Connect with us

ದಿನದ ಸುದ್ದಿ

ತುಳುನಾಡು; ಕೋಟೆ ಚೆನ್ನಯರು ಮತ್ತು ‘ಮಮ್ಮಾಲಿ’ ಎಂಬ ಬ್ಯಾರಿ..!

Published

on

ಲೇಖನ : ಚರಣ್ ಐವರ್ನಾಡು
  • ಚರಣ್ ಐವರ್ನಾಡು

ಕೋಟಿ ಚೆನ್ನಯರ ಮರಣದ ನಂತರ ಎಣ್ಮೂರಿನ ದೇವು ಬಲ್ಲಾಳನ ಅರಸು ಪಟ್ಟದ ರಕ್ಷಣೆಗಾಗಿ ನಿಂತು ಪ್ರಾಣ ಕೊಟ್ಟವ “ಮಮ್ಮಾಲಿ” ಎಂಬ ಬ್ಯಾರಿ!!


ತುಳುನಾಡಿನ ಚರಿತ್ರೆ ಮತ್ತು ನಂಬಿಕೆಗಳ ಮೂಲಕ ಹಿಂದೂ ಮತ್ತು ಮುಸಲ್ಮಾನ ಕೋಮು ಶಕ್ತಿಗಳಿಗೆ ಪರ್ಯಾಯವಾಗಿ ಸೌಹಾರ್ದತೆಯ ಸಮಾಜವೊಂದನ್ನು ಕಟ್ಟದ ಹೊರತು ಮತ್ತೆ ಹಿಂದಿನಂತೆ ರಕ್ತದ ಹೊಳೆ ಹರಿದೀತು!

ಕೋಟಿ ಚೆನ್ನಯರು ಸುರಿಯೆ ಹಿಡಿದು ಹೋರಾಡಿದ್ದು ಕ್ರೂರ ಜಮೀನ್ದಾರಿಯ ವಿರುದ್ಧ. ತಮ್ಮ ಮೇಲೆ ನಂಬಿಕೆ ಇಟ್ಟ, ಗೌರವಿಸಿದ ದೇವು ಬಲ್ಲಾಳನ ಬೆನ್ನಿಗೆ ನಿಂತು ಲಡಾಯಿಯಲ್ಲಿ ಪ್ರಾಣ ಬಿಟ್ಟಿದ್ದು. ರೈತರಾದ ಇವರ ಬದುಕು ನಮ್ಮ ಹಕ್ಕುಗಳಿಗೆ ಹೊರಾಡುವುದಕ್ಕೆ ಮಾದರಿಯೇ ಹೊರತು ಮತದ್ವೇಷದ ಹೆಸರಿನಲ್ಲಿ ರಕ್ತ ಹರಿಸಲು ಅಲ್ಲ.

ಕರಾವಳಿ ಕೋಮು ದ್ವೇಷಕ್ಕೆ ಈಗಾಗಲೇ ಘಾಸಿಗೊಂಡಿದೆ. ಕೋಮು ಸಂಘಟನೆಗಳು ಕಟ್ಟುವ ಮನುಷ್ಯ ಸಂಬಂಧಗಳನ್ನು ಒಡೆಯುವ ಚರಿತ್ರೆಗೆ ನಾವು ಪರ್ಯಾಯವಾಗಿ ನಮ್ಮ ಸತ್ಯದ ಚರಿತ್ರೆಯನ್ನು ಹೇಳಬೇಕಿದೆ.

ನನಗೆ ಗೊತ್ತು, ಈ ಕೆಲಸ ಅಷ್ಟು ಶೀಘ್ರ ಮತ್ತು ಸುಲಭವಲ್ಲ. ಸುಳ್ಳು ಚರಿತ್ರೆ ಹರಡುವುದು ಉದ್ರೇಕಕಾರಿ ಮಾತುಗಳ ಮೂಲಕ. ಅದಕ್ಕೆ ಬೇಕಾದಷ್ಟು ವೇದಿಕೆಗಳಿವೆ. ಕೇಳಿ ಹುಚ್ಚೆದ್ದು ಕುಣಿಯುವ ಶೂದ್ರ, ದಲಿತ ಹುಡುಗರು ಇದ್ದಾರೆ. ನಾಳೆ ಇವರೆಲ್ಲ ಕತ್ತಿ ಪಿಸ್ತೂಲ್ ಹಿಡಿಯುವುದನ್ನು ನಾವು ಕಣ್ಣಲ್ಲಿ ನೋಡುವ ಕಾಲ ಬಂದರು ನಿರ್ಭಿಡೆಯಿಂದ ನಮ್ಮ ಪರಂಪರೆ ಹೇಳಿದ ಸೌಹಾರ್ದದ ಕತೆಗಳನ್ನು ಗಟ್ಟಿಯಾಗಿ ಹೇಳಲು ಪ್ರಯತ್ನ ಮಾಡಿಯೇ ಮಾಡುತ್ತೇನೆ!

ಕೋಟಿ ಚೆನ್ನಯರು ತಲವಾರು ಹಿಡಿದು ಹಾಗೇ ನಾವೂ ಹಿಡಿಯುತ್ತೇವೆ!! ಯಾರು ಹಿಡಿಯುವವರು…? ಬಿಲ್ಲವ, ಗೌಡ, ಮರಕಾಲ ಮೊದಲಾದ ಶೂದ್ರರು, ದಲಿತರು? ಕೋಟಿ ಚೆನ್ನಯರು ಅನ್ನದ ಹಕ್ಕಿಗಾಗಿ ಹೋರಾಡಿದರು. ಇಂದು ದೇಶದಲ್ಲಿ ರೈತರು (ನೀವು ಹೇಳುವಂತೆ ಅವರು ಸುಳ್ಳು ರೈತರೇ ಅನ್ನಿ) ಕೃಷಿ ನೀತಿಗಳ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ.

ಇವರ ಹೋರಾಟವನ್ನು ಹೀಯಾಳಿಸುವ ನಿಮ್ಮ ಸ್ವಾತಂತ್ರ್ಯವನ್ನು ಒಪ್ಪಿಕೊಳ್ಳುತ್ತಾ ಅವರ ಅಹವಾಲುಗಳನ್ನು ಕೇಳುವ ದಾರಿದ್ರ್ಯ ನಮ್ಮನ್ನು ಆಳುವ ಸರ್ಕಾರಕ್ಕೆ ಇದೆ ಎಂಬುದು ವ್ಯಥೆ! ಇಲ್ಲಿ ತಮ್ಮ ಭೂಮಿಗಾಗಿ ಪಡುಮಲೆ ಬಲ್ಲಾಳನ ವಿರುದ್ಧ ಸಿಡಿದೆದ್ದ ಕೋಟಿ ಚೆನ್ನಯರು ಆದರ್ಶವಾಗುತ್ತಾರೆ.

ತುಳುನಾಡಿನ ಬೇಕಿರುವುದು ಕೋಮು ಸಂಘರ್ಷಗಳು ಅಲ್ಲ. ತಲವಾರು ಹಿಡಿಯಲು ಹೊರಟಿರುವ ನನ್ನ ಪ್ರಾಯದ ಯುವಕರಿಗೆ ಬೇಕಾಗಿರುವುದು ಉದ್ಯೋಗ, ನಮ್ಮ ಭಾಷೆಗೆ ಬೇಕಾದ ರಾಜಕೀಯ ಶಕ್ತಿ, ಎರಡು ದಶಕಗಳ ಹಿಂದೆ ನಿಂತು ಹೋಗಿರುವ ಪಂಡಿತ ಪರಂಪರೆಯ ಚರ್ಚೆ!

ತುಳುನಾಡಿನ ಜನ ಬುದ್ದಿವಂತರು ಎಂದು ಕರೆಸಿಕೊಳ್ಳುತ್ತಾರೆ. ಬುದ್ದಿವಂತರು ಆಗಿದ್ದರು….. ಹಾಗಾಗಿ ಹತ್ತಾರು ಬ್ಯಾಂಕುಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕೈಗಾರಿಕೆಗಳು ಇಲ್ಲಿ ಬೆಳೆದವು. ತುಳುವಿನಷ್ಟು ಈ ದೇಶದ ಯಾವುದೇ ಪ್ರಾದೇಶಿಕ ಭಾಷೆಯಲ್ಲಿ ಸಾಹಿತ್ಯ, ಸಂಶೋಧನೆಯ ಕೆಲಸ ನಡೆದಿಲ್ಲ. ಇಲ್ಲಿ ಒಂದು ಸುದೀರ್ಘ ಪಂಡಿತರ ಪರಂಪರೆ ಇದೆ. ಯಾವಾಗ ಕೋಮು ಸಂಘಟನೆಗಳು ಇಲ್ಲಿ ಕಾಲಿಟ್ಟವೋ…ಅಲ್ಲಿಗೆ ಎಲ್ಲವೂ ನಿಂತೇ ಹೋಗಿವೆ! ಇಂದು ತುಳುನಾಡಿನ ಜನ ಬುದ್ದಿವಂತರಾಗಿ ಉಳಿದಿಲ್ಲ, ಮುಟ್ಟಾಳರಾಗಿದ್ದಾರೆ!

ದಕ್ಷಿಣ ಕನ್ನಡಕ್ಕೆ ಬೆಂಕಿ ಹಾಕಲು ಗೊತ್ತಿದೆ ಎಂಬ ಒಬ್ಬ ಅವಿವೇಕಿ, ಮೂರ್ಖ ಸಂಸದ ತುಳುನಾಡನ್ನು ಹೇಗೆ ಪ್ರತಿನಿಧಿಸಬಲ್ಲ? ಇಂತವರ ಮಾತು ಕೇಳಿ ನಮ್ಮ ಯುವಕರು ಕತ್ತಿ ಹಿಡಿಯುತ್ತಾರೆ. ಭಾಷಣ ಬಿಗಿಯುವ ಜನ ತಮ್ಮ ಮಕ್ಕಳ ಕೈಗೆ ಕತ್ತಿ ಕೊಡುತ್ತಾರೆಯೇ? ಯಾರು ಕತ್ತಿ ಹಿಡಿಯುತ್ತಾರೆ? ನನ್ನಂತ ಶೂದ್ರ, ದಲಿತನ ಮಗ! ಅವನಿಗೆ ಉದ್ಯೋಗ ಇಲ್ಲ, ಓದಲು ಕಾಸಿಲ್ಲ!

ಪ್ರಜ್ಞಾವಂತ ಹಿಂದೂ, ಮುಸಲ್ಮಾನ ಮತ್ತು ಎಲ್ಲಾ ಧರ್ಮದವರು ಎಚ್ಚೆತ್ತು ಕೋಮು ದ್ವೇಷಕ್ಕೆ ಪರ್ಯಾಯವಾಗಿ ಸೌಹಾರ್ದತೆಯ ಸಮುದಾಯವನ್ನು ಕಟ್ಟದ್ದೆ ಇದ್ದರೆ ಮುಂದೆ ಬದುಕಲು ಸಾಧ್ಯ ಇಲ್ಲದ ಸ್ಥಿತಿ ನಿರ್ಮಾಣ ಆದೀತು.

ಸಾಧ್ಯ ಆದರೆ ನಮ್ಮ ಮಕ್ಕಳ ಕೈಗೆ ಕತ್ತಿ ಕೊಡಲು ಹೊರಟಿರುವ ಚೈತ್ರ ಎಂಬ ಭಾಷಣ ಮಾಡುವ ಮೂರ್ಖ ಹೆಂಗಸಿಗೆ ಈ ಕಥೆಯನ್ನು ತಲುಪಿಸಿ.

ಕೋಟಿ ಚೆನ್ನಯರು ಮರಣ ಹೊಂದಿದ ಮೇಲೆ ಎಣ್ಮೂರು ಸೂತಕದಲ್ಲಿ ಇತ್ತು. ದೇವು ಬಲ್ಲಾಳನ ಪಟ್ಟವನ್ನು ರಕ್ಷಿಸಲು ಅವಳಿ ವೀರರು ತಮ್ಮ ಪ್ರಾಣವನ್ನು ಅರ್ಪಿಸಿದ್ದರು. ಇವರ ನಂತರ ಎಣ್ಮೂರಿನ ದೇವು ಬಲ್ಲಾಳನ ಪಟ್ಟವನ್ನು ಕಾಪಾಡುವ ವೀರರು ಯಾರು? ಆಗ ಅವರಿಗೆ ಬೆಂಗಾವಲಾಗಿ ನಿಂತ ವೀರ “ಮಾಮ್ಮಾಲಿ” ಬ್ಯಾರಿ!

ಕುರಿಯ ಗುತ್ತು ಪುತ್ತೂರಿನ ಹೆಗ್ಗಡೆಯ ಬೀಡಿಗೆ ಸೇರಿದ ಖ್ಯಾತ ಗುತ್ತು. ಇಲ್ಲಿನ ಗುತ್ತಿನಾರ್ ಮರಣಹೊಂದಿದ ಮೇಲೆ ಗುತ್ತಿನ ಹೆಂಗಸು ಗುತ್ತಿನ ಜವಾಬ್ದಾರಿ ಹೊರುತ್ತಾಳೆ. ಗುತ್ತಿನ ಪರಿಸರದಲ್ಲಿ ಇದ್ದ ಮುಸ್ಲಿಂ ಕುಟುಂಬದ ಯುವಕ ಗುತ್ತಿನ ದಂಡಿನ ಮುಖಂಡ. ಅನಾಥನಾಗಿದ್ದ ಅವನು ತನ್ನ ಮಡದಿಯ ಜೊತೆಗೆ ವಾಸ ಮಾಡುತ್ತಿದ್ದ.

ಹೀಗಿರಲು ಗುತ್ತಿಗೆ ವಿಜಯನಗರದ ತಾಳಿಕೋಟೆಯ ಕದನಕ್ಕೆ ಸೈನಿಕರು ಮತ್ತು ನಿಧಿಯನ್ನು ನೀಡುವಂತೆ ಪುತ್ತೂರಿನ ಹೆಗ್ಗಡೆಗೆ ಬರುತ್ತದೆ. ಅವನು ತನ್ನ ಕೈಕೆಳಗೆ ಬರುವ ನಾಲ್ಕು ಗುತ್ತುಗಳನ್ನು ಕರೆದು ಸಭೆ ನಡೆಸುತ್ತಾನೆ. ಯುದ್ಧಕ್ಕೆ ಪಡೆಯನ್ನು ಕಳುಹಿಸಲು ಅದಕ್ಕೆ ಮುಖಂಡನಾಗಿ ಕುರಿಯ ಗುತ್ತಿನ ಬ್ಯಾರಿ ಮುಖಂಡನನ್ನು ನೇಮಿಸಿದಾಗ ಗುತ್ತಿನ ಹೆಂಗಸು ವಿರೋಧ ಮಾಡುತ್ತಾಳೆ. ಅವಳಿಗೆ ತುಂಬು ಗರ್ಭಿಣಿ ಮಡದಿಯನ್ನು ಹೊಂದಿರುವ ಬ್ಯಾರಿಯನ್ನು ಯುದ್ದಕ್ಕೆ ಕಳುಹಿಸುವುದು ಇಷ್ಟವಿರಲಿಲ್ಲ. ಆದರೆ ಬ್ಯಾರಿ ತನ್ನ ಪಡೆಯೊಂದಿಗೆ ವಿಜಯನಗರದ ಯುದ್ದಕ್ಕೆ ಹೋಗುತ್ತಾನೆ. ಯುದ್ಧದಲ್ಲಿ ಮರಣ ಹೊಂದುತ್ತಾನೆ.

ಇತ್ತ ಗಂಡನನ್ನು ಕಳೆದುಕೊಂಡ ಬ್ಯಾರ್ದಿ ಒಂದು ಗಂಡು ಮಗುವಿಗೆ ಜನ್ಮ ನೀಡಿ ಮರಣ ಹೊಂದುತ್ತಾಳೆ. ಈ ಮಗುವನ್ನು ಗುತ್ತಿನ ಮನೆಯ ಒಡತಿಯೇ “ಮಮ್ಮಾಲಿ/ಮಮ್ಮದೆ” ಎಂಬ ಹೆಸರು ಇಟ್ಟು ಸಾಕುತ್ತಾಳೆ. ಅವ ಮುಸಲ್ಮಾನನಾದರೂ ಅವನಿಗೆ ನಮಾಜು ಮಾಡಲು ಗುತ್ತಿನಲ್ಲಿ ಅಡ್ಡಿ ಇರಲಿಲ್ಲ. ಒಂದು ದೀಪ ಉರಿಸಿ ನಿತ್ಯ ನಮಾಜು ಮಾಡುತ್ತಿದ್ದ.

ಒಂದು ದಿನ ದನ ಮೇಯಿಸಲು ಹೋಗಿದ್ದ ಮಾಮ್ಮಲಿ ಮರದ ಕೆಳಗೆ ಮಲಗಿದ್ದ. ಅವನ ಮುಖಕ್ಕೆ ಬಿಸಿಲು ಬಡಿಯುತ್ತಿತ್ತು. ಆಗ ಒಂದು ಸರ್ಪ ಹೆಡೆ ಎತ್ತಿ ಅವನ ಮುಖಕ್ಕೆ ಬಿಸಿಲು ಬೀಳದಂತೆ ನಿಂತಿತ್ತಂತೆ. ಅದನ್ನು ನೋಡಿ ಇತರ ಹುಡುಗರು ಭಯದಲ್ಲಿ ಓಡಿ ಹೋಗಿದ್ದರು. ಆದರೆ ಮಮ್ಮಾಲಿ ಮಾತ್ರ ಏನೂ ಅಗದವನಂತೆ ಇದ್ದ. ಇವನು ಗುಟ್ಟಿನಲ್ಲಿ ಬೆಳೆದಂತೆ ಅವನ ಕಾರಣಿಕ ಕೂಡಾ ದಿನೇ ದಿನೇ ಬೆಳೆಯಿತು. ಕುರಿಯ ಗುತ್ತಿನ ಸಂಪತ್ತು ಸಮೃದ್ಧವಾಗಿ ಬೆಳೆಯಿತು.

ಒಂದು ದಿನ ಕುರಿಯ ಗುತ್ತಿನ ಕಪಿಲೆ ದನವನ್ನು ಹುಲಿ ಹಿಡಿಯಿತು. ದನವನ್ನು ಕಳೆದುಕೊಂಡ ಗುತ್ತಿನ ಒಡತಿ ಅಳುತ್ತಿದ್ದಳು. ಅಂದು ರಾತ್ರಿ ಮಮ್ಮಾಲಿ ದನವನ್ನು ಕೊಂದ ಜಾಗಕ್ಕೆ ಕರಿ ಕಂಬಳಿ ಹೊದ್ದು ಹೋಗಿ ಹುಲಿಗಾಗಿ ಕಾದನು, ಹುಲಿ ಬಂದಂತೆ ಅದನ್ನು ಹೊಡೆದು ಸಾಯಿಸಿದ. ಸತ್ತ ಹುಲಿಯನ್ನು ಹಗ್ಗದಲ್ಲಿ ಕಟ್ಟಿ ತನ್ನ ಸೊಂಟಕ್ಕೆ ಬಿಗಿದು ಎಳೆದುಕೊಂಡು ಕುರಿಯ ಗುತ್ತಿನ ಅಂಗಳಕ್ಕೆ ತಂದು ಹಾಕಿದ.

ಇಂತಹ ವೀರನನ್ನು ಗರಡಿಗೆ ಸೇರಿಸಿ ವೀರನನ್ನಾಗಿ ಮಾಡಲು ಗುತ್ತಿನ ಒಡತಿ ತೀರ್ಮಾನಿಸುತ್ತಾಳೆ. ಆದರೆ ಪುತ್ತೂರಿನಲ್ಲಿ ಗರಡಿ ಇರಲಿಲ್ಲ. ಅವನ್ನನ್ನು ವಿಟ್ಲದ ಅರಸನ ಗರಡಿಗೆ ಸೇರಿಸುತ್ತಾಳೆ.

ವಿಟ್ಲದ ಅರಸರಿಗೆ ಗರಡಿಯ ಗುರುವಾಗಿ ಇದ್ದವರು ದೇರಣ್ಣ ಗೌಡ ಎಂಬವನು. ಇವನ ಅಡಿಯಲ್ಲಿ ಮಮ್ಮಾಲಿ ಅಂಗ ಸಾಧನೆಯನ್ನು ಕಲಿಯುತ್ತಿರುತ್ತಾನೆ.

ಒಮ್ಮೆ ರಾಜ ಕುಟುಂಬಕ್ಕೆ ಸೇರಿದ ಯುವಕ ದೇರಣ್ಣ ಗೌಡರ ಪ್ರೇಯಸಿಯ ಮಾನ ಭಂಗ ಮಾಡುತ್ತಾನೆ. ಆಗ ದೇರಣ್ಣ ಗೌಡ ಇದನ್ನು ಪ್ರಶ್ನಿಸಿ ರಾಜ ವಿರೋಧಕ್ಕೆ ಒಳಾಗಾಗ ಬೇಕಾದೀತು ಎಂದು ಸಾಧುವಾದ ಎಣ್ಮೂರು ದೇವು ಬಲ್ಲಾಳನ ಬೀಡಿಗೆ ತನ್ನ ಪ್ರೇಯಸಿಯೊಂದಿಗೆ ಬರುತ್ತಾನೆ. ಬಲ್ಲಾಳ ಅವನಿಗೆ ಅಕ್ರಿಕೆ (ತುರಿಕೆ ಉಂಟು ಮಾಡುವ ಸಸ್ಯ) ಹೆಚ್ಚಿದ್ದ ಅಕ್ರಿಕಟ್ಟೆ ಎಂಬ ಭೂಮಿಯನ್ನು ನೀಡಿ ಆಶ್ರಯ ನೀಡುತ್ತಾರೆ. ಹಾಗೆ ಬಲ್ಲಾಳರು ಗೌಡನ ಮೂಲಕ ಪಡ್ಪು ಎಂಬಲ್ಲಿ ಗರಡಿ ಶಾಲೆ ತೆರೆಯುತ್ತಾರೆ.

ಹೇಳದೆ ಕೇಳದೆ ವಿಟ್ಲ ಬಿಟ್ಟ ಗುರುವನ್ನು ಹುಡುಕಿಕೊಂಡು ಮಮ್ಮಾಲಿ ಪಡ್ಪುವಿನಲ್ಲಿ ಇದ್ದ ಗರಡಿಗೆ ಬರುತ್ತಾನೆ. ಮತ್ತೆ ತನ್ನ ಗುರು ದೇರಣ್ಣ ಗೌಡನನ್ನು ಕೂಡಿಕೊಳ್ಳುತಾನೆ. ಇದು ಆಗಿದ್ದು ಕೋಟಿ ಚೆನ್ನಯರು ಮರಣ ಹೊಂದಿ ಎರಡು ವರ್ಷಗಳು ತುಂಬುತ್ತಿದ್ದ ಹಾಗೆ. ಕೋಟಿ ಚೆನ್ನಯರು ಮತ್ತು ಮಂಜು ಪೆರ್ಗಡೆ ತೀರಿದ ಮೇಲೆ ಎಣ್ಮೂರು ಬೀಡಿಗೆ ರಕ್ಷಣೆಗಾಗಿ ಯಾರೂ ಇರಲಿಲ್ಲ. ದೇರಣ್ಣನ ಶಿಷ್ಯ ಮಮ್ಮಾಲಿಯನ್ನು ದೇವು ಬಲ್ಲಾಳ ಮೆಚ್ಚಿ ಹತ್ತಿರ ಮಾಡಿಕೊಂಡ. ಅವನ ರಕ್ಷಣೆಯಲ್ಲಿ ಬಲ್ಲಾಳ ಎಣ್ಮೂರು ಪಟ್ಟವನ್ನು ಅಳುತ್ತಿದ್ದ.

ವೃದ್ದನಾಗಿದ್ದ ದೇವು ಬಲ್ಲಾಳನ ಪಟ್ಟದ ಮೇಲೆ ಅವನ ಅಳಿಯ ರುಕ್ಮ ಬಲ್ಲಾಳನ ಕಣ್ಣು ಬಿತ್ತು. ಪಟ್ಟವನ್ನು ಹಸ್ತಾಂತರ ಮಾಡುವಂತೆ ಇವನು ಬಲ್ಲಾಳನಿಗೆ ಹೇಳಿದ್ದ. ಇದನ್ನು ಚಾವಡಿಯಲ್ಲಿ ಪ್ರಸ್ತಾಪ ಮಾಡಿದಾಗ ಪಟ್ಟವನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ದೇವು ಬಲ್ಲಾಳ ಘೋಷಿಸುತ್ತಾನೆ. ಬಲ್ಲಾಳನಿಗೆ ಇಕ್ಕೇರಿಯ ಅರಸರು ಪಟ್ಟದ ಕತ್ತಿ ಮತ್ತು ಕಿರೀಟವನ್ನು ಕೊಟ್ಟಿದ್ದರಂತೆ.

ಅದನ್ನು ತನ್ನ ವಶ ಮಾಡಿಕೊಂಡರೆ ಕಿರೀಟ ಮತ್ತು ಮತ್ತು ಪಟ್ಟದ ಕತ್ತಿ ಇಲ್ಲದ ಬಲ್ಲಾಳ ಅಧಿಕಾರ ಬಿಡಬೇಕಾಗುತ್ತದೆ ಎಂದು ರುಕ್ಮ ಬಲ್ಲಾಳ ಕುತಂತ್ರಗಳನ್ನು ಹೂಡುತ್ತಾನೆ. ಅದಕ್ಕಾಗಿ ಕಡಬದ ಬಲ್ಲಾಳನ ಸಹಾಯ ಕೋರುತ್ತಾನೆ. ಆದರೆ ಇದು ಮಮ್ಮಾಲಿ ಇರುವ ತನಕ ಸಾಧ್ಯ ಇಲ್ಲ ಎಂಬುದು ಅವನಿಗೆ ಗೊತ್ತಿತ್ತು.

ಮಮ್ಮಾಲಿ ನಮಾಜು ಮಾಡಲು ಎಣ್ಮೂರಿನಲ್ಲಿ ಪಳ್ಳಿ (ಮಸೀದಿ) ಇರಲಿಲ್ಲ. ಅವನು ಕಡಬದ ಪಲ್ಲಿಗೆ ಹೋಗಬೇಕಿತ್ತು. ಒಂದು ಶುಕ್ರವಾರ ಕಡಬದ ಪಳ್ಳಿಗೆ ಹೋಗುವಾಗ ಕಡಬದ ಪಲ್ಲಿಯಲ್ಲಿ ಇರುವ ಯುವಕರು ಅಂದು ಒಬ್ಬರೂ ಇರಲಿಲ್ಲ. ಮಮ್ಮಾಲಿಗೆ ಅನುಮಾನ ಬರುತ್ತದೆ. ನೇರ ಎಣ್ಮೂರಿನ ಕಡೆಗೆ ನಡೆಯುತ್ತಾನೆ.

ಇತ್ತ ಮಮ್ಮಾಲಿ ಇಲ್ಲದ ಸಮಯದಲ್ಲಿ ರುಕ್ಮ ಬಲ್ಲಾಳ ಕಡಬದ ಬಲ್ಲಾಳನ ಪಡೆಯೊಂದಿಗೆ ಎಣ್ಮೂರಿನ ಬೀಡಿನ ಮೇಲೆ ಧಾಳಿ ಇಟ್ಟು ಪಟ್ಟದ ಕತ್ತಿ ಮತ್ತು ಪೇಟವನ್ನು ವಶಮಾಡಿಕೊಳ್ಳುತ್ತಾನೆ.

ಕಡಬದ ದಂಡು ಕಡಬದ ಕಡೆಗೆ ಮರಳುವಾಗ ಹಿಂತಿರುಗಿ ಬರುತ್ತಿರುವ ಮಮ್ಮಾಲಿ ಬ್ಯಾರಿ ಪಂಜದ ಕಮಿಲದಲ್ಲಿ ಎದುರಾಗುತ್ತಾನೆ. ಮಮ್ಮಾಲಿ ಮತ್ತು ಕಡಬದ ದಂಡಿನ ನಡುವೆ ಕಾದಾಟ ನಡೆಯುತ್ತದೆ. ಲಡಾಯಿಯಲ್ಲಿ ಮಮ್ಮಾಲಿ ಒಬ್ಬನೇ ಕಾದಾಡಿ ಎಣ್ಮೂರಿನ ಪಟ್ಟದ ಕತ್ತಿ ಮತ್ತು ಪೇಟವನ್ನು ಮರುವಶ ಮಾಡಿಕೊಳ್ಳುತ್ತಾನೆ.

ಮಮ್ಮಾಲಿ ಎಣ್ಮೂರಿನ ಬೀಡಿಗೆ ಬಂದಾಗ ದೇವು ಬಲ್ಲಾಳ ಮತ್ತು ದೇರಣ್ಣ ಗೌಡ ದುಃಖದಲ್ಲಿ ಇರುತ್ತಾರೆ. ಬ್ಯಾರಿ ತಾನು ತಂದ ಪೇಟ ಮತ್ತು ಕತ್ತಿಯನ್ನು ಬಲ್ಲಾಳರಿಗೆ ಒಪ್ಪಿಸುತ್ತಾನೆ. ಆಗ ಬಲ್ಲಾಳರು ಒಮ್ಮೆ ಕಳೆದುಕೊಂಡ ಪಟ್ಟವನ್ನು ಮತ್ತೆ ಏರುವುದಿಲ್ಲ ಎಂದು ಹೇಳಿ ಮಮ್ಮಾಲಿಯನ್ನು ಪಟ್ಟ ಏರುವಂತೆ ಒತ್ತಾಯಿಸುತ್ತಾರೆ.

ಬ್ಯಾರಿ ಎಷ್ಟೇ ತಿರಸ್ಕರಿಸಿದರು ಬಲ್ಲಾಳ ಒಪ್ಪುವುದಿಲ್ಲ. ಆಗ ಮಮ್ಮಾಲಿ ಪಟ್ಟದ ಕತ್ತಿ ಮತ್ತು ಪೇಟವನ್ನು ಪಟ್ಟದ ಮಣೆಯ (ಸಿಂಹಾಸನ) ಮೇಲೆ ಇಟ್ಟು ಬೀಡನ್ನು ಕಾಯುತ್ತಾನೆ. ಬಲ್ಲಾಳ ತನ್ನ ನಂತರ ಮಮ್ಮಾಲಿಗೆ ಪಟ್ಟ ಹೋಗಬೇಕು ಎಂದು ಅವನು ಪಟ್ಟವೇರಿ ಮಾಡಬೇಕಾದ ಜವಾಬ್ದಾರಿಗಳನ್ನು ಕುರಿತು ಶಾಸನ ಬರೆಸುತ್ತಾನೆ. ಕೆಲ ಕಾಲದ ನಂತರ ಬಲ್ಲಾಳ ಮರಣ ಹೊಂದುತ್ತಾನೆ.

ಇತ್ತ ರುಕ್ಮ ಬಲ್ಲಾಳ ಪಟ್ಟವನ್ನು ದಕ್ಕಿಸಿಕೊಳ್ಳಲು ಪ್ರಯತ್ನ ನಡೆಸುತ್ತಿರುತ್ತಾನೆ. ಅವನು ಕುಂಬ್ಳೆ ರಾವಂತರಸ ಮತ್ತು ವಿಟ್ಲದ ಹೆಗ್ಗಡೆಗೆ ದೂರು ನೀಡುತ್ತಾನೆ. ಇವರು ಮಮ್ಮಾಲಿಯನ್ನು ಕರೆದು ರುಕ್ಮ ಬಲ್ಲಾಳನಿಗೆ ಪಟ್ಟ ಬಿಟ್ಟು ಕೊಡುವಂತೆ ಆದೇಶ ನೀಡುತ್ತಾರೆ. ಪಟ್ಟ ಬಿಟ್ಟು ಕೊಟ್ಟರೆ ಸ್ವರ್ಗರ್ಥರಾದ ದೇವು ಬಲ್ಲಾಳರಿಗೆ ಅಪಚಾರ ಬಗೆದ ಹಾಗೆ ಎಂದು ಮಮ್ಮಾಲಿ ಇದಕ್ಕೆ ಒಪ್ಪುವುದಿಲ್ಲ.

ಆಗ ಕುಂಬ್ಳೆ ಮತ್ತು ವಿಟ್ಲದ ಅರಸರು ಒಂದು ತೀರ್ಮಾನಕ್ಕೆ ಬರುತ್ತಾರೆ. ಯಾರ ತಲೆಗೆ ಪಟ್ಟದ ಆನೆ ಪಟ್ಟದ ಕಿರೀಟ ಹಾಕಿದ ಮುಂಡಾಸು ತೋಡಿಸುತ್ತದೆಯೋ ಅವರು ಮುಂದೆ ಎಣ್ಮೂರು ಬೀಡಿನ ಪಟ್ಟ ಏರಬೇಕು ಎಂದು ಅದೇಶಿಸುತ್ತಾರೆ. ಇದಕ್ಕೆ ಬ್ಯಾರಿ ಒಪ್ಪುತ್ತಾನೆ.

ಆದರೆ ಆನೆ ಮಮ್ಮಾಲಿ ಬ್ಯಾರಿಯ ತಲೆಗೆ ಪಟ್ಟದ ಮುಂಡಾಸು ತೊಡಿಸುತ್ತದೆ. ಪಟ್ಟ ಮಮ್ಮಾಲಿಯದಾಗುತ್ತದೆ. ಆದರೆ ಇವನು ಪಟ್ಟದ ಕತ್ತಿ ಮತ್ತು ಮುಂಡಾಸನ್ನು ಪಟ್ಟದ ಮಣೆಯ ಮೇಲೆ ಇಟ್ಟು ಬೀಡನ್ನು ಅಳುತ್ತಾನೆ. ಮಣೆಯ ಪಕ್ಕ ಒಂದು ಸರ್ಪ ಮಲಾಗಿರುತ್ತಿತ್ತಂತೆ! ರುಕ್ಮ ಬಲ್ಲಾಳ ತನಗೆ ದಕ್ಕಿದ ಭೂಮಿಯನ್ನು ಅನುಭವಿಸಲು ಸಾಧ್ಯವಾಗದೆ ಊರು ಬಿಟ್ಟ.

ಬ್ಯಾರಿ ಬೀಡಿನಲ್ಲಿ ವಾಸ ಮಾಡದೆ ಪಕ್ಕದಲ್ಲಿ ತನಗೊಂದು ಮನೆ ಕಟ್ಟಿಸಿಕೊಂಡ. ಆದರೆ ಬೀಡಿನಿಂದ ಆಗಬೇಕಾದ ಎಲ್ಲ ಧರ್ಮ ಕಾರ್ಯಗಳನ್ನು ಮಾಡಿಸಿಕೊಂಡು ಬರುತ್ತಿದ್ದ.

ಸುಮಾರು ಕ್ರಿ.ಶ 1590 ರ ಆಸುಪಾಸಿನಲ್ಲಿ ನಡೆದ ಈ ಘಟನೆಯ ಕಥನ ಇಂದು ಕೆಲವು ಆಚರಣೆಗಳ ಮೂಲಕ ಉಳಿದುಕೊಂಡಿದೆ. ಬಲ್ಲಾಳ ಬರೆಸಿದ ತಾಮ್ರ ಶಾಸನ ಇತ್ತೀಚಿನ ವರೆಗೆ ಇತ್ತಂತೆ. 1920 ರ ಅಜುಬಾಜಿನಲ್ಲಿ ಹಳೆಯ ಬೀಡಿಗೆ ಬೆಂಕಿ ಬಿದ್ದ ಮೇಲೆ ಪಟ್ಟದ ಕಿರೀಟ ಮತ್ತು ಈ ತಾಮ್ರ ಶಾಸನ ನಾಶವಾಗಿ ಹೋಯಿತಂತೆ.

ಮಮ್ಮಾಲಿ ಬ್ಯಾರಿಯು ಅಧಿಕಾರ ಹಿಡಿದ ಮೇಲೆ ಪಂಜದ ದೇವರಿಗೆ ತಪ್ಪದೆ ಸೇವೆ ನಡೆಯುತ್ತಿತ್ತು. ಬ್ಯಾರಿಯ ಕುಟುಂಬ ದೊಡ್ಡದಾಗಿ ಬೆಳೆದಿದೆ. ಸುಳ್ಯದ ಖ್ಯಾತ ನ್ಯಾಯವಾದಿ ಕುಂಞಪಳ್ಳಿಯವರು ಎಣ್ಮೂರು ಬೀಡಿನ ಅರ್ವತ್ತೊಕ್ಕೆಲು ಮನೆಯವರು. ಎಣ್ಮೂರು ಪಟ್ಟವನ್ನು ಉಳಿಸಿದ ಕುಂಞಪಿಲಿ ಮಮ್ಮಾಲಿ ಕುಟುಂಬವನ್ನು ಪಂಜ ಜಾತ್ರೆಯಲ್ಲಿ ಗೌರವಾದರ ನೀಡಿ ಆಹ್ವಾನಿಸಿ ಸ್ವಾಗತಿಸುತ್ತಾರೆ.

ಮಮ್ಮಾಲಿ ಹುಟ್ಟಿದ ಮನೆ ಕುರಿಯದ ಗುತ್ತಿನಲ್ಲಿ ನಮಾಜು ಮಾಡುವಾಗ ಅವನು ಉರಿಸಿದ ದೀಪವನ್ನು ಇಂದಿಗೂ ಉರಿಸುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ

Published

on

ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್‌ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್‌ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್‌ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್‌ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್‌, ಚೇತನ್‌ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.

ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್‌ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್‌ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್‌ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.

ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!

Published

on

ಆಗಸ್ಟ್ 2023 ರಿಂದ ಜುಲೈ 2026 ರವರೆಗೆ ₹28,759 ಕೋಟಿ ಸಬ್ಸಿಡಿ ಬಿಡುಗಡೆ; ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್‌ನಿಂದ ಕೋಟ್ಯಂತರ ಕುಟುಂಬಗಳ ಆರ್ಥಿಕ ಸಬಲೀಕರಣ

ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.

ಹೌದು! 2023ರ ಆಗಸ್ಟ್‌ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್‌ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.

http://Visit : www.suddidina.com

ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ: 

ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್‌ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.

ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್‌ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.

ಕುಟುಂಬದ ಬಜೆಟ್‌ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:

ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.

ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

Continue Reading

ದಿನದ ಸುದ್ದಿ

ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!

Published

on

ಕರ್ನಾಟಕದ ವೈಟ್‌ಫೀಲ್ಡ್-ಬಂಗಾರಪೇಟೆ, ಹೊಸೂರು-ಓಮಲೂರು ಮಾರ್ಗ ಸೇರಿ 9 ರಾಜ್ಯಗಳ 1200 ಕಿ.ಮೀ ರೈಲು ಜಾಲ ವಿಸ್ತರಣೆಗೆ ಪ್ರಧಾನಿ ಮೋದಿ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ಅನುಮೋದನೆ

ಸುದ್ದಿದಿನ, ಹೊಸದಿಲ್ಲಿ: ದೇಶದ ರೈಲ್ವೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ 20ಕ್ಕೂ ಹೆಚ್ಚು ಜಿಲ್ಲೆಗಳನ್ನು ಸಂಪರ್ಕಿಸುವ 20,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ 8 ಬಹು ಟ್ರ್ಯಾಕಿಂಗ್ (Multi-Tracking) ರೈಲು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ (ಸೆ.09) ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಯೋಜನೆಗಳು ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅನುಷ್ಠಾನಗೊಳ್ಳಲಿವೆ.

http://Visit : www.suddidina.com

ಈ ಯೋಜನೆಗಳಿಂದ ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವು ಬರೋಬ್ಬರಿ 1,200 ಕಿಲೋಮೀಟರ್‌ಗಳಷ್ಟು ವಿಸ್ತರಣೆಯಾಗಲಿದೆ. ಇದರಿಂದ 6,900ಕ್ಕೂ ಹೆಚ್ಚು ಗ್ರಾಮಗಳಿಗೆ ಸುಧಾರಿತ ಸಂಪರ್ಕ ಸಿಗಲಿದ್ದು, ರೈಲುಗಳ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಗಣನೀಯವಾಗಿ ಹೆಚ್ಚಾಗಲಿದೆ.

ಯಾವೆಲ್ಲ ಯೋಜನೆಗಳಿಗೆ ಅನುಮೋದನೆ?
ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಪ್ರಮುಖ ಯೋಜನೆಗಳು ಹೀಗಿವೆ:

1. ಅರಾಕೋಣಂ-ರೇಣಿಗುಂಟಾ ಮತ್ತು ವೈಟ್‌ಫೀಲ್ಡ್-ಬಂಗಾರಪೇಟೆ ನಡುವೆ 3 ಮತ್ತು 4ನೇ ಮಾರ್ಗ: ಇದು ಕರ್ನಾಟಕ ಮತ್ತು ತಮಿಳುನಾಡು, ಆಂಧ್ರಪ್ರದೇಶಕ್ಕೆ ಅತ್ಯಂತ ಮಹತ್ವದ ಯೋಜನೆಯಾಗಿದೆ.

2. ಸಿಕಂದರಾಬಾದ್-ಕಾಜಿಪೇಟೆ ನಡುವೆ ಮಲ್ಟಿ ಟ್ರ್ಯಾಕಿಂಗ್: ತೆಲಂಗಾಣದ ಪ್ರಮುಖ ಮಾರ್ಗದ ದಟ್ಟಣೆ ಕಡಿಮೆ ಮಾಡಲಿದೆ.

3. ಹೊಸೂರು-ಓಮಲೂರು, ಸೇಲಂ-ಕರೂರ್-ದಿಂಡಿಗಲ್ ಜೋಡಿ ಹಳಿ ಯೋಜನೆ: ತಮಿಳುನಾಡು ಮತ್ತು ಕರ್ನಾಟಕದ ಗಡಿ ಭಾಗದ ಸಂಪರ್ಕವನ್ನು ಬಲಪಡಿಸಲಿದೆ.

4. ಖರಗ್‌ಪುರ-ಝಾರ್ಸುಗುಡ ಮತ್ತು ಕತ್ನಿ-ಪೆಂದ್ರ ರಸ್ತೆ ನಡುವೆ 4ನೇ ಮಾರ್ಗ ಮತ್ತು ಬಿಲಾಸ್‌ಪುರ್-ಪೆಂದ್ರ ರಸ್ತೆ ನಡುವೆ 3ನೇ ಮಾರ್ಗ: ಛತ್ತೀಸ್‌ಗಢ, ಒಡಿಶಾ, ಮಧ್ಯಪ್ರದೇಶದ ಕಲ್ಲಿದ್ದಲು ಮತ್ತು ಖನಿಜ ಸಾಗಣೆಗೆ ಸಹಕಾರಿಯಾಗಲಿದೆ.

ಈ ಎಲ್ಲಾ ಯೋಜನೆಗಳು ಕರ್ನಾಟಕ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ಛತ್ತೀಸ್‌ಗಢ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಒಳಗೊಳ್ಳಲಿವೆ.

ಕರ್ನಾಟಕಕ್ಕೆ ಏನು ಲಾಭ?

ಈ ಬಹು ಟ್ರ್ಯಾಕಿಂಗ್ ಯೋಜನೆಗಳಿಂದ ಕರ್ನಾಟಕಕ್ಕೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ.ಕೈಗಾರಿಕೆಗಳಿಗೆ ಅನುಕೂಲ: ರಾಜ್ಯದ ಉಕ್ಕು ಕಾರ್ಖಾನೆಗಳಿಗೆ ಕಚ್ಚಾ ವಸ್ತುಗಳಾದ ಖನಿಜ ಸಾಗಿಸಲು ವಾಡಿ-ತಂದೂರು, ಮೋಟುಮಾರಿ-ವಿಷ್ಣುಪುರಂ ಮಾರ್ಗದಲ್ಲಿನ ಅಭಿವೃದ್ಧಿಯಿಂದ ಹೆಚ್ಚಿನ ಅನುಕೂಲವಾಗಲಿದೆ. ಹೂಟಗಿ, ಕೂಡಗಿ, ಯಾದ್ಲಾಪುರ, ಬಳ್ಳಾರಿ ಮತ್ತು ಯರಮರಸ್‌ನಲ್ಲಿರುವ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಣೆ ಇನ್ನಷ್ಟು ವೇಗ ಮತ್ತು ಸುಲಭವಾಗಲಿದೆ.

ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ದಟ್ಟಣೆ ಕಡಿಮೆ: ವೈಟ್‌ಫೀಲ್ಡ್-ಬಂಗಾರಪೇಟೆ ನಡುವಿನ 47 ಕಿ.ಮೀ ಉದ್ದದ 3 ಮತ್ತು 4ನೇ ಮಾರ್ಗವು ಅತ್ಯಂತ ದಟ್ಟಣೆಯ ಮನ್ಮಾಡ-ಹುಬ್ಬಳ್ಳಿ-ಬೆಂಗಳೂರು-ಜೋಳರಪೇಟೆ ವಿಭಾಗದಡಿ ಬರುತ್ತದೆ. ಇದು ಬೆಂಗಳೂರು-ಚೆನ್ನೈ ನಡುವಿನ ರೈಲು ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಿ, ಹೆಚ್ಚಿನ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಿದೆ.

ಪ್ರವಾಸೋದ್ಯಮ ಮತ್ತು ಸರಕು ಸಾಗಣೆಗೆ ಉತ್ತೇಜನ: ಹೊಸೂರು-ಓಮಲೂರು ಜೋಡಿ ಹಳಿ ಮಾರ್ಗದಿಂದ ಕನ್ಯಾಕುಮಾರಿ, ರಾಮೇಶ್ವರಂನಂತಹ ಪುಣ್ಯಕ್ಷೇತ್ರಗಳಿಗೆ ತೆರಳುವ ಲಕ್ಷಾಂತರ ಯಾತ್ರಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಸರಕು ಸಾಗಣೆಯೂ ವೇಗವಾಗಲಿದೆ.ಒಟ್ಟಾರೆಯಾಗಿ, ಈ ಯೋಜನೆಗಳು ಕೇವಲ ರೈಲು ಮಾರ್ಗಗಳ ವಿಸ್ತರಣೆಯಷ್ಟೇ ಅಲ್ಲ, ದೇಶದ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಪ್ರಾದೇಶಿಕ ಸಂಪರ್ಕಕ್ಕೆ ಹೊಸ ಶಕ್ತಿ ತುಂಬಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Continue Reading

Trending