ದಿನದ ಸುದ್ದಿ
ಬಹುಜನರು ನಂಬಿರುವ ‘ಕತ್ತೆ ಕಥೆ’..!

- ಪರಶುರಾಮ್. ಎ
ಕತ್ತೆ ಕಥೆ ಇದೇನು ಪಂಚತಂತ್ರ ಕತೆಯೊ ಅಥವಾ ನೀತಿಕತೆಯೋ ಅಲ್ಲ. ನಿಮ್ಮಗಳ ನಿಜ ಜೀವನದಲ್ಲಿ ನೀವುಗಳೇ ನಂಬಿರುವ ಕಥೆಯಿದು. ನಿಮ್ಮ ಇಡೀ ಜೀವನದಲ್ಲಿ ಹಾಸು ಹೊಕ್ಕಾಗಿರುವ ದಿನನಿತ್ಯ ಕೈಮುಗಿದು ಮೂರ್ಖರಾಗಿರುವ ಮೂರ್ಖರನ್ನಾಗಿಸಿರುವ ಕತೆ. ಬಹುಶಃ ಈ ಕಥೆಯಲ್ಲಿ ನೀವುಗಳೇ ನಿಮ್ಮ ನಂಬಕೆಗಳೇ ಪ್ರಧಾನ ಆಗಿವೆ.
ನಂಬಿಕೆ, ಭಕ್ತಿ, ಮೌಲ್ಯಗಳನ್ನು ಬಂಡವಾಳವಾಗಿಸಿಕೊಂಡಿರುವವರೇ ಈ ಕಥೆಯ ಸೃಷ್ಟಿಕರ್ತರು. ಯಾವುದೋ ಒಂದು ಕಾಲದಲ್ಲಿ ಹುಟ್ಟಿರಬಹುದಾದ ಈ ಕಥೆ ಇನ್ನೂ ನಿಮ್ಮನ್ನು ಬಂಧನದಲ್ಲಿ ಇಟ್ಟಿದೆ ಎಂದರೆ ಅದಿನ್ನೆಂತಹ ಕ್ರೂರ ಲಾಭಕೋರ ವ್ಯವಸ್ಥೆ ಇರಬಹುದು ನೀವೇ ಊಹಿಸಿ ಯೋಚಿಸಿ! ಈ ಕಥೆ ಬಗ್ಗೆ ಈಗಾಗಲೇ ಕನ್ನಡದ ಲೇಖಕರು ಭಾಷಣಕಾರರು ಬಹುಜನರಿಗೆ ತಿಳಿಸಿ ಎಚ್ಚರಿಸುತಿದ್ದರು ಬಹುಜನರು ಇನ್ನೂ ಅದೇ ಕುತಂತ್ರ ಷಡ್ಯಂತ್ರಗಳಿಗೆ ಬಲಿಯಾಗಿರುವುದು ಸಮಾಜದ ಅಧೋಗತಿಗೆ ಒಂದು ಕಾರಣವು ಹೌದು. ತಮ್ಮನ್ನು ತಾವು ಶೋಷಿಸಿಕೊಳ್ಳುವುದು ಮತಿಹೀನ ಕೃತ್ಯ ಅಜ್ಞಾನ ಮೌಢ್ಯ ಪ್ರದರ್ಶನವಾಗಿದೆ.
ಡಾ.ಸಿದ್ದಲಿಂಗಯ್ಯ ನವರ “ಕತ್ತೆ ಮತ್ತು ಧರ್ಮ” ಕವನದಲ್ಲಿದೆ ನಾನು ಹೇಳಲು ಹೊರಟ ಸಾರಾಂಶ. (ಬಹುಜನರು ಕತ್ತೆ ಮತ್ತು ಧರ್ಮ ಕವನ ಓದಿ) ನಾನು ಇಲ್ಲಿ ಅದರ ಸಣ್ಣ ಸಾರಾಂಶ ಮಾತ್ರ ಉದಾಹರಿಸುವೆ. ಸಿದ್ದಯ್ಯನೆಂಬ ಅಗಸನಿಗೆ ಕತ್ತೆ ಎಂಬುದು ಜೊತೆಗಾರ, ಅದರೊಂದಿಗೆ ಅಪಾರ ಸ್ನೇಹ ಮಮತೆ ಹೊಂದಿದವನು ಈತ. ಎಷ್ಟರಮಟ್ಟಿಗೆ ಎಂದರೆ ಜನಗಳು ಕತ್ತೆಯನ್ನು ಸಿದ್ದಯ್ಯನ ಸಾಕುಮಗಳು ಅನ್ನುವಷ್ಟು ಪ್ರೀತಿ ಒಬ್ಬರಿಗೊಬ್ಬರಿಗೆ.
ಇಂಥ ತನ್ನ ನೆಚ್ಚಿನ ಕತ್ತೆ ಒಂದು ದಿನ ಇದ್ದಕ್ಕಿದ್ದಂತೆ ಕೊನೆಯುಸಿರೆಳೆದು ಮಲಗಿತು. ದಾರಿಯ ಮೂಲೆಯಲ್ಲಿ ಒಂದು ಕಡೆ ಮಣ್ಣು ಮಾಡಿ ಸಮಾಧಿಗೆ ನಮಿಸಿ ಪೂಜಿಸಿ ನೊಂದ ಸಿದ್ದಯ್ಯ ದೇಶಾಂತರ ಹೊರಟು ಹೋದ. ವ್ಯಾಪಾರಕ್ಕೆ ಅದೇ ದಾರಿಯಲ್ಲಿ ಹೊರಟಿದ್ದ ಜಯಶೆಟ್ಟಿ ಎಂಬುವನು ಅಗಸನ ಪೂಜೆ ನೋಡಿ ಯಾವುದೊ ಮಹಾತ್ಮರ ಸನ್ನಿಧಿಯೆಂದುಕೊಂಡು ಕೈ ಮುಗಿದು ತನ್ನ ವ್ಯಾಪಾರಕ್ಕೆ ಮರಳಿದ.
ಶೆಟ್ಟಿಗೆ ಅವತ್ತು ಲಾಭದ ಮೇಲೆ ಲಾಭ ವ್ಯಾಪಾರ ‘ದಿಲ್ಕುಷ್’ ಆಗಿ ಸಮಾಧಿಗೆ ದೇವರಕಂಬ ಎಣ್ಣೆ ತಂದುಕೊಟ್ಟ. ಈ ಸುದ್ದಿ ಇಡೀ ಊರಿಗೆ ಹರಡಿ ಕೆಲವೇ ದಿನಗಳಲ್ಲಿ ಭಕ್ತರು ಹೆಚ್ಚಾಗಿ ಅಲ್ಲೊಂದು ದೇವಾಲಯ ನಿರ್ಮಾಣವಾಗಿ ಪರಿಷೆ ನಡೆಯೊ ಮಟ್ಟಿಗೆ ಬೆಳೆದಿರುತ್ತೆ. ಆ ದೇವಾಲಯದ ಮುಂದೆ ಭಿಕ್ಷುಕರು ಸಣ್ಣ ಸಣ್ಣ ಅಂಗಡಿಗಳು ಜನಗಳು ವೈದಿಕರು, ದಾನ ನೀಡಲು ಸಾಹುಕಾರರು ಎಲ್ಲರೂ ಸೇರಿರುತ್ತಾರೆ.
ಈ ಸುದ್ದಿ ಅರಮನೆಯ ತಲುಪಿ ರಾಜ ರಾಣಿ ಈ ದೇವಾಲಯ(ಅಲ್ಲಲ್ಲ ಕತ್ತೆ ಸಮಾಧಿ) ನೋಡಲು ಬಯಸಿ ಹೊರಟು ಬರುತ್ತಾರೆ. ವರ್ಷ ಕಳೆದ ನಂತರ ಅಗಸ ಸಿದ್ದಯ್ಯ ತಾನು ಮಾಡಿದ ಕತ್ತೆ ಸಮಾಧಿ ಹುಡುಕಿ ಕಾಣಲು ಬರುತ್ತಾನೆ ಆದರೆ ತಳವಾರರು ಅವನನ್ನು ಕತ್ತು ಹಿಡಿದು ಆಚೆ ತಳ್ಳುತ್ತಾರೆ ಇದಿಷ್ಟು ಕವನದ ಸಾರಾಂಶ.
ಈ ಕವನದಲ್ಲಿ ಬಹುಜನರು ನಂಬಿರಬಹುದಾದ ಅನೇಕ ಮೌಢ್ಯಗಳನ್ನು ಹೊತ್ತಿವೆ. ಜ್ಞಾನದ ಮಾರ್ಗವು ಸಹ ಇದೆ. ನಮಗೆಲ್ಲರಿಗೂ ಗೊತ್ತು ಸಿಂಧೂ ಬಯಲಿನ ನಾಗರೀಕತೆಯಿಂದಲೂ ಇಲ್ಲಿನ ಮೂಲನಿವಾಸಿ ತಳಸಮುದಾಯದ “ಬಹುಜನರು” ಪ್ರಾಣಿ- ಪಕ್ಷಿ. ನಾಯಿ. ಪಶುಸಂಗೋಪನೆ, ಕಾಡು ಪ್ರಾಣಿಗಳ ಬೇಟೆಯಲ್ಲಿ ಬಹು ಪ್ರಸಿದ್ಧರು ನಿಷ್ಣತೆಯುಳ್ಳವರು ಕೂಡಾ.
ಅವು ತಮ್ಮ ಜೀವನದ ಅವಿಭಾಜ್ಯ ಅಂಗವೇನೊ ಎಂಬ ಮಟ್ಟಿಗೆ ಸಹ ಪಳಗಿಸಿ ಸಾಕುತ್ತಿದ್ದರು. ಹೀಗೆಯೇ ಸಿದ್ದಯ್ಯನೆಂಬ ಅಗಸ ತನ್ನ ಕತ್ತೆ ಸಾಕಿದ್ದು ಅದು ಸತ್ತ ನಂತರ ಅದರ ಗುರುತಿಗೆ ಮಣ್ಣು ಮಾಡಿ ಧನ್ಯವಾದಕ್ಕಾಗಿ ಪೂಜೆ ಸಲ್ಲಿಸುವುದು ಸಹ ಈ ನೆಲದ ನೈಜ ಸಂಸ್ಕೃತಿಗಳ ಬಿಂಬವೇ ಅಗಿದೆ.
ಈಗಲೂ ಕೂಡ ನಾವುಗಳು ಸತ್ತವರ ಸಮಾಧಿ ಮೇಲೆ ತುಳಸಿ ಗಿಡ ವಿವಿಧ ಸಸಿ ನೆಟ್ಟು ಪೋಷಿಸುವುದು ಕಾಣಬಹುದು.(ಬೆಂಕಿಯಲ್ಲಿ ದೇಹ ಸುಟ್ಟು ಅದರ ಅಸ್ಥಿಯನ್ನು ನೀರಿನಲ್ಲಿ ಬಿಟ್ಟು ಗುರುತೇ ಇಲ್ಲದಂತೆ ಸಂಬಂಧ ಕಡಿದು ಕೊಳ್ಳುವುದು ಕುತಂತ್ರಿ ಆರ್ಯರ ಸಂಸ್ಕೃತಿಯಾಗಿದೆ ನೆನಪಿರಲಿ).
ಮಹಾನವಮಿ ಅಥವಾ ಮಾರ್ನಾಮಿ ಹಬ್ಬದ ಸಂದರ್ಭದಲ್ಲಿ ತೀರಿ ಹೋದ ಹಿರಿಯರಿಗೆ – ವ್ಯಕ್ತಿಗಳಿಗೆ ಎಡೆ ಇಡುವುದು ಈ ನೆಲ ಮೂಲದ ಸಂಸ್ಕೃತಿ, ಪಿಂಡ ಪ್ರದಾನವಲ್ಲ. ಆದರೆ ಈ ಕುತಂತ್ರಕ್ಕೂ ಬಹುಜನರು ಬಲಿಯಾಗಿದ್ದಾರೆ. ಕತ್ತೆ ಸಮಾಧಿಗೆ ಪೂಜೆ ಸಲ್ಲಿಸುವಾಗ ಜಯಶೆಟ್ಟಿ ಎಂಬುವ ವ್ಯಾಪಾರಸ್ಥ ನೋಡಿ ಕೈಮುಗಿದು ಹೋದ ನಂತರ ಲಾಭವಾಯಿತು ಎಂಬುದು ಇಲ್ಲಿ ಬೇರೆಯವರು ಯಾರು ಏನು ಮಾಡುತ್ತಿದ್ದಾರೆ ತಾನು ಅವರಂತೆ ಅನುಕರಿಸುವುದು ಸಾಬೀತಾಗುತ್ತದೆ.
ಆಗಲೇ ಹೇಳಿದಂತೆ ನಮ್ಮದಲ್ಲದ ಪಿಂಡ ಪ್ರದಾನವೂ ಸಹ. ನಿಮಗೆ ಗೊತ್ತಿರಲಿ ಧ್ಯಾನ ಯೋಗ ಪ್ರಾರ್ಥನೆ ವಿವಿಧ ಚಟುವಟಿಕೆ ಯಿಂದ ಮನಸ್ಸು ಉಲ್ಲಾಸಿತಗೊಂಡು ಪಾಸಿಟಿವ್ ನಿಂದ ಆ ದಿನದ ಚಟುವಟಿಕೆಯ ಎಲ್ಲದರ ಮೇಲೂ ಪ್ರಭಾವ ಬೀರುತ್ತದೆ. ಶೆಟ್ಟಿಗೆ ಇಲ್ಲಾಗಿದ್ದು ಅದೇ. ನಂತರ ತನ್ನ ಸ್ವಪ್ರಯತ್ನ ಸ್ವಂತ ಶಕ್ತಿ ಮರೆತವನೊಬ್ಬ ಸಮಾಧಿಯ ಬಗ್ಗೆ ದೊಡ್ಡ ಪುಕಾರು ಮಾಡಿ ಮೌಢ್ಯ ಪ್ರಸಾರದಲ್ಲಿ ತೊಡಗಿದ.
ಅಲ್ಲೊಂದು ಜಾತ್ರೆ ಪೂಜೆ ನಡೆಯುತ್ತದೆ. ದಾನ ವ್ಯವಹಾರ ಆಗುವಂತೆ ಮಾಡುವಲ್ಲಿ ತಾನು ತೊಡಗಿಸಿಕೊಂಡ. ಇಂತದ್ದೇ ಪರಿಸ್ಥಿತಿ ಈಗಲೂ ಕಾಣಬಹುದು. ವರ್ಷ ಕಳೆದ ನಂತರ ಕತ್ತೆ ಸಮಾಧಿಯ ಜಾಗ ಹುಡುಕಿ ಸತ್ಯ ಅರಿತಿದ್ದ ಸಿದ್ದಯ್ಯ ಅಲ್ಲಿಗೆ ಬಂದ. ತಳವಾರ್ರು ಅವನನ್ನು ಕತ್ತು ಹಿಡಿದು ಆಚೆ ತಳ್ಳಿ ದೇವಾಲಯದ ಹತ್ತಿರವು ಬಿಟ್ಟು ಕೊಳ್ಳಲಿಲ್ಲ.
ಇದು ಈಗಲೂ ಸತ್ಯ ಬೇಕಾದರೆ ನೋಡಿ ದೇವಸ್ಥಾನದಲ್ಲಿ ಇರುವ ಸತ್ಯವನ್ನು ವಿವಿಧ ಸಂಶೋಧಕರು, ಲೇಖಕರು ಮೌಢ್ಯಭಂಜಕರು ಅದನ್ನು ಬಯಲಿಗೆಳೆಯುವರು ಎಂಬ ಭಯ ಆ ವರ್ಗಕ್ಕಿದೆ. ಅದಕ್ಕೆ ಆಳುವ ಜನರ ಸಹಕಾರವು ಸಿಗುತ್ತದೆ. ಕತ್ತೆ ಸಮಾಧಿ ಎಲ್ಲಿಯಾದರೂ ಪವಾಡ ಸೃಷ್ಟಿಸಲು ಸಾಧ್ಯವ? ಇಂತಹ ಅದೆಷ್ಟೋ ನಿರ್ವೀರ್ಯ ಕತ್ತೆಯ ಸಮಾಧಿಗಳು ಓಣಿ ಓಣಿಗಳಲ್ಲಿ ರಸ್ತೆ ರಸ್ತೆಯಲ್ಲಿ ಸಿಗುತ್ತವೆ.
ಅದೆಲ್ಲವೂ ದೇವಾಲಯವೆಂಬ ಮೌಢ್ಯದ ಆಸ್ಥಾನಗಳೆಂದು ತಿಳಿದಿರಲಿ. ಇನ್ನೂ ಕರ್ನಾಟಕದ ವಾಗ್ಮಿಗಳಾದ ಗುರುರಾಜ ಕರ್ಜಗಿಯವರು ಕರುಣಾಳು ಬಾ ಬೆಳಕೆ 2ನೇ ಸಂಪುಟದಲ್ಲಿ ಉಲ್ಲೇಖಿಸಿರುವಂತೆ ‘ಸಮಾಧಿಯ ಮಹಿಮೆ’ ಎಂಬ ಲೇಖನ ಸಹ ಇದೇ ಕತೆಯ ತಿರುಳು ಹೊಂದಿದೆ. ಗುರುಕುಲದಲ್ಲಿ ಲೋಕ ಜ್ಞಾನ ವ್ಯವಹಾರ ಜ್ಞಾನವಿಲ್ಲದ ದಡ್ಡ ವಿದ್ಯಾರ್ಥಿಯೊಬ್ಬನಿಗೆ ಬರಗಾಲ ಬಂದಾಗ ಗುರುಗಳು ಆತನಿಗೆ ಒಂದು ಕತ್ತೆಯನ್ನು ನೀಡಿ ನಿನ್ನ ಜೀವನ ನೀನು ನೋಡಿಕೊ ಎಂದು ಕಳುಹಿಸಿ ಕೊಡುವರು.
ಮುಂದೊಂದು ದಿನ ಆ ಕತ್ತೆ ಸತ್ತಾಗ ಅದನ್ನು ಮಣ್ಣು ಮಾಡಿ ಸಮಾಧಿಗೆ ತನಗೆ ತಿಳಿದಂತೆ ದಿನನಿತ್ಯ ಪೂಜೆ ಸಲ್ಲಿಸುತ್ತಿರುತ್ತಾನೆ. ಈ ದಡ್ಡ ವಿದ್ಯಾರ್ಥಿಯ ಕತ್ತೆ ಸಮಾಧಿ ಮುಂದೆ ಅದೊಂದು ಜಾಗೃತ ಸ್ಥಾನವೆಂಬಂತೆ ಪ್ರಚಲಿತಗೊಂಡು ಹರಕೆ ಹೊತ್ತು ಜನ ಬಂದರು. ಈತನ ಆದಾಯ ಹೆಚ್ಚಿತು. ಸಮಾಧಿಗೊಂದು ದೇವಾಲಯ ಶಿಷ್ಯನಿಗೆ ಒಂದು ಕೊಠಡಿ ಆಯಿತು.
ಶಿಷ್ಯನ ಗುರುಗಳು ಭೇಟಿಯಾಗಿ ಅದು ಯಾವ ಮಹಾತ್ಮನ ಕಂಡು ನಿನ್ನ ಜೀವನ ಉದ್ದರಿಸಿಕೊಂಡೆ ಎಂದು ಪ್ರಶ್ನಿಸಿದಾಗ ಶಿಷ್ಯ ನೀವು ಕೊಟ್ಟ ಕತ್ತೆಯೇ ನನ್ನ ಪಾಲಿನ ಮಹಾತ್ಮ: ಅದರ ಸಮಾಧಿಯೇ ಈ ದೇವಾಲಯ. ಅದ ನಂಬಿದ ಮೂರ್ಖ ಮಂದಿಗಳ ಭಕ್ತಿಯೇ ಇಂದಿನ ನನ್ನ ಆದಾಯ ಎಂದು ಹೇಳಿ ಬೆರಗಾಗಿಸಿದ್ದ. ಒಟ್ಟಾರೆ ಈ ಮೇಲಿನ ಎರಡೂ ಕತೆಗಳು ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡ ವರ್ಗವೊಂದು ಅದರ ಹೆಸರಿನಲ್ಲಿ ವ್ಯವಹಾರಕ್ಕಿಳಿದು ಪೂಜೆ ಪುರಸ್ಕಾರ ಜಾತ್ರೆ ಹೋಮ ಹವನ ಅರ್ಚನೆ ದಕ್ಷಿಣೆ ಅಂಗಡಿ ಇತರೆ ಎಲ್ಲರಿಂದಲೂ ಲಾಭಗಳನ್ನು ಪಡೆಯುತ್ತ ಬಂದರು.
ತಮ್ಮ ಬುದ್ದಿ ಸಾಮರ್ಥ್ಯ ಮರೆತು ಸತ್ಯವನ್ನರಿಯದ ಗೋಜಿಗೆ, ಸತ್ಯ ಮಾರ್ಗಕ್ಕೆ ಹೋಗದೇ ತಮ್ಮನ್ನು ತಾವೇ ಶೋಷಣೆಗೆ ಒಡ್ಡಿ ಬಹುಜನರು ಪ್ರಜ್ಞಾಹೀನ ಸ್ಥಿತಿಯ ತಲುಪಿದರು. ಮೌಢ್ಯಕ್ಕೆ ಬಲಿಯಾದರು. ಇಂತಹ ವರ್ಣ ರಂಜಿತ ಕತೆಗಳನ್ನು ಈಗಲೂ ಹಲವಾರು ದೇವರು ನಂಬಿ ನಿಮಗೆ ಒಳ್ಳೆಯದಾಗುತ್ತೆ, ನಾನು ಹೇಳೊದು ಕೇಳಿ: ಹೇಳಿದಂತೆ ಮಾಡಿ ನಿಮ್ಮ ಭವಿಷ್ಯ ಸರಿ ಹೋಗುತ್ತೆ ಎಂದು ಬೊಬ್ಬೆ ಇಡುವವರೇ ಹೆಚ್ಚು. ಇಂತಹವರ ಮದ್ಯದಲ್ಲಿ ಸತ್ಯ ನುಡಿಯುವ ಬಹುಜನರಿಗೆ ವೈಚಾರಿಕತೆ ಬಿತ್ತುವ ಸತ್ಯ ಮಾರ್ಗಕ್ಕೆ ಮಾರ್ಗದರ್ಶನ ನೀಡುವ ಶ್ರೀನಿಜಗುಣಾನಂದ ಸ್ವಾಮಿಗಳೇ ನಮ್ಮೆಲ್ಲರಿಗೂ ಆದರ್ಶ.
ನಿಜಗುಣ ಸ್ವಾಮಿಗಳು ವಿವಿಧ ವೇದಿಕೆಯಲ್ಲಿ ಈ ಮೇಲಿನ ಕತೆಯನ್ನು ಉದಾಹರಿಸಿ ಜನರನ್ನು ಮೌಢ್ಯದಿಂದ ಬಿಡುಗಡೆಗೊಳಿಸಲು ಪ್ರಯತ್ನಿಸಿದ್ದಾರೆ. ಜನರಿಗೆ ತಿಳಿ ಹೇಳಿ ಜ್ಞಾನ ಹಂಚುತ್ತಿದ್ದಾರೆ. ನಮಗೆ ಆದರ್ಶವಾಗಬೇಕಾದವರು ನಿಜಗುಣ ಸ್ವಾಮೀಜಿಗಳೆ ಹೊರತು ಬ್ರಹ್ಮಾಂಡ ಅಂಡ ಪಿಂಡ ದಿನ ವಾರ ವರ್ಷ ಭವಿಷ್ಯ ನುಡಿವ, ಸ್ತ್ರೀವಶ, ಧನಪ್ರಾಪ್ತಿ ಅತ್ತೆ ಸೊಸೆ ಕಿತ್ತಾಟ ಕೋರ್ಟ್ ಕೇಸ್ ಈಡೇರಿಸಿ ಕೊಡುವೆನೆಂಬ ಸಾಧು ಗುರೂಜಿಗಳಲ್ಲ. ನಿಮ್ಮನ್ನು ಮೌಢ್ಯದಿಂದ ಬಿಡುಗಡೆಗೊಳಿಸಿ ಸನ್ಮಾರ್ಗದಲ್ಲಿ ಕೊಂಡೊಯ್ಯುವವರ ಬಳಿ ಸಾಗಿ. ಮೌಢ್ಯದ ಬಾವಿಗೆ ಹಾಕುವವರೆಡೆಯಲ್ಲ. ಈ ಕತ್ತೆ ಕಥೆ ನಿಮಗೆ ಸತ್ಯವನ್ನು ತಿಳಿಯಲು ಸಾಧ್ಯವಾಯಿತು ಎಂದು ಭಾವಿಸಿ ಕುವೆಂಪುರವರ ಈ ಸಾಲು
“ಸುಳ್ಳಿನ ಮಾಲೆಯ ಕೊರಳಿಗೆ ಸೂಡಿ
ಕಳ್ಳನೊಬ್ಬನನ್ನು ಗುರುವನು ಮಾಡಿ
ಬಡವರ ಹಣವನು ಕಾಣಿಕೆ ನೀಡಿ
ಧರ್ಮವ ಮೆರೆದರು ನೋಡಯ್ಯ”
“ಪವಾಡ – ಮೂಢನಂಬಿಕೆಗಳು, ದುರ್ಬಲತೆ ಮತ್ತು ಮೃತ್ಯುವಿನ ಸಂಕೇತಗಳು ಅವುಗಳ ಬಗ್ಗೆ ಎಚ್ಚರಿಕೆಯಿಂದಿರಿ”
– ಸ್ವಾಮಿ ವಿವೇಕಾನಂದರು
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದಲ್ಲಿ ನಿಷೇಧ ; ತೆರವುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಪತ್ರ

ಸುದ್ದಿದಿನಡೆಸ್ಕ್:ಕರ್ನಾಟಕದ ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲಾಧಿಕಾರಿ ವಿಧಿಸಿರುವ ನಿಷೇಧ ಆದೇಶ ರದ್ದು ತೆರವುಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಮೂಲಕ ಮನವಿ ಮಾಡಿದ್ದಾರೆ.
ಇದು ಮುಂದಿನ ದಿನಗಳಲ್ಲಿ ತರಕಾರಿಗಳು ಮತ್ತು ಇತರ ಕೃಷಿ ಸರಕುಗಳ ಅಂತಾರಾಜ್ಯ ಸಾಗಾಣೆಗೆ ಅಡ್ಡಿ ಉಂಟುಮಾಡುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ನಿರ್ಬಂಧವು ಸಾವಿರಾರು ರೈತರ ಜೀವನ ಉಪಾಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಐಎಎಸ್ – ಐಪಿಎಸ್ ಅಧಿಕಾರಿಗಳ ವರ್ಗಾವಣೆ ; ಆದೇಶ

ಸುದ್ದಿದಿನಡೆಸ್ಕ್:ರಾಜ್ಯ ಸರ್ಕಾರ ಇಂದು ಕೆಲವು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಐಪಿಎಸ್ ಅಧಿಕಾರಿ ಡಿ. ರೂಪಾ ಅವರನ್ನು ಬೆಂಗಳೂರು ಮೆಟ್ರೋ ಪಾಲಿಟನ್ ಟಾಸ್ಕ್‌ಪೋರ್ಸ್ ಎಡಿಜಿಪಿ ಯಾಗಿ ವರ್ಗಾವಣೆ ಮಾಡಿದೆ.
ಕೆಎಸ್‌ಆರ್‌ಟಿಸಿ ಮಹಾನಿರ್ದೆಶಕರನ್ನಾಗಿ ಅಕ್ರಂ ಪಾಶಾ ಅವರನ್ನು ನೇಮಕ ಮಾಡಲಾಗಿದೆ. ಇದೇ ವೇಳೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರನ್ನು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ನಗರ ಕಾರ್ಯಪಡೆಯ ಎಡಿಜಿಪಿಯಾಗಿ ನೇಮಕಗೊಂಡಿರುವ ಐಪಿಎಸ್ ಅಧಿಕಾರಿ ರೂಪಾ ಡಿ. ಅವರು ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣ ; ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ ಮನವಿ

ಸುದ್ದಿದಿನಡೆಸ್ಕ್:ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಮಧ್ಯಸ್ಥಿಕೆ ವಹಿಸುವಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಸಂತ್ರಸ್ಥರು ಮತ್ತು ಅವರ ಕುಟುಂಬಗಳಿಗೆ ಪಾರದರ್ಶಕತೆ ನ್ಯಾಯ ದೊರಕುವಂತಾಗಲು ತನಿಖೆಯ ಮೇಲ್ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಸಂತ್ರಸ್ಥರಿಗೆ ನ್ಯಾಯ ಒದಗಿಸುವುದು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದು ಎಲ್ಲರ ಕರ್ತವ್ಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ ಸಮಸ್ಯೆಗೆ ಒಳಗಾದ ಮಕ್ಕಳ ವಿವರವನ್ನು ಕೋರಿ ಸಿಐಡಿಗೆ ಮಕ್ಕಳ ಹಕ್ಕು ಆಯೋಗ ನೋಟಿಸ್ ಜಾರಿ ಮಾಡಿದೆ.
ಸಾರ್ವಜನಿಕ ದೂರು ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಆಯೋಗ ಈ ಬಗ್ಗೆ ಹೆಚ್ಚಿನ ನಿಖರ ಮಾಹಿತಿ ನೀಡುವಂತೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days ago
ವಿಜ್ಞಾನಿಗಳ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ : ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್
-
ದಿನದ ಸುದ್ದಿ1 day ago
ರಾಜ್ಯದಲ್ಲಿ ಜಾತಿ ಗಣತಿ ಮರು ಸಮೀಕ್ಷೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ1 day ago
ರಾಜ್ಯದ ಹಲವೆಡೆ ಧಾರಾಕಾರ ಮಳೆ ; ಜನಜೀವನ ಅಸ್ತವ್ಯಸ್ತ
-
ದಿನದ ಸುದ್ದಿ1 day ago
ಐಎಎಸ್ – ಐಪಿಎಸ್ ಅಧಿಕಾರಿಗಳ ವರ್ಗಾವಣೆ ; ಆದೇಶ
-
ದಿನದ ಸುದ್ದಿ5 days ago
ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮ ; ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
-
ದಿನದ ಸುದ್ದಿ1 day ago
ಗುಜರಾತ್ನ ಅಹಮದಾಬಾದ್ನಲ್ಲಿ ಏರ್ಇಂಡಿಯಾ ಪ್ರಯಾಣಿಕ ವಿಮಾನ ಪತನ : 242 ಪ್ರಯಾಣಿಕರು ಸಾವು
-
ದಿನದ ಸುದ್ದಿ4 days ago
ಜೂನ್ 9, 2025 ರ ಅಡಿಕೆ ರೇಟು ಹೀಗಿದೆ
-
ದಿನದ ಸುದ್ದಿ1 day ago
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣ ; ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ ಮನವಿ