿ ಒಡಮೂಡಿದ ಈ ಕನಸಿಗೆ ಹಲವಾರು ಗ್ರಾಮಸ್ಥರು ಹಾಗೂ ಕೆಲವು ರಾಜಕಾರಣಿಗಳು ಯಾವುದೇ ಫಲಾಪೇಕ್ಷೆ ಇಲ್ಲದೆ ಸಹಕಾರ ನೀಡಿದರು. ಈ ಎಲ್ಲರನ್ನು ಒಟ್ಟುಗೂಡಿಸುವ ಮೂಲಕವಾಗಿ, ಡಾ. ಶ್ರೀಪಾದಭಟ್ಟ್ ಅವರ ಸಹಕಾರ ಮತ್ತು ನಿರ್ದೇಶನದಲ್ಲಿ ಹಲವಾರು ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳನ್ನು ಪ್ರದರ್ಶನ ನೀಡುತ್ತ ಬಂದಿದ್ದಾರೆ. ಹಾಗೆಯೇ ಸುಸಜ್ಜಿತ ರಂಗಭೂಮಿಗೆ ಅಗತ್ಯವಾದ ಜಮೀನು ಖರೀದಿಸಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ 2010 ರಲ್ಲಿ ‘ಸಿ.ಎಂ ಉದಾಸಿ ಕಲಾಕ್ಷೇತ’್ರವನ್ನು ನಿರ್ಮಿಸುವ ಮೂಲಕವಾಗಿ ದೇಶ ಮಾತ್ರವಲ್ಲದೆ, ವಿದೇಶಿ ರಂಗಾಸಕ್ತರನ್ನು ಕೂಡ ತಮ್ಮ ಗ್ರಾಮದತ್ತ ಸೆಳೆದ ಕೀರ್ತಿಯು ಪ್ರಭು ಗುರಪ್ಪನವರದಾಗಿದೆ. ಈ ಕಲಾಕ್ಷೇತ್ರದಲ್ಲಿ ದೂರದಿಂದ ಬರುವ ಕಲಾವಿದರಿಗೆ ತಂಗಲು ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಶ್ರೀಯುತ ಪಾತ್ರ ಮಹತ್ತರವಾದುದಾಗಿದೆ. ಇಲ್ಲಿಗೆ ಬರುವ ಕಲಾವಿದರು ಹಾಗೂ ರಂಗಾಸಕ್ತರಿಗೆ ಉಚಿತ ಊಟ ಮತ್ತು ವಸತಿ ನೀಡುವ ಮೂಲಕವಾಗಿ ತಮ್ಮ ಸೇವೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಶ್ರೀಯುತ ಗಜಾನನ ಯುವಜನ ಮಂಡಳದ ಅಡಿಯಲ್ಲಿ ಪ್ರದರ್ಶನಗೊಂಡ ನಾಟಕಗಳು ಹಲವಾರು ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿವೆ. ಸಮುದಾಯದ ಅಡಿಯಲ್ಲಿ ಪ್ರದರ್ಶನಗೊಂಡ ‘ನ್ಯಾಯದ ಬಾಗಿಲು’ ನಾಟಕಕ್ಕೆ ರಾಜ್ಯ ಪ್ರಶಸ್ತಿಯು ಲಭಿಸಿರುತ್ತದೆ.
ಶ್ರೀಯುತ ಪ್ರಭು ಗುರಪ್ಪನವರದು ಬಹುಮುಖಿ ವ್ಯಕ್ತಿತ್ವದ ಪ್ರತಿಭೆ. ಇವರು ವೃತ್ತಿಯಲ್ಲಿ ಪೋಸ್ಟ್ ಮಾಸ್ತರರಾದರೂ ಸಾಮಾಜಿಕ ಹೋರಾಟಗಳಲ್ಲಿ ನಿಸ್ವಾರ್ಥ ನೆಲೆಯಲ್ಲಿ ತಮ್ಮನ್ನು ಅರ್ಪಿಸಿಕೊಂಡವರು. ಹಾಗೆಯೇ ನಾಟಕ ಕಲಾವಿದರು, ನಾಟಕ ರಚನಕಾರರು, ನಿರ್ದೇಶಕರಾಗಿ ಮಾತ್ರವಲ್ಲದೆ ರಂಗಾಸಕ್ತರಾಗಿಯು ಈ ಕ್ಷೇತ್ರದಲ್ಲಿ ಕೃಷಿಗೈದಿದ್ದಾರೆ. ಇವರು ಹಲವಾರು ನಾಟಕಗಳಲ್ಲಿ ನಟರಾಗಿ, ನಿರ್ದೇಶಕರಾಗಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಇವರ ಈ ಸೇವೆಗೆ ಕರ್ನಾಟಕ ನಾಟಕ ಅಕಾಡೆಮಿಯಿಂದ 2005-06ನೇ ಸಾಲಿನ ‘ನಾಟಕ ಅಕಾಡೆಮಿ ಪ್ರಶಸ್ತಿ’ ಲಭಿಸಿದೆ. ಅತ್ಯಂತ ಕಡಿಮೆ ವಯಸ್ಸಿಗೆ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಕೀರ್ತಿಯು ಶ್ರೀಯುತರದಾಗಿರುತ್ತದೆ. ಶ್ರೀಯುತರು ಸ್ಥಾಪನೆ ಮಾಡಿದ ಗಜಾನನ ಮಂಡಳದಲ್ಲಿ ಪ್ರಸ್ತುತದಲ್ಲಿ ನಾಲ್ಕು ತಲೆಮಾರುಗಳು ನಿರ್ಮಾಣವಾಗಿವೆ. ಈ ಎಲ್ಲರನ್ನು ಆಯಾ ಕಾಲಕ್ಕೆ ತಕ್ಕಂತೆ ಸಿದ್ಧಗೊಳಿಸಿ ಮುನ್ನಡೆಸಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ.
ಶ್ರೀಯುತ ಈ ರಂಗ ಯಾತ್ರೆಗೆ ಹಲವಾರು ಮಹನೀಯರು ಬೆನ್ನೆಲುಬಾಗಿ ನಿಂತಿದ್ದಾರೆ. ಈ ಊರಿನ ಗ್ರಾಮಸ್ಥರು, ಯುವಜನತೆ, ಶ್ರೀಪಾದಭಟ್ಟರು, ಪ್ರಾಚಾರ್ಯರಾಗಿಯೂ ತಮ್ಮ ಬಿಡುವಿನ ವೇಳೆಯನ್ನು ರಂಗಕ್ಷೇತ್ರಕ್ಕೆ ಮುಡುಪಾಗಿಟ್ಟಿರುವ ನಾಗರಾಜ್ ಧಾರೇಶ್ವರ್ ಹಾಗೂ ಸಿದ್ಧಪ್ಪ ರೊಟ್ಟಿಯಂತವರ ಸಹಕಾರವು ಇವರನ್ನು ಈ ಕ್ಷೇತ್ರದಲ್ಲಿ ಮತ್ತಷ್ಟು ಕ್ರಿಯಾಶೀಲಗೊಳಿಸಲು ಪ್ರಚೋದನೆಯನ್ನು ನೀಡುತ್ತಿದೆ. ಶ್ರೀಯುತ ಪ್ರಭು ಗುರಪ್ಪನವರು ಇನ್ನು ಹಲವಾರು ಕನಸುಗಳನ್ನೊತ್ತು ಈ ಗ್ರಾಮ ಹಾಗೂ ರಂಗಕ್ಷೇತ್ರಕ್ಕೆ ದುಡಿಯುತ್ತಿದ್ದಾರೆ. ತಮ್ಮ ನೌಕರಿಯಲ್ಲಿ ಮುಂಬಡ್ತಿಯು ಲಭಿಸಿದರು ಅದನ್ನು ನಯವಾಗಿಯೇ ತಿರಸ್ಕರಿಸಿ, ಪೋಸ್ಟ್ ಮಾಸ್ತರರಾಗಿಯೇ ಸರಳ ಜೀವನ ನಡೆಸುತ್ತಿದ್ದಾರೆ. ನಿನಾಸಂ ಮಾದರಿಯಲ್ಲಿಯೇ ರಂಗಭೂಮಿ ಹಾಗೂ ರಂಗಶಿಕ್ಷಣವನ್ನು ನೀಡುವ ಕನಸ್ಸೊತ್ತು ಮುನ್ನಡೆಯುತ್ತಿದ್ದಾರೆ. ಈ ನೆಲದ ಮಣ್ಣಿನ ದನಿಯಾಗಿ ರಂಗಭೂಮಿ ಕ್ಷೇತ್ರಕ್ಕೆ ದುಡಿಯುತ್ತಿರುವ ಇವರ ಕನಸ್ಸೆಲ್ಲ ನನಸಾಗಲಿ. ಇವರಿಗೆ ದೇವರು ರಂಗಸೇವೆಯನ್ನು ಸಲ್ಲಿಸುವುದಕ್ಕೆ ಮತ್ತಷ್ಟು ಆರೋಗ್ಯವನ್ನು ನೀಡಲಿ ಎಂಬುದು ನಮ್ಮೆಲ್ಲರ ಹಾರೈಕೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಅಂತರಂಗ
ವಿಶ್ವ ಮಹಿಳಾ ದಿನ : ದಿವ್ಯಶ್ರೀ ಮನದ ಮಾತು..!

- ದಿವ್ಯಶ್ರೀ.ವಿ, ಬೆಂಗಳೂರು
ಪ್ರತಿವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವೆಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಲಾಗುತ್ತದೆ. ಇಂಥದ್ದೊಂದು ದಿನ ಮೊದಲ ಬಾರಿಗೆ ಪ್ರಚಲಿತಕ್ಕೆ ಬಂದಿದ್ದು ನ್ಯೂಯಾರ್ಕ್ನಲ್ಲಿ. 1909, ಫೆಬ್ರವರಿ 28 ರಂದು ಅಲ್ಲಿ ಮೊದಲ ಬಾರಿಗೆ ಮಹಿಳಾ ದಿನವನ್ನು ಆಚರಿಸಲಾಯಿತು.
ಎರಡು ವರ್ಷದ ಬಳಿಕ ಜರ್ಮನ್ನ ಸಾಮಾಜಿಕ ಕಾರ್ಯಕರ್ತೆಯೊಬ್ಬರು ತಮ್ಮ ದೇಶದಲ್ಲೂ ಈ ದಿನವನ್ನು ಆಚರಿಸಲು ಶುರು ಮಾಡಿದರು. ಹೀಗೆ ಕೆಲವೇ ಕೆಲವು ರಾಷ್ಟ್ರಗಳಿಗೆ ಸೀಮಿತವಾಗಿದ್ದ ಈ ದಿನಕ್ಕೆ 1977 ರಲ್ಲಿ ವಿಶ್ವಸಂಸೆ ಅಧಿಕೃತ ಅನುಮೋದನೆ ನೀಡಿ ಮಾರ್ಚ್ 8 ಅನ್ನು ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸುವಂತೆ ಘೋಷಿಸಿತು.
ಹೆಮ್ಮೆಯ ಭಾರತೀಯರು ನಾವು ಯಾವಾಗಲೂ ಮಹಿಳೆಯರು ಒಂದು ಶಕ್ತಿ ಎಂದು ನಂಬುತ್ತೇವೆ ಹೌದು ನಿಸ್ಸಂದೇಹವಾಗಿ ನಮ್ಮ ಮಾತೃ ಭೂಮಿ ಅಥವಾ ಭಾರತ್ ಮಾತಾ ಎಂದು ಕರೆಯಲ್ಪಡುವ ನಮ್ಮ ದೇಶ ದೇವತೆಯಾಗಿ ಪ್ರತಿನಿಧಿಸುತ್ತದೆ. ಈ ನಮ್ಮ ದೇಶದಲ್ಲಿ ಮಹಿಳೆಯರಿಗೆ ದೊಡ್ಡ ಗೌರವವಿದೆ ಆದರೆ ಅನೇಕ ಮಹಿಳೆಯರು ಕೆಲವು ಕ್ರೂರ ಪುರುಷರ ಕೈಯಿಂದ ಹೆಚ್ಚು ಬಳಲುತ್ತಿದ್ದಾರೆ.
ಭಾರತದಲ್ಲಿ, ಮಹಿಳೆಯರ ಸುರಕ್ಷತೆ ಇಂದು ಹೆಚ್ಚು ಅಗತ್ಯವಾಗಿದೆ, ಇತ್ತೀಚಿನ ದಿನಗಳಲ್ಲಿ ಭಾರತವು ಮಹಿಳೆಯರಿಗೆ ಸುರಕ್ಷಿತವಲ್ಲದ ದೇಶಗಳಲ್ಲಿ ಒಂದಾಗಿದೆ ಎನ್ನುವುದು ಬಹಳ ಬೇಸರದ ವಿಷಯ. ದಿನದಿಂದ ದಿನಕ್ಕೆ ಈ ವಿಷಯದ ಕುರಿತಾದ ಹೆಚ್ಚಾಗಿ ಆಲೋಚನೆ ಮಾಡಿ ಕ್ರಮ ಕೈಗೊಳ್ಳ ಬೇಕು.
ಹೆಣ್ಣಿಗೆ ದ್ರೋಹ ಮಾಡುವವರನ್ನು ಶಿಕ್ಷಿಸಲು ಮೂಲಭೂತ ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿರಬೇಕು ಇದರಿಂದ ಸಮಾಜದಲ್ಲಿ ಜಾಗೃತಿ ಮತ್ತು ಸುರಕ್ಷತೆ ಉಂಟುಮಾಡುತ್ತದೆ. ಕೌಟುಂಬಿಕ ಹಿಂಸಾಚಾರವು ಮಹಿಳೆಯರು ಎದುರಿಸುತ್ತಿರುವ ನಿರ್ಣಾಯಕ ವಿಷಯವಾಗಿದೆ.
ಇದನ್ನೂ ಓದಿ | ಲಂಕೇಶರ ‘ಅವ್ವ’ ಕವಿತೆ : ಇನ್ನೊಂದು ನೋಟ ; ‘ತಾಯ್ತನ’ ಗಂಡಿನಲ್ಲೂ ಇರಲಿ
ಇನ್ನು ಅನೇಕ ಮಹಿಳೆಯರು ಮುಂದೆ ಬಂದು ಈ ವಿಷಯಗಳ ಬಗ್ಗೆ ಧ್ವನಿ ಎತ್ತಲು ಆಸಕ್ತಿ ಹೊಂದಿದ್ದಾರೆ ಹಾಗೂ ಅನೇಕ ಮಹಿಳೆಯರು ಇದರ ಬಗ್ಗೆ ಎಲ್ಲೆಡೆ ಜಾಗೃತಿ ಮತ್ತು ಹೋರಾಟ ನಡೆಸುತ್ತಿದ್ದಾರೆ, ಈ ಸಮಾಜದ ಬಗ್ಗೆ ಮಹಿಳೆಯರ ಪರಿಸ್ಥಿತಿ ಮತ್ತು ಅವರ ಮೌಲ್ಯಗಳನ್ನು ಜನರುಅರ್ಥಮಾಡಿಕೊಳ್ಳಬೇಕು.
ಹಾಗಾದರೆ ಈ ಎಲ್ಲ ಬಿಕ್ಕಟ್ಟುಗಳಿಗೆ ಪರಿಹಾರ ಇದೆ ಎಂದು ಭಾವಿಸುತ್ತೀರಾ? ಈ ಎಲ್ಲದರಿಂದ ಮಹಿಳೆಯರು ಹೊರಬರಬಹುದು ಮತ್ತು ಹೆಣ್ಣು ಹಿಂಸಾಚಾರ ಮುಕ್ತವಾಗಿ ಬದುಕಬಹುದು ಎಂದು ನೀವು ಭಾವಿಸುತ್ತೀರಾ?
ಇದಕ್ಕೆ ಉತ್ತರ ಹೌದು, ಇದೆಲ್ಲವೂ ಸಾದ್ಯ ಯಾವಾಗ ಎಂದರೆ
ಹಿಂಸೆ ಇಂದ ಬಳಲುತ್ತಿರುವ ಹೆಣ್ಣು ಮತ್ತು ಅವಳ ಜೊತೆಗೆ ಸರ್ಕಾರವು, ಇಬ್ಬರೂ ಒಟ್ಟಿಗೆ ಸೇರಿ ಈ ಎಲ್ಲಾ ಆಕ್ರಮಣಗಳ ವಿರುದ್ಧ ಹೋರಾಡಲು ಇಬ್ಬರೂ ಒಟ್ಟಾಗಿ ನಿಂತು ಅಪರಾಧಿಗೆ ಕಠಿಣ ಕಾನೂನು ರೂಪಿಸಿದರೆ ಮಾತ್ರ ಇದೆಲ್ಲವೂ ಸಾದ್ಯ.
ಮತ್ತು ಇದೆಲ್ಲದರ ಜೊತೆಗೆ ಹೆಣ್ಣು ಮಗುವಿಗೆ ತನ್ನ ಸ್ವತಂತ್ರ ಜೀವನವನ್ನು ರಚಿಸಲು ಪೋಷಕರು ಅವಕಾಶ ನೀಡಬೇಕು, ಪೋಷಕರಿಂದ ನೈತಿಕ ಬೆಂಬಲ ಸಿಗಬೇಕು ಆಗ ಮಾತ್ರ ಒಂದು ಹೆಣ್ಣು ದೈರ್ಯವಾಗಿ ಎಲ್ಲವನ್ನೂ ಎದುರಿಸಲು ಸಾದ್ಯ. ಹಾಗೂ ಮುಖ್ಯವಾಗಿ ನಮ್ಮ ಈ ಸಮಾಜವು ಮಹಿಳೆಯರನ್ನು ನೋಡುವ ದೃಷ್ಟಿಕೋನವನ್ನು ಬದಲಿಸಬೇಕು, ಮಹಿಳೆಯರ ಮೌಲ್ಯಗಳನ್ನು ಮತ್ತು ಈ ಭೂಮಿಯಲ್ಲಿ ಅವಳ ಸ್ಥಾನವನ್ನು ಸಮಾಜವು ತಿಳಿದುಕೊಳ್ಳಬೇಕು, ಮಹಿಳೆಯರು ದೈರ್ಯಶಾಲಿ ಎಂದು ನಿರ್ಧರಿಸ ಬೇಕು.
ಸಮಾಜವು ಮಹಿಳೆಯರ ಶಕ್ತಿಯನ್ನು ಮತ್ತು ಅವಳ ಮೌಲ್ಯವನ್ನು ಅರಿತುಕೊಳ್ಳಲಿ, ಅದು ಪ್ರತಿಯೊಬ್ಬರ ಮನೆಯಿಂದಲೇ ಪ್ರಾರಂಭವಾಗಬೇಕು, ಹಿರಿಯರು ತಮ್ಮ ಮಕ್ಕಳಿಗೆ ಮಹಿಳೆಯರನ್ನು ಹೇಗೆ ಗೌರವಿಸಬೇಕು ಎಂಬುದನ್ನು ಕಲಿಸಬೇಕು.
ಆಗ ಮಾತ್ರ ಮಹಿಳಾ ಕ್ರಾಂತಿ ಪ್ರಾರಂಭವಾಗುತ್ತದೆ. ಆಗ ಮಾತ್ರ ಈ ತಾಯಿಯ ಭೂಮಿಯಲ್ಲಿ ಮಹಿಳೆಯರು ವಾಸಿಸಲು ಯೋಗ್ಯ. ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ , ನಮ್ಮ ನಾಡಿನ ದೊರೆಯಾದ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ, ಇಂತಹ ಧೀರ ವನಿತೆಯರು ಇದ್ದಂತಹ ಈ ನಾಡು ಮಹಿಳೆಯರಿಗೆ ಸ್ಥೈರ್ಯ, ಧೈರ್ಯಕ್ಕೆ ಸರಿಸಾಟಿಯಿಲ್ಲದ ಈ ನಾಡು ನಮ್ಮ ಭಾರತ.
ಮಹಿಳೆಯರು ಧೈರ್ಯದಿಂದ ಧ್ವನಿ ಎತ್ತಲು ಅವಳು ಧೈರ್ಯ ಮಾಡಬೇಕು ಮತ್ತು ಅದು ಅವಳ ರಕ್ಷಣೆಯು ಹೌದು. ಭಾರತ ದೇಶ ಮಹಿಳೆಯರಿಗೆ ರಕ್ಷಾ ಕವಚವಾಗಿ ಬೇಕೆ ವಿನಃ ಇತರ ಕೆಲವು ಕ್ರೂರ ವ್ಯಕ್ತಿಗಳಿಂದ ಅಪಾಯಕಾರಿ. ಆದಷ್ಟು ಬೇಗ ನಮ್ಮ ಕಾನೂನು ಹೆಣ್ಣು ಮಕ್ಕಳಿಗೆ ಹಿಂಸೆ ಕೊಡುವ ವ್ಯಕ್ತಿಗಳನ್ನು ಮುಕ್ತಗೊಳಿಸಬೇಕು. ತ್ಯಾಗಮಹಿ ಹೆಣ್ಣನ್ನು ಎಲ್ಲರೂ ಗೌರವಿಸಬೇಕು ಮಹಿಳೆಯರನ್ನು ಸುರಕ್ಷ ಗೊಳಿಸುವುದು ಪ್ರತಿಯೊಬ್ಬರ ಕರ್ತವ್ಯ. ಹೆಣ್ಣು ಪ್ರೀತಿಗೆ ಮನಸೋಲುತ್ತಾಳೆ, ಆ ಪ್ರೀತಿಗೆ ತನ್ನ ಸರ್ವಸ್ವ ಕೊಡುತ್ತಾಳೆ ಆ ಪ್ರೀತಿಯನ್ನು ಅರಿಯುವ ಮನಸ್ಸಿರಬೇಕು ಅಷ್ಟೇ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ನೆಲದನಿ
ರೈತ ಹೋರಾಟಗಾರ `ಸಹಜಾನಂದ ಸರಸ್ವತಿ’

ಉತ್ತರಪ್ರದೇಶದ ಘಾಜಿಪುರ ಜಿಲ್ಲೆಯಲ್ಲಿ 22 ಫೆಬ್ರವರಿ 1889 ರಂದು ಜನಿಸಿ, ಜೂನ್ 26,1950 ರಂದು ನಿಧನರಾದ ಸಹಜಾನಂದ್ ಸರಸ್ವತಿ ಅವರ ನಿಜವಾದ ಹೆಸರು ನವರಂಗ್ ರೈ. ಹೋರಾಟ ಮನೋಭಾವದ ಸಹಜಾನಂದರು ಬಹುಮುಖ ಪ್ರತಿಭೆ. ಕ್ರಾಂತಿಕಾರಿ ರೈತ ನಾಯಕ, ಇತಿಹಾಸಕಾರ, ದಾರ್ಶನಿಕ, ಬರಹಗಾರ. ಅವರ ಮುಖ್ಯ ಬರಹ-ಕೃತಿ ಬಿಹಾರವನ್ನು ಕೇಂದ್ರೀಕರಿಸಿದೆ. ಅವರು ಬಿಹ್ತಾದಲ್ಲಿ ಆಶ್ರಮವನ್ನು ಸ್ಥಾಪಿಸಿದ್ದರು ಮತ್ತು ಅಲ್ಲಿಂದ ತಮ್ಮ ವೃದ್ದಾಪ್ಯದ ದಿನಗಳಲ್ಲಿ ತಮ್ಮ ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸಿದರು.
ಸಹಜಾನಂದರು 1929ರಲ್ಲಿ ಬಿಹಾರ ಪ್ರಾಂತೀಯ ಕಿಸಾನ್ ಸಭೆಯನ್ನು (ಬಿಪಿಕೆಎಸ್) ರಚಿಸಿದರು. ಜಮೀನ್ದಾರರಿಂದ ಭೂ ಹಿಡುವಳಿ ಕುರಿತಾಗಿ ರೈತರ ಮೇಲೆ ನಡೆಯುತ್ತಿದ್ದ ದಾಳಿಗಳ ವಿರುದ್ಧ ರೈತರ ಕುಂದುಕೊರತೆಗಳನ್ನು ಒಟ್ಟುಗೂಡಿಸುವ ಸಲುವಾಗಿ ಈ ಸಂಘಟನೆ-ಹೋರಾಟವನ್ನು ಅವರು ಆರಂಭಿಸಿದರು. ಆ ಮೂಲಕ ಭಾರತದಲ್ಲಿ ರೈತರ ಚಳುವಳಿಗಳಿಗೆ ನಾಂದಿ ಹಾಡಿದರು.
ಕ್ರಮೇಣ ರೈತ ಚಳುವಳಿ ತೀವ್ರಗೊಂಡಿತು ಮತ್ತು ಭಾರತದ ಉಳಿದ ಭಾಗಗಳಿಗೆ ಹರಡಿತು. ಇದು 1936 ರಲ್ಲಿ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ರಚನೆಗೆ ಕಾರಣವಾಯಿತು, ಅವರು ಅದರ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು. ಕಿಸಾನ್ ಪ್ರಣಾಳಿಕೆ ಜಮೀನ್ದಾರಿ ವ್ಯವಸ್ಥೆಯನ್ನು ರದ್ದುಪಡಿಸಬೇಕು ಮತ್ತು ಗ್ರಾಮೀಣ ಸಾಲಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿತು. ಆ ಜಮೀನ್ದಾರರನ್ನು ಬ್ರಿಟಿಷ್ ಸರ್ಕಾರ ಆದಾಯ ಸಂಗ್ರಹಕ್ಕಾಗಿ ನೇಮಕ ಮಾಡಿಕೊಂಡಿತ್ತು.
ಇದನ್ನೂ ಓದಿ | ಕ್ರಾಂತಿಕಾರಿ ರೈತ ಹೋರಾಟದ ಸ್ಫೂರ್ತಿಯ ಚಿಲುಮೆ `ಅಜಿತ್ ಸಿಂಗ್‘
ಭೂ ಮಾಲೀಕತ್ವವನ್ನು ಉಳಿಸಲು ಮತ್ತು ರೈತರ ಉಳುಮೆಯ ಹಕ್ಕುಗಳನ್ನು ಉಳಿಸಿಕೊಳ್ಳಲು ನಡೆದ ಈ ಚಳುವಳಿ, ಬಿಹಾರ ಮತ್ತು ಯುನೈಟೆಡ್ ಪ್ರಾಂತ್ಯದ ಕಾಂಗ್ರೆಸ್ ಸರ್ಕಾರಗಳೊಂದಿಗೆ ಸಂಘರ್ಷ ಎದುರಿಸಬೇಕಾಗಿತು.
ಸಹಜಾನಂದ ಸರಸ್ವತಿ 1937-1938ರಲ್ಲಿ ಬಿಹಾರದಲ್ಲಿ ಬಕಾಶ್ತ್ ಚಳವಳಿಯನ್ನು ಸಂಘಟಿಸಿ ಮುನ್ನಡೆಸಿದರು. ಬಕಾಶ್ತ್ ಎಂದರೆ ಸ್ವಯಂ-ಕೃಷಿ, ಸ್ವಯಂ ಉಳುಮೆ. ಈ ಆಂದೋಲನವು ಜಮೀನ್ದಾರರ ಬಕಾಶ್ತ್ ಜಮೀನುಗಳಿಂದ ಟೆನೆಂಟ್ಗಳನ್ನು ಹೊರಹಾಕುವುದರ ವಿರುದ್ಧವಾಗಿತ್ತು. ಇದು ಬಿಹಾರ ಹಿಡುವಳಿ ಕಾಯ್ದೆ ಮತ್ತು ಬಕಾಶ್ತ್ ಭೂ ತೆರಿಗೆಯನ್ನು ಅಂಗೀಕರಿಸಲು ಕಾರಣವಾಯಿತು. ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಸಹಜಾನಂದರನ್ನು ಬಂಧಿಸಲಾಗಿತ್ತು.
(ಕೃಪೆ : Mass Media Foundation)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ನೆಲದನಿ
ಸಾರೇಕೊಪ್ಪದ ಬಂಗಾರ ; ಅಕ್ಷರತುಂಗಾವನ್ನು ನೆನೆದು

- ಸುರೇಶ ಎನ್ ಶಿಕಾರಿಪುರ
ನನ್ನಮ್ಮ ಅನಕ್ಷರಸ್ತೆ ಆಕೆ ಅಕ್ಷರ ಬರೆಯುವುದು ಕಲಿತದ್ದು ಅಂದಿನ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರು ಜಾರಿಗೆ ತಂದಿದ್ದ ‘ಅಕ್ಷರ ತುಂಗಾ’ ಎಂಬ ಯೋಜನೆಯಿಂದ. ಅನಕ್ಷರಸ್ಥ ಹಿಂದುಳಿದ ವರ್ಗಗಳ ಜನ ಸಣ್ಣದಾಗಿ ದಿನಪತ್ರಿಕೆ ಓದಲು ರಾಜಕೀಯ ಸಾಮಾಜಿಕ ವೈಚಾರಿಕ ವಿಚಾರಗಳನ್ನು ಸರ್ಕಾರಗಳ ಯೋಜನೆಗಳು ವಿದ್ಯಾಮಾನಗಳನ್ನು ಅರ್ಥಮಾಡಿಕೊಳ್ಳಲು ಕಲಿತದ್ದು ಬಂಗಾರಪ್ಪನೆಂಬ ಹಿಂದುಳಿದ ವರ್ಗದ ನಾಯಕ ಜಾರಿಗೊಳಿದ್ದ ಆ ಯೋಜನೆಯಿಂದ.
ಆದರೆ ತಮ್ಮ ರಾಜಕೀಯ ಹಿತಾಸಕ್ತಿ ಮತ್ತು ದಲಿತರು ಹಿಂದುಳಿದವರು ಅಕ್ಷರ ಕಲಿಯಬಾರದೆಂಬ ಪಾರಂಪರಿಕ ದ್ವೇಷ ಮತ್ತು ಹೊಟ್ಟೆಕಿಚ್ಚಿನ ಕಾರಣಕ್ಕೆ ಮೇಲ್ಜಾತಿಗಳು ಇದರ ಮೇಲೆ ಅಪಪ್ರಚಾರ ಶುರುವಿಟ್ಟರು. ಅಕ್ಷರ ತುಂಗಾ ಯೋಜನೆಯ ಕುರಿತ ಅಸಮಧಾನ ಅಪಪ್ರಚಾರದ ಒಂದು ಘೋಷಣೆ ಹೇಗಿತ್ತೆಂದರೆ,
“ಅಕ್ಷರತುಂಗಾ ಮೂರ್ಕೋಟಿ ನುಂಗ” ಇದನ್ನು ಅಂದಿನ ದಲಿತವಿರೋಧೀ ಹಿಂದುಳಿದವರ ವಿರೋಧಿಗಳು ಯಶಸ್ವಿಯಾಗಿ ಪ್ರಚಾರ ಮಾಡಿದರು. ಅಕ್ಷರ ಕಲಿಯುತ್ತಿದ್ದ ಜನ ಕೆಲವರು ಅದನ್ನು ಹೌದೆಂದೇ ನಂಬಿದ್ದರು. ಬಂಗಾರಪ್ಪ ಅಪ್ಪಟ ಜಾನಪದ ನಾಯಕ. ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಹಳ್ಳಿ ಸೊಗಡು ಸಂಪರ್ಕ ಬಿಟ್ಟುಕೊಡದ ಅಪ್ಪಣ ಹಳ್ಳೀಯ.
ಅವರಿಗೆ ಅಕ್ಷರ ಜ್ಞಾನವಿಲ್ಲದ ಕಾರಣಕ್ಕೇ ದಲಿತರು ಹಿಂದುಳಿದವರು ಹಿಂದೇಯೇ ಉಳಿದಿರುವುದು ಎಂಬ ಸ್ಪಷ್ಟ ತಿಳುವಳಿಕೆಯಿತ್ತು. ಅದಕ್ಕಾಗೇ ಅಂಬೇಡ್ಕರ್ ಗಾಂಧೀಜಿ ನೆಹರು ದೇವರಾಜ ಅರಸು ಹೋರಾಡಿದ್ದರೆಂಬ ಅರಿವಿತ್ತು ಹಾಗಾಗಿಯೇ ಶಾಲೆ ಕಲಿಯದ ಹಿರಿಯರು ಯುವಕರು ಆ ಯೋಜನೆಯ ಮೂಲಕ ನಾಲಕ್ಕಕ್ಷರ ಕಲಿತು ತಮ್ಮ ಮೇಲಾಗುವ ಅನ್ಯಾಯ ಅಕ್ರಮ ದಬ್ಬಾಳಿಕೆಗಳನ್ನು ಅರ್ಥ ಮಾಡಿಕೊಳ್ಳುವಂತಾಗಲಿ ಎಂಬುದೇ ಅವರ ಉದ್ಧೇಶವಾಗಿತ್ತು.
ಏಕೆಂದರೆ ಅನಕ್ಷರಸ್ತ ಬಡ ರೈತನಿಂದ ನಕಲಿ ಸಹಿ ಮಾಡಿಸಿಕೊಂಡು ಅವನ ಹೊಲ ಮನೆ ನುಂಗಿ ನೀರುಕುಡಿದ ಮೇಲ್ಜಾತಿ ಹಣವಂತರ ದೌರ್ಜನ್ಯಗಳ ಬರ್ಬರತೆ ಹೇಗಿರುತ್ತಿತ್ತು ಎಂಬುದನ್ನು ಆ ಕಾಲದ ಹಿರಿಯ ತಲೆಮಾರಿನವರಿಗೆ ಕೇಳಿದರೆ ಗೊತ್ತಾಗುತ್ತದೆ. ಕರಣಿಕ ಗೌಡ ಪಟೇಲ ಎಂಬುವವರೆಲ್ಲಾ ಅಕ್ಷರ ಬಲ ದೊಣ್ಣೆಯ ಬಲ ಖಡ್ಗದ ರಾಜಕೀಯ ಬಲದಿಂದಲೇ ದಮನಿತ ವರ್ಗಗಳನ್ನು ಹತ್ತಿಕ್ಕಿದ ಚರಿತ್ರೆಯೇ ನಮ್ಮ ಬೆನ್ನಿಗಿದೆ.
ಇಂತಹಾ ದುರುಳರಿಂದ ದುಡಿಯುವ ಶ್ರಮಜೀವಿ ಜನರನ್ನು ಪಾರು ಮಾಡಲು ಕೊನೆಯಪಕ್ಷ ಒಂದು ಅಗ್ರಿಮೆಂಟ್ ಕಾಪಿಯನ್ನೋ ನೋಂದಣಿ ವ್ಯವಹಾರವನ್ನೋ ಓದಿ ತಿಳಿದುಕೊಳ್ಳುವಂತಾಗಲಿ ಇದರಿಂದ ಸಾಕಷ್ಟು ಶೋಷಣೆಯನ್ನು ತಪ್ಪಿಸಬಹುದೆಂಬುದು ಅವರ ದೂರದೃಷ್ಟಿಯಾಗಿತ್ತು. ಇದು ಮೇಲ್ಜಾತಿ ಮನಸುಗಳಿಗೆ ಆಗಿಬರಲಿಲ್ಲ ಅವರು ಹುನ್ನಾರದ ಬೀಜ ಬಿತ್ತಿದರು “ಅಕ್ಷರತುಂಗಾ ಮೂರ್ಕೋಟಿ ನುಂಗಾ” ಎಂದೇ ಕೂಗಿದರು.
ನನ್ನೂರಿನ ಬಿಜೆಪಿಯ ಈರಾದಿಈರರೆಲ್ಲ ಇದನ್ನು ದನಿ ಎತ್ತರಿಸಿ ಕೂಗಿದ್ದೇ ಕೂಗಿದ್ದು ಹಾಗೆ ಕೂಗುವವರಲ್ಲಿ ಮುಗ್ಧ ಅನಕ್ಷರಸ್ಥ ಜನತೆಯೂ ಇರುತ್ತಿತ್ತು. ಆದರೆ ‘ಅಕ್ಷರತುಂಗಾ’ ಯೋಜನೆಯಲ್ಲಿ ಬಂಗಾರಪ್ಪ ಗಂಟು ಹೊಡೆದರು ಎಂಬುದಕ್ಕೆ ಸಾಕ್ಷಿಯೇ ಇಲ್ಲ. ಸಾಬೀತಾಗಲೂ ಇಲ್ಲ.
ಹಿಂದುಳಿದವರ್ಗದವನೊಬ್ಬ ಅಧಿಕಾರ ಉನ್ನತಸ್ಥಾನದಲ್ಲಿ ಕೂರುವುದು ಶೋಷಿತ ಸಮುದಾಯಗಳು ಅಕ್ಷರ ಕಲಿಯುವುದು ಈ ದೇಶದ ಮೇಲ್ಜಾತಿಗಳಿಗೆ ಯಾವತ್ತೂ ಆಗದ ವಿಚಾರ.
ದೇವರಾಜ ಅರಸರಿಗೂ ಬಂಗಾರಪ್ಪನವರಿಗೂ ಕಾಡಿದರು ಸಿದ್ದರಾಮಯ್ಯನವರಿಗೂ ಕಾಡಿದರು ಮುಂದೆ ಯಾರೇ ದಲಿತ ಹಿಂದುಳಿದವ ಅಧಿಕಾರಕ್ಕೆ ಬಂದರೂ ಕಾಡುತ್ತಾರೆ ಸಾಧ್ಯವಾದಷ್ಟು ಆ ಸಮುದಾಯಗಳವರು ಅಧಿಕಾರದ ಹಂತಕ್ಕೆ ಬರುವುದನ್ನು ತಡೆಯಲು ಶಕ್ತಿಮೀರಿ ಪ್ರಯತ್ನಿಸುತ್ತಾರೆ. ಎಚ್ಚೆತ್ತುಕೊಳ್ಳದಿದ್ದರೆ ಕಷ್ಟ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಬಹಿರಂಗ4 days ago
ಗಾಳಿಪಟ ವೇಗದ ರಾಜಕುಮಾರ ‘ಬೀರ್ ಚಿಲಾರಾಯ್’..!
-
ದಿನದ ಸುದ್ದಿ6 days ago
ಕೊಟ್ಟ ಮಾತಿನಂತೆ ನಡೆದ ಡಿ ಬಾಸ್ ದರ್ಶನ್;ಕುದುರೆಯ ತಡಿ ನೀಡಿ, ಎಸ್.ಎಸ್.ಮಲ್ಲಿಕಾರ್ಜುನಗೆ ಕೃತಜ್ಞತೆ
-
ಬಹಿರಂಗ7 days ago
ಪ್ರತಿರೋಧದ ದನಿಗಳು ಸರ್ವಾಧಿಕಾರಕ್ಕೆ ಸದಾ ಅಪಥ್ಯವೇ
-
ಕ್ರೀಡೆ7 days ago
ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಮರಳಿ ತಂಡಕ್ಕೆ..!
-
ದಿನದ ಸುದ್ದಿ4 days ago
24 ಕೆರೆ ತುಂಬಿಸುವ ಯೋಜನೆಗೆ ರೂ.48 ಕೋಟಿಗಳ ಅನುದಾನ ಮಂಜೂರು : ಎಂ.ಪಿ ರೇಣುಕಾಚಾರ್ಯ
-
ನಿತ್ಯ ಭವಿಷ್ಯ6 days ago
ಜ್ಯೋತಿಷ್ಯಶಾಸ್ತ್ರ ಅಥವಾ ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು?ಕಂಕಣಬಲ ಕೂಡಿ ಬರಲು ಏನು ಮಾಡಬೇಕು?
-
ನಿತ್ಯ ಭವಿಷ್ಯ7 days ago
ಈ ಯೋಗ ಇದ್ದರೆ ಖಂಡಿತ ದೊಡ್ಡ ರಾಜಕಾರಣಿ, ಸಮಾಜ ಸೇವಕ, ಜಿಲ್ಲಾಧಿಕಾರಿ(IAS),IPS, ಸಾಹಿತಿಗಳು, ಗಾಯಕರು, ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಆಗುವ ಸಂಭವ
-
ದಿನದ ಸುದ್ದಿ5 days ago
ಮಾಧ್ಯಮ ಉದ್ಯಮವಾಗಿರುವ ಈ ಕಾಲಘಟ್ಟದಲ್ಲಿ ಜನರೇ ಜನಾಭಿಪ್ರಾಯ ರೂಪಿಸುವ ಹೊಣೆ ಹೊರಬೇಕು : ಹಿರಿಯ ಪತ್ರಕರ್ತ ಬಸವರಾಜ್ ದೊಡ್ಮನಿ